Economy
ಆರ್ಥಿಕ ಸಮೀಕ್ಷೆ 2025-26
ಭಾರತವು ಉನ್ನತ ಬೆಳವಣಿಗೆಯ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿದ ಆರ್ಥಿಕತೆಯತ್ತ ಸಾಗುತ್ತಿದೆ
Posted On:
30 JAN 2026 3:13PM
|
ಪ್ರಮುಖ ಮುಖ್ಯಾಂಶಗಳು
-
ಜಿಡಿಪಿ ಬೆಳವಣಿಗೆ: ಭಾರತದ ಆರ್ಥಿಕ ಬೆಳವಣಿಗೆಯು ಸದೃಢವಾಗಿದ್ದು, 2026-27ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8 ರಿಂದ 7.2 ರಷ್ಟು ಇರಲಿದೆಯೆಂದು ಅಂದಾಜಿಸಲಾಗಿದೆ.
-
ಹಣದುಬ್ಬರ: ಹಣದುಬ್ಬರವು ಐತಿಹಾಸಿಕ ಕುಸಿತ ಕಂಡಿದ್ದು, 2025ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸರಾಸರಿ ಶೇ. 1.7 ರಷ್ಟು ದಾಖಲಾಗಿದೆ.
-
ವಲಯವಾರು ಕೊಡುಗೆ: ಎಲ್ಲಾ ಪ್ರಮುಖ ವಲಯಗಳು ದೇಶದ ಬೆಳವಣಿಗೆಗೆ ಕೊಡುಗೆ ನೀಡಿವೆ. ಕೃಷಿ ವಲಯವು ಗ್ರಾಮೀಣ ಬೇಡಿಕೆಯನ್ನು ಸ್ಥಿರಗೊಳಿಸಿದರೆ, ಉತ್ಪಾದನಾ ವಲಯವು ವೇಗ ಪಡೆದುಕೊಂಡಿದೆ ಮತ್ತು ಸೇವಾ ವಲಯವು ವಿಸ್ತರಣೆಯಲ್ಲಿ ಮುಂಚೂಣಿಯಲ್ಲಿದೆ.
-
ರಫ್ತು: ಭಾರತದ ಒಟ್ಟು ರಫ್ತು ದಾಖಲೆ ಮಟ್ಟಕ್ಕೆ ತಲುಪಿದೆ. 2024-25ರ ಹಣಕಾಸು ವರ್ಷದಲ್ಲಿ 825.3 ಶತಕೋಟಿ ಅಮೆರಿಕನ್ ಡಾಲರ್ ಹಾಗೂ 2025-26ರ ಮೊದಲಾರ್ಧದಲ್ಲಿ 18.5 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ರಫ್ತು ನಡೆದಿದೆ.
-
ಹಣಕಾಸಿನ ಸ್ಥಿತಿ: ಸರ್ಕಾರದ ಆದಾಯ ಸಂಗ್ರಹಣೆ ಸುಧಾರಿಸಿದೆ, ಬಂಡವಾಳ ವೆಚ್ಚ ಏರಿಕೆಯಾಗಿದೆ ಮತ್ತು ಸಾರ್ವಭೌಮ ರೇಟಿಂಗ್‌ಗಳಲ್ಲಿ ಸುಧಾರಣೆಯಾಗಿರುವುದು ದೇಶದ ಆರ್ಥಿಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.
-
ಹಣಕಾಸು ನೀತಿ: ಆರ್ಥಿಕತೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, 2025ರ ಡಿಸೆಂಬರ್ ವೇಳೆಗೆ ರೆಪೋ ದರವು ಶೇ. 5.25 ಕ್ಕೆ ಇಳಿಕೆಯಾಗಿದೆ.
|
ಪೀಠಿಕೆ
ಸ್ಥಿರವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ನಿರಂತರ ನೀತಿ ಬೆಂಬಲ ಮತ್ತು ಎಲ್ಲಾ ವಲಯಗಳ ಉತ್ತಮ ಪ್ರದರ್ಶನದೊಂದಿಗೆ ಭಾರತವು 2025-26ರ ಹಣಕಾಸು ವರ್ಷಕ್ಕೆ ಬಲವಾದ ಆರ್ಥಿಕ ವೇಗದಲ್ಲಿ ಪ್ರವೇಶಿಸುತ್ತಿದೆ. ಸವಾಲಿನ ಜಾಗತಿಕ ಪರಿಸರದ ನಡುವೆಯೂ, ಸದೃಢ ಬೆಳವಣಿಗೆ, ಐತಿಹಾಸಿಕವಾಗಿ ಕಡಿಮೆ ಹಣದುಬ್ಬರ, ಸುಧಾರಿಸುತ್ತಿರುವ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಮತ್ತು ಬಲಗೊಳ್ಳುತ್ತಿರುವ ಹಣಕಾಸು ಸಂಗ್ರಹದೊಂದಿಗೆ ಭಾರತದ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ. ಸಮನ್ವಯದ ಹಣಕಾಸು ಮತ್ತು ರಚನಾತ್ಮಕ ನೀತಿಗಳು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದರ ಜೊತೆಗೆ ಹೂಡಿಕೆ, ಬಳಕೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಬೆಂಬಲಿಸಿವೆ.
ಉದಯೋನ್ಮುಖ ಸ್ಥೂಲ ಆರ್ಥಿಕ ಪರಿಸರವು, ಈವರೆಗೆ ಗಳಿಸಿದ ಲಾಭಗಳನ್ನು ಕ್ರೋಢೀಕರಿಸುವುದರ ಜೊತೆಗೆ ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಗೆ ಬುನಾದಿಯನ್ನು ಬಲಪಡಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
ಆರ್ಥಿಕ ಸ್ಥಿತಿಗತಿ
ಬೆಳವಣಿಗೆಯ ಮುನ್ನೋಟ: ಜಿಡಿಪಿ ಮತ್ತು ಬೇಡಿಕೆಯ ಸ್ಥಿತಿಗತಿಗಳು ಬಲವಾದ ಸ್ಥೂಲ ಆರ್ಥಿಕ ಅಡಿಪಾಯ ಮತ್ತು ವಿಸ್ತೃತ ಬೇಡಿಕೆಯ ವೇಗದ ಬೆಂಬಲದೊಂದಿಗೆ ಭಾರತದ ಬೆಳವಣಿಗೆಯ ಮುನ್ನೋಟವು ಸದೃಢವಾಗಿ ಮುಂದುವರಿದಿದೆ. ಮೊದಲ ಮುಂಗಡ ಅಂದಾಜಿನ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ (FY26) ನೈಜ ಜಿಡಿಪಿ ಮತ್ತು ಒಟ್ಟು ಮೌಲ್ಯವರ್ಧಿತ ಕ್ರಮವಾಗಿ ಶೇ. 7.4 ಮತ್ತು ಶೇ. 7.3 ರಷ್ಟು ಬೆಳೆಯುವ ಮುನ್ಸೂಚನೆ ಇದೆ.
ಉತ್ತಮ ಕೃಷಿ ಸಾಧನೆಯು ಗ್ರಾಮೀಣ ಆದಾಯ ಮತ್ತು ಬಳಕೆಯನ್ನು ಹೆಚ್ಚಿಸಿದೆ. ಮತ್ತೊಂದೆಡೆ, ತೆರಿಗೆ ತರ್ಕಬದ್ಧಗೊಳಿಸುವ ಕ್ರಮಗಳಿಂದ ನಗರ ಪ್ರದೇಶದ ಬೇಡಿಕೆಯಲ್ಲಿನ ಸುಧಾರಣೆಯು ಬಳಕೆಯ ಪ್ರಮಾಣವು ವಿಸ್ತರಿಸುತ್ತಿರುವುದನ್ನು ಸೂಚಿಸುತ್ತದೆ. ಭಾರತದ ಸಂಭಾವ್ಯ ಬೆಳವಣಿಗೆಯು ಸುಮಾರು ಶೇ. 7 ರಷ್ಟಿದೆ ಎಂದು ಅಂದಾಜಿಸಲಾಗಿದ್ದು, ಸವಾಲಿನ ಜಾಗತಿಕ ಪರಿಸರದ ನಡುವೆಯೂ ಮಧ್ಯಮ ಅವಧಿಯ ಸುಸ್ಥಿರ ಬೆಳವಣಿಗೆಯನ್ನು ಪ್ರತಿಬಿಂಬಿಸುವಂತೆ 2026-27ರ (FY27) ನೈಜ ಜಿಡಿಪಿ ಬೆಳವಣಿಗೆಯು ಶೇ. 6.8 ರಿಂದ 7.2 ರಷ್ಟು ಇರಲಿದೆಯೆಂದು ಅಂದಾಜಿಸಲಾಗಿದೆ.
|
ಹಣದುಬ್ಬರದ ಪ್ರವೃತ್ತಿ ಮತ್ತು ಮುನ್ನೋಟ
ಗ್ರಾಹಕ ಬೆಲೆ ಸೂಚ್ಯಂಕ ಸರಣಿ ಆರಂಭವಾದಾಗಿನಿಂದಲೂ ಭಾರತವು ಅತಿ ಕಡಿಮೆ ಹಣದುಬ್ಬರ ದರವನ್ನು ದಾಖಲಿಸಿದೆ. ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಕಂಡುಬಂದ ಸಾರ್ವತ್ರಿಕ ಇಳಿಕೆಯಿಂದಾಗಿ, 2025ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸರಾಸರಿ ಒಟ್ಟಾರೆ ಹಣದುಬ್ಬರವು ಶೇ. 1.7 ರಷ್ಟಿದೆ.
ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ (EMDEs) ಪೈಕಿ, ಭಾರತವು 2024 ಕ್ಕೆ ಹೋಲಿಸಿದರೆ 2025 ರಲ್ಲಿ ಒಟ್ಟಾರೆ ಹಣದುಬ್ಬರದಲ್ಲಿ ಅತ್ಯಂತ ವೇಗದ ಕುಸಿತವನ್ನು ದಾಖಲಿಸಿದೆ (ಸುಮಾರು 1.8 ಶೇಕಡಾವಾರು ಪಾಯಿಂಟ್‌ಗಳಷ್ಟು ಇಳಿಕೆ).
2025ರ ಡಿಸೆಂಬರ್ನಲ್ಲಿ, ಉತ್ತಮ ಮುಂಗಾರು (ಖಾರಿಫ್) ಫಸಲು ಮತ್ತು ಹಿಂಗಾರು (ರಬಿ) ಹಂಗಾಮಿನ ಉತ್ತಮ ಬಿತ್ತನೆಯ ಹಿನ್ನೆಲೆಯಲ್ಲಿ, ಆರ್ಬಿಐ (RBI) 2025-26ರ ಹಣಕಾಸು ವರ್ಷದ ಹಣದುಬ್ಬರ ಮುನ್ಸೂಚನೆಯನ್ನು ಶೇ. 2.6 ರಿಂದ ಶೇ. 2.0 ಕ್ಕೆ ಇಳಿಸಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ ಪ್ರಕಾರ ಹಣದುಬ್ಬರವು 2025-26ರಲ್ಲಿ ಶೇ. 2.8 ಮತ್ತು 2026-27ರಲ್ಲಿ ಶೇ. 4.0 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. 2026-27ರ ಮೊದಲ ಮತ್ತು ಎರಡನೇ ತ್ರೈಮಾಸಿಕಗಳಲ್ಲಿ (Q1 & Q2) ಒಟ್ಟಾರೆ ಹಣದುಬ್ಬರವು ಕ್ರಮವಾಗಿ ಶೇ. 3.9 ಮತ್ತು ಶೇ. 4 ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಮುಂದಿನ ದಿನಗಳಲ್ಲಿ, ಅನುಕೂಲಕರ ಪೂರೈಕೆ ವ್ಯವಸ್ಥೆ ಮತ್ತು ಜಿಎಸ್ಟಿ (GST) ದರ ತರ್ಕಬದ್ಧಗೊಳಿಸುವಿಕೆಯ ಪ್ರಯೋಜನಗಳು ಹಂತ-ಹಂತವಾಗಿ ಗ್ರಾಹಕರಿಗೆ ತಲುಪಲಿರುವುದರಿಂದ, ಹಣದುಬ್ಬರದ ಮುನ್ನೋಟವು ಸಕಾರಾತ್ಮಕವಾಗಿ (ಕಡಿಮೆಯಾಗಿ) ಇರಲಿದೆ.
|
ಬೆಳವಣಿಗೆಯ ವಲಯವಾರು ಚಾಲಕ ಶಕ್ತಿಗಳು
ಕೃಷಿ: ಗ್ರಾಮೀಣ ಬೇಡಿಕೆಯ ಸ್ಥಿರೀಕರಣ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಗ್ರಾಮೀಣ ಬೇಡಿಕೆ ಮತ್ತು ಆದಾಯದ ಭದ್ರತೆಯನ್ನು ಬೆಂಬಲಿಸುವ ಮೂಲಕ ಭಾರತದ ಬೆಳವಣಿಗೆಯ ಚಕ್ರದಲ್ಲಿ ಸ್ಥಿರೀಕಾರಕ ಪಾತ್ರವನ್ನು ವಹಿಸುತ್ತಿವೆ. 2025-26ರ ಮೊದಲಾರ್ಧದಲ್ಲಿ (H1) ಉತ್ತಮ ಮುಂಗಾರಿನ ಹಿನ್ನೆಲೆಯಲ್ಲಿ ಈ ವಲಯವು ಶೇ. 3.1 ರಷ್ಟು ಬೆಳೆಯುವ ಅಂದಾಜಿದೆ. ಕೃಷಿ ವಲಯದ ಒಟ್ಟು ಮೌಲ್ಯವರ್ಧಿತ (GVA) ಬೆಳವಣಿಗೆಯು 2025-26ರ ಮೊದಲಾರ್ಧದಲ್ಲಿ ಶೇ. 3.6 ಕ್ಕೆ ಏರಿದೆ (ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 2.7 ಇತ್ತು). ವಿಶೇಷವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಸಂಬಂಧಿತ ಚಟುವಟಿಕೆಗಳು ಶೇ. 5-6 ರಷ್ಟು ಸ್ಥಿರ ಬೆಳವಣಿಗೆಯನ್ನು ಪ್ರದರ್ಶಿಸಿವೆ.
ಕೈಗಾರಿಕೆ ಮತ್ತು ಉತ್ಪಾದನೆ: ವೇಗ ಪಡೆಯುತ್ತಿರುವ ಚಟುವಟಿಕೆಗಳು 2025-26ರಲ್ಲಿ ಕೈಗಾರಿಕಾ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಈ ವಲಯವು ಶೇ. 6.2 ರಷ್ಟು ಬೆಳವಣಿಗೆ ಸಾಧಿಸುವ ಮುನ್ಸೂಚನೆ ಇದೆ. 2025-26ರ ಮೊದಲಾರ್ಧದಲ್ಲಿ ಕೈಗಾರಿಕಾ ವಲಯವು ಶೇ. 7.0 ರಷ್ಟು ಬೆಳವಣಿಗೆ ದಾಖಲಿಸಿದೆ, ಇದು ಕೋವಿಡ್-ಪೂರ್ವದ ಶೇ. 5.2 ರ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿದೆ.
ಉತ್ಪಾದನಾ ವಲಯವು ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಹೊರಹೊಮ್ಮಿದೆ. ಸರ್ಕಾರದ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆಗಳು ಈ ವೇಗಕ್ಕೆ ಪ್ರೇರಣೆ ನೀಡಿವೆ. ಈ ಯೋಜನೆಗಳ ಅಡಿಯಲ್ಲಿ 14 ವಲಯಗಳಲ್ಲಿ ₹2.0 ಲಕ್ಷ ಕೋಟಿಗೂ ಹೆಚ್ಚು ನೈಜ ಹೂಡಿಕೆ ಹರಿದುಬಂದಿದ್ದು, ₹18.7 ಲಕ್ಷ ಕೋಟಿಗೂ ಹೆಚ್ಚು ಹೆಚ್ಚುವರಿ ಉತ್ಪಾದನೆ/ಮಾರಾಟ ನಡೆದಿದೆ. ಅಲ್ಲದೆ, ಸೆಪ್ಟೆಂಬರ್ 2025ರ ವೇಳೆಗೆ ಈ ಯೋಜನೆಗಳಿಂದ 12.6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯು ಬಲಗೊಂಡಿದ್ದು, ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2019ರಲ್ಲಿದ್ದ 66ನೇ ಸ್ಥಾನದಿಂದ 2025ರಲ್ಲಿ 38ನೇ ಸ್ಥಾನಕ್ಕೆ ಸುಧಾರಿಸಿದೆ.
ಸೇವಾ ವಲಯ: ಪ್ರಬಲ ಬೆಳವಣಿಗೆಯ ಎಂಜಿನ್ ಸೇವಾ ವಲಯವು 2025-26ರಲ್ಲಿ ಶೇ. 9.1 ರಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ಕಂಡಿದೆ. ದೇಶದ ಜಿಡಿಪಿಯಲ್ಲಿ (GDP) ಸೇವಾ ವಲಯದ ಪಾಲು ಶೇ. 53.6 ಕ್ಕೆ ಏರಿದೆ, ಮತ್ತು ಜಿವಿಎನಲ್ಲಿ ಇದರ ಪಾಲು ಐತಿಹಾಸಿಕ ಗರಿಷ್ಠ ಮಟ್ಟವಾದ ಶೇ. 56.4 ರಷ್ಟಿದೆ. ಭಾರತವು ಇಂದು ವಿಶ್ವದ ಏಳನೇ ಅತಿದೊಡ್ಡ ಸೇವಾ ರಫ್ತುದಾರ ದೇಶವಾಗಿದ್ದು, ಜಾಗತಿಕ ಸೇವಾ ವ್ಯಾಪಾರದಲ್ಲಿ ಭಾರತದ ಪಾಲು 2005ರಲ್ಲಿದ್ದ ಶೇ. 2 ರಿಂದ 2024ರಲ್ಲಿ ಶೇ. 4.3 ಕ್ಕೆ ದ್ವಿಗುಣಗೊಂಡಿದೆ.
ಉದ್ಯೋಗ ಮತ್ತು ಕಾರ್ಮಿಕ ಮಾರುಕಟ್ಟೆಯ ಪ್ರವೃತ್ತಿಗಳು
ಆರ್ಥಿಕ ವಿಸ್ತರಣೆಯ ಜೊತೆಗೆ ಭಾರತದ ಕಾರ್ಮಿಕ ಮಾರುಕಟ್ಟೆಯು ಸದೃಢತೆಯನ್ನು ಪ್ರದರ್ಶಿಸುತ್ತಿದೆ. 2025-26ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ ನಿಂದ ಸೆಪ್ಟೆಂಬರ್ 2025), ಒಟ್ಟು ಉದ್ಯೋಗಿಗಳ ಸಂಖ್ಯೆ 56.2 ಕೋಟಿಗೆ ತಲುಪಿದೆ. ಅಂದರೆ, ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸುಮಾರು 8.7 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ.

ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯ (PLFS) ಪ್ರಕಾರ, ಪ್ರಮುಖ ಕಾರ್ಮಿಕ ಸೂಚಕಗಳು ಉದ್ಯೋಗದ ಪರಿಸ್ಥಿತಿಗಳು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ:
-
ಕಾರ್ಮಿಕ ಬಲದ ಭಾಗವಹಿಸುವಿಕೆ ದರ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಕಾರ್ಮಿಕ ಬಲದ ಭಾಗವಹಿಸುವಿಕೆ ದರವು 2025ರ ಡಿಸೆಂಬರ್‌ನಲ್ಲಿ ಶೇ. 56.1 ಕ್ಕೆ ಏರಿಕೆಯಾಗಿದೆ.
-
ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ: ಮಹಿಳಾ LFPR ಶೇ. 35.3 ಕ್ಕೆ ಏರಿದ್ದು, ಇದು ಉದ್ಯೋಗ ವಲಯದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯ ಸುಧಾರಣೆಯನ್ನು ತೋರಿಸುತ್ತದೆ.
-
ಕಾರ್ಮಿಕ ಜನಸಂಖ್ಯೆ ಅನುಪಾತ: ಕಾರ್ಮಿಕ ಜನಸಂಖ್ಯೆ ಅನುಪಾತವು ಶೇ. 53.4 ಕ್ಕೆ ಏರಿಕೆಯಾಗಿದ್ದು, ಇದು ಉದ್ಯೋಗ ಹೀರಿಕೊಳ್ಳುವಿಕೆಯು ಸ್ಥಿರವಾಗಿರುವುದನ್ನು ಪ್ರತಿಬಿಂಬಿಸುತ್ತದೆ.
-
ನಿರುದ್ಯೋಗ ದರ: ನಿರುದ್ಯೋಗ ದರವು 2025ರ ಡಿಸೆಂಬರ್‌ನಲ್ಲಿ ಶೇ. 4.8 ಕ್ಕೆ ಇಳಿಕೆಯಾಗಿದ್ದು, ತನ್ನ ಇಳಿಮುಖ ಹಾದಿಯನ್ನು ಮುಂದುವರಿಸಿದೆ.
-
ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ: 2023-24ರ ಹಣಕಾಸು ವರ್ಷದ ವಾರ್ಷಿಕ ಕೈಗಾರಿಕಾ ಸಮೀಕ್ಷೆಯು ಸಂಘಟಿತ ಉತ್ಪಾದನಾ ವಲಯದ ಬಲವನ್ನು ಎತ್ತಿ ತೋರಿಸಿದೆ. ಉದ್ಯೋಗ ಸೃಷ್ಟಿಯು ವಾರ್ಷಿಕವಾಗಿ ಶೇ. 6 ರಷ್ಟು ಏರಿಕೆಯಾಗಿದ್ದು, 2022-23ಕ್ಕೆ ಹೋಲಿಸಿದರೆ 10 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೇರ್ಪಡೆಯಾಗಿವೆ.
-
ಕಾರ್ಮಿಕ ಕಲ್ಯಾಣ ಮತ್ತು ಡಿಜಿಟಲ್ ವೇದಿಕೆಗಳು: 2026ರ ಜನವರಿ ವೇಳೆಗೆ, ಇ-ಶ್ರಮ್ ಪೋರ್ಟಲ್‌ನಲ್ಲಿ 31 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ನೋಂದಾಯಿತರಲ್ಲಿ ಮಹಿಳೆಯರ ಪಾಲು ಶೇ. 54 ಕ್ಕಿಂತ ಹೆಚ್ಚಿದ್ದು, ಇದು ಲಿಂಗ-ಆಧಾರಿತ ಕಲ್ಯಾಣ ಯೋಜನೆಗಳ ತಲುಪುವಿಕೆಯನ್ನು ಗಮನಾರ್ಹವಾಗಿ ಬಲಪಡಿಸಿದೆ. ನ್ಯಾಷನಲ್ ಕೆರಿಯರ್ ಸರ್ವಿಸ್ ವೇದಿಕೆಯು ಕಾರ್ಮಿಕ ಮಾರುಕಟ್ಟೆಯ ಪ್ರಮುಖ ಮಧ್ಯವರ್ತಿಯಾಗಿ ಹೊರಹೊಮ್ಮಿದೆ. ಇದರಲ್ಲಿ 5.9 ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು 53 ಲಕ್ಷ ಉದ್ಯೋಗದಾತರು ನೋಂದಾಯಿಸಿಕೊಂಡಿದ್ದಾರೆ. ವಿವಿಧ ವಲಯಗಳಲ್ಲಿ ಸುಮಾರು 8 ಕೋಟಿ ಉದ್ಯೋಗಾವಕಾಶಗಳನ್ನು ಈ ವೇದಿಕೆ ಒದಗಿಸಿದೆ. ವಿಶೇಷವೆಂದರೆ, 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಶೇ. 200 ಕ್ಕಿಂತ ಹೆಚ್ಚು ಏರಿಕೆ ದಾಖಲಾಗಿದೆ.
-
ವ್ಯಾಪಾರ ಸಾಧನೆ: ರಫ್ತು ವೈವಿಧ್ಯೀಕರಣ ಮತ್ತು ಸೇವಾ ವಲಯದ ಸಾಮರ್ಥ್ಯ: ವ್ಯಾಪಾರ ರಂಗದಲ್ಲಿ ಭಾರತದ ಒಟ್ಟು ರಫ್ತು ದಾಖಲೆ ಮಟ್ಟವನ್ನು ತಲುಪಿದೆ. ಸೇವಾ ರಫ್ತಿನ ಬಲವಾದ ಬೆಳವಣಿಗೆಯಿಂದಾಗಿ ಭಾರತದ ರಫ್ತು 2024-25ರಲ್ಲಿ 825.3 ಶತಕೋಟಿ ಡಾಲರ್ ಮತ್ತು 2025-26ರ ಮೊದಲಾರ್ಧದಲ್ಲಿ 418.5 ಶತಕೋಟಿ ಡಾಲರ್ ತಲುಪಿದೆ.
-
ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲ್ಗೊಳ್ಳುವಿಕೆ ಆಳವಾಗುತ್ತಿದ್ದು, ವೈವಿಧ್ಯೀಕರಣ ಮತ್ತು ಸೇವಾ ಆಧಾರಿತ ಬೆಳವಣಿಗೆಯಿಂದ ಗುರುತಿಸಲ್ಪಟ್ಟಿದೆ. ಜಾಗತಿಕ ಸರಕು ರಫ್ತಿನಲ್ಲಿ ಭಾರತದ ಪಾಲು 2005ರಲ್ಲಿದ್ದ ಶೇ. 1 ರಿಂದ 2024ರಲ್ಲಿ ಶೇ. 1.8 ಕ್ಕೆ ಏರಿಕೆಯಾಗಿದೆ.
-
ಜಾಗತಿಕ ಶ್ರೇಯಾಂಕ: ಅಂಕ್ಟಾಡ್ ನ 2025ರ ವ್ಯಾಪಾರ ಮತ್ತು ಅಭಿವೃದ್ಧಿ ವರದಿಯ ಪ್ರಕಾರ, ವ್ಯಾಪಾರ ಪಾಲುದಾರಿಕೆಯ ವೈವಿಧ್ಯತೆಯ ಸೂಚ್ಯಂಕದಲ್ಲಿ (Diversity Index) ಚೀನಾ ಮತ್ತು ಯುಎಇ ನಂತರ ಭಾರತವು ಗ್ಲೋಬಲ್ ಸೌತ್ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತದ ಸೂಚ್ಯಂಕ ಸ್ಕೋರ್ 3.2 ಆಗಿದ್ದು, ಇದು ಗ್ಲೋಬಲ್ ನಾರ್ತ್‌ನ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿದೆ. ಇದು ಸುಂಕದ ಅನಿಶ್ಚಿತತೆ ಮತ್ತು ಇತರ ಉದಯೋನ್ಮುಖ ಸವಾಲುಗಳ ನಡುವೆಯೂ ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಉಲ್ಲೇಖಿಸುತ್ತದೆ.

ಸೇವಾ ರಫ್ತು ಮತ್ತು ಬಾಹ್ಯ ಆರ್ಥಿಕ ಸ್ಥಿತಿ: ಸೇವಾ ರಫ್ತುಗಳು ಆರ್ಥಿಕತೆಯ ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಿವೆ. 2024-25ರ ಹಣಕಾಸು ವರ್ಷದಲ್ಲಿ ಇದು 387.5 ಶತಕೋಟಿ ಅಮೆರಿಕನ್ ಡಾಲರ್ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿದೆ (ಶೇ. 13.6 ರಷ್ಟು ವಾರ್ಷಿಕ ಬೆಳವಣಿಗೆ). ಇದು ತಂತ್ರಜ್ಞಾನ, ವ್ಯವಹಾರ ಮತ್ತು ವೃತ್ತಿಪರ ಸೇವೆಗಳ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು 2026ರ ಜನವರಿ 16ರ ವೇಳೆಗೆ 701.4 ಶತಕೋಟಿ ಡಾಲರ್ ತಲುಪಿದ್ದು, ಇದು ಸುಮಾರು 11 ತಿಂಗಳ ಆಮದು ವೆಚ್ಚವನ್ನು ಭರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ದೇಶದ ಒಟ್ಟು ಬಾಹ್ಯ ಸಾಲದ ಶೇ. 94 ಕ್ಕಿಂತ ಹೆಚ್ಚಿನ ಪಾಲನ್ನು ಸರಿದೂಗಿಸಬಲ್ಲದಾಗಿದ್ದು, ಜಾಗತಿಕ ಆರ್ಥಿಕ ಏರಿಳಿತಗಳನ್ನು ಎದುರಿಸಲು ಭಾರತಕ್ಕೆ ಶಕ್ತಿ ನೀಡಿದೆ.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ಹಣ ರವಾನೆ ಸ್ವೀಕರಿಸುವ ದೇಶವಾಗಿ ಮುಂದುವರಿದಿದೆ. 2024-25ರಲ್ಲಿ 135.4 ಶತಕೋಟಿ ಡಾಲರ್ ಹರಿವು ದಾಖಲಾಗಿದೆ. ವಿಶೇಷವಾಗಿ ಮುಂದುವರಿದ ದೇಶಗಳಿಂದ ಬರುತ್ತಿರುವ ಹಣದ ಪಾಲು ಹೆಚ್ಚಾಗಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ನುರಿತ ಮತ್ತು ವೃತ್ತಿಪರ ಕಾರ್ಮಿಕರ ಹೆಚ್ಚುತ್ತಿರುವ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.
ಕೈಗಾರಿಕಾ ಉತ್ಪಾದನೆ: ಐಐಪಿ ಮತ್ತು ಎಂಟು ಪ್ರಮುಖ ವಲಯಗಳ ಸಾಧನೆ: 2025ರ ಡಿಸೆಂಬರ್‌ನಲ್ಲಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚಿನ ವೇಗವನ್ನು ಪಡೆದುಕೊಂಡಿವೆ. ಇದು ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮತ್ತು ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕ (ICI) ಎರಡರಲ್ಲೂ ಕಂಡುಬಂದಿದೆ.
ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕವು (ICI) ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಉತ್ಪಾದನೆಯನ್ನು ಅಳೆಯುತ್ತದೆ. ಇದು ಐಐಪಿ ಯ ಒಟ್ಟು ತೂಕದ ಶೇ. 40.27 ರಷ್ಟು ಭಾಗವನ್ನು ಹೊಂದಿದೆ.
2025ರ ಡಿಸೆಂಬರ್ನಲ್ಲಿ ಐಯಪಿ ಶೇ. 7.8 ರಷ್ಟು ಏರಿಕೆಯಾಗಿದೆ, ಇದು ಕಳೆದ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ. ವಲಯವಾರು ಗಮನಿಸಿದರೆ, ಉತ್ಪಾದನಾ ವಲಯವು ಶೇ. 8.1 ರಷ್ಟು ಬೆಳವಣಿಗೆಯೊಂದಿಗೆ ಪ್ರಮುಖ ಪಾತ್ರ ವಹಿಸಿದೆ. ಗಣಿಗಾರಿಕೆ ಮತ್ತು ವಿದ್ಯುತ್ ವಲಯಗಳು ಕ್ರಮವಾಗಿ ಶೇ. 6.8 ಮತ್ತು ಶೇ. 6.3 ರಷ್ಟು ಬೆಳವಣಿಗೆ ದಾಖಲಿಸಿವೆ.
ಉತ್ಪಾದನಾ ವಲಯದಲ್ಲಿ ತಂತ್ರಜ್ಞಾನ ಮತ್ತು ಸಾರಿಗೆ ಸಂಬಂಧಿತ ವಿಭಾಗಗಳಲ್ಲಿ ಬಲವಾದ ಸಾಧನೆ ಕಂಡುಬಂದಿದೆ. ಅವುಗಳೆಂದರೆ:
-
ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳು (34.9%)
-
ಮೋಟಾರು ವಾಹನಗಳು, ಟ್ರೇಲರ್ಗಳು ಮತ್ತು ಸೆಮಿ-ಟ್ರೇಲರ್ಗಳು (33.5%)
-
ಇತರ ಸಾರಿಗೆ ಉಪಕರಣಗಳು (25.1%)
ಪ್ರಮುಖ ವಲಯಗಳ ಸಾಧನೆ: ಮೂಲಸೌಕರ್ಯ ವಲಯದಲ್ಲಿ, ಸಿಮೆಂಟ್ ಉತ್ಪಾದನೆಯು ವಾರ್ಷಿಕವಾಗಿ ಶೇ. 13.5 ರಷ್ಟು ಭಾರಿ ಏರಿಕೆ ಕಂಡಿದೆ. ಅದರ ಬೆನ್ನಲ್ಲೇ ಉಕ್ಕು (Steel) ವಲಯವು ಶೇ. 6.9 ರಷ್ಟು ಬೆಳವಣಿಗೆ ಸಾಧಿಸಿದೆ. ಇದು ನಿರ್ಮಾಣ ಮತ್ತು ಮೂಲಸೌಕರ್ಯ ಚಟುವಟಿಕೆಗಳಿಂದ ಬರುತ್ತಿರುವ ನಿರಂತರ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಇತರ ಪ್ರಮುಖ ವಲಯಗಳಾದ ವಿದ್ಯುತ್ (ಶೇ. 5.3), ರಸಗೊಬ್ಬರ (ಶೇ. 4.1) ಮತ್ತು ಕಲ್ಲಿದ್ದಲು (ಶೇ. 3.6) ಕೂಡ ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಇದು ಇಂಧನ ಮತ್ತು ಕಚ್ಚಾವಸ್ತು ಆಧಾರಿತ ಕೈಗಾರಿಕೆಗಳಲ್ಲಿನ ಚೇತರಿಕೆಯನ್ನು ಬಲಪಡಿಸಿದೆ.
ಒಟ್ಟಾರೆಯಾಗಿ,ಐಐಪಿ ಮತ್ತು ಐಸಿಐ ಸೂಚ್ಯಂಕಗಳಲ್ಲಿನ ಏಕಕಾಲಿಕ ಸುಧಾರಣೆಯು ದೇಶದ ಕೈಗಾರಿಕಾ ಅಡಿಪಾಯ ಬಲಗೊಳ್ಳುತ್ತಿರುವುದನ್ನು ತೋರಿಸುತ್ತದೆ. ಮೂಲಸೌಕರ್ಯ ವೆಚ್ಚ, ಸದೃಢ ದೇಶೀಯ ಬೇಡಿಕೆ ಮತ್ತು ಉತ್ಪಾದನಾ ವಲಯದ ಸ್ಥಿರ ವಿಸ್ತರಣೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಹಣಕಾಸು ಅಭಿವೃದ್ಧಿ
ಬಲಗೊಂಡ ಆರ್ಥಿಕ ವಿಶ್ವಾಸಾರ್ಹತೆ ಮತ್ತು ರೇಟಿಂಗ್ ಏರಿಕೆ: ಸರ್ಕಾರದ ವಿವೇಕಯುತ ಹಣಕಾಸು ನಿರ್ವಹಣೆಯು ಭಾರತದ ಸ್ಥೂಲ ಆರ್ಥಿಕ ಮತ್ತು ಹಣಕಾಸು ಚೌಕಟ್ಟಿನ ಮೇಲೆ ವಿಶ್ವಾಸವನ್ನು ಹೆಚ್ಚಿಸಿದೆ. ಇದರ ಫಲವಾಗಿ, 2025ರಲ್ಲಿ ಮಾರ್ನಿಂಗ್‌ಸ್ಟಾರ್ ಡಿಬಿಆರ್‌ಎಸ್, ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಮತ್ತು ರೇಟಿಂಗ್ ಅಂಡ್ ಇನ್ವೆಸ್ಟ್‌ಮೆಂಟ್ ಇನ್ಫರ್ಮೇಷನ್ ಸಂಸ್ಥೆಗಳು ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಅನ್ನು ಉತ್ತಮಗೊಳಿಸಿವೆ.
ಕೇಂದ್ರ ಸರ್ಕಾರದ ಆದಾಯ ಸಂಗ್ರಹಣೆಯಲ್ಲಿ ಸುಧಾರಣೆ: ಕೇಂದ್ರ ಸರ್ಕಾರದ ಒಟ್ಟು ಆದಾಯ ಸಂಗ್ರಹಣೆಯು 2016-20ರ ಅವಧಿಯಲ್ಲಿದ್ದ ಜಿಡಿಪಿಯ ಶೇ. 8.5 ರಿಂದ 2024-25ರಲ್ಲಿ ಶೇ. 9.2 ಕ್ಕೆ ಸುಧಾರಿಸಿದೆ. ಪ್ರಮುಖವಾಗಿ ಕಾರ್ಪೊರೇಟ್ ಅಲ್ಲದ ತೆರಿಗೆ ಸಂಗ್ರಹಣೆಯಲ್ಲಿನ ಏರಿಕೆಯು ಇದಕ್ಕೆ ದೊಡ್ಡ ಬೆಂಬಲ ನೀಡಿದೆ.
ನೇರ ತೆರಿಗೆ ವ್ಯಾಪ್ತಿಯ ವಿಸ್ತರಣೆ: ಒಟ್ಟು ತೆರಿಗೆ ಸಂಗ್ರಹಣೆಯಲ್ಲಿ ನೇರ ತೆರಿಗೆಗಳ ಪಾಲು ಕೋವಿಡ್ ಪೂರ್ವದ ಶೇ. 51.9 ರಿಂದ 2024-25ರಲ್ಲಿ ಶೇ. 58.8 ಕ್ಕೆ ಏರಿದೆ. ಆದಾಯ ತೆರಿಗೆ ಸಲ್ಲಿಕೆದಾರರ ಸಂಖ್ಯೆಯು 2021-22ರಲ್ಲಿ 6.9 ಕೋಟಿ ಇತ್ತು, ಅದು 2024-25ರಲ್ಲಿ 9.2 ಕೋಟಿಗೆ ಏರಿದೆ. ಇದು ತೆರಿಗೆ ನಿಯಮಗಳ ಪಾಲನೆ, ತಂತ್ರಜ್ಞಾನದ ಬಳಕೆ ಮತ್ತು ಜನರ ಆದಾಯ ಹೆಚ್ಚಾದಂತೆ ತೆರಿಗೆ ವ್ಯಾಪ್ತಿಗೆ ಬರುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಿರುವುದನ್ನು ಸೂಚಿಸುತ್ತದೆ.
ಜಿಎಸ್ಟಿ ಸಾಧನೆ ಮತ್ತು ವ್ಯವಹಾರದ ಚಟುವಟಿಕೆ

2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಒಟ್ಟು ಜಿಎಸ್‌ಟಿ ಸಂಗ್ರಹವು ₹17.4 ಲಕ್ಷ ಕೋಟಿ ತಲುಪಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.7 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆರ್ಥಿಕ ಚಟುವಟಿಕೆಗಳ ವೇಗವನ್ನು ಅಳೆಯುವ ಇ-ವೇ ಬಿಲ್ ಪ್ರಮಾಣವು ಇದೇ ಅವಧಿಯಲ್ಲಿ ಶೇ. 21 ರಷ್ಟು ಗಮನಾರ್ಹ ಏರಿಕೆ ಕಂಡಿದೆ.
ಪರಿಣಾಮಕಾರಿ ಬಂಡವಾಳ ವೆಚ್ಚದ ಏರಿಕೆ: ಸರ್ಕಾರದ ಪರಿಣಾಮಕಾರಿ ಬಂಡವಾಳ ವೆಚ್ಚವು (Capital Expenditure) ಕೋವಿಡ್ ಪೂರ್ವದಲ್ಲಿದ್ದ ಜಿಡಿಪಿಯ ಶೇ. 2.7 ರಿಂದ 2024-25ರ ವೇಳೆಗೆ ಶೇ. 4 ಕ್ಕೆ ಏರಿದೆ. ಇದು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ.
ರಾಜ್ಯಗಳಿಗೆ ಬಂಡವಾಳ ವೆಚ್ಚದ ಬೆಂಬಲ: ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ನೀಡುವ ವಿಶೇಷ ನೆರವು ಯೋಜನೆಯಡಿ, ಕೇಂದ್ರ ಸರ್ಕಾರವು ರಾಜ್ಯಗಳು ತಮ್ಮ ಜಿಡಿಪಿಯ ಸುಮಾರು ಶೇ. 2.4 ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ಕಾಯ್ದಿರಿಸುವಂತೆ ಉತ್ತೇಜಿಸಿದೆ.
ರಾಜ್ಯ ಸರ್ಕಾರಗಳ ಹಣಕಾಸು ಕೊರತೆಯ ಪ್ರವೃತ್ತಿ: ರಾಜ್ಯ ಸರ್ಕಾರಗಳ ಒಟ್ಟು ಹಣಕಾಸು ಕೊರತೆಯು ಕೋವಿಡ್ ನಂತರದ ಅವಧಿಯಲ್ಲಿ ಜಿಡಿಪಿಯ ಶೇ. 2.8 ರಷ್ಟು ಸ್ಥಿರವಾಗಿತ್ತು. ಆದರೆ, 2024-25ರಲ್ಲಿ ಇದು ಶೇ. 3.2 ಕ್ಕೆ ಏರಿದ್ದು, ರಾಜ್ಯಗಳ ಹಣಕಾಸಿನ ಮೇಲಿರುವ ಒತ್ತಡವನ್ನು ಪ್ರತಿಬಿಂಬಿಸುತ್ತದೆ.
ಸರ್ಕಾರಿ ಸಾಲದ ಅನುಪಾತದ ಇಳಿಕೆ: ಭಾರತವು 2020 ರಿಂದ ತನ್ನ ಒಟ್ಟು ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವನ್ನು ಸುಮಾರು 7.1 ಶೇಕಡಾವಾರು ಪಾಯಿಂಟ್ಗಳಷ್ಟು ಕಡಿಮೆ ಮಾಡಿದೆ. ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳುವ ನಡುವೆಯೇ ಈ ಸಾಧನೆ ಮಾಡಲಾಗಿದೆ.
ಸಮತೋಲಿತ ಹಣಕಾಸು ವ್ಯವಸ್ಥೆಯ ನಿರ್ಮಾಣ: ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ನಡುವೆಯೂ ಭಾರತದ ಹಣಕಾಸು ವಲಯವು 2025-26ರಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಭಾರತದ ಬಲವಾದ ನಿಯಂತ್ರಕ ಚೌಕಟ್ಟು ಮತ್ತು ದೇಶೀಯ ಹಣಕಾಸು ಮಾರ್ಗಗಳ ಮೇಲಿನ ಅವಲಂಬನೆಯು ಆರ್ಥಿಕ ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಹಣಕಾಸು ನೀತಿ ಮತ್ತು ದ್ರವ್ಯತೆ ನಿರ್ವಹಣೆ: ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗೆ ಸ್ಪಂದಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ 2025ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ರೆಪೋ ದರವನ್ನು ಒಟ್ಟು 100 ಬೇಸಿಸ್ ಪಾಯಿಂಟ್ಗಳಷ್ಟು ಇಳಿಕೆ ಮಾಡಿದೆ. ಸದ್ಯ ರೆಪೋ ದರವು ಶೇ. 5.25 ರಷ್ಟಿದೆ. ಸಾಲದ ಹರಿವು, ಹೂಡಿಕೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ನೀತಿ ದರಗಳ (Repo Rate) ಕಡಿತಕ್ಕೆ ಪೂರಕವಾಗಿ, ಆರ್ಬಿಐ 2025ರ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ನಗದು ಮೀಸಲು ಅನುಪಾತವನ್ನು 100 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿ ಶೇ. 3.0 ಕ್ಕೆ ತಂದಿದೆ. ಇದರ ಜೊತೆಗೆ, ಆರ್‌ಬಿಐ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ ಮೂಲಕ 2025ರ ಏಪ್ರಿಲ್-ಮೇ ತಿಂಗಳಲ್ಲಿ ₹2.39 ಲಕ್ಷ ಕೋಟಿ ದ್ರವ್ಯತೆಯನ್ನು ಮಾರುಕಟ್ಟೆಗೆ ಹರಿಸಿದೆ. ನಂತರ ಡಿಸೆಂಬರ್ 2025 ರಲ್ಲಿ ₹1 ಲಕ್ಷ ಕೋಟಿಯ ಒಎಂಒ ಖರೀದಿ ಮತ್ತು 5 ಶತಕೋಟಿ ಡಾಲರ್ ಮೊತ್ತದ 3 ವರ್ಷದ 'ಯುಎಸ್‌ಡಿ/ ಐಎನ್‌ಆರ್ ಬೈ-ಸೆಲ್ ಸ್ವ್ಯಾಪ್' ಪ್ರಕ್ರಿಯೆಯನ್ನು ನಡೆಸಿದೆ. ಇದರ ಫಲವಾಗಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದ್ರವ್ಯತೆಯು ಹೆಚ್ಚುವರಿಯಾಗಿದ್ದು, 2024-25ರಲ್ಲಿ ಸರಾಸರಿ ₹1,605 ಕೋಟಿ ಇದ್ದ ದ್ರವ್ಯತೆಯು 2025-26ರಲ್ಲಿ (ಜನೆವರಿ 8ರ ವರೆಗೆ) ₹1.89 ಲಕ್ಷ ಕೋಟಿಗೆ ಏರಿದೆ.
ಹಣಕಾಸಿನ ಒಟ್ಟು ಮೊತ್ತ ಮತ್ತು ಸಾಲದ ಪ್ರಸರಣ
ಮೀಸಲು ಹಣದ ಬೆಳವಣಿಗೆಯು ಡಿಸೆಂಬರ್ 2024ರಲ್ಲಿದ್ದ ಶೇ. 4.9 ರಿಂದ ಡಿಸೆಂಬರ್ 2025ಕ್ಕೆ ಶೇ. 2.9 ಕ್ಕೆ ಇಳಿದಿದ್ದರೂ, ಸಿಆರ್‌ಆರ್ ಹೊಂದಾಣಿಕೆಯ ನಂತರದ ಬೆಳವಣಿಗೆಯು ಶೇ. 9.4 ರಷ್ಟಿದೆ (ಕಳೆದ ವರ್ಷ ಇದು ಶೇ. 6.2 ಇತ್ತು). ಈ ಪ್ರವೃತ್ತಿಯು ಹಣಕಾಸು ನೀತಿಯ ವಿಸ್ತರಣಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಇದೇ ಅವಧಿಯಲ್ಲಿ, ಬ್ರಾಡ್-ಮನಿ ಬೆಳವಣಿಗೆಯು ಕಳೆದ ವರ್ಷದ ಶೇ. 9 ರಿಂದ ಶೇ. 12.1 ಕ್ಕೆ ಏರಿದೆ. ಸಿಆರ್‌ಆರ್ ಕಡಿತದಿಂದ ಬಿಡುಗಡೆಯಾದ ದ್ರವ್ಯತೆಯನ್ನು ಬ್ಯಾಂಕುಗಳು ಸಮರ್ಥವಾಗಿ ಬಳಸಿಕೊಂಡಿವೆ ಎಂಬುದನ್ನು ಇದು ಸೂಚಿಸುತ್ತದೆ. ಬ್ಯಾಂಕುಗಳಲ್ಲಿನ ಒಟ್ಟು ಠೇವಣಿಗಳ ಏರಿಕೆಯು ಬ್ರಾಡ್-ಮನಿ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ.
ಹಣದ ಗುಣಕವು ಡಿಸೆಂಬರ್ 2024ರಲ್ಲಿದ್ದ 5.70 ರಿಂದ ಡಿಸೆಂಬರ್ 2025ರಲ್ಲಿ 6.21 ಕ್ಕೆ ಏರಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಣಕಾಸಿನ ಮಧ್ಯಸ್ಥಿಕೆ ಸುಧಾರಿಸಿರುವುದನ್ನು ಸೂಚಿಸುತ್ತದೆ, ಇದರಿಂದಾಗಿ ವ್ಯವಸ್ಥೆಯಲ್ಲಿ ಸಮರ್ಪಕ ದ್ರವ್ಯತೆ ಖಚಿತವಾಗಿದೆ.
ಬ್ಯಾಂಕಿಂಗ್ ವಲಯದ ಸಾಧನೆ ಮತ್ತು ಸಾಲದ ಚಲನಶೀಲತೆ

2025-26ರ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯವು ಮತ್ತಷ್ಟು ಬಲಗೊಂಡಿದೆ. ಒಟ್ಟು ವಸೂಲಾಗದ ಸಾಲದ ಅನುಪಾತವು ಹಲವು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಮತ್ತು ನಿವ್ವಳ ವಸೂಲಾಗದ ಸಾಲವು ದಾಖಲೆ ಮಟ್ಟದ ಇಳಿಕೆ ಕಂಡಿದೆ. 2025ರ ಸೆಪ್ಟೆಂಬರ್ ವೇಳೆಗೆ ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳ ಬಂಡವಾಳದಿಂದ ಅಪಾಯ-ತೂಕದ ಆಸ್ತಿಗಳ ಅನುಪಾತವು ಶೇ. 17.2 ರಷ್ಟು ಬಲವಾಗಿ ಮುಂದುವರಿದಿದೆ.
ಬ್ಯಾಂಕುಗಳ ಲಾಭದಾಯಕತೆಯೂ ಸುಧಾರಿಸಿದೆ; ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳ ತೆರಿಗೆ ನಂತರದ ಲಾಭವು (PAT) 2024-25ರಲ್ಲಿ ಶೇ. 16.9 ರಷ್ಟು ಮತ್ತು 2025ರ ಸೆಪ್ಟೆಂಬರ್ ವೇಳೆಗೆ ವಾರ್ಷಿಕವಾಗಿ ಶೇ. 3.8 ರಷ್ಟು ಏರಿಕೆಯಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಈಕ್ವಿಟಿ ಮೇಲಿನ ಲಾಭವು (ROE) ಶೇ. 12.5 ರಷ್ಟಿದ್ದರೆ, ಆಸ್ತಿ ಮೇಲಿನ ಲಾಭವು ಶೇ. 1.3 ರಷ್ಟಿದೆ.
2025-26ರ ಆರಂಭದಲ್ಲಿ ಸಾಧಾರಣವಾಗಿದ್ದ ಸಾಲದ ಬೆಳವಣಿಗೆಯು ನಂತರ ವೇಗ ಪಡೆದುಕೊಂಡಿದೆ. ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳ ಒಟ್ಟು ಸಾಲದ ಪ್ರಮಾಣವು 2025ರ ಡಿಸೆಂಬರ್‌ನಲ್ಲಿ ಶೇ. 14.5 ರಷ್ಟು (ವಾರ್ಷಿಕ) ಏರಿಕೆಯಾಗಿದೆ (ಕಳೆದ ವರ್ಷ ಇದು ಶೇ. 11.2 ಇತ್ತು). 2025ರ ಡಿಸೆಂಬರ್ ತಿಂಗಳು ಇಡೀ ಹಣಕಾಸು ವರ್ಷದಲ್ಲೇ ಬ್ಯಾಂಕ್ ಸಾಲ ಮತ್ತು ಆಹಾರೇತರ ಸಾಲದ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಲದ ಬೆಳವಣಿಗೆಯು ಸದೃಢವಾಗಿ ಮುಂದುವರಿದಿದೆ. 2025ರ ನವೆಂಬರ್‌ನಲ್ಲಿ ಎಂಎಸ್‌ಎಂಇ ಸಾಲವು ಶೇ. 21.8 ರಷ್ಟು ವಿಸ್ತರಿಸಿದೆ. ಈ ವಲಯದೊಳಗೆ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು 2025ರ ನವೆಂಬರ್‌ನಲ್ಲಿ ಶೇ. 24.6 ರಷ್ಟು ಭಾರಿ ಬೆಳವಣಿಗೆ ದಾಖಲಿಸಿವೆ (ಕಳೆದ ವರ್ಷ ನವೆಂಬರ್‌ನಲ್ಲಿ ಇದು ಶೇ. 10.2 ರಷ್ಟಿತ್ತು).
|
ಹಣಕಾಸು ಒಳಗೊಳ್ಳುವಿಕೆಯ ಮಾಪನಗಳಲ್ಲಿ ಸುಧಾರಣೆ
ದೇಶವು ಹಣಕಾಸು ಒಳಗೊಳ್ಳುವಿಕೆಯನ್ನು ಸಾಧಿಸುವಲ್ಲಿ ಸಾಧಿಸಿರುವ ಪ್ರಗತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ 'ಹಣಕಾಸು ಒಳಗೊಳ್ಳುವಿಕೆ ಸೂಚ್ಯಂಕ' ಅಳೆಯುತ್ತದೆ. ಇದು ಬ್ಯಾಂಕಿಂಗ್, ಹೂಡಿಕೆಗಳು, ವಿಮೆ, ಅಂಚೆ ಮತ್ತು ಪಿಂಚಣಿ ವಲಯಗಳಿಗೆ ಸಂಬಂಧಿಸಿದ 97 ಸೂಚಕಗಳ ದತ್ತಾಂಶವನ್ನು ಒಳಗೊಂಡಿದೆ. ಈ ಸೂಚ್ಯಂಕವು ಮುಖ್ಯವಾಗಿ ಮೂರು ಆಯಾಮಗಳನ್ನು ಆಧರಿಸಿದೆ: ಪ್ರವೇಶ, ಬಳಕೆ, ಮತ್ತು ಗುಣಮಟ್ಟ. ಇವುಗಳನ್ನು ಮೂರು ಉಪ-ಸೂಚ್ಯಂಕಗಳಾದ FI-ಪ್ರವೇಶ, FI-ಬಳಕೆ ಮತ್ತು FI-ಗುಣಮಟ್ಟದ ಮೂಲಕ ಪ್ರತಿನಿಧಿಸಲಾಗುತ್ತದೆ. ಭಾರತದ ಹಣಕಾಸು ಒಳಗೊಳ್ಳುವಿಕೆ ಸೂಚ್ಯಂಕವು ಮಾರ್ಚ್ 2024 ರಲ್ಲಿ 64.2 ರಷ್ಟಿತ್ತು, ಅದು ಮಾರ್ಚ್ 2025 ರ ವೇಳೆಗೆ 67.0 ಕ್ಕೆ ಏರಿಕೆಯಾಗಿದೆ.
|
ಬಂಡವಾಳ ಮಾರುಕಟ್ಟೆಗಳು ಮತ್ತು ಕುಟುಂಬಗಳ ಹಣಕಾಸು ಹರಿವು

ಬಂಡವಾಳ ನಿರ್ಮಾಣದಲ್ಲಿ ಬಂಡವಾಳ ಮಾರುಕಟ್ಟೆಗಳು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿವೆ. 2025-26ರ ಹಣಕಾಸು ವರ್ಷದಲ್ಲಿ (ಡಿಸೆಂಬರ್ 2025 ರವರೆಗೆ), ಪ್ರಾಥಮಿಕ ಮಾರುಕಟ್ಟೆಗಳಿಂದ ಒಟ್ಟು ₹10.7 ಲಕ್ಷ ಕೋಟಿ ಸಂಪನ್ಮೂಲವನ್ನು ಕ್ರೋಢೀಕರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ (2021-22 ರಿಂದ ಡಿಸೆಂಬರ್ 2025 ರವರೆಗೆ), ಪ್ರಾಥಮಿಕ ಮಾರುಕಟ್ಟೆಗಳು ಈಕ್ವಿಟಿ ಮತ್ತು ಸಾಲಪತ್ರಗಳ ಮೂಲಕ ಒಟ್ಟು ₹53 ಲಕ್ಷ ಕೋಟಿಯನ್ನು ಸಂಗ್ರಹಿಸಿವೆ.
ಕುಟುಂಬಗಳ ಹಣಕಾಸು ಉಳಿತಾಯವು ಮಾರುಕಟ್ಟೆ ಆಧಾರಿತ ಯೋಜನೆಗಳತ್ತ ಸಾಗುತ್ತಿದೆ. ಷೇರು ಮಾರುಕಟ್ಟೆಯ ಮಾಲೀಕತ್ವದಲ್ಲಿ ವೈಯಕ್ತಿಕ ಹೂಡಿಕೆದಾರರ ಪಾಲು 2025ರ ಸೆಪ್ಟೆಂಬರ್ ವೇಳೆಗೆ ಶೇ. 18.8 ಕ್ಕೆ ಏರಿದೆ. ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2025 ರ ನಡುವೆ ಕುಟುಂಬಗಳ ಒಟ್ಟು ಈಕ್ವಿಟಿ ಸಂಪತ್ತು ಸುಮಾರು ₹53 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ವಾರ್ಷಿಕ ಕುಟುಂಬ ಹಣಕಾಸು ಉಳಿತಾಯದಲ್ಲಿ ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳ ಪಾಲು 2011-12ರಲ್ಲಿ ಸುಮಾರು ಶೇ. 2 ರಷ್ಟಿತ್ತು, ಅದು 2024-25ರಲ್ಲಿ ಶೇ. 15.2 ಕ್ಕಿಂತ ಹೆಚ್ಚಿಗೆ ಏರಿದೆ.
ಉಪಸಂಹಾರ
2025-26ರ ಸ್ಥೂಲ ಆರ್ಥಿಕ ಪ್ರವೃತ್ತಿಗಳು ಸ್ಥಿರತೆ ಮತ್ತು ವೇಗದಿಂದ ಕೂಡಿದ ಆರ್ಥಿಕತೆಯನ್ನು ಸೂಚಿಸುತ್ತವೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಬೆಳವಣಿಗೆಯು ವ್ಯಾಪಕವಾಗಿದ್ದು, ಹಣದುಬ್ಬರವು ನಿಯಂತ್ರಣದಲ್ಲಿದೆ ಮತ್ತು ಕಾರ್ಮಿಕ ಮಾರುಕಟ್ಟೆಯ ಸೂಚಕಗಳು ಬಲಗೊಂಡಿವೆ. ಬಾಹ್ಯ ವಲಯದ ಉತ್ತಮ ಸಾಧನೆ, ಏರುತ್ತಿರುವ ಸೇವಾ ರಫ್ತು ಮತ್ತು ಸಮರ್ಪಕ ವಿದೇಶಿ ವಿನಿಮಯ ಮೀಸಲು ಜಾಗತಿಕ ಆರ್ಥಿಕ ಹೊಡೆತಗಳ ವಿರುದ್ಧ ದೇಶಕ್ಕೆ ಚೇತರಿಸಿಕೊಳ್ಳುವ ಶಕ್ತಿಯನ್ನು ನೀಡಿವೆ. ನಿರಂತರ ಬಂಡವಾಳ ವೆಚ್ಚದ ಜೊತೆಗೆ ಹಣಕಾಸಿನ ಶಿಸ್ತು ಸುಧಾರಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿದ್ದು, ಸಾಲದ ವಿಸ್ತರಣೆ ಮತ್ತು ಹಣಕಾಸು ಒಳಗೊಳ್ಳುವಿಕೆಗೆ ಬೆಂಬಲ ನೀಡುತ್ತಿದೆ.
ಒಟ್ಟಾರೆಯಾಗಿ, ಈ ಬೆಳವಣಿಗೆಗಳು ಭಾರತದ ಆರ್ಥಿಕ ಅಡಿಪಾಯವು ಬಲಗೊಳ್ಳುತ್ತಿರುವುದನ್ನು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಲೇ ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವ ಸಾಮರ್ಥ್ಯವನ್ನು ದೇಶ ಹೊಂದಿದೆ ಎಂಬುದನ್ನು ತೋರಿಸುತ್ತವೆ.
References:
Ministry of Finance:
https://www.pib.gov.in/PressReleasePage.aspx?PRID=2219907®=3&lang=1
https://www.pib.gov.in/PressReleasePage.aspx?PRID=2219912®=3&lang=1
https://www.indiabudget.gov.in/economicsurvey/doc/eschapter/echap01.pdf
https://www.indiabudget.gov.in/economicsurvey/doc/eschapter/echap02.pdf
https://www.indiabudget.gov.in/economicsurvey/doc/eschapter/echap03.pdf
https://www.indiabudget.gov.in/economicsurvey/doc/eschapter/echap04.pdf
https://www.indiabudget.gov.in/economicsurvey/doc/eschapter/echap05.pdf
Ministry of Commerce & Industry:
https://www.pib.gov.in/PressReleasePage.aspx?PRID=2216458®=3&lang=1
Ministry of Statistics & Programme Implementation:
https://www.pib.gov.in/PressReleasePage.aspx?PRID=2219602®=3&lang=2
Click here for pdf file.
(Explainer ID: 157126)
आगंतुक पटल : 19
Provide suggestions / comments