• Skip to Content
  • Sitemap
  • Advance Search
Economy

"ಗಣನೀಯವಾದುದನ್ನು ಗಣಿಸುವುದು: ಭಾರತದ ರಾಷ್ಟ್ರೀಯ ಲೆಕ್ಕಪತ್ರಗಳು ಮತ್ತು ಪ್ರಮುಖ ಆರ್ಥಿಕ ಅಂಕಿಅಂಶಗಳ ಬಲವರ್ಧನೆ"

Posted On: 28 JAN 2026 2:02PM

ಪ್ರಮುಖ ಮಾರ್ಗಸೂಚಿಗಳು

  • ಜಿಡಿಪಿ ಅಂದಾಜುಗಳ ಮೂಲ ವರ್ಷ: ಹೊಸ ಆರ್ಥಿಕ ರಚನೆಗಳನ್ನು ಪ್ರತಿಬಿಂಬಿಸಲು ಜಿಡಿಪಿ ಅಂದಾಜುಗಳ ಮೂಲ ವರ್ಷವನ್ನು 2022-23ಕ್ಕೆ ಪರಿಷ್ಕರಿಸಲಾಗಿದೆ.

  • ಸಿಪಿಐ ಪರಿಷ್ಕರಣೆ: ಗ್ರಾಹಕ ಬೆಲೆ ಸೂಚ್ಯಂಕದ ಮೂಲ ವರ್ಷವನ್ನು 2024ಕ್ಕೆ ಪರಿಷ್ಕರಿಸಲಾಗಿದೆ. ಇದು ಗ್ರಾಮೀಣ ಮತ್ತು ನಗರ ಕುಟುಂಬಗಳ ಬಳಕೆಯ ಬುಟ್ಟಿ ಮತ್ತು ಅವುಗಳ ತೂಕವನ್ನು ನವೀಕರಿಸುತ್ತದೆ.

  • ಐಐಪಿ ನವೀಕರಣ: ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು (ಐಐಪಿ) ಹೊಸ ರಾಷ್ಟ್ರೀಯ ಲೆಕ್ಕಪತ್ರ ಸರಣಿಯೊಂದಿಗೆ ಹೊಂದಿಸಲು 2022-23ಕ್ಕೆ ಪರಿಷ್ಕರಿಸಲಾಗುತ್ತಿದೆ.

  • ಅಸಂಘಟಿತ ವಲಯದ ಮಾಪನ: ತ್ರೈಮಾಸಿಕ ಕ್ಯೂಬಿಯುಎಸ್‌ ಬುಲೆಟಿನ್‌ಗಳ ಮೂಲಕ ಅಸಂಘಟಿತ ವಲಯದ ಮಾಪನವನ್ನು ಸುಧಾರಿಸಲಾಗಿದೆ.

  • ಜಿಲ್ಲಾ ಮಟ್ಟದ ಅಂದಾಜು: ಜಿಲ್ಲಾ ಮಟ್ಟದ ಅಂದಾಜು ಪ್ರಕ್ರಿಯೆಯು ಈಗ ಪಿಎಳ್‌ಎಫ್‌ಎಸ್‌, ಎಎಸ್‌ಯುಎಸ್‌ಮತ್ತು ಎನ್‌ಎಸ್‌ಎಸ್‌ ಸಮೀಕ್ಷೆಗಳ ಪ್ರಮುಖ ವಿನ್ಯಾಸ ವೈಶಿಷ್ಟ್ಯವಾಗಿದೆ.

  • ಅಧಿಕೃತ ದತ್ತಾಂಶದ ಮುಕ್ತ ಲಭ್ಯತೆ: ಪಾರದರ್ಶಕತೆ ಮತ್ತು ದತ್ತಾಂಶದ ಮರುಬಳಕೆಯನ್ನು ಉತ್ತೇಜಿಸಲು GoIStats, e-Sankhyiki ಮತ್ತು ನವೀಕರಿಸಿದ Microdata Portal ಮೂಲಕ ಸಾರ್ವಜನಿಕರಿಗೆ ಅಧಿಕೃತ ದತ್ತಾಂಶಗಳ ಲಭ್ಯತೆಯನ್ನು ವಿಸ್ತರಿಸಲಾಗಿದೆ.

ಪೀಠಿಕೆ

ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆಯ ನೈಜತೆಯನ್ನು ಉತ್ತಮವಾಗಿ ಸೆರೆಹಿಡಿಯಲು ಭಾರತದ ಸಾಂಖ್ಯಾತಿಕ ವ್ಯವಸ್ಥೆಯು ಸಮಗ್ರ ಆಧುನೀಕರಣಕ್ಕೆ ಒಳಗಾಗುತ್ತಿದೆ. ಕಳೆದ ಮೂಲ ವರ್ಷದಿಂದ (2011-12) ಈವರೆಗಿನ ದಶಕದಲ್ಲಿ, ದೇಶವು ಗಮನಾರ್ಹ ರಚನಾತ್ಮಕ ಬದಲಾವಣೆಗಳನ್ನು ಕಂಡಿದೆ; ಸೇವಾ ವಲಯವು ವೇಗವಾಗಿ ವಿಸ್ತರಿಸಿದೆ, ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಔಪಚಾರಿಕೀಕರಣ ಹೆಚ್ಚಾಗಿದೆ ಮತ್ತು ಡಿಜಿಟಲ್ ವೇದಿಕೆಗಳು ವ್ಯವಹಾರ ಮಾದರಿಗಳನ್ನು ಬದಲಾಯಿಸಿವೆ. ಈ ಬದಲಾವಣೆಗಳು ಹೆಚ್ಚು ಸಮಯೋಚಿತ ಸೂಚಕಗಳು, ಉತ್ತಮ ಭೌಗೋಳಿಕ ವಿವರಗಳು ಮತ್ತು ಅಸಂಘಟಿತ ಹಾಗೂ ಸೇವಾ ವಲಯಗಳ ಸುಧಾರಿತ ವ್ಯಾಪ್ತಿಗಾಗಿ ಬೇಡಿಕೆಯನ್ನು ಸೃಷ್ಟಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದತ್ತಾಂಶದ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ನೀತಿ ಪ್ರಸ್ತುತತೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಸಾಂಖ್ಯಾತಿಕ ವ್ಯವಸ್ಥೆಯ ವಿಶಾಲ ಆಧುನೀಕರಣದ ಭಾಗವಾಗಿ ಸರ್ಕಾರವು ಸಂಘಟಿತ ಸುಧಾರಣೆಗಳನ್ನು ಪ್ರಾರಂಭಿಸಿದೆ.

ಇದರ ಅಡಿಯಲ್ಲಿ ಪ್ರಮುಖ ಸುಧಾರಣೆಗಳೆಂದರೆ - ಮುಂಬರುವ ಜಿಡಿಪಿ  ಮತ್ತು ಬೆಲೆ ಸೂಚ್ಯಂಕಗಳ ಮೂಲ ವರ್ಷಗಳ ಪರಿಷ್ಕರಣೆ, ಅಸಂಘಟಿತ ಮತ್ತು ಸೇವಾ ಆರ್ಥಿಕತೆಯ ಮಾಪನದಲ್ಲಿನ ಸುಧಾರಣೆಗಳು, ಕಾರ್ಮಿಕ ಮಾರುಕಟ್ಟೆ ಅಂಕಿಅಂಶಗಳ ವರ್ಧನೆ, ಸಮೀಕ್ಷಾ ವಿಧಾನಗಳು ಮತ್ತು ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳು ಹಾಗೂ ಪಾಲುದಾರರ ಒಳಗೊಳ್ಳುವಿಕೆಯ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುವ ಕ್ರಮಗಳು. ಒಟ್ಟಾರೆಯಾಗಿ, ಈ ಸುಧಾರಣೆಗಳು ಸಾಕ್ಷ್ಯಾಧಾರಿತ ನೀತಿ ನಿರೂಪಣೆಗಾಗಿ ಭಾರತದ ಅಧಿಕೃತ ಅಂಕಿಅಂಶಗಳ ಸಮಯೋಚಿತತೆ, ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಸಜ್ಜಾಗಿವೆ.

ರಾಷ್ಟ್ರೀಯ ಲೆಕ್ಕಪತ್ರಗಳ ಮೂಲ ವರ್ಷದ ಪರಿಷ್ಕರಣೆ

ನಿಯತಕಾಲಿಕ ಮೂಲ ವರ್ಷದ ನವೀಕರಣಗಳು ಜಿಡಿಪಿ ಮತ್ತು ಇತರ ಸೂಚ್ಯಂಕಗಳು ಪ್ರಸ್ತುತ ಆರ್ಥಿಕ ರಚನೆ ಮತ್ತು ಕಾಲಾನಂತರದಲ್ಲಿ ವಿಕಸನಗೊಳ್ಳುವ ಸಾಪೇಕ್ಷ ಬೆಲೆಗಳನ್ನು ಪ್ರತಿಬಿಂಬಿಸುವುದನ್ನು ಖಚಿತಪಡಿಸುತ್ತವೆ. ಸಂಕಲನದ ವಿಧಾನವನ್ನು ನವೀಕರಿಸುವ ಮೂಲಕ ಮತ್ತು ಹೊಸ ದತ್ತಾಂಶ ಮೂಲಗಳನ್ನು ಸೇರಿಸುವ ಮೂಲಕ ಆರ್ಥಿಕತೆಯಲ್ಲಿ ನಡೆಯುತ್ತಿರುವ ರಚನಾತ್ಮಕ ಬದಲಾವಣೆಗಳನ್ನು ಉತ್ತಮವಾಗಿ ಸೆರೆಹಿಡಿಯಲು ಮೂಲ ವರ್ಷವನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.

ಇದಲ್ಲದೆ, ಮೂಲ ವರ್ಷದ ಬದಲಾವಣೆಯು ವಿಶ್ವಸಂಸ್ಥೆಯ ಸಾಂಖ್ಯಾತಿಕ ಆಯೋಗದಂತಹ ಸಂಸ್ಥೆಗಳು ಶಿಫಾರಸು ಮಾಡಿದ ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಡಿಜಿಟಲ್ ಆರ್ಥಿಕತೆ, ಸರಬರಾಜು-ಬಳಕೆ ಕೋಷ್ಟಕಗಳು ಇತ್ಯಾದಿಗಳನ್ನು ಅಳೆಯುವ ಕುರಿತಾದ ಹೊಸ ಮಾರ್ಗದರ್ಶನದ ಬೆಳಕಿನಲ್ಲಿ, ನವೀಕರಿಸಿದ ಜಾಗತಿಕ ಮಾನದಂಡಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಭಾರತದ ಅಂಕಿಅಂಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಲನಾತ್ಮಕವಾಗಿ ಮತ್ತು ಕ್ರಮಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ.

ಜಿಡಿಪಿ (GDP) ಸರಣಿಯ ಸಂಕಲನದಲ್ಲಿ ಮೂಲ ವರ್ಷದ ಪರಿಷ್ಕರಣೆ

ಒಂದು ಪ್ರಮುಖ ಸುಧಾರಣೆಯೆಂದರೆ ಒಟ್ಟು ದೇಶೀಯ ಉತ್ಪನ್ನದ ಅಂದಾಜುಗಳ ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಪರಿಷ್ಕರಿಸಿರುವುದು. 2011-12ರ ನಂತರದ ದಶಕದಲ್ಲಿ, ಭಾರತದ ಆರ್ಥಿಕತೆಯು ಆಮೂಲಾಗ್ರವಾಗಿ ಬದಲಾಗಿದೆ; ಹೊಸ ಕೈಗಾರಿಕೆಗಳು (ಉದಾಹರಣೆಗೆ ನವೀಕರಿಸಬಹುದಾದ ಇಂಧನ, ಡಿಜಿಟಲ್ ಸೇವೆಗಳು) ಉದಯಿಸಿವೆ ಹಾಗೂ ಜನರ ಬಳಕೆ ಮತ್ತು ಹೂಡಿಕೆಯ ಮಾದರಿಗಳಲ್ಲಿ ಬದಲಾವಣೆಗಳಾಗಿವೆ. ಇಂತಹ ರಚನಾತ್ಮಕ ಬದಲಾವಣೆಗಳು ಮೂಲ ವರ್ಷದ ಬದಲಾವಣೆಯನ್ನು ಅನಿವಾರ್ಯವಾಗಿಸುತ್ತವೆ. ಇದರಿಂದಾಗಿ ಜಿಡಿಪಿಯಂತಹ ಮಾನದಂಡಗಳು ಬೆಳೆಯುತ್ತಿರುವ ವಲಯಗಳ ನೈಜ ಕೊಡುಗೆಯನ್ನು ಹಾಗೂ ತಂತ್ರಜ್ಞಾನ ಮತ್ತು ಉತ್ಪಾದಕತೆಯಲ್ಲಿನ ಬದಲಾವಣೆಗಳನ್ನು ಸರಿಯಾಗಿ ಸೆರೆಹಿಡಿಯಲು ಸಾಧ್ಯವಾಗುತ್ತದೆ.

ಕಳೆದ ಹಲವು ವರ್ಷಗಳಲ್ಲಿ ವ್ಯಾಪಕವಾದ ನಗದುರಹಿತ ವಹಿವಾಟು ಮತ್ತು ನಗದುರಹಿತ ವ್ಯವಸ್ಥೆಯು ಹೊಸ ದತ್ತಾಂಶ ಮೂಲಗಳನ್ನು ತೆರೆದಿಟ್ಟಿದೆ. ಈ ದತ್ತಾಂಶಗಳನ್ನು ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳುವುದರಿಂದ ನಿಖರತೆ ಮತ್ತು ವಿವರಗಳು ಸುಧಾರಿಸುತ್ತವೆ. ಉದಾಹರಣೆಗೆ, ಇ-ವಾಹನ್ (ವಾಹನ ನೋಂದಣಿ), ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ, ಮತ್ತು ಜಿಎಸ್‌ಟಿ ವ್ಯವಸ್ಥೆಯಂತಹ ನೈಜ-ಸಮಯದ ಆಡಳಿತಾತ್ಮಕ ದತ್ತಸಂಚಯಗಳು ಈಗ ಆರ್ಥಿಕತೆಯ ಸೂಕ್ಷ್ಮ ವಿವರಗಳನ್ನು ಒದಗಿಸುತ್ತಿವೆ.

2022-23 ಅನ್ನು ಆಯ್ಕೆ ಮಾಡಲು ಕಾರಣಗಳು

2019 ರಿಂದ 2021ರ ನಡುವಿನ ಏರುಪೇರುಗಳ ನಂತರ, 2022-23 ಅತ್ಯಂತ ಇತ್ತೀಚಿನ "ಸಾಮಾನ್ಯ" ವರ್ಷವಾಗಿರುವುದರಿಂದ ಇದನ್ನು ಹೊಸ ಮೂಲ ವರ್ಷವಾಗಿ ಆಯ್ಕೆ ಮಾಡಲಾಗಿದೆ. 2019-20 ಮತ್ತು 2020-21ರ ವರ್ಷಗಳು ಕೋವಿಡ್-19 ಸಾಂಕ್ರಾಮಿಕದಿಂದ ಗಣನೀಯವಾಗಿ ಬಾಧಿತವಾಗಿದ್ದವು, ಇದು ತಾತ್ಕಾಲಿಕವಾಗಿ ಜನರ ಬಳಕೆಯ ಮಾದರಿ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಬದಲಾಯಿಸಿತ್ತು.

ಜಿಡಿಪಿಯನ್ನು ವೆಚ್ಚ ಮತ್ತು ಉತ್ಪಾದನೆ/ಆದಾಯದ ವಿಧಾನಗಳನ್ನು ಬಳಸಿಯೇ ಸಂಕಲಿಸುವುದನ್ನು ಮುಂದುವರಿಸಲಾಗುವುದು. ಒಟ್ಟಾರೆ ಚೌಕಟ್ಟು ಬದಲಾಗದೆ ಉಳಿದಿದ್ದರೂ, ಉತ್ಪಾದನೆ/ಆದಾಯ ಮತ್ತು ವೆಚ್ಚದ ವಿಧಾನಗಳ ಅಡಿಯಲ್ಲಿ ಆರ್ಥಿಕ ಸಮುಚ್ಚಯಗಳ ಸಂಕಲನದಲ್ಲಿ ನಾಮಮಾತ್ರ ಮತ್ತು ನೈಜ ದೃಷ್ಟಿಕೋನದಿಂದ ಕೆಲವು ಪದ್ಧತಿಗಳ ಸುಧಾರಣೆಗಳನ್ನು ಪರಿಚಯಿಸಲಾಗುತ್ತಿದೆ.

ಗ್ರಾಹಕ ಬೆಲೆ ಸೂಚ್ಯಂಕ ಮೂಲ ವರ್ಷದ ಪರಿಷ್ಕರಣೆ

ಗ್ರಾಹಕ ಬೆಲೆ ಸೂಚ್ಯಂಕವು ವಿವಿಧ ವರ್ಗದ ಜನರ ಬಳಕೆಯ ಮಾದರಿಗಳನ್ನು ಪ್ರತಿಬಿಂಬಿಸುವ ಹಣದುಬ್ಬರದ ಸಮಗ್ರ ಮತ್ತು ಸಮಯೋಚಿತ ಅಳತೆಯನ್ನು ಒದಗಿಸುತ್ತದೆ. ಸಿಪಿಐ ಸರಣಿಯನ್ನು ಕೂಡ 2024 ಹೊಸ ಮೂಲ ವರ್ಷದೊಂದಿಗೆ ಪರಿಷ್ಕರಿಸಲಾಗುವುದು. ಈ ನವೀಕರಣವು 'ಕುಟುಂಬ ಬಳಕೆಯ ವೆಚ್ಚ ಸಮೀಕ್ಷೆ' 2023-24 ದತ್ತಾಂಶವನ್ನು ಬಳಸಿಕೊಂಡು ವಸ್ತುಗಳ ಪಟ್ಟಿ ಮತ್ತು ವೆಚ್ಚದ ತೂಕವನ್ನು ಪರಿಷ್ಕರಿಸಲಿದೆ. ಇದು ಗ್ರಾಮೀಣ ಮತ್ತು ನಗರ ಭಾರತದ ಪ್ರಸ್ತುತ ಬಳಕೆಯ ಮಾದರಿಗಳನ್ನು ಪ್ರತಿಬಿಂಬಿಸುತ್ತದೆ. ಈ ಪರಿಷ್ಕರಣೆಯು ಸಿಪಿಐ ಅಂದಾಜುಗಳ ನಿಖರತೆ ಮತ್ತು ಪ್ರಸ್ತುತತೆಯನ್ನು ಸುಧಾರಿಸಲು, ವಿಧಾನಗಳ ಪಾರದರ್ಶಕತೆಯನ್ನು ಬಲಪಡಿಸಲು ಮತ್ತು ಉತ್ತಮ ಆರ್ಥಿಕ ನೀತಿ ನಿರೂಪಣೆಗೆ ಬೆಂಬಲ ನೀಡಲು ಉದ್ದೇಶಿಸಲಾಗಿದೆ.

ಮೂಲ ವರ್ಷದ ಪರಿಷ್ಕರಣಾ ಪ್ರಕ್ರಿಯೆ

ಗ್ರಾಹಕ ಬೆಲೆ ಸೂಚ್ಯಂಕದ ಮೂಲ ವರ್ಷದ ಪರಿಷ್ಕರಣೆಯು 2023ಆರಂಭದಲ್ಲಿ ಆರ್‌ಬಿಐ, ಪ್ರಮುಖ ಸಚಿವಾಲಯಗಳು, ಶಿಕ್ಷಣ ತಜ್ಞರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು.

ಈ ಪರಿಷ್ಕರಣೆಯು ವ್ಯವಸ್ಥಿತವಾದ ಬಹು-ಹಂತದ ಪ್ರಕ್ರಿಯೆಯನ್ನು ಅನುಸರಿಸಿದೆ. ಇದಕ್ಕಾಗಿ ಎಚ್‌ಸಿಇಎಸ್‌ 2023-24 ಮಾದರಿಗಳನ್ನು ಬಳಸಲಾಗಿದ್ದು, ಅದರಲ್ಲಿ ಮಾದರಿಗಳ ಪರಿಶೀಲನೆ, ಮಾರುಕಟ್ಟೆಗಳು ಮತ್ತು ವಸತಿಗಳ ಗುರುತಿಸುವಿಕೆ ಹಾಗೂ ಮೂಲ ಬೆಲೆಗಳ ಸಂಗ್ರಹಣೆಯಂತಹ ಪ್ರಕ್ರಿಯೆಗಳು ಸೇರಿವೆ.

ಕಾರ್ಯದ ಪ್ರಗತಿ ಮತ್ತು ಅನುಸರಿಸಬೇಕಾದ ವಿಧಾನಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯು ಹಲವಾರು ಸಭೆಗಳನ್ನು ನಡೆಸಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಪಾಲುದಾರರ ಅಭಿಪ್ರಾಯಗಳನ್ನು ಆಹ್ವಾನಿಸಲು ಚರ್ಚಾ ಪತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಮೂಲ ವರ್ಷದ ಪರಿಷ್ಕರಣೆ

ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಕಾಲಾನಂತರದಲ್ಲಿ ಕೈಗಾರಿಕಾ ಉತ್ಪಾದನೆಯು ಹೇಗೆ ಬದಲಾಗುತ್ತಿದೆ ಎಂಬುದನ್ನು ಅಳೆಯುವ ಒಂದು ಪ್ರಮುಖ ಸೂಚಕವಾಗಿದೆ. ಇದು ಒಂದು ನಿರ್ದಿಷ್ಟ ಮೂಲ ವರ್ಷಕ್ಕೆ ಅನುಗುಣವಾಗಿ, ಆಯ್ದ ಕೈಗಾರಿಕಾ ಉತ್ಪನ್ನಗಳ ಉತ್ಪಾದನಾ ಪ್ರಮಾಣದಲ್ಲಿ ಉಂಟಾಗುವ ಮಾಸಿಕ ಬದಲಾವಣೆಗಳನ್ನು ಪ್ರತಿಬಿಂಬಿಸುವ ಮಾಸಿಕ ಸೂಚಕವಾಗಿದೆ. ಐಐಪಿ (ಐಐಪಿ) ಅನ್ನು ಆರ್ಥಿಕ ನೀತಿ ನಿರೂಪಣೆಗೆ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಜಿಡಿಪಿಯಲ್ಲಿನ ಉತ್ಪಾದನಾ ವಲಯದ ಒಟ್ಟು ಮೌಲ್ಯವರ್ಧನೆಯನ್ನು ಅಂದಾಜು ಮಾಡಲು ಇದು ಪ್ರಮುಖ ದತ್ತಾಂಶವಾಗಿ ಕಾರ್ಯನಿರ್ವಹಿಸುತ್ತದೆ.

ತಂತ್ರಜ್ಞಾನ ಬದಲಾವಣೆಗಳು, ಹೊಸ ಉತ್ಪನ್ನಗಳು ಮತ್ತು ರಚನಾತ್ಮಕ ಸ್ಥಿತ್ಯಂತರಗಳಿಂದಾಗಿ ಕೈಗಾರಿಕೆಗಳು ವಿಕಸನಗೊಳ್ಳುತ್ತಿದ್ದಂತೆ, ಪ್ರಸ್ತುತ ಕೈಗಾರಿಕಾ ವಾಸ್ತವತೆಗಳನ್ನು ಪ್ರತಿಬಿಂಬಿಸಲು ಐಐಪಿ ಮೂಲ ವರ್ಷದ ನಿಯತಕಾಲಿಕ ಪರಿಷ್ಕರಣೆಯ ಅಗತ್ಯವಿರುತ್ತದೆ. ಇತ್ತೀಚಿನ ದತ್ತಾಂಶಗಳನ್ನು ಅಳವಡಿಸಿಕೊಳ್ಳಲು ಮತ್ತು ನಿಖರತೆಯನ್ನು ಸುಧಾರಿಸಲು ಸರ್ಕಾರವು ಪ್ರಸ್ತುತ ಐಐಪಿ ಮೂಲ ವರ್ಷವನ್ನು 2022-23ಕ್ಕೆ ಪರಿಷ್ಕರಿಸುವ ಪ್ರಕ್ರಿಯೆಯಲ್ಲಿದೆ. ಈ ಪರಿಷ್ಕರಣೆಯು ವಲಯಗಳ ವ್ಯಾಪ್ತಿಯನ್ನು ನವೀಕರಿಸುವ ಮೂಲಕ, ವಸ್ತುಗಳ ತೂಕವನ್ನು ಪರಿಷ್ಕರಿಸುವ ಮೂಲಕ, ಕಾರ್ಖಾನೆಗಳ ಪ್ರಾತಿನಿಧ್ಯವನ್ನು ಸುಧಾರಿಸುವ ಮೂಲಕ ಮತ್ತು ಸುಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಐಐಪಿ ಅನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಸ್ಥೂಲ ಆರ್ಥಿಕ ಸೂಚಕಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಈ ನವೀಕರಣವನ್ನು ರಾಷ್ಟ್ರೀಯ ಲೆಕ್ಕಪತ್ರಗಳ ಮೂಲ ವರ್ಷದ ಪರಿಷ್ಕರಣೆಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ.

ಹೊಸ ಸರಣಿಗಳ ಕಾಲಮಿತಿ

  • ಸಾಂಖ್ಯಾತಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಎಂಒಎಸ್‌ಪಿಐ) ಪರಿಷ್ಕೃತ ಮೂಲ ವರ್ಷದ ಸರಣಿಗಳನ್ನು ಬಿಡುಗಡೆ ಮಾಡಲು ಸ್ಪಷ್ಟವಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

  • ಜಿಡಿಪಿ ಹೊಸ ಸರಣಿಯು (ಮೂಲ ವರ್ಷ 2022-23) 27 ಫೆಬ್ರವರಿ 2026 ರಂದು ಬಿಡುಗಡೆಯಾಗಲಿದೆ.

  • ಸಿಪಿಐ ಹೊಸ ಸರಣಿಯು (ಮೂಲ ವರ್ಷ 2024) 12 ಫೆಬ್ರವರಿ 2026 ರಂದು ಬಿಡುಗಡೆಯಾಗಲಿದೆ.

  • ಐಐಪಿ ಹೊಸ ಸರಣಿಯು (ಮೂಲ ವರ್ಷ 2022-23) 28 ಮೇ 2026 ರಂದು ಬಿಡುಗಡೆಯಾಗಲು ನಿಗದಿಯಾಗಿದೆ.

ಈ ನವೀಕರಣಗಳು ಅಧಿಕೃತ ಅಂಕಿಅಂಶಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ಆರ್ಥಿಕ ನೀತಿ, ಹಣಕಾಸು ನಿರ್ವಹಣೆ ಹಾಗೂ ವ್ಯವಹಾರ ಯೋಜನೆಯಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಗಮಗೊಳಿಸಲಿವೆ.

ಅಸಂಘಟಿತ ಮತ್ತು ಸೇವಾ ವಲಯದ ಮಾಪನದಲ್ಲಿ ಸುಧಾರಣೆ

ಆರ್ಥಿಕ ಉತ್ಪಾದನೆ ಮತ್ತು ಉದ್ಯೋಗದಲ್ಲಿ ಅಸಂಘಟಿತ ಆರ್ಥಿಕತೆ ಮತ್ತು ಸೇವಾ ವಲಯದ ಗಣನೀಯ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಇವುಗಳ ಮಾಪನವನ್ನು ಬಲಪಡಿಸಲು ವಿಶೇಷ ಒತ್ತು ನೀಡುತ್ತಿದೆ. ಅಂದಾಜುಗಳ ದೃಢತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ಹೊಸ ಸಮೀಕ್ಷಾ ಚೌಕಟ್ಟುಗಳು, ಪ್ರಾಯೋಗಿಕ ಅಧ್ಯಯನಗಳು ಮತ್ತು ತಜ್ಞರ ಸಮಾಲೋಚನೆಗಳನ್ನು ಕೈಗೊಳ್ಳಲಾಗಿದೆ.

ಭಾರತದ ಸೇವಾ ವಲಯದ ದತ್ತಾಂಶಗಳ ಬಲವರ್ಧನೆ

ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ಎಎಸ್ಯುಎಸ್)

ಜಿಡಿಪಿಗೆ ಪ್ರಮುಖ ಕೊಡುಗೆ ನೀಡುವ, ಉದ್ಯೋಗದ ಪ್ರಮುಖ ಮೂಲವಾಗಿರುವ ಮತ್ತು ಸ್ಥಳೀಯ ಉದ್ಯಮಶೀಲತೆ ಹಾಗೂ ಪೂರೈಕೆ ಸರಪಳಿಗಳ ಪ್ರೇರಕ ಶಕ್ತಿಯಾಗಿರುವ ಅಸಂಘಟಿತ ಕೃಷಿಯೇತರ ವಲಯವನ್ನು ಅಳೆಯಲು ಈ ಸಮೀಕ್ಷೆಯನ್ನು ನಡೆಸಲಾಗುತ್ತದೆ.

ಸೇವಾ ವಲಯವು ಭಾರತದ ಆರ್ಥಿಕತೆಯ ಪ್ರಮುಖ ಸ್ತಂಭವಾಗಿದ್ದು, ಜಿಡಿಪಿಗೆ 50% ಕೊಡುಗೆ ನೀಡುತ್ತದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಸಂಘಟಿತ ವಿಭಾಗವನ್ನು 'ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ' (ಎಎಸ್‌ಯುಎಸ್‌ಇ) ಅಡಿಯಲ್ಲಿ ಒಳಪಡಿಸಲಾಗಿದ್ದರೂ, ಸಂಘಟಿತ ಸೇವಾ ವಲಯದ ಆರ್ಥಿಕ ಮತ್ತು ಕಾರ್ಯಾಚರಣೆಯ ಗುಣಲಕ್ಷಣಗಳು, ಉದ್ಯೋಗ ಮತ್ತು ಇತರ ಸಂಬಂಧಿತ ಅಂಶಗಳ ಬಗ್ಗೆ ಸೂಕ್ಷ್ಮ ದತ್ತಾಂಶದ ಕೊರತೆಯಿದೆ.

ದತ್ತಾಂಶದಲ್ಲಿನ ಈ ಕೊರತೆಗೆ ಮುಖ್ಯ ಕಾರಣವೆಂದರೆ ಸಂಘಟಿತ ಕೃಷಿಯೇತರ ಮತ್ತು ಉತ್ಪಾದನಾ ರಹಿತ ವಲಯಗಳ ವಿವಿಧ ಉಪ-ವಲಯಗಳನ್ನು ಒಳಗೊಳ್ಳುವ ನಿಯಮಿತ ರಾಷ್ಟ್ರೀಯ ಮಟ್ಟದ ಸಮೀಕ್ಷೆಯ ಅನುಪಸ್ಥಿತಿ. ಈ ಕೊರತೆಯನ್ನು ನೀಗಿಸಲು, ರಾಷ್ಟ್ರೀಯ ಸಾಂಖ್ಯಾತಿಕ ಕಚೇರಿಯು 'ಸೇವಾ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ' ಗಾಗಿ ಪ್ರಾಯೋಗಿಕ ಅಧ್ಯಯನವನ್ನು ಕೈಗೊಂಡಿದೆ. ಉದ್ಯಮಗಳ ಪ್ರತಿಕ್ರಿಯೆ, ಸಮೀಕ್ಷಾ ಸೂಚನೆಗಳ ಸ್ಪಷ್ಟತೆ, ಪ್ರಶ್ನಾವಳಿಯ ಪರಿಣಾಮಕಾರಿತ್ವ ಮತ್ತು ಲೆಕ್ಕಪತ್ರ ಪುಸ್ತಕಗಳು, ಲಾಭ ಮತ್ತು ನಷ್ಟದ ಹೇಳಿಕೆಗಳು ಹಾಗೂ ಕಾರ್ಮಿಕ ರಿಜಿಸ್ಟರ್‌ಗಳಂತಹ ಅಧಿಕೃತ ದಾಖಲೆಗಳಿಂದ ಪ್ರಮುಖ ದತ್ತಾಂಶಗಳ ಲಭ್ಯತೆಯನ್ನು ನಿರ್ಣಯಿಸುವುದು ಈ ಪ್ರಾಯೋಗಿಕ ಅಧ್ಯಯನದ ಉದ್ದೇಶವಾಗಿತ್ತು.

ಅನುಭವ ಮತ್ತು ಚರ್ಚೆಗಳ ಆಧಾರದ ಮೇಲೆ, 'ಉದ್ಯಮ ಸಮೀಕ್ಷೆಗಳ ತಾಂತ್ರಿಕ ಸಲಹಾ ತಂಡ'ದ ಒಟ್ಟಾರೆ ಮಾರ್ಗದರ್ಶನದಲ್ಲಿ ಎಎಸ್‌ಎಸ್‌ಇ ಪ್ರಶ್ನಾವಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಮೀಕ್ಷೆಯು ಒಟ್ಟು ಮೌಲ್ಯವರ್ಧನೆ, ಸ್ಥಿರ ಬಂಡವಾಳ, ಬಂಡವಾಳ ರಚನೆ, ಉದ್ಯೋಗಿಗಳ ಸಂಖ್ಯೆ ಮತ್ತು ಸೇವಾ ವಲಯಕ್ಕೆ ಸೇರಿದ ಘಟಕಗಳಿಗೆ ಸಂಬಂಧಿಸಿದ ಇತರ ಪ್ರಮುಖ ವೈಶಿಷ್ಟ್ಯಗಳನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ.

ಅಸಂಘಟಿತ ವಲಯದ ಉದ್ಯಮಗಳ ತ್ರೈಮಾಸಿಕ ಬುಲೆಟಿನ್ಗಳ ಪರಿಚಯ

ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯನ್ನು (ಎಎಸ್ಯುಎಸ್) ಹೆಚ್ಚು ಆಗಾಗ್ಗೆ ಅಂದಾಜುಗಳನ್ನು ಬಿಡುಗಡೆ ಮಾಡುವ ಮೂಲಕ ನವೀಕರಿಸಲಾಗಿದೆ. 2025 ರಿಂದ, ಅಸಂಘಟಿತ ವಲಯದ ಉದ್ಯಮಗಳ ತ್ರೈಮಾಸಿಕ ಬುಲೆಟಿನ್ಗಳನ್ನು ಪರಿಚಯಿಸಲಾಗಿದ್ದು, ವಾರ್ಷಿಕ ವರದಿಗಾಗಿ ಕಾಯುವ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ಮಧ್ಯಂತರ ಫಲಿತಾಂಶಗಳನ್ನು ಒದಗಿಸಲಾಗುತ್ತಿದೆ. ಈ ತ್ರೈಮಾಸಿಕ ದತ್ತಾಂಶವು ಈ ವಲಯದಲ್ಲಿನ ಅಲ್ಪಾವಧಿಯ ಚಲನವಲನಗಳನ್ನು ಸೆರೆಹಿಡಿಯುವ ಉದ್ದೇಶವನ್ನು ಹೊಂದಿದೆ.

  • ಎಎಸ್ಯುಎಸ್ ಹಣಕಾಸು ಮತ್ತು ಹಣಕಾಸೇತರ ಸೂಚಕಗಳ ವ್ಯಾಪಕ ಗುಂಪನ್ನು ಒಳಗೊಂಡ ವಿವರವಾದ ವಾರ್ಷಿಕ ಅಂದಾಜುಗಳನ್ನು ಪ್ರಕಟಿಸುವುದನ್ನು ಮುಂದುವರಿಸಿದರೆ, ಕ್ಯೂಬಿಯುಎಸ್‌ಇ ಅದೇ ಚೌಕಟ್ಟನ್ನು ಬಳಸಿಕೊಂಡು ಅಸಂಘಟಿತ ಕೃಷಿಯೇತರ ಉದ್ಯಮಗಳ ಗಾತ್ರ, ಸಂಯೋಜನೆ ಮತ್ತು ಉದ್ಯೋಗದ ಪ್ರೊಫೈಲ್ ಕುರಿತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸುತ್ತದೆ.

  • ಇದರ ಪರಿಚಯವು ಭಾರತದ ಅತ್ಯಂತ ಕ್ರಿಯಾತ್ಮಕ ಆರ್ಥಿಕ ವಿಭಾಗಗಳಲ್ಲಿ ಒಂದಾದ ಅಸಂಘಟಿತ ವಲಯದ ಕುರಿತು ನೀತಿ ನಿರೂಪಕರು, ಸಂಶೋಧಕರು ಮತ್ತು ಪಾಲುದಾರರಿಗೆ ಸಮಯೋಚಿತ ಮತ್ತು ಕಾರ್ಯಗತಗೊಳಿಸಬಹುದಾದ ದತ್ತಾಂಶವನ್ನು ತಲುಪಿಸುವ ರಾಷ್ಟ್ರೀಯ ಸಾಂಖ್ಯಾತಿಕ ಕಚೇರಿಯ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

ಕಾರ್ಮಿಕ ಮಾರುಕಟ್ಟೆ ಅಂಕಿಅಂಶಗಳ ಸುಧಾರಣೆ (ಪಿಎಲ್‌ಎಫ್‌ಎಸ್)

ಹೆಚ್ಚಿನ ನಿಯತಕಾಲಿಕ ಅವಧಿಗಳಲ್ಲಿ ಕಾರ್ಮಿಕ ಬಲದ ದತ್ತಾಂಶಗಳ ಲಭ್ಯತೆಯ ಮಹತ್ವವನ್ನು ಪರಿಗಣಿಸಿ, ರಾಷ್ಟ್ರೀಯ ಸಾಂಖ್ಯಾತಿಕ ಕಚೇರಿಯು ಏಪ್ರಿಲ್ 2017 ರಲ್ಲಿ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿಎಲ್‌ಎಫ್‌ಎಸ್) ಅಂದರೆ 'ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆ'ಯನ್ನು ಪ್ರಾರಂಭಿಸಿತು.

ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿಎಲ್‌ಎಫ್‌ಎಸ್) ಎಂಬುದು ದೇಶದ ಜನಸಂಖ್ಯೆಯ ಕಾರ್ಮಿಕ ಬಲದ ಭಾಗವಹಿಸುವಿಕೆ ಹಾಗೂ ಉದ್ಯೋಗ ಮತ್ತು ನಿರುದ್ಯೋಗದ ಪರಿಸ್ಥಿತಿಗಳ ಕುರಿತಾದ ಅಧಿಕೃತ ದತ್ತಾಂಶದ ಪ್ರಾಥಮಿಕ ಮೂಲವಾಗಿದೆ. ಈ ಸಮೀಕ್ಷೆಯು ಪ್ರಮುಖ ಉದ್ಯೋಗ ಮತ್ತು ನಿರುದ್ಯೋಗ ಸೂಚಕಗಳ ಅಂದಾಜುಗಳನ್ನು ಒದಗಿಸುತ್ತದೆ (ಅಂದರೆ: ಕಾರ್ಮಿಕ ಜನಸಂಖ್ಯೆಯ ಅನುಪಾತ, ಕಾರ್ಮಿಕ ಬಲದ ಭಾಗವಹಿಸುವಿಕೆ ದರ ಮತ್ತು ನಿರುದ್ಯೋಗ ದರ). 2025ರಲ್ಲಿ ಪಿಎಲ್‌ಎಫ್‌ಎಸ್ ಗೆ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲಾಯಿತು, ಇದು ಹೆಚ್ಚಿನ ಆವರ್ತನದ ಮತ್ತು ಹೆಚ್ಚು ಸೂಕ್ಷ್ಮವಾದ ಕಾರ್ಮಿಕ ಅಂಕಿಅಂಶಗಳತ್ತ ಬದಲಾವಣೆಯನ್ನು ಗುರುತಿಸಿದೆ.

  • ಮಾಸಿಕ ಕಾರ್ಮಿಕ ಸೂಚಕಗಳ ಪರಿಚಯ: ಜನವರಿ 2025 ರಿಂದ ಜಾರಿಗೆ ಬರುವಂತೆ, ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಕಾರ್ಮಿಕ ಮಾರುಕಟ್ಟೆ ಸೂಚಕಗಳ ಮಾಸಿಕ ಅಂದಾಜುಗಳನ್ನು ಸಿದ್ಧಪಡಿಸಲು ಪಿಎಲ್‌ಎಫ್‌ಎಸ್ ವಿಧಾನವನ್ನು ಪರಿಷ್ಕರಿಸಲಾಗಿದೆ.

  • ಗ್ರಾಮೀಣ ಪ್ರದೇಶಗಳಿಗೆ ತ್ರೈಮಾಸಿಕ ಅಂದಾಜುಗಳು: ಡಿಸೆಂಬರ್ 2024 ರವರೆಗೆ, ಪಿಎಲ್‌ಎಫ್‌ಎಸ್ ತ್ರೈಮಾಸಿಕ ಬುಲೆಟಿನ್‌ಗಳು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಕಾರ್ಮಿಕ ಮಾರುಕಟ್ಟೆ ಸೂಚಕಗಳನ್ನು ಪ್ರಸ್ತುತಪಡಿಸುತ್ತಿದ್ದವು. ಪಿಎಲ್‌ಎಫ್‌ಎಸ್ ಸಮೀಕ್ಷಾ ವಿಧಾನದ ಪರಿಷ್ಕರಣೆಯೊಂದಿಗೆ, ಇದರ ವ್ಯಾಪ್ತಿಯನ್ನು ಈಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಇದರ ಜೊತೆಗೆ, ಆಯ್ದ ರಾಜ್ಯಗಳಿಗೆ ರಾಜ್ಯ ಮಟ್ಟದ ಅಂದಾಜುಗಳನ್ನು ಸಹ ಒದಗಿಸಲಾಗುತ್ತಿದೆ.

ಈ ಬದಲಾವಣೆಗಳು ಉದ್ಯೋಗ ಮತ್ತು ನಿರುದ್ಯೋಗದ ಪ್ರವೃತ್ತಿಗಳನ್ನು ನೈಜ ಸಮಯದಲ್ಲಿ ಹಾಗೂ ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಇದು ಸಮಗ್ರ ಅಭಿವೃದ್ಧಿಗಾಗಿ ಸಾಕ್ಷ್ಯಾಧಾರಿತ ಕ್ರಮಗಳನ್ನು ಕೈಗೊಳ್ಳಲು ಬೆಂಬಲ ನೀಡುತ್ತದೆ.

ದತ್ತಾಂಶ ಸುಧಾರಣೆಗಳು: ಸೂಕ್ಷ್ಮತೆ ಮತ್ತು ಡಿಜಿಟಲೀಕರಣ

ನಿರ್ದಿಷ್ಟ ಸಮೀಕ್ಷೆಗಳು ಅಥವಾ ಸೂಚ್ಯಂಕಗಳ ಆಚೆಗೆ, ಸಾಂಖ್ಯಾತಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಎಂಒಎಸ್‌ಪಿಐ) 2025ರಲ್ಲಿ ಒಟ್ಟಾರೆ ಸಾಂಖ್ಯಾತಿಕ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಹಲವು ಸಮಗ್ರ ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಉಪಕ್ರಮಗಳು ಸ್ಥಳೀಯ ಮಟ್ಟದಲ್ಲಿ ಹೆಚ್ಚು ವಿವರವಾದ ದತ್ತಾಂಶದ ಅಗತ್ಯವನ್ನು ಪೂರೈಸುತ್ತವೆ ಮತ್ತು ಸಮೀಕ್ಷೆಯ ದಕ್ಷತೆ, ನಿಖರತೆ ಹಾಗೂ ಚುರುಕುತನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ.

ಜಿಲ್ಲೆಯನ್ನು ಸಾಂಖ್ಯಾತಿಕ ಘಟಕವಾಗಿ ಪರಿಗಣಿಸುವುದು

ಜನವರಿ 2025 ರಿಂದ, ರಾಷ್ಟ್ರೀಯ ಮಾದರಿ ಸಮೀಕ್ಷೆಗಳ ಮಾದರಿ ವಿನ್ಯಾಸವನ್ನು ಬದಲಾಯಿಸಲಾಗಿದೆ. ಇದರಲ್ಲಿ ಜಿಲ್ಲೆಯನ್ನು ಮೂಲ ಸ್ತರವನ್ನಾಗಿ ಪರಿಗಣಿಸಿ, ಜಿಲ್ಲಾ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಹೆಚ್ಚು ಸೂಕ್ಷ್ಮ ಮಟ್ಟದಲ್ಲಿ ದತ್ತಾಂಶ ಆಧಾರಿತ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಈ ಬದಲಾವಣೆಯು ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಸಾಕ್ಷ್ಯಾಧಾರಿತ ಯೋಜನೆ ಹಾಗೂ ನೀತಿ ನಿರೂಪಣೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ರಾಷ್ಟ್ರೀಯ ಮಾದರಿ ಸಮೀಕ್ಷೆಯು ಬೃಹತ್ ಪ್ರಮಾಣದ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಡೆಸುತ್ತದೆ. ಇವು ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಲಭ್ಯವಿರುವ ಪ್ರಮುಖ ಸೂಚಕಗಳನ್ನು ಸಿದ್ಧಪಡಿಸುತ್ತವೆ.

  • ಪ್ರತಿ ರಾಜ್ಯದೊಳಗೆ ಜಿಲ್ಲೆಯನ್ನು ಮೂಲ ಸ್ತರವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಎಎಸ್‌ಯುಎಸ್‌ಇ 2025 ರ ವಾರ್ಷಿಕ ಫಲಿತಾಂಶಗಳ ಜೊತೆಗೆ, ತ್ರೈಮಾಸಿಕ ಅಂದಾಜುಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.

  • ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದೊಳಗೆ ಪಿಎಲ್‌ಎಫ್‌ಎಸ್‌ ಮಾದರಿ ವಿನ್ಯಾಸದಲ್ಲಿ, ಗ್ರಾಮೀಣ ಮತ್ತು ನಗರ ವಲಯಗಳಿಗೆ ಪ್ರತ್ಯೇಕವಾಗಿ ಜಿಲ್ಲೆಯನ್ನು ಪ್ರಾಥಮಿಕ ಭೌಗೋಳಿಕ ಘಟಕವನ್ನಾಗಿ ಮಾಡಲಾಗಿದೆ.

  • ಪಿಎಲ್‌ಎಫ್‌ಎಸ್‌, ಎಎಸ್‌ಯುಎಸ್‌ಇ, ದೇಶೀಯ ಪ್ರವಾಸೋದ್ಯಮ ವೆಚ್ಚ ಸಮೀಕ್ಷೆ ಮತ್ತು ಆರೋಗ್ಯ ಸಮೀಕ್ಷೆಗಳಲ್ಲಿ ರಾಜ್ಯಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಅಲ್ಲದೆ, 2026-27 ಅವಧಿಯ ಪ್ರಮುಖ ಎನ್‌ಎಸ್‌ಒ ಸಮೀಕ್ಷೆಗಳಲ್ಲಿ ಭಾಗವಹಿಸಲು 27 ರಾಜ್ಯಗಳು ಆಸಕ್ತಿ ತೋರಿಸಿವೆ.

ಡಿಜಿಟಲ್ ದತ್ತಾಂಶ ಸಂಗ್ರಹಣೆ ಮತ್ತು ನೈಜ-ಸಮಯದ ಮೌಲ್ಯೀಕರಣ

ಎನ್‌ಎಸ್‌ಎಸ್‌ ಸಮೀಕ್ಷೆಗಳನ್ನು ಈಗ ಇ-ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ 'ಕಂಪ್ಯೂಟರ್ ಅಸಿಸ್ಟೆಡ್ ಪರ್ಸನಲ್ ಇಂಟರ್ವ್ಯೂಯಿಂಗ್' ಬಳಸಿ ನಡೆಸಲಾಗುತ್ತಿದೆ. ಇದರಲ್ಲಿ ಮೊದಲೇ ಅಳವಡಿಸಲಾದ ಮೌಲ್ಯೀಕರಣ ತಪಾಸಣೆಗಳು, ನೈಜ-ಸಮಯದ ದತ್ತಾಂಶ ಸಲ್ಲಿಕೆ, ಬಹುಭಾಷಾ ಇಂಟರ್‌ಫೇಸ್‌ಗಳು ಮತ್ತು ಎಐ-ಚಾಲಿತ ಚಾಟ್‌ಬಾಟ್ ಬೆಂಬಲದಂತಹ ಸೌಲಭ್ಯಗಳಿವೆ. ಈ ವೈಶಿಷ್ಟ್ಯಗಳು ದತ್ತಾಂಶದ ಗುಣಮಟ್ಟ ಮತ್ತು ಕ್ಷೇತ್ರಮಟ್ಟದ ದಕ್ಷತೆಯನ್ನು ಗಣನೀಯವಾಗಿ ಸುಧಾರಿಸಿವೆ.

  • ಬಲವಾದ ಸಮೀಕ್ಷಾ ವಿನ್ಯಾಸ: ಮಾಸಿಕ, ತ್ರೈಮಾಸಿಕ ಮತ್ತು ಜಿಲ್ಲಾ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲು ಮಾದರಿ ವಿನ್ಯಾಸಗಳನ್ನು ಬಲಪಡಿಸಲಾಗಿದೆ. ಇದು ಸ್ಥಳೀಯ ಮತ್ತು ರಾಷ್ಟ್ರೀಯ ಯೋಜನೆಗಳಿಗಾಗಿ ಎನ್‌ಎಸ್‌ಎಸ್‌ ದತ್ತಾಂಶದ ಉಪಯುಕ್ತತೆಯನ್ನು ಹೆಚ್ಚಿಸಿದೆ.

      • ವೇಗವಾಗಿ ದತ್ತಾಂಶ ಬಿಡುಗಡೆ: ಈ ಉಪಕ್ರಮಗಳು ವರದಿಗಳ ಪ್ರಕಟಣೆಯ ವಿಳಂಬವನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಸಮೀಕ್ಷೆ ಪೂರ್ಣಗೊಂಡ ನಂತರದ ಸಮಯದ ಮಿತಿ ಹೀಗಿದೆ:

    • ವಾರ್ಷಿಕ ಸಮೀಕ್ಷೆಯ ಫಲಿತಾಂಶಗಳು: ಈಗ 90-120 ದಿನಗಳೊಳಗೆ ಬಿಡುಗಡೆಯಾಗುತ್ತವೆ.

    • ತ್ರೈಮಾಸಿಕ ಫಲಿತಾಂಶಗಳು: 45-60 ದಿನಗಳೊಳಗೆ ಬಿಡುಗಡೆಯಾಗುತ್ತವೆ.

    • ಮಾಸಿಕ ಫಲಿತಾಂಶಗಳು: ಸಮೀಕ್ಷೆ ಮುಗಿದ 15-30 ದಿನಗಳೊಳಗೆ ಬಿಡುಗಡೆಯಾಗುತ್ತವೆ.

ಸಮಗ್ರ ಮಾಡ್ಯುಲರ್ ಸಮೀಕ್ಷೆಗಳು (ಸಿಎಂಎಸ್‌)

ಬದಲಾಗುತ್ತಿರುವ ದತ್ತಾಂಶದ ಅವಶ್ಯಕತೆಗಳು ಮತ್ತು ತಕ್ಷಣದ ನೀತಿ ಅಗತ್ಯಗಳನ್ನು ಪೂರೈಸಲು, ಎಂಒಎಸ್‌ಪಿಐ ನಿರ್ದಿಷ್ಟ ವಿಷಯಗಳ ಮೇಲೆ ಕಡಿಮೆ ಅವಧಿಯಲ್ಲಿ ಕೇಂದ್ರೀಕೃತ ಮಾಹಿತಿ ಸಂಗ್ರಹಿಸಲು 'ಸಮಗ್ರ ಮಾಡ್ಯುಲರ್ ಸಮೀಕ್ಷೆಗಳನ್ನು' (ಸಿಎಂಎಸ್‌) ಕೈಗೊಂಡಿದೆ.

  • ಟೆಲಿಕಾಂ ಕುರಿತ ಸಿಎಂಎಸ್‌: ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಕೌಶಲ್ಯ ಸಂಬಂಧಿತ ಸೂಚಕಗಳ ರಾಷ್ಟ್ರಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲು ಇದನ್ನು ಜನವರಿ-ಮಾರ್ಚ್ 2025 ರ ಅವಧಿಯಲ್ಲಿ ನಡೆಸಲಾಯಿತು.

  • ಶಿಕ್ಷಣದ ಕುರಿತ ಸಿಎಂಎಸ್‌: ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಖಾಸಗಿ ಕೋಚಿಂಗ್‌ಗಾಗಿ ವ್ಯಯಿಸುವ ಸರಾಸರಿ ವೆಚ್ಚದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಂದಾಜುಗಳನ್ನು ಪಡೆಯಲು ಏಪ್ರಿಲ್-ಜೂನ್ 2025 ರ ಅವಧಿಯಲ್ಲಿ ಇದನ್ನು ನಡೆಸಲಾಯಿತು.

  • ಖಾಸಗಿ ವಲಯದ ಬಂಡವಾಳ ವೆಚ್ಚದ ಮುನ್ನೋಟ ಸಮೀಕ್ಷೆ: ಖಾಸಗಿ ವಲಯದ ಉದ್ಯಮಗಳ ಹೂಡಿಕೆಯ ಉದ್ದೇಶಗಳನ್ನು ನಿರ್ಣಯಿಸಲು ಇದನ್ನು ನವೆಂಬರ್ 2024 ಮತ್ತು ಜನವರಿ 2025 ರ ನಡುವೆ ನಡೆಸಲಾಯಿತು. ಕಾರ್ಪೊರೇಟ್ ವಲಯವನ್ನು ವೆಬ್-ಆಧಾರಿತ ವೇದಿಕೆ ಮತ್ತು ಚಾಟ್‌ಬಾಟ್ ಬೆಂಬಲದಂತಹ ಡಿಜಿಟಲ್ ಪರಿಕರಗಳ ಮೂಲಕ ನೇರವಾಗಿ ತೊಡಗಿಸಿಕೊಂಡು, ಯೋಜಿತ ಬಂಡವಾಳ ವೆಚ್ಚದ ಮಾಹಿತಿಯನ್ನು ಸಂಗ್ರಹಿಸಿದ ಎಂಒಎಸ್‌ಪಿಐ ನ ಮೊದಲ ಸಮೀಕ್ಷೆ ಇದಾಗಿದೆ.

ದತ್ತಾಂಶ ಪ್ರಸರಣ ವೇದಿಕೆಗಳು

ದತ್ತಾಂಶ ಸಂಗ್ರಹಣೆಯಲ್ಲಿನ ಸುಧಾರಣೆಗಳಿಗೆ ಪೂರಕವಾಗಿ, ಅಧಿಕೃತ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ದತ್ತಾಂಶ ಪ್ರಸರಣ ವ್ಯವಸ್ಥೆಯನ್ನು ಆಧುನೀಕರಿಸಲಾಗಿದೆ.

  • GoIStats ಮೊಬೈಲ್ ಆ್ಯಪ್: ಜೂನ್ 2025 ರಲ್ಲಿ ಪ್ರಾರಂಭಿಸಲಾದ ಈ ಆ್ಯಪ್, ಪಾಲುದಾರರಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಅಧಿಕೃತ ಅಂಕಿಅಂಶಗಳನ್ನು ಪಡೆಯಲು ಅವಕಾಶ ನೀಡುವ ಸಮಗ್ರ ದತ್ತಾಂಶ ವ್ಯವಸ್ಥೆಯ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.

    • ಇದು ಜಿಡಿಪಿ, ಹಣದುಬ್ಬರ ಮತ್ತು ಉದ್ಯೋಗದಂತಹ ಪ್ರಮುಖ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಕ್ರಿಯಾತ್ಮಕ ಚಿತ್ರಣಗಳ ಮೂಲಕ ಪ್ರಸ್ತುತಪಡಿಸುತ್ತದೆ.

  • ಇ-ಸಂಖ್ಯಿಕಿ ಪೋರ್ಟಲ್: ಜೂನ್ 2024 ರಲ್ಲಿ ಪ್ರಾರಂಭಿಸಲಾದ ಈ ಪೋರ್ಟಲ್ ಒಂಬತ್ತು ವಿಷಯಾಧಾರಿತ ಕ್ಷೇತ್ರಗಳಲ್ಲಿ 136 ದಶಲಕ್ಷಕ್ಕೂ ಹೆಚ್ಚು ದಾಖಲೆಗಳು, 772 ಸೂಚಕಗಳು ಮತ್ತು 18 ಸಾಂಖ್ಯಾತಿಕ ಉತ್ಪನ್ನಗಳನ್ನು ಒಳಗೊಂಡಿರುವ ಸಮಗ್ರ ವೇದಿಕೆಯಾಗಿದೆ.

    • ಪ್ರಸ್ತುತ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಮೂರು ಸಚಿವಾಲಯಗಳ ದತ್ತಾಂಶ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆ.

    • ಇದು ಎಪಿಐ ಮೂಲಕ ದತ್ತಾಂಶವನ್ನು ಒದಗಿಸುತ್ತದೆ, ಇದು ರಾಷ್ಟ್ರೀಯ ದತ್ತಾಂಶ ಮತ್ತು ವಿಶ್ಲೇಷಣಾ ವೇದಿಕೆಯಂತಹ ಇತರ ವೇದಿಕೆಗಳೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳಲು ಅನುವು ಮಾಡಿಕೊಡುತ್ತದೆ.

  • ಮೈಕ್ರೋಡೇಟಾ ಪ್ರವೇಶ ಮತ್ತು ಇತರ ಪರಿಕರಗಳು: ರಾಷ್ಟ್ರೀಯ ಸಮೀಕ್ಷೆಗಳು ಮತ್ತು ಆರ್ಥಿಕ ಗಣತಿಗಳ ಘಟಕ-ಮಟ್ಟದ ದತ್ತಾಂಶಕ್ಕಾಗಿ ಕೇಂದ್ರ ಭಂಡಾರವಾಗಿ ಕಾರ್ಯನಿರ್ವಹಿಸಲು 2025 ರಲ್ಲಿ ನವೀಕರಿಸಿದ ಮೈಕ್ರೋಡೇಟಾ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು.

    • ವಿಶ್ವಬ್ಯಾಂಕ್ ತಂತ್ರಜ್ಞಾನ ತಂಡದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಪೋರ್ಟಲ್ ಆಧುನಿಕ ಭದ್ರತಾ ಮಾನದಂಡಗಳನ್ನು ಹೊಂದಿದ್ದು, ಬಳಕೆದಾರ ಸ್ನೇಹಿ ವಿನ್ಯಾಸವನ್ನು ಹೊಂದಿದೆ.

    • ಜನವರಿ 2025 ರಿಂದ ಈ ಮೈಕ್ರೋಡೇಟಾ ಪೋರ್ಟಲ್ 88 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಿಸಿದೆ.

  • ರಾಷ್ಟ್ರೀಯ ಸಾಂಖ್ಯಾತಿಕ ಆಯೋಗ ಮತ್ತು ರಾಷ್ಟ್ರೀಯ ಸಾಂಖ್ಯಾತಿಕ ವ್ಯವಸ್ಥೆಗಳ ತರಬೇತಿ ಅಕಾಡೆಮಿಗಳ ಹೊಸ ವೆಬ್‌ಸೈಟ್‌ಗಳು, ದತ್ತಾಂಶ ನಾವೀನ್ಯತೆ ಪ್ರಯೋಗಾಲಯ ಪೋರ್ಟಲ್ ಇಂಟರ್ನ್‌ಶಿಪ್ ಪೋರ್ಟಲ್ ಮತ್ತು ಮೆಟಾಡೇಟಾ ಪೋರ್ಟಲ್‌ಗಳನ್ನು ಸಹ ಪ್ರಾರಂಭಿಸಲಾಗಿದೆ.

ಉಪಸಂಹಾರ

ಇತ್ತೀಚಿನ ಸಾಂಖ್ಯಾತಿಕ ಸುಧಾರಣೆಗಳು ಭಾರತದ ಸಾಂಖ್ಯಾತಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಸ್ತುತತೆ, ಸ್ಪಂದನಶೀಲತೆ ಮತ್ತು ವಿಶ್ವಾಸಾರ್ಹತೆಯತ್ತ ಒಂದು ನಿರ್ಣಾಯಕ ಬದಲಾವಣೆಯನ್ನು ಗುರುತಿಸಿವೆ. ಜಿಡಿಪಿ, ಸಿಪಿಐ (ಮತ್ತು ಐಐಪಿ ಗಳ ಮೂಲ ವರ್ಷಗಳನ್ನು ನವೀಕರಿಸುವ ಮೂಲಕ, ಅಸಂಘಟಿತ ಮತ್ತು ಸೇವಾ ವಲಯಗಳ ಮಾಪನವನ್ನು ಬಲಪಡಿಸುವ ಮೂಲಕ ಮತ್ತು ಕಾರ್ಮಿಕ ಅಂಕಿಅಂಶಗಳನ್ನು ಪರಿವರ್ತಿಸುವ ಮೂಲಕ, ಸರ್ಕಾರವು ಅಧಿಕೃತ ದತ್ತಾಂಶಗಳನ್ನು ಇಂದಿನ ಆರ್ಥಿಕತೆಯ ರಚನೆ ಮತ್ತು ಗತಿಗೆ ಹತ್ತಿರವಾಗಿ ಹೊಂದಿಸಿದೆ.

ಅದೇ ಸಮಯದಲ್ಲಿ, ದತ್ತಾಂಶದ ಗುಣಮಟ್ಟ, ಸಮಯೋಚಿತತೆ ಮತ್ತು ಸಾರ್ವಜನಿಕ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ಸರಣಿಗಳು ಮತ್ತು ವ್ಯವಸ್ಥೆಗಳ ಸಂಘಟಿತ ಬಿಡುಗಡೆಯು ಕೇವಲ ಕ್ರಮಬದ್ಧವಾದ ನಿಖರತೆ ಮತ್ತು ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳಿಗಷ್ಟೇ ಅಲ್ಲದೆ, ಪಾರದರ್ಶಕತೆ ಮತ್ತು ಪಾಲುದಾರರ ಒಳಗೊಳ್ಳುವಿಕೆಗೂ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಉಪಕ್ರಮಗಳು ಸಾಕ್ಷ್ಯಾಧಾರಿತ ನೀತಿ ನಿರೂಪಣೆ, ಪರಿಣಾಮಕಾರಿ ವಿಕೇಂದ್ರೀಕೃತ ಯೋಜನೆ ಮತ್ತು ಸುಸ್ಥಾಪಿತ ಸಾರ್ವಜನಿಕ ಚರ್ಚೆಗಳಿಗೆ ಬಲವಾದ ಸಾಂಖ್ಯಾತಿಕ ಅಡಿಪಾಯವನ್ನು ಹಾಕಿಕೊಟ್ಟಿವೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕ ಭೂದೃಶ್ಯದಲ್ಲಿ ಭಾರತದ ಅಧಿಕೃತ ಅಂಕಿಅಂಶಗಳು ಸದಾ ಪ್ರಸ್ತುತವಾಗಿರುವುದನ್ನು ಇದು ಖಚಿತಪಡಿಸುತ್ತದೆ.

References:

Ministry of Statistics & Programme Implementation (MoSPI):

https://www.mospi.gov.in/uploads/announcements/announcements_1766247401195_8eb491fa-2542-46fe-b99c-39affe421dda_Booklet_on_proposed_changes_in_GDP,_CPI_and_IIP_20122025.pdf
https://new.mospi.gov.in/uploads/announcements/announcements_1763725600839_38257510-c97c-4d03-993e-ccbbf873bc83_Discussion_Paper_NAD.pdf
https://mospi.gov.in/sites/default/files/press_release/Press%20Note_%20ASSSE_30.04.2025.pdf
https://mospi.gov.in/sites/default/files/publication_reports/ASSSE_english.pdf

https://www.pib.gov.in/PressReleasePage.aspx?PRID=2119641

https://www.pib.gov.in/PressReleasePage.aspx?PRID=2208162

https://www.pib.gov.in/PressReleasePage.aspx?PRID=2132330&reg=3&lang=2

https://www.pib.gov.in/PressReleasePage.aspx?PRID=2160863&reg=3&lang=2

https://www.pib.gov.in/PressReleasePage.aspx?PRID=2125175

https://www.pib.gov.in/PressReleasePage.aspx?PRID=2140618

https://www.pib.gov.in/PressReleasePage.aspx?PRID=2205157

https://www.pib.gov.in/PressReleasePage.aspx?PRID=2163337&reg=3&lang=2

https://www.pib.gov.in/PressReleasePage.aspx?PRID=2128662&reg=3&lang=2

https://www.pib.gov.in/PressReleasePage.aspx?PRID=2194100

https://www.pib.gov.in/PressReleasePage.aspx?PRID=2188343&reg=3&lang=2

https://static.pib.gov.in/WriteReadData/specificdocs/documents/2025/sep/doc2025915637101.pdf

Click here to see pdf 

 

*****

(Explainer ID: 157115) आगंतुक पटल : 5
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati
Link mygov.in
National Portal Of India
STQC Certificate