• Skip to Content
  • Sitemap
  • Advance Search
Others

ರಾಷ್ಟ್ರೀಯ ಮತದಾರರ ದಿನ 2026

ನನ್ನ ಭಾರತ, ನನ್ನ ಮತ

Posted On: 24 JAN 2026 9:31PM

ಪ್ರಮುಖ ಮಾರ್ಗಸೂಚಿಗಳು

  • ಮತದಾರರನ್ನು ಗೌರವಿಸಲು, ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಪ್ರೋತ್ಸಾಹಿಸಲು ಭಾರತದಾದ್ಯಂತ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
  • 2026ರ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಕ್ಯ "ನನ್ನ ಭಾರತ, ನನ್ನ ಮತ" ಎಂಬುದಾಗಿದ್ದು, "ಭಾರತೀಯ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿ ನಾಗರಿಕ" ಎಂಬ ಅಡಿಬರಹವನ್ನು ಹೊಂದಿದೆ.
  • ಭಾರತೀಯ ಚುನಾವಣಾ ಆಯೋಗವು ಚುನಾವಣಾ ಸಮಗ್ರತೆಯನ್ನು ಬಲಪಡಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಎಸ್‌ವಿಇಇಪಿ ಕಾರ್ಯಕ್ರಮವು ಮತದಾರರ ಶಿಕ್ಷಣವನ್ನು ಉತ್ತೇಜಿಸಿದ್ದರೆ, ಇಸಿಐಎನ್‌ಇಟಿ ಜಾಗತಿಕ ತಂತ್ರಜ್ಞಾನ ಹಂಚಿಕೆಗೆ ಬೆಂಬಲ ನೀಡಿದೆ.
  • ಸಿವಿಐಜಿಐಎಲ್‌ ಆ್ಯಪ್ ಚುನಾವಣಾ ನಿಯಮಗಳ ಉಲ್ಲಂಘನೆಯ ಬಗ್ಗೆ ತ್ವರಿತವಾಗಿ ವರದಿ ಮಾಡಲು ಅನುವು ಮಾಡಿಕೊಟ್ಟಿದೆ. ಮತದಾನ ಕೇಂದ್ರಗಳಲ್ಲಿ 100% ವೆಬ್‌ಕಾಸ್ಟಿಂಗ್ ವ್ಯವಸ್ಥೆಯು ಪಾರದರ್ಶಕತೆಯನ್ನು ಹೆಚ್ಚಿಸಿದೆ. ಮತದಾರರ ಗುರುತಿನ ಚೀಟಿ ವಿತರಣೆಯನ್ನು ವೇಗಗೊಳಿಸಲಾಗಿದ್ದು, ಈಗ ಕೇವಲ 15 ದಿನಗಳಲ್ಲಿ ವಿತರಿಸಲಾಗುತ್ತಿದೆ.

ಪೀಠಿಕೆ

ಭಾರತವು ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತದೆ. ಇದು ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸಬಲೀಕರಣಗೊಳಿಸುತ್ತದೆ. ಭಾರತೀಯ ಸಂವಿಧಾನದ ವಿಧಧಿ 324ಅಡಿಯಲ್ಲಿ ಜನವರಿ 25, 1950ರಂದು ಸ್ಥಾಪನೆಯಾದ ಭಾರತೀಯ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ಚುನಾವಣಾ ಆಯೋಗವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗಳ ನಿಯಂತ್ರಣ, ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಅತ್ಯಂತ ಪ್ರಮುಖ ಸಾಂವಿಧಾನಿಕ ಸಂಸ್ಥೆಯಾಗಿದೆ. ಇದು ಇದುವರೆಗೆ 18 ಸಾರ್ವತ್ರಿಕ ಚುನಾವಣೆಗಳನ್ನು (ಲೋಕಸಭೆ) ಮತ್ತು 400ಕ್ಕೂ ಹೆಚ್ಚು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸಿದೆ. ಈ ಆಯೋಗವು ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್ತುಗಳು (ಅಸ್ತಿತ್ವದಲ್ಲಿರುವ ಕಡೆಗಳಲ್ಲಿ), ಪುದುಚೇರಿ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕೇಂದ್ರಾಡಳಿತ ಪ್ರದೇಶಗಳು, ಹಾಗೆಯೇ ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಗೌರವಾನ್ವಿತ ಹುದ್ದೆಗಳ ಚುನಾವಣೆಗಳ ಮೇಲ್ವಿಚಾರಣೆಯನ್ನೂ ಮಾಡುತ್ತದೆ. ಇದು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿರುವ ಬಹು-ಸದಸ್ಯ ಸಂಸ್ಥೆಯಾಗಿದೆ.

2026ರ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಕ್ಯ "ನನ್ನ ಭಾರತ, ನನ್ನ ಮತ"  ಎಂಬುದಾಗಿದ್ದು, "ಭಾರತೀಯ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿ ನಾಗರಿಕ" ಎಂಬ ಅಡಿಬರಹವನ್ನು ಹೊಂದಿದೆ. ಇದು ನಾಗರಿಕ ಕೇಂದ್ರಿತ ಚುನಾವಣಾ ಪ್ರಕ್ರಿಯೆಗಳನ್ನು ರೂಪಿಸುವಲ್ಲಿ ಚುನಾವಣಾ ಆಯೋಗದ ಪ್ರಯತ್ನಗಳನ್ನು ಸಂಕೇತಿಸುತ್ತದೆ. ಆಯೋಗವು ಯಾವಾಗಲೂ ನಾಗರಿಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ.

ರಾಷ್ಟ್ರೀಯ ಮತದಾರರ ದಿನದ ಮುಖ್ಯ ಸಮಾರಂಭವು ನವದೆಹಲಿಯಲ್ಲಿ ನಡೆಯುತ್ತದೆ. ಭಾರತದ ರಾಷ್ಟ್ರಪತಿಗಳು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾರೆ. ರಾಷ್ಟ್ರಪತಿಗಳು ಹೊಸದಾಗಿ ನೋಂದಾಯಿತರಾದ ಯುವ ಮತದಾರರ ಗುಂಪಿಗೆ ಮತದಾರರ ಫೋಟೋ ಗುರುತಿನ ಚೀಟಿಗಳನ್ನು ವಿತರಿಸುತ್ತಾರೆ ಮತ್ತು ಚುನಾವಣಾ ಕಾರ್ಯದಲ್ಲಿ ಅದ್ಭುತವಾಗಿ ಕೆಲಸ ಮಾಡಿದ ಚುನಾವಣಾ ಅಧಿಕಾರಿಗಳನ್ನು ಗೌರವಿಸುತ್ತಾರೆ. ಈ ಪ್ರಶಸ್ತಿಗಳು ಚುನಾವಣಾ ನಿರ್ವಹಣೆಯಲ್ಲಿ ಅವರು ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸುತ್ತವೆ. ಇದೇ ಸಂದರ್ಭದಲ್ಲಿ ನಾಗರಿಕ ಸೇವಾ ಸಂಸ್ಥೆಗಳನ್ನು ಸಹ ಅವುಗಳ ಕಾರ್ಯಕ್ಕಾಗಿ ಗೌರವಿಸಲಾಗುತ್ತದೆ.

ರಾಷ್ಟ್ರೀಯ ಮತದಾರರ ದಿನದ ಮಹತ್ವ

ಯಾವುದೇ ಪ್ರಜಾಪ್ರಭುತ್ವದ ಯಶಸ್ವಿ ನಿರ್ವಹಣೆಗೆ ಪ್ರಜಾಸತ್ತಾತ್ಮಕ ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಮತದಾರರ ಭಾಗವಹಿಸುವಿಕೆ ಅತ್ಯಗತ್ಯ. ಇದು ಪರಿಪೂರ್ಣ ಪ್ರಜಾಪ್ರಭುತ್ವ ಚುನಾವಣೆಗಳ ಮೂಲ ಅಡಿಪಾಯವಾಗಿದೆ.

ಭಾರತದಲ್ಲಿ, ಪ್ರತಿಯೊಬ್ಬ ಅರ್ಹ ಭಾರತೀಯನ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಚುನಾವಣಾ ಆಯೋಗವು ಖಚಿತಪಡಿಸುತ್ತದೆ. ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಮತದಾನ ಮಾಡುವಂತೆ ಪ್ರೇರೇಪಿಸುವುದು ಆಯೋಗದ ಕರ್ತವ್ಯವಾಗಿದೆ. ರಾಷ್ಟ್ರೀಯ ಮತದಾರರ ದಿನವು ಈ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಲು ಸಹಾಯ ಮಾಡುತ್ತದೆ. ಇದು ಮತದಾರರ ನೋಂದಣಿ ಮತ್ತು ಭಾಗವಹಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ದಿನವು ಅರ್ಹ ನಾಗರಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ಅವರ ಪ್ರಜಾಸತ್ತಾತ್ಮಕ ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸುತ್ತದೆ. ಈ ದಿನವನ್ನು ರಾಷ್ಟ್ರದ ಎಲ್ಲಾ ಮತದಾರರಿಗೆ ಸಮರ್ಪಿಸಲಾಗಿದೆ. ಹೊಸ ಮತದಾರರ ನೋಂದಣಿಯೇ ಈ ಆಚರಣೆಯ ಪ್ರಮುಖ ಗುರಿಯಾಗಿದೆ. ಭಾರತದಾದ್ಯಂತ, ಹೊಸ ಮತದಾರರನ್ನು ಈ ದಿನದಂದು ಗೌರವಿಸಲಾಗುತ್ತದೆ.

ರಾಷ್ಟ್ರೀಯ ಮತದಾರರ ದಿನವನ್ನು ದೇಶದಾದ್ಯಂತ ಸುಮಾರು 11 ಲಕ್ಷ ಮತದಾನದ ಬೂತ್‌ಗಳಲ್ಲಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಮತ್ತು ರಾಜ್ಯ ಮಟ್ಟದಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಆಚರಿಸಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮತಗಟ್ಟೆ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಹೊಸದಾಗಿ ನೋಂದಾಯಿತ ಮತದಾರರನ್ನು ಸನ್ಮಾನಿಸುತ್ತಾರೆ.

ಸಾರ್ವಜನಿಕರನ್ನು ತಲುಪುವ ಉದ್ದೇಶದಿಂದ, ಭಾರತೀಯ ಚುನಾವಣಾ ಆಯೋಗವು ತನ್ನ ಸ್ಥಾಪನಾ ದಿನವಾದ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಪದ್ಧತಿಯನ್ನು 2011ರಲ್ಲಿ ಪ್ರಾರಂಭಿಸಿತು. ಇದನ್ನು ದೇಶಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದರ ಅಂಗವಾಗಿ ವಿಚಾರಗೋಷ್ಠಿಗಳು, ಸೈಕಲ್ ರ್‍ಯಾಲಿಗಳು, ಮಾನವ ಸರಪಳಿಗಳು, ಜಾನಪದ ಕಲಾ ಕಾರ್ಯಕ್ರಮಗಳು, ಮಿನಿ ಮ್ಯಾರಥಾನ್‌ಗಳು, ಸ್ಪರ್ಧೆಗಳು ಮತ್ತು ಜಾಗೃತಿ ಸೆಮಿನಾರ್‌ಗಳಂತಹ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಹೆಚ್ಚಿನವು ಯುವಜನರನ್ನು ಗುರಿಯಾಗಿಸಿಕೊಂಡಿದ್ದು, ಮತದಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿವೆ.

ಪ್ರಮುಖ ಚಟುವಟಿಕೆಗಳು ಮತ್ತು ಆಚರಣೆಗಳು

ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ದಿನಾಚರಣೆಗಾಗಿ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತದೆ.

2026ರಾಷ್ಟ್ರೀಯ ಮತದಾರರ ದಿನದಂದು ನೀಡಲಾಗುವ ರಾಷ್ಟ್ರೀಯ ಚುನಾವಣಾ ಪ್ರಶಸ್ತಿಗಳು: ಚುನಾವಣಾ ನಿರ್ವಹಣೆ ಮತ್ತು ಮತದಾರರ ಜಾಗೃತಿ ಅಭಿಯಾನದಲ್ಲಿನ ಅತ್ಯುತ್ತಮ ಪ್ರದರ್ಶನವನ್ನು ಗೌರವಿಸಲು ವ್ಯವಸ್ಥಿತ ಪ್ರಶಸ್ತಿ ಕಾರ್ಯಕ್ರಮವು ರಾಷ್ಟ್ರೀಯ ಮತದಾರರ ದಿನದ ಅತ್ಯಗತ್ಯ ಭಾಗವಾಗಿದೆ. ಈ ಪ್ರಶಸ್ತಿಗಳನ್ನು ಎನ್.ವಿ.ಡಿ ಸಮಾರಂಭಗಳ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನೀಡಲಾಗುತ್ತದೆ. ಈ ವರ್ಷ, ಈ ಪ್ರಶಸ್ತಿಗಳು 'ಅತ್ಯುತ್ತಮ ಚುನಾವಣಾ ಜಿಲ್ಲೆ' ಪ್ರಶಸ್ತಿಗಳನ್ನು ಒಳಗೊಂಡಿವೆ.

2026ರ ಅತ್ಯುತ್ತಮ ಚುನಾವಣಾ ಜಿಲ್ಲಾ ಪ್ರಶಸ್ತಿಗಳು ಈ ಕೆಳಗಿನ ವಿಷಯಗಳ ಅಡಿಯಲ್ಲಿ ಸಾಧನೆಗಳನ್ನು ಗೌರವಿಸಲಿವೆ:

  1. ಚುನಾವಣೆಗಳಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ: ಚುನಾವಣಾ ಪ್ರಕ್ರಿಯೆಗಳ ದಕ್ಷತೆ, ಪಾರದರ್ಶಕತೆ ಮತ್ತು ನಿಖರತೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆಯನ್ನು ಗೌರವಿಸುವುದು.
  2. ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ: ಉತ್ತಮವಾಗಿ ವಿನ್ಯಾಸಗೊಳಿಸಲಾದ ತರಬೇತಿ ಕಾರ್ಯಕ್ರಮಗಳು ಮತ್ತು ಚುನಾವಣಾ ಅಧಿಕಾರಿಗಳ ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಗೌರವಿಸುವುದು.
  3. ಚುನಾವಣಾ ನಿರ್ವಹಣೆ ಮತ್ತು ವ್ಯವಸ್ಥಾಪನೆ : ಮತದಾನ ಕೇಂದ್ರಗಳು, ಮತದಾನದ ಸಾಮಗ್ರಿಗಳು ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಚುನಾವಣಾ ವ್ಯವಸ್ಥಾಪನೆಯನ್ನು ನಿರ್ವಹಿಸುವಲ್ಲಿನ ಅತ್ಯುತ್ತಮ ಅಭ್ಯಾಸಗಳನ್ನು ಗುರುತಿಸುವುದು.
  4. ಮಾದರಿ ನೀತಿ ಸಂಹಿತೆಯ ಅನುಷ್ಠಾನ ಮತ್ತು ಜಾರಿ: ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸಲು, ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರುವಲ್ಲಿ ಮತ್ತು ಎತ್ತಿಹಿಡಿಯುವಲ್ಲಿ ಅನುಸರಿಸಿದ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಗುರುತಿಸುವುದು.
  5. ಮಾಧ್ಯಮ ಪ್ರಶಸ್ತಿಗಳು: ಮುದ್ರಣ, ದೂರದರ್ಶನ, ರೇಡಿಯೋ ಮತ್ತು ಆನ್‌ಲೈನ್/ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಮತದಾರರ ಶಿಕ್ಷಣಕ್ಕಾಗಿ ನಡೆಸಲಾದ ಅತ್ಯುತ್ತಮ ಅಭಿಯಾನಗಳನ್ನು ಗೌರವಿಸುವುದು.

2026ರಾಷ್ಟ್ರೀಯ ಮತದಾರರ ದಿನದಂದು ಬಿಡುಗಡೆಗಳು

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಘನ ಉಪಸ್ಥಿತಿಯಲ್ಲಿ ಈ ಕೆಳಗಿನವುಗಳನ್ನು ಬಿಡುಗಡೆ ಮಾಡಲು ರಾಷ್ಟ್ರೀಯ ಮತದಾರರ ದಿನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ:

  1. ಮತದಾರರ ಜಾಗೃತಿ ಅಭಿಯಾನಗಳು ಅಥವಾ ತಲುಪುವ ಉಪಕ್ರಮಗಳು: ಮತದಾರರಲ್ಲಿ ಅರಿವು ಮೂಡಿಸುವ ಹೊಸ ಯೋಜನೆಗಳು ಅಥವಾ ಜನರನ್ನು ತಲುಪುವ ವಿಶೇಷ ಪ್ರಯತ್ನಗಳು.
  2. ಸಾಂಸ್ಥಿಕ ಪ್ರಕಟಣೆಗಳು, ವರದಿಗಳು ಅಥವಾ ಜ್ಞಾನ ಉತ್ಪನ್ನಗಳು: ಸಾಂಸ್ಥಿಕ ಮಟ್ಟದ ಅಧಿಕೃತ ಪ್ರಕಟಣೆಗಳು, ಸಂಶೋಧನಾ ವರದಿಗಳು ಅಥವಾ ಮಾಹಿತಿ ಪುಸ್ತಕಗಳು.
  3. ದೃಶ್ಯ-ಶ್ರವಣ ಸಾಮಗ್ರಿಗಳು: ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು, ಮತದಾರರ ಭಾಗವಹಿಸುವಿಕೆ ಮತ್ತು ಚುನಾವಣಾ ನಾವೀನ್ಯತೆಗಳನ್ನು ಎತ್ತಿ ತೋರಿಸುವ ವಿಡಿಯೋ ಮತ್ತು ಆಡಿಯೋ ತುಣುಕುಗಳು.
  4. ಚುನಾವಣಾ ಆಯೋಗದ  ಸಾಧನೆಗಳನ್ನು ಬಿಂಬಿಸುವ ಪ್ರಕಟಣೆಯ ಬಿಡುಗಡೆ: ಕಳೆದ ವರ್ಷಗಳಲ್ಲಿ ಆಯೋಗವು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳ ಕುರಿತಾದ ಪುಸ್ತಕದ ಬಿಡುಗಡೆ.
  5. ಬಿಹಾರ ಸಾರ್ವತ್ರಿಕ ಚುನಾವಣೆಗಳ ಯಶಸ್ವಿ ನಿರ್ವಹಣೆಯ ಕುರಿತಾದ ಪ್ರಕಟಣೆಯ ಬಿಡುಗಡೆ: ಬಿಹಾರದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ ಕುರಿತಾದ ವರದಿ ಅಥವಾ ಪುಸ್ತಕದ ಬಿಡುಗಡೆ.
  6. ಚುನಾವಣಾ ನಿರ್ವಹಣೆ ಮತ್ತು ಪ್ರಜಾಸತ್ತಾತ್ಮಕ ಅಭಿವೃದ್ಧಿಯಲ್ಲಿ ಇ.ಸಿ.ಜಾಗತಿಕ ನಾಯಕತ್ವವನ್ನು ಪ್ರತಿಬಿಂಬಿಸುವ ವಿಡಿಯೋ ಬಿಡುಗಡೆ: ವಿಶ್ವಮಟ್ಟದಲ್ಲಿ ಚುನಾವಣಾ ನಿರ್ವಹಣೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಹೊಂದಿರುವ ಅಗ್ರಗಣ್ಯ ಪಾತ್ರವನ್ನು ತೋರಿಸುವ ವಿಶೇಷ ವಿಡಿಯೋದ ಬಿಡುಗಡೆ.

ಶೈಕ್ಷಣಿಕ ಸಂಸ್ಥೆಗಳಲ್ಲಿನ ಚಟುವಟಿಕೆಗಳು

ಎಲ್ಲಾ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲು ಉತ್ತೇಜಿಸಲಾಗುತ್ತದೆ. ಇವುಗಳಲ್ಲಿ ಚರ್ಚಾಸ್ಪರ್ಧೆಗಳು, ಸಂವಾದಗಳು ಮತ್ತು ವಿವಿಧ ಸ್ಪರ್ಧೆಗಳು ಸೇರಿವೆ. ವಿದ್ಯಾರ್ಥಿಗಳು ಚಿತ್ರಕಲೆ, ಕಿರುನಾಟಕ, ಗಾಯನ, ಪೇಂಟಿಂಗ್ ಮತ್ತು ಪ್ರಬಂಧ ಬರವಣಿಗೆಯಲ್ಲಿ ಭಾಗವಹಿಸಬಹುದು. ಈ ಚಟುವಟಿಕೆಗಳು ಯುವ ಮನಸ್ಸುಗಳು ಜವಾಬ್ದಾರಿಯುತ ಮತದಾರರಾಗಲು ಪ್ರೇರಣೆ ನೀಡುತ್ತವೆ.

ಈ ಚಟುವಟಿಕೆಗಳನ್ನು ಮಾಹಿತಿಪೂರ್ಣ ಮತ್ತು ಅಂತರ್ಗತ ಚುನಾವಣಾ ಭಾಗವಹಿಸುವಿಕೆಯನ್ನು ಉತ್ತೇಜಿಸುವ 'ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ' ಕಾರ್ಯಕ್ರಮದೊಂದಿಗೆ ಸಂಯೋಜಿಸಲಾಗಿದೆ.

ಎಸ್‌ವಿಇಇಪಿ ಎಂಬುದು ಭಾರತೀಯ ಚುನಾವಣಾ ಆಯೋಗದ ಪ್ರಮುಖ ಕಾರ್ಯಕ್ರಮವಾಗಿದೆ. ಇದು ದೇಶಾದ್ಯಂತ ಮತದಾರರ ಶಿಕ್ಷಣ, ಜಾಗೃತಿ ಮತ್ತು ಸಾಕ್ಷರತೆಯ ಮೇಲೆ ಗಮನ ಹರಿಸುತ್ತದೆ. ಈ ಕಾರ್ಯಕ್ರಮವು 2009 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಇದು ಭಾರತದ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೂಲಭೂತ ಜ್ಞಾನವನ್ನು ನೀಡುವ ಮೂಲಕ ಅವರನ್ನು ಸಿದ್ಧಪಡಿಸುತ್ತಿದೆ.

ವರ್ಷಗಳಲ್ಲಿನ ಪರಿವರ್ತನಾ ಚುನಾವಣಾ ಸುಧಾರಣೆಗಳು

ಭಾರತದ ಚುನಾವಣಾ ವ್ಯವಸ್ಥೆಯು ಸರಣಿ ಸಾಂಸ್ಥಿಕ, ತಾಂತ್ರಿಕ ಮತ್ತು ಮತದಾರ-ಕೇಂದ್ರಿತ ಸುಧಾರಣೆಗಳ ಮೂಲಕ ನಿರಂತರ ಪರಿವರ್ತನೆಗೆ ಒಳಗಾಗಿದೆ. ಈ ಸುಧಾರಣೆಗಳು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆ ಮತ್ತು ಚುನಾವಣಾ ಸಮಗ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಇತರ ಪ್ರಮುಖ ಉಪಕ್ರಮಗಳು

ಇನ್ನೂ ಹಲವಾರು ಉಪಕ್ರಮಗಳು ಭಾರತದ ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿವೆ:

ಮತಗಟ್ಟೆ ನಿರ್ವಹಣೆ

  • ಮತಗಟ್ಟೆಗಳಲ್ಲಿ ಮೊಬೈಲ್ ಡೆಪಾಸಿಟ್ ಸೌಲಭ್ಯ: ನಿಯಮಗಳ ಪಾಲನೆ ಮತ್ತು ಸುಗಮ ಮತದಾನವನ್ನು ಖಚಿತಪಡಿಸಿಕೊಳ್ಳಲು ಮತಗಟ್ಟೆಗಳ ಹೊರಗೆ ಮೊಬೈಲ್ ಫೋನ್ ಇರಿಸುವ ಕೌಂಟರ್‌ಗಳ ವ್ಯವಸ್ಥೆ.
  • ಮತಗಟ್ಟೆಗೆ 1,200 ಮತದಾರರ ಮಿತಿ: ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸರತಿ ಸಾಲನ್ನು ಕಡಿಮೆ ಮಾಡಲು ಪ್ರತಿ ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿ ಹೇರಲಾಗಿದೆ. ಎತ್ತರದ ವಸತಿ ಸಂಕೀರ್ಣಗಳು ಮತ್ತು ಸೊಸೈಟಿಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
  • 100% ವೆಬ್ಕಾಸ್ಟಿಂಗ್: ಮತದಾನದ ದಿನದ ಪ್ರಮುಖ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಖಚಿತಪಡಿಸಿಕೊಳ್ಳಲಾಗಿದೆ. ಇದು ಯಾವುದೇ ಉಲ್ಲಂಘನೆಯಿಲ್ಲದೆ ಚಟುವಟಿಕೆಗಳು ನಡೆಯುವಂತೆ ಮಾಡುತ್ತದೆ.

ಮತದಾರರ ಸೇವೆಗಳು ಮತ್ತು ಮಾಹಿತಿ

  • ಸ್ಪಷ್ಟವಾದ ಮತದಾರರ ಮಾಹಿತಿ ಚೀಟಿ : ಸುಲಭ ಪರಿಶೀಲನೆಗಾಗಿ ಸರಣಿ ಸಂಖ್ಯೆ ಮತ್ತು ಭಾಗದ ಸಂಖ್ಯೆಗಳು ಸ್ಪಷ್ಟವಾಗಿ ಕಾಣುವಂತೆ ಮಾಹಿತಿ ಚೀಟಿಯನ್ನು ಮರು ವಿನ್ಯಾಸಗೊಳಿಸಲಾಗಿದೆ.
  • ಇಪಿಐಸಿ ತ್ವರಿತ ವಿತರಣೆ: ಮತದಾರರ ಪಟ್ಟಿಯಲ್ಲಿ ಬದಲಾವಣೆ ಆದ 15 ದಿನಗಳೊಳಗೆ ಗುರುತಿನ ಚೀಟಿ ವಿತರಿಸಲು ಹೊಸ ಕಾರ್ಯವಿಧಾನವನ್ನು ಜಾರಿಗೆ ತರಲಾಗಿದೆ. ಇದರ ಪ್ರತಿ ಹಂತದಲ್ಲೂ ಎಸ್‌ಎಂಎಸ್‌ ಅಪ್‌ಡೇಟ್‌ಗಳನ್ನು ನೀಡಲಾಗುತ್ತದೆ.

ಮತದಾರರ ಪಟ್ಟಿ ನಿರ್ವಹಣೆ

  • ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ: ಅನರ್ಹ ಹೆಸರುಗಳನ್ನು ತೆಗೆದುಹಾಕಲು ಮತ್ತು ಎಲ್ಲಾ ಅರ್ಹ ಮತದಾರರನ್ನು ಸೇರಿಸಲು ಕೇಂದ್ರೀಕೃತ ಪರಿಷ್ಕರಣೆ ನಡೆಸಲಾಗಿದೆ.
  • ಮರಣ ನೋಂದಣಿ ದತ್ತಾಂಶ ಬಳಕೆ: ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡಲು ಮರಣ ನೋಂದಣಿ ದತ್ತಾಂಶದ ಎಲೆಕ್ಟ್ರಾನಿಕ್ ಹಂಚಿಕೆಯನ್ನು ಸಕ್ರಿಯಗೊಳಿಸಲಾಗಿದೆ.
  • ಉಪಚುನಾವಣೆಗಳಿಗೂ ಮುನ್ನ ವಿಶೇಷ ಸಾರಾಂಶ ಪರಿಷ್ಕರಣೆ: ಸುಮಾರು 20 ವರ್ಷಗಳಲ್ಲಿ ಮೊದಲ ಬಾರಿಗೆ ಉಪಚುನಾವಣೆಗಳಿಗೂ ಮೊದಲು ವಿಶೇಷ ಸಾರಾಂಶ ಪರಿಷ್ಕರಣೆಯನ್ನು ನಡೆಸಲಾಗಿದೆ.

ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಗಳು

  • ಇಸಿಐ ಕೇಂದ್ರ ಕಚೇರಿಯಲ್ಲಿ ಡಿಜಿಟಲೀಕರಣ: ದಕ್ಷತೆಗಾಗಿ ಇ-ಆಫೀಸ್, ಬಯೋಮೆಟ್ರಿಕ್ ಹಾಜರಾತಿ ಮತ್ತು ಐಐಐಡಿಇಎಂ ಸಂಸ್ಥೆಗೆ ಸ್ಥಳಾಂತರದಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಡಿಜಿಟಲ್ ಇಂಡೆಕ್ಸ್ ಕಾರ್ಡ್ಗಳು ಮತ್ತು ವರದಿಗಳು: ಫಲಿತಾಂಶ ಘೋಷಣೆಯಾದ 72 ಗಂಟೆಗಳ ಒಳಗೆ ಇಂಡೆಕ್ಸ್ ಕಾರ್ಡ್‌ಗಳನ್ನು ಡಿಜಿಟಲ್ ಆಗಿ ಬಿಡುಗಡೆ ಮಾಡಲು ಚುನಾವಣಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ.

ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ

  • ಬೂತ್ ಮಟ್ಟದ ಏಜೆಂಟ್ಗಳ  ತರಬೇತಿ: ಮತದಾರರ ಪಟ್ಟಿ ಸಿದ್ಧತೆ ಮತ್ತು ಆರ್‌ಪಿ ಕಾಯ್ದೆ 1950 ರ ಅಡಿಯಲ್ಲಿ ಮೇಲ್ಮನವಿ ನಿಬಂಧನೆಗಳ ಬಗ್ಗೆ ಬಿಎಲ್‌ಎಗಳಿಗೆ ತರಬೇತಿ ನೀಡಲಾಗಿದೆ.
  • ಐಐಐಡಿಇಎಂನಲ್ಲಿ ಬೂತ್ ಮಟ್ಟದ ಅಧಿಕಾರಿಗಳ  ತರಬೇತಿ: ಬಿಹಾರ ಸೇರಿದಂತೆ ದೇಶಾದ್ಯಂತದ 7,000 ಕ್ಕೂ ಹೆಚ್ಚು ಬಿಎಲ್‌ಒಗಳು ಮತ್ತು ಮೇಲ್ವಿಚಾರಕರಿಗೆ ಕ್ಷೇತ್ರ ಮಟ್ಟದ ಸಾಮರ್ಥ್ಯ ಹೆಚ್ಚಿಸಲು ಐಐಐಡಿಇಎಂನಲ್ಲಿ ತರಬೇತಿ ನೀಡಲಾಗಿದೆ.
  • ಪೊಲೀಸ್ ಅಧಿಕಾರಿಗಳ ತರಬೇತಿ: ಚುನಾವಣೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.

ಎಣಿಕೆ ಪ್ರಕ್ರಿಯೆ ಮತ್ತು ಸ್ಟೇಕ್ಹೋಲ್ಡರ್ ಎಂಗೇಜ್ಮೆಂಟ್

  • ಅಂಚೆ ಮತಪತ್ರಗಳ ಎಣಿಕೆ ಕ್ರಮಬದ್ಧಗೊಳಿಸುವಿಕೆ: ಇವಿಎಂ/ವಿವಿಪ್ಯಾಟ್‌ ಎಣಿಕೆಯ ಅಂತಿಮ ಸುತ್ತಿನ ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ.
  • ದೇಶಾದ್ಯಂತ ಸರ್ವಪಕ್ಷ ಸಭೆಗಳು: ರಾಜಕೀಯ ಪಕ್ಷಗಳನ್ನು ಒಳಗೊಳ್ಳಲು ಸಿಇಒ, ಡಿಇಒ ಮತ್ತು ಇಆರ್‌ಒ ಮಟ್ಟದಲ್ಲಿ ಒಟ್ಟು 4,719 ಸರ್ವಪಕ್ಷ ಸಭೆಗಳನ್ನು ನಡೆಸಲಾಗಿದೆ.
  • ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ  ಪಟ್ಟಿಯಿಂದ ತೆಗೆದುಹಾಕುವುದು: ನೋಂದಣಿಯ ಅಗತ್ಯ ಷರತ್ತುಗಳನ್ನು ಪೂರೈಸದ 808 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಅಂತರರಾಷ್ಟ್ರೀಯ ಸಹಕಾರ

ಇತರ ದೇಶಗಳ ಚುನಾವಣಾ ಸಂಸ್ಥೆಗಳೊಂದಿಗೆ ದ್ವಿಪಕ್ಷೀಯ ಒಡನಾಟವನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ "ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ 2026" ಒಂದು ಮಹತ್ವದ ಘಟನೆಯಾಗಿದ್ದು, ಇದು ಜನವರಿ 21-23, 2026 ರವರೆಗೆ ನವದೆಹಲಿಯಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ವಿಶ್ವದ 40 ಕ್ಕೂ ಹೆಚ್ಚು ದೇಶಗಳ ಚುನಾವಣಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಮತ್ತು ಜನವರಿ 23, 2026 ರಂದು ಏಕಗ್ರೀವವಾಗಿ 'ದೆಹಲಿ ಘೋಷಣೆ 2026' ಅನ್ನು ಅಂಗೀಕರಿಸುವ ಮೂಲಕ ಮುಕ್ತಾಯವಾಯಿತು.

ಸಹಕಾರ ಮತ್ತು ನಾವೀನ್ಯತೆಯ ಮೂಲಕ ಜಾಗತಿಕ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಗಳನ್ನು ಬಲಪಡಿಸಲು ಈ ಘೋಷಣೆಯು ಐದು ಸ್ತಂಭಗಳನ್ನು ಸ್ಥಾಪಿಸಿದೆ:

  • ಸ್ತಂಭ I: ಮತದಾರರ ಪಟ್ಟಿಯ ಪವಿತ್ರತೆ – ಶುದ್ಧ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಅಡಿಪಾಯ ಎಂದು ಇದು ಗುರುತಿಸಿದೆ. ಪಾರದರ್ಶಕ ಚುನಾವಣೆಗಳಿಗಾಗಿ ಎಲ್ಲಾ ಅರ್ಹ ಮತದಾರರಿಗೆ ಫೋಟೋ ಗುರುತಿನ ಚೀಟಿಗಳನ್ನು ನೀಡಲು ಚುನಾವಣಾ ನಿರ್ವಹಣಾ ಸಂಸ್ಥೆಗಳು ಶ್ರಮಿಸುತ್ತವೆ.
  • ಸ್ತಂಭ II: ಚುನಾವಣೆಗಳ ನಿರ್ವಹಣೆ – ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ಆದೇಶಗಳಿಗೆ ಅನುಗುಣವಾಗಿ ಮತ್ತು ಎಲ್ಲಾ ಪಾಲುದಾರರನ್ನು ಒಳಗೊಳ್ಳುವ ಮೂಲಕ ಸಹಭಾಗಿತ್ವದ, ಅಂತರ್ಗತ, ಪಾರದರ್ಶಕ, ದಕ್ಷ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವುದು.
  • ಸ್ತಂಭ III: ಸಂಶೋಧನೆ ಮತ್ತು ಪ್ರಕಟಣೆಗಳು – ಜಾಗತಿಕ ಚುನಾವಣಾ ವ್ಯವಸ್ಥೆಗಳ ಅಟ್ಲಾಸ್ ಸೇರಿದಂತೆ 'ಪ್ರಜಾಪ್ರಭುತ್ವಗಳ ವಿಶ್ವಕೋಶ'ವನ್ನು ತಯಾರಿಸಲು ಬದ್ಧವಾಗಿರುವುದು. ಇದರೊಂದಿಗೆ 'ಇಂಟರ್ನ್ಯಾಷನಲ್ ಐಡಿಯಾ' ನೇತೃತ್ವದಲ್ಲಿ 7 ವಿಷಯಗಳ ಮೇಲೆ ಮತ್ತು ಭಾರತದ ಐಐಐಡಿಇಎಂ' ನೇತೃತ್ವದಲ್ಲಿ 36 ವಿಷಯಗಳ ಮೇಲೆ ವಿವರವಾದ ವರದಿಗಳನ್ನು ಸಿದ್ಧಪಡಿಸುವುದು.
  • ಸ್ತಂಭ IV: ತಂತ್ರಜ್ಞಾನದ ಬಳಕೆ – ಚುನಾವಣಾ ಸಮಗ್ರತೆಯನ್ನು ಎತ್ತಿಹಿಡಿಯಲು, ಮತದಾರರಿಗೆ ಅನುಕೂಲ ಮಾಡಿಕೊಡಲು ಮತ್ತು ತಪ್ಪು ಮಾಹಿತಿಯನ್ನು ಎದುರಿಸಲು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು. ಭಾರತವು ತನ್ನ ಇಸಿಐಎನ್‌ಇಟಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಇತರ ದೇಶಗಳ ಕಾನೂನು ಮತ್ತು ಭಾಷೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲು ಹಂಚಿಕೊಳ್ಳುವ ಕೊಡುಗೆಯನ್ನು ನೀಡಿದೆ.
  • ಸ್ತಂಭ V: ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ – ವಿಶ್ವದ ಅತಿದೊಡ್ಡ ಚುನಾವಣಾ ತರಬೇತಿ ಸಂಸ್ಥೆಯಾದ ಐಐಐಡಿಎಂ, ಕಳೆದ 15 ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಮತ್ತು 100ಕ್ಕೂ ಹೆಚ್ಚು ದೇಶಗಳ ಸಿಬ್ಬಂದಿಗೆ ತರಬೇತಿ ನೀಡಿದೆ. ಈ ವ್ಯಾಪಕ ಅನುಭವವನ್ನು ಬಳಸಿಕೊಂಡು, ಭಾರತವು ವಿಶ್ವದಾದ್ಯಂತದ ಚುನಾವಣಾ ಸಂಸ್ಥೆಗಳಿಗೆ ತರಬೇತಿ ಸೌಲಭ್ಯಗಳನ್ನು ಮತ್ತು ಉತ್ತಮ ಅಭ್ಯಾಸಗಳ ವಿನಿಮಯವನ್ನು ಒದಗಿಸುತ್ತದೆ.

ಪಾಲ್ಗೊಂಡಿರುವ ರಾಷ್ಟ್ರಗಳು ಈ ಐದು ಸ್ತಂಭಗಳನ್ನು ಅಳೆಯಬಹುದಾದ ಕ್ರಮಗಳು, ಸಹಯೋಗ ಮತ್ತು ವಾರ್ಷಿಕ ಪ್ರಗತಿ ಪರಿಶೀಲನೆಗಳ ಮೂಲಕ ಕಾರ್ಯರೂಪಕ್ಕೆ ತರಲು ನಿರ್ಧರಿಸಿವೆ. ಇದರ ಮುಂದಿನ ಸಭೆಯು 2026 ಡಿಸೆಂಬರ್ 3 ರಿಂದ 5 ರವರೆಗೆ ನವದೆಹಲಿಯ ಐಐಐಡಿಇಎಂನಲ್ಲಿ ನಡೆಯಲಿದೆ. ಈ ಐತಿಹಾಸಿಕ ಘೋಷಣೆಯು ಚುನಾವಣಾ ಸಮಗ್ರತೆ ಮತ್ತು ಜಾಗತಿಕ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸುತ್ತದೆ.

2026ರಲ್ಲಿ ಅಂತರರಾಷ್ಟ್ರೀಯ ಐಡಿಯಾದ ಭಾರತದ ಅಧ್ಯಕ್ಷತೆ

ಭಾರತವು 2026ನೇ ಸಾಲಿಗೆ 'ಇಂಟರ್ನ್ಯಾಷನಲ್ ಐಡಿಯಾ'ದ ಸದಸ್ಯ ರಾಷ್ಟ್ರಗಳ ಕೌನ್ಸಿಲ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತರು ಇದರ ನೇತೃತ್ವ ವಹಿಸಿದ್ದಾರೆ. ಈ ನಾಯಕತ್ವದ ಅಡಿಯಲ್ಲಿ, ಭಾರತವು ಪ್ರಜಾಸತ್ತಾತ್ಮಕ ನಾವೀನ್ಯತೆಯನ್ನು ಉತ್ತೇಜಿಸುವ, ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ವಿಶ್ವಾದ್ಯಂತ ಅಂತರ್ಗತ, ಶಾಂತಿಯುತ, ಚೇತೋಹಾರಿ ಹಾಗೂ ಸುಸ್ಥಿರ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಭಾರತದ ವ್ಯಾಪಕ ಚುನಾವಣಾ ಅನುಭವ ಮತ್ತು ಬಲವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು 2026 ರಲ್ಲಿ 'ಇಂಟರ್ನ್ಯಾಷನಲ್ ಐಡಿಯಾ'ವನ್ನು ಮುನ್ನಡೆಸಲು ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ಒದಗಿಸಿವೆ.

ಈ ಅಧ್ಯಕ್ಷತೆಯು "ಸಮಗ್ರ ಅಂತರ್ಗತ, ಶಾಂತಿಯುತ, ಚೇತೋಹಾರಿ ಮತ್ತು ಸುಸ್ಥಿರ ಜಗತ್ತಿಗಾಗಿ ಪ್ರಜಾಪ್ರಭುತ್ವ" ಎಂಬ ಧ್ಯೇಯವಾಕ್ಯದ ಮೇಲೆ ಆಧಾರಿತವಾಗಿದ್ದು, ಎರಡು ಪ್ರಮುಖ ಸ್ತಂಭಗಳಿಂದ ಮಾರ್ಗದರ್ಶನ ಪಡೆಯುತ್ತದೆ:

  • ಭವಿಷ್ಯಕ್ಕಾಗಿ ಪ್ರಜಾಪ್ರಭುತ್ವದ ಮರುಕಲ್ಪನೆ: (ಕೃತಕ ಬುದ್ಧಿಮತ್ತೆ), ವೈವಿಧ್ಯತೆ, ಸುಸ್ಥಿರತೆ, ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭವಿಷ್ಯಕ್ಕೆ ಸಜ್ಜಾದ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುವುದು).
  • ಬಲಿಷ್ಠ, ಸ್ವತಂತ್ರ ಮತ್ತು ವೃತ್ತಿಪರ ಚುನಾವಣಾ ನಿರ್ವಹಣಾ ಸಂಸ್ಥೆಗಳು: (ತಂತ್ರಜ್ಞಾನ, ಅಪಾಯ ನಿರ್ವಹಣೆ, ಮತದಾರರ ಶಿಕ್ಷಣ, ಸುಧಾರಣೆಗಳು ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡುವುದು).

ಪ್ರಜಾಸತ್ತಾತ್ಮಕ ಶ್ರೇಷ್ಠತೆಯ ಶಾಶ್ವತ ಜಾಗತಿಕ ಪರಂಪರೆಯನ್ನು ನಿರ್ಮಿಸಲು, ಭಾರತವು ಐಐಐಡಿಇಎಂ ಮತ್ತು ಇಂಟರ್ನ್ಯಾಷನಲ್ ಐಡಿಯಾ ಮೂಲಕ ಚುನಾವಣಾ ಸಂಸ್ಥೆಗಳ ಮುಖ್ಯಸ್ಥರ ಶೃಂಗಸಭೆಗಳು, ನೀತಿ ಸಂವಾದಗಳು, ತಜ್ಞರ ಕಾರ್ಯಾಗಾರಗಳು, ಜಂಟಿ ಸಂಶೋಧನೆಗಳು, ಜ್ಞಾನ ಉತ್ಪನ್ನಗಳು ಮತ್ತು ಸಾಮರ್ಥ್ಯ ವೃದ್ಧಿಯ ಉಪಕ್ರಮಗಳು ಸೇರಿದಂತೆ ಹೆಚ್ಚಿನ ಪ್ರಭಾವ ಬೀರಬಲ್ಲ ಚಟುವಟಿಕೆಗಳನ್ನು ಆಯೋಜಿಸಲಿದೆ.

ಉಪಸಂಹಾರ

ರಾಷ್ಟ್ರೀಯ ಮತದಾರರ ದಿನವು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಂತರ್ಗತ ಆಡಳಿತಕ್ಕೆ ಭಾರತವು ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. 2011 ರಲ್ಲಿ ಪ್ರಾರಂಭವಾದಾಗಿನಿಂದ, ಈ ವಾರ್ಷಿಕ ಆಚರಣೆಯು ದೇಶದ ಮೂಲೆ ಮೂಲೆಯನ್ನು ತಲುಪುವ ಮೂಲಕ ರಾಷ್ಟ್ರದ ಅತ್ಯಂತ ವ್ಯಾಪಕವಾದ ನಾಗರಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ವಿಕಸನಗೊಂಡಿದೆ. 2026 ರ ಧ್ಯೇಯವಾಕ್ಯವು ಪ್ರತಿಯೊಂದು ಮತವೂ ಮೌಲ್ಯಯುತವಾಗಿದೆ ಮತ್ತು "ಯಾವೊಬ್ಬ ಮತದಾರನೂ ಹೊರಗುಳಿಯಬಾರದು" ಎಂಬ ಸಾಂವಿಧಾನಿಕ ಆದೇಶವನ್ನು ಪೂರೈಸುವಲ್ಲಿ ಪ್ರತಿಯೊಬ್ಬ ನಾಗರಿಕನೂ ಪ್ರಮುಖ ಪಾತ್ರವನ್ನು ಹೊಂದಿದ್ದಾನೆ ಎಂಬ ಸಂದೇಶವನ್ನು ಬಲಪಡಿಸುತ್ತದೆ. ಹೆಚ್ಚುತ್ತಿರುವ ಚುನಾವಣಾ ಭಾಗವಹಿಸುವಿಕೆ, ಮಹಿಳಾ ಮತದಾರರ ನೋಂದಣಿಯಲ್ಲಿನ ಏರಿಕೆ ಮತ್ತು ವಿಸ್ತರಿಸುತ್ತಿರುವ ಮೂಲಸೌಕರ್ಯಗಳೊಂದಿಗೆ, ಭಾರತದ ಪ್ರಜಾಸತ್ತಾತ್ಮಕ ಪಯಣವು ಜಗತ್ತಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಿದೆ.

References

Election Commission of India

Vikaspedia

Press Information Bureau

My Bharat Gov

Others:

Click here for pdf file.

 

(Explainer ID: 157085) आगंतुक पटल : 15
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Malayalam
Link mygov.in
National Portal Of India
STQC Certificate