Global Affairs
ಭಾರತ-ಇಯು ಪಾಲುದಾರಿಕೆ: ಯುರೋಪಿಯನ್ ಯೂನಿಯನ್‌ನೊಂದಿಗೆ ಭಾರತದ ಬೆಳೆಯುತ್ತಿರುವ ಒಡನಾಟ
Posted On:
24 JAN 2026 12:05PM
|
ಪ್ರಮುಖ ಮಾರ್ಗಸೂಚಿಗಳು
-
ಭಾರತ ಮತ್ತು ಇಯು ನಡುವಿನ ಒಡನಾಟವು ಯುರೋಪ್‌ನೊಂದಿಗಿನ ಭಾರತದ ಆಯಕಟ್ಟಿನ ಗಮನವನ್ನು ಉಲ್ಲೇಖಿಸುತ್ತದೆ. ಇದು ಮುಂಬರುವ ಭಾರತ-ಇಯು ಶೃಂಗಸಭೆ ಮತ್ತು ಪ್ರಸ್ತುತ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಅನುಗುಣವಾಗಿದೆ.
-
2024-25ರಲ್ಲಿ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವು ಸರಿಸುಮಾರು 136 ಬಿಲಿಯನ್ ತಲುಪಿದ್ದು, ಈ ಮೂಲಕ ಯುರೋಪಿಯನ್ ಯೂನಿಯನ್ ಭಾರತದ ಅತಿದೊಡ್ಡ ಸರಕು ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ.
-
2019 ಮತ್ತು 2024ರ ನಡುವೆ, ಭಾರತ-ಇಯು ನಡುವಿನ ಸೇವಾ ವಲಯದ ದ್ವಿಪಕ್ಷೀಯ ವ್ಯಾಪಾರವು ಸ್ಥಿರವಾದ ಬೆಳವಣಿಗೆ ಕಂಡಿದೆ. ಭಾರತದ ರಫ್ತು ಪ್ರಮಾಣವು 19 ಬಿಲಿಯನ್‌ನಿಂದ 37 ಬಿಲಿಯನ್ಗೆ ಏರಿಕೆಯಾಗಿದ್ದರೆ, ಇಯುನಿಂದ ಭಾರತಕ್ಕೆ ಆಗುವ ರಫ್ತು 29 ಬಿಲಿಯನ್‌ಗೆ ಏರಿದೆ.
-
2024ರ ಅಂಕಿಅಂಶದಂತೆ, 9,31,607ಕ್ಕೂ ಹೆಚ್ಚು ಭಾರತೀಯರು ಇಯುನಲ್ಲಿ ವಾಸಿಸುತ್ತಿದ್ದಾರೆ (ಇವರಲ್ಲಿ 16,268 ಮಂದಿ ಬ್ಲೂ ಕಾರ್ಡ್ ಹೊಂದಿದ್ದಾರೆ). ಕಳೆದ 20 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು 'ಎರಾಸ್ಮಸ್ ಮುಂಡಸ್' ವಿದ್ಯಾರ್ಥಿವೇತನವನ್ನು ಪಡೆದಿದ್ದು, ಇದು ಭಾರತ-ಇಯು ನಡುವಿನ ಶೈಕ್ಷಣಿಕ ಸಂಬಂಧ ಮತ್ತು ಜನರ ಸಂಚಾರವನ್ನು ಉಲ್ಲೇಖಿಸುತ್ತದೆ.
|
ಪೀಠಿಕೆ
ಹೊಸ ದೆಹಲಿಯಲ್ಲಿ ನಡೆಯಲಿರುವ ಮುಂಬರುವ ಭಾರತ-ಇಯು ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ಒಡನಾಟವನ್ನು ತೀವ್ರಗೊಳಿಸಿದ್ದು, ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸಂಬಂಧವು ನವಿಕೃತ ಕಾರ್ಯತಂತ್ರದ ವೇಗವನ್ನು ಪಡೆದುಕೊಂಡಿದೆ. ಭಾರತ ಮತ್ತು ಇಯು ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಮುಂದುವರಿಸಲು ಮತ್ತು ಅಸ್ತಿತ್ವದಲ್ಲಿರುವ ಮಾರ್ಗಸೂಚಿಯನ್ನು ಮೀರಿ ಪಾಲುದಾರಿಕೆಯನ್ನು ಮುನ್ನಡೆಸಲು ಹೊಸ 'ಜಂಟಿ ಕಾರ್ಯತಂತ್ರದ ಕಾರ್ಯಸೂಚಿ'ಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ನಿರಂತರ ತೊಡಗಿಸಿಕೊಳ್ಳುವಿಕೆಯು ವ್ಯಾಪಾರ, ಹೂಡಿಕೆ, ಸ್ವಚ್ಛ ಮತ್ತು ಹಸಿರು ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ರಕ್ಷಣೆ, ಡಿಜಿಟಲ್ ಉಪಕ್ರಮಗಳು, ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ-ಇಯು ನಡುವಿನ ಉನ್ನತ ಮಟ್ಟದ ಒಡನಾಟಗಳು ಬಲಗೊಂಡಿವೆ. ಅಧ್ಯಕ್ಷರಾದ ಉರ್ಸುಲಾ ವಾನ್ ಡರ್ ಲೇಯನ್ ನೇತೃತ್ವದ ಇಯು ಕಮಿಷನರ್‌ಗಳ ತಂಡವು ಫೆಬ್ರವರಿ 2025ರಲ್ಲಿ ಹೊಸ ದೆಹಲಿಗೆ ಭೇಟಿ ನೀಡಿತು - ಯುರೋಪ್‌ನ ಹೊರಗಿನ ದ್ವಿಪಕ್ಷೀಯ ಪಾಲುದಾರ ದೇಶವೊಂದಕ್ಕೆ ಇಂತಹ ಭೇಟಿ ನೀಡಿದ್ದು ಇದೇ ಮೊದಲು. ಜೂನ್ 2025 ರಲ್ಲಿ ಕೆನಡಾದಲ್ಲಿ ನಡೆದ ಜಿ7 ಮತ್ತು ಜಿ20ನಂತಹ ಬಹುಪಕ್ಷೀಯ ವೇದಿಕೆಗಳ ಪಕ್ಕದಲ್ಲಿ ನಾಯಕರು ಭೇಟಿಯಾಗಿ ಚರ್ಚಿಸಿದರು. ಅಲ್ಲದೆ, ಸೆಪ್ಟೆಂಬರ್ 2025 ರಲ್ಲಿ ಪ್ರಧಾನಮಂತ್ರಿಗಳು, ಅಧ್ಯಕ್ಷರಾದ ವಾನ್ ಡರ್ ಲೇಯನ್ ಮತ್ತು ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಅವರ ನಡುವಿನ ಸಂಭಾಷಣೆ ಸೇರಿದಂತೆ ನಿಯಮಿತ ದೂರವಾಣಿ ಚರ್ಚೆಗಳ ಮೂಲಕ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳಲಾಗಿದೆ.
ಭಾರತ-ಇಯು ಸಂಬಂಧಗಳ ಅವಲೋಕನ
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸಂಬಂಧವು ಪ್ರಜಾಪ್ರಭುತ್ವ, ಕಾನೂನಿನ ಆಳ್ವಿಕೆ, ನಿಯಮ ಆಧಾರಿತ ಅಂತರಾಷ್ಟ್ರೀಯ ವ್ಯವಸ್ಥೆ ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಯ ಬದ್ಧತೆಯಂತಹ ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳ ಮೇಲೆ ನಿಂತಿದೆ. ಇವುಗಳ ನಡುವಿನ ಬಾಂಧವ್ಯವು ವ್ಯಾಪಾರ ಮತ್ತು ಹೂಡಿಕೆ, ಭದ್ರತೆ ಮತ್ತು ರಕ್ಷಣೆ, ಹವಾಮಾನ ವೈಪರೀತ್ಯ ತಡೆ ಮತ್ತು ಸ್ವಚ್ಛ ಇಂಧನ, ಡಿಜಿಟಲ್ ಪರಿವರ್ತನೆ, ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜನರ ನಡುವಿನ ಸಾಂಸ್ಕೃತಿಕ ವಿನಿಮಯದಂತಹ ವ್ಯಾಪಕ ಕ್ಷೇತ್ರಗಳನ್ನು ಒಳಗೊಂಡಿದೆ. ಸರಕುಗಳ ವಿಷಯದಲ್ಲಿ ಇಯು ಇಂದಿಗೂ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, 2024-25ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಸರಿಸುಮಾರು 136 ಬಿಲಿಯನ್ ತಲುಪಿದೆ. ಅಲ್ಲದೆ, ಸರಕು ಮತ್ತು ಸೇವೆಗಳೆರಡರಲ್ಲೂ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಯುರೋಪಿಯನ್ ಯೂನಿಯನ್ ಸ್ಥಾನ ಪಡೆದಿದೆ.
2020ರಲ್ಲಿ ಅಂಗೀಕರಿಸಲಾದ 'ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆ: 2025ರ ಮಾರ್ಗಸೂಚಿ' ಅಡಿಯಲ್ಲಿ ಈ ಬಹುಮುಖಿ ಪಾಲುದಾರಿಕೆಯು ಮಾರ್ಗದರ್ಶನ ಪಡೆಯುತ್ತಿದೆ. ಇದು ಈ ಕೆಳಗಿನ ಅಂಶಗಳಲ್ಲಿ ಪರಸ್ಪರ ಸಮೃದ್ಧಿ ಮತ್ತು ಜಾಗತಿಕ ಸ್ಥಿರತೆಯತ್ತ ವಿಕಸನಗೊಳ್ಳುತ್ತಾ ಸಾಗುತ್ತಿದೆ:

ಭಾರತ ಮತ್ತು ಇಯು ನಡುವಿನ ಹಿಂದಿನ ಒಡನಾಟ
ಭಾರತ-ಇಯು ಪಾಲುದಾರಿಕೆಯು ದಶಕಗಳಿಂದ ಬೆಳೆದು ಬಂದಿದೆ. ಮೂಲಭೂತ ರಾಜತಾಂತ್ರಿಕ ಸಂಬಂಧಗಳಿಂದ ಆರಂಭವಾಗಿ, ಇಂದು ಇದು ರಾಜಕೀಯ ಸಂವಾದ, ಆರ್ಥಿಕ ಸಹಕಾರ, ಭದ್ರತೆ ಮತ್ತು ಹವಾಮಾನ ಬದಲಾವಣೆ ಹಾಗೂ ತಂತ್ರಜ್ಞಾನದಂತಹ ಜಾಗತಿಕ ಸವಾಲುಗಳನ್ನು ಒಳಗೊಂಡ ಬಹುಮುಖಿ ಕಾರ್ಯತಂತ್ರದ ಮೈತ್ರಿಯಾಗಿ ವಿಸ್ತರಿಸಿದೆ. 1960ರ ದಶಕದ ಆರಂಭಿಕ ಮಾನ್ಯತೆಯಿಂದ ಹಿಡಿದು 21ನೇ ಶತಮಾನದ ವಾರ್ಷಿಕ ಶೃಂಗಸಭೆಗಳು ಮತ್ತು ಜಂಟಿ ಉಪಕ್ರಮಗಳವರೆಗೆ, ಈ ಬಾಂಧವ್ಯವು ಗಮನಾರ್ಹವಾಗಿ ಪ್ರಗತಿ ಸಾಧಿಸಿದೆ. ಇದು ವ್ಯಾಪಾರ, ಹೂಡಿಕೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿನ ಪರಸ್ಪರ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುತ್ತದೆ.
ಆರಂಭಿಕ ಅಡಿಪಾಯ
ಭಾರತ ಮತ್ತು ಇಯು ನಡುವಿನ ರಾಜತಾಂತ್ರಿಕ ಸಂಬಂಧಗಳು 1960ರ ದಶಕದ ಆರಂಭಕ್ಕೆ ಹೋಗುತ್ತವೆ. 1962ರಲ್ಲಿ ಯುರೋಪಿಯನ್ ಎಕನಾಮಿಕ್ ಕಮ್ಯುನಿಟಿ ಯೊಂದಿಗೆ ಸಂಬಂಧವನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಇದು ಔಪಚಾರಿಕ ಸಹಕಾರಕ್ಕೆ ಅಡಿಪಾಯ ಹಾಕಿತು, ಇದರ ಫಲವಾಗಿ 1993ರ ಜಂಟಿ ರಾಜಕೀಯ ಹೇಳಿಕೆ ಮತ್ತು 1994ರ ಸಹಕಾರ ಒಪ್ಪಂದವು ಹೊರಬಂದವು. ಇವು ದ್ವಿಪಕ್ಷೀಯ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದವು.
2000ರ ದಶಕದ ಆರಂಭದಲ್ಲಿನ ಪ್ರಮುಖ ಮೈಲಿಗಲ್ಲುಗಳು
2000ರ ದಶಕದ ಆರಂಭದಲ್ಲಿ ಈ ಪಾಲುದಾರಿಕೆಯನ್ನು ರೂಪಿಸಿದ ಹಲವು ಪ್ರಮುಖ ಘಟನೆಗಳು ನಡೆದವು. ಮೊದಲ ಭಾರತ-ಇಯು ಶೃಂಗಸಭೆಯು ಜೂನ್ 2000ರಲ್ಲಿ ಲಿಸ್ಬನ್‌ನಲ್ಲಿ ನಡೆಯಿತು, ಇದು ರಾಜಕೀಯ ಮತ್ತು ಆರ್ಥಿಕ ವಿಷಯಗಳ ಕುರಿತು ವಾರ್ಷಿಕ ಉನ್ನತ ಮಟ್ಟದ ಸಂವಾದಗಳನ್ನು ಪ್ರಾರಂಭಿಸಿತು. ಇದರ ಬೆನ್ನಲ್ಲೇ, 2004ರಲ್ಲಿ ಹೇಗ್‌ನಲ್ಲಿ ನಡೆದ 5ನೇ ಶೃಂಗಸಭೆಯಲ್ಲಿ ಇದನ್ನು 'ಕಾರ್ಯತಂತ್ರದ ಪಾಲುದಾರಿಕೆ'ಯಾಗಿ ಮೇಲ್ದರ್ಜೆಗೇರಿಸಲಾಯಿತು. ಇದು ವ್ಯಾಪಾರವನ್ನು ಮೀರಿ ಭದ್ರತೆ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಒಳಗೊಳ್ಳುವಂತೆ ವ್ಯಾಪ್ತಿಯನ್ನು ವಿಸ್ತರಿಸಿತು.
ಭಾರತ-ಇಯು ಸಂಬಂಧಗಳಲ್ಲಿ ಇತ್ತೀಚಿನ ಮಹತ್ವದ ಪ್ರಗತಿ
2000ರ ದಶಕದ ಆರಂಭದ ಮೈಲಿಗಲ್ಲುಗಳು ಕೇವಲ ಚೌಕಟ್ಟನ್ನು ರೂಪಿಸಿದ್ದರೆ, ಇತ್ತೀಚಿನ ಬೆಳವಣಿಗೆಗಳು ವೇಗವನ್ನು ಪಡೆದುಕೊಂಡಿವೆ. ಜುಲೈ 2020ರಲ್ಲಿ 'ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆ: 2025ರ ಮಾರ್ಗಸೂಚಿ'ಯನ್ನು ಅಂಗೀಕರಿಸಲಾಯಿತು. ಮೇ 2021ರಲ್ಲಿ ಮುಕ್ತ ವ್ಯಾಪಾರ ಮತ್ತು ಹೂಡಿಕೆ ಮಾತುಕತೆಗಳ ಪುನರಾರಂಭ ಹಾಗೂ ಏಪ್ರಿಲ್ 2022 ರಲ್ಲಿ 'ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ'ಯನ್ನು ಪ್ರಾರಂಭಿಸಲಾಯಿತು. ಫೆಬ್ರವರಿ 2025ರಲ್ಲಿ ಹೊಸ ದೆಹಲಿಯಲ್ಲಿ ನಡೆದ ಟಿಟಿಸಿಯ ಎರಡನೇ ಮಂತ್ರಿಮಟ್ಟದ ಸಭೆಯು ಡಿಜಿಟಲ್ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮೂಲಕ, ಕೇವಲ ಮಾತುಕತೆಯಿಂದ ಕಾರ್ಯರೂಪಕ್ಕೆ ತರುವ ತಂತ್ರಜ್ಞಾನ ಆಧಾರಿತ ಪಾಲುದಾರಿಕೆಯತ್ತ ಮಹತ್ವದ ಬದಲಾವಣೆಯನ್ನು ತಂದಿದೆ.

ಭಾರತ-ಇಯು ಸಂವಾದ - ಕಾರ್ಯತಂತ್ರದ ಪಾಲುದಾರಿಕೆಯ ಚೌಕಟ್ಟು
ಕಳೆದ ದಶಕದಲ್ಲಿ ಭಾರತ-ಇಯು ಸಂಬಂಧಗಳು ಗಣನೀಯವಾಗಿ ಆಳವಾಗಿವೆ. ಇವು ಕೇವಲ ಸಂವಾದ ಆಧಾರಿತ ಸಂವಹನಗಳಿಂದ ಹೊರಬಂದು ರಕ್ಷಣೆ, ಮೂಲಸೌಕರ್ಯ, ಹೂಡಿಕೆಗಳು, ಕಾರ್ಮಿಕರ ಸಂಚಾರ ಮತ್ತು ಉದಯೋನ್ಮುಖ ಜಾಗತಿಕ ಆದ್ಯತೆಗಳಲ್ಲಿ ಕಾರ್ಯರೂಪಕ್ಕೆ ತರಬಹುದಾದ ಕಾರ್ಯತಂತ್ರದ ಸಹಯೋಗಗಳಾಗಿ ಮಾರ್ಪಟ್ಟಿವೆ.
'ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆ: 2025ರ ಮಾರ್ಗಸೂಚಿ' ಈ ವಿಕಸನಕ್ಕೆ ದಾರಿದೀಪವಾಗಿದೆ. ಇದು ಪ್ರಸ್ತಾವಿತ 'ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ' ಮತ್ತು 'ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ' ಯಂತಹ ಉನ್ನತ ಮಟ್ಟದ ಬದ್ಧತೆಗಳಿಗೆ ಕಾರಣವಾಗಿದೆ. ಈ ಮೂಲಕ ಹವಾಮಾನ ಬದಲಾವಣೆ, ಪೂರೈಕೆ ಸರಪಳಿ ಭದ್ರತೆ ಮತ್ತು ಪ್ರಾದೇಶಿಕ ಶಾಂತಿಯಂತಹ ಹಂಚಿಕೆಯ ಸವಾಲುಗಳನ್ನು ಎದುರಿಸುವಲ್ಲಿ ಭಾರತವನ್ನು ಪ್ರಮುಖ ಪಾಲುದಾರನನ್ನಾಗಿ ಇಯು ಪರಿಗಣಿಸಿದೆ.
ವ್ಯಾಪಾರ ಮತ್ತು ಆರ್ಥಿಕ ಗಮನ
ವ್ಯಾಪಾರವು ಈ ಸಂಬಂಧದ ಪ್ರಮುಖ ಅಡಿಪಾಯವಾಗಿದ್ದು, ಇಯು ಅತ್ಯಂತ ಮಹತ್ವದ ಪಾಲುದಾರನಾಗಿ ಹೊರಹೊಮ್ಮಿದೆ. ಭಾರತ ಮತ್ತು ಇಯು ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು ಗಮನಾರ್ಹವಾಗಿ ಬೆಳೆದಿದ್ದು, 2024-25ರಲ್ಲಿ $136 ಬಿಲಿಯನ್ ತಲುಪಿದೆ. ಇಯುನಿಂದ ಭಾರತಕ್ಕೆ ಯಂತ್ರೋಪಕರಣಗಳು, ಸಾರಿಗೆ ಉಪಕರಣಗಳು ಮತ್ತು ರಾಸಾಯನಿಕಗಳು ರಫ್ತಾಗುತ್ತಿದ್ದರೆ, ಭಾರತದಿಂದ ಯಂತ್ರೋಪಕರಣಗಳು, ರಾಸಾಯನಿಕಗಳು, ಮೂಲ ಲೋಹಗಳು, ಖನಿಜ ಉತ್ಪನ್ನಗಳು ಮತ್ತು ಜವಳಿ ವಸ್ತುಗಳು ರಫ್ತಾಗುತ್ತಿವೆ.
ಇದಲ್ಲದೆ, 2019 ರಿಂದ 2024 ರವರೆಗೆ ಸೇವಾ ವಲಯದ ದ್ವಿಪಕ್ಷೀಯ ವ್ಯಾಪಾರವು ಸ್ಥಿರ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಭಾರತದ ಸೇವಾ ರಫ್ತು 2019ರಲ್ಲಿ €19 ಬಿಲಿಯನ್ ಇದ್ದದ್ದು 2024 ರಲ್ಲಿ €37 ಬಿಲಿಯನ್ ಗೆ ಏರಿಕೆಯಾಗಿದೆ. ಇಯುನಿಂದ ಭಾರತಕ್ಕೆ ಆಗುವ ಆಮದು ಕೂಡ ಹೆಚ್ಚಳ ಕಂಡಿದ್ದು, 2024 ರಲ್ಲಿ €29 ಬಿಲಿಯನ್ ತಲುಪಿದೆ.
ರಕ್ಷಣೆ ಮತ್ತು ಭದ್ರತೆ
2025ರಲ್ಲಿ ಭಾರತ-ಇಯು ಭದ್ರತೆ ಮತ್ತು ರಕ್ಷಣಾ ಸಂಬಂಧಗಳು ಗಮನಾರ್ಹವಾಗಿ ಬಲಗೊಂಡಿವೆ. ಫೆಬ್ರವರಿಯಲ್ಲಿ ನಡೆದ ಇಯು ಕಮಿಷನರ್‌ಗಳ ಭಾರತ ಭೇಟಿಯ ಸಂದರ್ಭದ ನಾಯಕರ ಜಂಟಿ ಹೇಳಿಕೆಯು 'ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ'ಯ ಸಾಧ್ಯತೆಗಳನ್ನು ಅನ್ವೇಷಿಸಲು ಒಪ್ಪಿಕೊಂಡಿತು. ಈ ಸಂದರ್ಭದಲ್ಲಿ ಇಯು ರಕ್ಷಣೆ ಮತ್ತು ಬಾಹ್ಯಾಕಾಶ ಕಮಿಷನರ್ ಹಾಗೂ ಭಾರತದ ರಕ್ಷಣಾ ರಾಜ್ಯ ಸಚಿವರ ನಡುವೆ ಪ್ರಮುಖ ಚರ್ಚೆಗಳು ನಡೆದವು.
ಡಿಸೆಂಬರ್ 2025ರಲ್ಲಿ 'ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರರ್ಸ್' ನಿಯೋಗವು ಬ್ರಸೆಲ್ಸ್‌ಗೆ ಭೇಟಿ ನೀಡಿ ಇಯು ಕಮಿಷನರ್ ಜೊತೆ ಕೈಗಾರಿಕಾ ಸಹಕಾರದ ಬಗ್ಗೆ ಚರ್ಚಿಸಿತು. ಸೆಪ್ಟೆಂಬರ್ 2025 ರಲ್ಲಿ, ಎಲ್ಲಾ 27 ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ 'ಇಯು ರಾಜಕೀಯ ಮತ್ತು ಭದ್ರತಾ ಸಮಿತಿ' ತನ್ನ ಮೊದಲ ಏಷ್ಯಾ ಪ್ರವಾಸದ ಅಂಗವಾಗಿ ಭಾರತಕ್ಕೆ ಭೇಟಿ ನೀಡಿತು. ಇಲ್ಲಿ ವಿದೇಶಾಂಗ ಕಾರ್ಯದರ್ಶಿಗಳು ಮತ್ತು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಉನ್ನತ ಮಟ್ಟದ ಕಾರ್ಯತಂತ್ರದ ಮಾತುಕತೆಗಳನ್ನು ನಡೆಸಿತು.
ಈ ಪ್ರಯತ್ನಗಳಿಗೆ ಪೂರಕವಾಗಿ, ಜಂಟಿ ನೌಕಾ ವ್ಯಾಯಾಮಗಳು ಕಡಲ ಭದ್ರತಾ ಸಹಕಾರವನ್ನು ಬಲಪಡಿಸಿವೆ. ಜೂನ್ 2025 ರಲ್ಲಿ ಹಿಂದೂ ಮಹಾಸಾಗರದಲ್ಲಿ, ಅಕ್ಟೋಬರ್ 2023ರಲ್ಲಿ ಗಿನಿ ಕೊಲ್ಲಿಯಲ್ಲಿ ಮತ್ತು ಜೂನ್ 2021ರಲ್ಲಿ ಅಡೆನ್ ಕೊಲ್ಲಿಯಲ್ಲಿ ಇಂತಹ ಸಮರಭ್ಯಾಸಗಳು ನಡೆದಿವೆ. ಜೊತೆಗೆ 2018 ಮತ್ತು 2019ರಲ್ಲಿ ಸೋಮಾಲಿಯಾ ಬಳಿ ಮಾನವೀಯ ನೆರವಿಗಾಗಿ ಜಂಟಿ ಬೆಂಗಾವಲು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.

ಸ್ವಚ್ಛ ಇಂಧನ ಮತ್ತು ಹವಾಮಾನ
ಇಂಧನ ಮತ್ತು ಹವಾಮಾನ ಸಹಕಾರವು ಭಾರತ-ಇಯು ಪಾಲುದಾರಿಕೆಯ ಕೇಂದ್ರ ಸ್ತಂಭವಾಗಿದೆ. ಇದು ಸುಸ್ಥಿರ ಅಭಿವೃದ್ಧಿ, ಹವಾಮಾನ ಕ್ರಮಗಳು ಮತ್ತು ಸ್ವಚ್ಛ ಇಂಧನ ಪರಿವರ್ತನೆಯ ಹಂಚಿಕೆಯ ಬದ್ಧತೆಗಳನ್ನು ಪ್ರತಿಬಿಂಬಿಸುತ್ತದೆ.
ಭಾರತ-ಇಯು ಇಂಧನ ಮತ್ತು ಹವಾಮಾನ ಒಡನಾಟದ ಕೇಂದ್ರಬಿಂದುವಾಗಿರುವುದು 'ಸ್ವಚ್ಛ ಇಂಧನ ಮತ್ತು ಹವಾಮಾನ ಪಾಲುದಾರಿಕೆ'. ಇದು 2016ರಲ್ಲಿ ಸ್ಥಾಪನೆಯಾಗಿದ್ದು, ಬೆಳೆಯುತ್ತಿರುವ ದ್ವಿಪಕ್ಷೀಯ ಸಹಕಾರದ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 2024ರಲ್ಲಿ ಇದರ ಮೂರನೇ ಹಂತವನ್ನು ಅಂಗೀಕರಿಸಲಾಯಿತು. 2018 ರಿಂದ ಯುರೋಪಿಯನ್ ಯೂನಿಯನ್ ಅಂತರಾಷ್ಟ್ರೀಯ ಸೌರ ಒಕ್ಕೂಟದ ಪಾಲುದಾರನಾಗಿದ್ದು, ಸೌರ ಇಂಧನ ವ್ಯಾಪ್ತಿಯನ್ನು ವಿಸ್ತರಿಸಲು ಬೆಂಬಲ ನೀಡುತ್ತಿದೆ. ಅದೇ ಸಮಯದಲ್ಲಿ, ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಭಾರತದ ಆಯ್ದ ನಗರಗಳಲ್ಲಿ ಮೆಟ್ರೋ ಮತ್ತು ನಗರ ರೈಲು ವ್ಯವಸ್ಥೆಗಳೂ ಸೇರಿದಂತೆ ಸುಸ್ಥಿರ ಸಾರಿಗೆ ಮತ್ತು ನಗರ ಸಂಚಾರ ಯೋಜನೆಗಳಿಗೆ ಧನಸಹಾಯ ನೀಡುತ್ತಿದೆ.
ಭಾರತ-ಇಯು ಸಹಕಾರವು ಕಡಲಾಚೆಯ ಗಾಳಿ ಇಂಧನ, ಅನಿಲ ಮೂಲಸೌಕರ್ಯ ಅಭಿವೃದ್ಧಿ, ಮೀಥೇನ್ ಹೊರಸೂಸುವಿಕೆ ಕಡಿತ, ಹೂಡಿಕೆಗಳು ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಸಹ ಒಳಗೊಂಡಿದೆ. ಮಾರ್ಚ್ 2021 ರಲ್ಲಿ ಇಯು 'ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ'ಕ್ಕೆ ಸೇರ್ಪಡೆಗೊಂಡಿರುವುದು ಹವಾಮಾನ-ನಿರೋಧಕ ಮೂಲಸೌಕರ್ಯಗಳಿಗೆ ಉಭಯ ಪಕ್ಷಗಳು ನೀಡುತ್ತಿರುವ ಆದ್ಯತೆಯನ್ನು ದೃಢಪಡಿಸುತ್ತದೆ. ಮುಂದುವರಿದ ವೈಜ್ಞಾನಿಕ ಕ್ಷೇತ್ರಗಳಲ್ಲಿ, ಜುಲೈ 2020 ರಲ್ಲಿ ಅಣುಶಕ್ತಿಯ ಶಾಂತಿಯುತ ಬಳಕೆಗಾಗಿ ಇಯುರಾಟಂ ಜೊತೆ ಸಂಶೋಧನೆ ಮತ್ತು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು 2017 ರಿಂದ ಭಾರತವು 'ಸರ್ನ್' ನ ಅಸೋಸಿಯೇಟ್ ಸದಸ್ಯ ರಾಷ್ಟ್ರವಾಗಿದೆ.
ಸಂಪರ್ಕ
ಭಾರತ ಮತ್ತು ಯುರೋಪಿಯನ್ ಯೂನಿಯನ್ ತಮ್ಮ ಪಾಲುದಾರಿಕೆಯ ಕಾರ್ಯತಂತ್ರದ ಸ್ತಂಭವಾಗಿ ಸಂಪರ್ಕ ವ್ಯವಸ್ಥೆಯಲ್ಲಿನ ಸಹಕಾರವನ್ನು ಸ್ಥಿರವಾಗಿ ವಿಸ್ತರಿಸಿವೆ. ಇದು ವಿವಿಧ ಪ್ರದೇಶಗಳಲ್ಲಿ ಸುಸ್ಥಿರ, ಅಂತರ್ಗತ ಮತ್ತು ಚೇತೋಹಾರಿ ಸಂಬಂಧಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ-ಇಯು ಸಂಪರ್ಕ ಉಪಕ್ರಮಗಳು ಆರ್ಥಿಕ ಏಕೀಕರಣವನ್ನು ಹೆಚ್ಚಿಸಲು ಮತ್ತು ದ್ವಿಪಕ್ಷೀಯ ಒಡನಾಟವನ್ನು ಮೀರಿ ಸಮತೋಲಿತ ಅಭಿವೃದ್ಧಿಯನ್ನು ಬೆಂಬಲಿಸಲು ಪ್ರಯತ್ನಿಸುತ್ತವೆ.
ಭಾರತ-ಇಯು ಸಂಪರ್ಕ ಪಾಲುದಾರಿಕೆ (2021): 2021 ರಲ್ಲಿ ಪ್ರಾರಂಭಿಸಲಾದ ಈ ಪಾಲುದಾರಿಕೆಯು ಸಾರಿಗೆ, ಡಿಜಿಟಲ್ ಮೂಲಸೌಕರ್ಯ ಮತ್ತು ಇಂಧನ ಜಾಲಗಳಲ್ಲಿ ಸಹಕಾರವನ್ನು ಬಲಪಡಿಸಲು ಶ್ರಮಿಸುತ್ತಿದೆ. ಇದು ಜನರು, ಸರಕುಗಳು, ಸೇವೆಗಳು, ದತ್ತಾಂಶ ಮತ್ತು ಬಂಡವಾಳದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
ತ್ರಿಪಕ್ಷೀಯ ಅಭಿವೃದ್ಧಿ ಸಹಕಾರ (ಜೂನ್ 2025): ಜೂನ್ 2025 ರಲ್ಲಿ, ಭಾರತ ಮತ್ತು ಯುರೋಪಿಯನ್ ಯೂನಿಯನ್ ಮೂರನೇ ದೇಶಗಳಲ್ಲಿ ಜಂಟಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು 'ತ್ರಿಪಕ್ಷೀಯ ಅಭಿವೃದ್ಧಿ ಸಹಕಾರ'ವನ್ನು ಮುನ್ನಡೆಸುವ ಆಡಳಿತಾತ್ಮಕ ವ್ಯವಸ್ಥೆಗೆ ಒಪ್ಪಿಕೊಂಡಿವೆ.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಸೆಪ್ಟೆಂಬರ್ 2023): ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ, ಭಾರತ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ಸೌದಿ ಅರೇಬಿಯಾ, ಯುಎಇ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರು 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' ಅಭಿವೃದ್ಧಿಗಾಗಿ ಸಹಕರಿಸಲು ತಿಳುವಳಿಕಾ ಪತ್ರವನ್ನು ಪ್ರಕಟಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ
ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರವು ಭಾರತ-ಇಯು ಪಾಲುದಾರಿಕೆಯ ಪ್ರಮುಖ ಸ್ತಂಭವಾಗಿದೆ. ಇದು ಸಹಯೋಗದ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಸಾಂಸ್ಥಿಕ ಚೌಕಟ್ಟುಗಳಿಂದ ಬೆಂಬಲಿತವಾಗಿದೆ.
ಉಭಯ ರಾಷ್ಟ್ರಗಳ ನಡುವಿನ ಒಡನಾಟವು 2007 ರಲ್ಲಿ ಸಹಿ ಹಾಕಲಾದ 'ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದ'ದ ಮೇಲೆ ಆಧಾರಿತವಾಗಿದೆ. ಜಂಟಿ ಸ್ಟೀರಿಂಗ್ ಸಮಿತಿಯು ಸ್ಮಾರ್ಟ್ ಗ್ರಿಡ್‌ಗಳು, ನೀರು, ಲಸಿಕೆಗಳು, ಮಾಹಿತಿ ತಂತ್ರಜ್ಞಾನ, ಧ್ರುವ ವಿಜ್ಞಾನ ಮತ್ತು ಯುರೋಪಿಯನ್ ರಿಸರ್ಚ್ ಕೌನ್ಸಿಲ್‌ನೊಂದಿಗೆ ಕೆಲಸ ಮಾಡುವ ಯುವ ವಿಜ್ಞಾನಿಗಳ ಸಂಚಾರದಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಮಾರ್ಗದರ್ಶನ ನೀಡುತ್ತಿದೆ.
ಜೊತೆಗೆ, ಭಾರತದ ಭೂವಿಜ್ಞಾನ ಸಚಿವಾಲಯ ಮತ್ತು ಯುರೋಪಿಯನ್ ಕಮಿಷನ್ ಜಂಟಿ ಧನಸಹಾಯ ವ್ಯವಸ್ಥೆಯನ್ನು ಸ್ಥಾಪಿಸಿವೆ. ಇದು ಯುರೋಪಿಯನ್ ಸಂಶೋಧನೆ ಮತ್ತು ನಾವೀನ್ಯತೆ ಚೌಕಟ್ಟು ಕಾರ್ಯಕ್ರಮವಾದ "ಹೊರೈಜನ್ 2020" ಅಡಿಯಲ್ಲಿ ಆಯ್ದ ಯೋಜನೆಗಳಲ್ಲಿ, ವಿಶೇಷವಾಗಿ ಹವಾಮಾನ ಬದಲಾವಣೆ ಮತ್ತು ಧ್ರುವ ಸಂಶೋಧನೆಯಲ್ಲಿ ಭಾರತೀಯರು ಭಾಗವಹಿಸಲು ಬೆಂಬಲ ನೀಡುತ್ತದೆ.
ಭಾರತ-ಇಯು ಬಾಹ್ಯಾಕಾಶ ಸಹಕಾರ
ಬಾಹ್ಯಾಕಾಶ ಸಹಕಾರವು ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಆಯಾಮವಾಗಿದೆ. ಇದು ದಶಕಗಳ ತಾಂತ್ರಿಕ ಸಹಯೋಗ ಮತ್ತು ಬೆಳೆಯುತ್ತಿರುವ ಸಾಂಸ್ಥಿಕ ಒಡನಾಟದ ಮೇಲೆ ನಿರ್ಮಿತವಾಗಿದೆ.
ಭಾರತ ಮತ್ತು ಇಯು ನಡುವಿನ ಬಾಹ್ಯಾಕಾಶ ಸಂಬಂಧವು 1980ರ ದಶಕದಷ್ಟು ಹಳೆಯದು. ಆಗ ಯುರೋಪ್‌ನ 'ಏರಿಯನ್' ಉಡಾವಣಾ ವಾಹನಗಳನ್ನು ಬಳಸಿ ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ತರುವಾಯ, ಯುರೋಪಿಯನ್ ಕಮಿಷನ್ ಮತ್ತು ಬಾಹ್ಯಾಕಾಶ ಇಲಾಖೆ ನಡುವಿನ ಸಹಕಾರ ಒಪ್ಪಂದವು ಭೂ-ಪರಿವೀಕ್ಷಣೆ ಕ್ಷೇತ್ರದಲ್ಲಿ ಸಹಯೋಗವನ್ನು ಬಲಪಡಿಸಿತು. ಇದರಲ್ಲಿ ಭೂ-ಪರಿವೀಕ್ಷಣಾ ಉಪಗ್ರಹಗಳಿಂದ ದತ್ತಾಂಶವನ್ನು ಪರಸ್ಪರ ಪಡೆಯುವ ಸೌಲಭ್ಯವೂ ಸೇರಿದೆ. ಇದರೊಂದಿಗೆ, ಇಸ್ರೋ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಪರಸ್ಪರ ಬೆಂಬಲ ಒಪ್ಪಂದಗಳಿಗೆ ಸಹಿ ಹಾಕಿವೆ. ಇದು ನ್ಯಾವಿಗೇಷನ್, ಕಾರ್ಯಾಚರಣೆಗಳು ಮತ್ತು ದತ್ತಾಂಶ ನಿರ್ವಹಣೆಯಲ್ಲಿ ವಿನಿಮಯವನ್ನು ಸಾಧ್ಯವಾಗಿಸಿದೆ. ವಿಶೇಷವಾಗಿ ಚಂದ್ರಯಾನ-3 ಮತ್ತು ಆದಿತ್ಯ-ಎಲ್1 ನಂತಹ ಪ್ರಮುಖ ಕಾರ್ಯಾಚರಣೆಗಳ ಸಮಯದಲ್ಲಿ ಈ ಸಹಕಾರ ಮಹತ್ವದ್ದಾಗಿತ್ತು. ಕಾರ್ಯಾಚರಣೆಯ ಸಹಕಾರಕ್ಕೆ ಮತ್ತೊಂದು ಸಾಕ್ಷಿಯೆಂದರೆ, ಡಿಸೆಂಬರ್ 2024 ರಲ್ಲಿ ಇಸ್ರೋದ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಮೂಲಕ ಇಎಸ್‌ಎನ ಪ್ರೋಬಾ-3 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಈ ಕಾರ್ಯಾಚರಣೆಗಳ ಜೊತೆಗೆ ಉನ್ನತ ಮಟ್ಟದ ಸಾಂಸ್ಥಿಕ ಒಡನಾಟವೂ ಮುಂದುವರಿದಿದೆ. ಫೆಬ್ರವರಿ 2025 ರಲ್ಲಿ, ಇಯು ರಕ್ಷಣಾ ಮತ್ತು ಬಾಹ್ಯಾಕಾಶ ಕಮಿಷನರ್ ಅವರು ನವದೆಹಲಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರನ್ನು ಭೇಟಿ ಮಾಡಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಇದರ ನಂತರ, ನವೆಂಬರ್ 2025 ರಲ್ಲಿ ಬ್ರಸೆಲ್ಸ್‌ನಲ್ಲಿ ಉದ್ಘಾಟನಾ 'ಭಾರತ-ಇಯು ಬಾಹ್ಯಾಕಾಶ ಸಂವಾದ' ನಡೆಯಿತು, ಇದು ವ್ಯವಸ್ಥಿತ ಚರ್ಚೆಗಳಿಗಾಗಿ ಒಂದು ಮೀಸಲಾದ ವೇದಿಕೆಯನ್ನು ಒದಗಿಸಿತು. ಹೆಚ್ಚುವರಿಯಾಗಿ, ಮೇ 2025 ರಲ್ಲಿ ಇಸ್ರೋ ಮತ್ತು ಇಎಸ್‌ಎ 'ಮಾನವ ಬಾಹ್ಯಾಕಾಶ ಪರಿಶೋಧನೆ' ಸಹಕಾರಕ್ಕಾಗಿ ಜಂಟಿ ಉದ್ದೇಶದ ಹೇಳಿಕೆಗೆ ಸಹಿ ಹಾಕಿದ್ದು, ಇದು ಭವಿಷ್ಯದ ಬಾಹ್ಯಾಕಾಶ ಕ್ಷೇತ್ರಗಳತ್ತ ಸಹಯೋಗದ ವಿಸ್ತರಣೆಯನ್ನು ಸೂಚಿಸುತ್ತದೆ.
ವಲಸೆ ಮತ್ತು ಸಂಚಾರ
ಆರಂಭಿಕ ವಲಸೆ ಮಾತುಕತೆಗಳು ಇಂದು 2016 ರ 'ವಲಸೆ ಮತ್ತು ಸಂಚಾರದ ಸಾಮಾನ್ಯ ಕಾರ್ಯಸೂಚಿ'ನಂತಹ ವ್ಯವಸ್ಥಿತ ಚೌಕಟ್ಟುಗಳಾಗಿ ವಿಕಸನಗೊಂಡಿವೆ. ಇವು ಇಯು ರಾಷ್ಟ್ರಗಳ ಜನಸಂಖ್ಯಾ ಅಗತ್ಯತೆಗಳನ್ನು ಪೂರೈಸಲು ಮತ್ತು ಭಾರತದ ಹೆಚ್ಚುವರಿ ಕಾರ್ಯಪಡೆಗೆ ಅವಕಾಶ ನೀಡಲು ಕುಶಲ ಕಾರ್ಮಿಕರ ಹರಿವು, ಸಾಮಾಜಿಕ ಭದ್ರತೆ ಮತ್ತು ಕ್ರಮಬದ್ಧವಾದ ವಲಸೆಗೆ ಒತ್ತು ನೀಡುತ್ತವೆ.
ನವೆಂಬರ್ 2025 ರಲ್ಲಿ ನಡೆದ 9 ನೇ ಉನ್ನತ ಮಟ್ಟದ ಸಂವಾದವು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ್ದು, ಐಟಿ ವೃತ್ತಿಪರರಿಗಾಗಿ ಭಾರತದಲ್ಲಿ ಪ್ರಾಯೋಗಿಕವಾಗಿ 'ಯುರೋಪಿಯನ್ ಲೀಗಲ್ ಗೇಟ್‌ವೇ ಆಫೀಸ್' ಅನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ ಮತ್ತು ಯುವ ವೃತ್ತಿಪರರಿಗಾಗಿ ಸಮಗ್ರ ಸಂಚಾರ ಚೌಕಟ್ಟುಗಳನ್ನು ಅನ್ವೇಷಿಸುತ್ತಿದೆ. 2024 ರ ಅಂತ್ಯದ ವೇಳೆಗೆ, ಒಟ್ಟು 9,31,607 ಭಾರತೀಯ ನಾಗರಿಕರು ಇಯುನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಬ್ಲೂ ಕಾರ್ಡ್ ಹೊಂದಿರುವವರ ಪೈಕಿ ಭಾರತೀಯರೇ ಅತಿದೊಡ್ಡ ಗುಂಪಾಗಿದ್ದಾರೆ (20.8%, ಅಂದರೆ 2024 ರಲ್ಲಿ 16,268 ಕಾರ್ಡ್‌ದಾರರು).
ಕಳೆದ 20 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಯುರೋಪಿನಾದ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು 'ಎರಾಸ್ಮಸ್ ಮುಂಡಸ್' ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕಾರ್ಯತಂತ್ರದ ದೃಷ್ಟಿಯಿಂದ, ಇದು ವಲಸೆ ಪಾಲುದಾರಿಕೆಯ ಮೂಲಕ ಭಾರತದ ರಾಜತಾಂತ್ರಿಕ ವ್ಯಾಪ್ತಿಯನ್ನು ಬೆಂಬಲಿಸುತ್ತದೆ. ಹೊಸ ಯುರೋಪಿಯನ್ ಮಿಷನ್‌ಗಳ ವಿಸ್ತರಣೆಯ ಮಧ್ಯೆ ಇದು ಮಾನವ-ಕೇಂದ್ರಿತ ಸಂಬಂಧಗಳನ್ನು ಮತ್ತು ಜಾಗತಿಕ ಪ್ರತಿಭೆಗಳ ಹರಿವನ್ನು ಹೆಚ್ಚಿಸುತ್ತದೆ. ಸುಗಮಗೊಳಿಸಲಾದ ಕಾನೂನು ಮಾರ್ಗಗಳು ಮತ್ತು ಶೈಕ್ಷಣಿಕ ಅರ್ಹತೆಗಳ ಪರಸ್ಪರ ಮಾನ್ಯತೆಯು ಭಾರತವನ್ನು ಇಯು ರಾಷ್ಟ್ರಗಳಿಗೆ ಪ್ರಮುಖ ಪ್ರತಿಭೆಯ ಮೂಲವನ್ನಾಗಿ ರೂಪಿಸುತ್ತಿದೆ.
ಉಪಸಂಹಾರ
ಭಾರತ ಮತ್ತು ಇಯು ನಡುವಿನ ಸಂಬಂಧಗಳು ಹಂಚಿಕೆಯ ಮೌಲ್ಯಗಳು, ಬೆಳೆಯುತ್ತಿರುವ ಆರ್ಥಿಕ ಬಾಂಧವ್ಯಗಳು ಮತ್ತು ಸಾಮಾನ್ಯ ವ್ಯೂಹಾತ್ಮಕ ಹಿತಾಸಕ್ತಿಗಳ ಆಧಾರದ ಮೇಲೆ ಬಲವಾದ ಮತ್ತು ಭವಿಷ್ಯದ ದೃಷ್ಟಿಕೋನ ಹೊಂದಿರುವ ಪಾಲುದಾರಿಕೆಯಾಗಿ ವಿಕಸನಗೊಂಡಿವೆ. ಹೆಚ್ಚುತ್ತಿರುವ ವ್ಯಾಪಾರ, ಸ್ಥಿರವಾದ ಇಯು ಹೂಡಿಕೆಗಳು ಹಾಗೂ ಸಂಪರ್ಕ, ಸ್ವಚ್ಛ ಇಂಧನ, ಡಿಜಿಟಲ್ ತಂತ್ರಜ್ಞಾನಗಳು, ಭದ್ರತೆ ಮತ್ತು ಕಾರ್ಮಿಕರ ಸಂಚಾರದಂತಹ ಕ್ಷೇತ್ರಗಳಲ್ಲಿನ ಸಹಕಾರವು ಸ್ಪಷ್ಟ ಮತ್ತು ಪ್ರಾಯೋಗಿಕ ಫಲಿತಾಂಶಗಳನ್ನು ನೀಡುತ್ತಿರುವ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ.
'ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ', 'ಗ್ಲೋಬಲ್ ಗೇಟ್‌ವೇ', 'ಐಎಂಇಸಿ' ನಂತಹ ಉಪಕ್ರಮಗಳು ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿನ ಪ್ರಗತಿಯು ಭಾರತ ಮತ್ತು ಇಯು ನಡುವಿನ ಆಳವಾದ ಸಾಂಸ್ಥಿಕ ಹೊಂದಾಣಿಕೆಯನ್ನು ಎತ್ತಿ ತೋರಿಸುತ್ತವೆ. ಈ ವೇಗವನ್ನು ಮತ್ತಷ್ಟು ಹೆಚ್ಚಿಸಲು, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಉರ್ಸುಲಾ ವಾನ್ ಡರ್ ಲೇಯನ್ ಅವರಿಗೆ 2026ರ ಜನವರಿ 25 ರಿಂದ 27ರವರೆಗೆ ಸರ್ಕಾರಿ ಭೇಟಿಗಾಗಿ ನೀಡಿರುವ ಆಹ್ವಾನವು, ಭಾರತ-ಇಯು ಸಂಬಂಧಗಳನ್ನು ತನ್ನ ಜಾಗತಿಕ ಮತ್ತು ಯುರೋಪಿಯನ್ ಕಾರ್ಯತಂತ್ರದ ಪ್ರಮುಖ ಸ್ತಂಭವನ್ನಾಗಿ ಮಾಡುವ ಭಾರತ ಸರ್ಕಾರದ ಉದ್ದೇಶವನ್ನು ದೃಢಪಡಿಸುತ್ತದೆ.
References:
Ministry of External Affairs
Eurostat
European Union Commission
- https://ec.europa.eu/commission/presscorner/detail/en/ip_25_2116
India–EU Partnership: India’s Growing Engagement with European Union
*****
(Explainer ID: 157084)
आगंतुक पटल : 8
Provide suggestions / comments