• Sitemap
  • Advance Search
Economy

ಒಂದು ಜಿಲ್ಲೆ, ಒಂದು ಉತ್ಪನ್ನ

ಸ್ಥಳೀಯ ಬೀದಿಗಳಿಂದ ಜಾಗತಿಕ ಮಾರುಕಟ್ಟೆಯವರೆಗೆ ಒಂದು ಪಯಣ

Posted On: 23 JAN 2026 10:05AM

ಪ್ರಮುಖ ಮಾರ್ಗಸೂಚಿಗಳು:

  • ಒಡಿಒಪಿ ಸ್ಥಳೀಯ ಕುಶಲಕರ್ಮಿಗಳನ್ನು ಸಬಲೀಕರಿಸುತ್ತದೆ, ಸಾಂಪ್ರದಾಯಿಕ ಕೌಶಲ್ಯಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಜೀವನೋಪಾಯವನ್ನು ಸೃಷ್ಟಿಸುತ್ತದೆ.
  • ಈ ಉಪಕ್ರಮವು ದೇಶಾದ್ಯಂತ ವಿಸ್ತರಿಸಲ್ಪಟ್ಟಿದ್ದು, 770ಕ್ಕೂ ಹೆಚ್ಚು ಜಿಲ್ಲೆಗಳನ್ನು ಆರ್ಥಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದೆ.
  • ಉತ್ತರ ಪ್ರದೇಶದಲ್ಲಿ ಪ್ರಾರಂಭವಾದ ಈ ಯೋಜನೆಯು, ಇಂದು ಸ್ಥಳೀಯ ಆರ್ಥಿಕ ರೂಪಾಂತರದಲ್ಲಿ ಭಾರತದ ಅತ್ಯಂತ ಹೆಚ್ಚು ಆಚರಿಸಲ್ಪಡುವ ಉಪಕ್ರಮವಾಗಿದೆ.
  • ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್-ಒಡಿಒಪಿ ಬಜಾರ್‌ನಂತಹ ಇ-ಕಾಮರ್ಸ್ ಉಪಕ್ರಮಗಳು ಭಾರತದ ಅತ್ಯುತ್ತಮ ಒಡಿಒಪಿ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ ಮತ್ತು ವೈಶಿಷ್ಟ್ಯಗೊಳಿಸುತ್ತವೆ.

ಪೀಠಿಕೆ: ಸ್ಥಳೀಯ ಕಲೆ ರಾಷ್ಟ್ರೀಯ ಕ್ರಾಂತಿಗೆ ನಾಂದಿ ಹಾಡಿದ ಕ್ಷಣ

ಉತ್ತರ ಪ್ರದೇಶದ ಹೃದಯಭಾಗದಲ್ಲಿ ಮೊರಾದಾಬಾದ್ ಎಂಬ ನಗರವಿದೆ. ಇಲ್ಲಿ ತಲೆಮಾರುಗಳಿಂದ ಕುಶಲಕರ್ಮಿಗಳು ಕರಗಿದ ಲೋಹಕ್ಕೆ ಆಕರ್ಷಕ ಹಿತ್ತಾಳೆ ಕಲೆಯ ರೂಪ ನೀಡುತ್ತಾ ಬಂದಿದ್ದಾರೆ. ದಶಕಗಳ ಕಾಲ ಈ ಕುಶಲಕರ್ಮಿಗಳು ತಮ್ಮ ಕೌಶಲ್ಯಗಳನ್ನು ಕುಟುಂಬದ ಕಾರ್ಯಾಗಾರಗಳಲ್ಲಿಯೇ ಪೋಷಿಸಿಕೊಂಡು ಬಂದಿದ್ದರು, ಆದರೆ ಅವರ ಪ್ರತಿಭೆ ತಮ್ಮ ನಗರಗಳ ಆಚೆಗೆ ಜಗತ್ತಿಗೆ ಅಷ್ಟಾಗಿ ಪರಿಚಿತವಾಗಿರಲಿಲ್ಲ.

2018ರಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು. ರಾಜ್ಯ ಸರ್ಕಾರದ ಒಂದು ನವೀನ ಪ್ರಯೋಗದ ಭಾಗವಾಗಿ, ಮೊರಾದಾಬಾದ್‌ನ ಹಿತ್ತಾಳೆ ಕರಕುಶಲತೆಯನ್ನು ಒಂದು ದಿಟ್ಟ ಹೊಸ ಉಪಕ್ರಮದ ಅಡಿಯಲ್ಲಿ ಜಿಲ್ಲೆಯ ವಿಶಿಷ್ಟ ಉತ್ಪನ್ನವಾಗಿ ಆಯ್ಕೆ ಮಾಡಲಾಯಿತು: ಅದೇ 'ಒಂದು ಜಿಲ್ಲೆ ಒಂದು ಉತ್ಪನ್ನ' (ಒಡಿಒಪಿ).

ಈ ಆಲೋಚನೆಯು ಸರಳವಾಗಿದ್ದರೂ ಕ್ರಾಂತಿಕಾರಿಯಾಗಿತ್ತು - ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವಿಶಿಷ್ಟ ಉತ್ಪನ್ನವನ್ನು ಗುರುತಿಸುವುದು, ಅದಕ್ಕೆ ಬ್ರ್ಯಾಂಡಿಂಗ್, ಮಾರುಕಟ್ಟೆ ಪ್ರವೇಶ, ಸಾಂಸ್ಥಿಕ ಬೆಂಬಲ ಮತ್ತು ವ್ಯಾಪಕ ಪ್ರಚಾರವನ್ನು ಒದಗಿಸುವುದು ಹಾಗೂ ಆ ಉತ್ಪನ್ನದ ಹಿಂದಿರುವ ಸಮುದಾಯವನ್ನು ಸಬಲೀಕರಿಸುವುದು. ಇಂದು, ಈ ಕಲಾಕೃತಿಗಳನ್ನು ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಸ್ಥಳೀಯ ಹೆಮ್ಮೆ ಹೆಚ್ಚಿದೆ, ಆದಾಯ ಬೆಳೆದಿದೆ ಮತ್ತು ಒಂದು ಕಾಲದಲ್ಲಿ ಆರ್ಥಿಕವಾಗಿ ತೆರೆಮರೆಯಲ್ಲಿದ್ದ ಜಿಲ್ಲೆಯು ಇಂದು ಸ್ವಾವಲಂಬಿ ಸಮೃದ್ಧಿಯ ಮಾದರಿಯಾಗಿ ಹೊರಹೊಮ್ಮಿದೆ.

ಮೊರಾದಾಬಾದ್ ಒಂದು ಅಪವಾದವಾಗಿ ಉಳಿಯಲಿಲ್ಲ; ಬದಲಿಗೆ ಇದು ಒಂದು ದೊಡ್ಡ ಕಥೆಯ ಮೊದಲ ಅಧ್ಯಾಯವಾಯಿತು. ಡಿಸೆಂಬರ್ 2025 ರ ಹೊತ್ತಿಗೆ, ಒಡಿಒಪಿ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಇದು 770ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಲ್ಪಟ್ಟಿದೆ. ಇದು ಲಕ್ಷಾಂತರ ಉದ್ಯಮಿಗಳು, ಕುಶಲಕರ್ಮಿಗಳು ಮತ್ತು ರೈತರ ಜೀವನವನ್ನು ಸ್ಪರ್ಶಿಸಿದೆ. ಉತ್ತರ ಪ್ರದೇಶದಲ್ಲಿ ಆರಂಭವಾದ ಈ ಯೋಜನೆಯು ಇಂದು ಸ್ಥಳೀಯ ಆರ್ಥಿಕ ರೂಪಾಂತರದಲ್ಲಿ ಭಾರತದ ಅತ್ಯಂತ ಶ್ಲಾಘನೀಯ ಉಪಕ್ರಮವಾಗಿದೆ.

ಒಡಿಒಪಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರೇರಣೆ

  • ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ

  • ಕುಶಲಕರ್ಮಿಗಳು ಮತ್ತು ಉತ್ಪಾದಕರ ಸಬಲೀಕರಣ

  • ರಫ್ತು ಉತ್ತೇಜನ

  • ಪರಂಪರೆಯ ಸಂರಕ್ಷಣೆ

  • ಆರ್ಥಿಕ ಪ್ರಭಾವ

  • ಉದ್ಯೋಗ ಸೃಷ್ಟಿ

  • ಜಾಗತಿಕ ಮಾನ್ಯತೆ

ಪ್ರತಿ ಜಿಲ್ಲೆಯಿಂದ ಒಂದು ವಿಶಿಷ್ಟ ಉತ್ಪನ್ನವನ್ನು ಗುರುತಿಸಿ ಮತ್ತು ಬ್ರ್ಯಾಂಡ್ ಮಾಡುವ ಮೂಲಕ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಒಡಿಒಪಿ ಶ್ರಮಿಸುತ್ತದೆ. ಇದರ ಜೊತೆಗೆ, ಸಂಘಟಿತ ಸಾಂಸ್ಥಿಕ ಬೆಂಬಲದ ಮೂಲಕ ಕುಶಲಕರ್ಮಿಗಳು ಮತ್ತು ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುತ್ತದೆ. ಈ ಉಪಕ್ರಮವು ಆದಾಯವನ್ನು ಹೆಚ್ಚಿಸುವ ಮೂಲಕ, ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಮತ್ತು ಜಿಲ್ಲಾ ಮಟ್ಟದ ಮೌಲ್ಯವರ್ಧಿತ ಸರಣಿಗಳಾದ್ಯಂತ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸ್ಪಷ್ಟವಾದ ಆರ್ಥಿಕ ಪ್ರಭಾವವನ್ನು ಬೀರಿದೆ. ಬ್ರ್ಯಾಂಡಿಂಗ್, ಪ್ರದರ್ಶನಗಳು ಮತ್ತು ಜಾಗತಿಕ ವೇದಿಕೆಗಳ ಮೂಲಕ, ಒಡಿಒಪಿ ಭಾರತೀಯ ಉತ್ಪನ್ನಗಳ ಜಾಗತಿಕ ಮಾನ್ಯತೆಯನ್ನು ಹೆಚ್ಚಿಸಿದೆ, ಜೊತೆಗೆ ಸುಸ್ಥಿರ ಪದ್ಧತಿಗಳು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಬೆಂಬಲಿಸಿದೆ.

ಬೆಳವಣಿಗೆಯ ಇಂಜಿನ್ಗಳಾಗಿ ಜಿಲ್ಲೆಗಳು ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ನೇತೃತ್ವದ ಒಡಿಒಪಿ ಉಪಕ್ರಮವು, ಪ್ರತಿ ಜಿಲ್ಲೆಯ ವಿಶಿಷ್ಟ ಆರ್ಥಿಕ ಸಾಮರ್ಥ್ಯವನ್ನು ಅನಾವರಣಗೊಳಿಸಲು, ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಸ್ಥಳೀಯ ಕುಶಲಕರ್ಮಿಗಳು ಹಾಗೂ ಉದ್ಯಮಿಗಳು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಸಾಂಸ್ಕೃತಿಕ ಪರಂಪರೆಯನ್ನು ಭಾರತದ ವಿಶಾಲ ಅಭಿವೃದ್ಧಿಯ ಆದ್ಯತೆಗಳೊಂದಿಗೆ ಜೋಡಿಸುವ ಮೂಲಕ, ಇದು ಸಾಂಪ್ರದಾಯಿಕ ಕೌಶಲ್ಯಗಳನ್ನು ಸುಸ್ಥಿರ ಆರ್ಥಿಕ ಇಂಜಿನ್ ಆಗಿ ಪರಿವರ್ತಿಸುತ್ತದೆ.

ಈ ಉಪಕ್ರಮದ ಗುರಿಗಳೆಂದರೆ:

ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸುವುದು

 

ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಅಂತರ್ಗತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಿಲ್ಲೆಯ ಆರ್ಥಿಕ ಸಾಮರ್ಥ್ಯಗಳನ್ನು ಅನಾವರಣಗೊಳಿಸುವುದು.

ಉದ್ಯೋಗ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಸಬಲೀಕರಿಸುವುದು

ರೈತರು, ಕುಶಲಕರ್ಮಿಗಳು, ನೇಯ್ಗೆಯವರು ಮತ್ತು ಸ್ಥಳೀಯ ಉತ್ಪಾದಕರನ್ನು ಸಬಲೀಕರಿಸುವ ಮೂಲಕ ಜೀವನೋಪಾಯವನ್ನು ಸೃಷ್ಟಿಸುವುದು ಹಾಗೂ ಆ ಮೂಲಕ 'ಆತ್ಮನಿರ್ಭರ ಭಾರತ'ದ ಗುರಿಗಳನ್ನು ಮುನ್ನಡೆಸುವುದು.

ರಾಷ್ಟ್ರೀಯ ಉತ್ಪಾದನಾ ಮಿಷನ್ಗಳೊಂದಿಗೆ ಜೋಡಣೆ

ದೇಶೀಯ ಸಾಮರ್ಥ್ಯಗಳು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು 'ಮೇಕ್ ಇನ್ ಇಂಡಿಯಾ', 'ವೋಕಲ್ ಫಾರ್ ಲೋಕಲ್'  ಮತ್ತು 'ರಫ್ತು ಕೇಂದ್ರಗಳಾಗಿ ಜಿಲ್ಲೆಗಳು'  ನಂತಹ ಉಪಕ್ರಮಗಳೊಂದಿಗೆ ಸಂಯೋಜಿಸುವುದು.

ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು

ಮಾರಾಟ ಮತ್ತು ಪ್ರಚಾರವನ್ನು ಹೆಚ್ಚಿಸಲು, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ನಲ್ಲಿನ ಮೀಸಲಾದ ಒಡಿಒಪಿ ಮಳಿಗೆ ಹಾಗೂ ರಾಜ್ಯ ಮಟ್ಟದ ಇ-ಕಾಮರ್ಸ್ ವೇದಿಕೆಗಳು ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರುಕಟ್ಟೆ ಸಂಪರ್ಕಗಳನ್ನು ವಿಸ್ತರಿಸುವುದು.

ಒಡಿಒಪಿ ಅಡಿಯಲ್ಲಿ ಸಾಂಸ್ಥಿಕ ಆಡಳಿತ ಮತ್ತು ಉತ್ಪನ್ನ ಆಯ್ಕೆಯ ಚೌಕಟ್ಟು

ಒಡಿಒಪಿ ಯೋಜನೆಯ ಯಶಸ್ಸು ಅದರ ಸುಲಭವಾಗಿ ಹೊಂದಿಕೊಳ್ಳುವ ಮತ್ತು ಸುಸಂಘಟಿತ ಆಡಳಿತ ಮಾದರಿಯಲ್ಲಿದೆ. ಇದು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳ ಜಂಟಿ ಸಹಯೋಗದ ಪ್ರಯತ್ನಗಳ ಮೂಲಕ ಅನುಷ್ಠಾನಗೊಳ್ಳುತ್ತಿದೆ.

ಒಡಿಒಪಿ ಉಪಕ್ರಮದ ಅಡಿಯಲ್ಲಿ, ಆಯಾ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸರ ವ್ಯವಸ್ಥೆಯನ್ನು ಆಧರಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ಪನ್ನಗಳನ್ನು ಆಯ್ಕೆ ಮಾಡುತ್ತವೆ. ಈ ಅಂತಿಮ ಪಟ್ಟಿಯನ್ನು ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಗೆ ಸಲ್ಲಿಸಲಾಗುತ್ತದೆ.

ಜವಳಿ ಮತ್ತು ಆಹಾರದಿಂದ ಹಿಡಿದು ಕರಕುಶಲ ವಸ್ತುಗಳು ಮತ್ತು ಖನಿಜಗಳವರೆಗೆ ವಿವಿಧ ವಲಯಗಳನ್ನು ಒಳಗೊಂಡ 1,200ಕ್ಕೂ ಹೆಚ್ಚು ಒಡಿಒಪಿ ಉತ್ಪನ್ನಗಳನ್ನು ಡಿಪಿಐಐಟಿ ನ ಡಿಜಿಟಲ್ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ -ಒಡಿಒಪಿ ಬಜಾರ್‌ನಂತಹ ಇ-ಕಾಮರ್ಸ್ ಉಪಕ್ರಮಗಳ ಮೂಲಕ, ಭಾರತದ ಅತ್ಯುತ್ತಮ ಒಡಿಒಪಿ ಉತ್ಪನ್ನಗಳನ್ನು ವಿಶಾಲವಾದ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ಕುಶಲಕರ್ಮಿಗಳನ್ನು ಸಬಲೀಕರಿಸುವುದಲ್ಲದೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತಿದೆ.

ಉತ್ತರ ಪ್ರದೇಶ: ದೇಶಕ್ಕೆ ಒಂದು ಮಾದರಿ

ಒಡಿಒಪಿ ಉಪಕ್ರಮದ ಹಿಂದಿನ ಪ್ರವರ್ತಕ ರಾಜ್ಯವಾದ ಉತ್ತರ ಪ್ರದೇಶವು ಈ ಕಾರ್ಯಕ್ರಮದ ಅಡಿಯಲ್ಲಿ ಗಮನಾರ್ಹ ಆರ್ಥಿಕ ಪರಿವರ್ತನೆಯನ್ನು ಕಂಡಿದೆ. ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2025 ರಲ್ಲಿ, ಒಡಿಒಪಿ ಅಭೂತಪೂರ್ವ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆಯನ್ನು ಪಡೆಯಿತು. ಈ ಉಪಕ್ರಮವು ಉತ್ತರ ಪ್ರದೇಶದ ಜಿಲ್ಲಾ-ನಿರ್ದಿಷ್ಟ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲು ಹೇಗೆ ಶಕ್ತಗೊಳಿಸಿದೆ ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಯುಪಿಐಟಿಎಸ್‌ 2025 ರ ಒಡಿಒಪಿ ಪೆವಿಲಿಯನ್‌ನಲ್ಲಿ 466 ಮಳಿಗೆಗಳಿದ್ದು, ಇವು ₹20.77 ಕೋಟಿ ಮೌಲ್ಯದ ವ್ಯಾಪಾರ ಅವಕಾಶಗಳು ಮತ್ತು ಒಪ್ಪಂದಗಳನ್ನು ಸೃಷ್ಟಿಸಿದವು.

ಅದೇ ರೀತಿ, ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ 2025 ರ ಸಮಯದಲ್ಲಿ, ಒಡಿಒಪಿ ಸಾಂಪ್ರದಾಯಿಕ ಕೌಶಲ್ಯಗಳಿಗೆ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿತು. ಮೀಸಲಾದ 6,000 ಚದರ ಮೀಟರ್ ಪ್ರದರ್ಶನ ವಲಯವು ದೇಶಾದ್ಯಂತದ ಕುಶಲಕರ್ಮಿಗಳನ್ನು ಒಂದುಗೂಡಿಸಿತು. ಇಲ್ಲಿ ಬನಾರಸಿ ಬ್ರೊಕೇಡ್, ಕುಶಿನಗರದ ಕಾರ್ಪೆಟ್‌ಗಳು, ಫಿರೋಜಾಬಾದ್ ಗಾಜಿನ ವಸ್ತುಗಳು, ವಾರಣಾಸಿಯ ಮರದ ಆಟಿಕೆಗಳು, ಲೋಹದ ಕರಕುಶಲ ವಸ್ತುಗಳು ಮತ್ತು ಕಾಶಿ ಪ್ರದೇಶದ 34 ಉತ್ಪನ್ನಗಳು ಸೇರಿದಂತೆ ಉತ್ತರ ಪ್ರದೇಶದ ಒಟ್ಟು 75 ಜಿಐ (GI) ಟ್ಯಾಗ್ ಹೊಂದಿರುವ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ಪ್ರದರ್ಶಿಸಲಾಯಿತು.

ಉತ್ತರ ಪ್ರದೇಶದಲ್ಲಿ ಉಂಟಾದ ಪ್ರಭಾವ

  • ರಫ್ತು ಪ್ರಮಾಣವು 76% ರಷ್ಟು ಹೆಚ್ಚಳವಾಗಿದೆ, ಅಂದರೆ 2017-18 ರಲ್ಲಿ ಇದ್ದ ₹ 88,967 ಕೋಟಿಗಳಿಂದ 2023-24 ರ ಹೊತ್ತಿಗೆ ₹ 1.71 ಲಕ್ಷ ಕೋಟಿಗಳಿಗೆ ಗಣನೀಯವಾಗಿ ಏರಿಕೆಯಾಗಿದೆ.
  • ಒಡಿಒಪಿ ಮಾರ್ಜಿನ್ ಮನಿ ಯೋಜನೆಯಡಿ ₹ 6,000 ಕೋಟಿ ಮೌಲ್ಯದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.
  • ಒಡಿಒಪಿ ಕೌಶಲ ಅಭಿವೃದ್ಧಿ ಮತ್ತು ಟೂಲ್‌ಕಿಟ್ ವಿತರಣಾ ಯೋಜನೆಯಡಿ 1.25 ಕೋಟಿಗೂ ಹೆಚ್ಚು ಒಡಿಒಪಿ ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗಿದೆ ಮತ್ತು ಆಧುನಿಕ ಒಡಿಒಪಿ ಟೂಲ್‌ಕಿಟ್‌ಗಳನ್ನು ಒದಗಿಸಲಾಗಿದೆ.

ಪಿಎಂ ಏಕ್ತಾ ಮಾಲ್: ಭಾರತದ ಕುಶಲಕರ್ಮಿ ಪರಂಪರೆಯ ಪ್ರತಿಷ್ಠಿತ ಪ್ರವೇಶದ್ವಾರಗಳು

ಪಿಎಂ ಏಕ್ತಾ ಮಾಲ್‌ಗಳನ್ನು (ಏಕತಾ ಮಾಲ್‌ಗಳು) ಒಡಿಒಪಿ, ಜಿಐ ಮತ್ತು ಕರಕುಶಲ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರಕ್ಕಾಗಿ ಮೀಸಲಾದ ಚಿಲ್ಲರೆ ವ್ಯಾಪಾರ ಹಾಗೂ ಪ್ರದರ್ಶನ ಕೇಂದ್ರಗಳನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ. ಪ್ರತಿ ಮಾಲ್‌ನಲ್ಲಿ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ನಿರ್ದಿಷ್ಟ ಸ್ಥಳಾವಕಾಶವನ್ನು ಕಲ್ಪಿಸಲು ಯೋಜಿಸಲಾಗಿದೆ. ಇದು ಜಿಲ್ಲಾ ಮಟ್ಟದ ವಿಶಿಷ್ಟ ಉತ್ಪನ್ನಗಳಿಗೆ ವಿಶಾಲವಾದ ಮಾರುಕಟ್ಟೆ ಪ್ರವೇಶ, ಹೆಚ್ಚಿನ ಮಾನ್ಯತೆ ಮತ್ತು ಗ್ರಾಹಕರನ್ನು ತಲುಪುವ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಮುಖ್ಯಾಂಶಗಳು

  • ಒಂದೇ ಸೂರಿನಡಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಾದ ಸ್ಥಳಗಳು ಮತ್ತು ಜಿಲ್ಲಾ ಪ್ರದರ್ಶನಗಳ ಮೂಲಕ ಭಾರತದ ವೈವಿಧ್ಯತೆಯನ್ನು ಆಚರಿಸುತ್ತದೆ.

  • ಕುಶಲಕರ್ಮಿಗಳು ಮತ್ತು ಉದ್ಯಮಿಗಳನ್ನು ಸಬಲೀಕರಿಸಲು ಪ್ರತಿ ರಾಜ್ಯಕ್ಕೆ ಕನಿಷ್ಠ ₹100 ಕೋಟಿ ಸೇರಿದಂತೆ ಒಟ್ಟು ₹5,000 ಕೋಟಿ ಬಡ್ಡಿ ರಹಿತ ಸಹಾಯಧನವನ್ನು ಒದಗಿಸುತ್ತದೆ.

  • 27 ರಾಜ್ಯಗಳಲ್ಲಿ 29 ಏಕ್ತಾ ಮಾಲ್‌ಗಳಿಗೆ ಅನುಮೋದನೆ ನೀಡುವ ಮೂಲಕ ಕ್ಷಿಪ್ರ ಅನುಷ್ಠಾನಗೊಳಿಸಲಾಗಿದೆ.

  • ರಾಷ್ಟ್ರೀಯ ಬ್ರ್ಯಾಂಡಿಂಗ್, ಬಹುಭಾಷಾ ಸಂಕೇತಗಳು ಮತ್ತು ಅನುಭವ ವಲಯಗಳು, ಚಿತ್ರಮಂದಿರಗಳು ಹಾಗೂ ಫುಡ್ ಕೋರ್ಟ್‌ಗಳಂತಹ ಆಧುನಿಕ ಸೌಲಭ್ಯಗಳೊಂದಿಗೆ ಪ್ರತಿಷ್ಠಿತ ವಾಸ್ತುಶಿಲ್ಪವನ್ನು ಹೊಂದಿದೆ.

  • ರಾಜ್ಯಗಳ ಮಾಲೀಕತ್ವ ಮತ್ತು ವೃತ್ತಿಪರ ನಿರ್ವಹಣೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

  • ಒಡಿಒಪಿ ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರಗಳಾಗಿ ಮತ್ತು ಜಾಗತಿಕ ಮಾರುಕಟ್ಟೆ ತಾಣಗಳಾಗಿ ಉನ್ನತೀಕರಿಸುತ್ತದೆ.

ಈ ಪ್ರಮುಖ ಕೇಂದ್ರಗಳು ಕೇವಲ ಮಾರುಕಟ್ಟೆಗಳಲ್ಲ, ಬದಲಿಗೆ ಕೌಶಲ್ಯದ ದೇಗುಲಗಳಾಗಿವೆ. ಇವು ಗ್ರಾಮೀಣ ಕುಶಲಕರ್ಮಿಗಳ ಕನಸುಗಳಿಗೆ ರೆಕ್ಕೆ ನೀಡುವ ತಾಣಗಳು; ಇಲ್ಲಿನ ಪ್ರತಿಯೊಂದು ಉತ್ಪನ್ನವು ಪರಂಪರೆಯ ಕಥೆಯನ್ನು ಹೇಳುತ್ತದೆ ಮತ್ತು ಇಲ್ಲಿ ಸ್ವಾವಲಂಬಿ ಹಾಗೂ ಸಾಂಸ್ಕೃತಿಕವಾಗಿ ಆತ್ಮವಿಶ್ವಾಸವುಳ್ಳ ಭಾರತದ ದೃಷ್ಟಿಕೋನವು ಒಂದು ಸ್ಪಷ್ಟ ಹಾಗೂ ರೋಮಾಂಚಕ ಅಭಿವ್ಯಕ್ತಿಯನ್ನು ಪಡೆಯುತ್ತದೆ.

ಒಡಿಒಪಿ ಜಾಗತಿಕ ತಲುಪುವಿಕೆ

ಅಂತರಾಷ್ಟ್ರೀಯ ವೇದಿಕೆಗಳಲ್ಲಿ ವಿಶಿಷ್ಟ, ಉತ್ತಮ ಗುಣಮಟ್ಟದ ಮತ್ತು ಸುಸ್ಥಿರ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ, ಭಾರತದ ಜಿಲ್ಲೆಗಳು ಜಾಗತಿಕ ಆರ್ಥಿಕತೆಗೆ ಪ್ರಬಲ ಕೊಡುಗೆದಾರರಾಗಿ ಹೊರಹೊಮ್ಮಲು ಒಡಿಒಪಿ ನೆರವಾಗುತ್ತಿದೆ.

ನಿಮಗೆ ತಿಳಿದಿದೆಯೇ? 💡

ಗ್ರಾಮೀಣ ಕುಶಲಕರ್ಮಿಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಮಾರುಕಟ್ಟೆ ಪ್ರವೇಶ ಹಾಗೂ ಅವರ ಉತ್ಪನ್ನಗಳ ಮಾನ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ, 'ಸರಸ್ ಅಜೀವಿಕಾ' ಮಳಿಗೆಗಳಂತಹ ವೇದಿಕೆಗಳಲ್ಲಿ ಜಿಲ್ಲಾ-ನಿರ್ದಿಷ್ಟ ಸ್ಥಳೀಯ ಉತ್ಪನ್ನಗಳ ಪ್ರದರ್ಶನಕ್ಕಾಗಿ 'ಒಡಿಒಪಿ ವಾಲ್' (ಒಡಿಒಪಿ ವಾಲ್‌) ಅನ್ನು ಸ್ಥಾಪಿಸಲಾಗಿದೆ.

ಪ್ರಮುಖ ಮುಖ್ಯಾಂಶಗಳು:

  • 80ಕ್ಕೂ ಹೆಚ್ಚು ಭಾರತೀಯ ಮಿಷನ್‌ಗಳು (ರಾಯಭಾರ ಕಚೇರಿಗಳು) ಪ್ರದರ್ಶನಗಳು, ಉತ್ಪನ್ನ ಪ್ರದರ್ಶನ ಮಳಿಗೆಗಳು, ಒಡಿಒಪಿ ವಾಲ್‌ಗಳು ಅಥವಾ ರಾಜತಾಂತ್ರಿಕ ಉಡುಗೊರೆಗಳ ಮೂಲಕ ವಿದೇಶಗಳಲ್ಲಿ ಈ ಉತ್ಪನ್ನಗಳನ್ನು ಪ್ರಚಾರ ಮಾಡಿವೆ.
  • ಒಡಿಒಪಿ ಉತ್ಪನ್ನಗಳನ್ನು ಅಂತರಾಷ್ಟ್ರೀಯವಾಗಿ ಜನಪ್ರಿಯಗೊಳಿಸುವ ಉದ್ದೇಶದಿಂದ, ಅವುಗಳನ್ನು G-20 ಸಭೆಗಳ ಸಂದರ್ಭದಲ್ಲಿ ನೀಡಲಾಗುವ ಉಡುಗೊರೆಗಳ ಭಾಗವಾಗಿ ಸೇರಿಸಲಾಗಿತ್ತು.
  • ವಿದೇಶಿ ಮಾರುಕಟ್ಟೆಯಲ್ಲಿ ನಿರಂತರ ಅಸ್ತಿತ್ವವನ್ನು ಬಲಪಡಿಸಲು ಮೂರು ಅಂತರಾಷ್ಟ್ರೀಯ ಮಳಿಗೆಗಳು ಒಡಿಒಪಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ (ಸಿಂಗಾಪುರದಲ್ಲಿ 02 - ಮುಸ್ತಫಾ ಸೆಂಟರ್ ಮತ್ತು ಕಾಶ್ಮೀರ್ ಹೆರಿಟೇಜ್‌ನಲ್ಲಿ, ಹಾಗೂ ಕುವೈತ್‌ನಲ್ಲಿ ಒಂದು - ಹಕೀಮಿ ಸೆಂಟರ್‌ನಲ್ಲಿ).

ಉಪಸಂಹಾರ: ಜಿಲ್ಲೆಯ ಕಥೆ ಜಾಗತಿಕ ವೇದಿಕೆಯಲ್ಲಿ ಮಿಂಚುತ್ತಿದೆ

ಒಡಿಒಪಿ ನ ಕಥೆಯು ಕೇವಲ ಒಂದು ಯೋಜನೆಯಲ್ಲ, ಇದು ಭಾರತದ ಕಥೆ; ಅಡೆತಡೆಗಳ ನಡುವೆಯೂ ಅಸ್ತಿತ್ವ ಉಳಿಸಿಕೊಂಡ ಕಲೆಗಳ, ಸಂಪ್ರದಾಯಗಳನ್ನು ಜೀವಂತವಾಗಿರಿಸಿದ ಕುಶಲಕರ್ಮಿಗಳ ಮತ್ತು ಅಂತಿಮವಾಗಿ ಅವರನ್ನು ಜಾಗತಿಕ ವೇದಿಕೆಯಲ್ಲಿ ಗುರುತಿಸುವಂತೆ ಮಾಡಿದ ರಾಷ್ಟ್ರದ ಕಥೆ. ಮೊರಾದಾಬಾದ್‌ನ ಹೊಳೆಯುವ ಹಿತ್ತಾಳೆಯಿಂದ ಹಿಡಿದು, ಪಿಎಂ ಏಕ್ತಾ ಮಾಲ್‌ಗಳ ಶೆಲ್ಫ್‌ಗಳವರೆಗೆ ಮತ್ತು ಅಂತರಾಷ್ಟ್ರೀಯ ಉಡುಗೊರೆಗಳವರೆಗೆ, ಒಡಿಒಪಿ ಯೋಜನೆಯು ಸ್ಥಳೀಯ ಕೌಶಲವನ್ನು ರಾಷ್ಟ್ರೀಯ ಹೆಮ್ಮೆ ಮತ್ತು ಜಾಗತಿಕ ಅವಕಾಶವಾಗಿ ಪರಿವರ್ತಿಸಿದೆ. ಇದು ಇನ್ನು ಮುಂದೆ ಕೇವಲ "ಒಂದು ಜಿಲ್ಲೆ, ಒಂದು ಉತ್ಪನ್ನ"ಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ತಮ್ಮ ಹಳ್ಳಿಗಳ ಗಡಿ ಮೀರಿ ಮನ್ನಣೆ ಪಡೆಯುತ್ತಿರುವ ಕೋಟ್ಯಂತರ ಜನರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ ಮತ್ತು ಪಿಎಂ ಏಕ್ತಾ ಮಾಲ್‌ಗಳು ತಲೆಯೆತ್ತುತ್ತಿವೆ, ಇದರೊಂದಿಗೆ ಭಾರತದ ಸ್ಥಳೀಯ ಬೀದಿಗಳ ಕಲೆಗಳು ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆಯನ್ನಿಡುತ್ತಿವೆ. ಪ್ರತಿಯೊಬ್ಬ ಕುಶಲಕರ್ಮಿಯು ತನ್ನ ಕಲೆಗೆ ಅರ್ಹವಾದ ಮನ್ನಣೆ ಸಿಗುವ ಗುರಿಯನ್ನು ತಲುಪುತ್ತಿದ್ದಾನೆ.

PIB Research

References:

Prime Minister's Office:

Ministry of Development of North-East Region:

Ministry of Commerce & Industry:

Ministry of Micro, Small & Medium Enterprises:

Others:

Click here to see pdf

(Explainer ID: 157060) आगंतुक पटल : 49
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati , Malayalam
Prime Minister mygov.in Content Link
National Portal Of India
STQC Certificate