• Skip to Content
  • Sitemap
  • Advance Search
Economy

ಉಳಿತಾಯದಿಂದ ಸಾಮರ್ಥ್ಯದವರೆಗೆ: ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಭಾರತದ ಹೆಣ್ಣುಮಕ್ಕಳ ಸಬಲೀಕರಣ

Posted On: 21 JAN 2026 12:36PM

ಪ್ರಮುಖ ಮಾರ್ಗಸೂಚಿಗಳು

  • ಸುಕನ್ಯಾ ಸಮೃದ್ಧಿ ಯೋಜನೆಯನ್ನು ಸರ್ಕಾರದ 'ಬೇಟಿ ಬಚಾವೋ, ಬೇಟಿ ಪಢಾವೋ' ಅಭಿಯಾನದ ಅಡಿಯಲ್ಲಿ 22 ಜನವರಿ 2015 ರಂದು ಪ್ರಾರಂಭಿಸಲಾಯಿತು. 
  • ಇದು ಭಾರತ ಸರ್ಕಾರವು ಅಧಿಸೂಚಿಸಿದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದರ ಅಡಿಯಲ್ಲಿನ ಠೇವಣಿಗಳು ಸರ್ಕಾರವು ಕಾಲಕಾಲಕ್ಕೆ ಸೂಚಿಸುವ ದರಗಳಲ್ಲಿ ಬಡ್ಡಿಯನ್ನು ಗಳಿಸುತ್ತವೆ. ಈ ಮೊತ್ತವನ್ನು ಯೋಜನೆಯ ನಿಯಮಗಳಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಅಡಿಯಲ್ಲಿ ಬಡ್ಡಿ ದರವು ಶೇ. 8.2 ರಷ್ಟಿದೆ. 
  • ಯೋಜನೆಯು ಆರಂಭವಾದಾಗಿನಿಂದ, 4.53 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಮತ್ತು ಡಿಸೆಂಬರ್ 2025 ಹೊತ್ತಿಗೆ ಒಟ್ಟು ಠೇವಣಿ ಮೊತ್ತವು3.33 ಲಕ್ಷ ಕೋಟಿಗೂ ಅಧಿಕವಾಗಿದೆ.

 

ಪುತ್ರಿಯರ ಸಬಲೀಕರಣ: ಸುಕನ್ಯಾ ಸಮೃದ್ಧಿ ಯೋಜನೆಯ ಹಿಂದಿನ ದೂರದೃಷ್ಟಿ

"ಸುಕನ್ಯಾ ಸಮೃದ್ಧಿ ಯೋಜನೆಯು (ಎಸ್‌ಎಸ್‌ವೈ) ಭಾರತದಾದ್ಯಂತ ಲಕ್ಷಾಂತರ ಹೆಣ್ಣುಮಕ್ಕಳ ಪಾಲಿಗೆ ಭರವಸೆ ಮತ್ತು ಸಬಲೀಕರಣದ ಶಕ್ತಿಯುತ ಸಂಕೇತವಾಗಿ ಬೆಳಗುತ್ತಿದೆ. ಇದು ಹೆಣ್ಣುಮಕ್ಕಳ ಕನಸುಗಳನ್ನು ಪೋಷಿಸುವ ಮತ್ತು ಅವರ ಭವಿಷ್ಯವನ್ನು ಸುಭದ್ರಗೊಳಿಸುವಲ್ಲಿ ಸರ್ಕಾರದ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 22 ಜನವರಿ 2015 ರಂದು 'ಬೇಟಿ ಬಚಾವೋ, ಬೇಟಿ ಪಢಾವೋ' ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ ಈ ಯೋಜನೆಯನ್ನು ಕೇವಲ ಒಂದು ಉಳಿತಾಯದ ಉಪಕ್ರಮಕ್ಕಿಂತ ಮಿಗಿಲಾಗಿ ರೂಪಿಸಲಾಯಿತು. ಇದನ್ನು ಹಣಕಾಸಿನ ಭದ್ರತೆ ಮತ್ತು ಸಾಮಾಜಿಕ ಪರಿವರ್ತನೆಯ ನಡುವಿನ ಸೇತುವೆಯಾಗಿ ವಿನ್ಯಾಸಗೊಳಿಸಲಾಗಿದೆ. ಪೋಷಕರು ತಮ್ಮ ಪುತ್ರಿಯರ ಶಿಕ್ಷಣ ಮತ್ತು ಯೋಗಕ್ಷೇಮಕ್ಕಾಗಿ ಮುಂಚಿತವಾಗಿಯೇ ಯೋಜಿಸುವಂತೆ ಪ್ರೋತ್ಸಾಹಿಸುವ ಮೂಲಕ, ಈ ಯೋಜನೆಯು ತಳಮಟ್ಟದಲ್ಲಿ ಆತ್ಮವಿಶ್ವಾಸ, ಒಳಗೊಳ್ಳುವಿಕೆ ಮತ್ತು ದೀರ್ಘಕಾಲೀನ ಪ್ರಗತಿಯ ಭಾವನೆಯನ್ನು ಬೆಳೆಸಲು ಸಹಾಯ ಮಾಡಿದೆ.

22 ಜನವರಿ 2026 ಕ್ಕೆ ಸುಕನ್ಯಾ ಸಮೃದ್ಧಿ ಯೋಜನೆಯು 11 ವರ್ಷಗಳನ್ನು ಪೂರೈಸುತ್ತಿದ್ದು, ಇದು ಲಕ್ಷಾಂತರ ಕುಟುಂಬಗಳು ತಮ್ಮ ಪುತ್ರಿಯರ ಭವಿಷ್ಯದ ಮೇಲೆ ಇಟ್ಟಿರುವ ಸಾಮೂಹಿಕ ನಂಬಿಕೆಗೆ ಸಾಕ್ಷಿಯಾಗಿದೆ. ಆರಂಭದಿಂದ ಇಲ್ಲಿಯವರೆಗೆ 4.53 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಖಾತೆಯೂ ಹೆಣ್ಣುಮಗುವಿನ ಸಾಮರ್ಥ್ಯದ ಮೇಲಿನ ನಂಬಿಕೆಯ ಕಥೆಯನ್ನು ಹೇಳುತ್ತದೆ. ಒಬ್ಬ ಹೆಣ್ಣುಮಗಳನ್ನು ಸಬಲೀಕರಿಸುವುದು ಇಡೀ ಕುಟುಂಬ, ಸಮುದಾಯ ಮತ್ತು ಅಂತಿಮವಾಗಿ ದೇಶವನ್ನೇ ಬಲಪಡಿಸುತ್ತದೆ ಎಂಬ ಆಲೋಚನೆಯನ್ನು ಇದು ಪುಷ್ಠೀಕರಿಸುತ್ತದೆ. ಈ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯು ಸಮಾನತೆ ಮತ್ತು ಅವಕಾಶಗಳತ್ತ ಸಾಗುವ ರಾಷ್ಟ್ರವ್ಯಾಪಿ ಆಂದೋಲನವಾಗಿ ಮಾರ್ಪಟ್ಟಿದೆ."

ಹೆಣ್ಣುಮಕ್ಕಳ ಭವಿಷ್ಯಕ್ಕೆ ಭದ್ರತೆ: ಸುಕನ್ಯಾ ಸಮೃದ್ಧಿ ಯೋಜನೆ ಹೇಗೆ ಕೆಲಸ ಮಾಡುತ್ತದೆ?

ನಿಮಗೆ ತಿಳಿದಿದೆಯೇ?

ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಅಡಿಯಲ್ಲಿ ಈಗಿರುವ ವಾರ್ಷಿಕ ಶೇ. 8.2 ರಷ್ಟು ಬಡ್ಡಿ ದರವು, ಹೆಣ್ಣುಮಕ್ಕಳಿಗಾಗಿಯೇ ಮೀಸಲಾದ ಉಳಿತಾಯ ಯೋಜನೆಗಳ ಪೈಕಿ ಅತ್ಯಂತ ಹೆಚ್ಚಿನ ಬಡ್ಡಿ ದರಗಳಲ್ಲಿ ಒಂದಾಗಿದೆ!

ಎಸ್‌ಎಸ್‌ವೈ ಯೋಜನೆಯು ಒಂದು ಕಡಿಮೆ ಅಪಾಯದ ಠೇವಣಿ ಯೋಜನೆಯಾಗಿದ್ದು, ಇದರಲ್ಲಿ ಅಸಲು ಮೊತ್ತ ಮತ್ತು ಪ್ರತಿ ತ್ರೈಮಾಸಿಕದಲ್ಲಿ ನಿರ್ಧರಿಸಲ್ಪಟ್ಟ ಬಡ್ಡಿಯನ್ನು ವಾರ್ಷಿಕವಾಗಿ ಪಾವತಿಸುವ ಬಗ್ಗೆ ಭಾರತ ಸರ್ಕಾರವು ಖಾತರಿ ನೀಡುತ್ತದೆ.

ಈ ಯೋಜನೆಯು ಆರ್ಥಿಕ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಕೇವಲ ಆರ್ಥಿಕ ಹೂಡಿಕೆಯಲ್ಲ, ಬದಲಿಗೆ ಹೆಣ್ಣುಮಕ್ಕಳ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುವ ಒಂದು ಪ್ರೇರಕ ಶಕ್ತಿಯಾಗಿದೆ. ಹೆಣ್ಣುಮಗುವಿನ ಶಿಕ್ಷಣ ಮತ್ತು ವಿವಾಹದ ವೆಚ್ಚಗಳನ್ನು ಭರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅವರ ಶಿಕ್ಷಣ, ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ, ಈ ಉಪಕ್ರಮವು ಮಹಿಳಾ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು ಭವಿಷ್ಯದ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತದೆ.

ಎಸ್ಎಸ್ವೈ ಖಾತೆ ಎಂದರೇನು ಮತ್ತು ಅದನ್ನು ಯಾರು ತೆರೆಯಬಹುದು?

ಎಸ್‌ಎಸ್‌ವೈ ಖಾತೆಯು ಸುಕನ್ಯಾ ಸಮೃದ್ಧಿ ಯೋಜನೆಯಡಿ ಜಮಾ ಮಾಡಿದ ಹಣವನ್ನು ಹೊಂದಿರುವ ಉಳಿತಾಯ ಖಾತೆಯಾಗಿದೆ. ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಭಾರತೀಯ ಹೆಣ್ಣು ಮಗುವಿನ ಹೆಸರಿನಲ್ಲಿ ಯಾವುದೇ ಭಾರತೀಯ ಅಂಚೆ ಕಚೇರಿ ಅಥವಾ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮತ್ತು ಅಧಿಕೃತ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ (ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್) ಈ ಖಾತೆಯನ್ನು ತೆರೆಯಬಹುದು.

  • ಖಾತೆಯನ್ನು ಹೆಣ್ಣು ಮಗು ಹುಟ್ಟಿದ ಸಮಯದಿಂದ ಹಿಡಿದು ಅದಕ್ಕೆ 10 ವರ್ಷ ತುಂಬುವವರೆಗೆ ಯಾವಾಗ ಬೇಕಾದರೂ ತೆರೆಯಬಹುದು. 
  • ಒಬ್ಬ ಹೆಣ್ಣು ಮಗುವಿಗೆ ಕೇವಲ ಒಂದು ಎಸ್‌ಎಸ್‌ವೈಖಾತೆಯನ್ನು ಮಾತ್ರ ತೆರೆಯಲು ಅನುಮತಿಯಿದೆ ಮತ್ತು ಒಂದು ಕುಟುಂಬವು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆಗಳನ್ನು ತೆರೆಯಬಹುದು. ಆದರೆ, ಅವಳಿ ಅಥವಾ ತ್ರಿವಳಿ ಮಕ್ಕಳು ಜನಿಸಿದ ಸಂದರ್ಭದಲ್ಲಿ, ಸಂಬಂಧಿತ ಜನನ ಪ್ರಮಾಣಪತ್ರಗಳೊಂದಿಗೆ ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸಿ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲು ಅವಕಾಶವಿದೆ.
  • ಈ ಖಾತೆಯನ್ನು ಭಾರತದ ಯಾವುದೇ ಸ್ಥಳಕ್ಕೆ ವರ್ಗಾಯಿಸಬಹುದು.

ಗಮನಾರ್ಹವಾಗಿ, ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬುವವರೆಗೆ ಖಾತೆಯನ್ನು ಪೋಷಕರು ಅಥವಾ ಪಾಲಕರು ನಿರ್ವಹಿಸುತ್ತಾರೆ. ಇದು ಉಳಿತಾಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಮಗುವಿನ ಶಿಕ್ಷಣ ಹಾಗೂ ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಪಾಲಕರಿಗೆ ಅನುವು ಮಾಡಿಕೊಡುತ್ತದೆ. ಹದಿನೆಂಟು ವರ್ಷ ತುಂಬಿದ ನಂತರ, ಖಾತೆದಾರರು (ಹೆಣ್ಣು ಮಗು) ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಖಾತೆಯ ನಿಯಂತ್ರಣವನ್ನು ಸ್ವತಃ ತಾವೇ ವಹಿಸಿಕೊಳ್ಳಬಹುದು.

ಖಾತೆ ತೆರೆಯಲು ಯಾವ ದಾಖಲೆಗಳು ಅಗತ್ಯವಿವೆ?

ಎಸ್ಎಸ್ವೈ ಖಾತೆಯನ್ನು ತೆರೆಯಲು ನಾಲ್ಕು ಪ್ರಮುಖ ದಾಖಲೆಗಳು ಅಗತ್ಯವಿವೆ:

  • ಸುಕನ್ಯಾ ಸಮೃದ್ಧಿ ಖಾತೆ ತೆರೆಯುವ ಅರ್ಜಿ ನಮೂನೆ (ಇದು ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತದೆ).
  • ಹೆಣ್ಣು ಮಗುವಿನ ಜನನ ಪ್ರಮಾಣಪತ್ರ.
  • ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿದ ಆಧಾರ್ ಸಂಖ್ಯೆ.
  • ಆದಾಯ ತೆರಿಗೆ ನಿಯಮಗಳಲ್ಲಿ ವ್ಯಾಖ್ಯಾನಿಸಲಾದ ಕಾಯಂ ಖಾತೆ ಸಂಖ್ಯೆ ಅಥವಾ ಫಾರ್ಮ್ 60.

ಎಸ್ಎಸ್ವೈ ಖಾತೆಗೆ ಎಷ್ಟು ಠೇವಣಿ ಅಗತ್ಯವಿದೆ?

ನಿಮಗೆ ತಿಳಿದಿದೆಯೇ?

ಸುಕನ್ಯಾ ಸಮೃದ್ಧಿ ಯೋಜನೆ ಎಸ್‌ಎಸ್‌ವೈ ಖಾತೆಗಳಲ್ಲಿನ ಒಟ್ಟು ಠೇವಣಿ ಮೊತ್ತವು ₹ 3,33,000 ಕೋಟಿಗಳನ್ನು ದಾಟಿದೆ! (ಡಿಸೆಂಬರ್ 2025 ಹೊತ್ತಿಗೆ)

ಪೋಷಕರು ಮತ್ತು ಪಾಲಕರು ಎಸ್‌ಎಸ್‌ವೈ ಖಾತೆಯಲ್ಲಿ ಕನಿಷ್ಠ ₹250 ರ ಆರಂಭಿಕ ಠೇವಣಿಯೊಂದಿಗೆ ಉಳಿತಾಯ ಪ್ರಾರಂಭಿಸಬಹುದು. ನಂತರದ ಠೇವಣಿಗಳನ್ನು ₹50 ರ ಗುಣಕಗಳಲ್ಲಿ ಮಾಡಬಹುದು, ಆದರೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ₹250 ಠೇವಣಿ ಮಾಡುವುದು ಕಡ್ಡಾಯವಾಗಿದೆ. ವಾರ್ಷಿಕ ಒಟ್ಟು ಠೇವಣಿ ಮಿತಿಯನ್ನು ₹1,50,000 ಕ್ಕೆ ನಿಗದಿಪಡಿಸಲಾಗಿದೆ - ಮಿತಿಗಿಂತ ಹೆಚ್ಚಿನ ಯಾವುದೇ ಮೊತ್ತಕ್ಕೆ ಬಡ್ಡಿ ಸಿಗುವುದಿಲ್ಲ ಮತ್ತು ಆ ಹಣವನ್ನು ಹಿಂತಿರುಗಿಸಲಾಗುತ್ತದೆ.

ಖಾತೆ ತೆರೆದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಯವರೆಗೆ ಠೇವಣಿಗಳನ್ನು ಮಾಡಬಹುದು.

ಬಡ್ಡಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?

ಪ್ರತಿ ತಿಂಗಳು ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ಅದನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ವರ್ಷದ ಅವಧಿಯಲ್ಲಿ ಖಾತೆಯನ್ನು ಬೇರೆ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ವರ್ಗಾಯಿಸಿದರೂ ಸಹ, ಬಡ್ಡಿಯನ್ನು ಆರ್ಥಿಕ ವರ್ಷದ ಕೊನೆಯಲ್ಲಿಯೇ ಜಮಾ ಮಾಡಲಾಗುತ್ತದೆ. ಇದು ಹೆಣ್ಣುಮಗುವಿನ ಉಳಿತಾಯವು ಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಬೆಳೆಯುವುದನ್ನು ಖಚಿತಪಡಿಸುತ್ತದೆ.

ಎಸ್ಎಸ್ವೈ ಖಾತೆಯಿಂದ ಹಣವನ್ನು ಹಿಂಪಡೆಯುವುದು ಹೇಗೆ?

ಖಾತೆದಾರರು (ಹೆಣ್ಣು ಮಗು) ಶಿಕ್ಷಣದ ಉದ್ದೇಶಕ್ಕಾಗಿ ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಲಭ್ಯವಿರುವ ಬಾಕಿ ಮೊತ್ತದ ಶೇ. 50 ರಷ್ಟು ಹಣವನ್ನು ಹಿಂಪಡೆಯಬಹುದು. ಖಾತೆದಾರರಿಗೆ ಹದಿನೆಂಟು ವರ್ಷ ತುಂಬಿದ ನಂತರ ಅಥವಾ ಹತ್ತನೇ ತರಗತಿ ತೇರ್ಗಡೆಯಾದ ನಂತರ (ಇವೆರಡರಲ್ಲಿ ಯಾವುದು ಮೊದಲೋ ಆಗ) ಈ ಸೌಲಭ್ಯವು ಲಭ್ಯವಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು, ಖಾತೆದಾರರು ಶೈಕ್ಷಣಿಕ ಸಂಸ್ಥೆಯು ನೀಡಿದ ಪ್ರವೇಶ ಪತ್ರ ಅಥವಾ ಅಗತ್ಯವಿರುವ ವೆಚ್ಚಗಳನ್ನು ತಿಳಿಸುವ ಶುಲ್ಕದ ರಸೀದಿಯಂತಹ ಸಂಬಂಧಿತ ದಾಖಲೆಗಳೊಂದಿಗೆ ಅಧಿಕೃತ ಅರ್ಜಿಯನ್ನು ಸಲ್ಲಿಸಬೇಕು.

ಹಣವನ್ನು ಒಟ್ಟಾರೆಯಾಗಿ ಅಥವಾ ಕಂತುಗಳಲ್ಲಿ ಹಿಂಪಡೆಯಬಹುದು. ಆದರೆ, ವರ್ಷಕ್ಕೆ ಗರಿಷ್ಠ ಒಂದು ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶವಿದ್ದು, ಗರಿಷ್ಠ ಐದು ವರ್ಷಗಳವರೆಗೆ ಹೀಗೆ ಪಡೆಯಬಹುದು. ಎಲ್ಲಾ ಸಂದರ್ಭಗಳಲ್ಲೂ, ಹಿಂಪಡೆಯುವ ಮೊತ್ತವು ಸಲ್ಲಿಸಿದ ದಾಖಲೆಗಳಲ್ಲಿ ನಮೂದಿಸಲಾದ ನಿಜವಾದ ಶುಲ್ಕ ಮತ್ತು ವೆಚ್ಚಗಳಿಗಿಂತ ಹೆಚ್ಚಿರಬಾರದು.

ಎಸ್ಎಸ್ವೈ ಖಾತೆಯು ಯಾವಾಗ ಪಕ್ವವಾಗುತ್ತದೆ? ಅದನ್ನು ಅವಧಿಗೆ ಮುನ್ನ ಮುಚ್ಚಬಹುದೇ?

ಎಸ್‌ಎಸ್‌ವೈ ಖಾತೆಯು ಅದನ್ನು ತೆರೆದ ದಿನಾಂಕದಿಂದ ಇಪ್ಪತ್ತೊಂದು ವರ್ಷಗಳು ಪೂರೈಸಿದ ನಂತರ ಪಕ್ವವಾಗುತ್ತದೆ. ಖಾತೆಯನ್ನು ಅವಧಿಗಿಂತ ಮುಂಚಿತವಾಗಿ ಮುಚ್ಚಲು ಕೇವಲ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ:

ಖಾತೆಯು ಪಕ್ವವಾಗುವ ಮೊದಲೇ ಖಾತೆದಾರರು ವಿವಾಹವಾಗಲು ಇಚ್ಛಿಸಿದಾಗ

  • ಖಾತೆದಾರರು ಅರ್ಜಿಯೊಂದಿಗೆ ನೋಟರಿಯಿಂದ ದೃಢೀಕರಿಸಲ್ಪಟ್ಟ 'ನಾನ್-ಜ್ಯುಡಿಶಿಯಲ್ ಸ್ಟ್ಯಾಂಪ್ ಪೇಪರ್' ಮೇಲೆ ಘೋಷಣಾ ಪತ್ರವನ್ನು ಮತ್ತು ವಿವಾಹದ ದಿನಾಂಕದಂದು ತಮಗೆ ಕನಿಷ್ಠ ಹದಿನೆಂಟು ವರ್ಷ ತುಂಬಿರುತ್ತದೆ ಎಂದು ಖಚಿತಪಡಿಸುವ ವಯಸ್ಸಿನ ಪುರಾವೆಯನ್ನು ಸಲ್ಲಿಸಬೇಕು.
  • ವಿವಾಹಕ್ಕೆ ಒಂದು ತಿಂಗಳ ಮೊದಲು ಅಥವಾ ವಿವಾಹವಾದ ಮೂರು ತಿಂಗಳ ಒಳಗೆ ಮಾತ್ರ ಖಾತೆಯನ್ನು ಮುಚ್ಚಲು ಅವಕಾಶವಿರುತ್ತದೆ. ಅನುಮೋದನೆಯ ನಂತರ, ಖಾತೆದಾರರು ಅನ್ವಯವಾಗುವ ಬಡ್ಡಿಯೊಂದಿಗೆ ಉಳಿದಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು, ಇದು ಸಕಾಲದಲ್ಲಿ ಹಣದ ಲಭ್ಯತೆಯನ್ನು ಖಚಿತಪಡಿಸುತ್ತದೆ."

"ಖಾತೆದಾರರು ಮರಣ ಹೊಂದಿದ ಸಂದರ್ಭದಲ್ಲಿ"

  • "ಅರ್ಜಿ ಮತ್ತು ಸಕ್ಷಮ ಪ್ರಾಧಿಕಾರವು ನೀಡಿದ ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ ತಕ್ಷಣ ಖಾತೆಯನ್ನು ಮುಚ್ಚಬಹುದು.
  • ಬಾಕಿ ಇರುವ ಮೊತ್ತ ಮತ್ತು ಮರಣ ಹೊಂದಿದ ದಿನಾಂಕದವರೆಗೆ ಸಂಗ್ರಹವಾದ ಬಡ್ಡಿಯನ್ನು ಪೋಷಕರಿಗೆ/ಪಾಲಕರಿಗೆ ಪಾವತಿಸಲಾಗುತ್ತದೆ.
  • ಮರಣ ಹೊಂದಿದ ದಿನಾಂಕದಿಂದ ಖಾತೆಯನ್ನು ಮುಚ್ಚುವ ದಿನಾಂಕದವರೆಗಿನ ಅವಧಿಗೆ ಅನ್ವಯವಾಗುವ ಬಡ್ಡಿಯನ್ನು ಅಂಚೆ ಕಚೇರಿ ಉಳಿತಾಯ ಖಾತೆಗಳ ದರದಲ್ಲಿ ಲೆಕ್ಕಹಾಕಲಾಗುತ್ತದೆ."

"ಆದಾಗ್ಯೂ, ಖಾತೆ ತೆರೆದ ದಿನಾಂಕದಿಂದ ಮೊದಲ ಐದು ವರ್ಷಗಳೊಳಗೆ ಅವಧಿಗೂ ಮುನ್ನ ಖಾತೆ ಮುಚ್ಚಲು ಅನುಮತಿಯಿಲ್ಲ."

ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳಿಗೆ ಏಕೆ ಉತ್ತಮ ಆಯ್ಕೆಯಾಗಿದೆ?

ಸುಕನ್ಯಾ ಸಮೃದ್ಧಿ ಯೋಜನೆಯು ಸರ್ಕಾರಿ ಬೆಂಬಲಿತ ಪ್ರಸಿದ್ಧ ಉಳಿತಾಯ ಯೋಜನೆಯಾಗಿದ್ದು, ಇದು ಹೆಚ್ಚಿನ ಲಾಭ, ತೆರಿಗೆ ಸೌಲಭ್ಯಗಳು ಮತ್ತು ಶಿಕ್ಷಣ ಹಾಗೂ ಭವಿಷ್ಯದ ಅಗತ್ಯಗಳಿಗಾಗಿ ಹಣ ಹಿಂಪಡೆಯುವ ನಮ್ಯತೆಯನ್ನು ನೀಡುವ ಮೂಲಕ ಹೆಣ್ಣುಮಕ್ಕಳಿಗೆ ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೆಣ್ಣುಮಗುವಿನ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ:

  • ಈ ಯೋಜನೆಯು ಆಕರ್ಷಕ ಬಡ್ಡಿ ದರವನ್ನು ಒದಗಿಸುತ್ತದೆ, ಇದನ್ನು ಹಣಕಾಸು ಸಚಿವಾಲಯವು ನಿಯತಕಾಲಿಕವಾಗಿ ಪ್ರಕಟಿಸುತ್ತದೆ. ಇದು ಕಾಲಾನಂತರದಲ್ಲಿ ಉಳಿತಾಯವು ಸ್ಥಿರವಾಗಿ ಬೆಳೆಯಲು ಸಹಾಯ ಮಾಡುತ್ತದೆ. 
  • ಈ ಯೋಜನೆಯಡಿ ಮಾಡಿದ ಹೂಡಿಕೆಗಳು 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಸೌಲಭ್ಯಗಳಿಗೆ ಅರ್ಹವಾಗಿವೆ.
  • ಠೇವಣಿ ಮಿತಿಯು ವಿಶಾಲವಾಗಿದ್ದು, ವಾರ್ಷಿಕವಾಗಿ ಕನಿಷ್ಠ ₹250 ರಿಂದ ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದರ ಜೊತೆಗೆ, ಭಾಗಶಃ ಹಣ ಹಿಂಪಡೆಯುವ ಸೌಲಭ್ಯವನ್ನು ಸಹ ಪಡೆಯಬಹುದು.
  • ಖಾತೆಯು ಪಕ್ವವಾದ ನಂತರವೂ ಅದನ್ನು ಮುಚ್ಚದಿದ್ದರೆ, ಅಂತಹ ಖಾತೆಗೆ ಅಂಚೆ ಕಚೇರಿ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿ ದೊರೆಯುತ್ತಲೇ ಇರುತ್ತದೆ.

ಅವಳೊಂದಿಗೆ ಬೆಳೆಯುವ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆಯು ಭಾರತದ ಹೆಣ್ಣುಮಕ್ಕಳ ಸಬಲೀಕರಣ ಮತ್ತು ಸುಭದ್ರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ. ದೀರ್ಘಕಾಲೀನ ಉಳಿತಾಯವನ್ನು ಉತ್ತೇಜಿಸುವ ಮೂಲಕ ಹಾಗೂ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ, ಈ ಯೋಜನೆಯು ಕುಟುಂಬಗಳಲ್ಲಿ ಆರ್ಥಿಕ ಜವಾಬ್ದಾರಿಯನ್ನು ಮತ್ತು ಸಮಾಜದಲ್ಲಿ ವ್ಯಾಪಕ ಪ್ರಗತಿಯನ್ನು ಉತ್ತೇಜಿಸುತ್ತದೆ.

ಈ ಯೋಜನೆಯಡಿ ತೆರೆಯಲಾಗುತ್ತಿರುವ ಖಾತೆಗಳ ಸಂಖ್ಯೆಯಲ್ಲಿನ ನಿರಂತರ ಹೆಚ್ಚಳವು, ಈ ಉಪಕ್ರಮದ ಮೇಲಿರುವ ಬೆಳೆಯುತ್ತಿರುವ ನಂಬಿಕೆ ಮತ್ತು ಅದರ ಪ್ರಭಾವವನ್ನು ಉಲ್ಲೇಖಿಸುತ್ತದೆ. ಭಾರತವು ಹೆಚ್ಚಿನ ಲಿಂಗ ಸಮಾನತೆ ಮತ್ತು ಒಳಗೊಳ್ಳುವಿಕೆಯತ್ತ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಹೆಣ್ಣುಮಗಳೂ ತನ್ನ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು, ಯಶಸ್ವಿಯಾಗಲು ಮತ್ತು ಬೆಳೆಯಲು ಅಗತ್ಯವಿರುವ ಸಂಪನ್ಮೂಲ ಹಾಗೂ ಆತ್ಮವಿಶ್ವಾಸದ ಬೆಂಬಲವನ್ನು ಪಡೆಯುವುದನ್ನು ಖಚಿತಪಡಿಸುವಲ್ಲಿ ಎಸ್‌ಎಸ್‌ವೈ ಪ್ರಮುಖ ಪಾತ್ರ ವಹಿಸುತ್ತಿದೆ.

References

Ministry of Finance

https://www.pib.gov.in/PressReleasePage.aspx?PRID=2094807&reg=3&lang=2#:~:text=Maturity%20of%20the%20account,access%20to%20funds%20when%20needed.

https://www.pib.gov.in/PressReleaseIframePage.aspx?PRID=1778546&reg=3&lang=2

https://www.pib.gov.in/PressReleaseIframePage.aspx?PRID=1990745&reg=3&lang=2

https://static.pib.gov.in/WriteReadData/specificdocs/documents/2022/jan/doc20221207101.pdf

Prime Minister's Office

https://www.pib.gov.in/PressReleseDetail.aspx?PRID=2191605&reg=3&lang=1

Directorate of Small Savings, Govt. of Assam

https://smallsavings.assam.gov.in/portlets/take-care-with-sukanya-samriddhi-account

https://finance.assam.gov.in/portlets/sukanya-samriddhi-for-your-girl-child

Government of Uttar Pradesh, Moradabad Division

https://moradabaddivision.nic.in/scheme/sukanya-samriddhi-yojana/

Sansad.in

https://sansad.in/getFile/loksabhaquestions/annex/178/AU767.pdf?source=pqals

https://sansad.in/getFile/loksabhaquestions/annex/184/AU3747_MIzukL.pdf?source=pqals

mygov.in

https://transformingindia.mygov.in/scheme/sukanya-samriddhi-yojana/#intro

State Bank of India

https://www.sbisecurities.in/calculators/sukanya-samriddhi-yojana

https://sbi.bank.in/web/personal-banking/investments-deposits/govt-schemes/sukanya-samriddhi-yojana

Others

https://www.ibef.org/news/over-us-36-72-billion-deposited-in-banks-under-sukanya-samriddhi-scheme-prime-minister-mr-narendra-modi

Click here for pdf file. 

 

*****

(Explainer ID: 157032) आगंतुक पटल : 44
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Telugu , Malayalam
Link mygov.in
National Portal Of India
STQC Certificate