Infrastructure
ಭಾರತದ ಸುರಂಗಗಳು: ಎಂಜಿನಿಯರಿಂಗ್ ಕೌಶಲ್ಯದ ಸಂಕೇತ
Posted On:
14 JAN 2026 1:23PM
|
ಪ್ರಮುಖ ಮಾರ್ಗಸೂಚಿಗಳು
- ಅಟಲ್ ಸುರಂಗದಂತಹ ಐತಿಹಾಸಿಕ ಯೋಜನೆಗಳೊಂದಿಗೆ, ಭಾರತವು ತನ್ನ ಸುರಂಗ ಮೂಲಸೌಕರ್ಯವನ್ನು ವೇಗವಾಗಿ ವಿಸ್ತರಿಸುತ್ತಿದೆ.
- 12.77 ಕಿಮೀ ಉದ್ದದ ಸುರಂಗ T50 ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ದಾಖಲೆ ಬ್ರೇಕಿಂಗ್ ರೈಲ್ವೆ ಸಂಪರ್ಕಗಳು, ಭಾರತದ ಸರಕು ಸಾಗಣೆ ಮತ್ತು ಸಂಪರ್ಕ ಜಾಲವನ್ನು ಮರುರೂಪಿಸುತ್ತಿವೆ.
- ಮುಂಬರುವ ಜೋಜಿಲಾ ನಂತಹ ಬೃಹತ್ ಸುರಂಗಗಳು ಲಡಾಖ್‌ಗೆ ಎಲ್ಲಾ ಹವಾಮಾನ ಸಂದರ್ಭಗಳಲ್ಲೂ ಸಂಪರ್ಕವನ್ನು ಒದಗಿಸಲಿವೆ. ಇದು ಸಂಚಾರ, ರಕ್ಷಣಾ ಸಾಮರ್ಥ್ಯ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸಲಿದೆ.
|
ಸಂಪರ್ಕದ ಕೆತ್ತನೆ: ಭಾರತದ ಸುರಂಗ ಮಾರ್ಗಗಳ ಕಥೆ
ಭಾರತದ ಸುರಂಗಗಳು ಕೇವಲ ಮೂಲಸೌಕರ್ಯ ಅಭಿವೃದ್ಧಿಯಲ್ಲ; ಅವು ಭೌಗೋಳಿಕ ಸವಾಲುಗಳನ್ನು ಜಯಿಸುವ ರಾಷ್ಟ್ರದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ. ಒಂದು ಕಾಲದಲ್ಲಿ ಸಂಪರ್ಕವನ್ನು ಸೀಮಿತಗೊಳಿಸಿದ್ದ ಪರ್ವತಗಳು ಮತ್ತು ಭೂಪ್ರದೇಶಗಳನ್ನು ಕೊರೆಯುವ ಮೂಲಕ, ಸುರಂಗಗಳು ವರ್ಷಪೂರ್ತಿ ಸಾರಿಗೆಯನ್ನು ಸಾಧ್ಯವಾಗಿಸಿವೆ. ಇವು ದೂರದ ಪ್ರದೇಶಗಳಿಗೆ ಪ್ರವೇಶವನ್ನು ಸುಲಭಗೊಳಿಸಿವೆ ಮತ್ತು ಸಮುದಾಯಗಳ ನಡುವಿನ ಸಂಬಂಧವನ್ನು ಬಲಪಡಿಸಿವೆ. ಆಯಕಟ್ಟಿನ ಹಿಮಾಲಯದ ಸುರಂಗಗಳಿಂದ ಹಿಡಿದು ನಗರದ ಮೆಟ್ರೋ ಜಾಲಗಳವರೆಗೆ, ಈ ಯೋಜನೆಗಳು ಭಾರತವು ಜನರು, ಸರಕುಗಳು ಮತ್ತು ಸಂಪನ್ಮೂಲಗಳನ್ನು ಸಾಗಿಸುವ ವಿಧಾನವನ್ನೇ ಬದಲಾಯಿಸುತ್ತಿವೆ. ಆಧುನಿಕ ಇಂಜಿನಿಯರಿಂಗ್ ಮತ್ತು ನವೀನ ಯೋಜನೆಯನ್ನು ಬಳಸಿ ನಿರ್ಮಿಸಲಾದ ಸುರಂಗಗಳು ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಹೆಚ್ಚು ಸಂಪರ್ಕಿತ ಮತ್ತು ಸದೃಢವಾದ ದೇಶವನ್ನು ರೂಪಿಸುತ್ತಿವೆ.
ಭಾರತದ ಸುರಂಗ ನಿರ್ಮಾಣದ ಉಲ್ಬಣವು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಆಯಕಟ್ಟಿನ ಗಡಿ ಮೂಲಸೌಕರ್ಯ, ಮೆಟ್ರೋ ರೈಲು ಅಭಿವೃದ್ಧಿ, ಬುಲೆಟ್ ರೈಲು ಕಾರಿಡಾರ್‌ಗಳು ಮತ್ತು ದೂರದ ಪ್ರದೇಶಗಳಲ್ಲಿ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಉಪಕ್ರಮಗಳಿಂದ ಉತ್ತೇಜಿಸಲ್ಪಟ್ಟಿದೆ. ಮೂಲಸೌಕರ್ಯಗಳು ವಿಸ್ತರಣೆಯಾಗುತ್ತಿದ್ದಂತೆ, ಸುರಂಗ ನಿರ್ಮಾಣವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಕ್ಷೇತ್ರಗಳಲ್ಲಿ ಒಂದಾಗಿದೆ.
ಸುರಂಗ ಮೂಲಸೌಕರ್ಯವು ಎಂದಿಗಿಂತಲೂ ಹೆಚ್ಚು ಏಕೆ ಮುಖ್ಯವಾಗಿದೆ?
ಸುರಂಗಗಳು ಭಾರತದ ಅಭಿವೃದ್ಧಿಯ ಭೂಪಟವನ್ನು ವೇಗವಾಗಿ ಮರುರೂಪಿಸುತ್ತಿವೆ. ಇವು ಸಾಂಪ್ರದಾಯಿಕ ಸಾರಿಗೆ ಮಾರ್ಗಗಳಿಗೆ ಸ್ಮಾರ್ಟ್, ಸುರಕ್ಷಿತ ಮತ್ತು ಹೆಚ್ಚು ಸಮರ್ಥನೀಯ ಪರ್ಯಾಯಗಳನ್ನು ನೀಡುತ್ತವೆ. ಇವುಗಳ ಪ್ರಭಾವವು ಕೇವಲ ಇಂಜಿನಿಯರಿಂಗ್‌ಗೆ ಸೀಮಿತವಾಗಿಲ್ಲ. ಇವು ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ, ಆಯಕಟ್ಟಿನ ಸಿದ್ಧತೆಯನ್ನು ಹೆಚ್ಚಿಸುತ್ತವೆ ಮತ್ತು ಲಕ್ಷಾಂತರ ಜನರ ದೈನಂದಿನ ಜೀವನವನ್ನು ಸುಧಾರಿಸುತ್ತವೆ.

ಭಾರತದ ವಿಕಸನಗೊಳ್ಳುತ್ತಿರುವ ಸುರಂಗ ತಂತ್ರಜ್ಞಾನ
ಕಳೆದ ಒಂದು ದಶಕದಲ್ಲಿ, ಭಾರತದ ಸುರಂಗ ನಿರ್ಮಾಣ ಸಾಮರ್ಥ್ಯವು ಅಭೂತಪೂರ್ವ ರೂಪಾಂತರವನ್ನು ಕಂಡಿದೆ. ಇದು ಸಾಂಪ್ರದಾಯಿಕ 'ಡ್ರಿಲ್-ಅಂಡ್-ಬ್ಲಾಸ್ಟ್' (ಕೊರೆಯುವ ಮತ್ತು ಸ್ಫೋಟಿಸುವ) ವಿಧಾನಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳತ್ತ ದಾಪುಗಾಲು ಹಾಕಿದೆ. ಇದು ವೇಗವಾದ, ಸುರಕ್ಷಿತವಾದ ಮತ್ತು ಅತ್ಯಂತ ಸಂಕೀರ್ಣವಾದ ಭೂಗತ ನಿರ್ಮಾಣಗಳನ್ನು ಸಾಧ್ಯವಾಗಿಸಿದೆ. ಆಧುನಿಕ ಯೋಜನೆಗಳು ಈಗ ಸುಧಾರಿತ ಭೌಗೋಳಿಕ ಮ್ಯಾಪಿಂಗ್ ಮತ್ತು ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಅವಲಂಬಿಸಿವೆ. ಇದು ಎಂಜಿನಿಯರ್‌ಗಳಿಗೆ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ದೀರ್ಘವಾದ ಮತ್ತು ಆಳವಾದ ಸುರಂಗಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.
ಸಮಕಾಲೀನ ಭಾರತೀಯ ಸುರಂಗಗಳನ್ನು ಹೈ-ಟೆಕ್ ಮತ್ತು ಸುರಕ್ಷತಾ-ಸಂಯೋಜಿತ ಕಾರಿಡಾರ್‌ಗಳಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಸುಧಾರಿತ ವಾತಾಯನ ವ್ಯವಸ್ಥೆಗಳು, ತುರ್ತು ನಿರ್ಗಮನ ಮಾರ್ಗಗಳು, ಅಗ್ನಿಶಾಮಕ ಘಟಕಗಳು, ಎಲ್‌ಇಡಿ ದೀಪಗಳು, ಸಿಸಿಟಿವಿ ಕಣ್ಗಾವಲು ಮತ್ತು ಕೇಂದ್ರೀಕೃತ ಸುರಂಗ ನಿಯಂತ್ರಣ ಕೊಠಡಿಗಳಂತಹ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ಆಧುನೀಕರಣವು ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ವಿಪತ್ತು ನಿರ್ವಹಣಾ ಸಿದ್ಧತೆಯನ್ನು ಗಣನೀಯವಾಗಿ ಸುಧಾರಿಸಿದೆ.
ಭಾರತದ ಸುರಂಗ ಕ್ರಾಂತಿಗೆ ಚಾಲನೆ ನೀಡುತ್ತಿರುವ ಪ್ರಮುಖ ತಂತ್ರಜ್ಞಾನಗಳು
- ಟನಲ್ ಬೋರಿಂಗ್ ಮಷೀನ್‌ಗಳು ಮೆಟ್ರೋ ಜಾಲಗಳು ಮತ್ತು ದೀರ್ಘ ರೈಲು/ರಸ್ತೆ ಸುರಂಗಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಟಿಬಿಎಂಗಳು, ಜನನಿಬಿಡ ಮತ್ತು ಭೌಗೋಳಿಕವಾಗಿ ಸಂಕೀರ್ಣವಾದ ಪ್ರದೇಶಗಳಲ್ಲಿ ಹೆಚ್ಚಿನ ನಿಖರತೆ, ಕಡಿಮೆ ಕಂಪನ ಮತ್ತು ಸುಧಾರಿತ ಸುರಕ್ಷತೆಯನ್ನು ಒದಗಿಸುತ್ತವೆ.
- ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್ ಹಿಮಾಲಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ಎನ್‌ಎಟಿಎಂ ವಿಧಾನವು, ಎಂಜಿನಿಯರ್‌ಗಳಿಗೆ ಭೂಮಿಯನ್ನು ಕೊರೆಯುವಾಗ ದೊರೆಯುವ ಬೆಂಬಲವನ್ನು ನೈಜ ಸಮಯದಲ್ಲಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಬದಲಾಗುತ್ತಿರುವ ಮತ್ತು ದುರ್ಬಲವಾದ ಶಿಲಾ ರಚನೆಗಳಿಗೆ ಅತ್ಯಂತ ಸೂಕ್ತವಾಗಿದೆ.
- ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ಸ್ ಆಧುನಿಕ ರಸ್ತೆ ಸುರಂಗಗಳಿಗೆ ಅತ್ಯಗತ್ಯವಾಗಿರುವ ಐಟಿಸಿಎಸ್, ವಾತಾಯನ ನಿಯಂತ್ರಣ, ಬೆಂಕಿ ಪತ್ತೆ ಹಚ್ಚುವಿಕೆ, ಸಂವಹನ ಜಾಲಗಳು, ಸಿಸಿಟಿವಿ ಮತ್ತು ತುರ್ತು ನಿರ್ವಹಣೆಯನ್ನು ಒಂದೇ ಕೇಂದ್ರೀಕೃತ ಡಿಜಿಟಲ್ ವೇದಿಕೆಯಲ್ಲಿ ಸಂಯೋಜಿಸುತ್ತದೆ. ಇದು ದಿನದ 24 ಗಂಟೆಯೂ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಭಾರತದ ಪ್ರಮುಖ ಸುರಂಗಗಳು: ಆಧುನಿಕ ಮೂಲಸೌಕರ್ಯದ ಮೈಲಿಗಲ್ಲುಗಳು
ಭಾರತದ ವಿಸ್ತಾರವಾಗುತ್ತಿರುವ ಮೂಲಸೌಕರ್ಯವು ದೇಶದಾದ್ಯಂತ ಜನರು ಮತ್ತು ಸರಕುಗಳ ಸಂಚಾರವನ್ನು ಮರುರೂಪಿಸುವ ಗಮನಾರ್ಹ ಸುರಂಗಗಳ ಸರಣಿಗೆ ಜನ್ಮ ನೀಡಿದೆ. ಪ್ರತಿಯೊಂದು ಸುರಂಗವು ನಾವೀನ್ಯತೆ ಮತ್ತು ಬೃಹತ್ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಅಟಲ್ ಸುರಂಗ
ಪೀರ್ ಪಂಜಾಲ್ ಶ್ರೇಣಿಯ ಹಿಮಚ್ಛಾದಿತ ಶಿಖರಗಳ ಅಡಿಯಲ್ಲಿ ಅಡಗಿರುವ ಅಟಲ್ ಸುರಂಗವು 9.02 ಕಿ.ಮೀ ಉದ್ದವಿದ್ದು, ರೋಹ್ಟಂಗ್ ಪಾಸ್ ಅನ್ನು ಬೈಪಾಸ್ ಮಾಡುವ ಎತ್ತರದ ಪ್ರದೇಶದ ಮಾರ್ಗವನ್ನು ಒದಗಿಸುತ್ತದೆ. ಇದರ ಪೂರ್ಣಗೊಳಿಸುವಿಕೆಯು ಸಂಪರ್ಕ ವ್ಯವಸ್ಥೆಯನ್ನೇ ಬದಲಿಸಿದೆ, ಮನಾಲಿ ಮತ್ತು ದೂರದ ಲಾಹೌಲ್-ಸ್ಪಿತಿ ಕಣಿವೆಗಳ ನಡುವೆ ವರ್ಷಪೂರ್ತಿ ತಡೆರಹಿತ ಪ್ರಯಾಣವನ್ನು ಸಾಧ್ಯವಾಗಿಸಿದೆ. ಸವಾಲಿನ ಪರ್ವತ ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ಮತ್ತು ರಕ್ಷಣಾ ಪಡೆಗಳ ಸಂಚಾರಕ್ಕೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪ್ರವೇಶವನ್ನು ಖಚಿತಪಡಿಸುವಲ್ಲಿ ಈ ಸುರಂಗವು ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೊಂದಿದೆ.
ಇದು 2022 ರಲ್ಲಿ ಯುಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಿಂದ 10,000 ಅಡಿಗಿಂತ ಹೆಚ್ಚಿನ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಈ ಸುರಂಗವು ಮನಾಲಿ-ಸರ್ಚು ನಡುವಿನ ದೂರವನ್ನು 46 ಕಿ.ಮೀ ನಷ್ಟು ಕಡಿತಗೊಳಿಸಿದೆ ಮತ್ತು ಪ್ರಯಾಣದ ಸಮಯವನ್ನು ನಾಲ್ಕರಿಂದ ಐದು ಗಂಟೆಗಳಷ್ಟು ಉಳಿಸಿದೆ. ಚಳಿಗಾಲದ ತಾಪಮಾನವು -25°C ಗೆ ಇಳಿಯುವ ಮತ್ತು ಸುರಂಗದ ಒಳಭಾಗವು ಕೆಲವೊಮ್ಮೆ 45°C ತಲುಪುವ ಕಠಿಣ ಹಿಮಾಲಯದ ಪರಿಸ್ಥಿತಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ಇದರ ನಿರ್ಮಾಣಕ್ಕೆ ಅಸಾಧಾರಣ ದೃಢತೆಯ ಅಗತ್ಯವಿತ್ತು. ಎಂಜಿನಿಯರ್‌ಗಳು ದುರ್ಬಲ ಭೂವಿಜ್ಞಾನ, ಒಮ್ಮೆ ಸುರಂಗವನ್ನೇ ಮುಳುಗಿಸಿದ್ದ 'ಸೇರಿ ನಾಲಾ' ಜಿನುಗುವಿಕೆ, ಭಾರೀ ಹಿಮಪಾತ ಮುಂತಾದ ಸವಾಲುಗಳನ್ನು ಎದುರಿಸಿದರು. ಗಡಿ ರಸ್ತೆಗಳ ಸಂಸ್ಥೆಯ ಸಮರ್ಪಿತ 'ಕರ್ಮಯೋಗಿಗಳು' ಇವೆಲ್ಲವನ್ನೂ ಯಶಸ್ವಿಯಾಗಿ ಮೆಟ್ಟಿನಿಂತು ಈ ಸಾಧನೆ ಮಾಡಿದ್ದಾರೆ.


ಝಡ್-ಮೋರ್ / ಸೋನಾಮಾರ್ಗ್ ಸುರಂಗ

ಸೋನಾಮಾರ್ಗ್ ಸುರಂಗ
ಸಮುದ್ರ ಮಟ್ಟದಿಂದ 8,650 ಅಡಿಗಳಿಗಿಂತಲೂ ಹೆಚ್ಚು ಎತ್ತರದ ಪರ್ವತಗಳಲ್ಲಿ ಕೊರೆಯಲಾದ 12 ಕಿ.ಮೀ ಉದ್ದದ ಈ ಎಂಜಿನಿಯರಿಂಗ್ ಸಾಧನೆಯು ಜಮ್ಮು ಮತ್ತು ಕಾಶ್ಮೀರದ ಪ್ರಯಾಣವನ್ನು ಬದಲಿಸಲಿದೆ. ಇದನ್ನು ₹2,700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 6.4 ಕಿ.ಮೀ ಉದ್ದದ ಮುಖ್ಯ ಸುರಂಗ, ಒಂದು ತುರ್ತು ನಿರ್ಗಮನ ಸುರಂಗ ಮತ್ತು ಆಧುನಿಕ ಸಂಪರ್ಕ ರಸ್ತೆಗಳನ್ನು ಒಳಗೊಂಡಿದ್ದು, ಶ್ರೀನಗರ ಮತ್ತು ಸೋನಾಮಾರ್ಗ್‌ನ ಹಸಿರು ಕಣಿವೆಗಳ ನಡುವೆ ಹಾಗೂ ಲಡಾಖ್ ಕಡೆಗೆ ವರ್ಷಪೂರ್ತಿ ಸಂಚರಿಸಬಹುದಾದ ಜೀವನಾಡಿಯಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಮುಂದೆ ಹಿಮಕುಸಿತಗಳು, ಭೂಕುಸಿತಗಳು ಅಥವಾ ಭಾರಿ ಹಿಮಪಾತವು ಈ ಪ್ರದೇಶವನ್ನು ಸಂಪರ್ಕದಿಂದ ಕಡಿತಗೊಳಿಸಲು ಸಾಧ್ಯವಿಲ್ಲ. ಈ ಸುರಂಗವು ಮಾರ್ಗವನ್ನು ಮುಕ್ತವಾಗಿಡುವ ಮೂಲಕ ಪ್ರಮುಖ ಆಸ್ಪತ್ರೆಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಹಿಮಾಲಯದ ಸವಾಲಿನ ಭೌಗೋಳಿಕ ಪರಿಸ್ಥಿತಿಗಾಗಿ ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್ ಬಳಸಿ ನಿರ್ಮಿಸಲಾದ ಈ ಸುರಂಗವು ಒಂದು ಪ್ರಮುಖ ತಾಂತ್ರಿಕ ಮೈಲಿಗಲ್ಲಾಗಿದೆ. ಇದು ಇಂಟಿಗ್ರೇಟೆಡ್ ಟನಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದರಲ್ಲಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್, ಎಲೆಕ್ಟ್ರಿಕಲ್ ಫೈರ್ ಸಿಗ್ನಲಿಂಗ್ ಸಿಸ್ಟಮ್, ರೇಡಿಯೋ ಮರು-ಪ್ರಸಾರ ವ್ಯವಸ್ಥೆ (FM), ಡೈನಾಮಿಕ್ ರೋಡ್ ಇನ್ಫರ್ಮೇಷನ್ ಪ್ಯಾನೆಲ್ ಮುಂತಾದ ಸುಧಾರಿತ ತಂತ್ರಜ್ಞಾನಗಳಿವೆ. ಇದು ಗಂಟೆಗೆ ಸುಮಾರು 1,000 ವಾಹನಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ. ಮುಂದೆ ಬರಲಿರುವ ಜೋಜಿಲಾ ಸುರಂಗದೊಂದಿಗೆ (2028) ಇದು ಸಂಯೋಜನೆಗೊಂಡಾಗ, ಪ್ರಯಾಣವು 49 ಕಿ.ಮೀ ನಿಂದ 43 ಕಿ.ಮೀ ಗೆ ಕುಸಿಯಲಿದೆ ಮತ್ತು ವಾಹನಗಳ ವೇಗವು ಗಂಟೆಗೆ 30 ಕಿ.ಮೀ ನಿಂದ 70 ಕಿ.ಮೀ ಗೆ ಏರಲಿದೆ. ಇದರಿಂದ ರಕ್ಷಣಾ ಲಾಜಿಸ್ಟಿಕ್ಸ್, ಚಳಿಗಾಲದ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಮತ್ತು ಈ ಪರ್ವತಗಳನ್ನೇ ಮನೆಯಾಗಿಸಿಕೊಂಡ ಜನರ ಜೀವನೋಪಾಯಕ್ಕೆ ಹೆಚ್ಚಿನ ಬಲ ಸಿಗಲಿದೆ.
ಸೆಲಾ ಸುರಂಗ

ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ 'ವಿಕಸಿತ ಭಾರತ ವಿಕಸಿತ ಈಶಾನ್ಯ' ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾದ ಸೆಲಾ ಸುರಂಗವನ್ನು, ಗಡಿ ರಸ್ತೆಗಳ ಸಂಸ್ಥೆಯು (BRO) ತೇಜ್‌ಪುರ-ತವಾಂಗ್ ಮಾರ್ಗದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಿದೆ. ಈ ಸುರಂಗವನ್ನು 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಎಲ್ಲಾ ಹವಾಮಾನಗಳಲ್ಲೂ ಸಂಪರ್ಕವನ್ನು ಖಚಿತಪಡಿಸುತ್ತದೆ ಮತ್ತು ಗಡಿ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಸಶಸ್ತ್ರ ಪಡೆಗಳಿಗೆ ಅಪಾರ ವ್ಯೂಹಾತ್ಮಕ ಮೌಲ್ಯವನ್ನು ಹೊಂದಿದೆ. ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್ ಬಳಸಿ ನಿರ್ಮಿಸಲಾದ ಈ ಸುರಂಗವು, ಪರಿಶ್ರಮ ಮತ್ತು ಪ್ರಾದೇಶಿಕ ಬದ್ಧತೆಯು ದೂರದ ಪರ್ವತ ಸಮುದಾಯಗಳ ಭವಿಷ್ಯವನ್ನು ಹೇಗೆ ಮರುರೂಪಿಸಬಹುದು ಎಂಬುದಕ್ಕೆ ಪ್ರಬಲ ನೆನಪಾಗಿದೆ.
ಬನಿಹಾಲ್-ಕಾಜಿಗುಂಡ್ ರಸ್ತೆ ಸುರಂಗ

₹3,100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬನಿಹಾಲ್-ಕಾಜಿಗುಂಡ್ ರಸ್ತೆ ಸುರಂಗವು 8.45 ಕಿ.ಮೀ ಉದ್ದದ ಅವಳಿ-ಕೊಳವೆ ಸುರಂಗವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಈ ಸುರಂಗವು ಬನಿಹಾಲ್ ಮತ್ತು ಕಾಜಿಗುಂಡ್ ನಡುವಿನ ರಸ್ತೆ ದೂರವನ್ನು 16 ಕಿ.ಮೀ ನಷ್ಟು ಕಡಿಮೆ ಮಾಡಿದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆಯಷ್ಟು ಉಳಿಸಿದೆ. ಸಂಚಾರದ ಪ್ರತಿ ದಿಕ್ಕಿಗೆ ಒಂದರಂತೆ ಎರಡು ಪ್ರತ್ಯೇಕ ಕೊಳವೆಗಳೊಂದಿಗೆ ಇದನ್ನು ನಿರ್ಮಿಸಲಾಗಿದ್ದು, ನಿರ್ವಹಣೆ ಮತ್ತು ತುರ್ತು ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಪ್ರತಿ 500 ಮೀಟರ್‌ಗೆ ಅಡ್ಡ ಹಾದಿಗಳಿಂದ ಇವುಗಳನ್ನು ಪರಸ್ಪರ ಜೋಡಿಸಲಾಗಿದೆ. ಇದು ಎಲ್ಲಾ ಹವಾಮಾನಕ್ಕೂ ಸೂಕ್ತವಾದ ರಸ್ತೆ ಸಂಪರ್ಕವನ್ನು ಸ್ಥಾಪಿಸಿದ್ದು, ಆ ಮೂಲಕ ಪ್ರವೇಶವನ್ನು ಬಲಪಡಿಸಿ ಎರಡು ಪ್ರದೇಶಗಳನ್ನು ಹತ್ತಿರ ತಂದಿದೆ.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗ

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲು ಚೆನಾನಿ-ನಾಶ್ರಿ ಸುರಂಗ ಎಂದು ಕರೆಯಲ್ಪಡುತ್ತಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗವು, ಉಧಂಪುರ ಮತ್ತು ರಾಂಬನ್ ಅನ್ನು ಸಂಪರ್ಕಿಸುವ 9 ಕಿ.ಮೀ ಉದ್ದದ, ಅವಳಿ-ಕೊಳವೆ, ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾದ ರಸ್ತೆ ಸುರಂಗವಾಗಿದೆ. ಕಠಿಣ ಹಿಮಾಲಯದ ಭೂಪ್ರದೇಶದಲ್ಲಿ ಸುಮಾರು 1,200 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ಇದು, 41 ಕಿ.ಮೀ ರಸ್ತೆ ದೂರವನ್ನು ತಪ್ಪಿಸುವ ಮೂಲಕ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳಷ್ಟು ಕಡಿಮೆ ಮಾಡಿದೆ. ಈ ಸುರಂಗವು ಸುಧಾರಿತ ವಾತಾಯನ, ಸುರಕ್ಷತೆ ಮತ್ತು ಬುದ್ಧಿವಂತ ಸಂಚಾರ ವ್ಯವಸ್ಥೆಗಳನ್ನು ಹೊಂದಿದ್ದು, ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಂಪೂರ್ಣ ಸಂಯೋಜಿತ ನಿಯಂತ್ರಣ ಕಾರ್ಯವಿಧಾನದ ಮೂಲಕ ಕಾರ್ಯನಿರ್ವಹಿಸುತ್ತದೆ. 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಕಿಲ್ ಇಂಡಿಯಾ' ಉಪಕ್ರಮಗಳಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸ್ಥಳೀಯ ಜನರ ಕೌಶಲ್ಯಗಳನ್ನು ಸುಧಾರಿಸಿ ಅವರನ್ನು ಈ ಸುರಂಗದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಈ ಯೋಜನೆಯು 2,000ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿದ್ದು, ಇಲ್ಲಿನ ಒಟ್ಟು ಕಾರ್ಯಪಡೆಯಲ್ಲಿ ಶೇಕಡಾ 94 ರಷ್ಟು ಜನರು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ.
ಯುಎಸ್‌ಬಿಆರ್‌ಎಲ್ ಯೋಜನೆಯಡಿ ಸುರಂಗ T-50

ಸುರಂಗ T50
ಜಮ್ಮು ಮತ್ತು ಕಾಶ್ಮೀರದ ಖಾರಿ ಮತ್ತು ಸುಂಬರ್ ಅನ್ನು ಸಂಪರ್ಕಿಸುವ 12.77 ಕಿ.ಮೀ ಉದ್ದದ ಎಂಜಿನಿಯರಿಂಗ್ ಸಾಧನೆಯಾದ ಸುರಂಗ T50, ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ ಯೋಜನೆಯಡಿ ನಿರ್ಮಿಸಲಾದ ಭಾರತದ ಅತಿ ಉದ್ದದ ಸಾರಿಗೆ ಸುರಂಗಗಳಲ್ಲಿ ಒಂದಾಗಿದೆ. ಇದು ಕಾಶ್ಮೀರ ಕಣಿವೆ ಮತ್ತು ದೇಶದ ಉಳಿದ ಭಾಗಗಳ ನಡುವೆ ನಿರ್ಣಾಯಕ ರೈಲು ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. 'ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್' ಬಳಸಿ ನಿರ್ಮಿಸಲಾದ ಈ ಸುರಂಗವು ಕ್ವಾರ್ಟ್‌ಜೈಟ್, ನೈಸ್‌ನಿಂದ ಹಿಡಿದು ಫಿಲೈಟ್‌ವರೆಗಿನ ಸವಾಲಿನ ಭೂವೈಜ್ಞಾನಿಕ ಪ್ರದೇಶಗಳನ್ನು ಹಾದುಹೋಗುತ್ತದೆ. ಎಂಜಿನಿಯರ್‌ಗಳು ನೀರಿನ ಅತಿಯಾದ ಒಳಹರಿವು, ಭೂಕುಸಿತಗಳು ಮತ್ತು ಕಠಿಣ ಶಿಲಾ ರಚನೆಗಳಂತಹ ಅಡೆತಡೆಗಳನ್ನು ಮೆಟ್ಟಿ ನಿಂತು ಇದನ್ನು ನಿರ್ಮಿಸಿದ್ದಾರೆ. ಸುರಕ್ಷತೆಗಾಗಿ ಈ ಸುರಂಗವು ಮುಖ್ಯ ಕೊಳವೆಯ ಜೊತೆಗೆ ಒಂದು ಸಮಾನಾಂತರ 'ಎಸ್ಕೇಪ್' ಸುರಂಗವನ್ನು ಹೊಂದಿದ್ದು, ಇವೆರಡನ್ನೂ ಪ್ರತಿ 375 ಮೀಟರ್‌ಗೆ ಪರಸ್ಪರ ಜೋಡಿಸಲಾಗಿದೆ. ಪ್ರತಿ 50 ಮೀಟರ್‌ಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಕೇಂದ್ರ ನಿಯಂತ್ರಣ ಕೊಠಡಿಯ ಮೇಲ್ವಿಚಾರಣೆಯೊಂದಿಗೆ, T50 ಅನ್ನು ಸುರಕ್ಷಿತ ರೈಲು ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ.
ಕೋಲ್ಕತ್ತಾದ ನೀರೊಳಗಿನ ಮೆಟ್ರೋ ಸುರಂಗ
2024 ರಲ್ಲಿ, ಭಾರತವು ಕೋಲ್ಕತ್ತಾದ ಹೂಗ್ಲಿ ನದಿಯ ಅಡಿಯಲ್ಲಿ ಎಸ್‌ಪ್ಲನೇಡ್ ಮತ್ತು ಹೌರಾ ಮೈದಾನವನ್ನು ಸಂಪರ್ಕಿಸುವ ತನ್ನ ಮೊಟ್ಟಮೊದಲ ನೀರೊಳಗಿನ ಮೆಟ್ರೋ ಸುರಂಗವನ್ನು ಪ್ರಾರಂಭಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿತು. ಈ ಎಂಜಿನಿಯರಿಂಗ್ ಸಾಧನೆಯು ರಾಷ್ಟ್ರದ ಉದಯೋನ್ಮುಖ ತಾಂತ್ರಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯಗಳನ್ನು ಪ್ರದರ್ಶಿಸುವುದಲ್ಲದೆ, ಭಾರತದ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ಪ್ರದೇಶವೊಂದರ ನಗರ ಸಂಚಾರ ವ್ಯವಸ್ಥೆಯನ್ನು ಮರುರೂಪಿಸುತ್ತದೆ.
ಭಾರತದ ಮುಂದಿನ ಹಂತದ ಸುರಂಗ ಯೋಜನೆಗಳು
ಹೊಸ ಪೀಳಿಗೆಯ ಸುರಂಗಗಳು ಇದೀಗ ರೂಪುಗೊಳ್ಳುತ್ತಿವೆ. ಬರಲಿರುವ ಈ ಯೋಜನೆಗಳು ದೇಶದ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಯನ್ನು ಮರುರೂಪಿಸುವ ಭರವಸೆ ನೀಡುತ್ತವೆ. ಕೆಳಗಿನ ಮುಂಬರುವ ಯೋಜನೆಗಳು ಪ್ರಗತಿಯಲ್ಲಿರುವ ಅಭಿವೃದ್ಧಿಯ ಪ್ರಮಾಣವನ್ನು ಎತ್ತಿ ತೋರಿಸುತ್ತವೆ.
ಜೋಜಿಲಾ ಸುರಂಗ

ಜೋಜಿಲಾ ಸುರಂಗ
ಜೋಜಿಲಾ ಸುರಂಗವು ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿ ಒಂದು ಸ್ಮರಣೀಯ ಸಾಧನೆಯಾಗಿ ಹೊರಹೊಮ್ಮುತ್ತಿದೆ. ಲಡಾಖ್ ಮತ್ತು ದೇಶದ ಉಳಿದ ಭಾಗಗಳ ನಡುವೆ ವಿಶ್ವಾಸಾರ್ಹವಾದ, ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾದ ಸಂಪರ್ಕವನ್ನು ಸ್ಥಾಪಿಸಲು ಇದು ಅತ್ಯಂತ ಕಠಿಣವಾದ ಹಿಮಾಲಯದ ಶಿಲಾ ರಚನೆಗಳನ್ನು ಸೀಳಿ ನಿರ್ಮಾಣವಾಗುತ್ತಿದೆ. ಈಗಾಗಲೇ ಸುಮಾರು 12 ಕಿಲೋಮೀಟರ್‌ಗಳಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಈ ಯೋಜನೆಯು ಸುಧಾರಿತ ಸುರಕ್ಷತಾ ಕ್ರಮಗಳನ್ನು ಮತ್ತು ಪರ್ವತದ ಆಳದಲ್ಲಿ ನಿರಂತರ ಗಾಳಿಯ ಹರಿವನ್ನು ಕಾಯ್ದುಕೊಳ್ಳಲು ವಿನ್ಯಾಸಗೊಳಿಸಲಾದ 'ಸೆಮಿ-ಟ್ರಾನ್ಸ್‌ವರ್ಸ್ ವೆಂಟಿಲೇಶನ್' ವ್ಯವಸ್ಥೆಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಸ್ಮಾರ್ಟ್ ಟನಲ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದನ್ನು 'ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್' ಬಳಸಿ ನಿರ್ಮಿಸಲಾಗುತ್ತಿದೆ. ಇದು ಸಿಸಿಟಿವಿ ಕಣ್ಗಾವಲು, ರೇಡಿಯೋ ನಿಯಂತ್ರಣ, ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ಮತ್ತು ವಾತಾಯನ ವ್ಯವಸ್ಥೆಗಳಂತಹ ಸೌಲಭ್ಯಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಸರ್ಕಾರಕ್ಕೆ ₹5,000 ಕೋಟಿಗೂ ಹೆಚ್ಚು ಉಳಿತಾಯವಾಗಿದೆ.
ಒಮ್ಮೆ ಪೂರ್ಣಗೊಂಡ ನಂತರ, ಈ ಮಹತ್ವಾಕಾಂಕ್ಷೆಯ ಯೋಜನೆಯು ಭಾರತದ ಅತಿ ಉದ್ದದ ರಸ್ತೆ ಸುರಂಗ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿರುವ ಈ ಯೋಜನೆಯು 30 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿದ್ದು (ಸಂಪರ್ಕ ರಸ್ತೆಗಳೂ ಸೇರಿ), 2028 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯ ನಿರ್ಣಾಯಕ ಭಾಗವಾಗಿರುವ ಇದು, ಈ ಪ್ರದೇಶದಲ್ಲಿ ನಾಗರಿಕ ಮತ್ತು ಮಿಲಿಟರಿ ಸಂಚಾರ ಎರಡನ್ನೂ ಬಲಪಡಿಸುವ ಭರವಸೆ ನೀಡುತ್ತದೆ.
ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಸುರಂಗ
ಭಾರತದ ಮೊದಲ ಬುಲೆಟ್ ರೈಲು ಮಾರ್ಗದ ಪ್ರಮುಖ ಭಾಗವಾಗಿರುವ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್, ತನ್ನ 4.8 ಕಿ.ಮೀ ಉದ್ದದ ಸಮುದ್ರದೊಳಗಿನ ಸುರಂಗ ವಿಭಾಗದ ಯಶಸ್ವಿ ಪೂರ್ಣಗೊಳಿಸುವಿಕೆಯೊಂದಿಗೆ ಭವಿಷ್ಯದತ್ತ ಹೆಜ್ಜೆ ಹಾಕಿದೆ. ಘನ್ಸೋಲಿ ಮತ್ತು ಶಿಲ್ಪಾಟಾ ಎರಡೂ ತುದಿಗಳಿಂದ ಏಕಕಾಲದಲ್ಲಿ ಉತ್ಖನನ ನಡೆಸಲಾದ ಈ ಸುರಂಗವು ಅಸಾಧಾರಣ ಸವಾಲುಗಳನ್ನು ಒಡ್ಡಿತು. ಎಂಜಿನಿಯರಿಂಗ್ ತಂಡಗಳು ಕಠಿಣವಾದ ನೀರೊಳಗಿನ ಭೂಪ್ರದೇಶದ ಮೂಲಕ ಅತ್ಯಂತ ನಿಖರವಾಗಿ ಮುನ್ನಡೆದು ಈ ಸಾಧನೆ ಮಾಡಿವೆ, ಇದನ್ನು ಭಾರತದ ಎಂಜಿನಿಯರಿಂಗ್ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಕರೆಯಲಾಗಿದೆ.
ಈ ಯೋಜನೆಯು ವ್ಯಾಪಕ ಸುರಕ್ಷತಾ ಕ್ರಮಗಳೊಂದಿಗೆ ಸುಧಾರಿತ 'ನ್ಯೂ ಆಸ್ಟ್ರಿಯನ್ ಟನೆಲಿಂಗ್ ಮೆಥಡ್' ಅನ್ನು ಬಳಸಿಕೊಳ್ಳುತ್ತದೆ. ಎರಡು ಹೈ-ಸ್ಪೀಡ್ ರೈಲುಗಳಿಗೆ ಅವಕಾಶ ಕಲ್ಪಿಸುವ ಏಕ-ಕೊಳವೆ ತಂತ್ರಜ್ಞಾನವನ್ನು ಬಳಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸುರಂಗವು ಅತ್ಯಾಧುನಿಕ ರೈಲು ನಿರ್ಮಾಣದ ಮುಂಚೂಣಿಯಲ್ಲಿದ್ದು, ಭಾರತದ ಮುಂದಿನ ಪೀಳಿಗೆಯ ಸಾರಿಗೆ ಮೂಲಸೌಕರ್ಯವನ್ನು ಉತ್ತೇಜಿಸುವ ನಾವೀನ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಋಷಿಕೇಶ-ಕರ್ಣಪ್ರಯಾಗ ಹೊಸ ರೈಲು ಮಾರ್ಗ ಯೋಜನೆಯ ಸುರಂಗಗಳು
ಉತ್ತರಾಖಂಡದ ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗವು ಭಾರತೀಯ ಹಿಮಾಲಯದ ಒಂದು ಮೈಲಿಗಲ್ಲಿನ ಸುರಂಗ ಯೋಜನೆಯಾಗಿದೆ. ಸುಮಾರು 125 ಕಿ.ಮೀ ಉದ್ದದ ಈ ಮಾರ್ಗವು ಭೌಗೋಳಿಕವಾಗಿ ಅತ್ಯಂತ ಸಂಕೀರ್ಣವಾದ ಮತ್ತು ಪರಿಸರ ಸೂಕ್ಷ್ಮವಾದ ಹಿಮಾಲಯದ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ಕಾರಣದಿಂದಾಗಿ, ಯೋಜನೆಯು ಪ್ರಧಾನವಾಗಿ ಸುರಂಗ-ಆಧಾರಿತವಾಗಿದೆ. ಇದು ಸುಮಾರು 105 ಕಿ.ಮೀ ಒಟ್ಟು ಉದ್ದದ 16 ಮುಖ್ಯ ಮಾರ್ಗದ ಸುರಂಗಗಳನ್ನು ಮತ್ತು ಸುಮಾರು 98 ಕಿ.ಮೀ ಒಟ್ಟು ಉದ್ದದ 12 ಸಮಾನಾಂತರ ಎಸ್ಕೇಪ್ ಸುರಂಗಗಳನ್ನು ಒಳಗೊಂಡಿದೆ. ಒಟ್ಟು 213 ಕಿ.ಮೀ ಸುರಂಗ ನಿರ್ಮಾಣದ ಗುರಿಯಲ್ಲಿ ಈಗಾಗಲೇ 199 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಯ ಪ್ರಮುಖ ತಾಂತ್ರಿಕ ಸಾಧನೆಯೆಂದರೆ, ಭಾರತೀಯ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಹಿಮಾಲಯದ ಭೂವೈಜ್ಞಾನಿಕ ಪರಿಸ್ಥಿತಿಯಲ್ಲಿ ಟನಲ್ ಬೋರಿಂಗ್ ಮಷೀನ್ ಅನ್ನು ಬಳಸಲಾಗಿದೆ. ಇದನ್ನು 14.8 ಕಿ.ಮೀ ಉದ್ದದ ಸುರಂಗ T-8 ಗಾಗಿ ಬಳಸಲಾಗಿದ್ದು, ಅದರ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸುರಕ್ಷತೆ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲು ಸುಧಾರಿತ ಸುರಂಗ ನಿರ್ಮಾಣ ತಂತ್ರಗಳು ಮತ್ತು ನಿರಂತರ ಮೇಲ್ವಿಚಾರಣೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದು ಋಷಿಕೇಶ-ಕರ್ಣಪ್ರಯಾಗ ಸುರಂಗಗಳನ್ನು ಭಾರತದಲ್ಲಿ ಎತ್ತರದ ಪ್ರದೇಶದ ರೈಲ್ವೆ ಸುರಂಗ ನಿರ್ಮಾಣಕ್ಕೆ ಒಂದು ಉತ್ತಮ ಉದಾಹರಣೆಯನ್ನಾಗಿ ಮಾಡಿದೆ.
ಸುರಂಗದ ಕೊನೆಯಲ್ಲಿನ ಬೆಳಕು (ಮುಕ್ತಾಯ)
ಭಾರತದ ಸುರಂಗ ಮೂಲಸೌಕರ್ಯವು ಹೆಚ್ಚು ಸ್ಮಾರ್ಟ್ ಮತ್ತು ಸದೃಢ ಅಭಿವೃದ್ಧಿಯತ್ತ ಸಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಗಳು ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ಬೆಂಬಲಿಸುವ ಜೊತೆಗೆ ದೀರ್ಘಕಾಲದ ಸಂಪರ್ಕ ಸವಾಲುಗಳನ್ನು ಪರಿಹರಿಸುತ್ತವೆ. ತಂತ್ರಜ್ಞಾನ ಮತ್ತು ಅನುಷ್ಠಾನದಲ್ಲಿನ ಪ್ರಗತಿಯು ಸಂಕೀರ್ಣ ಭೂಪ್ರದೇಶಗಳಲ್ಲಿ ಸುರಕ್ಷಿತವಾಗಿ ನಿರ್ಮಾಣ ಮಾಡುವ ಭಾರತದ ಸಾಮರ್ಥ್ಯವನ್ನು ಬಲಪಡಿಸಿದೆ. ಹೊಸ ಸುರಂಗಗಳು ಕಾರ್ಯಾಚರಣೆಗೆ ಬಂದಂತೆ, ಅವು ಸಂಚಾರದ ವೇಗ, ವಿಶ್ವಾಸಾರ್ಹತೆ ಮತ್ತು ಪ್ರಾದೇಶಿಕ ಏಕೀಕರಣವನ್ನು ಸುಧಾರಿಸುವುದನ್ನು ಮುಂದುವರಿಸುತ್ತವೆ. ಒಟ್ಟಾರೆಯಾಗಿ, ಇವು ಭೌಗೋಳಿಕತೆಯು ಇನ್ನು ಮುಂದೆ ಪ್ರಗತಿಗೆ ಅಡ್ಡಿಯಾಗದ ಭವಿಷ್ಯದ ಸಂಕೇತವಾಗಿವೆ.
References
Ministry of Railways
https://www.pib.gov.in/PressReleasePage.aspx?PRID=2168979®=3&lang=2
https://www.pib.gov.in/PressReleasePage.aspx?PRID=2150293
Ministry of Road Transport and Highways
https://www.nhidcl.com/en/blog/sonamarg-tunnel-step-towards-regional-prosperity
https://www.pib.gov.in/PressReleaseIframePage.aspx?PRID=1915271
https://www.pib.gov.in/PressReleasePage.aspx?PRID=1486325®=3&lang=2
https://www.pib.gov.in/PressReleasePage.aspx?PRID=1589080®=3&lang=2
Ministry of Defence
https://www.pib.gov.in/PressReleasePage.aspx?PRID=1796961
https://www.pib.gov.in/PressReleaseIframePage.aspx?PRID=2012962®=3&lang=2
Ministry of Steel
https://www.pib.gov.in/PressReleasePage.aspx?PRID=2146321®=3&lang=2
Prime Minister’s Office
https://www.pib.gov.in/PressReleasePage.aspx?PRID=2092468®=3&lang=2
https://www.pib.gov.in/PressReleaseIframePage.aspx?PRID=1819193®=3&lang=2
Press Information Bureau
https://www.pib.gov.in/PressNoteDetails.aspx?NoteId=154553&ModuleId=3®=3&lang=2
https://www.pib.gov.in/PressNoteDetails.aspx?NoteId=155002&ModuleId=3®=3&lang=2
https://www.pib.gov.in/PressNoteDetails.aspx?NoteId=154624&ModuleId=3®=6&lang=1
Others Links
https://www.pib.gov.in/PressReleseDetailm.aspx?PRID=1583779®=3&lang=2
https://ladakh.gov.in/ladakh-chief-secretary-reviews-zojila-tunnel-progress-12-km-completed-project-on-track-for-2028-finish/
https://marvels.bro.gov.in/AtalTunnel
https://marvels.bro.gov.in/BROMarvels/SelaTunnel
Click here for pdf file.
******
(Explainer ID: 156959)
आगंतुक पटल : 17
Provide suggestions / comments