ಹೊಸ ವ್ಯಾಪಾರ ಒಪ್ಪಂದ: ರಫ್ತು, ಸೇವೆಗಳು ಮತ್ತು ಉದ್ಯೋಗಗಳ ಮೇಲಿನ ಪರಿಣಾಮ
Posted On:
10 JAN 2026 3:11PM
ಪ್ರಮುಖ ಮಾರ್ಗಸೂಚಿಗಳು
-
ಭಾರತ-ಓಮನ್ ಸಿಇಪಿಎ ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆ, ವೃತ್ತಿಪರರ ಸಂಚಾರ ಮತ್ತು ನಿಯಂತ್ರಕ ಸಹಕಾರವನ್ನು ಒಳಗೊಂಡಿರುವ ಒಂದು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ.
-
2024-25ರ ಹಣಕಾಸು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರವು 10.61 ಶತಕೋಟಿ ಅಮೆರಿಕನ್ ಡಾಲರ್ ತಲುಪಿದ್ದು, ಇದು ಭಾರತ ಮತ್ತು ಓಮನ್ ನಡುವಿನ ಆರ್ಥಿಕ ಬಾಂಧವ್ಯದ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.
-
ಭಾರತವು ಓಮನ್ ಮಾರುಕಟ್ಟೆಯಲ್ಲಿ ಶೇ. 98.08 ರಷ್ಟು ಸುಂಕದ ಸಾಲುಗಳ ಮೇಲೆ 100% ಸುಂಕ ರಹಿತ ಪ್ರವೇಶವನ್ನು ಪಡೆದುಕೊಂಡಿದೆ. ಇದು ರಫ್ತು ಮೌಲ್ಯದ ಶೇ. 99.38 ರಷ್ಟನ್ನು ಒಳಗೊಂಡಿದ್ದು, ಈ ಸೌಲಭ್ಯಗಳು ಒಪ್ಪಂದ ಜಾರಿಯಾದ ಮೊದಲ ದಿನದಿಂದಲೇ ಜಾರಿಗೆ ಬರಲಿವೆ.
-
ಈ ಒಪ್ಪಂದವು ಇಂಜಿನಿಯರಿಂಗ್ ಸರಕುಗಳು, ಔಷಧಗಳು, ಕೃಷಿ ಮತ್ತು ಸಂಸ್ಕರಿಸಿದ ಆಹಾರ, ಸಮುದ್ರ ಉತ್ಪನ್ನಗಳು, ಜವಳಿ, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್ ಹಾಗೂ ರತ್ನ ಮತ್ತು ಆಭರಣಗಳ ವಲಯದಲ್ಲಿ ವ್ಯಾಪಕ ರಫ್ತು ಅವಕಾಶಗಳನ್ನು ತೆರೆದಿಡುತ್ತದೆ.
-
'ವಿನಾಯಿತಿ ಪಟ್ಟಿ'ಯನ್ನು ಒಳಗೊಂಡಿರುವ ಎಚ್ಚರಿಕೆಯ ಉದಾರೀಕರಣದ ವಿಧಾನವು ಸೂಕ್ಷ್ಮ ವಲಯಗಳನ್ನು ರಕ್ಷಿಸುವುದರ ಜೊತೆಗೆ, ಎಂಎಸ್‌ಎಂಇಗಳು, ಶ್ರಮ-ಆಧಾರಿತ ಕೈಗಾರಿಕೆಗಳು ಮತ್ತು ದೇಶಾದ್ಯಂತದ ರಫ್ತು ಬೆಳವಣಿಗೆಗೆ ಬೆಂಬಲ ನೀಡುತ್ತದೆ.
ಪೀಠಿಕೆ
ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)
ದೇಶಗಳ ನಡುವಿನ ಈ ವ್ಯಾಪಕ ಶ್ರೇಣಿಯ ಒಪ್ಪಂದವು ಕೇವಲ ಸರಕುಗಳ ವ್ಯಾಪಾರಕ್ಕೆ ಸೀಮಿತವಾಗದೆ ಸೇವೆಗಳು, ಹೂಡಿಕೆ, ಸರ್ಕಾರಿ ಸಂಗ್ರಹಣೆ, ವಿವಾದ ಇರ್ಥ ಮತ್ತು ಇತರ ನಿಯಂತ್ರಕ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಪರಸ್ಪರ ಮಾನ್ಯತೆ ನೀಡುವ ಒಪ್ಪಂದಗಳನ್ನು ಒಳಗೊಂಡಿದ್ದು, ಪಾಲುದಾರ ದೇಶಗಳ ವಿಭಿನ್ನ ನಿಯಂತ್ರಕ ವ್ಯವಸ್ಥೆಗಳು ಸಮಾನವಾದ ಫಲಿತಾಂಶಗಳನ್ನು ನೀಡುತ್ತವೆ ಎಂಬ ಆಧಾರದ ಮೇಲೆ ಅವುಗಳನ್ನು ಅಂಗೀಕರಿಸುತ್ತದೆ. ಭಾರತ ಮತ್ತು ಓಮನ್ ನಡುವಿನ ಈ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು (ಸಿಇಪಿಎ), ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಒಪ್ಪಂದವು ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆ, ವೃತ್ತಿಪರರ ಸಂಚಾರ ಮತ್ತು ನಿಯಂತ್ರಕ ಸಹಕಾರವನ್ನು ಒಂದೇ ಸುಸಂಬದ್ಧ ಚೌಕಟ್ಟಿನ ಅಡಿಯಲ್ಲಿ ತರುತ್ತದೆ, ಇದು ದ್ವಿಪಕ್ಷೀಯ ಆರ್ಥಿಕ ಏಕೀಕರಣವನ್ನು ಆಳಗೊಳಿಸುವ ಗುರಿಯನ್ನು ಹೊಂದಿದೆ.
ಯಾವುದೇ ಒಂದು ನಿರ್ದಿಷ್ಟ ವಲಯ ಅಥವಾ ಕೇವಲ ಸುಂಕದ ಕಡಿತದ ಮೇಲೆ ಕೇಂದ್ರೀಕರಿಸುವ ಬದಲು, ಸಿಇಪಿಎ ಅನ್ನು ಸ್ಥಿರ ಮತ್ತು ದೀರ್ಘಕಾಲದ ಆರ್ಥಿಕ ಒಡನಾಟವನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ವ್ಯಾಪಾರವನ್ನು ಸುಗಮಗೊಳಿಸುವ ಮೂಲಕ, ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ, ಈ ಒಪ್ಪಂದವು ಶ್ರಮ-ಆಧಾರಿತ ವಲಯಗಳು, ಸೇವೆಗಳು ಮತ್ತು ಉದಯೋನ್ಮುಖ ಸಹಕಾರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆಯಲು ಪ್ರಯತ್ನಿಸುತ್ತದೆ. ಅದೇ ಸಮಯದಲ್ಲಿ, ಇದು ಮಾರುಕಟ್ಟೆ ಪ್ರವೇಶಕ್ಕೆ ಸಮತೋಲಿತ ಮತ್ತು ಎಚ್ಚರಿಕೆಯ ವಿಧಾನವನ್ನು ಕಾಯ್ದುಕೊಳ್ಳುತ್ತದೆ. ದೇಶೀಯ ಆದ್ಯತೆಗಳು ಮತ್ತು ರಕ್ಷಣೆಗಳಿಗೆ ಧಕ್ಕೆಯಾಗದಂತೆ, ಉಭಯ ದೇಶಗಳ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಸ್ಪಷ್ಟ ನಿಯಮಗಳು, ವಿಶಾಲವಾದ ಮಾರುಕಟ್ಟೆ ಪ್ರವೇಶ ಮತ್ತು ಹೆಚ್ಚಿನ ಮುನ್ಸೂಚನೆಯನ್ನು ಇದು ಒದಗಿಸುತ್ತದೆ.
ಭಾರತ–ಓಮನ್ ಆರ್ಥಿಕ ಒಡನಾಟ
ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿ ವ್ಯಾಪಾರ ಮತ್ತು ವಾಣಿಜ್ಯವು ಒಂದು ಪ್ರಮುಖ ಸ್ತಂಭವಾಗಿದೆ. ದ್ವಿಪಕ್ಷೀಯ ವ್ಯಾಪಾರದಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ವೈವಿಧ್ಯತೆಗೆ ಇರುವ ಅವಕಾಶಗಳನ್ನು ಎರಡೂ ದೇಶಗಳು ಗುರುತಿಸಿವೆ. 2024–25ರ ಹಣಕಾಸು ವರ್ಷದಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 10.61 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟಿತ್ತು. ಇದು 2023–24ರ ಹಣಕಾಸು ವರ್ಷದ 8.94 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಇನ್ನು 2025ರ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ವ್ಯಾಪಾರವು 6.48 ಶತಕೋಟಿ ಡಾಲರ್‌ಗಳನ್ನು ತಲುಪಿದೆ.

ಸರಕು ವ್ಯಾಪಾರ
-
2024-25ರ ಹಣಕಾಸು ವರ್ಷದಲ್ಲಿ ಓಮನ್‌ಗೆ ಭಾರತದ ರಫ್ತಿನ ಮೌಲ್ಯವು 4.06 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು. 2025ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ರಫ್ತು ಪ್ರಮಾಣವು 2.57 ಶತಕೋಟಿ ಡಾಲರ್ ತಲುಪಿದ್ದು, ಸುಮಾರು ಶೇ. 5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
-
ಓಮನ್‌ನಿಂದ ಭಾರತದ ಆಮದು ಪ್ರಮಾಣವು 2024-25ರ ಹಣಕಾಸು ವರ್ಷದಲ್ಲಿ 6.55 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು. ಹಾಗೆಯೇ, 2025ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಆಮದು ಪ್ರಮಾಣವು 3.91 ಶತಕೋಟಿ ಡಾಲರ್ ನಷ್ಟಿತ್ತು.
ಸೇವಾ ವಲಯದ ವ್ಯಾಪಾರ
-
ಓಮನ್‌ಗೆ ಭಾರತದ ಸೇವೆಗಳ ರಫ್ತು 2020ರಲ್ಲಿ 397 ಮಿಲಿಯನ್ ಡಾಲರ್‌ನಷ್ಟಿದ್ದು, ಅದು 2023 ರ ವೇಳೆಗೆ 617 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದರಲ್ಲಿ ಪ್ರಮುಖವಾಗಿ ದೂರಸಂಪರ್ಕ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳು, ಇತರ ವ್ಯವಹಾರ ಸೇವೆಗಳು, ಸಾರಿಗೆ ಮತ್ತು ಪ್ರವಾಸೋದ್ಯಮ ಸೇವೆಗಳು ಪ್ರಮುಖ ಪಾತ್ರ ವಹಿಸಿವೆ.
-
ಓಮನ್‌ನಿಂದ ಭಾರತಕ್ಕೆ ಸೇವೆಗಳ ಆಮದು 101 ಮಿಲಿಯನ್ ಡಾಲರ್‌ನಿಂದ 159 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದರಲ್ಲಿ ಸಾರಿಗೆ, ಪ್ರವಾಸೋದ್ಯಮ, ದೂರಸಂಪರ್ಕ ಮತ್ತು ಇತರ ವ್ಯವಹಾರ ಸೇವೆಗಳು ಪ್ರಮುಖ ಕ್ಷೇತ್ರಗಳಾಗಿವೆ.
ಸರಕು ಮತ್ತು ಸೇವೆಗಳ ಈ ವಿಸ್ತಾರವಾದ ಒಡನಾಟವು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (ಸಿಇಪಿಎ) ಮುಂದುವರಿಸುವ ನಿರ್ಧಾರಕ್ಕೆ ಬಲವಾದ ಅಡಿಪಾಯವನ್ನು ಒದಗಿಸಿದೆ.
ಸರಕುಗಳಲ್ಲಿ ಮಾರುಕಟ್ಟೆ ಪ್ರವೇಶ: ಭಾರತದ ಲಾಭಗಳು

ಸಿಇಪಿಎ ಒಪ್ಪಂದದ ಅಡಿಯಲ್ಲಿ, ಓಮನ್‌ಗೆ ರಫ್ತಾಗುವ ಭಾರತದ ಸರಕುಗಳಿಗೆ ಶೇ. 100 ರಷ್ಟು ಸುಂಕ ರಹಿತ ಮಾರುಕಟ್ಟೆ ಪ್ರವೇಶವನ್ನು ಭಾರತ ಖಚಿತಪಡಿಸಿಕೊಂಡಿದೆ. ಇದು ಓಮನ್‌ನ ಶೇ. 98.08 ರಷ್ಟು ಸುಂಕದ ಸಾಲುಗಳನ್ನು ಒಳಗೊಂಡಿದೆ ಮತ್ತು 2022–23ರ ಸರಾಸರಿಯ ಆಧಾರದ ಮೇಲೆ ಭಾರತದ ಒಟ್ಟು ವ್ಯಾಪಾರ ಮೌಲ್ಯದ ಶೇ. 99.38 ರಷ್ಟನ್ನು ಆವರಿಸುತ್ತದೆ. ಈ ಎಲ್ಲಾ ಶೂನ್ಯ-ಸುಂಕದ ಸೌಲಭ್ಯಗಳು ಒಪ್ಪಂದವು ಜಾರಿಗೆ ಬಂದ ಮೊದಲ ದಿನದಿಂದಲೇ ಅನ್ವಯವಾಗಲಿದ್ದು, ರಫ್ತುದಾರರಿಗೆ ತಕ್ಷಣದ ಭರವಸೆಯನ್ನು ನೀಡಲಿವೆ.
ಪ್ರಸ್ತುತ, ಎಂಎಫ್ಎನ್ ವ್ಯವಸ್ಥೆಯ ಅಡಿಯಲ್ಲಿ ಭಾರತದ ರಫ್ತು ಮೌಲ್ಯದ ಕೇವಲ ಶೇ. 15.33 ರಷ್ಟು ಮತ್ತು ಶೇ. 11.34 ರಷ್ಟು ಸುಂಕದ ಸಾಲುಗಳು ಮಾತ್ರ ಓಮನ್ ಮಾರುಕಟ್ಟೆಯನ್ನು ಶೂನ್ಯ ಸುಂಕದಲ್ಲಿ ಪ್ರವೇಶಿಸುತ್ತಿವೆ. ಈ ಹೊಸ ಸಿಇಪಿಎ ಒಪ್ಪಂದದೊಂದಿಗೆ, ಈ ಹಿಂದೆ ಶೇ. 5 ರವರೆಗೆ ಸುಂಕವನ್ನು ಎದುರಿಸುತ್ತಿದ್ದ ಮತ್ತು ಸುಮಾರು 3.64 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಭಾರತದ ರಫ್ತುಗಳು, ಸುಧಾರಿತ ಬೆಲೆ ಸ್ಪರ್ಧಾತ್ಮಕತೆಯಿಂದಾಗಿ ಗಮನಾರ್ಹ ಲಾಭವನ್ನು ಪಡೆಯಲಿವೆ ಎಂದು ನಿರೀಕ್ಷಿಸಲಾಗಿದೆ.
|
ಈ ಒಪ್ಪಂದವು ವ್ಯಾಪಕ ಶ್ರೇಣಿಯ ವಲಯಗಳಲ್ಲಿ ಭಾರತಕ್ಕೆ ರಫ್ತು ಅವಕಾಶಗಳನ್ನು ತೆರೆದಿಡುತ್ತದೆ. ಇದರಲ್ಲಿ ಪ್ರಮುಖವಾಗಿ ಖನಿಜಗಳು, ರಾಸಾಯನಿಕಗಳು, ಮೂಲ ಲೋಹಗಳು, ಯಂತ್ರೋಪಕರಣಗಳು, ಪ್ಲಾಸ್ಟಿಕ್ ಮತ್ತು ರಬ್ಬರ್, ಸಾರಿಗೆ ಮತ್ತು ವಾಹನ ಉತ್ಪನ್ನಗಳು, ವೈಜ್ಞಾನಿಕ ಉಪಕರಣಗಳು ಮತ್ತು ಗಡಿಯಾರಗಳು ಸೇರಿವೆ. ಇದರೊಂದಿಗೆ ಗಾಜು, ಸೆರಾಮಿಕ್ಸ್, ಮಾರ್ಬಲ್ (ಪದರಗಲ್ಲು), ಕಾಗದ, ಜವಳಿ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು ಹಾಗೂ ರತ್ನ ಮತ್ತು ಆಭರಣಗಳು ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ರಫ್ತು ಹೆಚ್ಚಿಸಲು ಈ ಒಪ್ಪಂದವು ದಾರಿಕಲ್ಪಿಸಿಕೊಡುತ್ತದೆ.
|
ಓಮನ್‌ನ 28 ಶತಕೋಟಿ ಅಮೆರಿಕನ್ ಡಾಲರ್ಗೂ ಅಧಿಕ ಮೌಲ್ಯದ ಆಮದು ಮಾರುಕಟ್ಟೆಗೆ ಈ ಒಪ್ಪಂದದ ಮೂಲಕ ಹೆಚ್ಚಿನ ಪ್ರವೇಶ ದೊರೆತಿದೆ. ಸರಳೀಕೃತ ನಿಯಂತ್ರಕ ಕ್ರಮಗಳು, ಕಡಿಮೆಗೊಳಿಸಿದ ಅನುಸರಣಾ ಅಗತ್ಯತೆಗಳು ಮತ್ತು ಮಾರುಕಟ್ಟೆಗೆ ವೇಗವಾಗಿ ಪ್ರವೇಶಿಸುವ ಅವಕಾಶಗಳಿಂದಾಗಿ, ಭಾರತೀಯ ರಫ್ತುದಾರರು ವಿವಿಧ ಉತ್ಪನ್ನ ವಿಭಾಗಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಉತ್ತಮ ಸ್ಥಾನದಲ್ಲಿದ್ದಾರೆ.
ಭಾರತದ ಮಾರುಕಟ್ಟೆ ಪ್ರವೇಶದ ಕೊಡುಗೆ ಮತ್ತು ಸುರಕ್ಷತಾ ಕ್ರಮಗಳು
|
"ವಿನಾಯಿತಿ ಪಟ್ಟಿ" ಯು ಆ ಎಲ್ಲಾ ವಸ್ತುಗಳನ್ನು ಒಳಗೊಂಡಿದೆ, ಇವುಗಳ ಮೇಲೆ ದೇಶಗಳು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅಡಿಯಲ್ಲಿ ಯಾವುದೇ ಸುಂಕದ ರಿಯಾಯಿತಿಯನ್ನು ನೀಡಿಲ್ಲ.
|
ಭಾರತವು ತನ್ನ ಒಟ್ಟು ಸುಂಕದ ಸಾಲುಗಳ (12,556) ಪೈಕಿ ಶೇ. 77.79 ರಷ್ಟು ಸಾಲುಗಳ ಮೇಲೆ ಸುಂಕ ಉದಾರೀಕರಣವನ್ನು ನೀಡಿದೆ. ಇದು ಮೌಲ್ಯದ ಆಧಾರದ ಮೇಲೆ ಓಮನ್‌ನಿಂದ ಭಾರತಕ್ಕೆ ಬರುವ ಒಟ್ಟು ಆಮದಿನ ಶೇ. 94.81 ರಷ್ಟನ್ನು ಒಳಗೊಂಡಿದೆ. ಅದೇ ಸಮಯದಲ್ಲಿ, ಭಾರತವು ಹಲವಾರು ಸುಂಕದ ಸಾಲುಗಳನ್ನು "ವಿನಾಯಿತಿ ಪಟ್ಟಿ"ಯಲ್ಲಿ ಇರಿಸಿದೆ. ಈ ಕ್ರಮವು ಪ್ರಮುಖ ದೇಶೀಯ ವಲಯಗಳನ್ನು ಮತ್ತು ಸೂಕ್ಷ್ಮ ಮೌಲ್ಯ-ಸರಪಳಿ ಕೈಗಾರಿಕೆಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ, ಇದು ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ.
|
ಪ್ರಮುಖ ದೇಶೀಯ ವಲಯಗಳು: ಸಾರಿಗೆ ಉಪಕರಣಗಳು, ಪ್ರಮುಖ ರಾಸಾಯನಿಕಗಳು, ಧಾನ್ಯಗಳು, ಸಾಂಬಾರ ಪದಾರ್ಥಗಳು, ಕಾಫಿ ಮತ್ತು ಚಹಾ, ಹಾಗೂ ಪ್ರಾಣಿ ಮೂಲದ ಉತ್ಪನ್ನಗಳು.
ಸೂಕ್ಷ್ಮ ಮೌಲ್ಯ-ಸರಪಳಿ ಕೈಗಾರಿಕೆಗಳು: ರಬ್ಬರ್, ಚರ್ಮ, ಜವಳಿ, ಪಾದರಕ್ಷೆಗಳು, ಪೆಟ್ರೋಲಿಯಂ ತೈಲಗಳು ಮತ್ತು ಖನಿಜ ಆಧಾರಿತ ಉತ್ಪನ್ನಗಳು.
ಪ್ರಮುಖ ಕೃಷಿ ಉತ್ಪನ್ನಗಳು: ಡೈರಿ (ಹಾಲು ಮತ್ತು ಹಾಲಿನ ಉತ್ಪನ್ನಗಳು), ಎಣ್ಣೆಕಾಳುಗಳು, ಖಾದ್ಯ ತೈಲಗಳು, ಜೇನುತುಪ್ಪ, ಹಣ್ಣುಗಳು ಮತ್ತು ತರಕಾರಿಗಳು.
|
ಸಿಇಪಿಎ ಒಪ್ಪಂದದ ವಲಯವಾರು ಪ್ರಭಾವ
ಎಂಜಿನಿಯರಿಂಗ್ ಸರಕುಗಳು
ಭಾರತದ ಎಂಜಿನಿಯರಿಂಗ್ ರಫ್ತಿಗೆ ಓಮನ್ ಒಂದು ಪ್ರಮುಖ ತಾಣವಾಗಿದೆ. 2024–25ರ ಹಣಕಾಸು ವರ್ಷದಲ್ಲಿ ಓಮನ್‌ಗೆ ಭಾರತದ ಎಂಜಿನಿಯರಿಂಗ್ ರಫ್ತು 875.83 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ತಲುಪಿದೆ. ಇದು ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ಆಟೋಮೊಬೈಲ್‌ಗಳು (ವಾಹನಗಳು), ಕಬ್ಬಿಣ ಮತ್ತು ಉಕ್ಕು, ಹಾಗೂ ಲೋಹೇತರ ಲೋಹಗಳನ್ನು ಒಳಗೊಂಡಿದೆ.
-
ಸಿಇಪಿಎ ಅಡಿಯಲ್ಲಿ, ಎಲ್ಲಾ ಎಂಜಿನಿಯರಿಂಗ್ ಉತ್ಪನ್ನಗಳು ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶವನ್ನು ಪಡೆಯಲಿವೆ. ಇದು ಈ ಹಿಂದಿನ ಶೇ. 0–5 ರಷ್ಟಿದ್ದ ಎಂಎಫ್‌ಎನ್‌ಸುಂಕಗಳನ್ನು ಬದಲಾಯಿಸಲಿದ್ದು, ಭಾರತೀಯ ರಫ್ತುದಾರರಿಗೆ ಬೆಲೆ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ನೆರವಾಗಲಿದೆ.
-
ಸುಂಕದ ನಿರ್ಮೂಲನೆ ಮತ್ತು ಸುಧಾರಿತ ಮಾರುಕಟ್ಟೆ ಪ್ರವೇಶದೊಂದಿಗೆ, ಓಮನ್‌ಗೆ ಭಾರತದ ಎಂಜಿನಿಯರಿಂಗ್ ರಫ್ತು 2030 ರ ವೇಳೆಗೆ 1.3–1.6 ಶತಕೋಟಿ ಅಮೆರಿಕನ್ ಡಾಲರ್ಗೆ ಏರುವ ನಿರೀಕ್ಷೆಯಿದೆ, ಇದು ಈ ವಲಯದ ಬೆಳವಣಿಗೆಯ ವೇಗವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.
-
ಮೂಲಸೌಕರ್ಯ ಯೋಜನೆಗಳಲ್ಲಿ ಬಳಸಲಾಗುವ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಓಮನ್‌ನ ಕೈಗಾರಿಕಾ ವೈವಿಧ್ಯೀಕರಣಕ್ಕೆ ಬೆಂಬಲ ನೀಡುವ ವಿದ್ಯುತ್ ಮತ್ತು ಕೈಗಾರಿಕಾ ಯಂತ್ರೋಪಕರಣಗಳು, ಶೇ. 5 ರಷ್ಟು ಸುಂಕದ ತೆಗೆದುಹಾಕುವಿಕೆಯ ನಂತರ ಮೋಟಾರು ವಾಹನಗಳು, ಮತ್ತು ವಿದ್ಯುತ್ ಹಾಗೂ ನಿರ್ಮಾಣ ಕಾರ್ಯಗಳಲ್ಲಿ ಬಳಕೆಯಾಗುವ ತಾಮ್ರದ ಉತ್ಪನ್ನಗಳಲ್ಲಿ ಪ್ರಮುಖ ಲಾಭಗಳನ್ನು ನಿರೀಕ್ಷಿಸಲಾಗಿದೆ.
-
ಈ ಒಪ್ಪಂದವು ವಿಶೇಷವಾಗಿ ಕಬ್ಬಿಣ, ಉಕ್ಕು ಮತ್ತು ಯಂತ್ರೋಪಕರಣಗಳ ವಿಭಾಗಗಳಲ್ಲಿನ ಎಂಎಸ್‌ಎಂಇಳಿಗೆ (ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಹೆಚ್ಚಿನ ಲಾಭ ನೀಡುವ ನಿರೀಕ್ಷೆಯಿದೆ. ಇದು ಅವುಗಳ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಓಮನ್‌ನ ಕೈಗಾರಿಕಾ ಹಾಗೂ ಮೂಲಸೌಕರ್ಯ ಪೂರೈಕೆ ಸರಪಳಿಗಳಲ್ಲಿ ಆಳವಾಗಿ ಸಂಯೋಜನೆಗೊಳ್ಳಲು ಅನುವು ಮಾಡಿಕೊಡುತ್ತದೆ.
-
ವಾಹನಗಳು, ಆಟೋ ಬಿಡಿಭಾಗಗಳು ಮತ್ತು ಕೈಗಾರಿಕಾ ಉಪಕರಣಗಳ ಮೇಲಿನ ಸುಂಕ ನಿರ್ಮೂಲನೆಯು ನಿರ್ಮಾಣ, ಲಾಜಿಸ್ಟಿಕ್ಸ್, ಆಹಾರ ಸಂಸ್ಕರಣೆ, ಜವಳಿ ಮತ್ತು ರಾಸಾಯನಿಕಗಳಂತಹ ವಲಯಗಳಿಂದ ಬೇಡಿಕೆಯನ್ನು ಹೆಚ್ಚಿಸಲು ಬೆಂಬಲ ನೀಡುತ್ತದೆ.
-
ವ್ಯಾಪಕ ಮಟ್ಟದಲ್ಲಿ ನೋಡುವುದಾದರೆ, ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಮೆಕ್ಸಿಕೋದಂತಹ ಮಾರುಕಟ್ಟೆಗಳಲ್ಲಿ ಜಾಗತಿಕ ಸಂರಕ್ಷಣಾ ನೀತಿಗಳು ಹೆಚ್ಚುತ್ತಿರುವ ಈ ಸಮಯದಲ್ಲಿ, ಓಮನ್ ಭಾರತದ ಎಂಜಿನಿಯರಿಂಗ್ ರಫ್ತುದಾರರಿಗೆ ಒಂದು ಸ್ಥಿರವಾದ ಪರ್ಯಾಯ ಮಾರುಕಟ್ಟೆಯನ್ನು ಮತ್ತು ಕಾರ್ಯತಂತ್ರದ ವೈವಿಧ್ಯೀಕರಣವನ್ನು ಒದಗಿಸುತ್ತದೆ. ಜೊತೆಗೆ, ಇದು ಇಡೀ ಗಲ್ಫ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಉತ್ತಮ ವೇದಿಕೆಯಾಗಿದೆ.
ಔಷಧ ವಲಯ
ಓಮನ್‌ನ ಔಷಧ ಮಾರುಕಟ್ಟೆಯ ಮೌಲ್ಯವು 2024 ರಲ್ಲಿ 302.84 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು ಮತ್ತು ಇದು ಶೇ. 6.6 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ 2031 ರ ವೇಳೆಗೆ 473.71 ಮಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಓಮನ್‌ನ ಈ ಮಾರುಕಟ್ಟೆಯು ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿದೆ, ಇದು ಹೊರಗಿನ ಪೂರೈಕೆದಾರರಿಗೆ ನಿರಂತರ ಬೇಡಿಕೆಯನ್ನು ಸೃಷ್ಟಿಸಿದೆ.
-
ಸಿಇಪಿಎ ಅಡಿಯಲ್ಲಿ, ಪ್ರಮುಖ ಸಿದ್ಧಪಡಿಸಿದ ಔಷಧಗಳು ಮತ್ತು ಲಸಿಕೆಗಳಿಗೆ ಶೂನ್ಯ-ಸುಂಕದ ಪ್ರವೇಶವನ್ನು ನೀಡಲಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ಖರೀದಿಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಪೆನ್ಸಿಲಿನ್, ಸ್ಟ್ರೆಪ್ಟೊಮೈಸಿನ್, ಟೆಟ್ರಾಸೈಕ್ಲಿನ್ ಮತ್ತು ಎರಿಥ್ರೊಮೈಸಿನ್ ಸೇರಿದಂತೆ ಪ್ರಮುಖ ಔಷಧೀಯ ಘಟಕಾಂಶಗಳಿಗೆ ಶೂನ್ಯ-ಸುಂಕದ ಪ್ರವೇಶ ನೀಡಿರುವುದು ಸ್ಥಿರ ಬೆಲೆ ಮತ್ತು ದೀರ್ಘಕಾಲೀನ ಪೂರೈಕೆ ವ್ಯವಸ್ಥೆಗೆ ಬೆಂಬಲ ನೀಡುತ್ತದೆ.
-
ಈ ಒಪ್ಪಂದವು ಯುಎಸ್‌ಎಫ್‌ಡಿಎ, ಇಎಂಎ, ಯುಕೆ ಎಂಎಚ್‌ಆರ್‌ಎ ಮತ್ತು ಟಿಜಿಎ ನಂತಹ ಮಾನ್ಯತೆ ಪಡೆದ ಕಟ್ಟುನಿಟ್ಟಾದ ಪ್ರಾಧಿಕಾರಗಳಿಂದ ಅನುಮೋದಿಸಲ್ಪಟ್ಟ ಔಷಧೀಯ ಉತ್ಪನ್ನಗಳಿಗೆ ವೇಗಗತಿಯ ನಿಯಂತ್ರಕ ಅನುಮೋದನೆಯನ್ನು ಪರಿಚಯಿಸುತ್ತದೆ. ಸಂಪೂರ್ಣ ಮೌಲ್ಯಮಾಪನ ದಾಖಲೆಗಳನ್ನು ಸಲ್ಲಿಸಿದರೆ, ಪೂರ್ವ ತಪಾಸಣೆ ಇಲ್ಲದೆಯೇ 90 ದಿನಗಳೊಳಗೆ ಮಾರುಕಟ್ಟೆ ಅನುಮತಿ ಪಡೆಯಲು ಇವು ಅರ್ಹವಾಗಿರುತ್ತವೆ. ಒಂದು ವೇಳೆ ತಪಾಸಣೆಗಳ ಅಗತ್ಯವಿದ್ದರೆ, ಅಂತಹ ಸಂದರ್ಭಗಳಲ್ಲಿ 270 ಕೆಲಸದ ದಿನಗಳೊಳಗೆ ಅನುಮೋದನೆ ನೀಡುವ ಗುರಿಯನ್ನು ಹೊಂದಲಾಗಿದೆ.
-
ಜಿಎಂಪಿ (ಉತ್ತಮ ಉತ್ಪಾದನಾ ಅಭ್ಯಾಸಗಳು) ಪ್ರಮಾಣಪತ್ರಗಳು ಮತ್ತು ತಪಾಸಣಾ ಫಲಿತಾಂಶಗಳ ಅಂಗೀಕಾರ, ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವ ಸರಳೀಕೃತ ಸ್ಥಿರತೆಯ ಅಗತ್ಯತೆಗಳು ಮತ್ತು ಸ್ಥಳೀಯ ಮಾರುಕಟ್ಟೆ ಹಾಗೂ ಸಾರ್ವಜನಿಕ ಆರೋಗ್ಯದ ಆದ್ಯತೆಗಳಿಗೆ ಅನುಗುಣವಾದ ಬೆಲೆ ನಿಗದಿ - ಇವೆಲ್ಲವೂ ಒಟ್ಟಾಗಿ ಅನುಸರಣಾ ವೆಚ್ಚ ಮತ್ತು ಅನುಮೋದನೆಯ ಅವಧಿಯನ್ನು ಕಡಿಮೆ ಮಾಡುತ್ತವೆ. ಇದು ಓಮನ್ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಔಷಧಗಳ ಸುಸ್ಥಿರ ಪೂರೈಕೆಗೆ ಬೆಂಬಲ ನೀಡುತ್ತದೆ.
ಸಮುದ್ರ ಉತ್ಪನ್ನಗಳು
2022-24ರ ಅವಧಿಯಲ್ಲಿ ಓಮನ್‌ನ ಒಟ್ಟು ಸಮುದ್ರ ಉತ್ಪನ್ನಗಳ ಆಮದು 118.91 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಆದರೆ, ಇದರಲ್ಲಿ ಭಾರತದಿಂದ ಆದ ಆಮದು ಕೇವಲ 7.75 ಮಿಲಿಯನ್ ಡಾಲರ್ ಆಗಿದ್ದು, ಇದು ಭಾರತದ ರಫ್ತು ವಿಸ್ತರಣೆಗೆ ಇರುವ ಅಪಾರ ಅವಕಾಶವನ್ನು ಸೂಚಿಸುತ್ತದೆ. ಈ ಸಿಇಪಿಎ ಒಪ್ಪಂದವು ಭಾರತದ ಸೀಗಡಿ ಮತ್ತು ಮೀನುಗಳಂತಹ ಸಮುದ್ರ ಆಹಾರ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲು ಬೆಂಬಲ ನೀಡುವ ನಿರೀಕ್ಷೆಯಿದೆ.
-
ಸಿಇಪಿಎ ಅಡಿಯಲ್ಲಿ, ಸಮುದ್ರ ಉತ್ಪನ್ನಗಳಿಗೆ ತಕ್ಷಣದ ಸುಂಕ ರಹಿತ ಪ್ರವೇಶವನ್ನು ನೀಡಲಾಗಿದೆ. ಇದು ಈ ಹಿಂದಿನ ಶೇ. 0 ರಿಂದ 5 ರಷ್ಟಿದ್ದ ಆಮದು ಸುಂಕಗಳನ್ನು ಬದಲಾಯಿಸಲಿದ್ದು, ಭಾರತೀಯ ರಫ್ತುದಾರರಿಗೆ ತಕ್ಷಣದ ಬೆಲೆ ಸ್ಪರ್ಧಾತ್ಮಕತೆಯನ್ನು ಒದಗಿಸುತ್ತದೆ.
-
ಸಮುದ್ರ ಉತ್ಪನ್ನಗಳ ವಲಯವು ಶ್ರಮ-ಆಧಾರಿತ ಸ್ವರೂಪದ್ದಾಗಿರುವುದರಿಂದ, ಮಾರುಕಟ್ಟೆ ಪ್ರವೇಶದ ಈ ವಿಸ್ತರಣೆಯು ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಕರಣಾ ಚಟುವಟಿಕೆಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ.
ಮತ್ಸ್ಯ ಉತ್ಪನ್ನಗಳ ರಫ್ತು ಸಾಮರ್ಥ್ಯ ಉತ್ಪನ್ನ-ಮಟ್ಟದ ದತ್ತಾಂಶವು ಪ್ರಮುಖ ವಿಭಾಗಗಳಲ್ಲಿ ಇನ್ನೂ ಬಳಕೆಯಾಗದ ರಫ್ತು ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. 2024 ರಲ್ಲಿ ಭಾರತದ ವನ್ನಾಮೆ ಸೀಗಡಿ ಜಾಗತಿಕ ರಫ್ತು 3.63 ಶತಕೋಟಿ ಡಾಲರ್ ಆಗಿದ್ದರೆ, ಓಮನ್‌ಗೆ ಕೇವಲ 0.68 ಮಿಲಿಯನ್ ಡಾಲರ್ ರಫ್ತಾಗಿತ್ತು. ಹಾಗೆಯೇ, ಜಾಗತಿಕವಾಗಿ 270.73 ಮಿಲಿಯನ್ ಡಾಲರ್ ಮೌಲ್ಯದ ಹೆಪ್ಪುಗಟ್ಟಿದ ಕಟ್ಲ್ಫಿಶ್ ರಫ್ತು ಮಾಡಲಾಗಿದ್ದರೂ, ಓಮನ್‌ಗೆ ಕೇವಲ 0.36 ಮಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡಲಾಗಿತ್ತು. ಇದು ಓಮನ್ ಮಾರುಕಟ್ಟೆಯಲ್ಲಿ ಭಾರತಕ್ಕಿರುವ ಹೆಚ್ಚಿನ ಅವಕಾಶಗಳನ್ನು ತೋರಿಸುತ್ತದೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಓಮನ್‌ನ ಕೃಷಿ ಆಮದು 2020 ರಲ್ಲಿ 4.51 ಶತಕೋಟಿ ಡಾಲರ್‌ನಷ್ಟಿದ್ದು, ಅದು 2024 ರ ವೇಳೆಗೆ 5.97 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ (ಶೇ. 7.29 ರ ವಾರ್ಷಿಕ ಬೆಳವಣಿಗೆ). 2024 ರಲ್ಲಿ, ಓಮನ್‌ನ ಒಟ್ಟು ಕೃಷಿ ಆಮದಿನಲ್ಲಿ ಭಾರತವು ಶೇ. 10.24 ರಷ್ಟು ಪಾಲನ್ನು ಹೊಂದುವ ಮೂಲಕ ಎರಡನೇ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿ ಸ್ಥಾನ ಪಡೆದಿದೆ. ಇದೇ ಅವಧಿಯಲ್ಲಿ, ಓಮನ್‌ಗೆ ಭಾರತದ ಕೃಷಿ ರಫ್ತು 364.67 ಮಿಲಿಯನ್ ಡಾಲರ್‌ನಿಂದ 556.34 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ, ಇದು ಶೇ. 11.14 ರ ಭರ್ಜರಿ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.
ಎಪಿಇಡಿಎ ವ್ಯಾಪ್ತಿಯ ಉತ್ಪನ್ನಗಳ ಬೆಳವಣಿಗೆ ಎಪಿಇಡಿಎ ವ್ಯಾಪ್ತಿಯ ಉತ್ಪನ್ನಗಳ ರಫ್ತು 299.49 ಮಿಲಿಯನ್ ಡಾಲರ್‌ನಿಂದ 477.33 ಮಿಲಿಯನ್ ಡಾಲರ್‌ಗೆ ಹೆಚ್ಚಿದೆ, ಇದು ಶೇ. 12.36 ರ ವಾರ್ಷಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಪ್ರಮುಖ ರಫ್ತು ವಸ್ತುಗಳಲ್ಲಿ ಬಾಸ್ಮತಿ ಮತ್ತು ಕುಚ್ಚಲಕ್ಕಿ, ಬಾಳೆಹಣ್ಣು, ಆಲೂಗಡ್ಡೆ, ಈರುಳ್ಳಿ, ಸೋಯಾಬೀನ್ ಹಿಟ್ಟು, ಸಿಹಿ ಬಿಸ್ಕತ್ತುಗಳು, ಗೋಡಂಬಿ ಬೇಳೆ, ಮಿಶ್ರ ಮಸಾಲೆ ಪದಾರ್ಥಗಳು, ಬೆಣ್ಣೆ, ಮೀನಿನ ಎಣ್ಣೆ, ಸೀಗಡಿ ಆಹಾರ, ಹೆಪ್ಪುಗಟ್ಟಿದ ಮೂಳೆರಹಿತ ಮಾಂಸ ಮತ್ತು ಫಲೀಕೃತ ಮೊಟ್ಟೆಗಳು ಸೇರಿವೆ.
|
ಕೃಷಿ ಉತ್ಪನ್ನಗಳಲ್ಲಿನ ಪ್ರಮುಖ ಲಾಭಗಳು
-
ಮೂಳೆರಹಿತ ದನದ ಮಾಂಸ: ಸುಂಕ ರಹಿತ ಪ್ರವೇಶವು ಭಾರತದ ಅಗ್ರಗಣ್ಯ ಪೂರೈಕೆದಾರ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಓಮನ್‌ನ 68.27 ಮಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಭಾರತ ಈಗಾಗಲೇ ಶೇ. 94.3 ರಷ್ಟು ಪಾಲನ್ನು ಹೊಂದಿದೆ.
-
ತಾಜಾ ಮೊಟ್ಟೆಗಳು: ಶೂನ್ಯ-ಸುಂಕದ ಪ್ರವೇಶವು ಈ ವಲಯದಲ್ಲಿ ಭಾರತ ಹೊಂದಿರುವ ಶೇ. 98.3 ರಷ್ಟು ಮಾರುಕಟ್ಟೆ ಪಾಲನ್ನು ಗಟ್ಟಿಗೊಳಿಸುತ್ತದೆ. ಇದರಿಂದಾಗಿ ಭಾರತದ ಮೊಟ್ಟೆ ರಫ್ತಿಗೆ ಓಮನ್ ಅತ್ಯಂತ ದೊಡ್ಡ ತಾಣವಾಗಲಿದೆ.
-
ಸಿಹಿ ಬಿಸ್ಕತ್ತುಗಳು: ಸುಂಕ ರಹಿತ ಪ್ರವೇಶವು ಓಮನ್‌ನ 8.05 ಮಿಲಿಯನ್ ಡಾಲರ್ ಬಿಸ್ಕತ್ತು ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ಇದು ಟರ್ಕಿ, ಯುಎಇ ಮತ್ತು ಸೌದಿ ಅರೇಬಿಯಾದಂತಹ ದೇಶಗಳ ವಿರುದ್ಧ ಭಾರತದ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ.
-
ಬೆಣ್ಣೆ: ಶೇ. 5 ರಷ್ಟು ಸುಂಕದ ನಿರ್ಮೂಲನೆಯು 5.75 ಮಿಲಿಯನ್ ಡಾಲರ್ ಮೌಲ್ಯದ ರಫ್ತಿಗೆ ಸಹಾಯ ಮಾಡುತ್ತದೆ. ಇದು ಡೆನ್ಮಾರ್ಕ್, ಸೌದಿ ಅರೇಬಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಿಗಿಂತ ಭಾರತಕ್ಕೆ ಹೆಚ್ಚಿನ ಮಾರುಕಟ್ಟೆ ಅವಕಾಶ ನೀಡುತ್ತದೆ.
-
ನೈಸರ್ಗಿಕ ಜೇನುತುಪ್ಪ: ಸುಂಕದ ನಿರ್ಮೂಲನೆಯು ಓಮನ್‌ನ 6.61 ಮಿಲಿಯನ್ ಡಾಲರ್ ಮೌಲ್ಯದ ಜೇನುತುಪ್ಪದ ಮಾರುಕಟ್ಟೆಯಲ್ಲಿ ಭಾರತದ ಬೆಲೆ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ. ಇಲ್ಲಿ ಭಾರತವು ಈಗಾಗಲೇ ಶೇ. 19.2 ರಷ್ಟು ಪಾಲು ಹೊಂದಿದ್ದು, ಆಸ್ಟ್ರೇಲಿಯಾ, ಚೀನಾ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಗಿಂತ ಮುಂದಿರಲು ಇದು ನೆರವಾಗಲಿದೆ.
-
ಮಿಶ್ರ ಮಸಾಲೆ ಮತ್ತು ಸಾಂಬಾರ ಪದಾರ್ಥಗಳು: ಸುಂಕ ರಹಿತ ಪ್ರವೇಶವು ಓಮನ್‌ನ 40.02 ಮಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಭಾರತ ಹೊಂದಿರುವ ಶೇ. 14.1 ರಷ್ಟು ಪಾಲನ್ನು ಹೆಚ್ಚಿಸುತ್ತದೆ. ಇದು ಭಾರತವನ್ನು ಅಮೆರಿಕದೊಂದಿಗೆ ಸಮಾನ ಸ್ಥಾನದಲ್ಲಿರಿಸುತ್ತದೆ ಮತ್ತು ಸೌದಿ ಅರೇಬಿಯಾ ಹಾಗೂ ಯುಎಇಗಿಂತ ಮುಂದಕ್ಕೆ ಕೊಂಡೊಯ್ಯುತ್ತದೆ.
|
ಅದೇ ಸಮಯದಲ್ಲಿ, ಭಾರತವು ತನ್ನ ದೇಶೀಯ ರೈತರು ಮತ್ತು ಸೂಕ್ಷ್ಮ ಕೃಷಿ ಹಿತಾಸಕ್ತಿಗಳನ್ನು ರಕ್ಷಿಸಲು ಅತ್ಯಂತ ಎಚ್ಚರಿಕೆಯ "ಸುರಕ್ಷತಾ ಕ್ರಮಗಳ" ಹಾದಿಯನ್ನು ಅನುಸರಿಸಿದೆ. ಡೈರಿ ಉತ್ಪನ್ನಗಳು, ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು ಮತ್ತು ನೈಸರ್ಗಿಕ ಜೇನುತುಪ್ಪದಂತಹ ಪ್ರಮುಖ ಉತ್ಪನ್ನಗಳನ್ನು ತಕ್ಷಣದ ಸುಂಕ ರಿಯಾಯಿತಿಗಳಿಂದ ಹೊರಗಿಡಲಾಗಿದೆ (ವಿನಾಯಿತಿ ಪಟ್ಟಿಯಲ್ಲಿ ಇರಿಸಲಾಗಿದೆ).

ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಹಂತ-ಹಂತವಾಗಿ ಸುಂಕದ ನಿರ್ಮೂಲನೆ
ಆಯ್ದ ಸಂಸ್ಕರಿಸಿದ ಉತ್ಪನ್ನಗಳಾದ ಸಿಹಿ ಬಿಸ್ಕತ್ತುಗಳು, ರಸ್ಕ್, ಟೋಸ್ಟ್ ಮಾಡಿದ ಬ್ರೆಡ್, ಪೇಸ್ಟ್ರಿ ಮತ್ತು ಕೇಕ್‌ಗಳು, ಹಪ್ಪಳ, ಹಾಗೂ ನಾಯಿ ಅಥವಾ ಬೆಕ್ಕುಗಳ ಆಹಾರಕ್ಕೆ ಈ ಹಂತ-ಹಂತದ ಸುಂಕ ಕಡಿತ ಅನ್ವಯವಾಗುತ್ತದೆ. ಇದು ಆಹಾರ ಭದ್ರತೆ ಮತ್ತು ದೇಶೀಯ ಕೃಷಿ ಹಿತಾಸಕ್ತಿಗಳನ್ನು ಕಾಪಾಡುವುದರ ಜೊತೆಗೆ, ರಫ್ತು ಬೆಳವಣಿಗೆಗೆ ಬೆಂಬಲ ನೀಡುತ್ತದೆ.
ಎಲೆಕ್ಟ್ರಾನಿಕ್ಸ್
ಓಮನ್ 2024 ರಲ್ಲಿ 3 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಆದರೆ ಭಾರತದ ರಫ್ತು ಕೇವಲ 123 ಮಿಲಿಯನ್ ಡಾಲರ್ ಆಗಿದ್ದು, ಈ ಕ್ಷೇತ್ರದಲ್ಲಿ ರಫ್ತು ವಿಸ್ತರಿಸಲು ಸ್ಪಷ್ಟವಾದ ಅವಕಾಶಗಳಿವೆ. ಪ್ರಮುಖ ಆಮದು ವಿಭಾಗಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಫೋಟೊವೋಲ್ಟಾಯಿಕ್ ಸೆಲ್‌ಗಳು (ಸೌರಕೋಶಗಳು), ದೂರಸಂಪರ್ಕ ಉಪಕರಣಗಳು ಮತ್ತು ಅವುಗಳ ಬಿಡಿಭಾಗಗಳು, ವಿದ್ಯುತ್ ನಿಯಂತ್ರಣ ಅಥವಾ ವಿತರಣೆಗಾಗಿ ಬಳಸುವ ಬೋರ್ಡ್‌ಗಳು ಮತ್ತು ಕ್ಯಾಬಿನೆಟ್‌ಗಳು ಹಾಗೂ ಸ್ಟ್ಯಾಟಿಕ್ ಕನ್ವರ್ಟರ್‌ಗಳು ಸೇರಿವೆ.
ಭಾರತವು ಈಗಾಗಲೇ ಸ್ಮಾರ್ಟ್‌ಫೋನ್‌ಗಳು, ಸ್ಟ್ಯಾಟಿಕ್ ಕನ್ವರ್ಟರ್‌ಗಳು ಮತ್ತು ಬೋರ್ಡ್ ಹಾಗೂ ಕ್ಯಾಬಿನೆಟ್‌ಗಳನ್ನು ರಫ್ತು ಮಾಡುತ್ತಿದ್ದು, ಕೊನೆಯ ಎರಡು ವಿಭಾಗಗಳಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಈಗಾಗಲೇ ಆಮದು ಸುಂಕ ಶೂನ್ಯವಾಗಿದೆ. ಆದರೆ ಸಿಇಪಿಎ ಅಡಿಯಲ್ಲಿ, ಉಳಿದ ವಸ್ತುಗಳಾದ ಬೋರ್ಡ್‌ಗಳು ಮತ್ತು ಕ್ಯಾಬಿನೆಟ್‌ಗಳು, ಸ್ಟ್ಯಾಟಿಕ್ ಕನ್ವರ್ಟರ್‌ಗಳು ಮತ್ತು ಟೆಲಿವಿಷನ್ ರಿಸೆಪ್ಷನ್ ಉಪಕರಣಗಳು ಸಹ ಶೂನ್ಯ ಸುಂಕದ ವ್ಯಾಪ್ತಿಗೆ ಬರುತ್ತವೆ, ಇದು ಸುಂಕದ ಬಗ್ಗೆ ಸ್ಪಷ್ಟವಾದ ಭರವಸೆಯನ್ನು ನೀಡುತ್ತದೆ. ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಓಮನ್ ಮಾರುಕಟ್ಟೆಯನ್ನು ಹೊಂದಿರುವ ಟಾಪ್ ಹತ್ತು ಉತ್ಪನ್ನಗಳ ಮೇಲೆ ಭಾರತೀಯ ರಫ್ತುದಾರರು ತಮ್ಮ ಮಾರುಕಟ್ಟೆ ಪಾಲನ್ನು ಹಂತ-ಹಂತವಾಗಿ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶವಿದೆ.
ರಾಸಾಯನಿಕಗಳು
2024 ರಲ್ಲಿ ಓಮನ್ ಒಟ್ಟು 3.13 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಾಸಾಯನಿಕಗಳನ್ನು ಆಮದು ಮಾಡಿಕೊಂಡಿದೆ. ಆದರೆ ಭಾರತದ ರಫ್ತು ಕೇವಲ 169.41 ಮಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಇದು ಭಾರತೀಯ ರಫ್ತುದಾರರಿಗೆ ಈ ಮಾರುಕಟ್ಟೆಯಲ್ಲಿ ವಿಸ್ತರಿಸಲು ಹೆಚ್ಚಿನ ಅವಕಾಶವಿರುವುದನ್ನು ಸೂಚಿಸುತ್ತದೆ.
- ತಕ್ಷಣದ ತೆರಿಗೆ ವಿನಾಯಿತಿ: ಈ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಜೈವಿಕ ರಾಸಾಯನಿಕಗಳು, ಸಾವಯವ ರಾಸಾಯನಿಕಗಳು ಮತ್ತು ಇತರ ರಾಸಾಯನಿಕ ಉತ್ಪನ್ನಗಳಂತಹ ಪ್ರಮುಖ ವರ್ಗಗಳಿಗೆ ತಕ್ಷಣದ 'ಶೂನ್ಯ-ಸುಂಕ' ಪ್ರವೇಶವನ್ನು ನೀಡಲಾಗಿದೆ. ಇದರಿಂದ ಈ ಮೊದಲು ಇದ್ದ ಶೇಕಡಾ 5 ರಷ್ಟು ತೆರಿಗೆಯು ರದ್ದಾಗಿದ್ದು, ಭಾರತೀಯ ರಫ್ತುದಾರರಿಗೆ ಹೆಚ್ಚಿನ ಲಾಭ ಮತ್ತು ಮಾರುಕಟ್ಟೆಯ ಭರವಸೆ ಸಿಕ್ಕಂತಾಗಿದೆ.
- ರಿಯಾಯಿತಿ ದರಗಳು: ಬಣ್ಣಗಳು, ಟ್ಯಾನಿಂಗ್ ಸಾರಗಳು, ಸೋಪುಗಳು, ಸರ್ಫೇಸ್-ಆಕ್ಟಿವ್ ಏಜೆಂಟ್‌ಗಳು, ಎಸೆನ್ಷಿಯಲ್ ಆಯಿಲ್‌ಗಳು ಮತ್ತು ಇತರ ಕೈಗಾರಿಕಾ ಸಿದ್ಧತೆಗಳ ಮೇಲೆ ಶೇಕಡಾ 5 ರಷ್ಟು ಸುಂಕ ಕಡಿತ ಅನ್ವಯಿಸುತ್ತದೆ. ಇದು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಇತರ ದೇಶಗಳ ಸ್ಪರ್ಧೆಗಿಂತ ಭಾರತೀಯ ಪೂರೈಕೆದಾರರಿಗೆ ಬೆಲೆಯಲ್ಲಿ ಹೆಚ್ಚಿನ ಅನುಕೂಲವನ್ನು ನೀಡುತ್ತದೆ.
- ದೀರ್ಘಕಾಲೀನ ಸಹಕಾರ: ಈ ಒಪ್ಪಂದವು ಉಭಯ ದೇಶಗಳ ನಡುವೆ ನಿಕಟ ಕೈಗಾರಿಕಾ ಸಹಕಾರಕ್ಕೆ ಬೆಂಬಲ ನೀಡುತ್ತದೆ. ಓಮನ್ ದೇಶವು ಸುರಕ್ಷಿತ ಕಚ್ಚಾ ವಸ್ತುಗಳ ಪೂರೈಕೆ ಮತ್ತು ಹಸಿರು ಇಂಧನದ ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಪೆಟ್ರೋಕೆಮಿಕಲ್ಸ್, ಗ್ರೀನ್ ಹೈಡ್ರೋಜನ್ ಹಾಗೂ ಗಲ್ಫ್ ಮತ್ತು ಆಫ್ರಿಕಾ ಮಾರುಕಟ್ಟೆಗಳಿಗೆ ಸಂಬಂಧಿಸಿದ ಮೌಲ್ಯವರ್ಧಿತ ಸರಣಿಗಳಲ್ಲಿ ದೀರ್ಘಕಾಲೀನ ಸಹಯೋಗಕ್ಕೆ ದಾರಿಯಾಗಿದೆ.
"ಭಾರತದ ಒಟ್ಟು ಜಾಗತಿಕ ರಾಸಾಯನಿಕ ರಫ್ತು 40.48 ಬಿಲಿಯನ್ ಅಮೆರಿಕನ್ ಡಾಲರ್ ಆಗಿರುವುದರಿಂದ, ಓಮನ್ ದೇಶಕ್ಕೆ ಮಾಡುವ ರಫ್ತಿನಲ್ಲಿ ಅಲ್ಪ ಪ್ರಮಾಣದ ಏರಿಕೆಯಾದರೂ ಸಹ ಅದು ಗಮನಾರ್ಹ ಲಾಭವನ್ನು ತಂದುಕೊಡುತ್ತದೆ; ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಲಿದೆ."
ಜವಳಿ ಕ್ಷೇತ್ರ
"2024 ರಲ್ಲಿ ಓಮನ್ ಒಟ್ಟು 597.9 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದ ಜವಳಿ ರಫ್ತು 131.8 ಮಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದ್ದು, ಈ ಮೂಲಕ ಓಮನ್‌ನ ಜವಳಿ ಮಾರುಕಟ್ಟೆಯಲ್ಲಿ ಭಾರತವು ಶೇಕಡಾ 22 ರಷ್ಟು ಪಾಲನ್ನು ಹೊಂದಿದೆ. ಇದು 2023 ರಲ್ಲಿ ಇದ್ದ ಶೇಕಡಾ 9.3 ರ ಪಾಲಿಗೆ ಹೋಲಿಸಿದರೆ ಗಮನಾರ್ಹ ಮತ್ತು ತೀಕ್ಷ್ಣವಾದ ಏರಿಕೆಯಾಗಿದೆ."
-
ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಈ ಮೊದಲು ಸುಮಾರು ಶೇಕಡಾ 5 ರಷ್ಟು ಆಮದು ಸುಂಕವನ್ನು ಎದುರಿಸುತ್ತಿದ್ದ ಭಾರತೀಯ ಜವಳಿ ಮತ್ತು ಸಿದ್ಧ ಉಡುಪುಗಳಿಗೆ ಈಗ 'ಶೂನ್ಯ-ಸುಂಕ'ದ ಮಾರುಕಟ್ಟೆ ಪ್ರವೇಶ ಲಭ್ಯವಿದೆ; ಇದು ನೇರವಾಗಿ ಬೆಲೆ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದ ರಫ್ತಿಗೆ ಬೆಂಬಲ ನೀಡುತ್ತದೆ.
-
ಬೆಳವಣಿಗೆಯ ನಿರೀಕ್ಷೆಯಲ್ಲಿರುವ ಪ್ರಮುಖ ವಿಭಾಗಗಳೆಂದರೆ ಸಿದ್ಧ ಉಡುಪುಗಳು (87.0 ಮಿಲಿಯನ್ ಯುಎಸ್ ಡಾಲರ್), ಮೇಡ್-ಅಪ್ಸ್ ಅಥವಾ ಸಿದ್ಧಪಡಿಸಿದ ಬಟ್ಟೆ ಉತ್ಪನ್ನಗಳು (17.4 ಮಿಲಿಯನ್ ಯುಎಸ್ ಡಾಲರ್), ಕೃತಕ ಎಳೆಗಳ ಜವಳಿ (11.2 ಮಿಲಿಯನ್ ಯುಎಸ್ ಡಾಲರ್), ಮತ್ತು ಸೆಣಬಿನ ಉತ್ಪನ್ನಗಳು (7.3 ಮಿಲಿಯನ್ ಯುಎಸ್ ಡಾಲರ್).
-
ಸುಂಕ-ಮುಕ್ತ ಪ್ರವೇಶವು ಚೀನಾ, ಬಾಂಗ್ಲಾದೇಶ, ಟರ್ಕಿ ಮತ್ತು ಯುಎಇ ಅಂತಹ ಪ್ರಮುಖ ಪೂರೈಕೆದಾರರ ವಿರುದ್ಧ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ, ವಿಶೇಷವಾಗಿ ಸಿದ್ಧ ಉಡುಪುಗಳು, ಗೃಹಾಲಂಕಾರದ ಬಟ್ಟೆಗಳು, ಕಾರ್ಪೆಟ್‌ಗಳು, ಸೆಣಬು ಮತ್ತು ರೇಷ್ಮೆ ಉತ್ಪನ್ನಗಳಂತಹ ಹೆಚ್ಚು ಕಾರ್ಮಿಕರ ಅಗತ್ಯವಿರುವ ವಿಭಾಗಗಳಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ.
ಹೆಚ್ಚುತ್ತಿರುವ ಜವಳಿ ರಫ್ತುಗಳು ಭಾರತದ ಪ್ರಮುಖ ಜವಳಿ ಕ್ಲಸ್ಟರ್‌ಗಳಾದ ತಿರುಪುರ್, ಸೂರತ್, ಲೂಧಿಯಾನ, ಪಾಣಿಪತ್, ಕೊಯಮತ್ತೂರು, ಕರೂರ್, ಭದೋಹಿ, ಮೊರಾದಾಬಾದ್, ಜೈಪುರ ಮತ್ತು ಅಹಮದಾಬಾದ್‌ಗಳಲ್ಲಿ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಓಮನ್‌ಗೆ ಸುಧಾರಿತ ಮಾರುಕಟ್ಟೆ ಪ್ರವೇಶ ಸಿಕ್ಕಿರುವುದು ಭಾರತೀಯ ರಫ್ತುದಾರರಿಗೆ ಆ ದೇಶವನ್ನು ಜಿಸಿಸಿ ಮತ್ತು ಪೂರ್ವ ಆಫ್ರಿಕಾದ ಮಾರುಕಟ್ಟೆಗಳಿಗೆ ಒಂದು ಪ್ರವೇಶ ದ್ವಾರವಾಗಿ ಬಳಸಿಕೊಳ್ಳಲು ಅವಕಾಶ ನೀಡುತ್ತದೆ; ಇದಕ್ಕೆ ಸೋಹಾರ್, ದುಕ್ಮ್ ಮತ್ತು ಸಲಾಲಾದಂತಹ ಓಮನ್‌ನ ಪ್ರಮುಖ ಲಾಜಿಸ್ಟಿಕ್ಸ್ ಹಬ್‌ಗಳು ಪೂರಕವಾಗಿವೆ.
ಪ್ಲಾಸ್ಟಿಕ್ಸ್
ಜಾಗತಿಕ ರಫ್ತು: 2024 ರಲ್ಲಿ ಭಾರತದ ಒಟ್ಟು ಜಾಗತಿಕ ಪ್ಲಾಸ್ಟಿಕ್ ರಫ್ತು 8.11 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಇದು ಭಾರತದ ಬಲವಾದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಸಿದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಶೂನ್ಯ-ಸುಂಕದ ಲಾಭ: ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಲಭ್ಯವಿರುವ 'ಶೂನ್ಯ-ಸುಂಕ' ಪ್ರವೇಶವು ಭಾರತೀಯ ಪೂರೈಕೆದಾರರಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಇತರ ಸ್ಪರ್ಧಿಗಳಿಗಿಂತ ಶೇಕಡಾ 5 ರಷ್ಟು ಹೆಚ್ಚಿನ ಬೆಲೆ ಪ್ರಯೋಜನವನ್ನು ನೀಡುತ್ತದೆ.
-
ತಕ್ಷಣದ ಸುಂಕ ವಿನಾಯಿತಿ: ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳಿಗೆ ತಕ್ಷಣದ ಸುಂಕ-ಮುಕ್ತ ಪ್ರವೇಶ ಸಿಕ್ಕಿದೆ. ಇದು ಈ ಮೊದಲು ಇದ್ದ ಶೇಕಡಾ 5 ರಷ್ಟು ಆಮದು ಸುಂಕವನ್ನು ರದ್ದುಗೊಳಿಸುವ ಮೂಲಕ ಭಾರತೀಯ ರಫ್ತುದಾರರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸ್ಪರ್ಧಾತ್ಮಕತೆಯನ್ನು ಒದಗಿಸುತ್ತದೆ.
-
ಎಂಎಸ್ಎಂಇ ಮತ್ತು ಉದ್ಯೋಗದ ಮೇಲೆ ಪ್ರಭಾವ: ಭಾರತದ ಪ್ಲಾಸ್ಟಿಕ್ ವಲಯವು ಪ್ರಮುಖವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಚಾಲಿತವಾಗಿರುವುದರಿಂದ, ಓಮನ್ ಮಾರುಕಟ್ಟೆಗೆ ಸಿಕ್ಕಿರುವ ಈ ಸುಧಾರಿತ ಪ್ರವೇಶವು ಒಳಗೊಳ್ಳುವ ರಫ್ತು ಬೆಳವಣಿಗೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಅಲ್ಲದೆ, ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಉತ್ಪಾದನಾ ಕ್ಲಸ್ಟರ್‌ಗಳನ್ನು ಬಲಪಡಿಸುತ್ತದೆ.
"2024 ರಲ್ಲಿ ಓಮನ್‌ನ ಒಟ್ಟು ಪ್ಲಾಸ್ಟಿಕ್ ಆಮದು 1.06 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು, ಆದರೆ ಭಾರತದಿಂದ ಆದ ಆಮದು ಕೇವಲ 89.39 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದು ಭಾರತಕ್ಕೆ ಇನ್ನೂ ಬಳಕೆಯಾಗದ ಹೆಚ್ಚಿನ ರಫ್ತು ವಿಸ್ತರಣೆಯ ಅವಕಾಶವಿರುವುದನ್ನು ಸೂಚಿಸುತ್ತದೆ."
ರತ್ನ ಮತ್ತು ಆಭರಣ
ರತ್ನ ಮತ್ತು ಆಭರಣ ವಲಯದಲ್ಲಿ ಭಾರತವು ಜಾಗತಿಕ ಮಟ್ಟದ ಪ್ರಮುಖ ಪಾತ್ರಧಾರಿಯಾಗಿದ್ದು, ವಾರ್ಷಿಕವಾಗಿ 29 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯದ ರಫ್ತು ವಹಿವಾಟನ್ನು ನಡೆಸುತ್ತಿದೆ. ಓಮನ್ ದೇಶವು ಪ್ರತಿ ವರ್ಷ ಸುಮಾರು 1.07 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರತ್ನ ಮತ್ತು ಆಭರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದು ಭಾರತೀಯ ರಫ್ತುದಾರರಿಗೆ ಅಲ್ಲಿ ಇನ್ನೂ ಹೆಚ್ಚಿನ ಮಾರುಕಟ್ಟೆ ಅವಕಾಶವಿರುವುದನ್ನು ಸೂಚಿಸುತ್ತದೆ. 2024 ರಲ್ಲಿ ಓಮನ್‌ಗೆ ಭಾರತದ ರತ್ನ ಮತ್ತು ಆಭರಣ ರಫ್ತು 35 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು; ಇದರಲ್ಲಿ 24.4 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಪಾಲೀಶ್ ಮಾಡಿದ ನೈಸರ್ಗಿಕ ವಜ್ರಗಳು ಮತ್ತು 10 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಚಿನ್ನದ ಆಭರಣಗಳು ಸೇರಿವೆ.
-
ಹೊಸ ಮಾರುಕಟ್ಟೆ ಅವಕಾಶಗಳು: ಸುಂಕ-ಮುಕ್ತ ಪ್ರವೇಶದೊಂದಿಗೆ, ಈ ಒಪ್ಪಂದವು ಓಮನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ. ವಿಶೇಷವಾಗಿ ಕತ್ತರಿಸಿದ ಮತ್ತು ಪಾಲೀಶ್ ಮಾಡಿದ ವಜ್ರಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಪ್ಲಾಟಿನಂ ಮತ್ತು ಕೃತಕ ಆಭರಣಗಳಂತಹ ಉದಯೋನ್ಮುಖ ವಿಭಾಗಗಳಿಗೆ ಇದು ಹೆಚ್ಚಿನ ಅನುಕೂಲ ನೀಡಲಿದೆ.
-
ಸುಂಕದ ರದ್ದತಿ: ಭಾರತದ ಎಲ್ಲಾ ರತ್ನ ಮತ್ತು ಆಭರಣ ಉತ್ಪನ್ನಗಳ ಮೇಲೆ ಈ ಹಿಂದೆ ಇದ್ದ ಶೇಕಡಾ 5 ರಷ್ಟು ಆಮದು ಸುಂಕವನ್ನು ಈಗ ರದ್ದುಗೊಳಿಸಲಾಗಿದೆ. ಇದು ಭಾರತೀಯ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದಲ್ಲದೆ, ಬೆಲೆ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
-
ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ಕ್ಲಸ್ಟರ್ಗಳು: ಸುಧಾರಿತ ಮಾರುಕಟ್ಟೆ ಪ್ರವೇಶವು ಭಾರತದ ಪ್ರಮುಖ ಆಭರಣ ತಯಾರಿಕಾ ಕ್ಲಸ್ಟರ್‌ಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಇದು ನುರಿತ ಮತ್ತು ಕಾರ್ಮಿಕ-ತೀವ್ರ ಉತ್ಪಾದನೆಯೊಂದಿಗೆ ಈ ವಲಯಕ್ಕಿರುವ ಬಲವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
"ಮುಂದಿನ ಮೂರು ವರ್ಷಗಳಲ್ಲಿ ರಫ್ತು ಪ್ರಮಾಣವು ಸುಮಾರು 150 ಮಿಲಿಯನ್ ಅಮೆರಿಕನ್ ಡಾಲರ್ ವರೆಗೆ ಬೆಳೆಯಬಹುದು ಎಂದು ಉದ್ಯಮದ ಅಂದಾಜುಗಳು ಸೂಚಿಸುತ್ತವೆ. ಇಟಲಿ, ಟರ್ಕಿ, ಥೈಲ್ಯಾಂಡ್ ಮತ್ತು ಚೀನಾದಂತಹ ದೇಶಗಳ ಪೂರೈಕೆದಾರರು ಓಮನ್‌ನಲ್ಲಿ ಇಂದಿಗೂ ಸುಂಕಗಳನ್ನು ಎದುರಿಸುತ್ತಿದ್ದಾರೆ; ಆದರೆ ಈ ಒಪ್ಪಂದದಿಂದಾಗಿ ಭಾರತೀಯ ಉತ್ಪನ್ನಗಳು ಈ ದೇಶಗಳ ವಿರುದ್ಧ ಹೆಚ್ಚಿನ ಬೆಲೆ ಸ್ಪರ್ಧಾತ್ಮಕತೆಯನ್ನು ಪಡೆಯಲಿವೆ."
ಸೇವೆಗಳು, ಹೂಡಿಕೆ ಮತ್ತು ವೃತ್ತಿಪರ ಚಲನಶೀಲತೆ
ಭಾರತ–ಓಮನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಪ್ರಮುಖ ಆಧಾರಸ್ತಂಭಗಳಲ್ಲಿ ಸೇವಾ ವಲಯವೂ ಒಂದು. 2024 ರಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸೇವಾ ವ್ಯಾಪಾರವು 863 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದರಲ್ಲಿ ಭಾರತದ ರಫ್ತು 665 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಆಮದು 198 ಮಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಭಾರತವು ಒಟ್ಟಾರೆ 447 ಮಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ಮಿಗುತಾಯವನ್ನು ಸಾಧಿಸಿದೆ. ಓಮನ್‌ನ ಒಟ್ಟು ಜಾಗತಿಕ ಸೇವಾ ಆಮದು 12.52 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಇದರಲ್ಲಿ ಭಾರತದ ಪಾಲು ಕೇವಲ ಶೇಕಡಾ 5.31 ರಷ್ಟಿದೆ. ಇದು ಭಾರತೀಯ ಸೇವಾ ಪೂರೈಕೆದಾರರಿಗೆ ಅಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಮಾರುಕಟ್ಟೆ ಅವಕಾಶವಿರುವುದನ್ನು ಸೂಚಿಸುತ್ತದೆ.
|
ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ, ಓಮನ್ 127 ಸೇವಾ ಉಪ-ವಲಯಗಳಲ್ಲಿ ವ್ಯಾಪಕವಾದ ಮತ್ತು ಆಳವಾದ ಮಾರುಕಟ್ಟೆ ಪ್ರವೇಶದ ಭರವಸೆಗಳನ್ನು ನೀಡಿದ್ದು, ಇವು ಜಾಗತಿಕ ಸೇವಾ ವ್ಯಾಪಾರ ಒಪ್ಪಂದದ ಮಾನದಂಡಗಳಿಗಿಂತಲೂ ಮಿಗಿಲಾದ ಅತ್ಯುತ್ತಮ ಮುಕ್ತ ವ್ಯಾಪಾರ ಒಪ್ಪಂದದ ಬದ್ಧತೆಗಳನ್ನು ಪ್ರತಿನಿಧಿಸುತ್ತವೆ. ಈ ಬದ್ಧತೆಗಳು ಭಾರತಕ್ಕೆ ರಫ್ತು ಹಿತಾಸಕ್ತಿಯಿರುವ ಪ್ರಮುಖ ವಲಯಗಳನ್ನು ಒಳಗೊಂಡಿವೆ; ಅವುಗಳಲ್ಲಿ ಕಾನೂನು, ಲೆಕ್ಕಪರಿಶೋಧನೆ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಬಂಧಿತ ಸೇವೆಗಳಂತಹ ವೃತ್ತಿಪರ ಸೇವೆಗಳು ಸೇರಿವೆ. ಇದರೊಂದಿಗೆ ಕಂಪ್ಯೂಟರ್ ಸಂಬಂಧಿತ ಸೇವೆಗಳು, ಆಡಿಯೋ-ವಿಸುವಲ್ ಸೇವೆಗಳು, ವ್ಯವಹಾರ ಸೇವೆಗಳು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ, ಶಿಕ್ಷಣ, ಪರಿಸರ ಸೇವೆಗಳು, ಆರೋಗ್ಯ, ಮತ್ತು ಪ್ರವಾಸೋದ್ಯಮ ಹಾಗೂ ಪ್ರಯಾಣ ಸಂಬಂಧಿತ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
|

|
"ಇಂಟ್ರಾ-ಕಾರ್ಪೊರೇಟ್ ವರ್ಗಾವಣೆದಾರರು ಎಂದರೆ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು. ಇವರು ಒಂದು ನಿರ್ದಿಷ್ಟ ಪಾತ್ರವನ್ನು ನಿರ್ವಹಿಸಲು ತಮ್ಮ ಸ್ವದೇಶದಿಂದ ಮತ್ತೊಂದು ದೇಶದಲ್ಲಿರುವ ಕಂಪನಿಯ ಶಾಖೆ, ಅಂಗಸಂಸ್ಥೆ ಅಥವಾ ಉಪಸಂಸ್ಥೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡವರಾಗಿರುತ್ತಾರೆ."
|
"ಕಂಪನಿಯ ಆಂತರಿಕ ವರ್ಗಾವಣೆದಾರರ ಮಿತಿಯನ್ನು ಶೇಕಡಾ 20 ರಿಂದ ಶೇಕಡಾ 50 ಕ್ಕೆ ಏರಿಸಲಾಗಿದ್ದು, ಇದು ಭಾರತೀಯ ಕಂಪನಿಗಳು ಹೆಚ್ಚಿನ ಸಂಖ್ಯೆಯ ವ್ಯವಸ್ಥಾಪಕರು ಮತ್ತು ತಜ್ಞ ಸಿಬ್ಬಂದಿಯನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಯಾವುದೇ ಮುಕ್ತ ವ್ಯಾಪಾರ ಒಪ್ಪಂದದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಓಮನ್ ಒಂದು ನಿರ್ದಿಷ್ಟ ವರ್ಗದ ವೃತ್ತಿಪರರಿಗೆ ಬದ್ಧತೆಗಳನ್ನು ನೀಡಿದೆ; ಇದರಲ್ಲಿ ಲೆಕ್ಕಪರಿಶೋಧನೆ, ಎಂಜಿನಿಯರಿಂಗ್, ವೈದ್ಯಕೀಯ, ಐಟಿ, ಶಿಕ್ಷಣ, ನಿರ್ಮಾಣ ಮತ್ತು ಸಲಹಾ ಸೇವೆಗಳಲ್ಲಿರುವ ವೃತ್ತಿಪರರು ಸೇರಿದ್ದಾರೆ."
ಸೇವೆಗಳಲ್ಲಿನ ಇತರ ಪ್ರಮುಖ ಲಾಭಗಳು
|
ಆರೋಗ್ಯ ಮತ್ತು ಸಾಂಪ್ರದಾಯಿಕ ಔಷಧ ಸೇವೆಗಳ ಅನುಬಂಧ
|
"ಪರವಾನಗಿ ಮತ್ತು ಅರ್ಹತೆಗಳ ಕುರಿತು ಸಹಕಾರ, ಡಿಜಿಟಲ್ ಪರವಾನಗಿ ಪರೀಕ್ಷೆಗಳು, ವೈದ್ಯಕೀಯ ಪ್ರವಾಸೋದ್ಯಮ, ಸಾಮರ್ಥ್ಯ ವೃದ್ಧಿ, ಮಾನದಂಡಗಳ ಸಮನ್ವಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ."
|
|
ಉತ್ಪಾದನೆ ಮತ್ತು ಇತರ ಸೇವಾಯೇತರ ವಲಯಗಳಲ್ಲಿ ಚಲನಶೀಲತೆಯ ಮೇಲೆ ಇದೇ ಮೊದಲ ರೀತಿಯ ನಿಬಂಧನೆ.
|
"ಇದು ಭಾರತೀಯ ಕೈಗಾರಿಕಾ ಕಾರ್ಮಿಕರಿಗೆ ಬದ್ಧತೆಯ ಭರವಸೆಗಳನ್ನು ನೀಡುತ್ತದೆ. ಓಮನ್‌ನ 'ಓಮನೈಸೇಶನ್' (ಸ್ಥಳೀಯರಿಗೆ ಉದ್ಯೋಗ ಮೀಸಲಾತಿ) ಪ್ರಕ್ರಿಯೆಯ ನಡುವೆಯೂ, ಹೆಚ್ಚಿನ ಮುನ್ಸೂಚನೆ ಮತ್ತು ಕಾನೂನು ಸ್ಪಷ್ಟತೆಯನ್ನು ನೀಡುವ ಮೂಲಕ ಹೂಡಿಕೆಗಳು ಹಾಗೂ ಜಂಟಿ ಉದ್ಯಮಗಳಿಗೆ ಇದು ಬೆಂಬಲ ನೀಡುತ್ತದೆ."
|
|
ಸಾಮಾಜಿಕ ಭದ್ರತಾ ಒಪ್ಪಂದ ಕುರಿತು ಭವಿಷ್ಯದ ಮಾತುಕತೆಗಳು,
|
"ಇದು ಸಾಮಾಜಿಕ ಭದ್ರತೆಯ ಪ್ರಯೋಜನಗಳ ಪರಸ್ಪರ ಮುಂದುವರಿಕೆಯನ್ನು ಒದಗಿಸುತ್ತದೆ ಮತ್ತು ಭಾರತೀಯ ಕಾರ್ಮಿಕರು ಹಾಗೂ ಉದ್ಯೋಗದಾತರು ಎರಡು ಬಾರಿ ವಂತಿಗೆ ಪಾವತಿಸುವುದನ್ನುತಪ್ಪಿಸುತ್ತದೆ."
|
ರಾಜ್ಯ ಮತ್ತು ಪ್ರದೇಶವಾರು ರಫ್ತು ಮತ್ತು ಉದ್ಯೋಗ ಲಾಭಗಳು

"ಈ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು, ಭಾರತದ ರಫ್ತು ಆರ್ಥಿಕತೆಯ ಭೌಗೋಳಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತೆ, ದೇಶದ ಹಲವಾರು ರಾಜ್ಯಗಳಲ್ಲಿ ವ್ಯಾಪಕವಾದ ರಫ್ತು ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ."

ರಾಜ್ಯವಾರು ಪ್ರಮುಖ ಕೃಷಿ ಲಾಭಗಳು
|
ಉತ್ಪನ್ನಗಳು
|
ರಾಜ್ಯಗಳು
|
|
ಮಾಂಸ
|
ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ
|
|
ಮೊಟ್ಟೆಗಳು
|
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ
|
|
ಸಿಹಿ ಬಿಸ್ಕತ್ತುಗಳು
|
ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಉತ್ತರ ಪ್ರದೇಶ
|
|
ಬೆಣ್ಣೆ
|
ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್
|
|
ಸಕ್ಕರೆ ಮಿಠಾಯಿ
|
ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ
|
|
ಸಂಸ್ಕರಿಸಿದ ಆಲೂಗಡ್ಡೆ
|
ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ
|
|
ಜೇನುತುಪ್ಪ
|
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಈಶಾನ್ಯ ರಾಜ್ಯಗಳು
|
ಕಾರ್ಮಿಕ-ಪ್ರಧಾನ ವಲಯಗಳಿಗೆ ಲಾಭಗಳು
"ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು, ಜವಳಿ ಮತ್ತು ಸಿದ್ಧ ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಆಹಾರ ಸಂಸ್ಕರಣೆ, ಸಮುದ್ರಾಹಾರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು ಹಾಗೂ ಆಯ್ದ ಎಂಜಿನಿಯರಿಂಗ್ ವಿಭಾಗಗಳಂತಹ ಕಾರ್ಮಿಕ-ಪ್ರಧಾನ ವಲಯಗಳಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಈ ವಲಯಗಳು ಉದ್ಯೋಗ ಸೃಷ್ಟಿಯೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದು, ಭಾರತದಾದ್ಯಂತ ದೊಡ್ಡ ಪ್ರಮಾಣದ ಕಾರ್ಮಿಕ ವರ್ಗಕ್ಕೆ ಆಸರೆಯಾಗಿವೆ."
|
"ಬಹುತೇಕ ಎಲ್ಲಾ ಉತ್ಪನ್ನಗಳಿಗೆ ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶ ಸಿಗುವುದರಿಂದ, ಓಮನ್ ಮಾರುಕಟ್ಟೆಯಲ್ಲಿ ಭಾರತೀಯ ರಫ್ತುಗಳ ಬೆಲೆ ಸ್ಪರ್ಧಾತ್ಮಕತೆ ಸುಧಾರಿಸುತ್ತದೆ. ಇದು ಕಾರ್ಮಿಕ-ಪ್ರಧಾನ ಕೈಗಾರಿಕೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಲು ಬೆಂಬಲ ನೀಡುತ್ತದೆ."
ಎಂಎಸ್ಎಂಇ ವಲಯಗಳಲ್ಲಿ ಹೆಚ್ಚಿನವು ಪ್ರಧಾನವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಚಾಲಿತವಾಗಿರುವುದರಿಂದ, ಈ ಒಪ್ಪಂದದ ಅಡಿಯಲ್ಲಿ ಸಿಗುವ ಆದ್ಯತೆಯ ಪ್ರವೇಶವು ಏಷ್ಯಾ ಮತ್ತು ಜಿಸಿಸಿ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ಸಮಾನ ಅವಕಾಶವನ್ನು ಒದಗಿಸುತ್ತದೆ. ಇದು ಉದ್ಯಮಗಳ ವಿಸ್ತರಣೆ, ಸಾಮರ್ಥ್ಯದ ಉತ್ತಮ ಬಳಕೆ ಮತ್ತು ರಫ್ತು-ಚಾಲಿತ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ."
"ಈ ವಲಯಗಳಲ್ಲಿನ ಹೆಚ್ಚಿನ ರಫ್ತುಗಳು ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ, ವಿಶೇಷವಾಗಿ ಜವಳಿ, ಆಹಾರ ಸಂಸ್ಕರಣೆ, ಚರ್ಮದ ವಸ್ತುಗಳು, ಸಮುದ್ರಾಹಾರ ಉತ್ಪನ್ನಗಳು ಮತ್ತು ಲಘು ಉತ್ಪಾದನಾ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಆದಾಯದ ಬೆಂಬಲವಾಗಿ ಪರಿಣಮಿಸುವ ನಿರೀಕ್ಷೆಯಿದೆ."
"ಸಂಸ್ಕರಿಸಿದ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವ ಮೂಲಕ, ಈ ಒಪ್ಪಂದವು ಒಳಗೊಳ್ಳುವಿಕೆಯ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಪ್ರಾದೇಶಿಕ ಪೂರೈಕೆ ಸರಪಳಿಗಳಲ್ಲಿ ಭಾರತದ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ."
|
ನಿಯಂತ್ರಕ ಸಹಕಾರಕ್ಕಾಗಿ ನಿಬಂಧನೆಗಳು
|
ಟಿಬಿಟಿ ಒಪ್ಪಂದ: "ತಾಂತ್ರಿಕ ನಿಯಮಗಳು, ಮಾನದಂಡಗಳು ಮತ್ತು ಅನುಸರಣಾ ಮೌಲ್ಯಮಾಪನ ಕಾರ್ಯವಿಧಾನಗಳು ತಾರತಮ್ಯರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ವ್ಯಾಪಾರಕ್ಕೆ ಅನಗತ್ಯ ಅಡೆತಡೆಗಳನ್ನು ಸೃಷ್ಟಿಸದಂತೆ ನೋಡಿಕೊಳ್ಳುವುದು ಈ ಒಪ್ಪಂದದ ಗುರಿಯಾಗಿದೆ."
ಎಸ್ಪಿಎಸ್ ಒಪ್ಪಂದ: "ಈ ಒಪ್ಪಂದವು ಆಹಾರ ಸುರಕ್ಷತೆ ಹಾಗೂ ಪ್ರಾಣಿ ಮತ್ತು ಸಸ್ಯಗಳ ಆರೋಗ್ಯ ನಿಯಮಗಳ ಅನ್ವಯಕ್ಕೆ ಸಂಬಂಧಿಸಿದೆ."
|
ಭಾರತ–ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು, ವ್ಯಾಪಾರಕ್ಕೆ ಇರುವ ತಾಂತ್ರಿಕ ಅಡೆತಡೆಗಳು (ಟಿಬಿಟಿ - ಅಂದರೆ ಉತ್ಪನ್ನಗಳ ಪ್ಯಾಕೇಜಿಂಗ್, ಲೇಬಲಿಂಗ್ ಅಥವಾ ಗುಣಮಟ್ಟದ ಮಾನದಂಡಗಳು) ಮತ್ತು ನೈರ್ಮಲ್ಯ ಹಾಗೂ ಸಸ್ಯ ನೈರ್ಮಲ್ಯ (ಎಸ್‌ಪಿಎಸ್ - ಅಂದರೆ ಆಹಾರ ಸುರಕ್ಷತೆ, ಪ್ರಾಣಿ ಮತ್ತು ಸಸ್ಯಗಳ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳು) ಕ್ರಮಗಳ ಕುರಿತು ಪ್ರತ್ಯೇಕ ನಿಬಂಧನೆಗಳನ್ನು ಒಳಗೊಂಡಿದೆ. ಈ ಅಡೆತಡೆಗಳು ವ್ಯಾಪಾರಕ್ಕೆ ತೊಂದರೆಯಾಗದಂತೆ ತಡೆಯಲು ಇವು ಉಭಯ ದೇಶಗಳ ನಡುವಿನ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತವೆ. ಈ ನಿಯಮಗಳು ಅಂತರಾಷ್ಟ್ರೀಯ ಮಾನದಂಡಗಳ ಬಳಕೆ, ಪಾರದರ್ಶಕತೆ ಮತ್ತು ಸಮಾಲೋಚನಾ ವ್ಯವಸ್ಥೆಗಳ ಮೂಲಕ ವ್ಯಾಪಾರವನ್ನು ಸುಲಭಗೊಳಿಸಲು ಒತ್ತು ನೀಡುತ್ತವೆ. ಹೆಚ್ಚುವರಿಯಾಗಿ, ಭಾರತದ ಎಕ್ಸ್‌ಪೋರ್ಟ್ ಇನ್ಸ್‌ಪೆಕ್ಷನ್ ಕೌನ್ಸಿಲ್ ನೀಡುವ ಪ್ರಮಾಣಪತ್ರಗಳನ್ನು ಓಮನ್ ಕಡ್ಡಾಯವಾಗಿ ಅಂಗೀಕರಿಸುವುದರಿಂದ ವ್ಯಾಪಾರ ಪ್ರಕ್ರಿಯೆ ಸರಳವಾಗಲಿದೆ. ಇದು ಭಾರತದ ರಫ್ತು ಸರಕುಗಳು ಓಮನ್ ಬಂದರುಗಳನ್ನು ತಲುಪಿದಾಗ ಅಲ್ಲಿ ಅನಗತ್ಯ ತಪಾಸಣೆ ಮತ್ತು ಮರು-ಪರೀಕ್ಷೆಗಳನ್ನು ತಪ್ಪಿಸಲು ನೆರವಾಗುತ್ತದೆ.
|
ಆದ್ಯತಾ ವಲಯಗಳಲ್ಲಿ ಅನುಸರಣಾ ಮೌಲ್ಯಮಾಪನ ಕಾರ್ಯವಿಧಾನಗಳ ಸುಧಾರಿತ ಸಮನ್ವಯ
-
ಔಷಧೀಯ ಉತ್ಪನ್ನಗಳು: ಯುಎಸ್‌ಎಫ್‌ಡಿಎ, ಇಎಂಎ, ಯುಕೆ ಎಂಎಚ್‌ಆರ್‌ಎ ಮತ್ತು ಇತರ ಕಟ್ಟುನಿಟ್ಟಿನ ನಿಯಂತ್ರಕರಿಂದ ಅನುಮೋದಿಸಲ್ಪಟ್ಟ ಉತ್ಪನ್ನಗಳಿಗೆ ಮಾರುಕಟ್ಟೆ ಅನುಮೋದನೆಯನ್ನು ವೇಗಗೊಳಿಸುವುದು ಹಾಗೂ ಜಿಎಂಪಿ ತಪಾಸಣಾ ದಾಖಲೆಗಳನ್ನು ಅಂಗೀಕರಿಸುವುದು ಈ ಒಪ್ಪಂದದ ಭಾಗವಾಗಿದೆ. ಇದು ಭಾರತೀಯ ರಫ್ತುದಾರರಿಗೆ ಅನುಮೋದನೆ ಪಡೆಯುವ ಸಮಯ ಮತ್ತು ಅನುಸರಣಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
-
ಹಲಾಲ್ ಮತ್ತು ಸಾವಯವ ಉತ್ಪನ್ನಗಳು: ಈ ಒಪ್ಪಂದವು ಹಲಾಲ್ ಪ್ರಮಾಣೀಕರಣ ವ್ಯವಸ್ಥೆಗಳು ಮತ್ತು ಭಾರತದ ರಾಷ್ಟ್ರೀಯ ಸಾವಯವ ಉತ್ಪಾದನಾ ಕಾರ್ಯಕ್ರಮ ಪ್ರಮಾಣೀಕರಣವನ್ನು ಅಂಗೀಕರಿಸಲು ಮತ್ತು ಗುರುತಿಸಲು ಅವಕಾಶ ನೀಡುತ್ತದೆ. ಇದರ ಗುರಿಯು ಪರೀಕ್ಷೆ ಮತ್ತು ಪ್ರಮಾಣೀಕರಣದ ಪುನರಾವರ್ತನೆಯನ್ನು ತಪ್ಪಿಸುವುದು ಮತ್ತು ರಫ್ತುದಾರರಿಗೆ ಸುಲಭವಾಗಿ ಮಾರುಕಟ್ಟೆ ಪ್ರವೇಶವನ್ನು ಕಲ್ಪಿಸಿಕೊಡುವುದಾಗಿದೆ.
|
ಉಪಸಂಹಾರ
"ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು, ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆ, ವೃತ್ತಿಪರರ ಸಂಚಾರ ಮತ್ತು ನಿಯಂತ್ರಕ ಸಹಕಾರವನ್ನು ಒಳಗೊಂಡ ಒಂದು ಸಮಗ್ರ ಚೌಕಟ್ಟನ್ನು ಸ್ಥಾಪಿಸುತ್ತದೆ. ಇದರೊಂದಿಗೆ ಮಾರುಕಟ್ಟೆ ಪ್ರವೇಶ ಮತ್ತು ಸುರಕ್ಷತಾ ಕ್ರಮಗಳ ನಡುವೆ ಸಮತೋಲಿತ ವಿಧಾನವನ್ನು ಇದು ಕಾಯ್ದುಕೊಳ್ಳುತ್ತದೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಪೂರೈಕೆ ಸರಪಳಿಗಳನ್ನು ಬಲಪಡಿಸಲು ಮತ್ತು ಭಾರತ ಹಾಗೂ ಓಮನ್ ನಡುವೆ ಆಳವಾದ ಹಾಗೂ ಸುಸ್ಥಿರ ಆರ್ಥಿಕ ಸಂಬಂಧವನ್ನು ಬೆಂಬಲಿಸಲು ಸಹಕಾರಿಯಾಗುವ ನಿರೀಕ್ಷೆಯಿದೆ."
References
Ministry of Commerce & Industry
https://www.pib.gov.in/PressReleasePage.aspx?PRID=2205889®=3&lang=2
Ministry of External Affairs
https://www.mea.gov.in/bilateral-documents.htm?dtl/40518/India++Oman+Joint+Statement+during+the+visit+of+Prime+Minister+of+India+Shri+Narendra+Modi+to+Oman+December+1718+2025
file:///C:/Users/HP/Downloads/India-Oman%20Final%20ppt%2019%20Dec%20rev.pdf
Click here to see pdf
*****
(Explainer ID: 156917)
आगंतुक पटल : 5
Provide suggestions / comments