• Skip to Content
  • Sitemap
  • Advance Search
Farmer's Welfare

ಭಾರತದ ಡೈರಿ ವಲಯದ ಡಿಜಿಟಲೀಕರಣ

ಸ್ಮಾರ್ಟ್, ಪಾರದರ್ಶಕ ಮತ್ತು ರೈತ-ಕೇಂದ್ರಿತ ಪರಿಸರ ವ್ಯವಸ್ಥೆಯ ನಿರ್ಮಾಣ

Posted On: 09 JAN 2026 10:37AM

ಪ್ರಮುಖ ಮಾರ್ಗಸೂಚಿಗಳು

  • ರಾಷ್ಟ್ರೀಯ ಡಿಜಿಟಲ್ ಪಶುಸಂಗೋಪನಾ ಮಿಷನ್ ಅಡಿಯಲ್ಲಿ 35.68 ಕೋಟಿಗೂ ಹೆಚ್ಚು ಜಾನುವಾರುಗಳಿಗೆ "ಪಶು ಆಧಾರ್" ವಿತರಿಸಲಾಗಿದ್ದು, ಇದರಿಂದ ಜಾನುವಾರುಗಳ ನಿರ್ವಹಣೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ.
  • 54 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿರುವ 17.3 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಪಾರದರ್ಶಕ ಪಾವತಿ ಮತ್ತು ದಕ್ಷ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.
  • ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಕಾರ್ಯಕ್ಷಮತೆಯನ್ನು ಅಳೆಯಲು ಸುಮಾರು 198 ಹಾಲು ಒಕ್ಕೂಟಗಳು ಮತ್ತು 15 ಫೆಡರೇಶನ್‌ಗಳು ಇಂಟರ್ನೆಟ್ ಆಧಾರಿತ ಡೈರಿ ಮಾಹಿತಿ ವ್ಯವಸ್ಥೆಯನ್ನು ಬಳಸುತ್ತಿವೆ.
  • ಜಿಐಎಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ಹಾಲಿನ ಸಾಗಣೆಯ ಮಾರ್ಗಗಳನ್ನು ಉತ್ತಮಗೊಳಿಸಿರುವುದರಿಂದ, ಹಲವು ರಾಜ್ಯಗಳ ಸಹಕಾರ ಸಂಘಗಳು ಸಾರಿಗೆ ವೆಚ್ಚದಲ್ಲಿ ಗಣನೀಯ ಉಳಿತಾಯ ಮಾಡಿವೆ ಮತ್ತು ವಿತರಣಾ ದಕ್ಷತೆಯನ್ನು ಹೆಚ್ಚಿಸಿಕೊಂಡಿವೆ.

ಪೀಠಿಕೆ

ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದು, ಜಾಗತಿಕ ಉತ್ಪಾದನೆಯಲ್ಲಿ 25% ಪಾಲನ್ನು ಹೊಂದಿದೆ. ಈ ವಲಯವು ವಿಸ್ತರಿಸುತ್ತಿರುವಂತೆ, ಉತ್ಪಾದಕತೆ, ಪಾರದರ್ಶಕತೆ ಮತ್ತು ರೈತರ ಕಲ್ಯಾಣವನ್ನು ಸುಧಾರಿಸುವಲ್ಲಿ ಡಿಜಿಟಲ್ ಉಪಕರಣಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಈ ಬದಲಾವಣೆಯ ಮುಂಚೂಣಿಯಲ್ಲಿದ್ದು, ರೈತರು, ಸಹಕಾರ ಸಂಘಗಳು ಮತ್ತು ಈ ಕ್ಷೇತ್ರದ ಪಾಲುದಾರರನ್ನು ಸಂಪರ್ಕಿಸುವ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಉಪಕ್ರಮಗಳು ಕಾರ್ಯಾಚರಣೆಗಳನ್ನು ಆಧುನೀಕರಿಸಲು, ಅಸಮರ್ಥತೆಯನ್ನು ಕಡಿಮೆ ಮಾಡಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಮೂಲಕ ವಿಶ್ವದ ಅತಿದೊಡ್ಡ ಡೈರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ರಾಷ್ಟ್ರೀಯ ಡಿಜಿಟಲ್ ಪಶುಸಂಗೋಪನಾ ಮಿಷನ್

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಎನ್‌ಡಿಡಿಬಿ ಜಾರಿಗೊಳಿಸುತ್ತಿರುವ ರಾಷ್ಟ್ರೀಯ ಡಿಜಿಟಲ್ ಪಶುಸಂಗೋಪನಾ ಮಿಷನ್, "ಭಾರತ ಪಶುಧನ" ಎಂಬ ಏಕೀಕೃತ ಡಿಜಿಟಲ್ ಪಶುಸಂಗೋಪನಾ ವ್ಯವಸ್ಥೆಯತ್ತ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ.

ದತ್ತಾಂಶ ಆಧಾರಿತ ನಿರ್ವಹಣೆ: ದತ್ತಾಂಶ ಆಧಾರಿತ ಪಶು ನಿರ್ವಹಣೆಯನ್ನು ಹೆಚ್ಚಿಸಲು, 'ಭಾರತ ಪಶುಧನ' ಡೇಟಾಬೇಸ್‌ನಲ್ಲಿ ತಳಿ ಅಭಿವೃದ್ಧಿ, ಕೃತಕ ಗರ್ಭಧಾರಣೆ, ಆರೋಗ್ಯ ಸೇವೆಗಳು, ಲಸಿಕೆ ಮತ್ತು ಚಿಕಿತ್ಸೆಯಂತಹ ಕ್ಷೇತ್ರ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. ಇಲ್ಲಿಯವರೆಗೆ 84 ಕೋಟಿಗೂ ಹೆಚ್ಚು ವ್ಯವಹಾರಗಳು ದಾಖಲಾಗಿವೆ. ಪಶುವೈದ್ಯರು ಮತ್ತು ವಿಸ್ತರಣಾ ಕಾರ್ಯಕರ್ತರು ಈ ವ್ಯವಸ್ಥೆಯನ್ನು ಬಳಸಲು ರೈತರಿಗೆ ಸಹಾಯ ಮಾಡುತ್ತಾರೆ.

ಡಿಜಿಟಲ್ ಗುರುತು: ಭಾರತದ ಪ್ರತಿಯೊಂದು ಪ್ರಾಣಿಯೂ ಡಿಜಿಟಲ್ ಗುರುತನ್ನು ಹೊಂದಿರಬೇಕು ಮತ್ತು ಅದನ್ನು ಆರೋಗ್ಯ ದಾಖಲೆಗಳು ಹಾಗೂ ಉತ್ಪಾದನಾ ದತ್ತಾಂಶಕ್ಕೆ ಲಿಂಕ್ ಮಾಡಬೇಕು ಎಂಬುದು ಇದರ ಗುರಿ.

ಪಶು ಆಧಾರ್: ಅಂತರಾಷ್ಟ್ರೀಯ ಪದ್ಧತಿಗಳಿಗೆ ಅನುಗುಣವಾಗಿ, ಎಲ್ಲಾ ಜಾನುವಾರುಗಳಿಗೆ ಕಿವಿಯ ಟ್ಯಾಗ್ ರೂಪದಲ್ಲಿ 12-ಅಂಕಿಗಳ ಬಾರ್ ಕೋಡ್ ಇರುವ ವಿಶಿಷ್ಟ ಟ್ಯಾಗ್ ಐಡಿ ನೀಡಲಾಗುತ್ತಿದೆ. ಇದನ್ನು "ಪಶು ಆಧಾರ್" ಎಂದು ಕರೆಯಲಾಗುತ್ತದೆ. ಲಸಿಕೆ, ತಳಿ ಅಭಿವೃದ್ಧಿ, ಚಿಕಿತ್ಸೆ ಮುಂತಾದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಲು ಇದು ಪ್ರಮುಖ ಗುರುತಾಗಿದೆ. ನವೆಂಬರ್ 2025 ರವರೆಗೆ, 35.68 ಕೋಟಿಗೂ ಹೆಚ್ಚು ಪಶು ಆಧಾರ್‌ಗಳನ್ನು ಸೃಜಿಸಲಾಗಿದೆ.

1962 ಸಹಾಯವಾಣಿ: ಎನ್‌ದಿಎಲ್‌ಎಂ ಅಡಿಯಲ್ಲಿ, '1962 App' ಅತ್ಯುತ್ತಮ ಪಶುಸಂಗೋಪನಾ ಪದ್ಧತಿಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ದೃಢೀಕೃತ ಮಾಹಿತಿಯನ್ನು ನೀಡುತ್ತದೆ. ಅಲ್ಲದೆ, ರೈತರು ತಮ್ಮ ಮನೆಬಾಗಿಲಿಗೆ ಪಶುವೈದ್ಯಕೀಯ ಸೇವೆಗಳನ್ನು ಪಡೆಯಲು ಟೋಲ್-ಫ್ರೀ ಸಂಖ್ಯೆ 1962 ಅನ್ನು ಬಳಸಬಹುದು.

ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ (ಎಂಸಿಎಸ್‌)

ಭಾರತದ ಸಹಕಾರಿ ಡೈರಿ ಮಾದರಿಯ ಕೇಂದ್ರಬಿಂದು ಎಂದರೆ ಲಕ್ಷಾಂತರ ರೈತರಿಂದ ಪ್ರತಿದಿನ ಹಾಲು ಸಂಗ್ರಹಿಸುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ರೈತ ಸ್ನೇಹಿಯನ್ನಾಗಿಸಲು, ಎನ್‌ಡಿಡಿಬಿ ಯು ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ (ಎಂಸಿಎಸ್‌) ಎಂಬ ಸಮಗ್ರ ಸಾಫ್ಟ್‌ವೇರ್ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ.

ಪಾರದರ್ಶಕತೆ: ಎಂಸಿಎಸ್‌ ಹಾಲಿನ ಪ್ರಮಾಣ, ಗುಣಮಟ್ಟ ಮತ್ತು ಕೊಬ್ಬಿನಂಶವನ್ನು (Fat content) ಡಿಜಿಟಲ್ ಆಗಿ ದಾಖಲಿಸುವ ಮೂಲಕ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುತ್ತದೆ ಮತ್ತು ಪಾವತಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ.

ರಿಯಲ್-ಟೈಮ್ ಅಪ್‌ಡೇಟ್: ರೈತರು ತಮ್ಮ ದೈನಂದಿನ ಮಾರಾಟ ಮತ್ತು ಪಾವತಿಗಳ ಬಗ್ಗೆ ತಕ್ಷಣವೇ ಎಸ್‌ಎಂಎಸ್‌ ಮೂಲಕ ಮಾಹಿತಿ ಪಡೆಯುತ್ತಾರೆ.

ಪ್ರಸ್ತುತ ಸ್ಥಿತಿ: ಅಕ್ಟೋಬರ್ 22, 2025 ರ ಹೊತ್ತಿಗೆ, ಈ ವ್ಯವಸ್ಥೆಯು 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 26,000 ಕ್ಕೂ ಹೆಚ್ಚು ಡೈರಿ ಸಹಕಾರ ಸಂಘಗಳನ್ನು ಒಳಗೊಂಡಿದೆ. ಇದರಿಂದ 54 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿರುವ 17.3 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಪ್ರಯೋಜನವಾಗುತ್ತಿದೆ.

ಏಕೀಕೃತ ಎಂಸಿಎಸ್‌ ಪರಿಹಾರವು ಈ ಕೆಳಗಿನ ಪ್ರಮುಖ ಅಪ್ಲಿಕೇಶನ್‌ಗಳು ಅಥವಾ ಅಂಶಗಳನ್ನು ಹೊಂದಿದೆ:

  1. ಡಿ.ಸಿ.ಎಸ್ ಅಪ್ಲಿಕೇಶನ್: ಡೈರಿ ಸಹಕಾರ ಸಂಘಗಳ ಮಟ್ಟದಲ್ಲಿ ಬಳಸಲಾಗುವ ಸಾಮಾನ್ಯ ಮತ್ತು ಬಹುಭಾಷಾ ಎಎಂಸಿಎಸ್‌ ಅಪ್ಲಿಕೇಶನ್ ಇದಾಗಿದ್ದು, ಇದು ವಿಂಡೋಸ್, ಲಿನಕ್ಸ್ ಮತ್ತು ಆಂಡ್ರಾಯ್ಡ್ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  2. ಪೋರ್ಟಲ್ ಅಪ್ಲಿಕೇಶನ್: ಹಾಲು ಒಕ್ಕೂಟ, ಫೆಡರೇಶನ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಮತ್ತು ಕೇಂದ್ರೀಕೃತ ಎಎಂಸಿಎಸ್‌ ಪೋರ್ಟಲ್‌ಗಳು.
  3. ಆಂಡ್ರಾಯ್ಡ್ ಆಪ್‌ಗಳು: ಸಹಕಾರ ಸಂಘದ ಕಾರ್ಯದರ್ಶಿ, ಡೈರಿ ಮೇಲ್ವಿಚಾರಕ ಮತ್ತು ರೈತರಿಗಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಲಾದ ಸಾಮಾನ್ಯ ಮತ್ತು ಬಹುಭಾಷಾ ಮೊಬೈಲ್ ಅಪ್ಲಿಕೇಶನ್‌ಗಳು.

ಈ ಆಂಡ್ರಾಯ್ಡ್ ಆಧಾರಿತ ಅಪ್ಲಿಕೇಶನ್ ರೈತರಿಗೆ 'ಡಿಜಿಟಲ್ ಪಾಸ್‌ಬುಕ್' ಆಗಿ ಮತ್ತು ಡೈರಿ ಕಾರ್ಯದರ್ಶಿಗಳು ಹಾಗೂ ಮೇಲ್ವಿಚಾರಕರಿಗೆ ರಿಯಲ್-ಟೈಮ್ ಮಾಹಿತಿ ಮತ್ತು ಎಚ್ಚರಿಕೆಗಳನ್ನು ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಕ್ಟೋಬರ್ 22, 2025 ರ ಹೊತ್ತಿಗೆ, 2.43 ಲಕ್ಷಕ್ಕೂ ಹೆಚ್ಚು ರೈತರು, 1,374 ಮೇಲ್ವಿಚಾರಕರು ಮತ್ತು 13,644 ಕಾರ್ಯದರ್ಶಿಗಳು ಎಎಂಸಿಎಸ್‌ಮೊಬೈಲ್ ಆಪ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಎನ್‌ಡಿಡಿಬಿ ಡೈರಿ ಇಆರ್‌ಪಿ (ಎನ್‌ಡಿಇಆರ್‌ಪಿ)

ಎನ್‌ಡಿಡಿಬಿ ಡೈರಿ ಇಆರ್‌ಪಿ (ಎನ್‌ಡಿಇಆರ್‌ಪಿ) ಎಂಬುದು ಡೈರಿ ಮತ್ತು ಖಾದ್ಯ ತೈಲ ಉದ್ಯಮಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಮತ್ತು ವಿನ್ಯಾಸಗೊಳಿಸಲಾದ ಒಂದು ಸಮಗ್ರ ವೆಬ್-ಆಧಾರಿತ 'ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್' ವ್ಯವಸ್ಥೆಯಾಗಿದೆ. ಇದು ಮುಕ್ತ ಮೂಲ ವೇದಿಕೆಯಲ್ಲಿ ನಿರ್ಮಿಸಲ್ಪಟ್ಟಿದ್ದು, ಯಾವುದೇ ಸಾಫ್ಟ್‌ವೇರ್ ಇನ್‌ಸ್ಟಾಲೇಶನ್‌ನ ಅಗತ್ಯವಿಲ್ಲದೆ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದ ಮೂಲಕ ಸುಲಭವಾಗಿ ಬಳಸಬಹುದಾಗಿದೆ. ಇದು ವಿತರಕರಿಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಲ್ಲೂ (ಎಂಎನ್‌ಡಿಇಆರ್‌ಪಿ) ಲಭ್ಯವಿದೆ. ಯಾವುದೇ ಸ್ವಾಮ್ಯದ ಅಥವಾ ಮರುಕಳಿಸುವ ಲೈಸೆನ್ಸಿಂಗ್ ಶುಲ್ಕಗಳಿಲ್ಲದ ಕಾರಣ, ಇದು ಉದ್ಯಮಕ್ಕೆ ಸಂಪೂರ್ಣ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಪರಿಹಾರವನ್ನು ನೀಡುತ್ತದೆ.

iಎನ್‌ಡಿಇಆರ್‌ಪಿ ಪೋರ್ಟಲ್ (https://inderp.nddb.coop) ಎಂಬುದು ವಿತರಕರಿಗಾಗಿ ಇರುವ ಒಂದು ಆನ್‌ಲೈನ್ ವೇದಿಕೆಯಾಗಿದ್ದು, ಇದನ್ನು ಎನ್‌ಡಿಇಆರ್‌ಪಿ ನೊಂದಿಗೆ ಸಂಯೋಜಿಸಲಾಗಿದೆ. ಇದು ಆರ್ಡರ್‌ಗಳು, ಡೆಲಿವರಿ ಚಲನ್ಗಳು, ಇನ್‌ವಾಯ್ಸ್‌ಗಳು ಮತ್ತು ಪಾವತಿಗಳನ್ನು ಸಮರ್ಥವಾಗಿ ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ವಿತರಕರು ವಿತರಣೆಗಳನ್ನು ಟ್ರ್ಯಾಕ್ ಮಾಡಬಹುದು, ಬಾಕಿ ಇರುವ ಹಣದ ವಿವರಗಳನ್ನು ನೋಡಬಹುದು ಮತ್ತು ಇನ್‌ವಾಯ್ಸ್‌ಗಳನ್ನು ನೇರವಾಗಿ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಹಾಲು ಒಕ್ಕೂಟಗಳು ಮತ್ತು ಫೆಡರೇಶನ್‌ಗಳೊಂದಿಗೆ ಸುಗಮ ಸಮನ್ವಯವನ್ನು ಖಚಿತಪಡಿಸುತ್ತದೆ.

ಎನ್‌ಡಿಇಆರ್‌ಪಿ ಮೊಬೈಲ್ ಆಪ್, ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದ್ದು, ಪ್ರಯಾಣದಲ್ಲಿರುವ ವಿತರಕರಿಗಾಗಿ iಎನ್‌ಡಿಇಆರ್‌ಪಿ ನಂತೆಯೇ ಎಲ್ಲಾ ಕಾರ್ಯಕ್ಷಮತೆಗಳನ್ನು ನೀಡುತ್ತದೆ. ಇದು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಸುಲಭವಾಗಿ ಆರ್ಡರ್‌ಗಳನ್ನು ನೀಡಲು, ವಿತರಣೆಗಳನ್ನು ಪರಿಶೀಲಿಸಲು, ಇನ್‌ವಾಯ್ಸ್‌ಗಳನ್ನು ಪಡೆಯಲು ಮತ್ತು ಪಾವತಿಗಳನ್ನು ಗಮನಿಸಲು ಅವಕಾಶ ನೀಡುತ್ತದೆ. ಈ ಮೂಲಕ ಡೈರಿ ವ್ಯವಹಾರದ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಉತ್ತೇಜಿಸುತ್ತದೆ.

ಎನ್‌ಡಿಇಆರ್‌ಪಿ (ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ವ್ಯವಸ್ಥೆಯು ಹಣಕಾಸು ಮತ್ತು ಲೆಕ್ಕಪತ್ರಗಳು ಖರೀದಿ, ದಾಸ್ತಾನು, ಮಾರಾಟ ಮತ್ತು ಮಾರುಕಟ್ಟೆ, ಉತ್ಪಾದನೆ, ಮಾನವ ಸಂಪನ್ಮೂಲ ಮತ್ತು ವೇತನ ಪಾವತಿಯಂತಹ ಎಲ್ಲಾ ಪ್ರಮುಖ ಕಾರ್ಯಕಾರಿ ಮಾಡ್ಯೂಲ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದನ್ನು ಸುಧಾರಿತ ಕಾರ್ಯವೈಖರಿ ಮತ್ತು 'ಮೇಕರ್-ಚೆಕ್ಕರ್' ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲಾಗಿದೆ. ಈ ವ್ಯವಸ್ಥೆಯು ಡ್ಯಾಶ್‌ಬೋರ್ಡ್‌ಗಳು ಮತ್ತು ವಿಶ್ಲೇಷಣಾತ್ಮಕ ಸಾಧನಗಳನ್ನು ಹೊಂದಿದ್ದು, ಇದು ವಿವಿಧ ಹಂತದ ನಿರ್ವಹಣೆಯಲ್ಲಿ ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಮುಖ್ಯವಾಗಿ, ಹಸುವಿನಿಂದ ಗ್ರಾಹಕನವರೆಗೆ ಅಂದರೆ ಹಾಲು ಸಂಗ್ರಹಣೆ, ಸಂಸ್ಕರಣೆ ಮತ್ತು ವಿತರಣೆಯವರೆಗೆ ಸಂಪೂರ್ಣ ಡಿಜಿಟಲ್ ಪರಿಹಾರವನ್ನು ನೀಡಲು ಎನ್‌ಡಿಇಆರ್‌ಪಿ ಅನ್ನು ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ದಕ್ಷತೆಯನ್ನು ಹೆಚ್ಚಿಸಲು, ಈ ವೇದಿಕೆಯು ಉತ್ಪಾದನಾ ಮಾಡ್ಯೂಲ್‌ನಲ್ಲಿ 'ಮಾಸ್-ಬ್ಯಾಲೆನ್ಸಿಂಗ್' ತಂತ್ರವನ್ನು ಬಳಸುತ್ತದೆ, ಇದು ಡೈರಿಗಳಿಗೆ ಸಂಸ್ಕರಣಾ ನಷ್ಟವನ್ನು ಕನಿಷ್ಠಗೊಳಿಸಲು ಸಹಾಯ ಮಾಡುತ್ತದೆ.

ವೀರ್ಯ ಕೇಂದ್ರ ನಿರ್ವಹಣಾ ವ್ಯವಸ್ಥೆ

ವೀರ್ಯ ಕೇಂದ್ರ ನಿರ್ವಹಣಾ ವ್ಯವಸ್ಥೆಯು ಶೈತ್ಯೀಕರಿಸಿದ ವೀರ್ಯ ಡೋಸ್‌ಗಳ ಉತ್ಪಾದನೆಯನ್ನು ಸುಗಮಗೊಳಿಸಲು ಮತ್ತು ಭಾರತ ಸರ್ಕಾರ ನಿಗದಿಪಡಿಸಿದ ಕನಿಷ್ಠ ಗುಣಮಟ್ಟದ ಶಿಷ್ಟಾಚಾರಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಒಂದು ಸಮಗ್ರ ಡಿಜಿಟಲ್ ವೇದಿಕೆಯಾಗಿದೆ.

ವೀರ್ಯ ಕೇಂದ್ರ ನಿರ್ವಹಣಾ ವ್ಯವಸ್ಥೆಯು ಶೈತ್ಯೀಕರಿಸಿದ ವೀರ್ಯ ಡೋಸ್‌ಗಳ ಉತ್ಪಾದನೆಯನ್ನು ಸುಗಮಗೊಳಿಸಲು ಮತ್ತು ಭಾರತ ಸರ್ಕಾರವು ನಿಗದಿಪಡಿಸಿದ ಕನಿಷ್ಠ ಗುಣಮಟ್ಟದ ಶಿಷ್ಟಾಚಾರಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಒಂದು ಸಮಗ್ರ ಡಿಜಿಟಲ್ ವೇದಿಕೆಯಾಗಿದೆ. ಈ ವ್ಯವಸ್ಥೆಯು ವೀರ್ಯ ಕೇಂದ್ರಗಳ ಎಲ್ಲಾ ಪ್ರಮುಖ ಕಾರ್ಯಾಚರಣೆಗಳನ್ನು ಒಳಗೊಂಡಿದೆ; ಇದರಲ್ಲಿ ಹೋರಿಗಳ ಜೀವನಚಕ್ರ ನಿರ್ವಹಣೆ, ವೀರ್ಯ ಉತ್ಪಾದನೆ, ಗುಣಮಟ್ಟ ನಿಯಂತ್ರಣ, ಜೈವಿಕ ಭದ್ರತೆ, ಫಾರ್ಮ್ ಮತ್ತು ಮೇವು ನಿರ್ವಹಣೆ ಹಾಗೂ ಮಾರಾಟದ ಟ್ರ್ಯಾಕಿಂಗ್ ಸೇರಿವೆ. ನಿಖರ, ದಕ್ಷ ಮತ್ತು ಪತ್ತೆಹಚ್ಚಬಹುದಾದ ಕಾರ್ಯಾಚರಣೆಗಳಿಗಾಗಿ ಇದು ಪ್ರಯೋಗಾಲಯದ ಉಪಕರಣಗಳು ಮತ್ತು ಹೋರಿಗಳ ಆರ್‌ಎಫ್‌ಐಡಿ ಟ್ಯಾಗ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಉತ್ಪಾದನೆಯಿಂದ ವಿತರಣೆಯವರೆಗಿನ ಪ್ರತಿಯೊಂದು ಹಂತವನ್ನು ಡಿಜಿಟಲ್ ಆಗಿ ಮೇಲ್ವಿಚಾರಣೆ ಮಾಡುವುದನ್ನು ಖಚಿತಪಡಿಸುತ್ತದೆ.

ಎಸ್‌ಎಸ್‌ಎಂಎಸ್‌ ಅನ್ನು ಮಾಹಿತಿ ಜಾಲ ಮತ್ತು ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ  ಎಂಬ ರಾಷ್ಟ್ರೀಯ ಪೋರ್ಟಲ್‌ಗೆ ಸಂಪರ್ಕಿಸಲಾಗಿದೆ. ಇದು ವೀರ್ಯ ಕೇಂದ್ರಗಳು ಮತ್ತು ಕ್ಷೇತ್ರ ಮಟ್ಟದ ವ್ಯವಸ್ಥೆಗಳಾದ ಎನ್‌ಎಪಿಎಚ್‌ (ಪಶು ಉತ್ಪಾದಕತೆ ಮತ್ತು ಆರೋಗ್ಯ ಮಾಹಿತಿ ಜಾಲ) ನಡುವೆ ರಿಯಲ್-ಟೈಮ್ ದತ್ತಾಂಶ ಹಂಚಿಕೆಯನ್ನು ಸಕ್ರಿಯಗೊಳಿಸುತ್ತದೆ. ಈ ಸಂಯೋಜನೆಯು ದೇಶಾದ್ಯಂತ ಪೂರೈಕೆಯಾಗುವ ವೀರ್ಯ ಡೋಸ್‌ಗಳನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ಕೇಂದ್ರೀಕೃತ ದತ್ತಾಂಶದ ಮೂಲಕ ಸಮನ್ವಯದ ಮೇಲ್ವಿಚಾರಣೆಯನ್ನು ಬೆಂಬಲಿಸುತ್ತದೆ. ವಿಶ್ವಬ್ಯಾಂಕ್ ಅನುದಾನಿತ ಮತ್ತು ಎನ್‌ಡಿಡಿಬಿ ಅನುಷ್ಠಾನಗೊಳಿಸಿದ ರಾಷ್ಟ್ರೀಯ ಡೈರಿ ಯೋಜನೆ-I ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಈ ವ್ಯವಸ್ಥೆಯು ದೇಶಾದ್ಯಂತದ ವೀರ್ಯ ಕೇಂದ್ರಗಳನ್ನು ಆಧುನೀಕರಿಸಿದೆ. ಇದು ಭಾರತದ ಕೃತಕ ಗರ್ಭಧಾರಣೆಯ ಜಾಲವನ್ನು ಬಲಪಡಿಸಿದೆ ಮತ್ತು ಹೈನುಗಾರಿಕೆಯ ಉತ್ಪಾದಕತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ. ಪ್ರಸ್ತುತ, ಭಾರತದಾದ್ಯಂತ 38 ಶ್ರೇಣೀಕೃತ ವೀರ್ಯ ಕೇಂದ್ರಗಳು ಉತ್ಪಾದನೆಯಲ್ಲಿ ಗುಣಮಟ್ಟ, ಪಾರದರ್ಶಕತೆ ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳಲು SSMS ಅನ್ನು ಬಳಸುತ್ತಿವೆ.

ಪಶು ಉತ್ಪಾದಕತೆ ಮತ್ತು ಆರೋಗ್ಯ ಮಾಹಿತಿ ಜಾಲ

 ಎಂಬುದು ರೈತರ ಮನೆಬಾಗಿಲಿಗೆ ತಲುಪಿಸುವ ತಳಿ ಅಭಿವೃದ್ಧಿ, ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಗಳ ಬಗ್ಗೆ ನೈಜ-ಸಮಯದ ಮತ್ತು ವಿಶ್ವಾಸಾರ್ಹ ದತ್ತಾಂಶವನ್ನು ದಾಖಲಿಸಲು ಅನುಕೂಲ ಮಾಡಿಕೊಡುವ ಒಂದು ಅಪ್ಲಿಕೇಶನ್ ಆಗಿದೆ. ಇದು ವಿವಿಧ ಯೋಜನೆಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

ಇಂಟರ್ನೆಟ್ ಆಧಾರಿತ ಡೈರಿ ಮಾಹಿತಿ ವ್ಯವಸ್ಥೆ

ಡೈರಿ ವಲಯದಲ್ಲಿ ಸಾಕ್ಷ್ಯಾಧಾರಿತ ಯೋಜನೆ ಮತ್ತು ಸುಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ದಕ್ಷ ದತ್ತಾಂಶ ನಿರ್ವಹಣೆಯು ಕೇಂದ್ರಬಿಂದುವಾಗಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಅಭಿವೃದ್ಧಿಪಡಿಸಿರುವ ಇಂಟರ್ನೆಟ್ ಆಧಾರಿತ ಡೈರಿ ಮಾಹಿತಿ ವ್ಯವಸ್ಥೆಯು, ಡೈರಿ ಸಹಕಾರ ಸಂಘಗಳು, ಹಾಲು ಒಕ್ಕೂಟಗಳು, ಫೆಡರೇಶನ್‌ಗಳು ಮತ್ತು ಇತರ ಸಂಯೋಜಿತ ಘಟಕಗಳಿಗೆ ವ್ಯವಸ್ಥಿತವಾಗಿ ದತ್ತಾಂಶವನ್ನು ಸಂಗ್ರಹಿಸಲು, ಹಂಚಿಕೊಳ್ಳಲು ಮತ್ತು ವಿಶ್ಲೇಷಿಸಲು ಒಂದು ಏಕೀಕೃತ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ವ್ಯವಸ್ಥೆಯು ಪಾಲ್ಗೊಳ್ಳುವವರಿಗೆ ಹಾಲಿನ ಸಂಗ್ರಹಣೆ ಮತ್ತು ಮಾರಾಟ, ಉತ್ಪನ್ನಗಳ ತಯಾರಿಕೆ ಮತ್ತು ವಿತರಣೆ ಹಾಗೂ ತಾಂತ್ರಿಕ ಇನ್‌ಪುಟ್‌ಗಳ ಪೂರೈಕೆಯಂತಹ ಕಾರ್ಯಕ್ಷಮತೆಯ ಸೂಚಕಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಪ್ರತಿಯೊಂದು ಸಂಸ್ಥೆಯು ತನ್ನ ಕಾರ್ಯಕ್ಷಮತೆಯನ್ನು ಇತರರೊಂದಿಗೆ ಹೋಲಿಸಿ ಅಳೆಯಲು ಇದು ಸಹಾಯ ಮಾಡುತ್ತದೆ.

ಪ್ರಸ್ತುತ ದೇಶಾದ್ಯಂತ ಸುಮಾರು 198 ಹಾಲು ಒಕ್ಕೂಟಗಳು, 29 ಮಾರುಕಟ್ಟೆ ಡೈರಿಗಳು, 54 ಜಾನುವಾರು ಮೇವು ಘಟಕಗಳು ಮತ್ತು 15 ಫೆಡರೇಶನ್‌ಗಳು ಐ-ಡಿಐಎಸ್‌ನ ಭಾಗವಾಗಿವೆ. ಇವೆಲ್ಲವೂ ಸೇರಿ ವಿಶ್ವಾಸಾರ್ಹ ಮತ್ತು ಸಮಗ್ರವಾದ 'ರಾಷ್ಟ್ರೀಯ ಸಹಕಾರಿ ಡೈರಿ ಉದ್ಯಮ ದತ್ತಸಂಚಯ'  ನಿರ್ಮಾಣಕ್ಕೆ ಕೊಡುಗೆ ನೀಡುತ್ತಿವೆ. ಈ ದತ್ತಾಂಶ ಆಧಾರಿತ ಪರಿಸರ ವ್ಯವಸ್ಥೆಯು ಡೈರಿ ವಲಯದಲ್ಲಿ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನೀತಿ ನಿರೂಪಣೆಗೆ ಬೆಂಬಲ ನೀಡುತ್ತದೆ. ಎನ್‌ಡಿಡಿಬಿ ಯು ಐ-ಡಿಐಎಸ್‌ಅನ್ನು ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಯೋಜನೆ ಹಾಗೂ ಕಾರ್ಯಾಚರಣೆಗಳಿಗಾಗಿ ಅದರ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಭಾಗವಹಿಸುವ ಒಕ್ಕೂಟಗಳ 'ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್' ಅಧಿಕಾರಿಗಳಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುತ್ತದೆ.

ಹಾಲಿನ ಮಾರ್ಗಗಳ ಉತ್ತಮೀಕರಣ

ಭಾರತದ ಡೈರಿ ಪೂರೈಕೆ ಸರಪಳಿಯ ಯಶಸ್ಸಿಗೆ ಸಮರ್ಥ ಹಾಲಿನ ಸಂಗ್ರಹಣೆ ಮತ್ತು ವಿತರಣೆಯು ಅತ್ಯಗತ್ಯ. ಈ ಪ್ರಕ್ರಿಯೆಯನ್ನು ಹೆಚ್ಚು ವೆಚ್ಚದಾಯಕ ಮತ್ತು ವ್ಯವಸ್ಥಿತವಾಗಿ ಮಾಡಲು, ಎನ್‌ಡಿಡಿಬಿಯು ಜಿಐಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ತಂತ್ರಜ್ಞಾನವನ್ನು ಬಳಸಿಕೊಂಡು ಹಾಲಿನ ಮಾರ್ಗಗಳನ್ನು ಉತ್ತಮಗೊಳಿಸುವ ವಿಧಾನವನ್ನು ಪರಿಚಯಿಸಿದೆ. ಈ ಡಿಜಿಟಲ್ ವಿಧಾನವು ಹಾಲಿನ ಸಂಗ್ರಹಣೆ ಮತ್ತು ವಿತರಣಾ ಮಾರ್ಗಗಳನ್ನು ಡಿಜಿಟೈಸ್ ಮಾಡಿದ ನಕ್ಷೆಗಳಲ್ಲಿ ರೂಪಿಸುವ ಮೂಲಕ ಹಳೆಯ ಕೈಪಿಡಿ ಯೋಜನೆಯನ್ನು ಬದಲಾಯಿಸುತ್ತದೆ. ಇದು ಅನೇಕ ಮಾರ್ಗಗಳ ಆಯ್ಕೆಗಳನ್ನು ಸುಲಭವಾಗಿ ದೃಶ್ಯೀಕರಿಸಲು ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಂಬಲಿಸುತ್ತದೆ.

ಜಿಐಎಸ್‌ ಆಧಾರಿತ ಮಾರ್ಗ ಯೋಜನೆಯನ್ನು ಬಳಸುವುದರಿಂದ ಸಾರಿಗೆ ದೂರ, ಇಂಧನ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ, ಇದು ಹಾಲಿನ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ. ಎನ್‌ಡಿಡಿಬಿ ಯು ಆಗಸ್ಟ್ 2022 ರಲ್ಲಿ ವಿದರ್ಭ ಮರಾಠವಾಡ ಡೈರಿ ಅಭಿವೃದ್ಧಿ ಯೋಜನೆಯಡಿ ಹಾಲಿನ ಮಾರ್ಗ ಉತ್ತಮಗೊಳಿಸುವ ಅಭ್ಯಾಸವನ್ನು ಪ್ರಾರಂಭಿಸಿತು. ಅಲ್ಲಿ ನಾಲ್ಕು ಹಾಲು ತಂಪುಗೊಳಿಸುವ ಕೇಂದ್ರಗಳ ಮಾರ್ಗಗಳನ್ನು ಮರುರೂಪಿಸಲಾಯಿತು, ಇದು ಸಾರಿಗೆ ವೆಚ್ಚದಲ್ಲಿ ಗಮನಾರ್ಹ ಉಳಿತಾಯಕ್ಕೆ ಕಾರಣವಾಯಿತು. ವಾರಣಾಸಿ ಹಾಲು ಒಕ್ಕೂಟ, ಪಶ್ಚಿಮ ಅಸ್ಸಾಂ ಹಾಲು ಒಕ್ಕೂಟ, ಜಾರ್ಖಂಡ್ ಮಿಲ್ಕ್ ಫೆಡರೇಶನ್ ಮತ್ತು ಇಂದೋರ್ ಹಾಲು ಒಕ್ಕೂಟಗಳಲ್ಲಿನ ಇದೇ ರೀತಿಯ ಪ್ರಯೋಗಗಳು ಉತ್ತೇಜಕ ಫಲಿತಾಂಶಗಳನ್ನು ನೀಡಿವೆ, ಇದು ಡೈರಿ ಲಾಜಿಸ್ಟಿಕ್ಸ್‌ನಲ್ಲಿ ಭಾರಿ ವೆಚ್ಚ ಕಡಿತದ ಸಾಮರ್ಥ್ಯವನ್ನು ಉಲ್ಲೇಖಿಸುತ್ತದೆ.

ಸಹಕಾರ ಸಂಘಗಳು ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡಲು, ಎನ್‌ಡಿಡಿಡಬಿ ಯು ವೆಬ್-ಆಧಾರಿತ 'ಡೈನಾಮಿಕ್ ರೂಟ್ ಪ್ಲಾನಿಂಗ್ ಸಾಫ್ಟ್‌ವೇರ್' ಅನ್ನು ಅಭಿವೃದ್ಧಿಪಡಿಸಿದೆ. ಇದು ವೈಜ್ಞಾನಿಕ ಮತ್ತು ಬಳಕೆದಾರ ಸ್ನೇಹಿ ರೀತಿಯಲ್ಲಿ ಮಾರ್ಗಗಳನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ. ಡೈರಿ ಸಹಕಾರ ಸಂಘಗಳಿಗೆ ಉಚಿತವಾಗಿ ಲಭ್ಯವಿರುವ ಈ ಉಪಕರಣವು ನೈಜ-ಸಮಯದ ಮಾರ್ಗ ಯೋಜನೆಗೆ ಮತ್ತು ಉತ್ತಮ ಕಾರ್ಯಾಚರಣೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತಂತ್ರಜ್ಞಾನವನ್ನು ಸಹಕಾರಿ ದಕ್ಷತೆಯೊಂದಿಗೆ ಸಂಯೋಜಿಸುವ ಮೂಲಕ, ಎನ್‌ಡಿಡಿಬಿ ಯ ಈ ಮಾರ್ಗ ಉತ್ತಮಗೊಳಿಸುವ ಉಪಕ್ರಮವು ಭಾರತದ ಡೈರಿ ವಲಯದಲ್ಲಿ ಸುಸ್ಥಿರ ಮತ್ತು ವೆಚ್ಚದಾಯಕ ಹಾಲು ಸಾರಿಗೆಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದೆ.

ಉಪಸಂಹಾರ

ವಿಶ್ವದ ಹಾಲಿನ ಉತ್ಪಾದನೆಯಲ್ಲಿ ಕಾಲು ಭಾಗದಷ್ಟು ಕೊಡುಗೆ ನೀಡುತ್ತಿರುವ ಭಾರತದ ಡೈರಿ ವಲಯವು ಎನ್‌ಡಿಡಿಬಿ ನೇತೃತ್ವದಲ್ಲಿ ಗಮನಾರ್ಹ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿದೆ. ಎನ್‌ಡಿಎಲ್‌ಎಂ, ಎಎಂಸಿಎಸ್‌, ಎನ್‌ಡಿಇಆರ್‌ಪಿ, ಎಸ್‌ಎಸ್‌ಎಂಎಸ್‌, ಐ-ಡಿಐಎಸ್‌ ಮತ್ತು ಮಾರ್ಗ ಉತ್ತಮಗೊಳಿಸುವ ಸಾಧನಗಳಂತಹ ಸಮಗ್ರ ವೇದಿಕೆಗಳ ಮೂಲಕ, ಈ ವಲಯವು ಹೆಚ್ಚಿನ ದಕ್ಷತೆ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯತ್ತ ಸಾಗುತ್ತಿದೆ. ಈ ವ್ಯವಸ್ಥೆಗಳು ಕೇವಲ ಕಾರ್ಯಾಚರಣೆಯ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಲಕ್ಷಾಂತರ ಸಣ್ಣ ಮತ್ತು ಅತಿಸಣ್ಣ ಡೈರಿ ರೈತರು ಆಧುನಿಕ, ತಂತ್ರಜ್ಞಾನ ಚಾಲಿತ ಪರಿಸರ ವ್ಯವಸ್ಥೆಗೆ ನೇರವಾಗಿ ಸಂಪರ್ಕ ಹೊಂದುವುದನ್ನು ಖಚಿತಪಡಿಸುತ್ತಿವೆ.

ಸಹಕಾರಿ ಶಕ್ತಿಯನ್ನು ಡಿಜಿಟಲ್ ನಾವೀನ್ಯತೆಯೊಂದಿಗೆ ಸಂಯೋಜಿಸುವ ಮೂಲಕ, ಭಾರತವು ಸುಸ್ಥಿರ ಡೈರಿ ಅಭಿವೃದ್ಧಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಇಲ್ಲಿ ಪ್ರತಿಯೊಂದು ಲೀಟರ್ ಹಾಲು ಮತ್ತು ಪ್ರತಿಯೊಂದು ಪ್ರಾಣಿಯೂ ದಕ್ಷ ಪೂರೈಕೆ ಸರಪಳಿಯ ಭಾಗವಾಗಿದೆ. ಈ ನಿರಂತರ ಪ್ರಯತ್ನಗಳು ಉತ್ಪಾದಕರು ಮತ್ತು ಗ್ರಾಹಕರಿಬ್ಬರಿಗೂ ಸೇವೆ ಸಲ್ಲಿಸುವ, ಡಿಜಿಟಲ್ ಸಬಲೀಕರಣಗೊಂಡ ಡೈರಿ ವಲಯವನ್ನು ರಚಿಸುವ ಎನ್‌ಡಿಡಿಬಿ ಯ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ. ಇದು ಸುರಕ್ಷಿತ, ಸುಸ್ಥಿರ ಮತ್ತು ತಂತ್ರಜ್ಞಾನ ಚಾಲಿತ ಹಾಲು ಉತ್ಪಾದನೆಯಲ್ಲಿ ಜಾಗತಿಕ ನಾಯಕರಾಗುವ ಭಾರತದ ಗುರಿಯನ್ನು ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ಯುತ್ತಿದೆ.

 

References:

  • PIB
  1. https://www.pib.gov.in/PressReleasePage.aspx?PRID=2114715
  2. https://www.pib.gov.in/PressReleseDetail.aspx?PRID=2115188
  1. https://amcs.nddb.coop/
  2. https://amcs.nddb.coop/Home/UnionDetails
  3. https://amcs.nddb.coop/Home/About
  • NDDB Dairy ERP –
  1. https://nderp.nddb.coop/subpage?i-NDERP
  2. https://nderp.nddb.coop/subpage?m-NDERP
  3. https://nderp.nddb.coop/subpage?NDERP

Click here to see pdf 

 

******

(Explainer ID: 156903) आगंतुक पटल : 24
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Telugu , Malayalam
Link mygov.in
National Portal Of India
STQC Certificate