• Skip to Content
  • Sitemap
  • Advance Search
Technology

ವಿನ್ಯಾಸ ಆಧಾರಿತ ಪ್ರೋತ್ಸಾಹಕ ಯೋಜನೆ

ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಪರಿಸರ ವ್ಯವಸ್ಥೆಗೆ ವೇಗವರ್ಧನೆ ನೀಡುವುದು

Posted On: 04 JAN 2026 12:10PM

ಪ್ರಮುಖ ಮಾರ್ಗಸೂಚಿಗಳು

  • ಸೆಮಿಕಂಡಕ್ಟರ್ ಚಿಪ್ ವಿನ್ಯಾಸವು ಈ ವಲಯದ ಪ್ರಮುಖ ಮೌಲ್ಯವರ್ಧಕವಾಗಿದ್ದು, ಇದು ಒಟ್ಟು ಮೌಲ್ಯವರ್ಧನೆಗೆ 50% ವರೆಗೆ, ಬಿಲ್ ಆಫ್ ಮೆಟೀರಿಯಲ್ಸ್ ವೆಚ್ಚಕ್ಕೆ 20-50% ಮತ್ತು 'ಫ್ಯಾಬ್‌ಲೆಸ್'  ವಿಭಾಗದ ಮೂಲಕ ಜಾಗತಿಕ ಸೆಮಿಕಂಡಕ್ಟರ್ ಮಾರಾಟಕ್ಕೆ 30-35% ಕೊಡುಗೆ ನೀಡುತ್ತದೆ.
  • ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಯೋಜನೆಯು, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಚಿಪ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
  • 24 DLI-ಬೆಂಬಲಿತ ಚಿಪ್ ವಿನ್ಯಾಸ ಯೋಜನೆಗಳು ವಿಡಿಯೋ ಕಣ್ಗಾವಲು, ಡ್ರೋನ್ ಪತ್ತೆ ಹಚ್ಚುವಿಕೆ, ಎನರ್ಜಿ ಮೀಟರಿಂಗ್, ಮೈಕ್ರೋಪ್ರೊಸೆಸರ್‌ಗಳು, ಉಪಗ್ರಹ ಸಂವಹನ ಮತ್ತು ಐಒಟಿ ಎಸ್‌ಒಸಿಗಳ ಸೇರಿದಂತೆ ಕಾರ್ಯತಂತ್ರದ ವಲಯಗಳನ್ನು ಗುರಿಯಾಗಿಸಿಕೊಂಡಿವೆ.
  • ಡಿಎಲ್‌ಐ ಬೆಂಬಲಿತ ಯೋಜನೆಗಳು ವೇಗವಾಗಿ ವಿಸ್ತರಿಸುತ್ತಿದ್ದು, ಇದುವರೆಗೆ 16 ಟೇಪ್-ಔಟ್‌ಗಳು, 6 ಎಸಿಕ್ ಚಿಪ್‌ಗಳು, 10 ಪೇಟೆಂಟ್‌ಗಳನ್ನು ಒಳಗೊಂಡಿವೆ. ಈ ಯೋಜನೆಗಳಲ್ಲಿ 1,000 ಕ್ಕೂ ಹೆಚ್ಚು ಎಂಜಿನಿಯರ್‌ಗಳು ತೊಡಗಿಸಿಕೊಂಡಿದ್ದಾರೆ ಮತ್ತು ಖಾಸಗಿ ಹೂಡಿಕೆಯು 3 ಪಟ್ಟು ಹೆಚ್ಚಾಗಿದೆ.

ಪೀಠಿಕೆ

ಭಾರತವು ತನ್ನ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳನ್ನು ವೇಗವಾಗಿ ಮುನ್ನಡೆಸುತ್ತಿದೆ. ಆರೋಗ್ಯ ರಕ್ಷಣೆ, ಸಾರಿಗೆ, ಸಂವಹನ, ರಕ್ಷಣೆ, ಬಾಹ್ಯಾಕಾಶ ಮತ್ತು ಉದಯೋನ್ಮುಖ ಡಿಜಿಟಲ್ ಮೂಲಸೌಕರ್ಯಗಳಿಗೆ ಸೆಮಿಕಂಡಕ್ಟರ್ ಚಿಪ್‌ಗಳು ಅತ್ಯಗತ್ಯ ಸಾಧನಗಳಾಗಿವೆ ಎಂದು ಭಾರತ ಗುರುತಿಸಿದೆ. ಹೆಚ್ಚುತ್ತಿರುವ ಡಿಜಿಟಲೀಕರಣ ಮತ್ತು ಯಾಂತ್ರೀಕರಣದೊಂದಿಗೆ, ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್‌ಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿದೆ. ಇದಕ್ಕೆ ಸ್ಪಂದನವಾಗಿ, ಭಾರತ ಸರ್ಕಾರವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ ದೇಶೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದೆ. ಆದಾಗ್ಯೂ, ಸೆಮಿಕಂಡಕ್ಟರ್ ಉತ್ಪಾದನೆಯು ಪ್ರಸ್ತುತ ವಿಶ್ವದ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ, ಇದು ಜಾಗತಿಕ ಪೂರೈಕೆ ಸರಪಳಿಯನ್ನು ಅತ್ಯಂತ ನಾಜೂಕಾದ ಮತ್ತು ಅಡೆತಡೆಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡಿದೆ. ಇದು ಜಾಗತಿಕ ಉತ್ಪಾದನಾ ನೆಲೆಯನ್ನು ವೈವಿಧ್ಯಗೊಳಿಸುವ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ. ಈ ನಿಟ್ಟಿನಲ್ಲಿ, ಭಾರತವು ಜಾಗತಿಕ ಸೆಮಿಕಂಡಕ್ಟರ್ ರಂಗದಲ್ಲಿ ಹೆಚ್ಚು ಕಾರ್ಯತಂತ್ರದ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ. 

ನಿಮಗೆ ತಿಳಿದಿದೆಯೇ: 'ಫ್ಯಾಬ್‌ಲೆಸ್' ಚಿಪ್ ವಿನ್ಯಾಸವು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಪ್ರಮುಖ ಪ್ರೇರಕ ಶಕ್ತಿಯಾಗಿದೆ

ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯಲ್ಲಿ, 'ಫ್ಯಾಬ್‌ಲೆಸ್' ಸೆಮಿಕಂಡಕ್ಟರ್ ಕಂಪನಿಗಳು ಅತ್ಯಂತ ಹೆಚ್ಚಿನ ಕಾರ್ಯತಂತ್ರದ ಮೌಲ್ಯವನ್ನು ಹೊಂದಿವೆ. ಏಕೆಂದರೆ ಇವು ಉತ್ಪನ್ನದ ಬುದ್ಧಿವಂತಿಕೆ, ದಕ್ಷತೆ ಮತ್ತು ಸುರಕ್ಷತೆಯನ್ನು ನಿರ್ಧರಿಸುವ ಚಿಪ್‌ಗಳನ್ನು ವಿನ್ಯಾಸಗೊಳಿಸುತ್ತವೆ. ಫ್ಯಾಬ್ರಿಕೇಶನ್ ಘಟಕಗಳು  ಸಿಲಿಕಾನ್ ಅನ್ನು ತಯಾರಿಸಿದರೆ ಮತ್ತು ಇಎಮ್‌ಎಸ್ (EMS) ಸಂಸ್ಥೆಗಳು ಸಾಧನಗಳನ್ನು ಜೋಡಿಸುತ್ತವೆ. ಆದರೆ, ಒಂದು ಸೆಮಿಕಂಡಕ್ಟರ್‌ನ ಅರ್ಧಕ್ಕಿಂತ ಹೆಚ್ಚು ಮೌಲ್ಯವು ಅದರ ವಿನ್ಯಾಸ ಮತ್ತು ಬೌದ್ಧಿಕ ಆಸ್ತಿಯಿಂದ ಬರುತ್ತದೆ ಹೊರತು ಭೌತಿಕ ಉತ್ಪಾದನೆಯಿಂದಲ್ಲ. 'ಫ್ಯಾಬ್‌ಲೆಸ್' ಸೆಮಿಕಂಡಕ್ಟರ್ ವಿನ್ಯಾಸ ಮಾದರಿಗಳು ತುಲನಾತ್ಮಕವಾಗಿ ಕಡಿಮೆ ಬಂಡವಾಳ ವೆಚ್ಚದೊಂದಿಗೆ ಹೆಚ್ಚಿನ ಮೌಲ್ಯವರ್ಧನೆಯನ್ನು ಮಾಡುತ್ತವೆ.

ಬಲವಾದ 'ಫ್ಯಾಬ್‌ಲೆಸ್' ಸಾಮರ್ಥ್ಯವಿಲ್ಲದಿದ್ದರೆ, ಎಲೆಕ್ಟ್ರಾನಿಕ್ ಸಾಧನಗಳು ಸ್ಥಳೀಯವಾಗಿ ತಯಾರಾದಾಗಲೂ ಒಂದು ರಾಷ್ಟ್ರವು ಆಮದು ಮಾಡಿಕೊಂಡ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಆದ್ದರಿಂದ, ಸದೃಢವಾದ 'ಫ್ಯಾಬ್‌ಲೆಸ್' ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಭಾರತಕ್ಕೆ ಮೌಲ್ಯ ಸರಪಳಿಯ ಅತ್ಯಂತ ನಿರ್ಣಾಯಕ ಹಂತದ ಮಾಲೀಕತ್ವವನ್ನು ಪಡೆಯಲು, ಬೌದ್ಧಿಕ ಆಸ್ತಿಯನ್ನು ಉಳಿಸಿಕೊಳ್ಳಲು, ಆಮದುಗಳನ್ನು ಕಡಿಮೆ ಮಾಡಲು ಮತ್ತು ದೀರ್ಘಾವಧಿಯ ತಾಂತ್ರಿಕ ನಾಯಕತ್ವವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.

ಡಿಎಲ್‌ಐ ಯೋಜನೆ:

ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯು, ಪ್ರಬಲವಾದ 'ಫ್ಯಾಬ್‌ಲೆಸ್' ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಮುನ್ನಡೆಸುವಲ್ಲಿ ಒಂದು ಪ್ರಮುಖ ಸಾಧನವಾಗಿದೆ. ದೇಶೀಯ ಸ್ಟಾರ್ಟ್‌ಅಪ್‌ಗಳು ಮತ್ತು ಎಮ್.ಎಸ್.ಎಮ್.(ಎಂಎಸ್‌ಎಂಇ) ಗಳಿಗೆ ಹಣಕಾಸಿನ ಪ್ರೋತ್ಸಾಹಕಗಳು ಮತ್ತು ಸುಧಾರಿತ ವಿನ್ಯಾಸ ಮೂಲಸೌಕರ್ಯಗಳ ಲಭ್ಯತೆಯನ್ನು ಒದಗಿಸುವ ಮೂಲಕ, ಸದೃಢ ಹಾಗೂ ಸ್ವಾವಲಂಬಿ ಚಿಪ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು 'ಸೆಮಿಕಾನ್ ಇಂಡಿಯಾ' ಕಾರ್ಯಕ್ರಮದ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಯೋಜನೆಯನ್ನು ಜಾರಿಗೆ ತರುತ್ತಿದೆ.

ಡಿಎಲ್‌ಐ ಯೋಜನೆಯಡಿ ಅರ್ಹತೆಗಳು

ಸೆಮಿಕಂಡಕ್ಟರ್ ಉತ್ಪನ್ನ ವಿನ್ಯಾಸ ಮತ್ತು ನಿಯೋಜನೆಗಾಗಿ ಸ್ಟಾರ್ಟ್-ಅಪ್‌ಗಳು ಮತ್ತು ಎಮ್.ಎಸ್.ಎಮ್.ಇ (ಎಂಎಸ್‌ಎಂಇ) ಗಳು ಹಣಕಾಸಿನ ಪ್ರೋತ್ಸಾಹಕಗಳು ಮತ್ತು ವಿನ್ಯಾಸ ಮೂಲಸೌಕರ್ಯ ಬೆಂಬಲವನ್ನು ಪಡೆಯಲು ಅರ್ಹವಾಗಿವೆ. ಹಾಗೆಯೇ, ಸೆಮಿಕಂಡಕ್ಟರ್ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವ ಇತರ ದೇಶೀಯ ಕಂಪನಿಗಳು ಹಣಕಾಸಿನ ಪ್ರೋತ್ಸಾಹಕಗಳಿಗೆ ಅರ್ಹವಾಗಿವೆ.

  • ಎಮ್.ಎಸ್.ಎಮ್.ಇ (ಎಂಎಸ್‌ಎಂಇs): 1 ಜೂನ್ 2020 ರ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ ವ್ಯಾಖ್ಯಾನಿಸಲಾಗಿದೆ.
  • ಸ್ಟಾರ್ಟ್-ಅಪ್‌ಗಳು: 19 ಫೆಬ್ರವರಿ 2019 ರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ ಅಧಿಸೂಚನೆಯ ಪ್ರಕಾರ ವ್ಯಾಖ್ಯಾನಿಸಲಾಗಿದೆ.
  • ದೇಶೀಯ ಕಂಪನಿಗಳು: 2017 ರ ನೇರ ವಿದೇಶಿ ಹೂಡಿಕೆ ನೀತಿ ಸುತ್ತೋಲೆ ಅಥವಾ ಚಾಲ್ತಿಯಲ್ಲಿರುವ ಮಾನದಂಡಗಳ ಪ್ರಕಾರ, ಭಾರತೀಯ ನಾಗರಿಕರ ಒಡೆತನದ ಕಂಪನಿಗಳು ಎಂದು ವ್ಯಾಖ್ಯಾನಿಸಲಾಗಿದೆ.

ಡಿ.ಎಲ್.ಯೋಜನೆಯು ಸೆಮಿಕಂಡಕ್ಟರ್ ವಿನ್ಯಾಸದ ಸಂಪೂರ್ಣ ಜೀವನಚಕ್ರಕ್ಕೆ—ವಿನ್ಯಾಸ ಮತ್ತು ಅಭಿವೃದ್ಧಿಯಿಂದ ಹಿಡಿದು ನಿಯೋಜನೆಯವರೆಗೆ—ಬೆಂಬಲ ನೀಡುತ್ತದೆ. ಇದು ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು, ಚಿಪ್‌ಸೆಟ್‌ಗಳು, ಸಿಸ್ಟಮ್ಸ್-ಆನ್-ಚಿಪ್, ಸ್ಟಮ್‌ಗಳು ಮತ್ತು ಐಪಿ ಕೋರ್‌ಗಳನ್ನು ಒಳಗೊಂಡಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಸ್ವದೇಶಿ ಸೆಮಿಕಂಡಕ್ಟರ್ ಅಂಶಗಳು ಮತ್ತು ಬೌದ್ಧಿಕ ಆಸ್ತಿಯನ್ನು ಉತ್ತೇಜಿಸುವ ಮೂಲಕ, ಈ ಯೋಜನೆಯು ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ.

ಡಿಎಲ್‌ಐ ಯೋಜನೆಯಡಿ ಹಣಕಾಸಿನ ಪ್ರೋತ್ಸಾಹಕಗಳು ಮತ್ತು ವಿನ್ಯಾಸ ಮೂಲಸೌಕರ್ಯ ಬೆಂಬಲ

ಹಣಕಾಸಿನ ಪ್ರೋತ್ಸಾಹಕಗಳು

ಉತ್ಪನ್ನ ವಿನ್ಯಾಸ ಆಧಾರಿತ ಪ್ರೋತ್ಸಾಹಕ

ನಿಯೋಜನೆ ಆಧಾರಿತ ಪ್ರೋತ್ಸಾಹಕ

ಅರ್ಹ ವೆಚ್ಚದ ಶೇಕಡಾ 50 ರಷ್ಟು (50%) ಮರುಪಾವತಿ ಮಾಡಲಾಗುವುದು.

  • ಪ್ರತಿ ಅರ್ಜಿಗೆ ಮರುಪಾವತಿ ಮಿತಿ ₹15 ಕೋಟಿಗೆ ನಿಗದಿಪಡಿಸಲಾಗಿದೆ.
  • ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತೊಡಗಿರುವ ಘಟಕಗಳಿಗೆ ಬೆಂಬಲ ಲಭ್ಯವಿದೆ: ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (ಐಸಿಗಳು) ಚಿಪ್‌ಸೆಟ್‌ಗಳು ಸಿಸ್ಟಮ್ಸ್ ಆನ್ ಚಿಪ್ಸ್ ಸಿಸ್ಟಮ್‌ಗಳು ಮತ್ತು ಐಪಿ ಕೋರ್‌ಗಳು ಸೆಮಿಕಂಡಕ್ಟರ್-ಲಿಂಕ್ಡ್ ವಿನ್ಯಾಸಗಳು.
  • ಐದು ವರ್ಷಗಳ ಅವಧಿಗೆ ನಿವ್ವಳ ಮಾರಾಟದ ವಹಿವಾಟಿನ ಮೇಲೆ ಶೇಕಡಾ 6% ರಿಂದ 4% ರಷ್ಟು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
  • ಈ ಪ್ರೋತ್ಸಾಹಧನವು ಪ್ರತಿ ಅರ್ಜಿಗೆ ಗರಿಷ್ಠ ₹30 ಕೋಟಿಗಳಿಗೆ ಸೀಮಿತವಾಗಿರುತ್ತದೆ.
  • 1 ರಿಂದ 5 ವರ್ಷಗಳ ಅವಧಿಯಲ್ಲಿ ಅಗತ್ಯವಿರುವ ಕನಿಷ್ಠ ಒಟ್ಟು ನಿವ್ವಳ ಮಾರಾಟವು: ಸ್ಟಾರ್ಟ್‌ಅಪ್‌ಗಳು ಅಥವಾ ಎಮ್.ಎಸ್.ಎಮ್.ಇ (ಎಂಎಸ್‌ಎಂಇ) ಗಳಿಗೆ ₹1 ಕೋಟಿ ಮತ್ತು ಇತರ ದೇಶೀಯ ಕಂಪನಿಗಳಿಗೆ ₹5 ಕೋಟಿಗಳಾಗಿರಬೇಕು.
  • ವಿನ್ಯಾಸಗೊಳಿಸಿದ ಚಿಪ್ ಅಥವಾ ತಂತ್ರಜ್ಞಾನವನ್ನು ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಯಶಸ್ವಿಯಾಗಿ ಅಳವಡಿಸಿರಬೇಕು.

 

ವಿನ್ಯಾಸ ಮೂಲಸೌಕರ್ಯ ಬೆಂಬಲ

ಅನುಮೋದಿತ ಕಂಪನಿಗಳಿಗೆ ವಿನ್ಯಾಸ ಮೂಲಸೌಕರ್ಯ ಬೆಂಬಲವನ್ನು ಸುಗಮಗೊಳಿಸಲು C-DAC ಸಂಸ್ಥೆಯು ಡಿಎಲ್‌ಐ ಯೋಜನೆಯಡಿ 'ಚಿಪ್-ಇನ್' ಕೇಂದ್ರವನ್ನು ಸ್ಥಾಪಿಸಿದೆ:

  • ರಾಷ್ಟ್ರೀಯ ಇಡಿಎ ಟೂಲ್ ಗ್ರಿಡ್: ಚಿಪ್ ವಿನ್ಯಾಸ ಚಟುವಟಿಕೆಗಳಿಗಾಗಿ ಸುಧಾರಿತ ಇಡಿಎ ಪರಿಕರಗಳ ಕೇಂದ್ರೀಕೃತ ಸೌಲಭ್ಯಕ್ಕೆ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ರಿಮೋಟ್ ಆಕ್ಸೆಸ್ (ದೂರಸ್ಥ ಪ್ರವೇಶ) ಒದಗಿಸಲಾಗುವುದು.
  • ಐಪಿ ಕೋರ್ ರೆಪೊಸಿಟರಿ: SoC ವಿನ್ಯಾಸ ಚಟುವಟಿಕೆಗಳಿಗಾಗಿ ಐಪಿ ಕೋರ್‌ಗಳ ಭಂಡಾರಕ್ಕೆ ಸುಲಭ ಮತ್ತು ಹೊಂದಾಣಿಕೆಯ ಪ್ರವೇಶವನ್ನು ನೀಡುವುದು.
  • ಎಮ್‌ಪಿಡಬ್ಲ್ಯೂ ಪ್ರೊಟೊಟೈಪಿಂಗ್ ಬೆಂಬಲ: ಸೆಮಿಕಂಡಕ್ಟರ್ ಫೌಂಡ್ರಿಗಳ ಮೂಲಕ ಎಮ್‌ಪಿಡಬ್ಲ್ಯೂ ಮಾದರಿಯಲ್ಲಿ ವಿನ್ಯಾಸದ ಮೂಲಮಾದರಿಯನ್ನು ತಯಾರಿಸಲು ಆರ್ಥಿಕ ನೆರವು ನೀಡುವುದು.
  • ಪೋಸ್ಟ್-ಸಿಲಿಕಾನ್ ವ್ಯಾಲಿಡೇಶನ್ ಬೆಂಬಲ: ತಯಾರಿಸಿದ ಎಸಿಕ್ ಚಿಪ್‌ಗಳ ಪರೀಕ್ಷೆ, ಮೌಲ್ಯೀಕರಣ ಮತ್ತು ಸಿಲಿಕಾನ್ ಬ್ರಿಂಗ್-ಅಪ್ ಚಟುವಟಿಕೆಗಳಿಗಾಗಿ ಆರ್ಥಿಕ ಬೆಂಬಲ ನೀಡುವುದು.

ಡಿಎಲ್‌ಐ ಯೋಜನೆಯ ಪ್ರಮುಖ ಅಂಶಗಳು ಮತ್ತು ಸಾಧನೆಗಳು

ಡಿಸೆಂಬರ್ 2021 ರಲ್ಲಿ ಪ್ರಾರಂಭವಾದಾಗಿನಿಂದ, ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯು ಭಾರತದಲ್ಲಿ ಪ್ರಬಲ ಮತ್ತು ಹೆಚ್ಚು ಸ್ವಾವಲಂಬಿಯಾದ ಸೆಮಿಕಂಡಕ್ಟರ್ ವಿನ್ಯಾಸದ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹಣಕಾಸಿನ ಪ್ರೋತ್ಸಾಹಕಗಳು, ಸುಧಾರಿತ ವಿನ್ಯಾಸ ಪರಿಕರಗಳ ಲಭ್ಯತೆ ಮತ್ತು ಮೂಲಮಾದರಿ ತಯಾರಿಕೆಗೆ ಬೆಂಬಲವನ್ನು ನೀಡುವ ಮೂಲಕ, ಈ ಯೋಜನೆಯು ನವೋದ್ಯಮಿಗಳು ತಮ್ಮ ಆಲೋಚನೆಗಳನ್ನು ವಾಸ್ತವಿಕ ಸಿಲಿಕಾನ್ ಚಿಪ್‌ಗಳಾಗಿ ಪರಿವರ್ತಿಸಲು ಸುಗಮವಾಗಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ. ಚಿಪ್ ವಿನ್ಯಾಸಕ್ಕಾಗಿ ಹಂಚಿಕೆಯ ರಾಷ್ಟ್ರೀಯ ಮೂಲಸೌಕರ್ಯವನ್ನು ನಿರ್ಮಿಸುವ ಮೂಲಕ ಈ ಪರಿಸರ ವ್ಯವಸ್ಥೆಯ ಆಧಾರಿತ ವಿಧಾನವನ್ನು ಬಲಪಡಿಸಲಾಗಿದೆ.

ಈ ಮೂಲಸೌಕರ್ಯದ ಪ್ರಮುಖ ಆಧಾರಸ್ತಂಭವೆಂದರೆ ಚಿಪ್-ಇನ್ ಕೇಂದ್ರ. ಇದು ದೇಶಾದ್ಯಂತ 400 ಸಂಸ್ಥೆಗಳ ಸುಮಾರು 1 ಲಕ್ಷ ಎಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳಿಗೆ ಸುಧಾರಿತ ಚಿಪ್ ವಿನ್ಯಾಸದ ಇಡಿಎ ಪರಿಕರಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ಈ ತಂತ್ರಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡಿದೆ.

ಇದು ಜಗತ್ತಿನಲ್ಲೇ ಅತಿ ದೊಡ್ಡ ಕೇಂದ್ರೀಕೃತ ಚಿಪ್ ವಿನ್ಯಾಸ ಸೌಲಭ್ಯದ ಬಳಕೆದಾರರ ನೆಲೆಯಾಗಿದೆ. ಇದರಲ್ಲಿ ಚಿಪ್ಸ್ ಟು ಸ್ಟಾರ್ಟ್-ಅಪ್ (ಕಾರ್ಯಕ್ರಮದ ಅಡಿಯಲ್ಲಿ ಸುಮಾರು 305 ಶೈಕ್ಷಣಿಕ ಸಂಸ್ಥೆಗಳು ಮತ್ತು ಡಿಎಲ್‌ಐ ಯೋಜನೆಯ ಅಡಿಯಲ್ಲಿ 95 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಲಾಗುತ್ತಿದೆ, ಇದು ಆರಂಭಿಕ ಹಂತದ ನವೋದ್ಯಮಿಗಳಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇದ್ದ ಅಡೆತಡೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ಈ ಪ್ರಯತ್ನಕ್ಕೆ ಪೂರಕವಾಗಿ, ಭಾರತದ ಹಂಚಿಕೆಯ  ಇಡಿಎ ಗ್ರಿಡ್ — ಉನ್ನತ ಮಟ್ಟದ ಚಿಪ್ ವಿನ್ಯಾಸ ಸಾಫ್ಟ್‌ವೇರ್ ಒದಗಿಸುವ ರಾಷ್ಟ್ರೀಯ ವೇದಿಕೆಯು — 2 ಜನವರಿ 2026 ರ ವೇಳೆಗೆ 95 ಬೆಂಬಲಿತ ಸ್ಟಾರ್ಟ್‌ಅಪ್‌ಗಳಿಂದ ಒಟ್ಟು 54,03,005 ಗಂಟೆಗಳ ಕಾಲ ಬಳಕೆಯಾದ ದಾಖಲೆಯನ್ನು ಹೊಂದಿದೆ. ಇದು ಎಲ್ಲಾ ರಾಜ್ಯಗಳ ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಸಂಶೋಧಕರಲ್ಲಿ ಕಂಡುಬಂದಿರುವ ಬಲವಾದ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಉತ್ತೇಜನಾ ಕ್ರಮಗಳು ದೇಶೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಸ್ಪಷ್ಟ ಫಲಿತಾಂಶಗಳನ್ನು ನೀಡಿವೆ. ಡಿಎಲ್‌ಐ ಯೋಜನೆಯಡಿ ಬೆಂಬಲಿತ ಕಂಪನಿಗಳು ಕೇವಲ ನಾವೀನ್ಯತೆಗೆ ಸೀಮಿತವಾಗದೆ ಕಾರ್ಯಗತಗೊಳಿಸುವ ಹಂತಕ್ಕೆ ತಲುಪಿವೆ; ಇವುಗಳ ಮೂಲಕ ಹತ್ತು ಪೇಟೆಂಟ್‌ಗಳನ್ನು ಸಲ್ಲಿಸಲಾಗಿದೆ, 16 ಚಿಪ್-ಡಿಸೈನ್ ಟೇಪ್-ಔಟ್‌ಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಆರು ಸೆಮಿಕಂಡಕ್ಟರ್ ಚಿಪ್‌ಗಳನ್ನು ಯಶಸ್ವಿಯಾಗಿ ತಯಾರಿಸಲಾಗಿದೆ. ಇದು ಕಲ್ಪನೆಯಿಂದ ಹಿಡಿದು ನೈಜ ಚಿಪ್ ತಯಾರಿಕೆಯಲ್ಲಿನ ಪ್ರಮುಖ ಮೈಲಿಗಲ್ಲಾಗಿದೆ. ಇದರ ಜೊತೆಗೆ, 1,000ಕ್ಕೂ ಹೆಚ್ಚು ಪರಿಣಿತ ಎಂಜಿನಿಯರ್‌ಗಳು ಡಿಎಲ್‌ಐ ಬೆಂಬಲಿತ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ, ಇದು ಭಾರತದ ವಿನ್ಯಾಸ ಪ್ರತಿಭಾ ನೆಲೆಯನ್ನು ಬಲಪಡಿಸಿದೆ. ಫಲಾನುಭವಿಗಳು 140ಕ್ಕೂ ಹೆಚ್ಚು ಮರುಬಳಕೆ ಮಾಡಬಹುದಾದ ಸೆಮಿಕಂಡಕ್ಟರ್ IP ಕೋರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಇವು ಸುಧಾರಿತ ಚಿಪ್ ಅಭಿವೃದ್ಧಿಗೆ ನಿರ್ಣಾಯಕ ಸಾಧನಗಳಾಗಿವೆ.

ಈ ಯಶಸ್ಸಿನ ಆಧಾರದ ಮೇಲೆ, ಡಿಎಲ್‌ಐ ಯೋಜನೆಯು ಈಗ ವಿನ್ಯಾಸದ ಮೌಲ್ಯೀಕರಣದಿಂದ ಉತ್ಪನ್ನ ತಯಾರಿಕೆಯ ಕಡೆಗೆ ಮುನ್ನಡೆಯುತ್ತಿದೆ. ಇದು ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳು ದೊಡ್ಡ ಪ್ರಮಾಣದ ಉತ್ಪಾದನೆ, ಸಿಸ್ಟಮ್ ಇಂಟಿಗ್ರೇಷನ್ ಮತ್ತು ಮಾರುಕಟ್ಟೆ ನಿಯೋಜನೆಯತ್ತ ಸಾಗಲು ಅನುವು ಮಾಡಿಕೊಡುತ್ತಿದೆ. ವಿಕಸನಗೊಳ್ಳುತ್ತಿರುವ ಈ ಪರಿಸರ ವ್ಯವಸ್ಥೆಯು ಭಾರತದ ದೇಶೀಯ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಬಲಪಡಿಸುವುದು ಮಾತ್ರವಲ್ಲದೆ, ಜಾಗತಿಕ ಚಿಪ್ ವಿನ್ಯಾಸ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಭಾರತವನ್ನು ಒಂದು ವಿಶ್ವಾಸಾರ್ಹ ಪಾಲುದಾರನನ್ನಾಗಿ ಗುರುತಿಸುವಂತೆ ಮಾಡಿದೆ.

ಸೆಮಿಕಂಡಕ್ಟರ್ ವಿನ್ಯಾಸಕ್ಕಾಗಿ ಪ್ರಮುಖ ಸಾಂಸ್ಥಿಕ ಚೌಕಟ್ಟುಗಳು

ನೀತಿ ನಾಯಕತ್ವ, ಹೂಡಿಕೆ ಬೆಂಬಲ, ಸಾಮರ್ಥ್ಯ ವೃದ್ಧಿ ಮತ್ತು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಯನ್ನು ಒಳಗೊಂಡಿರುವ ಸಮನ್ವಯದ ಸಾಂಸ್ಥಿಕ ಚೌಕಟ್ಟಿನ ಮೂಲಕ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಪ್ರಮುಖ ಕಾರ್ಯಕ್ರಮಗಳು ಮತ್ತು ಏಜೆನ್ಸಿಗಳು ಆರಂಭದಿಂದ ಅಂತ್ಯದವರೆಗೆ — ಅಂದರೆ ಚಿಪ್ ವಿನ್ಯಾಸ ಮತ್ತು ಉತ್ಪಾದನೆಗೆ ಪ್ರೋತ್ಸಾಹ ನೀಡುವುದರಿಂದ ಹಿಡಿದು, ನುರಿತ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವವರೆಗೆ ಮತ್ತು ಓಪನ್-ಸೋರ್ಸ್ ಮೈಕ್ರೋಪ್ರೊಸೆಸರ್ ವಿನ್ಯಾಸಗಳನ್ನು ಉತ್ತೇಜಿಸುವವರೆಗೆ — ಸಂಪೂರ್ಣ ಬೆಂಬಲವನ್ನು ನೀಡುತ್ತಿವೆ. ಇದು ಭಾರತವು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಸೆಮಿಕಂಡಕ್ಟರ್ ವಿನ್ಯಾಸ ಪರಿಸರ ವ್ಯವಸ್ಥೆಯತ್ತ ಸಾಗುವುದನ್ನು ಖಚಿತಪಡಿಸುತ್ತಿದೆ.

  1. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ರಾಷ್ಟ್ರೀಯ ಸೆಮಿಕಂಡಕ್ಟರ್ ಉಪಕ್ರಮಗಳ ನೇತೃತ್ವ ವಹಿಸುತ್ತದೆ, ನೀತಿ ನಿರ್ದೇಶನಗಳನ್ನು ನೀಡುತ್ತದೆ ಮತ್ತು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತದೆ. ಭಾರತದ ಚಿಪ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಇದು ಸಾಂಸ್ಥಿಕ ಮತ್ತು ಉದ್ಯಮ ಪಾಲುದಾರಿಕೆಗಳನ್ನು ಸಂಯೋಜಿಸುತ್ತದೆ. ಭಾರತದ ದೇಶೀಯ ಸೆಮಿಕಂಡಕ್ಟರ್ ವಿನ್ಯಾಸ ಉದ್ಯಮದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 'ಡಿಸೈನ್ ಲಿಂಕ್ಡ್ ಇನ್ಸೆಂಟಿವ್' ಯೋಜನೆಯನ್ನು ಘೋಷಿಸಿದೆ. ಭಾರತೀಯ ಕಂಪನಿಗಳು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಉನ್ನತ ಮಟ್ಟಕ್ಕೇರಲು ಸಹಾಯ ಮಾಡುವುದು ಇದರ ಗುರಿಯಾಗಿದೆ.
  2. ಸೆಮಿಕಾನ್ ಇಂಡಿಯಾ ಕಾರ್ಯಕ್ರಮ: ₹76,000 ಕೋಟಿಗಳ ಒಟ್ಟು ವೆಚ್ಚದೊಂದಿಗೆ, ಈ ಕಾರ್ಯಕ್ರಮವು ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನೆ ಹಾಗೂ ವಿನ್ಯಾಸ ಪರಿಸರ ವ್ಯವಸ್ಥೆಯಲ್ಲಿನ ಹೂಡಿಕೆಗಳಿಗೆ ಬೆಂಬಲ ನೀಡುತ್ತದೆ. ಡಿಎಲ್‌ಐ ಯೋಜನೆಯು ಈ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಉತ್ಪನ್ನ ತಯಾರಿಕೆಗೆ ಸಂಪೂರ್ಣ ಬೆಂಬಲವನ್ನು ಖಚಿತಪಡಿಸುತ್ತದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಅಡಿಯಲ್ಲಿರುವ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ C-DAC, ಡಿಎಲ್‌ಐ ಯೋಜನೆಯನ್ನು ಜಾರಿಗೆ ತರುವ 'ನೋಡಲ್ ಏಜೆನ್ಸಿ'ಯಾಗಿ ಜವಾಬ್ದಾರಿ ಹೊತ್ತಿದೆ.
  3. ಚಿಪ್ಸ್ ಟು ಸ್ಟಾರ್ಟ್-ಅಪ್ ಕಾರ್ಯಕ್ರಮ: ಸಿ2ಎಸ್‌ ಎನ್ನುವುದು ದೇಶಾದ್ಯಂತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಾರಂಭಿಸಲಾದ ಒಂದು ಸಮಗ್ರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವಾಗಿದೆ. ಇದು ಸೆಮಿಕಂಡಕ್ಟರ್ ಚಿಪ್ ವಿನ್ಯಾಸದಲ್ಲಿ ಪರಿಣತಿ ಹೊಂದಿದ 85 ಸಾವಿರ ಉದ್ಯಮ-ಸಿದ್ಧ ಮಾನವಶಕ್ತಿಯನ್ನು ಬಿ.ಟೆಕ್, ಎಂ.ಟೆಕ್ ಮತ್ತು ಪಿಎಚ್‌ಡಿ ಮಟ್ಟದಲ್ಲಿ ರೂಪಿಸುವ ಗುರಿಯನ್ನು ಹೊಂದಿದೆ.
  4. ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮ : ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮವು, C-ಡಿಎಸಿ, ಐಐಟಿ ಮದ್ರಾಸ್ ಮತ್ತು ಐಐಟಿ ಬಾಂಬೆ ಸಂಸ್ಥೆಗಳಲ್ಲಿ ಪ್ರಾರಂಭಿಸಲಾದ ಈ ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮವು, ಮುಕ್ತ ಆಕರ ಆರ್ಕಿಟೆಕ್ಚರ್ ಆಧಾರಿತ ಮೈಕ್ರೋಪ್ರೊಸೆಸರ್‌ಗಳ ಸರಣಿಯಾದ ವೇಗ, ಶಕ್ತಿ ಮತ್ತು ಅಜಿತ್ ಪ್ರೊಸೆಸರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಗೆ ಕಾರಣವಾಗಿದೆ. ಇದು ಸ್ವಾವಲಂಬನೆಯತ್ತ ಇಟ್ಟ ಒಂದು ಪ್ರಮುಖ ಹೆಜ್ಜೆಯಾಗಿದೆ.

ಒಟ್ಟಾರೆಯಾಗಿ, ಈ ಸಾಂಸ್ಥಿಕ ಉಪಕ್ರಮಗಳು ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳಿಗೆ ಭದ್ರವಾದ ಅಡಿಪಾಯವನ್ನು ಹಾಕಿಕೊಟ್ಟಿವೆ. ಇದು ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹೊಸ ಆವಿಷ್ಕಾರಗಳನ್ನು ಮಾಡಲು ಮತ್ತು ದೊಡ್ಡ ಮಟ್ಟದಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಸಂಶೋಧನೆ ಮತ್ತು ಉತ್ಪನ್ನ ತಯಾರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಈ ಸಂಸ್ಥೆಗಳು ಸ್ವಾವಲಂಬನೆಯನ್ನು ಉತ್ತೇಜಿಸುತ್ತಿವೆ, ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿವೆ ಮತ್ತು ಜಾಗತಿಕ ಸೆಮಿಕಂಡಕ್ಟರ್ ರಂಗದಲ್ಲಿ ಭಾರತವನ್ನು ಒಂದು ಕಾರ್ಯತಂತ್ರದ ಪಾಲುದಾರನನ್ನಾಗಿ ರೂಪಿಸುತ್ತಿವೆ.

ಭಾರತದ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯ ಯಶಸ್ಸಿನ ಕಥೆಗಳು

ಡಿಎಲ್‌ಐ ಯೋಜನೆಯಡಿ, ವಿಡಿಯೋ ಕಣ್ಗಾವಲು, ಡ್ರೋನ್ ಪತ್ತೆ ಹಚ್ಚುವಿಕೆ, ಎನರ್ಜಿ ಮೀಟರ್‌ಗಳು, ಮೈಕ್ರೋಪ್ರೊಸೆಸರ್‌ಗಳು, ಉಪಗ್ರಹ ಸಂವಹನ, ಬ್ರಾಡ್‌ಬ್ಯಾಂಡ್ ಮತ್ತು ಐಒಟಿ ಎಸ್‌ಒಸಿಗಳ ಅಡಿಯಲ್ಲಿ 24 ಚಿಪ್-ವಿನ್ಯಾಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹೆಚ್ಚುವರಿಯಾಗಿ, 95 ಕಂಪನಿಗಳು ಉದ್ಯಮ-ದರ್ಜೆಯ ಇಡಿಎ ಪರಿಕರಗಳ ಪ್ರವೇಶವನ್ನು ಪಡೆದಿವೆ, ಇದು ಭಾರತೀಯ ಚಿಪ್ ವಿನ್ಯಾಸ ಸ್ಟಾರ್ಟ್‌ಅಪ್‌ಗಳ ವಿನ್ಯಾಸ ಮತ್ತು ಮೂಲಸೌಕರ್ಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಫಲಾನುಭವಿಗಳಲ್ಲಿ, ಕೆಳಗಿನ ಕಂಪನಿಗಳು ಡಿಎಲ್‌ಐ ಯೋಜನೆಯು ಹೇಗೆ ವಿಶ್ವದರ್ಜೆಯ ಸೆಮಿಕಂಡಕ್ಟರ್ ನಾವೀನ್ಯತೆಯನ್ನು ಪೋಷಿಸುತ್ತಿದೆ ಎಂಬುದಕ್ಕೆ ಪ್ರಮುಖ ಉದಾಹರಣೆಗಳಾಗಿವೆ:

  • ವರ್ವೆಸೆಮಿ ಮೈಕ್ರೋಎಲೆಕ್ಟ್ರಾನಿಕ್ಸ್: ಇದು 110ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಐಪಿಗಳು, 25 ಇಂಟಿಗ್ರೇಟೆಡ್ ಸರ್ಕ್ಯೂಟ್ ಉತ್ಪನ್ನಗಳು, 10 ಪೇಟೆಂಟ್‌ಗಳು ಮತ್ತು 5 ವ್ಯಾಪಾರ ರಹಸ್ಯಗಳ ಬಲವಾದ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಈ ಕಂಪನಿಯು ಫ್ಯಾನ್‌ಗಳು, ಕೂಲರ್‌ಗಳು, ಮಿಕ್ಸರ್ ಗ್ರೈಂಡರ್‌ಗಳು, ಏರ್ ಕಂಡಿಷನರ್‌ಗಳು ಮತ್ತು ಡ್ರೋನ್‌ಗಳಂತಹ ಗ್ರಾಹಕ ಉಪಕರಣಗಳಿಗಾಗಿ, ಹಾಗೆಯೇ ಇ-ಸ್ಕೂಟರ್ ಮತ್ತು ಇ-ರಿಕ್ಷಾಗಳಂತಹ ವಾಹನ ಅಪ್ಲಿಕೇಶನ್‌ಗಳಿಗಾಗಿ ಮೋಟಾರ್-ನಿಯಂತ್ರಣ ಚಿಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ವರ್ವೆಸೆಮಿ ಈಗಾಗಲೇ ಎರಡು ಚಿಪ್‌ಗಳ ಪೈಲಟ್-ಲಾಟ್ ಸ್ಯಾಂಪ್ಲಿಂಗ್ ಪೂರ್ಣಗೊಳಿಸಿದ್ದು, ಮೂರನೇ ಚಿಪ್ ಈ ವರ್ಷದ ಕೊನೆಯಲ್ಲಿ ಫೌಂಡ್ರಿಯಿಂದ ಬರುವ ನಿರೀಕ್ಷೆಯಿದೆ.
  • ಇನ್‌ಕೋರ್ ಅರೆವಾಹಕಗಳು: ಇದು ಸ್ವದೇಶಿ RISC-V ಮೈಕ್ರೋಪ್ರೊಸೆಸರ್ ಐಪಿಗಳು ಮತ್ತು ಎಸ್‌ಒಸಿ ವಿನ್ಯಾಸ ಆಟೊಮೇಷನ್ ಪರಿಕರಗಳ ಅಭಿವೃದ್ಧಿಯ ಮೇಲೆ ಗಮನ ಹರಿಸಿದೆ. ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್‌ಗಳು ಮತ್ತು ಎಡ್ಜ್-ಎಐ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಭಾರತದ ಅತ್ಯಂತ ಶಕ್ತಿಶಾಲಿ ಎಂಬೆಡೆಡ್ ಪ್ರೊಸೆಸರ್ 'ಡೊಲೊಮೈಟ್' ಅನ್ನು ನಿರ್ಮಿಸುವುದು ಇದರ ಅಂತಿಮ ಗುರಿಯಾಗಿದೆ. ಇದು ಸಿಪಿಯು ಐಪಿಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
  • ನೇತ್ರಸೆಮಿ: ಈ ಕಂಪನಿಯು ಸಿಸಿಟಿವಿ ಸುರಕ್ಷಿತ ಕಣ್ಗಾವಲು, ಸ್ಮಾರ್ಟ್ ಸೆನ್ಸಾರ್‌ಗಳು, ರೊಬೊಟಿಕ್ಸ್, ಡ್ರೋನ್‌ಗಳು ಮತ್ತು ಮೊಬಿಲಿಟಿ ಅಪ್ಲಿಕೇಶನ್‌ಗಳಿಗಾಗಿ ಎಐ ಸಾಮರ್ಥ್ಯವಿರುವ ಎಸ್‌ಒಸಿಗಳನ್ನು ವಿನ್ಯಾಸಗೊಳಿಸುತ್ತಿದೆ. ಕಂಪನಿಯು ಸುಧಾರಿತ 12 nm ಪ್ರೊಸೆಸ್ ನೋಡ್‌ನಲ್ಲಿ ಭಾರತದ ಮೊದಲ ಸ್ವದೇಶಿ ವಿನ್ಯಾಸದ ಎಐ ಎಸ್‌ಒಸಿ ಅನ್ನು ಯಶಸ್ವಿಯಾಗಿ ತಯಾರಿಸಿದೆ. ಇದು ಭಾರತೀಯ ಸೆಮಿಕಂಡಕ್ಟರ್ ಕಂಪನಿಯೊಂದಕ್ಕೆ ದೊರೆತಿರುವ ಅತಿದೊಡ್ಡ ಖಾಸಗಿ ಸಾಹಸೋದ್ಯಮ ಬಂಡವಾಳ ಧನಸಹಾಯವನ್ನು ಪಡೆದಿದೆ.
  • ಅಹೀಸಾ ಡಿಜಿಟಲ್ ಇನ್ನೋವೇಶನ್ಸ್: ಇದು ಮನೆಗಳು ಮತ್ತು ವ್ಯವಹಾರಗಳನ್ನು ಹೈ-ಸ್ಪೀಡ್ ಫೈಬರ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲು ಬಳಸುವ 'ವಿಹಾನ್' ಎಂಬ ಸ್ವದೇಶಿ ಫೈಬರ್-ಬ್ರಾಡ್‌ಬ್ಯಾಂಡ್ ಪರಿಹಾರವನ್ನು ಅಭಿವೃದ್ಧಿಪಡಿಸುತ್ತಿದೆ. ವಿಹಾನ್ ಅನ್ನು ಸ್ವದೇಶಿ 'ವೇಗ' ಪ್ರೊಸೆಸರ್ ಆಧಾರಿತ ಜಿಪಾನ್ ನೆಟ್‌ವರ್ಕ್ ಎಸ್‌ಒಸಿ ಸುತ್ತ ನಿರ್ಮಿಸಲಾಗಿದೆ. ಇದು 2026 ರಲ್ಲಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
  • ಆಜ್ಞಾವಿಷನ್: ಈ ಸಂಸ್ಥೆಯು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವ ಸುಧಾರಿತ ರಾಡಾರ್-ಆನ್-ಚಿಪ್ ಅನ್ನು ವಿನ್ಯಾಸಗೊಳಿಸುತ್ತಿದೆ. ಇದು ಸುರಕ್ಷತೆ, ಸ್ಮಾರ್ಟ್ ಮೂಲಸೌಕರ್ಯ, 6G ಸೆನ್ಸಾರ್ ನೆಟ್‌ವರ್ಕ್‌ಗಳು ಮತ್ತು ಡ್ರೋನ್ ಪತ್ತೆ ಹಚ್ಚುವಿಕೆಯಂತಹ ನಿರ್ಣಾಯಕ ಅಪ್ಲಿಕೇಶನ್‌ಗಳಿಗೆ ಸಹಕಾರಿಯಾಗಿದೆ.

ಈ ಯಶಸ್ಸಿನ ಕಥೆಗಳು ಡಿಎಲ್‌ಐಯೋಜನೆಯು ಹೇಗೆ ಸ್ವದೇಶಿ ಚಿಪ್ ವಿನ್ಯಾಸ ಸಾಮರ್ಥ್ಯಗಳನ್ನು ಮಾರುಕಟ್ಟೆಗೆ ಸಿದ್ಧವಿರುವ ಉತ್ಪನ್ನಗಳಾಗಿ ಪರಿವರ್ತಿಸುತ್ತಿದೆ ಎಂಬುದನ್ನು ವಿವರಿಸುತ್ತವೆ. ಸುಧಾರಿತ ವಿನ್ಯಾಸ ಮತ್ತು ವಾಣಿಜ್ಯೀಕರಣವನ್ನು ಬೆಂಬಲಿಸುವ ಮೂಲಕ, ಈ ಯೋಜನೆಯು ಭಾರತದ ತಾಂತ್ರಿಕ ಸ್ವಾವಲಂಬನೆಯನ್ನು ಮತ್ತು ಜಾಗತಿಕ ಸೆಮಿಕಂಡಕ್ಟರ್ ವಿನ್ಯಾಸದ ಪರಿಸರ ವ್ಯವಸ್ಥೆಯಲ್ಲಿ ಅದರ ಸ್ಥಾನವನ್ನು ಬಲಪಡಿಸುತ್ತಿದೆ.

ಉಪಸಂಹಾರ

ಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಅತ್ಯಂತ ಆಯಕಟ್ಟಿನ ಮತ್ತು ಮೌಲ್ಯ-ಆಧಾರಿತ ವಿಭಾಗವಾದ 'ಚಿಪ್ ವಿನ್ಯಾಸ'ದಲ್ಲಿ ಭಾರತವನ್ನು ಗಟ್ಟಿಯಾಗಿ ನೆಲೆಯೂರಿಸುವಲ್ಲಿ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯು ನಿರ್ಣಾಯಕವಾಗಿದೆ. ಆಮದು ಮಾಡಿಕೊಂಡ ಸೆಮಿಕಂಡಕ್ಟರ್ ಐಪಿ ಮತ್ತು ಚಿಪ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಭೌಗೋಳಿಕ ರಾಜಕೀಯ ಮತ್ತು ಪೂರೈಕೆ ಸರಪಳಿ ಅಡೆತಡೆಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಮೂಲಕ ಹಾಗೂ ರಕ್ಷಣೆ, ಟೆಲಿಕಾಂ, ಎಐ ಮತ್ತು ಮೊಬಿಲಿಟಿಯಂತಹ ನಿರ್ಣಾಯಕ ತಂತ್ರಜ್ಞಾನಗಳಿಗೆ ಖಚಿತವಾದ ಪ್ರವೇಶವನ್ನು ಖಾತರಿಪಡಿಸುವ ಮೂಲಕ, ಡಿಎಲ್‌ಐ ಯೋಜನೆಯು ಭಾರತದ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಅಡಿಪಾಯ ಹಾಕುತ್ತಿದೆ. ಈ ಯೋಜನೆಯು ಆಳವಾದ ತಾಂತ್ರಿಕ ನಾವೀನ್ಯತೆಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ, ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳನ್ನು ಪೋಷಿಸುವ ಮೂಲಕ ಮತ್ತು ಅತ್ಯಂತ ನುರಿತ ಎಂಜಿನಿಯರಿಂಗ್ ಮಾನವಶಕ್ತಿಯನ್ನು ನಿರ್ಮಿಸುವ ಮೂಲಕ ಹೆಚ್ಚಿನ ಮೌಲ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.

ಈ ಫಲಿತಾಂಶಗಳು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿವೆ. ಡಿಎಲ್‌ಐ-ಬೆಂಬಲಿತ ಸಂಸ್ಥೆಗಳು ಹಲವಾರು ಚಿಪ್ ಟೇಪ್-ಔಟ್‌ಗಳು, ಸಿಲಿಕಾನ್-ಮೌಲ್ಯೀಕೃತ ವಿನ್ಯಾಸಗಳು, ಪೇಟೆಂಟ್‌ಗಳು, ಮರುಬಳಕೆ ಮಾಡಬಹುದಾದ ಐಪಿಗಳು ಮತ್ತು ಸುಸಜ್ಜಿತ ವಿನ್ಯಾಸ ಮೂಲಸೌಕರ್ಯಗಳನ್ನು ಸಾಧಿಸುವ ಮೂಲಕ ತಳಮಟ್ಟದಲ್ಲಿ ಗಮನಾರ್ಹ ಪ್ರಭಾವವನ್ನು ಪ್ರದರ್ಶಿಸಿವೆ. ಈ ಪರಿಸರ ವ್ಯವಸ್ಥೆಯು ಈಗ 'ಉತ್ಪನ್ನ ತಯಾರಿಕೆಯ' ಹಂತವನ್ನು ಪ್ರವೇಶಿಸುತ್ತಿದೆ. ಸಿಲಿಕಾನ್-ಮೌಲ್ಯೀಕೃತ ವಿನ್ಯಾಸಗಳು ಬೃಹತ್ ಪ್ರಮಾಣದ ಉತ್ಪಾದನೆ, ಸಿಸ್ಟಮ್ ಇಂಟಿಗ್ರೇಷನ್ ಮತ್ತು ಮಾರುಕಟ್ಟೆ ನಿಯೋಜನೆಯತ್ತ ಸಾಗುತ್ತಿವೆ. ಇದು ಭಾರತೀಯ ಕಂಪನಿಗಳನ್ನು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಪೂರೈಕೆದಾರರನ್ನಾಗಿ ರೂಪಿಸುವುದರ ಜೊತೆಗೆ, ದೇಶೀಯ ಪೂರೈಕೆ ಸರಪಳಿಯನ್ನು ಬಲಪಡಿಸಿ ಭಾರತದ ಸ್ವಾವಲಂಬಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುತ್ತಿದೆ.

 

References

Press Information Bureau

 

Ministry of Electronics and IT

 

Lok Sabha

Download in PDF

 

 

*****

(Explainer ID: 156829) आगंतुक पटल : 9
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Gujarati , Malayalam
Link mygov.in
National Portal Of India
STQC Certificate