• Skip to Content
  • Sitemap
  • Advance Search
Economy

2025: ಭಾರತದ ಪ್ರಗತಿಯ ಪಾಲಿಗೆ ಒಂದು ನಿರ್ಣಾಯಕ ವರ್ಷ

ಭಾರತದ ಸಮತೋಲಿತ ಕ್ಷಣ:ಹೆಚ್ಚಿನ ಬೆಳವಣಿಗೆ, ಕಡಿಮೆ ಹಣದುಬ್ಬರ

Posted On: 29 DEC 2025 2:35PM
  • ಭಾರತದ ನೈಜ ಜಿಡಿಪಿ ಬೆಳವಣಿಗೆಯು 2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (Q2) ಶೇ. 8.2 ರಷ್ಟಿದೆ. ಇದು ಮೊದಲನೇ ತ್ರೈಮಾಸಿಕದ (Q1) ಶೇ. 7.8 ಮತ್ತು 2024-25ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ (Q4) ಶೇ. 7.4 ಕ್ಕಿಂತ ಹೆಚ್ಚಾಗಿದೆ.
  • ನವೆಂಬರ್ 2025 ರಲ್ಲಿ, ನಿರುದ್ಯೋಗ ದರವು ಶೇ. 4.7 ಕ್ಕೆ ಇಳಿಕೆಯಾಗಿದೆ (ಅಕ್ಟೋಬರ್ 2025 ರಲ್ಲಿ ಇದು ಶೇ. 5.2 ರಷ್ಟಿತ್ತು). ಇದು ಏಪ್ರಿಲ್ 2025 ರ (ಶೇ. 5.1) ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.
  • ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಜನವರಿ 2025 ರಲ್ಲಿದ್ದ ಶೇ. 4.26 ರಿಂದ ನವೆಂಬರ್ 2025 ರ ವೇಳೆಗೆ ಕ್ರಮೇಣ ಶೇ. 0.71 ಕ್ಕೆ ಇಳಿದು ಮೃದುವಾಗಿದೆ.
  • ಸರಕು ರಫ್ತು ಜನವರಿ 2025 ರಲ್ಲಿ 36.43 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು, ಇದು ನವೆಂಬರ್ 2025 ರಲ್ಲಿ 38.13 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.

ಬೆಳವಣಿಗೆ, ಸ್ಥಿರತೆ, ಆತ್ಮವಿಶ್ವಾಸ: ಭಾರತೀಯ ಆರ್ಥಿಕತೆಯ ತ್ರಿಪಾದಿ ನಿಲುವು

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಈ ವೇಗವನ್ನು ಕಾಯ್ದುಕೊಳ್ಳಲು ಸುಸಜ್ಜಿತವಾಗಿದೆ. ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷವಾದ 2047ರ ವೇಳೆಗೆ 'ಉನ್ನತ ಮಧ್ಯಮ ಆದಾಯದ ದೇಶ' ಎಂಬ ಸ್ಥಾನಮಾನವನ್ನು ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ, ದೇಶವು ಆರ್ಥಿಕ ಬೆಳವಣಿಗೆ, ರಚನಾತ್ಮಕ ಸುಧಾರಣೆಗಳು ಮತ್ತು ಸಾಮಾಜಿಕ ಪ್ರಗತಿಯ ಬಲವಾದ ಅಡಿಪಾಯವನ್ನು ನಿರ್ಮಿಸುತ್ತಿದೆ.

4.18 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಜಿಡಿಪಿ ಯೊಂದಿಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. 2030ರ ವೇಳೆಗೆ 7.3 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯೊಂದಿಗೆ ಜರ್ಮನಿಯನ್ನು ಮೂರನೇ ಸ್ಥಾನದಿಂದ ಕೆಳಗಿಳಿಸಲು ಸಜ್ಜಾಗಿದೆ. ಜಾಗತಿಕ ವ್ಯಾಪಾರದ ಅನಿಶ್ಚಿತತೆಗಳ ನಡುವೆಯೂ ಭಾರತದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುವಂತೆ, 2025-26ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಆರು ತ್ರೈಮಾಸಿಕಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಈ ವಿಸ್ತರಣೆಯಲ್ಲಿ ಬಲವಾದ ಖಾಸಗಿ ಬಳಕೆ ಸೇರಿದಂತೆ ದೇಶೀಯ ಅಂಶಗಳು ಪ್ರಮುಖ ಪಾತ್ರ ವಹಿಸಿವೆ.

ಉನ್ನತ-ಮಟ್ಟದ ಸೂಚಕಗಳು ನಿರಂತರ ಆರ್ಥಿಕ ಚಟುವಟಿಕೆಯನ್ನು ಸೂಚಿಸುತ್ತಿವೆ: ಹಣದುಬ್ಬರವು ಕನಿಷ್ಠ ಸಹನೀಯ ಮಿತಿಗಿಂತ ಕೆಳಗಿದೆ, ನಿರುದ್ಯೋಗ ದರವು ಇಳಿಕೆಯ ಹಾದಿಯಲ್ಲಿದೆ ಮತ್ತು ರಫ್ತು ಸಾಧನೆಯು ಸುಧಾರಿಸುತ್ತಲೇ ಇದೆ. ಇದಲ್ಲದೆ, ವಾಣಿಜ್ಯ ವಲಯಕ್ಕೆ ಬಲವಾದ ಸಾಲದ ಹರಿವಿನೊಂದಿಗೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ. ನಗರ ಪ್ರದೇಶದ ಬಳಕೆಯು ಮತ್ತಷ್ಟು ಬಲಗೊಳ್ಳುತ್ತಿರುವುದರಿಂದ ಬೇಡಿಕೆಯ ಪರಿಸ್ಥಿತಿಗಳು ದೃಢವಾಗಿವೆ.

ಬೆಳವಣಿಗೆಯ ವೇಗ ಬಲಗೊಳ್ಳುತ್ತಿದೆ

ಜಾಗತಿಕ ವ್ಯಾಪಾರ ಮತ್ತು ನೀತಿ ಅನಿಶ್ಚಿತತೆಗಳ ನಡುವೆಯೂ, ಸ್ಥಿರವಾದ ದೇಶೀಯ ಬೇಡಿಕೆಯಿಂದಾಗಿ ಭಾರತದ ನೈಜ ಜಿಡಿಪಿ 2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ರಷ್ಟು ಬೆಳೆದಿದೆ. ಇದು ಹಿಂದಿನ ತ್ರೈಮಾಸಿಕದ ಶೇ. 7.8 ಮತ್ತು 2024-25ರ ನಾಲ್ಕನೇ ತ್ರೈಮಾಸಿಕದ ಶೇ. 7.4 ಕ್ಕಿಂತ ಹೆಚ್ಚಾಗಿದೆ. ಕೈಗಾರಿಕಾ ಮತ್ತು ಸೇವಾ ವಲಯಗಳ ಉತ್ತೇಜನದಿಂದಾಗಿ ನೈಜ ಒಟ್ಟು ಮೌಲ್ಯವರ್ಧಿತ ಶೇ. 8.1 ರಷ್ಟು ವಿಸ್ತರಿಸಿದೆ.

ಆರ್ಥಿಕ ಪ್ರಗತಿಯ ಮುನ್ಸೂಚನೆಗಳು

ಭಾರತೀಯ ರಿಸರ್ವ್ ಬ್ಯಾಂಕ್ 2025-26ರ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಮೊದಲಿನ ಅಂದಾಜಾದ ಶೇ. 6.8 ರಿಂದ ಶೇ. 7.3 ಕ್ಕೆ ಹೆಚ್ಚಿಸಿದೆ. ಬಲವಾದ ದೇಶೀಯ ಬೇಡಿಕೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಸುಧಾರಣೆಗಳು, ಕಚ್ಚಾ ತೈಲ ಬೆಲೆಗಳಲ್ಲಿನ ಇಳಿಕೆ, ಸರ್ಕಾರದ ಬಂಡವಾಳ ವೆಚ್ಚದ ಹೆಚ್ಚಳ, ಮತ್ತು ನಿಯಂತ್ರಣದಲ್ಲಿರುವ ಹಣದುಬ್ಬರದ ಬೆಂಬಲದೊಂದಿಗೆ ಅನುಕೂಲಕರವಾದ ಹಣಕಾಸು ಪರಿಸ್ಥಿತಿಗಳು ಭಾರತದ ಆರ್ಥಿಕತೆಯನ್ನು ಏರುಗತಿಯಲ್ಲಿ ಕೊಂಡೊಯ್ಯುತ್ತಿವೆ.

ಮುನ್ನೋಟದ ಪ್ರಕಾರ, ಅನುಕೂಲಕರ ಕೃಷಿ ನಿರೀಕ್ಷೆಗಳು, ಜಿಎಸ್‌ಟಿ ಸುಧಾರಣೆಯ ನಿರಂತರ ಪರಿಣಾಮಗಳು, ಮೃದುವಾದ ಹಣದುಬ್ಬರ ಮತ್ತು ಕಾರ್ಪೊರೇಟ್ ಹಾಗೂ ಹಣಕಾಸು ಸಂಸ್ಥೆಗಳ ಬಲವಾದ ಬ್ಯಾಲೆನ್ಸ್ ಶೀಟ್ ಮುಂತಾದ ದೇಶೀಯ ಅಂಶಗಳು ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ಬಲಪಡಿಸಲಿವೆ. ಬಾಹ್ಯ ಅಂಶಗಳಾದ ಸೇವಾ ರಫ್ತುಗಳು ದೃಢವಾಗಿರಲಿದ್ದು, ಪ್ರಸ್ತುತ ನಡೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಮಾತುಕತೆಗಳ ಕ್ಷಿಪ್ರ ಮುಕ್ತಾಯವು ಹೆಚ್ಚಿನ ಪ್ರಗತಿಗೆ ಅವಕಾಶ ನೀಡಲಿದೆ. ಒಟ್ಟಾರೆಯಾಗಿ, ಪ್ರಸ್ತುತ ಸ್ಥೂಲ ಆರ್ಥಿಕ ಪರಿಸ್ಥಿತಿಯು "ಗೋಲ್ಡಿಲಾಕ್ಸ್ ಅವಧಿ" (ಅಧಿಕ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರ) ಯನ್ನು ಪ್ರತಿನಿಧಿಸುತ್ತಿದೆ.

ಇಳಿಕೆಯಾಗುತ್ತಿರುವ ನಿರುದ್ಯೋಗ ದರ

ಬೆಳವಣಿಗೆ ಮತ್ತು ಸಮೃದ್ಧಿಯ ನಡುವಿನ ಪ್ರಮುಖ ಕೊಂಡಿಯೇ ಉದ್ಯೋಗ. ಭಾರತದಲ್ಲಿ ಶೇ. 26 ರಷ್ಟು ಜನಸಂಖ್ಯೆಯು 10 ರಿಂದ 24 ವರ್ಷ ವಯಸ್ಸಿನವರಾಗಿದ್ದು, ಈ ಜನಸಂಖ್ಯಾ ಲಾಭವು ತಲೆಮಾರಿಗೆ ಒಮ್ಮೆ ಸಿಗುವ ಅವಕಾಶವಾಗಿದೆ. ವಿಶ್ವದ ಕಿರಿಯ ರಾಷ್ಟ್ರಗಳಲ್ಲಿ ಒಂದಾದ ಭಾರತದ ಬೆಳವಣಿಗೆಯ ಕಥೆಯು, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಒಳಗೊಳ್ಳುವ ಹಾಗೂ ಸುಸ್ಥಿರ ಬೆಳವಣಿಗೆಯನ್ನು ನೀಡುವ ಸಾಮರ್ಥ್ಯದಿಂದ ರೂಪಿತವಾಗುತ್ತಿದೆ.

ಉದ್ಯೋಗದ ಪ್ರವೃತ್ತಿಗಳನ್ನು ಗಮನಿಸುವುದು ಪರಿಣಾಮಕಾರಿ ನೀತಿ ನಿರೂಪಣೆಗೆ ಅತ್ಯಗತ್ಯ. ಇದಕ್ಕಾಗಿ, ರಾಷ್ಟ್ರೀಯ ಅಂಕಿಅಂಶ ಕಚೇರಿಯು 2017-18ರಲ್ಲಿ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯನ್ನು ಪ್ರಾರಂಭಿಸಿತು. ಇದು ಕಾರ್ಮಿಕ ಬಲದ ಭಾಗವಹಿಸುವಿಕೆ ದರ, ಕಾರ್ಮಿಕ ಜನಸಂಖ್ಯೆಯ ಅನುಪಾತ ಮತ್ತು ನಿರುದ್ಯೋಗ ದರದ ಬಗ್ಗೆ ಪ್ರಮುಖ ಒಳನೋಟಗಳನ್ನು ನೀಡುತ್ತದೆ. ಗಮನಾರ್ಹವಾಗಿ, 2025 ರ ಪಿಎಲ್‌ಎಫ್‌ಎಸ್‌ ವರದಿಯು ನಿರುದ್ಯೋಗ ದರದಲ್ಲಿ ತೀವ್ರ ಕುಸಿತವನ್ನು ಮತ್ತು ಕಾರ್ಮಿಕರ ಭಾಗವಹಿಸುವಿಕೆಯಲ್ಲಿ ಸುಧಾರಣೆಯನ್ನು ತೋರಿಸುತ್ತಿದ್ದು, ಉದ್ಯೋಗ ಪರಿಸ್ಥಿತಿಗಳು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತಿದೆ.

ಇಳಿಕೆಯ ಹಾದಿಯಲ್ಲಿ ನಿರುದ್ಯೋಗ

ನಿರುದ್ಯೋಗ ದರ ಎಂದರೆ ಕೆಲಸವಿಲ್ಲದ ಆದರೆ ಕೆಲಸಕ್ಕಾಗಿ ಹುಡುಕುತ್ತಿರುವ ಅಥವಾ ಲಭ್ಯವಿರುವ ಕಾರ್ಮಿಕ ಬಲದ ಅನುಪಾತವಾಗಿದೆ.

ಭಾರತದಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವ ನಿರುದ್ಯೋಗ ಪ್ರವೃತ್ತಿಯು, ಕಾರ್ಮಿಕ ಬಲವು ಉತ್ಪಾದಕ ಉದ್ಯೋಗಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದನ್ನು ಹೇಳುತ್ತದೆ.

ನಿರುದ್ಯೋಗವು ಆರ್ಥಿಕ ಚಟುವಟಿಕೆಯ ವೇಗವನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ - ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬೆಳವಣಿಗೆಯು ವೇಗಗೊಂಡಂತೆ, ಸರಕು ಮತ್ತು ಸೇವೆಗಳ ಹೆಚ್ಚಿನ ಉತ್ಪಾದನೆಯು ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತದೆ, ಇದು ಹೆಚ್ಚಿನ ಉದ್ಯೋಗಾವಕಾಶಗಳಿಗೆ ಮತ್ತು ಕಡಿಮೆ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ, ಭಾರತದ ಇಳಿಕೆಯಾಗುತ್ತಿರುವ ನಿರುದ್ಯೋಗವು ಅದರ ಆರ್ಥಿಕ ವೇಗದ ಬಲವನ್ನು ಪ್ರತಿಬಿಂಬಿಸುತ್ತದೆ. ಬೆಳವಣಿಗೆಯು ದೃಢವಾಗಿ ಮುಂದುವರಿಯಲಿರುವುದರಿಂದ, ಭಾರತದ ಸುಧಾರಿಸುತ್ತಿರುವ ಉದ್ಯೋಗದ ಫಲಿತಾಂಶಗಳು ಸುಸ್ಥಿರ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ನಡುವಿನ ಸುಗುಣ ಚಕ್ರವನ್ನು ಎತ್ತಿ ತೋರಿಸುತ್ತವೆ.

  • ನವೆಂಬರ್ 2025 ರಲ್ಲಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರವು (CWS ಪದ್ಧತಿಯಂತೆ) ಅಕ್ಟೋಬರ್ 2025 ರಲ್ಲಿದ್ದ ಶೇ. 5.4 ಕ್ಕೆ ಹೋಲಿಸಿದರೆ ಶೇ. 4.8 ಕ್ಕೆ ಇಳಿಕೆಯಾಗಿದೆ, ಇದು ಏಪ್ರಿಲ್ 2025 ರ (ಶೇ. 5.1) ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಈ ಇಳಿಕೆಗೆ ಪ್ರಮುಖವಾಗಿ ಮಹಿಳೆಯರಲ್ಲಿನ ನಿರುದ್ಯೋಗ ದರದಲ್ಲಿ ಉಂಟಾದ ತೀವ್ರ ಕುಸಿತವೇ ಕಾರಣವಾಗಿದೆ. ನಗರ ಪ್ರದೇಶದ ಮಹಿಳೆಯರಲ್ಲಿ ನಿರುದ್ಯೋಗ ದರವು ಶೇ. 9.7 ರಿಂದ ಶೇ. 9.3 ಕ್ಕೆ ಇಳಿಕೆಯಾಗಿದ್ದರೆ, ಗ್ರಾಮೀಣ ಮಹಿಳೆಯರಲ್ಲಿ ಇದು ಶೇ. 4.0 ರಿಂದ ಶೇ. 3.4 ಕ್ಕೆ ಇಳಿದಿದೆ.
  • ಒಟ್ಟಾರೆಯಾಗಿ, ಗ್ರಾಮೀಣ ನಿರುದ್ಯೋಗ ದರವು ಶೇ. 3.9 ರ ಹೊಸ ಕನಿಷ್ಠ ಮಟ್ಟಕ್ಕೆ ಕುಸಿದಿದೆ, ಹಾಗೆಯೇ ನಗರ ಪ್ರದೇಶದ ನಿರುದ್ಯೋಗ ದರವು ಶೇ. 6.5 ಕ್ಕೆ ಇಳಿದಿದೆ.

ಹೆಚ್ಚುತ್ತಿರುವ ಕಾರ್ಮಿಕ ಬಲ ಮತ್ತು ಕಾರ್ಮಿಕರ ಭಾಗವಹಿಸುವಿಕೆ

ನಿರುದ್ಯೋಗದ ಮಟ್ಟವು ದಾಖಲೆ ಮಟ್ಟಕ್ಕೆ ಕುಸಿದಿರುವ ಬೆನ್ನಲ್ಲೇ, ಇತರ ಎರಡು ಪ್ರಮುಖ ಸೂಚಕಗಳಾದ LFPR ಮತ್ತು WPR (CWS ಪದ್ಧತಿಯಂತೆ) ಕೂಡ ಬಲವಾದ ಮತ್ತು ಒಳಗೊಳ್ಳುವ ಕಾರ್ಮಿಕ ಮಾರುಕಟ್ಟೆಯ ಭರವಸೆಯನ್ನು ನೀಡುತ್ತಿವೆ.

  • LFPR (ಕಾರ್ಮಿಕ ಬಲದ ಭಾಗವಹಿಸುವಿಕೆ ದರ) ಎಂಬುದು ಒಟ್ಟು ಜನಸಂಖ್ಯೆಯಲ್ಲಿ ಕಾರ್ಮಿಕ ಬಲದಲ್ಲಿರುವ (ಅಂದರೆ ಕೆಲಸ ಮಾಡುತ್ತಿರುವ ಅಥವಾ ಕೆಲಸ ಹುಡುಕುತ್ತಿರುವ ಅಥವಾ ಕೆಲಸಕ್ಕೆ ಲಭ್ಯವಿರುವ) ವ್ಯಕ್ತಿಗಳ ಶೇಕಡಾವಾರು ಪ್ರಮಾಣವಾಗಿದೆ. ಹೆಚ್ಚುತ್ತಿರುವ LFPR ಕಾರ್ಮಿಕ ಮಾರುಕಟ್ಟೆಯಲ್ಲಿನ ಸುಧಾರಿತ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸುತ್ತದೆ, ಏಕೆಂದರೆ ಹೆಚ್ಚಿನ ಜನರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ LFPR ನವೆಂಬರ್ 2025 ರಲ್ಲಿ ಏಳು ತಿಂಗಳ ಗರಿಷ್ಠ ಮಟ್ಟವಾದ ಶೇ. 55.8 ಕ್ಕೆ ಏರಿದೆ (ಜೂನ್ 2025 ರಲ್ಲಿ ಇದು ಶೇ. 54.2 ರಷ್ಟಿತ್ತು).
  • WPR (ಕಾರ್ಮಿಕ ಜನಸಂಖ್ಯೆಯ ಅನುಪಾತ) ಎಂಬುದು ಒಟ್ಟು ಜನಸಂಖ್ಯೆಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಶೇಕಡಾವಾರು ಪ್ರಮಾಣವಾಗಿದೆ. ಹೆಚ್ಚುತ್ತಿರುವ WPR ಎಷ್ಟು ಜನರು ವಾಸ್ತವವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಿರುದ್ಯೋಗಿಗಳಾಗಿಲ್ಲ ಎಂಬುದಕ್ಕೆ ಪ್ರಮುಖ ಸೂಚಕವಾಗಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ WPR ಅಕ್ಟೋಬರ್‌ನಲ್ಲಿ ಶೇ. 52.5 ಮತ್ತು ಜೂನ್ 2025 ರಲ್ಲಿ ಶೇ. 51.2 ರಷ್ಟಿತ್ತು, ಇದು ನವೆಂಬರ್ 2025 ರಲ್ಲಿ ಶೇ. 53.2 ಕ್ಕೆ ಸುಧಾರಿಸಿದೆ.

ಗ್ರಾಮೀಣ ಉದ್ಯೋಗದಲ್ಲಿನ ಲಾಭಗಳು, ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆ ಮತ್ತು ನಗರ ಪ್ರದೇಶದ ಕಾರ್ಮಿಕ ಬೇಡಿಕೆಯಲ್ಲಿನ ಕ್ರಮೇಣ ಚೇತರಿಕೆಯ ಬೆಂಬಲದೊಂದಿಗೆ ಈ ಪ್ರವೃತ್ತಿಗಳು ಬಲಗೊಳ್ಳುತ್ತಿರುವ ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಯನ್ನು ಸೂಚಿಸುತ್ತವೆ.

2025 ರಲ್ಲಿ ಹಣದುಬ್ಬರವು ಗಣನೀಯವಾಗಿ ಇಳಿಕೆ

ಗ್ರಾಹಕ ಬೆಲೆ ಸೂಚ್ಯಂಕ ಎನ್ನುವುದು ನಿರ್ದಿಷ್ಟ ಗುಂಪಿನ ಮನೆಗಳು ಸಾಮಾನ್ಯವಾಗಿ ಖರೀದಿಸುವ ಸರಕು ಮತ್ತು ಸೇವೆಗಳ ಬುಟ್ಟಿಯ ಬೆಲೆಯಲ್ಲಿನ ಬದಲಾವಣೆಯಾಗಿದೆ. 2025ರಲ್ಲಿ, ಭಾರತವು ಒಟ್ಟಾರೆಯಾಗಿ ಹಿತಕರವಾದ ಹಣದುಬ್ಬರ ವಾತಾವರಣವನ್ನು ಅನುಭವಿಸಿತು. ವರ್ಷದ ಆರಂಭದಲ್ಲಿ ಜನವರಿಯಲ್ಲಿ ಶೇ. 4.26 ರಷ್ಟಿದ್ದ CPI ಹಣದುಬ್ಬರವು ವರ್ಷದ ಮಧ್ಯಭಾಗದವರೆಗೆ ಕ್ರಮೇಣ ಮೃದುವಾಯಿತು ಮತ್ತು ವರ್ಷದ ದ್ವಿತೀಯಾರ್ಧದಲ್ಲಿ ಹಲವು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಯಿತು. ಜೂನ್‌ನಲ್ಲಿ, CPI ಹಣದುಬ್ಬರವು ಶೇ. 2.10 ಎಂದು ವರದಿಯಾಗಿದೆ, ಇದು ಆರ್‌ಬಿಐನ ಮಧ್ಯಮ ಅವಧಿಯ ಗುರಿಯಾದ ಶೇ. 4 ರ (Tolerance band +/- 2%) ಮಿತಿಯೊಳಗೆ ಇತ್ತು. ಅಕ್ಟೋಬರ್‌ನಲ್ಲಿ ಹೆಡ್‌ಲೈನ್ CPI ಹಣದುಬ್ಬರವು ಶೇ. 0.25 ರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತಲುಪಿತು. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕಂಡುಬರುವ ಪ್ರವೃತ್ತಿಗೆ ವಿರುದ್ಧವಾಗಿ, ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆಯಿಂದಾಗಿ ಹಣದುಬ್ಬರವು ನಿರೀಕ್ಷೆಗಿಂತ ವೇಗವಾಗಿ ಕುಸಿಯಿತು. ನವೆಂಬರ್ ವೇಳೆಗೆ CPI ಹಣದುಬ್ಬರವು ಶೇ. 0.71 ಕ್ಕೆ ಏರಿದ್ದು, ಇದು ಬಳಕೆಯ ಸರಕುಗಳ ಬೆಲೆಗಳಲ್ಲಿನ ಸ್ಥಿರತೆಯನ್ನು ಎತ್ತಿ ತೋರಿಸುತ್ತದೆ.

ಆರ್‌ಬಿಐ 2025–26ರ ಹಣಕಾಸು ವರ್ಷದ ತನ್ನ CPI ಹಣದುಬ್ಬರ ಮುನ್ಸೂಚನೆಯನ್ನು ಶೇ. 2.6 ರಿಂದ ಶೇ. 2.0 ಕ್ಕೆ ಇಳಿಸಿದೆ.

2025-26ರ ಹಣಕಾಸು ವರ್ಷದ CPI ಹಣದುಬ್ಬರವು ಶೇ. 2 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ, ಇದು ಆರ್‌ಬಿಐನ ಶೇ. 2–6 ರ ಗುರಿಯ ಮಿತಿಯೊಳಗೆ ಆರಾಮದಾಯಕವಾಗಿದೆ. ಹಣಕಾಸು ವರ್ಷ 2026 ರ ತ್ರೈಮಾಸಿಕ ಹಣದುಬ್ಬರದ ಹಾದಿಯು ಮೂರನೇ ತ್ರೈಮಾಸಿಕದಲ್ಲಿ ಶೇ. 0.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 2.9 ಇರಲಿದೆ ಎಂದು ಸೂಚಿಸುತ್ತದೆ. ಹಣಕಾಸು ವರ್ಷ 2027 ಕ್ಕೆ ಸಂಬಂಧಿಸಿದಂತೆ, ಇದು ಮೊದಲ ತ್ರೈಮಾಸಿಕದಲ್ಲಿ ಶೇ. 3.9 ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ. 4.0 ಇರಲಿದೆ ಎಂದು ಅಂದಾಜಿಸಲಾಗಿದೆ.

ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಮತ್ತು ಹಣಕಾಸಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆರ್‌ಬಿಐ ಪಾಲಿಸಿ ರೆಪೊ ದರವನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿ ಶೇ. 5.25 ಕ್ಕೆ ಇಳಿಸಿದೆ ಮತ್ತು ತಟಸ್ಥ ನಿಲುವನ್ನು ತಳೆದಿದೆ. ಹಣದುಬ್ಬರದ ಹಿತಕರವಾದ ಮುನ್ನೋಟವು ಬೆಳವಣಿಗೆಯ ವೇಗವನ್ನು ಬೆಂಬಲಿಸಲು ಪಾಲಿಸಿ ಅವಕಾಶವನ್ನು ನೀಡುತ್ತಲೇ ಇರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. 2025 ರ ಒಟ್ಟಾರೆ ಹಣದುಬ್ಬರದ ಹಾದಿಯು ಭಾರತದ ಹಣದುಬ್ಬರ-ನಿಯಂತ್ರಣ ಚೌಕಟ್ಟಿನ ಪರಿಣಾಮಕಾರಿತ್ವವನ್ನು ಪುನರುಚ್ಚರಿಸಿದೆ.

2025 ರ ಸಗಟು ಬೆಲೆಗಳ ಸ್ಥಿತಿಗತಿಯು ಕೂಡ ಇದೇ ರೀತಿಯ ಮಿತವಾದ ಹಣದುಬ್ಬರದ ಪ್ರವೃತ್ತಿಯನ್ನು ಪ್ರತಿಬಿಂಬಿಸಿದೆ. ಆರ್ಥಿಕತೆಯ ಸರಾಸರಿ ಸಗಟು ಬೆಲೆ ಚಲನೆಯ ಅಳತೆಯಾದ WPI ಹಣದುಬ್ಬರವು, ಜನವರಿಯಲ್ಲಿ ಶೇ. 2.31 ರಷ್ಟು ಧನಾತ್ಮಕವಾಗಿ ಪ್ರಾರಂಭವಾಯಿತು. ಏಪ್ರಿಲ್‌ನ ಶೇ. 0.85 ರ ಕನಿಷ್ಠ ಹಣದುಬ್ಬರದಿಂದ, WPI ಹಣದುಬ್ಬರವು ಏರಿಳಿತಗಳನ್ನು ಕಂಡು ನವೆಂಬರ್ 2025 ರಲ್ಲಿ ತಾತ್ಕಾಲಿಕವಾಗಿ ವಾರ್ಷಿಕ ಶೇ. -0.32 ಕ್ಕೆ ತಲುಪಿದೆ. ಈ ಬೆಳವಣಿಗೆಗಳು ಚಿಲ್ಲರೆ ಮತ್ತು ಸಗಟು ಎರಡೂ ಮಟ್ಟಗಳಲ್ಲಿ ಬೆಲೆ ಏರಿಕೆಯ ಒತ್ತಡವು ಮೃದುವಾಗಿರುವುದನ್ನು ಎತ್ತಿ ತೋರಿಸುತ್ತವೆ.

ವ್ಯಾಪಾರ ಸಾಧನೆಯ ಸುಧಾರಣೆ

ಜನವರಿ 2025 ರಲ್ಲಿ, ಭಾರತದ ವಿದೇಶಿ ವ್ಯಾಪಾರವು ಉತ್ತಮ ಆರಂಭವನ್ನು ಪಡೆಯಿತು. ಒಟ್ಟು ರಫ್ತು (ಸರಕು ಮತ್ತು ಸೇವೆಗಳು ಸೇರಿ) 74.97 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಜನವರಿ 2024 ಕ್ಕೆ ಹೋಲಿಸಿದರೆ ಶೇ. 9.72 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜೂನ್ 2025 ರ ವೇಳೆಗೆ, ಒಟ್ಟು ರಫ್ತು 210.31 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ. ಪೆಟ್ರೋಲಿಯಂ ಅಲ್ಲದ ರಫ್ತುಗಳು ಕೂಡ ಧನಾತ್ಮಕ ವೇಗವನ್ನು ಕಾಯ್ದುಕೊಂಡಿವೆ. ವರ್ಷದ ಆರಂಭದ ಮತ್ತು ಮಧ್ಯದ ಈ ಪ್ರವೃತ್ತಿಗಳು ರಫ್ತು ವಿಸ್ತರಣೆ ಮತ್ತು ವೈವಿಧ್ಯಮಯ ಬಾಹ್ಯ ಬೇಡಿಕೆಯನ್ನು ಪ್ರದರ್ಶಿಸಿದವು. ನವೆಂಬರ್ 2025 ರ ವೇಳೆಗೆ, ವರ್ಷದ ವ್ಯಾಪಾರ ಹಾದಿಯು ಸುಸ್ಥಿರವಾದ ಬಾಹ್ಯ ವಲಯದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸಿತು.

2025ರಲ್ಲಿ ಭಾರತದ ಸರಕು ರಫ್ತು ಸಾಧನೆಯು ಪ್ರಮುಖ ಉತ್ಪನ್ನ ಗುಂಪುಗಳು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಲಗೊಂಡಿದೆ. ಆರಂಭದಲ್ಲಿ, ಜನವರಿ 2025ರಲ್ಲಿ ರಫ್ತು ಮೌಲ್ಯವು 36.43 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಭಾರತೀಯ ರಫ್ತುದಾರರು ವೈವಿಧ್ಯಮಯ ಬೇಡಿಕೆಯ ಪರಿಸ್ಥಿತಿಗಳನ್ನು ಬಳಸಿಕೊಂಡು ವರ್ಷವಿಡೀ ಹೊರಹೋಗುವ ರಫ್ತುಗಳನ್ನು ಮುಂದುವರಿಸಿದರು. ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ ಸರಕುಗಳು, ಔಷಧಗಳು, ರತ್ನಗಳು ಮತ್ತು ಆಭರಣಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳಂತಹ ವಲಯಗಳ ಬಲವಾದ ಕೊಡುಗೆಯಿಂದಾಗಿ, ಸರಕು ರಫ್ತು ಸಕಾರಾತ್ಮಕ ವೇಗವನ್ನು ಕಾಯ್ದುಕೊಂಡಿದೆ. ಇದು ಭಾರತೀಯ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗಿನ ವ್ಯಾಪಾರ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ನವೆಂಬರ್ 2025ರ ವೇಳೆಗೆ, ಸರಕು ರಫ್ತು ಮೌಲ್ಯವು 38.13 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿತು, ಇದು ಜಾಗತಿಕ ವ್ಯಾಪಾರದ ಅನಿಶ್ಚಿತತೆಗಳ ನಡುವೆಯೂ ಬಾಹ್ಯ ವಲಯದ ಸಾಧನೆಯಲ್ಲಿನ ಸ್ಥಿರವಾದ ಏರಿಕೆಯನ್ನು ತೋರಿಸುತ್ತದೆ.

2025ರಲ್ಲಿ ಸ್ಥಿರವಾದ ರಫ್ತು ಬೆಳವಣಿಗೆಗೆ ಕೊಡುಗೆ ನೀಡಿದ ಸರಕುಗಳೆಂದರೆ ಗೋಡಂಬಿ, ಸಮುದ್ರ ಉತ್ಪನ್ನಗಳು, ಇತರ ಧಾನ್ಯಗಳು, ಎಲೆಕ್ಟ್ರಾನಿಕ್ ಸರಕುಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು. ಇವು ಕಳೆದ 11 ವರ್ಷಗಳಲ್ಲಿ ಶೇಕಡಾ 10ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಕಂಡಿವೆ.

2025ರಲ್ಲಿ ಸರಕು ರಫ್ತು ಬೆಳವಣಿಗೆ (ಅಮೆರಿಕನ್ ಡಾಲರ್ ಮಿಲಿಯನ್‌ನಲ್ಲಿ)

ಸರಕುಗಳು

ಜನವರಿ 2025

ನವೆಂಬರ್ 2025

ಬೆಳವಣಿಗೆ

ಗೋಡಂಬಿ

34.93

57.42

64.39%

ಸಮುದ್ರ ಉತ್ಪನ್ನಗಳು

540.75

877.65

62.30%

ಇತರ ಧಾನ್ಯಗಳು

28.36

37.53

32.33%

ಎಲೆಕ್ಟ್ರಾನಿಕ್ ಸರಕುಗಳು

4105.46

4813.66

17.25%

ಎಂಜಿನಿಯರಿಂಗ್ ಸರಕುಗಳು

9418.06

11012.20

16.93%

ಕಾಫಿ

115.73

134.83

16.50%

ಪೆಟ್ರೋಲಿಯಂ ಉತ್ಪನ್ನಗಳು

3561.76

3931.52

10.38%

ಸೆರಾಮಿಕ್ ಉತ್ಪನ್ನಗಳು ಮತ್ತು ಗಾಜಿನ ಸಾಮಾನುಗಳು

326.43

355.17

8.80%

ಸಾಂಬಾರ ಪದಾರ್ಥಗಳು

343.01

358.46

4.50%

ಹಣ್ಣು ಮತ್ತು ತರಕಾರಿಗಳು

303.16

314.47

3.73%

2025ರಲ್ಲಿ ಯುನೈಟೆಡ್ ಕಿಂಗ್‌ಡಮ್, ಓಮನ್ ಮತ್ತು ನ್ಯೂಜಿಲೆಂಡ್ ದೇಶಗಳೊಂದಿಗೆ ವ್ಯಾಪಾರ ಪಾಲುದಾರಿಕೆಯನ್ನು ಬಲಪಡಿಸುವ ಮೂಲಕ, ಭಾರತವು ತನ್ನ ಜಾಗತಿಕ ರಫ್ತು ಹೆಜ್ಜೆಯನ್ನು ವಿಸ್ತರಿಸಿತು ಮತ್ತು ತನ್ನ ರಫ್ತುಗಳಿಗೆ ಉದಯೋನ್ಮುಖ ಮಾರುಕಟ್ಟೆಗಳ ಪ್ರವೇಶವನ್ನು ಹೆಚ್ಚಿಸಿತು. ಜನವರಿ 2025 ರಿಂದ, ಭಾರತವು ವ್ಯಾಪಾರ ವೈವಿಧ್ಯೀಕರಣದ ಮೇಲೆ ಗಮನ ಹರಿಸುವುದರ ಜೊತೆಗೆ ಚೀನಾ, ಹಾಂಗ್ ಕಾಂಗ್, ಬ್ರೆಜಿಲ್, ಇಟಲಿ, ಫ್ರಾನ್ಸ್, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬೆಲ್ಜಿಯಂ, ಜರ್ಮನಿ ಮತ್ತು ಇತರ ಹಲವು ದೇಶಗಳೊಂದಿಗೆ ತನ್ನ ವ್ಯಾಪಾರವನ್ನು ಉತ್ತೇಜಿಸಿತು.

ಸೇವಾ ರಫ್ತುಗಳು ಸ್ಥಿತಿಸ್ಥಾಪಕತ್ವದ ಪ್ರಮುಖ ಆಧಾರಸ್ತಂಭವಾಗಿ ಮುಂದುವರಿದಿವೆ. ಏಪ್ರಿಲ್-ನವೆಂಬರ್ 2024 ರಲ್ಲಿ 248.56 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ಸೇವಾ ರಫ್ತು, ಏಪ್ರಿಲ್-ನವೆಂಬರ್ 2025 ರ ಅವಧಿಯಲ್ಲಿ ಅಂದಾಜು 270.06 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಅಂದರೆ ಶೇ. 8.65 ರಷ್ಟು ವಿಸ್ತರಿಸಿದೆ. ಇದು ಕಂಪ್ಯೂಟರ್ ಮತ್ತು ವ್ಯವಹಾರ ಸೇವೆಗಳಲ್ಲಿ ಭಾರತದ ಬೆಳೆಯುತ್ತಿರುವ ಜಾಗತಿಕ ಸ್ಪರ್ಧಾತ್ಮಕತೆಯನ್ನು ಉಲ್ಲೇಖಿಸುತ್ತದೆ. ಒಟ್ಟಾರೆಯಾಗಿ, ರಫ್ತು ವಲಯವು ಭಾರತದ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ಮುನ್ನೋಟವನ್ನು ಬಲಪಡಿಸುತ್ತಿದೆ.

ಬಾಹ್ಯ ವಲಯದ ಸ್ಥಿತಿಸ್ಥಾಪಕತ್ವ

ನವೆಂಬರ್ 28, 2025 ರಂತೆ, ಭಾರತದ ವಿದೇಶಿ ವಿನಿಮಯ ಮೀಸಲು 686.2 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿದ್ದು, ಇದು 11 ತಿಂಗಳಿಗಿಂತ ಹೆಚ್ಚಿನ ಆಮದು ವೆಚ್ಚವನ್ನು ಭರಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ಬಾಹ್ಯ ವಲಯವು ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ. ಬಲವಾದ ಸೇವಾ ರಫ್ತುಗಳು ಮತ್ತು ದೃಢವಾದ ವಿದೇಶಿ ಹಣದ ಹರಿವಿನಿಂದಾಗಿ , ಚಾಲ್ತಿ ಖಾತೆ ಕೊರತೆಯು 2024-25ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿದ್ದ ಜಿಡಿಪಿಯ ಶೇ. 2.2 ರಿಂದ 2025-26ರ ಎರಡನೇ ತ್ರೈಮಾಸಿಕದಲ್ಲಿ ಶೇ. 1.3 ಕ್ಕೆ ಇಳಿಕೆಯಾಗಿದೆ. ಹೆಚ್ಚುವರಿಯಾಗಿ, 2025-26ರ ಎರಡನೇ ತ್ರೈಮಾಸಿಕದಲ್ಲಿ ಒಳಬರುವ ವಿದೇಶಿ ಹಣದ ಹರಿವು ಶೇ. 10.7 ರಷ್ಟು (y-o-y) ಹೆಚ್ಚಾಗಿದೆ. ಸೇವಾ ರಫ್ತುಗಳ ಸಕಾರಾತ್ಮಕ ಮುನ್ನೋಟ ಮತ್ತು ಹೆಚ್ಚುತ್ತಿರುವ ವಿದೇಶಿ ಹಣದ ಹರಿವು 2025-26ರ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆಯನ್ನು ಮಿತವಾಗಿರಿಸುವ ನಿರೀಕ್ಷೆಯಿದೆ.

ಬಾಹ್ಯ ಹಣಕಾಸಿನ ವಿಷಯದಲ್ಲಿ, ವರ್ಷದ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆಯು ಭಾರಿ ವೇಗವನ್ನು ಪಡೆದುಕೊಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಏಪ್ರಿಲ್‌ನಿಂದ ಸೆಪ್ಟೆಂಬರ್ 2025-26ರ ಅವಧಿಯಲ್ಲಿ ಒಟ್ಟು FDI 43.4 ಬಿಲಿಯನ್ ಅಮೆರಿಕನ್ ಡಾಲರ್‌ನಿಂದ 51.8 ಬಿಲಿಯನ್ ಡಾಲರ್‌ಗೆ (ಶೇ. 19.4 ರಷ್ಟು) ಬೆಳೆದಿದೆ. ಹಾಗೆಯೇ ನಿವ್ವಳ FDI 3.4 ಬಿಲಿಯನ್ ಡಾಲರ್‌ನಿಂದ 7.7 ಬಿಲಿಯನ್ ಡಾಲರ್‌ಗೆ (ಶೇ. 127.6 ರಷ್ಟು) ಏರಿಕೆಯಾಗಿದೆ. ಹೊರಹೋಗುವ FDI ಹೆಚ್ಚಾಗಿದ್ದರೂ ಸಹ, ಹೂಡಿಕೆ ವಾಪಸಾತಿ ಕುಸಿದಿರುವುದು ಈ ಗಮನಾರ್ಹ ಏರಿಕೆಗೆ ಕಾರಣವಾಗಿದೆ.

ಈವರೆಗಿನ 2025-26ರ ಅವಧಿಯಲ್ಲಿ (ಏಪ್ರಿಲ್-ಡಿಸೆಂಬರ್ 03), ಇಕ್ವಿಟಿ ವಿಭಾಗದಲ್ಲಿನ ಹೊರಹರಿವಿನಿಂದಾಗಿ ಭಾರತಕ್ಕೆ ಬರುವ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆಯು 0.7 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ನಿವ್ವಳ ಹೊರಹರಿವನ್ನು ದಾಖಲಿಸಿದೆ.

ಇದಲ್ಲದೆ, ಬಾಹ್ಯ ವಾಣಿಜ್ಯ ಸಾಲಗಳು ಮತ್ತು ಅನಿವಾಸಿ ಠೇವಣಿ ಖಾತೆಗಳ ಅಡಿಯಲ್ಲಿನ ಹರಿವು ಏಪ್ರಿಲ್-ಅಕ್ಟೋಬರ್ 2025-26ರ ಅವಧಿಯಲ್ಲಿ 6.2 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿದೆ (ಕಳೆದ ವರ್ಷ ಇದು 8.1 ಬಿಲಿಯನ್ ಡಾಲರ್ ಇತ್ತು). ಅನಿವಾಸಿ ಠೇವಣಿಗಳು ಏಪ್ರಿಲ್-ಸೆಪ್ಟೆಂಬರ್ 2025-26ರಲ್ಲಿ 6.1 ಬಿಲಿಯನ್ ಡಾಲರ್ ನಿವ್ವಳ ಒಳಹರಿವನ್ನು ದಾಖಲಿಸಿವೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 10.2 ಬಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ.

ವ್ಯಾಪಕ ವೇಗವು ಭಾರತದ ಬೆಳವಣಿಗೆಯ ಕಥೆಯನ್ನು ಬಲಪಡಿಸುತ್ತಿದೆ

ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವು ಆಶಾದಾಯಕವಾಗಿ ಮುಂದುವರಿದಿದೆ. ಬಲವಾದ ಆರ್ಥಿಕ ಅಡಿಪಾಯದ ಹಿನ್ನೆಲೆಯಲ್ಲಿ ಜಾಗತಿಕ ಮತ್ತು ದೇಶೀಯ ಸಂಸ್ಥೆಗಳು ಭಾರತದ ಪ್ರಗತಿಯ ಅಂದಾಜುಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಪ್ರಮುಖ ವಲಯಗಳಲ್ಲಿ ಕಂಡುಬರುತ್ತಿರುವ ವ್ಯಾಪಕ ವೇಗವನ್ನು ಪ್ರತಿಬಿಂಬಿಸುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ 2025-26ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6.8 ರಿಂದ ಶೇ. 7.3 ಕ್ಕೆ ಪರಿಷ್ಕರಿಸಿ ಹೆಚ್ಚಿಸಿದೆ.

ಅಂತರರಾಷ್ಟ್ರೀಯ ಸಂಸ್ಥೆಗಳು ಸಹ ಇದೇ ಆಶಾವಾದವನ್ನು ವ್ಯಕ್ತಪಡಿಸಿವೆ: ವಿಶ್ವ ಬ್ಯಾಂಕ್ 2026 ರಲ್ಲಿ ಶೇ. 6.5 ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ; ಮೂಡಿಸ್ ಸಂಸ್ಥೆಯು ಭಾರತವು ಜಿ-20 ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ನಿರೀಕ್ಷಿಸಿದ್ದು, 2026 ರಲ್ಲಿ ಶೇ. 6.4 ಮತ್ತು 2027 ರಲ್ಲಿ ಶೇ. 6.5 ರಷ್ಟು ಪ್ರಗತಿಯನ್ನು ಅಂದಾಜಿಸಿದೆ. ಐಎಂಎಫ್ ತನ್ನ ಪ್ರಕ್ಷೇಪಣೆಯನ್ನು 2025 ಕ್ಕೆ ಶೇ. 6.6 ಮತ್ತು 2026 ಕ್ಕೆ ಶೇ. 6.2 ಕ್ಕೆ ಏರಿಸಿದೆ; ಒಇಸಿಡಿ 2025 ರಲ್ಲಿ ಶೇ. 6.7 ಮತ್ತು 2026 ರಲ್ಲಿ ಶೇ. 6.2 ರಷ್ಟು ಬೆಳವಣಿಗೆಯನ್ನು ಮುನ್ಸೂಚಿಸಿದೆ; ಎಸ್&ಪಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ. 6.5 ಮತ್ತು ಮುಂದಿನ ವರ್ಷದಲ್ಲಿ ಶೇ. 6.7 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಿದೆ; ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ತನ್ನ 2025 ರ ಮುನ್ಸೂಚನೆಯನ್ನು ಶೇ. 7.2 ಕ್ಕೆ ಏರಿಸಿದೆ; ಮತ್ತು ಫಿಚ್ ಸಂಸ್ಥೆಯು ಬಲವಾದ ಗ್ರಾಹಕ ಬೇಡಿಕೆಯ ಹಿನ್ನೆಲೆಯಲ್ಲಿ ಹಣಕಾಸು ವರ್ಷ 2026 ರ ಮುನ್ಸೂಚನೆಯನ್ನು ಶೇ. 7.4 ಕ್ಕೆ ಹೆಚ್ಚಿಸಿದೆ.

ಒಟ್ಟಾರೆಯಾಗಿ, ನಿರಂತರ ಅಂತರರಾಷ್ಟ್ರೀಯ ವಿಶ್ವಾಸದೊಂದಿಗೆ ಬಲವಾದ ದೇಶೀಯ ಬೇಡಿಕೆ, ಕುಸಿಯುತ್ತಿರುವ ನಿರುದ್ಯೋಗ ದರ ಮತ್ತು ಇಳಿಕೆಯಾಗುತ್ತಿರುವ ಹಣದುಬ್ಬರವು ಭಾರತವನ್ನು ತನ್ನ '2047 ರ ಅಭಿವೃದ್ಧಿ ಗುರಿ'ಗಳತ್ತ ಸ್ಥಿರವಾಗಿ ಸಾಗಲು ಸುಸಜ್ಜಿತಗೊಳಿಸಿವೆ.

Reference

Ministry of Finance

https://www.indiabudget.gov.in/economicsurvey/doc/echapter.pdf

Ministry of Labour and Employment

https://dge.gov.in/dge/sites/default/files/2024-02/Employment_Situation_in_India_NOV_2023.pdf

https://labour.gov.in/sites/default/files/pib2097939.pdf

Ministry of Statistics & Programme Implementation

https://www.pib.gov.in/PressReleasePage.aspx?PRID=2204089&reg=3&lang=2

https://www.pib.gov.in/PressReleasePage.aspx?PRID=2128833&reg=3&lang=2

https://www.pib.gov.in/PressReleasePage.aspx?PRID=2161834&reg=3&lang=2

https://www.mospi.gov.in/sites/default/files/press_release/CPI_PR_12Mar25.pdf

https://www.pib.gov.in/PressReleasePage.aspx?PRID=2202940&reg=3&lang=1

Ministry of Commerce & Industry

https://eaindustry.nic.in/uploaded_files/WPI_Manual.pdf

https://www.pib.gov.in/PressReleasePage.aspx?PRID=2103131&reg=3&lang=2

https://www.pib.gov.in/PressReleasePage.aspx?PRID=2128568&reg=3&lang=2

https://www.pib.gov.in/PressReleasePage.aspx?PRID=2204071&reg=3&lang=1

https://www.commerce.gov.in/wp-content/uploads/2025/02/PIB-Release-January-2025-fin-1.pdf

https://www.pib.gov.in/PressReleasePage.aspx?PRID=2144870&reg=3&lang=2

https://www.commerce.gov.in/wp-content/uploads/2025/12/PIB-Release-Nov-2025.pdf

https://static.pib.gov.in/WriteReadData/specificdocs/documents/2025/feb/doc2025217504101.pdf

https://static.pib.gov.in/WriteReadData/specificdocs/documents/2025/dec/doc20251215732101.pdf

Reserve Bank of India

https://rbidocs.rbi.org.in/rdocs/Bulletin/PDFs/DEC25A728ED88AE074D6092BB300124563772.PDF

https://rbidocs.rbi.org.in/rdocs/PressRelease/PDFs/PR16331051154700094ACFB40DE08AE141531C.PDF

https://rbidocs.rbi.org.in/rdocs/PressRelease/PDFs/PR16331051154700094ACFB40DE08AE141531C.PDF

https://rbidocs.rbi.org.in/rdocs/PressRelease/PDFs/PR1634B0D9F50971B34688AAED3CA902AB3B0B.PDF

Organisation for Economic Co-operation and Development

https://www.oecd.org/en/publications/oecd-economic-outlook-volume-2025-issue-2_9f653ca1-en/full-report/india_65a8d75a.html

https://www.oecd.org/en/data/indicators/inflation-cpi.html

https://www.oecd.org/en/publications/2025/09/oecd-economic-outlook-interim-report-september-2025_ae3d418b.html 

World Bank

https://www.worldbank.org/ext/en/country/india

https://openknowledge.worldbank.org/server/api/core/bitstreams/71109bfe-cb0e-47d6-b2c5-722341e42b99/content

International Labour Organization

https://www.ilo.org/sites/default/files/2024-08/India%20Employment%20-%20web_8%20April.pdf

Moody’s

https://www.moodys.com/web/en/us/insights/credit-risk/outlooks/macroeconomics-2026.html

International Monetary Fund

https://www.imf.org/external/pubs/ft/fandd/basics/unemploy.htm#:~:text=Unemployment%20is%20highly%20dependent%20on,sides%20of%20the%20same%20coin

https://www.imf.org/external/datamapper/NGDP_RPCH@WEO/IND?zoom=IND&highlight=IND

India Brand Equity Foundation

https://www.ibef.org/economy/indian-economy-overview

PIB Archives

https://www.pib.gov.in/PressReleasePage.aspx?PRID=2195990&reg=3&lang=1

https://www.pib.gov.in/PressReleasePage.aspx?PRID=2174773&reg=3&lang=2

https://www.pib.gov.in/FactsheetDetails.aspx?Id=150328&reg=3&lang=1

Asian Development Bank

https://www.adb.org/sites/default/files/publication/1102431/ado-december-2025.pdf

Others

https://www.newsonair.gov.in/sps-global-rating-projects-indias-economy-to-grow-6-5-in-current-fiscal-year/

https://ddnews.gov.in/en/fitch-raises-indias-fy26-gdp-growth-forecast-to-7-4-on-strong-consumption-tax-reforms/

Click here for pdf file. 

 

 

*****

(Explainer ID: 156776) आगंतुक पटल : 8
Provide suggestions / comments
इस विज्ञप्ति को इन भाषाओं में पढ़ें: English , हिन्दी , Gujarati , Malayalam , Bengali , Urdu
Link mygov.in
National Portal Of India
STQC Certificate