Rural Prosperity

ರಾಷ್ಟ್ರೀಯ ಗ್ರಾಹಕ ದಿನಾಚರಣೆ

"ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ"

Posted On: 23 DEC 2025 1:29PM

ಪ್ರಮುಖ ಮಾರ್ಗಸೂಚಿಗಳು

  • ರಾಷ್ಟ್ರೀಯ ಗ್ರಾಹಕ ದಿನ: ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. 2025ರ ವರ್ಷದ ಘೋಷವಾಕ್ಯ "ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ" ಎಂಬುದಾಗಿದೆ.
  • ಇ-ಜಾಗೃತಿ ಪೋರ್ಟಲ್: ಗ್ರಾಹಕ ಕುಂದುಕೊರತೆ ನಿವಾರಣಾ ಪೋರ್ಟಲ್ ಆದ 'ಇ-ಜಾಗೃತಿ'ಯು ಪ್ರಕರಣಗಳ ಇತ್ಯರ್ಥವನ್ನು ಸುಧಾರಿಸಿದೆ. ಇದುವರೆಗೆ 1.35 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ದಾಖಲಾತಿ, 1.31 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ವಿಲೇವಾರಿ ಮತ್ತು 2.81 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.
  • ದಾಖಲೆ ಮಟ್ಟದ ವಿಲೇವಾರಿ: 10 ರಾಜ್ಯಗಳು ಮತ್ತು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು  ಶೇಕಡಾ 100 ಕ್ಕಿಂತ ಹೆಚ್ಚು ಪ್ರಕರಣಗಳ ವಿಲೇವಾರಿಯನ್ನು ದಾಖಲಿಸಿವೆ.
  • ರಾಷ್ಟ್ರೀಯ ಗ್ರಾಹಕ ಸಹಾಯವಾಣಿ: ಪ್ರಸ್ತುತ 1,169 ಪಾಲುದಾರರ ಬೆಂಬಲದೊಂದಿಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ವಾರ್ಷಿಕವಾಗಿ 12 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸುತ್ತಿದೆ.
  • ಗುಣಮಟ್ಟದ ಮಾನದಂಡಗಳು: ಭಾರತವು ಪ್ರಸ್ತುತ 22,300 ಕ್ಕೂ ಹೆಚ್ಚು ಸಕ್ರಿಯ ಮಾನದಂಡಗಳನ್ನು ಹೊಂದಿದ್ದು, ಅವುಗಳಲ್ಲಿ ಶೇಕಡಾ 94 ರಷ್ಟು ಜಾಗತಿಕ ಮಾನದಂಡಗಳೊಂದಿಗೆ ಸುಸಂಬದ್ಧವಾಗಿವೆ.

ಪೀಠಿಕೆ

ಗ್ರಾಹಕರ ಹಕ್ಕುಗಳ ಮಹತ್ವ ಮತ್ತು ಗ್ರಾಹಕ ಸಂರಕ್ಷಣೆಯ ವಿಶಾಲ ಚೌಕಟ್ಟನ್ನು ಎತ್ತಿ ತೋರಿಸಲು ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. 1986 ರ ಇದೇ ದಿನದಂದು 'ಗ್ರಾಹಕ ಸಂರಕ್ಷಣಾ ಕಾಯ್ದೆ'ಯು ರಾಷ್ಟ್ರಪತಿಗಳ ಅಂಕಿತವನ್ನು ಪಡೆಯುವ ಮೂಲಕ ಗ್ರಾಹಕರಿಗೆ ಸಮಗ್ರ ಹಕ್ಕುಗಳನ್ನು ಒದಗಿಸಿತು. ಈ ಹಕ್ಕುಗಳಲ್ಲಿ ಸುರಕ್ಷತೆ ಪಡೆಯುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಭರವಸೆ ಪಡೆಯುವ ಹಕ್ಕು, ಆಲಿಸುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಜಾಗೃತಿಯ ಹಕ್ಕುಗಳು ಸೇರಿವೆ. ಗ್ರಾಹಕರು ಮತ್ತು ಇತರ ಪಾಲುದಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜವಾಬ್ದಾರಿಯುತ ವ್ಯವಹಾರ ಪದ್ಧತಿಗಳನ್ನು ಉತ್ತೇಜಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. 2025 ರ ರಾಷ್ಟ್ರೀಯ ಗ್ರಾಹಕ ದಿನವನ್ನು "ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ" ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದು ತಂತ್ರಜ್ಞಾನದ ಮೂಲಕ ಸುಲಭವಾಗಿ ಲಭ್ಯವಾಗುವ ಮತ್ತು ಸಕಾಲಿಕವಾಗಿ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸುವ ಭಾರತದ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

A blue circle with white text and iconsAI-generated content may be incorrect.

2025ರ ರಾಷ್ಟ್ರೀಯ ಗ್ರಾಹಕ ದಿನದ ಕಾರ್ಯಕ್ರಮದ ಮುಖ್ಯಾಂಶಗಳು

2025ರ ರಾಷ್ಟ್ರೀಯ ಗ್ರಾಹಕ ದಿನವು ಗ್ರಾಹಕ ಸಂರಕ್ಷಣೆ, ಜಾಗೃತಿ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಸರಣಿ ಉದ್ಘಾಟನೆಗಳು, ಗೌರವ ಸಮರ್ಪಣೆಗಳು ಮತ್ತು ಪ್ರಕಟಣೆಗಳನ್ನು ಒಳಗೊಂಡಿರಲಿದೆ. ಈ ಕಾರ್ಯಕ್ರಮವು ಡಿಜಿಟಲ್ ಕುಂದುಕೊರತೆ ನಿವಾರಣೆ, ಗುಣಮಟ್ಟದ ಭರವಸೆ, ಕಾನೂನು ಮಾಪನಶಾಸ್ತ್ರ ಮತ್ತು ಗ್ರಾಹಕ ಜಾಗೃತಿಯಲ್ಲಿನ ಪ್ರಗತಿಯನ್ನು ಎತ್ತಿ ತೋರಿಸುವುದಲ್ಲದೆ, ಪ್ರಮುಖ ಸಂಸ್ಥೆಗಳ ನಡುವಿನ ಸಹಯೋಗವನ್ನು ಉತ್ತೇಜಿಸುತ್ತದೆ.

ಗ್ರಾಹಕ ಹಕ್ಕುಗಳ ಮರುಕಲ್ಪನೆ: ಬಲವಾದ ಕಾನೂನುಗಳು, ತ್ವರಿತ ಪರಿಹಾರ ಮತ್ತು ಉತ್ತಮ ಫಲಿತಾಂಶಗಳು

ಗ್ರಾಹಕ ಸಂರಕ್ಷಣಾ ಕಾಯ್ದೆ, 2019, ಭಾರತದಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಒಂದು ಮಹತ್ವದ ಸುಧಾರಣೆಯನ್ನು ಪ್ರತಿನಿಧಿಸುತ್ತದೆ. 20 ಜುಲೈ 2020 ರಂದು ಜಾರಿಗೆ ಬಂದ ಈ ಕಾಯ್ದೆಯು 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಬದಲಿಸಿತು ಮತ್ತು ವಿವಾದ ಪರಿಹಾರ ಹಾಗೂ ಮಾರುಕಟ್ಟೆಯ ಹೊಣೆಗಾರಿಕೆಗಾಗಿ ಹೆಚ್ಚು ಸಮಕಾಲೀನ ಚೌಕಟ್ಟನ್ನು ಪರಿಚಯಿಸಿತು. ಈ ಕಾಯ್ದೆಯು ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಸುಗಮಗೊಳಿಸುವ ಮೂಲಕ, ಸಮಾನ ಫಲಿತಾಂಶಗಳನ್ನು ಖಚಿತಪಡಿಸುವ ಮೂಲಕ ಮತ್ತು ತ್ವರಿತ ಹಾಗೂ ಪರಿಣಾಮಕಾರಿ ಕುಂದುಕೊರತೆ ನಿವಾರಣೆಯನ್ನು ಸಕ್ರಿಯಗೊಳಿಸುವ ಮೂಲಕ ಗ್ರಾಹಕ ಕಲ್ಯಾಣವನ್ನು ರಕ್ಷಿಸಲು ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ನ್ಯಾಯಸಮ್ಮತತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಸರಕು ಅಥವಾ ಸೇವೆಗಳ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಶುದ್ಧತೆ ಮತ್ತು ಮಾನದಂಡಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಸೇರಿದಂತೆ ಹಲವು ಪ್ರಮುಖ ಹಕ್ಕುಗಳನ್ನು ಈ ಕಾನೂನು ಖಾತರಿಪಡಿಸುತ್ತದೆ, ಆ ಮೂಲಕ ಗ್ರಾಹಕರನ್ನು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ರಕ್ಷಿಸುತ್ತದೆ. ತನ್ನ ಉದ್ದೇಶಗಳನ್ನು ಕಾರ್ಯಗತಗೊಳಿಸಲು, ಈ ಕಾಯ್ದೆಯು ಗ್ರಾಹಕ ವಿವಾದ ಪರಿಹಾರಕ್ಕಾಗಿ ಮೂರು ಹಂತದ ನ್ಯಾಯಾಂಗ ರಚನೆಯನ್ನು ಸ್ಥಾಪಿಸಿದೆ:

  • ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆ (ಜಿಲ್ಲಾ ವೇದಿಕೆ): ಇದು ಮೊದಲ ಹಂತವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 50 ಲಕ್ಷ ರೂಪಾಯಿಗಳವರೆಗಿನ ಕ್ಲೈಮ್‌ಗಳನ್ನು ಒಳಗೊಂಡ ದೂರುಗಳನ್ನು ಇತ್ಯರ್ಥಪಡಿಸುತ್ತದೆ.
  • ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (ರಾಜ್ಯ ಆಯೋಗ): ಇದು ಎರಡನೇ ಹಂತದ ರಾಜ್ಯ ಮಟ್ಟದ ಸಂಸ್ಥೆಯಾಗಿದ್ದು, 50 ಲಕ್ಷ ರೂಪಾಯಿಗಳಿಂದ 2 ಕೋಟಿ ರೂಪಾಯಿಗಳವರೆಗಿನ ದೂರುಗಳನ್ನು ನಿರ್ವಹಿಸುತ್ತದೆ.
  • ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (ರಾಷ್ಟ್ರೀಯ ಆಯೋಗ): ಇದು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅತ್ಯುನ್ನತ ಹಂತವಾಗಿದ್ದು, 2 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ದೂರುಗಳನ್ನು ಪರಿಶೀಲಿಸುತ್ತದೆ.
  • ಜುಲೈ 2025 ರಲ್ಲಿ, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ) ಸೇರಿದಂತೆ 10 ರಾಜ್ಯಗಳು ಶೇಕಡಾ 100 ಕ್ಕಿಂತ ಹೆಚ್ಚು ಪ್ರಕರಣಗಳ ವಿಲೇವಾರಿ ದರವನ್ನು ದಾಖಲಿಸಿವೆ. ಆ ತಿಂಗಳ ಅವಧಿಯಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆಗಿಂತ ಇತ್ಯರ್ಥಪಡಿಸಲಾದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತದೆ. ಇದು ಕಾರ್ಯಕ್ಷಮತೆಯ ದಕ್ಷತೆ ಹೆಚ್ಚಿರುವುದನ್ನು ಮತ್ತು ಸಕಾಲಿಕವಾಗಿ ಗ್ರಾಹಕ ನ್ಯಾಯವನ್ನು ಒದಗಿಸುವಲ್ಲಿನ ದೃಢವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗಗಳನ್ನು ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಆಯಾ ರಾಜ್ಯ ಸರ್ಕಾರಗಳು ರಚಿಸುತ್ತವೆ, ಆದರೆ ರಾಷ್ಟ್ರೀಯ ಆಯೋಗವನ್ನು ನೇರವಾಗಿ ಕೇಂದ್ರ ಸರ್ಕಾರವು ಸ್ಥಾಪಿಸುತ್ತದೆ. ಈ ನ್ಯಾಯಾಂಗ ಸಂಸ್ಥೆಗಳು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಯನ್ನು ಅತಿಕ್ರಮಿಸುವುದಿಲ್ಲ; ಬದಲಾಗಿ, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಪರ್ಯಾಯ ವ್ಯವಸ್ಥೆಯನ್ನು ಒದಗಿಸುತ್ತವೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಪಾತ್ರ ಮತ್ತು ಕಾರ್ಯಗಳು

ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ 24 ಜುಲೈ 2020 ರಂದು ಸ್ಥಾಪನೆಯಾದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು, ಗ್ರಾಹಕರ ಹಿತಾಸಕ್ತಿಗಳನ್ನು ಸಾಮೂಹಿಕವಾಗಿ ರಕ್ಷಿಸಲು ನಿಯೋಜಿಸಲಾದ ನಿಯಂತ್ರಕ ಸಂಸ್ಥೆಯಾಗಿದೆ. ಇದರ ಪ್ರಮುಖ ಕಾರ್ಯಗಳು ಹೀಗಿವೆ:

  • ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು, ಉತ್ತೇಜಿಸುವುದು ಮತ್ತು ಜಾರಿಗೊಳಿಸುವುದು.
  • ಅನ್ಯಾಯದ ವ್ಯಾಪಾರ ಪದ್ಧತಿಗಳು ನಡೆಯದಂತೆ ತಡೆಯುವುದು.
  • ಕಾಯ್ದೆಯ ಉಲ್ಲಂಘನೆಯಲ್ಲಿ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳುವುದು.
  • ಸುಳ್ಳು ಅಥವಾ ದಾರಿ ತಪ್ಪಿಸುವ ಜಾಹೀರಾತುಗಳನ್ನು ತಡೆಯಲು ಅವುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು.
  • ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವ ತಯಾರಕರು, ಅನುಮೋದಕರು ಮತ್ತು ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳುವುದು. ಅಸುರಕ್ಷಿತ ಸರಕು ಮತ್ತು ಸೇವೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸುವ, ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ನಿಲ್ಲಿಸುವ, ದಂಡ ವಿಧಿಸುವ ಮತ್ತು ಅಗತ್ಯವಿದ್ದಾಗ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಸಿಸಿಪಿಎ ಹೊಂದಿದೆ.

ಗ್ರಾಹಕ ಸಂರಕ್ಷಣಾ ಉಪಕ್ರಮಗಳ ಪ್ರೇರಕ: ಗ್ರಾಹಕ ಕಲ್ಯಾಣ ನಿಧಿ

ಗ್ರಾಹಕ ಕಲ್ಯಾಣ ನಿಧಿಯು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ರಾಷ್ಟ್ರದಾದ್ಯಂತ ಗ್ರಾಹಕ ಚಳುವಳಿಯನ್ನು ಬಲಪಡಿಸುವ ಉಪಕ್ರಮಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. 'ಗ್ರಾಹಕ ಕಲ್ಯಾಣ ಕಾರ್ಪಸ್ ಫಂಡ್' ಸ್ಥಾಪನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಇದರ ಕೊಡುಗೆಯ ಅನುಪಾತವು 75:25 ರಷ್ಟಿದ್ದರೆ, ವಿಶೇಷ ವರ್ಗದ ರಾಜ್ಯಗಳು ಮತ್ತು ಆಯ್ದ ಕೇಂದ್ರಾಡಳಿತ ಪ್ರದೇಶಗಳಿಗೆ 90:10 ರ ಅನುಪಾತದಲ್ಲಿರುತ್ತದೆ. ಈ ನಿಧಿಯ ಮೇಲಿನ ಬಡ್ಡಿಯ ಮೂಲಕ ಕಾರ್ಯಕ್ರಮಗಳಿಗೆ ಹಣ ಒದಗಿಸಲಾಗುತ್ತದೆ. ಆರ್ಥಿಕ ವರ್ಷ 2024-25ರಲ್ಲಿ (31.12.2024ರ ವರೆಗೆ), ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 38.68 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಸ್ಪಂದನಾಶೀಲ ಮತ್ತು ವಿಶ್ವಾಸಾರ್ಹ ಗ್ರಾಹಕ ಪರಿಹಾರ ಚೌಕಟ್ಟಿನ ನಿರ್ಮಾಣ

ಸರಕು ಅಥವಾ ಸೇವೆಗಳ ಖರೀದಿಯಿಂದ ಉಂಟಾಗುವ ಕುಂದುಕೊರತೆಗಳಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರಗಳನ್ನು ಒದಗಿಸಲು ವಿಶ್ವಾಸಾರ್ಹ ಗ್ರಾಹಕ ಪರಿಹಾರ ವ್ಯವಸ್ಥೆಯು ಅತ್ಯಗತ್ಯ. ಈ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡುವುದಲ್ಲದೆ, ಗ್ರಾಹಕರ ಕಾಳಜಿಗಳನ್ನು ಸಮರ್ಥವಾಗಿ ಆಲಿಸಿ ಪರಿಹರಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ.

ಇ-ಜಾಗೃತಿ - 2025 ರಲ್ಲಿ ಗ್ರಾಹಕ ನ್ಯಾಯದ ಕ್ರಾಂತಿ

1 ಜನವರಿ 2025 ರಂದು ಪ್ರಾರಂಭವಾದ ಇ-ಜಾಗೃತಿಯು ಭಾರತದಲ್ಲಿ ಗ್ರಾಹಕ ಕುಂದುಕೊರತೆ ನಿವಾರಣೆಗೆ ಒಂದು ಪ್ರಮುಖ ಡಿಜಿಟಲ್ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಒಸಿಎಂಎಸ್‌, ಇ-ದಾಖಲ್, ಎನ್‌ಸಿಡಿಆರ್‌ಸಿ ಸಿಎಂಎಸ್‌ ಮತ್ತು ಸಿಒಎನ್‌ಎಫ್‌ಒಎನ್‌ಇಟಿ ನಂತಹ ಹಳೆಯ ವ್ಯವಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿ, ಪ್ರವೇಶವನ್ನು ಸುಲಭಗೊಳಿಸಿದೆ. ಪ್ರಸ್ತುತ ಎನ್‌ಸಿಡಿಆರ್‌ಸಿ ಮತ್ತು ಎಲ್ಲಾ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವೇದಿಕೆಯು ದೂರು ಸಲ್ಲಿಸಲು, ಪಾವತಿ ಮಾಡಲು, ವರ್ಚುವಲ್ ವಿಚಾರಣೆಗಳಲ್ಲಿ ಭಾಗವಹಿಸಲು ಮತ್ತು ಪ್ರಕರಣದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಬಹುಭಾಷಾ ಬೆಂಬಲ, ಚಾಟ್‌ಬಾಟ್ ಸಹಾಯ ಮತ್ತು ಧ್ವನಿಯಿಂದ ಪಠ್ಯಕ್ಕೆ (voice-to-text) ಬದಲಿಸುವ ವೈಶಿಷ್ಟ್ಯಗಳು ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೂ ಬಳಕೆಗೆ ಸುಲಭವಾಗಿದೆ.

ಇ-ಜಾಗೃತಿಯ ಪ್ರಮುಖ ಪ್ರಯೋಜನಗಳು:

  • ಜಾಗೃತ ಲಭ್ಯತೆ: ಅನಿವಾಸಿ ಭಾರತೀಯರು ಮತ್ತು ದೇಶೀಯ ಬಳಕೆದಾರರು ಸುರಕ್ಷಿತ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ಎಲ್ಲಿಂದಲಾದರೂ ಪ್ರಕರಣಗಳನ್ನು ನಿರ್ವಹಿಸಬಹುದು.
  • ದಕ್ಷತೆ ಮತ್ತು ವೇಗ: ಸ್ವಯಂಚಾಲಿತ ಕೆಲಸದ ಹರಿವು, ನೈಜ-ಸಮಯದ ಎಸ್‌ಎಂಎಸ್‌/ಇಮೇಲ್ ಅಧಿಸೂಚನೆಗಳು ಮತ್ತು ವರ್ಚುವಲ್ ವಿಚಾರಣೆಗಳು ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಿವೆ.
  • ಒಳಗೊಳ್ಳುವಿಕೆ: ವಿವಿಧ ಭಾಷಿಕ ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಜನರಿಗೆ ಅನುಕೂಲವಾಗುವಂತೆ ಬಹುಭಾಷಾ ಇಂಟರ್ಫೇಸ್ ಅನ್ನು ಹೊಂದಿದೆ.
  • ಸುರಕ್ಷಿತ ವಹಿವಾಟುಗಳು: ಭಾರತ್ ಕೋಶ್ ಮತ್ತು PayGov ಪಾವತಿ ಗೇಟ್‌ವೇಗಳ ಸಂಯೋಜನೆಯು ಶುಲ್ಕ ಪಾವತಿ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಸುಲಭಗೊಳಿಸಿದೆ.

ತ್ರಿಪುರಾದ ಗ್ರಾಹಕರಿಗೆ ಸಂದ ನ್ಯಾಯ

ಪಶ್ಚಿಮ ತ್ರಿಪುರಾದ ಗ್ರಾಹಕರೊಬ್ಬರು ತಾವು ಖರೀದಿಸಿದ 85,000 ರೂ. ಮೌಲ್ಯದ ಎಲ್‌ಜಿ (LG) ಸೈಡ್ ಬೈ ಸೈಡ್ ರೆಫ್ರಿಜರೇಟರ್‌ನಲ್ಲಿ ಸತತ 8 ವರ್ಷಗಳಿಂದ ಎದುರಿಸುತ್ತಿದ್ದ ತಾಂತ್ರಿಕ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಪಡೆದುಕೊಂಡಿದ್ದಾರೆ. ಪದೇ ಪದೇ ದುರಸ್ತಿ ಮಾಡಿದರೂ ಆ ಫ್ರಿಡ್ಜ್‌ನಲ್ಲಿ ನೀರು ಸೋರುತ್ತಿತ್ತು ಮತ್ತು ಡಿಫ್ರಾಸ್ಟ್ ಆಗುತ್ತಿರಲಿಲ್ಲ. ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು (DC/272/CC/33/2025), ಕೇವಲ 5 ತಿಂಗಳೊಳಗೆ ಇತ್ಯರ್ಥಪಡಿಸಲಾಗಿದೆ. ಸೇವೆಯಲ್ಲಿನ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಾಗಿ ಎಲ್‌ಜಿ ಇಂಡಿಯಾ ಮತ್ತು ಸೇವಾ ಕೇಂದ್ರವನ್ನು ಗ್ರಾಹಕ ಆಯೋಗವು ಹೊಣೆಗಾರರನ್ನಾಗಿ ಮಾಡಿದೆ.

ಆಯೋಗದ ಆದೇಶವು ರೆಫ್ರಿಜರೇಟರ್‌ನ ಪೂರ್ಣ ಮೊತ್ತದ ಮರುಪಾವತಿಯ ಜೊತೆಗೆ ಶೇ. 7.5 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡಲು ಸೂಚಿಸಿದೆ. ಇದರೊಂದಿಗೆ ದುರಸ್ತಿ ವೆಚ್ಚಕ್ಕಾಗಿ 12,000 ರೂ., ಮಾನಸಿಕ ಹಿಂಸೆಗಾಗಿ 50,000 ರೂ. ಮತ್ತು ಕಾನೂನು ಹೋರಾಟದ ವೆಚ್ಚಕ್ಕಾಗಿ 20,000 ರೂ. ಸೇರಿದಂತೆ ಒಟ್ಟು 1.67 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತವನ್ನು 30 ದಿನಗಳೊಳಗೆ ಪಾವತಿಸಲು ಆದೇಶಿಸಿದೆ. ಈ ಫಲಿತಾಂಶವು 'ಇ-ಜಾಗೃತಿ' ಪೋರ್ಟಲ್ ಹೇಗೆ ಗ್ರಾಹಕರನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ಬ್ರ್ಯಾಂಡ್‌ಗಳನ್ನು ಅವರ ದೀರ್ಘಕಾಲದ ಸೇವಾ ಜವಾಬ್ದಾರಿಗಳ ಬಗ್ಗೆ ಹೇಗೆ ಹೊಣೆಗಾರರನ್ನಾಗಿ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ.

ನವೆಂಬರ್ 2025ರ ಮಧ್ಯಭಾಗದ ವೇಳೆಗೆ, ಈ ವೇದಿಕೆಯು (ಇ-ಜಾಗೃತಿ) 1.35 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ದಾಖಲಾತಿಗೆ ಮತ್ತು 1.31 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ವಿಲೇವಾರಿಗೆ ಅನುವು ಮಾಡಿಕೊಟ್ಟಿದೆ. ಇದು 1,400 ಅನಿವಾಸಿ ಭಾರತೀಯರು (NRIs) ಸೇರಿದಂತೆ ಒಟ್ಟು 2.81 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರ ಬೆಂಬಲವನ್ನು ಹೊಂದಿದೆ. ಅನಿವಾಸಿ ಭಾರತೀಯರಿಂದ ಒಟ್ಟು 466 ದೂರುಗಳು ದಾಖಲಾಗಿದ್ದು, ಇದರಲ್ಲಿ ಅಮೆರಿಕ (146), ಯುನೈಟೆಡ್ ಕಿಂಗ್‌ಡಮ್ (52), ಯುಎಇ (47), ಕೆನಡಾ (39), ಆಸ್ಟ್ರೇಲಿಯಾ (26) ಮತ್ತು ಜರ್ಮನಿಯಿಂದ (18) ದೂರುಗಳು ಬಂದಿವೆ.

2025ರಲ್ಲಿ, ಇ-ಜಾಗೃತಿ ವೇದಿಕೆಯು ಪ್ರಕರಣಗಳ ವಿಲೇವಾರಿ ದಕ್ಷತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಪ್ರದರ್ಶಿಸಿದೆ. ಜುಲೈ ಮತ್ತು ಆಗಸ್ಟ್ ನಡುವೆ 27,080 ಹೊಸ ಪ್ರಕರಣಗಳು ದಾಖಲಾಗಿದ್ದರೆ, 27,545 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಅದೇ ರೀತಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ 21,592 ಹೊಸ ಪ್ರಕರಣಗಳ ಎದುರು 24,504 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಎರಡೂ ಅವಧಿಗಳ ಕಾರ್ಯಕ್ಷಮತೆಯು 2024 ಕ್ಕಿಂತ ಉತ್ತಮವಾಗಿದ್ದು, ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಪರಿಣಾಮಕಾರಿ ಕುಂದುಕೊರತೆ ನಿವಾರಣೆಯನ್ನು ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಈ ವೇದಿಕೆಯು 2 ಲಕ್ಷಕ್ಕೂ ಹೆಚ್ಚು SMS ಎಚ್ಚರಿಕೆಗಳನ್ನು ಮತ್ತು 12 ಲಕ್ಷಕ್ಕೂ ಹೆಚ್ಚು ಇಮೇಲ್ ಅಧಿಸೂಚನೆಗಳನ್ನು ಕಳುಹಿಸುವ ಮೂಲಕ, ನೈಜ-ಸಮಯದ ಸಂವಹನ ಮತ್ತು ಸಕಾಲಿಕ ಪಾಲನೆಯನ್ನು ಖಚಿತಪಡಿಸಿದೆ.

A blue circle with blue circles and a cartoon characterAI-generated content may be incorrect.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 2.0

ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು (NCH) ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದೊಂದಿಗೆ ಎನ್‌ಸಿಎಚ್‌2.0 ಗೆ ಮೇಲ್ದರ್ಜೆಗೇರಿಸಿದೆ. ಇದು ಬಹುಭಾಷಾ ನೆರವು, ಚಾಟ್‌ಬಾಟ್ ಬೆಂಬಲಿತ ಸಂವಹನ ಮತ್ತು ತ್ವರಿತ ಕುಂದುಕೊರತೆ ನಿವಾರಣೆಯನ್ನು ನೀಡುತ್ತದೆ. ಈ ಪೋರ್ಟಲ್ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ದೂರುಗಳನ್ನು ದಾಖಲಿಸಬಹುದು, ಕಾನೂನು ಪ್ರಕ್ರಿಯೆಗೆ ಮುನ್ನವೇ ಪರಿಹಾರಗಳನ್ನು ಪಡೆಯಬಹುದು ಮತ್ತು ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯಬಹುದು. ಸುಧಾರಿತ ತಾಂತ್ರಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಾಯವಾಣಿಯು ತನ್ನ ವ್ಯಾಪ್ತಿ ಮತ್ತು ಕಾರ್ಯಕ್ಷಮತೆಯನ್ನು ಗಣನೀಯವಾಗಿ ವಿಸ್ತರಿಸಿದೆ. ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆಯು ಡಿಸೆಂಬರ್ 2015ರಲ್ಲಿ 12,553 ಇದ್ದದ್ದು, ಡಿಸೆಂಬರ್ 2024ರ ವೇಳೆಗೆ 1,55,138 ಕ್ಕೆ ಏರಿದ್ದು, ಇದು ಸುಮಾರು ಹತ್ತು ಪಟ್ಟು ಹೆಚ್ಚಳವನ್ನು ಕಂಡಿದೆ. ಈ ಅಗಾಧ ಬೆಳವಣಿಗೆಯು ಸಹಾಯವಾಣಿಯ ಮೇಲೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ, ಪ್ರತಿ ತಿಂಗಳು ದಾಖಲಾಗುವ ಸರಾಸರಿ ದೂರುಗಳ ಸಂಖ್ಯೆಯು 2017ರಲ್ಲಿ 37,062 ಇದ್ದದ್ದು, 2024ರಲ್ಲಿ 1,11,951 ಕ್ಕೆ ಏರಿಕೆಯಾಗಿದೆ. ಪ್ರಸ್ತುತ, ಈ ಸಹಾಯವಾಣಿಯು ವಾರ್ಷಿಕವಾಗಿ 12 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸುತ್ತಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳು ಮತ್ತು 1,169 ಪಾಲುದಾರ ಕಂಪನಿಗಳ ಸಹಯೋಗದೊಂದಿಗೆ ಹೆಚ್ಚಿನ ದೂರುಗಳನ್ನು 21 ದಿನಗಳೊಳಗೆ ಇತ್ಯರ್ಥಪಡಿಸಲಾಗುತ್ತಿದೆ. ಒಟ್ಟು ದೂರುಗಳಲ್ಲಿ ಸುಮಾರು ಶೇಕಡಾ 65 ರಷ್ಟು ಡಿಜಿಟಲ್ ಮಾಧ್ಯಮಗಳ ಮೂಲಕ ದಾಖಲಾಗುತ್ತಿವೆ. ವಿಶೇಷವಾಗಿ ವಾಟ್ಸಾಪ್ ಮೂಲಕ ದಾಖಲಾಗುವ ದೂರುಗಳ ಪ್ರಮಾಣವು ಮಾರ್ಚ್ 2023ರಲ್ಲಿ ಶೇಕಡಾ 3 ಇದ್ದದ್ದು, ಮಾರ್ಚ್ 2025ರ ವೇಳೆಗೆ ಶೇಕಡಾ 20ಕ್ಕೆ ಏರಿಕೆಯಾಗಿದೆ. ಇದಲ್ಲದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು 25 ಏಪ್ರಿಲ್ 2025 ಮತ್ತು 31 ಅಕ್ಟೋಬರ್ 2025 ರ ನಡುವೆ ಗ್ರಾಹಕರಿಗೆ ಒಟ್ಟು 27.61 ಕೋಟಿ ರೂಪಾಯಿಗಳ ಮರುಪಾವತಿಯನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಈ ಗಮನಾರ್ಹ ಪರಿಹಾರವನ್ನು 30 ವಿವಿಧ ವಲಯಗಳಲ್ಲಿ, ಮರುಪಾವತಿ ಹಕ್ಕುಗಳಿಗೆ ಸಂಬಂಧಿಸಿದ 49,333 ಗ್ರಾಹಕ ದೂರುಗಳನ್ನು ಪರಿಹರಿಸುವ ಮೂಲಕ ಸಾಧಿಸಲಾಗಿದೆ.

A cartoon child pointing at somethingAI-generated content may be incorrect.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು 17 ಭಾಷೆಗಳಲ್ಲಿ ಲಭ್ಯವಿದ್ದು, ವಾಟ್ಸಾಪ್, ಎಸ್‌ಎಂಎಸ್‌, ಇಮೇಲ್, ಎನ್‌ಸಿಎಚ್‌ ಆಪ್, ವೆಬ್ ಪೋರ್ಟಲ್ ಮತ್ತು ಉಮಾಂಗ್ ಆಪ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸಮಗ್ರ ಕುಂದುಕೊರತೆ ನಿವಾರಣಾ ಕಾರ್ಯವಿಧಾನದಡಿ ದೂರುಗಳನ್ನು ಸಲ್ಲಿಸಲು ಗ್ರಾಹಕರಿಗೆ ಅವಕಾಶ ನೀಡುತ್ತದೆ. ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದ ತಮ್ಮ ಕಾಳಜಿಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಟೋಲ್-ಫ್ರೀ ಸಂಖ್ಯೆ 1915 ಅಥವಾ ಆನ್‌ಲೈನ್ ಪೋರ್ಟಲ್ ಅನ್ನು ಬಳಸಲು ಇಲಾಖೆಯು ಗ್ರಾಹಕರನ್ನು ಪ್ರೋತ್ಸಾಹಿಸುತ್ತದೆ.

3. ಜಾಗೋ ಗ್ರಾಹಕ್ ಜಾಗೋ ಪೋರ್ಟಲ್ ಮತ್ತು ಮೊಬೈಲ್ ಆಪ್ ವಂಚನೆಯ ಆನ್‌ಲೈನ್ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ಸುಧಾರಿತ ಡಿಜಿಟಲ್ ಪರಿಕರಗಳನ್ನು ಜಾರಿಗೆ ತಂದಿದೆ. 'ಐರಾವತ್' ಎಐ ಸೂಪರ್ ಕಂಪ್ಯೂಟರ್‌ನಲ್ಲಿ ನೈಜ-ಸಮಯದ ಬುದ್ಧಿವಂತ ಸೈಬರ್-ಫಿಸಿಕಲ್ ಸಿಸ್ಟಮ್‌ನ ಭಾಗವಾಗಿ ಅಭಿವೃದ್ಧಿಪಡಿಸಲಾದ ಈ ಪರಿಕರಗಳು, ಸಂಭಾವ್ಯ 'ಡಾರ್ಕ್ ಪ್ಯಾಟರ್ನ್'ಗಳನ್ನು ಗುರುತಿಸಲು ಪ್ಲಾಟ್‌ಫಾರ್ಮ್ ಪಠ್ಯ ಮತ್ತು ವಿನ್ಯಾಸವನ್ನು ವಿಶ್ಲೇಷಿಸುತ್ತವೆ. 'ಜಾಗೋ ಗ್ರಾಹಕ್ ಜಾಗೋ' ಆಪ್ ಪರಿಶೀಲಿಸಿದ ಇ-ಕಾಮರ್ಸ್ ಮಾಹಿತಿಯನ್ನು ನೀಡುತ್ತದೆ ಮತ್ತು ಸಂಭಾವ್ಯ ಅಸುರಕ್ಷಿತ ವೆಬ್‌ಸೈಟ್‌ಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸುತ್ತದೆ. 'ಜಾಗೃತಿ' ಆಪ್ ಗ್ರಾಹಕರಿಗೆ ಅನುಮಾನಾಸ್ಪದ ಯುಆರ್‌ಎಲ್‌ಗಳನ್ನು ನೇರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ವರದಿ ಮಾಡಲು ಅನುವು ಮಾಡಿಕೊಡುತ್ತದೆ. 'ಜಾಗೃತಿ' ಡ್ಯಾಶ್‌ಬೋರ್ಡ್ ಪ್ಲಾಟ್‌ಫಾರ್ಮ್‌ಗಳ ನೈಜ-ಸಮಯದ ಮೌಲ್ಯಮಾಪನಗಳನ್ನು ನೀಡುವ ಮೂಲಕ ಮೇಲ್ವಿಚಾರಣೆಯನ್ನು ಬೆಂಬಲಿಸುತ್ತದೆ. ಒಟ್ಟಾರೆಯಾಗಿ, ಈ ಪರಿಕರಗಳು ಮೇಲ್ವಿಚಾರಣೆಯನ್ನು ಹೆಚ್ಚಿಸುತ್ತವೆ, ತ್ವರಿತ ತಿದ್ದುಪಡಿ ಕ್ರಮಗಳನ್ನು ಸುಗಮಗೊಳಿಸುತ್ತವೆ ಮತ್ತು ಗ್ರಾಹಕ ಹಕ್ಕುಗಳ ರಕ್ಷಣೆಯನ್ನು ಬಲಪಡಿಸುತ್ತವೆ.

ಡಾರ್ಕ್ ಪ್ಯಾಟರ್ನ್‌ಗಳು ಎನ್ನುವುದು ಗ್ರಾಹಕರನ್ನು ಅವರು ಉದ್ದೇಶಿಸದ ಆಯ್ಕೆಗಳನ್ನು ಮಾಡುವಂತೆ ದಾರಿ ತಪ್ಪಿಸಲು ಅಥವಾ ಒತ್ತಡ ಹೇರಲು ಬಳಸುವ ವಿನ್ಯಾಸ ತಂತ್ರಗಳಾಗಿವೆ. ಸೋಗು ಹಾಕಿದ ಜಾಹೀರಾತುಗಳು, ಸುಳ್ಳು ತುರ್ತುಸ್ಥಿತಿ ಮತ್ತು ಹನಿ ಬೆಲೆ ಅಂತಹ ಪದ್ಧತಿಗಳನ್ನು ತಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಸಿಸಿಪಿಎ ಈ ಸಮಸ್ಯೆಯನ್ನು ಪರಿಹರಿಸಿದೆ, ಇದು ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.

4. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್‌)

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್, ಬಿಐಎಸ್‌ ಕಾಯ್ದೆ 2016 ರ ಅಡಿಯಲ್ಲಿ ಭಾರತದ ರಾಷ್ಟ್ರೀಯ ಮಾನದಂಡ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಾನದಂಡಗಳ ರೂಪೀಕರಣ, ಉತ್ಪನ್ನ ಪ್ರಮಾಣೀಕರಣ ಮತ್ತು ಗುಣಮಟ್ಟದ ಭರವಸೆಯಲ್ಲಿ ಕೇಂದ್ರ ಪಾತ್ರವನ್ನು ವಹಿಸುತ್ತದೆ. ಮಾನದಂಡಗಳ ಅಭಿವೃದ್ಧಿ, ಪ್ರಮಾಣೀಕರಣ ಮತ್ತು ಪರೀಕ್ಷೆಯಲ್ಲಿನ ತನ್ನ ಚಟುವಟಿಕೆಗಳ ಮೂಲಕ, ಬಿಐಎಸ್‌ ಸುರಕ್ಷಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳ ಲಭ್ಯತೆಗೆ ಕೊಡುಗೆ ನೀಡುತ್ತದೆ, ಗ್ರಾಹಕರ ಆರೋಗ್ಯದ ಅಪಾಯಗಳನ್ನು ತಗ್ಗಿಸುತ್ತದೆ, ರಫ್ತು ಸ್ಪರ್ಧಾತ್ಮಕತೆ ಮತ್ತು ಆಮದು ಬದಲಿಯನ್ನು ಬೆಂಬಲಿಸುತ್ತದೆ ಮತ್ತು ಮಾರುಕಟ್ಟೆಯಾದ್ಯಂತ ಉತ್ಪನ್ನದ ವಿಶೇಷಣಗಳಲ್ಲಿನ ಅನಗತ್ಯ ವ್ಯತ್ಯಾಸಗಳನ್ನು ತಡೆಯುತ್ತದೆ.

ಪ್ರಸ್ತುತ 22,300 ಕ್ಕೂ ಹೆಚ್ಚು ಭಾರತೀಯ ಮಾನದಂಡಗಳು ಜಾರಿಯಲ್ಲಿದ್ದು, ಅವುಗಳಲ್ಲಿ ಶೇಕಡಾ 94 ರಷ್ಟು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ (ಐಎಸ್‌ಒ ಮತ್ತು ಐಇಸಿ) ಹೊಂದಾಣಿಕೆ ಆಗಿವೆ. 2014 ರಿಂದ, ಕಡ್ಡಾಯ ಪ್ರಮಾಣೀಕರಣದ ವ್ಯಾಪ್ತಿಯು ಗಣನೀಯವಾಗಿ ವಿಸ್ತರಿಸಿದೆ; 14 ಗುಣಮಟ್ಟ ನಿಯಂತ್ರಣ ಆದೇಶಗಳ (QCOs) ಅಡಿಯಲ್ಲಿ ನಿಯಂತ್ರಿಸಲ್ಪಡುತ್ತಿದ್ದ 106 ಉತ್ಪನ್ನಗಳಿಂದ ಈಗ 191 ಕ್ಯೂಸಿಕ್ಯೂಗಳು ಮತ್ತು ಎರಡು ಸಮತಲ ಕ್ಯೂಸಿಕ್ಯೂಗಳ ಮೂಲಕ 773 ವಸ್ತುಗಳನ್ನು ನಿಯಂತ್ರಿಸಲಾಗುತ್ತಿದೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳ ಹಾಲ್‌ಮಾರ್ಕಿಂಗ್ - ಬಿಐಎಸ್‌ ಕೇರ್‌ ಆಪ್ ಬಿಐಎಸ್‌ ಕೇರ್‌ ಆಪ್ ಮೂಲಕ ಗ್ರಾಹಕರು ಕೇವಲ ಎಚ್‌ಯುಐಡಿ ಸಂಖ್ಯೆಯನ್ನು ನಮೂದಿಸುವ ಮೂಲಕ ಹಾಲ್‌ಮಾರ್ಕ್ ಮಾಡಿದ ಆಭರಣಗಳ ಶುದ್ಧತೆ, ಉತ್ಪನ್ನದ ಪ್ರಕಾರ ಮತ್ತು ಜ್ಯುವೆಲ್ಲರ್ ಹಾಗೂ ಹಾಲ್‌ಮಾರ್ಕಿಂಗ್ ಕೇಂದ್ರದ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ 12 ಭಾಷೆಗಳಲ್ಲಿ ಉಚಿತವಾಗಿ ಲಭ್ಯವಿರುವ ಈ ಆಪ್, ಬಳಕೆದಾರರಿಗೆ ಐಎಸ್‌ಐ ಗುರುತುಗಳನ್ನು ಪರಿಶೀಲಿಸಲು, ಪರವಾನಗಿ ಸಂಖ್ಯೆಗಳನ್ನು ಪರೀಕ್ಷಿಸಲು ಮತ್ತು ಅನುಸರಣೆ ಇಲ್ಲದ ಉತ್ಪನ್ನಗಳ ಬಗ್ಗೆ ದೂರುಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ. ಈ ಆಪ್ ಮಾಹಿತಿ ಆಧಾರಿತ ಖರೀದಿಗೆ ಅಮೂಲ್ಯವಾದ ಸಾಧನವಾಗಿದ್ದು, ರಾಷ್ಟ್ರವ್ಯಾಪಿ ಗ್ರಾಹಕರಿಗೆ ಸುರಕ್ಷಿತ ಉತ್ಪನ್ನಗಳು ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳು ಲಭ್ಯವಾಗುವಂತೆ ಮಾಡುವ ಬಿಐಎಸ್‌ ಪ್ರಯತ್ನಗಳನ್ನು ಬೆಂಬಲಿಸುತ್ತದೆ.

5. ನ್ಯಾಷನಲ್ ಟೆಸ್ಟ್ ಹೌಸ್

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಟೆಸ್ಟ್ ಹೌಸ್, ಭಾರತದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾಗಿದೆ. ರೈಲ್ವೆ ಮಂಡಳಿಯ ಅಡಿಯಲ್ಲಿ 1912 ರಲ್ಲಿ ಸ್ಥಾಪನೆಯಾದ ಇದು ವ್ಯಾಪಕ ಶ್ರೇಣಿಯ ಎಂಜಿನಿಯರಿಂಗ್ ವಸ್ತುಗಳು ಮತ್ತು ಸಿದ್ಧ ಉತ್ಪನ್ನಗಳ ಪರೀಕ್ಷೆ, ಮಾಪನಾಂಕ ನಿರ್ಣಯ, ಮೌಲ್ಯಮಾಪನ ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ವಿಶ್ವಾಸಾರ್ಹ ಪ್ರಯೋಗಾಲಯವಾಗಿ ಬೆಳೆದಿದೆ. ಎನ್‌ಟಿಎಚ್‌ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನದಂಡಗಳು ಹಾಗೂ ಗ್ರಾಹಕರ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಪರೀಕ್ಷಾ ಪ್ರಮಾಣಪತ್ರಗಳನ್ನು ನೀಡುತ್ತದೆ, ಇದು ಮೌಲ್ಯಮಾಪನದಲ್ಲಿ ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ. ಈ ಸಂಸ್ಥೆಯು ಉದ್ಯಮ, ವ್ಯಾಪಾರ ಮತ್ತು ಪ್ರಮಾಣೀಕರಣದಾದ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಸ್ಥಳೀಯ ಉತ್ಪಾದನೆಯ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಕೈಗಾರಿಕಾ ಸಂಶೋಧನೆ ಹಾಗೂ ಉತ್ಪಾದನೆಯ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ನ್ಯಾಷನಲ್ ಟೆಸ್ಟ್ ಹೌಸ್ ಡಿಜಿಟಲ್ ಪರಿಹಾರಗಳ ಅಳವಡಿಕೆಯ ಮೂಲಕ ತನ್ನ ಕಾರ್ಯಾಚರಣೆಯನ್ನು ಆಧುನೀಕರಿಸುತ್ತಿದೆ. ಹಸ್ತಚಾಲಿತ ದೋಷಗಳನ್ನು ಕಡಿಮೆ ಮಾಡಲು, ವರದಿ ನೀಡುವ ಸಮಯವನ್ನು ಕಡಿಮೆ ಮಾಡಲು ಮತ್ತು ಗುಣಮಟ್ಟದ ಪರೀಕ್ಷೆಗಳ ಪೂರ್ಣಗೊಳಿಸುವಿಕೆಯನ್ನು ವೇಗಗೊಳಿಸಲು ಲ್ಯಾಬೊರೇಟರಿ ಡೇಟಾ ಆಟೊಮೇಷನ್ ಸಿಸ್ಟಮ್ ಅನ್ನು ಪರಿಚಯಿಸಲಾಗುತ್ತಿದೆ, ಇದರಿಂದ ಒಟ್ಟಾರೆ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚುತ್ತದೆ. ಹೆಚ್ಚುವರಿಯಾಗಿ, ಹೊಸ ಮೊಬೈಲ್ ಅಪ್ಲಿಕೇಶನ್ ಉದ್ಯಮ ಮತ್ತು ಗ್ರಾಹಕರು ಪ್ರಯೋಗಾಲಯ ಸೇವೆಗಳನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಎನ್‌ಟಿಎಚ್‌ನ ಇತ್ತೀಚಿನ ಸಾಧನೆಯು ಅದರ ಬಲವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ; 2024-25ರಲ್ಲಿ ಮಾದರಿ ಪರೀಕ್ಷೆಯು ಶೇಕಡಾ 60.36 ರಷ್ಟು ಹೆಚ್ಚಳ ಕಂಡು 45,926 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಆದಾಯವು ಹಿಂದಿನ ವರ್ಷದ 29.66 ಕೋಟಿ ರೂ.ಗಳಿಂದ ಶೇಕಡಾ 49.89 ರಷ್ಟು ಏರಿಕೆಯಾಗಿ 44.45 ಕೋಟಿ ರೂ. ತಲುಪಿದೆ. 2025-26ರ ಆರ್ಥಿಕ ವರ್ಷಕ್ಕೆ 80 ಕೋಟಿ ರೂ. ಆದಾಯದ ಗುರಿಯನ್ನು ಹೊಂದಲಾಗಿದೆ.

6. “ಕಾನೂನು ಮಾಪನಶಾಸ್ತ್ರ ನಿಯಮಗಳು - ಇತ್ತೀಚಿನ ತಿದ್ದುಪಡಿಗಳು (2025)”

ಅಕ್ಟೋಬರ್ 2025 ರಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯು 'ಕಾನೂನು ಮಾಪನಶಾಸ್ತ್ರ (ಪ್ಯಾಕ್ ಮಾಡಿದ ಸರಕುಗಳು) ತಿದ್ದುಪಡಿ ನಿಯಮಗಳು, 2025' ಅನ್ನು ಅಧಿಸೂಚಿಸಿದೆ. ಇದರ ಪ್ರಕಾರ ವೈದ್ಯಕೀಯ ಸಾಧನಗಳ ಪ್ಯಾಕೇಜ್‌ಗಳು ಇನ್ನು ಮುಂದೆ 'ವೈದ್ಯಕೀಯ ಸಾಧನಗಳ ನಿಯಮಗಳು, 2017' ರಲ್ಲಿ ವಿವರಿಸಲಾದ ಲೇಬಲಿಂಗ್ ಅಗತ್ಯತೆಗಳನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿ ಅಕ್ಟೋಬರ್ 2025 ರಲ್ಲಿ, 'ಕಾನೂನು ಮಾಪನಶಾಸ್ತ್ರ (ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರ) ತಿದ್ದುಪಡಿ ನಿಯಮಗಳು, 2025' ಅನ್ನು ಅಧಿಸೂಚಿಸಲಾಗಿದ್ದು, ಪ್ರಾದೇಶಿಕ ಉಲ್ಲೇಖಿತ ಪ್ರಯೋಗಾಲಯಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳನ್ನು ಗುರುತಿಸುವ ಮೂಲಕ ಅನುಮೋದಿತ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಜಿಎಸ್‌ಟಿ ಸಂಬಂಧಿತ ಬೆಲೆ ಪರಿಷ್ಕರಣೆಗಳ ನಂತರದ ನಿಯಮ ಪಾಲನೆಗೆ ಬೆಂಬಲ ನೀಡಲು, ಉತ್ಪಾದಕರು ಮತ್ತು ಪ್ಯಾಕರ್‌ಗಳು ಅಸ್ತಿತ್ವದಲ್ಲಿರುವ ಪ್ಯಾಕೇಜಿಂಗ್ ಅನ್ನು ಮಾರ್ಚ್ 2026 ರವರೆಗೆ ಬಳಸಲು ಸರ್ಕಾರವು ಅನುಮತಿ ನೀಡಿದೆ. 2025 ರ ಸಡಿಲಿಕೆಗಳ ಅಡಿಯಲ್ಲಿ, ಅವರು ಪ್ಯಾಕೇಜ್‌ಗಳನ್ನು ಮರುರೂಪಿಸದೆಯೇ ಎಂಆರ್‌ಪಿಗಳನ್ನು ನವೀಕರಿಸಬಹುದು, ಇದು ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಜೊತೆಗೆ ನಿಯಂತ್ರಕ ಅನುಸರಣೆಯನ್ನು ಖಚಿತಪಡಿಸುತ್ತದೆ. ನವೆಂಬರ್ 2025 ರಲ್ಲಿ, ಇಲಾಖೆಯು 'ಕಾನೂನು ಮಾಪನಶಾಸ್ತ್ರ (ಪ್ಯಾಕ್ ಮಾಡಿದ ಸರಕುಗಳು) (ಎರಡನೇ) ತಿದ್ದುಪಡಿ ನಿಯಮಗಳು, 2025' ರ ಕರಡನ್ನು ಹೊರಡಿಸಿದ್ದು, ಆಮದು ಮಾಡಿಕೊಂಡ ಪ್ಯಾಕ್ ಮಾಡಿದ ಸರಕುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು 'ಮೂಲ ದೇಶ' ಆಧಾರಿತ ಹುಡುಕಾಟ ಮತ್ತು ವಿಂಗಡಣೆಯ ಫಿಲ್ಟರ್ ಅನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ಡಿಸೆಂಬರ್ 2025 ರಲ್ಲಿ, ಹೊಸ ತಿದ್ದುಪಡಿಯ ಮೂಲಕ ಫೆಬ್ರವರಿ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ಪಾನ್ ಮಸಾಲಾ ಪ್ಯಾಕೇಜ್‌ಗಳು, ಅವುಗಳ ಗಾತ್ರವನ್ನು ಲೆಕ್ಕಿಸದೆ, ಚಿಲ್ಲರೆ ಮಾರಾಟದ ಬೆಲೆ  ಮತ್ತು ಇತರ ಅಗತ್ಯ ಘೋಷಣೆಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಒಟ್ಟಾರೆಯಾಗಿ, ಈ ತಿದ್ದುಪಡಿಗಳು ನಿಯಂತ್ರಕ ಅಗತ್ಯತೆಗಳನ್ನು ಸುಗಮಗೊಳಿಸುತ್ತವೆ, ಹಿಂದಿನ ಅಸ್ಪಷ್ಟತೆಗಳನ್ನು ನಿವಾರಿಸುತ್ತವೆ ಮತ್ತು ವೈದ್ಯಕೀಯ ಸಾಧನಗಳ ಲೇಬಲಿಂಗ್, ಅಳತೆ ಪರಿಶೀಲನೆ ಮತ್ತು ಸರಕುಗಳ ಪ್ಯಾಕೇಜಿಂಗ್ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ. ಪರಿಶೀಲನಾ ಜಾಲವನ್ನು ವಿಸ್ತರಿಸುವ ಮೂಲಕ, ಬಹಿರಂಗಪಡಿಸುವಿಕೆಯ ನಿಯಮಗಳನ್ನು ಬಲಪಡಿಸುವ ಮೂಲಕ ಮತ್ತು ಬೆಲೆ ಪಾರದರ್ಶಕತೆಯನ್ನು ಬಿಗಿಗೊಳಿಸುವ ಮೂಲಕ, ಈ ಸುಧಾರಣೆಗಳು ಸಾಮೂಹಿಕವಾಗಿ ಸ್ಥಿರತೆ, ಹೊಣೆಗಾರಿಕೆ ಮತ್ತು ಗ್ರಾಹಕ ಸಂರಕ್ಷಣೆಯನ್ನು ಹೆಚ್ಚಿಸುತ್ತವೆ. ಇದಲ್ಲದೆ, ಈ ಸುಧಾರಣೆಗಳು ಹೆಚ್ಚು ವಿಶ್ವಾಸಾರ್ಹ ನಿಯಂತ್ರಕ ವಾತಾವರಣವನ್ನು ಬೆಂಬಲಿಸುತ್ತವೆ, ಇದು ಗ್ರಾಹಕರು ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ ಮತ್ತು ನ್ಯಾಯಯುತ ಮಾರುಕಟ್ಟೆ ಪದ್ಧತಿಗಳನ್ನು ಖಚಿತಪಡಿಸುತ್ತದೆ.

ಉಪಸಂಹಾರ

2025ರ ರಾಷ್ಟ್ರೀಯ ಗ್ರಾಹಕ ದಿನವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಭಾರತದ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. "ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ" ಎಂಬ ಘೋಷವಾಕ್ಯವು 'ಇ-ಜಾಗೃತಿ' ಮತ್ತು ಮೇಲ್ದರ್ಜೆಗೇರಿಸಲಾದ 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ'ಯಂತಹ ಡಿಜಿಟಲ್ ಕುಂದುಕೊರತೆ ನಿವಾರಣಾ ವೇದಿಕೆಗಳ ವಿಸ್ತರಣೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇವು ದೇಶಾದ್ಯಂತ ಗ್ರಾಹಕರಿಗೆ ನ್ಯಾಯದ ಲಭ್ಯತೆ, ಪಾರದರ್ಶಕತೆ ಮತ್ತು ಪ್ರಕರಣಗಳ ವಿಲೇವಾರಿ ದಕ್ಷತೆಯನ್ನು ಸುಧಾರಿಸಿವೆ. ಡಿಜಿಟಲ್ ಉದ್ಘಾಟನೆಗಳು, ಸಾಂಸ್ಥಿಕ ಸಹಯೋಗಗಳು, ಜಾಗೃತಿ ಉಪಕ್ರಮಗಳು ಮತ್ತು ನಾವೀನ್ಯತೆಗಳ ಗುರುತಿಸುವಿಕೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಗ್ರಾಹಕರ ಸಬಲೀಕರಣಕ್ಕಾಗಿ ಕೈಗೊಂಡ ಸಮನ್ವಯದ ಕ್ರಮಗಳನ್ನು ಉಲ್ಲೇಖಿಸುತ್ತವೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 2019, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ, ಗ್ರಾಹಕ ಕಲ್ಯಾಣ ನಿಧಿಯ ವಿಸ್ತರಣೆ ಮತ್ತು ಸುಲಭವಾಗಿ ಲಭ್ಯವಾಗುವ ಪರಿಹಾರ ವ್ಯವಸ್ಥೆಗಳ ಅಭಿವೃದ್ಧಿ ಸೇರಿದಂತೆ ಇಲ್ಲಿ ತೋರಿಸಲಾದ ಸುಧಾರಣೆಗಳು, ತಂತ್ರಜ್ಞಾನ ಆಧಾರಿತ ಮತ್ತು ಸ್ಪಂದನಾಶೀಲ ಗ್ರಾಹಕ ನ್ಯಾಯ ವ್ಯವಸ್ಥೆಯತ್ತ ಭಾರತವು ಸಾಗುತ್ತಿರುವುದನ್ನು ಪ್ರತಿಬಿಂಬಿಸುತ್ತವೆ.ಬಿಐಎಸ್‌, ನ್ಯಾಷನಲ್ ಟೆಸ್ಟ್ ಹೌಸ್ ಮತ್ತು ಕಾನೂನು ಮಾಪನಶಾಸ್ತ್ರದ ಚೌಕಟ್ಟಿನ ಮೂಲಕ ಸಾಧಿಸಿದ ಪ್ರಗತಿಯು ಗುಣಮಟ್ಟದ ಭರವಸೆ, ಪ್ರಮಾಣೀಕರಣ ಮತ್ತು ವ್ಯಾಪಾರದಲ್ಲಿನ ನಿಖರತೆಯನ್ನು ಮತ್ತಷ್ಟು ಬಲಪಡಿಸಿದೆ. ಒಟ್ಟಾರೆಯಾಗಿ, ಈ ಕ್ರಮಗಳು ನ್ಯಾಯಸಮ್ಮತವಾದ, ಪಾರದರ್ಶಕ ಮತ್ತು ಗ್ರಾಹಕ-ಕೇಂದ್ರಿತ ಪರಿಸರ ವ್ಯವಸ್ಥೆಯತ್ತ ಸ್ಥಿರವಾದ ಪ್ರಗತಿಯನ್ನು ಪ್ರದರ್ಶಿಸುತ್ತವೆ. ಅಲ್ಲದೆ, "ಜಾಗೃತ ಮತ್ತು ಸಬಲ ಗ್ರಾಹಕರು ಆರೋಗ್ಯಕರ ಹಾಗೂ ಸಮಾನ ಆರ್ಥಿಕತೆಯ ಕೇಂದ್ರಬಿಂದು" ಎಂಬ ಮೂಲ ಸಂದೇಶವನ್ನು ಇವು ಪುನರುಚ್ಚರಿಸುತ್ತವೆ.

References

Ministry of Consumer Affairs, Food & Public Distribution

Department of Consumer Affairs

https://consumeraffairs.gov.in/public/upload/files/1743657766_AR%202024-25_Eng_1744632582.pdf

 

https://consumeraffairs.gov.in/

https://doca.gov.in/ccpa/

https://e-jagriti.gov.in/

https://jagograhakjago.gov.in/

https://www.bis.gov.in/the-bureau/about-bis/?lang=en

https://consumeraffairs.gov.in/pages/legal-metrology-overview

https://consumeraffairs.gov.in/pages/national-test-house

 

PIB Press Releases

https://www.pib.gov.in/PressReleasePage.aspx?PRID=2157241

https://www.pib.gov.in/PressReleasePage.aspx?PRID=2190535&reg=3&lang=2

https://www.pib.gov.in/PressReleasePage.aspx?PRID=2179780&reg=3&lang=2

https://www.pib.gov.in/PressReleasePage.aspx?PRID=2087600&reg=3&lang=2

https://www.pib.gov.in/PressReleasePage.aspx?PRID=2187416&reg=3&lang=2

https://www.pib.gov.in/PressReleasePage.aspx?PRID=2088051&reg=3&lang=2

https://www.pib.gov.in/PressReleasePage.aspx?PRID=2087245&reg=3&lang=2

https://www.pib.gov.in/PressReleseDetailm.aspx?PRID=2077618&reg=3&lang=2

https://www.pib.gov.in/PressReleasePage.aspx?PRID=2178951&reg=3&lang=2

https://www.pib.gov.in/PressReleasePage.aspx?PRID=2111506&reg=3&lang=2

https://www.pib.gov.in/PressReleasePage.aspx?PRID=2198764&reg=3&lang=1

https://www.pib.gov.in/PressReleasePage.aspx?PRID=2183777

https://www.pib.gov.in/PressReleasePage.aspx?PRID=2184053

https://www.pib.gov.in/PressReleasePage.aspx?PRID=2168208

https://www.pib.gov.in/PressReleasePage.aspx?PRID=2188363

https://www.pib.gov.in/PressReleasePage.aspx?PRID=2198215

https://www.pib.gov.in/PressReleasePage.aspx?PRID=2165412&reg=3&lang=2

Click here to download PDF

 

*****

 

(Explainer ID: 156706) आगंतुक पटल : 160
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil , Malayalam