• Skip to Content
  • Sitemap
  • Advance Search
Economy

ಭಾರತ – ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ

ಭಾರತದ ಅತ್ಯಂತ ವೇಗವಾಗಿ ಮುಕ್ತಾಯಗೊಂಡ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಇದು ಒಂದಾಗಿದೆ.

Posted On: 22 DEC 2025 10:13PM

ಪ್ರಮುಖ ಮಾರ್ಗಸೂಚಿಗಳು

·  ಭಾರತೀಯ ರಫ್ತುಗಳ ಮೇಲೆ 100% ಸುಂಕದ ವಿನಾಯಿತಿ: ಈ ಒಪ್ಪಂದದ ಅಡಿಯಲ್ಲಿ ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ ಎಲ್ಲಾ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ.

·  15 ವರ್ಷಗಳಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಬದ್ಧತೆ: ಇದು ದೀರ್ಘಕಾಲದ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರವನ್ನು ಬಲಪಡಿಸುತ್ತದೆ.

·  ಕೃಷಿ ಮತ್ತು ಡೈರಿ ವಲಯದ ರಕ್ಷಣೆ: ಭಾರತವು ತನ್ನ ಪ್ರಮುಖ ಹಿತಾಸಕ್ತಿಗಳಾದ ಡೈರಿ ಮತ್ತು ಕೃಷಿ ಕ್ಷೇತ್ರಗಳನ್ನು ಸುರಕ್ಷಿತವಾಗಿರಿಸಿಕೊಂಡಿದೆ; ಜವಳಿ ಮತ್ತು ಚರ್ಮದಂತಹ ಕಾರ್ಮಿಕ ಪ್ರಧಾನ ಕ್ಷೇತ್ರಗಳಿಗೆ ಇದು ದೊಡ್ಡ ಗೆಲುವಾಗಿದೆ.

·  ಆರೋಗ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳು: ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಆರೋಗ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳ ಮೇಲಿನ ಅನುಬಂಧಕ್ಕೆ ಸಹಿ ಹಾಕಿದೆ.

·  ವಿದ್ಯಾರ್ಥಿಗಳ ಚಲನೆ ಮತ್ತು ಕೆಲಸದ ವೀಸಾ: ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪದವೀಧರರು ಮತ್ತು ನೈಪುಣ್ಯ ಹೊಂದಿದ ವೃತ್ತಿಪರರಿಗಾಗಿ 'ಪೋಸ್ಟ್ ಸ್ಟಡಿ ವರ್ಕ್ ವೀಸಾ' ಸೌಲಭ್ಯ; ಇದು 5,000 ನುರಿತ ಉದ್ಯೋಗಗಳಿಗೆ ಹೊಸ ವೀಸಾ ಮಾರ್ಗವನ್ನು ಮುಕ್ತಗೊಳಿಸುತ್ತದೆ.

ಪೀಠಿಕೆ

ಆರ್ಥಿಕ ಬೆಳವಣಿಗೆಯನ್ನು ಬಲಪಡಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನಮಾನವನ್ನು ಹೆಚ್ಚಿಸಲು ಭಾರತವು ತನ್ನ ಜಾಗತಿಕ ವ್ಯಾಪಾರ ಪಾಲುದಾರಿಕೆಯನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಆರು ಮುಕ್ತ ವ್ಯಾಪಾರ ಒಪ್ಪಂದಗಳಿಗೆ (ಎಫ್‌ಟಿಎ) ಸಹಿ ಹಾಕಿದ ನಂತರ (ಈ ತಿಂಗಳು ಒಮಾನ್ ದೇಶದೊಂದಿಗೆ ನಡೆದ ಒಪ್ಪಂದವು ಇತ್ತೀಚಿನದ್ದು), ಭಾರತ ಮತ್ತು ನ್ಯೂಜಿಲೆಂಡ್ ಈಗ ದೂರದೃಷ್ಟಿಯ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪೂರ್ಣಗೊಳಿಸಿವೆ. ಇದು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಒಪ್ಪಂದವು ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತೀಯ ಉತ್ಪನ್ನಗಳಿಗೆ ಅಭೂತಪೂರ್ವ ಸುಂಕ-ಮುಕ್ತ ಪ್ರವೇಶವನ್ನು ನೀಡುತ್ತದೆ, ಅದೇ ಸಮಯದಲ್ಲಿ ಭಾರತದ ಸೂಕ್ಷ್ಮ ವಲಯಗಳನ್ನು ರಕ್ಷಿಸುತ್ತದೆ ಮತ್ತು ಭಾರತದ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಒಳಗೊಳ್ಳುವ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಭಾರತ ಮತ್ತು ನ್ಯೂಜಿಲೆಂಡ್ ಮಾರ್ಚ್ 2025 ರಲ್ಲಿ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆಗಳನ್ನು ಘೋಷಿಸಿದವು. ಹಲವಾರು ಸುತ್ತಿನ ಮಾತುಕತೆಗಳ ನಂತರ, ಡಿಸೆಂಬರ್ 2025 ರಲ್ಲಿ ಈ ಒಪ್ಪಂದವು ಪೂರ್ಣಗೊಂಡಿತು. ಇದು ಭಾರತದ ಅತ್ಯಂತ ವೇಗವಾಗಿ ಮುಕ್ತಾಯಗೊಂಡ ಒಪ್ಪಂದಗಳಲ್ಲಿ ಒಂದಾಗಿದೆ. ಈ ಒಪ್ಪಂದವು ನ್ಯೂಜಿಲೆಂಡ್‌ಗೆ ಭಾರತದ ರಫ್ತುಗಳಿಗೆ ಮಾರುಕಟ್ಟೆ ಪ್ರವೇಶ ಮತ್ತು ಸುಂಕದ ಆದ್ಯತೆಗಳನ್ನು ಹೆಚ್ಚಿಸುತ್ತದೆ, ಜೊತೆಗೆ ವಿಶಾಲವಾದ ಓಷಿಯಾನಿಯಾ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಒಪ್ಪಂದವು ನುರಿತ ಕಾರ್ಯಪಡೆಯ ಪ್ರಮುಖ ಪೂರೈಕೆದಾರರಾಗಿ ಭಾರತ ಹೊರಹೊಮ್ಮಲು ಅವಕಾಶಗಳನ್ನು ಕಲ್ಪಿಸುತ್ತದೆ. ಇದರೊಂದಿಗೆ ಆಯುಷ್, ಯೋಗ ಶಿಕ್ಷಕರು, ಭಾರತೀಯ ಬಾಣಸಿಗರು ಮತ್ತು ಸಂಗೀತ ಶಿಕ್ಷಕರಂತಹ ಸೇವಾ ಕ್ಷೇತ್ರಗಳಲ್ಲಿ ಭವಿಷ್ಯದ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೆ, ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ಆರೋಗ್ಯ ಸೇವೆ, ಶಿಕ್ಷಣ ಮತ್ತು ನಿರ್ಮಾಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆಯುತ್ತದೆ.

A close-up of hands shaking

ಒಟ್ಟಾರೆಯಾಗಿ, ಈ ಒಪ್ಪಂದವು ಮುನ್ಸೂಚಿಸಬಹುದಾದ ಮತ್ತು ಪಾರದರ್ಶಕವಾದ ಚೌಕಟ್ಟನ್ನು ಸ್ಥಾಪಿಸುತ್ತದೆ. ಇದು ಮಾರುಕಟ್ಟೆಯ ಪ್ರವೇಶವನ್ನು ವಿಸ್ತರಿಸುತ್ತದೆ, ಸೇವಾ ವಲಯದ ವ್ಯಾಪಾರವನ್ನು ಹೆಚ್ಚಿಸುತ್ತದೆ, ವೃತ್ತಿಪರರ ಸಂಚಾರಕ್ಕೆ ಹಾದಿ ಮಾಡಿಕೊಡುತ್ತದೆ, ದೀರ್ಘಕಾಲದ ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಕೃಷಿ ಉತ್ಪಾದಕತೆಯನ್ನು ವೃದ್ಧಿಸುತ್ತದೆ.

ಭಾರತ – ನ್ಯೂಜಿಲೆಂಡ್: ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಾಲುದಾರಿಕೆಯು ಆರ್ಥಿಕ ವಾಸ್ತವತೆಗಳು ಮತ್ತು ಬಲವಾದ ಜನರಿಂದ ಜನರ ನಡುವಿನ ಸಂಬಂಧಗಳಿಂದ ರೂಪಿತವಾಗಿದೆ. ಪ್ರಸ್ತುತ, ಓಷಿಯಾನಿಯಾ ಪ್ರದೇಶದಲ್ಲಿ ನ್ಯೂಜಿಲೆಂಡ್ ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.

49,380 ಅಮೆರಿಕನ್ ಡಾಲರ್ ತಲಾದಾಯ ಹೊಂದಿರುವ ನ್ಯೂಜಿಲೆಂಡ್, ಓಷಿಯಾನಿಯಾ ಪ್ರದೇಶದ ಹೆಚ್ಚಿನ ಆದಾಯದ ಆರ್ಥಿಕತೆಗಳಲ್ಲಿ ಒಂದಾಗಿದೆ. 2024 ರಲ್ಲಿ, ನ್ಯೂಜಿಲೆಂಡ್‌ನ ಆಮದುಗಳು 47 ಬಿಲಿಯನ್ ಡಾಲರ್ ಆಗಿದ್ದರೆ, ರಫ್ತುಗಳು 42 ಬಿಲಿಯನ್ ಡಾಲರ್ ಆಗಿದ್ದವು. ನ್ಯೂಜಿಲೆಂಡ್ ವಾರ್ಷಿಕವಾಗಿ ತನ್ನ ಒಟ್ಟು ಜಿಡಿಪಿಯ ಸುಮಾರು 8% ರಷ್ಟನ್ನು ವಿದೇಶಗಳಲ್ಲಿ ಹೂಡಿಕೆ ಮಾಡುತ್ತದೆ. ಮಾರ್ಚ್ 2025 ರ ಹೊತ್ತಿಗೆ ಅದರ ಒಟ್ಟು ವಿದೇಶಿ ಹೂಡಿಕೆಯ ಮೌಲ್ಯವು 422.6 ಬಿಲಿಯನ್ ಡಾಲರ್ ಆಗಿದೆ.

ನ್ಯೂಜಿಲೆಂಡ್‌ನಲ್ಲಿ ಸುಮಾರು 3,00,000 ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ, ಇದು ಆ ದೇಶದ ಒಟ್ಟು ಜನಸಂಖ್ಯೆಯ ಸುಮಾರು 5% ಆಗಿದೆ. ಈ ಅನಿವಾಸಿ ಭಾರತೀಯರು ಸಾಂಸ್ಕೃತಿಕ ಮತ್ತು ಆರ್ಥಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಭಾರತೀಯ ಸರಕು ಹಾಗೂ ಸೇವೆಗಳಿಗೆ ಬೇಡಿಕೆ ಸೃಷ್ಟಿಸಲು ಸಹಾಯ ಮಾಡುತ್ತಿದ್ದಾರೆ.

ಈ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ-ಆರ್ಥಿಕ ಅಡಿಪಾಯದ ಮೇಲೆ ನಿರ್ಮಿತವಾಗಿದೆ:

  • ಸರಕು ವ್ಯಾಪಾರ: ಇದು 2023-24ರಲ್ಲಿ 873 ಮಿಲಿಯನ್ ಡಾಲರ್‌ನಿಂದ 2024-25ರಲ್ಲಿ 1.3 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, 49% ಪ್ರಗತಿ ದಾಖಲಿಸಿದೆ.
  • ನ್ಯೂಜಿಲೆಂಡ್‌ಗೆ ಸರಕು ರಫ್ತು: 2024-25ರಲ್ಲಿ 711 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, 32% ರಷ್ಟು ಧನಾತ್ಮಕ ಬೆಳವಣಿಗೆಯನ್ನು ತೋರಿಸಿದೆ.
  • ಸೇವಾ ವಲಯದ ವ್ಯಾಪಾರ: 2024 ರಲ್ಲಿ ನ್ಯೂಜಿಲೆಂಡ್‌ಗೆ ಭಾರತದ ಸೇವಾ ರಫ್ತುಗಳು 13% ರಷ್ಟು ಬೆಳೆದು 634 ಮಿಲಿಯನ್ ಡಾಲರ್‌ ತಲುಪಿವೆ. ಇದರಲ್ಲಿ ಪ್ರವಾಸೋದ್ಯಮ, ಐಟಿ  ಮತ್ತು ವ್ಯವಹಾರ ಸೇವೆಗಳು ಪ್ರಮುಖವಾಗಿವೆ.
  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು 2015-16ರಲ್ಲಿ 855 ಮಿಲಿಯನ್ ಡಾಲರ್‌ನಿಂದ 2024-25ರಲ್ಲಿ 1,298 ಮಿಲಿಯನ್ ಡಾಲರ್‌ಗೆ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತದ ರಫ್ತು 130% ರಷ್ಟು ಹೆಚ್ಚಿದ್ದರೆ, ಆಮದು ಕೇವಲ 7.21% ರಷ್ಟು ಮಾತ್ರ ಹೆಚ್ಚಾಗಿದೆ. 2024-25ರಲ್ಲಿ, ನ್ಯೂಜಿಲೆಂಡ್‌ನಿಂದ ಮಾಡಿಕೊಂಡ ಆಮದಿನಿಗಿಂತ ಭಾರತದಿಂದ ಅಲ್ಲಿಗೆ ಮಾಡಿದ ರಫ್ತು ಹೆಚ್ಚಾಗಿದ್ದು, ಆ ದೇಶದೊಂದಿಗೆ ಭಾರತವು ಧನಾತ್ಮಕ ವ್ಯಾಪಾರ ಕಾಯ್ದುಕೊಂಡಿದೆ.

A graph showing the trade of foreign tradeAI-generated content may be incorrect.

·  ಭಾರತೀಯ ರಫ್ತುಗಳ ಮೇಲೆ 100% ಸುಂಕ ವಿನಾಯಿತಿ: ಈ ಒಪ್ಪಂದವು ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ 100% ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ.

·  ಹೂಡಿಕೆ ಬದ್ಧತೆ: 15 ವರ್ಷಗಳ ಅವಧಿಯಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಬದ್ಧತೆಯು ದೀರ್ಘಕಾಲದ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರವನ್ನು ಬಲಪಡಿಸುತ್ತದೆ.

·  ಕೃಷಿ ಉತ್ಪಾದಕತೆ ಪಾಲುದಾರಿಕೆ: 'ಕೃಷಿ ಉತ್ಪಾದಕತೆ ಪಾಲುದಾರಿಕೆ'ಯ ಮೂಲಕ, ಈ ಒಪ್ಪಂದವು ರೈತರ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅವರನ್ನು ಜಾಗತಿಕ ಮೌಲ್ಯ ಸರಪಳಿಯಲ್ಲಿ ಸಂಯೋಜಿಸಲು ಅವರೊಂದಿಗೆ ಸಹಕರಿಸುತ್ತದೆ.

·  ಎಂಎಸ್‌ಎಂಇ ಮತ್ತು ಉದ್ಯೋಗಗಳಿಗೆ ಉತ್ತೇಜನ: ಜವಳಿ, ಉಡುಪು, ಚರ್ಮ, ಪಾದರಕ್ಷೆ, ರತ್ನ ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಕಾರ್ಮಿಕ ಪ್ರಧಾನ ಕ್ಷೇತ್ರಗಳಿಗೆ 'ಶೂನ್ಯ-ಸುಂಕ' ಪ್ರವೇಶ ನೀಡುವ ಮೂಲಕ ಈ ಒಪ್ಪಂದವು ಸಣ್ಣ ಕೈಗಾರಿಕೆಗಳಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ.

·  ಮಾರುಕಟ್ಟೆ ಪ್ರವೇಶದ ಕೊಡುಗೆ: ಭಾರತವು ತನ್ನ 70.03% ಸುಂಕದ ಸಾಲುಗಳಲ್ಲಿ ಮಾರುಕಟ್ಟೆ ಪ್ರವೇಶವನ್ನು ನೀಡಿದೆ, ಆದರೆ 29.97% ಸುಂಕದ ಸಾಲುಗಳನ್ನು ಒಪ್ಪಂದದಿಂದ ಹೊರಗಿಟ್ಟಿದೆ. ಇದರಲ್ಲಿ 30% ರಷ್ಟು ತಕ್ಷಣವೇ ರದ್ದಾದರೆ, ಉಳಿದವು ಹಂತ-ಹಂತವಾಗಿ ರದ್ದಾಗುತ್ತವೆ.

·  ಹೊರಗಿಡಲಾದ ನಿರ್ದಿಷ್ಟ ಉತ್ಪನ್ನಗಳು: ಡೈರಿ (ಹಾಲು, ಕ್ರೀಮ್, ಮೊಸರು, ಚೀಸ್ ಇತ್ಯಾದಿ), ಪ್ರಾಣಿ ಉತ್ಪನ್ನಗಳು (ಕುರಿ ಮಾಂಸದ ಹೊರತಾಗಿ), ತರಕಾರಿ ಉತ್ಪನ್ನಗಳು (ಈರುಳ್ಳಿ, ಕಡಲೆ, ಬಟಾಣಿ, ಜೋಳ, ಬಾದಾಮಿ ಇತ್ಯಾದಿ), ಸಕ್ಕರೆ, ಕೃತಕ ಜೇನುತುಪ್ಪ, ಎಣ್ಣೆಕಾಳುಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ರತ್ನ ಮತ್ತು ಆಭರಣಗಳು, ತಾಮ್ರ ಮತ್ತು ಅಲ್ಯೂಮಿನಿಯಂ ವಸ್ತುಗಳನ್ನು ರಕ್ಷಣಾತ್ಮಕ ದೃಷ್ಟಿಯಿಂದ ಈ ಒಪ್ಪಂದದಿಂದ ಹೊರಗಿಡಲಾಗಿದೆ.

·  ತಕ್ಷಣದ ಸುಂಕ ರದ್ದತಿ (30.00%): ಒಟ್ಟು ಸುಂಕದ ಸಾಲುಗಳಲ್ಲಿ ಶೇ. 30 ರಷ್ಟು ಉತ್ಪನ್ನಗಳ ಮೇಲೆ ತಕ್ಷಣವೇ ಸುಂಕ ರದ್ದಾಗುತ್ತದೆ; ಇವುಗಳಲ್ಲಿ ಮರ, ಉಣ್ಣೆ, ಕುರಿ ಮಾಂಸ ಮತ್ತು ಹಸಿ ಚರ್ಮ ಸೇರಿವೆ.

·  ಹಂತ-ಹಂತವಾದ ಸುಂಕ ರದ್ದತಿ (35.60%): ಶೇ. 35.60 ರಷ್ಟು ಉತ್ಪನ್ನಗಳ ಮೇಲಿನ ಸುಂಕವನ್ನು 3, 5, 7 ಮತ್ತು 10 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ರದ್ದುಗೊಳಿಸಲಾಗುತ್ತದೆ. ಇದರಲ್ಲಿ ಪೆಟ್ರೋಲಿಯಂ ತೈಲ, ಮಾಲ್ಟ್ ಸಾರ, ತರಕಾರಿ ಎಣ್ಣೆಗಳು ಮತ್ತು ಆಯ್ದ ಯಾಂತ್ರಿಕ ಯಂತ್ರೋಪಕರಣಗಳು ಸೇರಿವೆ.

·  ಸುಂಕದ ಕಡಿತ (4.37%): ಶೇ. 4.37 ರಷ್ಟು ಉತ್ಪನ್ನಗಳ ಮೇಲೆ ಸುಂಕವನ್ನು ಕಡಿಮೆ ಮಾಡಲಾಗುತ್ತದೆ. ಉದಾಹರಣೆಗೆ ವೈನ್, ಔಷಧೀಯ ಉತ್ಪನ್ನಗಳು, ಪಾಲಿಮರ್‌ಗಳು, ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು.

·  ಸುಂಕ ದರ ಕೋಟಾಗಳು (0.06%): ಕೇವಲ ಶೇ. 0.06 ರಷ್ಟು ಉತ್ಪನ್ನಗಳು ಸುಂಕ ದರ ಕೋಟಾದ (Tariff Rate Quotas) ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಜೇನುತುಪ್ಪ, ಸೇಬು, ಕಿವಿ ಹಣ್ಣು ಮತ್ತು ಅಲ್ಬುಮಿನ್ ಸೇರಿವೆ.

ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪ್ರಮುಖ ಲಕ್ಷಣಗಳು"

ಮಾರುಕಟ್ಟೆ ಪ್ರವೇಶ ಮತ್ತು ಸುಂಕ ವಿನಾಯಿತಿ

  • ನ್ಯೂಜಿಲೆಂಡ್ ತನ್ನ ಒಟ್ಟು 100% ಸುಂಕದ ಸಾಲುಗಳ ಮೇಲೆ (8,284 ಉತ್ಪನ್ನಗಳು) ಒಪ್ಪಂದ ಜಾರಿಗೆ ಬಂದ ತಕ್ಷಣದಿಂದಲೇ ಆಮದು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲು (ಶೂನ್ಯ ಸುಂಕ) ಒಪ್ಪಿಕೊಂಡಿದೆ.
  • ಪ್ರಸ್ತುತ ನ್ಯೂಜಿಲೆಂಡ್ ಭಾರತದ ಪ್ರಮುಖ ರಫ್ತು ಉತ್ಪನ್ನಗಳಾದ ಜವಳಿ/ಉಡುಪುಗಳು, ಚರ್ಮ ಮತ್ತು ಶಿರಸ್ತ್ರಾಣ, ಸೆರಾಮಿಕ್ಸ್, ಕಾರ್ಪೆಟ್‌ಗಳು, ಆಟೋಮೊಬೈಲ್ ಮತ್ತು ಬಿಡಿಭಾಗಗಳು ಸೇರಿದಂತೆ ಸುಮಾರು 450 ಉತ್ಪನ್ನಗಳ ಮೇಲೆ ಶೇಕಡಾ 10 ರಷ್ಟು ಸುಂಕವನ್ನು ವಿಧಿಸುತ್ತಿದೆ. ಇವುಗಳ ಮೇಲಿನ ಸರಾಸರಿ ಅನ್ವಯಿಕ ಸುಂಕವು (2025 ರಲ್ಲಿ ಶೇ. 2.2 ರಷ್ಟಿದೆ) ಒಪ್ಪಂದ ಜಾರಿಯಾದ ನಂತರ ಶೂನ್ಯವಾಗಲಿದೆ.

ಪ್ರಮುಖ ಲಾಭ ಪಡೆಯುವ ಕ್ಷೇತ್ರಗಳು

ಈ ಕೊಡುಗೆಯಿಂದ ಈ ಕೆಳಗಿನ ಕ್ಷೇತ್ರಗಳಿಗೆ ಹೆಚ್ಚಿನ ಲಾಭ ಸಿಗಲಿದೆ:

    • ಕಾರ್ಮಿಕ ಪ್ರಧಾನ ಕ್ಷೇತ್ರಗಳು: ಜವಳಿ ಮತ್ತು ಉಡುಪು, ಚರ್ಮ ಮತ್ತು ಪಾದರಕ್ಷೆಗಳು.
  • ಉದಯೋನ್ಮುಖ ಮತ್ತು ಮುಂದುವರಿದ ಎಂಜಿನಿಯರಿಂಗ್ ಕ್ಷೇತ್ರಗಳು: ಸಾರಿಗೆ/ಆಟೋಮೊಬೈಲ್, ಔಷಧೀಯ ಉತ್ಪನ್ನಗಳು, ಪ್ಲಾಸ್ಟಿಕ್ ಮತ್ತು ರಬ್ಬರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಯಂತ್ರೋಪಕರಣಗಳು, ಮೆಕ್ಯಾನಿಕಲ್ ಯಂತ್ರೋಪಕರಣಗಳು ಮತ್ತು ರಾಸಾಯನಿಕಗಳು.
    • ಕೃಷಿ ಉತ್ಪನ್ನಗಳು: ಹಣ್ಣು ಮತ್ತು ತರಕಾರಿಗಳು, ಕಾಫಿ, ಸಾಂಬಾರ ಪದಾರ್ಥಗಳು, ಧಾನ್ಯಗಳು ಮತ್ತು ಸಂಸ್ಕರಿಸಿದ ಆಹಾರಗಳು.
  • ದೇಶೀಯ ಉದ್ಯಮಗಳಿಗೆ ಬೆಂಬಲ: ಮರದ ದಿಮ್ಮಿಗಳು, ಕೋಕಿಂಗ್ ಕೋಲ್, ಕಬ್ಬಿಣ ಮತ್ತು ಕಬ್ಬಿಣೇತರ ಲೋಹಗಳ ತ್ಯಾಜ್ಯ ಮತ್ತು ಸ್ಕ್ರ್ಯಾಪ್‌ಗಳ ಆಮದಿನಿಂದ ಭಾರತೀಯ ಉದ್ಯಮಗಳಿಗೆ ಅನುಕೂಲವಾಗಲಿದೆ.

ಕೃಷಿ, ತಂತ್ರಜ್ಞಾನ ಸಹಕಾರ ಮತ್ತು ರೈತರ ಆದಾಯ ವೃದ್ಧಿ

  • ಭಾರತದ ರೈತರ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಕಿವಿ ಹಣ್ಣು, ಸೇಬು ಮತ್ತು ಜೇನುತುಪ್ಪಗಳ ಉತ್ಪಾದನೆಗಾಗಿ ವಿಶೇಷ 'ಕ್ರಿಯಾ ಯೋಜನೆ'ಗಳಿಗೆ ನ್ಯೂಜಿಲೆಂಡ್ ಒಪ್ಪಿಗೆ ನೀಡಿದೆ.
  • ಈ ಸಹಕಾರದ ಅಡಿಯಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ, ಸುಧಾರಿತ ನಾಟಿ ಸಾಮಗ್ರಿಗಳು, ಬೆಳೆಗಾರರ ಸಾಮರ್ಥ್ಯ ವೃದ್ಧಿ, ತಾಂತ್ರಿಕ ಬೆಂಬಲ, ಸುಗ್ಗಿಯ ನಂತರದ ನಿರ್ವಹಣೆ ಮತ್ತು ಆಹಾರ ಸುರಕ್ಷತೆಯಂತಹ ಸೌಲಭ್ಯಗಳು ಲಭ್ಯವಾಗಲಿವೆ.
  • ಪ್ರೀಮಿಯಂ ಸೇಬು ಬೆಳೆಗಾರರು ಮತ್ತು ಸುಸ್ಥಿರ ಜೇನು ಸಾಕಣೆ ಯೋಜನೆಗಳು ಭಾರತೀಯ ಉತ್ಪನ್ನಗಳ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಲಿವೆ.
  • ಬದಲಿಗೆ, ನ್ಯೂಜಿಲೆಂಡ್‌ನ ಆಯ್ದ ಕೃಷಿ ಉತ್ಪನ್ನಗಳಿಗೆ (ಸೇಬು, ಕಿವಿ ಹಣ್ಣು, ಮನುಕಾ ಜೇನುತುಪ್ಪ) ಭಾರತದ ಮಾರುಕಟ್ಟೆಯಲ್ಲಿ ಅವಕಾಶ ನೀಡಲಾಗುವುದು.
  • ಇದನ್ನು ಸುಂಕ ದರ ಕೋಟಾ ವ್ಯವಸ್ಥೆ, ಕನಿಷ್ಠ ಆಮದು ಬೆಲೆ ಮತ್ತು ಹಂಗಾಮಿ ಆಮದುಗಳ ಮೂಲಕ ನಿರ್ವಹಿಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗುವುದಲ್ಲದೆ, ಭಾರತೀಯ ರೈತರ ಹಿತಾಸಕ್ತಿಯನ್ನೂ ರಕ್ಷಿಸಲಾಗುತ್ತದೆ.
  • ಎಲ್ಲಾ ಆಮದು ಕೋಟಾಗಳನ್ನು ಕೃಷಿ-ತಂತ್ರಜ್ಞಾನ ಕ್ರಿಯಾ ಯೋಜನೆಗಳೊಂದಿಗೆ ಜೋಡಿಸಲಾಗಿದೆ ಮತ್ತು ಇವುಗಳನ್ನು ಜಂಟಿ ಕೃಷಿ ಉತ್ಪಾದಕತೆ ಮಂಡಳಿ ಮೇಲ್ವಿಚಾರಣೆ ಮಾಡುತ್ತದೆ.         

 

ಸರಕುಗಳ ಆಚೆಗಿನ ವರ್ಧಿತ ಅವಕಾಶಗಳು

ಸೇವೆಗಳು

  • ನ್ಯೂಜಿಲೆಂಡ್‌ನ ಅತ್ಯುತ್ತಮ ಕೊಡುಗೆ: ನ್ಯೂಜಿಲೆಂಡ್ 118 ಸೇವಾ ಕ್ಷೇತ್ರಗಳಲ್ಲಿ ಭಾರತಕ್ಕೆ ಬದ್ಧತೆಯನ್ನು ನೀಡಿದೆ ಮತ್ತು 139 ಕ್ಷೇತ್ರಗಳಲ್ಲಿ 'ಅತ್ಯಂತ ಪ್ರಿಯ ರಾಷ್ಟ್ರ' ಎಂಬ ಸ್ಥಾನಮಾನದ ಸೌಲಭ್ಯವನ್ನು ನೀಡಿದೆ.
  • ಆರೋಗ್ಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಅನುಬಂಧ: ಮೊದಲ ಬಾರಿಗೆ, ನ್ಯೂಜಿಲೆಂಡ್ ಆಯುರ್ವೇದ, ಯೋಗ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳ ವ್ಯಾಪಾರವನ್ನು ಸುಗಮಗೊಳಿಸಲು ಭಾರತದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದೆ.
  • ಈ ಐತಿಹಾಸಿಕ ನಿಬಂಧನೆಯು ಭಾರತದ ಆಯುಷ್ ಪದ್ಧತಿಗಳಿಗೆ ಜಾಗತಿಕ ಮನ್ನಣೆ ನೀಡುತ್ತದೆ, ವೈದ್ಯಕೀಯ ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ ಮತ್ತು ಭಾರತವನ್ನು ಆರೋಗ್ಯ ಮತ್ತು ಕ್ಷೇಮದ ಜಾಗತಿಕ ಕೇಂದ್ರವನ್ನಾಗಿ ಮಾಡುತ್ತದೆ. ಇದು ನ್ಯೂಜಿಲೆಂಡ್‌ನ 'ಮಾವೊರಿ' (Maori) ಆರೋಗ್ಯ ಪದ್ಧತಿಗಳ ಜೊತೆಗೆ ಭಾರತದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಗಳಿಗೆ ಪ್ರಮುಖ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ.

ವಲಸೆ ಮತ್ತು ಶಿಕ್ಷಣ

  • ವಿದ್ಯಾರ್ಥಿಗಳ ವಲಸೆ: ನ್ಯೂಜಿಲೆಂಡ್ ಯಾವುದೇ ದೇಶದೊಂದಿಗೆ ಮೊದಲ ಬಾರಿಗೆ 'ವಿದ್ಯಾರ್ಥಿಗಳ ವಲಸೆ ಮತ್ತು ವ್ಯಾಸಂಗದ ನಂತರದ ಕೆಲಸದ ವೀಸಾ' ಕುರಿತಾದ ಅನುಬಂಧಕ್ಕೆ ಸಹಿ ಹಾಕಿದೆ. ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ವಾರಕ್ಕೆ 20 ಗಂಟೆಗಳವರೆಗೆ ಕೆಲಸ ಮಾಡಬಹುದು (ಭವಿಷ್ಯದಲ್ಲಿ ನೀತಿಗಳು ಬದಲಾದರೂ ಇದು ಮುಂದುವರಿಯಲಿದೆ). ವ್ಯಾಸಂಗದ ನಂತರದ ಕೆಲಸದ ವೀಸಾ ಅವಧಿ: ಎಸ್‌ಟಿಎಎಂ ಪದವಿ (3 ವರ್ಷ), ಸ್ನಾತಕೋತ್ತರ ಪದವಿ (3 ವರ್ಷದವರೆಗೆ) ಮತ್ತು ಪಿಎಚ್‌ಡಿ (4 ವರ್ಷದವರೆಗೆ).
  • ವೃತ್ತಿಪರ ಮಾರ್ಗಗಳು: ಭಾರತಕ್ಕೆ ಆಸಕ್ತಿಯಿರುವ ಕ್ಷೇತ್ರಗಳಲ್ಲಿ ನುರಿತ ಭಾರತೀಯರಿಗಾಗಿ ಪ್ರತಿ ವರ್ಷ 5,000 ವೀಸಾಗಳ ಕೋಟಾ ನಿಗದಿಪಡಿಸಲಾಗಿದೆ.ಇದರಲ್ಲಿ ಆಯುಷ್ ವೈದ್ಯರು, ಯೋಗ ಬೋಧಕರು, ಭಾರತೀಯ ಬಾಣಸಿಗರು ಮತ್ತು ಸಂಗೀತ ಶಿಕ್ಷಕರಂತಹ ಭಾರತದ ಸಾಂಪ್ರದಾಯಿಕ ವೃತ್ತಿಗಳಿಗೆ ವಿಶೇಷ ಅವಕಾಶವಿದೆ.ಇದರೊಂದಿಗೆ ಐಟಿ, ಎಂಜಿನಿಯರಿಂಗ್, ಆರೋಗ್ಯ ಸೇವೆ, ಶಿಕ್ಷಣ ಮತ್ತು ನಿರ್ಮಾಣ ಕ್ಷೇತ್ರಗಳಿಗೂ ಹೆಚ್ಚಿನ ಅವಕಾಶ ನೀಡಲಾಗಿದೆ.
  • ವರ್ಕಿಂಗ್ ಹಾಲಿಡೇ ವೀಸಾ: ಪ್ರತಿ ವರ್ಷ 1,000 ಯುವ ಭಾರತೀಯರು 12 ತಿಂಗಳ ಅವಧಿಗೆ ನ್ಯೂಜಿಲೆಂಡ್‌ಗೆ ಮಲ್ಟಿಪಲ್ ಎಂಟ್ರಿ ವೀಸಾದಡಿ ಭೇಟಿ ನೀಡಬಹುದು.
  • ಈ ನಿಬಂಧನೆಗಳು ಭಾರತೀಯ ಯುವಕರು ಮತ್ತು ವೃತ್ತಿಪರರಿಗೆ ಜಾಗತಿಕ ಮಟ್ಟದ ಅನುಭವವನ್ನು ಪಡೆಯಲು ಅಭೂತಪೂರ್ವ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ.

ಹೂಡಿಕೆ ಮತ್ತು ಆರ್ಥಿಕ ಸಹಕಾರ

ನೇರ ವಿದೇಶಿ ಹೂಡಿಕೆ ಬದ್ಧತೆ: ದೀರ್ಘಕಾಲದ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ, ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.

ಸಾವಯವ ಪ್ರಾಥಮಿಕ ಉತ್ಪನ್ನಗಳು: ಸಾವಯವ ಪ್ರಮಾಣೀಕರಣದ ಪರಸ್ಪರ ಮಾನ್ಯತೆಗೆ ಸಂಬಂಧಿಸಿದಂತೆ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ.

ಎಂಎಸ್‌ಎಂಇ ಸಹಕಾರ: ಸಣ್ಣ ಉದ್ದಿಮೆಗಳು ವ್ಯಾಪಾರ ಸಂಬಂಧಿತ ಮಾಹಿತಿ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಸುಲಭವಾಗಿ ಪ್ರವೇಶಿಸಲು ನೆರವಾಗುವಂತೆ ಸಾಂಸ್ಥಿಕ ಸಂಪರ್ಕಗಳನ್ನು ಕಲ್ಪಿಸಲಾಗುವುದು.

ತಾಂತ್ರಿಕ ನೆರವು: ಆಯುಷ್, ಆಡಿಯೋ ವಿಶುವಲ್ ಉದ್ಯಮಗಳು, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳಲ್ಲಿ ಸಹಕಾರ ನೀಡಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಜಾಗತಿಕ ಕ್ಷೇಮ ಕೇಂದ್ರವಾಗಿ ಭಾರತ: ಈ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಭಾರತದ ಆಯುಷ್ ಪದ್ಧತಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುತ್ತದೆ, ವೈದ್ಯಕೀಯ ಮೌಲ್ಯದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನಾಗಿ ರೂಪಿಸುತ್ತದೆ.

ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಜ್ಞಾನ

  • ಆಯುಷ್ ಸಹಕಾರ: ಆಯುಷ್ ಮತ್ತು ಭಾರತೀಯ ಸಾಂಪ್ರದಾಯಿಕ ಜ್ಞಾನದ ಕುರಿತು ವಿಶೇಷ ಸಹಕಾರ ನೀಡಲು ಉಭಯ ದೇಶಗಳು ಒಪ್ಪಿಕೊಂಡಿವೆ.
  • ಮಾವೊರಿ ಸಮುದಾಯದೊಂದಿಗೆ ಒಡನಾಟ: ಸಾಂಸ್ಕೃತಿಕ ವಿನಿಮಯ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸಲು ನ್ಯೂಜಿಲೆಂಡ್‌ನ ಸ್ಥಳೀಯ 'ಮಾವೊರಿ' ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದು ಭಾರತದ ಸಾಂಸ್ಕೃತಿಕ ಪ್ರಭಾವವನ್ನು (Soft Power) ಮತ್ತು ಪರಂಪರೆಯ ಜಾಗತಿಕ ಮನ್ನಣೆಯನ್ನು ಬಲಪಡಿಸುತ್ತದೆ.

ನಿಯಂತ್ರಕ ಮತ್ತು ಸಾಂಸ್ಥಿಕ ನಿಬಂಧನೆಗಳು

  • ಔಷಧೀಯ ಮತ್ತು ವೈದ್ಯಕೀಯ ಉಪಕರಣಗಳು: ತ್ವರಿತ ನಿಯಂತ್ರಕ ಅನುಮೋದನೆಗಳು ಮತ್ತು ವಿಶ್ವಾಸಾರ್ಹ ನಿಯಂತ್ರಕರಿಂದ (ಅಮೆರಿಕ, ಯುರೋಪಿಯನ್ ಒಕ್ಕೂಟ, ಯುಕೆ, ಕೆನಡಾ) ತಪಾಸಣೆಗಳ ಮಾನ್ಯತೆಗಾಗಿ ವಿಶೇಷ ಅನುಬಂಧಗಳನ್ನು ಸೇರಿಸಲಾಗಿದೆ.
  • ಬೌದ್ಧಿಕ ಆಸ್ತಿ ಹಕ್ಕುಗಳು: ಭಾರತದ ಭೌಗೋಳಿಕ ಸೂಚಕಗಳಿಗೆ ಯುರೋಪಿಯನ್ ಒಕ್ಕೂಟದ ಮಟ್ಟದ ರಕ್ಷಣೆಯನ್ನು ನೀಡಲು ನ್ಯೂಜಿಲೆಂಡ್ ತನ್ನ ಕಾನೂನುಗಳನ್ನು 18 ತಿಂಗಳೊಳಗೆ ತಿದ್ದುಪಡಿ ಮಾಡುವ ಬದ್ಧತೆಯನ್ನು ತೋರಿದೆ.
  • ಸುಂಕ ಮತ್ತು ವ್ಯಾಪಾರ ಸುಗಮಗೊಳಿಸುವಿಕೆ: ಮುಂಗಡ ತೀರ್ಪುಗಳು, ಎಲೆಕ್ಟ್ರಾನಿಕ್ ದಾಖಲಾತಿ ಮತ್ತು ವೇಗದ ಕಸ್ಟಮ್ಸ್ ಕ್ಲಿಯರೆನ್ಸ್ (48 ಗಂಟೆಗಳ ಒಳಗೆ, ಹಾಗೂ ಬೇಗನೆ ಹಾಳಾಗುವ ವಸ್ತುಗಳಿಗೆ 24 ಗಂಟೆಗಳ ಒಳಗೆ) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
  • ಮೂಲದ ನಿಯಮಗಳು: ಸೌಲಭ್ಯಗಳ ದುರುಪಯೋಗವನ್ನು ತಡೆಯಲು ಮತ್ತು ಆದ್ಯತೆಯ ಪ್ರವೇಶದ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಬಲಿಷ್ಠವಾದ ಚೌಕಟ್ಟನ್ನು ರೂಪಿಸಲಾಗಿದೆ.

ಮುಂದಿನ ಹಾದಿ

  • ಪಾರದರ್ಶಕತೆ ಮತ್ತು ಪ್ರಕಟಣೆ: ಉಭಯ ದೇಶಗಳ ಪರಸ್ಪರ ಒಪ್ಪಂದಕ್ಕೆ ಒಳಪಟ್ಟು ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ, ಅಧಿಕೃತ ಜಂಟಿ ಘೋಷಣೆಯ ನಂತರ ನಿಗದಿತ ದಿನಾಂಕದಂದು ಮಾತುಕತೆ ನಡೆಸಲಾದ ಒಪ್ಪಂದದ ಪಠ್ಯಗಳನ್ನು ಪ್ರಕಟಿಸಬಹುದು.
  • ಸಹಿ ಮತ್ತು ಜಾರಿ: ಎರಡೂ ದೇಶಗಳಲ್ಲಿನ ಆಂತರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಅನುಮೋದನೆಯ ನಂತರ ಈ ಒಪ್ಪಂದವು ಜಾರಿಗೆ ಬರಲಿದ್ದು, ಮುಂದಿನ ವರ್ಷದೊಳಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ.

ವಲಯವಾರು ಮುಖ್ಯಾಂಶಗಳು

ಶೂನ್ಯ ಸುಂಕದ ಪ್ರವೇಶ: ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ವ್ಯಾಪಕ ಶ್ರೇಣಿಯ ವಲಯಗಳಲ್ಲಿ ಸುಂಕ ಮುಕ್ತ ಅಥವಾ ಆದ್ಯತೆಯ ಪ್ರವೇಶವನ್ನು ಖಚಿತಪಡಿಸುತ್ತದೆ. ಆರ್ಥಿಕ ಬೆಳವಣಿಗೆ: ಈ ಲಾಭಗಳು ಭಾರತದ ರಫ್ತಿಗೆ ಉತ್ತೇಜನ ನೀಡುವ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಓಷಿಯಾನಿಯಾ ಪ್ರದೇಶದಲ್ಲಿ ಭಾರತೀಯ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

A diagram of an enhanced market access across sectors

ವಲಯ

ಭಾರತದ ರಫ್ತು ವಿವರಗಳು

ಸುಂಕದ ವ್ಯಾಪ್ತಿ

ಪ್ರಭಾವ ಮತ್ತು ಅವಕಾಶಗಳು

ಕೃಷಿ

2024–25ರಲ್ಲಿ 51.8 ಬಿಲಿಯನ್ ಯುಎಸ್‌ಡಿ (7.3% ಬೆಳವಣಿಗೆ).

1,379 ಸುಂಕದ ಸಾಲುಗಳು (ಒಟ್ಟು ಉತ್ಪನ್ನಗಳ 17%).

ಗರಿಷ್ಠ 5% ಇದ್ದ ಸುಂಕ ರದ್ದತಿ. ಹಣ್ಣು, ತರಕಾರಿ, ಕಾಫಿ, ಚಹಾ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತಿಗೆ ಹೆಚ್ಚಿನ ಜಾಗತಿಕ ಸ್ಪರ್ಧಾತ್ಮಕತೆ ದೊರೆಯಲಿದೆ.

ಸಾಗರ ಉತ್ಪನ್ನಗಳು

ಹಣಕಾಸು ವರ್ಷ25 ರಲ್ಲಿ 7.0 ಬಿಲಿಯನ್ ಯುಎಸ್‌ಡಿ. ನ್ಯೂಜಿಲೆಂಡ್‌ಗೆ ರಫ್ತು 15.89 ಮಿಲಿಯನ್ ಯುಎಸ್‌ಡಿ ಗೆ ಏರಿಕೆ.

363 ಸುಂಕದ ಸಾಲುಗಳು (ಒಟ್ಟು 4.4%).

ಈ ಮೊದಲು ಇದ್ದ 5% ಸುಂಕ ಈಗ ಶೂನ್ಯಕ್ಕೆ ಇಳಿಕೆಯಾಗಿದೆ. ಇದು ಭಾರತೀಯ ಸಮುದ್ರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿ.

ಜವಳಿ ಮತ್ತು ಉಡುಪು

2024–25ರಲ್ಲಿ 36.9 ಬಿಲಿಯನ್ ಯುಎಸ್‌ಡಿ. ನ್ಯೂಜಿಲೆಂಡ್‌ಗೆ ರಫ್ತು 103.14 ಮಿಲಿಯನ್ ಯುಎಸ್‌ಡಿ ಗೆ ಏರಿಕೆ.

1,057 ಸುಂಕದ ಸಾಲುಗಳು (ಒಟ್ಟು 13%).

ಈ ಮೊದಲು ಇದ್ದ 10% ಗರಿಷ್ಠ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರಿಂದ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಲಿದೆ.

ಎಂಜಿನಿಯರಿಂಗ್ ಕ್ಷೇತ್ರ

ಹಣಕಾಸು ವರ್ಷ25 ರಲ್ಲಿ 77.5 ಬಿಲಿಯನ್ ಯುಎಸ್‌ಡಿ (20.3% ಬೆಳವಣಿಗೆ). ನ್ಯೂಜಿಲೆಂಡ್‌ಗೆ ರಫ್ತು 68.26 ಮಿಲಿಯನ್ ಯುಎಸ್‌ಡಿ ಗೆ ಏರಿಕೆ.

1,396 ಸುಂಕದ ಸಾಲುಗಳು (ಒಟ್ಟು 16.9%).

ಈ ಮೊದಲು ಇದ್ದ 10% ಸರಾಸರಿ ಸುಂಕ ರದ್ದತಿಯಾಗಿದೆ. ನ್ಯೂಜಿಲೆಂಡ್‌ನ 11 ಬಿಲಿಯನ್ ಡಾಲರ್ ಎಂಜಿನಿಯರಿಂಗ್ ಆಮದು ಮಾರುಕಟ್ಟೆಯಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ.

ಲೇದರ್‌ ಮತ್ತು ಪಾದರಕ್ಷೆ

2024–25ರಲ್ಲಿ 5.5 ಬಿಲಿಯನ್ ಯುಎಸ್‌ಡಿ. ನ್ಯೂಜಿಲೆಂಡ್‌ಗೆ ರಫ್ತು 8.52 ಮಿಲಿಯನ್ ಯುಎಸ್‌ಡಿ.

181 ಸುಂಕದ ಸಾಲುಗಳು (ಪಾದರಕ್ಷೆ ಮತ್ತು ಬಿಡಿಭಾಗಗಳು).

10% ಇದ್ದ ಗರಿಷ್ಠ ಸುಂಕ ಈಗ ಶೂನ್ಯವಾಗಿದೆ. ಚರ್ಮದ ಬ್ಯಾಗ್‌ಗಳು, ಬೆಲ್ಟ್‌ಗಳು ಮತ್ತು ಪಾದರಕ್ಷೆಗಳ ರಫ್ತಿಗೆ ಹೆಚ್ಚಿನ ಲಾಭವಾಗಲಿದೆ.

ಔಷಧೀಯ ಕ್ಷೇತ್ರ

2024–25ರಲ್ಲಿ 24.5 ಬಿಲಿಯನ್ ಯುಎಸ್‌ಡಿ (10.8% ಬೆಳವಣಿಗೆ). ನ್ಯೂಜಿಲೆಂಡ್‌ಗೆ ರಫ್ತು 57.52 ಮಿಲಿಯನ್ ಯುಎಸ್‌ಡಿ.

90 ಸುಂಕದ ಸಾಲುಗಳು.

ಈ ಮೊದಲು ಇದ್ದ 5% ಗರಿಷ್ಠ ಸುಂಕ ಈಗ ಶೂನ್ಯಕ್ಕೆ ಇಳಿಕೆಯಾಗಿದೆ. ಇದು ಭಾರತದ ಔಷಧ ರಫ್ತನ್ನು ವೇಗಗೊಳಿಸಲಿದೆ.

ಪ್ಲಾಸ್ಟಿಕ್ ಮತ್ತು ರಬ್ಬರ್

ಹಣಕಾಸು ವರ್ಷ25 ರಲ್ಲಿ 13 ಬಿಲಿಯನ್ ಯುಎಸ್‌ಡಿ. ನ್ಯೂಜಿಲೆಂಡ್‌ಗೆ ರಫ್ತು 23.66 ಮಿಲಿಯನ್ ಯುಎಸ್‌ಡಿ ಗೆ ಏರಿಕೆ.

397 ಸುಂಕದ ಸಾಲುಗಳು (ಒಟ್ಟು 4.8%).

10% ವರೆಗಿದ್ದ ಸರಾಸರಿ ಸುಂಕವನ್ನು ರದ್ದುಗೊಳಿಸಲಾಗಿದೆ. ಇದು ಭಾರತದ ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳ ರಫ್ತು ಹೆಚ್ಚಿಸಲು ಪೂರಕವಾಗಿದೆ.

ಭಾರತದ ಜಾಗತಿಕ ವ್ಯಾಪಾರ ಜಾಲಗಳು

ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಭಾರತೀಯ ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ರೂಪಿಸಲಾಗಿದೆ. ಇದು ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ಒಪ್ಪಂದವಾಗಿದ್ದು, ಇದರಲ್ಲಿ ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆದಾರರ ರಕ್ಷಣೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕೆಲವು ಜವಾಬ್ದಾರಿಗಳಿಗೆ ದೇಶಗಳು ಸಮ್ಮತಿಸುತ್ತವೆ.

ಇತರ ದೇಶಗಳೊಂದಿಗಿನ ಭಾರತದ ಎಫ್‌ಟಿಎಗಳು ಸುಂಕಗಳನ್ನು ಕಡಿಮೆ ಮಾಡುವ ಅಥವಾ ರದ್ದುಗೊಳಿಸುವ ಮೂಲಕ ಮತ್ತು ಸರಕು ಹಾಗೂ ಸೇವೆಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತವೆ. ಅವು ಬೌದ್ಧಿಕ ಆಸ್ತಿ ರಕ್ಷಣೆಯನ್ನು ಬಲಪಡಿಸುತ್ತವೆ, ಗುಣಮಟ್ಟದ ಮಾನದಂಡಗಳ ನಿಗದಿ ಮತ್ತು ಸರ್ಕಾರದ ಖರೀದಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ ಮತ್ತು ಹೂಡಿಕೆದಾರರಿಗೆ ನ್ಯಾಯಯುತವಾದ ಚಿಕಿತ್ಸೆಯನ್ನು ಖಾತರಿಪಡಿಸುತ್ತವೆ. ಒಟ್ಟಾರೆಯಾಗಿ, ಈ ಒಪ್ಪಂದಗಳು ಗಡಿಯಾಚೆ ಕಾರ್ಯನಿರ್ವಹಿಸುವ ವ್ಯವಹಾರಗಳಿಗೆ ಹೆಚ್ಚು ಮುನ್ಸೂಚಿತ ಮತ್ತು ಸಮಾನ ಅವಕಾಶವಿರುವ ವೇದಿಕೆಯನ್ನು ಸೃಷ್ಟಿಸುತ್ತವೆ.

ತನ್ನ ಜಾಗತಿಕ ಆರ್ಥಿಕ ಹೆಜ್ಜೆಗುರುತಿನ ನಿರಂತರ ವಿಸ್ತರಣೆಯೊಂದಿಗೆ, ಸುಧಾರಿತ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕಾಗಿ ಭಾರತವು ಹೆಚ್ಚಾಗಿ ಇಷ್ಟಪಡುವ ಪಾಲುದಾರನಾಗಿ ಹೊರಹೊಮ್ಮಿದೆ.

  • ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ, 2025
  • ಭಾರತ-ಯುಕೆ  ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ, 2025
  • ಭಾರತ-ಎಫ್‌ಟಿಎ (ಸ್ವಿಟ್ಜರ್ಲೆಂಡ್, ನಾರ್ವೆ, ಐಸ್‌ಲ್ಯಾಂಡ್ ಮತ್ತು ಲಿಚ್ಟೆನ್‌ಸ್ಟೈನ್) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ, 2024
  • ಭಾರತ-ಯುನೈಟೆಡ್ ಅರಬ್ ಎಮಿರೇಟ್ಸ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ, 2022
  • ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ, 2022
  • ಭಾರತ-ಮಾರಿಷಸ್ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ, 2021

ಭಾರತದ ಜಾಗತಿಕ ವ್ಯಾಪಾರ ಜಾಲಗಳು

 

ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಭಾರತೀಯ ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ರೂಪಿಸಲಾಗಿದೆ. ಇದು ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ಒಪ್ಪಂದವಾಗಿದ್ದು, ಇದರಲ್ಲಿ ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆದಾರರ ರಕ್ಷಣೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕೆಲವು ಜವಾಬ್ದಾರಿಗಳಿಗೆ ದೇಶಗಳು ಸಮ್ಮತಿಸುತ್ತವೆ.

ಇತರ ದೇಶಗಳೊಂದಿಗಿನ ಭಾರತದ ಎಫ್‌ಟಿಎಗಳು ಸುಂಕಗಳನ್ನು ಕಡಿಮೆ ಮಾಡುವ ಅಥವಾ ರದ್ದುಗೊಳಿಸುವ ಮೂಲಕ ಮತ್ತು ಸರಕು ಹಾಗೂ ಸೇವೆಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತವೆ. ಅವು ಬೌದ್ಧಿಕ ಆಸ್ತಿ ರಕ್ಷಣೆಯನ್ನು ಬಲಪಡಿಸುತ್ತವೆ, ಗುಣಮಟ್ಟದ ಮಾನದಂಡಗಳ ನಿಗದಿ ಮತ್ತು ಸರ್ಕಾರದ ಖರೀದಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ ಮತ್ತು ಹೂಡಿಕೆದಾರರಿಗೆ ನ್ಯಾಯಯುತವಾದ ಚಿಕಿತ್ಸೆಯನ್ನು ಖಾತರಿಪಡಿಸುತ್ತವೆ. ಒಟ್ಟಾರೆಯಾಗಿ, ಈ ಒಪ್ಪಂದಗಳು ಗಡಿಯಾಚೆ ಕಾರ್ಯನಿರ್ವಹಿಸುವ ವ್ಯವಹಾರಗಳಿಗೆ ಹೆಚ್ಚು ಮುನ್ಸೂಚಿತ ಮತ್ತು ಸಮಾನ ಅವಕಾಶವಿರುವ ವೇದಿಕೆಯನ್ನು ಸೃಷ್ಟಿಸುತ್ತವೆ.

ತನ್ನ ಜಾಗತಿಕ ಆರ್ಥಿಕ ಹೆಜ್ಜೆಗುರುತಿನ ನಿರಂತರ ವಿಸ್ತರಣೆಯೊಂದಿಗೆ, ಸುಧಾರಿತ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕಾಗಿ ಭಾರತವು ಹೆಚ್ಚಾಗಿ ಇಷ್ಟಪಡುವ ಪಾಲುದಾರನಾಗಿ ಹೊರಹೊಮ್ಮಿದೆ.

  • ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ , 2025
  • ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ, 2025
  • ಭಾರತ-Eಎಫ್‌ಟಿಎ (ಸ್ವಿಟ್ಜರ್ಲೆಂಡ್, ನಾರ್ವೆ, ಐಸ್‌ಲ್ಯಾಂಡ್ ಮತ್ತು ಲಿಚ್ಟೆನ್‌ಸ್ಟೈನ್) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ, 2024
  • ಭಾರತ-ಯುನೈಟೆಡ್ ಅರಬ್ ಎಮಿರೇಟ್ಸ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ, 2022
  • ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ, 2022
  • ಭಾರತ-ಮಾರಿಷಸ್ ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ  2021

ಉಪಸಂಹಾರ

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ವ್ಯಾಪಾರ ರಾಜತಾಂತ್ರಿಕತೆಯಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಪ್ರತಿಬಿಂಬಿಸುತ್ತದೆ, ಇದು ಸಮಗ್ರ ಆರ್ಥಿಕ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಭಾರತೀಯ ಸರಕುಗಳಿಗೆ ಸುಧಾರಿತ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಮೂಲಕ, ಸೇವೆಗಳು ಮತ್ತು ಸಂಚಾರದಲ್ಲಿ ಅವಕಾಶಗಳನ್ನು ವಿಸ್ತರಿಸುವ ಮೂಲಕ ಮತ್ತು ಕೃಷಿ, ಹೂಡಿಕೆ ಹಾಗೂ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಆಳವಾಗಿಸುವ ಮೂಲಕ, ಈ ಒಪ್ಪಂದವು ಆರ್ಥಿಕತೆಯಾದ್ಯಂತ ಸ್ಪಷ್ಟ ಮತ್ತು ವ್ಯಾಪಕ ಪ್ರಯೋಜನಗಳನ್ನು ನೀಡುತ್ತದೆ.

ರೈತರು ಮತ್ತು ಸಣ್ಣ ಉದ್ದಿಮೆಗಳಿಂದ ಹಿಡಿದು ವಿದ್ಯಾರ್ಥಿಗಳು ಮತ್ತು ನುರಿತ ವೃತ್ತಿಪರರವರೆಗೆ, ಈ ಒಪ್ಪಂದದ ಲಾಭಗಳು ವ್ಯಾಪಕವಾಗಿರಲಿವೆ. ಇದು ವಿಶ್ವಾಸಾರ್ಹ ಮತ್ತು ದೂರದೃಷ್ಟಿಯ ಜಾಗತಿಕ ಪಾಲುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಮತ್ತು 'ಜಾಗತಿಕವಾಗಿ ಸಂಯೋಜಿತಗೊಂಡ ವಿಕಸಿತ ಭಾರತ 2047' ರ ದೃಷ್ಟಿಕೋನವನ್ನು ಮುನ್ನಡೆಸುತ್ತದೆ.

 

References

Ministry of Commerce and Industry

https://www.pib.gov.in/PressReleasePage.aspx?PRID=2207300&lang=2&reg=3

International Trade Administration

https://www.trade.gov/free-trade-agreement-overview

 

PIB Achieves

https://www.pib.gov.in/PressReleasePage.aspx?PRID=2206194&reg=3&lang=1

Click here to see in PDF

  

*****

(Explainer ID: 156690) आगंतुक पटल : 50
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Malayalam
Link mygov.in
National Portal Of India
STQC Certificate