Economy
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಎಂಬ ಅದ್ಭುತ ಪರಿಹಾರ: ಸರ್ಕಾರಿ ಆಸ್ತಿಗಳ ಫಾರ್ವರ್ಡ್ ಹರಾಜು
ವಿಲೇವಾರಿಯಿಂದ ಮೌಲ್ಯದ ಸದ್ಬಳಕೆ
Posted On:
21 DEC 2025 10:10AM
|
ಪ್ರಮುಖ ಅಂಶಗಳು
- ಒಂದು ಸ್ತಬ್ಧ ಡಿಜಿಟಲ್ ಕ್ರಾಂತಿಯಲ್ಲಿ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ನ 'ಫಾರ್ವರ್ಡ್ ಹರಾಜು' ಮಾಡ್ಯೂಲ್ ಆಸ್ತಿ ವಿಲೇವಾರಿಯನ್ನು ಸಂಪೂರ್ಣ ಡಿಜಿಟಲ್, ಪಾರದರ್ಶಕ ಮತ್ತು ನಿಯಮ-ಆಧಾರಿತವನ್ನಾಗಿ ಪರಿವರ್ತಿಸುತ್ತಿದೆ.
- ಇ-ತ್ಯಾಜ್ಯ, ಯಂತ್ರೋಪಕರಣಗಳು, ವಾಹನಗಳು ಮತ್ತು ಆಸ್ತಿಗಳಂತಹ ವೈವಿಧ್ಯಮಯ ಸ್ವತ್ತುಗಳಿಗಾಗಿ ವೇಗವಾಗಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ.
- ಡಿಸೆಂಬರ್ 2021 ರಿಂದ ನವೆಂಬರ್ 2025 ರ ಅವಧಿಯಲ್ಲಿ ₹2,200 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಹರಾಜು ಹಾಕಲಾಗಿದೆ.
- ಇದು ಸರ್ಕಾರದ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
|
ಪೀಠಿಕೆ
ಭಾರತದ ಸಾರ್ವಜನಿಕ ಸಂಗ್ರಹಣಾ ವ್ಯವಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಡಿಜಿಟಲ್ ರೂಪಾಂತರಕ್ಕೆ ಒಳಗಾಗಿದೆ. ಈ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತಾ, ಒಂದು ಹೊಸ ಡಿಜಿಟಲ್ ಕ್ರಾಂತಿಯು ಸ್ತಬ್ಧವಾಗಿ ತೆರೆದುಕೊಳ್ಳುತ್ತಿದೆ; ಇದು ಕೇವಲ ಸರಕು ಮತ್ತು ಸೇವೆಗಳ ಖರೀದಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಸರ್ಕಾರಿ ಆಸ್ತಿಗಳ ವಿಲೇವಾರಿಯಲ್ಲೂ ನಡೆಯುತ್ತಿದೆ. ಈ ರೂಪಾಂತರವು ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ನ 'ಫಾರ್ವರ್ಡ್ ಅಕ್ಷನ್' ಮಾಡ್ಯೂಲ್ ಮೂಲಕ ಮುನ್ನಡೆಯುತ್ತಿದೆ.
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಪಾರದರ್ಶಕ ಮತ್ತು ದಕ್ಷ ಖರೀದಿಗೆ ಡಿಜಿಟಲ್ ವೇದಿಕೆಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದರೂ, ಅದರ ಫಾರ್ವರ್ಡ್ ಅಕ್ಷನ್ ಮಾಡ್ಯೂಲ್ ಸಂಪೂರ್ಣ ಆನ್‌ಲೈನ್ ಹರಾಜು ಕಾರ್ಯವಿಧಾನವನ್ನು ಒದಗಿಸುತ್ತದೆ. ಇದು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಸಂಪೂರ್ಣ ಡಿಜಿಟಲ್ ಮತ್ತು ಸುರಕ್ಷಿತ ಇಂಟರ್ಫೇಸ್ ಮೂಲಕ, ಪ್ರತಿಯೊಂದು ಆಸ್ತಿಯ ಮಾರಾಟವು ಈಗ ಕಾಗದರಹಿತ, ನಗದುರಹಿತ ಮತ್ತು ಸಂಪರ್ಕವಿಲ್ಲದ ವ್ಯವಸ್ಥೆಯ ಮೂಲಕ ನಡೆಯುತ್ತಿದ್ದು, ವಿಳಂಬ ಮತ್ತು ಅಸಮರ್ಥತೆಯನ್ನು ಹೋಗಲಾಡಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಫಲಿತಾಂಶವು ಎರಡು ಪಟ್ಟು ಲಾಭದಾಯಕವಾಗಿದೆ: ಗುಜರಿ (scrap) ವಿಲೇವಾರಿಯಿಂದ ಹೆಚ್ಚಿನ ಆದಾಯ ಮತ್ತು ಎಲ್ಲಾ ಪಾಲುದಾರರಿಗೆ ನ್ಯಾಯಸಮ್ಮತವಾದ ಫಲಿತಾಂಶ.
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್: ಭಾರತದ ಏಕೀಕೃತ ಸಾರ್ವಜನಿಕ ಸಂಗ್ರಹಣಾ ವೇದಿಕೆ
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಒಂದು ಸುರಕ್ಷಿತ ಮತ್ತು ಸಂಪೂರ್ಣ ಡಿಜಿಟಲ್ ವೇದಿಕೆಯಾಗಿದ್ದು, ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ಸಂಯೋಜಿತ ಸಂಸ್ಥೆಗಳು ಸರಕು ಮತ್ತು ಸೇವೆಗಳ ಖರೀದಿ ಹಾಗೂ ವಿಲೇವಾರಿಯನ್ನು ಸುಲಭಗೊಳಿಸುತ್ತದೆ. ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು, ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳು ಸರ್ಕಾರಿ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಸಬಲೀಕರಣಗೊಳ್ಳಲು ವಿವಿಧ ಉಪಕ್ರಮಗಳ ಮೂಲಕ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಸಾರ್ವಜನಿಕ ಸಂಗ್ರಹಣೆಯಲ್ಲಿ ಒಳಗೊಳ್ಳುವಿಕೆಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
|
ಸ್ಟಾರ್ಟ್‌ಅಪ್ ರನ್‌ವೇ 2.0: ಈ ಮೀಸಲಾದ ಮಾರುಕಟ್ಟೆ ವರ್ಗದ ಅಡಿಯಲ್ಲಿ, ಸ್ಟಾರ್ಟ್‌ಅಪ್‌ಗಳು ತಮ್ಮ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಸರ್ಕಾರಿ ಖರೀದಿದಾರರಿಗೆ ಪ್ರದರ್ಶಿಸಬಹುದು ಮತ್ತು ಸಾರ್ವಜನಿಕ ಸಂಗ್ರಹಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಎಂಎಸ್‌ಎಂಇ ಎಸ್‌ಸಿ/ಎಸ್‌ಟಿ ಉದ್ಯಮಿಗಳು: ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲೆ ವಿಶೇಷ ಗಮನಹರಿಸಿ ಎಂಎಸ್‌ಎಂಇ ಉದ್ಯಮಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಎಂಎಸ್‌ಎಂಇಗಳಿಂದ ಶೇಕಡಾ 25 ರಷ್ಟು ಕಡ್ಡಾಯ ಸಂಗ್ರಹಣೆಯ ಗುರಿಯನ್ನು ಸಾಧಿಸುವ ಉದ್ದೇಶದೊಂದಿಗೆ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ವಿವಿಧ ಪಾಲುದಾರರೊಂದಿಗೆ ಸಹಕರಿಸುತ್ತದೆ.
ವುಮನೀಯಾ: ಈ ಉಪಕ್ರಮವು ಮಹಿಳಾ ಉದ್ಯಮಿಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ವಿವಿಧ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶಗಳೊಂದಿಗೆ ಅವರನ್ನು ಜೋಡಿಸುವ ಮೂಲಕ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
ಸರಸ್ ಕಲೆಕ್ಷನ್: ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು, ಭಾರತದ ಸ್ವಸಹಾಯ ಗುಂಪುಗಳಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳು, ಕೈಮಗ್ಗ ಬಟ್ಟೆಗಳು, ಕಚೇರಿ ಅಲಂಕಾರಿಕ ವಸ್ತುಗಳು, ಪೀಠೋಪಕರಣಗಳು, ಪರಿಕರಗಳು, ಕಾರ್ಯಕ್ರಮದ ಸ್ಮರಣಿಕೆಗಳು, ವೈಯಕ್ತಿಕ ನೈರ್ಮಲ್ಯ ಮತ್ತು ಆರೈಕೆ ಉತ್ಪನ್ನಗಳ ವಿಶಿಷ್ಟ ಹಸ್ತಶಿಲ್ಪದ ಸಂಗ್ರಹವನ್ನು ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ.
|
ನವೆಂಬರ್ 2025ರ ವೇಳೆಗೆ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಸುಮಾರು 3.27 ಕೋಟಿ ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಿದ್ದು, ಒಟ್ಟು ₹16.41 ಲಕ್ಷ ಕೋಟಿಗೂ ಅಧಿಕ ಒಟ್ಟು ವ್ಯಾಪಾರ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಸೇವೆಗಳ ಪಾಲು ₹7.94 ಲಕ್ಷ ಕೋಟಿ ಮತ್ತು ಉತ್ಪನ್ನಗಳ ಪಾಲು ₹8.47 ಲಕ್ಷ ಕೋಟಿ ಆಗಿದೆ. ಈ ವೇದಿಕೆಯು 10,894 ಕ್ಕೂ ಹೆಚ್ಚು ಉತ್ಪನ್ನ ವರ್ಗಗಳನ್ನು ಮತ್ತು 348 ಸೇವಾ ವರ್ಗಗಳನ್ನು ಬೆಂಬಲಿಸುತ್ತದೆ, ಹಾಗೂ 1.67 ಲಕ್ಷಕ್ಕೂ ಹೆಚ್ಚು ಖರೀದಿದಾರ ಸಂಸ್ಥೆಗಳು ಇದರೊಂದಿಗೆ ನೋಂದಾಯಿತವಾಗಿವೆ. 24 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ನಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಗಮನಾರ್ಹವಾಗಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಒಟ್ಟು ಆರ್ಡರ್ ಮೌಲ್ಯದಲ್ಲಿ 44.8% ರಷ್ಟು ಕೊಡುಗೆ ನೀಡುತ್ತಿವೆ. 11 ಲಕ್ಷಕ್ಕೂ ಹೆಚ್ಚುಎಂಎಸ್‌ಇಗಳು ನೋಂದಾಯಿತವಾಗಿದ್ದು, ಇವುಗಳು ಒಟ್ಟಾರೆಯಾಗಿ ₹7.35 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಆರ್ಡರ್‌ಗಳನ್ನು ಪಡೆದಿವೆ.
ಸ್ಮಾರ್ಟ್ ವಿಲೇವಾರಿ ಮತ್ತು ಆಡಳಿತಕ್ಕಾಗಿ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ನ ಫಾರ್ವರ್ಡ್ ಹರಾಜು
ಸಾರ್ವಜನಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹರಾಜು ಪ್ರಕ್ರಿಯೆಯ ಅಗತ್ಯತೆ ಮತ್ತು ಸಾಮರ್ಥ್ಯವನ್ನು ಗುರುತಿಸಿರುವ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ನ 'ಫಾರ್ವರ್ಡ್ ಹರಾಜು' ಮಾಡ್ಯೂಲ್, ಭಾರತವು ಸರ್ಕಾರಿ ಆಸ್ತಿಗಳನ್ನು ವಿಲೇವಾರಿ ಮಾಡುವ ವಿಧಾನವನ್ನೇ ಬದಲಾಯಿಸುತ್ತಿದೆ. ಈ ಡಿಜಿಟಲ್ ಕ್ರಾಂತಿಯು ಹರಾಜು ನಿರ್ವಹಣೆ ಮತ್ತು ಬಿಡ್ಡಿಂಗ್‌ಗಾಗಿ ಹೊಂದಿಕೊಳ್ಳುವ ವಾತಾವರಣವನ್ನು ಒದಗಿಸುತ್ತದೆ. ಇದು ಸುಲಭವಾದ ಬಳಕೆಗೆ ಪೂರಕವಾಗಿದ್ದು, ವೇಗ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
ಫಾರ್ವರ್ಡ್ ಅಕ್ಷನ್ ಮಾಡ್ಯೂಲ್: ವೈವಿಧ್ಯಮಯ ಆಸ್ತಿಗಳ ಮಾರುಕಟ್ಟೆ
ಫಾರ್ವರ್ಡ್ ಅಕ್ಷನ್ ಎಂಬುದು ಒಂದು ಡಿಜಿಟಲ್ ಬಿಡ್ಡಿಂಗ್ ಪ್ರಕ್ರಿಯೆಯಾಗಿದ್ದು, ಇಲ್ಲಿ ಸರ್ಕಾರಿ ಇಲಾಖೆಗಳು ಮಾರಾಟಗಾರರಾಗಿರುತ್ತವೆ ಮತ್ತು ನೋಂದಾಯಿತ ಬಿಡ್‌ದಾರರು ಪಟ್ಟಿ ಮಾಡಲಾದ ಆಸ್ತಿಗಳನ್ನು ಖರೀದಿಸಲು ಸ್ಪರ್ಧಿಸುತ್ತಾರೆ. ಇಲಾಖೆಗಳು ಆಸ್ತಿಗಳಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಬಹುದಾದರೂ, ಅತಿ ಹೆಚ್ಚು ಬೆಲೆ ಕೂಗಿದ ಬಿಡ್‌ದಾರರು ಹರಾಜನ್ನು ಗೆಲ್ಲುತ್ತಾರೆ.
ಈ ಡಿಜಿಟಲ್ ಮಾರುಕಟ್ಟೆಗೆ ವಿವಿಧ ರೀತಿಯ ಸರ್ಕಾರಿ ಆಸ್ತಿಗಳನ್ನು ತರಲಾಗುತ್ತಿದೆ, ಅವುಗಳೆಂದರೆ:
- ಇ-ತ್ಯಾಜ್ಯ: ಹಳೆಯ ಪ್ರಿಂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಐಟಿ ಉಪಕರಣಗಳು.
- ಯಂತ್ರೋಪಕರಣಗಳು: ಕೈಗಾರಿಕಾ ಮತ್ತು ಕೈಗಾರಿಕೇತರ ಯಂತ್ರಗಳು.
- ಗುಜರಿ ಮತ್ತು ವಿಲೇವಾರಿ ವಸ್ತುಗಳು: ಬಳಸಿದ ಲೂಬ್ ಆಯಿಲ್, ಲೋಹ ಮತ್ತು ಲೋಹವಲ್ಲದ ವಸ್ತುಗಳು ಸೇರಿದಂತೆ.
- ಜಮೀನು ಮತ್ತು ಕಟ್ಟಡಗಳು: ವಸತಿ, ವಾಣಿಜ್ಯ ಮತ್ತು ಸಾಂಸ್ಥಿಕ ಉದ್ದೇಶಗಳಿಗಾಗಿ ಗುತ್ತಿಗೆಗೆ (lease) ನೀಡಲಾಗುವ ಆಸ್ತಿಗಳು.
- ಜೀವಿತಾವಧಿ ಮುಗಿದ ವಾಹನಗಳು.
- ಆಸ್ತಿಗಳ ಉಪ-ಬಾಡಿಗೆ ಮತ್ತು ಲೀಸಿಂಗ್: ವಸತಿ ನಿಲಯಗಳು, ಪಾರ್ಕಿಂಗ್ ಸೌಲಭ್ಯಗಳು ಮತ್ತು ಟೋಲ್ ಬೂತ್‌ಗಳಂತಹವು.
ಈ ಎಲ್ಲಾ ರೀತಿಯ ಆಸ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಮೂಲಕ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪರಿಣಾಮಕಾರಿಯಾದ 'ಒನ್-ಸ್ಟಾಪ್ ಮಾರುಕಟ್ಟೆ'ಯನ್ನು ಸೃಷ್ಟಿಸಿದೆ.
ಈ ರಾಷ್ಟ್ರವ್ಯಾಪಿ ಉಪಕ್ರಮವು ಅಭೂತಪೂರ್ವ ಪಾರದರ್ಶಕತೆಯನ್ನು ತರುವುದಲ್ಲದೆ, ಈ ಹಿಂದೆ ಚದುರಿಹೋಗಿದ್ದ, ಸಮಯ ತೆಗೆದುಕೊಳ್ಳುವ ಮತ್ತು ಕಾಗದದ ಕೆಲಸಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಪ್ರಕ್ರಿಯೆಗಳನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ.
|
ಡಿಸೆಂಬರ್ 2021 ರಿಂದ ನವೆಂಬರ್ 2025 ರವರೆಗೆ, ಈ ಮಾಡ್ಯೂಲ್ ₹2,200 ಕೋಟಿಗೂ ಅಧಿಕ ಮೌಲ್ಯದ ಹರಾಜನ್ನು ಸುಗಮಗೊಳಿಸಿದೆ. ಈ ಅವಧಿಯಲ್ಲಿ 13,000 ಕ್ಕೂ ಹೆಚ್ಚು ಹರಾಜುಗಳು ನಡೆದಿವೆ, 23,000 ಕ್ಕೂ ಹೆಚ್ಚು ನೋಂದಾಯಿತ ಬಿಡ್‌ದಾರರು ಭಾಗವಹಿಸಿದ್ದಾರೆ ಮತ್ತು 17,000 ಕ್ಕೂ ಹೆಚ್ಚು ಹರಾಜುದಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಯಶಸ್ಸಿನ ಕಥೆಗಳು: ಹರಾಜುಗಳು ನಿಜವಾದ ಪ್ರಭಾವ ಬೀರಿದಾಗ
ಈ ಡಿಜಿಟಲ್ ಮಾಡ್ಯೂಲ್ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿದ್ದು, ಸಾರ್ವಜನಿಕ ಆಸ್ತಿಗಳ ವಿಲೇವಾರಿಯಲ್ಲಿ ವೇಗ, ನ್ಯಾಯಸಮ್ಮತತೆ ಮತ್ತು ಮೌಲ್ಯವರ್ಧನೆಯನ್ನು ಅಳವಡಿಸಿದೆ. ಇಲಾಖೆಗಳು ಈಗ ಆಸ್ತಿಗಳಿಗೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಲು, ಭಾಗವಹಿಸುವಿಕೆಯ ಮಾನದಂಡಗಳನ್ನು ವ್ಯಾಖ್ಯಾನಿಸಲು ಮತ್ತು ಬಿಡ್ಡಿಂಗ್ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಆಸ್ತಿ ವಿಲೇವಾರಿ ಪ್ರಕ್ರಿಯೆಯು ಪಾರದರ್ಶಕ, ಸ್ಪರ್ಧಾತ್ಮಕ ಮತ್ತು ಗರಿಷ್ಠ ಮೌಲ್ಯವನ್ನು ತಂದುಕೊಡುವ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ಗಮನಾರ್ಹ ಆದಾಯ ಮತ್ತು ದಕ್ಷತೆಯೊಂದಿಗೆ, ಡಿಜಿಟಲ್ ಹರಾಜಿನ ನೈಜ ಫಲಿತಾಂಶಗಳು ಅದರ ಯಶಸ್ಸನ್ನು ಸಾರುತ್ತಿವೆ.
ಎಡಬ್ಲುಎಸ್ ಮನೆಗಳಿಗಾಗಿ ನಿರೀಕ್ಷೆಗೂ ಮೀರಿದ ಯಶಸ್ಸು
ಪಾರದರ್ಶಕತೆ ಮತ್ತು ತಂತ್ರಜ್ಞಾನದ ಸಮ್ಮಿಲನವು ಹೇಗೆ ನಿರಂತರ ಮೌಲ್ಯವರ್ಧನೆಯನ್ನು ಉಂಟುಮಾಡುತ್ತದೆ ಎಂಬುದನ್ನು ಇದು ಉಲ್ಲೇಖಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಲಕ್ನೋದ ಅಲಿಗಂಜ್‌ನಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ 100 ಫ್ಲಾಟ್‌ಗಳನ್ನು ಹರಾಜು ಹಾಕಿತು. ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಫಾರ್ವರ್ಡ್ ಅಕ್ಷನ್ ಮೂಲಕ ನಡೆದ ಈ ಹರಾಜಿನಲ್ಲಿ, ಈ ಫ್ಲಾಟ್‌ಗಳು ₹34.53 ಕೋಟಿ ಗಳಿಸುವ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾದವು.
ಅನೇಕ ಬಾರಿ ನಿರ್ಲಕ್ಷ್ಯಕ್ಕೆ ಒಳಗಾಗುವ ಪರಿಣಾಮಕಾರಿ ಗುಜರಿ ವಿಲೇವಾರಿಯು, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಮತ್ತು ತೆರಿಗೆದಾರರ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ತ್ಯಾಜ್ಯದಿಂದ ಆದಾಯದತ್ತ
ನವದೆಹಲಿಯ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯವು ದೀರ್ಘಕಾಲದವರೆಗೆ ಬಳಸಲಾಗದ ಮತ್ತು ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಲು ಶ್ರಮಿಸುತ್ತಿತ್ತು. ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಫಾರ್ವರ್ಡ್ ಅಕ್ಷನ್ ಬಳಸಿ ಈ ವಸ್ತುಗಳನ್ನು ಹರಾಜಿಗೆ ಇಟ್ಟಾಗ, ನಿಗದಿಪಡಿಸಿದ್ದ ಕನಿಷ್ಠ ಬೆಲೆಗಿಂತ ಹೆಚ್ಚಿನ ಸ್ಪರ್ಧಾತ್ಮಕ ಆಫರ್‌ಗಳು (H1 ಬೆಲೆ) ಬಂದವು.
ಅನ್ವೇಷಿಸಲಾದ ಅಂತ್ಯವಿಲ್ಲದ ಸಾಧ್ಯತೆಗಳು
- ಭಾರತೀಯ ಆಹಾರ ನಿಗಮವು ಸ್ಕ್ರೀನ್ಡ್ ಜಿಪ್ಸಮ್ ಅನ್ನು ಮಾರಾಟ ಮಾಡಿ ₹3.35 ಕೋಟಿ ಗಳಿಸಿತು.
- ಜಮ್ಮುವಿನಲ್ಲಿ ಸುಮಾರು 261 ಹಳೆಯ ವಾಹನಗಳನ್ನು ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಮೂಲಕ ವಿಲೇವಾರಿ ಮಾಡಲಾಯಿತು.
- ಇದೇ ರೀತಿ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಯಶಸ್ವಿಯಾಗಿ ಸ್ಕ್ರ್ಯಾಪ್ ವಸ್ತುಗಳನ್ನು ಹರಾಜು ಮಾಡಿದೆ.
- ಗುಲ್ಮಾರ್ಗ್‌ನಲ್ಲಿ ಡಾರ್ಮಿಟರಿಯನ್ನು ಐದು ವರ್ಷಗಳ ಕಾಲ ಯಶಸ್ವಿಯಾಗಿ ಗುತ್ತಿಗೆಗೆ ನೀಡಲಾಯಿತು.
- ಸ್ಪುರ್ತಾರ್‌ನಲ್ಲಿನ ಕೆರೆಯೊಂದರಲ್ಲಿ ದೋಣಿ ವಿಹಾರದ ಹಕ್ಕನ್ನು ಹರಾಜು ಹಾಕಲಾಯಿತು.
ಆಸ್ತಿಗಳನ್ನು ಪಾರದರ್ಶಕ ಡಿಜಿಟಲ್ ವೇದಿಕೆಯಲ್ಲಿ ಇರಿಸಿ ಮತ್ತು ವ್ಯಾಪಕ ಮಾರುಕಟ್ಟೆ ಸಹಭಾಗಿತ್ವವನ್ನು ಆಹ್ವಾನಿಸುವ ಮೂಲಕ, ಈ ಪ್ರಕ್ರಿಯೆಯು ನ್ಯಾಯಯುತ ಬೆಲೆ ನಿರ್ಧಾರ, ವೇಗದ ಫಲಿತಾಂಶಗಳು ಮತ್ತು ಅತ್ಯುತ್ತಮ ಮೌಲ್ಯದ ಮರಳಿಕೆಯನ್ನು ಖಚಿತಪಡಿಸುತ್ತದೆ. ಇದು ಆಸ್ತಿ ವಿಲೇವಾರಿಯನ್ನು ಮೌಲ್ಯ ಸೃಷ್ಟಿಯ ಒಂದು ಕಾರ್ಯತಂತ್ರದ ಸಾಧನವಾಗಿ ಪರಿವರ್ತಿಸುತ್ತಿದೆ.
ಬಿಡ್ಡಿಂಗ್ ಸುಲಭ: ಯಾರು ಮತ್ತು ಹೇಗೆ ಭಾಗವಹಿಸಬಹುದು?
ಫಾರ್ವರ್ಡ್ ಹರಾಜಿನಲ್ಲಿ ಭಾಗವಹಿಸಲು ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಎಲ್ಲಾ ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮುಕ್ತ ಅವಕಾಶವಿದೆ. ಆಸಕ್ತ ಬಿಡ್‌ದಾರರು ಅನ್ವಯವಾಗುವ ಕಡೆಗಳಲ್ಲಿ ಅಗತ್ಯ ಮುಂಗಡ ಹಣವನ್ನು ಸಲ್ಲಿಸಬೇಕಾಗುತ್ತದೆ. ಒಮ್ಮೆ ನೋಂದಾಯಿಸಿಕೊಂಡು ನಿಯಮಗಳನ್ನು ಪಾಲಿಸಿದ ನಂತರ, ಬಿಡ್‌ದಾರರು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುವ ಸುರಕ್ಷಿತ, ಪಾರದರ್ಶಕ ಮತ್ತು ಸಮಯಬದ್ಧ ಲೈವ್ ಹರಾಜುಗಳಲ್ಲಿ ಸುಲಭವಾಗಿ ಭಾಗವಹಿಸಬಹುದು.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಹರಾಜುಗಳನ್ನು ಸಾರ್ವಜನಿಕವಾಗಿ ಪಟ್ಟಿ ಮಾಡಲಾಗುತ್ತದೆ. ಆದರೆ, ಸ್ವತ್ತುಗಳ ಸೂಕ್ಷ್ಮತೆಯ ಕಾರಣದಿಂದಾಗಿ ಸೀಮಿತ ಸಂಖ್ಯೆಯ ಸಂದರ್ಭಗಳಲ್ಲಿ ಮಾತ್ರ ಹರಾಜನ್ನು ನಿರ್ಬಂಧಿಸಲಾಗುತ್ತದೆ ಮತ್ತು ಅಂತಹ ಹರಾಜಿನಲ್ಲಿ ಮುಂಚಿತವಾಗಿ ಅರ್ಹತೆ ಪಡೆದ ಬಿಡ್ದಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಆಡಳಿತದ ರೂಪಾಂತರ: ಪಾರದರ್ಶಕತೆ, ದಕ್ಷತೆ ಮತ್ತು ಸುಸ್ಥಿರತೆ
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ವೇದಿಕೆಯಲ್ಲಿ 'ಫಾರ್ವರ್ಡ್ ಹರಾಜು'ಗಳ ಹೆಚ್ಚಳವು ಸಾರ್ವಜನಿಕ ಸಂಗ್ರಹಣಾ ವ್ಯವಸ್ಥೆಯಲ್ಲಿ ಒಂದು ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಕಾರ್ಯಾಚರಣೆಯ ದಕ್ಷತೆ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ನೀಡುವ ಮೂಲಕ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಮಾದರಿಯು ತನ್ನ ಡಿಜಿಟಲ್ ವೇದಿಕೆಗಳ ಮೂಲಕ ಉತ್ತಮ ಆಡಳಿತವನ್ನು ಸಾಂಸ್ಥಿಕಗೊಳಿಸುತ್ತಿದೆ.
- ಪರಿಸರ ಜವಾಬ್ದಾರಿಯನ್ನು ಉತ್ತೇಜಿಸುವುದು: ರಾಷ್ಟ್ರೀಯ ನೀತಿಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಸುಸ್ಥಿರ ಸಾರ್ವಜನಿಕ ಸಂಗ್ರಹಣೆಯನ್ನು ಉತ್ತೇಜಿಸಲು ಸರ್ಕಾರವು 'ಸುಸ್ಥಿರ ಅಭಿವೃದ್ಧಿ ಗುರಿ 12.7' ಕ್ಕೆ ಬದ್ಧವಾಗಿದೆ. ಇ-ತ್ಯಾಜ್ಯ, ಸ್ಕ್ರ್ಯಾಪ್ ಮತ್ತು ಇತರ ವಸ್ತುಗಳನ್ನು ಅಧಿಕೃತ ಚಾನೆಲ್‌ಗಳ ಮೂಲಕ ಸರಿಯಾದ ಹರಾಜು ಮತ್ತು ವಿಲೇವಾರಿ ಮಾಡಲು ಅನುವು ಮಾಡಿಕೊಡುವ ಮೂಲಕ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪರಿಸರ ಸ್ನೇಹಿ ಪದ್ಧತಿಗಳನ್ನು ಬೆಂಬಲಿಸುತ್ತಿದೆ.
- ಅಪಾರದರ್ಶಕತೆಯನ್ನು ಹೋಗಲಾಡಿಸುವುದು: ಈ ವೈಶಿಷ್ಟ್ಯವು ಎಲ್ಲಾ ಸ್ವತ್ತುಗಳ ಮಾರಾಟವನ್ನು ಪಾರದರ್ಶಕ, ನಿಯಮ ಆಧಾರಿತ ಡಿಜಿಟಲ್ ವೇದಿಕೆಗೆ ತರುತ್ತದೆ. ಇಲ್ಲಿ ಪ್ರತಿ ಬಿಡ್ ಎಲ್ಲರಿಗೂ ಕಾಣುವಂತಿರುತ್ತದೆ, ಇದು ಮುಕ್ತ ಮತ್ತು ಸ್ವತಂತ್ರ ಮಾತುಕತೆಗಳನ್ನು ಖಚಿತಪಡಿಸುತ್ತದೆ.
- ಕಾರ್ಯಾಚರಣೆಯ ವಿಳಂಬವನ್ನು ಕಡಿಮೆ ಮಾಡುವುದು: ಸಂಪೂರ್ಣ ವಿಲೇವಾರಿ ಪ್ರಕ್ರಿಯೆಯನ್ನು ಆನ್‌ಲೈನ್‌ಗೆ ವರ್ಗಾಯಿಸುವ ಮೂಲಕ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಕಾಗದದ ಕೆಲಸವನ್ನು ತೆಗೆದುಹಾಕಿದೆ, ಅನುಮೋದನೆಗಳನ್ನು ಸರಳಗೊಳಿಸಿದೆ ಮತ್ತು ವೇಗವಾಗಿ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಇದು ಇಲಾಖೆಗಳು ಕಡಿಮೆ ಅವಧಿಯಲ್ಲಿ ಸ್ವತ್ತುಗಳ ಮಾರಾಟವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
- ನ್ಯಾಯಯುತ ಸ್ಪರ್ಧೆಯನ್ನು ಖಚಿತಪಡಿಸುವುದು: ಈ ಮಾಡ್ಯೂಲ್ ಎಲ್ಲಾ ಅರ್ಹ ಮತ್ತು ನೋಂದಾಯಿತ ಬಿಡ್ದಾರರಿಗೆ ಸಮಾನವಾಗಿ ಭಾಗವಹಿಸಲು ಅವಕಾಶ ನೀಡುತ್ತದೆ. ಪಾರದರ್ಶಕ ಡಿಜಿಟಲ್ ಇಂಟರ್ಫೇಸ್ ಮೂಲಕ ಗರಿಷ್ಠ ಬಿಡ್ ಮಾಡಿದವರು ಗೆಲ್ಲುವಂತೆ ಇದು ಖಾತರಿಪಡಿಸುತ್ತದೆ.
- ಸಾರ್ವಜನಿಕ ಸ್ವತ್ತುಗಳಿಗೆ ಹೆಚ್ಚಿನ ಆದಾಯವನ್ನು ಗಳಿಸುವುದು: ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಹೆಚ್ಚಿನ ಜನರ ಭಾಗವಹಿಸುವಿಕೆಯಿಂದಾಗಿ, ಅಂತಿಮ ಬಿಡ್‌ಗಳು ಹೆಚ್ಚಾಗಿ ಮೂಲ ಬೆಲೆಗಿಂತ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಹೆಚ್ಚಿರುತ್ತವೆ. ಇದು ಸರ್ಕಾರಿ ಇಲಾಖೆಗಳು ತಮ್ಮ ಹಳೆಯ ಸ್ವತ್ತುಗಳಿಂದ ಗರಿಷ್ಠ ಮೌಲ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.
- ತ್ವರಿತ ತೆರವು ಗೆ ಅವಕಾಶ: ಈ ಮಾಡ್ಯೂಲ್ ವಿಲೇವಾರಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಮತ್ತು ವೇಗಗೊಳಿಸಿದೆ. ಇದರಿಂದ ಇಲಾಖೆಗಳು ಸ್ಕ್ರ್ಯಾಪ್, ಹಳೆಯ ಯಂತ್ರೋಪಕರಣಗಳು ಅಥವಾ ವಾಹನಗಳಂತಹ ಬಳಕೆಯಾಗದ ವಸ್ತುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಜಾಗವನ್ನು ಮುಕ್ತಗೊಳಿಸಬಹುದು ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬಹುದು.
ಉಪಸಂಹಾರ
ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ನ ಫಾರ್ವರ್ಡ್ ಅಕ್ಷನ್ ಮಾಡ್ಯೂಲ್ ಹಳೆಯ ಕಾಲದ ಹಸ್ತಚಾಲಿತ ಸಾರ್ವಜನಿಕ ಸಂಗ್ರಹಣಾ ಪ್ರಕ್ರಿಯೆಗಳನ್ನು ಅತ್ಯಂತ ವೇಗವಾಗಿ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆಯನ್ನಾಗಿ ಪರಿವರ್ತಿಸಿದೆ. ಬದಲಾಗುತ್ತಿರುವ ಈ ಪರಿಸರದಲ್ಲಿ, ಸ್ವತ್ತುಗಳ ವಿಲೇವಾರಿಯನ್ನು ಡಿಜಿಟಲೀಕರಣಗೊಳಿಸುವ ಮೂಲಕ ಫಾರ್ವರ್ಡ್ ಅಕ್ಷನ್‌ಗಳು ಪ್ರಮುಖವಾಗಿ ಗುರುತಿಸಲ್ಪಡುತ್ತವೆ. ಒಬ್ಬ ಸ್ಥಳೀಯ ಸ್ಕ್ರ್ಯಾಪ್ ವ್ಯಾಪಾರಿಯಿಂದ ಹಿಡಿದು ದೊಡ್ಡ ರಿಯಲ್ ಎಸ್ಟೇಟ್ ಖರೀದಿದಾರರವರೆಗೆ, ಹಳೆಯ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಇಲಾಖೆಯಿಂದ ಆಸ್ತಿಯನ್ನು ಹರಾಜು ಮಾಡುವ ಬ್ಯಾಂಕ್‌ವರೆಗೆ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ನ ಡಿಜಿಟಲ್ ವೈಶಿಷ್ಟ್ಯವು ಸರ್ಕಾರದ ಹರಾಜುಗಳನ್ನು ದಕ್ಷ, ಸ್ಪರ್ಧಾತ್ಮಕ ಮತ್ತು ವಿಶ್ವಾಸಾರ್ಹವಾಗಿಸಿದೆ.
ಹೆಚ್ಚಿನ ಇಲಾಖೆಗಳು ಫಾರ್ವರ್ಡ್ ಅಕ್ಷನ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಂತೆ, ಸರ್ಕಾರಿ ಇಲಾಖೆಗಳು ಮತ್ತು ವ್ಯವಹಾರಗಳು ಒಂದೇ ಪಾರದರ್ಶಕ ಡಿಜಿಟಲ್ ವೇದಿಕೆಗೆ ಬರುತ್ತಿವೆ. ಇಲ್ಲಿ ಪ್ರತಿ ಬಿಡ್ ಗೋಚರಿಸುತ್ತದೆ, ಪ್ರತಿ ನಿಯಮವು ಮೊದಲೇ ನಿರ್ಧರಿಸಲ್ಪಟ್ಟಿರುತ್ತದೆ ಮತ್ತು ಪ್ರತಿ ಫಲಿತಾಂಶವು ನ್ಯಾಯಯುತವಾಗಿರುತ್ತದೆ. ಇದು ಡಿಜಿಟಲ್ ಪ್ರಜಾಪ್ರಭುತ್ವ, ಸುಧಾರಿತ ಪಾರದರ್ಶಕತೆ ಮತ್ತು ಉತ್ತಮ ಮೌಲ್ಯ ಸೃಷ್ಟಿಗೆ ಕಾರಣವಾಗುತ್ತಿದೆ.
References:
Ministry of Commerce & Industry
https://www.pib.gov.in/PressReleasePage.aspx?PRID=2201284®=3&lang=2
https://www.pib.gov.in/PressReleasePage.aspx?PRID=1831192®=3&lang=2
Government e-Marketplace (GeM)
https://gem.gov.in/gem-advantages
https://gem.gov.in/gem-exclusive
https://gem.gov.in/news/view_news/348
GeM of a Solution: Forward Auctions of Government Assets
*****
(Backgrounder ID: 156627)
आगंतुक पटल : 6
Provide suggestions / comments