Rural Prosperity
ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ 2025
ವಿಕಸಿತ ಭಾರತಕ್ಕಾಗಿ ನರೇಗಾ ಸುಧಾರಣೆ
Posted On:
18 DEC 2025 11:54AM
ಪ್ರಮುಖ ಮಾರ್ಗಸೂಚಿಗಳು
- ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ, 2025, ನರೇಗಾ ಯೋಜನೆಯನ್ನು ವಿಕಸಿತ ಭಾರತ 2047 ಕ್ಕೆ ಅನುಗುಣವಾಗಿ ಒಂದು ಹೊಸ ಶಾಸನಬದ್ಧ ಚೌಕಟ್ಟಿನೊಂದಿಗೆ ಬದಲಾಯಿಸುತ್ತದೆ.
- ಗ್ರಾಮೀಣ ಕುಟುಂಬಗಳ ಆದಾಯದ ಭದ್ರತೆಯನ್ನು ಬಲಪಡಿಸಲು, ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ.
- ಇದು ಕೂಲಿ ಉದ್ಯೋಗವನ್ನು 4 ಆದ್ಯತೆಯ ವಲಯಗಳಾದ್ಯಂತ ಬಾಳಿಕೆ ಬರುವ ಗ್ರಾಮೀಣ ಮೂಲಸೌಕರ್ಯಗಳೊಂದಿಗೆ ಸಂಯೋಜಿಸುತ್ತದೆ.
- ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ವಿಕೇಂದ್ರೀಕೃತ ಯೋಜನೆಯನ್ನು ಬಲಪಡಿಸುತ್ತದೆ ಮತ್ತು ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ ಮೂಲಕ ರಾಷ್ಟ್ರೀಯವಾಗಿ ಸಂಯೋಜಿಸುತ್ತದೆ.
- ಮಾನದಂಡ ಆಧಾರಿತ ಧನಸಹಾಯ ಮತ್ತು ಕೇಂದ್ರ ಪ್ರಾಯೋಜಿತ ರಚನೆಗೆ ಬದಲಾಗುವುದು ಮುನ್ಸೂಚನೆ, ಹೊಣೆಗಾರಿಕೆ ಮತ್ತು ಕೇಂದ್ರ-ರಾಜ್ಯ ಪಾಲುದಾರಿಕೆಯನ್ನು ಸುಧಾರಿಸುತ್ತದೆ.
ಪೀಠಿಕೆ
ಕಳೆದ ಸುಮಾರು ಎರಡು ದಶಕಗಳಿಂದ ಗ್ರಾಮೀಣ ಉದ್ಯೋಗವು ಭಾರತದ ಸಾಮಾಜಿಕ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿದೆ. 2005 ರಲ್ಲಿ ಜಾರಿಗೆ ಬಂದಾಗಿನಿಂದ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಕೂಲಿ ಉದ್ಯೋಗವನ್ನು ಒದಗಿಸುವಲ್ಲಿ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸುವಲ್ಲಿ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದಾಗ್ಯೂ, ಕಾಲಾನಂತರದಲ್ಲಿ ಗ್ರಾಮೀಣ ಭಾರತದ ರಚನೆ ಮತ್ತು ಉದ್ದೇಶಗಳು ಗಣನೀಯವಾಗಿ ವಿಕಸನಗೊಂಡಿವೆ. ಹೆಚ್ಚುತ್ತಿರುವ ಆದಾಯ, ವಿಸ್ತರಿಸಿದ ಸಂಪರ್ಕ ಸೇವೆಗಳು, ವ್ಯಾಪಕವಾದ ಡಿಜಿಟಲ್ ನುಗ್ಗುವಿಕೆ ಮತ್ತು ವೈವಿಧ್ಯಮಯ ಜೀವನೋಪಾಯಗಳು ಗ್ರಾಮೀಣ ಉದ್ಯೋಗದ ಅಗತ್ಯತೆಗಳ ಸ್ವರೂಪವನ್ನು ಬದಲಿಸಿವೆ.
ಈ ಹಿನ್ನೆಲೆಯಲ್ಲಿ, ಸರ್ಕಾರವು ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆ, 2025 ಅನ್ನು ಪ್ರಸ್ತಾಪಿಸಿದೆ, ಇದನ್ನು ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ, 2025 ಎಂದೂ ಕರೆಯಲಾಗುತ್ತದೆ. ಈ ಮಸೂದೆಯು ನರೇಗಾ ಯೋಜನೆಯ ಸಮಗ್ರ ಶಾಸನಬದ್ಧ ಕೂಲಂಕಷ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಇದು ಹೊಣೆಗಾರಿಕೆ, ಮೂಲಸೌಕರ್ಯ ಫಲಿತಾಂಶಗಳು ಮತ್ತು ಆದಾಯದ ಭದ್ರತೆಯನ್ನು ಬಲಪಡಿಸುವ ಜೊತೆಗೆ, ಗ್ರಾಮೀಣ ಉದ್ಯೋಗವನ್ನು ವಿಕಸಿತ ಭಾರತ 2047ರ ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಸಂಯೋಜಿಸುತ್ತದೆ.

ಭಾರತದಲ್ಲಿ ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿ ನೀತಿಯ ಹಿನ್ನೆಲೆ
ಸ್ವಾತಂತ್ರ್ಯದ ನಂತರ, ಭಾರತದಲ್ಲಿನ ಗ್ರಾಮೀಣ ಅಭಿವೃದ್ಧಿ ನೀತಿಗಳು ಬಡತನವನ್ನು ಕಡಿಮೆ ಮಾಡುವುದು, ಕೃಷಿ ಉತ್ಪಾದಕತೆಯನ್ನು ಸುಧಾರಿಸುವುದು ಮತ್ತು ಗ್ರಾಮೀಣ ಭಾಗದ ಹೆಚ್ಚುವರಿ ಹಾಗೂ ಅರೆ-ಉದ್ಯೋಗಿತ ಕಾರ್ಮಿಕರಿಗೆ ಉದ್ಯೋಗವನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸಿವೆ. ಕಾಲಾನಂತರದಲ್ಲಿ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ, ಕೂಲಿ ಉದ್ಯೋಗ ಕಾರ್ಯಕ್ರಮಗಳು ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸುವ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ಬಲಪಡಿಸುವ ಪ್ರಮುಖ ಸಾಧನಗಳಾಗಿ ಕ್ರಮೇಣ ವಿಕಸನಗೊಂಡಿವೆ.
ಭಾರತದ ಕೂಲಿ ಉದ್ಯೋಗ ಉಪಕ್ರಮಗಳು ಹಲವು ಹಂತಗಳ ಮೂಲಕ ಮುಂದುವರಿದಿವೆ. ಇವು 1960ರ ದಶಕದ ಗ್ರಾಮೀಣ ಮಾನವಶಕ್ತಿ ಕಾರ್ಯಕ್ರಮ ಮತ್ತು 1971ರ ಗ್ರಾಮೀಣ ಉದ್ಯೋಗಕ್ಕಾಗಿ ಕ್ರ್ಯಾಶ್ ಸ್ಕೀಮ್ ನಂತಹ ಆರಂಭಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾದವು. ನಂತರ 1980 ಮತ್ತು 1990 ರ ದಶಕಗಳಲ್ಲಿ ಹೆಚ್ಚು ವ್ಯವಸ್ಥಿತ ಪ್ರಯತ್ನಗಳು ನಡೆದವು. ಇವುಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ ಮತ್ತು ಗ್ರಾಮೀಣ ಭೂಹೀನ ಉದ್ಯೋಗ ಖಾತರಿ ಕಾರ್ಯಕ್ರಮಗಳು ಸೇರಿದ್ದವು. ಇವುಗಳನ್ನು ನಂತರ 1993 ರಲ್ಲಿ ಜವಾಹರ್ ರೋಜ್‌ಗಾರ್ ಯೋಜನೆಯೊಂದಿಗೆ ವಿಲೀನಗೊಳಿಸಲಾಯಿತು. ವ್ಯಾಪ್ತಿ ಮತ್ತು ಸಮನ್ವಯವನ್ನು ಸುಧಾರಿಸುವ ಉದ್ದೇಶದಿಂದ 1999 ರಲ್ಲಿ ಇದು ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆಯಾಗಿ ಏಕೀಕೃತಗೊಂಡಿತು. ಉದ್ಯೋಗ ಭರವಸೆ ಯೋಜನೆ ಮತ್ತು ಕೆಲಸಕ್ಕಾಗಿ ಆಹಾರ ಕಾರ್ಯಕ್ರಮ ಗಳಂತಹ ಪೂರಕ ಯೋಜನೆಗಳು ಕಾಲೋಚಿತ ನಿರುದ್ಯೋಗ ಮತ್ತು ಆಹಾರ ಭದ್ರತೆಯನ್ನು ಉದ್ದೇಶಿಸಿ ಜಾರಿಗೆ ಬಂದವು. 1977ರ ಮಹಾರಾಷ್ಟ್ರ ಉದ್ಯೋಗ ಖಾತರಿ ಕಾಯ್ದೆಯೊಂದಿಗೆ ಒಂದು ಪ್ರಮುಖ ಬದಲಾವಣೆ ಸಂಭವಿಸಿತು, ಇದು ಕೆಲಸದ ಶಾಸನಬದ್ಧ ಹಕ್ಕಿನ ಪರಿಕಲ್ಪನೆಯನ್ನು ಪರಿಚಯಿಸಿತು. ಈ ಎಲ್ಲಾ ಅನುಭವಗಳ ಫಲವಾಗಿ 2005 ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಜಾರಿಗೆ ಬಂದಿತು, ಇದು ಗ್ರಾಮೀಣ ಉದ್ಯೋಗ ಸೃಷ್ಟಿಗೆ ದೇಶಾದ್ಯಂತ ಕಾನೂನು ಚೌಕಟ್ಟನ್ನು ಒದಗಿಸಿತು.
ನರೇಗಾ ವಿಕಸನ ಮತ್ತು ಹಂತಹಂತದ ಸುಧಾರಣೆಯ ಮಿತಿಗಳು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು, ಅಕುಶಲ ದೈಹಿಕ ಕೆಲಸ ಮಾಡಲು ಸಿದ್ಧವಿರುವ ಗ್ರಾಮೀಣ ಕುಟುಂಬಗಳಿಗೆ ಪ್ರತಿ ವರ್ಷ ಕನಿಷ್ಠ 100 ದಿನಗಳ ಖಾತರಿಿತ ಕೂಲಿ ಉದ್ಯೋಗವನ್ನು ನೀಡುವ ಮೂಲಕ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕಾರ್ಯಕ್ರಮವಾಗಿತ್ತು. ವರ್ಷಗಳಲ್ಲಿ, ಹಲವಾರು ಆಡಳಿತಾತ್ಮಕ ಮತ್ತು ತಾಂತ್ರಿಕ ಸುಧಾರಣೆಗಳು ಇದರ ಅನುಷ್ಠಾನವನ್ನು ಬಲಪಡಿಸಿದವು. ಇದರಿಂದಾಗಿ ಸಹಭಾಗಿತ್ವ, ಪಾರದರ್ಶಕತೆ ಮತ್ತು ಡಿಜಿಟಲ್ ಆಡಳಿತದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದವು. ಮಹಿಳೆಯರ ಭಾಗವಹಿಸುವಿಕೆಯು 2013-14ರ ಹಣಕಾಸು ವರ್ಷದಿಂದ 2025-26 ರ ನಡುವೆ ಶೇಕಡಾ 48 ರಿಂದ 58.15 ಕ್ಕೆ ಏರಿತು. ಆಧಾರ್ ಜೋಡಣೆ ವೇಗವಾಗಿ ವಿಸ್ತರಿಸಿತು, ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು ಮತ್ತು ಎಲೆಕ್ಟ್ರಾನಿಕ್ ಕೂಲಿ ಪಾವತಿಗಳು ಬಹುತೇಕ ಸಾರ್ವತ್ರಿಕವಾದವು. ಜಿಯೋ-ಟ್ಯಾಗ್ ಮಾಡಲಾದ ಆಸ್ತಿಗಳ ಸಂಖ್ಯೆ ಹೆಚ್ಚಳ ಮತ್ತು ವೈಯಕ್ತಿಕ ಆಸ್ತಿಗಳ ಸೃಷ್ಟಿಯೊಂದಿಗೆ ಕೆಲಸಗಳ ಮೇಲ್ವಿಚಾರಣೆಯೂ ಸುಧಾರಿಸಿತು.
ನರೇಗಾ ಅಡಿಯ ಅನುಭವವು ಕ್ಷೇತ್ರ ಮಟ್ಟದ ಸಿಬ್ಬಂದಿಯ ನಿರ್ಣಾಯಕ ಪಾತ್ರವನ್ನೂ ಉಲ್ಲೇಖಿಸಿದೆ. ಸೀಮಿತ ಆಡಳಿತಾತ್ಮಕ ಸಂಪನ್ಮೂಲಗಳು ಮತ್ತು ಸಿಬ್ಬಂದಿ ಕೊರತೆಯ ನಡುವೆಯೂ ಇವರು ಅನುಷ್ಠಾನದ ನಿರಂತರತೆ ಮತ್ತು ಪ್ರಮಾಣವನ್ನು ಖಚಿತಪಡಿಸಿದರು. ಆದಾಗ್ಯೂ, ಈ ಲಾಭಗಳ ಜೊತೆಗೆ ಕೆಲವು ಆಳವಾದ ರಚನಾತ್ಮಕ ಸಮಸ್ಯೆಗಳು ಮುಂದುವರಿದವು. ಹಲವಾರು ರಾಜ್ಯಗಳಲ್ಲಿ ನಡೆದ ಮೇಲ್ವಿಚಾರಣೆಯು ಮೈದಾನದಲ್ಲಿ ಕೆಲಸಗಳು ಕಂಡುಬಂದಿಲ್ಲದಿರುವುದು, ಭೌತಿಕ ಪ್ರಗತಿಗೆ ಹೊಂದಿಕೆಯಾಗದ ವೆಚ್ಚ, ಶ್ರಮದಾಯಕ ಕೆಲಸಗಳಲ್ಲಿ ಯಂತ್ರಗಳ ಬಳಕೆ ಮತ್ತು ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಆಗಾಗ್ಗೆ ತಪ್ಪಿಸುವುದು ಮುಂತಾದ ಲೋಪಗಳನ್ನು ಬಹಿರಂಗಪಡಿಸಿವೆ. ಕಾಲಾನಂತರದಲ್ಲಿ ದುರುಪಯೋಗಗಳು ಹೆಚ್ಚಾದವು ಮತ್ತು ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಕೇವಲ ಅಲ್ಪ ಪ್ರಮಾಣದ ಕುಟುಂಬಗಳು ಮಾತ್ರ ಪೂರ್ಣ ನೂರು ದಿನಗಳ ಉದ್ಯೋಗವನ್ನು ಪೂರೈಸಲು ಸಾಧ್ಯವಾಯಿತು. ಈ ಪ್ರವೃತ್ತಿಗಳು ವಿತರಣಾ ವ್ಯವಸ್ಥೆಗಳು ಸುಧಾರಿಸಿದರೂ, ನರೇಗಾದ ಒಟ್ಟಾರೆ ಕಾರ್ಯಚೌಕಟ್ಟು ತನ್ನ ಮಿತಿಯನ್ನು ತಲುಪಿದೆ ಎಂದು ಸೂಚಿಸಿದವು.
ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆಯು ಸಮಗ್ರ ಶಾಸನಬದ್ಧ ಮರುಹೊಂದಿಸುವಿಕೆಯ ಮೂಲಕ ಈ ಅನುಭವಕ್ಕೆ ಸ್ಪಂದಿಸುತ್ತದೆ. ಇದು ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಶೇಕಡಾ 6 ರಿಂದ 9 ಕ್ಕೆ ಹೆಚ್ಚಿಸುವ ಮೂಲಕ ಅನುಷ್ಠಾನದ ಚೌಕಟ್ಟನ್ನು ಬಲಪಡಿಸುತ್ತದೆ. ಇದು ಸಿಬ್ಬಂದಿ ನೇಮಕ, ಸಂಭಾವನೆ, ತರಬೇತಿ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಹೆಚ್ಚಿನ ಬೆಂಬಲವನ್ನು ನೀಡುತ್ತದೆ. ಈ ಬದಲಾವಣೆಯು ಕಾರ್ಯಕ್ರಮ ನಿರ್ವಹಣೆಯಲ್ಲಿ ಪ್ರಾಯೋಗಿಕ ಮತ್ತು ಜನಕೇಂದ್ರಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ ಹಾಗೂ ಹೆಚ್ಚು ವೃತ್ತಿಪರ ಮತ್ತು ಸಾಕಷ್ಟು ಬೆಂಬಲಿತ ವ್ಯವಸ್ಥೆಯತ್ತ ಸಾಗುತ್ತದೆ. ಬಲವಾದ ಆಡಳಿತಾತ್ಮಕ ಸಾಮರ್ಥ್ಯವು ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಸುಧಾರಿಸುತ್ತದೆ, ಸೇವಾ ವಿತರಣೆಯನ್ನು ಹೆಚ್ಚಿಸುತ್ತದೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಹೊಸ ಚೌಕಟ್ಟಿನ ಉದ್ದೇಶಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಿರವಾಗಿ ಸಾಧಿಸುವುದನ್ನು ಖಚಿತಪಡಿಸುತ್ತದೆ.
ಹೊಸ ಶಾಸನಬದ್ಧ ಚೌಕಟ್ಟಿನ ತರ್ಕಬದ್ಧತೆ
ಸುಧಾರಣೆಯ ಅಗತ್ಯವು ವ್ಯಾಪಕವಾದ ಸಾಮಾಜಿಕ-ಆರ್ಥಿಕ ಬದಲಾವಣೆಗಳಲ್ಲಿ ಬೇರೂರಿದೆ. ನರೇಗಾ ಯೋಜನೆಯನ್ನು 2005 ರಲ್ಲಿ ರೂಪಿಸಲಾಯಿತು, ಆದರೆ ಅಂದಿನಿಂದ ಗ್ರಾಮೀಣ ಭಾರತವು ಸಂಪೂರ್ಣವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಬಳಕೆ, ಸುಧಾರಿತ ಹಣಕಾಸು ಲಭ್ಯತೆ ಮತ್ತು ವಿಸ್ತರಿತ ಕಲ್ಯಾಣ ಯೋಜನೆಗಳ ಬೆಂಬಲದಿಂದಾಗಿ ಬಡತನದ ಮಟ್ಟವು 2011-12ರಲ್ಲಿ ಶೇಕಡಾ 27.1 ರಷ್ಟಿದ್ದದ್ದು, 2022-23ರ ವೇಳೆಗೆ ಶೇಕಡಾ 5.3 ಕ್ಕೆ ಇಳಿದಿದೆ. ಗ್ರಾಮೀಣ ಜೀವನೋಪಾಯಗಳು ಹೆಚ್ಚು ವೈವಿಧ್ಯಮಯವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಸಂಯೋಜಿತವಾಗಿರುವುದರಿಂದ, ನರೇಗಾದ ಮುಕ್ತ ಮತ್ತು ಬೇಡಿಕೆ-ಆಧಾರಿತ ವಿನ್ಯಾಸವು ಇಂದಿನ ಗ್ರಾಮೀಣ ವಾಸ್ತವಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿಲ್ಲ.
ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ, 2025 ಈ ಸಂದರ್ಭಕ್ಕೆ ಅನುಗುಣವಾಗಿ ಗ್ರಾಮೀಣ ಉದ್ಯೋಗ ಖಾತರಿಗಳನ್ನು ಆಧುನೀಕರಿಸುವ ಮೂಲಕ, ಹೊಣೆಗಾರಿಕೆಯನ್ನು ಬಲಪಡಿಸುವ ಮೂಲಕ ಮತ್ತು ಉದ್ಯೋಗ ಸೃಷ್ಟಿಯನ್ನು ದೀರ್ಘಕಾಲೀನ ಮೂಲಸೌಕರ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಗುರಿಗಳೊಂದಿಗೆ ಸಂಯೋಜಿಸುವ ಮೂಲಕ ಸ್ಪಂದಿಸುತ್ತದೆ.
ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ, 2025 ರ ಪ್ರಮುಖ ಲಕ್ಷಣಗಳು

ಈ ಮಸೂದೆಯು ಅಕುಶಲ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಕ್ಕೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಖಾತರಿಯನ್ನು ನೀಡುತ್ತದೆ. ಇದು ಈ ಹಿಂದಿನ 100 ದಿನಗಳ ಹಕ್ಕಿಗಿಂತ ಹೆಚ್ಚಿನ ಆದಾಯದ ಭದ್ರತೆಯನ್ನು ಒದಗಿಸುತ್ತದೆ. ಬಿತ್ತನೆ ಮತ್ತು ಕೊಯ್ಲಿನ ಪ್ರಮುಖ ಅವಧಿಗಳಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವರ್ಷದಲ್ಲಿ ಒಟ್ಟು 60 ದಿನಗಳ 'ಕೆಲಸವಿಲ್ಲದ ಅವಧಿ'ಯನ್ನು ನಿಗದಿಪಡಿಸಲಾಗಿದೆ. ಕಾರ್ಮಿಕರು ಉಳಿದ 305 ದಿನಗಳಲ್ಲಿ ತಮ್ಮ 125 ದಿನಗಳ ಖಾತರಿಯುತ ಉದ್ಯೋಗವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ, ಇದು ರೈತರು ಮತ್ತು ಕಾರ್ಮಿಕರಿಬ್ಬರಿಗೂ ಪ್ರಯೋಜನಕಾರಿಯಾಗಿದೆ. ದೈನಂದಿನ ಕೂಲಿಯನ್ನು ವಾರಕ್ಕೊಮ್ಮೆ ಅಥವಾ ಕೆಲಸ ಮುಗಿದ ದಿನಾಂಕದಿಂದ ಗರಿಷ್ಠ 15 ದಿನಗಳ ಒಳಗಾಗಿ ಪಾವತಿಸಲಾಗುವುದು. ಉದ್ಯೋಗ ಸೃಷ್ಟಿಯನ್ನು ನಾಲ್ಕು ಆದ್ಯತೆಯ ವಲಯಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸಂಯೋಜಿಸಲಾಗಿದೆ:
· ನೀರಿಗೆ ಸಂಬಂಧಿಸಿದ ಕಾಮಗಾರಿಗಳ ಮೂಲಕ ಜಲ ಭದ್ರತೆ.
· ಪ್ರಮುಖ ಗ್ರಾಮೀಣ ಮೂಲಸೌಕರ್ಯ.
· ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ.
· ತೀವ್ರ ಹವಾಮಾನ ವೈಪರೀತ್ಯಗಳ ಪರಿಣಾಮ ತಗ್ಗಿಸಲು ವಿಶೇಷ ಕಾಮಗಾರಿಗಳು.

ಸೃಜಿಸಲಾದ ಎಲ್ಲಾ ಆಸ್ತಿಗಳನ್ನು ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ ಅಡಿಯಲ್ಲಿ ಕ್ರೋಡೀಕರಿಸಲಾಗುತ್ತದೆ, ಇದು ಏಕೀಕೃತ ಮತ್ತು ಸಂಯೋಜಿತ ರಾಷ್ಟ್ರೀಯ ಅಭಿವೃದ್ಧಿ ಕಾರ್ಯತಂತ್ರವನ್ನು ಖಚಿತಪಡಿಸುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ಯೋಜನಾ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲಾಗಿದೆ; ಇವುಗಳನ್ನು ಸ್ಥಳೀಯವಾಗಿ ಸಿದ್ಧಪಡಿಸಲಾಗುತ್ತದೆ ಮತ್ತು ಪಿಎಂ ಗತಿ ಶಕ್ತಿ ನಂತಹ ರಾಷ್ಟ್ರೀಯ ವ್ಯವಸ್ಥೆಗಳೊಂದಿಗೆ ಪ್ರಾದೇಶಿಕವಾಗಿ ಸಂಯೋಜಿಸಲಾಗುತ್ತದೆ.
ನರೇಗಾ ಮತ್ತು ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆ, 2025
ಈ ಹೊಸ ಮಸೂದೆಯು ನರೇಗಾ ಯೋಜನೆಗಿಂತ ಒಂದು ಪ್ರಮುಖ ಮೇಲ್ದರ್ಜೆಯ ಸುಧಾರಣೆಯನ್ನು ಪ್ರತಿನಿಧಿಸುತ್ತದೆ. ಇದು ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸುವುದರ ಜೊತೆಗೆ ಉದ್ಯೋಗ, ಪಾರದರ್ಶಕತೆ, ಯೋಜನೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

ಹಣಕಾಸಿನ ರಚನೆ
ಕೇಂದ್ರ ವಲಯದ ಯೋಜನೆಯಿಂದ ಕೇಂದ್ರ ಪ್ರಾಯೋಜಿತ ಚೌಕಟ್ಟಿಗೆ ಬದಲಾಗಿರುವುದು ಗ್ರಾಮೀಣ ಉದ್ಯೋಗ ಮತ್ತು ಆಸ್ತಿ ಸೃಜನೆಯಲ್ಲಿನ ಸ್ಥಳೀಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಈ ಹೊಸ ರಚನೆಯ ಅಡಿಯಲ್ಲಿ, ರಾಜ್ಯಗಳು ಮಾನದಂಡ ಆಧಾರಿತ ಹಂಚಿಕೆ ಚೌಕಟ್ಟಿನ ಮೂಲಕ ವೆಚ್ಚ ಮತ್ತು ಜವಾಬ್ದಾರಿ ಎರಡನ್ನೂ ಹಂಚಿಕೊಳ್ಳುತ್ತವೆ. ಇದು ಪರಿಣಾಮಕಾರಿ ಅನುಷ್ಠಾನಕ್ಕೆ ಬಲವಾದ ಉತ್ತೇಜನವನ್ನು ನೀಡುತ್ತದೆ ಮತ್ತು ದುರುಪಯೋಗವನ್ನು ತಡೆಯುತ್ತದೆ. ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ಯೋಜನಾ ಪ್ರಕ್ರಿಯೆಯು ಪ್ರಾದೇಶಿಕ ವಾಸ್ತವಗಳಿಗೆ ಅನುಗುಣವಾಗಿರುತ್ತದೆ. ಅದೇ ಸಮಯದಲ್ಲಿ, ಕೇಂದ್ರ ಸರ್ಕಾರವು ಮಾನದಂಡಗಳನ್ನು ನಿಗದಿಪಡಿಸುವುದನ್ನು ಮುಂದುವರಿಸುತ್ತದೆ, ಮತ್ತು ರಾಜ್ಯಗಳು ಹೊಣೆಗಾರಿಕೆಯೊಂದಿಗೆ ಅವುಗಳನ್ನು ಕಾರ್ಯಗತಗೊಳಿಸುತ್ತವೆ. ಇದರ ಪರಿಣಾಮವಾಗಿ ಉಂಟಾಗುವ ಸಹಕಾರಿ ಪಾಲುದಾರಿಕೆಯು ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಫಲಿತಾಂಶಗಳನ್ನು ಬಲಪಡಿಸುತ್ತದೆ.

ಕೂಲಿ, ಸಾಮಗ್ರಿ ಮತ್ತು ಆಡಳಿತಾತ್ಮಕ ಘಟಕಗಳ ಮೇಲಿನ ಒಟ್ಟು ಅಂದಾಜು ವಾರ್ಷಿಕ ನಿಧಿಯ ಅವಶ್ಯಕತೆಯು ರಾಜ್ಯದ ಪಾಲನ್ನು ಒಳಗೊಂಡಂತೆ 1,51,282 ಕೋಟಿ ರೂ. ಆಗಿದೆ. ಇದರಲ್ಲಿ ಕೇಂದ್ರದ ಅಂದಾಜು ಪಾಲು 95,692.31 ಕೋಟಿ ರೂ. ಈ ಬದಲಾವಣೆಯು ರಾಜ್ಯಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹೇರುವುದಿಲ್ಲ. ಧನಸಹಾಯದ ರಚನೆಯನ್ನು ರಾಜ್ಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಪನಾಂಕ ಮಾಡಲಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ರ ಪ್ರಮಾಣಿತ ವೆಚ್ಚ ಹಂಚಿಕೆ ಅನುಪಾತವನ್ನು ನಿಗದಿಪಡಿಸಲಾಗಿದೆ. ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ 90:10 ರ ಹೆಚ್ಚಿನ ಬೆಂಬಲ ಮತ್ತು ಶಾಸನಸಭೆಗಳಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ 100 ರಷ್ಟು ಕೇಂದ್ರದ ಧನಸಹಾಯವನ್ನು ನೀಡಲಾಗುತ್ತದೆ. ಹಿಂದಿನ ಚೌಕಟ್ಟಿನ ಅಡಿಯಲ್ಲಿ ರಾಜ್ಯಗಳು ಈಗಾಗಲೇ ಸಾಮಗ್ರಿ ಮತ್ತು ಆಡಳಿತಾತ್ಮಕ ವೆಚ್ಚಗಳ ಪಾಲನ್ನು ಭರಿಸುತ್ತಿದ್ದವು, ಮತ್ತು ಈಗಿನ ಊಹಿಸಬಹುದಾದ ಮಾನದಂಡ ಆಧಾರಿತ ಹಂಚಿಕೆಯು ಉತ್ತಮ ಬಜೆಟ್ ನಿರ್ವಹಣೆಗೆ ಮತ್ತಷ್ಟು ಬೆಂಬಲ ನೀಡುತ್ತದೆ. ವಿಪತ್ತುಗಳ ಸಮಯದಲ್ಲಿ ರಾಜ್ಯಗಳಿಗೆ ಹೆಚ್ಚುವರಿ ನೆರವು ನೀಡುವ ನಿಬಂಧನೆಗಳು ಮತ್ತು ಬಲವಾದ ಮೇಲ್ವಿಚಾರಣಾ ಕಾರ್ಯವಿಧಾನಗಳು ದುರುಪಯೋಗದಿಂದ ಉಂಟಾಗುವ ದೀರ್ಘಕಾಲೀನ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದು ಹೊಣೆಗಾರಿಕೆಯೊಂದಿಗೆ ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸುತ್ತದೆ.

ವಿಕಸಿತ ಭಾರತ - ಜಿ ರಾಮ್ ಜಿ ಮಸೂದೆಯ ಪ್ರಯೋಜನಗಳು

ಈ ಮಸೂದೆಯು ಉದ್ಯೋಗ ಸೃಷ್ಟಿಯನ್ನು ಉತ್ಪಾದಕ ಆಸ್ತಿಗಳ ಸೃಜನೆಯೊಂದಿಗೆ ಸಂಯೋಜಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ, ಇದು ಹೆಚ್ಚಿನ ಕುಟುಂಬದ ಆದಾಯ ಮತ್ತು ಸುಧಾರಿತ ಚೇತರಿಸಿಕೊಳ್ಳುವ ಶಕ್ತಿಗೆ ಕಾರಣವಾಗುತ್ತದೆ. ಕೃಷಿ ಮತ್ತು ಅಂತರ್ಜಲ ಮರುಪೂರಣಕ್ಕೆ ಬೆಂಬಲ ನೀಡುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ. ರಸ್ತೆಗಳು ಮತ್ತು ಸಂಪರ್ಕದಂತಹ ಪ್ರಮುಖ ಗ್ರಾಮೀಣ ಮೂಲಸೌಕರ್ಯಗಳಲ್ಲಿನ ಹೂಡಿಕೆಯು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುತ್ತದೆ; ಹಾಗೆಯೇ ಸಂಗ್ರಹಣೆ, ಮಾರುಕಟ್ಟೆಗಳು ಮತ್ತು ಉತ್ಪಾದನಾ ಆಸ್ತಿಗಳನ್ನು ಒಳಗೊಂಡ ಜೀವನೋಪಾಯದ ಮೂಲಸೌಕರ್ಯಗಳು ಆದಾಯದ ವೈವಿಧ್ಯೀಕರಣಕ್ಕೆ ನೆರವಾಗುತ್ತವೆ. ನೀರು ಕೊಯ್ಲು, ಪ್ರವಾಹದ ನೀರು ಹರಿಸುವಿಕೆ ಮತ್ತು ಮಣ್ಣಿನ ಸಂರಕ್ಷಣೆಯ ಮೇಲೆ ಕೇಂದ್ರೀಕೃತವಾಗಿರುವ ಕೆಲಸಗಳ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲಾಗುತ್ತದೆ. 125 ದಿನಗಳ ಉದ್ಯೋಗ ಖಾತರಿಯು ಕುಟುಂಬದ ಗಳಿಕೆಯನ್ನು ಹೆಚ್ಚಿಸುತ್ತದೆ, ಗ್ರಾಮ ಮಟ್ಟದಲ್ಲಿ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಸಂಕಷ್ಟದ ಕಾರಣದಿಂದ ಉಂಟಾಗುವ ವಲಸೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವೆಲ್ಲವೂ ಡಿಜಿಟಲ್ ಹಾಜರಾತಿ, ಕೂಲಿ ಪಾವತಿ ಮತ್ತು ದತ್ತಾಂಶ ಆಧಾರಿತ ಯೋಜನೆಯ ಬೆಂಬಲದೊಂದಿಗೆ ನಡೆಯುತ್ತವೆ.

ಬಿತ್ತನೆ ಮತ್ತು ಕೊಯ್ಲಿನ ಪ್ರಮುಖ ಅವಧಿಗಳಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ ರಾಜ್ಯ-ಅಧಿಸೂಚಿತ ವಿರಾಮಗಳನ್ನು (Pauses) ನೀಡುವ ಮೂಲಕ, ರೈತರಿಗೆ ಖಾತರಿಿತ ಕಾರ್ಮಿಕರ ಲಭ್ಯತೆ, ಕೂಲಿ ಹಣದ ಅತಿಯಾದ ಏರಿಕೆಯ ತಡೆ ಹಾಗೂ ಸುಧಾರಿತ ನೀರಾವರಿ, ಸಂಗ್ರಹಣೆ ಮತ್ತು ಸಂಪರ್ಕದ ಪ್ರಯೋಜನಗಳು ದೊರೆಯುತ್ತವೆ. ಇನ್ನು ಕಾರ್ಮಿಕರು, ಹೆಚ್ಚಿನ ಆದಾಯದ ಸಾಧ್ಯತೆ, ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ಮುನ್ಸೂಚಿತ ಕೆಲಸಗಳು, ಸುರಕ್ಷಿತ ಡಿಜಿಟಲ್ ಕೂಲಿ ಪಾವತಿ, ತಾವು ಸೃಜಿಸಲು ಸಹಾಯ ಮಾಡಿದ ಆಸ್ತಿಗಳಿಂದ ನೇರ ಪ್ರಯೋಜನಗಳು ಮತ್ತು ಕಡ್ಡಾಯ ನಿರುದ್ಯೋಗ ಭತ್ಯೆಯ ಲಾಭವನ್ನು ಪಡೆಯುತ್ತಾರೆ. ಯಾವುದೇ ಸಂದರ್ಭದಲ್ಲಿ ಕೆಲಸವನ್ನು ಒದಗಿಸದಿದ್ದಲ್ಲಿ, 15 ದಿನಗಳ ನಂತರ ದೈನಂದಿನ ನಿರುದ್ಯೋಗ ಭತ್ಯೆಯು ಪಾವತಿಗೆ ಅರ್ಹವಾಗುತ್ತದೆ ಮತ್ತು ಇದರ ಹೊಣೆಗಾರಿಕೆಯು ರಾಜ್ಯಗಳ ಮೇಲಿರುತ್ತದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಕಾಲದಲ್ಲಿ ಉದ್ಯೋಗ ಒದಗಿಸುವುದನ್ನು ಉತ್ತೇಜಿಸುವ ಉದ್ದೇಶದಿಂದ, ಈ ಭತ್ಯೆಯ ದರಗಳು ಮತ್ತು ಷರತ್ತುಗಳನ್ನು ನಿಯಮಗಳ ಮೂಲಕ ರೂಪಿಸಲಾಗುತ್ತದೆ.

ಅನುಷ್ಠಾನ ಮತ್ತು ಮೇಲ್ವಿಚಾರಣಾ ಪ್ರಾಧಿಕಾರಗಳು
ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಮಟ್ಟಗಳಲ್ಲಿ ಮಿಷನ್‌ನ ಸಮನ್ವಯಿತ, ಹೊಣೆಗಾರಿಕೆಯುಳ್ಳ ಮತ್ತು ಪಾರದರ್ಶಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಈ ಮಸೂದೆಯು ಸ್ಪಷ್ಟವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುತ್ತದೆ.
- ಕೇಂದ್ರ ಮತ್ತು ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿಗಳು: ಇವು ನೀತಿ ಮಾರ್ಗದರ್ಶನ ನೀಡುತ್ತವೆ, ಅನುಷ್ಠಾನವನ್ನು ಪರಾಮರ್ಶಿಸುತ್ತವೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತವೆ.
- ರಾಷ್ಟ್ರೀಯ ಮತ್ತು ರಾಜ್ಯ ಸ್ಟೀರಿಂಗ್ ಸಮಿತಿಗಳು: ಇವು ಕಾರ್ಯತಂತ್ರದ ನಿರ್ದೇಶನ, ವಿವಿಧ ಯೋಜನೆಗಳ ಸಂಯೋಜನೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ನಡೆಸುತ್ತವೆ.
- ಪಂಚಾಯತ್ ರಾಜ್ ಸಂಸ್ಥೆಗಳು: ಯೋಜನೆ ಮತ್ತು ಅನುಷ್ಠಾನದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟು ವೆಚ್ಚದ ಕನಿಷ್ಠ ಅರ್ಧದಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯತ್‌ಗಳೇ ಜಾರಿಗೊಳಿಸುತ್ತವೆ.
- ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಮತ್ತು ಕಾರ್ಯಕ್ರಮ ಅಧಿಕಾರಿಗಳು: ಇವರು ಯೋಜನೆ, ನಿಯಮಗಳ ಪಾಲನೆ, ಪಾವತಿಗಳು ಮತ್ತು ಸಾಮಾಜಿಕ ಪರಿಶೋಧನೆಗಳನ್ನು ನಿರ್ವಹಿಸುತ್ತಾರೆ.
- ಗ್ರಾಮ ಸಭೆಗಳು: ಸಾಮಾಜಿಕ ಪರಿಶೋಧನೆಗಳನ್ನು ನಡೆಸುವಲ್ಲಿ ಮತ್ತು ಎಲ್ಲಾ ದಾಖಲೆಗಳ ಲಭ್ಯತೆಯ ಮೂಲಕ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಸಭೆಗಳ ಪಾತ್ರವನ್ನು ಮತ್ತಷ್ಟು ಬಲಪಡಿಸಲಾಗಿದೆ.
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಮಾಜಿಕ ರಕ್ಷಣೆ
ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಹಣವನ್ನು ರಕ್ಷಿಸಲು ಈ ಮಸೂದೆಯು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಜಾರಿ ಅಧಿಕಾರಗಳನ್ನು ನೀಡುತ್ತದೆ. ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಲು, ಗಂಭೀರ ಅಕ್ರಮಗಳು ಕಂಡುಬಂದಲ್ಲಿ ನಿಧಿ ಬಿಡುಗಡೆಯನ್ನು ಅಮಾನತುಗೊಳಿಸಲು ಮತ್ತು ನ್ಯೂನತೆಗಳನ್ನು ಸರಿಪಡಿಸಲು ಸುಧಾರಣಾ ಅಥವಾ ಪರಿಹಾರ ಕ್ರಮಗಳನ್ನು ಸೂಚಿಸಲು ಇದು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಈ ನಿಬಂಧನೆಗಳು ವ್ಯವಸ್ಥೆಯಾದ್ಯಂತ ಹೊಣೆಗಾರಿಕೆಯನ್ನು ಬಲಪಡಿಸುತ್ತವೆ, ಹಣಕಾಸಿನ ಶಿಸ್ತನ್ನು ಕಾಪಾಡುತ್ತವೆ ಮತ್ತು ದುರುಪಯೋಗವನ್ನು ತಡೆಗಟ್ಟಲು ಸಕಾಲಿಕ ಮಧ್ಯಸ್ಥಿಕೆಯನ್ನು ಸಾಧ್ಯವಾಗಿಸುತ್ತವೆ.

ಈ ಮಸೂದೆಯು ಅನುಷ್ಠಾನದ ಪ್ರತಿಯೊಂದು ಹಂತವನ್ನೂ ಒಳಗೊಂಡ ಸಮಗ್ರ ಪಾರದರ್ಶಕ ಚೌಕಟ್ಟನ್ನು ಸ್ಥಾಪಿಸುತ್ತದೆ. ಅಕ್ರಮಗಳನ್ನು ಮೊದಲೇ ಗುರುತಿಸಲು ಕೃತಕ ಬುದ್ಧಿಮತ್ತೆ ಮತ್ತು ಬಯೋಮೆಟ್ರಿಕ್ ದೃಢೀಕರಣದ ಬಳಕೆಗೆ ಇದು ಅವಕಾಶ ನೀಡುತ್ತದೆ; ಇದಕ್ಕೆ ನಿರಂತರ ಮಾರ್ಗದರ್ಶನ ಮತ್ತು ಸಮನ್ವಯ ನೀಡಲು ಕೇಂದ್ರ ಮತ್ತು ರಾಜ್ಯ ಸ್ಟೀರಿಂಗ್ ಸಮಿತಿಗಳು ಬೆಂಬಲ ನೀಡುತ್ತವೆ. ನಾಲ್ಕು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಗ್ರಾಮೀಣಾಭಿವೃದ್ಧಿ ವಲಯಗಳ ಮೂಲಕ ಕೇಂದ್ರೀಕೃತ ವಿಧಾನವು ಫಲಿತಾಂಶಗಳನ್ನು ನಿಕಟವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಮೇಲ್ವಿಚಾರಣೆಯಲ್ಲಿ ಪಂಚಾಯತ್‌ಗಳಿಗೆ ಹೆಚ್ಚಿನ ಪಾತ್ರವನ್ನು ನೀಡಲಾಗಿದ್ದು, ನೈಜ ಸಮಯದಲ್ಲಿ ಜಿಪಿಎಸ್ ಮತ್ತು ಮೊಬೈಲ್ ಆಧಾರಿತ ಮೇಲ್ವಿಚಾರಣೆಯು ಇದಕ್ಕೆ ಪೂರಕವಾಗಿದೆ. ನೈಜ-ಸಮಯದ ಎಂಐಎಸ್ ಡ್ಯಾಶ್‌ಬೋರ್ಡ್‌ಗಳು ಮತ್ತು ವಾರಕ್ಕೊಮ್ಮೆ ಸಾರ್ವಜನಿಕವಾಗಿ ಮಾಹಿತಿಯನ್ನು ಬಹಿರಂಗಪಡಿಸುವ ಕ್ರಮಗಳು ಪಾರದರ್ಶಕತೆಯನ್ನು ಖಚಿತಪಡಿಸುತ್ತವೆ. ಕನಿಷ್ಠ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಲಾಗುವ ಸಾಮಾಜಿಕ ಪರಿಶೋಧನೆಗಳು ಸಮುದಾಯದ ಸಹಭಾಗಿತ್ವ ಮತ್ತು ನಂಬಿಕೆಯನ್ನು ಬಲಪಡಿಸುತ್ತವೆ.
ಉಪಸಂಹಾರ
ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆ, 2025, ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಒಂದು ನಿರ್ಣಾಯಕ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ನರೇಗಾ ಯೋಜನೆಯು ಕಾಲಾನಂತರದಲ್ಲಿ ಸಹಭಾಗಿತ್ವ, ಡಿಜಿಟಲೀಕರಣ ಮತ್ತು ಪಾರದರ್ಶಕತೆಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆಯಾದರೂ, ಸುದೀರ್ಘ ಕಾಲದ ರಚನಾತ್ಮಕ ದೌರ್ಬಲ್ಯಗಳು ಅದರ ಪರಿಣಾಮಕಾರಿತ್ವವನ್ನು ಸೀಮಿತಗೊಳಿಸಿದ್ದವು. ಈ ಹೊಸ ಮಸೂದೆಯು ಹಿಂದಿನ ಸುಧಾರಣೆಗಳನ್ನು ಆಧರಿಸಿ ಬೆಳೆಯುತ್ತಲೇ, ಆಧುನಿಕ, ಹೊಣೆಗಾರಿಕೆಯುಳ್ಳ ಮತ್ತು ಮೂಲಸೌಕರ್ಯ-ಕೇಂದ್ರಿತ ಚೌಕಟ್ಟಿನ ಮೂಲಕ ಆ ಕೊರತೆಗಳನ್ನು ನೀಗಿಸುತ್ತದೆ.
ಖಾತರಿ ಉದ್ಯೋಗವನ್ನು ವಿಸ್ತರಿಸುವ ಮೂಲಕ, ಕೆಲಸವನ್ನು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳೊಂದಿಗೆ ಸಂಯೋಜಿಸುವ ಮೂಲಕ ಮತ್ತು ಬಲವಾದ ಡಿಜಿಟಲ್ ಆಡಳಿತವನ್ನು ಅಳವಡಿಸುವ ಮೂಲಕ, ಈ ಮಸೂದೆಯು ಗ್ರಾಮೀಣ ಉದ್ಯೋಗವನ್ನು ಸುಸ್ಥಿರ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕ ಜೀವನೋಪಾಯಕ್ಕಾಗಿ ಒಂದು ವ್ಯೂಹಾತ್ಮಕ ಸಾಧನವಾಗಿ ಮರುಸ್ಥಾಪಿಸುತ್ತದೆ. ಇದು ಸಂಪೂರ್ಣವಾಗಿ ವಿಕಸಿತ ಭಾರತ 2047ರ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ.
References
Ministry of Rural Development
https://mnregaweb4.nic.in/netnrega/SocialAuditFindings/SAU_FMRecoveryReport.aspx?lflag=eng&fin_year=2024-2025&source=national&labels=labels&rep_type=SoA&Digest=3uRMVt6308BGCW2QZYttXQ
Lok Sabha Bill
https://sansad.in/getFile/BillsTexts/LSBillTexts/Asintroduced/As intro1216202512439PM.pdf?source=legislation
News on Air
https://www.newsonair.gov.in/indias-extreme-poverty-falls-to-5-3-in-2022-2023-says-world-bank/
PIB Press Releases
https://www.pib.gov.in/PressNoteDetails.aspx?id=155090&NoteId=155090&ModuleId=3®=3&lang=2
Click here to see pdf
*****
(Backgrounder ID: 156556)
आगंतुक पटल : 48
Provide suggestions / comments