Others
ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧ
Posted On:
16 DEC 2025 1:26PM
|
ಪ್ರಮುಖ ಮಾರ್ಗಸೂಚಿಗಳು
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 15-16 ರಂದು ಜೋರ್ಡಾನ್‌ಗೆ ಭೇಟಿ ನೀಡಿದರು. ಇದು ಆ ದೇಶಕ್ಕೆ ಅವರ ಮೊದಲ ಪೂರ್ಣ ಪ್ರಮಾಣದ ಭೇಟಿಯಾಗಿದೆ.
- ಈ ಭೇಟಿಯ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ, ಜಲಸಂಪನ್ಮೂಲ ನಿರ್ವಹಣೆ, ಸಾಂಸ್ಕೃತಿಕ ವಿನಿಮಯ, ಡಿಜಿಟಲ್ ಪರಿಹಾರಗಳು ಮತ್ತು ಪೇತ್ರಾ ಹಾಗೂ ಎಲ್ಲೋರಾ ತಾಣಗಳ ನಡುವೆ 'ಟ್ವಿನ್ನಿಂಗ್' (ಸಹೋದರಿ ತಾಣಗಳ ಒಪ್ಪಂದ) ಸೇರಿದಂತೆ ಒಟ್ಟು ಐದು ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
- ಈ ವರ್ಷವು ಭಾರತ ಮತ್ತು ಜೋರ್ಡಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ 75ನೇ ವಾರ್ಷಿಕೋತ್ಸವವಾಗಿದೆ.
- ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
- ಮುಂದಿನ 5 ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ.
- ಭಾರತಕ್ಕೆ ಅಗತ್ಯವಿರುವ ಫಾಸ್ಫೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳ ಪೂರೈಕೆಯಲ್ಲಿ ಜೋರ್ಡಾನ್ ಮುಂಚೂಣಿಯಲ್ಲಿದೆ.
- ಪ್ರಸ್ತುತ ಸುಮಾರು 17,500 ಭಾರತೀಯರು ಜೋರ್ಡಾನ್‌ನಲ್ಲಿ ವಾಸಿಸುತ್ತಿದ್ದಾರೆ. ಇವರು ಹೆಚ್ಚಾಗಿ ಜವಳಿ, ಕಟ್ಟಡ ನಿರ್ಮಾಣ, ಉತ್ಪಾದನೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
|
ಪೀಠಿಕೆ
ಡಿಸೆಂಬರ್ 15-18, 2025 ರವರೆಗೆ ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ ದೇಶಗಳಲ್ಲಿ ಹಮ್ಮಿಕೊಂಡಿರುವ ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 15-16 ರಂದು ಅಮ್ಮನ್‌ನಲ್ಲಿದ್ದರು. ಅಲ್ಲಿ ಅವರು ಡಿಸೆಂಬರ್ 15 ರಂದು ಜೋರ್ಡಾನ್‌ನ ರಾಜರಾದ ಘನತೆವೆತ್ತ ಎರಡನೇ ಕಿಂಗ್ ಅಬ್ದುಲ್ಲಾ ಅವರೊಂದಿಗೆ ಸುದೀರ್ಘ ಚರ್ಚೆಗಳನ್ನು ನಡೆಸಿದರು. ಇದು ಜೋರ್ಡಾನ್‌ಗೆ ಅವರ ಮೊದಲ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿಯಾಗಿದೆ. ಇದಕ್ಕೂ ಮೊದಲು, ಅವರು ಫೆಬ್ರವರಿ 2018 ರಲ್ಲಿ ಪ್ಯಾಲೆಸ್ಟೈನ್‌ಗೆ ಪ್ರಯಾಣಿಸುವ ಸಂದರ್ಭದಲ್ಲಿ ಜೋರ್ಡಾನ್‌ಗೆ ಭೇಟಿ ನೀಡಿದ್ದರು.
ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧವು ದಶಕಗಳ ರಾಜತಾಂತ್ರಿಕ ಸೌಹಾರ್ದತೆ, ವ್ಯವಸ್ಥಿತ ರಾಜಕೀಯ ಮಾತುಕತೆ ಮತ್ತು ಸ್ಥಿರವಾಗಿ ವಿಸ್ತರಿಸುತ್ತಿರುವ ಆರ್ಥಿಕ ಸಹಕಾರದ ಮೇಲೆ ಭದ್ರವಾಗಿ ನಿಂತಿದೆ. 1950 ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದಾಗಿನಿಂದ, ಈ ಬಾಂಧವ್ಯವು ನಿಯಮಿತ ಉನ್ನತ ಮಟ್ಟದ ನಾಯಕರ ಸಂವಾದಗಳು, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ವಿವಿಧ ವಲಯಗಳ ಸಹಕಾರದ ಮೂಲಕ ಒಂದು ಪ್ರಬುದ್ಧ ಪಾಲುದಾರಿಕೆಯಾಗಿ ವಿಕಸನಗೊಂಡಿದೆ. ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆ ಈ ಸಂಬಂಧದ ಪ್ರಮುಖ ಸ್ತಂಭವಾಗಿದೆ. ಪ್ರಸ್ತುತ ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಭಾರತವು ಜೋರ್ಡಾನ್‌ಗೆ ಮುಖ್ಯವಾಗಿ ಧಾನ್ಯಗಳು, ಹೆಪ್ಪುಗಟ್ಟಿದ ಮಾಂಸ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪಶು ಆಹಾರ ಇತ್ಯಾದಿಗಳನ್ನು ರಫ್ತು ಮಾಡುತ್ತದೆ. ಬದಲಾಗಿ, ಜೋರ್ಡಾನ್‌ನಿಂದ ರಸಗೊಬ್ಬರಗಳು, ವಿಶೇಷವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್ ಅನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಜೋರ್ಡಾನ್‌ನಲ್ಲಿ ದೀರ್ಘಾವಧಿಯ ಜಂಟಿ ಉದ್ಯಮಗಳ ಸ್ಥಾಪನೆ ಮತ್ತು ಭಾರತೀಯ ಒಡೆತನದ ಉತ್ಪಾದನಾ ಘಟಕಗಳ ಕಾರ್ಯಾಚರಣೆಯು ಉಭಯ ದೇಶಗಳ ನಡುವಿನ ಆಳವಾದ ವಾಣಿಜ್ಯ ಏಕೀಕರಣವನ್ನು ಪ್ರತಿಬಿಂಬಿಸುತ್ತದೆ. ವಿದೇಶಾಂಗ ಕಚೇರಿ ಸಮಾಲೋಚನೆಗಳು ಮತ್ತು ಉನ್ನತ ನಾಯಕತ್ವದ ಸತತ ಭೇಟಿಗಳು ಈ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ವೇಗವನ್ನು ನೀಡುತ್ತಿವೆ.
ಹಲವು ವರ್ಷಗಳಿಂದ ಭಾರತ-ಜೋರ್ಡಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು
ಭಾರತ ಮತ್ತು ಜೋರ್ಡಾನ್ ಪರಸ್ಪರ ಗೌರವದ ಆಧಾರದ ಮೇಲೆ ಆತ್ಮೀಯ ಸಂಬಂಧವನ್ನು ಹೊಂದಿವೆ. 1947 ರಲ್ಲಿ ಸಹಕಾರ ಮತ್ತು ಸೌಹಾರ್ದ ಸಂಬಂಧಗಳಿಗಾಗಿ ಮೊದಲ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1950 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಔಪಚಾರಿಕಗೊಳಿಸಲಾಯಿತು. ಈ ವರ್ಷವು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ 75 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
1. ಉನ್ನತ ಮಟ್ಟದ ರಾಜಕೀಯ ಚಟುವಟಿಕೆಗಳು
ಈ ಸಂಬಂಧದ ಅಡಿಪಾಯವು ಉನ್ನತ ಮಟ್ಟದ ವಿನಿಮಯಗಳ ಮೂಲಕ ನಿರ್ಮಾಣವಾಗಿದೆ. ಫೆಬ್ರವರಿ 2018 ರಲ್ಲಿ ಪ್ರಧಾನಮಂತ್ರಿಯವರು ಪ್ಯಾಲೆಸ್ಟೈನ್ ಭೇಟಿಯ ಸಂದರ್ಭದಲ್ಲಿ ಜೋರ್ಡಾನ್ ಮಾರ್ಗವಾಗಿ ಪ್ರಯಾಣಿಸಿದ್ದರು. ಇದರ ಬೆನ್ನಲ್ಲೇ, 27 ಫೆಬ್ರವರಿ ಯಿಂದ 1 ಮಾರ್ಚ್ 2018 ರವರೆಗೆ ರಾಜ ಎರಡನೇ ಅಬ್ದುಲ್ಲಾ ಅವರು ಭಾರತಕ್ಕೆ ಸರ್ಕಾರಿ ಭೇಟಿ ನೀಡಿದ್ದರು. ಈ ಭೇಟಿಯ ಅವಧಿಯಲ್ಲಿ ನಿಯೋಗ ಮಟ್ಟದ ಮಾತುಕತೆಗಳು, ಸಿಇಒಗಳ ದುಂಡುಮೇಜಿನ ಸಭೆ, ‘ಇಸ್ಲಾಮಿಕ್ ಪರಂಪರೆ: ತಿಳುವಳಿಕೆ ಮತ್ತು ಸಂಯಮವನ್ನು ಉತ್ತೇಜಿಸುವುದು’ ಎಂಬ ವಿಷಯದ ಕುರಿತಾದ ಸಮ್ಮೇಳನದಲ್ಲಿ ಜಂಟಿ ಭಾಷಣ ಮತ್ತು 12 ಸಾಮರಸ್ಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದು ಐಟಿ ವೃತ್ತಿಪರರಿಗೆ ಐದು ವರ್ಷಗಳ ಕಾಲ ತರಬೇತಿ ನೀಡಲು ಜೋರ್ಡಾನ್‌ನಲ್ಲಿ C-DAC ಎಕ್ಸಲೆನ್ಸ್ ಸೆಂಟರ್ ಸ್ಥಾಪಿಸುವ ಘೋಷಣೆ ಮತ್ತು ಔಷಧಗಳು ಹಾಗೂ ಲಸಿಕೆಗಳಿಗಾಗಿ 5 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸಹಾಯದ ಪ್ಯಾಕೇಜ್ ಘೋಷಣೆಗೆ ಕಾರಣವಾಯಿತು.
ಅದರ ನಂತರ, ಉಭಯ ನಾಯಕರು ಜೂನ್ 2024 ರಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ G7 ಶೃಂಗಸಭೆ, ಡಿಸೆಂಬರ್ 2023 ರಲ್ಲಿ ದುಬೈನಲ್ಲಿ ನಡೆದ ಸಿಒಪಿ-28, ಅಕ್ಟೋಬರ್ 2019 ರಲ್ಲಿ ರಿಯಾದ್‌ನಲ್ಲಿ ನಡೆದ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಶಿಯೇಟಿವ್ ಮತ್ತು ಸೆಪ್ಟೆಂಬರ್ 2019ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭಗಳಲ್ಲಿ ಹಲವಾರು ಬಾರಿ ಭೇಟಿಯಾದರು.
ಅಲ್ಲದೆ, ಏಪ್ರಿಲ್ 24, 2025 ರಂದು ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಉಭಯ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಜೋರ್ಡಾನ್ ರಾಜರು ಈ ದಾಳಿಯನ್ನು ಖಂಡಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಅಕ್ಟೋಬರ್ 2023 ರಲ್ಲಿಯೂ ಉಭಯ ನಾಯಕರು ಗಾಜಾದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೂರವಾಣಿ ಮೂಲಕ ಮಾತನಾಡಿದ್ದರು ಮತ್ತು ಭಯೋತ್ಪಾದನೆ, ಹಿಂಸಾಚಾರ ಹಾಗೂ ನಾಗರಿಕರ ಜೀವಹಾನಿಯ ಬಗ್ಗೆ ತಮ್ಮ ಪರಸ್ಪರ ಕಳಕಳಿಯನ್ನು ಹಂಚಿಕೊಂಡಿದ್ದರು.
2025ರಲ್ಲಿ, ಭಾರತ-ಜೋರ್ಡಾನ್ ಸಂಬಂಧಗಳು ವ್ಯವಸ್ಥಿತ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಗಳ ಮೂಲಕ ಮತ್ತಷ್ಟು ಮುಂದುವರೆದವು. 4ನೇ ಸುತ್ತಿನ ಭಾರತ-ಜೋರ್ಡಾನ್ ವಿದೇಶಾಂಗ ಕಚೇರಿ ಸಮಾಲೋಚನೆಗಳು ಏಪ್ರಿಲ್ 29, 2025 ರಂದು ಅಮ್ಮನ್‌ನಲ್ಲಿ ನಡೆದವು. ಇದರ ನಂತರ ಸೆಪ್ಟೆಂಬರ್ 02, 2025 ರಂದು ಆರೋಗ್ಯ ಸಹಕಾರದ ಕುರಿತು ಜಂಟಿ ಕಾರ್ಯಕಾರಿ ಗುಂಪಿನ 2ನೇ ಸುತ್ತಿನ ಸಭೆ ವರ್ಚುವಲ್ ಆಗಿ ನಡೆಯಿತು. ಈ ಸಭೆಯಲ್ಲಿ ಭಾರತೀಯ ಫಾರ್ಮಾಕೋಪಿಯಾದ ಅಂಗೀಕಾರ, ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಉಪಕರಣಗಳ ನಿಯಂತ್ರಣ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಅಕ್ಟೋಬರ್ 13-15, 2025 ರವರೆಗೆ ಭಾರತದ ಕಾರ್ಯದರ್ಶಿಗಳು (ದಕ್ಷಿಣ) ಜೋರ್ಡಾನ್‌ಗೆ ಭೇಟಿ ನೀಡಿದಾಗ ದ್ವಿಪಕ್ಷೀಯ ಸಹಕಾರದ ಬಗ್ಗೆ ಗಣನೀಯ ಚರ್ಚೆಗಳು ನಡೆದು ಈ ಸಂಬಂಧಕ್ಕೆ ಮತ್ತಷ್ಟು ವೇಗ ಸಿಕ್ಕಿತು.
ಹೆಚ್ಚುವರಿ ವಿನಿಮಯಗಳಲ್ಲಿ ಡಿಸೆಂಬರ್ 2017 ರಲ್ಲಿ ಜೋರ್ಡಾನ್ ವಿದೇಶಾಂಗ ಸಚಿವ ಐಮನ್ ಸಫಾದಿ ಅವರ ಭಾರತ ಭೇಟಿ, ಜನವರಿ 2020 ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ಕುಮಾರ್ ದೋವಲ್ ಅವರ ಜೋರ್ಡಾನ್ ಭೇಟಿ ಮತ್ತು 2020 ರಲ್ಲಿ ಕೋವಿಡ್-19 ಸಹಕಾರದ ಕುರಿತು ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆದ ದೂರವಾಣಿ ಸಂಭಾಷಣೆಗಳು ಸೇರಿವೆ.
2. ವಾಣಿಜ್ಯ ಮತ್ತು ಆರ್ಥಿಕ ಸಹಕಾರ
ವರ್ಷಗಳ ಅವಧಿಯಲ್ಲಿ, ಭಾರತ ಮತ್ತು ಜೋರ್ಡಾನ್ ನಡುವಿನ ಆರ್ಥಿಕ ಸಂಬಂಧಗಳು ಗಣನೀಯವಾಗಿ ಬಲಗೊಂಡಿವೆ ಮತ್ತು ದ್ವಿಪಕ್ಷೀಯ ವ್ಯಾಪಾರವು ಬಲವಾದ ಬೆಳವಣಿಗೆಯನ್ನು ತೋರಿಸುತ್ತಿದೆ. ಭಾರತವು ಜೋರ್ಡಾನ್‌ನ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 2023-24ರ ಹಣಕಾಸು ವರ್ಷದಲ್ಲಿ, ಒಟ್ಟು ಭಾರತ-ಜೋರ್ಡಾನ್ ವ್ಯಾಪಾರವು 2.875 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ, ಇದರಲ್ಲಿ ಭಾರತವು ಜೋರ್ಡಾನ್‌ಗೆ ಮಾಡಿದ ರಫ್ತುಗಳ ಪ್ರಮಾಣವು 1.465 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ. ಈ ವ್ಯಾಪಾರವನ್ನು ಬೆಂಬಲಿಸುವ ಸಾಂಸ್ಥಿಕ ಚೌಕಟ್ಟುಗಳಲ್ಲಿ 1976ರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ವ್ಯಾಪಾರ ಮತ್ತು ಆರ್ಥಿಕ ಜಂಟಿ ಸಮಿತಿ ಮತ್ತು ಸಮುದ್ರಯಾನ ಹಾಗೂ ವಲಯ-ನಿರ್ದಿಷ್ಟ ಕಾರ್ಯಕಾರಿ ಗುಂಪುಗಳಂತಹ ಇತರ ಸಂವಾದ ಕಾರ್ಯವಿಧಾನಗಳು ಸೇರಿವೆ.

ಪ್ರಮುಖ ಆರ್ಥಿಕ ಮತ್ತು ವ್ಯಾಪಾರ ಉಪಕ್ರಮಗಳು / ಮುಖ್ಯಾಂಶಗಳು
- ರಸಗೊಬ್ಬರ ವಲಯದ ಜಂಟಿ ಉದ್ಯಮಗಳು: ಭಾರತೀಯ ರೈತರ ರಸಗೊಬ್ಬರ ಸಹಕಾರ ಸಂಸ್ಥೆ ಮತ್ತು ಜೋರ್ಡಾನ್ ಫಾಸ್ಫೇಟ್ ಮೈನ್ಸ್ ಕಂಪನಿ ನಡುವಿನ ಜಂಟಿ ಉದ್ಯಮವಾದ ಜೋರ್ಡಾನ್ ಇಂಡಿಯಾ ಫರ್ಟಿಲೈಸರ್ ಕಂಪನಿ, ಭಾರತಕ್ಕೆ ಫಾಸ್ಫಾರಿಕ್ ಆಮ್ಲವನ್ನು ಉತ್ಪಾದಿಸಲು ಮತ್ತು ರಫ್ತು ಮಾಡಲು ಸ್ಥಾಪಿಸಲಾಗಿದೆ. ಸುಮಾರು 860 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಈ ಉದ್ಯಮವು ಭಾರತಕ್ಕೆ ಫಾಸ್ಫಾರಿಕ್ ಆಮ್ಲದ ಪ್ರಮುಖ ಮೂಲವಾಗಿದೆ. ಜೋರ್ಡಾನ್ ಭಾರತಕ್ಕೆ ರಸಗೊಬ್ಬರಗಳ, ವಿಶೇಷವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್‌ನ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿದೆ.
- ಇಂಡೋ-ಜೋರ್ಡಾನ್ ಕೆಮಿಕಲ್ ಕಂಪನಿ: ಈ ಹಿಂದೆ, ಜೆಪಿಎಂಸಿ ಮತ್ತು ಸದರ್ನ್ ಪೆಟ್ರೋಕೆಮಿಕಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮವಾದ ಇಂಡೋ-ಜೋರ್ಡಾನ್ ಕೆಮಿಕಲ್ ಕಂಪನಿಯ ಫಾಸ್ಫಾರಿಕ್ ಆಮ್ಲದ ಸ್ಥಾವರವನ್ನು 169.5 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯೊಂದಿಗೆ ಪ್ರಾರಂಭಿಸಲಾಯಿತು. ಇದರ ಹೆಚ್ಚಿನ ಉತ್ಪಾದನೆಯು ಭಾರತಕ್ಕೆ ರಫ್ತಾಗುತ್ತದೆ.
- 2022ರ ಪ್ರಮುಖ ಒಪ್ಪಂದಗಳು: ಮೇ 2022ರಲ್ಲಿ, ಜೆಪಿಎಂಸಿ ಸಂಸ್ಥೆಯು ಹಲವಾರು ಭಾರತೀಯ ರಸಗೊಬ್ಬರ ಕಂಪನಿಗಳೊಂದಿಗೆ ಒಟ್ಟು 1.5 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ತಿಳುವಳಿಕೆ ಪತ್ರಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಿತು. ಅಲ್ಲದೆ, ಅರಬ್ ಪೊಟ್ಯಾಶ್ ಕಂಪನಿ ಮತ್ತು ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ನಡುವೆ ವಾರ್ಷಿಕ 2,75,000–3,25,000 ಟನ್ ಪೊಟ್ಯಾಶ್ ಅನ್ನು ಭಾರತೀಯ ಮಾರುಕಟ್ಟೆಗೆ ಪೂರೈಸಲು ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ಜವಳಿ ಉದ್ಯಮ: ಅನಿವಾಸಿ ಭಾರತೀಯರ ಒಡೆತನದ 15 ಕ್ಕೂ ಹೆಚ್ಚು ಉಡುಪು ತಯಾರಿಕಾ ಕಂಪನಿಗಳು ಜೋರ್ಡಾನ್‌ನ ಕ್ವಾಲಿಫೈಡ್ ಇಂಡಸ್ಟ್ರಿಯಲ್ ಜೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಒಟ್ಟು ಹೂಡಿಕೆ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಈ ಕಂಪನಿಗಳು ಜೋರ್ಡಾನ್‌ನಲ್ಲಿ ಉಡುಪುಗಳನ್ನು ತಯಾರಿಸಿ, ಜೋರ್ಡಾನ್-ಯುಎಸ್ಎ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ವಿದೇಶಗಳಿಗೆ ರಫ್ತು ಮಾಡುತ್ತವೆ.
- 2025ನೇ ವರ್ಷದಲ್ಲಿ ಭಾರತ ಮತ್ತು ಜೋರ್ಡಾನ್ ನಡುವೆ ಹಲವಾರು ಪ್ರಮುಖ ಆರ್ಥಿಕ ಉಪಕ್ರಮಗಳು ಜರುಗಿದವು. ಫೆಬ್ರವರಿ 5, 2025 ರಂದು ಜೋರ್ಡಾನ್ ಸೊಸೈಟಿ ಆಫ್ ಟೂರಿಸಂ ಅಂಡ್ ಟ್ರಾವೆಲ್ ಏಜೆಂಟ್ಸ್ ಸಹಯೋಗದೊಂದಿಗೆ ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಮಧ್ಯಪ್ರದೇಶವನ್ನು ಪ್ರಮುಖ ಪ್ರವಾಸಿ ತಾಣವಾಗಿ ಬಿಂಬಿಸಲಾಯಿತು ಮತ್ತು ಜೋರ್ಡಾನ್ ಹಾಗೂ ಭಾರತದ ನಡುವೆ ನೇರ ವಿಮಾನಯಾನ ಸೌಲಭ್ಯವನ್ನು ಪ್ರಾರಂಭಿಸುವ ಬಗ್ಗೆ ಘೋಷಿಸಲಾಯಿತು. ಇದಾದ ನಂತರ, ಫೆಬ್ರವರಿ 19, 2025 ರಂದು ಜೋರ್ಡಾನ್ ಉದ್ಯಮಿಗಳ ಸಂಘ ಮತ್ತು ಇತರ ಪಾಲುದಾರರೊಂದಿಗೆ ಸೇರಿ ಹೂಡಿಕೆ ಹಾಗೂ ವ್ಯಾಪಾರವನ್ನು ಉತ್ತೇಜಿಸಲು ವ್ಯಾಪಾರ ಪ್ರಚಾರ ಸೆಮಿನಾರ್ ಅನ್ನು ನಡೆಸಲಾಯಿತು. ಇವುಗಳ ಹೊರತಾಗಿ, ಆಗಸ್ಟ್ 12-14, 2025 ರವರೆಗೆ ಅಮ್ಮನ್‌ನಲ್ಲಿ ನಡೆದ '3ನೇ ಅಂತರಾಷ್ಟ್ರೀಯ ಆಹಾರ ಮತ್ತು ಆಹಾರ ತಂತ್ರಜ್ಞಾನ ಪ್ರದರ್ಶನ'ದಲ್ಲಿ ಭಾರತೀಯ ಕಂಪನಿಗಳು ಭಾಗವಹಿಸಿರುವುದನ್ನು ಭಾರತೀಯ ರಾಜತಾಂತ್ರಿಕ ನಿಯೋಗವು ಸ್ವಾಗತಿಸಿತು.
3. ರಕ್ಷಣಾ ಸಂಬಂಧಗಳು
ಭಾರತ ಮತ್ತು ಜೋರ್ಡಾನ್ 2018 ರಲ್ಲಿ ರಕ್ಷಣಾ ಸಹಕಾರಕ್ಕಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದವು. 2024 ರಲ್ಲಿ, ಅಕಾಬಾದಲ್ಲಿ ನಡೆದ ವಿಶೇಷ ಕಾರ್ಯಾಚರಣೆ ಪಡೆಗಳ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಮೂವರು ಸದಸ್ಯರ ನಿಯೋಗ ಭಾಗವಹಿಸಿತ್ತು. ಇದೇ ವೇಳೆ, ಜೋರ್ಡಾನ್ ರಾಯಲ್ ನೇವಿಯ ನಿಯೋಗವು ಭಾರತಕ್ಕೆ ಭೇಟಿ ನೀಡಿ, ಏಪ್ರಿಲ್ 29 ರಿಂದ ಮೇ 4, 2024 ರವರೆಗೆ ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ ಮತ್ತು ಎಜಿಮಾಲಾದ ಭಾರತೀಯ ನೌಕಾ ಅಕಾಡೆಮಿಯನ್ನು ವೀಕ್ಷಿಸಿತು
4. ವಿಜ್ಞಾನ ಮತ್ತು ತಂತ್ರಜ್ಞಾನ
ಅಲ್-ಹುಸೇನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮುಂದಿನ ಪೀಳಿಗೆಯ ಐಟಿ ಸೌಲಭ್ಯವಾದ 'ಭಾರತ-ಜೋರ್ಡಾನ್ ಐಟಿ ಎಕ್ಸಲೆನ್ಸ್ ಸೆಂಟರ್' ಅನ್ನು ಅಕ್ಟೋಬರ್ 2, 2021 ರಂದು ಉದ್ಘಾಟಿಸಲಾಯಿತು. ಭಾರತ ಸರ್ಕಾರದಿಂದ ಸಂಪೂರ್ಣ ಧನಸಹಾಯ ಪಡೆದ ಈ ಕೇಂದ್ರವು 'ಪರಮ್ ಶಾವಕ್' ಸೂಪರ್ ಕಂಪ್ಯೂಟರ್ ಮತ್ತು ಸುಧಾರಿತ ತರಬೇತಿ ಸೌಲಭ್ಯಗಳನ್ನು ಹೊಂದಿದೆ. ಸೈಬರ್ ಭದ್ರತೆ, ಮಷೀನ್ ಲರ್ನಿಂಗ್ ಮತ್ತು ಬಿಗ್ ಡೇಟಾ ಅನಲಿಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಜೋರ್ಡಾನ್‌ನ ಯುವಕರಿಗೆ ತರಬೇತಿ ನೀಡುವ ಮೂಲಕ ಅಲ್ಲಿನ ಸಾಫ್ಟ್‌ವೇರ್ ಪರಿಣತಿಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ಇಲ್ಲಿ ಸುಮಾರು 3000 ಜೋರ್ಡಾನ್ ತಜ್ಞರನ್ನು ರೂಪಿಸುವ ಗುರಿ ಹೊಂದಲಾಗಿದೆ.
5. ಶಿಕ್ಷಣ ಮತ್ತು ಜನಸಂಪರ್ಕ
ಭಾರತ ಮತ್ತು ಜೋರ್ಡಾನ್ ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿಯ ಕ್ಷೇತ್ರಗಳಲ್ಲಿ ತಮ್ಮ ಬಾಂಧವ್ಯವನ್ನು ಬಲಪಡಿಸುತ್ತಿವೆ. ಭಾರತವು ವಿಶ್ವದ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದ್ದು, ಐಐಟಿ, ಐಐಎಂ (IIM) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಂತಹ ಜಾಗತಿಕವಾಗಿ ಹೆಸರಾಂತ ಸಂಸ್ಥೆಗಳನ್ನು ಒಳಗೊಂಡಿದೆ. ಜೋರ್ಡಾನ್ ವಿದ್ಯಾರ್ಥಿಗಳಿಗೆ ಭಾರತವು ಒಂದು ನೆಚ್ಚಿನ ಅಧ್ಯಯನ ಕೇಂದ್ರವಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ಅಡಿಯಲ್ಲಿ ಜೋರ್ಡಾನ್‌ಗೆ 50 ಸ್ಥಾನಗಳನ್ನು ಮೀಸಲಿಡಲಾಗಿದೆ. ಈಗಾಗಲೇ 2,500 ಕ್ಕೂ ಹೆಚ್ಚು ಜೋರ್ಡಾನ್ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದಾರೆ. 2024-25ರಲ್ಲಿ ಜೋರ್ಡಾನ್ 37 ನಾಗರಿಕ ಐಟೆಕ್ ಸ್ಥಾನಗಳು, 4 ವಿಶೇಷ ಕಾರ್ಯನಿರ್ವಾಹಕ ಕಾರ್ಯಕ್ರಮಗಳು ಮತ್ತು 5 ಐಸಿಸಿಆರ್ ವಿದ್ಯಾರ್ಥಿವೇತನಗಳನ್ನು ಬಳಸಿಕೊಂಡಿದೆ.
ಮಾರ್ಚ್ 2018 ರಲ್ಲಿ ಕಿಂಗ್ ಅಬ್ದುಲ್ಲಾ II ಅವರ ಭಾರತ ಭೇಟಿಯ ಸಮಯದಲ್ಲಿ, ಭಾರತ ಮತ್ತು ಜೋರ್ಡಾನ್ ಮಾನವಶಕ್ತಿ ಒಪ್ಪಂದ ಹಾಗೂ ರಾಜತಾಂತ್ರಿಕ ಮತ್ತು ಅಧಿಕೃತ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರಯಾಣದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಸದ್ಯಕ್ಕೆ ಸುಮಾರು 17,500 ಭಾರತೀಯ ಪ್ರಜೆಗಳು ಜೋರ್ಡಾನ್‌ನಲ್ಲಿ ವಾಸಿಸುತ್ತಿದ್ದು, ಅವರು ಪ್ರಮುಖವಾಗಿ ಜವಳಿ, ನಿರ್ಮಾಣ, ಉತ್ಪಾದನೆ, ಆರೋಗ್ಯ ಸೇವೆ, ಶುಶ್ರೂಷೆ, ವಿಶ್ವವಿದ್ಯಾಲಯಗಳು, ಐಟಿ, ಹಣಕಾಸು ಕಂಪನಿಗಳು ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೋರ್ಡಾನ್ ಸರ್ಕಾರವು 2009 ರಿಂದ ಭಾರತೀಯ ಪ್ರವಾಸಿಗರಿಗೆ 'ವಿಸಾ ಆನ್ ಅರೈವಲ್' ಮತ್ತು 2023 ರಿಂದ ಇ-ವಿಸಾ ಸೌಲಭ್ಯವನ್ನು ಒದಗಿಸುತ್ತಿದೆ.
ಸಾರಿಗೆಯ ವಿಷಯಕ್ಕೆ ಬಂದರೆ, ಅಮ್ಮನ್‌ನಿಂದ ಮುಂಬೈಗೆ ನೇರ ವಿಮಾನ ಸೌಲಭ್ಯವಿದೆ. ಇದಲ್ಲದೆ, 'ಆಪರೇಷನ್ ಸಿಂಧು' ಅಡಿಯಲ್ಲಿ ಇಸ್ರೇಲ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಉಭಯ ದೇಶಗಳು ಅತ್ಯುತ್ತಮವಾಗಿ ಸಹಕರಿಸಿದ್ದವು.
6. ಸಾಂಸ್ಕೃತಿಕ ವಿನಿಮಯ
ಭಾರತ ಮತ್ತು ಜೋರ್ಡಾನ್ ದೇಶಗಳು ಆತ್ಮೀಯ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಜೋರ್ಡಾನ್‌ನಲ್ಲಿ ಭಾರತೀಯ ಸಂಸ್ಕೃತಿ, ವಿಶೇಷವಾಗಿ ಬಾಲಿವುಡ್ ಚಲನಚಿತ್ರಗಳ ಬಗ್ಗೆ ಅಪಾರ ಆಸಕ್ತಿಯಿದೆ. ಉಭಯ ದೇಶಗಳ ನಡುವೆ ನೃತ್ಯ ಮತ್ತು ಸಂಗೀತವನ್ನು ಒಳಗೊಂಡ ಸಾಂಸ್ಕೃತಿಕ ವಿನಿಮಯಗಳು ಹಾಗೂ ಯೋಗ ದಿನಾಚರಣೆಯಂತಹ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಅತ್ಯಂತ ಇತ್ತೀಚೆಗೆ, ಜುಲೈ 2024 ರಲ್ಲಿ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಪ್ರಾಯೋಜಿತ "ನಟರಾಜ್ ಸಾಂಸ್ಕೃತಿಕ ಶಿಲ್ಪಿ ಸಮಾಜ" ಎಂಬ ಸಾಂಸ್ಕೃತಿಕ ತಂಡವು ಜೋರ್ಡಾನ್‌ನ ಅತ್ಯಂತ ಪ್ರಸಿದ್ಧ ಸಾಂಸ್ಕೃತಿಕ ಉತ್ಸವವಾದ '38ನೇ ಜೆರಾಶ್ ಸಂಸ್ಕೃತಿ ಮತ್ತು ಕಲೆಗಳ ಉತ್ಸವ'ದಲ್ಲಿ ಅಸ್ಸಾಮಿ ಜಾನಪದ ನೃತ್ಯವನ್ನು ಪ್ರದರ್ಶಿಸಿ
ಪ್ರಧಾನಮಂತ್ರಿಯವರ ಭೇಟಿಯ ಫಲಿತಾಂಶಗಳು
ಡಿಸೆಂಬರ್ 15, 2025 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೋರ್ಡಾನ್‌ನ ಅಮ್ಮನ್‌ಗೆ ಆಗಮಿಸಿದರು. ಅಲ್ಲಿ ಅವರಿಗೆ ಜೋರ್ಡಾನ್ ಪ್ರಧಾನಿ ಡಾ. ಜಾಫರ್ ಹಸನ್ ಅವರು ಸಾಂಪ್ರದಾಯಿಕ ಗೌರವದೊಂದಿಗೆ ಆತ್ಮೀಯ ಸ್ವಾಗತ ಕೋರಿದರು, ಇದು ಉಭಯ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯವನ್ನು ಎತ್ತಿ ತೋರಿಸಿತು. ಇದು ಅವರ ಮೂರು ರಾಷ್ಟ್ರಗಳ (ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್) ಪ್ರವಾಸದ ಮೊದಲ ಹಂತವಾಗಿದೆ. ವಿಶೇಷವೆಂದರೆ, 37 ವರ್ಷಗಳ ಸುದೀರ್ಘ ಅಂತರದ ನಂತರ ಜೋರ್ಡಾನ್‌ಗೆ ನಡೆಯುತ್ತಿರುವ ಮೊದಲ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿ ಇದಾಗಿದ್ದು, ಇದು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದಿದೆ.
ತಮ್ಮ ಭೇಟಿಯ ಅವಧಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಜೋರ್ಡಾನ್‌ನ ರಾಜರಾದ ಘನತೆವೆತ್ತ ಎರಡನೇ ಅಬ್ದುಲ್ಲಾ ಮತ್ತು ಇತರ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ನವೀಕರಿಸಬಹುದಾದ ಇಂಧನ, ರಸಗೊಬ್ಬರ ಮತ್ತು ಕೃಷಿ, ನಾವೀನ್ಯತೆ, ಐಟಿ ಮತ್ತು ಡಿಜಿಟಲ್ ತಂತ್ರಜ್ಞಾನಗಳು, ನಿರ್ಣಾಯಕ ಖನಿಜಗಳು, ಮೂಲಸೌಕರ್ಯ, ಆರೋಗ್ಯ ಮತ್ತು ಫಾರ್ಮಾ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಆಳಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಮುಂಬರುವ 5 ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಶತಕೋಟಿ ಅಮೆರಿಕನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನು ಹೊಂದಬೇಕೆಂದು ಪ್ರಧಾನಿ ಪ್ರಸ್ತಾಪಿಸಿದರು. ಅಲ್ಲದೆ, ಜೋರ್ಡಾನ್‌ನ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ನಡುವಿನ ಸಹಯೋಗಕ್ಕೆ ಅವರು ಕರೆ ನೀಡಿದರು. ಜೋರ್ಡಾನ್ ಭಾರತಕ್ಕೆ ರಸಗೊಬ್ಬರದ ಪ್ರಮುಖ ಪೂರೈಕೆದಾರನಾಗಿದ್ದು, ಭಾರತದಲ್ಲಿ ಫಾಸ್ಫೇಟಿಕ್ ರಸಗೊಬ್ಬರದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಜೋರ್ಡಾನ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಕುರಿತು ಉಭಯ ದೇಶಗಳ ಕಂಪನಿಗಳು ಮಾತುಕತೆ ನಡೆಸುತ್ತಿವೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಉಭಯ ನಾಯಕರು ಪರಸ್ಪರ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಕಟುವಾಗಿ ಖಂಡಿಸಿದರು. ಅವರು ಪ್ರಾದೇಶಿಕ ಬೆಳವಣಿಗೆಗಳು ಮತ್ತು ಇತರ ಜಾಗತಿಕ ಸಮಸ್ಯೆಗಳ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು ಹಾಗೂ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರದ ಕುರಿತಾದ ತಿಳುವಳಿಕೆ ಪತ್ರ.
- ಜಲಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕೆ ಪತ್ರ.
- ಪೆಟ್ರಾ (ಜೋರ್ಡಾನ್) ಮತ್ತು ಎಲ್ಲೋರಾ (ಭಾರತ) ಐತಿಹಾಸಿಕ ತಾಣಗಳ ನಡುವಿನ 'ಟ್ವಿನ್ನಿಂಗ್' ಒಪ್ಪಂದ.
- 2025-2029 ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ನವೀಕರಣ.
- ಡಿಜಿಟಲ್ ರೂಪಾಂತರಕ್ಕಾಗಿ ಜನಸಂಖ್ಯಾ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕುರಿತಾದ ಸಹಕಾರದ ಉದ್ದೇಶ ಪತ್ರ.
ಉಪಸಂಹಾರ
ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳು, ನಿರಂತರವಾದ ರಾಜಕೀಯ ತೊಡಗಿಸಿಕೊಳ್ಳುವಿಕೆಯು ಹೇಗೆ ಬಲವಾದ ದ್ವಿಪಕ್ಷೀಯ ಬಾಂಧವ್ಯಕ್ಕಾಗಿ ಆರ್ಥಿಕ ಮತ್ತು ಇತರ ಫಲಿತಾಂಶಗಳನ್ನು ಉತ್ತೇಜಿಸುತ್ತದೆ ಎಂಬುದನ್ನು ಪ್ರದರ್ಶಿಸುತ್ತವೆ. ನಿಯಮಿತ ಸಮಾಲೋಚನೆಗಳು, ನಾಯಕತ್ವದ ಮಟ್ಟದ ಸಭೆಗಳು ಹಾಗೂ ಪ್ರಾದೇಶಿಕ ಸ್ಥಿರತೆ ಮತ್ತು ಭಯೋತ್ಪಾದನೆ ನಿಗ್ರಹದ ಕುರಿತಾದ ಹಂಚಿಕೊಂಡ ದೃಷ್ಟಿಕೋನಗಳು ಈ ಪಾಲುದಾರಿಕೆಗೆ ಕಾರ್ಯತಂತ್ರದ ಆಳವನ್ನು ನೀಡಿವೆ. ಇತ್ತೀಚಿನ ಉನ್ನತ ಮಟ್ಟದ ಭೇಟಿಯ ತೊಡಗಿಸಿಕೊಳ್ಳುವಿಕೆಗಳು ಮತ್ತು ಅದರ ಫಲಿತಾಂಶಗಳು ಈವರೆಗಿನ ಸಾಧನೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ಭಾರತವು ಪಶ್ಚಿಮ ಏಷ್ಯಾದೊಂದಿಗಿನ ತನ್ನ ಸಂಬಂಧವನ್ನು ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಜೋರ್ಡಾನ್ ಒಂದು ವಿಶ್ವಾಸಾರ್ಹ ಆರ್ಥಿಕ ಮತ್ತು ರಾಜಕೀಯ ಪಾಲುದಾರನಾಗಿ ಮಹತ್ವದ ಪಾತ್ರವನ್ನು ಹೊಂದಿದೆ. ಇದು ನಂಬಿಕೆ, ವ್ಯಾಪಾರ ಮತ್ತು ಕಾರ್ಯತಂತ್ರದ ಹೊಂದಾಣಿಕೆಯ ಮೇಲೆ ನಿರ್ಮಿಸಲಾದ ಸಮತೋಲಿತ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
References
Embassy of India, Jordan
https://indembassy-amman.gov.in/Bilateral_Relations.html
https://indembassy-amman.gov.in/Study_in_India.html
https://indembassy-amman.gov.in/Culture.html
Press Information Bureau
https://www.pib.gov.in/PressReleasePage.aspx?PRID=2204140®=3&lang=1
https://www.pib.gov.in/PressReleasePage.aspx?PRID=2204376®=3&lang=1
https://www.pib.gov.in/PressReleasePage.aspx?PRID=2204384®=3&lang=1
Ministry of External Affairs
https://www.mea.gov.in/press-releases.htm?dtl/40443/Visit_of_Prime_Minister_to_Jordan_Ethiopia_and_Oman_December_15__18_2025
Click here for pdf file.
*****
(Explainer ID: 156531)
आगंतुक पटल : 62
Provide suggestions / comments