Social Welfare
ರಾಷ್ಟ್ರೀಯ ಏಕತಾ ದಿವಸ: ರಾಷ್ಟ್ರೀಯ ಒಗ್ಗಟ್ಟಿನ ಆಧಾರ ಸ್ತಂಭ
Posted On:
30 OCT 2025 11:48AM
|
ಪ್ರಮುಖ ಮಾರ್ಗಸೂಚಿಗಳು
- ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ, ಭಾರತವನ್ನು ಒಂದುಗೂಡಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಗೌರವಿಸುತ್ತದೆ. ಇದು ದೇಶದ ಸವಾಲುಗಳ ನಡುವೆಯೂ ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುವ ಆಚರಣೆಯಾಗಿದೆ.
- 2025ನೇ ವರ್ಷವು ಸರ್ದಾರ್ ಪಟೇಲ್ ರ 150ನೇ ಜನ್ಮ ದಿನವನ್ನುಆಚರಿಸುತ್ತದೆ.
- ಪ್ರಧಾನಮಂತ್ರಿ ಮೋದಿ ಅವರು ಕೆವಾಡಿಯಾದ ಏಕತಾ ನಗರದಲ್ಲಿ ನಡೆಯುವ ರಾಷ್ಟ್ರೀಯ ಏಕತಾ ದಿವಸ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ.
- ಏಕತೆಗಾಗಿ ಓಟ ಮತ್ತು ಏಕತಾ ಪಥಸಂಚಲನದಂತಹ ವಾರ್ಷಿಕ ಕಾರ್ಯಕ್ರಮಗಳು ನಾಗರಿಕರು, ವಿಶೇಷವಾಗಿ ಯುವಕರನ್ನು, ದೇಶಪ್ರೇಮ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸಲು ತೊಡಗಿಸುತ್ತವೆ.
|
ಪರಿಚಯ
ರಾಷ್ಟ್ರೀಯ ಏಕತಾ ದಿವಸ ಎಂದು ಕರೆಯಲ್ಪಡುವ ಈ ದಿನವನ್ನು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ, ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಏಕತೆ ಹಾಗೂ ಒಗ್ಗಟ್ಟನ್ನು ಪೋಷಿಸುವಲ್ಲಿ ಅವರ ನಿರ್ಣಾಯಕ ಪಾತ್ರವನ್ನು ಗೌರವಿಸುವುದು ಈ ದಿನದ ಉದ್ದೇಶವಾಗಿದೆ. ಈ ದಿನವು ದೇಶದ ಸಾರ್ವಭೌಮತೆ, ಶಾಂತಿ ಮತ್ತು ಸಮಗ್ರತೆಯನ್ನು ಕಾಪಾಡುವ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತದೆ, ಹಾಗೂ ವೈವಿಧ್ಯತೆಯಲ್ಲಿ ಏಕತೆಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ.

ಭಾರತ ಸರ್ಕಾರವು ರಾಷ್ಟ್ರ ನಿರ್ಮಾಣಕ್ಕೆ ಸರ್ದಾರ್ ಪಟೇಲ್ ಅವರ ಗಮನಾರ್ಹ ಕೊಡುಗೆಯನ್ನು ಗೌರವಿಸಲು ಮತ್ತು ಆಚರಿಸಲು ಘೋಷಿಸಿದ ನಂತರ, ಈ ದಿನವನ್ನು ಮೊದಲು 2014ರಲ್ಲಿ ಆಚರಿಸಲಾಯಿತು.
ಇದರ ನಂತರ, ಅಕ್ಟೋಬರ್ 31, 2015ರಂದು ನಡೆದ ರಾಷ್ಟ್ರೀಯ ಏಕತಾ ದಿವಸದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ವಿವಿಧ ಪ್ರದೇಶಗಳ ಜನರ ನಡುವೆ ಹೆಚ್ಚಿದ ತಿಳುವಳಿಕೆ ಮತ್ತು ಬಾಂಧವ್ಯಕ್ಕಾಗಿ ಸುಸ್ಥಿರ ಮತ್ತು ರಚನಾತ್ಮಕ ಸಂಪರ್ಕವನ್ನು ಏರ್ಪಡಿಸುವ 'ಏಕ್ ಭಾರತ ಶ್ರೇಷ್ಠ ಭಾರತ' ಉಪಕ್ರಮವನ್ನು ಘೋಷಿಸಿದರು. ಅಂದಿನಿಂದ, ಹತ್ತಕ್ಕೂ ಹೆಚ್ಚು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಶಾಲೆಗಳು, ಕಾಲೇಜುಗಳು ಮತ್ತು ಯುವ ಸಂಘಟನೆಗಳು ದೇಶದ ವಿವಿಧ ಭಾಗಗಳ ಜನರ ನಡುವೆ ಇಂತಹ ಬಾಂಧವ್ಯವನ್ನು ಉತ್ತೇಜಿಸಲು ವಿವಿಧ ಚಟುವಟಿಕೆಗಳ ಮೂಲಕ ಈ ದಿನವನ್ನು ಆಚರಿಸುತ್ತಿವೆ.
ಈ ವರ್ಷದ ರಾಷ್ಟ್ರೀಯ ಏಕತಾ ದಿವಸ ಆಚರಣೆಯು ವಿಶೇಷವಾಗಿದೆ, ಏಕೆಂದರೆ ಇದು ಸರ್ದಾರ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ.
ಅಡಿಪಾಯ ಪರಂಪರೆ
ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ವ್ಯವಹಾರಗಳ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947ರಲ್ಲಿ ಸ್ವಾತಂತ್ರ್ಯದ ನಂತರದ ರಾಷ್ಟ್ರೀಯ ಏಕೀಕರಣ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಭಾರತದ ಭೂಪ್ರದೇಶ ಮತ್ತು ಜನಸಂಖ್ಯೆಯ ಸುಮಾರು ಶೇ.40 ರಷ್ಟಿದ್ದ, 560ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಭಾರತೀಯ ಸ್ವಾತಂತ್ರ್ಯ ಕಾಯ್ದೆಯ ಅಡಿಯಲ್ಲಿ, ಸಂಸ್ಥಾನಗಳ ಆಡಳಿತಗಾರರಿಗೆ ಭಾರತ ಅಥವಾ ಪಾಕಿಸ್ತಾನವನ್ನು ಸೇರಲು ಅಥವಾ ಯಾವುದನ್ನೂ ಸೇರದಿರಲು ನಿರ್ಧರಿಸುವ ಆಯ್ಕೆಯನ್ನು ನೀಡಲಾಗಿತ್ತು. ಸರ್ದಾರ್ ಪಟೇಲ್ ಅವರು ರಾಜತಾಂತ್ರಿಕ ಮಾತುಕತೆಗಳು, ಮನವೊಲಿಕೆ, ಮತ್ತು ಅಗತ್ಯವಿದ್ದಲ್ಲಿ ದೃಢವಾದ ಆಡಳಿತಾತ್ಮಕ ಕ್ರಮಗಳ ಸಂಯೋಜನೆಯನ್ನು ಬಳಸಿಕೊಂಡು ದೇಶವು ಛಿದ್ರವಾಗುವುದನ್ನು ತಡೆದರು. ಅವರು ಮುನ್ನಡೆಸಿದ ಸಂಸ್ಥಾನಗಳ ಇಲಾಖೆಯ ಮೂಲಕ, ಸರ್ದಾರ್ ಪಟೇಲ್ ಅವರು ಆಗಸ್ಟ್ 15, 1947ರೊಳಗೆ ಅಥವಾ ಸ್ವಲ್ಪ ಸಮಯದ ನಂತರ ಈ ಸಂಸ್ಥಾನಗಳನ್ನು ಯಶಸ್ವಿಯಾಗಿ ಸಂಯೋಜಿಸಿದರು, ಇದು ಆಧುನಿಕ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಖಾತ್ರಿಪಡಿಸಿತು. ಅವರ ಪ್ರಯತ್ನಗಳು ಸಂಭಾವ್ಯ ವಿಘಟನೆಯನ್ನು ತಪ್ಪಿಸಿ, ಒಂದುಗೂಡಿದ ಪ್ರಜಾಪ್ರಭುತ್ವ ಗಣರಾಜ್ಯಕ್ಕೆ ಅಡಿಪಾಯ ಹಾಕಿದವು. ದೇಶವು ವಿಭಜನೆಯ ಪ್ರಕ್ಷುಬ್ಧ ಅವಧಿಯನ್ನು ಹಾದುಹೋಗುತ್ತಿದ್ದಾಗ ಆಂತರಿಕ ಸ್ಥಿರತೆಯನ್ನು ಖಚಿತಪಡಿಸಿದ ಈ "ಉಕ್ಕಿನ ಮನುಷ್ಯ"ನ ನಿರ್ಣಾಯಕ ನಾಯಕತ್ವವೇ ಇದಕ್ಕೆ ಕಾರಣ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಮುಂದುವರಿಸಿಕೊಂಡು ಹೋಗುವ "ಉಕ್ಕಿನ ಚೌಕಟ್ಟು" ಆಗಿ ಅಖಿಲ ಭಾರತ ಸೇವೆಗಳನ್ನು ಸಹ ಅವರು ಸೃಷ್ಟಿಸಿದರು.


ಏಕ್ ಭಾರತ ಶ್ರೇಷ್ಠ ಭಾರತ: ಸರ್ದಾರ್ ಪಟೇಲ್ ಅವರ ಪರಂಪರೆಯ ಅಡಿಪಾಯ ಪರಂಪರೆಯನ್ನು ಮುನ್ನಡೆಸುವುದು
'ಏಕ್ ಭಾರತ ಶ್ರೇಷ್ಠ ಭಾರತ' (EBSB) ಉಪಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 31, 2015 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಘೋಷಿಸಿದರು. ಇದು ಸರ್ದಾರ್ ಪಟೇಲ್ ಅವರ ಒಂದುಗೂಡಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ.
ಈ ಉಪಕ್ರಮವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಸಂವಾದ ಮತ್ತು ಪರಸ್ಪರತೆಯ ಮೂಲಕ ಭಾರತದ ವೈವಿಧ್ಯತೆಯನ್ನು ಇದು ಆಚರಿಸುತ್ತದೆ.
ಇದರ ಮುಖ್ಯ ಉದ್ದೇಶಗಳು ಹೀಗಿವೆ:
- ನಾಗರಿಕರ ನಡುವೆ ಭಾವನಾತ್ಮಕ ಬಾಂಧವ್ಯಗಳನ್ನು ಬಲಪಡಿಸುವುದು.
- ರಚನಾತ್ಮಕವಾದ ಅಂತರ-ರಾಜ್ಯ ಒಳಗೊಳ್ಳುವಿಕೆಯ ಮೂಲಕ ರಾಷ್ಟ್ರೀಯ ಏಕೀಕರಣವನ್ನು ಪೋಷಿಸುವುದು.
- ಭಾರತದ ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರದರ್ಶಿಸುವುದು ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದು.
- ಶಾಶ್ವತ ಸಹಭಾಗಿತ್ವಗಳನ್ನು ನಿರ್ಮಿಸುವುದು.
- ಪ್ರದೇಶಗಳಾದ್ಯಂತ ಪರಸ್ಪರ ಕಲಿಕೆ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಪ್ರೋತ್ಸಾಹಿಸುವುದು.
'ಏಕ್ ಭಾರತ ಶ್ರೇಷ್ಠ ಭಾರತʼ ಉಪಕ್ರಮವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಜೋಡಿಸುವ ಮೂಲಕ ಭಾಷಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯಗಳ ಮೂಲಕ ಭಾವನಾತ್ಮಕ ಬಾಂಧವ್ಯಗಳನ್ನು ಬಲಪಡಿಸಿ, "ವೈವಿಧ್ಯತೆಯಲ್ಲಿ ಏಕತೆ" ಎಂಬ ಕಲ್ಪನೆಯನ್ನು ಉತ್ತೇಜಿಸುತ್ತದೆ. ಈ ಚಟುವಟಿಕೆಗಳು ರಾಷ್ಟ್ರೀಯ ಏಕತಾ ದಿವಸ್‌ನ ಸಂದೇಶವನ್ನು ಒಂದು ದಿನಕ್ಕಿಂತಲೂ ಮೀರಿ ವಿಸ್ತರಿಸುತ್ತವೆ, ಅದನ್ನು ರಾಷ್ಟ್ರೀಯ ಏಕೀಕರಣಕ್ಕಾಗಿ ಸುಸ್ಥಿರ ಚಳುವಳಿಯನ್ನಾಗಿ ಪರಿವರ್ತಿಸುತ್ತವೆ.
ಏಕತಾ ದಿವಸದಿಂದ ಸ್ಫೂರ್ತಿ ಪಡೆದ ಇಬಿಎಸ್‌ಬಿ ಕಾರ್ಯಕ್ರಮಗಳು ಮತ್ತು ಉಪಕ್ರಮಗಳುಃ
ಭಾಷಾ ಸಂಗಮ್ ಅಪ್ಲಿಕೇಶನ್ : ಇದು ೨೨ ಅಧಿಕೃತ ಭಾರತೀಯ ಭಾಷೆಗಳಲ್ಲಿ ದೈನಂದಿನ ಬಳಕೆಯ 100ಕ್ಕೂ ಹೆಚ್ಚು ವಾಕ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಆಹಾರ ಉತ್ಸವಗಳು.
ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು- ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ "ಯುವ ಸಂಗಮ್" ಮತ್ತು "ಇಬಿಎಸ್‌ಬಿ ಕ್ಲಬ್‌ಗಳು" ಜೋಡಿಯಾದ ರಾಜ್ಯಗಳ ನಡುವೆ ಯುವಕರ ಸಂವಾದಕ್ಕೆ ಅನುಕೂಲ ಕಲ್ಪಿಸುತ್ತವೆ, ಇದರಿಂದ ಪರಸ್ಪರ ತಿಳುವಳಿಕೆ ಹೆಚ್ಚುತ್ತದೆ.
ಕಾಶಿ ತಮಿಳು ಸಂಗಮಮ್: ಇದು ಕಾಶಿ ಮತ್ತು ತಮಿಳುನಾಡುಗಳ ನಡುವಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯವನ್ನು ಆಚರಿಸುತ್ತದೆ. ಕಲೆ, ಭಾಷೆ ಮತ್ತು ಸಂಪ್ರದಾಯಗಳ ವಿನಿಮಯದ ಮೂಲಕ ಏಕತೆಯನ್ನು ಉತ್ತೇಜಿಸುತ್ತದೆ.
ಮೈ ಭಾರತ್ ಡಿಜಿಟಲ್ ಪೋರ್ಟಲ್ ಮತ್ತು ಇಬಿಎಸ್‌ಬಿ ರಸಪ್ರಶ್ನೆ ಸ್ಪರ್ಧೆಗಳಂತಹ ಉಪಕ್ರಮಗಳು ನಾಗರಿಕರನ್ನು ಆನ್‌ಲೈನ್‌ನಲ್ಲಿ ತೊಡಗಿಸಿ, ಏಕತೆ, ದೇಶಪ್ರೇಮ ಮತ್ತು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಜ್ಞಾನವನ್ನು ಉತ್ತೇಜಿಸುತ್ತವೆ.
ಇಬಿಎಸ್‌ಬಿ ಪೋರ್ಟಲ್ ರಾಷ್ಟ್ರೀಯ ಏಕತಾ ದಿವಸದ ಹಿಂದಿನ ದೃಷ್ಟಿಕೋನದ ಡಿಜಿಟಲ್ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಉಪಕ್ರಮಗಳನ್ನು ದಾಖಲಿಸಲು ಮತ್ತು ಪ್ರಚಾರ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಏಕತಾ ದಿವಸ್‌ನ ದಿನದಂದೇ ಪ್ರಾರಂಭವಾದ 'ಏಕ್ ಭಾರತ ಶ್ರೇಷ್ಠ ಭಾರತ' ಬ್ಯಾನರ್ ಅಡಿಯಲ್ಲಿ ವಿವಿಧ ಸಚಿವಾಲಯಗಳು ನಡೆಸಿದ ಅಂತರ-ರಾಜ್ಯ ಸಾಂಸ್ಕೃತಿಕ ವಿನಿಮಯಗಳು, ಯುವ ಚಟುವಟಿಕೆಗಳು ಮತ್ತು ಅಭಿಯಾನಗಳ ವರದಿಗಳನ್ನು ಇದು ಒಳಗೊಂಡಿದೆ. ಲಕ್ಷಾಂತರ ಭಾಗವಹಿಸುವವರು ಮತ್ತು ಸಂದರ್ಶಕರೊಂದಿಗೆ, ಈ ಪೋರ್ಟಲ್ "ದೇಖೋ ಅಪ್ನಾ ದೇಶ್" (ಪ್ರವಾಸೋದ್ಯಮ) ಮತ್ತು ಸ್ಥಳೀಯ ಕ್ರೀಡಾ ವೈಶಿಷ್ಟ್ಯಗಳಂತಹ (ಕ್ರೀಡೆ) ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ, ಮತ್ತು ಭಾರತದ ವೈವಿಧ್ಯತೆ ಹಾಗೂ ಸಾಮೂಹಿಕ ಗುರುತನ್ನು ಪ್ರತಿಬಿಂಬಿಸುವ ಮಾಸಿಕ ಚಟುವಟಿಕೆಗಳನ್ನು ಎತ್ತಿ ತೋರಿಸುವ 'ಇಬಿಎಸ್‌ಬಿ ವಾಲ್' ಮೂಲಕ, ವರ್ಷವಿಡೀ ಏಕತೆಯ ಮನೋಭಾವವನ್ನು ಜೀವಂತವಾಗಿರಿಸುತ್ತದೆ.
2025ರ ಪ್ರಾಮುಖ್ಯತೆಃ 150ನೇ ಜಯಂತಿಯನ್ನು ಆಚರಿಸುವುದು
ಈ ಸಂದರ್ಭವನ್ನು (150ನೇ ಜನ್ಮ ವಾರ್ಷಿಕೋತ್ಸವ) ವರ್ಷವಿಡೀ, ರಾಷ್ಟ್ರವ್ಯಾಪಿ ಆಚರಣೆಯಾಗಿ ರೂಪಿಸಲಾಗಿದೆ. ಈ ಮೈಲಿಗಲ್ಲು, ವಿಶೇಷವಾಗಿ ಏಕತೆ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಜಾಗತಿಕ ಸವಾಲುಗಳಿರುವ ಇಂದಿನ ಭಾರತದಲ್ಲಿ, ಸರ್ದಾರ್ ಪಟೇಲ್ ಅವರ ಶಾಶ್ವತ ಪ್ರಸ್ತುತತೆಯನ್ನು ಉಲ್ಲೇಖಿಸುತ್ತದೆ. ರಾಷ್ಟ್ರೀಯ ಏಕತಾ ದಿವಸ್‌ನ ಮನೋಭಾವವು 'ಏಕ ಭಾರತ ಶ್ರೇಷ್ಠ ಭಾರತ' (EBSB) ತತ್ವಗಳೊಂದಿಗೆ ಆಳವಾಗಿ ಹೊಂದಿಕೆಯಾಗುತ್ತದೆ. ಇದು ಸಾಂಸ್ಕೃತಿಕ ವಿನಿಮಯ, ಭಾಷಾ ಮೆಚ್ಚುಗೆ ಮತ್ತು ಜೋಡಿಯಾದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವಿನ ಪರಸ್ಪರ ತಿಳುವಳಿಕೆಯ ಮೂಲಕ ನಾಗರಿಕರ ನಡುವಿನ ಭಾವನಾತ್ಮಕ ಬಾಂಧವ್ಯಗಳನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಈ ಉಪಕ್ರಮಗಳು ಒಟ್ಟಾಗಿ ವೈವಿಧ್ಯತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಬಲಪಡಿಸುತ್ತವೆ, ಹೀಗಾಗಿ ರಾಷ್ಟ್ರೀಯ ಏಕೀಕರಣವನ್ನು ಕೇವಲ ಒಂದು ಆಚರಣೆಯಾಗಿಸದೆ, ನಿರಂತರ ಜನರ ಚಳುವಳಿಯನ್ನಾಗಿ ಪರಿವರ್ತಿಸುತ್ತವೆ.
ಅಕ್ಟೋಬರ್ 31 ರಂದು, ಬೆಳಿಗ್ಗೆ ಸುಮಾರು 8 ಗಂಟೆಗೆ, ಪ್ರಧಾನಮಂತ್ರಿಗಳು ಏಕತಾ ಪ್ರತಿಮೆಯಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಇದರ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಆಚರಣೆಗಳು ನಡೆಯಲಿವೆ.
ಸರ್ದಾರ್ ಪಟೇಲ್ ಅವರ ೧೫೦ನೇ ಜನ್ಮ ವಾರ್ಷಿಕೋತ್ಸವಕ್ಕಾಗಿ ನಿಗದಿಪಡಿಸಲಾದ ಕಾರ್ಯಕ್ರಮಗಳು ಮತ್ತು ಇತರೆ ವಿವರಗಳು ಈ ಕೆಳಗಿನಂತಿವೆ:
|
ವಲಯ
|
ವಿವರ
|
|
ಪ್ರಧಾನ ಕಾರ್ಯಕ್ರಮದ ದಿನಾಂಕ
|
ಅಕ್ಟೋಬರ್ 31 (ಪ್ರತಿ ವರ್ಷ) – ರಾಷ್ಟ್ರೀಯ ಏಕತಾ ದಿವಸ್ ಆಚರಣೆ.
|
|
ಪ್ರಧಾನ ಪರೇಡ್/ಆಚರಣೆಯ ಸ್ಥಳ
|
ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ಏಕ್ತಾ ನಗರ (ಹಿಂದಿನ ಕೆವಾಡಿಯಾ/ಯೂನಿಟಿ ಟೌನ್).
|
|
ವಿಶೇಷ ಪ್ರದರ್ಶನ
|
ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡದಿಂದ ಏರ್ ಶೋ (ವಿಮಾನ ಪ್ರದರ್ಶನ).
|
|
ಪರೇಡ್‌ನಲ್ಲಿ ಭಾಗವಹಿಸುವ ಘಟಕಗಳು
|
9 ರಾಜ್ಯಗಳು + 1 ಕೇಂದ್ರಾಡಳಿತ ಪ್ರದೇಶದ ಪೊಲೀಸ್‌ನ 16 ಪಥಸಂಚಲನ ದಳಗಳು
- 4 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು.
- ಎನ್‌ಸಿಸಿ ಕೆಡೆಟ್‌ಗಳು.
- ವಿಶೇಷ ವಿಭಾಗಗಳು: ಉದಾಹರಣೆಗೆ, ಬಿಎಸ್‌ಎಫ್‌ನ ಶ್ವಾನ ದಳ , ಅಸ್ಸಾಂ ಪೊಲೀಸ್‌ನ ಮೋಟರ್‌ಸೈಕಲ್ ಪ್ರದರ್ಶನ, ಬಿಎಸ್‌ಎಫ್‌ನ ಒಂಟೆ ದಳ ಮತ್ತು ಬ್ಯಾಂಡ್.
|
|
ಮಹಿಳಾ ಅಧಿಕಾರಿಗಳ ವಿಶೇಷ ಪಾತ್ರ
|
ಪ್ರಧಾನಮಂತ್ರಿಗಳಿಗೆ ಸಲ್ಲಿಸುವ ಗೌರವ ರಕ್ಷಾ ದಳದ ನೇತೃತ್ವವನ್ನು ಮಹಿಳಾ ಅಧಿಕಾರಿ ವಹಿಸಲಿದ್ದಾರೆ.
|
|
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ತಬ್ಧಚಿತ್ರಗಳು
|
"ವೈವಿಧ್ಯತೆಯಲ್ಲಿ ಏಕತೆ" ಎಂಬ ವಿಷಯದಡಿಯಲ್ಲಿ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳು. - ಸಂಸ್ಕೃತಿ ಸಚಿವಾಲಯದ ವತಿಯಿಂದ ಸುಮಾರು 900 ಕಲಾವಿದರೊಂದಿಗೆ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ, ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಪ್ರಕಾರಗಳ ಪ್ರದರ್ಶನ.
|
|
ವಿಸ್ತೃತ ಉತ್ಸವ / "ಭಾರತ್ ಪರ್ವ್"
|
ನವೆಂಬರ್ 1 ರಿಂದ 15, 2025 ರವರೆಗೆ ಏಕ್ತಾ ನಗರದಲ್ಲಿ ಭಾರತ್ ಪರ್ವ್ ಆಯೋಜನೆ. ಇದರಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಆಹಾರ ಉತ್ಸವ ಇರುತ್ತದೆ. ಈ ಉತ್ಸವವು ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಜಯಂತಿಯ ವಿಶೇಷ ಕಾರ್ಯಕ್ರಮಗಳೊಂದಿಗೆ ಕೊನೆಗೊಳ್ಳಲಿದ್ದು, ನಮ್ಮ ಬುಡಕಟ್ಟು ಸಮುದಾಯಗಳ ಭವ್ಯ ಸಂಸ್ಕೃತಿ ಮತ್ತು ಚೇತರಿಸಿಕೊಳ್ಳುವ ಮನೋಭಾವವನ್ನು ಎತ್ತಿ ತೋರಿಸುತ್ತದೆ.
|
|
ಇತರ ವ್ಯವಸ್ಥಾಪನಾ ಅಂಶಗಳು
|
ದೆಹಲಿಯಲ್ಲಿ (ರಾಜ್‌ಘಾಟ್‌ನಿಂದ ಕೆಂಪು ಕೋಟೆಯವರೆಗೆ) "ರನ್ ಫಾರ್ ಯೂನಿಟಿ" ಮ್ಯಾರಥಾನ್, ಇದರಲ್ಲಿ ವಿಶೇಷಚೇತನರು, ವಿದ್ಯಾರ್ಥಿಗಳು ಮತ್ತು CAPF ನಂತಹವರು ಭಾಗವಹಿಸುವಿಕೆ. - ಏಕ್ತಾ ನಗರದಲ್ಲಿ ಕಾರ್ಯಕ್ರಮದ ವಾರದಲ್ಲಿ ಸುಮಾರು ₹ 280 ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ/ಶಿಲಾನ್ಯಾಸ.
|
|
ಭಾರತೀಯ ತಳಿಯ ನಾಯಿಗಳ ವಿಶಿಷ್ಟ ಮೆರವಣಿಗೆಯ ತಂಡ
2025ರ ರಾಷ್ಟ್ರೀಯ ಏಕತಾ ದಿವಸ ಪರೇಡ್‌ನಲ್ಲಿ, ಗಡಿ ಭದ್ರತಾ ಪಡೆಯಿಂದ, ವಿಶೇಷವಾಗಿ ರಾಮಪುರ ಹೌಂಡ್ಸ್ ಮತ್ತು ಮುಧೋಳ್ ಹೌಂಡ್ಸ್‌ನಂತಹ ಭಾರತೀಯ ತಳಿಯ ಶ್ವಾನಗಳ ಒಂದು ವಿಶಿಷ್ಟ ಪಥಸಂಚಲನ ದಳವು ಭಾಗವಹಿಸಲಿದೆ. ಕಾರ್ಯಾಚರಣೆಗಳಲ್ಲಿ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅವುಗಳ ಪಾತ್ರವನ್ನು ಇದು ಪ್ರದರ್ಶಿಸುತ್ತದೆ. ಆತ್ಮನಿರ್ಭರ ಭಾರತದ ಮನೋಭಾವವನ್ನು ಸಾಕಾರಗೊಳಿಸುವ ಈ ಸ್ಥಳೀಯ ತಳಿಗಳು ತಮ್ಮ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಲಿವೆ. ಅಖಿಲ ಭಾರತ ಪೊಲೀಸ್ ಶ್ವಾನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ ಮುಧೋಳ್ ಹೌಂಡ್ "ರಿಯಾ" ಈ ದಳದ ನೇತೃತ್ವ ವಹಿಸಲಿದೆ. ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯುವ ಈ ಪರೇಡ್‌ನಲ್ಲಿ ಅವುಗಳ ಭಾಗವಹಿಸುವಿಕೆಯು ರಾಷ್ಟ್ರೀಯ ಭದ್ರತೆಗೆ ಅವುಗಳ ಕೊಡುಗೆಯನ್ನು ಉಲ್ಲೇಖಿಸುತ್ತದೆ ಮತ್ತು ಭಾರತದ ಸ್ಥಳೀಯ ಶ್ವಾನ ಪರಂಪರೆಯನ್ನು ಆಚರಿಸುವ ಮೂಲಕ ವೈವಿಧ್ಯತೆಯಲ್ಲಿ ಏಕತೆಯ ವಿಷಯವನ್ನು ಬಲಪಡಿಸುತ್ತದೆ.

|
ಸರ್ದಾರ್ @150 ಯೂನಿಟಿ ಮಾರ್ಚ್
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 'ಮೈ ಭಾರತ್' ವೇದಿಕೆಯ ಮೂಲಕ, 'ಏಕ ಭಾರತ, ಆತ್ಮನಿರ್ಭರ ಭಾರತ' ತತ್ವಗಳಿಗೆ ಅನುಗುಣವಾಗಿ, ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯನ್ನು ಪೋಷಿಸಲು ರಾಷ್ಟ್ರವ್ಯಾಪಿ ಏಕತಾ ಪಥಸಂಚಲನವನ್ನು ಆಯೋಜಿಸಿದೆ.
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಅಕ್ಟೋಬರ್ 6, 2025ರಂದು 'ಮೈ ಭಾರತ್' ಪೋರ್ಟಲ್‌ನಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಈ ಉಪಕ್ರಮವು ಸೋಶಿಯಲ್ ಮೀಡಿಯಾ ರೀಲ್ಸ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಸರ‍್ದಾರ್@150 ಯುವ ನಾಯಕರ ಕಾರ್ಯಕ್ರಮದಂತಹ ಸ್ಪರ್ಧೆಗಳನ್ನು ಒಳಗೊಂಡಿದ್ದು, ಇದರಲ್ಲಿ 150 ವಿಜೇತರು ರಾಷ್ಟ್ರೀಯ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.


ಏಕತಾ ಪಥಸಂಚಲನವು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 31 ರಿಂದ ನವೆಂಬರ್ 25, 2025 ರವರೆಗೆ ಇರಲಿದ್ದು, ಪ್ರತಿ ಸಂಸದೀಯ ಕ್ಷೇತ್ರದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಪಾದಯಾತ್ರೆಗಳು ನಡೆಯಲಿವೆ. ಈ ಯಾತ್ರೆಗಳ ಮೊದಲು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸರ್ದಾರ್ ಪಟೇಲ್ ಅವರ ಜೀವನ ಮತ್ತು ಕೊಡುಗೆಗಳ ಕುರಿತು ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳು, ವಿಚಾರ ಸಂಕಿರಣಗಳು ಮತ್ತು ಬೀದಿ ನಾಟಕಗಳಂತಹ ಜಾಗೃತಿ ಚಟುವಟಿಕೆಗಳು ನಡೆಯಲಿವೆ. ಪಾದಯಾತ್ರೆಯ ಜೊತೆಗೆ, ಜಲಮೂಲಗಳ ಸ್ವಚ್ಛತಾ ಅಭಿಯಾನ, "ಸರ್ದಾರ್ ಉಪವನ್" ಉಪಕ್ರಮದಡಿಯಲ್ಲಿ ಸಸಿ ನೆಡುವ ಅಭಿಯಾನ, ಮಹಿಳಾ ಕಲ್ಯಾಣ ಶಿಬಿರಗಳು, ಯೋಗ ಮತ್ತು ಆರೋಗ್ಯ ಶಿಬಿರಗಳು ಹಾಗೂ "ವೋಕಲ್ ಫಾರ್ ಲೋಕಲ್" ಪ್ರಚಾರದಂತಹ ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತದೆ. ನವೆಂಬರ್ 26 ರಿಂದ ಡಿಸೆಂಬರ್ 6, 2025ರವರೆಗೆ ನಡೆಯುವ ರಾಷ್ಟ್ರೀಯ ಪಥಸಂಚಲನವು ಗುಜರಾತ್‌ನ ಸರ್ದಾರ್ ಪಟೇಲ್ ಅವರ ಜನ್ಮಸ್ಥಳವಾದ ಕರಮಸದ್‌ನಿಂದ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯವರೆಗೆ 152 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಈ ಪಥಸಂಚಲನದ ಮಾರ್ಗದಲ್ಲಿರುವ ಗ್ರಾಮಗಳಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಮೈ ಭಾರತ್ ಸ್ವಯಂಸೇವಕರು ಮತ್ತು ಯುವ ನಾಯಕರ ಭಾಗವಹಿಸುವಿಕೆಯೊಂದಿಗೆ ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಜೊತೆಗೆ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸರ್ದಾರ್ ಪಟೇಲ್ ಅವರ ಜೀವನವನ್ನು ಪ್ರದರ್ಶಿಸುವ ಒಂದು ಪ್ರದರ್ಶನವನ್ನು ಸಹ ಆಯೋಜಿಸಲಾಗುತ್ತದೆ.
ಏಕತೆಗಾಗಿ ಓಟ
ರಾಷ್ಟ್ರೀಯ ಏಕತಾ ದಿವಸ್‌ನ ಸರ್ಕಾರದ ನೇತೃತ್ವದ ಅಭಿಯಾನಗಳಲ್ಲಿ "ರನ್ ಫಾರ್ ಯೂನಿಟಿ" (ಏಕತೆಗಾಗಿ ಓಟ) ಪ್ರಮುಖವಾಗಿ ಕಾಣಿಸಿಕೊಂಡಿದೆ. ಇದು ರಾಷ್ಟ್ರೀಯ ಒಗ್ಗಟ್ಟಿನೆಡೆಗೆ ಸಾಮೂಹಿಕ ಹೆಜ್ಜೆಗಳನ್ನು ಸಂಕೇತಿಸುವ ದೇಶವ್ಯಾಪಿ ಮ್ಯಾರಥಾನ್ ಕಾರ್ಯಕ್ರಮವಾಗಿದೆ. 2025ರಲ್ಲಿ, ರನ್ ಫಾರ್ ಯೂನಿಟಿಯನ್ನು ಅಕ್ಟೋಬರ್ 31 ರಂದು, ಮುಖ್ಯ ಆಚರಣೆಯ ಮುನ್ನಡೆಗೆ, ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸಚಿವರುಗಳ ನೇತೃತ್ವದಲ್ಲಿ ನವದೆಹಲಿ ಸೇರಿದಂತೆ ಪ್ರಮುಖ ನಗರಗಳಾದ್ಯಂತ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಈ ರನ್ ಫಾರ್ ಯೂನಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತದ ನಾಗರಿಕರಿಗೆ ಕರೆ ನೀಡಿದ್ದಾರೆ.
ಉಪಸಂಹಾರ
ಸರ್‌ದಾರ್ ಪಟೇಲ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತವನ್ನು ನಿರ್ಮಿಸಿದ ಐತಿಹಾಸಿಕ ಘಟನೆಗೆ ರಾಷ್ಟ್ರೀಯ ಏಕತಾ ದಿವಸ ಒಂದು ಶಾಶ್ವತ ಜ್ಞಾಪಕವಾಗಿದೆ, ಮತ್ತು ಈ ಅಡಿಪಾಯವೇ ರಾಷ್ಟ್ರದ ಪ್ರಗತಿಗೆ ನಿರಂತರ ಬೆಂಬಲವಾಗಿ ನಿಂತಿದೆ. ಪ್ರತಿಜ್ಞೆಗಳು, ಪಥಸಂಚಲನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಐತಿಹಾಸಿಕ ಗೌರವವನ್ನು ಸಮಕಾಲೀನ ತೊಡಗುವಿಕೆಯೊಂದಿಗೆ ಬೆಸೆಯುವ ಈ ಆಚರಣೆಯು ಹಿಂದಿನ ವಿಜಯಗಳನ್ನು ಸ್ಮರಿಸುವುದಷ್ಟೇ ಅಲ್ಲದೆ, ಆಧುನಿಕ ವಿಭಜಕ ಶಕ್ತಿಗಳನ್ನು ಸಕ್ರಿಯವಾಗಿ ಎದುರಿಸುತ್ತದೆ. ಹೀಗೆ, ಇದು "ಏಕ್ ಭಾರತ್, ಶ್ರೇಷ್ಠ ಭಾರತ್" ತತ್ವವನ್ನು ಬಲಪಡಿಸುತ್ತದೆ. ರಾಷ್ಟ್ರೀಯ ಏಕತಾ ದಿವಸ್ ರಾಷ್ಟ್ರೀಯ ಏಕೀಕರಣದ ಸಾಂಕೇತಿಕ ದಿನವಾಗಿ ಗುರುತಿಸಲ್ಪಟ್ಟಿದ್ದರೂ, ಏಕ್ ಭಾರತ ಶ್ರೇಷ್ಠ ಭಾರತ ಉಪಕ್ರಮವು ರಾಷ್ಟ್ರೀಯ ಭಾಷಾ ಸಮಾರೋಹಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಯುವ ಪರಿವರ್ತನಾ ಕಾರ್ಯಕ್ರಮಗಳಂತಹ ರಚನಾತ್ಮಕ ಚಟುವಟಿಕೆಗಳ ಮೂಲಕ ವರ್ಷವಿಡೀ ಆ ಧ್ಯೇಯವನ್ನು ವಿಸ್ತರಿಸುತ್ತದೆ. ಈ ನಿರಂತರ ಉಪಕ್ರಮಗಳು ವೈವಿಧ್ಯತೆಯಲ್ಲಿ ಏಕತೆಯ ಮನೋಭಾವವು ವಾರ್ಷಿಕ ಆಚರಣೆಗಿಂತಲೂ ಹೆಚ್ಚು ಕಾಲ ಪ್ರತಿಧ್ವನಿಸುವಂತೆ ನೋಡಿಕೊಳ್ಳುತ್ತವೆ.
References
Press Information Bureau:
Ministry of Youth Affairs & Sports
Government of India
Click here to see PDF
*****
(Backgrounder ID: 155826)
Visitor Counter : 2
Provide suggestions / comments