• Skip to Content
  • Sitemap
  • Advance Search
Social Welfare

ಭಾರತದಲ್ಲಿನ ಹಿರಿಯ ನಾಗರಿಕರು

ಜನಸಂಖ್ಯೆ, ಸವಾಲುಗಳು ಮತ್ತು ಸರ್ಕಾರದ ಉಪಕ್ರಮಗಳು

Posted On: 28 OCT 2025 10:56AM

 

ಪ್ರಮುಖ ಮಾರ್ಗಸೂಚಿಗಳು

  • ಭಾರತದ ಹಿರಿಯ ನಾಗರಿಕರ ಜನಸಂಖ್ಯೆಯು 2036 ವೇಳೆಗೆ ಸುಮಾರು 230 ದಶಲಕ್ಷಕ್ಕೆ (ಮಿಲಿಯನ್) ಹೆಚ್ಚಾಗುವ ನಿರೀಕ್ಷೆಯಿದೆ, ಇದು ಒಟ್ಟು ಜನಸಂಖ್ಯೆಯ ಸುಮಾರು ಶೇ.15 ರಷ್ಟಿರುತ್ತದೆ.
  • ದಕ್ಷಿಣ ರಾಜ್ಯಗಳು, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳೊಂದಿಗೆ ಸೇರಿ, ಹೆಚ್ಚಿನ ಹಿರಿಯ ಜನಸಂಖ್ಯೆಯನ್ನು ಹೊಂದಿವೆ. ಈ ಪ್ರಾದೇಶಿಕ ಅಸಮಾನತೆಗಳು 2036ರ ವೇಳೆಗೆ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
  • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯ ನಾಗರಿಕರಿಗೆ ಸಂಬಂಧಿಸಿದ ವಿಷಯಗಳಿಗೆ ನೋಡಲ್ ಸಚಿವಾಲಯವಾಗಿದೆ. ಇದು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕಾಯಿದೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಜಾರಿಗೆ ತರುತ್ತದೆ.
  • ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ಮತ್ತು ನಂತರ ತಿದ್ದುಪಡಿ ಮಾಡಿದ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಕಾಯಿದೆ, 2019ರ ಪ್ರಕಾರ, ಮಕ್ಕಳು ಮತ್ತು ವಾರಸುದಾರರು ಪೋಷಕರಿಗೆ ನಿರ್ವಹಣಾ ಭತ್ಯೆಯನ್ನು ಒದಗಿಸುವುದು ಕಾನೂನುಬದ್ಧ ಬಾಧ್ಯತೆ ಆಗಿದೆ.

ಪರಿಚಯ

ಭಾರತವು ಕ್ಷಿಪ್ರ ಜನಸಂಖ್ಯಾ ಪರಿವರ್ತನೆಗೆ ಒಳಗಾಗುತ್ತಿದೆ. ಹಿರಿಯ ನಾಗರಿಕರ (60 ವರ್ಷ ಮತ್ತು ಮೇಲ್ಪಟ್ಟ) ಜನಸಂಖ್ಯೆಯು 2011 ರಲ್ಲಿ 100 ದಶಲಕ್ಷದಿಂದ (ಮಿಲಿಯನ್) 2036 ವೇಳೆಗೆ 230 ದಶಲಕ್ಷಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಈ ಬದಲಾವಣೆಯು, 2036 ರ ಹೊತ್ತಿಗೆ ಪ್ರತಿ ಏಳು ಭಾರತೀಯರಲ್ಲಿ ಒಬ್ಬರು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರುತ್ತಾರೆ ಎಂಬುದನ್ನು ಸೂಚಿಸುತ್ತದೆ. ಇದು ದೇಶದ ಜನಸಂಖ್ಯೆಯ ಸಂಯೋಜನೆಯಲ್ಲಿ ಮೂಲಭೂತ ಪುನರ್ರಚನೆಯನ್ನು ಪ್ರತಿನಿಧಿಸುತ್ತದೆ. ಈ ಪರಿವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಕಡಿಮೆಯಾಗುತ್ತಿರುವ ಫಲವತ್ತತೆ ಮತ್ತು ಹೆಚ್ಚುತ್ತಿರುವ ಜೀವಿತಾವಧಿ ದರಗಳಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಬಹು ನೀತಿಗಳು, ಕಾರ್ಯಕ್ರಮಗಳು ಮತ್ತು ಕಾನೂನು ನಿಬಂಧನೆಗಳನ್ನು ಅಳವಡಿಸಿಕೊಂಡಿದೆ.

ಹಿರಿಯ ನಾಗರಿಕರ ಅಗತ್ಯಗಳನ್ನು ಪರಿಹರಿಸುವ ಮಹತ್ವ

ಉತ್ತಮ ಪೋಷಣೆ ಮತ್ತು ಆರೋಗ್ಯ ರಕ್ಷಣೆಯಿಂದಾಗಿ ಭಾರತದ ಜನರು ಹೆಚ್ಚು ಕಾಲ ಬದುಕಲು ಸಾಧ್ಯವಾಗಿದೆ. ಆದರೆ, ಇದು ವೃದ್ಧಾಪ್ಯಕ್ಕೆ ಸಂಬಂಧಿಸಿದ ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಸಹ ತಂದಿದೆ. ಆರ್ಥಿಕವಾಗಿ ದುರ್ಬಲರಾದ ಹಿರಿಯ ವ್ಯಕ್ತಿಗಳು ಮತ್ತು ವಿಧವೆಯರಿಗೆ, ಸರ್ಕಾರವು ಪಿಂಚಣಿ, ಸೂಕ್ತ ವಸತಿ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಒದಗಿಸುವುದಕ್ಕೆ ಆದ್ಯತೆ ನೀಡಬೇಕು.

ಭಾರತದ ಉದಯೋನ್ಮುಖ 'ಸಿಲ್ವರ್ ಎಕಾನಮಿ' —ಅಂದರೆ, 50 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಿದ ಸರಕುಗಳು ಮತ್ತು ಸೇವೆಗಳಿಂದ ನಡೆಸಲ್ಪಡುವ ಆರ್ಥಿಕತೆ) ಜೊತೆಗೆ ವಯಸ್ಕರನ್ನು ಪರಿಣಾಮಕಾರಿಯಾಗಿ ಸಂಯೋಜಿಸಲು ಕೆಲವು ವಿಧಾನಗಳು ಮುಖ್ಯವಾಗಿವೆ. ಅವುಗಳೆಂದರೆ, ಕುಟುಂಬ ಮತ್ತು ಸಮುದಾಯ ನೇತೃತ್ವದ ಉಪಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ಹಿರಿಯರಿಗೆ ಬೆಂಬಲ ನೀಡುವುದು ಮತ್ತು ಈ ಕೆಳಗಿನ ಸೌಲಭ್ಯಗಳನ್ನು ಖಚಿತಪಡಿಸುವುದು: ಆರ್ಥಿಕ ಭದ್ರತೆ, ಡಿಜಿಟಲ್ ಸಾಕ್ಷರತಾ ತರಬೇತಿ, ದೀರ್ಘಾವಧಿಯ ಆರೈಕೆ ವಿಮೆ, ಡಿಜಿಟಲ್ ಆರೋಗ್ಯ ಸೇವೆಗಳ ಪ್ರವೇಶ, ನೆರವು ನೀಡುವ ತಂತ್ರಜ್ಞಾನಗಳು, ಒಡನಾಟದ ವೇದಿಕೆಗಳು ಈ ವಿಧಾನವು, ಹಿರಿಯರು ತಮ್ಮ ಅನುಭವ ಮತ್ತು ಪರಿಣತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಲು ಅನುವು ಮಾಡಿಕೊಡುವ ಕೆಲಸದ ಅವಕಾಶಗಳನ್ನು ಸಹ ಸೃಷ್ಟಿಸುತ್ತದೆ.

ಜನಸಂಖ್ಯಾ ಪ್ರವೃತ್ತಿಗಳು

ಹಿರಿಯ ಜನರ ಜನಸಂಖ್ಯೆ ಹೇಗೆ ಬದಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಅದರ ನಿರೀಕ್ಷೆ ಏನು ಎಂದು ತಿಳಿಯಲು, ಜನಸಂಖ್ಯಾ ಪ್ರಕ್ಷೇಪಗಳ ತಾಂತ್ರಿಕ ಗುಂಪು (TGPP) ಜುಲೈ 2020ರಲ್ಲಿ "ಭಾರತ ಮತ್ತು ರಾಜ್ಯಗಳ ಜನಸಂಖ್ಯಾ ಪ್ರಕ್ಷೇಪಣ ವರದಿ" ಯನ್ನು ತಯಾರಿಸಿದೆ. ವರದಿಯ ಪ್ರಕಾರ, ಭಾರತದ ಹಿರಿಯ ಜನಸಂಖ್ಯೆಯು 2036ರ ವೇಳೆಗೆ 230 ದಶಲಕ್ಷವನ್ನು ತಲುಪಲಿದ್ದು, ಇದು ವ್ಯಾಪಕ ಪರಿಣಾಮಗಳೊಂದಿಗೆ ಆಳವಾದ ಸಾಮಾಜಿಕ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ. ನಮ್ಮ ದೇಶವು ಜನಸಂಖ್ಯಾ ವೃದ್ಧಿಯಲ್ಲಿ ಗಮನಾರ್ಹ ಪ್ರಾದೇಶಿಕ ಅಸಮಾನತೆಗಳನ್ನು ಪ್ರದರ್ಶಿಸುತ್ತದೆ ಮತ್ತು ಈ ಜನಸಂಖ್ಯಾ ಬದಲಾವಣೆಯು ದೇಶದಾದ್ಯಂತ ಏಕರೂಪವಾಗಿಲ್ಲ.

ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಂತಹ ದಕ್ಷಿಣ ರಾಜ್ಯಗಳು ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಂತೆಯೇ ಹೆಚ್ಚಿನ ಸಂಖ್ಯೆಯ ಹಿರಿಯರನ್ನು ಹೊಂದಿವೆ. ಕೇರಳದಲ್ಲಿ ಹಿರಿಯರ ಜನಸಂಖ್ಯೆಯು 2011ರಲ್ಲಿ ಶೇ.13 ರಷ್ಟಿದ್ದದ್ದು 2036 ರ ವೇಳೆಗೆ 23% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಅತ್ಯಂತ ಹೆಚ್ಚು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅನೇಕ ಉತ್ತರ ಮತ್ತು ಪೂರ್ವ ರಾಜ್ಯಗಳಲ್ಲಿ ಸದ್ಯಕ್ಕೆ ಕಡಿಮೆ ಸಂಖ್ಯೆಯ ವೃದ್ಧರಿದ್ದರೂ, ಅವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಉತ್ತರ ಪ್ರದೇಶವು ತುಲನಾತ್ಮಕವಾಗಿ ಕಿರಿಯ ಜನಸಂಖ್ಯೆಯನ್ನು ಹೊಂದಿದ್ದು, ಹಿರಿಯ ವಿಭಾಗವು 2011 ರಲ್ಲಿ ಶೇ.7 ರಿಂದ 2036ರ ವೇಳೆಗೆ ಶೇ.12 ಕ್ಕೆ ಏರುವ ನಿರೀಕ್ಷೆಯಿದೆ. ದಕ್ಷಿಣ ರಾಜ್ಯಗಳು, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸರಾಸರಿಗಿಂತ ಹೆಚ್ಚಿನ ವೃದ್ಧ ಜನಸಂಖ್ಯೆಯನ್ನು ಹೊಂದಿರುವುದು, ಭಾರತದ ವೈವಿಧ್ಯಮಯ ಜನಸಂಖ್ಯಾ ಭೂದೃಶ್ಯವನ್ನು ಉಲ್ಲೇಖಿಸುತ್ತದೆ.

ಲಾಂಗ್ ಟ್ಯೂಡಿನಲ್ ಏಜಿಂಗ್ ಸ್ಟಡಿ ಆಫ್ ಇಂಡಿಯಾ (LASI) 2021 ಭಾರತದಲ್ಲಿನ ವೃದ್ಧಾಪ್ಯದ ಜನಸಂಖ್ಯೆಯ ಸ್ಥಿತಿಯ ಕುರಿತಾದ ಸಂಪೂರ್ಣ ರಾಷ್ಟ್ರೀಯ ಸಮೀಕ್ಷೆ ಮತ್ತು ಪ್ರಮುಖ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೈಗೊಳ್ಳಲಾಗಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ 12% ಹಿರಿಯ ವ್ಯಕ್ತಿಗಳನ್ನು ಒಳಗೊಂಡಿದೆ. ಈ ಪ್ರಮಾಣವು 2050ರ ವೇಳೆಗೆ 319 ದಶಲಕ್ಷಕ್ಕೆ ಏರುವ ನಿರೀಕ್ಷೆಯಿದೆ ಮತ್ತು ವಾರ್ಷಿಕವಾಗಿ ಸುಮಾರು ಶೇ.3 ರಷ್ಟು ದರದಲ್ಲಿ ಬೆಳೆಯುತ್ತಿದೆ. ಹಿರಿಯರ ನಡುವಿನ ಲಿಂಗ ಅನುಪಾತವು ಪ್ರತಿ 1,000 ಪುರುಷರಿಗೆ 1,065 ಮಹಿಳೆಯರಷ್ಟಿದ್ದು, ಹಿರಿಯ ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ 58 ರಷ್ಟಿದೆ. ಅವರಲ್ಲಿ ಶೇ.54 ರಷ್ಟು ವಿಧವೆಯರಾಗಿದ್ದಾರೆ. ಇದಲ್ಲದೆ, ಒಟ್ಟಾರೆ ಅವಲಂಬನೆಯ ಅನುಪಾತವು ಪ್ರತಿ 100 ದುಡಿಯುವ ವಯಸ್ಸಿನ ವ್ಯಕ್ತಿಗಳಿಗೆ 62 ಅವಲಂಬಿತರನ್ನು ಹೊಂದಿದೆ. ಇದು ಭಾರತದಲ್ಲಿ ಜನಸಂಖ್ಯಾ ವೃದ್ಧಾಪ್ಯದ ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಉಲ್ಲೇಖಿಸುತ್ತದೆ.

ಹಿರಿಯ ನಾಗರಿಕರು ಎದುರಿಸುತ್ತಿರುವ ಸವಾಲುಗಳು

ಸಾಂಸ್ಥಿಕ ಮತ್ತು ಕೌಟುಂಬಿಕ ಮಟ್ಟದಲ್ಲಿ ಸೂಕ್ತ ಬೆಂಬಲ ವ್ಯವಸ್ಥೆಗಳ ಕೊರತೆಯಿಂದಾಗಿ, ಭಾರತದಲ್ಲಿನ ಹಿರಿಯ ನಾಗರಿಕರು ಸಾಮಾನ್ಯವಾಗಿ ದುರ್ಬಲ ಪರಿಸ್ಥಿತಿಗಳಲ್ಲಿ ಇರುತ್ತಾರೆ. ಅವರು ಈ ಕೆಳಗಿನ ಬಹುಮುಖಿ ಸವಾಲುಗಳನ್ನು ಎದುರಿಸುತ್ತಾರೆ:

ಮಾನಸಿಕ ಆರೋಗ್ಯ ಸಮಸ್ಯೆಗಳು: ಕಳಂಕಿತ ಮಾನಸಿಕ ಆರೋಗ್ಯ ಪರಿಸ್ಥಿತಿಗಳು (ಉದಾಹರಣೆಗೆ, ಬುದ್ಧಿಮಾಂದ್ಯತೆ, ಆಲ್ಝೈಮರ್). ಹೆಚ್ಚುತ್ತಿರುವ ಅಂಗವೈಕಲ್ಯಗಳು,  ಸಾಕಷ್ಟಿಲ್ಲದ ವೃದ್ಧಾಪ್ಯ ಆರೈಕೆ ಮೂಲಸೌಕರ್ಯ, ವೈದ್ಯಕೀಯ ಸೇವೆಗಳ ಪ್ರವೇಶದಲ್ಲಿ ನಗರ ಮತ್ತು ಗ್ರಾಮೀಣ ವಿಭಜನೆ.

ಆರ್ಥಿಕ ಸವಾಲುಗಳು : ಸಾಕಷ್ಟು ಸಾಮಾಜಿಕ ಭದ್ರತಾ ನಿಬಂಧನೆಗಳ ಕೊರತೆ, ಬೆಳೆಯುತ್ತಿರುವ ಜೀವನ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳು, ಸೀಮಿತ ಆರ್ಥಿಕ ಸಂಪನ್ಮೂಲಗಳು.

ಸಾಮಾಜಿಕ ಸವಾಲುಗಳು:  ದುರ್ಬಲಗೊಳ್ಳುತ್ತಿರುವ ಕುಟುಂಬ ಬೆಂಬಲ ವ್ಯವಸ್ಥೆಗಳು, ಸಾಮಾಜಿಕ ಪ್ರತ್ಯೇಕತೆ, ನಿರ್ಲಕ್ಷ್ಯ, ಒಡನಾಟದ ಕೊರತೆ ಇತ್ಯಾದಿ.

ಡಿಜಿಟಲ್ ಕಂದಕ: ತಂತ್ರಜ್ಞಾನ ಅಳವಡಿಕೆಯಲ್ಲಿನ ಅಡೆತಡೆಗಳು, ತರಬೇತಿಯ ಕೊರತೆ, ಸುಲಭವಾಗಿ ಲಭ್ಯವಿರುವ ಸಾಧನಗಳ ಕೊರತೆ.

ಮೂಲಸೌಕರ್ಯ ಸವಾಲುಗಳು: ಸಾಕಷ್ಟಿಲ್ಲದ ಸಾಕ್ಷರತೆ, ಹಿರಿಯರನ್ನು ದುರ್ಬಲ ಗುಂಪಾಗಿ ನಿರ್ಲಕ್ಷಿಸುವ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಭಾರತದಲ್ಲಿನ ಸಾರ್ವಜನಿಕ ಸ್ಥಳಗಳು ಮತ್ತು ಸಾರಿಗೆಯು ಹೆಚ್ಚಾಗಿ ವೃದ್ಧಾಪ್ಯ ಸ್ನೇಹಿಯಾಗಿಲ್ಲ. ಏಕೆಂದರೆ ಅನೇಕ ಪ್ರದೇಶಗಳಲ್ಲಿ ರ‍್ಯಾಂಪ್‌ಗಳು, ಕೈಗಂಬಿಗಳು ಮತ್ತು ಸುಲಭವಾಗಿ ಲಭ್ಯವಿರುವ ಶೌಚಾಲಯಗಳು ಲಭ್ಯವಿಲ್ಲ.

ಭಾರತದಲ್ಲಿ ಹಿರಿಯ ನಾಗರಿಕರಿಗಾಗಿ ಸರ್ಕಾರದ ಉಪಕ್ರಮಗಳು

ಭಾರತ ಸರ್ಕಾರವು ಹಿರಿಯ ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಅನೇಕ ಉಪಕ್ರಮಗಳು, ನೀತಿಗಳು ಮತ್ತು ಕ್ರಿಯಾ ಯೋಜನೆಗಳನ್ನು ಕೈಗೊಂಡಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಭಾರತದಲ್ಲಿ ಹಿರಿಯ ನಾಗರಿಕರ ಕಲ್ಯಾಣವನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ನೋಡಲ್ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮತ್ತು ಆಯುಷ್ ಸೇರಿದಂತೆ ವಿವಿಧ ಸಂಬಂಧಿತ ಸಚಿವಾಲಯಗಳು, ಹಾಗೆಯೇ ರಾಜ್ಯ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಖಾಸಗಿ ವಲಯದೊಂದಿಗೆ ನಿಕಟ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಮೂಲಕ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯು ದೇಶದಾದ್ಯಂತ ಹಿರಿಯ ಜನಸಂಖ್ಯೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ನೀತಿಗಳು ಮತ್ತು ಕಾರ್ಯಕ್ರಮಗಳ ಸಮಗ್ರ ಅಭಿವೃದ್ಧಿಗೆ ನೇತೃತ್ವ ವಹಿಸಿದೆ. ಹಿರಿಯ ನಾಗರಿಕರ ಆರೈಕೆ, ಯೋಗಕ್ಷೇಮ ಮತ್ತು ಘನತೆಯನ್ನು ಉತ್ತೇಜಿಸುವ, ಅವರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಿರುವ ಹಲವು ಉಪಕ್ರಮಗಳನ್ನು ಸರ್ಕಾರವು ಜಾರಿಗೆ ತರುತ್ತಿದೆ.

ಅಟಲ್ ಪಿಂಚಣಿ ಯೋಜನೆ (ಎಪಿವೈ)

ಅಟಲ್ ಪಿಂಚಣಿ ಯೋಜನೆ ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ವಹಿಸಲಾಗುತ್ತದೆ. ಈ ಯೋಜನೆಯು ಭಾರತೀಯರಿಗೆ, ವಿಶೇಷವಾಗಿ ಬಡವರು ಮತ್ತು ಹಿಂದುಳಿದ ವರ್ಗದವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಮೇ 9, 2015 ರಂದು ಪ್ರಾರಂಭಿಸಲಾಯಿತು. ಈ ಯೋಜನೆಗೆ 18 ರಿಂದ 40 ವರ್ಷ ವಯಸ್ಸಿನ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಭಾರತೀಯ ನಾಗರಿಕರು ಸೇರಲು ಅರ್ಹರಾಗಿರುತ್ತಾರೆ (ಆದಾಗ್ಯೂ, ಅಕ್ಟೋಬರ್ 1, 2022 ರಿಂದ ಆದಾಯ ತೆರಿಗೆ ಪಾವತಿದಾರರಿಗೆ ಈ ಯೋಜನೆಗೆ ಸೇರುವ ಅವಕಾಶವಿರುವುದಿಲ್ಲ). ಈ ಯೋಜನೆಯಡಿಯಲ್ಲಿ, ಚಂದಾದಾರರು 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಕನಿಷ್ಠ ₹1,000 ರಿಂದ ₹5,000 ವರೆಗೆ ಖಾತರಿಪಡಿಸಿದ ಪಿಂಚಣಿಯನ್ನು ಪಡೆಯುತ್ತಾರೆ. ಚಂದಾದಾರರು ನಿಧನರಾದ ನಂತರ, ಅದೇ ಮೊತ್ತದ ಪಿಂಚಣಿಯು ಅವರ ಸಂಗಾತಿಗೆ ಲಭ್ಯವಾಗುತ್ತದೆ. ನಂತರ, ಚಂದಾದಾರರು ಮತ್ತು ಸಂಗಾತಿ ಇಬ್ಬರೂ ನಿಧನರಾದಲ್ಲಿ, ಪಿಂಚಣಿ ನಿಧಿಯ ಒಟ್ಟು ಮೊತ್ತವನ್ನು ನಾಮಿನಿಗೆ ಹಸ್ತಾಂತರಿಸಲಾಗುತ್ತದೆ. 60 ವರ್ಷ ವಯಸ್ಸಿನವರೆಗೆ ಮಾಸಿಕ, ತ್ರೈಮಾಸಿಕ, ಅಥವಾ ಅರ್ಧ-ವಾರ್ಷಿಕವಾಗಿ ಸ್ವಯಂ-ಡೆಬಿಟ್ ಮೂಲಕ ಕೊಡುಗೆಗಳನ್ನು ಪಾವತಿಸಲಾಗುತ್ತದೆ. ಹೂಡಿಕೆಯ ಮೇಲಿನ ಆದಾಯವು ಖಾತರಿಪಡಿಸಿದ ಪಿಂಚಣಿಗೆ ಸಾಕಾಗದಿದ್ದರೆ, ಆ ಕೊರತೆಯನ್ನು ಸರ್ಕಾರವೇ ಭರಿಸುತ್ತದೆ. ಈ ಯೋಜನೆಯು ಮಾರ್ಚ್ 2019ರಲ್ಲಿ 1.54 ಕೋಟಿ ಚಂದಾದಾರರನ್ನು ಹೊಂದಿದ್ದರಿಂದ, ಅಕ್ಟೋಬರ್ 5, 2025 ರ ವೇಳೆಗೆ 8.27 ಕೋಟಿ ಚಂದಾದಾರರಿಗೆ ಏರಿಕೆ ಕಂಡಿದೆ. ಪ್ರಸ್ತುತ, ಇದರ ನಿರ್ವಹಣೆಯ ಅಡಿಯಲ್ಲಿರುವ ಸ್ವತ್ತುಗಳು ₹49,000 ಕೋಟಿಗೂ ಹೆಚ್ಚಿದೆ.

ಅಟಲ್ ವಯೋ ಅಭ್ಯುದಯ ಯೋಜನೆ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿನ ಅಟಲ್ ವಯೋ ಅಭ್ಯುದಯ್ ಯೋಜನೆಯು ಭಾರತದಾದ್ಯಂತ ಹಿರಿಯ ನಾಗರಿಕರಿಗೆ ಸಬಲೀಕರಣವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಒಂದು ಸಮಗ್ರ ಉಪಕ್ರಮವಾಗಿದೆ. ಸಮಾಜಕ್ಕೆ ಹಿರಿಯರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಈ ಯೋಜನೆಯು ಗುರುತಿಸುತ್ತದೆ ಮತ್ತು ಅವರ ಒಟ್ಟಾರೆ ಯೋಗಕ್ಷೇಮ ಹಾಗೂ ಸಾಮಾಜಿಕ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ, ಸರ್ಕಾರವು ಹಿರಿಯ ನಾಗರಿಕರ ಸಬಲೀಕರಣ ಮತ್ತು ಉನ್ನತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿನ ಸೇರ್ಪಡೆಗೆ ಅನುಕೂಲ ಮಾಡಿಕೊಡುವ ಮೂಲಕ, ರಾಷ್ಟ್ರಕ್ಕೆ ಅವರ ಜೀವಮಾನದ ಸೇವೆಯನ್ನು ಗೌರವಿಸಲಾಗುತ್ತಿದೆ.

ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮ

ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಭಾರತ ಸರ್ಕಾರವು ಜಾರಿಗೊಳಿಸಿದ ಮಹತ್ವದ ಯೋಜನೆಯಾಗಿದೆ. ಈ ಕಾರ್ಯಕ್ರಮದಡಿ, ರಾಜ್ಯ ಸರ್ಕಾರಗಳು, ನೋಂದಾಯಿತ ಸಂಸ್ಥೆಗಳ ಮೂಲಕ ಕೇಂದ್ರಾಡಳಿತ ಪ್ರದೇಶದ ಆಡಳಿತಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರೇತರ ಮತ್ತು ಸ್ವಯಂಸೇವಾ ಸಂಸ್ಥೆಗಳು, ಹಾಗೂ ನೆಹರು ಯುವ ಕೇಂದ್ರ ಸಂಘಟನೆಯಂತಹ ಮಾನ್ಯತೆ ಪಡೆದ ಯುವ ಸಂಘಟನೆಗಳು ಸೇರಿದಂತೆ ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಅನುದಾನವನ್ನು ಒದಗಿಸಲಾಗುತ್ತದೆ. ಈ ಅನುದಾನವನ್ನು ವೃದ್ಧಾಶ್ರಮಗಳು, ನಿರಂತರ ಆರೈಕೆ ಮನೆಗಳು, ಮೊಬೈಲ್ ವೈದ್ಯಕೀಯ ಘಟಕಗಳು, ಭೌತಚಿಕಿತ್ಸೆಯ ಚಿಕಿತ್ಸಾಲಯಗಳು ಮತ್ತು ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ನೀಡಲಾಗುತ್ತದೆ. ಆಗಸ್ಟ್ 2025 ರ ಹೊತ್ತಿಗೆ, ದೇಶದಾದ್ಯಂತ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 696 ಹಿರಿಯ ನಾಗರಿಕರ ಮನೆಗಳು ಕಾರ್ಯನಿರ್ವಹಿಸುತ್ತಿವೆ. ಈ ಮನೆಗಳು ಬಡತನದಲ್ಲಿರುವ ಹಿರಿಯ ನಾಗರಿಕರಿಗೆ ಆಶ್ರಯ, ಪೋಷಣೆ, ವೈದ್ಯಕೀಯ ಆರೈಕೆ ಮತ್ತು ಮನರಂಜನೆಯನ್ನು ಒಳಗೊಂಡಂತೆ ಉಚಿತ ಸೌಲಭ್ಯಗಳನ್ನು ನೀಡುತ್ತವೆ. ಇದಲ್ಲದೆ, ಪ್ರಸಕ್ತ ಹಣಕಾಸು ವರ್ಷ 2025-26ರಲ್ಲಿ ಯೋಜನೆಯ ಮಾರ್ಗಸೂಚಿಗಳ ಪ್ರಕಾರ 84 ಹೊಸ ಹಿರಿಯ ನಾಗರಿಕರ ಮನೆಗಳನ್ನು ಆಯ್ಕೆ ಮಾಡಲಾಗಿದ್ದು, ಇದು ಹಿರಿಯ ಜನಸಂಖ್ಯೆಗೆ ಈ ಪ್ರಮುಖ ಬೆಂಬಲ ವ್ಯವಸ್ಥೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ರಾಷ್ಟ್ರೀಯ ವಯೋಶ್ರೀ ಯೋಜನೆ (ಆರ್. ವಿ. ವೈ)

ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಏಪ್ರಿಲ್ 1, 2017 ರಂದು ಪ್ರಾರಂಭಿಸಲಾಯಿತು. ಇದು ವಯೋ ಸಂಬಂಧ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಸಹಾಯಕ ಜೀವನ ಸಾಧನಗಳನ್ನು ಒದಗಿಸುತ್ತದೆ. ವಾಕಿಂಗ್ ಸ್ಟಿಕ್‌ಗಳು, ಮೊಣಕೈ ಊರುಗೋಲುಗಳು, ವಾಕರ್‌ಗಳು, ಶ್ರವಣ ಸಾಧನಗಳು, ಗಾಲಿಕುರ್ಚಿಗಳು ಮತ್ತು ಕೃತಕ ಹಲ್ಲುಗಳು ಸೇರಿದಂತೆ ಇಂತಹ ಸಾಧನಗಳು ಅವರ ದೈಹಿಕ ಕಾರ್ಯಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತವೆ. ಈ ಸಾಧನಗಳನ್ನು ಸಾರ್ವಜನಿಕ ವಲಯದ ಉದ್ದಿಮೆಯಾದ ಕೃತಕ ಅಂಗಗಳ ಉತ್ಪಾದನಾ ನಿಗಮವು ತಯಾರಿಸುತ್ತದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ಸೇರಿದ ಅಥವಾ ಮಾಸಿಕ ಆದಾಯ ರೂ.15,000 ಮೀರದ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಸಾಧನಗಳನ್ನು ಶಿಬಿರಗಳ ಮೂಲಕ ವಿತರಿಸಲಾಗುತ್ತದೆ ಮತ್ತು 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಸಾಧನಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಹಿರಿಯ ನಾಗರಿಕರ ಸಹಾಯವಾಣಿ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶಾದ್ಯಂತ ಇರುವ ಹಿರಿಯ ನಾಗರಿಕರ ಸಮಸ್ಯೆಗಳನ್ನು ನಿವಾರಿಸಲು ಮೀಸಲಾದ ಸೇವೆಯಾಗಿ ಹಿರಿಯ ನಾಗರಿಕರ ರಾಷ್ಟ್ರೀಯ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಟೋಲ್-ಫ್ರೀ ಸಂಖ್ಯೆ 14567 ಮೂಲಕ ಲಭ್ಯವಿರುವ ಈ ಸಹಾಯವಾಣಿ, "ಎಲ್ಡರ್‌ಲೈನ್" ಎಂದು ಕರೆಯಲ್ಪಡುತ್ತದೆ. ಇದು ಹಿರಿಯ ನಾಗರಿಕರಿಗೆ ಕರುಣಾಮಯಿ ಬೆಂಬಲವನ್ನು ಒದಗಿಸುತ್ತದೆ ಮತ್ತು ಅವರನ್ನು ಸಂಬಂಧಿತ ಸೇವೆಗಳೊಂದಿಗೆ ಸಂಪರ್ಕಿಸುತ್ತದೆ. ಭಾರತದ ಹಿರಿಯ ಜನಸಂಖ್ಯೆಯ ಯೋಗಕ್ಷೇಮ ಮತ್ತು ಘನತೆಯನ್ನು ಹೆಚ್ಚಿಸುವ ಗುರಿಯೊಂದಿಗೆ, ಈ ಉಪಕ್ರಮವನ್ನು ಅಕ್ಟೋಬರ್ 1, 2021 ರಂದು ಭಾರತದ ಗೌರವಾನ್ವಿತ ಉಪಾಧ್ಯಕ್ಷರಿಂದ ಉದ್ಘಾಟಿಸಲಾಯಿತು. ಈ ಎಲ್ಡರ್‌ಲೈನ್ ಸಹಾಯವಾಣಿಯು ಹಿರಿಯರಿಗೆ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಮತ್ತು ಅಗತ್ಯವಿದ್ದಲ್ಲಿ, ದುರುಪಯೋಗ ಅಥವಾ ರಕ್ಷಣಾ ಸಂದರ್ಭಗಳಲ್ಲಿ ಸ್ಥಳದಲ್ಲಿಯೇ ಮಧ್ಯಸ್ಥಿಕೆ ಸೇವೆಗಳನ್ನು ಒದಗಿಸುವ ಮೂಲಕ ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸುತ್ತದೆ.

ಹಿರಿಯ ಆರೈಕೆ ವೃದ್ಧಾಪ್ಯ ಬೆಳವಣಿಗೆಯ ಎಂಜಿನ್ (ಎಸ್. . ಜಿ. .) ಪೋರ್ಟಲ್

ಅಭಿವೃದ್ಧಿಪಡಿಸಲು ಮತ್ತು "ಸಿಲ್ವರ್ ಎಕಾನಮಿ" ಕ್ಷೇತ್ರವನ್ನು ಪ್ರವೇಶಿಸಲು ಯುವ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಒಂದು ನವೀನ ಉಪಕ್ರಮವಾಗಿದೆ. ಈ ಪೋರ್ಟಲ್ ವಿಶ್ವಾಸಾರ್ಹ ಸ್ಟಾರ್ಟ್‌ಅಪ್‌ಗಳಿಂದ ಬಂದಿರುವ ವಿಶ್ವಾಸಾರ್ಹ ಹಿರಿಯ ಆರೈಕೆ ಉತ್ಪನ್ನಗಳು ಮತ್ತು ಸೇವೆಗಳನ್ನು ಹುಡುಕುತ್ತದೆ, ಪರಿಶೀಲಿಸುತ್ತದೆ ಮತ್ತು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ, ಇದರಿಂದ ಬಳಕೆದಾರರು ಅವುಗಳನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ಯೋಜನೆಯಡಿ, ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಿಗೆ ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಪ್ರತಿ ಯೋಜನೆಗೆ ₹1 ಕೋಟಿವರೆಗೆ ಇಕ್ವಿಟಿ ಬೆಂಬಲವನ್ನು  ನೀಡಲಾಗುತ್ತದೆ. ಆದರೆ, ಸ್ಟಾರ್ಟ್‌ಅಪ್‌ನಲ್ಲಿನ ಒಟ್ಟು ಸರ್ಕಾರದ ಇಕ್ವಿಟಿ ಪಾಲುಶ 49% ರಷ್ಟು ಮೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಸರ್ಕಾರವು ಈ ಪ್ರಕ್ರಿಯೆಯಲ್ಲಿ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನವೀನ ಉತ್ಪನ್ನಗಳು ಹಾಗೂ ಸೇವೆಗಳ ಆಧಾರದ ಮೇಲೆ ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಲಾಗುತ್ತದೆ.

ಹಿರಿಯರ ಯೋಗ್ಯ ನಾಗರಿಕರಿಗೆ ಗೌರವದ ಆಧಾರದ ಮೇಲೆ ಮರು ಉದ್ಯೋಗ (ಎಸ್. . ಸಿ. ಆರ್. . ಡಿ) ಜಾಲತಾಣ (ಸೀನಿಯರ್ ಏಬಲ್ ಸಿಟಿಜನ್ಸ್ ಫಾರ್ ರೀ-ಎಂಪ್ಲಾಯ್ಮೆಂಟ್ ಇನ್ ಡಿಗ್ನಿಟಿ (SACRED) ಪೋರ್ಟಲ್)

ಅಕ್ಟೋಬರ್ 1, 2021 ರಂದು ಪ್ರಾರಂಭಿಸಲಾದ ಎಸ್‌ಎಸಿಆರ್‌ಇಡಿ ಪೋರ್ಟಲ್, 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಉದ್ಯೋಗ ಮತ್ತು ಕೆಲಸದ ಅವಕಾಶಗಳನ್ನು ಹುಡುಕಲು ಅನುವು ಮಾಡಿಕೊಡುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಈ ಪೋರ್ಟಲ್ ಹಿರಿಯ ನಾಗರಿಕರು ಮತ್ತು ಖಾಸಗಿ ಉದ್ಯಮಗಳ ನಡುವೆ ಅವರ ಆದ್ಯತೆಗಳಿಗೆ ಅನುಗುಣವಾಗಿ ವರ್ಚುವಲ್ ಹೊಂದಾಣಿಕೆಯನ್ನು ಸುಗಮಗೊಳಿಸುತ್ತದೆ. ಇದರ ಮುಖ್ಯ ಉದ್ದೇಶವೆಂದರೆ, ಹಿರಿಯ ನಾಗರಿಕರ ಜೀವನದ ನಂತರದ ವರ್ಷಗಳಲ್ಲಿ ಅವರಿಗೆ ಮರು-ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು. ಈ ವೇದಿಕೆಯ ಮೂಲಕ, ಅನುಭವಿ ಹಿರಿಯ ನಾಗರಿಕರು ತಮ್ಮ ಕೌಶಲ್ಯ ಮತ್ತು ಅನುಭವಕ್ಕೆ ತಕ್ಕ ಕೆಲಸಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ವೃದ್ಧಾಪ್ಯ ಆರೈಕೆದಾರರ ತರಬೇತಿ

ಈ ಯೋಜನೆಯು ವೃದ್ಧಾಪ್ಯ ಆರೈಕೆದಾರರ ವೃತ್ತಿಪರ ಮಾನವಶಕ್ತಿಯನ್ನು ತರಬೇತಿಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಆರೈಕೆದಾರರು ಹಿರಿಯ ಜನಸಂಖ್ಯೆಯ ವೈವಿಧ್ಯಮಯ ಮತ್ತು ಕ್ರಿಯಾತ್ಮಕ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಜ್ಜುಗೊಂಡಿರುತ್ತಾರೆ. ತರಬೇತಿ ಮಾಡ್ಯೂಲ್‌ಗಳು ಮತ್ತು ಕೋರ್ಸ್‌ಗಳು ಕ್ಲಿನಿಕಲ್ (ವೈದ್ಯಕೀಯ) ಮತ್ತು ಕ್ಲಿನಿಕಲ್ ಅಲ್ಲದ ಎರಡೂ ಅಂಶಗಳನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ, ಹಿರಿಯ ನಾಗರಿಕರ ಒಳ್ಳೆಯ ಜೀವನ ಮತ್ತು ಒಡನಾಟದ ಅಗತ್ಯತೆಗಳಿಗೂ ಸಹ ಒತ್ತು ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಮಾರ್ಚ್ 18, 2025 ರಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ನೀಡಿದ ಮಾಹಿತಿಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ, ಈ ಯೋಜನೆಯಡಿಯಲ್ಲಿ ಒಟ್ಟು 32 ಸಂಸ್ಥೆಗಳನ್ನು ನೋಂದಾಯಿಸಲಾಗಿದೆ. ಈ ಸಂಸ್ಥೆಗಳು ಯಶಸ್ವಿಯಾಗಿ 36,785 ತರಬೇತಿಾರ್ಥಿಗಳಿಗೆ ತರಬೇತಿ ನೀಡಿದ್ದು, ಇದು ದೇಶದಾದ್ಯಂತ ಹಿರಿಯರಿಗೆ ಬೆಂಬಲ ನೀಡಲು ಲಭ್ಯವಿರುವ ಅರ್ಹ ವೃದ್ಧಾಪ್ಯ ಆರೈಕೆದಾರರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ.

ಆಯುಷ್ಮಾನ್ ಭಾರತ್ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ

ಆಯುಷ್ಮಾನ್ ಭಾರತ್ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಈ ಹಿಂದೆ ನೋಂದಾಯಿತ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದ್ವಿತೀಯ ಮತ್ತು ತೃತೀಯ ಹಂತದ ಆರೈಕೆ ಸೇವೆಗಳು ಹಾಗೂ ಆಸ್ಪತ್ರೆ ದಾಖಲಾತಿಗಾಗಿ ವಾರ್ಷಿಕವಾಗಿ ₹5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿತ್ತು, ಇದರಿಂದಾಗಿ ವೈದ್ಯಕೀಯ ವೆಚ್ಚಗಳಿಂದ ಉಂಟಾಗುವ ಆರ್ಥಿಕ ಸಂಕಷ್ಟದಿಂದ ಅವರನ್ನು ರಕ್ಷಿಸಲಾಗುತ್ತಿತ್ತು. ಈ ಯೋಜನೆಯಲ್ಲಿ ಮಹತ್ವದ ವಿಸ್ತರಣೆಯನ್ನು ಸರ್ಕಾರವು ಅಕ್ಟೋಬರ್ 29, 2024ರಂದು ಘೋಷಿಸಿತು. ಈ ವಿಸ್ತರಣೆಯು ಸರಿಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ಅನ್ವಯಿಸುತ್ತದೆ. 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಈ ಹಿರಿಯ ನಾಗರಿಕರಿಗೆ, ಅವರ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ, ವಾರ್ಷಿಕವಾಗಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದು ಸುಮಾರು 4.5 ಕೋಟಿ ಕುಟುಂಬಗಳಿಗೆ ಲಾಭವನ್ನು ತರುತ್ತದೆ. ಜನವರಿ 15, 2025ರ ಹೊತ್ತಿಗೆ, 40 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ, ಇದು ಭಾರತದ ವೃದ್ಧ ಜನಸಂಖ್ಯೆಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಒದಗಿಸುವ ನಿಟ್ಟಿನಲ್ಲಿ ಗಣನೀಯ ಪ್ರಗತಿಯನ್ನು ಸೂಚಿಸುತ್ತದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯು ರಾಷ್ಟ್ರೀಯ ಸಾಮಾಜಿಕ ಸಹಾಯಕ ಕಾರ್ಯಕ್ರಮದ ಪ್ರಮುಖ ಅಂಗವಾಗಿದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಿಗೆ ಆರ್ಥಿಕ ನೆರವು ಒದಗಿಸುತ್ತದೆ. ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ: 79 ವರ್ಷದವರೆಗೆ ಮಾಸಿಕ ₹200 ಮತ್ತು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನವರಿಗೆ ಮಾಸಿಕ ₹500 ಅನ್ನು ನೀಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಆಡಳಿತಕ್ಕೊಳಪಟ್ಟಿರುವ NSAP, ಜೀವನೋಪಾಯದ ಭದ್ರತೆ, ಜೀವನಮಟ್ಟ ಮತ್ತು ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಇದು ಶಿಕ್ಷಣವನ್ನು ಉತ್ತೇಜಿಸುತ್ತದೆ. ಅಕ್ಟೋಬರ್ 2025 ರ ಹೊತ್ತಿಗೆ, 2.21 ಕೋಟಿಗೂ ಹೆಚ್ಚು ನಾಗರಿಕರು ಐಜಿಎನ್‌ಒಎಪಿಎಸ್‌ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ವೃದ್ಧರ ಆರೈಕೆಗಾಗಿ ರಾಷ್ಟ್ರೀಯ ಕಾರ್ಯಕ್ರಮ

ವೃದ್ಧರ ಆರೈಕೆಗಾಗಿ ರಾಷ್ಟ್ರೀಯ ಕಾರ್ಯಕ್ರಮವು 2010-11ರಲ್ಲಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿ ಪ್ರಾರಂಭಗೊಂಡಿತು. ಈ ಯೋಜನೆಯ ಮುಖ್ಯ ಗುರಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತಗಳಲ್ಲಿ ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಸಮಗ್ರ ಆರೋಗ್ಯ ಆರೈಕೆಯನ್ನು ಒದಗಿಸುವುದಾಗಿದೆ. ಪ್ರಸ್ತುತ, ಈ ಕಾರ್ಯಕ್ರಮವು ಭಾರತದಾದ್ಯಂತ ಇರುವ ಎಲ್ಲಾ 713 ಆರೋಗ್ಯ ಜಿಲ್ಲೆಗಳನ್ನು ಒಳಗೊಂಡಿದೆ. ಜಿಲ್ಲಾ ಆಸ್ಪತ್ರೆಗಳು ಮತ್ತು ಅದಕ್ಕಿಂತ ಕೆಳಗಿನ ಆರೋಗ್ಯ ಕೇಂದ್ರಗಳಲ್ಲಿ ಮೀಸಲಾದ ವೃದ್ಧಾಪ್ಯ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಹೊರ ರೋಗಿಗಳ ವಿಭಾಗ, 10 ಹಾಸಿಗೆಗಳ ವೃದ್ಧಾಪ್ಯ ವಾರ್ಡ್ಗಳು, ಫಿಸಿಯೋಥೆರಪಿ ಮತ್ತು ಪ್ರಯೋಗಾಲಯ ಸೌಲಭ್ಯಗಳು ಸೇರಿವೆ. ಈ ಕಾರ್ಯಕ್ರಮದ ಮೂಲಕ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಂಪೂರ್ಣ ಆರೋಗ್ಯ ಬೆಂಬಲವನ್ನು ಖಚಿತಪಡಿಸಲಾಗುತ್ತಿದೆ.

ಹಿರಿಯ ನಾಗರಿಕರ ಕಲ್ಯಾಣ ನಿಧಿ

ಹಿರಿಯ ನಾಗರಿಕರ ಕಲ್ಯಾಣ ನಿಧಿಯನ್ನು ಹಣಕಾಸು ಕಾಯಿದೆ, 2015ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ವೃದ್ಧರ ರಾಷ್ಟ್ರೀಯ ನೀತಿ ಮತ್ತು ಹಿರಿಯ ನಾಗರಿಕರ ರಾಷ್ಟ್ರೀಯ ನೀತಿಗಳೊಂದಿಗೆ ಹೊಂದಿಕೊಂಡು, ಹಿರಿಯ ನಾಗರಿಕರ ಕಲ್ಯಾಣವನ್ನು ಉತ್ತೇಜಿಸುವ ವಿವಿಧ ಯೋಜನೆಗಳಿಗೆ ಬೆಂಬಲ ನೀಡಲು ಸ್ಥಾಪಿಸಲಾದ ನಿಧಿಯಾಗಿದೆ.

ಈ ನಿಧಿಗೆ ಸಣ್ಣ ಉಳಿತಾಯ ಯೋಜನೆಗಳು, ನೌಕರರ ಭವಿಷ್ಯ ನಿಧಿ, ಸಾರ್ವಜನಿಕ ಭವಿಷ್ಯ ನಿಧಿ, ಜೀವ ಮತ್ತು ಜೀವ ವಿಮೆಯೇತರ ವಿಮಾ ಪಾಲಿಸಿಗಳು ಮತ್ತು ಕಲ್ಲಿದ್ದಲು ಗಣಿ ಭವಿಷ್ಯ ನಿಧಿ ಖಾತೆಗಳು ಸೇರಿದಂತೆ ವಿವಿಧ ಮೂಲಗಳಿಂದ ಹಕ್ಕು ಪಡೆಯದ ಹಣವನ್ನು ವರ್ಗಾಯಿಸಲಾಗುತ್ತದೆ. ಈ ನಿಧಿಯ ನಿರ್ವಹಣೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೋಡಲ್ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ.

ವೃದ್ಧರಿಗೆ ಸಾಮಾಜಿಕ ಮತ್ತು ಸಮುದಾಯ ಬೆಂಬಲ

ಸಾಮಾಜಿಕ ಮತ್ತು ಸಮುದಾಯ ಬೆಂಬಲವು ಹಿರಿಯ ನಾಗರಿಕರ ಭಾವನಾತ್ಮಕ ಯೋಗಕ್ಷೇಮ ಮತ್ತು ಸಾಮಾಜಿಕ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಉಪಕ್ರಮಗಳು ಹಿರಿಯರ ಜೀವನದ ನಂತರದ ವರ್ಷಗಳಲ್ಲಿ ಏಕಾಂಗಿತನವನ್ನು ಕಡಿಮೆ ಮಾಡಲು ಮತ್ತು ಅವರಿಗೆ ಒಂದು ಭಾಗ ಎಂಬ ಭಾವನೆ ಹಾಗೂ ಉದ್ದೇಶದ ಪ್ರಜ್ಞೆಯನ್ನು ಬೆಳೆಸಲು ಸಹಾಯ ಮಾಡುತ್ತವೆ. ಹಿರಿಯರ ಕ್ಲಬ್‌ಗಳು, ಸಮುದಾಯ ಕಾರ್ಯಕ್ರಮಗಳು, ಅಥವಾ ಸ್ವಯಂಸೇವಾ ಗುಂಪುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರು ಇತರರೊಂದಿಗೆ ಸಂವಹನ ನಡೆಸಲು, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಅವಕಾಶ ಒದಗಿಸುತ್ತದೆ. ಈ ಮೂಲಕ, ಸಮುದಾಯವು ವೃದ್ಧರ ಅನುಭವ ಮತ್ತು ಜ್ಞಾನವನ್ನು ಬಳಸಿಕೊಳ್ಳುವುದರಿಂದ, ಹಿರಿಯರಿಗೆ ಸಂತೋಷ ಮತ್ತು ಘನತೆಯ ಜೀವನ ಸಿಗುತ್ತದೆ.

ಕುಟುಂಬದ ಬೆಂಬಲ

ಸಾಮಾನ್ಯವಾಗಿ, ಹಿರಿಯ ನಾಗರಿಕರಿಗೆ ಕುಟುಂಬವೇ ಪ್ರಾಥಮಿಕ ಬೆಂಬಲ ವ್ಯವಸ್ಥೆಯಾಗಿದ್ದು, ಇದು ಆರ್ಥಿಕ, ಭಾವನಾತ್ಮಕ ಮತ್ತು ಆರೈಕೆ ನೆರವನ್ನು ಒದಗಿಸುತ್ತದೆ. ಆದರೆ, ಹೆಚ್ಚುತ್ತಿರುವ ವಲಸೆ, ನಗರೀಕರಣ ಮತ್ತು ವಿಭಕ್ತ ಕುಟುಂಬಗಳ ಸಂಖ್ಯೆಯಿಂದಾಗಿ, ಸಾಂಪ್ರದಾಯಿಕ ಕುಟುಂಬ ಆರೈಕೆಯ ಈ ಸುರಕ್ಷತಾ ಜಾಲವು ದುರ್ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಕುಟುಂಬದ ಜವಾಬ್ದಾರಿಯನ್ನು ಬಲಪಡಿಸುವ ಮತ್ತು ಹಿರಿಯರಿಗೆ ಕಾನೂನುಬದ್ಧ ರಕ್ಷಣೆ ನೀಡುವ ಉದ್ದೇಶದಿಂದ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ಡಿಸೆಂಬರ್ 2007ರಲ್ಲಿ ಜಾರಿಗೆ ಬಂದಿತು.ಈ ಕಾಯಿದೆಯು ಮಕ್ಕಳು ಮತ್ತು ಕಾನೂನು ಉತ್ತರಾಧಿಕಾರಿಗಳಿಗೆ ಪೋಷಕರು ಮತ್ತು ಹಿರಿಯ ನಾಗರಿಕರಿಗೆ ನಿರ್ವಹಣೆಯನ್ನು ಒದಗಿಸುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸುತ್ತದೆ. ಈ ಕಾಯಿದೆಯು ಹೀಗೆ ಹೇಳುತ್ತದೆ: "ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಮತ್ತು ಗುರುತಿಸಲ್ಪಟ್ಟ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ನಿಬಂಧನೆಗಳನ್ನು ಜಾರಿಗೆ ತರಲು, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣವನ್ನು ಒದಗಿಸಲು, ಅವರ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು, ಹಿರಿಯ ನಾಗರಿಕರ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ ಮತ್ತು ನಿಯಂತ್ರಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗಾಗಿ ಜಾರಿಗೊಳಿಸಿದ ಒಂದು ಕಾಯಿದೆ ಇದಾಗಿದೆ". ಈ ಮೂಲಕ ಹಿರಿಯರು ಘನತೆ ಮತ್ತು ಸುರಕ್ಷತೆಯೊಂದಿಗೆ ಬದುಕಲು ಅಗತ್ಯವಾದ ಕಾನೂನು ನೆಲೆಯನ್ನು ಒದಗಿಸಲಾಗಿದೆ.

ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಮಸೂದೆ, 2019 ಯು ಹಿರಿಯ ಜನಸಂಖ್ಯೆಗೆ ರಕ್ಷಣೆಯನ್ನು ಬಲಪಡಿಸಲು ಹಲವು ಮಹತ್ವದ ಸುಧಾರಣೆಗಳನ್ನು ಪರಿಚಯಿಸಿತು. ಈ ತಿದ್ದುಪಡಿಯು ಮೊದಲು "ಮಕ್ಕಳ" ವ್ಯಾಖ್ಯಾನವನ್ನು ವಿಸ್ತರಿಸಿತು. ಈಗ ಇದು ಮಲ-ಮಕ್ಕಳು, ದತ್ತು ಪಡೆದ ಮಕ್ಕಳು, ಅಳಿಯ/ಸೊಸೆಯಂದಿರು ಮತ್ತು ಅಪ್ರಾಪ್ತ ಮಕ್ಕಳ ಕಾನೂನು ಪಾಲಕರನ್ನು ಸಹ ಒಳಗೊಂಡಿದೆ. ಅದೇ ರೀತಿ, "ಪೋಷಕರು" ಎಂದರೆ ಈಗ ಅತ್ತೆ-ಮಾವಂದಿರು ಮತ್ತು ಅಜ್ಜ-ಅಜ್ಜಿಯರನ್ನು ಒಳಗೊಳ್ಳುತ್ತದೆ. ಒಂದು ಪ್ರಮುಖ ಆರ್ಥಿಕ ಸುಧಾರಣೆಯೆಂದರೆ, ಮಾಸಿಕ ನಿರ್ವಹಣೆಯ ₹10,000 ಮಿತಿಯನ್ನು ತೆಗೆದುಹಾಕಲಾಯಿತು. ಇದು ನ್ಯಾಯಮಂಡಳಿಗಳಿಗೆ ಹಿರಿಯ ನಾಗರಿಕರ ಜೀವನ ಮಟ್ಟ ಮತ್ತು ಅವರ ಮಕ್ಕಳ ಗಳಿಕೆಯ ಸಾಮರ್ಥ್ಯವನ್ನು ಆಧರಿಸಿ ಸೂಕ್ತ ಮೊತ್ತವನ್ನು ನಿರ್ಧರಿಸಲು ಅವಕಾಶ ನೀಡಿತು. ಶಾಸನವು ಆರೈಕೆ ಗುಣಮಟ್ಟವನ್ನು ಹೆಚ್ಚಿಸಿತು, ಹಿರಿಯ ನಾಗರಿಕರು ಕೇವಲ "ಸಾಮಾನ್ಯ ಜೀವನ" ದ ಬದಲು "ಘನತೆಯ ಜೀವನ" ನಡೆಸುವುದನ್ನು ಕಡ್ಡಾಯಗೊಳಿಸಿತು. ಸುರಕ್ಷತೆಯನ್ನು ಹೆಚ್ಚಿಸಲು, ಪ್ರತಿ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವುದು ಮತ್ತು ಪ್ರತಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸುವುದನ್ನು ತಿದ್ದುಪಡಿ ಕಡ್ಡಾಯಗೊಳಿಸಿತು. ದೈನಂದಿನ ಚಟುವಟಿಕೆಗಳಿಗೆ ತೊಂದರೆ ನೀಡುವ ದೈಹಿಕ ಅಥವಾ ಮಾನಸಿಕ ದುರ್ಬಲತೆ ಹೊಂದಿರುವ ಹಿರಿಯರಿಗೆ ಮನೆ ಆರೈಕೆ ಸೇವೆಗಳನ್ನು ಮಸೂದೆ ಪರಿಚಯಿಸಿತು. ಹೆಚ್ಚುವರಿಯಾಗಿ, "ನಿರ್ವಹಣೆ" ಯ ವ್ಯಾಪ್ತಿಯನ್ನು ಆರೋಗ್ಯ ರಕ್ಷಣೆ, ಸುರಕ್ಷತೆ ಮತ್ತು ಭದ್ರತೆ ಯನ್ನು ಸೇರಿಸಲು ವಿಸ್ತರಿಸಲಾಯಿತು. ಹಾಗೆಯೇ, "ಕಲ್ಯಾಣ" ದ ವ್ಯಾಪ್ತಿಯನ್ನು ವಸತಿ, ಬಟ್ಟೆ ಮತ್ತು ಸುರಕ್ಷತೆ ಯನ್ನು ಒಳಗೊಳ್ಳಲು ವಿಸ್ತರಿಸಲಾಯಿತು. ಅಂತಿಮವಾಗಿ, ಖಾಸಗಿ ಸೌಲಭ್ಯಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳು ಹಿರಿಯ ನಾಗರಿಕರಿಗೆ ಮೀಸಲಾದ ಸರತಿ ಸಾಲುಗಳು, ಹಾಸಿಗೆಗಳು ಮತ್ತು ವೃದ್ಧಾಪ್ಯ ಆರೈಕೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಯಿತು.

ತಂತ್ರಜ್ಞಾನದ ಪಾತ್ರ

ಭಾರತದಲ್ಲಿ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ, ಸುರಕ್ಷತೆ, ಸಂವಹನ, ಸ್ವಾತಂತ್ರ್ಯ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದ ಹಿರಿಯ ನಾಗರಿಕರ ಜನಸಂಖ್ಯೆಯು ಹೆಚ್ಚಾಗುವ ನಿರೀಕ್ಷೆ ಇರುವುದರಿಂದ, ಈ ವರ್ಗದ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನ-ಆಧಾರಿತ ಪರಿಹಾರಗಳು ಅತ್ಯಗತ್ಯವಾಗುತ್ತಿವೆ. ವೃದ್ಧರ ಆರೈಕೆಗಾಗಿ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿರುವ ಟೆಲಿಮೆಡಿಸಿನ್ ಸೇವೆಗಳು ಪ್ರಯಾಣ ಮಾಡದೆಯೇ ವೈದ್ಯರನ್ನು ಸಂಪರ್ಕಿಸಲು ಅವಕಾಶ ನೀಡುತ್ತವೆ. ಇದು ಮನೆಗೆ ಸೀಮಿತರಾದ ಹಿರಿಯರಿಗೆ ಅಥವಾ ಗ್ರಾಮೀಣ ಪ್ರದೇಶದವರಿಗೆ ಬಹಳ ಉಪಯುಕ್ತವಾಗಿದೆ. -ಸಂಜೀವನಿ ಟೆಲಿಮೆಡಿಸಿನ್ ವೇದಿಕೆಯು ಉಚಿತವಾಗಿ, ಮನೆಯಲ್ಲಿಯೇ ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸುತ್ತದೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಏಕಾಂಗಿತನ ಹಾಗೂ ಒತ್ತಡಕ್ಕಾಗಿ ಮಾನಸಿಕ ಆರೋಗ್ಯ ಸಮಾಲೋಚನೆಯನ್ನು ನೀಡುತ್ತದೆ. ಸುರಕ್ಷತೆ, ಆರೋಗ್ಯ ಮೇಲ್ವಿಚಾರಣೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನವು ಹಿರಿಯರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸ್ಮಾರ್ಟ್ ವಾಚ್ಗಳು ಮತ್ತು ಫಿಟ್ನೆಸ್ ಬ್ಯಾಂಡ್ಗಳಂತಹ ಧರಿಸಬಹುದಾದ ಸಾಧನಗಳು  ಪ್ರಮುಖ ಆರೋಗ್ಯ ಸಂಕೇತಗಳನ್ನು ಟ್ರ್ಯಾಕ್ ಮಾಡಲು, ದೈಹಿಕ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ಕಳುಹಿಸಲು ಸಹಾಯ ಮಾಡುತ್ತವೆ, ಇದರಿಂದ ಸಕಾಲಿಕ ವೈದ್ಯಕೀಯ ನೆರವು ಸಿಗುತ್ತದೆ. ಆನ್ಲೈನ್ ಔಷಧಾಲಯಗಳು ಹಿರಿಯ ನಾಗರಿಕರು ಮನೆಯಲ್ಲಿಯೇ ಔಷಧಿಗಳನ್ನು ಆರ್ಡರ್ ಮಾಡಲು ಮತ್ತು ಸ್ವೀಕರಿಸಲು ಸುಲಭಗೊಳಿಸುತ್ತವೆ, ಪದೇ ಪದೇ ಪ್ರಯಾಣ ಮಾಡದೆಯೇ ಆರೈಕೆಯ ನಿರಂತರತೆಯನ್ನು ಖಚಿತಪಡಿಸುತ್ತವೆ. ಕ್ಯಾಮೆರಾಗಳು ಮತ್ತು ಸಂವೇದಕಗಳು ಸೇರಿದಂತೆ ಸ್ಮಾರ್ಟ್ ಹೋಮ್ ತಂತ್ರಜ್ಞಾನಗಳು ಕುಟುಂಬ ಸದಸ್ಯರಿಗೆ ಅಥವಾ ಆರೈಕೆದಾರರಿಗೆ ಹಿರಿಯರ ಯೋಗಕ್ಷೇಮವನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತವೆ, ಗೌಪ್ಯತೆಯನ್ನು ಕಾಯ್ದುಕೊಳ್ಳುವ ಜೊತೆಗೆ ನೆಮ್ಮದಿಯನ್ನು ನೀಡುತ್ತವೆ. ಒಟ್ಟಾರೆಯಾಗಿ, ಈ ನಾವೀನ್ಯತೆಗಳು ಹಿರಿಯರಿಗೆ ಹೆಚ್ಚು ಸಂಪರ್ಕಿತ, ಸುರಕ್ಷಿತ ಮತ್ತು ಘನತೆಯ ವಯಸ್ಸಾದ ಅನುಭವವನ್ನು ಉತ್ತೇಜಿಸುತ್ತಿವೆ.

ಹಿರಿಯ ನಾಗರಿಕರ ಕಲ್ಯಾಣ ಪೋರ್ಟಲ್

ಹಿರಿಯ ನಾಗರಿಕರ ಕಲ್ಯಾಣ ಪೋರ್ಟಲ್ ಒಂದು ಕೇಂದ್ರೀಕೃತ ಡಿಜಿಟಲ್ ವೇದಿಕೆಯಾಗಿದೆ. ಇದು ಹಿರಿಯ ನಾಗರಿಕರಿಗೆ ಸರ್ಕಾರಿ ಯೋಜನೆಗಳು, ಪಿಂಚಣಿ ಕಾರ್ಯಕ್ರಮಗಳು, ಸಹಾಯವಾಣಿಗಳು ಮತ್ತು ಸೇವೆಗಳನ್ನು ಪಡೆಯಲು ಅಗತ್ಯವಿರುವ ಡೌನ್ಲೋಡ್ ಮಾಡಬಹುದಾದ ಫಾರ್ಮ್ಗಳಿಗೆ ಸುಲಭವಾಗಿ ಮತ್ತು ಅಡೆತಡೆ ಇಲ್ಲದೆ ಪ್ರವೇಶವನ್ನು ಒದಗಿಸುತ್ತದೆ. ಈ ಪೋರ್ಟಲ್ ಹಿರಿಯ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಆರೈಕೆದಾರರಿಗೆ ಏಕ-ಗವಾಕ್ಷಿ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಹಿರಿಯ ವ್ಯಕ್ತಿಗಳು ಈ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಅದರ ಪರಿಣಾಮಕಾರಿತ್ವವು ಡಿಜಿಟಲ್ ಸಾಕ್ಷರತೆ ಮತ್ತು ಔಟ್ರೀಚ್ ಪ್ರಯತ್ನಗಳ ಮೇಲೆ ಅವಲಂಬಿತವಾಗಿದೆ. ಈ ಮೂಲಕ ತಂತ್ರಜ್ಞಾನದ ಅರಿವಿಲ್ಲದ ವೃದ್ಧರು ಸಹ ಈ ಪ್ರಮುಖ ಸಂಪನ್ಮೂಲಗಳನ್ನು ಬಳಸಲು ಅವಕಾಶ ದೊರೆಯುತ್ತದೆ.

ವೃದ್ಧರಿಗೆ ಸಹಾಯ ಮಾಡುವ ವಿಧಾನಗಳು

ಹಿರಿಯ ನಾಗರಿಕರ ಜೀವನವನ್ನು ಸುಧಾರಿಸುವಲ್ಲಿ ಸಾಮಾಜಿಕ ಬೆಂಬಲವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದರಿಂದ ಮತ್ತು ಅಂತರ-ಪೀಳಿಗೆಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ, ಹಿರಿಯರಲ್ಲಿನ ಏಕಾಂಗಿತನ ಮತ್ತು ವಿಚ್ಛೇದನ ಭಾವನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಅವರ ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಬಹುದು. ಅಂತರ-ಪೀಳಿಗೆಯ ಕಾರ್ಯಕ್ರಮಗಳಲ್ಲಿ ಯುವಕರು ಹಿರಿಯರೊಂದಿಗೆ ಸಂವಹನ ನಡೆಸುವುದು, ಕಥೆಗಳನ್ನು ಹಂಚಿಕೊಳ್ಳುವುದು ಅಥವಾ ಕೌಶಲ್ಯಗಳನ್ನು ಕಲಿತುಕೊಳ್ಳುವುದು ವೃದ್ಧರಿಗೆ ತಮ್ಮ ಜೀವನಕ್ಕೆ ಉದ್ದೇಶ ಮತ್ತು ಮೌಲ್ಯದ ಪ್ರಜ್ಞೆಯನ್ನು ನೀಡುತ್ತದೆ, ಜೊತೆಗೆ ಅವರಿಗೆ ಸಮಾಜದ ಪ್ರಮುಖ ಭಾಗವೆಂಬ ಭಾವನೆಯನ್ನು ಹೆಚ್ಚಿಸುತ್ತದೆ.

ಹಿರಿಯ ನಾಗರಿಕರಿಗೆ ವಸತಿ

ನಗರ ಸ್ಥಳಗಳು, ಸಾರಿಗೆ ಮತ್ತು ವಸತಿಗಳನ್ನು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸುವುದು ನಿಜವಾಗಿಯೂ ಸಮಗ್ರ ನಗರಗಳನ್ನು ನಿರ್ಮಿಸಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಸುಲಭವಾಗಿ ಪ್ರವೇಶಿಸಬಹುದಾದ ಸಾರಿಗೆ ವ್ಯವಸ್ಥೆ, ಉತ್ತಮವಾಗಿ ನಿರ್ವಹಿಸಲಾದ ಸೌಲಭ್ಯಗಳು, ತಡೆರಹಿತ ಕಟ್ಟಡಗಳು ಮತ್ತು ಬಳಕೆದಾರ ಸ್ನೇಹಿ ಸಾರ್ವಜನಿಕ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ, ಇದು ವೃದ್ಧಾಪ್ಯದಲ್ಲಿ ಘನತೆ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಹಿರಿಯ ಸ್ನೇಹಿ ವಸತಿ ಮತ್ತು ಸಮುದಾಯ ವಾಸದ ವ್ಯವಸ್ಥೆಗಳನ್ನು ಪ್ರೋತ್ಸಾಹಿಸಲು, ಸರ್ಕಾರವು ನಿವೃತ್ತಿ ಗೃಹಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ ಮಾದರಿ ಮಾರ್ಗಸೂಚಿಗಳು, 2019 ಅನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳು, ವೃದ್ಧರಿಗೆ ಸುರಕ್ಷಿತ, ಸುಲಭವಾಗಿ ಸಂಚರಿಸಲು ಮತ್ತು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ನೆರವಾಗುತ್ತವೆ. ಈ ಕ್ರಮಗಳು ಹಿರಿಯರು ಸಮಾಜದ ಸಕ್ರಿಯ ಭಾಗವಾಗಿ ಮುಂದುವರಿಯಲು ಮತ್ತು ಸೌಕರ್ಯಯುತ ಜೀವನ ನಡೆಸಲು ಸಹಾಯಕವಾಗಿವೆ.

ಪೀಳಿಗೆಯ ಆಂತರಿಕ ಸಂಬಂಧಗಳನ್ನು ಉತ್ತೇಜಿಸುವುದು

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಯು 2025ರ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆಯ ಸಂದರ್ಭದಲ್ಲಿ ಪೀಳಿಗೆಗಳ ನಡುವಿನ ಬಾಂಧವ್ಯವನ್ನು ಬೆಳೆಸಲು ವಿನ್ಯಾಸಗೊಳಿಸಲಾದ "ನೈತಿಕ್ ಪಾಠಮ್" ಎಂಬ ವಿಶೇಷ ಆಟವನ್ನು ಬಿಡುಗಡೆ ಮಾಡಿದೆ. ಈ ಆಟವು ಮಕ್ಕಳಿಗಾಗಿ ನೈತಿಕ ಮೌಲ್ಯಗಳು ಮತ್ತು ನೀತಿಗಳನ್ನು ವ್ಯಾಖ್ಯಾನಿಸುತ್ತದೆ, ಜೊತೆಗೆ ಹಿರಿಯರ ಮೇಲಿನ ಪ್ರೀತಿ, ಕಾಳಜಿ ಮತ್ತು ಗೌರವಗಳ ಮೂಲಕ ಕುಟುಂಬದ ಬಾಂಧವ್ಯದಲ್ಲಿ ಅವುಗಳ ಮಹತ್ವವನ್ನು ಒತ್ತಿಹೇಳುತ್ತದೆ. ಈ ಆಟವನ್ನು ಇಡೀ ಕುಟುಂಬವು ಒಟ್ಟಾಗಿ ಆಡಲು ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ

 

ಉಪಸಂಹಾರ

ಭಾರತದ ಸಿಲ್ವರ್ ಎಕಾನಮಿ (ಹಿರಿಯ ನಾಗರಿಕರ ಆರ್ಥಿಕತೆ) ಯು 2024ರಲ್ಲಿ ಸರಿಸುಮಾರು ಎಪ್ಪತ್ತಮೂರು ಸಾವಿರ ಕೋಟಿ ರೂಪಾಯಿಗಳಷ್ಟು ಮೌಲ್ಯವನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಇದು ಗಣನೀಯವಾಗಿ ಹಲವು ಪಟ್ಟು ಹೆಚ್ಚಾಗುವ ಪ್ರಕ್ಷೇಪಗಳಿವೆ. ಜಾಗತಿಕವಾಗಿ, ಹಿರಿಯ ನಾಗರಿಕರು, ಹಾಗೂ 45 ರಿಂದ 64 ವರ್ಷ ವಯಸ್ಸಿನ ವೃತ್ತಿಪರರನ್ನು ಒಳಗೊಂಡ ಈ ವರ್ಗವು 'ಅತ್ಯಂತ ಶ್ರೀಮಂತ ವಯಸ್ಸಿನ ಗುಂಪು' ಎಂದು ಸಂಶೋಧನೆ ಗುರುತಿಸಿದೆ. ಭಾರತದಲ್ಲಿನ ಹಿರಿಯ ಆರೈಕೆ ವಿಭಾಗವು ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಉದ್ಯಮಗಳಿಗೆ ಅಪಾರ ಬೆಳವಣಿಗೆಯ ಸಾಮರ್ಥ್ಯವನ್ನು ನೀಡುತ್ತದೆ. ಬೆಳೆಯುತ್ತಿರುವ ಈ ಸಿಲ್ವರ್ ಎಕಾನಮಿ, ಹಿರಿಯ ಜನಸಂಖ್ಯಾ ಸಮೂಹದ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪೂರೈಸಲು ಮೀಸಲಾಗಿರುವ ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ಮಹತ್ವದ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಮಾರುಕಟ್ಟೆಯು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಕ್ಷಿಪ್ರ ವಿಸ್ತರಣೆಗೆ ಸಿದ್ಧವಾಗಿದ್ದು, ಈ ವಲಯದಲ್ಲಿ ನಾವೀನ್ಯತೆ ಮತ್ತು ಅಭಿವೃದ್ಧಿಗೆ ಗಣನೀಯ ಅವಕಾಶಗಳನ್ನು ಒದಗಿಸುತ್ತಿದೆ.

ಸಮಗ್ರ ಹಿರಿಯ ಆರೈಕೆ ವ್ಯವಸ್ಥೆಯನ್ನು ರೂಪಿಸಲು, ಆರೋಗ್ಯ ವ್ಯವಸ್ಥೆಯಾದ್ಯಂತ ಸಾರ್ವಜನಿಕ-ಖಾಸಗಿ ಸಹಯೋಗದ ಮೂಲಕ ವೃದ್ಧರ ಅಗತ್ಯಗಳಿಗೆ ಆದ್ಯತೆ ನೀಡುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮೂಲಭೂತ ಕ್ರಮಗಳು ಹೀಗಿವೆ: ಹಿರಿಯ ಆರೈಕೆಯನ್ನು ಅಗತ್ಯ ನಿಯಮಗಳು ಮತ್ತು ಮಾನದಂಡಗಳನ್ನು ಹೊಂದಿರುವ ಒಂದು ವಿಶೇಷ ವಲಯವಾಗಿ ಗುರುತಿಸುವುದು; ಸ್ಪಷ್ಟವಾದ ಮೌಲ್ಯಮಾಪನ ಚೌಕಟ್ಟುಗಳ ಆಧಾರದ ಮೇಲೆ ನೀತಿ ಮತ್ತು ನಿಯಂತ್ರಣ ಸುಧಾರಣೆಗಳನ್ನು ಜಾರಿಗೊಳಿಸುವುದು; ಮತ್ತು ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಇಲಾಖೆಗಳ ನಡುವೆ ಸಮನ್ವಯದ ವಿಧಾನಗಳನ್ನು ಬಲಪಡಿಸುವುದು. ಈ ಚೌಕಟ್ಟಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಖಾಸಗಿ ಪೂರೈಕೆದಾರರು ಸೇರಿದಂತೆ ವಿವಿಧ ಪಾಲುದಾರರನ್ನು ಬಳಸಿಕೊಳ್ಳಬೇಕು. ಅಲ್ಲದೆ, ಪರಿಣಾಮಕಾರಿ, ದಕ್ಷ ಮತ್ತು ಕಾಲಮಿತಿಯೊಳಗೆ ಅನುಷ್ಠಾನಕ್ಕಾಗಿ ಸಚಿವಾಲಯಗಳ ನಡುವೆ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳಬೇಕು.

 

References

Press Information Bureau:

https://www.pib.gov.in/PressReleseDetailm.aspx?PRID=2152593

https://static.pib.gov.in/WriteReadData/specificdocs/documents/2025/may/doc202558551701.pdf

https://www.pib.gov.in/FactsheetDetails.aspx?Id=149101

https://www.pib.gov.in/PressReleasePage.aspx?PRID=2082719

https://www.pib.gov.in/PressReleasePage.aspx?PRID=1942849

Others:

https://www.socialjustice.gov.in/writereaddata/UploadFile/International_Day_of_Older_Persons636011781954563264.pdf (Page 1)

https://socialjustice.gov.in/writereaddata/UploadFile/83211672138255.pdf (Page 3)

https://esanjeevani.mohfw.gov.in/#/

https://scw.dosje.gov.in/

https://mohfw.gov.in/sites/default/files/Population%20Projection%20Report%202011-2036%20-%20upload_compressed_0.pdf

Click here to see PDF

 

*****

 

(Backgrounder ID: 155780) Visitor Counter : 11
Provide suggestions / comments
Link mygov.in
National Portal Of India
STQC Certificate