• Skip to Content
  • Sitemap
  • Advance Search
Technology

ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟು

ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು

Posted On: 24 OCT 2025 10:38AM

ಪ್ರಮುಖಾಂಶಗಳು

  • ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟನ್ನು ₹64.76 ಕೋಟಿ ಬಜೆಟ್‌ನೊಂದಿಗೆ ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭಿಸಲಾಯಿತು.
  • ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿನ ಪ್ರಮುಖ ಘಟಕಗಳು: ವಿಶ್ವಾಸ್ಯ ಬ್ಲಾಕ್‌ಚೈನ್ ಸ್ಟ್ಯಾಕ್, ಎನ್ ಬಿ ಎಫ್ ಲೈಟ್, ಪ್ರಮಾಣೀಕ್ ಮತ್ತು ರಾಷ್ಟ್ರೀಯ ಬ್ಲಾಕ್‌ಚೈನ್ ಪೋರ್ಟಲ್.
  • ಬ್ಲಾಕ್‌ಚೈನ್ ತಂತ್ರಜ್ಞಾನ ಸ್ಟ್ಯಾಕ್ ಅನ್ನು ಭುವನೇಶ್ವರ, ಪುಣೆ ಮತ್ತು ಹೈದರಾಬಾದ್‌ನಲ್ಲಿರುವ ಎನ್ಐಸಿ ಡೇಟಾ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.
  • ಅಕ್ಟೋಬರ್ 21, 2025 ರವರೆಗೆ, ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ನಲ್ಲಿ 34 ಕೋಟಿಗೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಪರಿಚಯ

ಕ್ರಿಪ್ಟೋಕರೆನ್ಸಿಗಳೊಂದಿಗಿನ ತನ್ನ ಆರಂಭಿಕ ಸಂಬಂಧದಿಂದ ಹೊರಬಂದಿರುವ ಬ್ಲಾಕ್‌ಚೈನ್ ತಂತ್ರಜ್ಞಾನವು 21ನೇ ಶತಮಾನದ ಅತ್ಯಂತ ಪರಿವರ್ತಕ ಡಿಜಿಟಲ್ ಆವಿಷ್ಕಾರಗಳಲ್ಲಿ ಒಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂತಹ ತಂತ್ರಜ್ಞಾನಗಳು ಗಣನೆಯ ಶಕ್ತಿಯಿಂದ ತಮ್ಮ ಶಕ್ತಿಯನ್ನು ಪಡೆದರೆ, ಬ್ಲಾಕ್‌ಚೈನ್‌ನ ಮೌಲ್ಯವು ಮಧ್ಯವರ್ತಿಗಳಿಲ್ಲದೆ ಪರಿಶೀಲಿಸಬಹುದಾದ ನಂಬಿಕೆಯನ್ನು ಸ್ಥಾಪಿಸುವ ಸಾಮರ್ಥ್ಯದಲ್ಲಿದೆ.

ಭಾರತದ ಪ್ರಸ್ತುತ ಆಡಳಿತ ವ್ಯವಸ್ಥೆಗಳು ಸಾಮಾನ್ಯವಾಗಿ ಕೇಂದ್ರೀಕೃತ ಡೇಟಾಬೇಸ್‌ಗಳನ್ನು ಅವಲಂಬಿಸಿವೆ. ಇವು ದೋಷಗಳು, ವಂಚನೆ ಮತ್ತು ಪಾರದರ್ಶಕತೆಯ ಕೊರತೆಗಳಿಗೆ ಗುರಿಯಾಗಬಹುದು. ಬ್ಲಾಕ್‌ಚೈನ್ ತಂತ್ರಜ್ಞಾನವು ಸವಾಲುಗಳನ್ನು ತನ್ನ ಟ್ಯಾಂಪರ್-ನಿರೋಧಕ, ವಿತರಣೆಗೊಂಡ ಲೆಡ್ಜರ್ ವ್ಯವಸ್ಥೆಯ ಮೂಲಕ ನಿವಾರಿಸುತ್ತದೆ. ಈ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅನೇಕ ನೋಡ್‌ಗಳಾದ್ಯಂತ ಸುರಕ್ಷಿತವಾಗಿ ನಿರ್ವಹಿಸಲಾಗುತ್ತದೆ. ಈ ವಿನ್ಯಾಸವು ಅನಧಿಕೃತ ಮಾರ್ಪಾಡುಗಳನ್ನು ವಾಸ್ತವಿಕವಾಗಿ ಅಸಾಧ್ಯವಾಗಿಸುತ್ತದೆ ಮತ್ತು ದತ್ತಾಂಶದ ಸಮಗ್ರತೆ ಮತ್ತು ನಂಬಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಬ್ಲಾಕ್‌ಚೈನ್‌ನ ಅಗಾಧ ಸಾಮರ್ಥ್ಯವನ್ನು ಗುರುತಿಸಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ವಿವಿಧ ವಲಯಗಳಾದ್ಯಂತ ಬ್ಲಾಕ್‌ಚೈನ್ ಪರಿಹಾರಗಳನ್ನು ನಿಯೋಜಿಸಲು ಏಕೀಕೃತ ವಿನ್ಯಾಸವನ್ನು ಒದಗಿಸುವ ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟನ್ನು (ಎನ್ ಬಿ ಎಫ್) ಅಭಿವೃದ್ಧಿಪಡಿಸಿದೆ. ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಬ್ಲಾಕ್‌ಚೈನ್‌ನ ಸಮಗ್ರತೆಯನ್ನು ಮಾರ್ಗದರ್ಶಿಸುವುದು ಎನ್ ಬಿ ಎಫ್ ಗುರಿಯಾಗಿದ್ದು, ಇದು ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಖಚಿತಪಡಿಸುತ್ತದೆ.

ಬ್ಲಾಕ್ಚೈನ್ ಎಂದರೇನು?

ಬ್ಲಾಕ್‌ಚೈನ್ ಒಂದು ವಿತರಣೆಗೊಂಡ, ಪಾರದರ್ಶಕ, ಸುರಕ್ಷಿತ ಮತ್ತು ಬದಲಾಯಿಸಲಾಗದ ಡೇಟಾಬೇಸ್ ಆಗಿದೆ. ಇದು ದಾಖಲೆಗಳು ಅಥವಾ ವಹಿವಾಟುಗಳ ಲೆಡ್ಜರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಕಂಪ್ಯೂಟರ್‌ಗಳ ನೆಟ್‌ವರ್ಕ್‌ಗಳಾದ್ಯಂತ ಪ್ರವೇಶಿಸಬಹುದು.

ಬ್ಲಾಕ್ಚೈನ್ ವಿಧಗಳು

  • ಸಾರ್ವಜನಿಕ ಬ್ಲಾಕ್‌ಚೈನ್:  ನೆಟ್‌ವರ್ಕ್‌ನಲ್ಲಿ, ಎಲ್ಲಾ ನೋಡ್‌ಗಳು ದಾಖಲೆಗಳನ್ನು ಪ್ರವೇಶಿಸಬಹುದು, ವಹಿವಾಟುಗಳನ್ನು ಪರಿಶೀಲಿಸಬಹುದು, 'ಪ್ರೂಫ್-ಆಫ್-ವರ್ಕ್' ಅನ್ನು ನಿರ್ವಹಿಸಬಹುದು ಮತ್ತು ಹೊಸ ಬ್ಲಾಕ್‌ಗಳನ್ನು ಸೇರಿಸಬಹುದು.
  • ಖಾಸಗಿ ಬ್ಲಾಕ್‌ಚೈನ್: ಇದು ಒಂದು ಅನುಮತಿ-ಆಧಾರಿತ ಬ್ಲಾಕ್‌ಚೈನ್ ಆಗಿದ್ದು, ಒಂದು ಸಂಸ್ಥೆಯೊಳಗಿನ ಆಯ್ದ ಭಾಗವಹಿಸುವವರಿಗೆ ಮಾತ್ರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ನಿಯಂತ್ರಿಸುವ ಘಟಕವು ಭದ್ರತೆ, ಅಧಿಕಾರ ಮತ್ತು ಪ್ರವೇಶದ ಮಟ್ಟವನ್ನು ನಿರ್ಧರಿಸುತ್ತದೆ. ಇದು ಸರ್ಕಾರಿ ಅನ್ವಯಿಕೆಗಳಿಗೆ ಸೂಕ್ತವಾಗಿದೆ ಮತ್ತು ಡೇಟಾದ ಗೌಪ್ಯತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಖಾತ್ರಿಗೊಳಿಸುತ್ತದೆ.
  • ಕನ್ಸೋರ್ಟಿಯಂ ಬ್ಲಾಕ್‌ಚೈನ್: ನೆಟ್‌ವರ್ಕ್‌ನಲ್ಲಿ, ಬ್ಲಾಕ್‌ಚೈನ್ ಅರೆ-ವಿಕೇಂದ್ರೀಕೃತವಾಗಿರುತ್ತದೆ ಹಂಚಿಕೆಯ ದತ್ತಾಂಶ ನಿರ್ವಹಣೆ ಮತ್ತು ಮೌಲ್ಯೀಕರಣಕ್ಕಾಗಿ ಇದನ್ನು ಹಲವಾರು ಸಂಸ್ಥೆಗಳು ಜಂಟಿಯಾಗಿ ನಿರ್ವಹಿಸುತ್ತವೆ.
  • ಹೈಬ್ರಿಡ್ ಬ್ಲಾಕ್‌ಚೈನ್: ಇದು ಸಾರ್ವಜನಿಕ ಮತ್ತು ಖಾಸಗಿ ಬ್ಲಾಕ್‌ಚೈನ್‌ಗಳ ಮಿಶ್ರಣವಾಗಿದ್ದು, ಆಯ್ದ ಡೇಟಾ ಪ್ರವೇಶಕ್ಕೆ ಅವಕಾಶ ನೀಡುತ್ತದೆ.

ಬ್ಲಾಕ್‌ಚೈನ್‌ನ ಮೂಲಭೂತ ಶಕ್ತಿಗಳಾದ – ಪಾರದರ್ಶಕತೆ, ಬದಲಾಯಿಸಲಾಗದಿರುವುದು, ವಿಕೇಂದ್ರೀಕರಣ ,ಮತ್ತು ನಂಬಿಕೆ – ಇವು ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿನ ಪ್ರಮುಖ ಕೇಂದ್ರಬಿಂದುಗಳಾಗಿವೆ. ಈ ಗುಣಲಕ್ಷಣಗಳು ಸುರಕ್ಷಿತ ಮತ್ತು ದಕ್ಷ ಡಿಜಿಟಲ್ ವ್ಯವಸ್ಥೆಗಳಿಗೆ ಅವಕಾಶ ನೀಡುತ್ತವೆ. ಮುಖ್ಯವಾಗಿ, ಆಡಳಿತವನ್ನು ಪರಿವರ್ತಿಸುವಲ್ಲಿ, ನಾಗರಿಕ ಸೇವೆಗಳನ್ನು ಹೆಚ್ಚಿಸುವಲ್ಲಿ ಮತ್ತು ಆಡಳಿತಾತ್ಮಕ ತೊಡಕುಗಳನ್ನು ಕಡಿಮೆ ಮಾಡುವಲ್ಲಿ ಇವು ನಿರ್ಣಾಯಕವಾಗಿವೆ.

ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟು (ಎನ್ ಬಿ ಎಫ್): ಸುರಕ್ಷಿತ ಮತ್ತು ಅಳೆಯಬಹುದಾದ ಡಿಜಿಟಲ್ ಆಡಳಿತಕ್ಕಾಗಿ ಭಾರತದ ಸ್ವದೇಶಿ ವೇದಿಕೆ

 

ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟು (ಎನ್ ಬಿ ಎಫ್) ಮಾರ್ಚ್ 2021 ರಲ್ಲಿ ₹64.76 ಕೋಟಿ ವೆಚ್ಚದಲ್ಲಿ ಪ್ರಾರಂಭವಾಯಿತು. ಇದು ಸೆಪ್ಟೆಂಬರ್ 4, 2024 ರಂದು ತನ್ನ ಅಧಿಕೃತ ಉದ್ಘಾಟನೆಯೊಂದಿಗೆ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಎನ್ ಬಿ ಎಫ್ ಅನ್ನು ಅನುಮತಿ-ಆಧಾರಿತ ಬ್ಲಾಕ್‌ಚೈನ್-ಆಧಾರಿತ ಅಪ್ಲಿಕೇಶನ್‌ಗಳ ಅಭಿವೃದ್ಧಿ ಮತ್ತು ನಿಯೋಜನೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಇದು ಭಾರತಕ್ಕಾಗಿ ಸುರಕ್ಷಿತ, ಪಾರದರ್ಶಕ ಮತ್ತು ಅಳೆಯಬಹುದಾದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವ ದಿಕ್ಕಿನಲ್ಲಿ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ.

ತಂತ್ರಜ್ಞಾನ ಸ್ಟ್ಯಾಕ್ವಿಶ್ವಾಸ್ಯ ಬ್ಲಾಕ್ಚೈನ್ ಸ್ಟ್ಯಾಕ್

ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿನ ತಿರುಳು ವಿಶ್ವಾಸ್ಯ ಬ್ಲಾಕ್‌ಚೈನ್ ಸ್ಟ್ಯಾಕ್ ಆಗಿದೆ.

ಇದು ಆಡಳಿತಕ್ಕಾಗಿ ಬ್ಲಾಕ್‌ಚೈನ್-ಆಧಾರಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಮತ್ತು ನಿಯೋಜಿಸಲು ತಾಂತ್ರಿಕ ಅಡಿಪಾಯವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸ್ವದೇಶಿ ಮತ್ತು ಮಾಡ್ಯುಲರ್ ವೇದಿಕೆಯಾಗಿದೆ. ವಿಶ್ವಾಸ್ಯ ಬ್ಲಾಕ್‌ಚೈನ್ ಸ್ಟ್ಯಾಕ್‌ನ ವೈಶಿಷ್ಟ್ಯಗಳು ಹೀಗಿವೆ:

  • ಸೇವೆಯಾಗಿ ಬ್ಲಾಕ್‌ಚೈನ್ (BaaS): ವಿಶ್ವಾಸ್ಯವು ಬ್ಲಾಕ್‌ಚೈನ್ ಮೂಲಸೌಕರ್ಯವನ್ನು ಹಂಚಿದ ಸೇವೆಯಾಗಿ ಒದಗಿಸುತ್ತದೆ. ಇದು ಸರ್ಕಾರಿ ಘಟಕಗಳು ತಮ್ಮದೇ ಆದ ಮೂಲಸೌಕರ್ಯವನ್ನು ರಚಿಸುವ ಅಥವಾ ನಿರ್ವಹಿಸುವ ಅಗತ್ಯವಿಲ್ಲದೆ ಬ್ಲಾಕ್‌ಚೈನ್-ಆಧಾರಿತ ಅಪ್ಲಿಕೇಶನ್‌ಗಳನ್ನು ನಿಯೋಜಿಸಲು ಅನುಮತಿಸುತ್ತದೆ.
  • ವಿತರಣೆಗೊಂಡ ಮೂಲಸೌಕರ್ಯ: ಈ ಸ್ಟ್ಯಾಕ್ ಅನ್ನು ಭುವನೇಶ್ವರ, ಪುಣೆ, ಮತ್ತು ಹೈದರಾಬಾದ್‌ನಲ್ಲಿರುವ ಎನ್ಐಸಿ ಡೇಟಾ ಕೇಂದ್ರಗಳಾದ್ಯಂತ ನಿಯೋಜಿಸಲಾಗಿದೆ. ಈ ವಿತರಣೆಗೊಂಡ ನೆಟ್‌ವರ್ಕ್ ವಿನ್ಯಾಸವು ಬ್ಲಾಕ್‌ಚೈನ್-ಆಧಾರಿತ ಅಪ್ಲಿಕೇಶನ್‌ಗಳಿಗೆ ದೋಷ ಸಹಿಷ್ಣುತೆ, ಅಳೆಯುವಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸುತ್ತದೆ.
  • ಅನುಮತಿ-ಆಧಾರಿತ ಬ್ಲಾಕ್‌ಚೈನ್ ಲೇಯರ್ : ಈ ವೇದಿಕೆಯನ್ನು ಅನುಮತಿ-ಆಧಾರಿತ ಬ್ಲಾಕ್‌ಚೈನ್‌ನ ಮೇಲೆ ನಿರ್ಮಿಸಲಾಗಿದೆ. ಪರಿಶೀಲಿಸಿದ ಮತ್ತು ಅಧಿಕೃತ ಭಾಗವಹಿಸುವವರು ಮಾತ್ರ ವಹಿವಾಟುಗಳಿಗೆ ಸೇರಲು ಅಥವಾ ಮೌಲ್ಯೀಕರಿಸಲು ಇದು ಖಚಿತಪಡಿಸುತ್ತದೆ.
  • ಓಪನ್ ಎಪಿಐಗಳು ಮತ್ತು ಏಕೀಕರಣ ಸೇವೆಗಳು: ದೃಢೀಕರಣ ಮತ್ತು ದತ್ತಾಂಶ ವಿನಿಮಯಕ್ಕಾಗಿ ವಿಶ್ವಾಸ್ಯವು ಓಪನ್ ಎಪಿಐಗಳನ್ನು ಮತ್ತು ಏಕೀಕರಣ ಮಾಡ್ಯೂಲ್‌ಗಳನ್ನು ಒದಗಿಸುತ್ತದೆ. ಈ ವೈಶಿಷ್ಟ್ಯಗಳು ಇ-ಆಡಳಿತ ವೇದಿಕೆಗಳೊಂದಿಗೆ ತಡೆರಹಿತ ಏಕೀಕರಣಕ್ಕೆ ಅನುವು ಮಾಡಿಕೊಡುತ್ತದೆ.

ಎನ್ ಬಿ ಎಫ್ ಲೈಟ್ - ಸ್ಟಾರ್ಟ್ಅಪ್ಗಳು ಮತ್ತು ಅಕಾಡೆಮಿಗಾಗಿ ಬ್ಲಾಕ್ಚೈನ್ ಸ್ಯಾಂಡ್ಬಾಕ್ಸ್

ಎನ್ ಬಿ ಎಫ್ ಲೈಟ್ ಎಂಬುದು ಬ್ಲಾಕ್‌ಚೈನ್ ತಂತ್ರಜ್ಞಾನ ಸ್ಟ್ಯಾಕ್‌ನ ಸ್ಯಾಂಡ್‌ಬಾಕ್ಸ್ ಆವೃತ್ತಿಯಾಗಿದೆ. ಇದನ್ನು ನಾವೀನ್ಯತೆ, ಪ್ರಯೋಗ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸ್ಟಾರ್ಟ್‌ಅಪ್‌ಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ನಿಯೋಜನೆಯ ಅಗತ್ಯವಿಲ್ಲದೆ ನಿಯಂತ್ರಿತ ಪರಿಸರದಲ್ಲಿ ಬ್ಲಾಕ್‌ಚೈನ್-ಆಧಾರಿತ ಅಪ್ಲಿಕೇಶನ್‌ಗಳ ಮೂಲಮಾದರಿಯನ್ನು ರಚಿಸಲು ಅನುಮತಿಸುತ್ತದೆ. ಇದು ಪೂರೈಕೆ ಸರಪಳಿ ಮತ್ತು ಡಿಜಿಟಲ್ ಪ್ರಮಾಣಪತ್ರಗಳಂತಹ ಪ್ರಮುಖ ಆಡಳಿತ ಮತ್ತು ಕೈಗಾರಿಕಾ ಡೊಮೇನ್‌ಗಳಲ್ಲಿ ಸ್ಮಾರ್ಟ್ ಕಾಂಟ್ರಾಕ್ಟ್ ಟೆಂಪ್ಲೇಟ್‌ಗಳೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಮತ್ತು ಮೌಲ್ಯೀಕರಿಸಲು ಅನುವು ಮಾಡಿಕೊಡುತ್ತದೆ.

ಪ್ರಮಾಣೀಕ್ಅಪ್ಲಿಕೇಶನ್ ಪರಿಶೀಲನೆಗಾಗಿ ನವೀನ ಬ್ಲಾಕ್ಚೈನ್ ಪರಿಹಾರ

ಇಂದಿನ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ, ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ಮತ್ತು ಮೋಸದ ಗ್ರಾಹಕ ಬೆಂಬಲದಿಂದ ಮೊಬೈಲ್ ಸಾಧನಗಳನ್ನು ರಕ್ಷಿಸುವುದು ಅತ್ಯಗತ್ಯ. ಏಕೆಂದರೆ ಬೆದರಿಕೆಗಳು ವೈಯಕ್ತಿಕ ಡೇಟಾವನ್ನು ರಾಜಿ ಮಾಡಿಕೊಳ್ಳಬಹುದು ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಪ್ರಮಾಣೀಕ್ ಒಂದು ನವೀನ ಪರಿಹಾರವಾಗಿದ್ದು, ಮೊಬೈಲ್ ಅಪ್ಲಿಕೇಶನ್‌ಗಳ ದೃಢೀಕರಣ ಮತ್ತು ಮೂಲವನ್ನು ಪರಿಶೀಲಿಸಲು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಬಳಕೆದಾರರು ಅಪ್ಲಿಕೇಶನ್ ಅನ್ನು ಸ್ಕ್ಯಾನ್ ಮಾಡಿದಾಗ ಅಥವಾ ಪರಿಶೀಲಿಸಿದಾಗ, ಪ್ರಮಾಣೀಕ್ ಅದರ ಕಾನೂನುಬದ್ಧತೆಯನ್ನು ಮೌಲ್ಯೀಕರಿಸಲು ಬ್ಲಾಕ್‌ಚೈನ್ ದಾಖಲೆಗಳೊಂದಿಗೆ ವಿವರಗಳನ್ನು ಹೊಂದಿಸಿ ನೋಡುತ್ತದೆ. ಹೀಗಾಗಿ ಮೊಬೈಲ್ ಪರಿಸರ ವ್ಯವಸ್ಥೆಯಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ.

ರಾಷ್ಟ್ರೀಯ ಬ್ಲಾಕ್ಚೈನ್ ಪೋರ್ಟಲ್

ರಾಷ್ಟ್ರೀಯ ಬ್ಲಾಕ್‌ಚೈನ್ ಪೋರ್ಟಲ್ ಆಡಳಿತ ಮತ್ತು ಕೈಗಾರಿಕಾ ವಲಯಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಭಾರತದ ಕಾರ್ಯತಂತ್ರದ ವಿಧಾನವನ್ನು ವಿವರಿಸುತ್ತದೆ. ಈ ವೇದಿಕೆಯು ನಾವೀನ್ಯತೆ, ಮಾನದಂಡ ಮತ್ತು ಅಪ್ಲಿಕೇಶನ್‌ಗಳಿಗಾಗಿ ಬ್ಲಾಕ್‌ಚೈನ್‌ನ ಅಡ್ಡ-ವಲಯದ ಅಳವಡಿಕೆಯನ್ನು ಬೆಂಬಲಿಸುತ್ತದೆ. ಇದು ವಿಶ್ವಾಸವನ್ನು ಪೋಷಿಸುತ್ತದೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದ ನಾಯಕತ್ವವನ್ನು ಹೆಚ್ಚಿಸುತ್ತದೆ.

ಹಲವು ಕೈಗಾರಿಕೆಗಳಾದ್ಯಂತ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬೆಂಬಲಿಸುವ ವಿಶ್ವದ ಕೆಲವು ರಾಜ್ಯ-ನೇತೃತ್ವದ ಉಪಕ್ರಮಗಳಲ್ಲಿ ಭಾರತದ ಎನ್ ಬಿ ಎಫ್ ಕೂಡ ಒಂದಾಗಿದೆ.

ಬ್ಲಾಕ್‌ಚೈನ್-ಸಶಕ್ತ ಸರಪಳಿಗಳು: ಆಡಳಿತ, ಪೂರೈಕೆ ಸರಪಳಿಗಳು ಮತ್ತು ನ್ಯಾಯಾಂಗ ವ್ಯವಸ್ಥೆಗಳ ಪರಿವರ್ತನೆ

ವಿಶ್ವಾಸಾರ್ಹ ಡಿಜಿಟಲ್ ಆರ್ಥಿಕತೆಯೆಡೆಗೆ ಭಾರತದ ಪ್ರಯಾಣವು ಪ್ರಮುಖ ನಿಯಂತ್ರಕರು ಮತ್ತು ತಂತ್ರಜ್ಞಾನ ಸಕ್ರಿಯಗೊಳಿಸುವವರ ಸಂಘಟಿತ ಪ್ರಯತ್ನಗಳಿಂದ ಮುನ್ನಡೆಸಲ್ಪಡುತ್ತಿದೆ. ಆಡಳಿತ, ಪೂರೈಕೆ ಸರಪಳಿಗಳು ಮತ್ತು ಉದ್ಯಮಗಳಾದ್ಯಂತ ಬ್ಲಾಕ್‌ಚೈನ್ ಅಳವಡಿಕೆಗೆ ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟು ಮೂಲಸೌಕರ್ಯವನ್ನು ಒದಗಿಸುತ್ತದೆ.

ಪ್ರಮಾಣಪತ್ರ ಮತ್ತು ದಾಖಲೆ ಸರಪಳಿ

ಪ್ರಮಾಣಪತ್ರಗಳನ್ನು ನೀಡುವ ಮತ್ತು ಬಳಸುವ ಪ್ರಸ್ತುತ ವ್ಯವಸ್ಥೆಯು ಮೋಸದ ದಾಖಲೆಗಳ ಬಳಕೆ ಮತ್ತು ಸೇವೆ ವಿತರಣೆಯಲ್ಲಿನ ವಿಳಂಬಗಳಂತಹ ಸವಾಲುಗಳನ್ನು ಎದುರಿಸುತ್ತದೆ. ಈ ಸವಾಲುಗಳನ್ನು ನಿವಾರಿಸಲು, ರಾಷ್ಟ್ರೀಯ ಮಾಹಿತಿ ಕೇಂದ್ರ ಎನ್ಐಸಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇಂತಹ ದಾಖಲೆಗಳ ಸುರಕ್ಷಿತ ಸಂಗ್ರಹಣೆ ಮತ್ತು ಮರುಪಡೆಯುವಿಕೆಗಾಗಿ 'ಪ್ರಮಾಣಪತ್ರ ಸರಪಳಿ' ಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಬ್ಲಾಕ್ಚೈನ್ ಸಶಕ್ತ ಸರಪಳಿಗಳು ಮತ್ತು ಕಾರ್ಯತಂತ್ರದ ಉಪಕ್ರಮಗಳು

ದಾಖಲೆ ಸರಪಳಿ

ಇದೇ ರೀತಿ, ದಾಖಲೆ ಸರಪಳಿ ಒಂದು ಏಕೈಕ ವೇದಿಕೆಯಾಗಿದ್ದು, ಸರ್ಕಾರವು ನೀಡಿದ ಯಾವುದೇ ದಾಖಲೆಗಳಾದ ಜಾತಿ, ಆದಾಯ, ಪಡಿತರ ಚೀಟಿ , ಚಾಲನಾ ಪರವಾನಿಗೆ, ಜನನ ಮತ್ತು ಮರಣ ಪ್ರಮಾಣಪತ್ರಗಳು ಇತ್ಯಾದಿಗಳ ಸಂಗ್ರಹಣೆ ಮತ್ತು ಮರುಪಡೆಯುವಿಕೆಗಾಗಿ ಪ್ರಮಾಣಿತ ಕಾರ್ಯವಿಧಾನವನ್ನು ನೀಡುತ್ತದೆ. ಅಕ್ಟೋಬರ್ 21, 2025 ರವರೆಗೆ, ಭಾರತದ ಬ್ಲಾಕ್‌ಚೈನ್-ಆಧಾರಿತ ವೇದಿಕೆಯ ಮೂಲಕ 34 ಕೋಟಿಗೂ ಹೆಚ್ಚು ದಾಖಲೆಗಳನ್ನು ಸುರಕ್ಷಿತವಾಗಿ ಪರಿಶೀಲಿಸಲಾಗಿದ್ದು, ಅವುಗಳಲ್ಲಿ 48,000 ಕ್ಕೂ ಹೆಚ್ಚು ದಾಖಲೆಗಳು ದಾಖಲೆ ಸರಪಳಿಗೆ ಸೇರಿವೆ.

ಲಾಜಿಸ್ಟಿಕ್ಸ್ ಸರಪಳಿ

ಲಾಜಿಸ್ಟಿಕ್ಸ್ ಸರಪಳಿಯು ಬಹು ಮಧ್ಯಸ್ಥಗಾರರ ನಡುವೆ ಸರಕುಗಳು ಅಥವಾ ಸಂಪನ್ಮೂಲಗಳ ಚಲನೆಯನ್ನು ಟ್ರ್ಯಾಕ್ ಮಾಡಲು ಸುರಕ್ಷಿತ ಮತ್ತು ಪಾರದರ್ಶಕ ವೇದಿಕೆಯನ್ನು ಒದಗಿಸುತ್ತದೆ. ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುವುದರಿಂದ, ಪೂರೈಕೆ ಸರಪಳಿಯಲ್ಲಿನ ಎಲ್ಲಾ ವಹಿವಾಟುಗಳನ್ನು ಟ್ಯಾಂಪರ್-ನಿರೋಧಕ ಲೆಡ್ಜರ್‌ನಲ್ಲಿ ದಾಖಲಿಸಲಾಗುತ್ತದೆ. ಇದು ಪ್ರತಿ ಹಂತದಲ್ಲೂ ಪತ್ತೆಹಚ್ಚುವಿಕೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ.

  • ಲಾಜಿಸ್ಟಿಕ್ಸ್ ಸರಪಳಿಯ ಒಂದು ಉಪಯೋಗವೆಂದರೆ ಕರ್ನಾಟಕದ ಔಷಧಿಗಳ ಆನ್‌ಲೈನ್ ಪೂರೈಕೆ ಸರಪಳಿ ನಿರ್ವಹಣಾ ವ್ಯವಸ್ಥೆ .
  • ಔಷಧಾ ವ್ಯವಸ್ಥೆಯನ್ನು ಬ್ಲಾಕ್‌ಚೈನ್‌ನೊಂದಿಗೆ ಸಂಯೋಜಿಸಲಾಗಿದೆ. ಇದು ತಯಾರಕರಿಂದ ಆಸ್ಪತ್ರೆಗಳಿಗೆ ಔಷಧಿಗಳ ಚಲನೆಗೆ ಸಂಬಂಧಿಸಿದ ವಹಿವಾಟುಗಳನ್ನು, ಗುಣಮಟ್ಟದ ಪರಿಶೀಲನೆಗಳು ಸೇರಿದಂತೆ, ದಾಖಲಿಸುತ್ತದೆ. ರೋಗಿಗಳು ಔಷಧಿಯನ್ನು ಸೇವಿಸುವ ಮೊದಲು ತಯಾರಕರ ವಿವರಗಳು, ಅವಧಿ ಮೀರಿದ ವಿವರಗಳು ಮತ್ತು ಔಷಧಿಯ ಗುಣಮಟ್ಟವನ್ನು ಪರಿಶೀಲಿಸಬಹುದು. ಇದು ವಹಿವಾಟುಗಳಲ್ಲಿ ಪತ್ತೆಹಚ್ಚುವಿಕೆಯನ್ನು ಒದಗಿಸುತ್ತದೆ. ಇದರಿಂದ ನಕಲಿ ಔಷಧಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ, ನಿಖರತೆ ಹೆಚ್ಚುತ್ತದೆ ಮತ್ತು ಪಾರದರ್ಶಕತೆ ಬರುತ್ತದೆ.

ನ್ಯಾಯಾಂಗ ಸರಪಳಿ

ನ್ಯಾಯಾಂಗ ಸರಪಳಿಯು ನ್ಯಾಯಾಂಗ ದತ್ತಾಂಶ ಮತ್ತು ದಾಖಲೆಗಳ ಸುರಕ್ಷಿತ, ಬದಲಾಯಿಸಲಾಗದ ಮತ್ತು ಸಮಯ-ಮುದ್ರಾಂಕಿತ ದಾಖಲೆಯನ್ನು ಒದಗಿಸುವ ಮೂಲಕ ನ್ಯಾಯ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಬ್ಲಾಕ್‌ಚೈನ್ ಅನ್ನು ಬಳಸುತ್ತದೆ.

  • ಬ್ಲಾಕ್‌ಚೈನ್ ನೋಟೀಸ್‌ಗಳು, ಸಮನ್ಸ್‌ಗಳು ಮತ್ತು ಜಾಮೀನು ಆದೇಶಗಳ ಎಲೆಕ್ಟ್ರಾನಿಕ್ ವಿತರಣೆಯನ್ನು ಸುಗಮಗೊಳಿಸುತ್ತದೆ, ವಿಳಂಬಗಳನ್ನು ಕಡಿಮೆ ಮಾಡುತ್ತದೆ ಮತ್ತು ಹಸ್ತಚಾಲಿತ ಅವಲಂಬನೆಗಳನ್ನು ನಿವಾರಿಸುತ್ತದೆ.
  • ಅಕ್ಟೋಬರ್ 21, 2025 ರವರೆಗೆ, ಬ್ಲಾಕ್‌ಚೈನ್ ವೇದಿಕೆಯಲ್ಲಿ ಒಟ್ಟು 665 ನ್ಯಾಯಾಂಗ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಪರಸ್ಪರ ಕಾರ್ಯನಿರ್ವಹಿಸಬಲ್ಲ ಕ್ರಿಮಿನಲ್ ನ್ಯಾಯ ವ್ಯವಸ್ಥೆ (ಐಸಿಜೆಎಸ್)

ನ್ಯಾಯಾಂಗ ಸರಪಳಿಯ ಮೇಲೆ ನಿರ್ಮಿಸಲಾಗಿರುವ ಪರಸ್ಪರ ಕಾರ್ಯನಿರ್ವಹಿಸಬಲ್ಲ ಕ್ರಿಮಿನಲ್ ನ್ಯಾಯ ವ್ಯವಸ್ಥೆ (ಐಸಿಜೆಎಸ್), ಕ್ರಿಮಿನಲ್ ನ್ಯಾಯದ ಪರಿಸರ ವ್ಯವಸ್ಥೆಯನ್ನು ಸಂಯೋಜಿಸುತ್ತದೆ. ಇದು ಕೇಸ್ ದಾಖಲೆಗಳು, ಸಾಕ್ಷ್ಯ ಮತ್ತು ನ್ಯಾಯಾಂಗ ದಾಖಲೆಗಳಿಗಾಗಿ ಏಕೀಕೃತ ಡಿಜಿಟಲ್ ವೇದಿಕೆಯನ್ನು ಖಚಿತಪಡಿಸುತ್ತದೆ. ಅಕ್ಟೋಬರ್ 21, 2025 ರವರೆಗೆ, 39,000 ಕ್ಕೂ ಹೆಚ್ಚು ಐಸಿಜೆಎಸ್ ದಾಖಲೆಗಳನ್ನು ಬ್ಲಾಕ್‌ಚೈನ್ ವೇದಿಕೆಯಲ್ಲಿ ಪರಿಶೀಲಿಸಲಾಗಿದೆ.

ಆಸ್ತಿ ಸರಪಳಿ

ಬ್ಲಾಕ್‌ಚೈನ್-ಸಶಕ್ತ ಆಸ್ತಿ ನಿರ್ವಹಣಾ ವ್ಯವಸ್ಥೆ ಪ್ರತಿ ಆಸ್ತಿ ವಹಿವಾಟನ್ನು ಬ್ಲಾಕ್‌ಚೈನ್‌ನಲ್ಲಿ ಸುರಕ್ಷಿತವಾಗಿ ದಾಖಲಿಸಲಾಗಿದೆ ಎಂದು ಖಚಿತಪಡಿಸುತ್ತದೆ. ಭೂ ದಾಖಲೆಗಳಲ್ಲಿನ ನವೀಕರಣಗಳು ಅಥವಾ ವರ್ಗಾವಣೆಗಳ ಸಮಯದಲ್ಲಿಯೂ ಸಹ, ಎಲ್ಲಾ ಮಧ್ಯಸ್ಥಗಾರರು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಪೂರ್ಣ ವಹಿವಾಟು ಇತಿಹಾಸವನ್ನು ಪ್ರವೇಶಿಸಬಹುದು. ಈ ಪಾರದರ್ಶಕತೆಯು ನಿರೀಕ್ಷಿತ ಖರೀದಿದಾರರಿಗೆ ಮಾಲೀಕತ್ವ, ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ. ಇದು ನ್ಯಾಯ ವ್ಯಾಜ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ವಿವಾದ ಇತ್ಯರ್ಥವನ್ನು ತ್ವರಿತಗೊಳಿಸುತ್ತದೆ. ಅಕ್ಟೋಬರ್ 21, 2025 ರವರೆಗೆ, ಬ್ಲಾಕ್‌ಚೈನ್ ವೇದಿಕೆಯ ಮೂಲಕ 34 ಕೋಟಿಗೂ ಹೆಚ್ಚು ಆಸ್ತಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಭಾರತದಲ್ಲಿ ಬ್ಲಾಕ್‌ಚೈನ್ ಅಳವಡಿಕೆಗಾಗಿ ಕಾರ್ಯತಂತ್ರದ ಮಾರ್ಗಸೂಚಿ ಮತ್ತು ನಿಯಂತ್ರಕ ಉಪಕ್ರಮಗಳು

ಬ್ಲಾಕ್‌ಚೈನ್ ಮೇಲಿನ ರಾಷ್ಟ್ರೀಯ ಕಾರ್ಯತಂತ್ರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿಪಡಿಸಿದೆ. ಇದು ಭಾರತದಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ವಿವರಿಸುತ್ತದೆ. ಇದು ಸವಾಲುಗಳನ್ನು ಎದುರಿಸುತ್ತದೆ ಮತ್ತು ವಿವಿಧ ಡೊಮೇನ್‌ಗಳಾದ್ಯಂತ ಬ್ಲಾಕ್‌ಚೈನ್ ಏಕೀಕರಣಕ್ಕಾಗಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ನಿಗದಿಪಡಿಸುತ್ತದೆ.

ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಉತ್ಕೃಷ್ಟತಾ ಕೇಂದ್ರ

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಒಂದು ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದೆ. ಇದು ಸರ್ಕಾರಿ ಇಲಾಖೆಗಳಿಗೆ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಮೊದಲು ಪೈಲಟ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸಲಹೆ, ತರಬೇತಿ ಮತ್ತು ಬೆಂಬಲ ಪಡೆಯಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

  • ಉತ್ಕೃಷ್ಟತಾ ಕೇಂದ್ರ ಬ್ಲಾಕ್‌ಚೈನ್-ಸಂಬಂಧಿತ ಸೇವೆಗಳು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮೂಲಸೌಕರ್ಯವನ್ನು ಒದಗಿಸುತ್ತದೆ.
  • ಇದು ಹೈಪರ್ಲೆಡ್ಜರ್ ಸಾಟೂತ್, ಹೈಪರ್ಲೆಡ್ಜರ್ ಫ್ಯಾಬ್ರಿಕ್, ಮತ್ತು ಎಥೆರಿಯಮ್ ನಂತಹ ಜನಪ್ರಿಯ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಕೆಲಸ ಮಾಡಿದೆ.

ಬ್ಲಾಕ್ಚೈನ್ ತಂತ್ರಜ್ಞಾನದಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪಾತ್ರ

ಟ್ರಾಯ್ ಬ್ಲಾಕ್‌ಚೈನ್-ಆಧಾರಿತ ವಿತರಣೆಗೊಂಡ ಲೆಡ್ಜರ್ ತಂತ್ರಜ್ಞಾನವನ್ನು ಟೆಲಿಕಾಂ ಪರಿಸರ ವ್ಯವಸ್ಥೆಗೆ ಸಂಯೋಜಿಸಿದೆ. ಇದು ಎಲ್ಲಾ ಮುಖ್ಯ ಘಟಕಗಳು ಮತ್ತು ಟೆಲಿಮಾರ್ಕೆಟರ್‌ಗಳು ತಮ್ಮ ಸಂದೇಶ ಪ್ರಸರಣ ಸರಪಳಿಗಳನ್ನು ನೋಂದಾಯಿಸಲು ಕಡ್ಡಾಯಗೊಳಿಸಿದೆ. ಇದು ಮೂಲದಿಂದ ವಿತರಣೆಯವರೆಗೆ ಎಸ್ಎಂಎಸ್ ಗಳ ಎಂಡ್-ಟು-ಎಂಡ್ ಟ್ರ್ಯಾಕಿಂಗ್‌ಗೆ ಅನುವು ಮಾಡಿಕೊಡುತ್ತದೆ.

  • ಈ ಉಪಕ್ರಮವು ಗ್ರಾಹಕರ ರಕ್ಷಣೆಯನ್ನು ಗಮನಾರ್ಹವಾಗಿ ಬಲಪಡಿಸಿದೆ, ಸ್ಪ್ಯಾಮ್ ಅನ್ನು ಕಡಿಮೆ ಮಾಡಿದೆ.
  • ಆರ್‌ಬಿಐ, ಸೆಬಿ, ಎನ್‌ಐಸಿ, ಮತ್ತು ಸಿ-ಡಿಎಸಿ ಸಹಯೋಗದೊಂದಿಗೆ 1.13 ಲಕ್ಷಕ್ಕೂ ಹೆಚ್ಚು ಘಟಕಗಳನ್ನು ಒಳಗೊಂಡಿರುವ ಈ ದೊಡ್ಡ ಪ್ರಮಾಣದ ನಿಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.

ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪಾತ್ರ

ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ರೂಪಾಯಿ (e₹) ಯಂತಹ ಪೈಲಟ್ ಯೋಜನೆಗಳ ಮೂಲಕ ಭಾರತದ ಹಣಕಾಸು ವ್ಯವಸ್ಥೆಯನ್ನು ಆಧುನೀಕರಿಸಲು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಡಿಸೆಂಬರ್ 2022 ರಲ್ಲಿ ಪ್ರಾರಂಭಿಸಲಾದ ಚಿಲ್ಲರೆ ಪೈಲಟ್ ಪಾವತಿ ವ್ಯವಸ್ಥೆಗಳಲ್ಲಿ ಹಣಕಾಸು ಸೇರ್ಪಡೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಾಗ ಬ್ಲಾಕ್‌ಚೈನ್ ಹೇಗೆ ತ್ವರಿತ, ಟ್ರ್ಯಾಕ್ ಮಾಡಬಹುದಾದ ಮತ್ತು ಪಾರದರ್ಶಕ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಡಿಬೆಂಚರ್ ಕವನಂಟ್ ಮಾನಿಟರಿಂಗ್‌ಗಾಗಿ ಎನ್ ಎಸ್ ಡಿ ಎಲ್ ನಿಂದ ಬ್ಲಾಕ್‌ಚೈನ್ ಅಳವಡಿಕೆ

ಭಾರತದ ಅತಿದೊಡ್ಡ ಠೇವಣಿ ಸಂಸ್ಥೆಯಾದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್), ಡಿಬೆಂಚರ್ ಕವನಂಟ್ ಮಾನಿಟರಿಂಗ್‌ಗಾಗಿ ವಿತರಣೆಗೊಂಡ ಲೆಡ್ಜರ್ ತಂತ್ರಜ್ಞಾನ - ಆಧಾರಿತ ಬ್ಲಾಕ್‌ಚೈನ್ ವೇದಿಕೆಯನ್ನು ಪರಿಚಯಿಸಿದೆ. ಈ ವೇದಿಕೆಯು ಆಸ್ತಿ ಶುಲ್ಕಗಳನ್ನು ದಾಖಲಿಸಲು, ಆಸ್ತಿ ಕವರ್ ಅನುಪಾತಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುರಕ್ಷಿತ ಡಿಜಿಟಲ್ ಲೆಡ್ಜರ್‌ನಲ್ಲಿ ಕವನಂಟ್‌ಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ.

ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳು

ಬ್ಲಾಕ್‌ಚೈನ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನುರಿತ ಪ್ರತಿಭೆಯನ್ನು ಪೋಷಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬ್ಲಾಕ್‌ಚೈನ್ ಮೇಲೆ ಕೇಂದ್ರೀಕರಿಸಿದ ಹಲವಾರು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.

ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಡಿಜಿಟಲ್ ಇಂಡಿಯಾ ಕಾರ್ಪೊರೇಶನ್‌ನ ಸಾಮರ್ಥ್ಯ ನಿರ್ಮಾಣ ವಿಭಾಗವು ಸರ್ಕಾರಿ ಅಧಿಕಾರಿಗಳ ತಾಂತ್ರಿಕ ಪ್ರಾವೀಣ್ಯತೆಯನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. 214 ಕ್ಕೂ ಹೆಚ್ಚು ಕಾರ್ಯಕ್ರಮಗಳು ಬ್ಲಾಕ್‌ಚೈನ್‌ನಂತಹ ಉದಯೋನ್ಮುಖ ಡೊಮೇನ್‌ಗಳಲ್ಲಿ 21,000+ ಅಧಿಕಾರಿಗಳಿಗೆ ತರಬೇತಿ ನೀಡಿವೆ.

ಫಿನ್ ಟೆಕ್ ಮತ್ತು ಬ್ಲಾಕ್‌ಚೈನ್ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ

ಕ್ರಿಪ್ಟೋಕರೆನ್ಸಿಗಳು, ಎನ್‌ಎಫ್‌ಟಿಗಳು ಮತ್ತು ಇತರ ಬ್ಲಾಕ್‌ಚೈನ್ ಅಪ್ಲಿಕೇಶನ್‌ಗಳ ಏರಿಕೆಯು ಫಿನ್‌ಟೆಕ್ ಪರಿಸರ ವ್ಯವಸ್ಥೆಯಲ್ಲಿ ಬೆಳವಣಿಗೆಯನ್ನು ಹೆಚ್ಚಿಸಿದೆ. ಈ ಬೇಡಿಕೆಯನ್ನು ಪೂರೈಸಲು, ಪಿಜಿ-ಡಿ ಎಫ್ ಬಿ ಡಿ ಯಂತಹ ಕಾರ್ಯಕ್ರಮಗಳು ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ 900 ಗಂಟೆಗಳ ಸಮಗ್ರ ಪಠ್ಯಕ್ರಮವನ್ನು ಒದಗಿಸುತ್ತವೆ. ಇದು ಬ್ಲಾಕ್‌ಚೈನ್, ಫಿನ್‌ಟೆಕ್, ಎಐ/ ಎಂಎಲ್ , ಸೈಬರ್‌ಸೆಕ್ಯುರಿಟಿ, ಪ್ರೋಗ್ರಾಮಿಂಗ್ ಮತ್ತು ನಿಯಂತ್ರಕ ಚೌಕಟ್ಟುಗಳನ್ನು ಒಳಗೊಂಡಿದೆ.

ಬ್ಲೆಂಡ್ : ಸಿ-ಡಿಎಸಿ ಆನ್‌ಲೈನ್ ಕೋರ್ಸ್

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (ಸಿ-ಡಿಎಸಿ) ನೀಡುವ ಬ್ಲೆಂಡ್ ಕಾರ್ಯಕ್ರಮವು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಆರಂಭಿಕ ಹಂತದ ವೃತ್ತಿಪರರಿಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯಿಕೆಗಳಲ್ಲಿ ಪ್ರಾವೀಣ್ಯತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಫ್ಯೂಚರ್ ಸ್ಕಿಲ್ ಪ್ರೈಮ್

ಫ್ಯೂಚರ್ ಸ್ಕಿಲ್ ಪ್ರೈಮ್ (ಉದ್ಯೋಗಕ್ಕಾಗಿ ಐಟಿ ಮಾನವಶಕ್ತಿಯ ಮರು-ಕೌಶಲ್ಯ/ಉನ್ನತೀಕರಣದ ಕಾರ್ಯಕ್ರಮ) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಯೋಜಿಸಿದ ಉದ್ಯಮ-ಆಧಾರಿತ ಉಪಕ್ರಮವಾಗಿದೆ. ಈ ಕಾರ್ಯಕ್ರಮವು ಬ್ಲಾಕ್‌ಚೈನ್‌ನಂತಹ ಹತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದ ಉದ್ಯೋಗಿಗಳಿಗೆ ಡಿಜಿಟಲ್ ಸಾಮರ್ಥ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರಾಷ್ಟ್ರದ ತಂತ್ರಜ್ಞಾನ ಪ್ರತಿಭೆಯ ಪೂಲ್ ಅನ್ನು ಬಲಪಡಿಸಲು ಸಹಾಯಕವಾಗಿದೆ.

ಮುಂದಿನ ಹೆಜ್ಜೆ : ಬ್ಲಾಕ್ಚೈನ್ ಭವಿಷ್ಯದ ಉಪಯೋಗಗಳು

ಸಾರ್ವಜನಿಕ ಸೇವೆಗಳಲ್ಲಿ ದಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ವಿವಿಧ ವಲಯಗಳಾದ್ಯಂತ ಬ್ಲಾಕ್‌ಚೈನ್-ಆಧಾರಿತ ಹಲವಾರು ಉಪಯೋಗಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಈ ಉಪಕ್ರಮಗಳು ಆಡಳಿತದಲ್ಲಿ ನಾವೀನ್ಯತೆಯನ್ನು ಹೇಗೆ ಮುನ್ನಡೆಸಬಹುದು, ಹೊಣೆಗಾರಿಕೆಯನ್ನು ಖಚಿತಪಡಿಸಬಹುದು ಮತ್ತು ವ್ಯವಸ್ಥಿತ ದಕ್ಷತೆಯ ಕೊರತೆಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತೋರಿಸುತ್ತವೆ. ಪ್ರಮುಖ ಸಾಧ್ಯತಾ ಪರಿಕಲ್ಪನೆಗಳು ಹೀಗಿವೆ:

  • ಭೂ ದಾಖಲೆಗಳು : ಸುರಕ್ಷಿತ ಮಾಲೀಕತ್ವದ ದಾಖಲೆಗಳಿಗಾಗಿ.
  • ರಕ್ತ ನಿಧಿ : ರಕ್ತದಾನದ ಪಾರದರ್ಶಕ ಟ್ರ್ಯಾಕಿಂಗ್‌ಗಾಗಿ.
  • ಜಿಎಸ್‌ಟಿ ಸರಪಳಿ : ನೈಜ-ಸಮಯದ ತೆರಿಗೆ ಮೇಲ್ವಿಚಾರಣೆಗಾಗಿ.
  • ಸಾರ್ವಜನಿಕ ವಿತರಣಾ ವ್ಯವಸ್ಥೆ : ಸುರಕ್ಷಿತ ಪೂರೈಕೆ ಸರಪಳಿಗಳಿಗಾಗಿ.

ಉಪಸಂಹಾರ

ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಬ್ಲಾಕ್‌ಚೈನ್ ತಂತ್ರಜ್ಞಾನವು ಡಿಜಿಟಲ್ ಆಡಳಿತದಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಅಳವಡಿಸುವ ವಿಧಾನವನ್ನು ಪರಿವರ್ತಿಸುತ್ತಿದೆ. ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿನ ಉಪಕ್ರಮದ ಮೂಲಕ, ಭಾರತವು ಸಮಗ್ರ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಬ್ಲಾಕ್‌ಚೈನ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇದು ಸರ್ಕಾರದಿಂದ-ನಾಗರಿಕರಿಗೆ ಮತ್ತು ಸರ್ಕಾರದಿಂದ-ವ್ಯವಹಾರಗಳಿಗೆ ಸೇವೆಗಳನ್ನು ಬೆಂಬಲಿಸುತ್ತದೆ, ಅದೇ ಸಮಯದಲ್ಲಿ ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ಆತ್ಮನಿರ್ಭರತೆಯನ್ನು ಮುನ್ನಡೆಸುತ್ತದೆ. ಸಾಮರ್ಥ್ಯ ನಿರ್ಮಾಣ ಮತ್ತು ಸ್ವದೇಶಿ ಬ್ಲಾಕ್‌ಚೈನ್ ಪರಿಹಾರಗಳ ಅಭಿವೃದ್ಧಿಯ ಮೇಲೆ ನಿರಂತರ ಗಮನಹರಿಸುವುದರಿಂದ, ಭಾರತವು ಸಮಗ್ರ ಬೆಳವಣಿಗೆಗಾಗಿ ಬ್ಲಾಕ್‌ಚೈನ್ ಅನ್ನು ಬಳಸಿಕೊಳ್ಳುವಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧವಾಗಿದೆ.

 

References:

Ministry of Electronics and IT

Rajya Sabha

Ministry of Communications

Ministry of Finance

Digital India Corporation

National Informatics Centre

National Institute of Electronics & Information Technology

Centre of Excellence in Blockchain Technology

 

​​​​​​​*****

(Backgrounder ID: 155690) Visitor Counter : 5
Provide suggestions / comments
Link mygov.in
National Portal Of India
STQC Certificate