• Skip to Content
  • Sitemap
  • Advance Search
Economy

ಕಾರ್ಮಿಕ ಬಲವನ್ನು ಸೃಷ್ಟಿಸಿದೆ : ಭಾರತವು 6 ವರ್ಷಗಳಲ್ಲಿ - 17 ಕೋಟಿ ಉದ್ಯೋಗಗಳನ್ನು ಸೇರ್ಪಡೆಗೊಳಿಸಿದೆ

Posted On: 04 OCT 2025 3:30PM

ಪ್ರಮುಖಾಂಶಗಳು (Key Takeaways)

  • ಭಾರತದಲ್ಲಿ ಉದ್ಯೋಗವು 201718 ರಲ್ಲಿ 47.5 ಕೋಟಿ ಇಂದ 202324 ರಲ್ಲಿ 64.33 ಕೋಟಿ ಗೆ ಏರಿಕೆ ಕಂಡಿದೆ : ಅಂದರೆ, ಆರು ವರ್ಷಗಳಲ್ಲಿ 16.83 ಕೋಟಿ ಉದ್ಯೋಗಗಳ ಸೇರ್ಪಡೆಯಾಗಿವೆ.
  • ನಿರುದ್ಯೋಗ ದರವು 2017–18 ರಲ್ಲಿ 6.0 ಪ್ರತಿಶತ ದಿಂದ 2023–24 ರಲ್ಲಿ 3.2 ಪ್ರತಿಶತ ಕ್ಕೆ ಇಳಿದಿದೆ.
  • ಕಳೆದ ಏಳು ವರ್ಷಗಳಲ್ಲಿ 1.56 ಕೋಟಿ ಮಹಿಳೆಯರು ಔಪಚಾರಿಕ (formal) ಕಾರ್ಮಿಕ ಬಲವನ್ನು ತುಂಬಿದ್ದಾರೆ.

ಉದ್ಯೋಗಭಾರತದ ಬೆಳವಣಿಗೆಯ ಚಾಲಕಶಕ್ತಿ

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವು, ಡಿಜಿಟಲೀಕರಣಗೊಂಡ, ಸ್ವಯಂಚಾಲಿತ ಮತ್ತು ಸುಸ್ಥಿರ ಆರ್ಥಿಕತೆಯಾದ, ಜಾಗತಿಕ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಭಾರತವು ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಲು ಸಿದ್ಧವಾಗಿದೆ. ತನ್ನ ಜನಸಂಖ್ಯಾ ಬಲದಿಂದ, ಮುಂಬರುವ ವರ್ಷಗಳಲ್ಲಿ ಹೊಸ ಕಾರ್ಮಿಕ ಬಲವನ್ನು ಸೇರುವವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರನ್ನು ಒದಗಿಸುವ ದೇಶಗಳಲ್ಲಿ ಭಾರತವೂ ಒಂದಾಗಿದೆ. (ವಿಶ್ವ ಆರ್ಥಿಕ ವೇದಿಕೆಯ ಉದ್ಯೋಗಗಳ ಭವಿಷ್ಯದ ವರದಿ 2025).

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2017−18 ರಲ್ಲಿ 47.5 ಕೋಟಿ ಇದ್ದ ಉದ್ಯೋಗವು 2023−24 ರಲ್ಲಿ 64.33 ಕೋಟಿ ಗೆ ಏರಿದೆ: ಅಂದರೆ, ಆರು ವರ್ಷಗಳಲ್ಲಿ 16.83 ಕೋಟಿ ಉದ್ಯೋಗಗಳು ಸೇರ್ಪಡೆಯಾಗಿವೆ. ಇದು ಯುವ-ಕೇಂದ್ರಿತ ನೀತಿಗಳು ಮತ್ತು ಸರ್ಕಾರದ 'ವಿಕಸಿತ ಭಾರತ' ದೃಷ್ಟಿಕೋನದ ಮೇಲೆ ಇರುವ ಗಮನವನ್ನು ಪ್ರತಿಬಿಂಬಿಸುತ್ತದೆ.

ಈ ಬೆಳವಣಿಗೆಯು ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ಆರ್ಥಿಕ ದೃಷ್ಟಿಕೋನದಿಂದ, ಒಟ್ಟು ಆಂತರಿಕ ಉತ್ಪನ್ನ (Gross Domestic Product - GDP) ಒಂದೇ ಒಂದು ದೇಶದ ನಿಜವಾದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಉದ್ಯೋಗ ಸೇರಿದಂತೆ ಅನೇಕ ಸ್ಥೂಲ ಆರ್ಥಿಕ ಸೂಚಕಗಳನ್ನು ಪರಿಗಣಿಸಿದಾಗ ಹೆಚ್ಚು ನಿಖರವಾದ ಚಿತ್ರಣ ಹೊರಹೊಮ್ಮುತ್ತದೆ. ಉದ್ಯೋಗವು ಆರ್ಥಿಕ ಮತ್ತು ಸಾಮಾಜಿಕ ಎರಡೂ ತೂಕವನ್ನು ಹೊಂದಿದೆ: ಹೆಚ್ಚಿನ ಉದ್ಯೋಗಳು ಬಲವಾದ ಆರ್ಥಿಕತೆಯನ್ನು ಸೂಚಿಸುತ್ತವೆ, ಬಳಕೆಯನ್ನು ಉತ್ತೇಜಿಸುತ್ತವೆ ಮತ್ತು ನಿರಂತರ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ. ಅಭಿವೃದ್ಧಿ ಅರ್ಥಪೂರ್ಣವಾಗಬೇಕಾದರೆ, ಆರ್ಥಿಕ ವಿಸ್ತರಣೆಯು ಉತ್ಪಾದಕ, ಉತ್ತಮ ಸಂಬಳದ ಉದ್ಯೋಗಗಳ ಸೃಷ್ಟಿಗೆ ಪೂರಕವಾಗಬೇಕು, ಅದು ಜೀವನೋಪಾಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ.

ಭಾರತದ ಕಾರ್ಮಿಕ ಬಲದ ಚಲನಶೀಲತೆ

ಭಾರತ ಸರ್ಕಾರವು ಕಾರ್ಮಿಕ ಬಲದ ಪ್ರವೃತ್ತಿಗಳನ್ನು ಪತ್ತೆಹಚ್ಚಲು, ನೀತಿಗಳನ್ನು ರೂಪಿಸಲು ಮತ್ತು ಉದ್ಯೋಗ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ನಿಯಮಿತವಾಗಿ ಉದ್ಯೋಗವನ್ನು ಅಳೆಯುತ್ತದೆ. ಇದನ್ನು ಸಾಧಿಸಲು, ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistics Office) ಯು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (Periodic Labour Force Survey - PLFS) ಯನ್ನು ಪ್ರಾರಂಭಿಸಿದೆ. ಇದು ಕಾರ್ಮಿಕ ಬಲದ ಭಾಗವಹಿಸುವಿಕೆ ದರ (Labour Force Participation Rate - LFPR), ಕಾರ್ಮಿಕ ಜನಸಂಖ್ಯೆ ಅನುಪಾತ (Worker Population Ratio - WPR) ಮತ್ತು ನಿರುದ್ಯೋಗ ದರ (Unemployment Rate - UR) ದಂತಹ ಪ್ರಮುಖ ಸೂಚಕಗಳ ಸಕಾಲಿಕ ಅಂದಾಜುಗಳನ್ನು ಒದಗಿಸುತ್ತದೆ.

ಇತ್ತೀಚಿನ PLFS ಪ್ರಕಾರ, ಆಗಸ್ಟ್ 2025 ರ ಮಾಸಿಕ ಅಂದಾಜುಗಳು 3.77 ಲಕ್ಷ ವ್ಯಕ್ತಿಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿವೆ– ಇದರಲ್ಲಿ 2.16 ಲಕ್ಷ ಜನರನ್ನು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 1.61 ಲಕ್ಷ ಜನರನ್ನು ನಗರ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಲಾಗಿದೆ.

ಅಖಿಲ-ಭಾರತ ಮಟ್ಟದಲ್ಲಿ, ಉದ್ಯೋಗದ ಎರಡೂ ಪ್ರಮುಖ ಸೂಚಕಗಳು ಜೂನ್ ಮತ್ತು ಆಗಸ್ಟ್ 2025 ರ ನಡುವೆ ಸುಧಾರಣೆಯನ್ನು ತೋರಿಸಿವೆ:

  • LFPR – ಇದು ಕೆಲಸ ಮಾಡುತ್ತಿರುವ ಅಥವಾ ಕೆಲಸ ಹುಡುಕುತ್ತಿರುವ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ಪಾಲನ್ನು ಅಳೆಯುತ್ತದೆ – ಜೂನ್‌ನಲ್ಲಿ 54.2% ಇಂದ ಆಗಸ್ಟ್ 2025 ರಲ್ಲಿ 55% ಗೆ ಏರಿದೆ.
  • WPR – ಇದು ಜನಸಂಖ್ಯೆಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಪಾಲನ್ನು ಪ್ರತಿಬಿಂಬಿಸುತ್ತದೆ – ಇದು ಕೂಡ ಜೂನ್ನಲ್ಲಿ 51.2% ಇಂದ ಆಗಸ್ಟ್ 2025 ರಲ್ಲಿ 52.2% ಗೆ ಹೆಚ್ಚಿದೆ.

WPR ನಲ್ಲಿನ ಏರಿಕೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಂಡುಬಂದಿದೆ, ಇದು ಒಟ್ಟಾರೆ ರಾಷ್ಟ್ರೀಯ ಸುಧಾರಣೆಗೆ ಕೊಡುಗೆ ನೀಡಿದೆ. ಒಟ್ಟಾರೆಯಾಗಿ, ಈ ಪ್ರವೃತ್ತಿಗಳು ಆರೋಗ್ಯಕರ ಮತ್ತು ಹೆಚ್ಚು ಸಕ್ರಿಯವಾದ ಕಾರ್ಮಿಕ ಮಾರುಕಟ್ಟೆಯನ್ನು ಎತ್ತಿ ತೋರಿಸುತ್ತವೆ.

ಹೆಚ್ಚು ವಿಶಾಲ ಮಟ್ಟದಲ್ಲಿ ನೋಡಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ LFPR 2017–18 ರಲ್ಲಿ 49.8% ಇಂದ 2023–24 ರಲ್ಲಿ 60.1% ಗೆ ಏರಿತು ಮತ್ತು WPR 46.8% ಇಂದ 58.2% ಗೆ ಹೆಚ್ಚಳವಾಯಿತು.

ಕ್ಷೇತ್ರವಾರು ಪ್ರಗತಿ (sectoral trends) ಗಮನಿಸುವುದಾದರೆ, ಏಪ್ರಿಲ್-ಜೂನ್ 2025 ತ್ರೈಮಾಸಿಕದಲ್ಲಿ:

  • ಕೃಷಿ ವಲಯವು ಗ್ರಾಮೀಣ ಕಾರ್ಮಿಕರಲ್ಲಿ ಹೆಚ್ಚಿನವರನ್ನು ತೊಡಗಿಸಿಕೊಂಡಿದೆ (44.6% ಪುರುಷರು ಮತ್ತು 70.9% ಮಹಿಳೆಯರು).
  • ತೃತೀಯ ವಲಯವು (Tertiary sector) ನಗರ ಪ್ರದೇಶಗಳಲ್ಲಿ ಉದ್ಯೋಗದ ಅತಿದೊಡ್ಡ ಮೂಲವಾಗಿತ್ತು (60.6% ಪುರುಷರು ಮತ್ತು 64.9% ಮಹಿಳೆಯರು).

ಈ ತ್ರೈಮಾಸಿಕದ ಅವಧಿಯಲ್ಲಿ, ದೇಶದಲ್ಲಿ ಸರಾಸರಿ 56.4 ಕೋಟಿ ಜನರು (15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಉದ್ಯೋಗದಲ್ಲಿದ್ದರು, ಅದರಲ್ಲಿ 39.7 ಕೋಟಿ ಪುರುಷರು ಮತ್ತು 16.7 ಕೋಟಿ ಮಹಿಳೆಯರು.

ಔಪಚಾರಿಕ ಉದ್ಯೋಗದಲ್ಲಿ ಹೆಚ್ಚಳ

2024–25 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ 1.29 ಕೋಟಿಗಿಂತ ಹೆಚ್ಚು ನಿವ್ವಳ ಚಂದಾದಾರರು ಸೇರ್ಪಡೆಗೊಂಡಿದ್ದಾರೆ, ಇದು 2018–19 ರಲ್ಲಿ ಇದ್ದ 61.12 ಲಕ್ಷ ದಿಂದ ಹೆಚ್ಚಾಗಿದೆ. ಸೆಪ್ಟೆಂಬರ್ 2017 ರಲ್ಲಿ ಈ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, 7.73 ಕೋಟಿಗಿಂತ ಹೆಚ್ಚು ನಿವ್ವಳ ಚಂದಾದಾರರು ಸೇರಿಕೊಂಡಿದ್ದಾರೆ, ಇದರಲ್ಲಿ ಕೇವಲ ಜುಲೈ 2025 ರಲ್ಲೇ 21.04 ಲಕ್ಷ ಮಂದಿ ಸೇರಿದ್ದಾರೆ. ಇದು ಔಪಚಾರಿಕೀಕರಣ ಮತ್ತು ವರ್ಧಿತ ಸಾಮಾಜಿಕ ಭದ್ರತಾ ವ್ಯಾಪ್ತಿಯ ಹೆಚ್ಚಳವನ್ನು ಸೂಚಿಸುತ್ತದೆ.

ಜುಲೈ 2025 ರಲ್ಲಿ 9.79 ಲಕ್ಷ ಹೊಸ ಚಂದಾದಾರರು ಸೇರ್ಪಡೆಗೊಂಡಿದ್ದಾರೆ (ಇದರಲ್ಲಿ 60% ರಷ್ಟು ಕೇವಲ 18−25 ವಯೋಮಾನದವರೇ ಇದ್ದಾರೆ). ಇದು ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ನೌಕರರ ಪ್ರಯೋಜನಗಳ ಬಗ್ಗೆ ಹೆಚ್ಚಿದ ಅರಿವು ಮತ್ತು EPFO ನ ಯಶಸ್ವಿ ತಲುಪುವಿಕೆ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ.

ಇದಲ್ಲದೆ, ಉದ್ಯೋಗ ಪದ್ಧತಿಗಳಲ್ಲಿ ಸ್ಪಷ್ಟ ಬದಲಾವಣೆಯಾಗಿದೆ – ಸ್ವಯಂ ಉದ್ಯೋಗವು (2017−18 ರಲ್ಲಿ 52.2% ಇಂದ 2023−24 ರಲ್ಲಿ 58.4% ಗೆ) ಏರಿದೆ. ಆದರೆ, ಸಾಂದರ್ಭಿಕ ಕೂಲಿ (casual labour) 24.9% ಇಂದ 19.8% ಗೆ ಇಳಿದಿದೆ. ಇದು ಸರ್ಕಾರದ ಉಪಕ್ರಮಗಳಿಂದ ಬೆಂಬಲಿತವಾಗಿ, ಉದ್ಯಮಶೀಲತೆ ಮತ್ತು ಸ್ವತಂತ್ರ ಕೆಲಸದ ಕಡೆಗೆ ಬದಲಾವಣೆಯನ್ನು ಸೂಚಿಸುತ್ತದೆ.

ಸಾಂದರ್ಭಿಕ ಕೂಲಿ ಕಾರ್ಮಿಕರ (ಸಾರ್ವಜನಿಕ ಕೆಲಸಗಳನ್ನು ಹೊರತುಪಡಿಸಿ) ಸರಾಸರಿ ದಿನಗೂಲಿ ಜುಲೈಸೆಪ್ಟೆಂಬರ್ 2017 ರಲ್ಲಿ ₹294 ರಿಂದ ಏಪ್ರಿಲ್ಜೂನ್ 2024 ರಲ್ಲಿ ₹433 ಕ್ಕೆ ಏರಿದೆ. ಅದೇ ರೀತಿ, ನಿಯಮಿತ ವೇತನ ಪಡೆಯುವ ನೌಕರರ ಸರಾಸರಿ ಮಾಸಿಕ ಗಳಿಕೆಗಳು ಅದೇ ಅವಧಿಯಲ್ಲಿ ₹16,538 ರಿಂದ ₹21,103 ಕ್ಕೆ ಹೆಚ್ಚಾಗಿದೆ. ಈ ಲಾಭಗಳು ಹೆಚ್ಚಿನ ಆದಾಯದ ಮಟ್ಟಗಳು, ಸುಧಾರಿತ ಉದ್ಯೋಗ ಸ್ಥಿರತೆ ಮತ್ತು ಹೆಚ್ಚಿದ ಕೆಲಸದ ಗುಣಮಟ್ಟವನ್ನು ಸೂಚಿಸುತ್ತವೆ.

ನಿರುದ್ಯೋಗ

ನಿರುದ್ಯೋಗ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಮತ್ತೊಂದು ಸಕಾರಾತ್ಮಕ ಸಂಕೇತವಾಗಿದೆ. ಇದು 2017–18 ರಲ್ಲಿ 6.0% ರಿಂದ 2023–24 ರಲ್ಲಿ 3.2% ಗೆ ತೀವ್ರವಾಗಿ ಇಳಿದಿದೆ. ಇದು ಉತ್ಪಾದಕ ಉದ್ಯೋಗಕ್ಕೆ ಕಾರ್ಮಿಕ ಬಲದ ಪ್ರಬಲವಾದ ಸೇರ್ಪಡೆಯನ್ನು ಸೂಚಿಸುತ್ತದೆ. ಇದೇ ಅವಧಿಯಲ್ಲಿ, ಯುವ ನಿರುದ್ಯೋಗ ದರವು 17.8% ರಿಂದ 10.2% ಕ್ಕೆ ಇಳಿದಿದೆ, ಇದು ಐಎಲ್ (ILO)'ವಿಶ್ವ ಉದ್ಯೋಗ ಮತ್ತು ಸಾಮಾಜಿಕ ದೃಷ್ಟಿಕೋನ 2024' ವರದಿಯ ಪ್ರಕಾರ ಜಾಗತಿಕ ಸರಾಸರಿ 13.3% ಗಿಂತ ಕಡಿಮೆಯಾಗಿದೆ.

ಆಗಸ್ಟ್ 2025 ರಲ್ಲಿ ಪುರುಷರ (15+ ವರ್ಷ) ನಿರುದ್ಯೋಗವು 5% ಕ್ಕೆ ಕುಸಿದಿದೆ, ಇದು ಏಪ್ರಿಲ್‌ನಿಂದೀಚೆಗೆ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ನಗರ ಪ್ರದೇಶದ ಪುರುಷ ನಿರುದ್ಯೋಗವು ಜುಲೈನಲ್ಲಿ 6.6% ರಿಂದ ಆಗಸ್ಟ್‌ನಲ್ಲಿ 5.9% ಗೆ ಇಳಿದಿರುವುದು ಈ ಕುಸಿತಕ್ಕೆ ಕಾರಣವಾಗಿದೆ. ಇದೇ ವೇಳೆ ಗ್ರಾಮೀಣ ಪುರುಷ ನಿರುದ್ಯೋಗವು 4.5% ಕ್ಕೆ ಕಡಿಮೆಯಾಗಿದೆ – ಇದು ನಾಲ್ಕು ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಒಟ್ಟಾರೆಯಾಗಿ, ಗ್ರಾಮೀಣ ನಿರುದ್ಯೋಗ ದರವು ಸತತ ಮೂರು ತಿಂಗಳ ಕಾಲ ಸ್ಥಿರವಾಗಿ ಕಡಿಮೆಯಾಗಿದ್ದು, ಮೇ ತಿಂಗಳಲ್ಲಿ 5.1% ರಿಂದ ಆಗಸ್ಟ್ 2025 ರಲ್ಲಿ 4.3% ಕ್ಕೆ ಇಳಿದಿದೆ.

ಅಂಚಿನಿಂದ ಮುಖ್ಯವಾಹಿನಿಗೆ: ಕಾರ್ಮಿಕ ಬಲದ ನೇತೃತ್ವ ವಹಿಸಿದ ಮಹಿಳೆಯರು

2047 ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಪ್ರಮುಖ ಆಧಾರಸ್ತಂಭಗಳಲ್ಲಿ ಒಂದು, ಭಾರತದಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು 70% ಕ್ಕೆ ಖಚಿತಪಡಿಸುವುದು. ಇಂದು, ಭಾರತವು ಹೆಚ್ಚಿನ ಸಮಾನತೆ ಹೊಂದಿರುವ ಅಗ್ರ ದೇಶಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸುತ್ತಿರುವುದಕ್ಕೆ ಪ್ರಮುಖ ಜಾಗತಿಕ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸುತ್ತಿವೆ. 201718 ರಿಂದ 202324 ರ ನಡುವೆ ಮಹಿಳೆಯರ ಉದ್ಯೋಗ ದರವು ಬಹುತೇಕ ದುಪ್ಪಟ್ಟಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ದತ್ತಾಂಶವು, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (LFPR) 201718 ರಲ್ಲಿ 23.3% ಇಂದ 202324 ರಲ್ಲಿ 41.7% ಗೆ ಹೆಚ್ಚಳವಾಗಿದೆ ಎಂದು ತಿಳಿಸುತ್ತದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಕಾರ್ಮಿಕ ಜನಸಂಖ್ಯೆ ಅನುಪಾತ (WPR) 201718 ರಲ್ಲಿ 22% ಇಂದ 202324 ರಲ್ಲಿ 40.3% ಗೆ ಏರಿದೆ, ಮತ್ತು LFPR 23.3% ಇಂದ 41.7% ಗೆ ಹೆಚ್ಚಿದೆ.

 

ಇತ್ತೀಚೆಗೆ, ಮಹಿಳಾ ಕಾರ್ಮಿಕ ಜನಸಂಖ್ಯೆ ಅನುಪಾತ (WPR) ಜೂನ್ 2025 ರಲ್ಲಿ 30.2% ಇಂದ ಜುಲೈ 2025 ರಲ್ಲಿ 31.6% ಗೆ ಹಾಗೂ ಆಗಸ್ಟ್ 2025 ರಲ್ಲಿ 32.0% ಗೆ ಏರಿದೆ. ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (LFPR) ಜೂನ್ 2025 ರಲ್ಲಿ 32.0% ಇಂದ ಜುಲೈ 2025 ರಲ್ಲಿ 33.3% ಗೆ ಮತ್ತು ಆಗಸ್ಟ್ 2025 ರಲ್ಲಿ 33.7% ಗೆ ಹೆಚ್ಚಳವಾಗಿದೆ.

ಇದರ ಜೊತೆಗೆ, ಇತ್ತೀಚಿನ ಇಪಿಎಫ್‌ಒ (EPFO) ವೇತನದಾರರ ದತ್ತಾಂಶವು ಮಹಿಳೆಯರಲ್ಲಿ ಔಪಚಾರಿಕ ಉದ್ಯೋಗದ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. 2024–25 ರ ಅವಧಿಯಲ್ಲಿ, 26.9 ಲಕ್ಷ ನಿವ್ವಳ ಮಹಿಳಾ ಚಂದಾದಾರರು ಇಪಿಎಫ್‌ಗೆ ಸೇರ್ಪಡೆಯಾಗಿದ್ದಾರೆ. ಜುಲೈ 2025 ರಲ್ಲಿ, ಸುಮಾರು 2.80 ಲಕ್ಷ ಹೊಸ ಮಹಿಳಾ ಚಂದಾದಾರರು ಸೇರ್ಪಡೆಗೊಂಡಿದ್ದಾರೆ ಮತ್ತು ನಿವ್ವಳ ಮಹಿಳಾ ವೇತನದಾರರ ಸೇರ್ಪಡೆಯು ಸುಮಾರು 4.42 ಲಕ್ಷ ದಷ್ಟಿದೆ. ಇದು ಇಂದಿನ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಕಾರ್ಮಿಕ ಬಲವನ್ನು ದೃಢೀಕರಿಸುತ್ತದೆ.

ಉದ್ಯೋಗ ಬೆಳವಣಿಗೆಯ ಹಿಂದಿನ ಪ್ರಮುಖ ಚಾಲಕಶಕ್ತಿಗಳು

ಹೊಸ ಕೈಗಾರಿಕೆಗಳು, ಉದ್ಯೋಗ ಕ್ಷೇತ್ರಗಳು

ಪ್ರಸ್ತುತ, ತಾಂತ್ರಿಕ ಆವಿಷ್ಕಾರ, ಜಾಗತೀಕರಣ ಮತ್ತು ಗ್ರಾಹಕರ ವರ್ತನೆಯ ವಿಕಾಸದಿಂದಾಗಿ ಭಾರತವು ಹೊಸ ಕೈಗಾರಿಕೆಗಳು ಮತ್ತು ಉದ್ಯೋಗ ಕ್ಷೇತ್ರಗಳ ಕ್ಷಿಪ್ರ ಹೊರಹೊಮ್ಮುವಿಕೆಗೆ ಸಾಕ್ಷಿಯಾಗಿದೆ.

  • ಆರೋಗ್ಯ ತಂತ್ರಜ್ಞಾನ, ಇ-ಕಾಮರ್ಸ್ ಲಾಜಿಸ್ಟಿಕ್ಸ್, ಹಣಕಾಸು ತಂತ್ರಜ್ಞಾನ ಮತ್ತು ಎಡ್-ಟೆಕ್ ನಂತಹ ವಲಯಗಳು ಅಭೂತಪೂರ್ವ ವೇಗದಲ್ಲಿ ಬೆಳೆಯುತ್ತಿವೆ.
    • ಈ ಕೈಗಾರಿಕೆಗಳು ಕೆಲಸದ ಸ್ವರೂಪವನ್ನು ಮರುರೂಪಿಸುವುದಲ್ಲದೆ, ವಿಶೇಷವಾಗಿ ಯುವಕರು ಮತ್ತು ಡಿಜಿಟಲ್ ಕೌಶಲ್ಯ ಹೊಂದಿರುವ ಕೆಲಸಗಾರರಿಗೆ ಹೊಸ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.
  • ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ನವೀಕರಿಸಬಹುದಾದ ಇಂಧನ ವಲಯವು ಉದ್ಯೋಗ ಸೃಷ್ಟಿಗೆ ವರ್ಧಿತ ಅವಕಾಶಗಳನ್ನು ಒದಗಿಸುತ್ತಿವೆ.
    • ಈ ಎರಡೂ ವಲಯಗಳು ಉದ್ಯೋಗವನ್ನು ಹೆಚ್ಚಿಸಲು ಅಪಾರ ಸಾಮರ್ಥ್ಯವನ್ನು ನೀಡುತ್ತವೆ, ವಿಶೇಷವಾಗಿ ಮಹಿಳೆಯರಿಗೆ ಅವಕಾಶಗಳನ್ನು ತೆರೆಯುವ ಮೂಲಕ ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕೆ ಕಾರಣವಾಗುತ್ತವೆ.

ಗಿಗ್ ಆರ್ಥಿಕತೆ

ಭಾರತದ ವಿಕಸನಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆಯ ಒಂದು ನಿರ್ದಿಷ್ಟ ಲಕ್ಷಣವೆಂದರೆ ಗಿಗ್ ಆರ್ಥಿಕತೆಯ ಏರಿಕೆ, ಇದು ಸಾಂಪ್ರದಾಯಿಕ ಉದ್ಯೋಗ ಮಾನದಂಡಗಳನ್ನು ಮರು ವ್ಯಾಖ್ಯಾನಿಸಿದೆ. ಫ್ರೀಲ್ಯಾನ್ಸ್ ಮತ್ತು ಯೋಜನಾ-ಆಧಾರಿತ ಕೆಲಸವನ್ನು ಒದಗಿಸುವ ಡಿಜಿಟಲ್ ವೇದಿಕೆಗಳ ಹರಡುವಿಕೆಯೊಂದಿಗೆ, ಹೆಚ್ಚುತ್ತಿರುವ ಭಾರತೀಯರು, ವಿಶೇಷವಾಗಿ ಮಿಲೇನಿಯಲ್ಸ್ ಮತ್ತು ಜೆನ್ ಝಡ್ (Gen Z), ವಿಷಯ ರಚನೆ (content creation), ಗ್ರಾಫಿಕ್ ವಿನ್ಯಾಸ, ಮಾರ್ಕೆಟಿಂಗ್, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಸಲಹಾ ಕ್ಷೇತ್ರಗಳಲ್ಲಿ ಹೊಂದಿಕೊಳ್ಳುವ, ಸಾಂಪ್ರದಾಯಿಕವಲ್ಲದ ಕೆಲಸದ ವ್ಯವಸ್ಥೆಗಳನ್ನು ಆಯ್ಕೆ ಮಾಡುತ್ತಿದ್ದಾರೆ.

  • ಭಾರತದ ಗಿಗ್ ಕಾರ್ಯಪಡೆಯು 2024–25 ರಲ್ಲಿ 1 ಕೋಟಿ ಇಂದ 2029–30 ರ ವೇಳೆಗೆ 2.35 ಕೋಟಿ ಗೆ ಬೆಳೆಯುವ ಅಂದಾಜಿದೆ.
  • ಸಾಮಾಜಿಕ ಭದ್ರತೆಯ ಸಂಹಿತೆ (2020) ಮತ್ತು ಇ-ಶ್ರಮ್ ಪೋರ್ಟಲ್ ನಂತಹ ಕ್ರಮಗಳ ಮೂಲಕ, ಸರ್ಕಾರವು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಗುರುತಿಸಲು, ರಕ್ಷಿಸಲು ಮತ್ತು ಸಶಕ್ತಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸೆಪ್ಟೆಂಬರ್ 30,2025 ರ ಹೊತ್ತಿಗೆ, 31.20 ಕೋಟಿಗಿಂತ ಹೆಚ್ಚು ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ, ಇದು ಹೊಂದಿಕೊಳ್ಳುವ ಕೆಲಸ, ಕೆಲಸ-ಜೀವನದ ಸಮತೋಲನ ಮತ್ತು ಡಿಜಿಟಲ್ ಜೀವನೋಪಾಯದ ಕಡೆಗೆ ವಿಶಾಲವಾದ ಜಾಗತಿಕ ಪ್ರವೃತ್ತಿಯನ್ನು ಸೂಚಿಸುತ್ತದೆ.

ಸ್ಟಾರ್ಟ್ಅಪ್ಗಳು ಮತ್ತು ಗ್ಲೋಬಲ್ ಕೆಪಾಸಿಟಿ ಸೆಂಟರ್ಗಳು (GCCs)

ಭಾರತದ ಜನಸಂಖ್ಯಾ ಲಾಭಾಂಶವನ್ನು ಉದ್ದೇಶಿತ ಉಪಕ್ರಮಗಳ ಮೂಲಕ ಸಕ್ರಿಯವಾಗಿ ಬೆಳೆಸಲಾಗುತ್ತಿದೆ, ಇದು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು (GCCs) ನಂತಹ ಹೊರಹೊಮ್ಮುತ್ತಿರುವ ವಲಯಗಳಲ್ಲಿಯೂ ಆರ್ಥಿಕತೆಯು ಉದ್ಯೋಗ ಬೆಳವಣಿಗೆಗೆ ಸಾಕ್ಷಿಯಾಗಿದೆ, ಇದು ಯುವಕರಿಗೆ ಹೊಸ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು 1.9 ಲಕ್ಷ ಡಿಪಿಐಐಟಿ (DPIIT)-ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದೆ - ಇದು ವಿಶ್ವದ 3 ನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಾಗಿದ್ದು, 2025 ರ ಹೊತ್ತಿಗೆ 17 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಮತ್ತು 118 ಯೂನಿಕಾರ್ನ್‌ಗಳನ್ನು ಸೃಷ್ಟಿಸಿದೆ.

ಭಾರತದ ಉದ್ಯೋಗ ಭೂದೃಶ್ಯದ ಕ್ಷೇತ್ರವಾರು ಬೆಳವಣಿಗೆಯ ಸ್ಪಷ್ಟ ತಿಳುವಳಿಕೆಯನ್ನು ನೀಡುವ ಕೆಲವು ಆಸಕ್ತಿದಾಯಕ ಸಂಗತಿಗಳು ಈ ಕೆಳಗಿವೆ:

ಭಾರತದ ಉದ್ಯೋಗವನ್ನು ಬಲಪಡಿಸುವ ಪ್ರಮುಖ ಸರ್ಕಾರಿ ಉಪಕ್ರಮಗಳು

ಉತ್ತಮ ಗುಣಮಟ್ಟದ, ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಮಿಕ ಬಲದೊಂದಿಗೆ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ, ಜಾಗತಿಕ ಉದ್ಯೋಗ ಮಾರುಕಟ್ಟೆಗಳಲ್ಲಿ ಯುವಕರ ಉದ್ಯೋಗಾರ್ಹತೆಯನ್ನು ಭಾರತವು ಹೆಚ್ಚಿಸಬಹುದು. ವಿವಿಧ ಉಪಕ್ರಮಗಳ ಮೂಲಕ ಸರ್ಕಾರದ ನಿರಂತರ ಪ್ರಯತ್ನಗಳು ಹೆಚ್ಚಿನ ಕಾರ್ಮಿಕ ಬಲದ ಭಾಗವಹಿಸುವಿಕೆ, ಕಡಿಮೆಯಾದ ನಿರುದ್ಯೋಗ, ಸುಧಾರಿತ ಆದಾಯ ಮತ್ತು ಸಾಂಪ್ರದಾಯಿಕ ಹಾಗೂ ಹೊಸ ಯುಗದ ವಲಯಗಳಲ್ಲಿ ವ್ಯಾಪಕ ಅವಕಾಶಗಳಿಗೆ ಕಾರಣವಾಗಿವೆ.

ಕೌಶಲ್ಯ ಭಾರತ

ಕೌಶಲ್ಯ ಭಾರತ ಮಿಷನ್ ಅಡಿಯಲ್ಲಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (MSDE) ದೇಶಾದ್ಯಂತದ ಕೇಂದ್ರಗಳ ಜಾಲದ ಮೂಲಕ ಕೌಶಲ್ಯ, ಪುನರ್-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಪ್ರಮುಖ ಯೋಜನೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

ರೋಜಗಾರ್ ಮೇಳ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (NSDC) ಮೂಲಕ ದೇಶದಲ್ಲಿ ಉದ್ಯೋಗ ಉಪಕ್ರಮಗಳನ್ನು ಹೆಚ್ಚಿಸಲು ಸರ್ಕಾರವು ರೋಜಗಾರ್ ಮೇಳಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಗಳು ನಿರುದ್ಯೋಗಿ ಯುವಕರನ್ನು ಖಾಸಗಿ ವಲಯದಲ್ಲಿ ಸೂಕ್ತ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿವೆ. ಇದು ಒಂದು ಅರ್ಧ-ದಿನದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಸ್ಥಾನಗಳಿಗೆ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನಕ್ಕಾಗಿ ಸೇರುತ್ತಾರೆ. ಗಮನಾರ್ಹವಾಗಿ, ಕಳೆದ 16 ತಿಂಗಳುಗಳಲ್ಲಿ ರೋಜಗಾರ್ ಮೇಳದ ಅಡಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಉದ್ಯೋಗ ಪಡೆದಿದ್ದಾರೆ.

ಪಿಎಂ ವಿಶ್ವಕರ್ಮ

ಈ ಯೋಜನೆಯು ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚಿಸಲು ಸಮಗ್ರ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಸೆಪ್ಟೆಂಬರ್ 30,2025 ರ ಹೊತ್ತಿಗೆ, ಸುಮಾರು 30 ಲಕ್ಷ ನೋಂದಾಯಿತ ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳು ಇದ್ದು, 26 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೌಶಲ್ಯ ಪರಿಶೀಲನೆಯು ಪೂರ್ಣಗೊಂಡಿದೆ.

ಐಟಿಐ ಉನ್ನತೀಕರಣ ಯೋಜನೆ

ಮೇ 2025 ರಲ್ಲಿ ಅನುಮೋದಿಸಲಾದ ಈ ಯೋಜನೆಯು 1000 ಸರ್ಕಾರಿ ಐಟಿಐಗಳನ್ನು (ITIs) 'ಹಬ್ ಮತ್ತು ಸ್ಪೋಕ್' ಮಾದರಿಯಲ್ಲಿ ರಾಜ್ಯ-ನೇತೃತ್ವದ, ಕೈಗಾರಿಕೆ-ನಿರ್ವಹಣೆಯ ಕೌಶಲ್ಯ ಸಂಸ್ಥೆಗಳಾಗಿ ಉನ್ನತೀಕರಿಸುವ ಗುರಿಯನ್ನು ಹೊಂದಿದೆ. 200 ಐಟಿಐಗಳು ಹಬ್ ಸಂಸ್ಥೆಗಳಾಗಿ ಮತ್ತು 800 ಸ್ಪೋಕ್‌ಗಳಾಗಿ ಕಾರ್ಯನಿರ್ವಹಿಸಲಿವೆ. ಇದರ ಜೊತೆಗೆ, ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಉದ್ಯೋಗ-ಸಂಬಂಧಿತ ಪ್ರೋತ್ಸಾಹಕ ಯೋಜನೆ

ಇದು ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುತ್ತದೆ, ಮುಖ್ಯವಾಗಿ ಉತ್ಪಾದನಾ ವಲಯದ ಮೇಲೆ ಗಮನಹರಿಸುತ್ತದೆ. ₹1 ಲಕ್ಷ ಕೋಟಿ ವೆಚ್ಚದಲ್ಲಿ ಎರಡು ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಇದು ಹೊಂದಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MGNREGA)

ಇದು ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರು ಕೌಶಲ್ಯರಹಿತ ಕೈಯಿಂದ ಮಾಡುವ ಕೆಲಸವನ್ನು ಮಾಡಲು ಇಚ್ಛಿಸುವ ಕುಟುಂಬಗಳಿಗೆ ಕನಿಷ್ಠ 100 ದಿನಗಳ ಖಾತರಿ ವೇತನದ ಉದ್ಯೋಗ ಒದಗಿಸುವ ಮೂಲಕ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಎಫ್‌ವೈ 2025–26 ರಲ್ಲಿ MGNREGA ಗಾಗಿ ₹86,000 ಕೋಟಿ ಯನ್ನು ಹಂಚಿಕೆ ಮಾಡಲಾಗಿದೆ, ಇದು 2005 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಅತ್ಯಧಿಕ ಹಂಚಿಕೆಯಾಗಿದೆ.

ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ

ಆಗಸ್ಟ್ 2025ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಪ್ರೋತ್ಸಾಹಕಗಳ ಮೂಲಕ ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ಬೆಂಬಲಿಸುವ ಮೂಲಕ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಆಗಸ್ಟ್ 2025 ರಿಂದ ಜುಲೈ 2027 ರವರೆಗೆ ನಡೆಯುತ್ತದೆ, ಎಫ್‌ವೈ 202526 ರಿಂದ ಎಫ್‌ವೈ 203132 ರವರೆಗೆ ಒಟ್ಟು ₹99,446 ಕೋಟಿ ಬಜೆಟ್ ಹೊಂದಿದೆ. ಇದು ಎರಡು ಭಾಗಗಳನ್ನು ಹೊಂದಿದೆ - ಭಾಗ A 1.92 ಕೋಟಿ ಹೊಸ ಅರ್ಹ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಪ್ರೋತ್ಸಾಹಕಗಳನ್ನು ನೀಡುತ್ತದೆ. ಭಾಗ B ಸುಮಾರು 2.59 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುತ್ತದೆ.

ಹೆಚ್ಚುವರಿಯಾಗಿ, ಕೈಗಾರಿಕೆಗೆ ಸಿದ್ಧವಾಗಿರುವ ಕಾರ್ಮಿಕ ಬಲವನ್ನು ರಚಿಸಲು, ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗಳು (ಪಿಎಂ ಇಂಟರ್ನ್‌ಶಿಪ್ ಯೋಜನೆ) ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಔದ್ಯೋಗಿಕ ತರಬೇತಿಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಂತಹ ಉಪಕ್ರಮಗಳು ಬಹಳ ದೂರ ಸಾಗಲು ಸಿದ್ಧವಾಗಿವೆ. ಇದರ ಜೊತೆಗೆ, 'ಮೇಕ್ ಇನ್ ಇಂಡಿಯಾ' ಉಪಕ್ರಮವು ಉತ್ಪಾದನೆಯನ್ನು ಪುನರುಜ್ಜೀವನಗೊಳಿಸಲು, ವಿಶೇಷವಾಗಿ ಅರೆ-ಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಮಹಿಳೆಯರಿಗಾಗಿ ನಿರ್ದಿಷ್ಟ ಉಪಕ್ರಮಗಳು

ನಿರ್ದಿಷ್ಟ ಉಪಕ್ರಮಗಳು ಕೌಶಲ್ಯ, ಉದ್ಯೋಗ ಮತ್ತು ಉದ್ಯಮಶೀಲತೆಯ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿವೆ. ಭಾರತೀಯ ಮಹಿಳಾ ಉದ್ಯೋಗ ಭೂದೃಶ್ಯವನ್ನು ಬಲಪಡಿಸುವ ಕೆಲವು ಪ್ರಮುಖ ಸರ್ಕಾರಿ ಉಪಕ್ರಮಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ, ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗುತ್ತದೆ:

  • ನಮೋ ಡ್ರೋನ್ ದೀದಿ: ಕೇಂದ್ರ ವಲಯದ ಯೋಜನೆಯಾದ ಇದು, ಕೃಷಿ ಸೇವೆಗಳನ್ನು ಒದಗಿಸಲು ಡ್ರೋನ್ ತಂತ್ರಜ್ಞಾನವನ್ನು ಹೊಂದಿದ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಆಯ್ದ ಮಹಿಳಾ SHG ಗಳಿಗೆ 15,000 ಡ್ರೋನ್‌ಗಳನ್ನು (202425 ರಿಂದ 20252026 ರವರೆಗೆ) ಕೃಷಿ ಉದ್ದೇಶಕ್ಕಾಗಿ (ಪ್ರಸ್ತುತ ದ್ರವ ಗೊಬ್ಬರಗಳು ಮತ್ತು ಕೀಟನಾಶಕಗಳ ಅನ್ವಯಕ್ಕಾಗಿ) ಬಾಡಿಗೆ ಸೇವೆಗಳನ್ನು ಒದಗಿಸಲು ಗುರಿ ಹೊಂದಿದೆ. ಈ ಉಪಕ್ರಮವು ಪ್ರತಿ SHG ಗೆ ವರ್ಷಕ್ಕೆ ಕನಿಷ್ಠ ₹1 ಲಕ್ಷ ದಷ್ಟು ಹೆಚ್ಚುವರಿ ಆದಾಯವನ್ನು ಗಳಿಸುವ ಸಾಧ್ಯತೆಯಿದೆ, ಇದು ಆರ್ಥಿಕ ಸಬಲೀಕರಣ, ಸುಸ್ಥಿರ ಜೀವನೋಪಾಯ ಸೃಷ್ಟಿಗೆ ಕೊಡುಗೆ ನೀಡುತ್ತದೆ.
  • ಮಿಷನ್ ಶಕ್ತಿ: ಅರಿವು ಮೂಡಿಸುವ ಮೂಲಕ, ಸುರಕ್ಷಿತ ಪರಿಸರವನ್ನು ಸೃಷ್ಟಿಸುವ ಮೂಲಕ ಮತ್ತು ಕಾರ್ಯಾಗಾರಗಳು ಹಾಗೂ ತರಬೇತಿಯನ್ನು ನೀಡುವ ಮೂಲಕ, ಮಿಷನ್ ಶಕ್ತಿ ಮಹಿಳೆಯರ ಜೀವನವನ್ನು ಪರಿವರ್ತಿಸಲು ಮತ್ತು ಅಂತರ್ಗತ ಮತ್ತು ಸಶಕ್ತ ಸಮಾಜವನ್ನು ಪೋಷಿಸಲು ಪ್ರಯತ್ನಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಿಷನ್ ಶಕ್ತಿ ಅಡಿಯಲ್ಲಿ ಶಿಶುಪಾಲನಾ ಸೇವೆಗಳು ಮತ್ತು ಮಕ್ಕಳ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ 'ಪಾಲ್ನಾ' ಘಟಕವನ್ನು ಸಹ ಅನುಷ್ಠಾನಗೊಳಿಸುತ್ತಿದೆ.
  • ಲಕ್ಷಪತಿ ದೀದಿ ಯೋಜನೆ : ಲಕ್ಷಪತಿ ದೀದಿ ಎಂದರೆ ವಾರ್ಷಿಕ ಕುಟುಂಬ ಆದಾಯ ₹1,00,000 ಅಥವಾ ಅದಕ್ಕಿಂತ ಹೆಚ್ಚಿರುವ SHG ಸದಸ್ಯರಾಗಿದ್ದಾರೆ. ಈ ಆದಾಯವನ್ನು ಕನಿಷ್ಠ ನಾಲ್ಕು ಕೃಷಿ ಋತುಗಳು ಮತ್ತು/ಅಥವಾ ವ್ಯವಹಾರ ಚಕ್ರಗಳಿಗೆ ಲೆಕ್ಕಹಾಕಲಾಗುತ್ತದೆ, ಮಾಸಿಕ ಸರಾಸರಿ ಆದಾಯ ₹10,000 ಕ್ಕಿಂತ ಹೆಚ್ಚಿರುತ್ತದೆ, ಇದರಿಂದ ಅದು ಸುಸ್ಥಿರವಾಗಿರುತ್ತದೆ. ಭಾರತವು 3 ಕೋಟಿ ಲಕ್ಷಪತಿ ದೀದಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು 2 ಕೋಟಿ ಮಹಿಳೆಯರು ಈಗಾಗಲೇ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಇದರ ಜೊತೆಗೆ, ಬ್ಯಾಂಕ್ ಸಖಿ, ಬಿಮಾ ಸಖಿ, ಕೃಷಿ ಸಖಿ ಮತ್ತು ಪಶು ಸಖಿ ಯಂತಹ ವಿವಿಧ ಇತರ ಯೋಜನೆಗಳು ಮಹಿಳೆಯರಿಗೆ ಸುಸ್ಥಿರ ಉದ್ಯೋಗವನ್ನು ಕಂಡುಕೊಳ್ಳಲು ಅನುವು ಮಾಡಿಕೊಟ್ಟಿವೆ. ಮಹಿಳಾ ಉದ್ಯಮಶೀಲತೆಯನ್ನು ಗಳಿಸಲು, ಸರ್ಕಾರವು ಸುಲಭವಾದ ಸಾಲ ಪ್ರವೇಶ, ಮಾರ್ಕೆಟಿಂಗ್ ಬೆಂಬಲ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಇತ್ಯಾದಿಗಳ ವಿಷಯದಲ್ಲಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ. ಪಿಎಂ ಉದ್ಯೋಗ ಖಾತ್ರಿ ಕಾರ್ಯಕ್ರಮ, ಸಂಕಲ್ಪ್, ಪಿಎಂ ಮೈಕ್ರೋ ಆಹಾರ ಸಂಸ್ಕರಣಾ ಯೋಜನೆ, ಆದಿವಾಸಿ ಮಹಿಳಾ ಸಶಕ್ತೀಕರಣ ಯೋಜನೆ, ಸ್ವಯಂ ಶಕ್ತಿ ಸಹಕಾರ ಯೋಜನೆ, ಡೇ-ಎನ್‌ಆರ್‌ಎಲ್‌ಎಂ ಮತ್ತು ಇತರ ಯೋಜನೆಗಳು ಆರ್ಥಿಕ ನೆರವು, ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಮಹಿಳಾ ನೇತೃತ್ವದ ಉದ್ಯಮಗಳನ್ನು ಪೋಷಿಸುತ್ತಿವೆ. ಈ ಕ್ರಮಗಳು ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ವಿಸ್ತರಿಸಲು ಸಶಕ್ತಗೊಳಿಸುತ್ತಿವೆ.

ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಸರ್ಕಾರವು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಮಹಿಳೆಯರು ಮತ್ತು ಎಸ್‌ಇಆರ್‌ಬಿ-ಪವರ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ, ಇದು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರನ್ನು ಉತ್ತೇಜಿಸುತ್ತದೆ.

ಉದ್ಯೋಗ ದೃಷ್ಟಿಕೋನ

ವೇಗವಾಗಿ ವಿಕಸನಗೊಳ್ಳುತ್ತಿರುವ ಭೂದೃಶ್ಯದಲ್ಲಿ ಅಭಿವೃದ್ಧಿ ಹೊಂದಲು, ಮೂರು ಪ್ರಮುಖ ಪ್ರಶ್ನೆಗಳು ಹೊರಹೊಮ್ಮುತ್ತವೆ: ಹೆಚ್ಚುತ್ತಿರುವ ತಂತ್ರಜ್ಞಾನ-ಚಾಲಿತ ಉದ್ಯೋಗ ಮಾರುಕಟ್ಟೆಯನ್ನು ನ್ಯಾವಿಗೇಟ್ ಮಾಡಲು ಸಜ್ಜುಗೊಂಡ ಡಿಜಿಟಲ್ ಪ್ರವೀಣ ಕಾರ್ಮಿಕ ಬಲವನ್ನು ನಾವು ಹೇಗೆ ಅಭಿವೃದ್ಧಿಪಡಿಸುತ್ತೇವೆ? ವೈವಿಧ್ಯತೆಗೆ ಮೌಲ್ಯ ನೀಡುವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ನಿಜವಾದ ಅಂತರ್ಗತ ಕಾರ್ಮಿಕ ಬಲವನ್ನು ನಿರ್ಮಿಸಲು ನಾವು ಯಾವ ಕಾರ್ಯತಂತ್ರಗಳನ್ನು ಬಳಸಬಹುದು? ಹೆಚ್ಚುವರಿಯಾಗಿ, ಕೈಗಾರಿಕೆಗಳು ಪರಿಸರ ಸುಸ್ಥಿರತೆಗೆ ಆದ್ಯತೆ ನೀಡುತ್ತಿರುವಾಗ, ನಾವು ಪರಿಸರ ಸ್ನೇಹಿ ಅಭ್ಯಾಸಗಳು ಮತ್ತು ಮೌಲ್ಯಗಳನ್ನು ನಮ್ಮ ಕಾರ್ಮಿಕ ಬಲದ ಸಂಸ್ಕೃತಿಯಲ್ಲಿ ಹೇಗೆ ಸಂಯೋಜಿಸಬಹುದು?

ಗಮನಾರ್ಹವಾಗಿ, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ತಾಂತ್ರಿಕ ಉನ್ನತೀಕರಣದ ಕಡೆಗೆ ಗಮನಹರಿಸಲು ಸರ್ಕಾರದ ಉಪಕ್ರಮಗಳು ಪೂರ್ಣ ಸ್ವಿಂಗ್‌ನಲ್ಲಿರುವ ಕಾರಣ, ಭಾರತವು ಮೇಲಿನ ಮೂರು ಪ್ರಶ್ನೆಗಳಿಗೂ ಉತ್ತಮವಾಗಿ ಸಿದ್ಧವಾಗಿರುವ ಉತ್ತರಗಳನ್ನು ಹೊಂದಿದೆ. ಸರ್ಕಾರವು ಅಂತರ್ಗತ ಬೆಳವಣಿಗೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಪೋಷಿಸುತ್ತಿದೆ ಮತ್ತು ಡಿಜಿಟಲ್ ಸಾಕ್ಷರತೆ ಹಾಗೂ ಪರಿಸರ ಸ್ನೇಹಿ ಕಾರ್ಮಿಕ ಬಲದ ಮೌಲ್ಯಗಳನ್ನು ಉತ್ತೇಜಿಸುತ್ತಿದೆ. ಇದರ ಜೊತೆಗೆ, ಇದು ಕಾರ್ಮಿಕ ಬಲದ ಅಭಿವೃದ್ಧಿಯಲ್ಲಿ ಅಂತರ್ಗತತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುತ್ತಿದೆ.

ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ GCCಗಳು, ಇದು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ರೋಬೋಟಿಕ್ ಪ್ರಕ್ರಿಯೆ ಯಾಂತ್ರೀಕರಣ, ಡಿಜಿಟಲ್ ವಾಣಿಜ್ಯ, ಸೈಬರ್ ಸುರಕ್ಷತೆ, ಬ್ಲಾಕ್‌ಚೈನ್, ವರ್ಧಿತ ವಾಸ್ತವತೆ ಮತ್ತು ವರ್ಚುವಲ್ ರಿಯಾಲಿಟಿ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ. ಗಮನಾರ್ಹವಾಗಿ, ಭಾರತವು "ವಿಶ್ವದ GCC ರಾಜಧಾನಿ" ಯಾಗಲು ಸಿದ್ಧವಾಗಿದೆ, 1,700 ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು (GCCs) ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿವೆ - ಈ ಸಂಖ್ಯೆ 2030 ರ ವೇಳೆಗೆ ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದೆ.

ತೀರ್ಮಾನ

ಅಂಕಿಅಂಶಗಳು ಸಾಬೀತುಪಡಿಸುವಂತೆ, ಭಾರತದ ಆರ್ಥಿಕ ಪಥವು ಪ್ರಮುಖ ವಲಯಗಳಲ್ಲಿ ಸ್ಥಿರವಾದ ಉದ್ಯೋಗ ಸೃಷ್ಟಿಯನ್ನು ಪ್ರತಿಬಿಂಬಿಸುತ್ತದೆ, ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ತನ್ನ ಸ್ಥಾನವನ್ನು ಬಲಪಡಿಸುತ್ತದೆ. ರೋಮಾಂಚಕ ಪ್ರಜಾಪ್ರಭುತ್ವ, ಸ್ಥಿತಿಸ್ಥಾಪಕ ಮತ್ತು ಕ್ರಿಯಾತ್ಮಕ ಆರ್ಥಿಕತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಬೇರೂರಿಸಿದ ಸಂಸ್ಕೃತಿಯ ಬೆಂಬಲದೊಂದಿಗೆ, ದೇಶವು ಜಾಗತಿಕ ಶಕ್ತಿಯಾಗುವ ತನ್ನ ಹಾದಿಯಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿದೆ.

ಭಾರತದ ಮಧ್ಯಮ-ಅವಧಿಯ ಬೆಳವಣಿಗೆಯ ಪಥವು ಒಂದು ದಶಕದ ಬಲವಾದ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಬೇರೂರಿದೆ, ಕಾರ್ಮಿಕ ಮಾರುಕಟ್ಟೆ ಸುಧಾರಣೆಗಳು ಇತರ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಮತ್ತು ನಿರಂತರ ರಚನಾತ್ಮಕ ಮತ್ತು ಆಡಳಿತ ಸುಧಾರಣೆಗಳೊಂದಿಗೆ ಅವಿಭಾಜ್ಯವಾಗಿವೆ. ಭಾರತವು ಆಧುನೀಕರಣ ಮತ್ತು ಬೆಳವಣಿಗೆಯನ್ನು ಮುಂದುವರೆಸುತ್ತಿದ್ದಂತೆ, ಉದ್ಯಮದ ಅಗತ್ಯಗಳೊಂದಿಗೆ ಕಾರ್ಮಿಕ ಬಲದ ಅಭಿವೃದ್ಧಿಯನ್ನು ಜೋಡಿಸುವುದು ಸುಸ್ಥಿರ ಮತ್ತು ಅಂತರ್ಗತ ಆರ್ಥಿಕ ಪ್ರಗತಿಗೆ ನಿರ್ಣಾಯಕ ಆಧಾರಸ್ತಂಭವಾಗಿದೆ.

 

References

PIB Archives

Directorate General of Employment (DGE) India website

 

Indian Labour Statistics websites

Ministry of Statistics and Programme Implementation website

Ministry of Skill Development and Entrepreneurship

Ministry of Labour& Employment

Ministry of Commerce & Industry

PM India website/ PMO

Rajya Sabha website

DD news website

World Economic Forum report

International LabourOrganisation

Niti Aayog

Building the Workforce: India Adds~17 Crore Jobs in 6 years

 

*****

(Explainer ID: 155403) आगंतुक पटल : 57
Provide suggestions / comments
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Assamese , Malayalam
Link mygov.in
National Portal Of India
STQC Certificate