Social Welfare
ಭಾರತದಲ್ಲಿ ಕುಷ್ಠರೋಗ: ರೋಗ ಮುಕ್ತ ಭವಿಷ್ಯದ ಹಾದಿ
Posted On:
05 OCT 2025 11:02AM
ಪ್ರಮುಖ ಮಾರ್ಗಸೂಚಿಗಳು
|
- ಭಾರತದಲ್ಲಿ ಕುಷ್ಠರೋಗದ ಪ್ರಮಾಣವು 1981ರಲ್ಲಿ ಪ್ರತಿ 10,000 ಜನಸಂಖ್ಯೆಗೆ 57.2 ಇತ್ತು. ಅದು 2025ರ ವೇಳೆಗೆ ಕೇವಲ 0.57ಕ್ಕೆ ಇಳಿದಿದೆ.
- ಪತ್ತೆಯಾದ ಹೊಸ ಪ್ರಕರಣಗಳಲ್ಲಿ, ಮಕ್ಕಳ ಪ್ರಕರಣಗಳ ಶೇಕಡಾವಾರು ಪ್ರಮಾಣವು 2014-15 ರಲ್ಲಿ ಶೇ. 9.04ರಿಂದ 2024-25 ರಲ್ಲಿ ಶೇ. 4.68ಕ್ಕೆ ಇಳಿದಿದೆ.
- ಮಾರ್ಚ್ 2025ರ ಹೊತ್ತಿಗೆ, 31 ರಾಜ್ಯಗಳು ಮತ್ತು 638 ಜಿಲ್ಲೆಗಳು ಪ್ರತಿ 10,000 ಜನಸಂಖ್ಯೆಗೆ 1ಕ್ಕಿಂತ ಕಡಿಮೆ ಇರುವ ಪ್ರಮಾಣ ಸಾಧಿಸಿವೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕುಷ್ಠರೋಗ ನಿರ್ಮೂಲನಾ ಸ್ಥಾನಮಾನವನ್ನು ಹೆಚ್ಚಿಸಿದೆ.
|
ಕುಷ್ಠರೋಗ ಅಥವಾ ಹ್ಯಾನ್ಸೆನ್‌ನ ಕಾಯಿಲೆ ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಒಂದು ದೀರ್ಘಕಾಲದ ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕು ನರಗಳು, ಉಸಿರಾಟದ ನಾಳ, ಚರ್ಮ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ರೋಗಲಕ್ಷಣಗಳಲ್ಲಿ ಬಣ್ಣಗುಂದಿದ ಚರ್ಮದ ತುಣುಕುಗಳು, ಸ್ಪರ್ಶ, ಒತ್ತಡ, ನೋವು, ಶಾಖ ಮತ್ತು ಶೀತವನ್ನು ಅನುಭವಿಸುವ ಸಾಮರ್ಥ್ಯದ ಕೊರತೆ, ಸ್ನಾಯುಗಳ ದೌರ್ಬಲ್ಯ, ವಾಸಿಯಾಗದ ಹುಣ್ಣುಗಳು, ವಿಶೇಷವಾಗಿ ಕೈಗಳು, ಪಾದಗಳು ಮತ್ತು ಮುಖದಲ್ಲಿನ ವಿಕಾರತೆಗಳು ಮತ್ತು ಕಣ್ಣುಗಳನ್ನು ಮುಚ್ಚಲು ಅಸಾಧ್ಯತೆ ಹಾಗೂ ಕಳಪೆ ದೃಷ್ಟಿ ಸೇರಿವೆ. ಚಿಕಿತ್ಸೆ ನೀಡದ ಪ್ರಕರಣಗಳೊಂದಿಗೆ ನಿಕಟ ಮತ್ತು ಆಗಾಗ್ಗೆ ಸಂಪರ್ಕದಲ್ಲಿರುವಾಗ ಮೂಗು ಮತ್ತು ಬಾಯಿಯಿಂದ ಹೊರಬರುವ ಸಣ್ಣ ಹನಿಗಳ ಮೂಲಕ ಕುಷ್ಠರೋಗವು ಹರಡುತ್ತದೆ. ಈ ರೋಗವು ವಿಕಾರತೆಗೆ ಕಾರಣವಾಗಬಹುದಾದ ಕಾರಣ, ಜನರು ಇದಕ್ಕೆ ಭಯಪಡುತ್ತಾರೆ; ಇದು ಸಾಂಪ್ರದಾಯಿಕವಾಗಿ ಈ ರೋಗಕ್ಕೆ ಅಂಟಿಕೊಂಡಿರುವ ಸಾಮಾಜಿಕ ಕಳಂಕಕ್ಕೂ ಕಾರಣವಾಗಿದೆ. ಕುಷ್ಠರೋಗವು ಮಲ್ಟಿಬ್ಯಾಸಿಲರಿ ಅಥವಾ ಪಾಲಿಬ್ಯಾಸಿಲರಿ ಆಗಿರಬಹುದು. ಮಲ್ಟಿಬ್ಯಾಸಿಲರಿ ಕುಷ್ಠರೋಗವು ಸ್ಲಿಟ್-ಸ್ಕಿನ್ ಸ್ಮಿಯರ್ ಪರೀಕ್ಷೆಯಲ್ಲಿ ಹೆಚ್ಚಿನ ಸಾಂದ್ರತೆಯ ಬ್ಯಾಸಿಲಿಯನ್ನು ತೋರಿಸಿದರೆ, ಪಾಲಿಬ್ಯಾಸಿಲರಿ ಕುಷ್ಠರೋಗ ಪ್ರಕರಣಗಳು ಸ್ಲಿಟ್-ಸ್ಕಿನ್ ಸ್ಮಿಯರ್ ಪರೀಕ್ಷೆಯಲ್ಲಿ ಕೆಲವೇ ಅಥವಾ ಯಾವುದೇ ಬ್ಯಾಸಿಲಿಗಳನ್ನು ತೋರಿಸುವುದಿಲ್ಲ. 1983 ರಲ್ಲಿ ಭಾರತದಲ್ಲಿ ಬಹು-ಔಷಧ ಚಿಕಿತ್ಸೆಯ ಪರಿಚಯವು ಕುಷ್ಠರೋಗದ ಚಿಕಿತ್ಸೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಎಂಡಿಟಿ ಚಿಕಿತ್ಸೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮೂಲಕ ರೋಗಿಗಳಿಗೆ ಉಚಿತವಾಗಿ ಒದಗಿಸಲಾಗಿದೆ. ಎಂಡಿಟಿಯೊಂದಿಗೆ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಅಂಗವೈಕಲ್ಯಗಳು ಮತ್ತು ವಿಕಾರತೆಗಳನ್ನು ತಡೆಯಬಹುದು. ಎಂಡಿಟಿಯ ಪರಿಚಯವಾದಾಗಿನಿಂದ, ರೋಗದ ಸಂಭವ ಮತ್ತು ಹರಡುವಿಕೆಯು ಗಮನಾರ್ಹವಾಗಿ ಕಡಿಮೆಯಾಗಿದೆ. (ವಿಶ್ವ ಆರೋಗ್ಯ ಸಂಸ್ಥೆ, 2024).
ಸ್ವಾತಂತ್ರ್ಯ ನಂತರ ಭಾರತದಲ್ಲಿ ಪರಿಸ್ಥಿತಿ
|
1951ರ ದಶವಾರ್ಷಿಕ ಜನಗಣತಿಯು ಕುಷ್ಠರೋಗದ ಪ್ರಮಾಣವನ್ನು 13,74,000 ಮತ್ತು ಪ್ರತಿ 10,000 ಜನಸಂಖ್ಯೆಗೆ 38.1ರಷ್ಟು ಹರಡುವಿಕೆಯ ದರವನ್ನು ವರದಿ ಮಾಡಿತ್ತು. ಭಾರತ ಸರ್ಕಾರವು ಕುಷ್ಠರೋಗವನ್ನು ರಾಷ್ಟ್ರೀಯ ಆರೋಗ್ಯ ಸಮಸ್ಯೆಯೆಂದು ಗುರುತಿಸಿತು ಮತ್ತು 1954-55 ರಲ್ಲಿ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ನಾಲ್ಕನೇ ಪಂಚವಾರ್ಷಿಕ ಯೋಜನೆ (1969-1974) ಅವಧಿಯಲ್ಲಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾದ ನಂತರ ವೇಗವನ್ನು ಪಡೆಯಿತು, ಹೀಗಾಗಿ ಅಗತ್ಯ ಆದ್ಯತೆ ಮತ್ತು ನಿಧಿಯನ್ನು ಪಡೆಯಿತು. ಈ ಸಮಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಒಳಗೊಳ್ಳಲು ಕಾರ್ಯಕ್ರಮವನ್ನು ವಿಸ್ತರಿಸಲಾಯಿತು. ಈ ಹೆಚ್ಚಿದ ವ್ಯಾಪ್ತಿಯನ್ನು ಸಾಧಿಸಲು, ಸರ್ಕಾರೇತರ ಸಂಸ್ಥೆಗಳ ಒಳಗೊಳ್ಳುವಿಕೆಯನ್ನು ಬಲಪಡಿಸಲಾಯಿತು ಮತ್ತು ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು ಕುಷ್ಠರೋಗ ಕಾರ್ಯಕ್ರಮದ ಪ್ರಮುಖ ಅಂಶವಾಯಿತು. 1983ರಲ್ಲಿ ಪರಿಚಯಿಸಲಾದ ಯೋಜನೆಯ ಮೂಲಕ ನಿಗದಿಪಡಿಸಿದ ಪ್ರದೇಶಗಳಲ್ಲಿ SET (ಸಮೀಕ್ಷೆ, ಶಿಕ್ಷಣ ಮತ್ತು ಚಿಕಿತ್ಸೆ - Survey, Education and Treatment) ಚಟುವಟಿಕೆಗಳಲ್ಲಿ ಎನ್‌ಜಿಒಗಳ ಭಾಗವಹಿಸುವಿಕೆಯನ್ನು ಸರ್ಕಾರವು ಪ್ರೋತ್ಸಾಹಿಸಿತು. ಮಧ್ಯಮ/ಕಡಿಮೆ ರೋಗ ಸ್ಥಳೀಯ ಪ್ರದೇಶಗಳಲ್ಲಿ SET ಕೇಂದ್ರಗಳನ್ನು ಮತ್ತು ನಗರ ಪ್ರದೇಶಗಳಲ್ಲಿ ನಗರ ಕುಷ್ಠರೋಗ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಕೇಂದ್ರಗಳಿಗೆ ಪ್ರತಿ 25,000 ಜನಸಂಖ್ಯೆಗೆ ಒಬ್ಬ ಅರೆವೈದ್ಯಕೀಯ ಕಾರ್ಯಕರ್ತನನ್ನು ನಿಯೋಜಿಸಲಾಗಿತ್ತು, ಇದನ್ನು 'ಸೆಕ್ಟರ್' ಎಂದು ಕರೆಯಲಾಗುತ್ತಿತ್ತು. ಮತ್ತು ಪ್ರತಿ ಐದು ಅರೆವೈದ್ಯಕೀಯ ಕಾರ್ಯಕರ್ತರಿಗೆ ಒಬ್ಬ ವೈದ್ಯಕೀಯೇತರ ಮೇಲ್ವಿಚಾರಕರು ಇರುತ್ತಿದ್ದರು. ಅರೆವೈದ್ಯಕೀಯ ಕಾರ್ಯಕರ್ತರು ಪ್ರತಿ ಎರಡು ವರ್ಷಗಳ ಚಕ್ರದಲ್ಲಿ ಸಂಪೂರ್ಣ ಜನಸಂಖ್ಯೆಯನ್ನು "ಸಮೀಕ್ಷೆ" ಮಾಡುತ್ತಾ, ಕುಷ್ಠರೋಗಿಗಳಿಗಾಗಿ ಮನೆ-ಮನೆ ಹುಡುಕಾಟ ನಡೆಸುತ್ತಿದ್ದರು. ರೋಗನಿರ್ಣಯವು ಕಷ್ಟಕರವಾದ ಸ್ಲಿಟ್ ಸ್ಮಿಯರ್ ತಂತ್ರಗಳ ಮೂಲಕ ನಡೆಯುತ್ತಿತ್ತು ಮತ್ತು ದೃಢಪಡಿಸಿದ ಪ್ರಕರಣಗಳ ಚಿಕಿತ್ಸೆಯು 10 ವರ್ಷಗಳಿಂದ ಹಿಡಿದು ಜೀವಿತಾವಧಿಯ ಚಿಕಿತ್ಸೆಯವರೆಗೆ ಇರುತ್ತಿತ್ತು.
ಕುಷ್ಠರೋಗ ಕಾರ್ಯಕ್ರಮವು ರೋಗ ಸ್ಥಳೀಯ ಜಿಲ್ಲೆಗಳಲ್ಲಿ ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿ ಮೂಲಕ ನಿಗದಿತ ಕುಷ್ಠರೋಗ ನಿಯಂತ್ರಣ ಘಟಕಗಳಲ್ಲಿ ಉಚಿತ ವಾಸಸ್ಥಳ ಚಿಕಿತ್ಸೆಯನ್ನು ಒದಗಿಸಿತು; ಮತ್ತು ಮಧ್ಯಮದಿಂದ ಕಡಿಮೆ ರೋಗ ಸ್ಥಳೀಯ ಜಿಲ್ಲೆಗಳಲ್ಲಿ, ಸಂಚಾರಿ ಕುಷ್ಠರೋಗ ಚಿಕಿತ್ಸಾ ಘಟಕಗಳ ಮೂಲಕ ಒದಗಿಸಲಾಯಿತು. ಗ್ರಾಮದ ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾಸಿಕ ಕುಷ್ಠರೋಗ ಚಿಕಿತ್ಸಾಲಯಗಳನ್ನು ನಡೆಸಿ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಯಿತು. ಇದು ಅನುಸರಣೆಯನ್ನು ಸುಧಾರಿಸಿತು ಮತ್ತು ಪ್ರತಿ ರೋಗಿಗೆ ಸಮಾಲೋಚನೆ ನೀಡಲು ಅವಕಾಶ ಒದಗಿಸಿತು. ರೋಗಿಗಳು ತಮ್ಮ ಕುಟುಂಬಗಳೊಂದಿಗೆ ಚಿಕಿತ್ಸಾಲಯಗಳಿಗೆ ಬರಲು ಪ್ರೋತ್ಸಾಹಿಸಲಾಯಿತು ಮತ್ತು ಇದು ಕಳಂಕದ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಿತು. ಕುಷ್ಠರೋಗದ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸಲು ಸಮುದಾಯಗಳಿಗೆ ಶಿಕ್ಷಣ ನೀಡುವುದು SET ಚಟುವಟಿಕೆಗಳ ಭಾಗವಾಗಿ ನಡೆಸಿದ ಮನೆ-ಮನೆ ಭೇಟಿಗಳ ಅವಿಭಾಜ್ಯ ಅಂಗವಾಗಿತ್ತು. ಇದು ಬಹುಶಃ ಕಾರ್ಯಕ್ರಮದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲವಾಗಿತ್ತು. ಭಾರತದ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಪ್ರಯತ್ನಗಳು 1955 ರಲ್ಲಿ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದ ಮೂಲಕ ಪ್ರಾರಂಭವಾದವು, ಇದು ಕುಷ್ಠರೋಗ ಪ್ರಕರಣಗಳಿಗೆ ವಾಸಸ್ಥಳ ಚಿಕಿತ್ಸೆಯಾಗಿ ಪ್ರಾರಂಭಿಸಲಾದ ಡ್ಯಾಪ್ಸೋನ್ ಮೋನೋಥೆರಪಿಯನ್ನು ಅವಲಂಬಿಸಿತ್ತು.
1982ರಲ್ಲಿ, ಬ್ಯಾಕ್ಟೀರಿಯಾ ನಾಶಕ ಔಷಧವಾದ ರಿಫಾಂಪಿಸಿನ್ ಮತ್ತು ಬ್ಯಾಕ್ಟೀರಿಯಾ ಸ್ಥಿರಕಾರಕ ಔಷಧವಾದ ಕ್ಲೋಫಾಜಿಮೈನ್ ಅನ್ನು ಡ್ಯಾಪ್ಸೋನ್ ಜೊತೆಗೆ ಒಳಗೊಂಡಿರುವ ಬಹು ಔಷಧ ಚಿಕಿತ್ಸೆಯೊಂದಿಗೆ ಕುಷ್ಠರೋಗಕ್ಕೆ ಖಚಿತವಾದ ಚಿಕಿತ್ಸೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಪ್ರಮಾಣಿತ ಕುಷ್ಠರೋಗ ಚಿಕಿತ್ಸಾ ಕ್ರಮವೆಂದು ಅನುಮೋದಿಸಿತು. 1983 ರಲ್ಲಿ ಎಂಡಿಟಿ ಚಿಕಿತ್ಸಾ ಕ್ರಮಗಳ ಪರಿಚಯವು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಾರಂಭಕ್ಕೆ ನಾಂದಿ ಹಾಡಿತು.
ಕುಷ್ಠರೋಗದಿಂದ ಬಾಧಿತರಾದವರ ಬಗ್ಗೆ ಮಹಾತ್ಮ ಗಾಂಧಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತಾ, ಭಾರತದ ಸಾರ್ವಜನಿಕ ಆರೋಗ್ಯ ಪ್ರಯತ್ನಗಳು ಕೇವಲ ಚಿಕಿತ್ಸೆಯ ಮೇಲೆ ಮಾತ್ರವಲ್ಲದೆ, ಬಾಧಿತ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೇಲೂ ಗಮನಹರಿಸಿವೆ. ಆರಂಭಿಕ ಪತ್ತೆ ಮತ್ತು ಉಚಿತ ಚಿಕಿತ್ಸೆಗಳು ಪ್ರಮುಖ ಕಾರ್ಯತಂತ್ರಗಳಾಗಿವೆ, ಏಕೆಂದರೆ ವಿಳಂಬವಾದ ಆರೈಕೆಯು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.
ನಿರ್ಮೂಲನೆಯ ಕಡೆಗೆ ಪ್ರಯತ್ನಗಳು
|
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಸ್ಥಳೀಯ ಅಗತ್ಯತೆಗಳು, ಆದ್ಯತೆಗಳು ಮತ್ತು ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ, ರಾಜ್ಯ/ಕೇಂದ್ರಾಡಳಿತ ಪ್ರದೇಶದ ನಿರ್ದಿಷ್ಟ ಕಾರ್ಯಕ್ರಮ ಅನುಷ್ಠಾನ ಯೋಜನೆಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಧಿಗಳನ್ನು ಹಂಚಲಾಗುತ್ತದೆ. ಬಹು-ಔಷಧ ಚಿಕಿತ್ಸೆಯ ಪರಿಚಯ, ಬಲವಾದ ರಾಜಕೀಯ ಬದ್ಧತೆ, ವಿಕೇಂದ್ರೀಕೃತ ಅನುಷ್ಠಾನ ಮತ್ತು ದೃಢವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ತಂತ್ರವು ಕುಷ್ಠರೋಗ ನಿಯಂತ್ರಣದಲ್ಲಿ ಅಗಾಧ ಯಶಸ್ಸನ್ನು ತಂದಿತು. 1981ರಲ್ಲಿ ಪ್ರತಿ 10,000 ಜನಸಂಖ್ಯೆಗೆ 57.2 ಇದ್ದ ಕುಷ್ಠರೋಗ ಹರಡುವಿಕೆಯ ದರವು ಮಾರ್ಚ್ 1984 ರ ವೇಳೆಗೆ 44.8ಕ್ಕೆ ಮತ್ತು ಮಾರ್ಚ್ 2004ರ ವೇಳೆಗೆ ಪ್ರತಿ 10,000 ಜನಸಂಖ್ಯೆಗೆ 2.4ಕ್ಕೆ ಇಳಿಯಿತು. 1981ರಲ್ಲಿ ಹೊಸ ರೋಗಿಗಳಲ್ಲಿ ಶ್ರೇಣಿ II ವಿಕಾರತೆಯ ದರವು ಶೇ. 20ರಷ್ಟಿತ್ತು; ಮತ್ತು 2004ರ ವೇಳೆಗೆ, ಅದು ಕೇವಲ ಶೇ. 1.5ಕ್ಕೆ ಇಳಿದಿತ್ತು.
ವಿಶ್ವ ಬ್ಯಾಂಕಿನ ಬೆಂಬಲವು ಎರಡು ಯೋಜನೆಗಳ ಮೂಲಕ (1993–2000 ಮತ್ತು 2001–2004) ಸಮುದಾಯದ ಭಾಗವಹಿಸುವಿಕೆಗೆ ಒತ್ತು ನೀಡಿತು ಮತ್ತು ಐಇಸಿ ನಾವೀನ್ಯತೆಗಳಿಗೆ ಹಣಕಾಸು ಒದಗಿಸಿತು. ಎನ್‌ಜಿಒಗಳು, ವಿಶ್ವ ಆರೋಗ್ಯ ಸಂಸ್ಥೆ, ಡಾನಿಡಾ ಮತ್ತು ಬಿಬಿಸಿ ಡಬ್ಲೂಎಸ್‍ಟಿ ಹಾಗೂ ಸೊಮ್ಯಾಕ್: ಲಿಂಟಾಸ್‌ನಂತಹ ಮಾಧ್ಯಮ ಸಂಸ್ಥೆಗಳೊಂದಿಗಿನ ಸಹಭಾಗಿತ್ವವು ತಲುಪುವಿಕೆಯನ್ನು ಮತ್ತು ಸಂದೇಶದ ಗುಣಮಟ್ಟವನ್ನು ಹೆಚ್ಚಿಸಿತು. ಮಹಿಳೆಯರು, ಬುಡಕಟ್ಟು ಜನಸಂಖ್ಯೆ ಮತ್ತು ನಗರದ ಬಡವರ ಮೇಲೆ ವಿಶೇಷ ಗಮನವನ್ನು ನೀಡಲಾಯಿತು, ಪ್ರವೇಶಕ್ಕೆ ಇರುವ ಅಡೆತಡೆಗಳು ಮತ್ತು ಕಳಂಕವನ್ನು ನಿಭಾಯಿಸಲಾಯಿತು. ಸಾಮಾನ್ಯ ಆರೋಗ್ಯ ವ್ಯವಸ್ಥೆಯೊಂದಿಗೆ ಏಕೀಕರಣವು ವ್ಯಾಪ್ತಿಯನ್ನು ವಿಸ್ತರಿಸಿತು, ಇದರಲ್ಲಿ ಸಹಾಯಕ ದಾದಿಯರು ಮತ್ತು ಸೂಲಗಿತ್ತಿಯರು ಮತ್ತು ಅಂಗನವಾಡಿ ಪ್ರಮುಖ ಪಾತ್ರ ವಹಿಸಿದರು.
ಮಾರ್ಚ್ 2004 ರಲ್ಲಿ, 17 ರಾಜ್ಯಗಳು ಮತ್ತು 250 ಜಿಲ್ಲೆಗಳು ಕುಷ್ಠರೋಗ ನಿರ್ಮೂಲನೆಯ ಗುರಿಯನ್ನು (ಪ್ರತಿ 10,000 ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಹರಡುವಿಕೆಯ ದರ ಎಂದು ವ್ಯಾಖ್ಯಾನಿಸಲಾಗಿದೆ) ಸಾಧಿಸಿದ್ದವು ಮತ್ತು 7 ರಾಜ್ಯಗಳು ಗುರಿಯ ಸನಿಹದಲ್ಲಿದ್ದವು. ಆರಂಭಿಕ ಕುಷ್ಠರೋಗ ಪ್ರಕರಣಗಳನ್ನು ಹುಡುಕುವ ದೃಢವಾದ ಅಭಿಯಾನಗಳೊಂದಿಗೆ, ಈ ರೂಪದ ರೋಗವನ್ನು ಪ್ರದರ್ಶಿಸುವ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಪ್ರಸ್ತುತ ವಿಶ್ವ ಬ್ಯಾಂಕ್ ಬೆಂಬಲಿತ ಯೋಜನೆಯ (2001-04) ಅಂತ್ಯದ ವೇಳೆಗೆ ವಿಕಾರತೆಯ ದರವನ್ನು ಶೇ. 2 ಕ್ಕಿಂತ ಕಡಿಮೆಗೆ ಇಳಿಸುವ ಗುರಿಯನ್ನು ಸಾಧಿಸಲಾಗಿತ್ತು. ಡಿಸೆಂಬರ್ 2005 ರ ವೇಳೆಗೆ ಭಾರತವು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆಯ ಗುರಿಯನ್ನು ಒಟ್ಟಾರೆಯಾಗಿ ಸಾಧಿಸಿತು. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಭಾರತದ ಕುಷ್ಠರೋಗ ಪ್ರತಿಕ್ರಿಯೆಯು ಇವುಗಳನ್ನು ಒಳಗೊಂಡಿದೆ:
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ (NLEP) ಅಡಿಯಲ್ಲಿ ಭಾರತದ ಕುಷ್ಠರೋಗ ಪ್ರತಿಕ್ರಿಯೆಗಳು:
- ಉಚಿತ ರೋಗನಿರ್ಣಯ, ಎಂಡಿಟಿ ಚಿಕಿತ್ಸೆ ಮತ್ತು ರೋಗನಿರೋಧಕ ಔಷಧೋಪಚಾರ:ಎಲ್ಲಾ ರೋಗಿಗಳಿಗೆ ಉಚಿತ ರೋಗನಿರ್ಣಯ ಮತ್ತು ಎಂಡಿಟಿ ಚಿಕಿತ್ಸೆ ಮತ್ತು ರೋಗಿಗಳ ಆರೋಗ್ಯವಂತ ಸಂಪರ್ಕಿತರಿಗೆ ಏಕ ಡೋಸ್ ರಿಫಾಂಪಿಸಿನ್ ಮೂಲಕ ಪೋಸ್ಟ್ ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ ನೀಡಲಾಗುತ್ತದೆ. 2025 ರಲ್ಲಿ, ಪಾಲಿಬ್ಯಾಸಿಲರಿ ಮತ್ತು ಮಲ್ಟಿಬ್ಯಾಸಿಲರಿ ಎರಡೂ ರೋಗಿಗಳಿಗೆ ತ್ರಿದಾತು ಔಷಧವನ್ನು ಪರಿಚಯಿಸಲಾಗಿದೆ.
- ಶೀಘ್ರ ಪ್ರಕರಣ ಪತ್ತೆ ಅಭಿಯಾನಗಳು
ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ:ಮನೆ-ಮನೆ ಸಮೀಕ್ಷೆಗಳು, ವಿಶೇಷವಾಗಿ ಹೆಚ್ಚು ಸ್ಥಳೀಯ ಪ್ರದೇಶಗಳಲ್ಲಿ
ಕೇಂದ್ರೀಕೃತ ಕುಷ್ಠರೋಗ ಅಭಿಯಾನ ದ್ವಿತೀಯ ಶ್ರೇಣಿಯ ಅಂಗವೈಕಲ್ಯ ಅಥವಾ ಮಕ್ಕಳ ಪ್ರಕರಣಗಳು ಪತ್ತೆಯಾದ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಉದ್ದೇಶಿತ ಸಮೀಕ್ಷೆ.
(iii) ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಮತ್ತು ಹೆಚ್ಚಿನ ಅಪಾಯದಲ್ಲಿರುವ ಜನಸಂಖ್ಯೆಗೆ ವಿಶೇಷ ಯೋಜನೆ
(iv) ಹೊಸದಾಗಿ ಪತ್ತೆಯಾದ ಪ್ರಕರಣಗಳ ಆರೋಗ್ಯವಂತ ಸಂಪರ್ಕಿತರ ಪರೀಕ್ಷೆ.
(v) ಕನಿಷ್ಠ ಕಳೆದ ಐದು ವರ್ಷಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದಿನ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಪರೀಕ್ಷೆ.
(vi) ಕಡಿಮೆ ಸ್ಥಳೀಯ ಪ್ರದೇಶಗಳಿಗೆ - ಆಶಾ ಆಧಾರಿತ ಸಮೀಕ್ಷೆ.
- ಅಂಗವೈಕಲ್ಯ ತಡೆಗಟ್ಟುವಿಕೆ, ವೈದ್ಯಕೀಯ ಪುನರ್ವಸತಿ ಮತ್ತು ಕಲ್ಯಾಣ ಬೆಂಬಲ: ಮೈಕ್ರೋ ಸೆಲ್ಯುಲಾರ್ ರಬ್ಬರ್ ಪಾದರಕ್ಷೆಗಳು, ಸ್ವ-ಆರೈಕೆ ಕಿಟ್‌ಗಳು, ಸ್ಪ್ಲಿಂಟ್‌ಗಳು, ಊರುಗೋಲುಗಳಂತಹ ಸಾಧನಗಳು ಮತ್ತು ಉಪಕರಣಗಳನ್ನು ಒದಗಿಸಲು ರೋಗಿಯ ಶಿಕ್ಷಣ ಮತ್ತು ಸಮಾಲೋಚನೆ, ಹುಣ್ಣುಗಳ ಮತ್ತು ಕುಷ್ಠರೋಗದ ಪ್ರತಿಕ್ರಿಯೆಗಳ ಪರಿಣಾಮಕಾರಿ ನಿರ್ವಹಣೆ, ಮತ್ತು ₹12,000 ನಷ್ಟದ ವೇತನಕ್ಕೆ ಪರಿಹಾರದೊಂದಿಗೆ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳನ್ನು ಈ ಸೇವೆಗಳು ಒಳಗೊಂಡಿವೆ.
- ಸಾಮರ್ಥ್ಯ ವೃದ್ಧಿ: ಸೇವಾ ಪೂರೈಕೆದಾರರ ತರಬೇತಿ - ವೈದ್ಯಾಧಿಕಾರಿಗಳು, ಪ್ರಯೋಗಾಲಯ ತಂತ್ರಜ್ಞರು, ಭೌತಚಿಕಿತ್ಸಕರು, ಆರೋಗ್ಯ ಮೇಲ್ವಿಚಾರಕರು, ಆರೋಗ್ಯ ಕಾರ್ಯಕರ್ತರು ಮತ್ತು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು.
- ಸ್ವಯಂಪ್ರೇರಿತ ವರದಿಯನ್ನು ಉತ್ತೇಜಿಸಲು ಮತ್ತು ಕಳಂಕ ಹಾಗೂ ತಾರತಮ್ಯವನ್ನು ನಿಲ್ಲಿಸಲು ಸಮುದಾಯ ಜಾಗೃತಿ: ಕಳಂಕವನ್ನು ಕಡಿಮೆ ಮಾಡಲು ಮತ್ತು ಆರಂಭಿಕ ರೋಗನಿರ್ಣಯವನ್ನು ಉತ್ತೇಜಿಸಲು ಪ್ರತಿ ವರ್ಷ ಕುಷ್ಠರೋಗ ವಿರೋಧಿ ದಿನದ ಸುತ್ತಮುತ್ತ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಮತ್ತು ಎಲ್‍ಸಿಡಿಸಿ ಅಭಿಯಾನದ ಭಾಗವಾಗಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.
- ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸುವುದು:ಕುಷ್ಠರೋಗದ ವಿರುದ್ಧದ ಎಲ್ಲಾ ಅಸ್ತಿತ್ವದಲ್ಲಿರುವ ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸಲು ಎನ್‍ಎಲ್‍ಇಪಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುತ್ತಿದೆ.
ಕುಷ್ಠರೋಗದ ವರ್ಧಿತ ಕಣ್ಗಾವಲು ಮತ್ತು ಅಧಿಸೂಚನೆ:
(i) 2025 ರಲ್ಲಿ ಎಲ್ಲಾ ಆರೋಗ್ಯ ವಲಯಗಳಿಂದ ಕುಷ್ಠರೋಗದ ಅಧಿಸೂಚನೆಯನ್ನು ಪರಿಚಯಿಸಲಾಗಿದೆ – ಸರ್ಕಾರಿ, ಖಾಸಗಿ, ಎನ್‌ಜಿಒಗಳು, ವೈದ್ಯಕೀಯ ಕಾಲೇಜುಗಳು ಇತ್ಯಾದಿ.
(ii) ಕುಷ್ಠರೋಗ ಶಂಕಿತರಿಗಾಗಿ ಆಶಾ ಆಧಾರಿತ ಕಣ್ಗಾವಲು ಮೂಲ ಮಟ್ಟದಲ್ಲಿ ಪ್ರಕರಣಗಳನ್ನು ಪತ್ತೆಹಚ್ಚುವುದನ್ನು ಬಲಪಡಿಸಿದೆ.
- ವರದಿ ಮಾಡುವ ವ್ಯವಸ್ಥೆಗಳ ಡಿಜಿಟಲೀಕರಣ: ರೋಗಿಯ ದಾಖಲೆಗಳು ಮತ್ತು ಔಷಧ ದಾಸ್ತಾನು ನಿರ್ವಹಣೆಗಾಗಿ ನಿಕುಷ್ಟ 2.0 ಎಂಬ ಡಿಜಿಟಲ್ ವರದಿ ಮಾಡುವ ವ್ಯವಸ್ಥೆಯನ್ನು 2023ರಲ್ಲಿ ಪರಿಚಯಿಸಲಾಗಿದೆ.
2015ರಿಂದ, ಎನ್‍ಎಲ್‍ಇಪಿ ಅಡಿಯಲ್ಲಿ ನಿರಂತರ ಪ್ರಯತ್ನಗಳು ಆರಂಭಿಕ ಹಸ್ತಕ್ಷೇಪ ಮತ್ತು ವಿಸ್ತೃತ ಕಣ್ಗಾವಲು ಕಾರ್ಯವಿಧಾನಗಳ ಮೂಲಕ ಅಂಗವೈಕಲ್ಯದ ಗಮನಾರ್ಹ ತಡೆಗಟ್ಟುವಿಕೆಗೆ ಕೊಡುಗೆ ನೀಡಿವೆ.

ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಮತ್ತು ಕುಷ್ಠರೋಗಕ್ಕಾಗಿ ಮಾರ್ಗಸೂಚಿ 2023-2027
|
ಕುಷ್ಠರೋಗ ನಿಯಂತ್ರಣದ ಪ್ರಯತ್ನಗಳನ್ನು ತ್ವರಿತಗೊಳಿಸಲು ಮತ್ತು ಕೋವಿಡ್ ಸಾಂಕ್ರಾಮಿಕದ ಪ್ರಭಾವವನ್ನು ನಿವಾರಿಸಲು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮವು ಹೊಸ ಕಾರ್ಯತಂತ್ರದ ದಾಖಲೆಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಈ ಕಾರ್ಯತಂತ್ರವು ಜಾಗತಿಕ ಕುಷ್ಠರೋಗ ಕಾರ್ಯತಂತ್ರ 2021-2030 ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯೊಂದಿಗೆ ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳು 2021-2030ಕ್ಕೆ ಜೋಡಿಸಲ್ಪಟ್ಟಿದೆ, ಇದರ ಗುರಿಯು 2030 ರೊಳಗೆ ಕುಷ್ಠರೋಗದ ಹರಡುವಿಕೆಯನ್ನು ತಡೆಯುವುದಾಗಿದೆ. ಹೆಚ್ಚು ಸ್ಥಳೀಯ ಜಿಲ್ಲೆಗಳಲ್ಲಿ ಪ್ರಕರಣ ಪತ್ತೆ ಚಟುವಟಿಕೆಗಳನ್ನು ತ್ವರಿತಗೊಳಿಸುವ ಮೂಲಕ ಮತ್ತು ಕಡಿಮೆ ಸ್ಥಳೀಯ ಜಿಲ್ಲೆಗಳಲ್ಲಿ ಬಲವಾದ ಕಣ್ಗಾವಲು ವ್ಯವಸ್ಥೆಯನ್ನು ನಿರ್ವಹಿಸುವ ಮೂಲಕ ಹರಡುವಿಕೆಯನ್ನು ತಡೆಯುವುದು ಮತ್ತು ಶೂನ್ಯ ಸ್ಥಳೀಯ ಪ್ರಕರಣಗಳನ್ನು ಸಾಧಿಸುವುದರ ಮೇಲೆ ಈ ಕಾರ್ಯತಂತ್ರವು ಗಮನಹರಿಸುತ್ತದೆ.
ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರಗಳು:
(i) ಉದ್ದೇಶಿತ ವಿಧಾನದ ಮೂಲಕ ಹೊಸ ಪ್ರಕರಣ ಪತ್ತೆಹಚ್ಚುವಿಕೆಯನ್ನು ತ್ವರಿತಗೊಳಿಸುವುದು; (ii) ತೀವ್ರಗೊಂಡ ಕಣ್ಗಾವಲು ವ್ಯವಸ್ಥೆಗಳು; (iii) ಡಿಜಿಟಲೀಕರಣ; (iv) ಆರಂಭಿಕ ರೋಗನಿರ್ಣಯಕ್ಕಾಗಿ ಸುಧಾರಿತ ಸಾಧನಗಳು ಮತ್ತು ತಂತ್ರಗಳನ್ನು ಪರಿಚಯಿಸುವುದು; (v) ಎಲ್ಲಾ ಪ್ರಕರಣಗಳ ಸಂಪರ್ಕಿತರಿಗೆ ತಕ್ಷಣವೇ ರಾಸಾಯನಿಕ ರೋಗನಿರೋಧಕ ಔಷಧೋಪಚಾರವನ್ನು ಒದಗಿಸುವುದು; (vi) ಸಂಭಾವ್ಯ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಪರಿಚಯಿಸುವುದು; (vii) ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ ಮತ್ತು ಔಷಧಗಳ ಪ್ರತಿಕೂಲ ಪ್ರತಿಕ್ರಿಯೆಗಳ ಕಣ್ಗಾವಲು ಪರಿಚಯಿಸುವುದು; (viii) ಚಿಕಿತ್ಸೆ ಪಡೆದ ಪ್ರಕರಣಗಳ ಚಿಕಿತ್ಸೆಯ ನಂತರದ ಕಣ್ಗಾವಲು ಮತ್ತು ಗುಣಮುಖರಾದ ನಂತರ ಅವರಿಗೆ ಆರೈಕೆ ಒದಗಿಸುವುದು; (ix) ಕುಷ್ಠರೋಗ ಪರಿಣತಿಯನ್ನು ನಿರ್ವಹಿಸುವುದು ಮತ್ತು ಬಹು-ರೋಗ ಸೇವಾ ಏಕೀಕರಣದ ಕಡೆಗೆ ಸಾಗುವುದು; (x) ಹೊಸ ಚಿಕಿತ್ಸಾ ಕ್ರಮಗಳನ್ನು ಪರಿಚಯಿಸುವ ಮೂಲಕ ಸುಧಾರಿತ ಚಿಕಿತ್ಸೆಯ ಫಲಿತಾಂಶಗಳು; ಮತ್ತು (xi) ಪರಿಣಾಮಕಾರಿ ವರ್ತನೆಯ ಬದಲಾವಣೆ ಸಂವಹನ ವಿಧಾನಗಳೊಂದಿಗೆ ವ್ಯಾಪಕ ಜಾಗೃತಿ.
ಇದಲ್ಲದೆ, ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಬಲಪಡಿಸುವುದು, ಹೆಚ್ಚಿನ ಪಾಲುದಾರರನ್ನು ಸೇರಿಸುವುದು ಮತ್ತು ಕುಷ್ಠರೋಗದ ವಿರುದ್ಧ ಅಸ್ತಿತ್ವದಲ್ಲಿರುವ ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸುವುದು ಸಹ ಅಗತ್ಯವಿದೆ. ಕುಷ್ಠರೋಗಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಮತ್ತು ಮಾರ್ಗಸೂಚಿ 2023-2027ರ ಅನುಷ್ಠಾನವು ಸತತವಾಗಿ ಕನಿಷ್ಠ ಐದು ವರ್ಷಗಳ ಕಾಲ ಶೂನ್ಯ ಹೊಸ ಮಕ್ಕಳ ಪ್ರಕರಣಗಳು ವರದಿಯಾಗುವ ಮೂಲಕ ಜಿಲ್ಲಾ ಮಟ್ಟದಲ್ಲಿ ಹರಡುವಿಕೆಯ ತಡೆ ಸಾಧಿಸುವ ಗುರಿಯನ್ನು ಹೊಂದಿದೆ. ಹರಡುವಿಕೆಯ ತಡೆಯನ್ನು ಸಾಧಿಸಿದ ನಂತರ, ಜಿಲ್ಲೆಗಳು ಸತತವಾಗಿ ಕನಿಷ್ಠ ಮೂರು ವರ್ಷಗಳ ಕಾಲ ಶೂನ್ಯ ಹೊಸ ಪ್ರಕರಣಗಳು ವರದಿಯಾಗುವ ಮೂಲಕ ರೋಗವಾಗಿ ಕುಷ್ಠರೋಗದ ನಿರ್ಮೂಲನೆಯನ್ನು ಸಾಧಿಸಲು ಮುಂದುವರಿಯುತ್ತವೆ. ಈ ಜಿಲ್ಲೆಗಳ ಪರಿಶೀಲನೆಗಾಗಿ ಜೊತೆಜೊತೆಯಾಗಿ ಅನುವರ್ತಿಸಲಾಗುತ್ತಿದೆ.

ಗುರಿಯನ್ನು ತಲುಪಲು "ಇಡೀ ಸರ್ಕಾರ" ಮತ್ತು "ಇಡೀ ಸಮಾಜ" ವಿಧಾನವನ್ನು ಡಿಜಿಟಲ್ ಕಣ್ಗಾವಲು ಪರಿಕರಗಳು ಮತ್ತು ಬಲವಾದ ಸಾಂಸ್ಥಿಕ ಸ್ಮರಣೆಯೊಂದಿಗೆ ಬಳಸಲಾಗುತ್ತಿದೆ.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಪ್ರಮುಖ ಉಪಕ್ರಮಗಳು
|
ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಮತ್ತು ಕುಷ್ಠರೋಗಕ್ಕಾಗಿ ಮಾರ್ಗಸೂಚಿ 2023-27:ಈ ಕಾರ್ಯತಂತ್ರದ ದಾಖಲೆ ಮತ್ತು ಮಾರ್ಗಸೂಚಿಯು ಕುಷ್ಠರೋಗ ನಿಯಂತ್ರಣಕ್ಕಾಗಿ ಕಾರ್ಯತಂತ್ರದ ಮಧ್ಯಸ್ಥಿಕೆಗಳನ್ನು ರೂಪಿಸುತ್ತದೆ ಮತ್ತು 2027 ರೊಳಗೆ ಕುಷ್ಠರೋಗದ ಹರಡುವಿಕೆಯನ್ನು ತಡೆಯುವ ಗುರಿಯನ್ನು ಸಾಧಿಸಲು ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ.
ರೋಗ ಹರಡುವಿಕೆಯ ಸರಪಳಿಯನ್ನು ತಡೆಯಲು, ಸಂಪರ್ಕ ಪತ್ತೆಹಚ್ಚುವಿಕೆ ಮಾಡಲಾಗುತ್ತದೆ ಮತ್ತು ಸೂಚ್ಯಂಕ ಪ್ರಕರಣದ ಅರ್ಹ ಸಂಪರ್ಕಿತರಿಗೆ ಪೋಸ್ಟ್ ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ ಅನ್ನು ನೀಡಲಾಗುತ್ತದೆ.
30 ವರ್ಷಕ್ಕಿಂತ ಮೇಲ್ಪಟ್ಟ ಜನರ ತಪಾಸಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯಅಡಿಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯ ಚಟುವಟಿಕೆಗಳೊಂದಿಗೆ ಕುಷ್ಠರೋಗ ತಪಾಸಣೆಯನ್ನು ಸಂಯೋಜಿಸಲಾಗಿದೆ.
ಮಕ್ಕಳ (0-18 ವರ್ಷ) ತಪಾಸಣೆಗಾಗಿ ರಾಷ್ಟ್ರೀಯ ಬಾಲ್ ಸ್ವಸ್ಥ್ಯ ಕಾರ್ಯಕ್ರಮ (RBSK) ಮತ್ತು ರಾಷ್ಟ್ರೀಯ ಕಿಶೋರ್ ಸ್ವಸ್ಥ್ಯ ಕಾರ್ಯಕ್ರಮ (RKSK)ಗಳೊಂದಿಗೆ ಕುಷ್ಠರೋಗ ತಪಾಸಣೆಯನ್ನು ಸಂಯೋಜಿಸಲಾಗಿದೆ.
ಅಂಗವೈಕಲ್ಯ ತಡೆಗಟ್ಟುವಿಕೆ ಮತ್ತು ವೈದ್ಯಕೀಯ ಪುನರ್ವಸತಿ ಅಡಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ, ಅವುಗಳೆಂದರೆ: ಪ್ರತಿಕ್ರಿಯೆ ನಿರ್ವಹಣೆ, ಮೈಕ್ರೋಸೆಲ್ಯುಲರ್ ರಬ್ಬರ್ ಪಾದರಕ್ಷೆಗಳು, ಸಾಧನಗಳು ಮತ್ತು ಉಪಕರಣಗಳು, ಸ್ವ-ಆರೈಕೆ ಕಿಟ್‌ಗಳ ವಿತರಣೆ ಇತ್ಯಾದಿ.
ನಿಕುಷ್ಟ 2.0 (Nikusth 2.0): ಕುಷ್ಠರೋಗ ರೋಗಿಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ಫಾಲೋ-ಅಪ್‌ಗೆ ಸಂಬಂಧಿಸಿದ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ದತ್ತಾಂಶ ದಾಖಲು, ವರದಿ ಮಾಡುವಿಕೆ ಮತ್ತು ಕುಷ್ಠರೋಗ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಹೊಸದಾಗಿ ಪರಿಷ್ಕರಿಸಿದ ವೆಬ್ ಆಧಾರಿತ ಐಸಿಟಿ ಪೋರ್ಟಲ್ ಅನ್ನು ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವರು 2023 ರ ಜನವರಿ 30 (ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನ) ರಂದು ಪ್ರಾರಂಭಿಸಿದರು.
ಪ್ರತಿರೋಧಕ ಕುಷ್ಠರೋಗ ಪ್ರಕರಣಗಳ ಕಣ್ಗಾವಲನ್ನು ಬಲಪಡಿಸಲು 2023 ರ ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನದಂದು **ಕುಷ್ಠರೋಗಕ್ಕಾಗಿ ರಾಷ್ಟ್ರೀಯ ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ ಕಣ್ಗಾವಲು ಮಾರ್ಗಸೂಚಿಗಳನ್ನು ಪ್ರಾರಂಭಿಸಲಾಯಿತು.
ಕುಷ್ಠರೋಗ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಆರೋಗ್ಯ ಸೇವೆಗಳ ಏಕೀಕರಣಕ್ಕಾಗಿ ರಾಷ್ಟ್ರೀಯ ಚೌಕಟ್ಟನ್ನು ರೂಪಿಸಲಾಗಿದೆ.
ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಳವಡಿಸಿಕೊಂಡಂತೆ, ಭಾರತದಲ್ಲಿ PB ಮತ್ತು MB ಪ್ರಕರಣಗಳಿಗೆ ಕುಷ್ಠರೋಗದ ಪರಿಷ್ಕೃತ ವರ್ಗೀಕರಣ ಮತ್ತು ಚಿಕಿತ್ಸಾ ಕ್ರಮವನ್ನು ಕೇಂದ್ರ ಕುಷ್ಠರೋಗ ವಿಭಾಗವು 2024 ರ ಜನವರಿ 17 ರಂದು ಪರಿಚಯಿಸಿದೆ ಮತ್ತು ಇದನ್ನು 2025 ರ ಏಪ್ರಿಲ್ 1 ರಿಂದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗುವುದು. ಕುಷ್ಠರೋಗ ರೋಗಿಗಳಿಗೆ ಈ ಚಿಕಿತ್ಸಾ ಕ್ರಮವು 2027 ರೊಳಗೆ ಭಾರತದಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ನಮ್ಮ ಸಾಮೂಹಿಕ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
ಪಿಎಂ-ಜನ್ಮನ್ (PM-JANMAN) ಅಡಿಯಲ್ಲಿ ತಮ್ಮ ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳನ್ನು ಹೊಂದಿರುವ ಬುಡಕಟ್ಟು ಕೋಶದಲ್ಲಿ ಪಟ್ಟಿ ಮಾಡಲಾದ ಒಟ್ಟು 17 ರಾಜ್ಯಗಳಿಗಾಗಿ, ನಿಕುಷ್ಟ 2.0 ಪೋರ್ಟಲ್ ನಲ್ಲಿ PVTGs ಗಾಗಿ ಟ್ಯಾಗಿಂಗ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ.
ಕುಷ್ಠರೋಗದ ಅಧಿಸೂಚನೆ ಕುರಿತು ಸಚಿವಾಲಯದಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
ಪ್ರತಿ 10,000 ಜನಸಂಖ್ಯೆಗೆ 1 ಕ್ಕಿಂತ ಹೆಚ್ಚು ಹರಡುವಿಕೆಯ ದರವನ್ನು ಹೊಂದಿರುವ 121 ಜಿಲ್ಲೆಗಳಿಗೆ ವಿಶೇಷ ಮೇಲ್ವಿಚಾರಣೆ ಚೌಕಟ್ಟನ್ನು ರೂಪಿಸಲಾಗಿದೆ.
ಹೆಚ್ಚಿನ ಮಕ್ಕಳ ಪ್ರಕರಣಗಳು ಮತ್ತು ಅಂಗವೈಕಲ್ಯಗಳನ್ನು ಹೊಂದಿರುವ ಜಿಲ್ಲೆಗಳಿಗೆ ಕೇಂದ್ರೀಕೃತ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.
ಎನ್ಎಲ್ಇಪಿ ಅಡಿಯಲ್ಲಿ ಪ್ರಮುಖ ಸಾಧನೆಗಳು ಮತ್ತು ಕಾರ್ಯಕ್ರಮದ ಫಲಿತಾಂಶಗಳು
|

ಭಾರತವು ಮಾರ್ಚ್ 2005ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಿರ್ಮೂಲನಾ ಸ್ಥಾನಮಾನವನ್ನು ಸಾಧಿಸಿತು, ಅಂದರೆ ಜನಸಂಖ್ಯೆಯ ಪ್ರತಿ 10,000 ಕ್ಕೆ <1 ರಷ್ಟು ಹರಡುವಿಕೆ ದರ. ಇಲ್ಲಿಯವರೆಗೆ ಈ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಅಂದಿನಿಂದ, ಈ ಕಾರ್ಯಕ್ರಮವು ಉಪ-ರಾಷ್ಟ್ರೀಯ ಮಟ್ಟದಲ್ಲಿ ಈ ಗುರಿಯನ್ನು ಸಾಧಿಸುವ ಕಡೆಗೆ ಕಾರ್ಯನಿರ್ವಹಿಸುತ್ತಿದೆ.
ಮಾರ್ಚ್ 2025 ರ ಹೊತ್ತಿಗೆ, 31 ರಾಜ್ಯಗಳು ಮತ್ತು 638 ಜಿಲ್ಲೆಗಳು ಪ್ರತಿ 10,000 ಜನಸಂಖ್ಯೆಗೆ <1 ರಷ್ಟು ಹರಡುವಿಕೆ ದರವನ್ನು ಸಾಧಿಸಿವೆ.
ವರ್ಷಗಳಲ್ಲಿ, ಭಾರತದ ಕುಷ್ಠರೋಗ ಹರಡುವಿಕೆ ದರವು 1981ರಲ್ಲಿ ಪ್ರತಿ 10,000 ಕ್ಕೆ 57.2 ರಿಂದ ಮತ್ತು 2014-15ರಲ್ಲಿ ಪ್ರತಿ 10,000ಕ್ಕೆ 0.69 ರಿಂದ 2024-25ರಲ್ಲಿ 0.57ಕ್ಕೆ ಇಳಿದಿದೆ.
ಹೊಸ ಪ್ರಕರಣ ಪತ್ತೆ ದರವು ಸಹ 2014-15ರಲ್ಲಿ ಪ್ರತಿ 100,000 ಕ್ಕೆ 9.73 ರಿಂದ 2024-25ರಲ್ಲಿ ಪ್ರತಿ 100,000ಕ್ಕೆ 7.0 ಕ್ಕೆ ಇಳಿದಿದೆ.
ಪತ್ತೆಯಾದ ಹೊಸ ಪ್ರಕರಣಗಳಲ್ಲಿನ ಮಕ್ಕಳ ಪ್ರಕರಣಗಳ ಶೇಕಡಾವಾರು ಪ್ರಮಾಣವು 2014-15ರಲ್ಲಿ ಶೇ. 9.04 ರಿಂದ 2024-25 ರಲ್ಲಿ ಶೇ. 4.68 ಕ್ಕೆ ಕ್ರಮೇಣವಾಗಿ ಕಡಿಮೆಯಾಗಿದೆ. ಇದು ಸಮುದಾಯದಲ್ಲಿ ಸಕ್ರಿಯ ಕುಷ್ಠರೋಗದ ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿನ ಕಾರ್ಯಕ್ರಮದ ಪ್ರಯತ್ನಗಳನ್ನು ಸೂಚಿಸುತ್ತದೆ.
ಪ್ರತಿ ಮಿಲಿಯನ್ ಜನಸಂಖ್ಯೆಗೆ ಶ್ರೇಣಿ 2 ಅಂಗವೈಕಲ್ಯದ ಪ್ರಮಾಣವು ಸಹ 2014-15 ರಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 4.68 ಪ್ರಕರಣಗಳಿಂದ 2024-25 ರಲ್ಲಿ 1.88 ಪ್ರಕರಣಗಳಿಗೆ ಇಳಿಕೆಯಾಗಿದೆ. ಇದು ಸಂಭಾವ್ಯ ಗುಪ್ತ ಪ್ರಕರಣಗಳನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ರೋಗ ಹರಡುವಿಕೆಯ ಸರಪಳಿಯನ್ನು ತಡೆಯುವ ಸಲುವಾಗಿ, ಕುಷ್ಠರೋಗ ಪ್ರಕರಣಗಳ ಆರೋಗ್ಯವಂತ ಸಂಪರ್ಕಿತರಿಗೆ ಏಕ ಡೋಸ್ ರಿಫಾಂಪಿಸಿನ್ ನೊಂದಿಗೆ ಪೋಸ್ಟ್ ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ ಎಂಬ ತಡೆಗಟ್ಟುವ ಕ್ರಮವನ್ನು ನೀಡಲಾಗುತ್ತದೆ. ಅರ್ಹ ಸಂಪರ್ಕಿತರಿಗೆ ನೀಡಲಾದ ಪ್ರಮಾಣವು 2019-20ರಲ್ಲಿ ಶೇ. 71 ರಿಂದ 2024-25ರಲ್ಲಿ ಶೇ. 92ಕ್ಕೆ ಹೆಚ್ಚಿದೆ.
ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ಅನುಕೂಲವಾಗುವಂತೆ, ಹೆಚ್ಚು ಸ್ಥಳೀಯ ರಾಜ್ಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಎಲ್‌ಸಿಡಿಸಿಯಂತಹ ತೀವ್ರಗೊಳಿಸಿದ ಪ್ರಕರಣ ಹುಡುಕಾಟ ಚಟುವಟಿಕೆಗಳನ್ನು ನಡೆಸಲಾಗಿದೆ. ಹಣಕಾಸು ವರ್ಷ 2024-25 ರಲ್ಲಿ, ಎಲ್‌ಸಿಡಿಸಿ ಮೂಲಕ ಒಟ್ಟು 27,428 ಹೊಸ ಪ್ರಕರಣಗಳು ದೃಢಪಟ್ಟಿವೆ.
ರಾಷ್ಟ್ರೀಯ ಬಾಲ್ ಸ್ವಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಕಿಶೋರ್ ಸ್ವಸ್ಥ್ಯ ಕಾರ್ಯಕ್ರಮ, ಮತ್ತು ಆಯುಷ್ಮಾನ್ ಭಾರತ್ ನೊಂದಿಗೆ ವರ್ಧಿತ ಏಕೀಕರಣವು ಎಲ್ಲಾ ವಯೋಮಾನದ ಗುಂಪುಗಳ ತಪಾಸಣೆಯನ್ನು ಖಚಿತಪಡಿಸುತ್ತದೆ.
ಮಾರ್ಚ್ 2025ರ ವೇಳೆಗೆ ರಾಜ್ಯವಾರು ಎನ್‍ಎಲ್‍ಇಪಿ ಹರಡುವಿಕೆಯ ದರಗಳು ಪ್ರತಿ 10000 ಜನಸಂಖ್ಯೆಗೆ
ರಾಜ್ಯ/ಕೇಂ.ಪ್ರ
|
ಪಿಆರ್/10000
|
ರಾಜ್ಯ/ಕೇಂ.ಪ್ರ
|
ಪಿಆರ್/10000
|
ಆಂಧ್ರಪ್ರದೇಶ
|
0.46
|
ನಾಗಾಲ್ಯಾಂಡ್
|
0.11
|
ಅರುಣಾಚಲ ಪ್ರದೇಶ
|
0.15
|
ಒಡಿಶಾ
|
1.37
|
ಅಸ್ಸಾಂ
|
0.26
|
ಪಂಜಾಬ್
|
0.14
|
ಬಿಹಾರ
|
0.85
|
ರಾಜಸ್ಥಾನ
|
0.14
|
ಛತ್ತೀಸ್‍ಗಢ್
|
1.80
|
ಸಿಕ್ಕಿಂ
|
0.17
|
ಗೋವಾ
|
0.45
|
ತಮಿಳುನಾಡು
|
0.26
|
ಗುಜರಾತ್
|
0.38
|
ತೆಲಂಗಾಣ
|
0.46
|
ಹರಿಯಾಣ
|
0.13
|
ತ್ರಿಪುರಾ
|
0.02
|
ಹಿಮಾಚಲ ಪ್ರದೇಶ
|
0.14
|
ಉತ್ತರ ಪ್ರದೇಶ
|
0.37
|
ಜಾರ್ಖಂಡ್
|
1.46
|
ಉತ್ತರಾಖಂಡ
|
0.22
|
ಜಮ್ಮು & ಕಾಶ್ಮೀರ
|
0.07
|
ಪಶ್ಚಿಮ ಬಂಗಾಲ
|
0.46
|
ಕರ್ನಾಟಕ
|
0.27
|
ಅಂಡಮಾನ್ & ನಿಕೋಬಾರ್ ದ್ವೀಪಗಳು
|
0.19
|
ಕೇರಳ
|
0.11
|
ಚಂಡೀಗಢ್
|
1.35
|
ಮಧ್ಯ ಪ್ರದೇಶ
|
0.82
|
ಡಿಡಿ & ಡಿಎನ್‍ಎಚ್
|
0.63
|
ಮಹಾರಾಷ್ಟ್ರ
|
1.12
|
ದೆಹಲಿ
|
0.71
|
ಮಣಿಪುರ
|
0.05
|
ಲಕ್ಷದ್ವೀಪ
|
0.14
|
ಮೇಘಾಲಯ
|
0.03
|
ಲಡಾಖ್
|
0.33
|
ಮಿಝೋರಾಂ
|
0.10
|
ಪಾಂಡಿಚೇರಿ
|
0.11
|
ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಸಹಭಾಗಿತ್ವಗಳು
|
ಉಚಿತ ಬಹು-ಔಷಧ ಚಿಕಿತ್ಸೆ ಔಷಧಗಳ ಪೂರೈಕೆ, ತಾಂತ್ರಿಕ ಬೆಂಬಲ, ಸ್ವತಂತ್ರ ಕಾರ್ಯಕ್ರಮ ಮೌಲ್ಯಮಾಪನ, ಸಾಮರ್ಥ್ಯ ವೃದ್ಧಿ, ಮತ್ತು ಕಾರ್ಯಕ್ರಮದ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸಹಕರಿಸಿದೆ. ವಿಶ್ವ ಆರೋಗ್ಯ ಸಭೆಯ ಬದ್ಧತೆಯ (World Health Assembly Commitment - 1991) ಅಡಿಯಲ್ಲಿ, 2000ರ ವೇಳೆಗೆ ಕುಷ್ಠರೋಗವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಭೆಯ ಗುರಿಗೆ ಭಾರತ ಬದ್ಧವಾಗಿತ್ತು. ರಾಷ್ಟ್ರೀಯ ಗುರಿಯನ್ನು 2005ರವರೆಗೆ ವಿಸ್ತರಿಸಲಾಗಿದ್ದರೂ, ಭಾರತವು ಗಮನಾರ್ಹ ಪ್ರಗತಿ ಸಾಧಿಸಿತು, 2004 ರ ವೇಳೆಗೆ 17 ರಾಜ್ಯಗಳು ಮತ್ತು 250 ಜಿಲ್ಲೆಗಳು ನಿರ್ಮೂಲನೆಯನ್ನು ಸಾಧಿಸಿದವು.
ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಪರಿಷ್ಕೃತ ಕುಷ್ಠರೋಗ ನಿರ್ಮೂಲನಾ ಅಭಿಯಾನಗಳು, ರೋಗನಿರ್ಣಯ ಪ್ರೋಟೋಕಾಲ್ ಬದಲಾವಣೆಗಳು, ಮತ್ತು ತಲುಪಲು ಕಷ್ಟಕರವಾದ ಜನಸಂಖ್ಯೆಗಾಗಿ ವಿಶೇಷ ಕ್ರಿಯಾ ಯೋಜನೆಗಳನ್ನು ಬೆಂಬಲಿಸಿತು. ಇದು ಬಿಹಾರದಲ್ಲಿ COMBI (Communication for Behavioural Impact) ಕಾರ್ಯತಂತ್ರದ ಪ್ರಾಯೋಗಿಕ ಪರೀಕ್ಷೆಯನ್ನು ಸಹ ನಡೆಸಿತು.
ಭಾರತವು ಜಾಗತಿಕ ಕುಷ್ಠರೋಗ ಕಾರ್ಯತಂತ್ರಗಳು ಮತ್ತು ಜಾಗತಿಕ ತಾಂತ್ರಿಕ ಮಾರ್ಗದರ್ಶನ ದಾಖಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. 2006 ರಿಂದ ಜಾಗೃತಿ ಮೂಡಿಸಲು ಮತ್ತು ಕುಷ್ಠರೋಗದಿಂದ ಬಾಧಿತರಾದ ವ್ಯಕ್ತಿಗಳು ಮುಂದುವರಿಸಿಕೊಂಡು ಹೋಗುತ್ತಿರುವ ಅನ್ಯಾಯದ ತಾರತಮ್ಯವನ್ನು ಕೊನೆಗೊಳಿಸಲು ವಾರ್ಷಿಕ ಸಂದೇಶವನ್ನು ಹಂಚಿಕೊಳ್ಳುವ ದಿ ಗ್ಲೋಬಲ್ ಅಪೀಲ್‌ನ ಭಾಗವಾಗಿದೆ. ಉಪೇಕ್ಷಿತ ಉಷ್ಣವಲಯದ ಕಾಯಿಲೆಗಳ ನಿಯಂತ್ರಣ ಮತ್ತು ನಿರ್ಮೂಲನೆಯ ಅಡಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇಂಡಿಯಾ ದೇಶ ಸಹಕಾರ ಕಾರ್ಯತಂತ್ರದಲ್ಲಿ, ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಬೆಂಬಲಕ್ಕಾಗಿ ಕುಷ್ಠರೋಗವು ಒಂದು ಆದ್ಯತೆಯ ಕ್ಷೇತ್ರವಾಗಿ ಉಳಿದಿದೆ. ಇದು ಕಣ್ಗಾವಲು ಮತ್ತು ಪ್ರಕರಣ ಪತ್ತೆಯನ್ನು ಬಲಪಡಿಸುವುದು, ಪೋಸ್ಟ್-ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ ಅನ್ನು ಬೆಂಬಲಿಸುವುದು, ಕಳಂಕ ಮತ್ತು ತಾರತಮ್ಯವನ್ನು ಕಡಿಮೆ ಮಾಡುವುದು ಮತ್ತು ಚಿಕಿತ್ಸೆ ಹಾಗೂ ಪುನರ್ವಸತಿಗೆ ಪ್ರವೇಶವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ. 2006 ರ ಸಾಪ್ತಾಹಿಕ ಸಾಂಕ್ರಾಮಿಕ ರೋಗ ವರದಿಯ ಜಾಗತಿಕ ಕುಷ್ಠರೋಗ ಪರಿಸ್ಥಿತಿಯಲ್ಲಿ, ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕುಷ್ಠರೋಗವನ್ನು ನಿರ್ಮೂಲನೆ ಮಾಡದ ದೇಶಗಳ ಪಟ್ಟಿಯಿಂದ ಭಾರತವನ್ನು ಕೈಬಿಡಲಾಯಿತು.
2023ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಕುಷ್ಠರೋಗವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ನಿರ್ಮೂಲನೆ ಮಾಡುವ ಭಾರತದ 2005ರ ಮೈಲಿಗಲ್ಲನ್ನು ಒಪ್ಪಿಕೊಂಡಿತು, ಇದು ರೋಗ ನಿಯಂತ್ರಣದಲ್ಲಿ ದೇಶದ ಪ್ರಗತಿಯನ್ನು ಒತ್ತಿಹೇಳುತ್ತದೆ. ಹೆಚ್ಚುವರಿಯಾಗಿ, ಭಾರತವು ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ಕುಷ್ಠರೋಗ ವಿರೋಧಿ ಸಂಸ್ಥೆಗಳ ಒಕ್ಕೂಟ ಮತ್ತು ಭಾರತದ ಕುಷ್ಠರೋಗ ನಿರ್ಮೂಲನಾ ಉಪಕ್ರಮಗಳನ್ನು ಬಲಪಡಿಸಲು ತಾಂತ್ರಿಕ ಪರಿಣತಿ ಮತ್ತು ಆರ್ಥಿಕ ಸಹಾಯ ಎರಡನ್ನೂ ನೀಡುವ ವಿವಿಧ ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಜಾಗತಿಕ ಪಾಲುದಾರರೊಂದಿಗೆ ಸಕ್ರಿಯವಾಗಿ ಸಹಕರಿಸುವುದನ್ನು ಮುಂದುವರೆಸಿದೆ. ಐಎಲ್‍ಇಪಿ ಮತ್ತು ಇತರ ಪಾಲುದಾರ ಎನ್‌ಜಿಒಗಳು: ಎನ್‍ಎಲ್‍ಇಪಿಯು ಐಎಲ್‍ಇಪಿ ಸಂಸ್ಥೆಗಳು, ಸಸಕಾವಾ ಆರೋಗ್ಯ ಪ್ರತಿಷ್ಠಾನ, ವಿಶ್ವ ಬ್ಯಾಂಕ್, ಜೀರೋ ಕುಷ್ಠರೋಗಕ್ಕಾಗಿ ಜಾಗತಿಕ ಸಹಭಾಗಿತ್ವ, ಹಿಂದ್ ಕುಷ್ಠ ನಿವಾರಣಾ ಸಂಘ ಮತ್ತು ಅಲರ್ಟ್ ಇಂಡಿಯಾ, ಐಎಲ್, ಐಎಡಿವಿಎಲ್, ಬಿಎಲ್‍ಪಿ, ಶೀಫೆಲಿನ್ ಇನ್ಸ್ಟಿಟ್ಯೂಟ್ ಕರಿಗಿರಿ, ಅಂತಾರರಾಷ್ಟ್ರೀಯ ಕುಷ್ಠರೋಗ ಒಕ್ಕೂಟ ಮುಂತಾದ ಇತರ NGO ಪಾಲುದಾರರೊಂದಿಗೆ ಸಮುದಾಯದ ಅರಿವು ಮತ್ತು ಗುಣಮಟ್ಟದ ರೋಗನಿರ್ಣಯ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಸುಧಾರಿಸಲು ಸಹ ಸಹಕರಿಸಿದೆ. ಕುಷ್ಠರೋಗವನ್ನು ಎದುರಿಸುವಲ್ಲಿ ಭಾರತದ ಪ್ರಯತ್ನಗಳು ಗಣನೀಯ ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಬೆಂಬಲವನ್ನು ಪಡೆದಿವೆ.
ಕುಷ್ಠರೋಗ ನಿಯಂತ್ರಣದಲ್ಲಿ ಭಾರತದ ಪ್ರಯಾಣವು ಯಶಸ್ವಿ ರೋಗ ನಿಯಂತ್ರಣದ ಗಮನಾರ್ಹ ಕಥೆಯಾಗಿದೆ. 1981 ರಲ್ಲಿ ಪ್ರತಿ 10,000 ಜನಸಂಖ್ಯೆಗೆ 57.2 ಹರಡುವಿಕೆಯ ದರ ಮತ್ತು 39.19 ಲಕ್ಷ ರೋಗಿಗಳು ಚಿಕಿತ್ಸೆಯಲ್ಲಿದ್ದ ಸ್ಥಳದಿಂದ, ಭಾರತದಲ್ಲಿ 2025 ರ ವೇಳೆಗೆ ಹರಡುವಿಕೆಯ ದರವು 0.57 ಮತ್ತು ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ 0.82 ಲಕ್ಷ ಆಗಿದೆ. ಇದು 44 ವರ್ಷಗಳ ಅವಧಿಯಲ್ಲಿ ಹರಡುವಿಕೆ ದರದಲ್ಲಿ ಶೇ. 99 ರಷ್ಟು ಇಳಿಕೆ ಮತ್ತು ಚಿಕಿತ್ಸೆಯಲ್ಲಿರುವ ಪ್ರಕರಣಗಳಲ್ಲಿ ಶೇ. 98 ರಷ್ಟು ಇಳಿಕೆಯನ್ನು ಚಿತ್ರಿಸುತ್ತದೆ. ವಾರ್ಷಿಕ ವರದಿಯು ಪ್ರತಿ 10,000 ಕ್ಕೆ 1 ಕ್ಕಿಂತ ಕಡಿಮೆ (0.84) ಹರಡುವಿಕೆ ದರವನ್ನು ದೃಢಪಡಿಸಿದ ಮಾರ್ಚ್ 2006 ರಿಂದ ಹೊಸ ಪ್ರಕರಣ ಪತ್ತೆಹಚ್ಚುವಿಕೆಯಲ್ಲಿ ಶೇ. 37 ರಷ್ಟು ಇಳಿಕೆ ಕಂಡುಬಂದಿದೆ.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮವು ರಾಜಕೀಯ ಇಚ್ಛಾಶಕ್ತಿ, ಬದ್ಧತೆ, ಹೊಸ ಪ್ರಕರಣ ಪತ್ತೆಹಚ್ಚುವಿಕೆಗೆ ನಿರಂತರ ಪ್ರಯತ್ನಗಳು, ಎಂಡಿಟಿ ಔಷಧಿಗಳ ಉಚಿತ ಮತ್ತು ನಿರಂತರ ಪೂರೈಕೆ, ಪಾಲುದಾರರ ಬೆಂಬಲ, ಲಂಬದಿಂದ ಏಕೀಕೃತ ಸೇವಾ ವಿತರಣಾ ಕಾರ್ಯತಂತ್ರಕ್ಕೆ ಪರಿವರ್ತನೆ, ಜಾಗತಿಕ ಮಾರ್ಗದರ್ಶನದ ಸಮಯೋಚಿತ ಅಳವಡಿಕೆ, ಪರಿಷ್ಕೃತ ಚಿಕಿತ್ಸಾ ಕ್ರಮಗಳ ಸಮಯೋಚಿತ ಪರಿಚಯ, ಸೋಂಕಿನ ನಂತರದ ರೋಗನಿರೋಧಕ ಔಷಧೋಪಚಾರ, ನಾವೀನ್ಯತೆಗಳು ಮತ್ತು ವಿಸ್ತರಿಸಿದ ಸಮುದಾಯ ಸಹಭಾಗಿತ್ವದಲ್ಲಿ ಬೇರೂರಿರುವ ಒಂದು ಸಾರ್ವಜನಿಕ ಆರೋಗ್ಯ ಯಶಸ್ಸನ್ನು ಪ್ರದರ್ಶಿಸುತ್ತದೆ. ಆದಾಗ್ಯೂ, ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ನಿರ್ಮೂಲನೆ ಎಂದರೆ ಸಂಪೂರ್ಣ ನಿರ್ಮೂಲನೆ ಎಂದಲ್ಲ. ಕುಷ್ಠರೋಗದ ಹೊಸ ಪ್ರಕರಣಗಳು ಮುಂದುವರಿಯುತ್ತವೆ ಮತ್ತು ಅಂಗವೈಕಲ್ಯಗಳ ಬೆಳವಣಿಗೆಯನ್ನು ತಡೆಯಲು ಮತ್ತು ಹರಡುವಿಕೆಯ ಸರಪಳಿಯನ್ನು ತಡೆಯಲು, ಯಾವುದೇ ಹೊಸ ಸೋಂಕುಗಳು ಮತ್ತು ಮಕ್ಕಳಲ್ಲಿ ಕುಷ್ಠರೋಗ ಇಲ್ಲದಂತೆ ಮಾಡಲು ಪ್ರಕರಣಗಳನ್ನು ಬೇಗನೆ ಪತ್ತೆಹಚ್ಚುವುದು ಇದರ ಗುರಿಯಾಗಿದೆ.
ಇದನ್ನು ಅರಿತುಕೊಂಡು, ಸರ್ಕಾರವು ನಿರಂತರ ಕಣ್ಗಾವಲು, ನವೀಕೃತ ಜಾಗೃತಿ ಉಪಕ್ರಮಗಳು ಮತ್ತು ವರ್ಧಿತ ಸಮುದಾಯ ವ್ಯಾಪ್ತಿಯ ಮೂಲಕ ಉಳಿದಿರುವ ಸವಾಲುಗಳನ್ನು ಸಕ್ರಿಯವಾಗಿ ನಿಭಾಯಿಸುತ್ತಿದೆ. ತರಬೇತಿ ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸಲು ಮತ್ತು ಆರಂಭಿಕ ಪತ್ತೆಯನ್ನು ಸುಧಾರಿಸಲು, ವಿಶೇಷವಾಗಿ ಗ್ರಾಮೀಣ, ಬುಡಕಟ್ಟು ಮತ್ತು ಕಡಿಮೆ ಸೇವೆ ಹೊಂದಿರುವ ಜನಸಂಖ್ಯೆಯಲ್ಲಿ, ಯಾವುದೇ ಪ್ರಕರಣ ವರದಿಯಾಗದೆ ಅಥವಾ ಚಿಕಿತ್ಸೆ ಪಡೆಯದೆ ಉಳಿಯದಂತೆ ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.
ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸಲು, ಸಮುದಾಯದ ಸಹಭಾಗಿತ್ವವನ್ನು ವಿಸ್ತರಿಸಲು ಮತ್ತು ಕುಷ್ಠರೋಗ ಆರೈಕೆಯನ್ನು ಸಾಮಾನ್ಯ ಆರೋಗ್ಯ ಸೇವೆಗಳಲ್ಲಿ ಸಂಯೋಜಿಸಲು ನಡೆಯುತ್ತಿರುವ ಪ್ರಯತ್ನಗಳೊಂದಿಗೆ, ಭಾರತವು ಕುಷ್ಠರೋಗ ಮುಕ್ತ ಭವಿಷ್ಯಕ್ಕಾಗಿ ತನ್ನ ಬದ್ಧತೆಯನ್ನು ಬಲಪಡಿಸುತ್ತಿದೆ. ನಿಕುಷ್ಟ 2.0 ನಂತಹ ತಾಂತ್ರಿಕ ಸಾಧನಗಳು, ಬಲವಾದ ನೀತಿ ಬೆಂಬಲ, ಸೋಂಕಿನ ನಂತರದ ರೋಗನಿರೋಧಕ ಔಷಧೋಪಚಾರ ಮತ್ತು ಹೆಚ್ಚಿದ ಸಮುದಾಯದ ಭಾಗವಹಿಸುವಿಕೆ ಹಾಗೂ ಸ್ವಯಂ-ವರದಿಯೊಂದಿಗೆ ಸೇರಿವೆ. ಕುಷ್ಠರೋಗಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಮತ್ತು ಮಾರ್ಗಸೂಚಿಯು, ತ್ವರಿತ ಪ್ರಕರಣ ಪತ್ತೆ, ಡಿಜಿಟಲ್ ಕಣ್ಗಾವಲು, ಸುಧಾರಿತ ಚಿಕಿತ್ಸೆ, ತಡೆಗಟ್ಟುವ ಕಾರ್ಯತಂತ್ರಗಳು ಮತ್ತು ಬಲವಾದ ಸಹಭಾಗಿತ್ವಗಳ ಮೂಲಕ 2030 ರೊಳಗೆ ಹರಡುವಿಕೆಯನ್ನು ತಡೆಯುವ ಜಾಗತಿಕ ಗುರಿಗಳಿಗೆ ಅನುಗುಣವಾಗಿ ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ, ಅಂತಿಮವಾಗಿ ಭಾರತದಲ್ಲಿ ಕುಷ್ಠರೋಗದ ನಿರ್ಮೂಲನೆಯನ್ನು ಗುರಿಯಾಗಿರಿಸಿಕೊಂಡಿದೆ. ಭಾರತವು ಶೂನ್ಯ ಪ್ರಸರಣದ ಗುರಿಯನ್ನು ಸಮೀಪಿಸುತ್ತಿರುವಾಗ, ನಿರಂತರ ರಾಜಕೀಯ ಇಚ್ಛಾಶಕ್ತಿ, ಸಾಕಷ್ಟು ನಿಧಿ ಮತ್ತು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆ ಮುಖ್ಯವಾಗಲಿದೆ. ಇವುಗಳನ್ನು ಜಾರಿಗೆ ತಂದರೆ, ದೇಶವು ಕೇವಲ ವೈದ್ಯಕೀಯ ಮೈಲಿಗಲ್ಲನ್ನು ಮಾತ್ರವಲ್ಲದೆ, ಶಾಶ್ವತ ಮಾನವೀಯ ಸಾಧನೆಯನ್ನು ಸಾಧಿಸಲು ಉತ್ತಮ ಸ್ಥಾನದಲ್ಲಿದೆ.
Ministry of Health and Family Welfare
https://dghs.mohfw.gov.in/nlep.php
https://dghs.mohfw.gov.in/nlep.php
https://nhm.gov.in/index4.php?lang=1&level=0&linkid=281&lid=348
https://nlrindia.org/wp-content/uploads/2024/03/NSP-Roadmap-for-Leprosy-2023-2027.pdf
Press Information Bureau
https://www.pib.gov.in/PressReleasePage.aspx?PRID=1738154
World Health Oganization
https://www.who.int/activities/monitoring-the-global-leprosy-situation
Other Links
https://documents1.worldbank.org/curated/en/428771468033300814/pdf/320410MukherjiLeprosyFinal.pdf
https://www.who.int/publications/i/item/who-wer8132
Click here to see PDF
*****
(Backgrounder ID: 155396)
Visitor Counter : 13
Provide suggestions / comments