Farmer's Welfare
ಎಲ್ಲಿ ಅಣಬೆಗಳು ಬೇರೂರುತ್ತವೆಯೋ, ಅಲ್ಲಿ ಜೀವನೋಪಾಯಗಳು ರೂಪುಗೊಳ್ಳುತ್ತವೆ
Posted On:
10 NOV 2026 10:25AM
ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಆಸಕ್ತಿ ಹೆಚ್ಚುತ್ತಿರುವ ಈ ದಿನಗಳಲ್ಲಿ, ಭಾರತದ ತೋಟಗಾರಿಕಾ ಕ್ಷೇತ್ರದಲ್ಲಿ ಅಣಬೆ ಬೇಸಾಯವು ಪ್ರಮುಖ ಸ್ಥಾನ ಪಡೆಯುತ್ತಿದ್ದು, ಮುಂದಿನ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಅಣಬೆಗಳು ತಮ್ಮ ಪೌಷ್ಟಿಕಾಂಶದ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ; ಇವುಗಳಲ್ಲಿ ಸಾಮಾನ್ಯವಾಗಿ ಕ್ಯಾಲೊರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳು ಕಡಿಮೆಯಿದ್ದು, ಪ್ರೋಟೀನ್, ನಾರಿನಂಶ, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತವೆ. ಇವುಗಳನ್ನು ಕಡಿಮೆ ಜಾಗದಲ್ಲಿ ಹಾಗೂ ಗ್ರಾಮೀಣ, ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಬೆಳೆಯಬಹುದು.
ತ್ಯಾಜ್ಯ ಆಯುವುದರಿಂದ ಬೆಳೆಯುವ ಅವಕಾಶದವರೆಗೆ
ಕಡಿಮೆ ಜಾಗ, ಕೆಲವು ಅಣಬೆ ಬೇಸಾಯದ ಚೀಲಗಳು ಮತ್ತು ಒಂದು ಹೊಸ ಕೌಶಲವು ವೈವಿಧ್ಯಮಯ ಜೀವನೋಪಾಯದ ಅವಕಾಶಗಳಿಗೆ ದಾರಿ ಮಾಡಿಕೊಡಬಲ್ಲದು. ಭಾರತದಾದ್ಯಂತ ಅಣಬೆ ಬೇಸಾಯವು ರೈತರು, ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ಸೂಕ್ತವಾದ ಜೀವನೋಪಾಯದ ಮಾರ್ಗವಾಗಿ ಹೊರಹೊಮ್ಮುತ್ತಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟಂ ಗ್ರಾಮದ ರುತು ಎಂಬುವರಿಗೆ, ಪರ್ಯಾಯ ಜೀವನೋಪಾಯದ ಹುಡುಕಾಟದೊಂದಿಗೆ ಈ ಪಯಣ ಪ್ರಾರಂಭವಾಯಿತು. 20 ನೇ ವಯಸ್ಸಿನಲ್ಲಿ, ಅವರು ತ್ಯಾಜ್ಯ ಸಂಗ್ರಹಣೆಗಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಸ್ವತಂತ್ರ ಜೀವನೋಪಾಯವನ್ನು ಕಂಡುಕೊಳ್ಳಲು ಬಯಸಿದ್ದರು.

ಈ ಅವಕಾಶವು 'ಗ್ರಾಮೀಣ ಯುವಕರಿಗೆ ಕೌಶಲ ತರಬೇತಿ' ಉಪಕ್ರಮದ ಅಡಿಯಲ್ಲಿ ನಡೆದ ಅಲ್ಪಾವಧಿಯ ತರಬೇತಿ ಕಾರ್ಯಕ್ರಮದ ಮೂಲಕ ಲಭಿಸಿತು. ಗುಂಟೂರಿನ ಕೃಷಿ ವಿಜ್ಞಾನ ಕೇಂದ್ರ ಅಣಬೆ ಉತ್ಪಾದನೆಯಲ್ಲಿ ತರಬೇತಿಯನ್ನು ನೀಡಿತು. ಇದರಲ್ಲಿ ಕಾಂಪೋಸ್ಟ್ ತಯಾರಿಕೆ, ಬೀಜ ಬಿತ್ತನೆ, ಕೇಸಿಂಗ್, ಪಿನ್ನಿಂಗ್, ಬೆಳೆ ನಿರ್ವಹಣೆ ಮತ್ತು ಕೊಯ್ಲು ಮುಂತಾದ ಪ್ರಮುಖ ಹಂತಗಳನ್ನು ಒಳಗೊಂಡಿತ್ತು. ಆಂಧ್ರಪ್ರದೇಶದ ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣೆ ತರಬೇತಿ ಸಂಸ್ಥೆ ಹಾಗೂ ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಯ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.
|
ಸ್ಪಾನಿಂಗ್ ಎಂಬುದು ಅಣಬೆ ಬೀಜವನ್ನು ಕಾಂಪೋಸ್ಟ್ನೊಂದಿಗೆ ಬೆರೆಸುವ ಪ್ರಕ್ರಿಯೆಯಾಗಿದೆ.
ಕೇಸಿಂಗ್ ಎಂಬುದು ಬೀಜ ಪ್ರಸರಣದ ನಂತರ ಅಣಬೆ ಬೆಳೆಯಲು ಉತ್ತೇಜನ ನೀಡಲು ಕಾಂಪೋಸ್ಟ್ ಮೇಲೆ ಕೇಸಿಂಗ್ ಮಣ್ಣಿನ ಪದರವನ್ನು ಹಾಕುವುದಾಗಿದೆ. ಈ ಕೇಸಿಂಗ್ ಮಣ್ಣು ತೇವಾಂಶದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ, ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅಣಬೆಯ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.
ಪಿನ್ನಿಂಗ್ ಎಂಬುದು ಕೇಸಿಂಗ್ ಮೇಲ್ಮೈಯಲ್ಲಿ ಅಥವಾ ಅದರ ಬಳಿ 'ಪಿನ್ಹೆಡ್ಗಳು' ಎಂದು ಕರೆಯಲ್ಪಡುವ ಸಣ್ಣ ಅಣಬೆ ರಚನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುವ ಹಂತವಾಗಿದೆ.
ಕಡಿಮೆ ಬಂಡವಾಳ ಹೊಂದಿರುವ ಸಣ್ಣ ಮತ್ತು ಅಂಚಿನ ಹಿಡುವಳಿದಾರರು ಹೆಚ್ಚಾಗಿರುವ ಭಾರತದಲ್ಲಿ, ಅಣಬೆ ಬೇಸಾಯವು ಸೂಕ್ತವಾದ ಪರ್ಯಾಯ ಮಾರ್ಗವಾಗಿದೆ. ಏಕೆಂದರೆ ಇದು ಕೃಷಿ ತ್ಯಾಜ್ಯವನ್ನು ಬೆಳೆಯುವ ಮಾಧ್ಯಮವಾಗಿ ಬಳಸುತ್ತದೆ ಹಾಗೂ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಿಗಿಂತ ಕಡಿಮೆ ಜಾಗ, ನೀರು ಮತ್ತು ಹಣಕಾಸಿನ ಹೂಡಿಕೆಯನ್ನು ಬೇಡುತ್ತದೆ. ಅಲ್ಲದೆ, ಇದು ಸಂಪನ್ಮೂಲಗಳ ಸಮರ್ಥ ಬಳಕೆ, ಉದ್ಯೋಗ ಸೃಷ್ಟಿ, ಸುಸ್ಥಿರತೆ ಮತ್ತು ಪೌಷ್ಟಿಕಾಂಶದ ಭದ್ರತೆಯಂತಹ ಪ್ರಮುಖ ಅಂಶಗಳಿಗೆ ಪರಿಹಾರ ಒದಗಿಸುವ ಮೂಲಕ ಕೃಷಿ ಉದ್ಯಮವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
|
ತರಬೇತಿಯಲ್ಲಿ ಪಡೆದ ಕೌಶಲಗಳನ್ನು ಅಳವಡಿಸಿಕೊಂಡ ರುತು, ಹಾಲಿನ ಅಣಬೆ ಬೇಸಾಯವನ್ನು ಪ್ರಾರಂಭಿಸಿದರು ಮತ್ತು ಸ್ಥಳೀಯ ಮಾರುಕಟ್ಟೆಗೆ ನಿಯಮಿತವಾಗಿ ಪೂರೈಸಲು ತೊಡಗಿದರು. ಅವರ ಉತ್ಪಾದನೆಯು ದಿನಕ್ಕೆ ಸುಮಾರು 8 ಕೆಜಿಗೆ ತಲುಪಿತು, ಇದರಿಂದ ತಿಂಗಳಿಗೆ ಸುಮಾರು ₹35,000 ಆದಾಯ ಗಳಿಸುವಂತಾಯಿತು. ಬೇಸಾಯದ ಸಮಯದಲ್ಲಿ ಸರಿಯಾದ ತಾಪಮಾನ ಮತ್ತು ತೇವಾಂಶದ ಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ, ರೋಗರಹಿತ ಶುದ್ಧ ಭತ್ತದ ಹುಲ್ಲು ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸುವ ಮಹತ್ವವನ್ನು ಅವರು ಕಲಿತುಕೊಂಡಿದ್ದಾರೆ. ಅವರ ಕ ಕಲಿಕೆ ಮತ್ತು ಅನುಭವಗಳು ಅವರ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಸಮುದಾಯದ ಇತರ ಮೂರರಿಂದ ನಾಲ್ಕು ಜನರಿಗೆ ಸಣ್ಣ ಪ್ರಮಾಣದಲ್ಲಿ ಅಣಬೆ ಬೇಸಾಯವನ್ನು ಕೈಗೊಳ್ಳಲು ಪ್ರೇರಣೆ ನೀಡಿದವು.
ರುತು ಅವರ ಅನುಭವವು, ಗುರಿ ಆಧಾರಿತ ಕೌಶಲಾಭಿವೃದ್ಧಿಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಾಗ ಅದು ಜೀವನೋಪಾಯದ ವೈವಿಧ್ಯೀಕರಣ ಮತ್ತು ಸ್ಥಳೀಯ ಜ್ಞಾನ ಹಂಚಿಕೆಗೆ ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ತೋರಿಸುತ್ತದೆ. ಒಂದು ಸಣ್ಣ ತರಬೇತಿ ಕಾರ್ಯಕ್ರಮವಾಗಿ ಪ್ರಾರಂಭವಾಗಿದ್ದು, ಆದಾಯ ಗಳಿಕೆಗೆ ಬಲವಾದ ಅಡಿಪಾಯವಾಯಿತು ಮತ್ತು ಸಮುದಾಯದ ಇತರರು ಅಣಬೆ ಬೇಸಾಯವನ್ನು ಜೀವನೋಪಾಯದ ಮಾರ್ಗವಾಗಿ ಕಂಡುಕೊಳ್ಳಲು ಪ್ರೇರೇಪಿಸಿತು.
ಒಬ್ಬ ಮಹಿಳೆ, ಹಲವು ಜೀವನೋಪಾಯಗಳು: ಅಣಬೆ ಗ್ರಾಮದ ನಿರ್ಮಾಣ
ವೈಯಕ್ತಿಕ ಉದ್ಯಮಶೀಲತೆಯು ಸಾಮೂಹಿಕ ಕಾರ್ಯಕ್ಕೆ ಪ್ರೇರಣೆಯಾದಾಗ ಜೀವನೋಪಾಯದ ಉಪಕ್ರಮವು ಸುದೂರದ ಬದಲಾವಣೆಯನ್ನು ತರಬಲ್ಲದು. ಅನಂತಪುರ ಗ್ರಾಮದಲ್ಲಿ ಅನಿತಾ ದೇವಿ ಅವರ ಅಣಬೆ ಬೇಸಾಯದಿಂದ ಸಮುದಾಯದ ನಾಯಕತ್ವದವರೆಗಿನ ಪಯಣವು, ಸ್ಥಳೀಯವಾಗಿ ಬೇರೂರಿದ ಜೀವನೋಪಾಯವು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಹೇಗೆ ಸೃಷ್ಟಿಸುತ್ತದೆ ಮತ್ತು ಸಮುದಾಯ ಆಧಾರಿತ ಉದ್ಯಮವನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ವಿವರಿಸುತ್ತದೆ.
ಅನಿತಾ ಅವರಿಗೆ, ಸ್ವತಂತ್ರ ಆದಾಯ ಗಳಿಸುವ ಆಶಯದೊಂದಿಗೆ ಅಣಬೆ ಬೇಸಾಯ ಪ್ರಾರಂಭವಾಯಿತು. ಡಾ. ರಾಜೇಂದ್ರ ಪ್ರಸಾದ್ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಮತ್ತು ಜಿ. ಬಿ. ಪಂತ್ ವಿಶ್ವವಿದ್ಯಾಲಯದಲ್ಲಿ ಪಡೆದ ತರಬೇತಿಯು ಅವರ ಜ್ಞಾನವನ್ನು ವೃದ್ಧಿಸಲು ಸಹಾಯ ಮಾಡಿತು. ಹಾಗೆಯೇ, 2010 ರಲ್ಲಿ ಬಿಹಾರದ ನಳಂದ ಜಿಲ್ಲೆಯ ಹರ್ನೌತ್ ಬ್ಲಾಕ್ನ ಕೃಷಿ ವಿಜ್ಞಾನ ಕೇಂದ್ರದ ಜೊತೆಗಿನ ಒಡನಾಟವು ಅವರ ಉದ್ಯಮಶೀಲತೆಯ ಪಯಣಕ್ಕೆ ಸರಿಯಾದ ದಾರಿ ತೋರಿಸಿತು. ಕೆವಿಕೆ ಅಧಿಕಾರಿಗಳ ಪ್ರೋತ್ಸಾಹದಿಂದ, ಅವರು ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿ ಬೆಳೆಯಬಹುದಾದ ಚಿಪ್ಪು ಅಣಬೆ ಮತ್ತು ಹಾಲಿನ ಅಣಬೆ ತಳಿಗಳನ್ನು ಬೆಳೆಯಲು ಪ್ರಾರಂಭಿಸಿದರು.

ಅವರ ಈ ಮುನ್ನಡೆಯು ಅನಂತಪುರ ಗ್ರಾಮದ ಇತರ ಮಹಿಳೆಯರಿಗೂ ಅಣಬೆ ಬೇಸಾಯವನ್ನು ಅನ್ವೇಷಿಸಲು ಕ್ರಮೇಣ ಪ್ರೇರಣೆ ನೀಡಿತು. ಈ ಪದ್ಧತಿಯು ನೆರೆಹರೆಯದ ಗ್ರಾಮಗಳಿಗೂ ಹರಡಿತು, ಮತ್ತು 2012 ರಲ್ಲಿ ರಾಜ್ಯ ಕೃಷಿ ಇಲಾಖೆಯು ಅನಂತಪುರವನ್ನು 'ಅಣಬೆ ಗ್ರಾಮ' ಎಂದು ಘೋಷಿಸಿತು. ಸಮುದಾಯದಲ್ಲಿ ಈ ಜೀವನೋಪಾಯವನ್ನು ಉತ್ತೇಜಿಸುವಲ್ಲಿ ಅವರ ಪಾತ್ರವು ಹೆಚ್ಚಿದ್ದರಿಂದ, ಅನಿತಾ ಅವರನ್ನು "ಅಣಬೆ ಮಹಿಳಾ" ಎಂದು ಕರೆಯಲಾಯಿತು.
ಬೇಸಾಯವು ವಿಸ್ತರಿಸಿದಂತೆ, ಉತ್ತಮ ಗುಣಮಟ್ಟದ ಅಣಬೆ ಬೀಜಗಳ ಲಭ್ಯತೆಯು ಒಂದು ಪ್ರಮುಖ ಅವಶ್ಯಕತೆಯಾಗಿ ಹೊರಹೊಮ್ಮಿತು. ರಾಷ್ಟ್ರೀಯ ತೋಟಗಾರಿಕಾ ಮಿಷನ್ನ ಬೆಂಬಲದೊಂದಿಗೆ, ಅನಿತಾ ಅವರು 15 ಲಕ್ಷ ರೂ. ಸಹಾಯಧನದೊಂದಿಗೆ ಬೀಜ ಉತ್ಪಾದನಾ ಪ್ರಯೋಗಾಲಯವನ್ನು ಸ್ಥಾಪಿಸಿದರು, ಇದು ಪ್ರಮುಖ ಇನ್ಪುಟ್ ಅಗತ್ಯತೆಯನ್ನು ಪೂರೈಸಲು ಸಹಾಯ ಮಾಡಿತು. ಅಣಬೆ ಉತ್ಪಾದಕರು ಮತ್ತು ಮಾರಾಟಗಾರರೊಂದಿಗೆ ಕೆಲಸ ಮಾಡುವ ಹಾಗೂ ಮಹಿಳೆಯರನ್ನು ಸರ್ಕಾರದ ಯೋಜನೆಗಳು ಮತ್ತು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ 'ಮಧೋಪೂರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್' ಅನ್ನು ಸ್ಥಾಪಿಸುವ ಮೂಲಕ ಅವರು ಸಾಮೂಹಿಕ ಉದ್ಯಮವನ್ನು ಮತ್ತಷ್ಟು ಬಲಪಡಿಸಿದರು.
2023ರ ವೇಳೆಗೆ, ನಳಂದದ ಜೀವಿಕಾ ಸ್ವಸಹಾಯ ಸಂಘಗಳ 250ಕ್ಕೂ ಹೆಚ್ಚು ಮಹಿಳೆಯರು ಅಣಬೆ ಆಧಾರಿತ ಜೀವನೋಪಾಯ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಹಾರದ 'ಅಣಬೆ ಗ್ರಾಮ' ಎಂದು ಅನಂತಪುರಕ್ಕೆ ಸಿಕ್ಕ ಮನ್ನಣೆಯು, ಒಬ್ಬ ಮಹಿಳೆಯ ಆರ್ಥಿಕ ಸ್ವಾತಂತ್ರ್ಯದ ಅನ್ವೇಷಣೆಯಿಂದ ಪ್ರಾರಂಭವಾದ ಉಪಕ್ರಮವನ್ನು ವಿಶಾಲ ಸಮುದಾಯವು ಅಳವಡಿಸಿಕೊಂಡಿದ್ದನ್ನು ಪ್ರತಿಬಿಂಬಿಸುತ್ತದೆ. ಕೌಶಲಾಭಿವೃದ್ಧಿ, ಸಾಂಸ್ಥಿಕ ಬೆಂಬಲ, ಪ್ರಮುಖ ಒಳಹರಿವುಗಳ ಲಭ್ಯತೆ ಮತ್ತು ಸಾಮೂಹಿಕ ಉದ್ಯಮವು ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಲು ಹೇಗೆ ಪರಸ್ಪರ ಪೂರಕವಾಗಿರಬಹುದು ಎಂಬುದನ್ನು ಅನಿತಾ ದೇವಿ ಅವರ ಪಯಣವು ತೋರಿಸುತ್ತದೆ.
ಒಬ್ಬ ಇಂಜಿನಿಯರ್ ಅಣಬೆ ಬೆಳೆಯಲು ಮುಂದಾದಾಗ
ಸಾಂಪ್ರದಾಯಿಕ ಕೃಷಿಯನ್ನು ಮೀರಿ, ಅಣಬೆ ಬೇಸಾಯವು ವೃತ್ತಿಪರರಿಗೂ ಸಹ ಭೂಮಿ-ಪರಿಣಾಮಕಾರಿ ಉದ್ಯಮಗಳನ್ನು ಸ್ಥಾಪಿಸಲು ಜೀವನೋಪಾಯದ ಅವಕಾಶಗಳನ್ನು ಹೆಚ್ಚಾಗಿ ಸೃಷ್ಟಿಸುತ್ತಿದೆ. ಗುಜರಾತ್ನ ತಪಿಯ ಸಿವಿಲ್ ಇಂಜಿನಿಯರ್ ಅಂಜನಬೆನ್ ಗಮಿಟ್ ಅವರು, 'ಅಗ್ರೋ-ಸಂದೇಶ್' ನಲ್ಲಿ ಕೆವಿಕೆ ತಪಿ ಪ್ರಕಟಿಸಿದ್ದ ಚಿಪ್ಪು ಅಣಬೆ ಬೇಸಾಯದ ಕುರಿತ ಲೇಖನವನ್ನು ಓದಿದ ನಂತರ ಈ ಅವಕಾಶವನ್ನು ಅನ್ವೇಷಿಸಿದರು. ಹೆಚ್ಚಿನ ಭೂ ಹಿಡುವಳಿಯ ಅಗತ್ಯವಿಲ್ಲದೆ ಅಣಬೆ ಬೇಸಾಯ ಮಾಡುವುದರ ಸಾಮರ್ಥ್ಯವನ್ನು ಗುರುತಿಸಿ, ಅವರು ಕೃಷಿ ವಿಜ್ಞಾನ ಕೇಂದ್ರ, ತಪಿಗೆ ಭೇಟಿ ನೀಡಿ "ಅಣಬೆ ಬೇಸಾಯದ ಮೂಲಕ ಉದ್ಯಮಶೀಲತೆ ಅಭಿವೃದ್ಧಿ" ಕುರಿತ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೆವಿಕೆ ವಿಜ್ಞಾನಿಗಳ ತಾಂತ್ರಿಕ ಮಾರ್ಗದರ್ಶನದೊಂದಿಗೆ, ಅವರು ತಮ್ಮ ಬಳಿಯಿರುವ ಸಂಪನ್ಮೂಲಗಳನ್ನು ಬಳಸಿ 2017 ರಲ್ಲಿ ಚಿಪ್ಪು ಅಣಬೆಗಳನ್ನು ಬೆಳೆಯಲು ಪ್ರಾರಂಭಿಸಿದರು.

ಅವರ ಆರಂಭಿಕ ಬೇಸಾಯದ ಘಟಕವು ಬಿದಿರು ಮತ್ತು ಹಸಿರು ನೆರಳು ಬಲೆಯನ್ನು ಬಳಸಿ ನಿರ್ಮಿಸಲಾದ 15 × 10 ಅಡಿ ವಿಸ್ತೀರ್ಣದ ಸಣ್ಣ ಶೆಡ್ ಆಗಿತ್ತು. ಕೆವಿಕೆ ಅವರಿಗೆ ಅಣಬೆ ಬೀಜ, ಪಾಲಿಥಿನ್ ಚೀಲಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸುವುದರ ಜೊತೆಗೆ ತಾಂತ್ರಿಕ ಮಾರ್ಗದರ್ಶನವನ್ನೂ ನೀಡಿ ಬೆಂಬಲಿಸಿತು. ಎರಡೂವರೆ ತಿಂಗಳಲ್ಲೇ, ಅವರ ಮೊದಲ ಬೆಳೆಯು ಸುಮಾರು 140 ಕೆಜಿ ಅಣಬೆ ಇಳುವರಿಯನ್ನು ನೀಡಿತು. ಇದರಿಂದ 11,000 ರೂ. ಉತ್ಪಾದನಾ ವೆಚ್ಚದ ಎದುರಾಗಿ 28,000 ರೂ. ಆದಾಯ ಗಳಿಕೆಯಾಯಿತು. ಈ ಫಲಿತಾಂಶಗಳಿಂದ ಪ್ರೇರಿತರಾದ ಅವರು, 2019 ರಲ್ಲಿ ಹೆಚ್ಚುವರಿಯಾಗಿ 1.72 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ತಮ್ಮ ಅಣಬೆ ಮನೆಯನ್ನು 23 × 80 ಅಡಿಗೆ ವಿಸ್ತರಿಸಿದರು. ಆ ವರ್ಷದ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ, ಅವರು 250 ಕೆಜಿ ಅಣಬೆ ಬೀಜವನ್ನು ಬಳಸಿ 1,234 ಕೆಜಿ ಅಣಬೆಯನ್ನು ಉತ್ಪಾದಿಸಿದರು. ಈ ಕೊಯ್ಲಿನಿಂದ ಉತ್ಪಾದನಾ ವೆಚ್ಚವನ್ನು ಹೊರತುಪಡಿಸಿ 3.09 ಲಕ್ಷ ರೂ. ಒಟ್ಟು ಆದಾಯ ಮತ್ತು 2.20 ಲಕ್ಷ ರೂ. ನಿವ್ವಳ ಲಾಭ ಗಳಿಕೆಯಾಯಿತು.

ಉತ್ಪಾದನೆಯನ್ನು ವಿಸ್ತರಿಸುವುದರ ಜೊತೆಗೆ, ಗ್ರಾಹಕರನ್ನು ತಲುಪಲು ಅಂಜನಬೆನ್ ಅವರು ಸ್ಥಳೀಯ ಮಾರುಕಟ್ಟೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸಿಕೊಂಡರು. ಅವರು ಅಣಬೆಗಳನ್ನು 100-200 ಗ್ರಾಂ ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡಿ, ವ್ಯಾರಾದಲ್ಲಿನ ಅಂಗನವಾಡಿ ಕಾರ್ಯಕರ್ತೆಯರು, ಚಿಲ್ಲರೆ ಮಾರಾಟಗಾರರು ಮತ್ತು ತರಕಾರಿ ಮಾರಾಟಗಾರರ ಮೂಲಕ ಪೂರೈಸಿದರು. ದೂರವಾಣಿ ಆಧಾರಿತ ಬುಕಿಂಗ್ಗಳು ಮಾರಾಟವನ್ನು ಸುಗಮಗೊಳಿಸಲು ಸಹಾಯ ಮಾಡಿದರೆ, ಜಿಲ್ಲೆಯ ಸಾವಯವ ಮಾರುಕಟ್ಟೆಯು ಗ್ರಾಹಕರಿಗೆ ನೇರ ಮಾರಾಟ ಮಾಡಲು ಹೆಚ್ಚುವರಿ ಮಾರ್ಗವನ್ನು ಒದಗಿಸಿತು. ಅಂಜನಬೆನ್ ಅವರ ಅನುಭವವು, ಗುರಿ ಆಧಾರಿತ ತರಬೇತಿ, ಸಾಂಸ್ಥಿಕ ಬೆಂಬಲ, ಸೂಕ್ತ ಮೂಲಸೌಕರ್ಯ ಮತ್ತು ಸ್ಥಳೀಯವಾಗಿ ಅಳವಡಿಸಿಕೊಂಡ ಮಾರುಕಟ್ಟೆ ತಂತ್ರಗಳು ಅಣಬೆ ಬೇಸಾಯದಲ್ಲಿ ಉದ್ಯಮಶೀಲತೆಯನ್ನು ಹೇಗೆ ಬೆಂಬಲಿಸುತ್ತವೆ ಎಂಬುದನ್ನು ವಿವರಿಸುತ್ತದೆ.
25 ಚೀಲಗಳಿಂದ ಅಣಬೆ ಉದ್ಯಮದವರೆಗೆ
ಉತ್ತರಾಖಂಡದಲ್ಲಿ, ಅಣಬೆ ಬೇಸಾಯದಲ್ಲಿ ನಡೆಸಿದ ಸಣ್ಣ ಪ್ರಯೋಗವೊಂದು ಬೆಳೆಯುತ್ತಿರುವ ಆರ್ಥಿಕ ಮತ್ತು ಸಮುದಾಯ ಪ್ರಭಾವದೊಂದಿಗೆ ವೈವಿಧ್ಯಮಯ ಉದ್ಯಮವಾಗಿ ಹೊರಹೊಮ್ಮಿತು. ಡೆಹ್ರಾಡೂನ್ನ ಚಾರ್ಬಾ ಗ್ರಾಮದ ಮಾಹಿತಿ ತಂತ್ರಜ್ಞಾನ ವೃತ್ತಿಪರರಾದ ಹಿರೆಶಾ ವರ್ಮಾ ಅವರು 2013 ರಲ್ಲಿ ಸೇವಕರ ಕೊಠಡಿಯಲ್ಲಿ ಕೇವಲ 25 ಚೀಲಗಳೊಂದಿಗೆ ಚಿಪ್ಪು ಅಣಬೆ ಬೇಸಾಯವನ್ನು ಪ್ರಾರಂಭಿಸಿದರು. 2,000 ರೂ.ಗಳ ಆರಂಭಿಕ ಹೂಡಿಕೆಯು ಸುಮಾರು 5,000 ರೂ.ಗಳ ಲಾಭವನ್ನು ತಂದಿತು. ಇದು ಅವರನ್ನು ಅಣಬೆ ಬೇಸಾಯವನ್ನು ಒಂದು ಉದ್ಯಮಶೀಲತೆಯ ಯೋಜನೆಯಾಗಿ ಮುಂದುವರಿಸಲು ಪ್ರೇರೇಪಿಸಿತು. ತರುವಾಯ ಅವರು ಡೆಹ್ರಾಡೂನ್ನಲ್ಲಿ "ಹಾನ್ ಆಗ್ರೋಕೇರ್" ಎಂಬ ಅಣಬೆ ಉದ್ಯಮವನ್ನು ಸ್ಥಾಪಿಸಿದರು.

ಡೆಹ್ರಾಡೂನ್ನ ಕೃಷಿ ವಿಜ್ಞಾನ ಕೇಂದ್ರ ಮತ್ತು ಸೋಲನ್ನ ಐಸಿಎಆರ್-ಅಣಬೆ ಸಂಶೋಧನಾ ನಿರ್ದೇಶನಾಲಯದಲ್ಲಿ ಪಡೆದ ತರಬೇತಿಯು ಅವರ ಉದ್ಯಮಶೀಲತೆಯ ಪಯಣವನ್ನು ಮತ್ತಷ್ಟು ಬಲಪಡಿಸಿತು. ಇದು ಅಣಬೆಯ ತಳಿಗಳು ಮತ್ತು ಬೇಸಾಯದ ಪದ್ಧತಿಗಳಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು. ಕಾಂಪೋಸ್ಟ್ ಮತ್ತು ಬೀಜಗಳನ್ನು ಪಡೆಯಲು ಅವರು ಡೆಹ್ರಾಡೂನ್ನ ಅಣಬೆ ಇಲಾಖೆಯೊಂದಿಗೆ ತೊಡಗಿಸಿಕೊಂಡರು, ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಮೂಲಕ ಹಣಕಾಸಿನ ನೆರವು ಪಡೆದರು. ಪ್ರಾಯೋಗಿಕ ಉಪಕ್ರಮವಾಗಿ, ಅವರು ತಲಾ 500 ಅಣಬೆ ಚೀಲಗಳನ್ನು ಇಡಬಹುದಾದ ಮೂರು ಬಿದಿರಿನ ಬೇಸಾಯದ ಗುಡಿಸಲುಗಳನ್ನು ಸ್ಥಾಪಿಸಿದರು, ಇದು ಅವರ ಉದ್ಯಮ ವಿಸ್ತರಣೆಗೆ ಅಡಿಪಾಯ ಹಾಕಿತು.
ಇಂದು, 'ಹಾನ್ ಆಗ್ರೋಕೇರ್' ಸಂಸ್ಥೆಯು ದಿನಕ್ಕೆ ಸುಮಾರು ಒಂದು ಟನ್ ಅಣಬೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 15 ಜನರಿಗೆ ಉದ್ಯೋಗ ನೀಡಿದೆ. ವಾಣಿಜ್ಯ ಉತ್ಪಾದನೆಯನ್ನು ಮೀರಿ, ಹಿರೆಶಾ ಅವರು ಬೆಟ್ಟದ ಸಾಲಿನ ಪ್ರದೇಶಗಳ 2,000 ಕ್ಕೂ ಹೆಚ್ಚು ಮಹಿಳೆಯರು ಮತ್ತು ರೈತರಿಗೆ ತರಬೇತಿ ನೀಡುವ ಮೂಲಕ ತಮ್ಮ ಅನುಭವದ ಪ್ರಯೋಜನಗಳನ್ನು ಇತರರಿಗೂ ವಿಸ್ತರಿಸಿದ್ದಾರೆ.
ದಿನಕ್ಕೆ ಕೇವಲ 20 ಕೆಜಿಯ ಋತುಮಾನ ಆಧಾರಿತ ಉತ್ಪಾದನೆಯೊಂದಿಗೆ ಪ್ರಾರಂಭಿಸಿದ ಅವರು, ಇಂದು ವರ್ಷಪೂರ್ತಿ ಉತ್ಪಾದನೆ ಮಾಡುವ ಯಶಸ್ವಿ ಉದ್ಯಮವನ್ನು ಕಟ್ಟಿದ್ದಾರೆ. ಅವರ ಘಟಕವು 10 ಹವಾನಿಯಂತ್ರಿತ ಕೊಠಡಿಗಳನ್ನು ಹಾಗೂ ದಿನಕ್ಕೆ 1,000 ಕೆಜಿ ಉತ್ಪಾದನಾ ಸಾಮರ್ಥ್ಯವಿರುವ ತಂತ್ರಜ್ಞಾನ ಆಧಾರಿತ ಪ್ಲಾಂಟ್ ಅನ್ನು ಹೊಂದಿದೆ.
ಅವರ ಉದ್ಯಮವು ಶೀಟಾಕೆ ಮತ್ತು ಗ್ಯಾನೋಡರ್ಮಾನಂತಹ ವಿಶೇಷ ತಳಿಯ ಅಣಬೆಗಳನ್ನು ಬೆಳೆಯುವುದರ ಜೊತೆಗೆ ಉಪ್ಪಿನಕಾಯಿ, ಕುಕೀಸ್, ನಗ್ಗೆಟ್ಸ್, ಸೂಪ್, ಪ್ರೋಟೀನ್ ಪೌಡರ್, ಟೀ ಮತ್ತು ಹಪ್ಪಳದಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲೂ ವೈವಿಧ್ಯತೆಯನ್ನು ತಂದಿದೆ. ಅವರ ಕೊಡುಗೆಯು ಉತ್ಪಾದನೆ ಮತ್ತು ಉತ್ಪನ್ನ ವೈವಿಧ್ಯೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ತೆಹ್ರಿ, ಪೌರಿ ಮತ್ತು ಗರ್ಹ್ವಾಲ್ ಭಾಗದ ಬೆಳೆಗಾರರಿಗೆ ತಾಂತ್ರಿಕ ನೆರವು ನೀಡುವ ಮೂಲಕ, ಅವರು ಇತರ ರೈತರೂ ಸಹ ಅಣಬೆ ಬೇಸಾಯವನ್ನು ಜೀವನೋಪಾಯದ ಮಾರ್ಗವಾಗಿ ಕಂಡುಕೊಳ್ಳಲು ಸಹಾಯ ಮಾಡಿದ್ದಾರೆ.
ಬೆಟ್ಟದ ಸಾಲುಗಳಲ್ಲಿ ಅಣಬೆಗಳು ಬೆಳೆಯಲು ತೊಡಗಿದಾಗ
ಬಾಗೇಶ್ವರದ ಉದೇರ್ಖಾನಿ ಗ್ರಾಮದಲ್ಲಿ ನಡೆದ ರೈತರ ಸಭೆಯೊಂದರಲ್ಲಿ, ಮದನ್ ಮೋಹನ್ ಅವರು ಹೊಸತನ್ನೇನಾದರೂ ಪ್ರಯತ್ನಿಸುವ ಅವಕಾಶವನ್ನು ಕಂಡುಕೊಂಡರು. ಸಂರಕ್ಷಿತ ತರಕಾರಿ ಮತ್ತು ಅಣಬೆ ಬೇಸಾಯದಲ್ಲಿ ಅವರು ಆಸಕ್ತಿ ತೋರಿದರು, ಆದಾಗ್ಯೂ ಅವರಿಗೆ ಈ ಎರಡರಲ್ಲೂ ಯಾವುದೇ ಪೂರ್ವಾನ್ಭವ ಇರಲಿಲ್ಲ.

2020-21ರ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯ ಅಡಿಯಲ್ಲಿ ಅಲ್ಮೋರಾದ ಐಸಿಎಆರ್-ಡಿಎಂಆರ್ನಡೆಸಿದ ಕಾರ್ಯಕ್ರಮದ ಮೂಲಕ ಈ ಅವಕಾಶವು ಮೂಡಿಬಂತು. ಮದನ್ ಮೋಹನ್ ಅವರಿಗೆ ಅಣಬೆ ಬೇಸಾಯವನ್ನು ಕೈಗೊಳ್ಳಲು ತೀವ್ರ ಆಸಕ್ತಿಯಿದ್ದರೂ, ಸೀಮಿತ ಹಣಕಾಸಿನ ಸಂಪನ್ಮೂಲಗಳು ಅವರ ಆರಂಭಕ್ಕೆ ಅಡ್ಡಿಯಾಗಿದ್ದವು. ಕಾರ್ಯಕ್ರಮದ ಬೆಂಬಲವು ಈ ಕೊರತೆಯನ್ನು ನೀಗಿಸಲು ನೆರವಾಯಿತು. 2022ರಲ್ಲಿ, ಅವರ ಹೊಲದಲ್ಲಿ ಪೋರ್ಟಬಲ್ ಪಾಲಿಹೌಸ್ ಅನ್ನು ಸ್ಥಾಪಿಸಲಾಯಿತು ಮತ್ತು ಅಣಬೆ ಕೃಷಿಗಾಗಿ ಐದು ಕ್ವಿಂಟಾಲ್ ಸಂಸ್ಕರಿಸಿದ ಕಾಂಪೋಸ್ಟ್ ಅನ್ನು ಪೂರೈಸಲಾಯಿತು. ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಕೆವಿಕೆ ಕಾಫ್ಲಿಗೈರ್ ತರಬೇತಿ ಮತ್ತು ನಿರಂತರ ತಾಂತ್ರಿಕ ಮಾರ್ಗದರ್ಶನವನ್ನು ನೀಡುವ ಮೂಲಕ, ಸಾಂಸ್ಥಿಕ ಬೆಂಬಲದೊಂದಿಗೆ ಅವರು ಅಣಬೆ ಬೆಳೆಯಲು ಅನುವು ಮಾಡಿಕೊಟ್ಟಿತು.
ಪೋರ್ಟಬಲ್ ಪಾಲಿಹೌಸ್ ಎಂಬುದು ಗುಡ್ಡಗಾಡು ಮತ್ತು ಸಣ್ಣ ಹಿಡುವಳಿ ಕೃಷಿ ಪರಿಸ್ಥಿತಿಗಳಿಗಾಗಿ ಅಭಿವೃದ್ಧಿಪಡಿಸಲಾದ ಕಡಿಮೆ ವೆಚ್ಚದ, ಸ್ಥಳಾಂತರಿಸಬಹುದಾದ ಸಂರಕ್ಷಿತ ಬೇಸಾಯ ರಚನೆಯಾಗಿದೆ.
ಶಿಫಾರಸು ಮಾಡಿದ ಬೇಸಾಯ ಪದ್ಧತಿಗಳನ್ನು ಅನುಸರಿಸುವ ಮೂಲಕ ಮತ್ತು ಕೆವಿಕೆ ತಜ್ಞರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳುವ ಮೂಲಕ, ಮದನ್ ಮೋಹನ್ ಅವರು ಮಾರಾಟ ಮಾಡಬಹುದಾದ ಒಂದು ಕ್ವಿಂಟಾಲ್ ಬಟನ್ ಅಣಬೆಯನ್ನು ಕೊಯ್ಲು ಮಾಡಿದರು. 62.4 ಚದರ ಮೀಟರ್ ವಿಸ್ತೀರ್ಣದ ಪಾಲಿಹೌಸ್ ಟೊಮೆಟೊ, ಕ್ಯಾಪ್ಸಿಕಂ, ಎಲೆಕೋಸು, ಹೂಕೋಸು ಮತ್ತು ಫ್ರೆಂಚ್ ಬೀನ್ಸ್ ಸೇರಿದಂತೆ 7.5 ಕ್ವಿಂಟಾಲ್ ತರಕಾರಿಗಳನ್ನು ನೀಡಿತು. ಸ್ಥಳೀಯ ಚಿಲ್ಲರೆ ವ್ಯಾಪಾರಿಗಳಿಗೆ ಹಲ್ದ್ವಾನಿ ಮಂಡಿಯಿಂದ ಪೂರೈಕೆ ಸೀಮಿತವಾಗಿದ್ದರಿಂದ, ಆಫ್-ಸೀಸನ್ನಲ್ಲಿ ಕೊಯ್ಲು ಮಾಡಿದ್ದು ಹೆಚ್ಚುವರಿ ಮಾರುಕಟ್ಟೆ ಪ್ರಯೋಜನವನ್ನು ತಂದುಕೊಟ್ಟಿತು. ಅಣಬೆ ಮತ್ತು ತರಕಾರಿ ಬೇಸಾಯದಿಂದ ಒಟ್ಟಾರೆಯಾಗಿ 41,250 ರೂ. ಆದಾಯ ಗಳಿಕೆಯಾಯಿತು, ಇದು ಅವರ ಹಿಂದಿನ ಕೃಷಿ ಆದಾಯವನ್ನು ಸುಮಾರು ಎರಡರಷ್ಟು ಹೆಚ್ಚಿಸಿತು. ಅವರ ಈ ಪ್ರಗತಿಯು ಸಹವರ್ತಿ ರೈತರಿಗೂ ಇದೇ ರೀತಿಯ ಜೀವನೋಪಾಯದ ಅವಕಾಶಗಳನ್ನು ಕಂಡುಕೊಳ್ಳಲು ಪ್ರೇರೇಪಿಸಿತು. ಅವರ ಶ್ರಮವನ್ನು ಗುರುತಿಸಿ ಅಲ್ಮೋರಾದ ಐಸಿಎಆರ್-ಡಿಎಂಆರ್ ಕಿಸಾನ್ ಮೇಳದಲ್ಲಿ ಸನ್ಮಾನಿಸಲಾಯಿತು.
ಈ ಅನುಭವಗಳು, ಅಣಬೆ ಬೇಸಾಯವು ಕೇವಲ ಹೆಚ್ಚುವರಿ ಕೃಷಿ ಚಟುವಟಿಕೆಯಾಗಿ ಮಾತ್ರ ಉಳಿಯದೆ ಜೀವನೋಪಾಯದ ವೈವಿಧ್ಯೀಕರಣ ಮತ್ತು ಉದ್ಯಮಶೀಲತೆಯ ಮಾರ್ಗವಾಗಬಹುದು ಎಂಬುದನ್ನು ತೋರಿಸುತ್ತವೆ. ಸೂಕ್ತ ತರಬೇತಿ, ತಾಂತ್ರಿಕ ಮಾರ್ಗದರ್ಶನ ಮತ್ತು ಉತ್ಪಾದಕ ಮೂಲಸೌಕರ್ಯಗಳ ಬೆಂಬಲ ದೊರೆತಾಗ, ರೈತರು ತಮ್ಮಲ್ಲಿರುವ ಸೀಮಿತ ಭೂಮಿ ಮತ್ತು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಹಾಗೂ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
References
Ministry of Agriculture & Farmers Welfare
https://icar.gov.in/en/node/5810
https://icar.gov.in/sites/default/files/2025-04/ICAR%20Annual%20Report%202023-24-english.pdf
https://icar.gov.in/en/node/5684
https://www.manage.gov.in/publications/reports/internreports/Documentation%20of%20Women%20Leaders.pdf
https://www.manage.gov.in/publications/SuccessStories/SuccessStories-STRY100.pdf
https://icaratariguwahati.org.in/sites/default/files/Technical/Natural%20Resource%20Managment%20.pdf
https://nhb.gov.in/pdf/Cultivation.pdf
https://agritech.tnau.ac.in/farm_enterprises/Farm%20enterprises\_%20Mushroom_button_mushroom_spawning.html
https://epubs.icar.org.in/index.php/MR/article/view/162741/59036
https://epubs.icar.org.in/index.php/MR/article/view/146647/53511
Ministry of Development of North Eastern Region (DoNER)
https://necouncil.gov.in/sites/default/files/2026-07/nec-journal-new-1.pdf
Click to see pdf
*****
(Features ID: 160755)
आगंतुक पटल : 28
Provide suggestions / comments