Infrastructure
ವಿನ್ಯಾಸದ ಮೂಲಕ ಗೌರವ: ಭಾರತದ ಸಾರ್ವಜನಿಕ ಶೌಚಾಲಯಗಳನ್ನು ಮರುರೂಪಿಸುತ್ತಿರುವ ನಾವೀನ್ಯತೆ
Posted On:
02 OCT 2026 12:28PM
ವರ್ಷಗಳು ಕಳೆದಂತೆ, ಭಾರತದ ನಗರಗಳು ಸಾರ್ವಜನಿಕ ನೈರ್ಮಲ್ಯ ಸೌಲಭ್ಯಗಳ ಲಭ್ಯತೆಯನ್ನು ವಿಸ್ತರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಲಭ್ಯತೆ ಮತ್ತು ಸ್ವಚ್ಛತೆಯನ್ನು ಸುಧಾರಿಸುವುದರಿಂದ ಹಿಡಿದು ಸುರಕ್ಷತೆ ಮತ್ತು ಪ್ರವೇಶಿಸುವಿಕೆಯನ್ನು ಹೆಚ್ಚಿಸುವವರೆಗೆ, ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚು ಒಳಗೊಳ್ಳುವ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ನಗರಗಳು ನೂತನ ಆವಿಷ್ಕಾರದ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ.
ಈ ಶ್ರಮಗಳ ಮೇಲೆ ನಿರ್ಮಿತವಾದ, 2 ಅಕ್ಟೋಬರ್ 2014 ರಂದು ಪ್ರಾರಂಭಿಸಲಾದ ಸ್ವಚ್ಛ ಭಾರತ್ ಮಿಷನ್, ಭಾರತದಾದ್ಯಂತ ನೈರ್ಮಲ್ಯ ನಾವೀನ್ಯತೆಯನ್ನು ಮುನ್ನಡೆಸಿದೆ. ನಗರಗಳು ಶೌಚಾಲಯಗಳನ್ನು ನಿರ್ಮಿಸಿದವು, ಜಾಗೃತಿ ಮೂಡಿಸಿದವು ಮತ್ತು ಬಹಿರಂಗ ಶೌಚ ಮುಕ್ತ ನಗರಗಳಾಗಲು ಶ್ರಮಿಸಿದವು. ಹಲವು ನಗರಗಳು ಮತ್ತಷ್ಟು ಮುಂದೆ ಹೋಗಿ ODF+ ಮತ್ತು ODF++ ಸ್ಥಾನಮಾನವನ್ನು ಸಾಧಿಸಿದವು. 2022 ರಲ್ಲಿ, ಸ್ವಚ್ಛ ಭಾರತ್ ಮಿಷನ್-ಅರ್ಬನ್ ಅಡಿಯಲ್ಲಿ 'ಟಾಯ್ಲೆಟ್ಸ್ 2.0' ಉಪಕ್ರಮವು ಮಾನದಂಡಗಳನ್ನು ಮತ್ತಷ್ಟು ಮೇಲ್ದರ್ಜೇಗೇರಿಸಿತು. ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಎಲ್ಲರಿಗೂ ಸುರಕ್ಷಿತ, ಸ್ವಚ್ಛ ಮತ್ತು ಆಹ್ಲಾದಕರವಾಗಿಸುವುದು ಇದರ ಉದ್ದೇಶವಾಗಿತ್ತು. ನಾಗರಿಕರು ಈಗ 'ಸ್ವಚ್ಛತಾ ಆ್ಯಪ್'ನಲ್ಲಿ 'ಎಸ್‌ಬಿಎಂ ಟಾಯ್ಲೆಟ್ ಲೊಕೇಟರ್' ಮೂಲಕ ಹತ್ತಿರದ ಸೌಲಭ್ಯವನ್ನು ಕಂಡುಕೊಳ್ಳಬಹುದು.
ಇಂದು, ಈ ಬದಲಾವಣೆಯು ನಿರೀಕ್ಷಿತವಲ್ಲದ ಸ್ಥಳಗಳಲ್ಲಿ ಗೋಚರಿಸುತ್ತಿದೆ. ಹಳೆಯ ಬಸ್ಸು ಮಹಿಳೆಯರ ಶೌಚಾಲಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವು ಕಟ್ಟಡ ನಿರ್ಮಾಣ ವಸ್ತುವಾಗಿ ಮಾರ್ಪಟ್ಟಿದೆ. ಗಿಜಿಗುಡುವ ಮಾರುಕಟ್ಟೆಯು ಈಗ ಸ್ಮಾರ್ಟ್ ಲಾಂಜ್ ಅನ್ನು ಹೊಂದಿದೆ. ಸಣ್ಣ ನಗರವೊಂದು ನೈರ್ಮಲ್ಯ ತ್ಯಾಜ್ಯವನ್ನು ಸುರಕ್ಷಿತವಾಗಿ ನಿರ್ವಹಿಸುವ ಮಾರ್ಗವನ್ನು ಕಂಡುಕೊಂಡಿದೆ. ಯಾತ್ರಾ ಸ್ಥಳಗಳು ಎಲ್ಲರಿಗೂ ಮುಕ್ತವಾದ ಸೌಲಭ್ಯಗಳನ್ನು ಒದಗಿಸುತ್ತಿವೆ. ಒಟ್ಟಾರೆಯಾಗಿ, ಈ ಕಥೆಗಳು ಮೂಲಭೂತ ಲಭ್ಯತೆಯಿಂದ ಗೌರವ, ಸುರಕ್ಷತೆ ಮತ್ತು ನಾವೀನ್ಯತೆಯತ್ತ ಸಾಗಿಬಂದ ಪ್ರಯಾಣವನ್ನು ವಿವರಿಸುತ್ತವೆ.
ಹೊಸ ಯುಗದ ಶೌಚಾಲಯಗಳು: ಮಹಿಳೆಯರಿಗೆ ಸುರಕ್ಷಿತ ತಾಣವಾದ ಹಳೆಯ ಬಸ್
ಕಿಕ್ಕಿರಿದ ಬಸ್ ಬಸ್‌ಸ್ಟ್ಯಾಂಡ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಹೆಚ್ಚಾಗಿ ಸ್ವಚ್ಛ ಮತ್ತು ಖಾಸಗಿ ಶೌಚಾಲಯವನ್ನು ಕಂಡುಕೊಳ್ಳಲು ಹೆಣಗಾಡುತ್ತಾರೆ. ಬೆಂಗಳೂರಿನಲ್ಲಿ, ಈ ಅಗತ್ಯವನ್ನು ಪೂರೈಸಲು ಹಳೆಯ ಬಸ್‌ಗೆ ಹೊಸ ರೂಪ ನೀಡಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 'ಸ್ತ್ರೀ ಶೌಚಾಲಯ'ವನ್ನು ಸ್ಥಾಪಿಸಲಾಯಿತು. ಗುಜರಿ ವಾಹನದಿಂದ ನಿರ್ಮಿಸಲಾದ ಇದು ಸಂಪೂರ್ಣವಾಗಿ ಮಹಿಳೆಯರಿಗೆ ಮಾತ್ರ ಸೇವೆ ನೀಡುತ್ತದೆ.

ಈ ಶೌಚಾಲಯವು ಮೂರು ಭಾರತೀಯ ಶೈಲಿಯ ಮತ್ತು ಎರಡು ಪಾಶ್ಚಿಮಾತ್ಯ (ವೆಸ್ಟರ್ನ್) ಶೈಲಿಯ ಕಮೋಡ್‌ಗಳನ್ನು ಹೊಂದಿದೆ. ಸ್ಯಾನಿಟರಿ ನೆಪ್ಕಿನ್ ವೆಂಡಿಂಗ್ ಮೆಷಿನ್ ಮತ್ತು ಇನ್ಸಿನರೇಟರ್ (ದಹನ ಯಂತ್ರ) ಮುಟ್ಟಿನ ನೈರ್ಮಲ್ಯಕ್ಕೆ ಬೆಂಬಲ ನೀಡುತ್ತವೆ. ಮೀಸಲಾದ ಸ್ಥಳವು ತಾಯಂದಿರಿಗೆ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸಲು ಮತ್ತು ಡೈಪರ್‌ಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಸೌಲಭ್ಯದಲ್ಲೇ ಉತ್ಪತ್ತಿಯಾಗುವ ಸೌರಶಕ್ತಿಯಿಂದ ಸೆನ್ಸಾರ್ ದೀಪಗಳು ಚಲಿಸುತ್ತವೆ. ತ್ಯಾಜ್ಯವು ಬಸ್ ನಿಲ್ದಾಣದಲ್ಲಿರುವ ಹತ್ತಿರದ ಒಳಚರಂಡಿ ಚೇಂಬರ್‌ಗೆ ಹರಿಯುತ್ತದೆ. ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ಈ ಶೌಚಾಲಯವು ವಿಶೇಷವಾಗಿ ಸಹಕಾರಿಯಾಗಿದೆ ಎಂದು ಸಾಬೀತಾಗಿದೆ.
ನವಿ ಮುಂಬೈನ ಸುಸ್ಥಿರ ಶೌಚಾಲಯಗಳು: ಪರಿಸರ-ಪ್ರಜ್ಞೆಯ ನಗರ ವಿನ್ಯಾಸದ ಮಾದರಿ
ನಗರವೊಂದು ಬಿಸಾಡುವ ವಸ್ತುಗಳಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಸಾಧ್ಯವೇ? ನವಿ ಮುಂಬೈ ಸಾಧ್ಯವೆಂದು ತೋರಿಸಿಕೊಟ್ಟಿದೆ. ನವಿ ಮುಂಬೈ ಮಹಾನಗರ ಪಾಲಿಕೆಯು ಕೊಪರ್‌ಖೈರಾಣೆಯ ಸೆಕ್ಟರ್ 14 ರಲ್ಲಿ 'ಆಕಾಂಕ್ಷೆಯ ಶೌಚಾಲಯಗಳನ್ನು' ಅಭಿವೃದ್ಧಿಪಡಿಸಿದೆ. ಈ ಸ್ಥಳವು ಗಿಜಿಗುಡುವ ಸಾರ್ವಜನಿಕ ಸ್ಥಳವಾದ ನಿಸರ್ಗಉದ್ಯಾನ ನಗರ ಉದ್ಯಾನವನದ ಹತ್ತಿರದಲ್ಲಿದೆ. ಪ್ರತಿದಿನ ಸುಮಾರು 8,000 ರಿಂದ 9,000 ಪ್ರವಾಸಿಗರು ಈ ಸೌಲಭ್ಯವನ್ನು ಬಳಸುತ್ತಾರೆ.

ಈ ಕಟ್ಟಡ ನಿರ್ಮಾಣಕ್ಕೆ 426 ಚದರ ಮೀಟರ್‌ನಷ್ಟು ಮರುಚಕ್ರಗೊಳಿಸಿದ ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸಲಾಗಿದೆ. ಇದರಲ್ಲಿ 5.3 ಮೆಟ್ರಿಕ್ ಟನ್ ಏಕ-ಬಳಕೆಯ ಪ್ಲಾಸ್ಟಿಕ್, 11,700 ಪ್ಲಾಸ್ಟಿಕ್ ಬಾಟಲಿಗಳು ಮತ್ತು 35,200 ಬಾಟಲಿ ಮುಚ್ಚಳಗಳು ಸೇರಿವೆ. ನಿರ್ಮಾಣಕರ್ತರು ಮರುರೂಪಿಸಿದ 85 ಕಂಪ್ಯೂಟರ್ ಕೀಬೋರ್ಡ್‌ಗಳನ್ನು ಮತ್ತು 284 ಕೆಜಿ ಗುಜರಿ ಲೋಹವನ್ನು ಮರುಬಳಕೆ ಮಾಡಿದ್ದಾರೆ. ಈ ಯೋಜನೆಯು 'ಕಡಿತಗೊಳಿಸಿ', 'ಮರುಬಳಸಿ' ಮತ್ತು 'ಮರು ತಯಾರಿಸಿ ಎಂಬ 3R ತತ್ವವನ್ನು ದಿನನಿತ್ಯದ ಅಭ್ಯಾಸಕ್ಕೆ ತರುತ್ತದೆ.
ಸುರಕ್ಷತೆ ಮತ್ತು ಸೌಕರ್ಯಗಳನ್ನು ವಿನ್ಯಾಸದಲ್ಲೇ ಸಂಯೋಜಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳು ಖಾಸಗಿತನವನ್ನು ಖಚಿತಪಡಿಸುತ್ತವೆ. ಮಕ್ಕಳು ಮತ್ತು ವಿಕಲಚೇತನರಿಗೆ ಪ್ರತ್ಯೇಕ ಘಟಕಗಳು, ಶಿಶು ಆರೈಕೆ ಕೇಂದ್ರಗಳು ಮತ್ತು ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳು ಎಲ್ಲಾ ಬಳಕೆದಾರರಿಗೆ ಸೇವೆ ನೀಡುತ್ತವೆ. ಸಂಸ್ಕರಿಸಿದ ಅಶುದ್ಧ ನೀರಿನಿಂದ ನಡೆಯುವ ಕಾರಂಜಿಯು ಇದರ ಹಸಿರು ವಿನ್ಯಾಸವನ್ನು ಪೂರ್ಣಗೊಳಿಸುತ್ತದೆ. ಈ ಸಂಕೀರ್ಣವು ಈಗ ಪರಿಸರ ನಾವೀನ್ಯತೆ ಮತ್ತು ನಾಗರಿಕ ಹೆಮ್ಮೆಯ ಸಂಕೇತವಾಗಿ ನಿಂತಿದೆ.
ಸ್ವಚ್ಛ ಸ್ಮಾರ್ಟ್ ಶೌಚಾಲಯಗಳು: ಭೋಪಾಲ್‌ಗೆ ಸೌಕರ್ಯ ತರುತ್ತಿರುವ 'ಫ್ರೆಶ್‌ರೂಮ್ಸ್'
ಖರೀದಿದಾರರು, ಮಾರಾಟಗಾರರು ಮತ್ತು ಪ್ರಯಾಣಿಕರು ಪ್ರತಿದಿನ ಭೋಪಾಲ್‌ನ 10 ನೇ ನಂಬರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದಿರುತ್ತಾರೆ. ಭೋಪಾಲ್ ಮಹಾನಗರ ಪಾಲಿಕೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ 'ವಿನ್ಯಾಸ-ನಿರ್ಮಾಣ-ಕಾರ್ಯಾಚರಣೆ-ವರ್ಗಾವಣೆ' ಮಾದರಿಯನ್ನು ಅನುಸರಿಸಿ, 'ಫ್ರೆಶ್‌ರೂಮ್ಸ್' ಎಂಬ ಸ್ಮಾರ್ಟ್ ಮತ್ತು ಐಷಾರಾಮಿ ಸಾರ್ವಜನಿಕ ಅನುಕೂಲಕರ ಕೇಂದ್ರಗಳನ್ನು ಸ್ಥಾಪಿಸಿದೆ. ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಲಾಂಜ್ 800 ರಿಂದ 1,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಪ್ರತಿದಿನ 500 ರಿಂದ 1,000 ಪ್ರವಾಸಿಗರಿಗೆ ಸೇವೆ ನೀಡುತ್ತದೆ.

ತಂತ್ರಜ್ಞಾನವು ಈ ಸೌಲಭ್ಯದ ಕೇಂದ್ರಬಿಂದುವಾಗಿದೆ. ಇದು ಸೆನ್ಸಾರ್ ಆಧಾರಿತ ಶೌಚಾಲಯಗಳು ಮತ್ತು ಸ್ಪರ್ಶ-ರಹಿತ ಶೌಚಾಲಯಗಳನ್ನು ಒದಗಿಸುತ್ತದೆ. ಪ್ರವಾಸಿಗರು ಬಿಸಿ ಮತ್ತು ತಣ್ಣೀರಿನ ಶವರ್, ಲಾಕರ್ ಹಾಗೂ ವೈ-ಫೈ ಸೌಲಭ್ಯಗಳನ್ನು ಸಹ ಬಳಸಬಹುದು. ಕೆಫೆ, ವೆಂಡಿಂಗ್ ಯಂತ್ರಗಳು ಮತ್ತು ಶಿಶು-ಬದಲಾವಣೆ ಕೊಠಡಿಗಳು ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಡಿಜಿಟಲ್ ಮಾಹಿತಿ ಗೋಡೆಯು ಬಳಕೆದಾರರಿಗೆ ಅಗತ್ಯ ಮಾಹಿತಿ ನೀಡುತ್ತದೆ. ಪ್ರತ್ಯೇಕ ಹಾಗೂ ಸುಲಭವಾಗಿ ಪ್ರವೇಶಿಸಬಹುದಾದ ಸೌಲಭ್ಯಗಳು ಪುರುಷರು, ಮಹಿಳೆಯರು ಮತ್ತು ವಿಕಲಚೇತನರಿಗೆ ಸೇವೆ ನೀಡುತ್ತವೆ. ತಂತ್ರಜ್ಞಾನ, ಸೌಕರ್ಯ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಮೂಲಕ, 'ಫ್ರೆಶ್‌ರೂಮ್ಸ್' ನೂತನ ಮಾದರಿಗಳು ಆರ್ಥಿಕ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಹೇಗೆ ಜಾಗತಿಕ ಮಟ್ಟದ ನೈರ್ಮಲ್ಯ ಸೇವೆಯನ್ನು ತಲುಪಿಸಬಲ್ಲವು ಎಂಬುದನ್ನು ಪ್ರದರ್ಶಿಸುತ್ತವೆ.
ಕರಡದಲ್ಲಿ ಸ್ಮಾರ್ಟ್ ನೈರ್ಮಲ್ಯ ಪರಿಹಾರಗಳು: ಸುರಕ್ಷಿತ ವಿಲೇವಾರಿ, ಹೆಚ್ಚು ಸುರಕ್ಷಿತ ನಗರ
ಸ್ವಚ್ಛ ಶೌಚಾಲಯಗಳು ನೈರ್ಮಲ್ಯದ ಕಥೆಯ ಒಂದು ಭಾಗವಷ್ಟೇ. ನೈರ್ಮಲ್ಯ ತ್ಯಾಜ್ಯದ ಸುರಕ್ಷಿತ ವಿಲೇವಾರಿ ಇನ್ನೊಂದು ಭಾಗ. ಉಪಯೋಗಿಸಿದ ಪ್ಯಾಡ್‌ಗಳು ಮತ್ತು ಡೈಪರ್‌ಗಳನ್ನು ಬಹಿರಂಗವಾಗಿ ಚೆಲ್ಲಿದರೆ, ಅವು ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಸಾಮಾಜಿಕ ಹಿಂಜರಿಕೆ ಹೆಚ್ಚಾಗಿ ಈ ಸಮಸ್ಯೆಯನ್ನು ಮರೆಮಾಚುವಂತೆ ಮಾಡುತ್ತದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಸಣ್ಣ ನಗರವಾದ ಕರಡ್, ಈ ಸವಾಲನ್ನು ನೇರವಾಗಿ ಎದುರಿಸಿದೆ. ಇದು ನೈರ್ಮಲ್ಯ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯದ 100% ವಿಂಗಡಣೆ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಖಚಿತಪಡಿಸುತ್ತದೆ. ಆಸ್ಪತ್ರೆಗಳು, ಕ್ಲಿನಿಕ್‌ಗಳು, ಮನೆಗಳು ಮತ್ತು ಇತರ ಸೌಲಭ್ಯಗಳಿಂದ ಪ್ರತಿದಿನ ಸುಮಾರು 300 ರಿಂದ 350 ಕೆಜಿ ನೈರ್ಮಲ್ಯ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.

ಮೊದಲ ಹೆಜ್ಜೆಯೆಂದರೆ ನೈರ್ಮಲ್ಯ ತ್ಯಾಜ್ಯದ ಸುತ್ತಲಿದ್ದ ಸಾಮಾಜಿಕ ಮುಜುಗರ ಹಾಗೂ ಹಿಂಜರಿಕೆಯನ್ನು ಮುರಿಯುವುದಾಗಿತ್ತು. ಕಾರ್ಯಾಗಾರಗಳು, ಸಮುದಾಯ ಸಂಪರ್ಕ ಅಭಿಯಾನಗಳು ಮತ್ತು ಸಾರ್ವಜನಿಕ ಪ್ರಕಟಣೆಗಳು ಅಜಾಗರೂಕ ವಿಲೇವಾರಿಯ ಅಪಾಯಗಳನ್ನು ವಿವರಿಸಿದವು. ಕರಡ್ ನಗರಸಭೆಯು ಮಹಿಳಾ ನಿವಾಸಿಗಳೊಂದಿಗೆ ಸೇರಿ ಜಾಗೃತಿ ಗುಂಪುಗಳನ್ನು ರಚಿಸಿತು. ಈ ಗುಂಪುಗಳು ವಸತಿ ಪ್ರದೇಶಗಳಾದ್ಯಂತ ಸಂದೇಶವನ್ನು ತಲುಪಿಸಿದವು. ಮಹಿಳೆಯರಿಗೆ ಸುರಕ್ಷಿತ ವಿಲೇವಾರಿಯನ್ನು ಸುಲಭಗೊಳಿಸಲು ಸಾರ್ವಜನಿಕ ಶೌಚಾಲಯಗಳಲ್ಲಿ ಪ್ರತ್ಯೇಕ ಕೆಂಪು ಬಣ್ಣದ ಕಸದ ಬುಟ್ಟಿಗಳನ್ನು ಇರಿಸಲಾಯಿತು.

ಶಾಲಾ-ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳು ಮತ್ತು ವಿಲೇವಾರಿ ವ್ಯವಸ್ಥೆಗಳನ್ನು ಅಳವಡಿಸಲು ಪ್ರೋತ್ಸಾಹಿಸಲಾಯಿತು. ನಗರದ ಮಾಹಿತಿ, ಶಿಕ್ಷಣ ಮತ್ತು ಸಂವಹನ ತಂಡವು ಉಪಯೋಗಿಸಿದ ಪ್ಯಾಡ್‌ಗಳನ್ನು ಕಾಗದದಲ್ಲಿ ಸುತ್ತಿ ವಿಲೇವಾರಿ ಮಾಡಲು ಬಳಕೆದಾರರಲ್ಲಿ ವಿನಂತಿಸಿತು. ಅಂದಿನಿಂದ ಅನೇಕ ಶಾಲೆಗಳು ಇನ್ಸಿನರೇಟರ್‌ಗಳನ್ನು (ತ್ಯಾಜ್ಯ ದಹನ ಯಂತ್ರ) ಸ್ಥಾಪಿಸಿವೆ. ಅವುಗಳ ಬೂದಿ/ಉಳಿಕೆ ತ್ಯಾಜ್ಯವು ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಲುಪುತ್ತದೆ.
ಕಸ ಸಂಗ್ರಹಣಾ ವಾಹನಗಳು ನೈರ್ಮಲ್ಯ ತ್ಯಾಜ್ಯಕ್ಕಾಗಿ ಪ್ರತ್ಯೇಕ ಕಸದ ಬುಟ್ಟಿಯನ್ನು ಹೊಂದಿರುತ್ತವೆ. ಸಿಬ್ಬಂದಿಗಳು ಈ ತ್ಯಾಜ್ಯವನ್ನು ವಿಂಗಡಿಸುತ್ತಾರೆ, ಇದರಿಂದ ಸೂಕ್ತವಾದ ವಸ್ತುಗಳು ಮಾತ್ರ ಇನ್ಸಿನರೇಟರ್‌ಗೆ ತಲುಪುತ್ತವೆ.

ಈ ತ್ಯಾಜ್ಯವನ್ನು ಸಂಸ್ಕರಿಸಲು ಕರಡ್ ನಗರಸಭೆಯು ಕರಡ್ ಆಸ್ಪತ್ರೆ ಅಸೋಸಿಯೇಷನ್ ಜೊತೆ ಸಹಭಾಗಿತ್ವ ವಹಿಸಿದೆ. ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ಮಾಣಕ್ಕಾಗಿ ಕೆಎಂಸಿ ಜಾಗವನ್ನು ಹಂಚಿಕೆ ಮಾಡಿದ್ದು, ಅಸೋಸಿಯೇಷನ್ ಇದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಇದು ಪ್ರತಿದಿನ 600 ಕೆಜಿ ಸಾಮರ್ಥ್ಯದ 'ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯ'ವಾಗಿದೆ. ನಗರಸಭೆಯು ಸಂಗ್ರಹಿಸಿದ ನೈರ್ಮಲ್ಯ ತ್ಯಾಜ್ಯವನ್ನು ಇದು ಉಚಿತವಾಗಿ ಸಂಸ್ಕರಿಸುತ್ತದೆ. ಇದರ ಕೇಂದ್ರ ಇನ್ಸಿನರೇಟರ್ (ದಹನ ಯಂತ್ರ) 1,200°C ವರೆಗಿನ ತಾಪಮಾನವನ್ನು ತಲುಪುತ್ತದೆ. ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಅನಿಲಗಳನ್ನು ಫಿಲ್ಟರ್ ಮಾಡಲಾಗುತ್ತದೆ. ಹೊರಸೂಸುವಿಕೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯವಸ್ಥೆಗೆ ಜೋಡಿಸಲಾಗಿದೆ.

ಈ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ನಗರಸಭೆಯ ಆರ್ಥಿಕ ಹೊರೆಯನ್ನು ತಗ್ಗಿಸಿದೆ, ಏಕೆಂದರೆ ಅದು ಕೇವಲ ಸಂಗ್ರಹಣೆ ಮತ್ತು ಸಾರಿಗೆ ವೆಚ್ಚಗಳನ್ನು ಮಾತ್ರ ಭರಿಸುತ್ತದೆ. ನೈರ್ಮಲ್ಯ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿ ದಹಿಸುವುದು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಿದೆ ಮತ್ತು ತ್ಯಾಜ್ಯವನ್ನು ನಿರ್ವಹಿಸುವ ನೈರ್ಮಲ್ಯ ಸಿಬ್ಬಂದಿಯನ್ನು ರಕ್ಷಿಸುತ್ತದೆ. ಬಹಿರಂಗವಾಗಿ ಕಸ ಚೆಲ್ಲುವುದನ್ನು ನಿರ್ಮೂಲನೆ ಮಾಡಲಾಗಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟಲಾಗಿದೆ ಹಾಗೂ ರೋಗಗಳ ಹರಡುವಿಕೆಯನ್ನು ತಗ್ಗಿಸಲಾಗಿದೆ. ಇದು ನಿವಾಸಿಗಳ, ವಿಶೇಷವಾಗಿ ನೈರ್ಮಲ್ಯ ತ್ಯಾಜ್ಯ ವಿಲೇವಾರಿ ಸವಾಲುಗಳಿಂದ ಬಾಧಿತರಾಗಿದ್ದ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸಿದೆ.
ತಿರುಪತಿಯ ಯಾತ್ರಿಕರಿಗೆ ಸೌಕರ್ಯ, ಸ್ವಚ್ಛತೆ ಮತ್ತು ಆರೈಕೆ
ಶ್ರದ್ಧಾ ಕೇಂದ್ರಗಳು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ, ಹೀಗಾಗಿ ಸ್ವಚ್ಛ ಶೌಚಾಲಯಗಳು ದಿನನಿತ್ಯದ ಅಗತ್ಯವಾಗಿವೆ. ತಿರುಪತಿಯು ಭಾರತದ ಅತ್ಯಂತ ಗಿಜಿಗುಡುವ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ತಿರುಪತಿ ಮಹಾನಗರ ಪಾಲಿಕೆಯು ಭಕ್ತರು, ಪ್ರವಾಸಿಗರು ಮತ್ತು ನಿವಾಸಿಗಳಿಗಾಗಿ ಆಧುನಿಕ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸಿದೆ.

ಮಹಿಳೆಯರಿಗಾಗಿ ವಿಶೇಷವಾದ 'ಪಿಂಕ್ ಟಾಯ್ಲೆಟ್ ಕಾಂಪ್ಲೆಕ್ಸ್' ಬಸ್ ನಿಲ್ದಾಣದ ಬಳಿ ನಿಂತಿದೆ. ಇದು ಶ್ರೀನಿವಾಸಂ, ವಿಷ್ಣುವಾಸಂ, ರೈಲು ನಿಲ್ದಾಣ ಮತ್ತು ಬಸ್ ಟರ್ಮಿನಲ್‌ನಂತಹ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತದೆ. ಮಹಿಳೆಯರು ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು ಹಾಗೂ ತಾಯಂದಿರ ಆರೈಕೆ ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಬಳಸಬಹುದು. ಇನ್ಸಿನರೇಟರ್‌ಗಳು ಮತ್ತು ಸ್ಯಾನಿಟರಿ ನೆಪ್ಕಿನ್ ವೆಂಡಿಂಗ್ ಯಂತ್ರಗಳು ಮುಟ್ಟಿನ ನೈರ್ಮಲ್ಯಕ್ಕೆ ಬೆಂಬಲ ನೀಡುತ್ತವೆ. ಈ ಸಂಕೀರ್ಣವು ಪ್ರತಿದಿನ 12,000 ದಿಂದ 15,000 ಬಳಕೆದಾರರಿಗೆ ಸೇವೆ ನೀಡುತ್ತದೆ. ರಚನಾತ್ಮಕ ಮೂರು-ಶಿಫ್ಟ್‌ಗಳ ಸ್ವಚ್ಛತಾ ವ್ಯವಸ್ಥೆಯು ಈ ಸೌಲಭ್ಯವನ್ನು ನಿರ್ವಹಿಸುತ್ತದೆ.
ರೈಲು ನಿಲ್ದಾಣದ ಬಳಿ ಇರುವ 'ಸಾಮಾನ್ಯ ಸಾರ್ವಜನಿಕ ಶೌಚಾಲಯ ಸಂಕೀರ್ಣ'ವು ಪ್ರತಿದಿನ ಗೋವಿಂದರಾಜಸ್ವಾಮಿ ದೇವಾಲಯ ಪ್ರದೇಶಕ್ಕೆ ಭೇಟಿ ನೀಡುವ 20,000-25,000 ಭಕ್ತರಿಗೆ ಸೇವೆ ಒದಗಿಸುತ್ತದೆ. ಸಾರ್ವತ್ರಿಕ ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾದ ಇದು ಪುರುಷರು, ಮಹಿಳೆಯರು, ತೃತೀಯಲಿಂಗಿಗಳು, ದಿವ್ಯಾಂಗರು ಮತ್ತು ಮಕ್ಕಳಿಗಾಗಿ ಮೀಸಲಾದ ಸೌಲಭ್ಯಗಳನ್ನು ಒದಗಿಸುತ್ತದೆ. ರಾಂಪ್‌ಗಳು, ಹ್ಯಾಂಡ್‌ರೈಲ್‌ಗಳು (ಹಿಡಿಕೆಗಳು), ಮಕ್ಕಳ ಸ್ನೇಹಿ ಫಿಕ್ಸ್ಚರ್‌ಗಳು ಮತ್ತು ಸ್ನಾನದ ಕೊಠಡಿಗಳು ಯಾತ್ರಿಕರಿಗೆ ಹೆಚ್ಚಿನ ಸೌಕರ್ಯ, ನೈರ್ಮಲ್ಯ ಮತ್ತು ಪ್ರವೇಶಿಸುವಿಕೆಯನ್ನು ಖಚಿತಪಡಿಸುತ್ತವೆ.
ಮುಂದಿನ ಹಾದಿ
ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅಡಿಯಲ್ಲಿ, ಗಮನವು ಕೇವಲ ಶೌಚಾಲಯಗಳನ್ನು ನಿರ್ಮಿಸುವುದನ್ನು ಮೀರಿ ಬೆಳೆದಿದೆ. ಈಗ ಅವುಗಳನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ, ಎಲ್ಲರನ್ನೂ ಒಳಗೊಳ್ಳುವಂತೆ ಮತ್ತು ಸುಸ್ಥಿರವಾಗಿಡುವುದು ಪ್ರಮುಖ ಗುರಿಯಾಗಿದೆ. ನಗರಗಳು ತಮ್ಮದೇ ಆದ ರೀತಿಯಲ್ಲಿ ಆ ಗುರಿಯನ್ನು ಹೇಗೆ ತಲುಪುತ್ತಿವೆ ಎಂಬುದನ್ನು ಈ ಕಥೆಗಳು ತೋರಿಸುತ್ತವೆ. ಗುಜರಿ ಬಸ್, ಮರುಚಕ್ರಗೊಳಿಸಿದ ಪ್ಲಾಸ್ಟಿಕ್, ಸೆನ್ಸಾರ್ ಆಧಾರಿತ ಉಪಕರಣಗಳು ಮತ್ತು ಹೆಚ್ಚಿನ ತಾಪಮಾನದ ಇನ್ಸಿನರೇಟರ್ ಪ್ರತಿಯೊಂದೂ ತಮ್ಮದೇ ಪಾತ್ರವನ್ನು ವಹಿಸುತ್ತವೆ. ಖಾಸಗಿ ನಿರ್ವಾಹಕರು, ಆಸ್ಪತ್ರೆಗಳು ಮತ್ತು ಸಮುದಾಯಗಳೊಂದಿಗಿನ ಸಹಭಾಗಿತ್ವವು ಈ ಸೌಲಭ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತವೆ. ಮೀಸಲಾದ ಸಿಬ್ಬಂದಿ ಮತ್ತು ಆರೈಕೆದಾರರು ದಿನನಿತ್ಯ ಇವುಗಳಿಗೆ ಜೀವ ತುಂಬುತ್ತಾರೆ. ಸ್ವಚ್ಛ ಭಾರತ್ ಮಿಷನ್ ಹನ್ನೆರಡು ವರ್ಷಗಳನ್ನು ಪೂರೈಸುತ್ತಿರುವಂತೆ, ಮುಂದಿನ ದಾರಿ ಸ್ಪಷ್ಟವಾಗಿದೆ. ಪ್ರತಿಯೊಬ್ಬ ನಾಗರಿಕನು, ಅವರ ಲಿಂಗ, ಸಾಮರ್ಥ್ಯ ಅಥವಾ ಸ್ಥಳ ಏನೇ ಇರಲಿ, ಸ್ವಚ್ಛ ಮತ್ತು ಗೌರವಾನ್ವಿತ ಶೌಚಾಲಯಕ್ಕೆ ಅರ್ಹನಾಗಿದ್ದಾನೆ. ಮಾರುಕಟ್ಟೆಗಳಿಂದ ಹಿಡಿದು ಸ್ಮಾರಕಗಳವರೆಗೆ, ಭಾರತೀಯ ನಗರಗಳು ಆ ಭರವಸೆಯನ್ನು ವಾಸ್ತವವಾಗಿ ಪರಿವರ್ತಿಸುತ್ತಿವೆ.
Reference:
Ministry of Housing and Urban Affairs
Click to see pdf
*******
(Features ID: 160332)
आगंतुक पटल : 26
Provide suggestions / comments