Rural Prosperity

ಮೊದಲ ಮಳೆಯ ಹನಿಯಿಂದ ಪರಿಶುದ್ಧ ರಸ್ತೆಗಳವರೆಗೆ

Posted On: 01 OCT 2026 4:21PM


ಸ್ವಚ್ಛ, ಆರೋಗ್ಯಕರ ಮುಂಗಾರಿಗೆ ಸಜ್ಜಾಗುತ್ತಿರುವ ನಗರಗಳು

ಮಳೆಯಾಗುವ ಮುನ್ನ, ಚಲನಶೀಲವಾಗುವ ನಗರಗಳು

ಮಳೆಗಾಲ ಹತ್ತಿರವಾಗುತ್ತಿದ್ದಂತೆ ಮತ್ತು ಮೊದಲ ಮಳೆಯಾಗುತ್ತಿದ್ದಂತೆ, ಭಾರತದಾದ್ಯಂತ ನಗರಗಳು ನೀರು ನಿಲ್ಲುವುದು, ಕಸದ ಶೇಖರಣೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಪಾರ್ವಕಾಲಿಕ ಅಪಾಯಗಳನ್ನು ಎದುರಿಸಲು ಸಿದ್ಧತೆಗಳನ್ನು ಪ್ರಾರಂಭಿಸುತ್ತವೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ, ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗುತ್ತದೆ ಮತ್ತು ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಾಯಕತ್ವದಲ್ಲಿ ನಡೆಯುವ 'ಸಫಾಯಿ ಅಪ್ನಾವೋ, ಬಿಮಾರಿ ಭಗಾವೋ 2025' ಅಭಿಯಾನದ ಅಡಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ಮುಂಗಾರು ಪೂರ್ವ ಸಿದ್ಧತೆಯನ್ನು ಸಂಯೋಜಿತ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ಪ್ರಯತ್ನವಾಗಿ ಪರಿವರ್ತಿಸಿದವು. ಜುಲೈ 1 ರಿಂದ ಜುಲೈ 31, 2025 ರವರೆಗೆ, ನಗರಗಳು ಚರಂಡಿ ಸ್ವಚ್ಛತೆ, ತ್ಯಾಜ್ಯ ತೆರವು ಮತ್ತು ನೈರ್ಮಲ್ಯ ಪ್ರಚಾರವನ್ನು ಕೈಗೊಂಡವು, ಜೊತೆಗೆ ಶಾಲೆಗಳು, ನೆರೆಹೊರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳ ಮೂಲಕ ಸಮುದಾಯಗಳನ್ನು ತೊಡಗಿಸಿಕೊಂಡವು.

ಈ ಅಭಿಯಾನದ ಕೇಂದ್ರಬಿಂದುವಾಗಿ '6 ಸ್ವಚ್ಛತಾ ಮಂತ್ರಗಳು' ಇವೆ: ಸ್ವಚ್ಛ ಕೈಗಳು, ಮನೆಗಳು, ನೆರೆಹೊರೆಗಳು, ಶೌಚಾಲಯಗಳು, ಚರಂಡಿಗಳು ಮತ್ತು ಸಾರ್ವಜನಿಕ ಸ್ಥಳಗಳು. ಒಟ್ಟಾಗಿ, ಈ ಸರಳ ಅಭ್ಯಾಸಗಳು ಮಳೆಗಾಲವನ್ನು ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರವಾಗಿಡಲು ನಗರ ಮಟ್ಟದ ದೊಡ್ಡ ಪ್ರಯತ್ನದ ಭಾಗವಾಗುತ್ತಿವೆ. ಮತ್ತು ದೇಶಾದ್ಯಂತ, ಈ ಪ್ರಯತ್ನವು ಹಲವು ವಿಭಿನ್ನ ರೂಪಗಳನ್ನು ಪಡೆಯುತ್ತಿದೆ.

ದೆಹಲಿಯಲ್ಲಿ, ಈ ಅಭಿಯಾನವು ತನ್ನ ಸಂದೇಶವನ್ನು ರಸ್ತೆಗಳು ಮತ್ತು ಶಾಲೆಗಳಿಗೆ ತಲುಪಿಸಿತು. 400 ಎನ್‌ಸಿಸಿ ಬಾಲಕಿ ಕೆಡೆಟ್‌ಗಳು ಮುಂಗಾರು ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪ್ರಚುರಪಡಿಸುವ 3 ಕಿ.ಮೀ ಪಿಂಕಾಥಾನ್ ನಡಿಗೆಯಲ್ಲಿ ನೇತೃತ್ವ ವಹಿಸಿದರು. ಈ ಅಭಿಯಾನವು 255 ಶಾಲೆಗಳಲ್ಲಿ ಕೈ ತೊಳೆಯುವ ಜಾಗೃತಿ ಅಭಿಯಾನ ಸೇರಿದಂತೆ ಗಮನಾರ್ಹ ನೆಲಮಟ್ಟದ ಕ್ರಮಗಳನ್ನು ಕಂಡಿತು, ಹಾಗೂ 206 ಸ್ವಚ್ಛತಾ ಅಭಿಯಾನಗಳು ಹಿಂಭಾಗದ ರಸ್ತೆಗಳು ಮತ್ತು ಕಸ ಬೀಳುವ ಸೂಕ್ಷ್ಮ ಪ್ರದೇಶಗಳನ್ನು ಕವರ್ ಮಾಡಿದವು. ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ (CTs ಮತ್ತು PTs) ಇನ್ನು 469 ನೈರ್ಮಲ್ಯ ಅಭಿಯಾನಗಳನ್ನು ನಡೆಸಲಾಯಿತು. ಪಾಟ್ನಾ ಮಹಾನಗರ ಪಾಲಿಕೆಯು ತಕ್ಷಣದ ಮತ್ತು ಸ್ಥಳದಲ್ಲೇ ಮ್ಯಾನ್‌ಹೋಲ್ ದುರಸ್ತಿ ಮಾಡುವ ಮೂಲಕ ನಗರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಹೆಚ್ಚಿಸಲು 'ಮ್ಯಾನ್‌ಹೋಲ್ ಆಂಬ್ಯುಲೆನ್ಸ್‌ಗಳನ್ನು' ಪರಿಚಯಿಸಿತು. ಪ್ರತಿಯೊಂದು ಆಂಬ್ಯುಲೆನ್ಸ್ ರೆಡಿಮೇಡ್ ಮ್ಯಾನ್‌ಹೋಲ್ ಮುಚ್ಚಳಗಳು, ದುರಸ್ತಿ ಉಪಕರಣಗಳು ಮತ್ತು ತಕ್ಷಣದ ಕ್ರಮಕ್ಕಾಗಿ ಮೀಸಲಾದ ಪ್ರತಿಕ್ರಿಯಾ ತಂಡವನ್ನು ಹೊಂದಿದೆ (ವಿಶೇಷವಾಗಿ ಮಳೆಗಾಲದಲ್ಲಿ). ಪಾಟ್ನಾ ಮಹಾನಗರ ಪಾಲಿಕೆಯು ತನ್ನ ಹಳೆಯ, ಬಳಕೆಯಾಗದ ವಾಹನಗಳನ್ನು ಈ ರೀತಿಯ ಕಾರ್ಯಾಚರಣಾ ಘಟಕಗಳಾಗಿ ಮಾರ್ಪಡಿಸಿತು. ತಲಾ ಒಂದು ಪಾಲಿಕೆ ವಲಯಕ್ಕೆ ಒಂದರಂತೆ ಒಟ್ಟು ಆರು ಆಂಬ್ಯುಲೆನ್ಸ್‌ಗಳು ಕಾರ್ಯಾಚರಿಸುತ್ತಿದ್ದು, ನೈಜ-ಸಮಯದ ದೂರು ಪರಿಹಾರಕ್ಕಾಗಿ ಪಾಲಿಕೆಯ ಕೇಂದ್ರ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿವೆ. ಈ ಉಪಕ್ರಮವು ನಾಗರಿಕ-ಕೇಂದ್ರಿತ ಕುಂದುಕೊರತೆ ಪರಿಹಾರವನ್ನು ಸಕ್ರಿಯಗೊಳಿಸುತ್ತದೆ ಮತ್ತು ಮ್ಯಾನ್‌ಹೋಲ್ ಸಂಬಂಧಿತ ದೂರುಗಳಿಗೆ ವೇಗವಾಗಿ ಸ್ಪಂದಿಸುವುದನ್ನು ಖಚಿತಪಡಿಸುತ್ತದೆ.

ನವಿ ಮುಂಬೈನಲ್ಲಿ, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ನಾಗರಿಕರ ಭಾಗವಹಿಸುವಿಕೆಯೊಂದಿಗೆ ಸ್ವಚ್ಛತಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಇದರೊಂದಿಗೆ, ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟುವಿಕೆಯತ್ತ ಗಮನಹರಿಸಿ 26 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ್ಯಂತ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಯಿತು. ಎರಡು ದಿನಗಳಲ್ಲಿ 52 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, 22,690 ಕ್ಕೂ ಹೆಚ್ಚು ನಾಗರಿಕರಿಗೆ ಪ್ರಯೋಜನ ತಲುಪಿದೆ. ತೆಲಂಗಾಣದಲ್ಲಿ, ಈ ಅಭಿಯಾನವು ಸುಮಾರು 13 ಲಕ್ಷ ಮನೆಗಳನ್ನು ತಲುಪಿದೆ. ಸುಮಾರು 14,210 ಕಿ.ಮೀ ಚರಂಡಿಗಳಲ್ಲಿನ ಹೂಳು ಎತ್ತಲಾಗಿದೆ, ಮತ್ತು 4,343 ಕಿ.ಮೀ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸಲಾಗಿದೆ. ಡೆಂಗ್ಯೂ ಮತ್ತು ಮಲೇರಿಯಾ ವಿರೋಧಿ ಜಾಗೃತಿ ಅಭಿಯಾನದ ಮೂಲಕ ಸುಮಾರು 2.5 ಲಕ್ಷ ಮನೆಗಳನ್ನು ತಲುಪಲಾಗಿದೆ. ಆರೋಗ್ಯ ಶಿಬಿರಗಳಿಂದ 8,500 ಕ್ಕೂ ಹೆಚ್ಚು ಮುಂಚೂಣಿ ಕಾರ್ಮಿಕರಿಗೂ ಪ್ರಯೋಜನವಾಗಿದೆ. ಅದೇ ಸಮಯದಲ್ಲಿ, ಶಾಲೆಗಳಲ್ಲಿ 140 ಕಾಂಪೋಸ್ಟಿಂಗ್ (ಗೊಬ್ಬರ ತಯಾರಿಕೆ) ಗುಂಡಿಗಳನ್ನು ನಿರ್ಮಿಸಲಾಗಿದ್ದು, ಯುವ ನಾಗರಿಕರು ತ್ಯಾಜ್ಯವನ್ನು ನೈಸರ್ಗಿಕ ಗೊಬ್ಬರವಾಗಿಸಲು ಪ್ರೋತ್ಸಾಹಿಸಲಾಗುತ್ತಿದೆ.

ಛತ್ತೀಸ್‌ಗಢದಲ್ಲಿ, ಈ ಕಥೆ ಸ್ವತಃ ಜನರಿಂದಲೇ ಪ್ರಾರಂಭವಾಗುತ್ತದೆ. ಪಂಡರಿಯಾದಲ್ಲಿ, ಸ್ವಸಹಾಯ ಸಂಘದ ಸದಸ್ಯರು ನೈರ್ಮಲ್ಯ ತರಬೇತಿಯನ್ನು ಪಡೆದರು ಮತ್ತು ಅವರಿಗೆ ಸ್ವಚ್ಛತಾ ಆ್ಯಪ್‌ ಅನ್ನು ಪರಿಚಯಿಸಲಾಯಿತು. ನಂತರ ಅವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ರಾಯ್‌ಪುರದಲ್ಲಿ, ಮನೆಮನೆಗೆ ತೆರಳಿ ಕೈ ನೈರ್ಮಲ್ಯ ಮತ್ತು ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸಲಾಯಿತು, ಮತ್ತು ಕಸ ಬೀಳುವ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಲಾಯಿತು.

ಈಶಾನ್ಯ ಭಾರತವು ಸ್ವಚ್ಛ, ಸುರಕ್ಷಿತ ಮುಂಗಾರಿಗಾಗಿ ಒಂದಾಗುತ್ತದೆ

ಮುಂಗಾರು ಹತ್ತಿರವಾಗುತ್ತಿದ್ದಂತೆ, ಈಶಾನ್ಯ ಭಾರತವು ಮಳೆಗಾಗಿ ಕಾಯದೇ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ, ಸಿಕ್ಕಿಂ ಮತ್ತು ತ್ರಿಪುರಾದ್ಯಂತ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಾಯಕತ್ವದ 'ಸಫಾಯಿ ಅಪ್ನಾವೋ, ಬಿಮಾರಿ ಭಗಾವೋ' ಅಭಿಯಾನವು ಸಾಮೂಹಿಕ ಸ್ವಚ್ಛತೆ ಮತ್ತು ರೋಗ ತಡೆಗಟ್ಟುವಿಕೆಯ ಮೂಲಕ ಮುಂಗಾರು ಪೂರ್ವ ಸಿದ್ಧತೆಯನ್ನು ಬಲಪಡಿಸುತ್ತಿದೆ.

ನಾಗಾಲ್ಯಾಂಡ್‌ನಲ್ಲಿ, ಆರು ನಗರಗಳ ನಗರ ಸ್ಥಳೀಯ ಸಂಸ್ಥೆಗಳು ಶಾಲಾ ಜಾಗೃತಿ ಚಟುವಟಿಕೆಗಳು, ಚರಂಡಿ ಸ್ವಚ್ಛತೆ, ಆರೋಗ್ಯ ಶಿಬಿರಗಳು ಮತ್ತು ನೈರ್ಮಲ್ಯ ಅಭಿಯಾನಗಳನ್ನು ನಡೆಸಿದವು. ಈ ಪ್ರಯತ್ನಗಳು 60 ಸ್ವಚ್ಛತಾ, 30 ಮಳೆನೀರು ಕೊಯ್ಲು ಮತ್ತು 40 ಮುಂಗಾರು ನಂತರದ ಜಾಗೃತಿ ಅಭಿಯಾನಗಳ ಮೂಲಕ ಸುಮಾರು 5,000 ಜನರನ್ನು ತೊಡಗಿಸಿಕೊಂಡವು. ಸಿಕ್ಕಿಂನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ, ಈ ಅಭಿಯಾನವು ಕಸ ಬೀಳುವ ಸೂಕ್ಷ್ಮ ಪ್ರದೇಶಗಳು ಹಾಗೂ ನೀರು ಮತ್ತು ರೋಗವಾಹಕಗಳಿಂದ ಬರುವ ರೋಗಗಳ ಅಪಾಯವನ್ನು ತಡೆಯುವತ್ತ ಗಮನಹರಿಸಿತು. ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮತ್ತು ಉತ್ತಮ ತ್ಯಾಜ್ಯ ನಿರ್ವಹಣೆಗಾಗಿ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸ್ವಸಹಾಯ ಸಂಘಗಳು ಒಂದಾದವು. ಜಾಗೃತಿ ರ್ಯಾಲಿಗಳು ಮತ್ತು ಪೆಟ್ ಬಾಟಲ್ ಸಂಸ್ಕರಣೆ/ಪುಡಿಮಾಡುವ ಉಪಕ್ರಮಗಳೊಂದಿಗೆ ಸುಮಾರು 4,000 ಜನರು 100 ಸ್ವಚ್ಛತಾ ಮತ್ತು 100 ಮುಂಗಾರು ನಂತರದ ಅಭಿಯಾನಗಳಲ್ಲಿ ಭಾಗವಹಿಸಿದರು. ಅಸ್ಸಾಂನಲ್ಲಿ, ನಗರಗಳು ಚರಂಡಿ ಸ್ವಚ್ಛತೆ, ತ್ಯಾಜ್ಯ ತೆರವು, ಸಫಾಯಿಮಿತ್ರ ಆರೋಗ್ಯ ತಪಾಸಣೆ ಮತ್ತು ತ್ಯಾಜ್ಯ ವಿಂಗಡಣೆಯತ್ತ ಗಮನಹರಿಸಿದವು. 160 ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಬೆಂಬಲದೊಂದಿಗೆ ಸುಮಾರು 5,500 ಜನರು 200 ಸ್ವಚ್ಛತಾ ಮತ್ತು 40 ಮಳೆನೀರು ಕೊಯ್ಲು ಚಟುವಟಿಕೆಗಳಲ್ಲಿ ಭಾಗವಹಿಸಿದರು.

ತ್ರಿಪುರಾದಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಬಲಪಡಿಸಿದವು. ಆರೋಗ್ಯ ಶಿಬಿರಗಳು, ಶಾಲಾ ರ್ಯಾಲಿಗಳು ಮತ್ತು ನೈರ್ಮಲ್ಯ ಉಪಕ್ರಮಗಳ ಜೊತೆಗೆ ಸುಮಾರು 5,000 ಜನರು 150 ಸ್ವಚ್ಛತಾ ಮತ್ತು 30 ಮಳೆನೀರು ಕೊಯ್ಲು ಅಭಿಯಾನಗಳಲ್ಲಿ ಭಾಗವಹಿಸಿದರು. ಅರುಣಾಚಲ ಪ್ರದೇಶದ 47 ನಗರ ಅಧಿಸೂಚಿತ ಪಟ್ಟಣಗಳಾದ್ಯಂತ, ತ್ಯಾಜ್ಯ ನಿರ್ವಹಣೆ, ನೀರಿನ ಗುಣಮಟ್ಟ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಕೈಗೊಳ್ಳಲಾಯಿತು. ನೀರು ಸಂಸ್ಕರಣಾ ಘಟಕಗಳನ್ನು ಪರಿಶೀಲಿಸಲಾಯಿತು, ಹಾಗೂ ಸಾಮೂಹಿಕ ಸ್ವಚ್ಛತಾ ಅಭಿಯಾನಗಳು ಕಸ ಬೀಳುವ ಸೂಕ್ಷ್ಮ ಪ್ರದೇಶಗಳನ್ನು ತಲುಪಿದವು. ಈ ಪ್ರಯತ್ನಗಳು ಸ್ವಚ್ಛತೆ ಮತ್ತು ರೋಗ ತಡೆಗಟ್ಟುವಿಕೆಯನ್ನು ದಿನನಿತ್ಯದ ಸಮುದಾಯದ ಚಟುವಟಿಕೆಯಾಗಿ ಹೇಗೆ ಸಂಯೋಜಿಸಬಹುದು ಎಂಬುದನ್ನು ತೋರಿಸಿಕೊಡುತ್ತವೆ.

ಹಿಂಭಾಗದ ರಸ್ತೆಗಳಿಂದ ಸ್ವಚ್ಛ, ಜೈವಿಕ ಹಾಗೂ ಜೀವಂತಿಕೆಯ ನೆರೆಹೊರೆಯ ಸ್ಥಳಗಳತ್ತ

'ಬ್ಯಾಕ್‌ಲೇನ್' ಎಂದರೆ ನೆರೆಹೊರೆಯ ಮನೆಗಳ ಹಿಂಭಾಗದಲ್ಲಿರುವ ಸ್ಥಳವಾಗಿದ್ದು, ಇದು ಸಾಮಾನ್ಯವಾಗಿ ಸಾರ್ವಜನಿಕರ ಕಡಿಮೆ ಸಂಚಾರವನ್ನು ಹೊಂದಿರುತ್ತದೆ. ಇಂತಹ ಪ್ರದೇಶಗಳು ತ್ಯಾಜ್ಯ ಶೇಖರಣೆ ಮತ್ತು ಅಕ್ರಮವಾಗಿ ಕಸ ಚೆಲ್ಲುವಿಕೆಗೆ ಗುರಿಯಾಗಬಹುದು. ಇದನ್ನು ಗುರುತಿಸಿದ ಮಧ್ಯಪ್ರದೇಶದಾದ್ಯಂತ ನಗರಗಳು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಬ್ಯಾಕ್‌ಲೇನ್ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಿದವು. ಈ ಉಪಕ್ರಮಗಳು ಮಳೆಗಾಲದಲ್ಲಿ ಮಳೆನೀರು ಸುಗಮವಾಗಿ ಹರಿಯುವಂತೆ ಮಾಡಲು ಒತ್ತುವರಿ ತೆರವುಗೊಳಿಸುವುದು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನು ಒಳಗೊಂಡಿದ್ದವು.

ರೇವಾದಲ್ಲಿ, ಮಹಾನಗರ ಪಾಲಿಕೆಯು ತನ್ನ ಶ್ರಮವನ್ನು ಕೇವಲ ಬ್ಯಾಕ್‌ಲೇನ್‌ಗಳಿಗೆ ಸೀಮಿತಗೊಳಿಸದೆ, ಎಲ್ಲಾ ವಾರ್ಡ್‌ಗಳ ಮುಂಭಾಗದ ರಸ್ತೆಗಳ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸಲು ವಿಸ್ತರಿಸಿತು. ಮುರಲ್ಸ್ (ಗೋಡೆ ಚಿತ್ರಗಳು) ಮತ್ತು ಸಾಂಪ್ರದಾಯಿಕ ಗೋಡೆ ವರ್ಣಚಿತ್ರಗಳನ್ನು ರಚಿಸಲಾಯಿತು, ಹಾಗೂ '3R' ತತ್ವಗಳಾದ — ತ್ಯಾಜ್ಯ ಕಡಿತ, ಮರುಬಳಕೆ ಮತ್ತು ಮರುಚಕ್ರಗೊಳಿಸುವಿಕೆ ಆಧಾರದ ಮೇಲೆ ಆಟದ ಉಪಕರಣಗಳು ಮತ್ತು ಸಂಗೀತ ವಾದ್ಯಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಗೋಡೆಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಸ್ವರಗಳು, ಅಕ್ಷರಮಾಲೆಗಳು, ಸಂಖ್ಯೆಗಳು ಮತ್ತು ಮಗ್ಗಿಯನ್ನು (ತಾಳಗಳನ್ನು) ಬರೆಯಲಾಗಿದೆ. ಸ್ವಚ್ಛತೆಯನ್ನು ಕಲಿಕೆ ಮತ್ತು ಮನರಂಜನಾ ಅಂಶಗಳೊಂದಿಗೆ ಸಂಯೋಜಿಸುವ ಮೂಲಕ, ಈ ಉಪಕ್ರಮವು ಹೆಚ್ಚು ಸುರಕ್ಷಿತ, ಕ್ರಿಯಾತ್ಮಕ ಮತ್ತು ಮಕ್ಕಳ ಸ್ನೇಹಿ ನೆರೆಹೊರೆಯ ಸ್ಥಳಗಳನ್ನು ನಿರ್ಮಿಸಲು ಸಹಾಯ ಮಾಡಿದೆ.

ಆಗ್ರಾದಲ್ಲಿ, ಆಗ್ರಾ ಮಹಾನಗರ ಪಾಲಿಕೆಯು ನಗರದಾದ್ಯಂತ ಒಂಬತ್ತು ಬ್ಯಾಕ್‌ಲೇನ್‌ಗಳನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಿ ನಿರ್ವಹಿಸಿದೆ. 'ಅರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್ ಪ್ರೋಗ್ರಾಂ'ನ ತರಬೇತಿದಾರರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ, ಸ್ಥಳೀಯ ನಿವಾಸಿಗಳು ನೆರೆಹೊರೆಯ ರಸ್ತೆಗಳ ಸ್ವಚ್ಛತೆ ಮತ್ತು ಸೌಂದರ್ಯೀಕರಣಕ್ಕೆ ಕೊಡುಗೆ ನೀಡಿದರು. ಅವರ ಈ ಭಾಗವಹಿಸುವಿಕೆಯು, ಸ್ವಚ್ಛತೆಯ ಮೇಲಿನ ಸ್ಥಳೀಯ ಮಾಲೀಕತ್ವದ ಭಾವನೆಯನ್ನು ಹೇಗೆ ಬಲಪಡಿಸಬಹುದು ಮತ್ತು ಹಂಚಿಕೆಯ ಸಾರ್ವಜನಿಕ ಸ್ಥಳಗಳ ನಿರಂತರ ನಿರ್ವಹಣೆಗೆ ಹೇಗೆ ಬೆಂಬಲ ನೀಡಬಹುದು ಎಂಬುದನ್ನು ಪ್ರದರ್ಶಿಸುತ್ತದೆ.

ಸುರಕ್ಷತೆಯಿಂದ ಅವಕಾಶದತ್ತ

ಭೋಪಾಲ್‌ನ ಜ್ಯೋತ್ಸ್ನಾ ಧಾಬ್ಡೆ ಅವರಿಗೆ, ಅನುಷ್ಠಾನಗೊಳಿಸಿದ ಸಾಂಸ್ಥಿಕ ಸಾಲದ ಸೌಲಭ್ಯವು ಉದ್ಯಮಶೀಲತೆಯನ್ನು ಮುಂದುವರಿಸಲು ಅವಕಾಶವನ್ನು ಒದಗಿಸಿತು. ಭೋಪಾಲ್ ಮಹಾನಗರ ಪಾಲಿಕೆಯ ಸಾಲ ಮೇಳದಲ್ಲಿ, ಅವರು 'ಸ್ವಚ್ಛತಾ ಉದ್ಯಮಿ ಯೋಜನೆ'ಯಡಿಯಲ್ಲಿ ಸಾಲವನ್ನು ಪಡೆದರು, ಇದು ಅವರಿಗೆ ನೈರ್ಮಲ್ಯ ವಾಹನವನ್ನು ಖರೀದಿಸಲು ಅನುವು ಮಾಡಿಕೊಟ್ಟಿತು. ನವದೆಹಲಿಯಲ್ಲಿ, ನವದೆಹಲಿ ನಗರಸಭೆಯ ಮೇಲ್ವಿಚಾರಕರಾದ ರಾಜಾ ಅವರು ಯಾಂತ್ರಿಕೃತ ಚರಂಡಿ ಸ್ವಚ್ಛತೆಯ ತಮ್ಮ ಅನುಭವವನ್ನು ಹಂಚಿಕೊಂಡರು.

"ಮೊದಲು, ಚರಂಡಿಗಳನ್ನು ಸ್ವಚ್ಛಗೊಳಿಸಲು ನಾವು ಅನಿವಾರ್ಯವಾಗಿ ಒಳಚರಂಡಿ (ಸೀವೇಜ್) ನೀರಿಗೆ ಇಳಿಯಬೇಕಾಗಿತ್ತು. ಆದರೆ ಆಧುನಿಕ ಯಂತ್ರಗಳ ಪರಿಚಯದಿಂದಾಗಿ, ಈಗ ಆ ಕೆಲಸವನ್ನು ಯಂತ್ರಗಳನ್ನು ಬಳಸಿ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ, ರಬ್ಬರ್ ಬೂಟುಗಳು, ಮಾಸ್ಕ್‌ಗಳು, ಸುಕ್ಷತಾ ಕನ್ನಡಕಗಳು, ಹೆಲ್ಮೆಟ್‌ಗಳು ಮತ್ತು ಇತರ ರಕ್ಷಣಾತ್ಮಕ ಉಪಕರಣಗಳಂತಹ ಸುರಕ್ಷತಾ ಸಾಧನಗಳನ್ನು ಒದಗಿಸಿರುವುದು ನಮಗೆ ಹೆಚ್ಚು ಸುರಕ್ಷಿತ ಭಾವನೆಯನ್ನು ನೀಡುತ್ತದೆ" ಎಂದು ರಾಜಾ ಹೇಳುತ್ತಾರೆ.

ಒಟ್ಟಾರೆಯಾಗಿ, ಈ ಅನುಭವಗಳು ನೈರ್ಮಲ್ಯ ಸೇವೆಯನ್ನು ಹೆಚ್ಚು ಸುರಕ್ಷಿತ, ಹೆಚ್ಚು ಕೌಶಲ್ಯಪೂರ್ಣ ಮತ್ತು ಹೆಚ್ಚು ಗೌರವಾನ್ವಿತ ಗೊಳಿಸುವ ಪ್ರಯತ್ನಗಳನ್ನು ವಿವರಿಸುತ್ತವೆ.

ಸಫಾಯಿಮಿತ್ರ ಸುರಕ್ಷಾ ಸವಾಲು 2021 ಮತ್ತು ಸ್ವಚ್ಛ ಭಾರತ್ ಮಿಷನ್ 2.0

ಸಫಾಯಿಮಿತ್ರ ಸುರಕ್ಷಾ ಸವಾಲು 2021 ಆರೋಗ್ಯ ಶಿಕ್ಷಣ, ಸುರಕ್ಷತಾ ಉಪಕರಣಗಳ ಪೂರೈಕೆ ಮತ್ತು ಬಳಕೆ, ಕಾರ್ಮಿಕರ ಕಲ್ಯಾಣ ಹಾಗೂ ಉದ್ಯೋಗ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡುವತ್ತ ಗಮನಹರಿಸಿದೆ. ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅಡಿಯಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೈರ್ಮಲ್ಯ ಸೇವೆಯಲ್ಲಿ 'ಶೂನ್ಯ ಸಾವುಗಳನ್ನು' ಸಾಧಿಸುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಂದ ರಕ್ಷಣಾತ್ಮಕ ಉಪಕರಣಗಳ ಪೂರೈಕೆ, ತರಬೇತಿ ಮತ್ತು ಸುರಕ್ಷತಾ ಜಾಗೃತಿಯನ್ನು ಒದಗಿಸುವುದನ್ನು ಒತ್ತಿಹೇಳಿದೆ.

ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಚಂಡೀಗಢವು 2018 ರಿಂದಲೇ ಅಪಾಯಕಾರಿ ಕೈಯಿಂದ ಚರಂಡಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಿದೆ. ಜವಾಬ್ದಾರಿಯುತ ನೈರ್ಮಲ್ಯ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ 'ತುರ್ತು ಸ್ಪಂದನಾ ನೈರ್ಮಲ್ಯ ಘಟಕ', ವೈಯಕ್ತಿಕ ರಕ್ಷಣಾ ಉಪಕರಣಗಳು, ಸುರಕ್ಷತಾ ಸಾಧನಗಳು ಮತ್ತು ನಿಯಮಿತ ವೈದ್ಯಕೀಯ ತಪಾಸಣೆಗಳನ್ನು ಒದಗಿಸುವ ಮೂಲಕ ಸುರಕ್ಷಿತ ನೈರ್ಮಲ್ಯ ಪದ್ಧತಿಗಳಿಗೆ ಬೆಂಬಲ ನೀಡುತ್ತದೆ.

ಅಸ್ಸಾಂನಲ್ಲಿ, 96 ನಗರ ಸ್ಥಳೀಯ ಸಂಸ್ಥೆಗಳಲ್ಲಿ 83 ಸಂಸ್ಥೆಗಳು 2023 ರಲ್ಲಿ ತಮ್ಮನ್ನು 'ಸಫಾಯಿಮಿತ್ರ ಸುರಕ್ಷಿತ ನಗರ'ಗಳೆಂದು ಘೋಷಿಸಿಕೊಂಡವು. ರಾಜ್ಯವು 5,230 ನೈರ್ಮಲ್ಯ ಕಾರ್ಮಿಕರನ್ನು ಗುರುತಿಸಿ, ನಕ್ಷೆ ಮಾಡಿ 92 ಆರೋಗ್ಯ ಶಿಬಿರಗಳನ್ನು ಆಯೋಜಿಸಿತು. ಮಹಾರಾಷ್ಟ್ರದಲ್ಲಿ, ಮೊದಲ ಹಂತದಲ್ಲಿ 246 'ಮಾಸ್ಟರ್ ತರಬೇತುದಾರರನ್ನು' ಸಿದ್ಧಪಡಿಸಲಾಯಿತು, ನಂತರ 1,917 ನೈರ್ಮಲ್ಯ ಕಾರ್ಮಿಕರಿಗೆ ತರಬೇತಿ ನೀಡಲಾಯಿತು. ಉತ್ತರ ಪ್ರದೇಶವು ಸಾಲದ ಸೌಲಭ್ಯ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಮೂಲಕ ಸಫಾಯಿಮಿತ್ರರಿಗೆ ಬೆಂಬಲ ನೀಡಿತು. ಒಟ್ಟಾರೆಯಾಗಿ, ಈ ಕ್ರಮಗಳು ಸಫಾಯಿಮಿತ್ರರ ಸುರಕ್ಷತೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ಗೌರವ ಹಾಗೂ ಉದ್ಯಮಶೀಲತೆಯ ಅವಕಾಶಗಳನ್ನು ಬಲಪಡಿಸಲು ಶ್ರಮಿಸುತ್ತವೆ, ಹಾಗೂ ನೈರ್ಮಲ್ಯ ಸೇವೆಯಿಂದ 'ಸ್ವಚ್ಛತಾ-ಉದ್ಯಮಶೀಲತೆಯತ್ತ' ಹಾದಿಯನ್ನು ನಿರ್ಮಿಸುತ್ತವೆ.

ಪೂರ್ವಸಿದ್ದತೆಯಿಂದ ಸಮುದಾಯದ ಕ್ರಿಯೆಯತ್ತ

ಮಳೆಯಾಗುತ್ತಿದ್ದಂತೆ, ಮುಂಗಾರು ಪೂರ್ವ ಸಿದ್ಧತೆಯ ನಿಜವಾದ ಮೌಲ್ಯವು ನೆಲಮಟ್ಟದಲ್ಲಿ ಗೋಚರಿಸುತ್ತದೆ. ಸ್ವಚ್ಛಗೊಳಿಸಿದ ಚರಂಡಿಯು ಮಳೆನೀರು ಸುಗಮವಾಗಿ ಹರಿಯಲು ಅನುವು ಮಾಡಿಕೊಡುತ್ತದೆ, ಸ್ವಚ್ಛವಾದ ರಸ್ತೆಯು ತ್ಯಾಜ್ಯ ಶೇಖರಣೆಯನ್ನು ತಡೆಯುತ್ತದೆ, ಮತ್ತು ಆರಂಭಿಕ ಆರೋಗ್ಯ ಶಿಬಿರವು ಸಮುದಾಯಗಳಿಗೆ ರೋಗದ ಅಪಾಯಗಳು ಹರಡುವ ಮುನ್ನವೇ ಅವುಗಳನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡುತ್ತದೆ. ಪ್ರತಿಯೊಂದು ಕ್ರಮದ ಕೇಂದ್ರಬಿಂದುವಾಗಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಸಾರ್ವಜನಿಕ ಆರೋಗ್ಯವನ್ನು ಹಂಚಿಕೆಯ ಹೊಣೆಗಾರಿಕೆಯನ್ನಾಗಿ ಮಾಡುತ್ತಿದ್ದಾರೆ.

ಈಶಾನ್ಯ ಭಾರತದ ಬೆಟ್ಟಗುಡ್ಡಗಳಿಂದ ಹಿಡಿದು ದೆಹಲಿಯ ರಸ್ತೆಗಳವರೆಗೆ, ಮತ್ತು ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಸಮುದಾಯಗಳಾದ್ಯಂತ, ಈ ಅಭಿಯಾನವು ವಿವಿಧ, ಸ್ಥಳೀಯ ರೂಪಗಳನ್ನು ಪಡೆದುಕೊಂಡಿದೆ. ಆದರೆ ಇವೆಲ್ಲವುಗಳ ಅಡಿಯಲ್ಲಿರುವುದು ಒಂದೇ ಏಕೀಕೃತ ಸತ್ಯ: ನಿಜವಾದ ಮುಂಗಾರು ಪೂರ್ವ ಸಿದ್ಧತೆಯು ಕೇವಲ ಮಳೆಗೆ ಪ್ರತಿಕ್ರಿಯಿಸುವುದಲ್ಲ, ಬದಲಿಗೆ ಒಟ್ಟಾಗಿ ಸಿದ್ಧರಾಗುವುದು — ಒಂದು ರಸ್ತೆ, ಒಂದು ನೆರೆಹೊರೆ ಮತ್ತು ಒಂದು ಬಾರಿಗೆ ಒಂದು ಸಮುದಾಯ.

 

 

References

Ministry of Housing and Urban Affairs

https://sbmurban.org/SABB-in-Northeast
https://sbmurban.org/safai-Apnao-Bimaari-Bhagao-2025
https://sbmurban.org/Back-Lanes-Cleaning
https://sbmurban.org/Sani-Entrepreneur

Click here to see pdf 

 

******

 

 

(Features ID: 160330) आगंतुक पटल : 68
Provide suggestions / comments
इस विज्ञप्ति को इन भाषाओं में पढ़ें: Urdu , English , हिन्दी , Assamese , Bengali , Telugu , Malayalam