Rural Prosperity

ನರ್ಮಲ್ಯವನ್ನೂ ಮೀರಿದ ಸಾಧನೆ: ಸ್ವಚ್ಛತೆಯ ಮಹಿಳಾ ಮತ್ತು ತೃತೀಯಲಿಂಗಿ ಬದಲಾವಣೆಯ ಹರಿಕಾರರು

Posted On: 30 SEP 2026 1:10PM

ಒಂದು ಸ್ವಚ್ಛ ನಗರವು ಹೆಚ್ಚಾಗಿ ಅಲ್ಲಿ ಇನ್ನು ಮುಂದೆ ಕಣ್ಣಿಗೆ ಕಾಣಿಸದಿರುವ ಸಂಗತಿಗಳ ಮೂಲಕ ಗುರುತಿಸಲ್ಪಡುತ್ತದೆ. ಬೀದಿಗಳಲ್ಲಿ ತ್ಯಾಜ್ಯ ಬಿದ್ದಿರುವುದಿಲ್ಲ, ಚರಂಡಿಗಳು ಬಂದ್ ಆಗಿರುವುದಿಲ್ಲ ಹಾಗೂ ಅಗತ್ಯವಿದ್ದಾಗ ನೈರ್ಮಲ್ಯ ಸೌಲಭ್ಯಗಳು ಲಭ್ಯವಿರುತ್ತವೆ. ಆದರೆ ಈ ದೃಶ್ಯಮಾನ ಬದಲಾವಣೆಯ ಹಿಂದೆ ಖಂಡಿತವಾಗಿಯೂ ಗುರುತಿಸಲ್ಪಡಬೇಕಾದ ಶ್ರಮಜೀವಿಗಳ ಪಯಣವಿದೆ. ತ್ಯಾಜ್ಯದಿಂದ ಜೀವನಾಧಾರವನ್ನು ಕಂಡುಕೊಳ್ಳುತ್ತಿರುವ, ತಮ್ಮ ಸಮುದಾಯಗಳಲ್ಲಿ ಸ್ವಚ್ಛತಾ ಕಾರ್ಯಗಳ ನೇತೃತ್ವ ವಹಿಸುತ್ತಿರುವ ಮತ್ತು ದೈನಂದಿನ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಿರುವ ಮಹಿಳೆಯರ ಪಯಣಗಳಿವು. ಅವರೊಂದಿಗೆ, ನೈರ್ಮಲ್ಯ ಸೇವೆಗಳಲ್ಲಿ ವೃತ್ತಿಪರ ಪಾತ್ರಗಳು ಮತ್ತು ಗೌರವ-ಅಂಗೀಕಾರವನ್ನು ಕಂಡುಕೊಳ್ಳುತ್ತಿರುವ ತೃತೀಯಲಿಂಗಿ ಸಮುದಾಯದ ಸದಸ್ಯರಿದ್ದಾರೆ. ನಗರಗಳಾದ್ಯಂತ ಸ್ವಚ್ಛತೆಯು ಕೇವಲ ಒಂದು ಸಾರ್ವಜನಿಕ ಸೇವೆಯಾಗಿ ಉಳಿಯದೆ, ಆತ್ಮಗೌರವ, ಉದ್ಯಮಶೀಲತೆ, ಭಾಗವಹಿಸುವಿಕೆ ಮತ್ತು ನವ ಅವಕಾಶಗಳ ವೇದಿಕೆಯಾಗುತ್ತಿದೆ.

ಸಮುದಾಯ ಭಾಗವಹಿಸುವಿಕೆಯ ಈ ಭಾವನೆಯು 17 ಸೆಪ್ಟೆಂಬರ್ 2026 ರಂದು ಪ್ರಾರಂಭವಾದ 'ಸ್ವಚ್ಛತಾ ಹೀ ಸೇವಾ 2026' ರಾಷ್ಟ್ರೀಯ ವೇದಿಕೆಯಲ್ಲಿ ಹೊಸ ಬಲವನ್ನು ಪಡೆದುಕೊಂಡಿದೆ. ಪ್ರತಿ ವರ್ಷವೂ ಈ ಅಭಿಯಾನವು ಸ್ವಚ್ಛತೆಗಾಗಿ ಸ್ವಯಂಸೇವಕತನ ಮತ್ತು ಸಾಮುದಾಯಿಕ ಕ್ರಿಯಾಶೀಲತೆಯನ್ನು ಬಲಪಡಿಸಲು ನಾಗರಿಕರು, ಸಂಸ್ಥೆಗಳು ಮತ್ತು ನಾಯಕತ್ವವನ್ನು ಒಂದೆಡೆ ತರುತ್ತದೆ.

“ಸ್ವಚ್ಛತೆಯಲ್ಲಿ ಸಹಭಾಗ; ಸ್ವಚ್ಛ ಭಾರತ, ವಿಕಸಿತ ಭಾರತ” ಎಂಬ ಧೈಯವಾಕ್ಯದೊಂದಿಗೆ, ಸ್ವಚ್ಛತಾ ಹೀ ಸೇವಾ 2026 ಅಭಿಯಾನವು ಹಂಚಿಕೆಯ ಹೊಣೆಗಾರಿಕೆಯನ್ನು ಸ್ವಚ್ಛತಾ ಚಳವಳಿಯ ಕೇಂದ್ರಬಿಂದುವನ್ನಾಗಿ ಮಾಡಿದೆ. 'ಸ್ವಚ್ಛ ಮತ್ತು ವಿಕಸಿತ ಭಾರತ'ದ ಪರಿಕಲ್ಪನೆಗೆ 'ಸಂಪೂರ್ಣ ಸರ್ಕಾರ' ಮತ್ತು 'ಸಂಪೂರ್ಣ ಸಮಾಜ' ಮಾದರಿಯ ಅಗತ್ಯವಿದೆ ಎಂಬುದನ್ನು ಇದು ಒತ್ತಿಹೇಳುತ್ತದೆ.

ಇಂತಹ ಸಾಮುದಾಯಿಕ ಭಾವನೆಯು ಉತ್ತರ ಪ್ರದೇಶದ ಲೋನಿಯಲ್ಲಿ ಅರ್ಥಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ, ಅಲ್ಲಿ ಒಮ್ಮೆ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ವಸ್ತುವೊಂದು ಇಂದು ಜೀವನೋಪಾಯದ ಮೂಲವಾಗುತ್ತಿದೆ.

ತ್ಯಾಜ್ಯವು ಜೀವನಾಧಾರವಾದಾಗ

ಗೋಶಾಲೆಗಳು ಮತ್ತು ಹಾಲಿನ ಡೈರಿಗಳ ಸುತ್ತಮುತ್ತ ಸಗಣಿಯು ಚರಂಡಿ ಹಾಗೂ ಒಳಚರಂಡಿ ನಾಲಾಗಳನ್ನು ಬಂದ್ ಮಾಡುವ ಮೂಲಕ ಕಠಿಣ ತ್ಯಾಜ್ಯ ನಿರ್ವಹಣೆಯ ಸವಾಲಾಗಿ ಪರಿಣಮಿಸಬಹುದು. ಆದರೆ ಲೋನಿಯ ಕೃಷ್ಣ ವಿಹಾರ್ ಕಾಲೋನಿಯ ಮಹಿಳೆಯರ ಗುಂಪು ಇದರಲ್ಲೊಂದು ಹೊಸ ದಾರಿಯನ್ನು ಕಂಡುಕೊಂಡಿತು. ಅವರು ಸಗಣಿಯನ್ನು ಬಳಸಿ ಧೂಪದ ಕಡ್ಡಿಗಳು ಮತ್ತು ಲೋಬಾನ್ ಕಪ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.

ಕೇವಲ 8-10 ಮಹಿಳೆಯರಿಂದ ಪ್ರಾರಂಭವಾದ ಈ ಸಣ್ಣ ಪ್ರಯತ್ನವು ಇಂದು ಅನೇಕರಿಗೆ ಸುಸ್ಥಿರ ಜೀವನೋಪಾಯದ ಅವಕಾಶವಾಗಿ ಬೆಳೆದಿದೆ. ಲೋನಿ ನಗರ ಪಾಲಿಕಾ ಪರಿಷತ್ತಿನ ಮಹಿಳಾ ಅಧಿಕಾರಿಯೊಬ್ಬರು ಈ ಕಾರ್ಯದ ಸಾಮರ್ಥ್ಯವನ್ನು ಗುರುತಿಸಿ, ಸಗಣಿಯ ನಿರಂತರ ಪೂರೈಕೆ ಮತ್ತು ಸದ್ಬಳಕೆಗಾಗಿ ಉತ್ಪಾದಕರನ್ನು ಗೋಶಾಲೆ ಮಾಲೀಕರೊಂದಿಗೆ ಜೋಡಿಸಲು ನೆರವಾದರು. 'ತ್ಯಾಜ್ಯವೆಂದು ಎಸೆಯಲ್ಪಡುವ ವಸ್ತುವಿಗೆ ಹೊಸ ಜೀವನ ನೀಡಿದರೆ ಹೇಗಿರುತ್ತದೆ?' ಎಂಬ ಸರಳ ಆಲೋಚನೆಯೊಂದು ಇಲ್ಲಿ ಆಳವಾಗಿ ಬೇರೂರಿತು.

ಧೂಪದ ಕಡ್ಡಿಗಳ ಉತ್ಪಾದನೆಯು ಗರಿಷ್ಠ ಮಟ್ಟದಲ್ಲಿರುವ ಬೇಸಿಗೆಯ ತಿಂಗಳುಗಳಲ್ಲಿ, ಈ ಉದ್ಯಮವು ಸುಮಾರು 40-50 ಮಹಿಳೆಯರಿಗೆ ಉದ್ಯೋಗ ನೀಡುತ್ತದೆ. ಈ ಮಹಿಳೆಯರಿಗೆ ಈ ಕೆಲಸವು ಕೇವಲ ಉತ್ಪನ್ನ ತಯಾರಿಕೆಗಿಂತ ಹೆಚ್ಚಿನದಾಗಿದೆ. ಇದು ಜೀವನೋಪಾಯ, ಘನತೆ ಮತ್ತು ತ್ಯಾಜ್ಯವನ್ನು ಉಪಯುಕ್ತ ವಸ್ತುವಾಗಿ ಪರಿವರ್ತಿಸುವ ತೃಪ್ತಿಯನ್ನು ತಂದುಕೊಡುತ್ತದೆ. ಈ ಉತ್ಪನ್ನಗಳ ಮಾರಾಟದಿಂದ ಲೋನಿ ನಗರ ಪಾಲಿಕಾ ಪರಿಷತ್ತು ಸಹ ಶೇಕಡಾ 25 ರಷ್ಟು ಆದಾಯವನ್ನು ಗಳಿಸುತ್ತದೆ. ಇದು ತ್ಯಾಜ್ಯ ನಿರ್ವಹಣೆ, ಸ್ಥಳೀಯ ಉದ್ಯಮಶೀಲತೆ ಮತ್ತು ನಗರಸಭೆಯ ಆದಾಯದ ನಡುವೆ ಬಲವಾದ ಕೊಂಡಿಯನ್ನು ಸೃಷ್ಟಿಸಿದೆ.

ಈ ಉತ್ಪನ್ನಗಳು ಮರುಬಳಕೆಯ ಸುಂದರ ಕಥೆಯನ್ನು ಸಾರುತ್ತವೆ. ಸಾಂಪ್ರದಾಯಿಕವಾಗಿ ಧೂಪದ ಉತ್ಪನ್ನಗಳನ್ನು ತಯಾರಿಸಲು ಮರದ ಹೊಟ್ಟು ಮುಖ್ಯ ಕಚ್ಚಾವಸ್ತುವಾಗಿ ಅಗತ್ಯವಿರುತ್ತದೆ. ಆದರೆ ಶೇಕಡಾ 30-35 ರಷ್ಟು ಒಣ ಸಗಣಿ ನೀಡುವ ಪುಡಿಯನ್ನು ಬೆರೆಸುವುದರಿಂದ ಅಗತ್ಯವಿರುವ ಮರದ ಹೊಟ್ಟಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ನೈರ್ಮಲ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ ಪರಿಸರ ಸುಸ್ಥಿರ ಪರಿಹಾರವಾಗಿಯೂ ಹೊರಹೊಮ್ಮಿದೆ.

ಒಂದು ಕಾಲೋನಿಯಲ್ಲಿ ಪ್ರಾರಂಭವಾದ ಈ ಪ್ರಯೋಗವು ಇಂದು ಅತ್ಯಂತ ದೂರದ ಪ್ರದೇಶಗಳಿಗೆ ತಲುಪಿದೆ. ಈ ಉತ್ಪನ್ನಗಳು ದೆಹಲಿ, ಮುಂಬೈ, ಪಂಜಾಬ್, ಗುಜರಾತ್ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಹಲವು ಭಾಗಗಳಿಗೆ ಸರಬರಾಜಾಗುತ್ತಿವೆ. ಕೋವಿಡ್ ಅವಧಿಯಲ್ಲಿ ಪ್ರಮುಖ ಬ್ರ್ಯಾಂಡ್‌ಗಳಿಗಾಗಿಯೂ ಇವುಗಳನ್ನು ಉತ್ಪಾದಿಸಲಾಗಿದ್ದು, ಇವುಗಳ ರಫ್ತು ಆದೇಶಗಳು ಮೊರಿಷಸ್ ಮತ್ತು ದಕ್ಷಿಣ ಆಫ್ರಿಕಾವನ್ನೂ ತಲುಪಿದ್ದವು.

ಮತ್ತು ಈ ಮಹಿಳೆಯರು ಇಲ್ಲಿಗೆ ಪ್ರಕ್ರಿಯೆಯನ್ನು ನಿಲ್ಲಿಸುತ್ತಿಲ್ಲ. ಪೂಜಾ ಹವನಗಳು, ಶ್ಮಶಾನಗಳು ಮತ್ತು ಇತರ ಕಾರ್ಯಗಳಲ್ಲಿ ಉರಿಕಟ್ಟಿಗೆಯಾಗಿ ಬಳಸಲು ಸಗಣಿಯಿಂದ ಇಂಧನ ಮರಗಳನ್ನು ತಯಾರಿಸುವ ಯೋಜನೆಗಳನ್ನು ಪರಿಶೀಲಿಸಲಾಗುತ್ತಿದೆ. ಪರಿಸರ ಸ್ನೇಹಿಯಾಗಿ ಮಣ್ಣಿನಲ್ಲಿ ಕರಗಿ ಗೊಬ್ಬರವಾಗುವ ಸಗಣಿಯ ಕುಂಡಗಳನ್ನು ತಯಾರಿಸುವ ನವೀನ ಪ್ರಯತ್ನಗಳೂ ನಡೆಯುತ್ತಿವೆ.

ಇಲ್ಲಿ ಸ್ವಚ್ಛತೆಯ ಪರಿಕಲ್ಪನೆಯು ಕೇವಲ ತ್ಯಾಜ್ಯವನ್ನು ತೆಗೆದುಹಾಕುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಆ ತ್ಯಾಜ್ಯವು ಇನ್ಯಾವ ಉಪಯುಕ್ತ ರೂಪವನ್ನು ಪಡೆಯಬಹುದು ಎಂದು ಆಲೋಚಿಸುವಲ್ಲಿ ವಿಸ್ತರಿಸಿದೆ.

ತ್ಯಾಜ್ಯ ಸಂಗ್ರಹಕಾರರಿಂದ ತ್ಯಾಜ್ಯ ನಿರ್ವಹಣಾ ನಾಯಕರವರೆಗೆ

ಇದೇ ರೀತಿಯ ಬದಲಾವಣೆಯ ಗಾಳಿಯು ಬಿಹಾರದ ಪಟ್ನಾದಲ್ಲಿ ಬೀಸುತ್ತಿದ್ದು, ಅಲ್ಲಿ ಮಹಿಳೆಯರು ಹಳೆಯ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದು, ನೈರ್ಮಲ್ಯಕ್ಕೆ ಹೊಸ ಹಾಗೂ ಸಕಲರ ಒಳಗೊಳ್ಳುವಿಕೆಯ ಸ್ವರೂಪವನ್ನು ನೀಡುತ್ತಿದ್ದಾರೆ. ನಗರದ 'ಪಿಂಕ್ ಮೆಟೀರಿಯಲ್ ರಿಕವರಿ ಫೆಸಿಲಿಟಿ' (ತ್ಯಾಜ್ಯ ಮರುಪೂರಣ ಘಟಕ) ಯಲ್ಲಿ ಮಹಿಳೆಯರು ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಯ ಕೇಂದ್ರಬಿಂದುವಾಗಿ ನಿಂತಿದ್ದಾರೆ. ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡುವ ಮತ್ತು ಮಹಿಳಾ ಮೇಲ್ವಿಚಾರಕರಿಂದ ನಾಯಕತ್ವ ವಹಿಸಲ್ಪಟ್ಟಿರುವ ಈ ಘಟಕವು ಪ್ರತಿದಿನ 2 ಟನ್ ಒಣ ತ್ಯಾಜ್ಯ ಮತ್ತು 1.5 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

ತ್ಯಾಜ್ಯ ನಿರ್ವಹಣಾ ವಲಯದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಪಿಂಕ್ ಎಂಆರ್‌ಎಫ್ ಪರಿಕಲ್ಪನೆಯು ಹೊರಹೊಮ್ಮಿತು. ಯೋಜನಾ ತಂಡವು 'ಪಟ್ನಾ ಮಹಾನಗರ ಪಾಲಿಕೆ'ಗೆ ಈ ಪ್ರಸ್ತಾಪವನ್ನು ಸಲ್ಲಿಸಿತು. ಪಾಲಿಕೆಯು ಇದಕ್ಕೆ ತಕ್ಷಣವೇ ಬೆಂಬಲ ನೀಡಿದ್ದರಿಂದ, ಕೇವಲ ಮೂರು ತಿಂಗಳಲ್ಲಿ ಈ ಸುಸಜ್ಜಿತ ಘಟಕವನ್ನು ಸ್ಥಾಪಿಸಲಾಯಿತು. ಇದರ ವಿಶಿಷ್ಟವಾದ ಗುಲಾಬಿ ಬಣ್ಣ ಮತ್ತು ವಿನ್ಯಾಸವು ಸ್ಥಳೀಯ ನಾಗರಿಕರ ಗಮನ ಸೆಳೆದು, ಸ್ವಚ್ಛತಾ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ನೆರವಾಯಿತು.

ಈ ನವೀನ ಪರಿಕಲ್ಪನೆಯು 'ಕ್ಯಾಶ್ ಫಾರ್ ವೇಸ್ಟ್' (ತ್ಯಾಜ್ಯ ನೀಡಿ ಹಣ ಪಡೆಯಿರಿ) ಕಾರ್ಯಕ್ರಮದ ಮೂಲಕ ನೇರವಾಗಿ ಸಮುದಾಯವನ್ನು ತಲುಪುತ್ತಿದೆ. ನಾಗರಿಕರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಇಲ್ಲಿಗೆ ತಂದು ನಿಗದಿತ ದರದಲ್ಲಿ ಹಣವನ್ನು ಪಡೆಯಬಹುದು. ಇದರಿಂದ ತ್ಯಾಜ್ಯಕ್ಕೆ ಮೌಲ್ಯ ಸಿಗುತ್ತದೆ, ಭಾಗವಹಿಸಲು ನಾಗರಿಕರಿಗೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ನಗರದ ಸ್ವಚ್ಛತಾ ಪಯಣಕ್ಕೆ ಮತ್ತಷ್ಟು ಕೈಗಳು ಜೋಡಣೆಯಾಗುತ್ತವೆ.

ಪಟ್ನಾದ ಸ್ವಚ್ಛತಾ ಪಯಣವು ಇಲ್ಲಿಗೆ ಮುಗಿಯದೆ ಮತ್ತೊಂದು ಸ್ವಾರಸ್ಯಕರ ತಿರುವನ್ನು ಪಡೆಯುತ್ತದೆ. ಹಳೆಯ, ಬಳಸಲಾಗದ ವಾಹನಗಳಿಗೆ ಮರುಜೀವ ನೀಡಿ 'ಸಂಚಾರಿ ಪಿಂಕ್ ಶೌಚಾಲಯಗಳಾಗಿ' ಪರಿವರ್ತಿಸಲಾಗಿದೆ. ಒಮ್ಮೆ ಗುಜರಿಯಾಗಿದ್ದ ವಾಹನಗಳು ಇಂದು ನಗರದ ಅತ್ಯಂತ ಅಗತ್ಯ ನೈರ್ಮಲ್ಯ ಸೇವೆಯನ್ನು ಪೂರೈಸುತ್ತಿವೆ. ಇದು 3R ಸೂತ್ರದ  (ತಗ್ಗಿಸು, ಮರುಬಳಕೆ ಮಾಡು, ಮರುಚಕ್ರಿಕರಣಗೊಳಿಸು) ಜೀವಂತ ಉದಾಹರಣೆಯಾಗಿ ರಸ್ತೆಗಳಲ್ಲಿ ಗೋಚರಿಸುತ್ತಿದೆ.

ಒಟ್ಟಾರೆಯಾಗಿ, 'ಪಿಂಕ್ ಎಂಆರ್‌ಎಫ್' ಮತ್ತು 'ಸಂಚಾರಿ ಪಿಂಕ್ ಶೌಚಾಲಯಗಳು' ಸಾಮಾಜಿಕ ನ್ಯಾಯ, ಪರಿಸರ ಜಾಗೃತಿ ಮತ್ತು ಆರ್ಥಿಕ ಅವಕಾಶಗಳನ್ನು ಒಟ್ಟಿಗೆ ಪ್ರತಿಬಿಂಬಿಸುತ್ತವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಇವು ಒಂದು ಸರಳ ಸಂದೇಶವನ್ನು ಸಾರುತ್ತವೆ: ಸ್ವಚ್ಛತಾ ಅಭಿಯಾನದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ನೀಡಿದಾಗ, ಅವರು ವ್ಯವಸ್ಥೆಯ ಭಾಗವಾಗಿ ಮಾತ್ರ ಉಳಿಯುವುದಿಲ್ಲ; ಬದಲಿಗೆ ಇಡೀ ವ್ಯವಸ್ಥೆಯನ್ನೇ ಮರುರೂಪಿಸಲು ನೆರವಾಗುತ್ತಾರೆ.

ತಮ್ಮ ಸಮುದಾಯಗಳಲ್ಲಿ ಸ್ವಚ್ಛತೆಯನ್ನು ಪಸರಿಸುತ್ತಿರುವ ಮಹಿಳೆಯರು

ಮಹಿಳೆಯರು ಮತ್ತು ಸ್ವಚ್ಛತೆಯ ಬಾಂಧವ್ಯದ ಕಥೆಯು ಅವರು ಸಂಸ್ಕರಿಸುವ ತ್ಯಾಜ್ಯದೊಂದಿಗೆ ಮಾತ್ರ ಮುಕ್ತಾಯಗೊಳ್ಳುವುದಿಲ್ಲ. ಬದಲಿಗೆ, ಅವರು ತಲುಪುವ ಸಮುದಾಯಗಳ ಮೂಲಕ ಅದು ಮತ್ತಷ್ಟು ವಿಸ್ತರಿಸುತ್ತದೆ. ಭೋಪಾಲ್‌ನಲ್ಲಿ, 250 ಮಹಿಳಾ ರಾಯಭಾರಿಗಳ ಗುಂಪೊಂದು ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಮಹಾನಗರ ಪಾಲಿಕೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈ ಗುಂಪಿನ ಸದಸ್ಯರು 25 ವಾರ್ಡ್‌ಗಳಾದ್ಯಂತ 'ಬಾತ್ರನ್ ಬ್ಯಾಂಕ್‌ಗಳನ್ನು' (ಪಾತ್ರೆ ಬ್ಯಾಂಕ್‌ಗಳು) ಸ್ಥಾಪಿಸಿದ್ದಾರೆ. ಸಾಮುದಾಯಿಕ ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಗೆ ಮರುಬಳಕೆ ಮಾಡಬಹುದಾದ ಪಾತ್ರೆಗಳ ಸೆಟ್‌ಗಳನ್ನು ಒದಗಿಸುವ ಮೂಲಕ, ಈ ಬ್ಯಾಂಕ್‌‌ಗಳು ಸ್ಥಳೀಯ ಸಮಾರಂಭಗಳನ್ನು 'ಶೂನ್ಯ-ತ್ಯಾಜ್ಯ' ತತ್ವಗಳಡಿಯಲ್ಲಿ ಆಯೋಜಿಸುವುದನ್ನು ಖಚಿತಪಡಿಸುತ್ತವೆ.

60 ಸದಸ್ಯರನ್ನು ಹೊಂದಿರುವ 'ಸ್ವಚ್ಛತಾ ಕಿಟ್ಟಿ ಗ್ರೂಪ್' ಒಗ್ಗಟ್ಟನ್ನು ಕ್ರಿಯೆಯಾಗಿ ಪರಿವರ್ತಿಸಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ಪ್ರತಿಯೊಬ್ಬ ಮಹಿಳೆಯೂ ಪ್ರತಿ ತಿಂಗಳು ₹100 ಕೊಡುಗೆ ನೀಡುವ ಮೂಲಕ ಸಾಮುದಾಯಿಕ ಸ್ವಚ್ಛತಾ ಚಟುವಟಿಕೆಗಳಿಗಾಗಿ ಜಂಟಿ ನಿಧಿಯನ್ನು ಸೃಷ್ಟಿಸುತ್ತಾರೆ. ಹಲವು ಕೈಗಳು ನೀಡುವ ಸಣ್ಣ ಕೊಡುಗೆಗಳು, ಸ್ವಚ್ಛ ನೆರೆಹೊರೆಗಾಗಿ ಒಂದು ಬಲವಾದ ಸಾಮುದಾಯಿಕ ಬದ್ಧತೆಯಾಗಿ ಮಾರ್ಪಡುತ್ತವೆ.

ಉತ್ತರಾಖಂಡದಲ್ಲಿ, ಈ ಸಾಮುದಾಯಿಕ ಭಾವನೆಯು 'ಬೈನ್ನಿ ಸೇನಾ' - 'ಸೋದರಿಯರ ಸೈನ್ಯ' ಎಂಬ ಹೆಸರನ್ನು ಪಡೆದುಕೊಂಡಿದೆ. 57 ಗುಂಪುಗಳಾದ್ಯಂತ, 570 ಮಹಿಳೆಯರು ತಮ್ಮ ವಾರ್ಡ್‌ಗಳಲ್ಲಿ ಸ್ವಚ್ಛತಾ ಚಟುವಟಿಕೆಗಳ ಉಸ್ತುವಾರಿ ವಹಿಸುತ್ತಿದ್ದಾರೆ. ಅವರು ನಾಗರಿಕರೊಂದಿಗೆ ಸಂವಹನ ನಡೆಸುತ್ತಾರೆ, ದೂರುಗಳನ್ನು ತಲುಪಿಸಲು ನೆರವಾಗುತ್ತಾರೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ನಗರ ಆಡಳಿತ ಮತ್ತು ನೈರ್ಮಲ್ಯ ಕಾರ್ಮಿಕರ ನಡುವೆ ಸಮನ್ವಯತೆಯನ್ನು ಸಾಧಿಸುತ್ತಾರೆ. ನಗರದ ಸ್ವಚ್ಛತೆಯು ನಿಜವಾಗಿ ನಿರ್ಧಾರವಾಗುವ ಸ್ಥಳದಲ್ಲೇ ಇವರ ಕಾರ್ಯ ನಡೆ ಯುತ್ತಿದೆ. ಪ್ರತಿಯೊಂದು ನೆರೆಹೊರೆಯಲ್ಲಿ, ಮಾತುಕತೆಗಳಲ್ಲಿ ಹಾಗೂ ಸಾರ್ವಜನಿಕರು ಕಾಳಜಿ ವಹಿಸಲು ನಿರ್ಧರಿಸುವ ಪ್ರತಿ ಸಣ್ಣ ಕ್ಷಣಗಳಲ್ಲೂ ಇವರ ಶ್ರಮ ಆಕಾರ ಪಡೆಯುತ್ತಿದೆ.

ಶಿಲ್ಲಾಂಗ್‌ನಲ್ಲಿ, 'ಐನ್ನೆಸ್ಖೆಮ್ ಸ್ವಸಹಾಯ ಗುಂಪು' ತ್ಯಾಜ್ಯದ ಮೂಲಕ ಜೀವನಾಧಾರ ಕಂಡುಕೊಳ್ಳುವ ಹೊಸ ಹಾದಿಯನ್ನು ಕಂಡುಕೊಂಡಿದೆ. ಈ ಮಹಿಳೆಯರು ಮನೆಗಳಿಂದ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ, ಜೈವಿಕವಾಗಿ ಕೊಳೆಯುವ ತ್ಯಾಜ್ಯವನ್ನು ಸಾವಯವ ಗೊಬ್ಬರನ್ನಾಗಿ ಪರಿವರ್ತಿಸುತ್ತಾರೆ. ಹಿಂದೆ ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿದ್ದ ಇವರಿಗೆ ಪುನರ್ವಸತಿ ಉಪಕ್ರಮದ ಮೂಲಕ ಸೂಕ್ತ ತರಬೇತಿ ನೀಡಿ, ಗೊಬ್ಬರ ತಯಾರಿಕೆಯ ಸುತ್ತ ಹೊಸ ಜೀವನೋಪಾಯವನ್ನು ಕಟ್ಟಿಕೊಡಲಾಗಿದೆ. ಇವರ ಒಗ್ಗಟ್ಟು ಇವರಿಗೆ 'ಮೇರಿ ಮೇಡನ್ಸ್ ಆಫ್ ಮಾರ್ಟನ್' ಎಂಬ ಪ್ರೀತಿಯ ಹೆಸರನ್ನು ತಂದುಕೊಟ್ಟಿದೆ.

ತಮ್ಮ ದೈನಂದಿನ ಶ್ರಮದ ಮೂಲಕ, ಈ ಮಹಿಳೆಯರು ಸ್ವಚ್ಛತೆಯನ್ನು ಕೇವಲ ಒಂದು ಜವಾಬ್ದಾರಿಯನ್ನಾಗಿ ಮಾಡದೆ, ಕಾಳಜಿಯ ಹಂಚಿಕೆಯ ಸಂಸ್ಕೃತಿಯನ್ನಾಗಿ ಪರಿವರ್ತಿಸುತ್ತಿದ್ದಾರೆ.

ಸಕಲರ ಒಳಗೊಳ್ಳುವಿಕೆಯು ನೈರ್ಮಲ್ಯದ ಸ್ವರೂಪವನ್ನು ಬದಲಾಯಿಸಿದಾಗ

ಒಡಿಶಾದಲ್ಲಿ, ತೃತೀಯಲಿಂಗಿ ವ್ಯಕ್ತಿಗಳು ನಗರ ನೈರ್ಮಲ್ಯ ವ್ಯವಸ್ಥೆಯ ಕೇಂದ್ರಬಿಂದುವಾಗುವ ಪ್ರಮುಖ ಪಾತ್ರಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಈ ಮಹತ್ವದ ಬದಲಾವಣೆಯು ಕಟಕ್‌ನಲ್ಲಿ ಪ್ರಾರಂಭವಾಯಿತು, ಅಲ್ಲಿ ಮಹಾನಗರ ಪಾಲಿಕೆಯು ತೃತೀಯಲಿಂಗಿ ವ್ಯಕ್ತಿಗಳನ್ನು ಸಂಘಟಿಸಿ ಸ್ವಸಹಾಯ ಗುಂಪಾಗಿ ರೂಪಿಸಿತು. ಇವರಿಗೆ ಅಗತ್ಯ ತರಬೇತಿ ನೀಡಿ, ಸೆಪ್ಟೇಜ್ ಸಂಸ್ಕರಣಾ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.

ಇದು ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಬದಲಾವಣೆಯಾಗಿತ್ತು. ಸಾಂಪ್ರದಾಯಿಕವಾಗಿ ಅಧಿಕೃತ ಅವಕಾಶಗಳಿಂದ ವಂಚಿತರಾಗಿದ್ದ ಸಮುದಾಯವೊಂದು, ಇಂದು ಉನ್ನತ ತಾಂತ್ರಿಕ ನೈರ್ಮಲ್ಯ ಘಟಕದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.

ಈ ಯಶಸ್ವಿ ಮಾದರಿಯು ತದನಂತರ ಒಡಿಶಾದ್ಯಂತ ವಿಸ್ತರಿಸಲ್ಪಟ್ಟಿತು. ನಗರ ಸ್ಥಳೀಯ ಸಂಸ್ಥೆಗಳು ಮಲದ ಹೂಳು ಮತ್ತು ಸೆಪ್ಟೇಜ್ ನಿರ್ವಹಣೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಸ್ವಸಹಾಯ ಗುಂಪುಗಳೊಂದಿಗೆ ಸಹಭಾಗಿತ್ವವನ್ನು ವಹಿಸಲು ಪ್ರಾರಂಭಿಸಿದವು.

ಭುವನೇಶ್ವರದಲ್ಲಿ, 'ಸ್ವೀಕೃತಿ ಸ್ವಸಹಾಯ ಗುಂಪು' ಬಸುವಾಘಾಯ್‌ನಲ್ಲಿರುವ 75-ಕೆಎಲ್‌ಡಿ ಸಾಮರ್ಥ್ಯದ ಮಲದ ಹೂಳು ಸಂಸ್ಕರಣಾ ಘಟಕದ  ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಗುಂಪಿನ ಸದಸ್ಯರು ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಮೊದಲು ಅಗತ್ಯ ತಾಂತ್ರಿಕ, ನಿರ್ವಹಣಾ ಮತ್ತು ಪ್ರಾಯೋಗಿಕ ತರಬೇತಿಯನ್ನು ಪಡೆದುಕೊಂಡರು.

'ಸ್ವೀಕೃತಿ' ಗುಂಪಿನ ಅಧ್ಯಕ್ಷರಾದ ಮೇಘನಾ ಸಾಹೂ ಅವರಿಗೆ ಈ ಬದಲಾವಣೆಯು ಅತ್ಯಂತ ವೈಯಕ್ತಿಕ ಹಾಗೂ ಭಾವನಾತ್ಮಕವಾದದ್ದು. "ಈಗ ನಾವು ನಮ್ಮ ಅನನ್ಯ ಗುರುತನ್ನು ಹೆಮ್ಮೆಯಿಂದ ಅಪ್ಪಿಕೊಳ್ಳಬಹುದು ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು" ಎಂದು ಅವರು ಹೇಳುತ್ತಾರೆ. ತಮ್ಮ ಗುಂಪಿನ ಸದಸ್ಯರು ದೇಶ-ವಿದೇಶಗಳ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಭೇಟಿದಾರರಿಗೆ ತಮ್ಮ ಸಂಸ್ಕರಣಾ ಕಾರ್ಯವನ್ನು ವಿವರಿಸುವಾಗ ತಮಗಾಗುವ ಹೆಮ್ಮೆಯನ್ನು ಅವರು ಹಂಚಿಕೊಳ್ಳುತ್ತಾರೆ. ಇದರ ಪ್ರಾಮುಖ್ಯತೆಯು ಕೇವಲ ಕೆಲಸದಲ್ಲಿ ಮಾತ್ರವಲ್ಲದೆ, ಆ ಕೆಲಸವು ಸೃಷ್ಟಿಸುವ ಗೌರವದಲ್ಲಿದೆ: ವೃತ್ತಿಪರ ಗುರುತು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಮಾನ್ಯತೆ.

ಭುವನೇಶ್ವರ ಮಹಾನಗರ ಪಾಲಿಕೆಯು 7 ಸೆಸ್‌ಪೂಲ್ ವಾಹನಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ತೃತೀಯಲಿಂಗಿ ಗುಂಪುಗಳನ್ನು ತೊಡಗಿಸಿಕೊಂಡಿದೆ. ಚಾಲಕರು ಮತ್ತು ಸಹಾಯಕರನ್ನು ನಿಗದಿತ ಕನಿಷ್ಠ ವೇತನದೊಂದಿಗೆ ಕೆಲಸಕ್ಕೆ ನಿಯೋಜಿಸಲಾಗಿದೆ. ಅವರಿಗೆ ಆರೋಗ್ಯ, ನೈರ್ಮಲ್ಯ, ವೈಯಕ್ತಿಕ ರಕ್ಷಣಾ ಉಪಕರಣಗಳ  ಬಳಕೆ ಮತ್ತು ಹೂಳು ತೆಗೆಯುವ ಪ್ರೋಟೋಕಾಲ್‌ಗಳ ಕುರಿತು ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ತೃತೀಯಲಿಂಗಿ ಸಮುದಾಯಕ್ಕೆ ಸುಸ್ಥಿರ ಆಧಾರದ ಜೀವನೋಪಾಯದ ಆಯ್ಕೆಗಳನ್ನು ವಿಸ್ತರಿಸುವ ಒಡಿಶಾದ ಈ ಪ್ರವರ್ತಕ ಹೆಜ್ಜೆಯು ದೇಶಾದ್ಯಂತ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಸಕಲರ ಒಳಗೊಳ್ಳುವಿಕೆಯ ಭಾಗವಹಿಸುವಿಕೆಯು ಹೆಗೆ ಉತ್ತಮ ನೈರ್ಮಲ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ನಿರೂಪಿಸುವ ಮೂಲಕ ಇದು ಇತರ ರಾಜ್ಯಗಳಿಗೂ ಮಾದರಿಯಾಗಿದೆ.

ಸ್ವಚ್ಛತೆಯ ಆಳವಾದ ಅಂತರಾರ್ಥ

ಈ ಸ್ಪೂರ್ತಿದಾಯಕ ಕಥೆಗಳು ಸ್ವಚ್ಛತೆಯು ಕೇವಲ ಸುಂದರ ಪರಿಸರವನ್ನು ನಿರ್ಮಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬಲ್ಲದು ಎಂಬುದನ್ನು ತೋರಿಸಿಕೊಡುತ್ತವೆ. ಇದು ಸುಸ್ಥಿರ ಜೀವನೋಪಾಯ, ಸಾಮುದಾಯಿಕ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮಾನ್ಯತೆಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ನಿಜವಾದ ರೂಪಾಂತರವು ಕೇವಲ ತ್ಯಾಜ್ಯಕ್ಕೆ ಏನಾಗುತ್ತದೆ ಎಂಬುದರಲ್ಲಿ ಮಾತ್ರವಲ್ಲ, ಆ ತ್ಯಾಜ್ಯವನ್ನು ನಿರ್ವಹಿಸುವ ಜನರ ಜೀವನದಲ್ಲಿ ಏನು ಸಾಧ್ಯವಾಗುತ್ತದೆ ಎಂಬುದರಲ್ಲಿದೆ.

ಒಮ್ಮೆ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಜನರು ಸ್ವಚ್ಛತಾ ಅಭಿಯಾನದ ಕೇಂದ್ರಬಿಂದುವಾಗಿ ತಮ್ಮ ಸ್ಥಾನ ಕಂಡುಕೊಂಡಾಗ, ಸ್ವಚ್ಛತೆಯು ಮತ್ತಷ್ಟು ಆಳವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಅದು ಆತ್ಮಗೌರವ, ಸಮಾನ ಅವಕಾಶ ಮತ್ತು ಸಮಾಜದ ನೈಜ ಒಡೆತನದ ಭಾವನೆಯಿಂದ ರೂಪುಗೊಂಡ ಬಲವಾದ ಹಂಚಿಕೆಯ ಶ್ರಮವಾಗಿ ಮಾರ್ಪಡುತ್ತದೆ.

 

References

Ministry of Jal Shakti

https://www.pib.gov.in/newsite/erelcontent.aspx?lang=2&reg=48&relid=294881

Click here to see pdf 

 

******

 

 

 

(Features ID: 160328) आगंतुक पटल : 21
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Malayalam