Infrastructure

ತ್ಯಾಜ್ಯ ನೀರಿನಿಂದ ಆಚೆಗೆ: ಬಳಸಿದ ನೀರನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು

Posted On: 30 SEP 2026 12:16PM

ಬೆಳೆಯುತ್ತಿರುವ ನಗರಗಳಲ್ಲಿ, ನೀರನ್ನು ಬಳಸಿದ ತಕ್ಷಣವೇ ಜಲಚಕ್ರವು ಕೊನೆಗೊಳ್ಳುವುದಿಲ್ಲ. ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಬಡಾವಣೆಗಳಿಂದ ಹರಿದುಹೋಗುವ ನೀರು ತ್ಯಾಜ್ಯವಾಗಬೇಕಾದ ಅಗತ್ಯವಿಲ್ಲ. ಸೂಕ್ತ ವ್ಯವಸ್ಥೆಗಳೊಂದಿಗೆ, ಬಳಸಿದ ನೀರನ್ನು ಸಂಗ್ರಹಿಸಿ, ಸಂಸ್ಕರಿಸಿ, ಮರುಚಕ್ರಿಕರಣಗೊಳಿಸಿ ಮತ್ತೆ ಉಪಯುಕ್ತ ಕಾರ್ಯಗಳಿಗೆ ಬಳಸಬಹುದು. ಈ ಬದಲಾವಣೆಯು ಸ್ವಚ್ಛ ಭಾರತ್ ಮಿಷನ್-ನಗರ ಅಡಿಯಲ್ಲಿ ನಗರ ನೈರ್ಮಲ್ಯೀಕರಣಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ. ಇದರ ಕೇಂದ್ರಬಿಂದು ಬಳಸಿದ ನೀರಿನ ನಿರ್ವಹಣೆ ಆಗಿದ್ದು, ಇದು ಬಳಸಿದ ನೀರನ್ನು ಸಂಸ್ಕರಿಸುವುದು, ಸಂಸ್ಕರಿಸದ ಚರಂಡಿ ನೀರು ಜಲಮೂಲಗಳನ್ನು ಸೇರುವುದನ್ನು ತಡೆಯುವುದು ಮತ್ತು ಸುರಕ್ಷಿತ ಮರುಬಳಕೆಯನ್ನು ಸಾಧ್ಯವಾಗಿಸುವುದರ ಮೇಲೆ ಗಮನ ಹರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕಾಯ್ದಿರಿಸಿದ ತ್ಯಾಜ್ಯನೀರು ಸಂಸ್ಕರಣಾ ಘಟಕಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತ್ಯಾಜ್ಯನೀರಿನ ನಿರ್ವಹಣೆಯನ್ನು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಮತ್ತು ಮರುಬಳಕೆಗೆ ನೀರನ್ನು ಮರುಪೂರಣಗೊಳಿಸುವ ಪ್ರಮುಖ ಅವಕಾಶವಾಗಿ ಪರಿವರ್ತಿಸುತ್ತಿವೆ.

ಈ ವಿಧಾನಕ್ಕೆ 'ವಾಟರ್ ಪ್ಲಸ್' ಪ್ರಮಾಣೀಕರಣವು ಇನ್ನಷ್ಟು ಬಲ ನೀಡುತ್ತದೆ. ಇದು ಗೃಹಬಳಕೆ ಮತ್ತು ವಾಣಿಜ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು ನಿರ್ವಹಿಸಲು ನಗರಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಪರಿಸರಕ್ಕೆ ಬಿಡುಗಡೆ ಮಾಡುವ ಮೊದಲು ತ್ಯಾಜ್ಯನೀರು ತೃಪ್ತಿಕರ ಸಂಸ್ಕರಣಾ ಮಾನದಂಡಗಳನ್ನು ಪೂರೈಸುವುದು ಇದರಿಂದ ಕಡ್ಡಾಯವಾಗುತ್ತದೆ. ಈ ಗಮನವು ಕೇವಲ ಸಂಸ್ಕರಣಾ ಮೂಲಸೌಕರ್ಯಕ್ಕೆ ಸೀಮಿತವಾಗದೆ, ನಗರಗಳು ತಮ್ಮ ಜಲಸಂಪನ್ಮೂಲಗಳನ್ನು ಹೇಗೆ ಯೋಜಿಸುತ್ತವೆ ಮತ್ತು ನಿರ್ವಹಿಸುತ್ತವೆ ಎಂಬುದಕ್ಕೂ ವಿಸ್ತರಿಸುತ್ತದೆ. ತ್ಯಾಜ್ಯನೀರಿನ ಮರುಬಳಕೆಗಾಗಿ ದೀರ್ಘಕಾಲೀನ, ನಗರ-ಮಟ್ಟದ ಯೋಜನೆಗಳನ್ನು ರೂಪಿಸಲು ನಗರ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸಲಾಗುತ್ತಿದೆ. ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಜವಾಬ್ದಾರಿಗಳು ಮತ್ತು ತಾಂತ್ರಿಕ ಪ್ರಗತಿಗಳು ಸಂಸ್ಕರಣಾ ವ್ಯವಸ್ಥೆಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸಲು ನಗರಗಳಿಗೆ ನೆರವಾಗುತ್ತಿವೆ. ಬಯಲು ಶೌಚ ಮುಕ್ತ ++ ಪ್ರೋಟೋಕಾಲ್‌ಗಳು ಮಲದ ಹೂಳು ಮತ್ತು ಸೆಪ್ಟೇಜ್ ಸೇರಿದಂತೆ ಸಂಪೂರ್ಣ ಚರಂಡಿ ನೀರಿನ ಸುರಕ್ಷಿತ ನಿರ್ವಹಣೆ ಮತ್ತು ಸಂಸ್ಕರಣೆಯನ್ನು ಮೌಲ್ಯಮಾಪನ ಮಾಡುವ ಮೂಲಕ ಈ ವಿಧಾನವನ್ನು ಮತ್ತಷ್ಟು ಬಲಪಡಿಸುತ್ತವೆ.

ಒಟ್ಟಾರೆಯಾಗಿ, ಈ ಕ್ರಮಗಳು ಸುಸ್ಥಿರ ನೈರ್ಮಲ್ಯೀಕರಣ ಮತ್ತು ವೃತ್ತಾಕಾರದ ಅರ್ಥವ್ಯವಸ್ಥೆಗೆ  ಬಲವಾದ ಅಡಿಪಾಯವನ್ನು ಹಾಕುತ್ತಿವೆ, ಅಲ್ಲಿ ಬಳಸಿದ ನೀರನ್ನು ಒಂದು ಮೌಲ್ಯಯುತ ಸಂಪನ್ಮೂಲವಾಗಿ ನಿರ್ವಹಿಸಬಹುದು. ಎಸ್‌ಬಿಎಂ 2.0 ಅಡಿಯಲ್ಲಿ, ಸಣ್ಣ ನಗರಗಳಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ₹11,785 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು ಪ್ರತಿದಿನ 4,900 ಮಿಲಿಯನ್ ಲೀಟರ್ (ಎಂಎಲ್‌ಡಿ) ಸಂಸ್ಕರಣಾ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲಿದ್ದು, ಪರಿಣಾಮಕಾರಿ ಬಳಸಿದ ನೀರಿನ ನಿರ್ವಹಣೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ವಿಸ್ತರಿಸಲಿವೆ.

ಬಳಸಿದ ನೀರು ಮರುಜೀವ ಪಡೆಯುವ ತಾಣಗಳು

ಬಳಸಿದ ನೀರಿನ ನಿರ್ವಹಣೆಯು ಸಾಂಪ್ರದಾಯಿಕ ಸಂಸ್ಕರಣೆ ಮತ್ತು ವಿಲೇವಾರಿಯನ್ನು ಮೀರಿ ಬೆಳೆಯುತ್ತಿದೆ. ವಿವಿಧ ನಗರಗಳು ತಮ್ಮ ಮೂಲಸೌಕರ್ಯ, ನೀರಿನ ಅಗತ್ಯತೆಗಳು ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿಶಿಷ್ಟ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ, ಸಂಸ್ಕರಿಸಿದ ನೀರು ಕೃಷಿ, ತೋಟಗಾರಿಕೆ, ಕೈಗಾರಿಕೆ, ರಸ್ತೆ ಸ್ವಚ್ಛಗೊಳಿಸುವಿಕೆ ಮತ್ತು ಕೆರೆಗಳ ಪುನರುಜ್ಜೀವನದಲ್ಲಿ ಅನ್ವಯವಾಗುತ್ತಿದೆ. ಜೈಪುರ, ಇಂದೋರ್, ಸೂರತ್ ಮತ್ತು ನವಿ ಮುಂಬೈನಂತಹ ನಗರಗಳ ಅನುಭವಗಳು ಈ ವೈವಿಧ್ಯಮಯ ವಿಧಾನಗಳನ್ನು ಎತ್ತಿಹಿಡಿಯುತ್ತವೆ.

ಜೈಪುರ: ಬೃಹತ್ ಪ್ರಮಾಣದಲ್ಲಿ ನೀರಿನ ಮರುಬಳಕೆಯ ತಾಂತ್ರಿಕ ನಾವೀನ್ಯತೆ

ದೇಹ್ಲಾವಾಸ್ ಘಟಕದಲ್ಲಿ ನೀರು ಸಂಸ್ಕರಣೆ

2020–23 ರ ಅವಧಿಯಲ್ಲಿ 22.50 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾದ ಜೈಪುರದ ದೇಹ್ಲಾವಾಸ್ ತ್ಯಾಜ್ಯನೀರು ಸಂಸ್ಕರಣಾ ಘಟಕವು, ದಿನಕ್ಕೆ 215 ಎಂಎಲ್‌ಡಿ (ಮಿಲಿಯನ್ ಲೀಟರ್) ಸಂಸ್ಕರಣಾ ಸಾಮರ್ಥ್ಯದೊಂದಿಗೆ ರಾಜಸ್ಥಾನದಲ್ಲೇ ಅತ್ಯಂತ ಹೆಚ್ಚಿನ ತ್ಯಾಜ್ಯನೀರು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ತ್ಯಾಜ್ಯನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಿ, ಮರುಬಳಕೆ ಮಾಡಬಹುದಾದ ಸಂಪನ್ಮೂಲವಾಗಿ ಪರಿವರ್ತಿಸಲಾಗುತ್ತದೆ. ಆ ಮೂಲಕ ವೃತ್ತಾಕಾರದ ಅರ್ಥವ್ಯವಸ್ಥೆಮತ್ತು ಜಲ ಸಂರಕ್ಷಣೆಯ ಪರಿಕಲ್ಪನೆಗಳನ್ನು ಉತ್ತೇಜಿಸಲಾಗುತ್ತಿದೆ. ಈ ಉನ್ನತ ತಂತ್ರಜ್ಞಾನದ ಘಟಕವು 'ಸ್ಕಡಾ' ವ್ಯವಸ್ಥೆಯ ಮೂಲಕ ಸಂಪೂರ್ಣವಾಗಿ ಸ್ವಯಂಚಾಲಿತಗೊಂಡಿದೆ.

ದ್ರಾವ್ಯವತಿ ನದಿಗೆ ಸಂಸ್ಕರಿಸಿದ ನೀರನ್ನು ಹರಿಸುತ್ತಿರುವ ಸಂಸ್ಕರಣಾ ಘಟಕ

ಜೈಪುರ ಎಸ್‌ಟಿಪಿ ಪ್ರಸ್ತುತ ಅತ್ಯಂತ ಪರಿಣಾಮಕಾರಿಯಾದ ಸೀಕ್ವೆನ್ಸಿಂಗ್ ಬ್ಯಾಚ್ ರಿಯಾಕ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಈ ಪ್ರಕ್ರಿಯೆಯಲ್ಲಿ, ತ್ಯಾಜ್ಯನೀರು ಕ್ಲೋರಿನ್ ಟ್ಯಾಂಕ್ ತಲುಪುವ ಮೊದಲು ಪಾರ್ಷಲ್ ಫ್ಲೂಮ್, ಪ್ರಾಥಮಿಕ ಸಂಸ್ಕರಣಾ ತೊಟ್ಟಿ ಮತ್ತು ಬೇಸಿನ್ ಮೂಲಕ ಹಾದುಹೋಗುತ್ತದೆ. ನಂತರ ಅದನ್ನು ಶುದ್ಧ ನೀರಾಗಿ ಪರಿವರ್ತಿಸಲಾಗುತ್ತದೆ. ಪ್ರಾಥಮಿಕ ಹೂಳು ದಪ್ಪವಾಗಿಸುವ ಉಪಕರಣಗಳು ಮತ್ತು ಸ್ಕ್ರೂ ಪ್ರೆಸ್ ಯಂತ್ರಗಳನ್ನು ಬಳಸಿ ಘನತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ.

ಎಸ್‌ಟಿಪಿಯಲ್ಲಿ ಸಂಸ್ಕರಿಸಲ್ಪಟ್ಟ ನಂತರ, ತ್ಯಾಜ್ಯನೀರು ಮತ್ತೆ ಮೌಲ್ಯಯುತ ಸಂಪನ್ಮೂಲವಾಗಿ ಮಾರ್ಪಡುತ್ತದೆ. ಇದನ್ನು ನೀರಾವರಿ ಮತ್ತು ವಿವಿಧ ಕೈಗಾರಿಕಾ ಪ್ರಕ್ರಿಯೆಗಳಿಗೆ ಮರುಬಳಕೆ ಮಾಡಲಾಗುತ್ತಿದ್ದು, 'ತ್ಯಾಜ್ಯನೀರಿನ ಮರುಚಕ್ರಿಕರಣ' ಎಂದು ಕರೆಯಲ್ಪಡುವ ಈ ಪದ್ಧತಿಯು ಆರ್ಥಿಕವಾಗಿಯೂ ಅತ್ಯಂತ ಲಾಭದಾಯಕವಾಗಿದೆ. ಪ್ರಸ್ತುತ, ಸಂಸ್ಕರಿಸಿದ ನೀರಿನ ಒಂದು ಭಾಗವನ್ನು ತೋಟಗಾರಿಕೆ ಮತ್ತು ಇತರ ಉದ್ದೇಶಗಳಿಗಾಗಿ ಸಮೀಪದ ನಿವಾಸಗಳಿಗೆ ಪೂರೈಸಲಾಗುತ್ತಿದೆ. ಉಳಿದ ಶುದ್ಧ ನೀರನ್ನು ದ್ರಾವ್ಯವತಿ ನದಿಗೆ ಹರಿಸಲಾಗುತ್ತಿದ್ದು, ಸಂಸ್ಕರಿಸದ ತ್ಯಾಜ್ಯನೀರು ನದಿಯನ್ನು ಸೇರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಘಟಕದ ಸುತ್ತಲೂ ಹಸಿರು ವಲಯವನ್ನು ಅಭಿವೃದ್ಧಿಪಡಿಸಲಾಗಿದ್ದು, 30,000 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಆವರಣದ ಹಸಿರನ್ನು ಹೆಚ್ಚಿಸಲಾಗಿದೆ.

ಇಂದೋರ್: 'ವಾಟರ್ ಪ್ಲಸ್' ಪಯಣದ ನೇತೃತ್ವ

ಬಳಸಿದ ನೀರಿನ ನಿರ್ವಹಣೆಯಲ್ಲಿ ಇಂದೋರ್ ನಗರದ ರೂಪಾಂತರವು ಒಂದು ಸರಳ ಗುರಿಯೊಂದಿಗೆ ಪ್ರಾರಂಭವಾಯಿತು: ಸಂಸ್ಕರಿಸದ ತ್ಯಾಜ್ಯನೀರು ಪರಿಸರಕ್ಕೆ ಸೇರದಂತೆ ತಡೆಯುವುದು. ಈ ದೂರದೃಷ್ಟಿಯ ವಿಧಾನವು ನಗರಕ್ಕೆ ಭಾರತದ ಮೊದಲ 'ವಾಟರ್ ಪ್ಲಸ್' ಪ್ರಮಾಣಪತ್ರ ಲಭಿಸಲು ನೆರವಾಯಿತು. ನಗರ ಮಟ್ಟದಲ್ಲಿ ಸುಸ್ಥಿರ ನೈರ್ಮಲ್ಯ ಮತ್ತು ಬಳಸಿದ ನೀರಿನ ನಿರ್ವಹಣೆಯನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ಇಂದೋರ್‌ನ ಮಾದರಿಯು ಜಗತ್ತಿಗೆ ತೋರಿಸಿಕೊಟ್ಟಿದೆ. ಈ ಮಾದರಿಯು ದೇಶದ ಹಲವಾರು ಸಣ್ಣ ನಗರಗಳಿಗೂ ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿದೆ.

ಇಂದು, ಇಂದೋರ್‌ನ ನದಿಗಳಲ್ಲಾಗಲಿ ಅಥವಾ ಅದರ ನೈಸರ್ಗಿಕ ಮತ್ತು ಕೃತಕ ಮಳೆನೀರು ಕಾಲುವೆಗಳಲ್ಲಾಗಲಿ ಯಾವುದೇ ಸಂಸ್ಕರಿಸದ ತ್ಯಾಜ್ಯನೀರು ಹರಿಯುವುದಿಲ್ಲ. 2020 ರ ವೇಳೆಗೆ, ನಗರವು 3 ಚಾಲ್ತಿಯಲ್ಲಿದ್ದ ಕೇಂದ್ರೀಕೃತ ಎಸ್‌ಟಿಪಿಗಳ ಜೊತೆಗೆ 7 ವಿಕೇಂದ್ರೀಕೃತ ಎಸ್‌ಟಿಪಿಗಳನ್ನು ನಿರ್ಮಿಸಿತು. ಸಂಸ್ಕರಿಸಿದ ತ್ಯಾಜ್ಯನೀರನ್ನು ಸಾಗಿಸಲು 200 ಕಿಲೋಮೀಟರ್‌ಗೂ ಹೆಚ್ಚು ಉದ್ದದ ಪೈಪ್‌ಲೈನ್ ಜಾಲವನ್ನು ಸಹ ಅಳವಡಿಸಲಾಯಿತು.

ಇಂದೋರ್ ನಗರವು ಅಂತರ್ಜಲ ಮತ್ತು ಮೇಲ್ಮೈ ನೀರು ಎರಡನ್ನೂ ಸಂರಕ್ಷಿಸುವ ಕ್ರಮಗಳನ್ನು ಏಕಕಾಲದಲ್ಲಿ ಬಲಪಡಿಸಿತು. 2022 ರಲ್ಲಿ, ವಸತಿ ಮತ್ತು ವಸತಿಯೇತರ ಪ್ರದೇಶಗಳಾದ್ಯಂತ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 1.25 ಲಕ್ಷಕ್ಕೂ ಹೆಚ್ಚು ಮಳೆನೀರು ಕೊಯ್ಲು ಘಟಕಗಳನ್ನು ಅಳವಡಿಸಲಾಯಿತು. ಪ್ರಸ್ತುತ ಸಂಸ್ಕರಿಸಿದ ತ್ಯಾಜ್ಯನೀರನ್ನು ವಾಟರ್ ಗಾರ್ಡನ್‌ಗಳು, ರಸ್ತೆಬದಿಯ ತೋಟಗಳು ಮತ್ತು ತೋಟಗಾರಿಕೆಗೆ ಬಳಸಲಾಗುತ್ತಿದೆ. ಜೊತೆಗೆ ರಸ್ತೆಗಳನ್ನು ತೊಳೆಯಲು ಮತ್ತು ಚರಂಡಿ ಸ್ವಚ್ಛಗೊಳಿಸುವ ಯಂತ್ರಗಳ ಬಳಕೆಗೆ ಇದನ್ನು ಬಳಸಲಾಗುತ್ತಿದೆ.

ಸೂರತ್: ತ್ಯಾಜ್ಯನೀರನ್ನು ಆರ್ಥಿಕ ಸಂಪನ್ಮೂಲವಾಗಿ ಪರಿವರ್ತಿಸುವುದು

ಸೂರತ್‌ನಲ್ಲಿ ನೀರು ಸಂಸ್ಕರಣಾ ಘಟಕಗಳು

ಸೂರತ್ ನಗರವು ತ್ಯಾಜ್ಯನೀರಿನ ಮರುಬಳಕೆಯನ್ನು ಆರ್ಥಿಕ ಮೌಲ್ಯವಿರುವ ಒಂದು ಸಂಪನ್ಮೂಲವಾಗಿ ಪರಿಗಣಿಸುವ ಮೂಲಕ ಅದರ ಮರುಬಳಕೆಯ ಪರಿಕಲ್ಪನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸೂರತ್ ಮಹಾನಗರ ಪಾಲಿಕೆಯು ಒಟ್ಟು 116 ಎಂಎಲ್‌ಡಿ ಸಾಮರ್ಥ್ಯದ ನಾಲ್ಕು ತೃತೀಯ ಹಂತದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳು ಸಿಹಿ ನೀರಿನ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ನೆರವಾಗಿವೆ. ಸಂಸ್ಕರಿಸಿದ ತ್ಯಾಜ್ಯನೀರನ್ನು ನಗರದಾದ್ಯಂತ ಹಲವು ಕುಡಿಯಲು ಬಳಸದ ಕಾರ್ಯಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಕೈಗಾರಿಕಾ ಬಳಕೆ, ಕೆರೆಗಳ ಪುನರುಜ್ಜೀವನ, ಕೃಷಿ, ಬೃಹತ್ ಮಟ್ಟದ ಸಸಿ ನೆಡುವಿಕೆ ಮತ್ತು ಚರಂಡಿ ಸ್ವಚ್ಛಗೊಳಿಸುವಿಕೆ ಸೇರಿವೆ; ಇವುಗಳನ್ನು ನೇರ ಸೇವಾ ಮಾರ್ಗಗಳು ಮತ್ತು ಟ್ಯಾಂಕರ್ ತುಂಬುವ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತದೆ. ನಗರವು ಆಧುನಿಕ ರೋಬೋಟಿಕ್ ತಂತ್ರಜ್ಞಾನ ಆಧಾರಿತ ಉಪಕರಣಗಳು ಸೇರಿದಂತೆ 170 ಚರಂಡಿ ಸ್ವಚ್ಛಗೊಳಿಸುವ ಯಂತ್ರಗಳನ್ನು ಹೊಂದಿದೆ. ಈ ಯಂತ್ರಗಳನ್ನು ಒಳಚರಂಡಿ ವ್ಯವಸ್ಥೆಯ ಸ್ವಚ್ಛತೆ ಮತ್ತು ನಿರ್ವಹಣೆಗೆ ಬಳಸಲಾಗುತ್ತದೆ.

ನವಿ ಮುಂಬೈ: ನಗರ ಸೇವೆಗಳಲ್ಲಿ ಸಮಗ್ರ ಮರುಬಳಕೆ

ನವಿ ಮುಂಬೈನಲ್ಲಿ ತ್ಯಾಜ್ಯನೀರು ಸಂಸ್ಕರಣೆ

ನವಿ ಮುಂಬೈನ 'ವಾಟರ್ ಪ್ಲಸ್' ಪಯಣವು ಸಂಸ್ಕರಣಾ ಮೂಲಸೌಕರ್ಯದ ಜೊತೆಗೆ ಸಂಸ್ಕರಿಸಿದ ನೀರಿನ ವ್ಯಾಪಕ ಮರುಬಳಕೆಯನ್ನು ಸಂಯೋಜಿಸಿದೆ. ಮಹಾರಾಷ್ಟ್ರದಲ್ಲೇ ಫೈವ್-ಸ್ಟಾರ್ ಶ್ರೇಯಾಂಕ ಮತ್ತು ವಾಟರ್ ಪ್ಲಸ್ ಪ್ರಮಾಣಪತ್ರ ಪಡೆದ ಏಕೈಕ ನಗರ ಇದಾಗಿದೆ. ನಗರವು ತನ್ನ ತ್ಯಾಜ್ಯನೀರು ಸಂಸ್ಕರಣಾ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿದ್ದು, 30 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಟಿಪಿಗಳನ್ನು ವಿನ್ಯಾಸಗೊಳಿಸಿದೆ. ಇಂಧನ ವೆಚ್ಚವನ್ನು ತಗ್ಗಿಸಲು ಅದರ ಪಂಪಿಂಗ್ ಸ್ಟೇಷನ್‌ಗಳನ್ನು ಸಹ ನವೀಕರಿಸಲಾಯಿತು. ಈ ಸ್ಟೇಷನ್‌ಗಳು ಉತ್ಪತ್ತಿಯಾಗುವ ಚರಂಡಿ ನೀರನ್ನು ಎಸ್‌ಟಿಪಿಗಳಿಗೆ ರವಾನಿಸುತ್ತವೆ.

ಸಮಸ್ಯೆಗಳಿರುವ ಸೂಕ್ಷ್ಮ ಪ್ರದೇಶಗಳನ್ನು ತಡೆಯಲು ಒಳಚರಂಡಿ ಜಾಲದ ಮುನ್ನೆಚ್ಚರಿಕೆಯ ನಿರ್ವಹಣೆಯನ್ನು ಕೈಗೊಳ್ಳಲಾಯಿತು. ನವಿ ಮುಂಬೈ ನಗರವು ಒಳಚರಂಡಿ ಮಾರ್ಗಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ 100% ಯಾಂತ್ರೀಕೃತ ಸ್ವಚ್ಛತೆಯನ್ನು ಸಾಧಿಸಿದೆ. ನವಿ ಮುಂಬೈ ಮಹಾನಗರ ಪಾಲಿಕೆಯು ನಗರದಾದ್ಯಂತ ಅಳವಡಿಸಲಾಗಿರುವ 'ಲೆವೆಲ್ ಟ್ರಾನ್ಸ್‌ಮಿಟರ್'ಗಳ ಮೂಲಕ ಎಲ್ಲಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಕೇಂದ್ರೀಯವಾಗಿ ಮೇಲ್ವಿಚಾರಣೆ ಮಾಡುತ್ತದೆ. ಸಂಸ್ಕರಿಸಿದ ನೀರಿನ ಶೇಕಡಾ 30 ಕ್ಕಿಂತ ಹೆಚ್ಚಿನ ಭಾಗವನ್ನು ನಗರದ 30 ಕ್ಕೂ ಹೆಚ್ಚು ಉದ್ಯಾನವನಗಳಲ್ಲಿ ಮರುಬಳಕೆ ಮಾಡಲಾಗುತ್ತದೆ. ಜೊತೆಗೆ ಇದನ್ನು ಘನತ್ಯಾಜ್ಯ ವಾಹನಗಳು, ಕಾಂಪ್ಯಾಕ್ಟರ್‌ಗಳು ಮತ್ತು ನಗರ ಸಾರಿಗೆ ಬಸ್‌ಗಳನ್ನು ತೊಳೆಯಲು ಬಳಸಲಾಗುತ್ತದೆ. ಸ್ಪ್ರಿಂಕ್ಲರ್‌ಗಳು ಮತ್ತು ರಸ್ತೆ ವಿಭಾಜಕಗಳಿಗೂ ಸಂಸ್ಕರಿಸಿದ ನೀರನ್ನೇ ಬಳಸಲಾಗುತ್ತಿದ್ದು, ಶುದ್ಧ കുಡಿಯುವ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗಿದೆ.

ತಿರುಪತಿ: ಸಂಸ್ಕರಿಸಿದ ನೀರಿಗೆ ಆದಾಯ ಮಾದರಿ

ತಿರುಪತಿ ನಗರವು ತುಕಿವಕಮ್‌ನಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕವನ್ನು ನಿರ್ವಹಿಸಲು ಸ್ವಯಂ-ಸುಸ್ಥಿರ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಈ ನಗರವನ್ನೂ ಸಹ 'ವಾಟರ್ ಪ್ಲಸ್' ಎಂದು ಘೋಷಿಸಲಾಗಿದೆ. ₹19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಎಸ್‌‌ಟಿಪಿಯು ದಿನಕ್ಕೆ 50 ಎಂಎಲ್‌ಡಿ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದ್ದು, ನಗರದಾದ್ಯಂತ 1,04,057 ಮನೆಗಳಿಗೆ ಸೇವೆಯನ್ನು ನೀಡುತ್ತದೆ.

ಸಂಸ್ಕರಿಸಿದ ನೀರಿನಲ್ಲಿ 24 ಎಂಎಲ್‌ಡಿ ನೀರನ್ನು ವಿವಿಧ ಉದ್ದೇಶಗಳಿಗಾಗಿ ಮರುಬಳಕೆ ಮಾಡಲಾಗುತ್ತದೆ. ಈ ಘಟಕವು ಪ್ರತಿದಿನ 5 ಎಂಎಲ್‌ಡಿ ಸಂಸ್ಕರಿಸಿದ ಬಳಸಿದ ನೀರನ್ನು 'ಶ್ರೀಕಾಳಹಸ್ತಿ ಪೈಪ್ಸ್ ಲಿಮಿಟೆಡ್' ಸಂಸ್ಥೆಗೆ ಮಾರಾಟ ಮಾಡುತ್ತದೆ. ಇದರ ಮೂಲಕ ಈ ಘಟಕವು ಪ್ರತಿ ತಿಂಗಳಿಗೆ ₹6 ಲಕ್ಷ ನಿವ್ವಳ ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿದೆ.

ಮತ್ತೊಂದು 18 ಎಂಎಲ್‌ಡಿ ಸಂಸ್ಕರಿಸಿದ ಬಳಸಿದ ನೀರನ್ನು ಕೃಷಿಗಾಗಿ ಉಚಿತವಾಗಿ ರೈತರಿಗೆ ಸರಬರಾಜು ಮಾಡಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಯು ರಸ್ತೆ ಮತ್ತು ಬೀದಿಗಳನ್ನು ಸ್ವಚ್ಛಗೊಳಿಸಲು ಒಂದು ಭಾಗವನ್ನು ಮರುಬಳಕೆ ಮಾಡುತ್ತದೆ. ಸಂಸ್ಕರಿಸಿದ ನೀರನ್ನು ನಗರದಾದ್ಯಂತ ರಸ್ತೆ ಮಧ್ಯದ ಹಸಿರು ವಲಯಗಳು, ಪಾರ್ಕ್‌ಗಳು ಮತ್ತು ಉದ್ಯಾನವನಗಳಿಗೆ ನೀರುಣಿಸಲು ಬಳಸಲಾಗುತ್ತದೆ. ಈ ಕ್ರಮಗಳು ಸಂಸ್ಕರಿಸಿದ ನೀರಿನ ಮರುಬಳಕೆಯನ್ನು ಗರಿಷ್ಠಗೊಳಿಸಲು ನೆರವಾಗುತ್ತವೆ. ತಿರುಪತಿಯ ಈ ವಿಧಾನವು ತ್ಯಾಜ್ಯನೀರಿನ ಮರುಬಳಕೆಯನ್ನು ಆದಾಯ ತರುವ ಮಾದರಿಯೊಂದಿಗೆ ಸಂಯೋಜಿಸಿ, ಎಸ್‌ಟಿಪಿಗಳ ಸುಸ್ಥಿರ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ.

ತಿರುಪತಿಯಲ್ಲಿ ನೀರು ಸಂಸ್ಕರಣಾ ಘಟಕ

ನಗರ ಜಲ ಕಥನದಲ್ಲಿ ಒಂದು ಪ್ರಮುಖ ಬದಲಾವಣೆ

ಬಳಸಿದ ನೀರಿನ ನಿರ್ವಹಣೆಯ ಮೇಲಿನ ಬೆಳೆಯುತ್ತಿರುವ ಗಮನವು ನಗರಗಳು ತಮ್ಮ ನೀರಿನ ಅಗತ್ಯಗಳನ್ನು ಹೇಗೆ ಸಮೀಪಿಸುತ್ತವೆ ಎಂಬುದನ್ನು ಬದಲಾಯಿಸುತ್ತಿದೆ. ನೀರು ಸಂಸ್ಕರಣೆಯು ಈಗ ಕೇವಲ ಮಾಲಿನ್ಯವನ್ನು ತಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಉತ್ಪಾದಕ ಉದ್ದೇಶಗಳಿಗಾಗಿ ನೀರನ್ನು ಪುನಃ ಮರುಪೂರಣಗೊಳಿಸಿ ಪಡೆಯುವುದೂ ಸಹ ಆಗಿದೆ. ಸಂಸ್ಕರಿಸಿದ ನೀರು ನೀರಾವರಿ, ಕೈಗಾರಿಕೆ, ತೋಟಗಾರಿಕೆ ಮತ್ತು ದೈನಂದಿನ ನಗರ ಸೇವೆಗಳಲ್ಲಿ ಹೊಸ ಮರುಬಳಕೆಗಳನ್ನು ಕಂಡುಕೊಳ್ಳುತ್ತಿದೆ. ಹೆಚ್ಚಿನ ನಗರಗಳು ಸಂಸ್ಕರಣಾ ಸಾಮರ್ಥ್ಯವನ್ನು ಬಲಪಡಿಸುತ್ತಾ ಮತ್ತು ಮರುಬಳಕೆಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಂತೆ, ನಗರ ಜಲ ನಿರ್ವಹಣೆಯು ಹೆಚ್ಚು ವೃತ್ತಾಕಾರ ಮತ್ತು ಸಂಪನ್ಮೂಲ-ದಕ್ಷತೆಯಿಂದ ಕೂಡಿರಲಿದೆ. ಈ ಬದಲಾವಣೆಯು ಹೆಚ್ಚು ಶುಚಿಯಾದ ನೈರ್ಮಲ್ಯ ವ್ಯವಸ್ಥೆಗಳನ್ನು ನಿರ್ಮಿಸಲು ಸಹಾಯ ಮಾಡುವುದಲ್ಲದೆ, ಲಭ್ಯವಿರುವ ಪ್ರತಿಯೊಂದು ಜಲಸಂಪನ್ಮೂಲವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ನೆರವಾಗುತ್ತದೆ.

 

 

 Reference

Ministry of Housing and Urban Affairs

Click here to see pdf

 

******

 

(Features ID: 160326) आगंतुक पटल : 31
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Malayalam