Rural Prosperity
ಹಬ್ಬಗಳು ಆಚರಣೆಗೆ ಹಸಿರು ಮಾರ್ಗವನ್ನು ಕಂಡುಕೊಂಡಾಗ
Posted On:
28 SEP 2026 4:21PM
ಭಾರತದ ಹಬ್ಬಗಳು ಹಲವು ರೂಪಗಳಲ್ಲಿ ಆಗಮಿಸುತ್ತವೆ, ಆದರೆ ಅವುಗಳ ಭಾವನಾತ್ಮಕ ಭಾಷೆ ಮಾತ್ರ ಅದ್ಭುತವಾಗಿ ಒಂದೇ ರೀತಿಯದ್ದಾಗಿರುತ್ತದೆ. ಗಣೇಶ ಚತುರ್ಥಿಯು ಬಪ್ಪನನ್ನು ಮನೆಗಳು ಮತ್ತು ನೆರೆಹೊರೆಗಳಿಗೆ ಕರೆತರುತ್ತದೆ. ದುರ್ಗಾ ಪೂಜೆಯು ಪಂಡಾಲ್‌ಗಳನ್ನು ಭಕ್ತಿ ಮತ್ತು ಕಲಾತ್ಮಕತೆಯಿಂದ ತುಂಬಿಸುತ್ತದೆ. ದೀಪಾವಳಿಯು ದೀಪಗಳ ಬೆಳಕು, ಪ್ರಾರ್ಥನೆಗಳು ಮತ್ತು ನವ ಆರಂಭಗಳನ್ನು ತರುತ್ತದೆ. ಛತ್ ಪೂಜೆಯು ಕುಟುಂಬಗಳನ್ನು ಘಾಟ್‌ಗಳಲ್ಲಿ ಒಂದಾಗಿಸಿ, ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುವಂತೆ ಮಾಡುತ್ತದೆ. ನಂಬಿಕೆ, ಕುಟುಂಬ ಮತ್ತು ಸಮುದಾಯದಲ್ಲಿ ಬೇರೂರಿರುವ ಈ ಆಚರಣೆಗಳು, ಅವುಗಳು ನೆರವೇರುವ ಸ್ಥಳಗಳೊಂದಿಗೂ ನಿಕಟವಾಗಿ ಬೆಸೆದುಕೊಂಡಿವೆ.
ದೇವಾಲಯವು ಹೂವುಗಳನ್ನು ಸ್ವೀಕರಿಸುತ್ತದೆ, ಪಂಡಾಲ್ ಪೂಜಾ ಸ್ಥಳವಾಗುತ್ತದೆ ಮತ್ತು ಘಾಟ್ ಪವಿತ್ರ ಆಚರಣೆಯ ಭಾಗವಾಗುತ್ತದೆ. ಈ ಪರಂಪರೆಗಳು ಸಮುದಾಯಗಳನ್ನು ಒಂದೆಡೆ ಸೇರಿಸುತ್ತಿದ್ದಂತೆ, ಈ ಪವಿತ್ರ ಸ್ಥಳಗಳನ್ನು ಪಾಲಿಸಿ ಉಪಚರಿಸುವುದು ಸಹ ಆಚರಣೆಯ ಭಾಗವಾಗುತ್ತಿದೆ. ಈ ಆಶಯವು ಸೆಪ್ಟೆಂಬರ್ 17, 2026 ರಂದು ಪ್ರಾರಂಭಿಸಲಾದ 'ಸ್ವಚ್ಛತಾ ಹೀ ಸೇವಾ 2026' ರಾಷ್ಟ್ರೀಯ ಅಭಿಯಾನದಲ್ಲಿ ವೇದಿಕೆಯನ್ನು ಕಂಡುಕೊಂಡಿದೆ. ಈ ವರ್ಷದ ಅಭಿಯಾನವು “ಸ್ವಚ್ಛತೆಯಲ್ಲಿ ಸಹಭಾಗ್; ಸ್ವಚ್ಛ ಭಾರತ್, ವಿಕಸಿತ ಭಾರತ್” ಎಂಬ ಕಲ್ಪನೆಯನ್ನು ಹೊಂದಿದೆ. ಈ ಅಭಿಯಾನವು ಸ್ವಚ್ಛತೆಯ ಜಂಟಿ ಜವಾಬ್ದಾರಿಯನ್ನು ತನ್ನ ಕೇಂದ್ರಬಿಂದುವಾಗಿಸಿಕೊಂಡಿದ್ದು, “ಸ್ವಚ್ಛ ಪರ್ವ್, ಹರಿತ್ ಪರ್ವ್” ಮೂಲಕ ಸ್ವಚ್ಛ ಹಾಗೂ ಹಸಿರು ಹಬ್ಬಗಳ ಆಚರಣೆಯತ್ತ ಗಮನ ಹರಿಸುತ್ತದೆ. ಇದು ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ಬಳಕೆ ಕಡಿಮೆ ಮಾಡುವುದು, ಮರುಬಳಕೆ ಮತ್ತು ಮರುಸಂಸ್ಕರಣೆ, ವೃತ್ತಾಕಾರದ ಆರ್ಥಿಕತೆ ಮತ್ತು 'ತ್ಯಾಜ್ಯದಿಂದ ಸಂಪತ್ತು' ಉಪಕ್ರಮಗಳನ್ನು ಉತ್ತೇಜಿಸುತ್ತದೆ.
ಭಾರತದ ಉತ್ಸವಗಳ ವಾತಾವರಣದಾದ್ಯಂತ, ಈ ಕಲ್ಪನೆಯು ಈಗಾಗಲೇ ಅರ್ಥಪೂರ್ಣ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುಬಳಕೆ ಮಾಡಲಾಗುತ್ತಿದೆ, ಗಣಪತಿ ಆಚರಣೆಗಳಲ್ಲಿ ಜೇಡಿಮಣ್ಣು ಮರಳಿ ಬಳಸಲ್ಪಡುತ್ತಿದೆ, ಉತ್ಸವದ ಆವರಣಗಳನ್ನು ನಿರ್ಮಿಸಲು ಬಿದಿರನ್ನು ಬಳಸಲಾಗುತ್ತಿದೆ ಮತ್ತು ಭಕ್ತರಿಗಾಗಿ ಛತ್ ಘಾಟ್‌ಗಳನ್ನು ಸ್ವಚ್ಛವಾಗಿಡಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಒಟ್ಟಾಗಿ, ಆಳವಾಗಿ ಬೇರೂರಿರುವ ಪರಂಪರೆಗಳು ನಂಬಿಕೆ, ಸಮುದಾಯದ ಭಾಗವಹಿಸುವಿಕೆ ಮತ್ತು ಬೆಳೆಯುತ್ತಿರುವ ಪರಿಸರ ಕಾಳಜಿಯೊಂದಿಗೆ ಕಾಲಕ್ಕೆ ತಕ್ಕಂತೆ ಹೇಗೆ ವಿಕಸನಗೊಳ್ಳಬಲ್ಲವು ಎಂಬುದನ್ನು ತೋರಿಸಿಕೊಡುತ್ತವೆ.
ಭಕ್ತಿಯ ಹೂವುಗಳು ಹೊಸ ಜೀವನವನ್ನು ಕಂಡುಕೊಂಡಾಗ
ಉಜ್ಜಯಿನಿಯಲ್ಲಿ ಮುಂಜಾನೆಯಾಗುತ್ತಿದ್ದಂತೆ, ಸಾವಿರಾರು ಭಕ್ತರು ಪೂಜೆಗಾಗಿ ಹೂವುಗಳನ್ನು ಹಿಡಿದು ಮಹಾಕಾಳೇಶ್ವರ ದೇವಾಲಯವನ್ನು ಪ್ರವೇಶಿಸುತ್ತಾರೆ. ಅವರಿಗೆ, ಈ ಹೂವುಗಳು ಭಕ್ತಿಯ ಅರ್ಪಣೆಗಳಾಗಿವೆ. ದೇವಾಲಯವು ಪ್ರತಿದಿನ ಸುಮಾರು 75,000 ದಿಂದ 1,000,000 ಭಕ್ತರನ್ನು ಸ್ವೀಕರಿಸುತ್ತದೆ ಮತ್ತು ದಿನನಿತ್ಯ ಸುಮಾರು 5 ರಿಂದ 6 ಟನ್ ಹೂವಿನ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ವಿಶೇಷ 'ಪುಷ್ಪಾಂಜಲಿ ಇಕೋನಿರ್ಮಿತ್' ವಾಹನಗಳು ಈ ಹೂವುಗಳನ್ನು ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುತ್ತವೆ, ಅಲ್ಲಿ ಅವುಗಳನ್ನು ಕಾಂಪೋಸ್ಟ್ (ಗೊಬ್ಬರ), ಬ್ರಿಕೆಟ್‌ಗಳು (ಉರಿಯುವ ಇಂಧನ ತುಂಡುಗಳು) ಮತ್ತು ಜೈವಿಕ ಇಂಧನಗಳಂತಹ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತದೆ.

ಶಿವ ಅರ್ಪಣ್ ಸ್ವಸಹಾಯ ಗುಂಪಿನ ಮಹಿಳೆಯರಿಗೆ, ದೇವರಿಗೆ ಅರ್ಪಿಸಿ ಎಸೆದ ಹೂವುಗಳು ಜೀವನೋಪಾಯದ ಮತ್ತು ಹೊಸ ಉದ್ದೇಶದ ಮೂಲವಾಗಿ ಮಾರ್ಪಟ್ಟಿವೆ. 2024 ರಲ್ಲಿ, ಹೂವಿನ ತ್ಯಾಜ್ಯವನ್ನು 3 ಕೋಟಿಗೂ (30 ಮಿಲಿಯನ್) ಹೆಚ್ಚಿನ ಧೂಪದ್ರವ್ಯದ ಕಡ್ಡಿಗಳು (ಅಗರಬತ್ತಿ) ಮತ್ತು ಇತರ ಪರಿಸರ ಸ್ನೇಹಿ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ, ಈ ಉಪಕ್ರಮವು ಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ತ್ಯಾಜ್ಯಕ್ಕೆ ಹೊಸ ಮೌಲ್ಯವನ್ನು ತಂದಿಟ್ಟಿದೆ. ಈ ರೀತಿಯಾಗಿ, ಭಕ್ತಿಯಿಂದ ಅರ್ಪಿಸಿದ ಹೂವು ಪೂಜೆಯ ನಂತರ ತನ್ನ ಪಯಣವನ್ನು ಕೊನೆಗೊಳಿಸುವುದಿಲ್ಲ; ಪ್ರಾರ್ಥನೆಯ ಬಳಿಕ ಅದು ಉದ್ಯಮ, ಜೀವನೋಪಾಯ ಮತ್ತು ಪರಿಸರ ಕಾಳಜಿಯ ಮೂಲಕ ಹೊಸ ರೂಪ ಮತ್ತು ಉದ್ದೇಶವನ್ನು ಪಡೆದುಕೊಳ್ಳುತ್ತದೆ.
ಆಚರಣೆಯು ಪರಿಸರ ಕಾಳಜಿಯೊಂದಿಗೆ ಕೈಜೋಡಿಸಿದಾಗ

ಲಕ್ಷಾಂತರ ಜನರಿಗೆ ಗಣೇಶ ಚತುರ್ಥಿಯು ಆಳವಾದ ವೈಯಕ್ತಿಕ ಭಾವನೆಗಳ ಹಬ್ಬವಾಗಿದೆ. ಸಂಗೀತ ಮತ್ತು ಪ್ರಾರ್ಥನೆಗಳ ನಡುವೆ ಮನೆಗಳನ್ನು ಪ್ರವೇಶಿಸುವ ಗಣೇಶ, ಕುಟುಂಬದ ಸದಸ್ಯನಾಗುತ್ತಾನೆ ಮತ್ತು ಅಂತಿಮವಾಗಿ ಮತ್ತೆ ಬರುವ ಭರವಸೆಯೊಂದಿಗೆ ವಿಸರ್ಜನೆಗೆ ಹೊರಡುತ್ತಾನೆ. ಈ ಬೀಳ್ಕೊಡುಗೆ ಪವಿತ್ರವಾದುದು, ಆದರೆ ಅದು ನಮ್ಮ ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ ನೆರವೇರಬೇಕಾದ ಕ್ಷಣವೂ ಆಗಿದೆ.
2024 ರಲ್ಲಿ, ನವಿ ಮುಂಬೈ ಗಣೇಶ ಮೂರ್ತಿ ವಿಸರ್ಜನೆಗಾಗಿ 136 ಕೃತಕ ಕೊಳಗಳನ್ನು ನಿರ್ಮಿಸಿ, ಭಕ್ತರಿಗೆ ವಿಸರ್ಜನೆಗೆ ನಿಗದಿತ ಸ್ಥಳಗಳನ್ನು ಒದಗಿಸಿತು. ಈ ಸ್ಥಳಗಳ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಯ್ತು, ಇದರಿಂದ ಭಕ್ತರು ಈ ಸೌಲಭ್ಯಗಳನ್ನು ಸುಲಭವಾಗಿ ಬಳಸಿಕೊಳ್ಳಲು ಸಹಾಯವಾಯಿತು ಹಾಗೂ ನೈಸರ್ಗಿಕ ಜಲಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಯಿತು.
ಬೃಹನ್ಮುಂಬೈ ಮಹಾನಗರ ಪಾಲಿಕೆಯು ಮೂರ್ತಿಕಾರರಿಗೆ ಸುಮಾರು 500 ಟನ್ ಉಚಿತ ಜೇಡಿಮಣ್ಣನ್ನು ಪೂರೈಸಿ, ಗಣೇಶ ಮೂರ್ತಿಗಳಿಗೆ ಸಾಂಪ್ರದಾಯಿಕ ಮತ್ತು ಪರಿಸರ ಕಾಳಜಿಯ ಸಾಮಗ್ರಿಗಳನ್ನು ಬಳಸಲು ಪ್ರೋತ್ಸಾಹಿಸಿತು. ಈ ಪ್ರಯತ್ನಕ್ಕೆ ಪೂರಕವಾಗಿ, ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಮೂರ್ತಿಗಳು ಮತ್ತು ಅಲಂಕಾರಗಳನ್ನು ಉತ್ತೇಜಿಸಲು 'ಇಕೋ-ಬಪ್ಪ' ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿತು. ಈ ಉಪಕ್ರಮವು ಆಚರಣೆಯ ಸಾಂಸ್ಕೃತಿಕ ಮತ್ತು ಭಕ್ತಿಯ ಸಾರವನ್ನು ಉಳಿಸಿಕೊಳ್ಳುವ ಜೊತೆಗೆ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಕ್ತರು ಮತ್ತು ಕಲಾವಿದರನ್ನು ಪ್ರೇರೇಪಿಸುತ್ತದೆ.
ಈ ಆಶಯವು ಯುವ ಭಾಗವಹಿಸುವಿಕೆಯಲ್ಲೂ ಧ್ವನಿಸಿತು. ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆಯು ವಿದ್ಯಾರ್ಥಿಗಳಿಗಾಗಿ ಪರಿಸರ ಸ್ನೇಹಿ ಮೂರ್ತಿ ತಯಾರಿಕೆ ಮತ್ತು ಅಲಂಕಾರ ಸ್ಪರ್ಧೆಯನ್ನು ಆಯೋಜಿಸಿತ್ತು. ಅವರು ಜೇಡಿಮಣ್ಣು, ಪೇಪರ್-ಮಾಷೆ, ನೈಸರ್ಗಿಕ ನಾರುಗಳು ಮತ್ತು ಮರುಸಂಸ್ಕರಿಸಿದ ಸಾಮಗ್ರಿಗಳೊಂದಿಗೆ ಕೆಲಸ ಮಾಡಲು ಪ್ರೋತ್ಸಾಹಿಸಲ್ಪಟ್ಟರು, ಇದು ಆಚರಣೆಗಳಲ್ಲಿ ಪರಿಸರ ಕಾಳಜಿಯನ್ನು ತಂದಿತು. ಮಹಾರಾಷ್ಟ್ರದ ಠಾಣೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಶಾದು ಮಣ್ಣನ್ನು ಬಳಸಿ ಗಣಪತಿ ಮೂರ್ತಿಗಳನ್ನು ಮಾಡಲು ಕಲಿತರು. ತಮ್ಮ ಸೃಜನಶೀಲತೆ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳುವುದನ್ನು ಮೀರಿ, ಈ ಉಪಕ್ರಮಗಳು ಯುವ ಮನಸ್ಸುಗಳಿಗೆ ಪ್ರೀತಿಯ ಪರಂಪರೆಗಳನ್ನು ಹೆಚ್ಚಿನ ಪರಿಸರ ಕಾಳಜಿಯೊಂದಿಗೆ ಮುನ್ನಡೆಸುವ ಕಲ್ಪನೆಯನ್ನು ಪರಿಚಯಿಸಿದವು.

ವಿಸರ್ಜನಾ ಸಮಾರಂಭದ (2023) ನಂತರವೂ ಭಾಗವಹಿಸುವಿಕೆಯ ಉತ್ಸಾಹವು ಮುಂದುವರಿಯಿತು. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 900 ಕ್ಕೂ ಹೆಚ್ಚು ಸ್ವಚ್ಛತಾ ಸ್ವಯಂಸೇವಕರು ವರ್ಸೋವಾ ಕಡಲತೀರವನ್ನು ಸ್ವಚ್ಛಗೊಳಿಸಲು ನೆರವಾದರು. ಅವರು ಸುಮಾರು 80,000 ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ತೆಗೆದುಹಾಕಿದರು ಮತ್ತು ಸುಮಾರು 7,400 ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (PoP) ಗಣೇಶ ಮೂರ್ತಿಗಳನ್ನು ಸಂಗ್ರಹಿಸಿದರು. ಈ ಮೂಲಕ 'ಬಪ್ಪ'ನಿಗೆ ನೀಡಿದ ಬೀಳ್ಕೊಡುಗೆಯು ಸೇವೆಗೆ ಮತ್ತೊಂದು ಅವಕಾಶವಾಗಿ ಮಾರ್ಪಟ್ಟಿತು.
ಹಸಿರು ಸ್ಥಿತ್ಯಂತರಕ್ಕೆ ಯಾವಾಗಲೂ ಹೊಸ ವಿಷಯವೇ ಬೇಕೆಂದೇನೂ ಇಲ್ಲ. ಕೆಲವೊಮ್ಮೆ, ಸಮುದಾಯಗಳು ತಲೆಮಾರುಗಳಿಂದ ತಿಳಿದಿರುವ ಸಾಂಪ್ರದಾಯಿಕ ವಸ್ತುಗಳಿಗೆ ಮರಳುವುದೂ ಸಹ ಪರಿಸರ ಕಾಳಜಿಯ ಭಾಗವಾಗುತ್ತದೆ.
ಅಸ್ಸಾಂನ ದಿಗ್‌ಬೋಯಿಯಲ್ಲಿ, ಗಣೇಶ ಪೂಜೆಯನ್ನು (2023) ಬಿದಿರಿನ ಸುತ್ತಲೂ ಆಯೋಜಿಸಲಾಗಿತ್ತು. ಮೂರ್ತಿಗಳು, ಪ್ರವೇಶ ದ್ವಾರಗಳು ಮತ್ತು 'ಜಾಪಿ' ಸಾಂಪ್ರದಾಯಿಕ ಟೋಪಿಗಳು ಹಾಗೂ 'ಖೋರಾಹಿ' ಬುಟ್ಟಿಗಳು ಸೇರಿದಂತೆ ಸಾಂಪ್ರದಾಯಿಕ ಅಲಂಕಾರಗಳಿಗೆ ಬಿದಿ ರನ್ನೇ ಬಳಸಲಾಗಿತ್ತು. ಈ ಆಚರಣೆಯು ಸ್ಥಳೀಯ ಪರಂಪರೆ ಮತ್ತು ಪರಿಸರ ಕಾಳಜಿಯನ್ನು ಒಂದೆಡೆ ತಂದಿತು.

ದೆಹಲಿಯು ತೆಂಗಿನ ಮರದ ತೊಗಟೆ ಮತ್ತು ಜೇಡಿಮಣ್ಣಿನಿಂದ ತಯಾರಿಸಿದ, ಒಳಗೆ ಬೀಜಗಳನ್ನು ಒಳಗೊಂಡಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೂಲಕ ಈ ಕಲ್ಪನೆಗೆ ಮತ್ತೊಂದು ಹೊಸ ರೂಪವನ್ನು ನೀಡಿತು. ವಿಸರ್ಜನೆಯ ನಂತರ, ಈ ಮೂರ್ತಿಗಳು ಮಣ್ಣಿನಲ್ಲಿ ಕರಗಿ, ಒಳಗಿದ್ದ ಬೀಜಗಳು ಮೊಳಕೆಯೊಡೆದು ಸಸ್ಯಗಳಾಗಿ ಬೆಳೆಯುತ್ತವೆ. ಹೀಗೆ ಧಾರ್ಮಿಕ ವಿಧಿಯು ತನ್ನ ಸಾಂಪ್ರದಾಯಿಕ ಬೇರುಗಳಲ್ಲೇ ಉಳಿದುಕೊಂಡರೆ, ಬಳಸಿದ ಸಾಮಗ್ರಿಗಳು ಪೂಜೆಯ ಪಯಣವನ್ನು ಪೂರ್ಣಗೊಳಿಸಲು ಅತ್ಯಂತ ಸುಸ್ಥಿರ ಮಾರ್ಗವನ್ನು ಒದಗಿಸುತ್ತವೆ.
ಪಂಡಾಲ್‌ನಿಂದ ಪ್ರಸಾದದವರೆಗೆ: ಹಸಿರು ಆಚರಣೆ
ದುರ್ಗಾಪೂಜೆಯು ಭಕ್ತಿ, ಕಲಾತ್ಮಕತೆ ಮತ್ತು ಸಮುದಾಯದ ಬಾಂಧವ್ಯದ ಸಂಭ್ರಮವಾಗಿದ್ದು, ಪಂಡಾಲ್‌ಗಳು ದೇವಿಯನ್ನು ಸ್ವಾಗತಿಸುವ ತಾತ್ಕಾಲಿಕ ಧಾರ್ಮಿಕ ತಾಣಗಳಾಗಿ ಮಾರ್ಪಡುತ್ತವೆ. ಈ ತಾಣಗಳನ್ನು ನಿರ್ಮಿಸಲು ಬಳಸುವ ಸಾಮಗ್ರಿಗಳು ಈಗ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುತ್ತಿವೆ. 2023 ರಲ್ಲಿ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಬದಲಿಗೆ ಬಿದಿರು, ಮರ, ತೆಂಗಿನ ಚಿಪ್ಪು, ಬಟ್ಟೆ, ಸೆಣಬು, ತೆಂಗಿನ ನಾರು, ಒಣಹುಲ್ಲು, ಗಿಡದ ಕಡ್ಡಿ, ಬೆತ್ತ ಮತ್ತು ಕಾಗದಗಳನ್ನು ಬಳಸಲಾಯ್ತು; ಜೊತೆಗೆ ನೀರಿನಲ್ಲಿ ಸುಲಭವಾಗಿ ಕರಗುವ ಜೇಡಿಮಣ್ಣಿನ ದುರ್ಗಾ ಮೂರ್ತಿಗಳ ಬಳಕೆಯನ್ನು ಪ್ರೋತ್ಸಾಹಿಸಲಾಯಿತು.

ಈ ಪ್ರಯತ್ನಗಳು ಕೇವಲ ಪಂಡಾಲ್‌ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹೆಚ್ಚು ಜನರು ಸೇರುವ ಪ್ರಮುಖ ಸ್ಥಳಗಳಲ್ಲಿ ನೀಲಿ ಮತ್ತು ಹಸಿರು ತ್ಯಾಜ್ಯದ ತೊಟ್ಟಿಗಳನ್ನು ಇಡಲಾಗಿತ್ತು, ರಾತ್ರಿ ವೇಳೆಯಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಲಾಗಿತ್ತು ಮತ್ತು ಪ್ಲಾಸ್ಟಿಕ್ ರಹಿತ ಅಲಂಕಾರಗಳನ್ನು ಉತ್ತೇಜಿಸಲಾಯಿತು. ದೆಹಲಿಯ ಕೆಲವು ಪಂಡಾಲ್‌ಗಳು ತಮ್ಮ ಅಲಂಕಾರಿಕ ವ್ಯವಸ್ಥೆಗಳಿಗೆ ಬಿದಿರು ಮತ್ತು ಹತ್ತಿಯನ್ನು ಮುಖ್ಯ ಸಾಮಗ್ರಿಗಳಾಗಿ ಆಯ್ಕೆ ಮಾಡಿಕೊಂಡವು.
ದೇವರಿಗೆ ಅರ್ಪಿಸಿದ ಪೂಜಾ ದ್ರವ್ಯಗಳೂ ಸಹ ಮರುಜೀವವನ್ನು ಪಡೆದುಕೊಂಡವು. ಪೂಜೆಯ ನಂತರ ಸಂಗ್ರಹಿಸಿದ ಹೂವುಗಳು ಮತ್ತು ಇತರ ಜೈವಿಕ ತ್ಯಾಜ್ಯಗಳನ್ನು ಗೊಬ್ಬರ ತಯಾರಿಕೆಗೆ ಮತ್ತು ಇತರ ಉತ್ಪಾದಕ ಬಳಕೆಗಳಿಗೆ ರವಾನಿಸಲಾಯಿತು. ಪ್ರಸಾದ ಮತ್ತು ಉಪಹಾರಗಳನ್ನು ಕಾಗದದ ತಟ್ಟೆಗಳು, ಬಾಳೆ ಎಲೆಗಳು, ಅಡಿಕೆ ಹಾಳೆ ತಟ್ಟೆಗಳು ಮತ್ತು ಮಣ್ಣಿನ ಪ್ರಣತೆ/ಪಾತ್ರೆಗಳಲ್ಲಿ ನೀಡಲಾಯಿತು. ಇದು ಆಚರಣೆಯ ಸಾಂಪ್ರದಾಯಿಕ ಅಂಶಗಳನ್ನು ಉಳಿಸಿಕೊಂಡೇ ಪರಿಸರ ಕಾಳಜಿಯ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿತು.
ಸ್ವಚ್ಛತೆಯ ಆಶಯದೊಂದಿಗೆ ದೀಪಾವಳಿ ಆಚರಣೆ
ದೀಪಾವಳಿಯು ಯಾವಾಗಲೂ ಸ್ವಚ್ಛತೆಯೊಂದಿಗೆ ನಿಕಟ ನಂಟನ್ನು ಹೊಂದಿದೆ. ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ, ಹಳೆಯ ವಸ್ತುಗಳನ್ನು ವಿಂಗಡಿಸಲಾಗುತ್ತದೆ ಮತ್ತು ಕುಟುಂಬಗಳು ಪೂಜೆ, ಉಡುಗೊರೆಗಳು ಹಾಗೂ ಸಿಹಿ ತಿಂಡಿಗಳಿಗಾಗಿ ಒಂದೆಡೆ ಸೇರುತ್ತವೆ. “ಸ್ವಚ್ಛ ದೀಪಾವಳಿ, ಶುಭ ದೀಪಾವಳಿ” ಅಭಿಯಾನವು ಈ ಸಾಂಪ್ರದಾಯಿಕ ಚೌಕಟ್ಟಿನ ಮೇಲೆಯೇ ನಿರ್ಮಾಣಗೊಂಡಿದೆ. ಇದು ತ್ಯಾಜ್ಯ ವಿಂಗಡಣೆ, 3R ತತ್ವಗಳು ( ಬಳಕೆ ಕಡಿಮೆ ಮಾಡುವುದು, ಮರುಬಳಕೆ, ಮರುಸಂಸ್ಕರಣೆ), ಸ್ಥಳೀಯ ಉತ್ಪನ್ನಗಳ ಬಳಕೆ ಮತ್ತು ಸ್ವಚ್ಛ ಆಚರಣೆಗಳನ್ನು ಪ್ರೋತ್ಸಾಹಿಸುತ್ತದೆ.
ಮಹಾರಾಷ್ಟ್ರದ ಮೀರಾ ಭಯಂದರ್‌ನಲ್ಲಿ, ಹಬ್ಬದ ಆಚರಣೆಯು ಮುಂಚಿತ ತಯಾರಿಕೆ ಮತ್ತು ಸಮುದಾಯದ ಸ್ವಚ್ಛತೆಯೊಂದಿಗೆ ಪ್ರಾರಂಭವಾಯಿತು. ದೀಪಾವಳಿಪೂರ್ವ ವಿಶೇಷ ನೈರ್ಮಲ್ಯ ಅಭಿಯಾನದಲ್ಲಿ ಸಫಾಯಿ ಮಿತ್ರರು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದರು, ರಾಷ್ಟ್ರೀಯ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ತೊಳೆಯುವ ಮೂಲಕ ಹಸಿರು ವಲಯಗಳನ್ನು ಆರೈಕೆ ಮಾಡಿದರು.

ರಾಜಸ್ಥಾನ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ದೀಪಾವಳಿ ನೈರ್ಮಲ್ಯದ ಸಂದರ್ಭದಲ್ಲಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಹತ್ತಿರದ 'ಕಡಿಮೆ ಮಾಡಿ, ಮರುಬಳಕೆ ಮಾಡಿ ಮತ್ತು ಮರುಸಂಸ್ಕರಿಸಿ' ಕೇಂದ್ರಗಳಿಗೆ ತಲುಪಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.
2023 ರಲ್ಲಿ, ಈ ಮರುಬಳಕೆಯ ಆಶಯವು ಹಬ್ಬದ ಉಡುಗೊರೆಗಳನ್ನು ನೀಡುವ ಸಂಸ್ಕೃತಿಗೂ ವಿಸ್ತರಿಸಿತು. ದೆಹಲಿಯ ನವಜೀವನ್ ವಿಹಾರ್‌ನಲ್ಲಿ ಆಯೋಜಿಸಲಾಗಿದ್ದ ‘ಸ್ವಾಪ್ ಬಿಫೋರ್ ಯು ಶಾಪ್ - ಗಿಫ್ಟ್ ರಿವೈವಲ್ ಮೇಳ’ದಲ್ಲಿ, ನಿವಾಸಿಗಳು ತಮಗೆ ಬಳಕೆಯಾಗದ ಉಡುಗೊರೆಗಳನ್ನು ವರ್ಗೀಕರಿಸಿದ ಉಡುಗೊರೆಗಳ ಪೂಲ್ ಮೂಲಕ ಪರಸ್ಪರ ವಿನಿಮಯ ಮಾಡಿಕೊಂಡರು. ಒಂದೇ ದಿನದಲ್ಲಿ ಕೇವಲ ಎರಡು ಗಂಟೆಗಿಂತ ಕಡಿಮೆ ಅವಧಿಯಲ್ಲಿ 50 ಕ್ಕೂ ಹೆಚ್ಚು ಉಡುಗೊರೆಗಳು ಹೀಗೆ ವಿನಿಮಯಗೊಂಡವು.

ಮತ್ತೊಂದೆಡೆ, ತ್ರಿಪುರಾದ ಮೇಳಾಘರ್‌ನಲ್ಲಿ, ಸ್ವಸಹಾಯ ಗುಂಪುಗಳ ಮಹಿಳೆಯರು ಪರಿಸರ ಸ್ನೇಹಿ ದೀಪಾವಳಿಗಾಗಿ ಮಣ್ಣಿನ ದೀಪಗಳನ್ನು (ಪ್ರಣತೆಗಳನ್ನು) ತಯಾರಿಸಿದರು. ಇದಲ್ಲದೆ, ದೆಹಲಿಯ ದೀಪ್ ಮಹೋತ್ಸವ, ಸ್ವಚ್ಛ ಉತ್ಸವ ಮತ್ತು ಮತದಾರರ ಉತ್ಸವಗಳು ಆಚರಣೆಯು ಸ್ವತಃ ಹೇಗೆ 'ಶೂನ್ಯ ತ್ಯಾಜ್ಯ' ಅನುಭವವಾಗಬಲ್ಲದು ಎಂಬುದನ್ನು ಪ್ರದರ್ಶಿಸಿದವು. ಬಟ್ಟೆಯ ಚೂರುಗಳು ಮರುಬಳಕೆ ಮಾಡಬಹುದಾದ ರಂಗೋಲಿ/ತೋರಣಗಳಾದವು, ಎಸೆದ ರಟ್ಟಿನ ಪೆಟ್ಟಿಗೆಗಳು ಸೆಲ್ಫಿ ಫ್ರೇಮ್‌ಗಳಾದವು ಮತ್ತು ಹಳೆಯ ಐಸ್‌ಕ್ರೀಮ್ ಕಡ್ಡಿಗಳು ನೇತುಹಾಕುವ ಅಲಂಕಾರಿಕ ವಸ್ತುಗಳಾದವು. ಇವು ನಮ್ಮ ಸುಪರಿಚಿತ ಪರಂಪರೆಯನ್ನು ಜೀವಂತವಾಗಿರಿಸುವುದರ ಜೊತೆಗೆ ಹೆಚ್ಚು ಸುಸ್ಥಿರ ಆಯ್ಕೆಯನ್ನು ಒದಗಿಸಿದವು.
ದೀಪಗಳು ಆರಿದ ನಂತರ
ಗುವಾಹಾಟಿಯಲ್ಲಿ, ದೀಪಗಳು ಬೆಳಗಿದ ನಂತರವೂ ಈ ಕಥೆ ಮುಂದುವರೆಯಿತು. ಸಾಂಪ್ರದಾಯಿಕ ದೀಪಾವಳಿ ಆಚರಣೆಯಲ್ಲಿ ಬಳಸಿದ ಬಾಳೆ ಎಲೆಗಳನ್ನು ಪೂಜೆಯ ನಂತರ ಸಂಗ್ರಹಿಸಿ ಆನೆಗಳಿಗೆ ಆಹಾರವಾಗಿ ರವಾನಿಸಲಾಯಿತು.

ರಾಜಸ್ಥಾನದ ಝಾಲ್ರಾಪಟನ್‌ನಲ್ಲಿ, 'ನಿರ್ಮಾಲ್ಯ ವಾಹನ'ಗಳು ದೇವಾಲಯಗಳಿಂದ ಹೂಮಾಲೆಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸುತ್ತವೆ. ಹೀಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ನಂತರ ಸಂಸ್ಕರಿಸಿ ಗೊಬ್ಬರವನ್ನಾಗಿ (ಕಾಂಪೋಸ್ಟ್) ಮಾಡಲಾಗುತ್ತದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ, ಹಬ್ಬ ಮುಗಿದ ಮರುದಿನ ಬೆಳಗಿನ ಜಾವ 4 ಗಂಟೆಗೆಯೇ ವಿಶೇಷ ಸ್ವಚ್ಛತಾ ಕಾರ್ಯ ಪ್ರಾರಂಭವಾಯಿತು. ‘ಕ್ಲೀನ್ ಅಪ್ ಟು ಕ್ಲೀನ್ ಏರ್’ ಉಪಕ್ರಮದಡಿಯಲ್ಲಿ, ‘ಸ್ವಚ್ಛತೆಯಿಂದ ಸ್ವಚ್ಛ ಗಾಳಿಯತ್ತ’ (ಸ್ವಚ್ಛತಾ ಸೇ ಸ್ವಚ್ಛ ವಾಯು ಕಿ ಓರ್) ಎಂಬ ಸಂದೇಶದೊಂದಿಗೆ ಸ್ಪ್ರಿಂಕ್ಲರ್ ವಾಹನಗಳು ಮರ ಗಿಡಗಳಿಗೆ ನೀರನ್ನು ಸಿಂಪಡಿಸಿದವು.
ನದಿಗಳೇ ಪ್ರಾರ್ಥನೆಯ ಭಾಗವಾದಾಗ
ಛತ್ ಪೂಜೆಯು ಪ್ರಕೃತಿಯೊಂದಿಗೆ ಭಾರತ ಹೊಂದಿರುವ ಆಳವಾಗಿ ಬೇರೂರಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಭಕ್ತರು ಗಂಗಾ ನದಿಯಂತಹ ಪವಿತ್ರ ನದಿಗಳ ದಂಡೆಯಲ್ಲಿ ನೀರಿನ ಮುಂದೆ ನಿಂತು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ; ಇದು ಘಾಟ್‌ಗಳನ್ನು ಕೇವಲ ಆಚರಣೆಯ ಸ್ಥಳವನ್ನಾಗಿ ಮಾಡದೆ, ಧಾರ್ಮಿಕ ವಿಧಿಯ ಅಖಂಡ ಭಾಗವನ್ನಾಗಿ ಮಾಡುತ್ತದೆ.

ಬಿಹಾರದ ಪಟ್ನಾದಲ್ಲಿ, ಮಹಾನಗರ ಪಾಲಿಕೆಯು ನಿಗದಿತ ಘಾಟ್‌ಗಳಲ್ಲಿ 'ಶೂನ್ಯ ತ್ಯಾಜ್ಯ' ಛತ್ ಪೂಜೆಯನ್ನು ಆಯೋಜಿಸುತ್ತದೆ. ಪ್ರತ್ಯೇಕ ತ್ಯಾಜ್ಯದ ತೊಟ್ಟಿಗಳನ್ನು ಇಡಲಾಗುತ್ತದೆ ಮತ್ತು ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಲು ಮೀಸಲಾದ ವಾಹನಗಳನ್ನು ನಿಯೋಜಿಸಲಾಗುತ್ತದೆ. ಹಸಿ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಸಂಸ್ಕರಿಸಲಾಗುತ್ತದೆ ಹಾಗೂ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಭಕ್ತರು ಮತ್ತು ವಿಶಾಲ ಸಮುದಾಯವು ಸ್ವಚ್ಛ ಹಾಗೂ ನೈರ್ಮಲ್ಯಯುತ ಹಬ್ಬದ ವಾತಾವರಣವನ್ನು ನಿರ್ವಹಿಸಲು ಪ್ರೋತ್ಸಾಹಿಸಲು ಪೂಜೆಗೆ ಒಂದು ತಿಂಗಳ ಮೊದಲು ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನವನ್ನೂ ನಡೆಸಲಾಗುತ್ತದೆ.
ಹಬ್ಬದ ಪವಿತ್ರತೆಯು ಅದು ಆಚರಿಸಲ್ಪಡುವ ಸ್ಥಳಗಳ ಸ್ವಚ್ಛತೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ ಎಂಬುದನ್ನು ಈ ವಿಧಾನವು ಗುರುತಿಸುತ್ತದೆ. ನದಿಯೇ ಪೂಜೆಯ ಭಾಗವಾದಾಗ, ಅದರ ದಂಡೆಗಳನ್ನು ಆರೈಕೆ ಮಾಡುವುದು ಭಕ್ತಿ ಮತ್ತು ಗೌರವದ ಅಭಿವ್ಯಕ್ತಿಯಾಗುತ್ತದೆ.
ಒಳ್ಳೆಯದನ್ನು ಬಾಕಿ ಉಳಿಸುವ ಆಚರಣೆ
ಒಂದು ಹಬ್ಬವು ತನ್ನ ಪ್ರಾರ್ಥನೆಗಳು, ದೀಪಗಳು, ಸಂಗೀತ ಮತ್ತು ಆಚರಿಸಲು ಒಂದಾಗುವ ಜನರಿಂದ ನೆನಪಿನಲ್ಲಿ ಉಳಿಯುತ್ತದೆ. ಆದರೂ ಪ್ರತಿಯೊಂದು ಆಚರಣೆಯು ತನ್ನ ನಂತರ ಏನನ್ನಾದರೂ ಬಿಟ್ಟು ಹೋಗುತ್ತದೆ: ಸ್ವಚ್ಛಗೊಳಿಸಬೇಕಾದ ರಸ್ತೆ, ಘಾಟ್‌ನಲ್ಲಿರುವ ಹೂವುಗಳು, ಜಲಮೂಲದಲ್ಲಿರುವ ಮೂರ್ತಿ, ಅಥವಾ ಜನಸಂದಣಿ ಚದುರಿದ ನಂತರ ಉಳಿದ ಅಲಂಕಾರಗಳು. ಆದರೆ ಇಂದು ಬದಲಾಗುತ್ತಿರುವ ವಾತಾವರಣದಲ್ಲಿ, ಅದು ಇನ್ನು ಹೆಚ್ಚಿನ ಒಳ್ಳೆಯದನ್ನೂ ಬಾಕಿ ಉಳಿಸಬಹುದು: ಅದೇನೆಂದರೆ, ಹೆಚ್ಚು ಸ್ವಚ್ಛವಾದ ಘಾಟ್, ಮರುಸಂಸ್ಕರಿಸಿದ ಅಲಂಕಾರಿಕ ವಸ್ತು, ಮಣ್ಣಿನ ಮೂರ್ತಿ, ಹೊಸದಾಗಿ ಬೆಳೆಯುವ ಸಸ್ಯ, ಸೃಷ್ಟಿಯಾದ ಜೀವನೋಪಾಯ, ಅಥವಾ ಹೆಚ್ಚಿನ ಕಾಳಜಿಯೊಂದಿಗೆ ಆಚರಿಸಲು ಕಲಿತ ಒಂದು ಸಮುದಾಯ.
ಭಾರತದ ಹಬ್ಬಗಳು ಹೆಚ್ಚು ಪರಿಸರ ಸ್ನೇಹಿಯಾಗಲು ತಮ್ಮ ಬಣ್ಣ ಮತ್ತು ಸಂಭ್ರಮವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ದೀಪಗಳು ಇಂದಿಗೂ ಬೆಳಗಬಹುದು, ವಾದ್ಯಗಳು ಮೊಳಗಬಹುದು ಮತ್ತು ಪ್ರಾರ್ಥನೆಗಳು ಮುಗಿಲು ಮುಟ್ಟಬಹುದು. ಬದಲಾಗಬೇಕಿರುವುದು ಆಚರಣೆ ಮುಗಿದ ನಂತರ ನಾವು ಬಿಟ್ಟು ಹೋಗುವ ಅಂಶಗಳು ಮಾತ್ರ. ಆಚರಣೆಯ ಸಂತೋಷವು ಜನರೊಂದಿಗೆ ಉಳಿದು, ಅದರ ಹೊರೆ ಭೂಮಿಯ ಮೇಲೆ ಬೀಳದಿದ್ದಾಗ ಮಾತ್ರ ಹಬ್ಬವು ನಿಜವಾದ ಅರ್ಥದಲ್ಲಿ ಸಂಪೂರ್ಣಗೊಳ್ಳುತ್ತದೆ.
References
Ministry of Housing & Urban Affairs
https://sbmurban.org/swachhata-parv
https://www.pib.gov.in/PressReleasePage.aspx?PRID=2032112
https://www.pib.gov.in/PressReleasePage.aspx?PRID=1968363
https://sbmurban.org/clean-green-diwali
https://sbmurban.org/Maharashtra-Celebrates-Green-Ganeshotsav/
https://sbmurban.org/swachh-sanskar-aur-diwali
Ministry of Jal Shakti
https://www.pib.gov.in/newsite/erelcontent.aspx?lang=2®=48&relid=294881
Click here to see pdf
*****
(Features ID: 160205)
आगंतुक पटल : 11
Provide suggestions / comments