• Sitemap
  • Advance Search
Technology

ಫ್ಯಾಬ್ ಗಳನ್ನು ಮೀರಿ

ಭಾರತದ ಸೆಮಿಕಂಡಕ್ಟರ್ ಆಕಾಂಕ್ಷೆಯ ಸುತ್ತ ಧೋಲೇರಾ ಹೇಗೆ ಸೂಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ

Posted On: 28 SEP 2026 3:57PM

ಸನ್ನಿವೇಶವನ್ನು ಹೊಂದಿಸುವುದು

ಸೆಮಿಕಂಡಕ್ಟರ್ ತಯಾರಿಕಾ ಘಟಕವು ಸೆಮಿಕಂಡಕ್ಟರ್ ಹಬ್ ಅನ್ನು ನಿರ್ಮಿಸಲು ಅಗತ್ಯವಿರುವ ಬಹುತೇಕ ಅಂಶಗಳಲ್ಲಿ ಒಂದು ಭಾಗ ಮಾತ್ರ. ಕ್ಲೀನ್ ರೂಮ್‌ಗಳು (ಮಾಲಿನ್ಯರಹಿತ ಕೊಠಡಿಗಳು), ಅತ್ಯಾಧುನಿಕ ಉಪಕರಣಗಳು ಮತ್ತು ಉತ್ಪಾದನಾ ಸಾಲುಗಳ ಹಿನ್ನೆಲೆಯಲ್ಲಿ - ಆಸ್ಪತ್ರೆಗಳು, ಶಾಲೆಗಳು, ವಸತಿ, ತುರ್ತು ಸೇವೆಗಳು ಮತ್ತು ವಾಣಿಜ್ಯ ಮೂಲಸೌಕರ್ಯಗಳನ್ನೊಳಗೊಂಡ ವ್ಯಾಪಕವಾದ ಪರಿಸರ ವ್ಯವಸ್ಥೆಯು ಇರುತ್ತದೆ. ಇದು ಕಂಪನಿಗಳು ಮತ್ತು ಅವುಗಳ ಉದ್ಯೋಗಿ ಪಡೆಗಳು ದೀರ್ಘಾವಧಿಯವರೆಗೆ ಕಾರ್ಯಾಚರಣೆ ನಡೆಸಲು ಅನುಕೂಲ ಮಾಡಿಕೊಡುತ್ತದೆ.

ಗುಜರಾತ್‌ನ ಧೋಲೇರಾದಲ್ಲಿ, ಈ ವಿಶಾಲವಾದ ಪರಿಸರ ವ್ಯವಸ್ಥೆಯು ಸೆಮಿಕಂಡಕ್ಟರ್ ತಯಾರಿಕಾ ಕ್ಲಸ್ಟರ್‌ನ ಅಭಿವೃದ್ಧಿಯೊಂದಿಗೆ ರೂಪುಗೊಳ್ಳುತ್ತಿದೆ.

'ಸೆಮಿಕಾನ್ ಇಂಡಿಯಾ 1.0' ಅಡಿಯಲ್ಲಿ ಅನುಮೋದಿಸಲಾದ 12 ಸೆಮಿಕಂಡಕ್ಟರ್ ತಯಾರಿಕಾ ಯೋಜನೆಗಳಲ್ಲಿ 6 ಯೋಜನೆಗಳು ಗುಜರಾತ್‌ನಲ್ಲೇ ನೆಲೆಗೊಂಡಿದ್ದು, ರಾಜ್ಯವು ಭಾರತದ ಸೆಮಿಕಂಡಕ್ಟರ್ ವಿಸ್ತರಣೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಮಟ್ಟದಲ್ಲಿ ₹1.64 ಲಕ್ಷ ಕೋಟಿಗೂ ಹೆಚ್ಚಿನ ಒಟ್ಟು ಹೂಡಿಕೆಯ ಬದ್ಧತೆಯನ್ನು ಹೊಂದಿರುವ ಈ ಯೋಜನೆಗಳು, ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್, ಕಾಂಪೌಂಡ್ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ತಂತ್ರಜ್ಞಾನಗಳು ಹಾಗೂ ಅತ್ಯಾಧುನಿಕ ಪ್ಯಾಕೇಜಿಂಗ್ ವ್ಯವಸ್ಥೆಗಳನ್ನು ಒಳಗೊಂಡಿವೆ.

ಈ ಬೃಹತ್ ಹೂಡಿಕೆಗಳ ಪ್ರಮಾಣವು ಮತ್ತೊಂದು ಪೂರಕ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ: ಅದೇನೆಂದರೆ, ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಭಾಗವಾಗುವ ಜನರು ಮತ್ತು ವ್ಯವಹಾರ ಸಂಸ್ಥೆಗಳಿಗೆ ಬೆಂಬಲ ನೀಡಲು ಸಜ್ಜಾಗಿರುವ ಕೈಗಾರಿಕಾ ಟೌನ್‌ಶಿಪ್‌ನ ನಿರ್ಮಾಣ.

'ಸೆಮಿಕಾನ್ ಇಂಡಿಯಾ 2026'ರಲ್ಲಿ ನಡೆದ ಹೂಡಿಕೆ ಸುಗಮಗೊಳಿಸುವಿಕೆ ಮತ್ತು ಸುಲಭ ವ್ಯವಹಾರ ನಿರ್ವಹಣೆ ಕುರಿತ ಗೋಷ್ಠಿಯ ಸಂವಾದದಲ್ಲಿ, ಗಾಂಧಿನಗರದ ಗುಜರಾತ್ ರಾಜ್ಯ ಎಲೆಕ್ಟ್ರಾನಿಕ್ಸ್ ಮಿಷನ್‌ನ ಮಿಷನ್ ನಿರ್ದೇಶಕರಾದ ನೇಹಾ ಕುಮಾರಿ ಅವರು, ಧೋಲೇರಾ ಕೈಗಾರಿಕಾ ಕ್ಲಸ್ಟರ್‌ನ ಜೊತೆಗೆ ಈ ಪೂರಕ ಮೂಲಸೌಕರ್ಯಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ವಿವರಿಸಿದರು.

ಫ್ಯಾಬ್ ನಿರ್ಮಾಣದ ನಂತರದ ಅಗತ್ಯತೆಗಳ ಸೃಷ್ಟಿ

ಆರೋಗ್ಯ ರಕ್ಷಣೆಯು ಈ ಪರಿಸರ ವ್ಯವಸ್ಥೆಯ ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಧೋಲೇರಾದಲ್ಲಿ 200 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್ 2026 ರ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಸೌಲಭ್ಯವನ್ನು ಗುಜರಾತ್ ಸರ್ಕಾರವು ನಿರ್ವಹಿಸುವ ನಿರೀಕ್ಷೆಯಿದೆ. ಈ ಭೌತಿಕ ಮೂಲಸೌಕರ್ಯಗಳ ಜೊತೆಗೆ, ತುರ್ತು ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳು ಮತ್ತು ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ವ್ಯವಸ್ಥೆಗಳ ಮೇಲೆಯೂ ಕೆಲಸ ನಡೆಯುತ್ತಿದೆ.

ಶಿಕ್ಷಣವು ಮತ್ತೊಂದು ಪ್ರಮುಖ ಅಂಶವಾಗಿದೆ. ಈ ಟೌನ್‌ಶಿಪ್‌ನಲ್ಲಿ 'ಇಂಟರ್ನ್ಯಾಷನಲ್ ಬ್ಯಾಕಲೊರೇಟ್' ಪಠ್ಯಕ್ರಮವನ್ನು ಅನುಸರಿಸುವ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಟ್ಟಡವು ಸಿದ್ಧವಾಗಿದ್ದು, ಅಕ್ಟೋಬರ್ 2026 ರ ಸುಮಾರಿಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಶಾಲೆಯನ್ನು ನಡೆಸಲು ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ.

ಈ ಹೊಸ ಕೈಗಾರಿಕಾ ಕ್ಲಸ್ಟರ್‌ನಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು ಮತ್ತು ಹೂಡಿಕೆದಾರರಿಗಾಗಿ ವಸತಿ ಸೌಕರ್ಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಸೆಪ್ಟೆಂಬರ್ 2026 ರ ಅಂತ್ಯದ ವೇಳೆಗೆ ಹೂಡಿಕೆದಾರರಿಗೆ ಮೀಸಲಾದ ವಸತಿ ಸೌಲಭ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, ಈ ಪ್ರದೇಶದಲ್ಲಿ ಕೆಲಸ ಮಾಡುವ ಜನರಿಗೆ ಆಶ್ರಯ ನೀಡುವ ಟೌನ್‌ಶಿಪ್‌ನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

ಇತರ ನಾಗರಿಕ ಮೂಲಸೌಕರ್ಯಗಳು ಸಹ ಸಮಾಂತರವಾಗಿ ಪ್ರಗತಿಯಲ್ಲಿವೆ. ಅಗ್ನಿಶಾಮಕ ಠಾಣೆ ನಿರ್ಮಾಣ ಪೂರ್ಣಗೊಂಡಿದ್ದು, ಜುಲೈ 2026ರಲ್ಲಿ ಫುಡ್ ಕೋರ್ಟ್ ಪೂರ್ಣಗೊಂಡಿದೆ. ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, 2027 ರ ಮಧ್ಯಭಾಗದಿಂದ 2027 ರ ಅಂತ್ಯದ ವೇಳೆಗೆ ಅವುಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

'ಟೆಂಟ್ ಸಿಟಿ' ನಿರ್ಮಾಣ ಪೂರ್ಣಗೊಂಡಿದ್ದು, ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಮಾರಾಟಗಾರರು ಅನುಮೋದನೆಗಳನ್ನು ಪಡೆಯುವ ಅಂತಿಮ ಹಂತದಲ್ಲಿದ್ದಾರೆ. ಜೊತೆಗೆ ಹೋಟೆಲ್ ಒಂದರ ನಿರ್ಮಾಣ ಕಾರ್ಯ ಪ್ರಸ್ತುತ ನಡೆಯುತ್ತಿದೆ.

ಕೈಗಾರಿಕಾ ಯೋಜನೆಯಿಂದ ಕೈಗಾರಿಕಾ ಪರಿಸರ ವ್ಯವಸ್ಥೆಯತ್ತ

ಈ ಬೆಳವಣಿಗೆಗಳು ಬೃಹತ್ ಕೈಗಾರಿಕಾ ಹೂಡಿಕೆಗಳನ್ನು ಹೇಗೆ ಯೋಜಿಸಲಾಗುತ್ತಿದೆ ಎಂಬುದರಲ್ಲಿನ ವಿಶಾಲ ಬದಲಾವಣೆಯನ್ನು ತೋರಿಸುತ್ತವೆ. ಸೆಮಿಕಂಡಕ್ಟರ್ ಸೌಲಭ್ಯಕ್ಕೆ ಕೇವಲ ಅತ್ಯಾಧುನಿಕ ತಯಾರಿಕಾ ಮೂಲಸೌಕರ್ಯ ಮಾತ್ರವಲ್ಲದೆ, ವಿಶೇಷ ಪರಿಣಿತ ಉದ್ಯೋಗಿಗಳನ್ನು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸುವ ವಾತಾವರಣದ ಅಗತ್ಯವೂ ಇರುತ್ತದೆ.

ಧೋಲೇರಾದ ಮಟ್ಟಿಗೆ ಹೇಳುವುದಾದರೆ, ತಯಾರಿಕಾ ಸಾಮರ್ಥ್ಯಗಳನ್ನು ಸ್ಥಾಪಿಸುವ ಜೊತೆಜೊತೆಗೇ ಕೈಗಾರಿಕಾ ಕ್ಲಸ್ಟರ್ ಸುತ್ತಲಿನ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಎಂದರ್ಥ.

ಕಳೆದ ಒಂದೂವರೆಯಿಂದ ಎರಡು ವರ್ಷಗಳಲ್ಲಿ ತಳಮಟ್ಟದಲ್ಲಿ ಗಮನಾರ್ಹ ಚಟುವಟಿಕೆಗಳು ನಡೆದಿದ್ದು, ಸೆಮಿಕಂಡಕ್ಟರ್ ಯೋಜನೆಯ ಜೊತೆಗೆ ಧೋಲೇರಾದ ಪೂರಕ ಮೂಲಸೌಕರ್ಯಗಳು ಎಷ್ಟು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.

ಈ ವಿಧಾನದ ಪ್ರಾಮುಖ್ಯತೆಯು ಕೇವಲ ಪ್ರತ್ಯೇಕ ಸೌಲಭ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆಗಳು ಆರೋಗ್ಯ ರಕ್ಷಣೆಯನ್ನು ಒದಗಿಸಿದರೆ, ಶಾಲೆಗಳು ಕುಟುಂಬಗಳಿಗೆ ಬೆಂಬಲ ನೀಡುತ್ತವೆ; ವಸತಿ ಸೌಕರ್ಯಗಳು ಹೊಸದಾಗಿ ಬರುವ ವೃತ್ತಿಪರರು ಮತ್ತು ಹೂಡಿಕೆದಾರರಿಗೆ ನೆರವಾದರೆ, ತುರ್ತು ಮತ್ತು ವಾಣಿಜ್ಯ ಮೂಲಸೌಕರ್ಯಗಳು ಕೈಗಾರಿಕಾ ಟೌನ್‌ಶಿಪ್‌ನ ಸುಗಮ ಕಾರ್ಯಾಚರಣೆಗೆ ಕೊಡುಗೆ ನೀಡುತ್ತವೆ.

ಗುಜರಾತ್‌ನಲ್ಲಿ ಆರು ಸೆಮಿಕಂಡಕ್ಟರ್ ತಯಾರಿಕಾ ಯೋಜನೆಗಳು ನೆಲೆಗೊಂಡಿರುವುದರಿಂದ, ರಾಜ್ಯವು ಭಾರತದ ಸೆಮಿಕಂಡಕ್ಟರ್ ತಯಾರಿಕಾ ಪಯಣದ ಪ್ರಮುಖ ಭಾಗವಾಗುತ್ತಿದೆ. ಧೋಲೇರಾದಲ್ಲಿ, ಆ ಪಯಣದ ಜೊತೆಗೆ ಕಾರ್ಖಾನೆಯ ಆವರಣದ ಸುತ್ತಲೂ ಸಂಪೂರ್ಣ ಪರಿಸರ ವ್ಯವಸ್ಥೆಯ ಸೃಷ್ಟಿಯಾಗುತ್ತಿದೆ.

ಆದ್ದರಿಂದ, ಈ ಹೊಸದಾಗಿ ಹೊರಹೊಮ್ಮುತ್ತಿರುವ ಮಾದರಿಯು ಕೇವಲ ಸೆಮಿಕಂಡಕ್ಟರ್ ಫ್ಯಾಬ್ ನಿರ್ಮಿಸುವುದಕ್ಕಿಂತ ಹೆಚ್ಚಿನದ್ದಾಗಿದೆ. ಇದು ಸಮಗ್ರ ಕೈಗಾರಿಕಾ ತಾಣವನ್ನು ಸೃಷ್ಟಿಸುವುದಾಗಿದೆ - ಅಲ್ಲಿ ತಯಾರಿಕೆ, ಮೂಲಸೌಕರ್ಯ ಮತ್ತು ದೈನಂದಿನ ಜೀವನವು ಒಟ್ಟಿಗೆ ವಿಕಸನಗೊಳ್ಳಬಹುದು, ಹಾಗೂ ಇದು ಭಾರತದ ಬೃಹತ್ ಸೆಮಿಕಂಡಕ್ಟರ್ ಆಕಾಂಕ್ಷೆಗಳಿಗೆ ಅಗತ್ಯವಿರುವ ಬಲವಾದ ಅಡಿಪಾಯವನ್ನು ಒದಗಿಸುತ್ತದೆ.

Reference:

  • Ministry of Electronics and Information Technology

Click here to see pdf 

 

*****

(Features ID: 160202) आगंतुक पटल : 12
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali