• Sitemap
  • Advance Search
Infrastructure

ತ್ಯಾಜ್ಯದಿಂದ ವಿದ್ಯುತ್

ಸ್ವಚ್ಛ ಭಾರತ ಅಭಿಯಾನದ 'ತ್ಯಾಜ್ಯದಿಂದ ಇಂಧನ' ಯೋಜನೆಯ ಒಳಗಿನ ಕಥೆ

Posted On: 27 SEP 2026 11:49AM

 ಭಾರತದಾದ್ಯಂತ, ಜೈವಿಕ ತ್ಯಾಜ್ಯವು ಇಂಧನ, ವಿದ್ಯುತ್ ಮತ್ತು ಮೌಲ್ಯಯುತ ಗೊಬ್ಬರವಾಗಿ ಮರುಜೀವ ಪಡೆಯುತ್ತಿದೆ. ಅಕ್ಟೋಬರ್ 2014ರಲ್ಲಿ ಪ್ರಾರಂಭಿಸಲಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ, ನಗರ ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯು ಪ್ರಮುಖ ಉದ್ದೇಶವಾಗಿ ಉಳಿದುಕೊಂಡಿದೆ. ಈ ಅಭಿಯಾನವು ವಿಕಸನಗೊಂಡಂತೆ, ಜೈವಿಕ ತ್ಯಾಜ್ಯವನ್ನು ಶುದ್ಧ ಇಂಧನವನ್ನು ಉತ್ಪಾದಿಸುವ ಮೌಲ್ಯಯುತ ಸಂಪನ್ಮೂಲವೆಂದು ಗುರುತಿಸಲಾಗಿದೆ. ಜೈವಿಕ ತ್ಯಾಜ್ಯದ ಜೈವಿಕ ವಿಘಟನೆಯ ಮೂಲಕ ಉತ್ಪತ್ತಿಯಾಗುವ ಜೈವಿಕ ಅನಿಲವು (ಬಯೋಗ್ಯಾಸ್) ಅತ್ಯಂತ ಸೂಕ್ತವಾದ, ಅಗ್ಗದ ಮತ್ತು ಪರಿಸರ ಸ್ನೇಹಿ ಅಡುಗೆ ಇಂಧನಗಳಲ್ಲಿ ಒಂದಾಗಿದೆ. ಇದರ ಉಪ-ಉತ್ಪನ್ನವಾಗಿ ದೊರೆಯುವ ಸ್ಲರಿ (ತ್ಯಾಜ್ಯದ ದ್ರವ ರೂಪ) ಸಾರಜನಕದಿಂದ ಸಮೃದ್ಧವಾಗಿದ್ದು, ಪರಿಣಾಮಕಾರಿ ಜೈವಿಕ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇದು ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಈ ಮೂಲಕ ಒಂದೇ ಉಪಕ್ರಮದಿಂದ ದ್ವಿಗುಣ ಪ್ರಯೋಜನ ಸಿಗುತ್ತಿದೆ.

ಸ್ವಚ್ಛ ಭಾರತ ಅಭಿಯಾನ-ಅರ್ಬನ್ 2.0 ಅಡಿಯಲ್ಲಿ, ಲಭ್ಯವಿರುವ ತ್ಯಾಜ್ಯ ಮತ್ತು ಸಮುದಾಯದ ಅಗತ್ಯಗಳಿಗೆ ಅನುಗುಣವಾಗಿ 'ತ್ಯಾಜ್ಯದಿಂದ ಇಂಧನ' ಯೋಜನೆಗಳು ಭಾರತದಾದ್ಯಂತ ವಿವಿಧ ರೂಪಗಳನ್ನು ಪಡೆದುಕೊಂಡಿವೆ. ಹೈದರಾಬಾದ್‌ನ ತರಕಾರಿ ಮಾರುಕಟ್ಟೆಯೊಂದು ಕೊಳೆತ ತರಕಾರಿಗಳನ್ನು ಬಳಸಿಕೊಂಡು ತನ್ನದೇ ರಸ್ತೆ ದೀಪಗಳನ್ನು ಬೆಳಗಿಸುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ, ಮಲ್ಟಿ-ಫೀಡ್‌ಸ್ಟಾಕ್ ಬಯೋ-ಸಿಎನ್‌ಜಿ ಘಟಕವು ವಿವಿಧ ರೀತಿಯ ಜೈವಿಕ ತ್ಯಾಜ್ಯಗಳನ್ನು ಶುದ್ಧ ಇಂಧನ ಮತ್ತು ಗೊಬ್ಬರಗಳಾಗಿ ಪರಿವರ್ತಿಸುತ್ತಿದೆ. ಗಾಂಧಿನಗರದ ಶಿಕ್ಷಣ ಸಂಸ್ಥೆಯೊಂದು ಎಲ್‌ಪಿಜಿ ಸಿಲಿಂಡರ್‌ಗಳನ್ನೇ ನೆಚ್ಚಿಕೊಳ್ಳದೆ ಪ್ರತಿದಿನ 500 ಕ್ಕೂ ಹೆಚ್ಚು ಜನರಿಗೆ ಅಡುಗೆ ತಯಾರಿಸುತ್ತಿದೆ. ಗ್ವಾಲಿಯರ್‌ನ ಗೋಶಾಲೆಯೊಂದು ಸಗಣಿಯನ್ನು ಸಂಕುಚಿತ ಜೈವಿಕ ಅನಿಲವಾಗಿ ಪರಿವರ್ತಿಸುತ್ತಿದೆ. ವಿಭಿನ್ನ ಮೂಲ ಸಾಮಗ್ರಿಗಳು, ವಿಭಿನ್ನ ಪ್ರಮಾಣದ ಯೋಜನೆಗಳು; ಆದರೆ ಎಲ್ಲದರ ಉದ್ದೇಶವೂ ಒಂದೇ. ನಗರಗಳು ಮತ್ತು ಸಂಸ್ಥೆಗಳು ಸುಸ್ಥಿರತೆಯ ಹಾದಿಯಲ್ಲಿ ಹೇಗೆ ಮುಂಚೂಣಿಯಲ್ಲಿ ಹೊರಹೊಮ್ಮುತ್ತಿವೆ ಎಂಬುದನ್ನು ಈ ಉಪಕ್ರಮಗಳು ಪ್ರದರ್ಶಿಸುತ್ತವೆ. ತ್ಯಾಜ್ಯ ನಿರ್ವಹಣೆಯಲ್ಲಿ ನವೀನ, ವೃತ್ತಾಕಾರದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅವು ಪರಿಸರದ ಮೇಲಿನ ಪ್ರಭಾವವನ್ನು ಕಡಿಮೆ ಮಾಡುತ್ತಿವೆ ಮತ್ತು ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸಿಕೊಂಡು ಅದರ ಮೌಲ್ಯವನ್ನು ಹೆಚ್ಚಿಸುತ್ತಿವೆ.

ಗಾಂಧಿನಗರ: ಎಲ್‌ಪಿಜಿ ಅವಲಂಬನೆಯನ್ನು ಸಂಪೂರ್ಣವಾಗಿ ತೊರೆದ ಶೈಕ್ಷಣಿಕ ಕ್ಯಾಂಪಸ್

ಗುಜರಾತ್‌ನ ಗಾಂಧಿನಗರದ ಅಡಾಲಜ್ ಬಳಿಯ ಶ್ರೀಮತಿ ಮಾಣಿಕಬಾ ವಿನಯ್ ವಿಹಾರ್ ಶೈಕ್ಷಣಿಕ ಸಂಕೀರ್ಣದ ಅಡುಗೆಮನೆಯಲ್ಲಿ ಪ್ರತಿದಿನ 500 ಕ್ಕೂ ಹೆಚ್ಚು ಜನರಿಗೆ ಅಡುಗೆ ತಯಾರಿಸಲಾಗುತ್ತದೆ. ವಸತಿ ನಿಲಯದ ಸುಮಾರು 250 ವಿದ್ಯಾರ್ಥಿಗಳಿಗೆ ದಿನಕ್ಕೆ ಎರಡು ಹೊತ್ತಿನ ಊಟದ ಜೊತೆಗೆ ಕ್ಯಾಂಪಸ್‌ನಲ್ಲಿ ವಾಸಿಸುವ 15 ಸಿಬ್ಬಂದಿ ಕುಟುಂಬಗಳಿಗೆ ಇಲ್ಲಿ ಆಹಾರ ಸಿದ್ಧವಾಗುತ್ತದೆ. ಆದರೆ, ಈ ಅಡುಗೆಮನೆಯು ಎಲ್‌ಪಿಜಿ ಮೇಲಿನ ತನ್ನ ಅವಲಂಬನೆಯನ್ನು ಸಂಪೂರ್ಣವಾಗಿ ತೊರೆದು, ಜೈವಿಕ ಅನಿಲ ಆಧಾರಿತ ಅಡುಗೆ ವ್ಯವಸ್ಥೆಗೆ ಬದಲಾಗಿದೆ.

ಈ ಕ್ಯಾಂಪಸ್ ಅನ್ನು ನಿರ್ವಹಿಸುವ ವಸುಮತಿ ಚಾರಿಟೇಬಲ್ ಟ್ರಸ್ಟ್, ದಿನಕ್ಕೆ ಒಟ್ಟು 90 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಎರಡು ಜೈವಿಕ ಅನಿಲ ಘಟಕಗಳನ್ನು ನಿರ್ವಹಿಸುತ್ತಿದೆ. ಟ್ರಸ್ಟ್‌ನ ಗೋಶಾಲೆಯಲ್ಲಿರುವ 222 ಹಸುಗಳ ಸಗಣಿಯನ್ನು ಈ ಘಟಕಕ್ಕೆ ಮೂಲ ವಸ್ತುವಾಗಿ ಬಳಸಲಾಗುತ್ತದೆ. ಇದಕ್ಕೆ ಪೂರಕವಾಗಿ ಅಡುಗೆಮನೆಯ ತ್ಯಾಜ್ಯ ಮತ್ತು ಹತ್ತಿರದ ಹೊಲಗಳಿಂದ ಬರುವ ಕೃಷಿ ತ್ಯಾಜ್ಯವನ್ನು ಬಳಸಲಾಗುತ್ತದೆ. ಈ ಅನಿಲವು ಕ್ಯಾಂಪಸ್‌ನ ಸಂಪೂರ್ಣ ಅಡುಗೆ ಇಂಧನದ ಅಗತ್ಯವನ್ನು ಪೂರೈಸುತ್ತದೆ; ಇಲ್ಲದಿದ್ದರೆ ಪ್ರತಿ ತಿಂಗಳು 30 ಎಲ್‌ಪಿಜಿ ಸಿಲಿಂಡರ್‌ಗಳ ಅಗತ್ಯವಿರುತ್ತಿತ್ತು.

ಈ ಸಂಸ್ಥೆಯು ನವೀನ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯು ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರತೆಯನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಗುಜರಾತ್ ಸರ್ಕಾರದ 'ಇನ್‌ಸ್ಟಿಟ್ಯೂಷನಲ್ ಬಯೋಗ್ಯಾಸ್ ಪ್ಲಾಂಟ್ ಸ್ಕೀಮ್' ಮತ್ತು 'ಗುಜರಾತ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ'ಯಂತಹ ಸಂಸ್ಥೆಗಳು ಈ ಬದಲಾವಣೆಯನ್ನು ಮಾಡಲು ಅಗತ್ಯವಾದ ನೀತಿ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಿವೆ.

ಚಿತ್ರ 1: ಶ್ರೀಮತಿ ಮಾಣಿಕಬಾ ವಿನಯ್ ವಿಹಾರ್ ಶೈಕ್ಷಣಿಕ ಸಂಕೀರ್ಣದಲ್ಲಿರುವ ಜೈವಿಕ ಅನಿಲ ಘಟಕಗಳು, ಅಡಾಲಜ್, ಗುಜರಾತ್

ಗುಜರಾತ್ ಪರ್ಯಾಯ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದನ್ನು ಮುಂದುವರಿಸಿದ್ದು, ಮಾಲಿನ್ಯವನ್ನು ತಗ್ಗಿಸುತ್ತಿದೆ ಹಾಗೂ ಇಂಧನ ಸ್ವಾವಲಂಬನೆಯನ್ನು ಸಾಧಿಸುತ್ತಿದೆ. ಇದು ಗೋಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಬರುವ ಜೈವಿಕ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೂ ಹಾದಿಮಾಡಿಕೊಟ್ಟಿದೆ.

ಪ್ರಯಾಗ್‌ರಾಜ್: ಒಂದೇ ಘಟಕ, ನಾಲ್ಕು ವಿಧದ ಮೂಲ ವಸ್ತುಗಳು

ಪ್ರಯಾಗ್‌ರಾಜ್‌ನ ಬಯೋ-ಸಿಎನ್‌ಜಿ ಸೌಲಭ್ಯವು ವಿವಿಧ ರೀತಿಯ ಜೈವಿಕ ತ್ಯಾಜ್ಯಗಳನ್ನು ಸಂಸ್ಕರಿಸಲು ವಿನ್ಯಾಸಗೊಳಿಸಲಾದ 'ತ್ಯಾಜ್ಯದಿಂದ ಇಂಧನ' ಘಟಕವಾಗಿದೆ.

ಚಿತ್ರ 2: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಬಯೋ-ಸಿಎನ್‌ಜಿ ಘಟಕ

ಈ ಘಟಕದ ಪ್ರಾರಂಭದೊಂದಿಗೆ, ಉತ್ತರ ಪ್ರದೇಶವು ಹಸಿರು ಇಂಧನ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ನೆಟ್ಟಿದೆ. ಈ ಯೋಜನೆಯು ಪರಿಸರ ಸಂರಕ್ಷಣೆಯತ್ತ ದಿಟ್ಟ ಹೆಜ್ಜೆಯಾಗಿದ್ದು, ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲವಾಗಿ ಪರಿವರ್ತಿಸುವ ಅಭಿಯಾನವನ್ನು ಮುನ್ನಡೆಸುತ್ತದೆ.

ಈ ಘಟಕವು ದಿನಕ್ಕೆ 343 ಟನ್ ಜೈವಿಕ ತ್ಯಾಜ್ಯವನ್ನು ಸಂಸ್ಕರಿಸುವ ಮತ್ತು ಸುಮಾರು 21 ಟನ್ ಬಯೋ-ಸಿಎನ್‌ಜಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ 'ಮಲ್ಟಿ-ಫೀಡ್‌ಸ್ಟಾಕ್' (ವಿವಿಧ ಮೂಲ ವಸ್ತುಗಳ) ಮಾದರಿಯು ಹಸಿ ತ್ಯಾಜ್ಯ, ಭತ್ತದ ಹುಲ್ಲು, ದನದ ಸಗಣಿ ಮತ್ತು ಕೋಳಿ ತ್ಯಾಜ್ಯವನ್ನು ಬಳಸಿಕೊಳ್ಳುತ್ತದೆ. ಇದು ಕೃಷಿ ತ್ಯಾಜ್ಯಕ್ಕೆ ಉತ್ಪಾದಕ ಬಳಕೆಯನ್ನು ಸೃಷ್ಟಿಸುವುದಲ್ಲದೆ, ಕೊಯಿಲು ನಂತರದ ಹುಲ್ಲು ಸುಡುವ (ಸ್ಟಬಲ್ ಬರ್ನಿಂಗ್) ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಸೌಲಭ್ಯವು ಹೋಟೆಲ್‌ಗಳು, ಉಪಹಾರ ಗೃಹಗಳು ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯಗಳಿಂದ ಬೃಹತ್ ಪ್ರಮಾಣದ ಹಸಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ನಗರದಲ್ಲಿ ದಿನನಿತ್ಯದ ಹಸಿ ತ್ಯಾಜ್ಯ ಪೂರೈಕೆಯು ಪ್ರಾರಂಭದಲ್ಲಿ ಕೇವಲ 7–8 ಟನ್‌ಗಳಿಂದ ಈಗ ಸುಮಾರು 125 ಟನ್‌ಗಳಿಗೆ ಹೆಚ್ಚಾಗಿದ್ದು, ನಗರದಲ್ಲಿ ತ್ಯಾಜ್ಯ ಬಳಕೆಯನ್ನು ಬಲಪಡಿಸಿದೆ. ಇಲ್ಲಿ ಉತ್ಪಾದನೆಯಾಗುವ ಬಯೋ-ಸಿಎನ್‌ಜಿಯನ್ನು 'ಸಂಕುಚಿತ ಜೈವಿಕ ಅನಿಲ - ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಸಿಂಕ್ರೊನೈಸೇಶನ್' ಯೋಜನೆಯಡಿ ಮಾರಾಟ ಮಾಡಲಾಗುತ್ತದೆ, ಇಂಧನ ಕ್ಯಾಸ್ಕೇಡ್ ಮಾರ್ಗದ ಮೂಲಕ ಗ್ರಾಹಕರನ್ನು ತಲುಪುತ್ತದೆ ಮತ್ತು ಪ್ರಸ್ತುತ ನಗರ ಸಾರಿಗೆಗೆ ಬೆಂಬಲ ನೀಡುತ್ತಿದೆ.

ಈ ಪ್ರಕ್ರಿಯೆಯು ದಿನಕ್ಕೆ 28 ಟನ್ ಉನ್ನತ ಗುಣಮಟ್ಟದ ಕಾಂಪೋಸ್ಟ್ (ಸಾವಯವ ಗೊಬ್ಬರ) ಅನ್ನು ಸಹ ಉತ್ಪಾದಿಸುತ್ತದೆ, ಇದನ್ನು ಸ್ಥಳೀಯ ರೈತರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಮರುಜೀವ ನೀಡುವ ಕೃಷಿಗೆ ಬೆಂಬಲ ನೀಡುತ್ತದೆ. ಮುಂದಿನ ದಿನಗಳಲ್ಲಿ, ಈ ಯೋಜನೆಯು ಪೈಪ್‌ಲೈನ್ ಅನಿಲದ ಮೂಲಕ ಸುಮಾರು 45,000 ಮನೆಗಳಿಗೆ ಶುದ್ಧ ಇಂಧನದ ಸೌಲಭ್ಯವನ್ನು ವಿಸ್ತರಿಸುವ ಮತ್ತು ವಾರ್ಷಿಕವಾಗಿ ಸುಮಾರು 57,000 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಗ್ವಾಲಿಯರ್: ವಿದ್ಯುತ್ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟ ಗೋಶಾಲೆ

ಗ್ವಾಲಿಯರ್‌ನ ಅತಿ ದೊಡ್ಡ ಗೋಶಾಲೆಯಾದ ಲಾಲ್ತಿಪಾರಾದ 'ಆದರ್ಶ ಗೋಶಾಲೆ'ಯಲ್ಲಿ 10,000 ಕ್ಕೂ ಹೆಚ್ಚು ಜಾನುವಾರುಗಳಿವೆ. ಅಕ್ಟೋಬರ್ 2024 ರಲ್ಲಿ, ದಿನಕ್ಕೆ 100 ಟನ್ ಸಾಮರ್ಥ್ಯದ ಸಂಕುಚಿತ ಜೈವಿಕ ಅನಿಲ ಘಟಕವನ್ನು ಉದ್ಘಾಟಿಸುವುದರೊಂದಿಗೆ ಈ ಗೋಶಾಲೆಯು ಪ್ರತಿದಿನದ ಸಗಣಿಗೆ ಹೊಸ ರೂಪವನ್ನು ನೀಡಿತು. ಈ ಸೌಲಭ್ಯವು ಆದರ್ಶ ಗೋಶಾಲೆಯನ್ನು ಅತ್ಯಾಧುನಿಕ CBG ಘಟಕದ ಸುತ್ತ ನಿರ್ಮಿಸಲಾದ ಭಾರತದ ಮೊದಲ ಆಧುನಿಕ, ಸ್ವಾವಲಂಬಿ ಗೋಶಾಲೆಯನ್ನಾಗಿ ಮಾಡಿದೆ.

ಚಿತ್ರ 3: ದನದ ಸಗಣಿ ಆಧಾರಿತ ಸಂಕುಚಿತ ಜೈವಿಕ ಅನಿಲ ಘಟಕ, ಲಾಲ್ತಿಪಾರಾ, ಗ್ವಾಲಿಯರ್, ಮಧ್ಯಪ್ರದೇಶ

ಈ ಘಟಕದ ವಿನ್ಯಾಸವು ಕೇವಲ ದನದ ಸಗಣಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಾರುಕಟ್ಟೆಗಳು ಮತ್ತು ಮನೆಗಳಿಂದ ಸಂಗ್ರಹಿಸುವ ತರಕಾರಿ ಮತ್ತು ಹಣ್ಣಿನ ತ್ಯಾಜ್ಯವನ್ನು ಸಹ ಸಂಸ್ಕರಿಸಲು ನಿರ್ಮಿಸಲಾದ ಮಧ್ಯಪ್ರದೇಶದ ಮೊದಲ CBG ಘಟಕವಾಗಿದೆ. 5 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ₹31 ಕೋಟಿ ವೆಚ್ಚದ ಯೋಜನೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಪ್ರತಿದಿನ, ಇದು 100 ಟನ್ ದನದ ಸಗಣಿಯನ್ನು ಎರಡು ಟನ್ ಸಂಕುಚಿತ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಇದು ಪ್ರತಿದಿನ 10–15 ಟನ್ ಒಣ ಜೈವಿಕ ಗೊಬ್ಬರವನ್ನು ಸಹ ಉತ್ಪಾದಿಸುತ್ತದೆ, ಇದು ಹತ್ತಿರದ ಜಿಲ್ಲೆಗಳ ರೈತರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಿ, ಸಾವಯವ ಕೃಷಿಯನ್ನು ಉತ್ತೇಜಿಸುತ್ತದೆ.

ಇದರ ಪ್ರಯೋಜನಗಳು ಗೋಶಾಲೆಗೆ ಮಾತ್ರ ಸೀಮಿತವಾಗಿಲ್ಲ. CBG ಯು ಪಳೆಯುಳಿಕೆ ಇಂಧನಗಳಿಗೆ ಶುದ್ಧ ಹಾಗೂ ಪರಿಸರ ಸ್ನೇಹಿ ಪರ್ಯಾಯವನ್ನು ಒದಗಿಸುತ್ತದೆ, ಹಾಗೂ ಸಗಣಿಯನ್ನು ಇಂಧನವಾಗಿ ಪರಿವರ್ತಿಸುವುದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ವೈಪರೀತ್ಯ ತಗ್ಗಿಸಲು ಕೊಡುಗೆ ನೀಡುತ್ತದೆ. ಈ ಯೋಜನೆಯು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದು, ಹಸಿರು ಇಂಧನ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಕೌಶಲ್ಯಗಳನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಿದೆ.

ಈ CBG ಘಟಕವು ಕೇವಲ ಒಂದು ಕೈಗಾರಿಕಾ ಸೌಲಭ್ಯವಲ್ಲ. ಇದು ಸಮಾಜ ಮತ್ತು ಸರ್ಕಾರದ ನಡುವಿನ ಸಹಭಾಗಿತ್ವವನ್ನು ಪ್ರತಿನಿಧಿಸುತ್ತದೆ ಮತ್ತು ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲಗಳಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.

ಬೋವೆನ್‌ಪಲ್ಲಿ: ತರಕಾರಿ ಮಾರುಕಟ್ಟೆಯೊಂದು ಹೇಗೆ ಶಕ್ತಿ ನೀಡಬಲ್ಲದು

ಈ ನಾಲ್ಕು ಕಥೆಗಳಲ್ಲಿ, ಬೋವೆನ್‌ಪಲ್ಲಿಯ ತರಕಾರಿ ಮಾರುಕಟ್ಟೆಯ ಕಥೆಯು ಅತ್ಯಂತ ನವೀನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಹೈದರಾಬಾದ್‌ನ ಬೋವೆನ್‌ಪಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿದಿನ ಸುಮಾರು 10 ಟನ್ ತರಕಾರಿ ಮತ್ತು ಹಣ್ಣಿನ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ತ್ಯಾಜ್ಯವು ಈ ಹಿಂದೆ ಲ್ಯಾಂಡ್‌ಫಿಲ್‌ಗಳಿಗೆ (ತ್ಯಾಜ್ಯ ಸುರಿಯುವ ಸ್ಥಳ) ಹೋಗುತ್ತಿತ್ತು. ಅಲ್ಲಿಯೇ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿದಂದಿನಿಂದ, ಮಾರುಕಟ್ಟೆಯಿಂದ ಸಂಗ್ರಹವಾಗುವ ಬಹುತೇಕ ಎಲ್ಲಾ ತ್ಯಾಜ್ಯವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ದಿನಕ್ಕೆ ಸುಮಾರು 400–500 ಯೂನಿಟ್ ವಿದ್ಯುತ್ ಮತ್ತು 30 ಕೆಜಿ ಜೈವಿಕ ಇಂಧನವನ್ನು ಉತ್ಪಾದಿಸುತ್ತದೆ. ಉತ್ಪಾದಿಸಿದ ವಿದ್ಯುತ್ ಅನ್ನು ಮಾರುಕಟ್ಟೆಯ ರಸ್ತೆ ದೀಪಗಳು, ಮಳಿಗೆಗಳು, ಆಡಳಿತ ಭವನ ಮತ್ತು ಕುಡಿಯುವ ನೀರು ಪೂರೈಕೆ ಜಾಲವನ್ನು ನಡೆಸಲು ಬಳಸಲಾಗುತ್ತದೆ. ಜೈವಿಕ ಇಂಧನವನ್ನು ಮಾರುಕಟ್ಟೆಯ ವಾಣಿಜ್ಯ ಅಡುಗೆಮನೆಗೆ ಪೂರೈಸಲಾಗುತ್ತಿದ್ದು, ಮಾರುಕಟ್ಟೆಯು ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿರಲು ನೆರವಾಗುತ್ತಿದೆ.

ಚಿತ್ರ 4: ಬೋವೆನ್‌ಪಲ್ಲಿ ತರಕಾರಿ ಮಾರುಕಟ್ಟೆ ಮತ್ತು ಬೋವೆನ್‌ಪಲ್ಲಿಯ ಜೈವಿಕ ಅನಿಲ (ಬಯೋಗ್ಯಾಸ್) ಘಟಕ, ಹೈದರಾಬಾದ್

ಜೈವಿಕ ಅನಿಲ ಘಟಕದ ಒಳಗೆ, ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ, ಪುಡಿಮಾಡಿ, ದ್ರವ ರೂಪದ ಸ್ಲರಿಯನ್ನಾಗಿ ಪರಿವರ್ತಿಸಲಾಗುತ್ತದೆ. ಈ ಸ್ಲರಿಯನ್ನು ಆಮ್ಲಜನಕರಹಿತ ವಿಘಟನಾ ತೊಟ್ಟಿಗಳಿಗೆ ಹರಿಸಲಾಗುತ್ತದೆ, ಮತ್ತು ಅಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಮುಂದಿನ ಬಳಕೆಯವರೆಗೆ ಬಲೂನ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಉಳಿದುಕೊಳ್ಳುವ ಸ್ಲರಿಯು ದ್ರವ ಜೈವಿಕ ಗೊಬ್ಬರವನ್ನು ಉತ್ಪಾದಿಸುತ್ತದೆ, ಇದನ್ನು ರೈತರು ಗೊಬ್ಬರವಾಗಿ ಬಳಸುತ್ತಾರೆ. ಜೈವಿಕ ಅನಿಲವನ್ನು ಪ್ರತ್ಯೇಕ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಪೈಪ್‌ಲೈನ್ ವ್ಯವಸ್ಥೆಯ ಮೂಲಕ ಅಡುಗೆಗೆ ಕಳುಹಿಸಲಾಗುತ್ತದೆ. ಈ ಜೈವಿಕ ಇಂಧನವನ್ನು 100% ಜೈವಿಕ ಅನಿಲ ಚಾಲಿತ ಜನರೇಟರ್‌ಗೆ ಪೂರೈಸಲಾಗುತ್ತದೆ, ಇದು ಶೀತಲ ಶೇಖರಣಾ ಕೊಠಡಿಗಳು, ನೀರೆತ್ತುವ ಪಂಪ್‌ಗಳು, ಅಂಗಡಿಗಳು ಮತ್ತು ರಸ್ತೆ ದೀಪಗಳಿಗೆ ವಿದ್ಯುತ್ ಒದಗಿಸುತ್ತದೆ.

ಈ ಘಟಕವು ಮಾರುಕಟ್ಟೆಯ ಮಾಸಿಕ ವಿದ್ಯುತ್ ಬಿಲ್ ಅನ್ನು ಮೊದಲು ಇದ್ದ ಸರಾಸರಿ ₹3 ಲಕ್ಷದಿಂದ ಸುಮಾರು ಅರ್ಧದಷ್ಟು ಕಡಿಮೆ ಮಾಡಿದೆ. ಈ ಯೋಜನೆಯ ಯಶಸ್ಸು ಮತ್ತು ಪ್ರಭಾವವನ್ನು ಕಂಡು, ಇತರ ಮಾರುಕಟ್ಟೆ ಪ್ರಾಂಗಣಗಳಲ್ಲಿಯೂ ಇಂತಹ ಐದು ಹೆಚ್ಚುವರಿ ಘಟಕಗಳಿಗೆ ಅನುದಾನ ನೀಡಲಾಗಿದೆ. ಇವುಗಳಲ್ಲಿ ಗುಡಿಮಲ್ಕಾಪುರ, ಗಡ್ಡಿಯನ್ನಾರಂ, ಎರ್ರಗಡ್ಡ, ಅಲ್ವಾಲ್ ಮತ್ತು ಸರೂರ್‌ನಗರ ಸೇರಿವೆ, ಹಾಗೂ ಈ ಪ್ರತಿಯೊಂದು ಮಾರುಕಟ್ಟೆಯ ಪ್ರಾಂಗಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೆ ತಕ್ಕಂತೆ ಘಟಕಗಳ ಸಾಮರ್ಥ್ಯವನ್ನು ನಿಗದಿಪಡಿಸಲಾಗಿದೆ.

ಚಿತ್ರ 5: ಬೋವೆನ್‌ಪಲ್ಲಿಯ ಜೈವಿಕ ಅನಿಲ (ಬಯೋಗ್ಯಾಸ್) ಘಟಕ

ಈ ಘಟಕವು ಮಾರುಕಟ್ಟೆಯಲ್ಲಿನ ಮಹಿಳೆಯರಿಗೆ ಸ್ಥಿರವಾದ ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ. ಅವರು ತ್ಯಾಜ್ಯವನ್ನು ವಿಂಗಡಿಸುತ್ತಾರೆ, ಯಂತ್ರೋಪಕರಣಗಳನ್ನು ನಿರ್ವಹಿಸುತ್ತಾರೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ. ಈ ಘಟಕವು ಮಹಿಳಾ ಕಾರ್ಮಿಕರಿಗೆ ಸ್ಥಿರವಾದ ಆದಾಯ ಮತ್ತು ಕೌಶಲ್ಯಾಭಿವೃದ್ಧಿಯ ಅವಕಾಶಗಳನ್ನು ಒದಗಿಸುತ್ತದೆ.

ಚಿತ್ರ 6: ರುಕ್ಮಿಣಿ ದೇವಮ್ಮ, ಬೋವೆನ್‌ಪಲ್ಲಿ ತರಕಾರಿ ಮಾರುಕಟ್ಟೆಯ ಮಹಿಳಾ ಉದ್ಯೋಗಿ

ಜೈವಿಕ ಅನಿಲ (ಬಯೋಗ್ಯಾಸ್) ಘಟಕದ ಬಗ್ಗೆ ರುಕ್ಮಿಣಿ ದೇವಮ್ಮ ಅವರ ಮಾತುಗಳು: “ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿದಂದಿನಿಂದ, ನಮ್ಮ ಕೆಲಸಕ್ಕೆ ಉತ್ತಮ ವೇತನ ದೊರೆಯುತ್ತಿದೆ. ನಮಗೆ ಮಾಸ್ಕ್‌ಗಳು, ಗಮ್‌ಬೂಟ್‌ಗಳು ಮತ್ತು ಕೈಗವಸುಗಳಂತಹ ಅಗತ್ಯವಿರುವ ಎಲ್ಲಾ ಸುರಕ್ಷತಾ ಉಪಕರಣಗಳನ್ನು ಸಹ ಒದಗಿಸಲಾಗಿದೆ. ಸುರಕ್ಷಿತ ಕೆಲಸದ ವಾತಾವರಣವಿರುವುದರಿಂದ, ನಾವು ಇತರರನ್ನೂ ನಮ್ಮೊಂದಿಗೆ ಸೇರಿಕೊಂಡು ಕೆಲಸ ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ.”

ಈ ಎಲ್ಲಾ ಕಥೆಗಳನ್ನು ಒಂದಕ್ಕೊಂದು ಜೋಡಿಸುವ ಅಂಶ

ಈ ನಾಲ್ಕೂ ಕಥೆಗಳಲ್ಲಿ, ಬಳಸಿದ ಮೂಲ ವಸ್ತುಗಳು ಬದಲಾಗಬಹುದು, ಆದರೆ ಮೂಲ ತತ್ವ ಒಂದೇ ಆಗಿದೆ: 'ತ್ಯಾಜ್ಯವು ಇನ್ನು ಮುಂದೆ ಬಳಕೆಯ ಅಂತಿಮ ಹಂತವಲ್ಲ.' ತ್ಯಾಜ್ಯ ನಿರ್ವಹಣೆಯನ್ನು ಸಂಪನ್ಮೂಲಗಳ ಮರುಬಳಕೆಯ ಸುತ್ತ ವಿನ್ಯಾಸಗೊಳಿಸಿದಾಗ ಏನಾಗುತ್ತದೆ ಎಂಬುದನ್ನು ಇವು ತೋರಿಸಿಕೊಡುತ್ತವೆ. ಸ್ವಚ್ಛ ಭಾರತ ಅಭಿಯಾನದಡಿ, ಈ ವಿಧಾನವು ನಗರ ತ್ಯಾಜ್ಯ ಮೂಲಸೌಕರ್ಯದ ಪಾತ್ರವನ್ನು ಕೇವಲ ಸಂಗ್ರಹಣೆ ಮತ್ತು ವಿಲೇವಾರಿಗೆ ಸೀಮಿತಗೊಳಿಸದೆ, ಸಂಸ್ಕರಣೆ, ಇಂಧನ ಉತ್ಪಾದನೆ ಮತ್ತು ಉಪ-ಉತ್ಪನ್ನಗಳ ಉತ್ಪಾದಕ ಬಳಕೆಯತ್ತ ವಿಸ್ತರಿಸುತ್ತಿದೆ. ಸಗಣಿ, ಅಡುಗೆಮನೆ ತ್ಯಾಜ್ಯ, ಬೆಳೆ ತ್ಯಾಜ್ಯ ಮತ್ತು ಎಸೆದ ತರಕಾರಿಗಳನ್ನು ಇಂಧನ, ವಿದ್ಯುತ್ ಮತ್ತು ಗೊಬ್ಬರಗಳಾಗಿ ಪರಿವರ್ತಿಸಲಾಗುತ್ತಿದೆ.

ಭಾರತದ ನಗರಗಳು, ಶೈಕ್ಷಣಿಕ ಕ್ಯಾಂಪಸ್‌ಗಳು, ಗೋಶಾಲೆಗಳು ಮತ್ತು ಮಾರುಕಟ್ಟೆಗಳಲ್ಲಿ ಈ ವಿಧಾನವು ವ್ಯಾಪಕವಾಗಿ ಹರಡುತ್ತಿದ್ದು, ಪ್ರತ್ಯೇಕ ಯೋಜನೆಗಳನ್ನು ಮೀರಿ ಬೆಳೆಯುತ್ತಿದೆ. ಶುದ್ಧ ಇಂಧನ ಉತ್ಪಾದನೆಯಿಂದ ಹಿಡಿದು ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವವರೆಗೆ, ಈ ಪ್ರಯತ್ನಗಳು ನಗರ ಭಾರತಕ್ಕೆ ವಿಸ್ತರಿಸಬಹುದಾದ ಒಂದು ಹಾದಿಯನ್ನು ಉಲ್ಲೇಖಿಸುತ್ತವೆ. ಇಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸಮುದಾಯದ ಭಾಗವಹಿಸುವಿಕೆ ಮತ್ತು ದೂರದೃಷ್ಟಿಯ ನೀತಿಗಳು ಒಂದಾಗಿ ಸ್ವಚ್ಛ, ಹಸಿರು ಮತ್ತು ಹೆಚ್ಚು ಸ್ವಾವಲಂಬಿ ನಗರಗಳಿಗೆ ದಾರಿ ಮಾಡಿಕೊಡುತ್ತಿವೆ. 

Reference

Ministry of Housing and Urban Affairs

Click to see pdf

 

*****

 

(Features ID: 160200) आगंतुक पटल : 15
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Malayalam