Infrastructure
ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ 2026
ತಳಮಟ್ಟದಿಂದ ಜಲ ಭದ್ರತೆ
Posted On:
25 SEP 2026 1:39PM
ನೀರು ಒಂದೇ ಹಾದಿಯನ್ನು ಅನುಸರಿಸುವುದಿಲ್ಲ. ಮಳೆಯ ಒಂದು ಹನಿ ಮಣ್ಣಿನಲ್ಲಿ ಇಂಗಬಹುದು, ಕೆರೆಯನ್ನು ತುಂಬಿಸಬಹುದು, ಬಾವಿಯನ್ನು ಮರುಪೂರಣಗೊಳಿಸಬಹುದು ಅಥವಾ ನದಿಗೆ ಹರಿಯಬಹುದು. ನಾವು ಆ ನೀರನ್ನು ಹೇಗೆ ಸಂಗ್ರಹಿಸುತ್ತೇವೆ, ಸಂರಕ್ಷಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ ಎಂಬುದು ನಮ್ಮ ಜೀವನ ಮತ್ತು ಜೀವನೋಪಾಯಗಳನ್ನು ರೂಪಿಸುತ್ತದೆ. ಭಾರತದಾದ್ಯಂತ, ಸಮುದಾಯಗಳು ಸಾಂಪ್ರದಾಯಿಕವಾಗಿ ಮಳೆನೀರನ್ನು ಸಂಗ್ರಹಿಸಲು, ಅಂತರ್ಜಲವನ್ನು ಮರುಪೂರಣಗೊಳಿಸಲು ಮತ್ತು ನದಿಗಳು ಹಾಗೂ ಸಾಂಪ್ರದಾಯಿಕ ಜಲಾಶಯಗಳನ್ನು ಪುನರುಜ್ಜೀವನಗೊಳಿಸಲು ವಿವಿಧ ರಚನೆಗಳನ್ನು ನಿರ್ಮಿಸಿವೆ. ಇಂದು, ನಮ್ಮ ಸುತ್ತಲೂ ನೀರಿನ ಬೇಡಿಕೆ ಹೆಚ್ಚಾಗುತ್ತಿರುವಂತೆ, ವೈಜ್ಞಾನಿಕ ಯೋಜನೆ, ಬಲವಾದ ಸಂಸ್ಥೆಗಳು ಮತ್ತು ನಿರಂತರ ಕ್ರಿಯೆಗಳೊಂದಿಗೆ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಮುದಾಯದ ಭಾಗವಹಿಸುವಿಕೆಯನ್ನು ಪುನರುಜ್ಜೀವನಗೊಳಿಸುವುದು ಇನ್ನಷ್ಟು ಪ್ರಮುಖವಾಗಿದೆ.

ವಿವಿಧ ಜಲ ಸವಾಲುಗಳನ್ನು ಎದುರಿಸಲು ಈ ವಿಭಿನ್ನ ಪ್ರಯತ್ನಗಳನ್ನು ಒಂದೆಡೆ ತರುವುದು ಸರ್ಕಾರದ ಧೋರಣೆಯಾಗಿದೆ. ಈ ಆದ್ಯತೆಗಳು 2012 ರಲ್ಲಿ ಪರಿಕಲ್ಪನೆಗೊಂಡ 'ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ' ದಲ್ಲಿಯೂ ವ್ಯಕ್ತವಾಗುತ್ತವೆ. ಇಂದು, IIWW ದ್ವೈವಾರ್ಷಿಕ (ಎರಡು ವರ್ಷಕ್ಕೊಮ್ಮೆ ನಡೆಯುವ) ವೇದಿಕೆಯಾಗಿ ಬೆಳೆದಿದ್ದು, ಇಲ್ಲಿ ನೀತಿ ನಿರೂಪಕರು, ಸಂಶೋಧಕರು, ಉದ್ಯಮದ ಮುಖಂಡರು ಮತ್ತು ಸಮುದಾಯಗಳು ಒಂದೆಡೆ ಸೇರಿ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಹಾಗೂ ಸುಸ್ಥಿರ ಮತ್ತು ವಾಯುಗುಣ ಸ್ಥಿತಿಸ್ಥಾಪಕತ್ವ ಹೊಂದಿರುವ ಜಲ ನಿರ್ವಹಣೆಗಾಗಿ ಪರಿಹಾರಗಳನ್ನು ಹುಡುಕುತ್ತಾರೆ.
|
ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ-2026
ಭಾರತ ಅಂತರರಾಷ್ಟ್ರೀಯ ಜಲ ಸಪ್ತಾಹದ 9ನೇ ಆವೃತ್ತಿಯು "ವಾಯುಗುಣ ಸ್ಥಿತಿಸ್ಥಾಪಕ ಜಲ ನಿರ್ವಹಣೆ" ಎಂಬ ಮುಖ್ಯ ವಿಷಯದೊಂದಿಗೆ 2026 ರ ಸೆಪ್ಟೆಂಬರ್ 22 ರಿಂದ 26 ರವರೆಗೆ ನವದೆಹಲಿಯಲ್ಲಿ ನಡೆಯುತ್ತಿದೆ. ಕೇಂದ್ರ ಜಲ ಶಕ್ತಿ ಸಚಿವಾಲಯವು 'ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ'ವನ್ನು ಆಯೋಜಿಸುತ್ತದೆ.
ಈ ವರ್ಷದ ಚರ್ಚೆಗಳು ಏಳು ಉಪ-ವಿಷಯಗಳ ಮೇಲೆ ಗಮನ ಹರಿಸುತ್ತವೆ:
- ಸಮಗ್ರ ಮತ್ತು ಸಮಾನ ಜಲ ಆಡಳಿತ
- ಜಲ ಸಂಪನ್ಮೂಲಗಳ ಸೂಕ್ತ ಬಳಕೆಗಾಗಿ ಸಹಯೋಗ
- ಜಲ ಭದ್ರತೆಗಾಗಿ ತಂತ್ರಜ್ಞಾನ ಮತ್ತು ಸಮುದಾಯ
- ವಾಯುಗುಣ-ಸಂಬಂಧಿತ ಅಪಾಯಗಳಲ್ಲಿ ನೀರು
- ಜಲ ಮೂಲಸೌಕರ್ಯ ಮತ್ತು ಆಧುನಿಕೀಕರಣಕ್ಕಾಗಿ ನವೀನ ಹಣಕಾಸು ಮಾದರಿಗಳು
- ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ
- ಜನರು ಮತ್ತು ಗ್ರಹಕ್ಕಾಗಿ ನೀರು

ಈ ಕಾರ್ಯಕ್ರಮವು ಆರು ಕೇಂದ್ರ ಸಚಿವಾಲಯಗಳು ಮತ್ತು 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳನ್ನು ಒಂದೆಡೆ ತರುತ್ತದೆ. ಸುಮಾರು 150 ದೇಶಗಳನ್ನು ಇದರಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದ್ದು, 11 ದೇಶಗಳು ಭಾಗಸ್ವಾಮ್ಯ ದೇಶಗಳಾಗಿ ಜೋಡಿಸಿಕೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಸಚಿವರ ಪ್ಲೀನರಿ ಸಭೆಗಳು, ಯುವ ವೇದಿಕೆ ಮತ್ತು ವಿಶೇಷ ನವೋದ್ಯಮ ವೇದಿಕೆಗಳು ಸೇರಿದಂತೆ ಜಲ ವಲಯದ ವಿವಿಧ ವಿಷಯಗಳನ್ನು ಒಳಗೊಂಡ 49 ಸುದೀರ್ಘ ಅಧಿವೇಶನಗಳು ನಡೆಯಲಿವೆ.
|
ಕಳೆದ ದಶಕದಲ್ಲಿ, ಜಲ ಸಂರಕ್ಷಣೆಯನ್ನು ಬಲಪಡಿಸಲು ಮತ್ತು ಜಲ ಭದ್ರತೆಯನ್ನು ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. 'ಜಲ ಶಕ್ತಿ ಅಭಿಯಾನ', 'ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೇನ್', 'ಅಟಲ್ ಭುಜಲ್ ಯೋಜನೆ' ಮತ್ತು 'ಮಿಷನ್ ಅಮೃತ್ ಸರೋವರ'ಗಳಂತಹ ಯೋಜನೆಗಳು ಈ ಪ್ರಯತ್ನಗಳಿಗೆ ಬೆಂಬಲ ನೀಡಿವೆ. ಇತ್ತೀಚೆಗೆ, 'ಜಲ ಸಂಚಯ ಜನ ಭಾಗೀದಾರಿ' ಯೋಜನೆ ಸಮುದಾಯ ನೇತೃತ್ವದ ಸಂರಕ್ಷಣೆಯನ್ನು ಬಲಪಡಿಸಿದ್ದರೆ, 'NAQUIM 2.0' ಪ್ರದೇಶ-ನಿರ್ದಿಷ್ಟ ಅಂತರ್ಜಲ ನಿರ್ವಹಣೆಗೆ ವೈಜ್ಞಾನಿಕ ಕೊಡುಗೆಗಳನ್ನು ಒದಗಿಸುತ್ತಿದೆ. ಈ ಪ್ರಯತ್ನಗಳು ದೇಶದ ಅಂತರ್ಜಲ ಸೂಚಕಗಳಲ್ಲಿಯೂ ಪ್ರತಿಫಲಿಸುತ್ತಿವೆ. ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣವು 2017 ರಲ್ಲಿದ್ದ 432 ಬಿಲಿಯನ್ ಕ್ಯೂಬಿಕ್ ಮೀಟರ್‌ನಿಂದ 2025 ರ ವೇಳೆಗೆ 448.52 ಬಿಸಿಎಂ ಗೆ ಹೆಚ್ಚಾಗಿದೆ.
ಈ ಸರ್ಕಾರಿ ಪ್ರಯತ್ನಗಳ ಜೊತೆಗೆ, ಭಾರತದಾದ್ಯಂತ ಕಂಡುಬರುವ ಕಥೆಗಳು ಸಮುದಾಯದ ಭಾಗವಹಿಸುವಿಕೆ, ಅಂತರ್ಜಲ ಮರುಪೂರಣ, ಸುಸ್ಥಿರ ಜಲ ನಿರ್ವಹಣೆ ಮತ್ತು ಸಮಗ್ರ ಆಡಳಿತದ ವಿಷಯಗಳಿಗೆ ಜೀವ ತುಂಬುತ್ತವೆ. ಸಮುದಾಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ತಂತ್ರಜ್ಞಾನವು ಜಲ ಸವಾಲುಗಳಿಗೆ ಹೇಗೆ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸುತ್ತಿವೆ ಎಂಬುದನ್ನು ಇವು ತೋರಿಸುತ್ತವೆ. ಅಂತರ್ಜಲ ಮರುಪೂರಣ ಮತ್ತು ನೀರಿನ ಗುಣಮಟ್ಟದ ಮೇಲ್ವಿಚಾರಣೆಯಿಂದ ಹಿಡಿದು ನದಿಗಳ ಪುನರುಜ್ಜೀವನ ಮತ್ತು ಮಳೆನೀರು ಕೊಯ್ಲಿನವರೆಗೆ, ಈ ಪ್ರಯತ್ನಗಳು IIಡಬ್ಲು ಡಬ್ಲು 2026 ರಲ್ಲಿ ಚರ್ಚಿಸಲಾದ ಆಲೋಚನೆಗಳು ಮತ್ತು ವಿಧಾನಗಳ ತಳಮಟ್ಟದ ನೋಟವನ್ನು ಒದಗಿಸುತ್ತವೆ.
ವ್ಯಾಪಕ ಮಟ್ಟದಲ್ಲಿ ಸಮುದಾಯ ಮರುಪೂರಣ
ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ, ಜಲ ಸಂರಕ್ಷಣೆಯು ಸಮುದಾಯ ನೇತೃತ್ವದ ಶ್ರಮವಾಗಿ ಬೆಳೆದಿದೆ. ಮಳೆನೀರನ್ನು ಸಂಗ್ರಹಿಸುವ ಮತ್ತು ಅಂತರ್ಜಲ ಮರುಪೂರಣಕ್ಕೆ ಬೆಂಬಲ ನೀಡುವ ರಚನೆಗಳನ್ನು ನಿರ್ಮಿಸಲು ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಮುದಾಯಗಳು ಹಳ್ಳಿ ಹಳ್ಳಿಗಳಲ್ಲಿ ಒಂದಾಗಿವೆ.
'ಜಲ ಸಂಚಯ ಜನ ಭಾಗೀದಾರಿ 2.0' ಅಡಿಯಲ್ಲಿ, ಜಿಲ್ಲೆಯು ಜೂನ್ 2025 ಮತ್ತು ಮೇ 2026 ರ ನಡುವೆ 2.84 ಲಕ್ಷ ಮರುಪೂರಣ ರಚನೆಗಳನ್ನು ನಿರ್ಮಿಸಿದೆ. ಮಳೆನೀರನ್ನು ಸಂರಕ್ಷಿಸಲು ಇವುಗಳಲ್ಲಿ ಚೆಕ್ ಡ್ಯಾಂಗಳು, ಮರುಪೂರಣ ಗುಂಡಿಗಳು ಮತ್ತು ಕಂಟೂರ್ ಟ್ರೆಂಚ್‌ಗಳು ಸೇರಿವೆ.

ಬಲೋದ್ ಜಿಲ್ಲೆಯ ಚೆಕ್ ಡ್ಯಾಂ, ಛತ್ತೀಸ್‌ಗಢ
ಋತುಮಾನಕ್ಕೆ ತಕ್ಕಂತೆ ಹರಿಯುವ 14.3 ಕಿ.ಮೀ ಉದ್ದದ ತವೇರಾ ನಾಲಾದ ಪುನರುಜ್ಜೀವನವು ಒಂದು ಗಮನಾರ್ಹ ಮಧ್ಯಸ್ಥಿಕೆಯಾಗಿದೆ. ಈ ನಾಲೆಯುದ್ದಕ್ಕೂ 6,250 ಕ್ಕೂ ಹೆಚ್ಚು ಜಲ ಸಂರಕ್ಷಣಾ ರಚನೆಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯಗಳಿಂದ ಹೆಚ್ಚುವರಿಯಾಗಿ 6.5 ಕೋಟಿ ಲೀಟರ್ ಮಳೆನೀರನ್ನು ಸಂರಕ್ಷಿಸುವ ಮತ್ತು ಅಂತರ್ಜಲ ಮಟ್ಟವನ್ನು ಅಂದಾಜು 5 ರಿಂದ 10 ಅಡಿಗಳಷ್ಟು ಸುಧಾರಿಸುವ ನಿರೀಕ್ಷೆಯಿದೆ.
ನಿರ್ಮಿಸಲಾದ ರಚನೆಗಳ ಸಂಖ್ಯೆಯನ್ನು ಮೀರಿ, ಜಲ ಸಂರಕ್ಷಣೆಯು ಹೇಗೆ ಒಂದು ಜಂಟಿ ಹೊಣೆಗಾರಿಕೆಯಾಗಬಹುದು ಮತ್ತು ಸ್ಥಳೀಯ ಜಲ ಭದ್ರತೆಯನ್ನು ಬಲಪಡಿಸುವ ಪ್ರಯತ್ನಗಳಲ್ಲಿ ಸಮುದಾಯಗಳು ಹೇಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಈ ಅನುಭವವು ನಿದರ್ಶನವಾಗಿದೆ.
ಮಹಿಳೆಯರು ಜಲ ವ್ಯವಸ್ಥಾಪಕರಾದಾಗ...
ತ್ರಿಪುರಾದ ಖೋವಾಯ್‌ನಲ್ಲಿ, ಸಮುದಾಯದ ಭಾಗವಹಿಸುವಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಗ್ರಾಮೀಣ ಕುಡಿಯುವ ನೀರಿನ ಪೂರೈಕೆಯನ್ನು ಬಲಪಡಿಸಲಾಗುತ್ತಿದೆ. ಸುಸ್ಥಿರ ಜಲ ನಿರ್ವಹಣೆಯನ್ನು ಬೆಂಬಲಿಸಲು ಜಿಲ್ಲೆಯು ಪಂಚಾಯತಿಗಳು, ಸ್ವಸಹಾಯ ಗುಂಪುಗಳು, ಶಾಲೆಗಳು ಮತ್ತು ಇತರ ಸ್ಥಳೀಯ ಪಾಲುದಾರರನ್ನು ಒಂದೆಡೆ ತಂದಿದೆ.

ತ್ರಿಪುರಾದ ಖೋವಾಯಿಯಲ್ಲಿ, 'ಜಲ್ ಅರ್ಪಣ್ ದಿವಸ್' ಸಮಾರೋಪ/ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಹಿಳೆಯರು.
6,000 ಕ್ಕೂ ಹೆಚ್ಚು ಸ್ವಸಹಾಯ ಗುಂಪಿನ ಮಹಿಳೆಯರು ಸಮುದಾಯದ ಜಾಗೃತಿ ಮತ್ತು ಸಜ್ಜುಗೊಳಿಸುವಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ಜಲ ಕ್ಲಬ್‌ಗಳ ಮೂಲಕ, ಸ್ವಸಹಾಯ ಗುಂಪಿನ ಮಹಿಳೆಯರು ಫೀಲ್ಡ್ ಟೆಸ್ಟಿಂಗ್ ಕಿಟ್‌ಗಳನ್ನು ಬಳಸಿ ಮೂಲಭೂತ ನೀರಿನ ಗುಣಮಟ್ಟ ತಪಾಸಣೆಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಇದು ಸ್ಥಳೀಯ ಸಮುದಾಯಗಳಿಗೆ ಮೂಲಭೂತ ನೀರಿನ ಗುಣಮಟ್ಟದ ಮೇಲ್ವಿಚಾರಣೆಯನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ.
ಜೊತೆಗೆ, ಜಿಲ್ಲೆಯು ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳ ಮೇಲ್ವಿಚಾರಣೆಯನ್ನು ಬಲಪಡಿಸಿದೆ. ಜಿಯೋ-ಟ್ಯಾಗ್ ಮಾಡಿದ ಮೇಲ್ವಿಚಾರಣೆ, ಮೂರನೇ ವ್ಯಕ್ತಿಯ ಗುಣಮಟ್ಟದ ಪರಿಶೋಧನೆಗಳು (audits) ಮತ್ತು ನಿಯಮಿತವಾದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (DWSM) ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಗಳು ಯೋಜನೆಯ ಅನುಷ್ಠಾನ ಮತ್ತು ಹೊಣೆಗಾರಿಕೆಗೆ ಬೆಂಬಲ ನೀಡುತ್ತವೆ. ಪೂರ್ಣಗೊಂಡ ಯೋಜನೆಗಳನ್ನು 'ಜಲ ಅರ್ಪಣ್' ಮೂಲಕ ಅಧಿಕೃತವಾಗಿ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗುತ್ತದೆ.
ನೀರಿನ ಮೂಲಗಳ ದೀರ್ಘಕಾಲೀನ ನಂಬಿಕೆಯನ್ನು ಕಾಯ್ದುಕೊಳ್ಳಲು ಮೂಲ ಸುಸ್ಥಿರತೆಯು ಜಿಲ್ಲೆಯ ವಿಧಾನದ ಪ್ರಮುಖ ಭಾಗವಾಗಿದೆ. ಜಲಾನಯನ ಪ್ರದೇಶಗಳ ರಕ್ಷಣೆ, ಅರಣ್ಯೀಕರಣ, ಅಂತರ್ಜಲ ಮರುಪೂರಣ ಮತ್ತು ಧೂಸರ ಜಲ (greywater) ನಿರ್ವಹಣೆ ಮುಂತಾದ ಕ್ರಮಗಳು ಇದರಲ್ಲಿ ಸೇರಿವೆ. ಜಿಲ್ಲೆಯ ಎಲ್ಲಾ 860 ಅಂಗನವಾಡಿ ಕೇಂದ್ರಗಳು ಮಳೆನೀರು ಕೊಯ್ಲು ರಚನೆಗಳನ್ನು ಹೊಂದಿವೆ.

ನದಿಗಳಿಂದ ವಿಶ್ವಾಸಾರ್ಹ ನೀರಿಗೆ
ನಲ್ಲಿ ನೀರಿನ ಸಂಪರ್ಕವು ಮನೆಗೆ ನೀರನ್ನು ತರುತ್ತದೆ, ಆದರೆ ದೀರ್ಘಕಾಲೀನ ಜಲ ಭದ್ರತೆಯು ಆ ನೀರನ್ನು ಒದಗಿಸುವ ಆಕರಗಳನ್ನು (ಮೂಲಗಳನ್ನು) ರಕ್ಷಿಸುವುದರ ಮೇಲೆಯೂ ಆಧಾರಿತವಾಗಿದೆ. ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ, ಈ ಆಲೋಚನೆಯು 'ಜಲ ಜೀವನ್ ಮಿಷನ್' ಅನುಷ್ಠಾನವನ್ನು ನದಿಗಳ ಪುನರುಜ್ಜೀವನ, ಜಲ ಸಂರಕ್ಷಣೆ ಮತ್ತು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಸಂಯೋಜಿಸುವ ಪ್ರಯತ್ನಗಳಿಗೆ ಆಕಾರ ನೀಡಿದೆ.

ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ಜಲ ಸರಬರಾಜು ಯೋಜನೆ
"ಧಾರಾ ಸೆ ಧರೋಹರ್ ತಕ್" ಅಭಿಯಾನದಡಿಯಲ್ಲಿ, ಬಾನ್ ನದಿಯನ್ನು ಸುಮಾರು 42 ಕಿಲೋಮೀಟರ್‌ಗಳಷ್ಟು ಉದ್ದಕ್ಕೂ ಹಾಗೂ ಸೋತ್ ನದಿಯನ್ನು ಸುಮಾರು 17 ಕಿಲೋಮೀಟರ್‌ಗಳಷ್ಟು ಉದ್ದಕ್ಕೂ ಪುನರುಜ್ಜೀವನಗೊಳಿಸಲಾಯಿತು. ಇದರ ಪರಿಣಾಮವಾಗಿ, ಅಮ್ರೋಹಾದಲ್ಲಿ ಅಂತರ್ಜಲ ಮಟ್ಟವು ಸುಧಾರಿಸಿತು. ಈ ವಿಧಾನವನ್ನು ಬಿಜ್ನೋರ್‌ನ ಮಾಲನ್ ಮತ್ತು ಕುಶಿನಗರದ ಹಿರಣ್ಯಾವತಿ ಸೇರಿದಂತೆ ನೆರೆಹೊರೆಯ ಜಿಲ್ಲೆಗಳ ನದಿಗಳಿಗೂ ವಿಸ್ತರಿಸಲಾಗಿದೆ.
ಈ ಪ್ರಯತ್ನಗಳಲ್ಲಿ ಸಮುದಾಯದ ಭಾಗವಹಿಸುವಿಕೆಯು ಪ್ರಮುಖ ಪಾತ್ರ ವಹಿಸಿದೆ. ಗ್ರಾಮಸಭಾ-ಆಧಾರಿತ ಮೇಲ್ವಿಚಾರಣೆ, 'ಪಾನಿ ಕಿ ಪಾಠಶಾಲಾ' ಅಧಿವೇಶನಗಳು ಮತ್ತು ಮಹಿಳೆಯರ ನೇತೃತ್ವದ ನೀರಿನ ಗುಣಮಟ್ಟ ತಪಾಸಣೆಯು ನಿವಾಸಿಗಳು ತಮ್ಮ ಜಲ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರ ವಹಿಸಲು ಪ್ರೇರೇಪಿಸಿದೆ. 'ಜಲ ಸೇವಾ ಆಂಕಲನ್' ಕಾರ್ಯಕ್ರಮವು ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಹೊಣೆಗಾರಿಕೆಯನ್ನು ಇನ್ನಷ್ಟು ಬಲಪಡಿಸಿದೆ.
ವಿದ್ಯಾರ್ಥಿಗಳು ಪ್ರತಿಯೊಂದು ಹನಿಯನ್ನೂ ಉಳಿಸಲು ಕಲಿಯುವಲ್ಲಿ.
ವಿದ್ಯಾರ್ಥಿಗೆ ಮಳೆಯೆಂದರೆ ತರಗತಿಯಿಂದ ಸಿಗುವ ಸಣ್ಣ ವಿರಾಮ ಮಾತ್ರವಾಗಿರಬಹುದು. ಆದರೆ ಒಡಿಶಾದಲ್ಲಿ, ನೀರು ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಕಲಿಯುವ ಪಾಠವಾಗುತ್ತಿದೆ. 'ಕ್ಯಾಚ್ ದಿ ರೇನ್ 2026' ಅಭಿಯಾನದ ಮೂಲಕ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಂತರ್ಜಲ ವಿಜ್ಞಾನ, ಜಲವಿಜ್ಞಾನದ ಪ್ರಕ್ರಿಯೆಗಳು ಮತ್ತು ಮಳೆನೀರು ಕೊಯ್ಲಿನ ಕುರಿತು ಪರಿಚಯಿಸುತ್ತಿವೆ.ಈ ಕಲಿಕೆಗೆ ವ್ಯಾಪಕವಾದ ಸಾರ್ವಜನಿಕ ಅಭಿಯಾನದ ಬೆಂಬಲವೂ ಇದೆ. ಒಡಿಶಾವೂ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಲು ಬೀದಿ ನಾಟಕಗಳು, ಜಾನಪದ ಪ್ರದರ್ಶನಗಳು ಮತ್ತು ಸಮುದಾಯ ಕಾರ್ಯಕ್ರಮಗಳನ್ನು ಬಳಸಿಕೊಂಡು 968 ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ನಡೆಸಿದೆ.

ಆಸ್ಪತ್ರೆಗಳು/ಆರೋಗ್ಯ ಕೇಂದ್ರಗಳಲ್ಲಿ ಮಳೆನೀರು ಕೊಯ್ಲಿನ ಪ್ರಾಮುಖ್ಯತೆ ಕುರಿತು ಚರ್ಚೆ
ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ (ಆಸ್ಪತ್ರೆಗಳಲ್ಲಿ) ನಿರಂತರ ಮತ್ತು ಶುದ್ಧ ನೀರಿನ ಪೂರೈಕೆ ಅತ್ಯಗತ್ಯ. ಮಳೆನೀರು ಕೊಯ್ಲು ವ್ಯವಸ್ಥೆಯು ಆಸ್ಪತ್ರೆಗಳ ದೈನಂದಿನ ನೈರ್ಮಲ್ಯ, ಉಪಕರಣಗಳ ಶುಚಿಗೊಳಿಸುವಿಕೆ ಮತ್ತು ಸಾರ್ವಜನಿಕ ಬಳಕೆಗೆ ಪರ್ಯಾಯ ನೀರಿನ ಮೂಲವನ್ನು ಒದಗಿಸುತ್ತದೆ. ಇದು ಸ್ಥಳೀಯ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಲ್ಲದೆ, ತುರ್ತು ಸಂದರ್ಭಗಳಲ್ಲಿ ನೀರಿನ ಅಭಾವ ಎದುರಾಗದಂತೆ ತಡೆಯುತ್ತದೆ.
ಆದರೆ ಈ ಅಭಿಯಾನವು ಕೇವಲ ಜಾಗೃತಿಗೆಷ್ಟೇ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಮಳೆನೀರನ್ನು ಸಂಗ್ರಹಿಸಲು ಮತ್ತು ಅಂತರ್ಜಲ ಮರುಪೂರಣಗೊಳಿಸಲು 905 ರಚನೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಮಳೆನೀರನ್ನು ಸಂಗ್ರಹಿಸುವ 849 ಛಾವಣಿ ಮಳೆನೀರು ಕೊಯ್ಲು ರಚನೆಗಳು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ನೆರವಾಗುವ 56 ಮರುಪೂರಣ ಶಾಪ್ಟ್‌ಗಳು ಸೇರಿವೆ. ಒಡಿಶಾದ ಜಾಜ್‌ಪುರದಲ್ಲೇ 45 ಮರುಪೂರಣ ಶಾಪ್ಟ್‌ಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಾದ್ಯಂತ 98 ಕೆರೆ/ಜಲಾಶಯಗಳನ್ನು ನವೀಕರಣ ಮತ್ತು ಹೂಳೆತ್ತುವ ಕಾರ್ಯಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ.

ಸಮುದಾಯ ತಲುಪುವಿಕೆ ಕಾರ್ಯಕ್ರಮ
ಸ್ಥಳೀಯ ಕ್ರಿಯೆಯಿಂದ ಅಂತರರಾಷ್ಟ್ರೀಯ ಸಮನ್ವಯದವರೆಗೆ
ಶಾಶ್ವತವಾದ ಪ್ರಗತಿಯು ಸಮುದಾಯದ ಭಾಗವಹಿಸುವಿಕೆ, ವೈಜ್ಞಾನಿಕ ಯೋಜನೆ, ಸಾಂಸ್ಥಿಕ ಸಮನ್ವಯ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಅವಲಂಬಿಸಿದೆ ಎಂಬುದನ್ನು ಈ ಅನುಭವಗಳು ತೋರಿಸುತ್ತವೆ. ಇದು 'ಭಾರತ ಅಂತರರಾಷ್ಟ್ರೀಯ ಜಲ ಸಪ್ತಾಹ ೨೦೨೬' ಒಂದೆಡೆ ತರುವ ಒಂದು ದೊಡ್ಡ ಚರ್ಚೆಯಾಗಿದೆ. ಇದು ಜ್ಞಾನವನ್ನು ಹಂಚಿಕೊಳ್ಳಲು, ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸುಸ್ಥಿರ ಜಲ ನಿರ್ವಹಣೆಗಾಗಿ ವಿವಿಧ ವಿಧಾನಗಳನ್ನು ಅನ್ವೇಷಿಸಲು ದೇಶಗಳಿಗೆ ಮತ್ತು ಪಾಲುದಾರರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.
References
Ministry of Jal Shakti
https://www.indiawaterweek.in/
https://www.instagram.com/p/DADC0CUS7Cf/
https://www.pib.gov.in/PressReleasePage.aspx?PRID=2254585®=48&lang=2
https://www.pib.gov.in/PressReleasePage.aspx?PRID=2283262®=48&lang=2
https://www.pib.gov.in/PressReleasePage.aspx?PRID=2266694®=3&lang=1
https://www.pib.gov.in/PressReleasePage.aspx?PRID=2261459®=48&lang=2
https://jaljeevanmission.gov.in/sites/default/files/2026-07/Jal-Jeevan-Samvad-May-2026.pdf
https://www.pib.gov.in/PressReleasePage.aspx?PRID=2292906®=3&lang=1
https://www.pib.gov.in/PressReleaseDetail.aspx?PRID=2297630®=3&lang=1
https://www.pib.gov.in/PressReleasePage.aspx?PRID=2295541&lang=2®=48
https://jsjb.mowr.gov.in/DashboardJsjb.aspx
https://www.pib.gov.in/PressReleasePage.aspx?PRID=2295509®=48&lang=1
https://www.pib.gov.in/PressReleasePage.aspx?PRID=2286237®=48&lang=1
https://amritsarovar.gov.in/login#
https://www.pib.gov.in/PressReleasePage.aspx?PRID=2202306®=3&lang=1
https://www.pib.gov.in/PressReleaseDetail.aspx?PRID=2297163®=1&lang=1
https://www.pib.gov.in/PressReleasePage.aspx?PRID=2222162&lang=2®=48
PIB Backgrounder
https://www.pib.gov.in/PressReleasePage.aspx?PRID=2214258®=3&lang=1
World Bank
https://www.worldbank.org/en/brief/2026/03/19/how-india-is-addressing-its-water-needs
Others
https://x.com/dmkhowai/status/2014292764423528904?s=20
https://www.facebook.com/dmkhowai/videos/-history-made-proud-moment-for-khowai-khowai-becomes-the-first-district-in-india/917803378050184/
Click here to see PDF
*****
(Features ID: 160176)
आगंतुक पटल : 14
Provide suggestions / comments