Rural Prosperity
ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ
ಒಂದು ಕೌಶಲ್ಯವು ಇನ್ನೊಂದು ಹಾದಿಯನ್ನು ತೆರೆದಾಗ
Posted On:
24 SEP 2026 12:14PM
ಕುಟುಂಬದ ಭವಿಷ್ಯವು ಹೆಚ್ಚಾಗಿ ಸುಗ್ಗಿಯ (ಬೆಳೆಯ) ಮೇಲೆ ಆಧಾರಿತವಾಗಿರುವ ಹಳ್ಳಿಗಳಲ್ಲಿ, ಹೊಸ ಕೌಶಲ್ಯವನ್ನು ಕಲಿಯುವುದು ಹೆಚ್ಚಾಗಿ ಪರ್ಯಾಯ ಜೀವನೋಪಾಯದ ಹಾದಿಗಳನ್ನು ತೆರೆಯುತ್ತದೆ. ಅನೇಕ ಗ್ರಾಮೀಣ ಯುವಕರಿಗೆ, ಆ ಹಾದಿಯು ಕಲಿಯಲು, ಕೆಲಸ ಮಾಡಲು ಮತ್ತು ಗಳಿಕೆಯ ಹೊಸ ಮೂಲಗಳನ್ನು ಕಂಡುಕೊಳ್ಳಲು ಸಿಗುವ ಅವಕಾಶದೊಂದಿಗೆ ಪ್ರಾರಂಭವಾಗುತ್ತದೆ. ಅಲ್ಲಿಗೆ 'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ' ಕಥೆಗೆ ಪ್ರವೇಶಿಸುತ್ತದೆ. ದೀನ್ ದಯಾಳ್ ಅಂತೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 25 ಸೆಪ್ಟೆಂಬರ್ 2014 ರಂದು ಪ್ರಾರಂಭವಾದ ಡಿಡಿಯು-ಜಿಕೆವೈ, ವಂಚಿತ ಮತ್ತು ದುರ್ಬಲ ಗ್ರಾಮೀಣ ಕುಟುಂಬಗಳ ಯುವಕರ ಮೇಲೆ ಗಮನ ಹರಿಸುತ್ತದೆ. ಇದು ಸುಸ್ಥಿರ ಜೀವನೋಪಾಯವನ್ನು ತಲುಪುವ ಉದ್ದೇಶದಿಂದ ಉದ್ಯೋಗ-ಧಾರಿತ ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಈ ಕಾರ್ಯಕ್ರಮವು 15 ರಿಂದ 35 ವರ್ಷ ವಯಸ್ಸಿನ ಯುವಕರನ್ನು ಗುರಿಯಾಗಿಸಿಕೊಂಡು, ಕೌಶಲ್ಯ ತರಬೇತಿಯನ್ನು ಉದ್ಯೋಗಾವಕಾಶಗಳೊಂದಿಗೆ ಜೋಡಿಸುತ್ತದೆ.
ಈ ಕಾರ್ಯಕ್ರಮವು ಪ್ರಸ್ತುತ ಕೆಲಸದ ಜಗತ್ತಿಗೆ ತಕ್ಕಂತೆ ಬದಲಾಗುತ್ತಿದೆ. ಪರಿಷ್ಕೃತ ಡಿಡಿಯು-ಜಿಕೆವೈ2.0 ಚೌಕಟ್ಟು ಉದ್ಯಮ-ಆಧಾರಿತ ತರಬೇತಿ, ಸುಸ್ಥಿರ ಉದ್ಯೋಗ, ಉದ್ಯೋಗ ಸಿಕ್ಕ ನಂತರದ ಬೆಂಬಲ, ಕೌಶಲ್ಯ ವರ್ಧನೆ ಮತ್ತು ಮರು-ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈಗಿನ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯು ತರಬೇತಿ, ಮೌಲ್ಯಮಾಪನ, ಪ್ರಮಾಣೀಕರಣ, ಮೇಲ್ವಿಚಾರಣೆ ಮತ್ತು ಉದ್ಯೋಗ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಇದು ಪಾಲುದಾರಿಕೆಗಳು, ಉದ್ಯೋಗ ಮೇಳಗಳು, ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳು ಮತ್ತು ಉದ್ಯಮ ರಂಗದ ಆಲೋಚನೆಗಳ ವಿನಿಮಯದ ಮೂಲಕ ಉದ್ಯೋಗದಾತರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುತ್ತದೆ.
ಇದರ ಮುಖ್ಯ ಗುರಿ ಸ್ಪಷ್ಟವಾಗಿದೆ: ತರಬೇತಿಯು ಉದ್ಯೋಗಕ್ಕೆ ದಾರಿ ಮಾಡಿಕೊಡಬೇಕು, ಮತ್ತು ಆ ಉದ್ಯೋಗವು ದೀರ್ಘಕಾಲದವರೆಗೆ ಉಳಿಯುವ ಉತ್ತಮ ಅವಕಾಶವನ್ನು ಹೊಂದಿರಬೇಕು. ಜೂನ್ 2026 ರ ಹೊತ್ತಿಗೆ, ಡಿಡಿಯು-ಜಿಕೆವೈಅಡಿಯಲ್ಲಿ 18.45 ಲಕ್ಷ ಗ್ರಾಮೀಣ ಯುವಕರಿಗೆ ತರಬೇತಿ ನೀಡಲಾಗಿದ್ದು, 12.35 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ.
ಈ ಅಂಕಿಅಂಶಗಳ ಹಿಂದೆ ಕಲಿಕೆಯು ಉದ್ಯೋಗ ಮತ್ತು ಜೀವನೋಪಾಯದ ಹಾದಿಗಳನ್ನು ತೆರೆದಾಗ ಜೀವನ ಬದಲಾದ ವ್ಯಕ್ತಿಗಳ ಕಥೆಗಳಿವೆ.
ಕನಸನ್ನು ಜೀವಂತವಾಗಿಡುವುದು
ನಾಗಾಲ್ಯಾಂಡ್‌ನ ವಿಮೆಥಾನೋ ಸಖ್ರಿಯೆ, ವರ್ಷಗಳಿಂದ ತಮ್ಮ ತಾಯಿ ಹತ್ತು ಜನರ ಕುಟುಂಬವನ್ನು ಸಲಹಲು ದಣಿವರಿಯಿಲ್ಲದೆ ಕೆಲಸ ಮಾಡುವುದನ್ನು ನೋಡಿದ್ದರು. ಪ್ರೌಢಶಾಲೆಯನ್ನು ಮುಗಿಸಿದ ನಂತರ, ವಿಮೆಥಾನೋ ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದ್ದರು, ಆದರೆ ಆರ್ಥಿಕ ಸಂಕಷ್ಟಗಳು ಆ ಮಹತ್ವಾಕಾಂಕ್ಷೆಯನ್ನು ನನಸು ಮಾಡಿಕೊಳ್ಳಲು ಕಷ್ಟಕರವಾಗಿಸಿದ್ದವು.

ಡಿಡಿಯು-ಜಿಕೆವೈಬಗ್ಗೆ ತಿಳಿದಾಗ ಅವಳ ಜೀವನವೇ ಬದಲಾಯಿತು. ತನ್ನ ಕನಸುಗಳನ್ನು ಬಿಟ್ಟುಕೊಡಲು ನಿರಾಕರಿಸಿದ ಅವಳು, ಡಿಡಿಯು-ಜಿಕೆವೈಯ ಪ್ರವಾಸೋದ್ಯಮ ಮತ್ತು ಆತಿಥ್ಯ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡಳು. ಕೆಲವು ತಿಂಗಳ ನಂತರ, ವಿಮೆಥಾನೋ ಬೆಂಗಳೂರಿನ 'ದಿ ಡೆನ್' ಹೋಟೆಲ್‌ನಲ್ಲಿ ಫುಡ್ & ಬೆವರೇಜ್ ಸರ್ವಿಸ್‌ನಲ್ಲಿ ತಮ್ಮ ಮೊದಲ ಉದ್ಯೋಗಕ್ಕೆ ಪಾದಾರ್ಪಣೆ ಮಾಡಿದರು. ಇದು ಕೇವಲ ಉದ್ಯೋಗವಾಗಿರಲಿಲ್ಲ; ಇದು ಅವಳಿಗೆ ಮತ್ತು ಅವಳ ಕುಟುಂಬಕ್ಕೆ ಒಂದು ಹೊಸ ಅಧ್ಯಾಯದ ಆರಂಭವಾಗಿತ್ತು.
ತಮ್ಮ ಈ ಪಯಣವನ್ನು ನೆನಪಿಸಿಕೊಳ್ಳುತ್ತಾ ವಿಮೆಥಾನೋ, "ಭಾರತದಾದ್ಯಂತ ಅನೇಕ ನಿರುದ್ಯೋಗಿ ಯುವಕ-ಯುವತಿಯರಿಗೆ ನೆರವಾದ ಡಿಡಿಯು-ಜಿಕೆವೈಯೋಜನೆಯನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಮತ್ತು ನಾಗಾಲ್ಯಾಂಡ್ ಸರ್ಕಾರದ ಎನ್‌ಎಸ್‌ಆರ್‌ಎಲ್‌ಎಂಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಅವಕಾಶವು ನನಗೆ ಸಿಕ್ಕ ಆಶೀರ್ವಾದವಾಗಿತ್ತು, ಮತ್ತು ನನ್ನಂತೆಯೇ ಇನ್ನೂ ಅನೇಕ ಯುವಕರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳುತ್ತಾರೆ.
ವಿಮೆಥಾನೋಗೆ ಡಿಡಿಯು-ಜಿಕೆವೈಯೋಜನೆಯು ಅರ್ಧಕ್ಕೇ ನಿಂತಿದ್ದ ಶಿಕ್ಷಣವನ್ನು ವೃತ್ತಿಜೀವನದ ಹೊಸ ಎತ್ತರಕ್ಕೆ ಕೊಂಡೊಯ್ಯುವ ವೇದಿಕೆಯಾಗಿ ಬದಲಾಯಿಸಿತು. ಇನ್ನು ಚಂದನ್ ಶಾ ಅವರಿಗೆ, ಈ ಅವಕಾಶವು ಕೊನೆಗೆ ತಾಯ್ನಾಡಿನಿಂದ ಬಹಳ ದೂರದ ಸೀಮೆಗೆ ಕರೆದೊಯ್ಯಿತು.
ಚಿಲ್ಲರೆ ಕೆಲಸಗಳಿಂದ ವಿದೇಶದಲ್ಲಿ ವೃತ್ತಿಜೀವನದವರೆಗೆ

ಒಂದು ಸಮಯದಲ್ಲಿ ಚಂದನ್ ಶಾರ ಅವರ ಕುಟುಂಬಕ್ಕೆ ಮೂಲಭೂತ ಅಗತ್ಯಗಳನ್ನೇ ಪೂರೈಸಿಕೊಳ್ಳುವುದು ಕಷ್ಟಕರವಾಗಿತ್ತು. ಬಿಹಾರದ ಸಿವಾನ್ ಜಿಲ್ಲೆಯ ತೇತಾಹ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಅವರಿಗೆ ಶಿಕ್ಷಣವನ್ನು ಮುಂದುವರಿಸುವ ಯಾವುದೇ ಆಶಾವಾದವಿರಲಿಲ್ಲ. ತಂದೆಗೆ ಜಮೀನಿನಲ್ಲಿ ನೆರವಾಗಲು ಅವರು ಪ್ರೌಢಶಾಲೆಯ ನಂತರ ಶಾಲೆಯನ್ನು ತೊರೆದರು. ಸುತ್ತಮುತ್ತಲೂ ಸೂಕ್ತ ಅವಕಾಶಗಳಿಲ್ಲದಿದ್ದಾಗ, ಚಂದನ್ ಜೀವನೋಪಾಯಕ್ಕಾಗಿ ಸಿಕ್ಕ ಸಿಕ್ಕ ಚಿಲ್ಲರೆ ಕೆಲಸಗಳನ್ನು ಮಾಡಲಾರಂಭಿಸಿದರು. ಆದಾಗ್ಯೂ, ಆ ಕೆಲಸಗಳಿಂದ ಬಂದ ಆದಾಯವು ಗೌರವಾನ್ವಿತ ಜೀವನಕ್ಕೆ ಸಾಲುತ್ತಿರಲಿಲ್ಲ.
ಗೇಂಡಾ 'ಜೀವಿಕಾ' ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದ ಅವರ ತಾಯಿಯ ಮೂಲಕ ಹೊಸದೊಂದು ದಾರಿ ಕಾಣಿಸಿತು. ಅವರು ಡಿಡಿಯು-ಜಿಕೆವೈಯೋಜನೆಯನ್ನು ಪರಿಶೀಲಿಸಲು ಚಂದನ್ ಅವರಿಗೆ ಪ್ರೋತ್ಸಾಹ ನೀಡಿದರು. ಮಾರ್ಗದರ್ಶನ ಪಡೆದ ಚಂದನ್, ಸಹಾಯಕ ಎಲೆಕ್ಟ್ರಿಷಿಯನ್ ತರಬೇತಿಯನ್ನು ಆಯ್ಕೆ ಮಾಡಿಕೊಂಡರು. ಈ ತರಬೇತಿಯು ಅವರ ವೃತ್ತಿಜೀವನದ ಮೊದಲ ಹೆಜ್ಜೆಗೆ ಅಗತ್ಯವಿದ್ದ ಕೌಶಲ್ಯಗಳನ್ನು ನೀಡಿತು. ಕೋರ್ಸ್ ಪೂರ್ಣಗೊಳಿಸಿದ ನಂತರ, ಅವರು ಬಡ್ಡಿಯಲ್ಲಿರುವ ಡಿಸ್ಟಿಲರಿಯೊಂದರಲ್ಲಿ ತಿಂಗಳಿಗೆ ₹10,500 ವೇತನಕ್ಕೆ ಸಹಾಯಕನಾಗಿ ತಮ್ಮ ಮೊದಲ ಉದ್ಯೋಗವನ್ನು ಪಡೆದರು. ಈ ಆರಂಭಿಕ ಅನುಭವವು ಅವರ ವೃತ್ತಿಪರ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ನೀಡಿತು. ಈ ಕೌಶಲ್ಯ ಮತ್ತು ಅನುಭವವನ್ನು ಬಳಸಿಕೊಂಡು, ಚಂದನ್ ನಂತರ ವಿದೇಶಿ ಅವಕಾಶವನ್ನು ಪಡೆದುಕೊಂಡು ದುಬೈಗೆ ತೆರಳಿದರು. ಅಲ್ಲಿ ಅವರು 'ಅಲ್ ಶಫಾ ಜನರಲ್ ಕಾಂಟ್ರಾಕ್ಟಿಂಗ್' ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಸೇರಿಕೊಂಡರು.
ಅಷ್ಟರಲ್ಲಾಗಲೇ ಅವರ ಮಾಸಿಕ ಆದಾಯ ₹35,000 ಕ್ಕೆ ಏರಿತ್ತು. ಇದರ ಪ್ರಭಾವವು ಕೇವಲ ಅವರ ವೃತ್ತಿಜೀವನಕ್ಕೆ ಸೀಮಿತವಾಗದೆ, ಅವರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ತಂದುಕೊಟ್ಟಿತು. ಚಂದನ್ ತಮ್ಮ ಕುಟುಂಬವನ್ನು ಬೆಂಬಲಿಸಲು ಮತ್ತು ತಮ್ಮ ಸಹೋದರ-ಸಹೋದರಿಯರ ಖಾಸಗಿ ಶಾಲೆಗಳ ಶಿಕ್ಷಣಕ್ಕೆ ನೆರವಾಗಲು ಸಾಧ್ಯವಾಯಿತು. ಅವರ ಈ ಪಯಣವು ಗ್ರಾಮದ ಯುವಕರಿಗೆ ಪ್ರೇರಣೆಯ ಮೂಲವಾಯಿತು.
ಮೊದಲ ಉದ್ಯೋಗಾವಕಾಶವು ಸುಸ್ಥಿರ ಜೀವನೋಪಾಯದ ಬೆಳವಣಿಗೆಗೆ ಹೇಗೆ ಅಡಿಪಾಯವಾಗಬಲ್ಲದು ಎಂಬುದಕ್ಕೆ ಚಂದನ್ ಅವರ ಕಥೆಯು ಸೂಕ್ತ ಉದಾಹರಣೆಯಾಗಿದೆ. ಡಿಡಿಯು-ಜಿಕೆವೈಅವರಿಗೆ ಮೊದಲ ಹೆಜ್ಜೆ ಇಡಲು ಅಗತ್ಯವಾದ ಕೌಶಲ್ಯಗಳನ್ನು ಒದಗಿಸಿದರೆ, ಅವರ ದೃಢಸಂಕಲ್ಪ ಮತ್ತು ಅನುಭವಗಳು ಮುಂದಿನ ಅವಕಾಶಗಳನ್ನು ಕಂಡುಕೊಳ್ಳಲು ನೆರವಾದವು. ಇವೆರಡೂ ಸೇರಿ ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಹೆಚ್ಚು ಭದ್ರವಾದ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದವು.
ಆದರೆ, ಡಿಡಿಯು-ಜಿಕೆವೈನೀಡುವ ಪ್ರತಿ ಪಯಣವೂ ಮನೆಯಿಂದ ದೂರ ಕರೆದೊಯ್ಯುವುದಿಲ್ಲ. ರೂಪಾಲಿ ಹಸ್ದಾ ಅವರಿಗೆ, ಈ ಅವಕಾಶವು ಕೊನೆಗೆ ಅವರನ್ನು ಸ್ವಂತ ಮನೆಗೇ ಮರಳಿ ಕರೆತಂದಿತು.
ಉದ್ಯೋಗವನ್ನು ಉದ್ಯಮವನ್ನಾಗಿ ಪರಿವರ್ತಿಸುವುದು

ಆರ್ಥಿಕ ಮುಗ್ಗಟ್ಟು ಅಸ್ಸಾಂನ ಚರಾಯ್ದೇವೊ ಜಿಲ್ಲೆಯ ರೂಪಾಲಿ ಹಸ್ದಾ ಅವರನ್ನು 9 ನೇ ತರಗತಿಯ ನಂತರ ಶಾಲೆಯನ್ನು ತೊರೆಯುವಂತೆ ಮಾಡಿತು. ಆಕೆಯ ಕುಟುಂಬವು ಕೃಷಿಯನ್ನೇ ನೆಚ್ಚಿಕೊಂಡಿತ್ತು, ಮತ್ತು ಆಕೆಯ ತಂದೆಯೇ ಏಕೈಕ ಸಂಪಾದಕೀಯ ವ್ಯಕ್ತಿಯಾಗಿದ್ದರು. ಸ್ವಸಹಾಯ ಗುಂಪಿನ ಸಕ್ರಿಯ ಸದಸ್ಯೆಯಾಗಿದ್ದ ರೂಪಾಲಿ ಅವರ ತಾಯಿ, ಆಕೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತಲೇ ಇದ್ದರು. ರೂಪಾಲಿ ಅವರು 'ಜೀವಿಕಾ ಸಖಿ' ಮೂಲಕ ಡಿಡಿಯು-ಜಿಕೆವೈಬಗ್ಗೆ ತಿಳಿದುಕೊಂಡರು ಮತ್ತು ಡಿಸೆಂಬರ್ 2022 ರಲ್ಲಿ 'ಸ್ಯೂಯಿಂಗ್ ಮೆಷಿನ್ ಆಪರೇಟರ್' (ಹೊಲಿಗೆ ಯಂತ್ರ ಚಾಲಕಿ) ತರಬೇತಿಗೆ ಸೇರಿಕೊಂಡರು.
ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ತಮಿಳುನಾಡಿನ ತಿರುಪ್ಪೂರ್‌ನಲ್ಲಿರುವ ಕೆ.ಪಿ.ಆರ್ ಅಪ್ಪೇರಲ್ಸ್ ಮಿಲ್ಸ್‌ನಲ್ಲಿ ಉದ್ಯೋಗವನ್ನು ಪಡೆದುಕೊಂಡರು. ಐದು ತಿಂಗಳ ಕಾಲ, ಅವರು ಪರಿಚಯವಿಲ್ಲದ ನಗರದಲ್ಲಿ ಕೆಲಸ ಮಾಡಿದರು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಂಡರು. ಆದಾಗ್ಯೂ, ಅವರ ಮನಸ್ಸು ಮಾತ್ರ ತಮ್ಮ ತಾಯ್ನಾಡಿನ ಕಡೆಗೇ ಇತ್ತು. ಅವರು ತಮ್ಮ ಕೆಲಸದಿಂದ ಉಳಿಸಿದ ಹಣದೊಂದಿಗೆ ಹತಿಬಂಧಕ್ಕೆ ಮರಳಿ, 'ಹೊಲಿಗೆ ಮತ್ತು ಕಟಿಂಗ್ ಸೆಂಟರ್' ಒಂದನ್ನು ಪ್ರಾರಂಭಿಸಲು ₹50,000 ಹೂಡಿಕೆ ಮಾಡಿದರು. ತಮಗೆ ತಾವೇ ಕಲ್ಪಿಸಿಕೊಂಡ ಜೀವನೋಪಾಯವು ಶೀಘ್ರದಲ್ಲೇ ಮತ್ತೊಬ್ಬರಿಗೆ ಅವಕಾಶವಾಗಿ ಮಾರ್ಪಟ್ಟಿತು. ಅವರು ತಮ್ಮ ಕೇಂದ್ರದಲ್ಲಿ ಒಬ್ಬ ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಂಡರು ಮತ್ತು ತಮ್ಮ ಸಮುದಾಯದಲ್ಲೇ ಉದ್ಯಮವೊಂದನ್ನು ಬೆಳೆಸಲು ಪ್ರಾರಂಭಿಸಿದರು. ಸುಮಾರು ₹1.10 ಲಕ್ಷದ ವಾರ್ಷಿಕ ಆದಾಯದೊಂದಿಗೆ, ರೂಪಾಲಿ ಅವರ ಪಯಣವು ಕೌಶಲ್ಯಾಭಿವೃದ್ಧಿಯ ಮತ್ತೊಂದು ಮುಖವನ್ನು ತೋರಿಸುತ್ತದೆ. ಒಂದು ಉದ್ಯೋಗವು ಅವರಿಗೆ ಆರಂಭಿಕ ದಾರಿಯನ್ನು ನೀಡಿತು, ಆದರೆ ಆ ಅನುಭವವನ್ನು ತಮ್ಮದೇ ಆದ ಹೊಸ ಉದ್ಯಮವನ್ನಾಗಿ ಪರಿವರ್ತಿಸಲು ಅವರು ನಿರ್ಧರಿಸಿದರು.
ರೂಪಾಲಿ ತಮ್ಮ ತಾಯ್ನಾಡಿನ ಬಳಿಯೇ ಜೀವನೋಪಾಯವನ್ನು ಕಂಡುಕೊಳ್ಳಲು ಆಯ್ಕೆ ಮಾಡಿಕೊಂಡರು. ಆದರೆ ಹೀರಾಲಾಲ್ ಅವರು ವಿಭಿನ್ನ ಹಾದಿಯನ್ನು ಆಯ್ದುಕೊಂಡರು—ಅದು ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಲೇ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ನೆರವಾದ ಹಾದಿಯಾಗಿತ್ತು.
ತಮ್ಮದೇ ಆದ ವೃತ್ತಿಜೀವನ
ಜಾರ್ಖಂಡ್‌ನ ಹೀರಾಲಾಲ್ ಪಂಡಿತ್ ಅವರು ಪ್ರತಿ ಸುಗ್ಗಿಯ ಬೆಳೆಯು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿರ್ಧರಿಸುವುದನ್ನು ನೋಡುತ್ತಲೇ ಬೆಳೆದವರು. ನಾಲ್ಕು ಜನರಿದ್ದ ಅವರ ಕುಟುಂಬವು ತಂದೆಯ ಹಂಗಾಮಿ ಕೃಷಿಯನ್ನೇ ನೆಚ್ಚಿಕೊಂಡಿತ್ತು, ಇದರಿಂದ ತಿಂಗಳಿಗೆ ಸುಮಾರು ₹5,000 ಆದಾಯ ಬರುತ್ತಿತ್ತು.
10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರು ತಂದೆಗೆ ಸಾಧ್ಯವಾದಷ್ಟು ರೀತಿಯಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ವಿಕಲಚೇತನ ಯುವಕರಾಗಿದ್ದ ಕಾರಣ, ಅವರಿಗೆ ಕೆಲಸ ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಹೀರಾಲಾಲ್ ತಮ್ಮ ಪರಿಸ್ಥಿತಿಯೇ ತಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಲಿಲ್ಲ.

ಅವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಜೊತೆಗೆ ತಮ್ಮದೇ ಆದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸಿದ್ದರು. ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾಗ, ಹೀರಾಲಾಲ್ ಅವರಿಗೆ ಡಿಡಿಯು-ಜಿಕೆವೈಯೋಜನೆ ಬಗ್ಗೆ ತಿಳಿಯಿತು. ಈ ಯೋಜನೆಯ ಉಚಿತ ತರಬೇತಿ ಮತ್ತು ಉದ್ಯೋಗ ಬೆಂಬಲವು ಅವರಿಗೆ ಕೌಶಲ್ಯಗಳನ್ನು ಕಲಿಯಲು ಮತ್ತು ಉದ್ಯೋಗ ಕಂಡುಕೊಳ್ಳಲು ಉತ್ತಮ ಅವಕಾಶವನ್ನು ನೀಡಿತು. ಅವರು ಜಾರ್ಖಂಡ್‌ನ ದುಮ್ಕಾದಲ್ಲಿರುವ ತರಬೇತಿ ಕೇಂದ್ರದಲ್ಲಿ 'ಹೆಲ್ತ್‌ಕೇರ್ ಕೋರ್ಸ್‌ಗೆ ಸೇರಿಕೊಂಡರು.
ಈ ತರಬೇತಿಯು ಹೀರಾಲಾಲ್ ಅವರ ಪಯಣದಲ್ಲಿ ಪ್ರಮುಖ ತಿರುವು ನೀಡಿತು. ಗೌರವ ಮತ್ತು ಸಮಾನತೆಯಿಂದ ಕಾಣುವ ಬೆಂಬಲಿತ ಹಾಗೂ ಒಳಗೊಳ್ಳುವಿಕೆಯ ಕಲಿಕಾ ವಾತಾವರಣದಲ್ಲಿ ಅವರು ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಂಡರು. ಕೋರ್ಸ್ ಪೂರ್ಣಗೊಳಿಸಿದ ನಂತರ, ಅವರು ನಾಸಿಕ್‌ನ ಎಸ್‌ಎಂಬಿಟಿ ಆಸ್ಪತ್ರೆಯಲ್ಲಿ 'ಜನರಲ್ ಡ್ಯೂಟಿ ಅಸಿಸ್ಟೆಂಟ್' ಆಗಿ ಉದ್ಯೋಗವನ್ನು ಪಡೆದುಕೊಂಡರು. ಈ ಅವಕಾಶವು ಅವರಿಗೆ ಸ್ವತಂತ್ರವಾಗಿ ಸಂಪಾದಿಸಲು ಮತ್ತು ಕುಟುಂಬದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಲು ನೆರವಾಯಿತು. ಮುಖ್ಯವಾಗಿ, ಈ ಅನುಭವವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಮತ್ತು ತಮ್ಮ ಸಾಮರ್ಥ್ಯದ ಕುರಿತಾದ ದೃಷ್ಟಿಕೋನವನ್ನು ವಿಸ್ತರಿಸಿತು.
ಇಂದು, ಹೀರಾಲಾಲ್ ಅವರು ಇತರ ಯುವಕರಿಗೆ ತಮ್ಮ ಪರಿಸ್ಥಿತಿಯನ್ನು ಮೀರಿ ಯೋಚಿಸಲು ಮತ್ತು ಲಭ್ಯವಿರುವ ಅವಕಾಶಗಳ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ. ಅವರಿಗೆ, ಈ ಪಯಣವು ಮೊದಲ ಹೆಜ್ಜೆ ಇಡುವ ಧೈರ್ಯದೊಂದಿಗೆ ಪ್ರಾರಂಭವಾಯಿತು. ಡಿಡಿಯು-ಜಿಕೆವೈಆ ಮೊದಲ ಹೆಜ್ಜೆಯನ್ನು ವೃತ್ತಿಜೀವನ ಮತ್ತು ಭದ್ರವಾದ ಭವಿಷ್ಯದ ಹಾದಿಯಾಗಿ ಪರಿವರ್ತಿಸಲು ಅವರಿಗೆ ಸಹಾಯ ಮಾಡಿತು.
ಕೌಶಲ್ಯವೇ ಜೀವನೋಪಾಯವಾದಾಗ
ಒಂದು ಕೌಶಲ್ಯವು ಗ್ರಾಮೀಣ ಕುಟುಂಬ ಎದುರಿಸುವ ಪ್ರತಿಯೊಂದು ಕಷ್ಟವನ್ನೂ ಸಂಪೂರ್ಣವಾಗಿ ನಿವಾರಿಸದಿರಬಹುದು, ಆದರೆ ಅದು ದೊಡ್ಡ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯುತ್ತದೆ. ಆರ್ಥಿಕ ಸಂಕಷ್ಟದಿಂದ ಶಿಕ್ಷಣವು ಮಧ್ಯದಲ್ಲೇ ನಿಂತಾಗ, ವಿಮೆಥಾನೋ ಅವರಿಗೆ ಇದು ಉದ್ಯೋಗದ ಹಾದಿಯನ್ನು ತೋರಿತು. ಚಂದನ್ ಅವರಿಗೆ, ಕೊನೆಗೆ ದುಬೈಗೆ ಕರೆದೊಯ್ದ ವೃತ್ತಿಜೀವನದ ಆರಂಭಿಕ ಮೆಟ್ಟಿಲಾಯಿತು. ರೂಪಾಲಿ ಅವರು ತಮ್ಮ ಕೌಶಲ್ಯ ಮತ್ತು ಅನುಭವದೊಂದಿಗೆ ತಾಯ್ನಾಡಿಗೆ ಮರಳಿ ಸ್ವಂತ ಉದ್ಯಮವನ್ನು ಕಟ್ಟಿದರು, ಹಾಗೆಯೇ ಹೀರಾಲಾಲ್ ಅವರು ಉದ್ಯೋಗ ಕಂಡುಕೊಳ್ಳಲು ಮತ್ತು ಕುಟುಂಬಕ್ಕೆ ನೆರವಾಗಲು ಹೊಸ ಮಾರ್ಗವನ್ನು ಕಂಡುಕೊಂಡರು.
ಅವರ ಪಯಣಗಳು ವಿಭಿನ್ನ ದಾರಿಗಳನ್ನು ಹಿಡಿದರೂ, ಎಲ್ಲರಲ್ಲೂ ಒಂದು ಸಮಾನ ಅಂಶವಿತ್ತು: ಕೌಶಲ್ಯವನ್ನು ಗಳಿಸುವ, ಅದನ್ನು ಬಳಸುವ ಮತ್ತು ಜೀವನೋಪಾಯವನ್ನು ಕಂಡುಕೊಳ್ಳುವ ಅವಕಾಶ. ಡಿಡಿಯು-ಜಿಕೆವೈಯೋಜನೆ ಆ ಮೊದಲ ಹೆಜ್ಜೆಯನ್ನು ಸಾಧ್ಯವಾಗಿಸಲು ಶ್ರಮಿಸುತ್ತದೆ; ಗ್ರಾಮೀಣ ಯುವಕರು ತರಬೇತಿಯಿಂದ ಉದ್ಯೋಗದತ್ತ, ಮತ್ತು ಉದ್ಯೋಗದಿಂದ ಹೆಚ್ಚು ಭದ್ರವಾದ ಹಾಗೂ ಸುಸ್ಥಿರ ಜೀವನೋಪಾಯದತ್ತ ಸಾಗಲು ಸಹಾಯ ಮಾಡುತ್ತದೆ.
References
Ministry of Rural Development
http://ddugky.info/
https://www.pib.gov.in/PressReleasePage.aspx?PRID=2289001
https://www.pib.gov.in/PressReleasePage.aspx?PRID=2297790
https://nsrlm.nagaland.gov.in/vimethano-sakhrie/
https://www.nitiforstates.gov.in/public-assets/Best_Practices/Compendiums/75%20Inspirational%20Stories%20of%20Aatmanirbhar%20Rural%20Women.pdf
https://asrlms.assam.gov.in/portlets/success-stories-0
Click here to see pdf
******
(Features ID: 160175)
आगंतुक पटल : 13
Provide suggestions / comments