• Sitemap
  • Advance Search
Rural Prosperity

ಔಷಧಿ ಚೀಟಿಗಷ್ಟೇ ಸೀಮಿತವಾಗದ ಕಾಳಜಿ

ಜೀವನದ ಪ್ರತಿಯೊಂದು ಹಂತಕ್ಕೂ ಕಡಿಮೆ ಬೆಲೆಯಲ್ಲಿ ಸಿಗುವ ಆರೋಗ್ಯಕರ ಉತ್ಪನ್ನಗಳು

Posted On: 15 SEP 2026 11:33AM

ಮಗುವನ್ನು ಬೆಳೆಸಲು ಇಡೀ ಹಳ್ಳಿಯೇ ಬೇಕು ಎಂಬುದು ಹಳೆಯ ಗಾದೆ ಮಾತು. ಆದರೆ ಆ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಅದು ಹೇಳುವುದಿಲ್ಲ! ನಿರ್ದಿಷ್ಟ ದಿನಚರಿ ಮತ್ತು ಅಷ್ಟೇ ಖರ್ಚು-ವೆಚ್ಚಗಳನ್ನು ಹೊಂದಿದ್ದ ಒಂದು ಸಣ್ಣ ಕುಟುಂಬವು ಹೊಸ ಜೀವವನ್ನು ಬರಮಾಡಿಕೊಂಡಾಗ, ತಕ್ಷಣವೇ ಹೊಸ ಲಯಕ್ಕೆ ಹೊಂದಿಕೊಳ್ಳುತ್ತದೆ: ತಡರಾತ್ರಿಗಳ ಜಾಗರಣೆ, ಮಗುವಿನ ಡೈಪರ್‌ಗಳು ಮತ್ತು ವೈಪ್ಸ್‌ಗಳು, ವೈದ್ಯರ ಭೇಟಿಗಳು, ಔಷಧಿಗಳು ಹಾಗೂ ನವಜಾತ ಶಿಶುವನ್ನು ಪ್ರೀತಿಸುವ ಮತ್ತು ಆರೈಕೆ ಮಾಡುವ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳುವ ಎಣಿಕೆಯಿಲ್ಲದ ಸಣ್ಣ ಸಣ್ಣ ನಿರ್ಧಾರಗಳು. ಸಂತೋಷವು ಅಪಾರವಾಗಿರುತ್ತದೆ, ಆದರೆ ಅದರೊಂದಿಗೆ ಜವಾಬ್ದಾರಿಗಳು ಮತ್ತು ಖರ್ಚು-ವೆಚ್ಚಗಳೂ ಸಹ ದೊಡ್ಡದಾಗುತ್ತವೆ. ಮಗುವಿನ ಆರೈಕೆಯಿಂದ ಹಿಡಿದು ಹೆರಿಗೆಯ ನಂತರದ (ಪೋಸ್ಟ್-ಪಾರ್ಟಮ್) ಆರೈಕೆಯವರೆಗೆ, ಕುಟುಂಬದ ಗಾತ್ರ ಬೆಳೆದಂತೆ ಆರೋಗ್ಯ ರಕ್ಷಣಾ ಉತ್ಪನ್ನಗಳು ಅನಿವಾರ್ಯವಾಗಿಬಿಡುತ್ತವೆ.

..

ಔಷಧಗಳು ವೆಚ್ಚದ ಪ್ರಮುಖ ಭಾಗವಾಗಿದ್ದರೂ, ನವಜಾತ ಶಿಶು ಇರುವ ಕುಟುಂಬಗಳಿಗೆ, ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವವರಿಗೆ ಅಥವಾ ವೃದ್ಧ ಪೋಷಕರು ಮತ್ತು ಆಶ್ರಿತರನ್ನು ಹೊಂದಿರುವ ಕುಟುಂಬಗಳಿಗೆ ಅವುಗಳೊಂದೇ ವೆಚ್ಚವಾಗಿರುವುದಿಲ್ಲ. ಔಷಧಗಳನ್ನು ಮೀರಿದ ಕೈಗೆಟುಕುವ ಆರೋಗ್ಯ ಸೇವೆಯ ಈ ವಿಶಾಲ ಸಂದರ್ಭದಲ್ಲೇ, ಸರ್ಕಾರವು ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ವ್ಯಾಪ್ತಿಯನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ದೇಶಾದ್ಯಂತ 20,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳ ಜಾಲದೊಂದಿಗೆ, ಈ ಉಪಕ್ರಮವು ಕೈಗೆಟುಕುವ ಬೆಲೆಯ ಶಸ್ತ್ರಚಿಕಿತ್ಸಾ ಮತ್ತು ಆರೋಗ್ಯ ರಕ್ಷಣಾ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಕುಟುಂಬಗಳ ಮನೆ ಬಾಗಿಲಿಗೆ ಒದಗಿಸುತ್ತಿದೆ.

ಯುವ ಕುಟುಂಬವೊಂದಕ್ಕೆ, ಮಗುವಿನ ಆಗಮನವು ದೈನಂದಿನ ಅಗತ್ಯಗಳ ಹೊಸ ಸರಣಿಯ ಆರಂಭವನ್ನು ಸೂಚಿಸುತ್ತದೆ. ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಮಗುವಿನ ಆರೈಕೆ ಉತ್ಪನ್ನಗಳ ಶ್ರೇಣಿಯಾದ 'ಜನೌಷಧಿ ಬಾಲ್ಯ/ಬಚ್‌ಪನ್' ಮೂಲಕ, ಕುಟುಂಬಗಳು ಅತ್ಯಗತ್ಯ ಶಿಶು-ಆರೈಕೆ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಪಡೆಯಬಹುದು; ಇದರಲ್ಲಿ ವಿವಿಧ ಗಾತ್ರದ ಬೇಬಿ ಡೈಪರ್‌ಗಳು ಮತ್ತು ವೈಪ್ಸ್‌ಗಳು ಸೇರಿವೆ. ಉದಾಹರಣೆಗೆ, ಅತ್ಯಂತ ಹೆಚ್ಚಾಗಿ ಬಳಸಲಾಗುವ ಶಿಶು-ಆರೈಕೆ ಅಗತ್ಯಗಳಲ್ಲಿ ಒಂದಾದ ಬೇಬಿ ವೈಪ್ಸ್ (20 ವೈಪ್ಸ್‌ಗಳ ಪ್ಯಾಕ್) ₹45 ಕ್ಕೆ ಲಭ್ಯವಿದ್ದು, ಕೈಗೆಟುಕುವ ಆಯ್ಕೆಯನ್ನು ಒದಗಿಸುತ್ತದೆ. ಜನೌಷಧಿ ಉತ್ಪನ್ನಗಳ ಶ್ರೇಣಿಯಲ್ಲಿ ಬೇಬಿ ಫೀಡಿಂಗ್ ಬಾಟಲ್ (250 ಮಿಲಿ), ಮ್ಯಾನುಯಲ್ ಬ್ರೆಸ್ಟ್ ಪಂಪ್, ಹಾಟ್ ವಾಟರ್ ಬ್ಯಾಗ್, ಇನ್‌ಫೆಂಟ್ ಫೀಡಿಂಗ್ ಟ್ಯೂಬ್ ಮುಂತಾದ ಉತ್ಪನ್ನಗಳೂ ಸೇರಿವೆ.

ಆರೈಕೆಯ ಈ ಪ್ರಯಾಣವು ತಾಯಿಯನ್ನೂ ಒಳಗೊಂಡಿರುತ್ತದೆ. ಹೆರಿಗೆಯ ನಂತರದ ಚೇತರಿಕೆಗೆ ಸೂಕ್ತ ವಿಶ್ರಾಂತಿ, ಬೆಂಬಲ ಮತ್ತು ದೈಹಿಕ ಯೋಗಕ್ಷೇಮದ ಕಡೆಗೆ ಗಮನ ಹರಿಸುವುದು ಅಗತ್ಯವಾಗಿರುತ್ತದೆ. ಹೆರಿಗೆಯ ನಂತರದ ಆರೈಕೆಗೆ ಬೆಂಬಲ ನೀಡಲು 'ಅಬ್ಡಾಮಿನಲ್ ಬೆಲ್ಟ್'ಗಳು (ಹೊಟ್ಟೆಯ ಬೆಲ್ಟ್‌ಗಳು) ಜನೌಷಧಿ ನೆಟ್‌ವರ್ಕ್ ಮೂಲಕ ಲಭ್ಯವಿವೆ. ಅದೇ ರೀತಿ, ₹525 ಬೆಲೆಯ 'ಸರ್ವಿಕಲ್ ಪಿಲೋಗಳು' ಆರಾಮ ಮತ್ತು ಬೆಂಬಲವನ್ನು ನೀಡುತ್ತವೆ ಹಾಗೂ ಗರ್ಭಾವಸ್ಥೆಯಲ್ಲಿ ಮತ್ತು ಅದರ ನಂತರವೂ ಉಪಯುಕ್ತವಾಗಬಲ್ಲವು.

..

ಬೆಳೆಯುತ್ತಿರುವ ಮಗುವಿನ ಅಗತ್ಯಗಳು ನವಜಾತ ಶಿಶುವಿನ ಅಗತ್ಯಗಳಿಗಿಂತ ತೀರಾ ಭಿನ್ನವಾಗಿರುತ್ತವೆ. ಉಸಿರಾಟದ ತೊಂದರೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕೆಲವೊಮ್ಮೆ ಮನೆಯಲ್ಲಿಯೇ ಬೆಂಬಲ ಉಪಕರಣಗಳ ಬಳಕೆಯನ್ನು ಕಡ್ಡಾಯಗೊಳಿಸಬಹುದು. ಇದು ಕುಟುಂಬಗಳಿಗೆ ಕೈಗೆಟುಕುವ ದರದ ಆರೋಗ್ಯ ರಕ್ಷಣಾ ಸಾಧನಗಳ ಲಭ್ಯತೆಯನ್ನು ಅತ್ಯಂತ ಪ್ರಮುಖವಾಗಿಸುತ್ತದೆ. ಜನೌಷಧಿ ಕೇಂದ್ರಗಳಲ್ಲಿ ₹937.50 ಬೆಲೆಯ 'ಎಲೆಕ್ಟ್ರಿಕಲ್ ನೆಬುಲೈಜರ್ ಮೆಷಿನ್' ಮತ್ತು ₹200 ಬೆಲೆಯ 'ನೆಬುಲೈಜರ್ ಮಾಸ್ಕ್ ವಿತ್ ಟ್ಯೂಬಿಂಗ್ (ಮಕ್ಕಳಿಗಾಗಿ)' ಲಭ್ಯವಿವೆ. ಜನೌಷಧಿ ಕೇಂದ್ರಗಳು ಕೇವಲ ಚಿಕಿತ್ಸೆಗೆ ಮಾತ್ರವಲ್ಲದೆ, ಆರೋಗ್ಯದ ಮೇಲ್ವಿಚಾರಣೆ, ಚೇತರಿಕೆ ಮತ್ತು ದೈನಂದಿನ ಆರೋಗ್ಯ ನಿರ್ವಹಣೆಗೆ ಬೆಂಬಲ ನೀಡುವ ಉತ್ಪನ್ನಗಳನ್ನು ಹೆಚ್ಚಾಗಿ ಒದಗಿಸುತ್ತಿವೆ.

..

ಗ್ಲುಕೋಮೀಟರ್ ಟೆಸ್ಟ್ ಸ್ಟ್ರಿಪ್‌ಗಳಂತಹ (25 ಸ್ಟ್ರಿಪ್‌ಗಳು) ₹500 ಬೆಲೆಯ ಉತ್ಪನ್ನಗಳು ನಿಯಮಿತ ರಕ್ತದ ಸಕ್ಕರೆ ಮಟ್ಟದ ಪರಿಶೀಲನೆಗಾಗಿ ಜನೌಷಧಿ ನೆಟ್‌ವರ್ಕ್ ಮೂಲಕ ಲಭ್ಯವಿವೆ. ರಕ್ತದಲ್ಲಿನ ಆಮ್ಲಜನಕದ ಸ್ಯಾಚುರೇಶನ್ ಅನ್ನು ಅಳೆಯಲು ಬಳಸುವ ಪಲ್ಸ್ ಆಕ್ಸಿಮೀಟರ್‌ಗಳು ಸಹ ಲಭ್ಯವಿರುವ ವೈದ್ಯಕೀಯ ಸಾಧನಗಳ ಶ್ರೇಣಿಯ ಭಾಗವಾಗಿವೆ.

..

ಪೋಷಕರು ಮತ್ತು ಇತರ ಕುಟುಂಬದ ಸದಸ್ಯರು ವಯಸ್ಸಾಗುತ್ತಿದ್ದಂತೆ, ಅವರ ಆರೈಕೆಯ ಜವಾಬ್ದಾರಿಯು ಸಾಮಾನ್ಯವಾಗಿ ಕುಟುಂಬ ಜೀವನದ ಒಂದು ಪ್ರಮುಖ ಭಾಗವಾಗುತ್ತದೆ. ವಯಸ್ಸಾದವರಿಗೆ, ಇತರರನ್ನು ಅವಲಂಬಿಸಿದವರಿಗೆ ಅಥವಾ ಮಂಚ ಹಿಡಿದ ವ್ಯಕ್ತಿಗಳಿಗೆ ನೈರ್ಮಲ್ಯ, ಆರಾಮದಾಯಕತೆ, ಗೌರವ ಮತ್ತು ದೈನಂದಿನ ಆರೈಕೆಗಳು ಅಷ್ಟೇ ಮುಖ್ಯವಾಗುತ್ತವೆ.

ಸುದೀರ್ಘ ಅವಧಿಯವರೆಗೆ ಪ್ರೀತಿಪಾತ್ರರ ಆರೋಗ್ಯವನ್ನು ನಿರ್ವಹಿಸುವ ಕುಟುಂಬಕ್ಕೆ, ಇವು ಮರುಕಳಿಸುವ ಖರೀದಿಗಳಾಗಬಹುದು (ಪದೇ ಪದೇ ಮಾಡಬೇಕಾದ ವೆಚ್ಚಗಳು). ಆದ್ದರಿಂದ, ಪದೇ ಪದೇ ಬಳಸುವ ಆರೋಗ್ಯ ರಕ್ಷಣಾ ಉತ್ಪನ್ನಗಳ ಮೇಲಿನ ಸಣ್ಣ ಉಳಿತಾಯವೂ ಸಹ ತಿಂಗಳುಗಳು ಮತ್ತು ವರ್ಷಗಳಲ್ಲಿ ಮಹತ್ವದ ಆರ್ಥಿಕ ನೆರವಾಗಬಹುದು. ಈ ಅಗತ್ಯವನ್ನು ಗುರುತಿಸಿ, ಸರ್ಕಾರವು ಪ್ರೌಢರಿಗಾಗಿ (ವಯಸ್ಕರಿಗಾಗಿ) 'ಜನ್ ಔಷಧಿ ಸ್ವಾಭಿಮಾನ್' ಎಂಬ ವಿಶೇಷ ಶ್ರೇಣಿಯ ಅಡಲ್ಟ್ ಡೈಪರ್‌ಗಳನ್ನು ಪರಿಚಯಿಸಿದೆ.

.

ಪೋಷಕತ್ವದ ಆರಂಭಿಕ ದಿನಗಳಿಂದ ಹಿಡಿದು ಬಾಲ್ಯದವರೆಗೆ, ನಿಯಮಿತ ಆರೋಗ್ಯ ತಪಾಸಣೆಯಿಂದ ಹಿಡಿದು ವಯಸ್ಸಾಗುತ್ತಿರುವ ಪ್ರೀತಿಪಾತ್ರರ ಹಾರೈಕೆಯವರೆಗೆ, ಕುಟುಂಬವೊಂದರ ಆರೋಗ್ಯ ರಕ್ಷಣೆಯ ಪಯಣ ನಿರಂತರವಾದದ್ದು, ಮತ್ತು ಅದರೊಂದಿಗೆ ಬರುವ ವೆಚ್ಚಗಳೂ ಸಹ ನಿರಂತರವಾಗಿರುತ್ತವೆ. ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಬಳಕೆಯ ವಸ್ತುಗಳನ್ನು ಒಳಗೊಂಡ ಜನೌಷಧಿ ಶ್ರೇಣಿಯು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಹೊಂದಿದೆ.

ಈ ಉತ್ಪನ್ನಗಳ ಶ್ರೇಣಿಯು ಇನ್ನಷ್ಟು ವಿಸ್ತರಿಸಲು ಸಿದ್ಧವಾಗಿದ್ದು, ಹಲವಾರು ಆರೋಗ್ಯ ರಕ್ಷಣೆ ಮತ್ತು ಬೆಂಬಲ-ಆರೈಕೆ ಉತ್ಪನ್ನಗಳನ್ನು ಈ ಜಾಲದ ಮೂಲಕ ಸೇರ್ಪಡೆಗೊಳಿಸಲು ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಬರಲಿವೆ. ಇವುಗಳಲ್ಲಿ 'ರೇಂಜ್ ಆಫ್ ಮೋಷನ್-ನೀ ಬ್ರೇಸ್', 'ವಾಕರ್ - ಸಿಟ್ ಅಸಿಸ್ಟ್-ಟು-ಸ್ಟ್ಯಾಂಡ್ ಸಪೋರ್ಟ್', 'ಮೆಡಿಕಲ್ ಸ್ಟೀಮ್ ವೇಪರೈಸರ್', 'ಫುಟ್ ಎಲಿವೇಟರ್ ಪಿಲೋ', 'ಪ್ರೆಗ್ನೆನ್ಸಿ ಬ್ಯಾಕ್ ಸಪೋರ್ಟ್ ಬೆಲ್ಟ್' ಮತ್ತು 'ಸರ್ವಿಕಲ್ ಕಾಲರ್' ಸೇರಿವೆ. ಉದ್ದೇಶಿತ ಈ ವಿಸ್ತರಣೆಯು, ಕೈಗೆಟುಕುವ ಬೆಲೆಯ ಆರೋಗ್ಯ ಸೇವೆಯನ್ನು ಕೇವಲ ಔಷಧಗಳಿಗೆ ಸೀಮಿತಗೊಳಿಸದೆ ವಿಸ್ತರಿಸುವ ಮತ್ತು ಎಲ್ಲಾ ಪ್ರಜೆಗಳಿಗೂ ಅಗತ್ಯ ಆರೋಗ್ಯ ರಕ್ಷಣೆ, ಚಲನಶೀಲತೆ, ಪುನರ್ವಸತಿ ಮತ್ತು ಬೆಂಬಲ-ಆರೈಕೆಯ ವೈವಿಧ್ಯಮಯ ಉತ್ಪನ್ನಗಳನ್ನು ಸುಲಭವಾಗಿ ಸಿಗುವಂತೆ ಮಾಡುವ ಸರ್ಕಾರದ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

Reference

Ministry of Chemicals & Fertilizers

Click to see pdf

 

*****

 

(Features ID: 159993) आगंतुक पटल : 29
Provide suggestions / comments
इस विज्ञप्ति को इन भाषाओं में पढ़ें: Bengali , Assamese