Farmer's Welfare
ಹಸಿರು ತಂಡಗಳಿಂದ ಹಸಿರು ಉದ್ಯಮಗಳವರೆಗೆ
ಪರಂಪರಾಗತ ಬಿದಿರಿನ ಸಂಪನ್ಮೂಲವು ಹೊಸ ಜೀವನೋಪಾಯಗಳು, ಉದ್ಯಮಗಳು ಮತ್ತು ಅವಕಾಶಗಳನ್ನು ಹೇಗೆ ಸೃಷ್ಟಿಸುತ್ತಿದೆ
Posted On:
12 SEP 2026 11:07AM
ಬಿದಿರಿನ ಚೀಲವು ನಗರದ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಸಿಗುವ ಸಾಮಾನ್ಯ ವಸ್ತುವಿನಂತೆ ಕಾಣಿಸಬಹುದು. ಆದರೆ ಅದರ ಪ್ರಯಾಣವು ಸಣ್ಣ ಹಳ್ಳಿಯ ಉದ್ಯಮದಿಂದ ಹಿಡಿದು ರಾಷ್ಟ್ರೀಯ ನೀತಿಯಲ್ಲಿ ಉಂಟಾದ ಬದಲಾವಣೆಯವರೆಗಿನ ಕಥೆಯನ್ನು ಹೇಳುತ್ತದೆ. ಗುರುಗ್ರಾಮದಲ್ಲಿ ನಡೆದ ಸರಸ್ ಆಜೀವಿಕಾ ಮೇಳ 2026 ರಲ್ಲಿ, ಇಂತಹದೇ ಒಂದು ಕಥೆಯು ಪ್ರದರ್ಶನಗೊಂಡಿತು: ಅಸ್ಸಾಂನ ವಿಶಾಖಾ ದೀದಿಯವರು ತಯಾರಿಸಿದ ಬಿದಿರಿನ ಚೀಲಗಳು. 2014 ರಲ್ಲಿ, ಅವರು ಸ್ವಸಹಾಯ ಗುಂಪನ್ನು ಸೇರಿದರು ಮತ್ತು ಹೊಸ ವಿನ್ಯಾಸಗಳೊಂದಿಗೆ ತಮ್ಮ ಮಾವನವರ ಬಿದಿರಿನ ಕರಕುಶಲ ಉದ್ಯಮಕ್ಕೆ ಹೊಸ ಚೈತನ್ಯ ನೀಡಿದರು. ಸರ್ಕಾರಿ ಬೆಂಬಲ ಮತ್ತು ಪ್ರದರ್ಶನಗಳು ಅವರು ವ್ಯಾಪಕ ಮಾರುಕಟ್ಟೆಗಳನ್ನು ತಲುಪಲು ನೆರವಾದವು. ಅವರು ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ 2025 ರಲ್ಲಿ ಭಾಗವಹಿಸಿದ್ದರು; ಅವರ ಬಿದಿರಿನ ಉತ್ಪನ್ನಗಳು ಅವರಿಗೆ ₹2 ಲಕ್ಷ ಮಾರಾಟದ ಆದಾಯವನ್ನು ತಂದುಕೊಟ್ಟವು. ಅವರ ಈ ಪಯಣವು, ಮನೆಯಲ್ಲೇ ಆರಂಭವಾದ ಕರಕುಶಲತೆಯು ಹೇಗೆ ಒಂದು ಯಶಸ್ವಿ ಉದ್ಯಮವಾಗಿ ಬದಲಾಯಿತು ಎಂಬುದನ್ನು ಬಿಂಬಿಸುತ್ತದೆ.

ತಲೆಮಾರುಗಳಿಂದ, ಬಿದಿರು ವಿವಿಧ ಸಮುದಾಯಗಳ ಸಾಂಪ್ರದಾಯಿಕ ಜೀವನೋಪಾಯದೊಂದಿಗೆ ನಿಕಟವಾಗಿ ಬೆಸೆದುಕೊಂಡಿತ್ತು, ಆದರೆ ಹಳೆಯ ನಿಯಂತ್ರಣಾತ್ಮಕ ತಡೆಯೊಂದು ಅದರ ನೈಜ ಆರ್ಥಿಕ ಸಾಮರ್ಥ್ಯವನ್ನು ಕುಂಠಿತಗೊಳಿಸಿತ್ತು. ಬ್ರಿಟಿಷರ ಕಾಲದ ಕಾಯ್ದೆಯೊಂದರ ಅಡಿಯಲ್ಲಿ, ಬಿದಿರನ್ನು 'ಮರ' ಎಂದು ವರ್ಗೀಕರಿಸಲಾಗಿತ್ತು, ಇದು ಅದರ ಮೇಲೆ ಅವಲಂಬಿತರಾಗಿದ್ದ ಜನರಿಗೆ ಅದನ್ನು ಕಟಾವು ಮಾಡುವುದು ಮತ್ತು ಸಾಗಿಸುವುದನ್ನು ಅನಗತ್ಯವಾಗಿ ಕಷ್ಟಕರವಾಗಿಸಿತ್ತು. 2017 ರಲ್ಲಿ, ಸರ್ಕಾರವು ಬಿದಿರನ್ನು ಈ ವರ್ಗೀಕರಣದಿಂದ ತೆಗೆದುಹಾಕಿ, ಅದನ್ನು ನಿರ್ಬಂಧಿತ ಅರಣ್ಯ ನಿಯಮಗಳಿಂದ ಮುಕ್ತಗೊಳಿಸುವ ಮೂಲಕ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿತು. ಈ ಪ್ರಗತಿಪರ ಸುಧಾರಣೆಯು ಬಿದಿರು ವಲಯದಲ್ಲಿ ಹೆಚ್ಚಿನ ನಾವೀನ್ಯತೆ, ಉದ್ಯಮಶೀಲತೆ ಮತ್ತು ಮೌಲ್ಯವರ್ಧನೆಗೆ ಬಾಗಿಲುಗಳನ್ನು ತೆರೆಯಿತು. ಈ ಕ್ರಮದ ಪ್ರಾಮುಖ್ಯತೆಯು ಈಗ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ, ಅಲ್ಲಿ ಬಿದಿರು ಉದ್ಯೋಗ, ವ್ಯವಹಾರ ಮತ್ತು ನಾವೀನ್ಯತೆಯನ್ನು ಮುನ್ನಡೆಸುತ್ತಿದೆ.

ಗ್ಯಾಂಗ್ಟಾಕ್ (ಸಿಕ್ಕಿಂ) ಸಮೀಪವಿರುವ ಫ್ಯಾಷನ್ ಡಿಸೈನರ್ ಮತ್ತು ಸುಸ್ಥಿರ ನಾವೀನ್ಯತೆ ಉದ್ಯಮಿ ಚಿಮಿ ಓಂಗ್ಮು ಭುಟಿಯಾ ಅವರ 'ಲಾಗ್‌ಸ್ಟಾಲ್ ಡಿಸೈನ್ ಸ್ಟುಡಿಯೋ' ಇದಕ್ಕೆ ಅಂತಹದೊಂದು ಉದಾಹರಣೆಯಾಗಿದೆ. ಮಹಿಳೆಯರ ನೇತೃತ್ವದ ಈ ಉತ್ಪಾದನಾ ಉದ್ಯಮವು ಬಿದಿರಿನ ಕರಕುಶಲ ವಸ್ತುಗಳು, ಅಗರ್ಬತ್ತಿಗಳು, ಪೀಠೋಪಕರಣಗಳು, ಒಳಾಂಗಣ ಅಲಂಕಾರಿಕ ವಸ್ತುಗಳು ಮುಂತಾದವುಗಳನ್ನು ತಯಾರಿಸುತ್ತದೆ. ಇಲ್ಲಿ ಬಿದಿರು ಸಾಂಪ್ರದಾಯಿಕ ಕಲೆಯ ಗಡಿಯನ್ನು ದಾಟಿ ಆಧುನಿಕ ವಿನ್ಯಾಸ ಮತ್ತು ಉದ್ಯಮವಾಗಿ ಬೆಳೆದಿದೆ. ಚಿಮಿ ಅವರ ಕಥೆಯು ಒಂದು ವ್ಯಾಪಕ ಚಳವಳಿಯ ಭಾಗವಾಗಿದೆ. ತ್ರಿಪುರಾದಲ್ಲಿ, ಬಿಜೋಯ್ ಸೂತ್ರಧಾರ್ ಅವರು ಬಿದಿರಿನ ಉತ್ಪನ್ನಗಳ ತಯಾರಿಕೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಂಡರು. ನಾಗಾಲ್ಯಾಂಡ್‌ನ ಡಿಮಾಪುರ ಸುತ್ತಮುತ್ತಲಿನ ಸ್ವಸಹಾಯ ಗುಂಪುಗಳು ಬಿದಿರು ಆಧಾರಿತ ಆಹಾರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುತ್ತಿವೆ, ಜೊತೆಗೆ 'ಖೋರೋಲೋ ಕ್ರಿಯೇಟಿವ್ ಕ್ರಾಫ್ಟ್ಸ್' ನಂತಹ ಸ್ಥಳೀಯ ಉದ್ಯಮಗಳು ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳನ್ನು ಉತ್ಪಾದಿಸುತ್ತಿವೆ. ಇದೇ ವೇಳೆ, ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ, ತಂಡಗಳು ಬಿದಿರಿನ ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಮತ್ತು ಪಾಲಿ-ಹೌಸ್ ನಿರ್ವಹಣೆಯ ಮೂಲಕ ವೈಜ್ಞಾನಿಕ ಬೇಸಾಯವನ್ನು ಮುನ್ನಡೆಸುತ್ತಿವೆ. ಈ ಉದಾಹರಣೆಗಳು ಬಿದಿರು ವಲಯವು ಇನ್ನಷ್ಟು ವೈವಿಧ್ಯಮಯ, ನಾವೀನ್ಯ ಪೂರ್ಣ ಮತ್ತು ಮೌಲ್ಯ ಆಧಾರಿತವಾಗುತ್ತಿರುವುದನ್ನು ಬೆಟ್ಟು ಮಾಡಿ ತೋರಿಸುತ್ತವೆ.

ಈ ಪ್ರಮಾಣದ ಬದಲಾವಣೆಗೆ ಕೇವಲ ಕೌಶಲ್ಯಯುತ ಕೈಗಳಿಗಿಂತ ಹೆಚ್ಚಿನದ್ದು ಅಗತ್ಯವಿದೆ. ಇದಕ್ಕೆ ತಂತ್ರಜ್ಞಾನ, ಸಂಸ್ಕರಣಾ ಸೌಲಭ್ಯಗಳು, ತರಬೇತಿ ಮತ್ತು ಬಲವಾದ ಮಾರುಕಟ್ಟೆ ಸಂಪರ್ಕಗಳ ಅಗತ್ಯವಿದೆ. ಇಲ್ಲಿಯೇ ಸರ್ಕಾರದ ಬೆಂಬಲವು ಪ್ರಮುಖವಾಗುತ್ತದೆ. ರಾಷ್ಟ್ರೀಯ ಬಿದಿರು ಮಿಷನ್ ಬಿದಿರು ಬೆಳೆಗಾರರು, ತಯಾರಕರು ಮತ್ತು ಮಾರಾಟಗಾರರಿಗೆ ಕೃಷಿ, ಸಂಸ್ಕರಣೆ ಮತ್ತು ಮಾರುಕಟ್ಟೆ ಪ್ರವೇಶದ ಮೇಲೆ ಗಮನ ಹರಿಸುತ್ತದೆ. ಇದು ಗುಣಮಟ್ಟದ ಸಸಿಗಳ ಉತ್ಪಾದನೆಗಾಗಿ ನರ್ಸರಿಗಳಿಗೂ ಬೆಂಬಲ ನೀಡುತ್ತದೆ. ಫಾರಂ ಮಟ್ಟದಲ್ಲಿ ಈ ಸರ್ಕಾರಿ ಯೋಜನೆಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಪರಿಶೀಲಿಸಿ. ಮಧ್ಯಪ್ರದೇಶದ ವಿಜಯ್ ಪಾಟಿದಾರ್ ಅವರು 2019 ರಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಸತತ ನಷ್ಟ ಅನುಭವಿಸಿದ ನಂತರ ಬಿದಿರಿನ ಕೃಷಿಯತ್ತ ಮುಖ ಮಾಡಿದರು. ಅವರು ಬಿದಿರು ಮಿಷನ್‌ನ ಬೆಂಬಲದೊಂದಿಗೆ ಸುಮಾರು 4,000 ಬಿದಿರಿನ ಸಸಿಗಳನ್ನು ನೆಟ್ಟರು. ಎರಡು ವರ್ಷಗಳ ಒಳಗೆ, ಅವರು ಬಿದಿರಿನ ಕೋಲುಗಳನ್ನು ಮಾರಾಟ ಮಾಡುವ ಮೂಲಕ ಸರಿಸುಮಾರು ₹75,000 ಗಳಿಸಿದರು. ಬಿದಿರು ಅವರಿಗೆ ಮೆಣಸಿನಕಾಯಿ, ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ), ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಮಧ್ಯಂತರ ಬೆಳೆಯಾಗಿ (ಅಂತರಬೆಳೆ) ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಅವರ ಅನುಭವವು ಬಿದಿರು ಹೇಗೆ ಬೆಳೆಯಾಗಿಯೂ ಮತ್ತು ದೀರ್ಘಕಾಲೀನ ಜೀವನೋಪಾಯದ ಆಸ್ತಿಯಾಗಿಯೂ ಬದಲಾಗಬಹುದು ಎಂಬುದನ್ನು ತೋರಿಸುತ್ತದೆ.

ಮತ್ತಷ್ಟು, ಈಶಾನ್ಯ ತಂತ್ರಜ್ಞಾನ ಅನ್ವಯ ಮತ್ತು ವ್ಯಾಪ್ತಿ ಕೇಂದ್ರ ಹಲವಾರು ವಾಣಿಜ್ಯ ಅನ್ವಯಿಕೆಗಳಾದ್ಯಂತ ಬಿದಿರಿನ ತಂತ್ರಜ್ಞಾನಗಳಿಗೆ ಬೆಂಬಲ ನೀಡಿದೆ. ಇವುಗಳಲ್ಲಿ ಆಹಾರ ಮತ್ತು ಕೃಷಿ-ಸಂಸ್ಕರಣೆ, ನಿರ್ಮಾಣ ಸಾಮಗ್ರಿಗಳು, ಉತ್ಪಾದನಾ ಯಂತ್ರೋಪಕರಣಗಳು, ನವೀಕರಿಸಬಹುದಾದ ಇಂಧನ, ಕೈಗಾರಿಕಾ ಉತ್ಪನ್ನಗಳು ಇತ್ಯಾದಿಗಳು ಸೇರಿವೆ. ಈ ಮಧ್ಯಸ್ಥಿಕೆಗಳು ವರ್ಷಕ್ಕೆ ಸುಮಾರು 30 ಮಿಲಿಯನ್ (3 ಕೋಟಿ) ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಿವೆ. ಇವು ಬಿದಿರಿನ ಸರಕುಗಳ ಮೌಲ್ಯವರ್ಧನೆಯನ್ನು ಶೇಕಡಾ 10 ರಿಂದ ಶೇಕಡಾ 70 ರಷ್ಟು ಹೆಚ್ಚಿಸಿವೆ.
ಉದಾಹರಣೆಗೆ, ಎಂಜಿನಿಯರ್ಡ್ ಬಿದಿರು ನಿರ್ಮಾಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ. ಎಂಜಿನಿಯರ್ಡ್ ಬಿದಿರು ಎಂಬುದು ಹಸಿ ಬಿದಿರಿನ ನಾರುಗಳು, ಪಟ್ಟಿಗಳು ಅಥವಾ ಕಣಗಳನ್ನು ಒಟ್ಟಿಗೆ ಬಂಧಿಸಿ ಮತ್ತು ಒತ್ತಿ ತಯಾರಿಸಲಾಗುವ ಒಂದು ಸಂಯೋಜಿತ ವಸ್ತುವಾಗಿದೆ. ಹೊಸ ವಿನ್ಯಾಸಗಳು ಮತ್ತು ಎಂಜಿನಿಯರ್ಡ್ ಬಿದಿರಿನಿಂದ ತಯಾರಿಸಿದ ಪೀಠೋಪಕರಣಗಳು ಜನಪ್ರಿಯತೆಯನ್ನು ಗಳಿಸುತ್ತಿವೆ ಹಾಗೂ ವಾಸ್ತುಶಿಲ್ಪಿಗಳು, ವಿನ್ಯಾಸಕರು ಮತ್ತು ಒಳಾಂಗಣ ಅಲಂಕಾರಿಕರ ಗಮನ ಸೆಳೆಯುತ್ತಿವೆ. ಪರಿಣಾಮವಾಗಿ, ವಿಪತ್ತು ಪರಿಹಾರ ಮತ್ತು ಪುನರ್ವಸತಿಗಾಗಿ 42 ಲಕ್ಷಕ್ಕೂ ಹೆಚ್ಚು ಚದರ ಅಡಿಗಳಷ್ಟು ಎಂಜಿನಿಯರ್ಡ್ ಬಿದಿರಿನ ರಚನೆಗಳನ್ನು ನಿರ್ಮಿಸಲಾಗಿದೆ. ಛತ್ತೀಸ್‌ಗಡದಲ್ಲಿ, ಎಂಜಿನಿಯರ್ಡ್ ಬಿದಿರಿನಿಂದ 576 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಸುಮಾರು 20,000 ಮಕ್ಕಳಿಗೆ ವಸತಿ ಒದಗಿಸಲಾಗಿದೆ. ಒಮ್ಮೆ ಕೇವಲ ಸಾಂಪ್ರದಾಯಿಕ ಕೈಗಾರಿಕಾ ಸಾಮಗ್ರಿಗಳೊಂದಿಗೆ ಮಾತ್ರ ಗುರುತಿಸಲ್ಪಟ್ಟಿದ್ದ ನಿರ್ಮಾಣ ಅನ್ವಯಿಕೆಗಳಿಗೆ ಬಿದಿರು ಹೇಗೆ ಕಾಲಿಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
ಬಿದಿರಿನ ಮೌಲ್ಯವರ್ಧನೆಯ ಸರಣಿಯು ಉತ್ಪನ್ನದ ವೈವಿಧ್ಯೀಕರಣವನ್ನು ಮೀರಿ ಬೆಳೆಯುತ್ತಿದೆ. ಈ ಹೊಸ ಮೌಲ್ಯವರ್ಧನೆಯ ಸರಣಿಯಲ್ಲಿ ಮಹಿಳಾ ಗುಂಪುಗಳು ಪ್ರಮುಖ ಪಾಲುದಾರರಾಗುತ್ತಿದ್ದಾರೆ. ಮಹಿಳಾ ಜೀವನೋಪಾಯದ ಇಂತಹದೊಂದು ಕಥೆಯು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 'ಗಡ್ಚಿರೋಲಿ ಅಗರ್ಬತ್ತಿ ಪ್ರಾಜೆಕ್ಟ್' ಹೆಸರಿನ ಬಿದಿರು ಆಧಾರಿತ ಅಗರ್ಬತ್ತಿ ಉಪಕ್ರಮವು 2012 ರಲ್ಲಿ ಜಿಲ್ಲೆಯಾದ್ಯಂತ ಉತ್ಪಾದನಾ ಕೇಂದ್ರಗಳನ್ನು ಪ್ರಾರಂಭಿಸಿತು. 2020 ರ ವೇಳೆಗೆ, ಅವರು ಸುಮಾರು 1,100 ಜನರಿಗೆ ಉದ್ಯೋಗ ನೀಡುವ 32 ಕೇಂದ್ರಗಳನ್ನು ಹೊಂದಿದ್ದರು ಮತ್ತು ಈ ಕಾರ್ಮಿಕರಲ್ಲಿ ಶೇಕಡಾ 90 ರಷ್ಟು ಜನರು ಮಹಿಳೆಯರಾಗಿದ್ದರು. ಪ್ರತಿಯೊಬ್ಬ ಮಹಿಳೆಯ ಮಾಸಿಕ ಆದಾಯವು ಸುಮಾರು ₹5,000 ತಲುಪಿತು. ಉದ್ಯೋಗವು ವರ್ಷಕ್ಕೆ ಸರಿಸುಮಾರು 45-60 ದಿನಗಳಿಂದ 225 ಕ್ಕೂ ಹೆಚ್ಚು ದಿನಗಳಿಗೆ ಹೆಚ್ಚಾಯಿತು. ಕೆಲಸವು ಮನೆಗೆ ಹತ್ತಿರವಾಯಿತು ಮತ್ತು ದೈಹಿಕವಾಗಿ ಕಡಿಮೆ ಶ್ರಮದಾಯಕವಾಯಿತು. ಮಹಿಳೆಯರು ಹೊಸ ಕೌಶಲ್ಯಗಳು, ಆತ್ಮವಿಶ್ವಾಸ ಮತ್ತು ನಾಯಕತ್ವದ ಅವಕಾಶಗಳನ್ನು ಪಡೆದರು. ಈ ಉಪಕ್ರಮವು ವರಮಾನದ ಮೂಲವಾಗಿ ಅರಣ್ಯಗಳ ಮೇಲಿನ ಅವಲಂಬನೆಯನ್ನು ಸಹ ಕಡಿಮೆ ಮಾಡಿತು.

ತರಬೇತಿ ಮತ್ತು ಸಾಮರ್ಥ್ಯ ವರ್ಧನೆಗಾಗಿ ಸರ್ಕಾರವು ನಡೆಸುತ್ತಿರುವ ನಿರಂತರ ಪ್ರಯತ್ನಗಳಿಂದಾಗಿ ಇಂತಹ ಕಥೆಗಳು ಸಾಧ್ಯವಾಗಿವೆ. ಸಿಎಸ್‍ಐಆರ್-ರಾಷ್ಟ್ರೀಯ ಪಾರಿಸಾರಿಕ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ನಾಗ್ಪುರ, ಇತ್ತೀಚೆಗೆ ಜೂನ್ 2026 ರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗಾಗಿ ಬಿದಿರಿನ ಕರಕುಶಲ ವಸ್ತುಗಳ ಕುರಿತು ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ತರಬೇತಿ ಕಾರ್ಯಕ್ರಮದ ಮುಖ್ಯ ವಿಷಯ "ಫ್ಲೈ ಆಶ್ (ಬೂದಿ) ತ್ಯಾಜ್ಯದ ಸ್ಥಳಗಳಲ್ಲಿ ಬೆಳೆದ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳ ಸಬಲೀಕರಣ" ಎಂಬುದಾಗಿತ್ತು. ಈ ತರಬೇತಿಯು ಬಿದಿರಿನ ಕಟಾವು, ಸಂಸ್ಕರಣೆ, ಕರಕುಶಲ ಉತ್ಪಾದನೆ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ, ಉದ್ಯಮಶೀಲತೆ, ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ಉತ್ಪನ್ನ ವಿನ್ಯಾಸದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ನೀಡಿತು. ಮರುಪೂರಣಗೊಂಡ ಫ್ಲೈ ಆಶ್ ತ್ಯಾಜ್ಯ ಸ್ಥಳಗಳನ್ನು ಉತ್ಪಾದಕ ಭೂಮಿಯನ್ನಾಗಿ ಹೇಗೆ ಪರಿವರ್ತಿಸಬಹುದು ಮತ್ತು ಸ್ಥಳೀಯ ಸಮುದಾಯಗಳಿಗೆ ಪರಿಸರ ಹಾಗೂ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಹೇಗೆ ತರಬಹುದು ಎಂಬುದನ್ನು ಈ ಉಪಕ್ರಮವು ತೋರಿಸಿಕೊಟ್ಟಿತು.
ಬಿದಿರಿನ ಕಥೆಯು ಈಗ ಜನರು, ಸಾಧ್ಯತೆಗಳು ಮತ್ತು ಬದಲಾವಣೆಯ ಕಥೆಯಾಗುತ್ತಿದೆ. ಭಾರತದಾದ್ಯಂತ, ಬಿದಿರು ಜೀವನೋಪಾಯಗಳು, ಉದ್ಯಮಗಳು ಮತ್ತು ಸುಸ್ಥಿರ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ, ಭಾರತದಲ್ಲಿ ಬಿದಿರಿನ ಕಥೆಯು ಇನ್ಮುಂದೆ ಕೇವಲ ಬಿದಿರು ಏನಾಗಬಹುದು ಎಂಬುದರ ಬಗ್ಗೆ ಮಾತ್ರ ಉಳಿದಿಲ್ಲ. ಸಾಂಪ್ರದಾಯಿಕ ಸಂಪನ್ಮೂಲವೊಂದು ತಂತ್ರಜ್ಞಾನ, ಉದ್ಯಮ ಮತ್ತು ಅವಕಾಶಗಳೊಂದಿಗೆ ಜೋಡಣೆಗೊಂಡಾಗ ಸಮುದಾಯಗಳು ಹೇಗೆ ಬದಲಾಗಬಹುದು ಎಂಬುದರ ಕುರಿತಾಗಿದೆ.
References
Ministry of Agriculture & Farmers Welfare
https://nbm.da.gov.in/Success-Stories
Prime Minister’s Office
https://www.pib.gov.in/PressReleasePage.aspx?PRID=2255656&lang=2®=48
Ministry of Information & Broadcasting
https://www.pib.gov.in/PressReleasePage.aspx?PRID=2255645®=48&lang=2
Ministry of Science & Technology
https://dst.gov.in/development-bamboo-based-technology-value-added-products-improving-life-and-livelihood-ne
https://www.pib.gov.in/PressReleasePage.aspx?PRID=2273722&lang=1®=1
PIB Backgrounders
https://www.pib.gov.in/FeaturesDeatils.aspx?ModuleId=2&NoteId=157507&lang=1®=6
https://www.pib.gov.in/PressNoteDetails.aspx?NoteId=155112&ModuleId=3®=48&lang=2
Click here to see pdf
*****
(Features ID: 159992)
आगंतुक पटल : 16
Provide suggestions / comments