• Sitemap
  • Advance Search
Infrastructure

ಜಲ ಸಂಚಯ್ ಜನ ಭಾಗಿದಾರಿ: ಸ್ಥಳೀಯ ಕ್ರಿಯೆಯಿಂದ ಜಲ ಭದ್ರತೆಯತ್ತ

Posted On: 03 SEP 2026 3:14PM

ಶತಮಾನಗಳಿಂದಲೂ, ಭಾರತದಾದ್ಯಂತ ಸಮುದಾಯಗಳು ತಮ್ಮ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ನೀರನ್ನು ಸಂಗ್ರಹಿಸುವ, ಶೇಖರಿಸುವ ಮತ್ತು ಹಂಚಿಕೊಳ್ಳುವ ಮಾರ್ಗಗಳನ್ನು ಅಭಿವೃದ್ಧಿಪಡಿಸಿಕೊಂಡು ಬಂದಿದ್ದವು. ಕಲ್ಯಾಣಿಗಳು, ಕೆರೆಗಳು, ಕೊಳಗಳು, ಜೋಹಾಡ್‌ಗಳು ಮತ್ತು ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಗಳು ಒಂದು ಸರಳ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತಿದ್ದವು: ಜಲ ಭದ್ರತೆ ಎಂಬುದು ಪ್ರತಿಯೊಬ್ಬರ ಹಂಚಿಕೆಯ ಜವಾಬ್ದಾರಿಯಾಗಿತ್ತು.

ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ಕೃಷಿ ಮತ್ತು ವೇಗದ ನಗರೀಕರಣವು ಜಲ ನಿರ್ವಹಣೆಯನ್ನು ಸಂಕೀರ್ಣಗೊಳಿಸಿವೆ. ಹೊಸ ತಂತ್ರಜ್ಞಾನಗಳು, ಮೂಲಸೌಕರ್ಯ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು ಅತ್ಯಗತ್ಯವಾಗಿವೆ. ಆದಾಗ್ಯೂ, ಸುಸ್ಥಿರ ಜಲ ನಿರ್ವಹಣೆಗೆ ಸಮುದಾಯದ ಭಾಗವಹಿಸುವಿಕೆ ಇಂದಿಗೂ ಪ್ರಮುಖವಾಗಿದೆ.

ಸಾಮೂಹಿಕ ಕಾರ್ಯಗಳ ಈ ಪರಂಪರೆಯು 'ಜಲ ಸಂಚಯ್ ಜನ ಭಾಗಿದಾರಿ' (ಜೆಎಸ್‌ಬಿಎಸ್‌) ಉಪಕ್ರಮದಲ್ಲಿ ಹೊಸ ರೂಪವನ್ನು ಪಡೆದುಕೊಂಡಿದೆ. 6 ಸೆಪ್ಟೆಂಬರ್ 2024 ರಂದು ಪ್ರಾರಂಭಿಸಲಾದ ಈ ಉಪಕ್ರಮವು ಸಮುದಾಯದ ಸಹಭಾಗಿತ್ವ ಮತ್ತು ಮಾಲೀಕತ್ವವನ್ನು ಜಲ ಸಂರಕ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡಿದೆ. ಈ ಉಪಕ್ರಮವು ಕಡಿಮೆ ವೆಚ್ಚದ ಅಂತರ್ಜಲ ಮರುಪೂರಣ ಮತ್ತು ನೀರು ಸಂಗ್ರಹಣಾ ರಚನೆಗಳ ನಿರ್ಮಾಣ ಹಾಗೂ ನಿಷ್ಕ್ರಿಯಗೊಂಡ ಬೋರ್‌ವೆಲ್‌ಗಳ ಪುನಶ್ಚೇತನದ ಮೇಲೆ ಗಮನ ಹರಿಸುತ್ತದೆ. ಇದು 'ಸಮಗ್ರ ಸರ್ಕಾರ' ಮತ್ತು 'ಸಮಗ್ರ ಸಮಾಜ' ವಿಧಾನದ ಮೂಲಕ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ, ಸ್ಥಳೀಯವಾಗಿ ಸೂಕ್ತವಾದ ಪರಿಹಾರಗಳನ್ನು ಉತ್ತೇಜಿಸುತ್ತದೆ. ಜೆಎಸ್‌ಬಿಎಸ್‌ ಅನ್ನು 3Cs — ಸಮುದಾಯ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮತ್ತು ವೆಚ್ಚ ತತ್ವಗಳು ಮುನ್ನಡೆಸುತ್ತವೆ.

ಈ ವಿಧಾನದ ಆಧಾರದ ಮೇಲೆ, ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ಮೇ 2025 ರ ವೇಳೆಗೆ ಜೆಎಸ್‌ಬಿಎಸ್‌ 1.0 ಅಡಿಯಲ್ಲಿ ದೇಶಾದ್ಯಂತ 27 ಲಕ್ಷಕ್ಕೂ ಹೆಚ್ಚು ರಚನೆಗಳನ್ನು ನಿರ್ಮಿಸಲಾಯಿತು. ಮುಂದುವರಿದು, ಜೂನ್ 2025 ರಲ್ಲಿ ಪ್ರಾರಂಭಿಸಲಾದ ಜೆಎಸ್‌ಬಿಎಸ್‌ 2.0 ಅಡಿಯಲ್ಲಿ, ಮೇ 2026 ರ ವೇಳೆಗೆ 1.5 ಕೋಟಿಗೂ ಹೆಚ್ಚು ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲಾಯಿತು. ಜೂನ್ 2026 ರಲ್ಲಿ, ಜಲ ಸಂಚಯ್ ಜನ ಭಾಗಿದಾರಿ (ಜೆಎಸ್‌ಬಿಎಸ್‌) ಉಪಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಯಿತು. ಜೆಎಸ್‌ಬಿಎಸ್‌ ಅನ್ನು 'ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್' ಆಂದೋಲನದೊಂದಿಗೆ ಒಗೂಡಿಸಿ 'ಜಲ ಸಂಚಯ್ ಜನ ಭಾಗಿದಾರಿ: ಕ್ಯಾಚ್ ದಿ ರೈನ್' (ಜೆಎಸ್‌ಬಿಎಸ್‌) ಎಂದು ಸಂಯೋಜಿಸಲಾಯಿತು. 3 ಸೆಪ್ಟೆಂಬರ್ 2026 ರ ಹೊತ್ತಿಗೆ, 1.58 ಕೋಟಿಗೂ ಹೆಚ್ಚು ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲಾಗಿದೆ.

ಜಲ ಸಂರಕ್ಷಣೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಗಮನ

ಕೇಂದ್ರ ಜಲ ಶಕ್ತಿ ಸಚಿವಾಲಯದ ಇಲಾಖಾ ಶೃಂಗಸಭೆಯು 1-2 ಸೆಪ್ಟೆಂಬರ್ 2026 ರಂದು ನವದೆಹಲಿಯಲ್ಲಿ ನಡೆಯಿತು. ಇದು ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಕೇಂದ್ರ-ರಾಜ್ಯಗಳ ನಡುವೆ ನಿಕಟ ಸಹಯೋಗವನ್ನು ಏರ್ಪಡಿಸುವ ಉದ್ದೇಶದಿಂದ ಆಯೋಜಿಸಲಾದ ಇಲಾಖಾ ಶೃಂಗಸಭೆಗಳ ಸರಣಿಯಲ್ಲಿ ಮೊದಲನೆಯದಾಗಿತ್ತು. 'ಜಲ ಸಂಚಯ್ ಜನ ಭಾಗಿದಾರಿ: ಕ್ಯಾಚ್ ದಿ ರೈನ್' ಉಪಕ್ರಮವು, ನೀರು ಮೂಲಸೌಕರ್ಯ ಯೋಜನೆಗಳು, ಕುಡಿಯುವ ನೀರು ಪೂರೈಕೆ ವ್ಯವಸ್ಥೆಗಳ ಮೂಲದ ಸುಸ್ಥಿರತೆ ಮತ್ತು ಜಲ ಜೀವನ್ ಮಿಷನ್ 2.0 ಅಡಿಯಲ್ಲಿನ ಗ್ರಾಮೀಣ ನೀರು ಸರಬರಾಜಿನೊಂದಿಗೆ ಈ ಶೃಂಗಸಭೆಯ ನಾಲ್ಕು ಪ್ರಮುಖ ವಿಷಯಾಧಾರಿತ ಸ್ತಂಭಗಳಲ್ಲಿ ಒಂದಾಗಿತ್ತು.

'ಜನ ಭಾಗಿದಾರಿ'ಗೆ (ಸಾರ್ವಜನಿಕ ಸಹಭಾಗಿತ್ವ) ಒತ್ತು ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು "ಜಲ ಉತ್ಸವ"ವನ್ನು ಉತ್ತೇಜಿಸಲು ಸಲಹೆ ನೀಡಿದರು. ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಲ ನಿರ್ವಹಣೆ ಮತ್ತು ಆಡಳಿತದ ಕುರಿತು ಜ್ಞಾನ ಹಾಗೂ ಸಾಮರ್ಥ್ಯವನ್ನು ಬಲಪಡಿಸಲು ಪ್ರಧಾನಮಂತ್ರಿಯವರು ಕರೆ ನೀಡಿದರು. ಯಶಸ್ವಿ ಉಪಕ್ರಮಗಳ ಪ್ರಾಯೋಗಿಕ ಕಲಿಕೆ ಮತ್ತು ಮರುಸೃಷ್ಟಿಯನ್ನು ಸುಗಮಗೊಳಿಸಲು ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತರನ್ನು ಒಳಗೊಂಡಂತೆ ರಾಜ್ಯಗಳ ನಡುವೆ ಯೋಜಿತ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲು ಅವರು ಸಲಹೆ ನೀಡಿದರು. ಜಲ ವಲಯದ ದತ್ತಾಂಶವನ್ನು ಒಂದೆಡೆ ತಂದು, ವ್ಯವಸ್ಥಿತವಾಗಿ ನಿರ್ವಹಿಸಿ, ವಿಶ್ಲೇಷಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಲವಾದ 'ಜಲ ದತ್ತಾಂಶ ಆಡಳಿತಕ್ಕೆ' ಅವರು ಕರೆ ನೀಡಿದರು.

ಈ ಶೃಂಗಸಭೆಯು ಜಲ ಆಡಳಿತದ ಪ್ರಮುಖ ಅಂಶಗಳ ಕುರಿತಾದ ಚರ್ಚೆಗಳನ್ನು ಒಂದೆಡೆ ತಂದಿದ್ದು, ಜಲ ಭದ್ರತೆಯ ಭಾರತ ಮತ್ತು 'ವಿಕಸಿತ ಭಾರತ 2047'ರ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಪ್ರಮುಖ ಹೆಜ್ಜೆಯನ್ನಿಟ್ಟಿದೆ.

1

ಛತ್ತೀಸ್‌ಗಢ: ರೈತರು ನೀರಿಗಾಗಿ ಜಾಗ ಮಾಡಿಕೊಟ್ಟಾಗ

ದೇಶಾದ್ಯಂತ ಈ ತತ್ವಗಳು ಸ್ಥಳೀಯ ಕ್ರಿಯೆಗಳಾಗಿ ರೂಪಾಂತರಗೊಳ್ಳುತ್ತಿದ್ದು, ಸಮುದಾಯಗಳು ಮತ್ತು ಸಂಸ್ಥೆಗಳು ತಮ್ಮ ಪ್ರಾದೇಶಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ.

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ, ರೈತರು ಜಲ ಸಂರಕ್ಷಣೆಗಾಗಿ ತಮ್ಮ ಕೃಷಿ ಭೂಮಿಯ ಒಂದು ಭಾಗವನ್ನು ನೀಡುವುದಕ್ಕೆ ಮುಂದಾಗಿದ್ದಾರೆ. 'ಆವಾ ಪಾನಿ ಝೋಕಿ' ಚಳವಳಿಯಡಿಯಲ್ಲಿ, ರೈತರು ಸ್ವಯಂಪ್ರೇರಿತರಾಗಿ ತಮ್ಮ ಶೇಕಡಾ 5 ರಷ್ಟು ಕೃಷಿ ಭೂಮಿಯನ್ನು ಮರುಪೂರಣ ಕೊಳಗಳು ಮತ್ತು ಹಂತಗಳ ಮಾದರಿಯ ಇಂಗು ಗುಂಡಿಗಳಿಗಾಗಿ ನೀಡಿದ್ದಾರೆ. ಸುಸ್ಥಿರ ಜಲ ನಿರ್ವಹಣೆಗೆ ಬೃಹತ್ ಪ್ರಮಾಣದ ಸ್ಥಳಾಂತರ ಅಥವಾ ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿಲ್ಲ, ಬದಲಿಗೆ ಸಾಮೂಹಿಕ ಇಚ್ಛಾಶಕ್ತಿ ಮುಖ್ಯ ಎಂಬುದನ್ನು ಈ ಮಾದರಿಯು ತೋರಿಸಿಕೊಡುತ್ತದೆ.

1,260 ಕ್ಕೂ ಹೆಚ್ಚು ರೈತರು ಈ ಮಾದರಿಯನ್ನು ಅಳವಡಿಸಿಕೊಂಡಿದ್ದು, ಜಿಲ್ಲೆಯಾದ್ಯಂತ 2,000 ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಅನೇಕ ಹಳ್ಳಿಗಳಲ್ಲಿ, ಅಂತರ್ಜಲ ಮಟ್ಟವು 3 ರಿಂದ 4 ಮೀಟರ್‌ಗಳಷ್ಟು ಏರಿಕೆಯಾಗಿದೆ, ಜೊತೆಗೆ 17 ಸುದೂರದ ಬುಡಕಟ್ಟು ಹಳ್ಳಿಗಳಲ್ಲಿ ಜಲಮೂಲಗಳು/ಬುಗ್ಗೆಗಳು ಪುನರುಜ್ಜೀವನಗೊಂಡಿವೆ. ಸೂಕ್ಷ್ಮ-ಜಲಾನಯನ ನಕ್ಷೆ ತಯಾರಿಕೆ, ಜಲ-ಭೂವಿಜ್ಞಾನದ ಮೌಲ್ಯಮಾಪನ ಮತ್ತು ತಾಂತ್ರಿಕ ಮಾರ್ಗದರ್ಶನದ ಮೂಲಕ ಸರ್ಕಾರವು ಈ ಪ್ರಯತ್ನಕ್ಕೆ ಬೆಂಬಲ ನೀಡಿದೆ. ಈ ಉಪಕ್ರಮದಲ್ಲಿ ರೈತರ ಮಾಲೀಕತ್ವವೇ ಪ್ರಮುಖ ತಡಿಪಾಯವಾಗಿ ಉಳಿದುಕೊಂಡಿದೆ.

Water, Earth, AirAI-generated content may be incorrect.

ಕೊರಿಯಾ ಜಿಲ್ಲೆ, ಛತ್ತೀಸ್‌ಗಢ

 

ಆಂಧ್ರಪ್ರದೇಶ: ತಮ್ಮ ಜಲ ಸಂಪನ್ಮೂಲದ ಸಂಪೂರ್ಣ ಹೊಣೆ ಹೊತ್ತ ಗ್ರಾಮಗಳು

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮುರುಗಮ್ಮಿ, ಮರೆಲ್ಲಾ ಮತ್ತು ತಂಗೇಲ್ಲಾದಂತಹ ಗ್ರಾಮಗಳು ಒಂದಾನೊಂದು ಕಾಲದಲ್ಲಿ ಅನಿಯಮಿತ ಮಳೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಬೋರ್‌ವೆಲ್‌ಗಳ ವಿಫಲತೆಯ ಸವಾಲುಗಳನ್ನು ಎದುರಿಸುತ್ತಿದ್ದವು. ಈ ಸಮಸ್ಯೆಗಳು ಕೃಷಿ ಮತ್ತು ಜನರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದ್ದವು.

ಜೆಎಸ್‌ಬಿಎಸ್‌ ಉಪಕ್ರಮದಡಿಯಲ್ಲಿ, ಸ್ಥಳೀಯ ಹಂತದಲ್ಲೇ ಇದಕ್ಕೆ ಪರಿಹಾರ ರೂಪಿಸಲು ಚಾಲನೆ ನೀಡಲಾಯಿತು. ಜಾಗೃತಿ ಮೂಡಿಸಲು ಗ್ರಾಮ ಸಭೆಗಳು, ಮನೆಮನೆ ಪ್ರಚಾರ, ಕಲಾಜಾಥಾ (ಸಾಂಪ್ರದಾಯಿಕ ಜಾನಪದ ನಾಟಕ ಪ್ರದರ್ಶನಗಳು) ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಯಿತು. ಈ ಪ್ರಯತ್ನಗಳು ನೀರು ಆಯವ್ಯಯ, ಬೆಳೆ ಯೋಜನೆ ಮತ್ತು ಅಂತರ್ಜಲ ಹಂಚಿಕೆಯಂತಹ ಕ್ರಮಗಳನ್ನು ಯೋಜಿಸಲು ರೈತರು, ಮಹಿಳೆಯರು, ಯುವಕರು ಮತ್ತು ಸ್ಥಳೀಯ ಸಂಸ್ಥೆಗಳನ್ನು ಒಂದೆಡೆ ತಂದವು.

The image shows a large, colorful tent decorated with vibrant patterns, surrounded by a crowd of people gathered around a series of neatly stacked, red bricks.AI-generated content may be incorrect.

ಪ್ರಕಾಶಂ ಜಿಲ್ಲೆ, ಆಂಧ್ರಪ್ರದೇಶ

'ಶಿಖರದಿಂದ ಕಣಿವೆಯತ್ತ' ವಿಧಾನವನ್ನು ಅಳವಡಿಸಿಕೊಂಡು, ಈ ಗ್ರಾಮಗಳು ಮಳೆನೀರನ್ನು ಹಿಡಿದಿಟ್ಟುಕೊಳ್ಳಲು, ಸಂಗ್ರಹಿಸಲು ಮತ್ತು ಮರುಪೂರಣಗೊಳಿಸಲು ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸಿದವು. 'ರಿಡ್ಜ್-ಟು-ವ್ಯಾಲಿ' ವಿಧಾನವು ಎತ್ತರದ ಶಿಖರ ಪ್ರದೇಶಗಳಿಂದ ಕಣಿವೆಯತ್ತ ಹರಿಯುವ ಮಳೆನೀರನ್ನು ನಿರ್ವಹಿಸುವುದನ್ನು ಒಳಗೊಂಡಿದ್ದು, ತಳಭಾಗದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಬಲಪಡಿಸುತ್ತದೆ.

ಮುರುಗಮ್ಮಿ: 71 ಜಲ ಸಂರಕ್ಷಣಾ ರಚನೆಗಳು ಒಟ್ಟು ಸುಮಾರು 8.11 ಲಕ್ಷ ಘನ ಮೀಟರ್ ಸಂಗ್ರಹಣಾ ಸಾಮರ್ಥ್ಯವನ್ನು ಒದಗಿಸಿವೆ. ಇವು 264.5 ಹೆಕ್ಟೇರ್ ಕೃಷಿ ಭೂಮಿಗೆ ರಕ್ಷಣಾತ್ಮಕ ನೀರಾವರಿ ಬೆಂಬಲವನ್ನು ನೀಡುತ್ತವೆ.

ಮರೆಲ್ಲಾ: ಸುಮಾರು 10.04 ಲಕ್ಷ ಘನ ಮೀಟರ್ ಒಟ್ಟು ಸಂಗ್ರಹಣಾ ಸಾಮರ್ಥ್ಯದ 53 ರಚನೆಗಳನ್ನು ಹೊಂದಿತ್ತು. ಇದರ ಜೊತೆಗೆ, ಸಮುದಾಯದ ಕೊಳಗಳು ಮತ್ತು ಕೆರೆಗಳ ನವೀಕರಣವು ಸುಮಾರು 5.95 ಲಕ್ಷ ಘನ ಮೀಟರ್ ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿತು.

ತಂಗೇಲ್ಲಾ: ಸುಮಾರು 5.89 ಲಕ್ಷ ಘನ ಮೀಟರ್ ಒಟ್ಟು ಸಂಗ್ರಹಣಾ ಸಾಮರ್ಥ್ಯದ 71 ರಚನೆಗಳನ್ನು ಹೊಂದಿತ್ತು. ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನವು ಸಂಗ್ರಹಣಾ ಸಾಮರ್ಥ್ಯವನ್ನು ಮತ್ತಷ್ಟು ಸುಮಾರು 3.98 ಲಕ್ಷ ಘನ ಮೀಟರ್‌ಗಳಷ್ಟು ಹೆಚ್ಚಿಸಿತು.

ಒಟ್ಟಾರೆಯಾಗಿ, ಈ ಪ್ರಯತ್ನಗಳು ಸುಮಾರು 5,900 ಜನರಿಗೆ ಅಂತರ್ಜಲದ ಲಭ್ಯತೆಯನ್ನು ಸುಧಾರಿಸಿದ್ದು, ಕೃಷಿ ಮತ್ತು ಹೈನುಗಾರಿಕೆ ಆಧಾರಿತ ಜೀವನೋಪಾಯವನ್ನು ಬಲಪಡಿಸಿವೆ, ಮಣ್ಣಿನ ತೇವಾಂಶವನ್ನು ಮರುಸ್ಥಾಪಿಸಿವೆ ಮತ್ತು ಬಲವಂತದ ವಲಸೆಯನ್ನು ಕಡಿಮೆ ಮಾಡಲು ನೆರವಾಗಿವೆ.

The image depicts a series of aerial views showing an abandoned, partially developed land with an open pit, surrounded by natural vegetation and distant rural scenery.AI-generated content may be incorrect.

ಪ್ರಕಾಶಂ ಜಿಲ್ಲೆ, ಆಂಧ್ರಪ್ರದೇಶ

 

ಒಡಿಶಾ: ಮೇಲ್ಛಾವಣಿ ಮತ್ತು ಕೊಳಗಳಿಂದ ಜಲಧರಗಳತ್ತ

ಒಡಿಶಾದಲ್ಲಿ, ಜೆಎಸ್‌ಬಿಎಸ್‌ ಉಪಕ್ರಮವು ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಛೇರಿಗಳು ಮತ್ತು ಇತರ ಸಂಸ್ಥೆಗಳನ್ನು ಒಂದೆಡೆ ತರುತ್ತದೆ. ಈ ಸಂಸ್ಥೆಗಳು ಮಳೆಬೀಳುವ ಸ್ಥಳದಲ್ಲೇ ಮಳೆನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ಜಲಧರಗಳಿಗೆ ನೀರು ಮರುಪೂರಣಗೊಳ್ಳುವುದನ್ನು ಸುಗಮಗೊಳಿಸುತ್ತಿವೆ. 'ಛಾತಾ' ಯೋಜನೆಯ ಮೂಲಕ ಮೇಲ್ಛಾವಣಿಗಳಿಂದ ಮಳೆನೀರನ್ನು ಹಿಡಿದಿಟ್ಟುಕೊಳ್ಳಲಾಗುತ್ತಿದ್ದರೆ, 'ಅರುಣಾ' ಯೋಜನೆಯು ಜಲಮೂಲಗಳಿಂದ ಭೂಗರ್ಭದ ಜಲಧರಗಳಿಗೆ ನೀರು ಮರುಪೂರಣಗೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ, ಈ ಯೋಜನಾತ್ಮಕ ಕ್ರಮಗಳು ಅಂತರ್ಜಲ ಸಂರಕ್ಷಣೆ ಮತ್ತು ಜಲ ಭದ್ರತೆಯನ್ನು ಬಲಪಡಿಸಲು ಸಾರ್ವಜನಿಕ ಮೂಲಸೌಕರ್ಯ, ಸ್ಥಳೀಯ ಜಲಮೂಲಗಳು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಸಂಯೋಜಿಸುತ್ತವೆ.

ಜಾಜ್‌ಪುರ ಜಿಲ್ಲೆ:

2022-23 ಮತ್ತು 2025-26 ರ ನಡುವೆ 'ಅರುಣಾ' ಯೋಜನೆಯಡಿಯಲ್ಲಿ 117 ಮರುಪೂರಣ ಕೊಳವೆಗಳನ್ನು ನಿರ್ಮಿಸಲಾಗಿದೆ ಮತ್ತು 'ಛಾತಾ' ಯೋಜನೆಯಡಿಯಲ್ಲಿ 114 ಮೇಲ್ಛಾವಣಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಶೈಕ್ಷಣಿಕ ಆವರಣಗಳಲ್ಲಿನ ಈ ಅಭಿವೃದ್ಧಿ ಕಾರ್ಯಗಳು ಕೊರೆ, ಬಿಂಜಾರ್‌ಪುರ, ಬರಿ, ರಸುಲ್‌ಪುರ, ದಶರಥಪುರ ಮತ್ತು ಜಾಜ್‌ಪುರ ಸೇರಿದಂತೆ ಹೆಚ್ಚಿನ ಆದ್ಯತೆಯ ತಾಲೂಕುಗಳನ್ನು ಒಳಗೊಂಡಿವೆ. ಈ ಪ್ರಯತ್ನವು ಹೆಚ್ಚು ಸ್ಥಿರವಾದ ನೀರು ಪೂರೈಕೆ, ಬಲವಾದ ಕೃಷಿ ಸ್ಥಿತಿಸ್ಥಾಪಕತ್ವ ಮತ್ತು ಕುಟುಂಬಗಳು, ವಿಶೇಷವಾಗಿ ಮಹಿಳೆಯರು ನೀರು ತರಲು ವಿನಿಯೋಗಿಸುವ ಸಮಯವನ್ನು ಕಡಿಮೆ ಮಾಡಲು ಕೊಡುಗೆ ನೀಡಿದೆ.

ಈ ವಿಧಾನವು ಜಾಜ್‌ಪುರಕ್ಕೆ ಮಾತ್ರ ಸೀಮಿತವಾಗಿಲ್ಲ.

ಕಟಕ್ ಜಿಲ್ಲೆ: ಸರ್ಕಾರಿ ಕಛೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳಲ್ಲಿ 'ಛಾತಾ' ಯೋಜನೆಯಡಿಯಲ್ಲಿ 57 ಮೇಲ್ಛಾವಣಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಆಳವಾದ ಜಲಧರಗಳ ಮರುಪೂರಣವನ್ನು ಸುಗಮಗೊಳಿಸಲು 'ಅರುಣಾ' ಯೋಜನೆಯಡಿಯಲ್ಲಿ ಕೊಳಗಳು ಮತ್ತು ಜಲಮೂಲಗಳಲ್ಲಿ 35 ಮರುಪೂರಣ ಕೊಳವೆಗಳನ್ನು ನಿರ್ಮಿಸಲಾಗಿದೆ. ಸ್ವಸಹಾಯ ಸಂಘಗಳು, ವಿದ್ಯಾರ್ಥಿಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಒಳಗೊಂಡ ಬೀದಿ ನಾಟಕಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳ ಮೂಲಕ ಈ ಪ್ರಯತ್ನಗಳಿಗೆ ಬೆಂಬಲ ನೀಡಲಾಯಿತು.

ಗಂಜಾಂ ಜಿಲ್ಲೆ (ದಿಗಪಹಂಡಿ): 2020 ಮತ್ತು 2022ರ ನಡುವೆ ಅಂತರ್ಜಲ ಮಟ್ಟವು 1 ರಿಂದ 3 ಮೀಟರ್‌ಗಳಷ್ಟು ಕುಸಿದಿತ್ತು. ಸರ್ಕಾರಿ ಕಛೇರಿಗಳು ಮತ್ತು ಶಾಲೆಗಳಲ್ಲಿನ ಮೇಲ್ಛಾವಣಿ ಕೊಯ್ಲು ವ್ಯವಸ್ಥೆಗಳು ಮಳೆನೀರನ್ನು ಮರುಪೂರಣ ಬೋರ್‌ವೆಲ್‌ಗಳಿಗೆ ಹಾಯಿಸುತ್ತಿವೆ. ಮಳೆಗಾಲದ ನಂತರದ ಮೌಲ್ಯಮಾಪನಗಳು ಈ ಯೋಜನೆ ಜಾರಿಯಾದ ಸ್ಥಳಗಳ ಸುತ್ತಲೂ ಅಂತರ್ಜಲ ಮಟ್ಟದಲ್ಲಿ ಉತ್ತಮ ಸುಧಾರಣೆಯನ್ನು ತೋರಿಸಿವೆ.

Digapahandi, Ganjam District, Odisha

ದಿಗಪಹಂಡಿ, ಗಂಜಾಂ ಜಿಲ್ಲೆ, ಒಡಿಶಾ

 

ಜಲ ಭದ್ರತೆಗಾಗಿ ಬೆಳೆಯುತ್ತಿರುವ ಜನ ಚಳುವಳಿ

ಸರ್ಕಾರದ ಈ ವಿಧಾನವು ಕೇವಲ ಜಲ ಸಂರಕ್ಷಣೆಗಾಗಿ ರಚನೆಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಬದಲಿಗೆ ನೀರಿನ ಬಗ್ಗೆ ಜವಾಬ್ದಾರಿಯುತ ಸಂಸ್ಕೃತಿಯನ್ನು ಬೆಳೆಸುವುದಾಗಿದೆ. ಜೆಎಸ್‌ಬಿಎಸ್‌ ಉಪಕ್ರಮವು ಜಲ ನಿರ್ವಹಣೆಯ ಕೇಂದ್ರಬಿಂದುವಿನಲ್ಲಿ 'ಜನ ಭಾಗಿದಾರಿ'ಯನ್ನು (ಸಾರ್ವಜನಿಕ ಸಹಭಾಗಿತ್ವ) ಪ್ರತಿಷ್ಠಾಪಿಸುತ್ತದೆ. ಇದು ಸ್ಥಳೀಯವಾಗಿ ಸೂಕ್ತವಾದ ಪರಿಹಾರಗಳಿಗಾಗಿ ಸಮುದಾಯಗಳು, ಪಂಚಾಯತ್‌ಗಳು, ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ಒಗ್ಗೂಡಿಸುತ್ತದೆ. ಸಾಂಪ್ರದಾಯಿಕ ಜ್ಞಾನವನ್ನು ವೈಜ್ಞಾನಿಕ ಯೋಜನೆಯೊಂದಿಗೆ, ಸ್ಥಳೀಯ ಮಾಲೀಕತ್ವವನ್ನು ಸಾಂಸ್ಥಿಕ ಬೆಂಬಲದೊಂದಿಗೆ ಮತ್ತು ವೈಯಕ್ತಿಕ ಕಾರ್ಯವನ್ನು ಸಾಮೂಹಿಕ ಫಲಿತಾಂಶಗಳೊಂದಿಗೆ ಸಂಯೋಜಿಸುವುದರಲ್ಲಿ ಇದರ ಸುದೀರ್ಘ ಮಹತ್ವ ಅಡಗಿದೆ. ಸಂರಕ್ಷಿಸಲ್ಪಟ್ಟ ಪ್ರತಿಯೊಂದು ಹನಿಯೂ ಸಹ ಸ್ಥಿತಿಸ್ಥಾಪಕ ಸಮುದಾಯಗಳನ್ನು ನಿರ್ಮಿಸುವ ಮತ್ತು ಭಾರತದ ದೀರ್ಘಾವಧಿಯ ಜಲ ಭದ್ರತೆಯನ್ನು ಬಲಪಡಿಸುವ ಬೃಹತ್ ಪ್ರಯತ್ನದ ಭಾಗವಾಗಿದೆ.

References

Prime Minister’s Office

https://www.pib.gov.in/PressReleasePage.aspx?PRID=2052494&reg=3&lang=2#:~:text=To%20further%20the%20Prime%20Minister's,whole%2Dof%2Dgovernment%20approach&reg=3&lang=2

https://www.pib.gov.in/PressReleaseDetail.aspx?PRID=2306122&reg=48&lang=1

Ministry of Jal Shakti

https://www.pib.gov.in/PressReleasePage.aspx?PRID=2271660&lang=1&reg=48

https://www.pib.gov.in/PressReleasePage.aspx?PRID=2250425&reg=48&lang=2

https://jsjb.mowr.gov.in/

https://www.pib.gov.in/PressReleasePage.aspx?PRID=2235468&reg=48&lang=2

https://www.pib.gov.in/PressReleasePage.aspx?PRID=2292604&reg=48&lang=1

PIB Backgrounder

https://www.pib.gov.in/PressReleasePage.aspx?PRID=2286237&reg=22&lang=1

https://www.pib.gov.in/PressNoteDetails.aspx?ModuleId=3&NoteId=152136&reg=3&lang=2

 

Click to see pdf

 

*****

(Features ID: 159836) आगंतुक पटल : 15
Provide suggestions / comments
इस विज्ञप्ति को इन भाषाओं में पढ़ें: English , Urdu , Assamese