Social Welfare
ಪ್ರತಿ ಭಾರತೀಯನಿಗೂ ಕೈಗೆಟುಕುವ ದರದಲ್ಲಿ ಪೋಷಣೆ: ಜನ ಔಷಧಿ ನ್ಯೂಟ್ರಾಸ್ಯುಟಿಕಲ್ಸ್‌ಗಳು
Posted On:
30 JUL 2026 11:00AM
ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಿರುವ ಭಾರತದಲ್ಲಿ, ನ್ಯೂಟ್ರಾಸ್ಯುಟಿಕಲ್ಸ್‌ಗಳು (ಪೌಷ್ಟಿಕಾಂಶದ ಪೂರಕಗಳು) ಒಟ್ಟಾರೆ ಆರೋಗ್ಯದ ಅತ್ಯಗತ್ಯ ಭಾಗವಾಗಿ ಮಾನ್ಯತೆ ಪಡೆದಿವೆ. ಶಾಲಾ ಮಕ್ಕಳು ಅಥವಾ ಹಿರಿಯ ನಾಗರಿಕರಿರಲಿ, ಆಹಾರ ಪೂರಕಗಳು, ವಿಟಮಿನ್ ಹಾಗೂ ಖನಿಜಗಳನ್ನು ಒಳಗೊಂಡ ಗಿಡಮೂಲಿಕೆ ಉತ್ಪನ್ನಗಳು, ಮೂಲಿಕೆಗಳು ಮತ್ತು ಸಸ್ಯಗಳು, ಪ್ರೋಬಯಾಟಿಕ್‌ಗಳು ಇತ್ಯಾದಿಗಳು ವ್ಯಾಪಕ ಸ್ವೀಕೃತಿಯನ್ನು ಪಡೆದಿವೆ. ಆದರೂ, ಪೌಷ್ಟಿಕಾಂಶದ ಪೂರಕಗಳನ್ನು ಬಯಸುವ ಲಕ್ಷಾಂತರ ಕುಟುಂಬಗಳಿಗೆ ಅವುಗಳ ಬೆಲೆ ಕೈಗೆಟುಕದಿರುವುದು ಇನ್ನೂ ಒಂದು ಸವಾಲಾಗಿ ಉಳಿದಿದೆ. ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆ ತನ್ನ ನ್ಯೂಟ್ರಾಸ್ಯುಟಿಕಲ್ಸ್ ಬುಟ್ಟಿಯೊಂದಿಗೆ ಈ ಕೊರತೆಯನ್ನು ನೀಗಿಸುತ್ತಿದೆ. ಪೋಷಕಾಂಶದ ಬಾರ್‌ಗಳಿಂದ ಹಿಡಿದು ನಿರ್ದಿಷ್ಟ ಕಾಯಿಲೆಗೆ ತಕ್ಕ ಸೂತ್ರೀಕರಣಗಳವರೆಗೆ, ಜನ ಔಷಧಿ ನ್ಯೂಟ್ರಾಸ್ಯುಟಿಕಲ್ಸ್ ಬುಟ್ಟಿಯು ಭಾರತದಾದ್ಯಂತ ಜನರಿಗೆ ಪೌಷ್ಟಿಕಾಂಶದ ಪೂರಕಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದೆ.
ವಿವಿಧ ಅಗತ್ಯಗಳಿಗಾಗಿ ಪೋಷಣೆ
ಯುವಕರು, ವೃದ್ಧರು, ಮಹಿಳೆಯರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರ ನಾನಾ ರೀತಿಯ ಅಗತ್ಯಗಳಿಗೆ ಸ್ಪಂದಿಸುವಂತೆ ಜನ ಔಷಧಿ ಪೋರ್ಟ್‌ಫೋಲಿಯೊವನ್ನು ವಿನ್ಯಾಸಗೊಳಿಸಲಾಗಿದೆ. ಈ ಶ್ರೇಣಿಯು ಪ್ರೋಟೀನ್ ಸಪ್ಲಿಮೆಂಟ್‌ಗಳು, ರೋಗನಿರೋಧಕ ಶಕ್ತಿ ಉತ್ಪನ್ನಗಳು, ಪೌಷ್ಟಿಕ ಆಹಾರಗಳು ಮತ್ತು ನಿರ್ದಿಷ್ಟ ಆಹಾರದ ಅವಶ್ಯಕತೆಗಳನ್ನು ಹೊಂದಿರುವ ವ್ಯಕ್ತಿಗಳಿಗಾಗಿ ವಿಶೇಷ ಸೂತ್ರೀಕರಣಗಳನ್ನು ಒಳಗೊಂಡಿದೆ.

ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ತಯಾರಿಸಲ್ಪಟ್ಟ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಉತ್ಪನ್ನಗಳು, ಕುಟುಂಬದ ಬಜೆಟ್ ಮೇಲೆ ಹೆಚ್ಚಿನ ಹೊರೆ ಬೀಳದಂತೆ ದೈನಂದಿನ ಪೋಷಣೆಯನ್ನು ಎಲ್ಲರಿಗೂ ತಲುಪಿಸುವ ಗುರಿಯನ್ನು ಹೊಂದಿವೆ.
ಸಕ್ರಿಯ ಜೀವನಶೈಲಿಗಾಗಿ ಸುಲಭವಾಗಿ ಸಿಗುವ ಪೋಷಣೆ
ಪೋಷಕಾಂಶಯುಕ್ತ ಜನ ಔಷಧಿ ಪ್ರೋಟೀನ್ ಬಾರ್ ಮತ್ತು ಜನ ಔಷಧಿ ಇಮ್ಯೂನಿಟಿ ಬಾರ್, ಮಕ್ಕಳು, ಕೆಲಸ ಮಾಡುವ ವೃತ್ತಿಪರರು ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ಪ್ರಯಾಣದಲ್ಲಿರುವಾಗಲೂ ಪೋಷಣೆಯನ್ನು ಒದಗಿಸುತ್ತವೆ. 35 ಗ್ರಾಂ ಪ್ಯಾಕ್‌ನಲ್ಲಿ ಚಾಕೊಲೇಟ್ ಸ್ವಾದದಲ್ಲಿ ಲಭ್ಯವಿರುವ ಪ್ರೋಟೀನ್ ಬಾರ್, ಪ್ರಯಾಣದ ವೇಳೆಯೂ ದೈನಂದಿನ ಪ್ರೋಟೀನ್ ಸೇವನೆಯನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳಿಂದ ಸಮೃದ್ಧವಾಗಿರುವ ರುಚಿಕರವಾದ ಇಮ್ಯೂನಿಟಿ ಬಾರ್ ಶಕ್ತಿಯನ್ನು ನೀಡುವುದರೊಂದಿಗೆ ದೇಹದ ರಕ್ಷಣಾತ್ಮಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ತ್ವರಿತ ತಿಂಡಿಯನ್ನು ಬಯಸುವ ಆದರೆ ಜಂಕ್ ಫುಡ್‌ಗೆ ದೂರವಿರುವ ಗ್ರಾಹಕರಿಗೆ ಈ ಪೌಷ್ಟಿಕಾಂಶದ ಬಾರ್‌ಗಳು ಉತ್ತಮ ಹಾಗೂ ಮಿತವ್ಯಯದ ಆಯ್ಕೆಯಾಗಿವೆ.
ಹೆಚ್ಚಿನ ಪ್ರೋಟೀನ್ ಪೂರೈಕೆಗಾಗಿ, 100% ವೇ ಪ್ರೋಟೀನ್ ಪೌಡರ್ ಮತ್ತು ಜನ ಔಷಧಿ ಪ್ರೋಟೀನ್ ಪೌಡರ್ ದೈನಂದಿನ ಪ್ರೋಟೀನ್ ಸೇವನೆ ಹಾಗೂ ಸ್ನಾಯುಗಳ ಚೇತರಿಕೆಗೆ ಬೆಂಬಲ ನೀಡುತ್ತವೆ, ಇದು ಫಿಟ್‌ನೆಸ್ ಉತ್ಸಾಹಿಗಳಿಗೆ ಅತ್ಯಂತ ಸೂಕ್ತವಾಗಿದೆ. ಪ್ರೋಟೀನ್ ಪೌಡರ್ ವೆನಿಲಾ ಮತ್ತು ಕೇಸರ್ ಪಿಸ್ತಾ ಸ್ವಾದಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ.
ಮಹಿಳೆಯರ ಪೌಷ್ಟಿಕಾಂಶದ ಅಗತ್ಯಗಳನ್ನು ಬೆಂಬಲಿಸುವುದು
ಮಹಿಳೆಯರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳಲು ಜೀವನದ ವಿವಿಧ ಹಂತಗಳಲ್ಲಿ ಮಹಿಳೆಯರು ವಿಶಿಷ್ಟವಾದ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಹೊಂದಿರುತ್ತಾರೆ. ದೈನಂದಿನ ಪ್ರೋಟೀನ್ ಸೇವನೆ, ಶಕ್ತಿಯ ಮಟ್ಟ, ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ಬೆಂಬಲಿಸಲು ಜನ ಔಷಧಿ ವುಮೆನ್ ಪ್ರೋಟೀನ್ ಬೂಸ್ಟ್ ಅನ್ನು ರೂಪಿಸಲಾಗಿದೆ. ಚಾಕೊಲೇಟ್ ಮತ್ತು ವೆನಿಲಾ ಸ್ವಾದಗಳಲ್ಲಿ ಲಭ್ಯವಿರುವ 250 ಗ್ರಾಂ ಪ್ಯಾಕ್‌ನ ಬೆಲೆ ₹204.66 ಆಗಿದೆ. ಕೈಗೆಟುಕುವ ದರದಲ್ಲಿ ವಿಶೇಷ ಪೋಷಣೆಯನ್ನು ಒದಗಿಸುವ ಮೂಲಕ, ಹೆಚ್ಚಿನ ಮಹಿಳೆಯರು ತಮ್ಮ ದೈನಂದಿನ ದಿನಚರಿಯಲ್ಲಿ ಪೌಷ್ಟಿಕಾಂಶದ ಪೂರಕಗಳನ್ನು ಸುಲಭವಾಗಿ ಸೇರಿಸಿಕೊಳ್ಳಲು ಈ ಉತ್ಪನ್ನವು ಸಹಾಯ ಮಾಡುತ್ತದೆ.
ನಿರ್ದಿಷ್ಟ ಆರೋಗ್ಯ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ ಪೋಷಣೆ
ಮಧುಮೇಹ, ಮೂತ್ರಪಿಂಡದ ಸಮಸ್ಯೆಗಳಂತಹ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವ ವ್ಯಕ್ತಿಗಳಿಗೆ ಆಹಾರದ ಅವಶ್ಯಕತೆಗಳು ಹೆಚ್ಚು ಸಂಕೀರ್ಣವಾಗಿರಬಹುದು. ಜನೌಷಧಿಯ ಮಧುಮೇಹ ಕೇರ್ ಪ್ರೋಟೀನ್ ಪೌಡರ್ ಮಧುಮೇಹದಿಂದ ಬಳಲುತ್ತಿರುವವರ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ವ್ಯಕ್ತಿಗಳಿಗಾಗಿ, ರೆನಲ್ ಕೇರ್ ಪ್ರೋಟೀನ್ ಪೌಡರ್ ಕಡಿಮೆ ಪ್ರೋಟೀನ್ ಮತ್ತು ಹೆಚ್ಚಿನ ಪ್ರೋಟೀನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದ್ದು, ವೈದ್ಯಕೀಯ ಸಲಹೆ ಮತ್ತು ವೈಯಕ್ತಿಕ ಆಹಾರದ ಅಗತ್ಯಗಳಿಗೆ ತಕ್ಕಂತೆ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ.
ಜನ ಔಷಧಿ ಪೋಷಣ್: ಕುಟುಂಬಗಳಿಗಾಗಿ ಪ್ರತಿದಿನದ ಪೋಷಣೆ
ಕುಟುಂಬದ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ದೈನಂದಿನ ಪೌಷ್ಟಿಕಾಂಶದ ಬೆಂಬಲವನ್ನು ನೀಡಲು, 'ಜನ ಔಷಧಿ ಪೋಷಣ್' ಶ್ರೇಣಿಯು ಅತ್ಯಾವಶ್ಯಕ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾದ ಮಾಲ್ಟ್ ಆಧಾರಿತ ಪೌಷ್ಟಿಕಾಂಶದ ಆಹಾರವನ್ನು ಒದಗಿಸುತ್ತದೆ.
ಸಾಮಾನ್ಯ ಮಾಲ್ಟ್ ಮತ್ತು ಕೋಕೋ ರೂಪಾಂತರಗಳಲ್ಲಿ ಲಭ್ಯವಿರುವ ಈ ಶ್ರೇಣಿಯು ಇವುಗಳನ್ನು ಒಳಗೊಂಡಿದೆ:
- ಮಾಲ್ಟ್ ಆಧಾರಿತ ಆಹಾರ, 500 ಗ್ರಾಂ: ₹160.17
- ಕೋಕೋ ಇರುವ ಮಾಲ್ಟ್ ಆಧಾರಿತ ಆಹಾರ, 500 ಗ್ರಾಂ: ₹164.62
- ಕೋಕೋ ಸಚೆಟ್ ಇರುವ ಮಾಲ್ಟ್ ಆಧಾರಿತ ಆಹಾರ, 30 ಗ್ರಾಂ: ₹8.90
ವಿವಿಧ ಬಳಕೆಯ ಅಗತ್ಯತೆಗಳು ಮತ್ತು ಬಜೆಟ್‌ಗಳಿಗೆ ಅನುಗುಣವಾಗಿ ಈ ಬಹು ಪ್ಯಾಕ್ ಗಾತ್ರಗಳು ನಮ್ಯತೆಯನ್ನು ದಗಿಸುತ್ತವೆ. ತಯಾರಿಸಲು ಸುಲಭವಾದ ಮತ್ತು ನಿಯಮಿತ ಬಳಕೆಗೆ ಸೂಕ್ತವಾದ 'ಪೋಷಣ್' ಶ್ರೇಣಿಯು, ದೈನಂದಿನ ಬಳಕೆಗಾಗಿ ಕುಟುಂಬಗಳಿಗೆ ಸುಲಭವಾಗಿ ದೊರೆಯುವ ಪೌಷ್ಟಿಕಾಂಶದ ಪೂರಕವನ್ನು ಒದಗಿಸುತ್ತದೆ.

ಗುಣಮಟ್ಟದ ಪೋಷಣೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವುದು
ಆರೋಗ್ಯ ನಿರ್ವಹಣೆಯ ವಿಶಾಲವಾದ ವಿಧಾನದ ಭಾಗವಾಗಿ ಪೋಷಣೆಯು ಹೇಗೆ ಮಹತ್ವ ಪಡೆಯುತ್ತಿದೆ ಎಂಬುದನ್ನು ಈ ಉತ್ಪನ್ನಗಳು ಉಲ್ಲೇಖಿಸುತ್ತವೆ. ವಿಶೇಷ ಪೌಷ್ಟಿಕಾಂಶದ ಉತ್ಪನ್ನಗಳನ್ನು ವೃತ್ತಿಪರ ವೈದ್ಯಕೀಯ ಮತ್ತು ಆಹಾರ ತಜ್ಞರ ಮಾರ್ಗದರ್ಶನಕ್ಕೆ ಅನುಗುಣವಾಗಿ ಬಳಸಬೇಕಾದರೂ, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದು ಕುಟುಂಬಗಳಿಗೆ ಸೂಕ್ತ ಪೌಷ್ಟಿಕಾಂಶದ ಬೆಂಬಲವನ್ನು ಪಡೆದುಕೊಳ್ಳಲು ಸುಲಭವಾಗಿಸುತ್ತದೆ. ಒಟ್ಟಾರೆ ಆರೋಗ್ಯಕ್ಕಾಗಿ, ಗುಣಮಟ್ಟದ ಪೋಷಣೆಯನ್ನು ಒಳಗೊಂಡಿರುವ ಜೀವನಶೈಲಿಯ ಆಯ್ಕೆಗಳ ಪ್ರಾಮುಖ್ಯತೆಯನ್ನು ಎಷ್ಟು ಹೇಳಿದರುಯೂ ಕಡಿಮೆ. ಆಹಾರ ಮತ್ತು ಪೌಷ್ಟಿಕಾಂಶದ ಪೂರಕಗಳ ವಿಷಯದಲ್ಲಿ ಕುಟುಂಬಗಳು ಈಗ ಹೆಚ್ಚು ಆರೋಗ್ಯಕರ ಆಯ್ಕೆಗಳನ್ನು ಮಾಡುತ್ತಿವೆ. ಜನ ಔಷಧಿ ಕೇಂದ್ರ ಜಾಲದ ಮೂಲಕ ದುಬಾರಿ ಬ್ರ್ಯಾಂಡೆಡ್ ಪೌಷ್ಟಿಕಾಂಶದ ಪೂರಕಗಳಿಗೆ ಕೈಗೆಟುಕುವ ಬದಲಿ ಆಯ್ಕೆಗಳನ್ನು ನೀಡುವ ಮೂಲಕ, ಗುಣಮಟ್ಟದ ಪೌಷ್ಟಿಕಾಂಶದ ಬೆಂಬಲವು ಆದಾಯದ ಮಿತಿಗೆ ಒಳಪಡದಂತೆ ಪಿಎಂಬಿಜೆಪಿ ಖಚಿತಪಡಿಸುತ್ತಿದೆ.
ಕೈಗೆಟುಕುವ ಔಷಧಗಳು ಪಿಎಂಬಿಜೆಪಿಯ ಮೂಲಾಧಾರವಾಗಿದ್ದರೂ, ಪೋಷಣೆಯು ಅದೇ ವಿಶಾಲ ಆರೋಗ್ಯ ಪ್ರಯಾಣದ ಅತ್ಯಗತ್ಯ ಭಾಗವಾಗಿದೆ. ಓದುವ ವಿದ್ಯಾರ್ಥಿಯಾಗಿರಲಿ, ಒತ್ತಡದ ದಿನಚರಿಯನ್ನು ನಿರ್ವಹಿಸುವ ಉದ್ಯೋಗಿಯಾಗಿರಲಿ, ಕುಟುಂಬದ ಪೋಷಣೆಯನ್ನು ನೋಡಿಕೊಳ್ಳುವ ಗೃಹಿಣಿಯಾಗಿರಲಿ, ನಿರ್ದಿಷ್ಟ ಆಹಾರದ ಅಗತ್ಯವಿರುವ ಹಿರಿಯ ನಾಗರಿಕರಾಗಿರಲಿ ಅಥವಾ ಆರೋಗ್ಯ ಸಮಸ್ಯೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿಯಾಗಿರಲಿ, ಸೂಕ್ತ ಪೋಷಣೆಯ ಲಭ್ಯತೆಯು ಎಲ್ಲರ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ.
ಗುಣಮಟ್ಟ, ಕೈಗೆಟುಕುವ ಬೆಲೆ ಮತ್ತು ಸುಲಭ ಲಭ್ಯತೆಯನ್ನು ಒಗ್ಗೂಡಿಸುವ ಮೂಲಕ, ಜನ ಔಷಧಿ ನ್ಯೂಟ್ರಾಸ್ಯುಟಿಕಲ್ ಶ್ರೇಣಿಯು ಭಾರತೀಯ ಕುಟುಂಬಗಳಿಗೆ ಪೋಷಣೆಯನ್ನು ಹೆಚ್ಚು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ ಮತ್ತು “ಎಲ್ಲರಿಗೂ ಗುಣಮಟ್ಟದ ಆರೋಗ್ಯ ಮತ್ತು ಪೋಷಣೆ” ಎಂಬ ದೃಷ್ಟಿಕೋನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.
Reference:
Ministry of Chemicals & Fertilizers
See in PDF
*****
(Features ID: 159380)
आगंतुक पटल : 15
Provide suggestions / comments