Economy
ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗದಾತರವರೆಗೆ: ಆಸ್ಪೈರ್ (ASPIRE) ಕಥೆ
Posted On:
26 JUN 2026 2:37PM
ಆಸ್ಪೈರ್: ಗ್ರಾಮೀಣ ಮಹತ್ವಾಕಾಂಕ್ಷೆಯನ್ನು ಉದ್ಯಮವಾಗಿ ಪರಿವರ್ತಿಸುವುದು
ಮೇಘಾಲಯದ ಮಾವ್ಸಿನ್ರಾಮ್‌ನಲ್ಲಿ ಮಳೆ ಸುರಿಯುತ್ತಿದ್ದ ಒಂದು ಬೆಳಗಿನ ಸಮಯ, ಶ್ರೀ ಬನ್ಶೈಲಾಂಗ್ ಮರ್ಬಾನಿಯಾಂಗ್ ಅವರು ಬೆಟ್ಟಗಳ ಮೇಲೆ ಕಪ್ಪಡರಿದ ಮೋಡಗಳು ಸರಿದಾಡುವುದನ್ನು ನೋಡುತ್ತಾ ನಿಂತಿದ್ದರು. ವಿಶ್ವದಲ್ಲೇ ಅತಿ ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಎಂದಿನಂತೆ ಮಳೆ ಸತತವಾಗಿ ಸುರಿಯುತ್ತಿತ್ತು. ಆದರೆ ಅವರ ಮನಸ್ಸನ್ನು ಆವರಿಸಿದ್ದು ಆ ಹವಾಮಾನದ ಯೋಚನೆಯಲ್ಲ; ಬದಲಿಗೆ ವರ್ಷಗಳಿಂದ ಅವರನ್ನು ಕಾಡುತ್ತಿದ್ದ ಒಂದು ಪ್ರಶ್ನೆ: ದೇಶದ ಅತ್ಯಂತ ದೂರದ ಮೂಲೆಯೊಂದರ ಯುವಕನೊಬ್ಬ, ಇಲ್ಲಿ ಮಳೆ ಹೇರಳವಾಗಿರುವಂತೆ ಅವಕಾಶಗಳು ಅಷ್ಟೇ ವಿರಳವಾಗಿರುವಾಗ, ತನ್ನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಲು ಸಾಧ್ಯ?
ವರ್ಷಗಳಿಂದ ಶ್ರೀ ಮರ್ಬಾನಿಯಾಂಗ್ ಅವರು ತಮ್ಮ ಸ್ನೇಹಿತರು ಮತ್ತು ನೆರೆಹೊರೆಯವರು ಕೆಲಸದ ಹುಡುಕಾಟದಲ್ಲಿ ಮಾವ್ಸಿನ್ರಾಮ್ ತೊರೆದು ಬೇರೆಡೆಗೆ ಹೋಗುವುದನ್ನು ನೋಡುತ್ತಿದ್ದರು. ಇಲ್ಲಿ ಸಂಪನ್ಮೂಲಗಳು ಸೀಮಿತವಾಗಿದ್ದವು ಮತ್ತು ಸ್ವಂತ ಉದ್ಯಮವನ್ನು ಪ್ರಾರಂಭಿಸುವುದು ಕೈಗೆಟುಕದ ಮಾತಾಗಿತ್ತು. ಆರ್ಥಿಕ ಮುಗ್ಗಟ್ಟುಗಳು ಅವರ ಈ ಕನಸನ್ನು ಮತ್ತಷ್ಟು ದೂರ ತಳ್ಳಿದ್ದವು. ಆದರೂ ಆ ಆಲೋಚನೆ ಮಾತ್ರ ಅವರ ಮನಸ್ಸಿನಿಂದ ದೂರವಾಗಲಿಲ್ಲ. ಈ ಪ್ರದೇಶದ ಶ್ರೀಮಂತ ಕೃಷಿ ಉತ್ಪನ್ನಗಳಿಂದ ಸುತ್ತುವರೆದಿದ್ದ ಅವರು, ಈ ಸ್ಥಳೀಯ ಸಂಪನ್ಮೂಲಗಳೇ ಒಂದು ಉದ್ಯಮಕ್ಕೆ ಆಧಾರವಾಗಬಹುದೇ ಎಂದು ಯೋಚಿಸಿದರು.
ಗುವಾಹಟಿಯಲ್ಲಿರುವ ಭಾರತೀಯ ಉದ್ಯಮಶೀಲತಾ ಸಂಸ್ಥೆಯು ನೀಡುತ್ತಿರುವ ಉದ್ಯಮಶೀಲತೆ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಬೆಂಬಲದ ಬಗ್ಗೆ ಅವರಿಗೆ ತಿಳಿದಾಗ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದಿತು. ಐಐಇ ಸಂಸ್ಥೆಯು ಕೇಂದ್ರ ಎಂಎಸ್ಎಂಇ ಸಚಿವಾಲಯದ ಆಸ್ಪೈರ್ (ASPIRE - ನಾವೀನ್ಯತೆ, ಗ್ರಾಮೀಣ ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯ ಉತ್ತೇಜನಕ್ಕಾಗಿ ಒಂದು ಯೋಜನೆ) ಯೋಜನೆಯಡಿ ಕಾರ್ಯನಿರ್ವಹಿಸುವ ಒಂದು ಮಾರ್ಗದರ್ಶಿ ಸಂಸ್ಥೆಯಾಗಿದೆ. ಇದು ಉದ್ಯಮಶೀಲತೆಯ ಕನಸು ಹೊತ್ತವರು ತಮ್ಮ ಆಲೋಚನೆಗಳನ್ನು ಉದ್ಯಮಗಳಾಗಿ ಪರಿವರ್ತಿಸಲು ಅಗತ್ಯವಿರುವ ಕೌಶಲ್ಯ, ಆತ್ಮವಿಶ್ವಾಸ ಮತ್ತು ವ್ಯವಹಾರ ಜ್ಞಾನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ಶ್ರೀ ಮರ್ಬಾನಿಯಾಂಗ್ ಅವರಿಗೆ ಈ ತರಬೇತಿಯು ಹೊಸ ಸಾಧ್ಯತೆಗಳನ್ನು ತೆರೆಯಿತು. ತಾಂತ್ರಿಕ ಜ್ಞಾನ ಮತ್ತು ಉದ್ಯಮಶೀಲತೆಯ ಕೌಶಲ್ಯಗಳನ್ನು ಅಳವಡಿಸಿಕೊಂಡ ಅವರು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆರ್ಥಿಕ ಅವಕಾಶಗಳಾಗಿ ಪರಿವರ್ತಿಸುವ ಆಹಾರ ಸಂಸ್ಕರಣಾ ಉದ್ಯಮವನ್ನು ಸ್ಥಾಪಿಸಿದರು. ಸೂಕ್ತ ಮಾರ್ಗದರ್ಶನ ಮತ್ತು ಕೌಶಲ್ಯವಿದ್ದರೆ ಎಂತಹ ಪರಿಸರದಲ್ಲೂ ಅವಕಾಶವನ್ನು ಸೃಷ್ಟಿಸಬಹುದು ಎಂಬುದನ್ನು ಅವರು ನಿರೂಪಿಸಿದರು.
ಮನೆಯ ಸಮೀಪದಲ್ಲೇ ಅವಕಾಶಗಳ ಸೃಷ್ಟಿ
ಶ್ರೀ ಮರ್ಬಾನಿಯಾಂಗ್ ಅವರ ಈ ಕಥೆಯು ಗ್ರಾಮೀಣ ಭಾರತದಾದ್ಯಂತ ನಡೆಯುತ್ತಿರುವ ಒಂದು ದೊಡ್ಡ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ವ್ಯವಹಾರ ಅಭಿವೃದ್ಧಿ ಸೇವೆಗಳು, ತಂತ್ರಜ್ಞಾನದ ಬೆಂಬಲ ಮತ್ತು ಉದ್ಯಮಗಳ ಉತ್ತೇಜನವು ಹೆಚ್ಚಾಗಿ ಕೆಲವು ನಗರ ಕೇಂದ್ರಗಳಲ್ಲೇ ಕೇಂದ್ರೀಕೃತವಾಗಿತ್ತು. ಗ್ರಾಮೀಣ ಭಾರತದಲ್ಲಿ ಪ್ರತಿಭೆ, ಕೌಶಲ್ಯ ಮತ್ತು ಸಂಪನ್ಮೂಲಗಳಿದ್ದರೂ ಸಹ, ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ಆಲೋಚನೆಗಳನ್ನು ಸುಸ್ಥಿರ ಉದ್ಯಮಗಳಾಗಿ ಪರಿವರ್ತಿಸಲು ಅಗತ್ಯವಿರುವ ತರಬೇತಿ, ಮಾರ್ಗದರ್ಶನ ಮತ್ತು ಸಾಂಸ್ಥಿಕ ಬೆಂಬಲದ ಕೊರತೆಯಿತ್ತು.
ಈ ಕೊರತೆಯನ್ನು ಗುರುತಿಸಿದ ಕೇಂದ್ರ ಎಂಎಸ್ಎಂಇ ಸಚಿವಾಲಯವು, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಆಧಾರಿತ ವಲಯಗಳಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು 2015 ರಲ್ಲಿ ಆಸ್ಪೈರ್ ಯೋಜನೆಯನ್ನು ಪ್ರಾರಂಭಿಸಿತು.
ವರ್ಷಗಳು ಉರುಳಿದಂತೆ, ಬದಲಾಗುತ್ತಿರುವ ಅಗತ್ಯತೆಗಳನ್ನು ಪೂರೈಸಲು ಈ ಯೋಜನೆಯು ವಿಕಸನಗೊಂಡಿತು. 2018 ರಲ್ಲಿ ಹೊರಡಿಸಲಾದ ಕಾರ್ಯಾಚರಣೆಯ ಮಾರ್ಗಸೂಚಿಗಳು ಇನ್ಕ್ಯುಬೇಷನ್ ವ್ಯವಸ್ಥೆಯನ್ನು ಬಲಪಡಿಸಿದವು. 2023 ರ ಪರಿಷ್ಕೃತ ಮಾರ್ಗಸೂಚಿಗಳು ಜೀವನೋಪಾಯ ಸೃಷ್ಟಿ, ಉದ್ಯಮದ ಅಭಿವೃದ್ಧಿ ಮತ್ತು ಅಳೆಯಬಹುದಾದ ಫಲಿತಾಂಶಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದವು. ಇಂದು ಆಸ್ಪೈರ್ ಯೋಜನೆಯು ಲೈವ್ಲಿಹುಡ್ ಬಿಸಿನೆಸ್ ಇನ್ಕ್ಯುಬೇಟರ್ಸ್ (ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್‌ಗಳು) ಗಳ ಬೆಳೆಯುತ್ತಿರುವ ಜಾಲದ ಸುತ್ತ ಕೇಂದ್ರೀಕೃತವಾಗಿದೆ. ಇವು ವ್ಯಕ್ತಿಗಳು ಕೌಶಲ್ಯ ಗಳಿಕೆಯಿಂದ ಉದ್ಯಮ ಸ್ಥಾಪನೆಯತ್ತ ಹೆಜ್ಜೆ ಇಡಲು ಸಹಾಯ ಮಾಡುತ್ತವೆ.
ತರಬೇತಿ, ಮಾರ್ಗದರ್ಶನ ಮತ್ತು ಇನ್ಕ್ಯುಬೇಷನ್ ಬೆಂಬಲವನ್ನು ನೀಡುವ ಮೂಲಕ, ಆಸ್ಪೈರ್ ಯೋಜನೆಯು ಕೃಷಿ-ಗ್ರಾಮೀಣ ವಲಯಗಳಲ್ಲಿನ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಶಕ್ತಿ ನೀಡುತ್ತದೆ ಮತ್ತು ಎಂಎಸ್ಎಂಇ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ನಾವೀನ್ಯತೆಗಳನ್ನು ಉತ್ತೇಜಿಸುತ್ತದೆ.
ಉದ್ಯಮಗಳು ರೂಪಗೊಳ್ಳುವ ಸ್ಥಳ
ಆಸ್ಪೈರ್ ಯೋಜನೆಯ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿ ಎಂದರೆ ಅದರ ಎಲ್‌ಬಿಐ ಅಥವಾ ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್‌ಗಳು. ಇದರ ಉದ್ದೇಶ ಕೇವಲ ಕೌಶಲ್ಯಾಭಿವೃದ್ಧಿ ಮಾತ್ರವಲ್ಲದೆ, ಜೀವನೋಪಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸುಸ್ಥಿರ ಮತ್ತು ವಿಸ್ತರಿಸಬಹುದಾದ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸುವುದಾಗಿದೆ.
ಈ ಇನ್ಕ್ಯುಬೇಟರ್‌ಗಳು ಆಧುನಿಕ ಉಪಕರಣಗಳು, ವ್ಯವಹಾರ ಮಾರ್ಗದರ್ಶನ ಮತ್ತು ತಂತ್ರಜ್ಞಾನದ ಬೆಂಬಲವನ್ನು ಒದಗಿಸುತ್ತವೆ. ಉದ್ಯಮಿಗಳಿಗೆ ಉತ್ಪನ್ನ ಅಭಿವೃದ್ಧಿ, ಬ್ರ್ಯಾಂಡಿಂಗ್, ಮಾನ್ಯತೆ ಪಡೆದುಕೊಳ್ಳುವುದು, ನಿಯಂತ್ರಕ ನಿಯಮಗಳ ಪಾಲನೆ, ಮಾರುಕಟ್ಟೆ ಸಂಪರ್ಕಗಳು ಮತ್ತು ಹಣಕಾಸಿನ ನೆರವು ಪಡೆಯಲು ಸಹಾಯ ಮಾಡಲಾಗುತ್ತದೆ. ಇದು ಅವರ ಆಲೋಚನೆಯನ್ನು ಉದ್ಯಮವಾಗಿ ಬದಲಾಯಿಸುವ ಪ್ರಯಾಣವನ್ನು ಸುಗಮಗೊಳಿಸುತ್ತದೆ.
ಆಸ್ಪೈರ್ ಯೋಜನೆಯ ಸಾಂಸ್ಥಿಕ ವ್ಯವಸ್ಥೆಯು ಉದ್ಯಮಿಗಳ ತರಬೇತಿ ಮುಗಿದ ನಂತರವೂ ಅವರಿಗೆ ದೀರ್ಘಕಾಲದವರೆಗೆ ನಿರಂತರ ಬೆಂಬಲ ಸಿಗುವುದನ್ನು ಖಚಿತಪಡಿಸುತ್ತದೆ. ಈ ಯೋಜನೆಯು ಯೋಜನೆ ಚಾಲನಾ ಸಮಿತಿ, ನಿಯೋಜಿತ ಮಾರ್ಗದರ್ಶಿ ಸಂಸ್ಥೆಗಳು ಮತ್ತು ಎಲ್‌ಬಿಐಗಳನ್ನು ನಿರ್ವಹಿಸುವ ಆತಿಥೇಯ ಸಂಸ್ಥೆಗಳನ್ನು ಒಳಗೊಂಡ ಮೂರು ಹಂತದ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತದೆ. ಇನ್ಕ್ಯುಬೇಟರ್‌ಗಳನ್ನು ಗುರುತಿಸುವಲ್ಲಿ, ಯೋಜನಾ ವರದಿಗಳನ್ನು ಸಿದ್ಧಪಡಿಸುವಲ್ಲಿ, ಇನ್ಕ್ಯುಬೇಷನ್ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ, ಅನುಷ್ಠಾನವನ್ನು ಬಲಪಡಿಸುವಲ್ಲಿ ಮತ್ತು ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಮಾರ್ಗದರ್ಶಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈ ಇನ್ಕ್ಯುಬೇಷನ್ ಪರಿಸರ ವ್ಯವಸ್ಥೆಯು ಗುವಾಹಟಿಯ ಭಾರತೀಯ ಉದ್ಯಮಶೀಲತಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು ಮತ್ತು ಐಐಟಿ ಜೋಧ್‌ಪುರದಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ವಿವಿಧ ರೀತಿಯ ಸಂಸ್ಥೆಗಳನ್ನು ಒಳಗೊಂಡಿದೆ. ಈ ಕೇಂದ್ರಗಳನ್ನು ಕೃಷಿ-ಉದ್ಯಮದಲ್ಲಿ ಉದ್ಯಮಶೀಲತೆಯನ್ನು ಪೋಷಿಸಲು ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.
ದೇಶದಾದ್ಯಂತ ಇರುವ ಎಲ್‌ಬಿಐಗಳು ಆಹಾರ ಸಂಸ್ಕರಣೆ, ಜೇನುತುಪ್ಪ ಉತ್ಪಾದನೆ, ಬಿದಿರಿನ ಉತ್ಪನ್ನಗಳು, ಅಣಬೆ ಬೇಸಾಯ, ಸಾಂಬಾರ ಪದಾರ್ಥಗಳ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ತೆಂಗಿನ ನಾರಿನ ಉತ್ಪನ್ನಗಳಂತಹ ಕ್ಷೇತ್ರಗಳಲ್ಲಿ ಉದ್ಯಮಗಳಿಗೆ ಬೆಂಬಲ ನೀಡುತ್ತಿವೆ. ಭಾರತದ ಆರ್ಥಿಕತೆಗೆ ಮೌಲ್ಯವರ್ಧಿತ ಗ್ರಾಮೀಣ ಕೈಗಾರಿಕೆಗಳ ಹೆಚ್ಚುತ್ತಿರುವ ಕೊಡುಗೆಯಲ್ಲೇ ಈ ವಿಧಾನದ ಮಹತ್ವ ಎದ್ದು ಕಾಣುತ್ತದೆ. ಅನೇಕ ಗ್ರಾಮೀಣ ಸಮುದಾಯಗಳಿಗೆ ಉದ್ಯಮದ ಸ್ಥಾಪನೆಯು ಕೇವಲ ಆದಾಯ ಗಳಿಕೆಗೆ ಮಾತ್ರವಲ್ಲದೆ, ದೊಡ್ಡ ಮೌಲ್ಯದ ಸರಪಳಿಗಳಲ್ಲಿ ಭಾಗವಹಿಸಲು ಒಂದು ಅವಕಾಶವನ್ನು ನೀಡುತ್ತದೆ. ಕೃಷಿ ಮತ್ತು ಸ್ಥಳೀಯ ಸಂಪನ್ಮೂಲಗಳಿಗೆ ಸಂಬಂಧಿಸಿದ ವಲಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ, ಆಸ್ಪೈರ್ ಯೋಜನೆಯು ವ್ಯಕ್ತಿಗಳನ್ನು ಕೇವಲ ಪ್ರಾಥಮಿಕ ಉತ್ಪಾದನೆಯಿಂದ ಸಂಸ್ಕರಣೆ, ಉತ್ಪಾದನೆ ಮತ್ತು ಮೌಲ್ಯವರ್ಧನೆಯತ್ತ ಸಾಗಲು ಪ್ರೇರೇಪಿಸುತ್ತದೆ.
ಈ ಜಾಲವು ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ವಿಸ್ತರಿಸುತ್ತಿದೆ. 2026 ರ ಜೂನ್ ವೇಳೆಗೆ, 27 ರಾಜ್ಯಗಳು ಮತ್ತು ಒಕ್ಕೂಟ ಪ್ರದೇಶಗಳಲ್ಲಿ 109 ಎಲ್‌ಬಿಐಗಳಿಗೆ ಅನುಮೋದನೆ ನೀಡಲಾಗಿದೆ. ಈ ಎಲ್ಲಾ ಇನ್ಕ್ಯುಬೇಟರ್‌ಗಳು ಒಟ್ಟಾಗಿ 1.23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ತರಬೇತಿ ನೀಡಿವೆ. ಹಣಕಾಸು ವರ್ಷ 2022-23 ರಲ್ಲಿ ವ್ಯವಸ್ಥಿತವಾಗಿ ನಿಗಾ ಇಡಲು ಪ್ರಾರಂಭಿಸಿದಾಗಿನಿಂದ, ಆಸ್ಪೈರ್ ಬೆಂಬಲಿತ ಇನ್ಕ್ಯುಬೇಟರ್‌ಗಳು ದೇಶದಾದ್ಯಂತ 1,200 ಕ್ಕೂ ಹೆಚ್ಚು ಸೂಕ್ಷ್ಮ ಉದ್ಯಮಗಳ ಸ್ಥಾಪನೆಗೆ ನೆರವಾಗಿವೆ.

ಭಾರತದ ಮಹತ್ವಾಕಾಂಕ್ಷಿ ಉದ್ಯಮಿಗಳ ಸಬಲೀಕರಣ
ಆಸ್ಪೈರ್ ಯೋಜನೆಯ ಯಶಸ್ಸನ್ನು ಅಂತಿಮವಾಗಿ ಅದು ಬೆಂಬಲಿಸುವ ಇನ್ಕ್ಯುಬೇಟರ್‌ಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ, ಬದಲಿಗೆ ಅದು ಯಾರ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆಯೋ ಆ ಜನರ ಮೂಲಕ ಅಳೆಯಲಾಗುತ್ತದೆ.
ಹಣಕಾಸು ವರ್ಷ 2022-23 ರಿಂದ, ಈ ಯೋಜನೆಯು ದೇಶದಾದ್ಯಂತ 28,500 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯಮಶೀಲತೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇದು ಉದ್ಯಮ ಸ್ಥಾಪನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸುವಲ್ಲಿ ಯೋಜನೆ ವಹಿಸುತ್ತಿರುವ ಹೆಚ್ಚುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಅದೇ ಸಮಯದಲ್ಲಿ, ಆಸ್ಪೈರ್ ಯೋಜನೆಯು 8,700 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಫಲಾನುಭವಿಗಳನ್ನು, 9,600 ಕ್ಕೂ ಹೆಚ್ಚು ಪರಿಶಿಷ್ಟ ಪಂಗಡ ಫಲಾನುಭವಿಗಳನ್ನು ಮತ್ತು 17,600 ಕ್ಕೂ ಹೆಚ್ಚು ಇತರ ಹಿಂದುಳಿದ ವರ್ಗಗಳ ಫಲಾನುಭವಿಗಳನ್ನು ತಲುಪಿದೆ. ಈ ಮೂಲಕ ಉದ್ಯಮಶೀಲತೆಯನ್ನು ಎಲ್ಲರನ್ನೂ ಒಳಗೊಂಡ ಹಾಗೂ ಸುಲಭವಾಗಿ ಕೈಗೆಟುಕುವ ವ್ಯವಸ್ಥೆಯನ್ನಾಗಿ ಮಾಡಲು ಸಹಾಯ ಮಾಡಿದೆ.

ಈ ಸಂಖ್ಯೆಗಳು ಕೇವಲ ಅಂಕಿ-ಅಂಶಗಳಿಗಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತವೆ. ವಿವಿಧ ಸಾಮಾಜಿಕ ಮತ್ತು ಆರ್ಥಿಕ ಗುಂಪುಗಳಿಗೆ ಉದ್ಯಮಶೀಲತೆಯ ಬೆಂಬಲವನ್ನು ವಿಸ್ತರಿಸುವ ಮೂಲಕ, ಆಸ್ಪೈರ್ ಯೋಜನೆಯು ಉದ್ಯಮದ ಸ್ಥಾಪನೆಯು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಖಚಿತಪಡಿಸಲು ಸಹಾಯ ಮಾಡುತ್ತಿದೆ. ಬದಲಿಗೆ, ಇದು ಭಾರತದಾದ್ಯಂತ ಇರುವ ಹಳ್ಳಿಗಳು, ಸಣ್ಣ ಪಟ್ಟಣಗಳು ಮತ್ತು ಹಿಂದುಳಿದ ಸಮುದಾಯಗಳಲ್ಲಿ ಬೆಳವಣಿಗೆ, ಸ್ವಾವಲಂಬನೆ ಮತ್ತು ಜೀವನೋಪಾಯದ ಸೃಷ್ಟಿಗೆ ಒಂದು ಪ್ರಮುಖ ಮಾರ್ಗವಾಗಿ ಹೆಚ್ಚೆಚ್ಚು ಹೊರಹೊಮ್ಮುತ್ತಿದೆ.
ಮಾವ್ಸಿನ್ರಾಮ್‌ನಿಂದ ಕರ್ತವ್ಯ ಪಥದವರೆಗೆ
ವರ್ಷಗಳ ನಂತರ, ಶ್ರೀ ಮರ್ಬಾನಿಯಾಂಗ್ ಅವರ ಈ ಪ್ರಯಾಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯಿತು.
ಹೊಸ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಆಚರಣೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲ್ಪಟ್ಟ ಈಶಾನ್ಯ ಭಾರತದ ಹತ್ತು ಉದ್ಯಮಿಗಳಲ್ಲಿ ಇವರೂ ಒಬ್ಬರಾಗಿದ್ದರು. ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಅವರು, ಭಾರತದ ಹಳ್ಳಿಗಳು, ಸಣ್ಣ ಪಟ್ಟಣಗಳು ಮತ್ತು ದೂರದ ಪ್ರದೇಶಗಳಿಂದ ಹೊರಹೊಮ್ಮುತ್ತಿರುವ ಹೊಸ ಪೀಳಿಗೆಯ ಉದ್ಯಮಿಗಳಿಗೆ ಪ್ರತೀಕವಾಗಿದ್ದರು. ದೇಶದ ಅತ್ಯಂತ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಅವರ ಉಪಸ್ಥಿತಿಯು ಕೇವಲ ವೈಯಕ್ತಿಕ ಗೌರವಕ್ಕಿಂತ ಮಿಗಿಲಾದದ್ದಾಗಿತ್ತು. ಇದು ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗದಾತರನ್ನಾಗಿ ಮತ್ತು ಸ್ಥಳೀಯ ಮಹತ್ವಾಕಾಂಕ್ಷೆಗಳನ್ನು ಯಶಸ್ವಿ ಉದ್ಯಮಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಿರುವ ಯೋಜನೆಗಳ ಹೆಚ್ಚುತ್ತಿರುವ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.

ಮಳೆ ಸುರಿಯುವ ಮಾವ್ಸಿನ್ರಾಮ್‌ನ ಬೆಟ್ಟಗಳಿಂದ ಕರ್ತವ್ಯ ಪಥದವರೆಗಿನ ದೂರವನ್ನು ಕಿಲೋಮೀಟರ್‌ಗಳಲ್ಲಿ ಅಳೆಯಬಹುದಾದರೂ, ಅನಿಶ್ಚಿತತೆಯಿಂದ ಉದ್ಯಮಶೀಲತೆಯವರೆಗಿನ ಪ್ರಯಾಣವನ್ನು ಅವಕಾಶಗಳ ಮೂಲಕ ಅಳೆಯಲಾಗುತ್ತದೆ. ಆಸ್ಪೈರ್ ಯೋಜನೆಯ ಮೂಲಕ ಸಾವಿರಾರು ಭಾರತೀಯರು ತಮ್ಮ ಮಹತ್ವಾಕಾಂಕ್ಷೆಗಳನ್ನು ಉದ್ಯಮಗಳಾಗಿ ಪರಿವರ್ತಿಸಲು ಅಗತ್ಯವಿರುವ ಬೆಂಬಲ, ಕೌಶಲ್ಯ ಮತ್ತು ಸಂಪನ್ಮೂಲಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾವೀನ್ಯತೆಯನ್ನು ಪೋಷಿಸುವ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಆಲೋಚನೆಗಳು ವ್ಯವಹಾರಗಳಾಗಿ, ಕೌಶಲ್ಯಗಳು ಜೀವನೋಪಾಯಗಳಾಗಿ ಮತ್ತು ಮಹತ್ವಾಕಾಂಕ್ಷೆಗಳು ಆರ್ಥಿಕ ಅವಕಾಶಗಳಾಗಿ ಬದಲಾಗುತ್ತಿವೆ.
ಹೀಗೆ ಮಾಡುವ ಮೂಲಕ ಆಸ್ಪೈರ್ ಯೋಜನೆಯು ಕೇವಲ ಉದ್ಯಮಗಳನ್ನು ಸೃಷ್ಟಿಸುತ್ತಿಲ್ಲ, ಬದಲಿಗೆ ಸಮುದಾಯಗಳನ್ನು ಸಬಲೀಕರಿಸುತ್ತಿದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಹೆಚ್ಚು ಒಳಗೊಳ್ಳುವ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ.
References
MINISTRY OF SKILL DEVELOPMENT AND ENTREPRENEURSHIP
https://iie.gov.in/news-and-events/iie-trained-ne-entrepreneurs-invited-to-republic-day-parade-as-symbol-of-skill-development-push467#gsc.tab=0
https://iie.gov.in/pr/projects/a-scheme-for-promotion-of-innovation--rural-industries---entrepreneurship---aspire-#gsc.tab=0
MINISTRY OF MICRO, SMALL, MEDIUM ENTERPRISES
https://aspire.msme.gov.in/ASPIRE/AFHome.aspx
https://dashboard.msme.gov.in/aspire.aspx
https://www.pib.gov.in/newsite/PrintRelease.aspx?relid=133532®=48&lang=2
https://aspire.msme.gov.in/WriteReadData/DocumentFile/New_Operational_Guidelines_ASPIRE_2018.pdf
https://aspire.msme.gov.in/WriteReadData/DocumentFile/ASPIRE_New_21112023.pdf
https://aspire.msme.gov.in/WriteReadData/DocumentFile/Annexure-I.pdf
LOK SABHA
https://sansad.in/getFile/loksabhaquestions/annex/187/AS550_07VFJm.pdf?source=pqals
INDIAN INSTITUTE OF ENTREPRENEURSHIP
https://www.iie.gov.in/pdf/IIE-Annual-Report-2024-25.pdf
Click here to see in PDF
*****
(Features ID: 159072)
आगंतुक पटल : 55
Provide suggestions / comments