Infrastructure
ಒಂದು ನಿಲ್ದಾಣ ಒಂದು ಉತ್ಪನ್ನ: ಭಾರತದ ಸ್ಥಳೀಯ ಪರಂಪರೆಯನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಿಗೆ ತರುವುದು
Posted On:
25 MAR 2026 11:17AM
ಭಾರತದಾದ್ಯಂತದ ರೈಲ್ವೆ ನಿಲ್ದಾಣಗಳಲ್ಲಿ ಒಂದು ಶಾಂತಿಯುತ ಬದಲಾವಣೆ ನಡೆಯುತ್ತಿದೆ, ಇದು ಸ್ಥಳೀಯ ಕರಕುಶಲತೆಯನ್ನು ದೈನಂದಿನ ಪ್ರಯಾಣದ ಕೇಂದ್ರಭಾಗಕ್ಕೆ ತರುತ್ತಿದೆ. ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' ಉಪಕ್ರಮವನ್ನು 2022-23ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಯಿತು. ಇದು ಸ್ಥಳೀಯ ಕುಶಲಕರ್ಮಿಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಅವಕಾಶವನ್ನು ಒದಗಿಸುವ ಮೀಸಲಾದ ಚಿಲ್ಲರೆ ಮಳಿಗೆಗಳನ್ನು ನಿರ್ಮಿಸುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುತ್ತದೆ. ಈ ಮೂಲಕ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರದರ್ಶಿಸುವುದು ಈ ಯೋಜನೆಯ ಗುರಿಯಾಗಿದೆ. ಇಂದು, 2,000ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಸುಮಾರು 2,326 OSOP ಮಳಿಗೆಗಳನ್ನು ಹೊಂದಿವೆ. ಇವು ಸ್ಥಳೀಯ ಉತ್ಪಾದಕರನ್ನು ಲಕ್ಷಾಂತರ ಪ್ರಯಾಣಿಕರೊಂದಿಗೆ ಸಂಪರ್ಕಿಸುತ್ತಿದ್ದು, (19 ಜನವರಿ 2026 ರ ಹೊತ್ತಿಗೆ) 1.32 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತಿವೆ.

ತೆಂಕಶಿ ಜೂ. ರೈಲು ನಿಲ್ದಾಣ, ತಮಿಳುನಾಡು
25 ಮಾರ್ಚ್ 2022 ರಂದು ಪ್ರಾರಂಭವಾದ ಈ ಉಪಕ್ರಮವು, ರೈಲ್ವೆ ನಿಲ್ದಾಣಗಳನ್ನು ಪ್ರಾದೇಶಿಕ ಉತ್ಪನ್ನಗಳ ಸುಲಭ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲು ಭಾರತೀಯ ರೈಲ್ವೆಯ ವ್ಯಾಪಕ ಜಾಲವನ್ನು ಬಳಸಿಕೊಳ್ಳುತ್ತದೆ. 19 ನಿಲ್ದಾಣಗಳಲ್ಲಿ ನಡೆಸಲಾದ 15 ದಿನಗಳ ಯಶಸ್ವಿ ಪ್ರಾಯೋಗಿಕ ಯೋಜನೆ ಯ ನಂತರ, ಒಎಸ್‌ಒಪಿ ಯೋಜನೆಯನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಯಿತು. ಹೆಚ್ಚಿನ ಜನರಿಗೆ ಭಾಗವಹಿಸಲು ಅವಕಾಶ ನೀಡುವ ಉದ್ದೇಶದಿಂದ, ಕನಿಷ್ಠ ಶುಲ್ಕದೊಂದಿಗೆ ಸರದಿಯ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ. ರೈಲ್ವೆ ವಿಭಾಗಗಳು ರಾಜ್ಯ ಏಜೆನ್ಸಿಗಳು, ಸ್ವಸಹಾಯ ಗುಂಪುಗಳು ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಮನ್ವಯದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ, ಇದು ಸುಗಮ ಕಾರ್ಯಾಚರಣೆ ಮತ್ತು ಹೆಚ್ಚಿನ ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
ಒಎಸ್‌ಒಪಿ ಅಡಿಯಲ್ಲಿ ಪ್ರದರ್ಶಿಸಲಾದ ಉತ್ಪನ್ನಗಳು ಪ್ರತಿ ಪ್ರದೇಶದ ವಿಶಿಷ್ಟ ಗುರುತನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ, ತಮಿಳುನಾಡಿನ ತೆಂಕಸಿ ಜಂಕ್ಷನ್‌ನಲ್ಲಿ, ಅತ್ಯಂತ ನಾಜೂಕಾಗಿ ತಯಾರಿಸಿದ ಬೆತ್ತದ ಉತ್ಪನ್ನಗಳು ಸ್ಥಳೀಯ ಕೌಶಲ ಮತ್ತು ಕರಕುಶಲತೆಯನ್ನು ಎತ್ತಿ ತೋರಿಸುತ್ತವೆ. ಹಾಗೆಯೇ, ಪಾಟ್ನಾ ರೈಲ್ವೆ ನಿಲ್ದಾಣದಲ್ಲಿನ ಮಳಿಗೆಯು ವಿಶ್ವಪ್ರಸಿದ್ಧ ಮಧುಬನಿ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತದೆ, ಇದು ಸ್ಥಳೀಯ ಕಲಾವಿದರಿಗೆ ಈ ಸಾಂಪ್ರದಾಯಿಕ ಕಲೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಉತ್ತಮ ವೇದಿಕೆಯನ್ನು ಒದಗಿಸಿದೆ.

ಬಿಹಾರದ ಪಾಟ್ನಾ ಜಂಕ್ಷನ್‌ನಲ್ಲಿರುವ ಮಧುಬನಿ ಪೇಂಟಿಂಗ್ಸ್
ಒಳಗೊಳ್ಳುವಿಕೆಯ ಮೇಲೆ ಗಮನಹರಿಸಿರುವ ಒಎಸ್‌ಒಪಿ ಯೋಜನೆಯು ಕುಶಲಕರ್ಮಿಗಳು, ನೇಯ್ಗೆಗಾರರು, ರೈತರು ಮತ್ತು ಅದರಲ್ಲೂ ವಿಶೇಷವಾಗಿ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆದ್ಯತೆ ನೀಡುತ್ತದೆ. ಔಪಚಾರಿಕ ಮಾರುಕಟ್ಟೆಗಳ ಲಭ್ಯತೆ ಇಲ್ಲದವರನ್ನು ಗುರಿಯಾಗಿಸಿಕೊಂಡು, ಅವರಿಗೆ ಸಾಂಸ್ಥಿಕ ಸಮನ್ವಯದ ಮೂಲಕ ಬೆಂಬಲ ನೀಡುವ ಮೂಲಕ, ಈ ಯೋಜನೆಯು ತಳಮಟ್ಟದ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಜೀವನೋಪಾಯವನ್ನು ಉಳಿಸಿಕೊಳ್ಳುವುದರ ಜೊತೆಗೆ ವಿಶಾಲವಾದ ಗ್ರಾಹಕ ಬಳಗದೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
ಪ್ರಾದೇಶಿಕ ಅಸ್ಮಿತೆಯ ಪ್ರದರ್ಶನ
ಒಎಸ್‌ಒಪಿ ಮಳಿಗೆಗಳು ಪ್ರಯಾಣಿಕರಿಗೆ ಅಧಿಕೃತ ಸ್ಥಳೀಯ ಉತ್ಪನ್ನಗಳನ್ನು ನೆನಪಿನ ಕಾಣಿಕೆಗಳಾಗಿ ಖರೀದಿಸಲು ಅವಕಾಶ ನೀಡುತ್ತವೆ. ಇದು ಪ್ರತಿ ರಾಜ್ಯದ ವಿಶಿಷ್ಟ ಸಾಂಸ್ಕೃತಿಕ ಮತ್ತು ಆರ್ಥಿಕ ಗುರುತನ್ನು ಪ್ರತಿಬಿಂಬಿಸುವುದಲ್ಲದೆ, ತಳಮಟ್ಟದ ಜನರ ಜೀವನೋಪಾಯಕ್ಕೆ ಆಸರೆಯಾಗುತ್ತದೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ರೈಲ್ವೆ ನಿಲ್ದಾಣ
ಪಶ್ಚಿಮ ಬಂಗಾಳದ ಅಸನ್ಸೋಲ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ರಲ್ಲಿರುವ ಒಎಸ್‌ಒಪಿ ಕಿಟಕಿ (Kiosk), ಕೈಮಗ್ಗದ ಬ್ಯಾಗ್‌ಗಳು, ಕೈಯಿಂದ ತಯಾರಿಸಿದ ಕಲಾಕೃತಿಗಳು ಮತ್ತು ಕಾರ್ಪೆಟ್‌ಗಳನ್ನು ಪ್ರದರ್ಶಿಸುವ ಮೂಲಕ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಪ್ರಯಾಣಿಕರು ಇವುಗಳನ್ನು ವೀಕ್ಷಿಸಿ ಖರೀದಿಸುವಾಗ, ಅವರು ಕೇವಲ ವಸ್ತುಗಳನ್ನು ಮಾತ್ರವಲ್ಲದೆ, ಆ ಪ್ರದೇಶದ ಕರಕುಶಲತೆ ಮತ್ತು ಸಾಂಸ್ಕೃತಿಕ ಅನನ್ಯತೆಯ ಒಂದು ಭಾಗವನ್ನೂ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ.

ತಮಿಳುನಾಡಿನ ಚೆನ್ನೈನ ಮೂರ್ ಮಾರ್ಕೆಟ್ ಕಾಂಪ್ಲೆಕ್ಸ್ ರೈಲ್ವೆ ನಿಲ್ದಾಣ
ಚೆನ್ನೈನ ಮೂರ್ ಮಾರ್ಕೆಟ್ ಕಾಂಪ್ಲೆಕ್ಸ್ ರೈಲ್ವೆ ನಿಲ್ದಾಣದಲ್ಲಿರುವ ಮಳಿಗೆಯೊಂದು, ರಾಜ್ಯದ ಶ್ರೀಮಂತ ಜವಳಿ ಸಂಪ್ರದಾಯಗಳನ್ನು ಉಲ್ಲೇಖಿಸುವ ಹತ್ತಿ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಈ ಮಳಿಗೆಗಳು ಪ್ರಯಾಣಿಕರಿಗೆ ಅಧಿಕೃತ ಕೈಮಗ್ಗದ ವಸ್ತುಗಳನ್ನು ಸುಲಭವಾಗಿ ಖರೀದಿಸಲು ಅವಕಾಶ ಮಾಡಿಕೊಡುವುದಲ್ಲದೆ, ಸ್ಥಳೀಯ ನೇಯ್ಗೆಗಾರರಿಗೆ ಆರ್ಥಿಕ ಬೆಂಬಲವನ್ನೂ ನೀಡುತ್ತವೆ.

ಅದರ ಸಮೀಪದಲ್ಲಿಯೇ ಇರುವ ಅತ್ತರ್ ಸುಗಂಧ ದ್ರವ್ಯದ ಮಳಿಗೆಯು, ಸಾಂಪ್ರದಾಯಿಕ ಸುಗಂಧಗಳನ್ನು ಪ್ರವಾಸಿಗರಿಗೆ ಪರಿಚಯಿಸುತ್ತದೆ. ಇದು ಸಾಂಸ್ಕೃತಿಕ ಪರಂಪರೆಯೊಂದಿಗೆ ಇಂದ್ರಿಯ ಅನುಭವವನ್ನು ಮೇಳೈಸುತ್ತಾ, ಪ್ರಯಾಣಿಕರಿಗೆ ಸಾಂಪ್ರದಾಯಿಕ ಸುಗಂಧಗಳನ್ನು ಆನಂದಿಸಲು ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ಹಾಗೂ ಕರಕುಶಲತೆಗೆ ಬೆಂಬಲ ನೀಡಲು ಅವಕಾಶ ಮಾಡಿಕೊಡುತ್ತದೆ. ದಕ್ಷಿಣದ ಕರಾವಳಿಯಿಂದ ಪೂರ್ವದ ಪಟ್ಟಿಯವರೆಗೆ, ಈ ಉಪಕ್ರಮವು ಸ್ಥಳೀಯ ಕರಕುಶಲತೆಯನ್ನು ವಿಶಾಲವಾದ ಗ್ರಾಹಕ ವರ್ಗದೊಂದಿಗೆ ಸತತವಾಗಿ ಬೆಸೆಯುತ್ತಿದೆ.

ಒಡಿಶಾದ ಬಲಾಂಗೀರ್ ರೈಲ್ವೆ ನಿಲ್ದಾಣ

ಒಡಿಶಾದ ಬಲಾಂಗೀರ್ ರೈಲ್ವೆ ನಿಲ್ದಾಣದಲ್ಲಿ, 'ಒಂದು ನಿಲ್ದಾಣ ಒಂದು ಉತ್ಪನ್ನ' ಉಪಕ್ರಮದ ಅಡಿಯಲ್ಲಿ ಸ್ಥಾಪಿಸಲಾದ ಒಂದು ಸಣ್ಣ ಆಟಿಕೆಗಳ ಮಳಿಗೆಯು ಸ್ಥಳೀಯ ಕುಶಲಕರ್ಮಿಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಅರ್ಥಪೂರ್ಣ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತಿದೆ. ವೈವಿಧ್ಯಮಯ ಬಣ್ಣಬಣ್ಣದ, ಕೈಯಿಂದ ತಯಾರಿಸಿದ ಬೊಂಬೆಗಳನ್ನು ಪ್ರದರ್ಶಿಸುವ ಈ ಮಳಿಗೆಯು ಸ್ಥಳೀಯ ಸಮುದಾಯಗಳ, ವಿಶೇಷವಾಗಿ ಸ್ವಸಹಾಯ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವ ಮಹಿಳೆಯರ ಸೃಜನಶೀಲತೆ ಮತ್ತು ಕೌಶಲವನ್ನು ಪ್ರತಿಬಿಂಬಿಸುತ್ತದೆ. ಈ ಮಹಿಳೆಯರು ಈಗ ತಮ್ಮ ಉತ್ಪನ್ನಗಳನ್ನು ನೇರವಾಗಿ ವಿಶಾಲ ಮಾರುಕಟ್ಟೆಗೆ ತರಲು ಶಕ್ತರಾಗಿದ್ದಾರೆ.
ನಿಲ್ದಾಣದ ಮೂಲಕ ಸತತವಾಗಿ ಪ್ರಯಾಣಿಕರು ಸಂಚರಿಸುತ್ತಿರುವುದರಿಂದ, ಈ ಮಳಿಗೆಯು ಉತ್ಪನ್ನಗಳಿಗೆ ಉತ್ತಮ ಪ್ರಚಾರ ಮತ್ತು ನಿರಂತರ ಬೇಡಿಕೆಯನ್ನು ಖಚಿತಪಡಿಸುತ್ತದೆ. ಇದು ಕುಶಲಕರ್ಮಿಗಳಿಗೆ ಸುಸ್ಥಿರ ಆದಾಯವನ್ನು ಗಳಿಸಲು ಮತ್ತು ಸಾಂಪ್ರದಾಯಿಕ ಕರಕುಶಲತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಈ ಉಪಕ್ರಮವು ಪ್ರಾದೇಶಿಕ ಹಸ್ತಚಾಲಿತ ಕಲೆಗಳನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಸ್ಥಳೀಯ ಉತ್ಪಾದಕರನ್ನು ರಾಷ್ಟ್ರೀಯ ಮಟ್ಟದ ಗ್ರಾಹಕರೊಂದಿಗೆ ಸಂಪರ್ಕಿಸುವ ಮೂಲಕ ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಬಲಪಡಿಸುತ್ತದೆ ಮತ್ತು 'ವೋಕಲ್ ಫಾರ್ ಲೋಕಲ್' ಆಶಯವನ್ನು ಸಾಕಾರಗೊಳಿಸುತ್ತದೆ. ಪಶ್ಚಿಮದ ಕಡೆಗೆ ಸಾಗಿದಂತೆ, ಉತ್ಪನ್ನಗಳ ವೈವಿಧ್ಯತೆಯು ಬದಲಾಗುತ್ತದೆಯಾದರೂ, ಕುಶಲಕರ್ಮಿಗಳನ್ನು ಸಬಲೀಕರಿಸುವ ಮತ್ತು ಸಾಂಪ್ರದಾಯಿಕ ಕೌಶಲಗಳನ್ನು ಉಳಿಸುವ ಈ ಯೋಜನೆಯ ಮೂಲ ಪ್ರಭಾವವು ಸ್ಥಿರವಾಗಿ ಮುಂದುವರಿಯುತ್ತದೆ.
ಜೈಪುರ ಜಂಕ್ಷನ್ ರೈಲ್ವೆ ನಿಲ್ದಾಣ, ರಾಜಸ್ಥಾನ

ಜೈಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ, ಒಎಸ್‌ಒಪಿ ಮಳಿಗೆಯು ರಾಜಸ್ಥಾನದ 'ಸಾಂಗನೇರಿ ಪ್ರಿಂಟ್ ಜವಳಿ ಪರಂಪರೆಯ ವೈವಿಧ್ಯತೆಯನ್ನು ಜೀವಂತವಾಗಿರಿಸಿದೆ. ಪ್ರಯಾಣಿಕರು ಇಲ್ಲಿನ ಸಂಕೀರ್ಣ ವಿನ್ಯಾಸದ ಬಟ್ಟೆಗಳನ್ನು ವೀಕ್ಷಿಸಲು ನಿಲ್ಲುವ ಮೂಲಕ, ಈ ಪ್ರದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯದ ಕಿರುನೋಟವನ್ನು ಪಡೆಯುತ್ತಾರೆ. ಈ ಉಪಕ್ರಮವು ಕೇವಲ ಪರಂಪರೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಸ್ಥಳೀಯ ಕುಶಲಕರ್ಮಿಗಳಿಗೆ ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ಇದು ಪುರಾತನ ಕರಕುಶಲತೆಯನ್ನು ಸಂರಕ್ಷಿಸುವ ಜೊತೆಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ.
ಟಾಟಾನಗರ ರೈಲ್ವೆ ನಿಲ್ದಾಣ, ಜಾರ್ಖಂಡ್

ಅದೇ ರೀತಿ, ಜಾರ್ಖಂಡ್‌ನ ಟಾಟಾನಗರ ರೈಲ್ವೆ ನಿಲ್ದಾಣದಲ್ಲಿ, ಒಎಸ್‌ಒಪಿ ಮಳಿಗೆಗಳು ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ವೈವಿಧ್ಯಮಯ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ. ಇಲ್ಲಿನ ಅನೇಕ ಕುಶಲಕರ್ಮಿಗಳಿಗೆ ಈ ವೇದಿಕೆಯು ಸ್ಥಳೀಯ ಮಾರುಕಟ್ಟೆಯ ಗಡಿಗಳನ್ನು ಮೀರಿ ತಮ್ಮ ಕಲೆಗೆ ಹೊಸ ಮನ್ನಣೆ ತಂದುಕೊಟ್ಟಿದೆ, ಇದರಿಂದ ಅವರ ಕಲಾಕೃತಿಗಳು ದೇಶದಾದ್ಯಂತದ ಜನರನ್ನು ತಲುಪಲು ಸಾಧ್ಯವಾಗಿದೆ. ಈ ಮಳಿಗೆಯಲ್ಲಿ ನಡೆಯುವ ಪ್ರತಿಯೊಂದು ವ್ಯಾಪಾರವೂ ಸಂಪ್ರದಾಯ ಮತ್ತು ಅವಕಾಶಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದೆ.
ಭಾರತದ ಸ್ಥಳೀಯ ಪ್ರತಿಭೆಗಳಿಗೆ ಒಂದು ವೇದಿಕೆ
ವಿಸ್ತರಿಸುತ್ತಿರುವ ಒಎಸ್‌ಒಪಿ ಮಳಿಗೆಗಳ ಜಾಲವು ಸಾರ್ವಜನಿಕ ಮೂಲಸೌಕರ್ಯಗಳು ಹೇಗೆ ಸಮಗ್ರ ಬೆಳವಣಿಗೆಗೆ ಬೆಂಬಲ ನೀಡಬಲ್ಲವು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ದೈನಂದಿನ ಪ್ರಯಾಣದ ಸ್ಥಳಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಸಂಯೋಜಿಸುವ ಮೂಲಕ, ಈ ಉಪಕ್ರಮವು ಸಾಂಪ್ರದಾಯಿಕ ಕೌಶಲಗಳನ್ನು ಸಂರಕ್ಷಿಸುವುದರ ಜೊತೆಗೆ ತಳಮಟ್ಟದ ಉದ್ಯಮಶೀಲತೆಯನ್ನು ಬಲಪಡಿಸುತ್ತದೆ.
ಅದಕ್ಕಿಂತ ಮುಖ್ಯವಾಗಿ, ಒಎಸ್‌ಒಪಿ ಯೋಜನೆಯು ಸಾಮಾನ್ಯ ಪ್ರಯಾಣವನ್ನು ಅರ್ಥಪೂರ್ಣ ಅನುಭವಗಳನ್ನಾಗಿ ಪರಿವರ್ತಿಸುತ್ತದೆ. ಪ್ರಯಾಣಿಕರು ತಾವು ಖರೀದಿಸುವ ಉತ್ಪನ್ನಗಳ ಹಿಂದಿನ ಕಥೆಗಳನ್ನು ತಿಳಿದುಕೊಳ್ಳುತ್ತಾರೆ, ಮತ್ತೊಂದೆಡೆ ಕುಶಲಕರ್ಮಿಗಳಿಗೆ ಸರಿಯಾದ ಗುರುತು ಮತ್ತು ಆರ್ಥಿಕ ಸ್ಥಿರತೆ ದೊರೆಯುತ್ತದೆ. ಈ ವಿನಿಮಯದ ಮೂಲಕ, ರೈಲ್ವೆ ನಿಲ್ದಾಣಗಳು ಕಲೆ, ವಾಣಿಜ್ಯ ಮತ್ತು ಸಮುದಾಯಗಳು ಒಂದಾಗುವ ಸ್ಥಳಗಳಾಗಿ ವಿಕಸನಗೊಳ್ಳುತ್ತಿವೆ. ಒಎಸ್‌ಒಪಿ ಯೋಜನೆಯು ವಿಸ್ತರಣೆಗೊಳ್ಳುತ್ತಾ ಸಾಗಿದಂತೆ, ರಾಷ್ಟ್ರೀಯ ವೇದಿಕೆಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಹೇಗೆ ಉತ್ತೇಜಿಸಬಹುದು ಎಂಬುದಕ್ಕೆ ಇದೊಂದು ಪ್ರಬಲ ಉದಾಹರಣೆಯಾಗಿ ನಿಲ್ಲುತ್ತದೆ—ಇದರಿಂದ ಭಾರತದ ಶ್ರೀಮಂತ ಪರಂಪರೆಯು ಅದರ ಉಗಮಸ್ಥಾನವನ್ನು ಮೀರಿ ದೂರದವರೆಗೆ ಪಸರಿಸುವುದನ್ನು ಇದು ಖಚಿತಪಡಿಸುತ್ತದೆ.
References
Ministry of Railways
https://x.com/RailMinIndia/status/1564882838792568832?s=20
https://sansad.in/getFile/loksabhaquestions/annex/183/AU2640_KY9bK4.pdf?source=pqals
https://swr.indianrailways.gov.in/cris/view_detail.jsp?lang=0&id=0,4,268&dcd=6990&did=1700126466366C941683059380D4F89F7306F3F333C7E#:~:text=One%20Station%20one%20Product%20(OSOP,are%20operational%20at%201037%20stations
https://www.instagram.com/p/DC6I_r0zTBQ/
https://www.instagram.com/p/DKl8m6Ghzmg/
https://x.com/RailMinIndia/status/1563572106620596225?s=20
https://www.pib.gov.in/PressReleasePage.aspx?PRID=1923698®=3&lang=2
https://www.pib.gov.in/PressReleasePage.aspx?PRID=2216453®=3&lang=1#:~:text=Indian%20Railways'%20One%20Station%20One,of%20India's%20rich%20regional%20diversity.
Click here to see PDF
*****
(Features ID: 157948)
आगंतुक पटल : 93
Provide suggestions / comments