• Sitemap
  • Advance Search
Others

ಪ್ರಾದೇಶಿಕ ರುಚಿಗಳಿಂದ ಆಹಾರ ನಾವೀನ್ಯತೆಯವರೆಗೆ: ಆಹಾರ್ 2026ರ ಉದ್ಯಮಶೀಲತೆಯ ಕಥೆಗಳು

Posted On: 12 MAR 2026 3:09PM

ಆಹಾರ್ 2026ರ 40ನೇ ಆವೃತ್ತಿಯು ಆಹಾರ ಮತ್ತು ಅತಿಥಿಸತ್ಕಾರ ವಲಯದ ಪ್ರಮುಖರನ್ನು ನವದೆಹಲಿಯಲ್ಲಿ ಒಂದೆಡೆ ಸೇರಿಸಿದೆ. ಮಾರ್ಚ್ 10 ರಿಂದ 14, 2026 ರವರೆಗೆ ನಡೆಯುವ ಈ ಐದು ದಿನಗಳ ಅಂತರಾಷ್ಟ್ರೀಯ ಪ್ರದರ್ಶನವು, ಉತ್ಪಾದಕರು, ರಫ್ತುದಾರರು, ಅತಿಥಿಸತ್ಕಾರ ಉದ್ಯಮಗಳು ಮತ್ತು ತಂತ್ರಜ್ಞಾನ ಪೂರೈಕೆದಾರರಿಗೆ ಹೊಸ ಅವಕಾಶಗಳನ್ನು ಅನ್ವೇಷಿಸಲು ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಕಳೆದ ಹಲವು ವರ್ಷಗಳಲ್ಲಿ, ಆಹಾರ್ ಮೇಳವು ಆಹಾರ ಮತ್ತು ಅತಿಥಿಸತ್ಕಾರ ಕ್ಷೇತ್ರದಲ್ಲಿ ಏಷ್ಯಾದ ಪ್ರಮುಖ ವ್ಯಾಪಾರ ಪ್ರದರ್ಶನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತ ಮತ್ತು ವಿದೇಶಗಳ ಸುಮಾರು 1,800 ಪ್ರದರ್ಶಕರೊಂದಿಗೆ, ಈ ಕಾರ್ಯಕ್ರಮವು ಸಂಸ್ಕರಿಸಿದ ಆಹಾರಗಳು, ಪಾನೀಯಗಳು, ಡೈರಿ ಉತ್ಪನ್ನಗಳು, ಬೇಕರಿ ಪದಾರ್ಥಗಳು ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ.

ಭಾರತ ಮಂಟಪದ ವಿವಿಧ ಹಾಲ್‌ಗಳಲ್ಲಿ ಹರಡಿಕೊಂಡಿರುವ ಈ ಪ್ರದರ್ಶನವು, ಸಾಂಪ್ರದಾಯಿಕ ರುಚಿಗಳು ಮತ್ತು ಆಧುನಿಕ ಆಹಾರ ಸಂಸ್ಕರಣಾ ನಾವೀನ್ಯತೆಗಳೆರಡನ್ನೂ ಉಲ್ಲೇಖಿಸುತ್ತದೆ. ಜೊತೆಗೆ ಉತ್ಪಾದಕರು, ರಫ್ತುದಾರರು, ಖರೀದಿದಾರರು ಮತ್ತು ಅತಿಥಿಸತ್ಕಾರ ಉದ್ಯಮಗಳ ನಡುವೆ ಬಿ ಟು ಬಿ (B2B - ವ್ಯವಹಾರದಿಂದ ವ್ಯವಹಾರಕ್ಕೆ) ಸಂಪರ್ಕವನ್ನು ಸುಲಭಗೊಳಿಸುತ್ತದೆ. ಉತ್ಪನ್ನಗಳ ಪ್ರದರ್ಶನದ ಹೊರತಾಗಿ, ಆಹಾರ್ ಮೇಳವು ಭಾರತದ ವಿಕಸನಗೊಳ್ಳುತ್ತಿರುವ ಆಹಾರ ಸಂಸ್ಕರಣಾ ರಂಗವನ್ನು ರೂಪಿಸುತ್ತಿರುವ ಉದ್ಯಮಿಗಳ ಮತ್ತು ಉದ್ಯಮಗಳ ಕಥೆಗಳನ್ನು ಸಹ ಅನಾವರಣಗೊಳಿಸುತ್ತಿದೆ.

ಸಿಕ್ಕಿಂನಿಂದ ರಾಷ್ಟ್ರೀಯ ವೇದಿಕೆಗೆ

'ಒಂದು ಜಿಲ್ಲೆ ಒಂದು ಉತ್ಪನ್ನ' ಉಪಕ್ರಮದ ರೋಮಾಂಚಕ ಮಳಿಗೆಗಳಲ್ಲಿ, ಸಿಕ್ಕಿಂ ರಾಜ್ಯದ ಪೆವಿಲಿಯನ್ ಹಿಮಾಲಯದ ರಾಜ್ಯದ ವಿಶಿಷ್ಟ ರುಚಿಗಳನ್ನು ಪ್ರದರ್ಶಿಸುತ್ತಿದೆ, ಇದು ಪ್ರವಾಸಿಗರನ್ನು ಮತ್ತು ಖರೀದಿದಾರರನ್ನು ಸಮಾನವಾಗಿ ಆಕರ್ಷಿಸುತ್ತಿದೆ.

ಭಾಗವಹಿಸಿದವರಲ್ಲಿ ಸಿಕ್ಕಿಂನ ಗ್ಯಾಂಗ್‌ಟಕ್‌ನ ಉದ್ಯಮಿ ಸಂಗಿಡೋಮಾ ಭೂಟಿಯಾ ಕೂಡ ಒಬ್ಬರು. ಸರ್ಕಾರದ ಬೆಂಬಲವು ಸಣ್ಣ ಆಹಾರ ಉದ್ಯಮಗಳ ಬೆಳವಣಿಗೆಗೆ ಹೇಗೆ ಸಹಕಾರಿಯಾಗಿದೆ ಎಂಬುದಕ್ಕೆ ಇವರ ಪ್ರಯಾಣವು ಒಂದು ಸಾಕ್ಷಿಯಾಗಿದೆ. ಸಂಗಿಡೋಮಾ ಅವರು ಸುಮಾರು 16 ವರ್ಷಗಳ ಹಿಂದೆ ಸಾಂಪ್ರದಾಯಿಕ ಸಿಕ್ಕಿಂ ಆಹಾರ ಉತ್ಪನ್ನಗಳನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವ ಮೂಲಕ ತಮ್ಮ ಉದ್ಯಮಶೀಲತೆಯ ಪಯಣವನ್ನು ಪ್ರಾರಂಭಿಸಿದರು. ಆರಂಭಿಕ ವರ್ಷಗಳಲ್ಲಿ, ಅವರು ವ್ಯವಹಾರವನ್ನು ಉಳಿಸಿಕೊಳ್ಳಲು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ಉಳಿತಾಯವನ್ನೇ ಅವಲಂಬಿಸಿದ್ದರು. ಈಗ, ಅವರು ಸಾಂಪ್ರದಾಯಿಕ ಉಪ್ಪಿನಕಾಯಿಗಳಿಗೆ ಹೆಸರುವಾಸಿಯಾದ ಟೇಸ್ಟ್ ಆಫ್ ಸಿಕ್ಕಿಂ” ಎಂಬ ಬ್ರ್ಯಾಂಡ್ ಅನ್ನು ನಡೆಸುತ್ತಿದ್ದಾರೆ. ಉಪ್ಪಿನಕಾಯಿ ತಯಾರಿಸುವುದರ ಜೊತೆಗೆ, ಅವರು ಒಬ್ಬ ನುರಿತ ತರಬೇತುದಾರರಾಗಿ, ಗ್ರಾಮೀಣ ಮಹಿಳೆಯರಿಗೆ ಆಹಾರ ಸಂಸ್ಕರಣಾ ಕೌಶಲಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ಇದು ಅವರು ಸ್ವಾವಲಂಬಿಗಳಾಗಲು ಮತ್ತು ಹೊಸ ಆದಾಯದ ಅವಕಾಶಗಳನ್ನು ಪಡೆಯಲು ದಾರಿಯಾಗಿದೆ.

ಅವರ ಈ ಪ್ರಯಾಣದಲ್ಲಿ ದೊಡ್ಡ ಬದಲಾವಣೆ ತಂದಿದ್ದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ವಿಧಿವತ್ತಾದ ಯೋಜನೆ. ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ನೀಡುವ ಈ ಯೋಜನೆಯಡಿ ಅವರು ₹10 ಲಕ್ಷ ಸಾಲ ಪಡೆದರು. ಇದು ಅವರಿಗೆ ಆಧುನಿಕ ಸಂಸ್ಕರಣಾ ಉಪಕರಣಗಳಲ್ಲಿ ಹೂಡಿಕೆ ಮಾಡಲು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ನೆರವಾಯಿತು. ಇದರೊಂದಿಗೆ ಅವರು ₹3.5 ಲಕ್ಷ ಸಹಾಯಧನವನ್ನು ಸಹ ಪಡೆದರು, ಇದು ಅವರು ಸಾಲವನ್ನು ಮರುಪಾವತಿಸಲು ಮತ್ತು ಆತ್ಮವಿಶ್ವಾಸದಿಂದ ತಮ್ಮ ಉದ್ಯಮವನ್ನು ನಿರ್ವಹಿಸಲು ಸುಲಭವಾಗಿಸಿತು.

ತಮ್ಮ ಪಯಣವನ್ನು ಮೆಲುಕು ಹಾಕುತ್ತಾ ಸಂಗಿಡೋಮಾ ಅವರು ತಮ್ಮ ವ್ಯವಹಾರವು ಅತ್ಯಂತ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ. "ಸಾಲ ಪಡೆದ ನಂತರ, ನಾನು ಯಂತ್ರೋಪಕರಣಗಳಲ್ಲಿ ಹೂಡಿಕೆ ಮಾಡಲು ಮತ್ತು ನನ್ನ ಉತ್ಪಾದನೆಯನ್ನು ವಿಸ್ತರಿಸಲು ಸಾಧ್ಯವಾಯಿತು. ಈ ಯೋಜನೆಯು ನನ್ನಂತಹ ಉದ್ಯಮಿಗಳಿಗೆ, ವಿಶೇಷವಾಗಿ ಆರ್ಥಿಕ ಸಂಪನ್ಮೂಲಗಳ ಕೊರತೆಯಿರುವ ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ," ಎಂದು ಅವರು ಹೇಳುತ್ತಾರೆ.

ಅವರ ಉದ್ಯಮವು ಸಿಕ್ಕಿಂನ ಪ್ರಸಿದ್ಧ ಸಾವಯವ ದಲ್ಲೆ ಖುರ್ಸಾನಿ’ ಮೆಣಸಿನಕಾಯಿಯಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಿದೆ. ಈ ಮೆಣಸಿನಕಾಯಿಯು ಭೌಗೋಳಿಕ ಸೂಚಕ ಟ್ಯಾಗ್ ಅನ್ನು ಹೊಂದಿದೆ. ಈ ಮೆಣಸಿನಕಾಯಿಗಳನ್ನು ನೇರವಾಗಿ ಸ್ಥಳೀಯ ರೈತರಿಂದ ಖರೀದಿಸಲಾಗುತ್ತದೆ ಮತ್ತು ಅವುಗಳನ್ನು ಹುದುಗಿಸಿದ ಮೆಣಸಿನಕಾಯಿ ಉಪ್ಪಿನಕಾಯಿ, ಮಸಾಲಾ ಮಿಶ್ರಣಗಳು ಮತ್ತು ಬ್ಲೆಂಡೆಡ್ ಕಾಂಡಿಮೆಂಟ್‌ಗಳಂತಹ ಉತ್ಪನ್ನಗಳಾಗಿ ಸಂಸ್ಕರಿಸಲಾಗುತ್ತದೆ. ಅವರ ಉತ್ಪನ್ನಗಳ ಶ್ರೇಣಿಯು ಸ್ಥಳೀಯವಾಗಿ ಬೆಳೆಯುವ 'ಲಪ್ಸಿ' (ಪ್ಲಮ್) ನಂತಹ ಹಣ್ಣುಗಳನ್ನು ಸಹ ಒಳಗೊಂಡಿದೆ. ವಿಶಿಷ್ಟ ಪ್ರಾದೇಶಿಕ ಖಾದ್ಯಗಳನ್ನು ತಯಾರಿಸಲು ಇವುಗಳನ್ನು 'ದಲ್ಲೆ' ಮೆಣಸಿನಕಾಯಿಯ ವಿಶಿಷ್ಟ ರುಚಿಯೊಂದಿಗೆ ಸಂಯೋಜಿಸಲಾಗುತ್ತದೆ. ಅವರು ವಿವರಿಸುವಂತೆ:

"ನಮ್ಮ ಉತ್ಪನ್ನಗಳು ಸಿಕ್ಕಿಂಗೆ ಮಾತ್ರ ವಿಶಿಷ್ಟವಾದವು. ದೊಡ್ಡ ನಗರಗಳಲ್ಲಿರುವ ಜನರು ಇವುಗಳನ್ನು ಸವಿಯಲು ಬಹಳ ಕುತೂಹಲ ತೋರುತ್ತಾರೆ ಮತ್ತು ಈ ಅಪ್ಪಟ (ಅಧಿಕೃತ) ರುಚಿಯನ್ನು ಮೆಚ್ಚಿಕೊಳ್ಳುತ್ತಾರೆ."

ಸರ್ಕಾರದ ನೀತಿಗಳ ಬೆಂಬಲದೊಂದಿಗೆ, ಅವರು ತಮ್ಮ ಉತ್ಪನ್ನಗಳನ್ನು ದೆಹಲಿ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತದಾದ್ಯಂತ ಹಲವು ನಗರಗಳಿಗೆ ಕೊಂಡೊಯ್ದಿದ್ದಾರೆ. ಆಹಾರ್ 2026 ರಲ್ಲಿ ಸಂಗಿಡೋಮಾ ಅವರು ಮೊದಲ ಬಾರಿಗೆ ಭಾಗವಹಿಸುತ್ತಿದ್ದು, ಮುಂದಿನ ವರ್ಷವೂ ಮತ್ತೆ ಬರಲು ಆಶಿಸಿದ್ದಾರೆ.

ಭಾರತದ ಚಹಾ ಮೌಲ್ಯ ಸರಪಳಿಯಲ್ಲಿ ಪತ್ತೆಹಚ್ಚುವಿಕೆ ಮತ್ತು ಗುಣಮಟ್ಟದ ನಾವೀನ್ಯತೆ

ಕರ್ನಾಟಕದ ಚಹಾ ಬ್ರ್ಯಾಂಡ್ ಆದ ಐರನ್ ಕೆಟಲ್ ನ ಪ್ರತಿನಿಧಿ ಧೀರಜ್ ಅರ್ಜುನ್ ಕೆ.ಎಸ್. ಅವರೊಂದಿಗಿನ ಸಂಭಾಷಣೆಯಲ್ಲಿ, ಚಹಾ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆ, ಪತ್ತೆಹಚ್ಚುವಿಕೆ ಮತ್ತು ಗುಣಮಟ್ಟದ ಮೂಲದ ಮೇಲೆ ಕಂಪನಿಯು ಹೊಂದಿರುವ ಗಮನದ ಬಗ್ಗೆ ಮಾಹಿತಿ ಹಂಚಿಕೊಂಡರು. 'ಐರನ್ ಕೆಟಲ್' ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತದೆ: ಅಸ್ಸಾಂನಿಂದ ಪಡೆಯಲಾದ ಸಿಟಿಸಿ ಚಾಯ್, ವಿವಿಧ ಪರಿಮಳಯುಕ್ತ ಮತ್ತು ಗ್ರೀನ್ ಟೀ ಶ್ರೇಣಿ, ಹಾಗೂ ವಿಶೇಷವಾದ 'ಸಂಜೀವಿನಿ' ಗ್ರೀನ್ ಟೀ ಲೈನ್. ಗುಣಮಟ್ಟದ ಮೂಲಗಳಿಂದ ಚಹಾವನ್ನು ಸಂಗ್ರಹಿಸುವುದು ಕಂಪನಿಯ ಕಾರ್ಯವೈಖರಿಯ ಪ್ರಮುಖ ಅಂಶವಾಗಿದೆ. ಈ ಕಂಪನಿಯ ಮುಖ್ಯ ಕಚೇರಿಯು ಕರ್ನಾಟಕದ ಬೆಂಗಳೂರಿನಲ್ಲಿದೆ. ಆದರೆ, ಚಹಾ ಎಲೆಗಳನ್ನು ಸಂಗ್ರಹಿಸುವ ಪ್ರದೇಶಗಳಿಗೆ ಹತ್ತಿರವಿರುವಂತೆ ಅಸ್ಸಾಂ ಮತ್ತು ತಮಿಳುನಾಡಿನ ನೀಲಗಿರಿಯಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇದು ರೇನ್‌ಫಾರೆಸ್ಟ್ ಅಲಯನ್ಸ್, ಎಚ್‌ಎಸಿಸಿಪಿ(ಅಪಾಯ ವಿಶ್ಲೇಷಣೆ ಮತ್ತು ನಿರ್ಣಾಯಕ ನಿಯಂತ್ರಣ ಬಿಂದುಗಳು) ಮತ್ತು ಐಎಸ್‌ಒ (ಅಂತರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ) ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಮಾಣೀಕರಣಗಳನ್ನು ಹೊಂದಿದೆ.

"ಕೇವಲ 'ಎರಡು ಎಲೆ ಮತ್ತು ಒಂದು ಮೊಗ್ಗು' ಅನ್ನು ಕೈಯಿಂದ ಚಿವುಟಿ ತೆಗೆಯಲು ಹೆಚ್ಚಿನ ಶ್ರಮ ಬೇಕಾಗುತ್ತದೆ ಮತ್ತು ಇಳುವರಿಯೂ ಕಡಿಮೆ ಇರುತ್ತದೆ. ಆದರೆ, ಇದು ಅತ್ಯುತ್ತಮ ಗುಣಮಟ್ಟದ ಚಹಾವನ್ನು ನೀಡುತ್ತದೆ. ಇದೇ ಕಾರಣಕ್ಕಾಗಿ, ಉನ್ನತ ಮಟ್ಟದ ಎಲೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ರೈತರಿಗೆ ನಾವು ಪ್ರೀಮಿಯಂ ದರವನ್ನು (ಹೆಚ್ಚುವರಿ ಬೆಲೆ) ನೀಡುತ್ತೇವೆ."

ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು, ಕಂಪನಿಯು ಅಸ್ಸಾಂ ಮತ್ತು ನೀಲಗಿರಿಯಲ್ಲಿ ಕೃಷಿ ಅಧಿಕಾರಿಗಳನ್ನು ನಿಯೋಜಿಸಿದೆ. ಇವರು ರೈತರೊಂದಿಗೆ ನೇರವಾಗಿ ಕೆಲಸ ಮಾಡುತ್ತಾರೆ ಮತ್ತು ಕೃಷಿ ಪದ್ಧತಿಗಳು, ಕೀಟನಾಶಕಗಳ ಬಳಕೆ ಹಾಗೂ ಎಲೆಗಳನ್ನು ಚಿವುಟುವ ತಂತ್ರಗಳ ಬಗ್ಗೆ ತರಬೇತಿ ನೀಡುತ್ತಾರೆ. ಈ ಜಾಲಕ್ಕೆ ಸೇರುವ ಹೊಸ ರೈತರು ಗುಣಮಟ್ಟದ ನಿಯಮಗಳನ್ನು ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು, ಅವರನ್ನು ಒಂದರಿಂದ ಎರಡು ತಿಂಗಳ ಕಾಲ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಇಡಲಾಗುತ್ತದೆ.

ಚಹಾ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಐರನ್ ಕೆಟಲ್ ಕಂಪನಿಯು QR-ಕೋಡ್ ಆಧಾರಿತ ಟ್ರೇಸಿಬಿಲಿಟಿ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರತಿ ಚಹಾ ಪ್ಯಾಕೆಟ್ ಮೇಲೆ ಒಂದು ವಿಶಿಷ್ಟವಾದ QR-ಕೋಡ್ ಇರುತ್ತದೆ, ಇದನ್ನು ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ತಮ್ಮ ಚಹಾವು 'ತೋಟದಿಂದ ಕಪ್‌ವರೆಗೆ' ಸಾಗಿಬಂದ ಹಾದಿಯನ್ನು ಪತ್ತೆಹಚ್ಚಬಹುದು. ಕೋಡ್ ಅನ್ನು ಸ್ಕ್ಯಾನ್ ಮಾಡುವುದರಿಂದ ಗ್ರಾಹಕರು ಈ ಕೆಳಗಿನ ವಿವರಗಳನ್ನು ಪಡೆಯಬಹುದು:

  • ರೈತನ ಹೆಸರು,
  • ತೋಟದ ಜಿಯೋ-ಟ್ಯಾಗ್ ಮಾಡಲಾದ ನಿಖರ ಸ್ಥಳ,
  • ಚಹಾ ಎಲೆಗಳನ್ನು ಚಿವುಟಿದ ನಿಖರ ದಿನಾಂಕ ಮತ್ತು ಸಮಯ,
  • ಎಲೆಗಳು ಕಾರ್ಖಾನೆಯನ್ನು ತಲುಪಿದ ಸಮಯ, ಮತ್ತು
  • ಕೀಟನಾಶಕಗಳ ಬಳಕೆ ಸೇರಿದಂತೆ ಕೃಷಿ ಪದ್ಧತಿಗಳ ವಿವರಗಳು.

ಈ ಡಿಜಿಟಲ್ ಟ್ರೇಸಿಬಿಲಿಟಿ ಮಾದರಿಯು ಗ್ರಾಹಕರ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಇಡೀ ಮೌಲ್ಯ ಸರಪಳಿಯಲ್ಲಿ ಹೊಣೆಗಾರಿಕೆಯನ್ನು ಉತ್ತೇಜಿಸುತ್ತದೆ.

ಆಹಾರ್ 2026 ರಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ಈ ಕಂಪನಿಯು, ತನ್ನ ಈ ವಿಶಿಷ್ಟ ಮಾದರಿಯನ್ನು ಹೆಚ್ಚಿನ ಜನರಿಗೆ ಪರಿಚಯಿಸಲು ಈ ಪ್ರದರ್ಶನವನ್ನು ಒಂದು ಉತ್ತಮ ಅವಕಾಶವಾಗಿ ಬಳಸಿಕೊಳ್ಳುತ್ತಿದೆ. ಡಿಜಿಟಲ್ ಟ್ರೇಸಿಬಿಲಿಟಿ, ರೈತ-ಕೇಂದ್ರಿತ ಖರೀದಿ ಮತ್ತು ಗುಣಮಟ್ಟ ಆಧಾರಿತ ಬೆಲೆ ನಿಗದಿಯು ಹೇಗೆ ಕೃಷಿ ಮೌಲ್ಯ ಸರಪಳಿಗಳನ್ನು ಮರುರೂಪಿಸಬಹುದು ಮತ್ತು ಗ್ರಾಹಕರ ನಂಬಿಕೆಯನ್ನು ಗಳಿಸಬಹುದು ಎಂಬುದಕ್ಕೆ ಇವರ ಈ ಪ್ರಯತ್ನಗಳು ಸಾಕ್ಷಿಯಾಗಿವೆ.

ಕಾನ್ಪುರದ ಒಂದು ಮಸಾಲೆ ಉದ್ಯಮವು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ

ಕಾನ್ಪುರ ಮೂಲದ ಮಸಾಲೆ ತಯಾರಿಕಾ ಕಂಪನಿಯಾದ ಸುಭಾಷ್ ಆಗ್ರೋ ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್, ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಿರ ಬೆಳವಣಿಗೆಯ ಪಯಣವನ್ನು ಪ್ರತಿಬಿಂಬಿಸುತ್ತದೆ. 1992 ರಲ್ಲಿ ಸ್ಥಾಪನೆಯಾದ ಈ ಉದ್ಯಮವು, ಆರಂಭದಲ್ಲಿ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಅಗತ್ಯ ಮಸಾಲೆಗಳನ್ನು ತಯಾರಿಸುವ ಮೂಲಕ ಕಾರ್ಯಾರಂಭ ಮಾಡಿತು. ಕಳೆದ ಮೂರು ದಶಕಗಳಲ್ಲಿ, ಇದು ಹಂತ ಹಂತವಾಗಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ ಮತ್ತು ಹಲವಾರು ರಾಜ್ಯಗಳಲ್ಲಿ ವಿತರಕರು ಹಾಗೂ ಚಿಲ್ಲರೆ ವ್ಯಾಪಾರ ಪಾಲುದಾರರ ಬಲವಾದ ಜಾಲವನ್ನು ನಿರ್ಮಿಸಿದೆ. ಇಂದು, ಕಂಪನಿಯು ಅರಿಶಿನ, ಕೊತ್ತಂಬರಿ, ಮೆಣಸಿನಕಾಯಿ ಮತ್ತು ಬ್ಲೆಂಡೆಡ್ (ಮಿಶ್ರಿತ) ಮಸಾಲೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಡುಗೆ ಅಗತ್ಯವಸ್ತುಗಳನ್ನು ಉತ್ಪಾದಿಸುತ್ತಿದೆ.

ಕಂಪನಿಯ ಪ್ರತಿನಿಧಿಯಾದ ಜಿತೇಂದ್ರ ಮೋಹನ್ ತಿವಾರಿ ಅವರ ಪ್ರಕಾರ, ಕಂಪನಿಯು ಸ್ನ್ಯಾಕ್ಸ್ ತಯಾರಕರಿಗೆ, ವಿಶೇಷವಾಗಿ 'ನಮ್ಕೀನ್' ನಂತಹ ಉತ್ಪನ್ನಗಳಿಗೆ ಅಗತ್ಯವಿರುವ ಸೀಸನಿಂಗ್ ಬ್ಲೆಂಡ್ಸ್ (ರುಚಿವರ್ಧಕ ಮಿಶ್ರಣಗಳನ್ನು) ಸಹ ಪೂರೈಸುತ್ತದೆ. ಕಾಲಾನಂತರದಲ್ಲಿ, ಈ ಉದ್ಯಮವು ಕೇವಲ ಮಸಾಲೆಗಳಿಗೆ ಸೀಮಿತವಾಗದೆ ತನ್ನ ಉತ್ಪನ್ನಗಳ ಪಟ್ಟಿಯನ್ನು ವಿಸ್ತರಿಸಿದೆ. ಪ್ರಸ್ತುತ ಇದು ಹಪ್ಪಳ, ಉಪ್ಪಿನಕಾಯಿ, ಅಗರಬತ್ತಿ, ಧೂಪದ ಕಡ್ಡಿಗಳು, ಇಂಗು ಮತ್ತು ಸೋಯಾ ನಗೆಟ್ಸ್ ಉತ್ಪನ್ನಗಳನ್ನು ಸಹ ಒಳಗೊಂಡಿದೆ.

"ಇಂದು, ನಾವು ಪ್ರತಿ ಪ್ಯಾಕ್‌ನಲ್ಲೂ ಸುಗಂಧ, ಶುದ್ಧತೆ ಮತ್ತು ತಾಜಾತನದ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ 100 ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ."

ಕಂಪನಿಯ ಉತ್ಪನ್ನಗಳು ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಬಲವಾದ ಜಾಲದ ಮೂಲಕ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಿತರಣೆಯಾಗುತ್ತಿವೆ. ಆಹಾರ್ 2026 ರಲ್ಲಿ ಭಾಗವಹಿಸಿರುವುದು ಕಂಪನಿಗೆ ತನ್ನ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶಿಸಲು, ಸಂಭಾವ್ಯ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತದ ಬೆಳೆಯುತ್ತಿರುವ ಆಹಾರ ಸಂಸ್ಕರಣಾ ವಲಯದಲ್ಲಿ ಹೊಸ ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಒಂದು ಉತ್ತಮ ವೇದಿಕೆಯನ್ನು ಒದಗಿಸಿದೆ.

ತಾಜಾ ಹಣ್ಣುಗಳಿಂದ ಫ್ರೋಜನ್ ನಾವೀನ್ಯತೆಗಳವರೆಗೆ

ಆಹಾರ್ 2026 ರಲ್ಲಿ ಗಮನ ಸೆಳೆಯುತ್ತಿರುವ ಉದ್ಯಮಗಳಲ್ಲಿ ನಾಗ್ಪುರ ಮೂಲದ ಗಣಪತಿ ಫ್ರೋಜನ್ ವರ್ಲ್ಡ್ ಕೂಡ ಒಂದು. ಕಂಪನಿಯ ಪ್ರತಿನಿಧಿಯಾದ ಶ್ರೀ ಗೌರವ್ ಅವರು ತಿಳಿಸಿದಂತೆ, ಆಹಾರ ಸಂಸ್ಕರಣೆ ಮತ್ತು ಅತಿಥಿಸತ್ಕಾರ ವಲಯಕ್ಕೆ ಅಗತ್ಯವಿರುವ ಮೌಲ್ಯವರ್ಧಿತ ಹಣ್ಣಿನ ಪದಾರ್ಥಗಳ ಮೇಲೆ ಗಮನ ಹರಿಸುತ್ತಿರುವ ಬೆಳೆಯುತ್ತಿರುವ ಉದ್ಯಮ ವಿಭಾಗವನ್ನು ಈ ಕಂಪನಿಯು ಪ್ರತಿನಿಧಿಸುತ್ತದೆ. ಸುಮಾರು ಎಂಟು ವರ್ಷಗಳ ಹಿಂದೆ ಸ್ಥಾಪನೆಯಾದ ಈ ಉದ್ಯಮವು, ಆರಂಭದಲ್ಲಿ ಕಾಲೋಚಿತ ಹಣ್ಣುಗಳನ್ನು ಸಂಸ್ಕರಿಸಿ ಅವುಗಳನ್ನು ಉದ್ಯಮಗಳಿಗೆ ಅನುಕೂಲಕರವಾದ ಮತ್ತು ಬಳಕೆಗೆ ಸಿದ್ಧವಿರುವ ಪದಾರ್ಥಗಳಾಗಿ ಪರಿವರ್ತಿಸುವತ್ತ ಗಮನ ಹರಿಸಿತು.

ಕಾಲಾನಂತರದಲ್ಲಿ, ಈ ಸಂಸ್ಥೆಯು ಫ್ರೋಜನ್ ಫ್ರೂಟ್ ಪಲ್ಪ್‌ಗಳು (ಹಣ್ಣಿನ ತಿರುಳು), ಫ್ರೂಟ್ ಶಾಟ್‌ಗಳು, ಕುಲ್ಫಿ ಪ್ರಿಮಿಕ್ಸ್‌ಗಳು ಮತ್ತು ಫ್ರೋಜನ್ ಬೆರ್ರಿಗಳನ್ನು ಒಳಗೊಂಡ ವೈವಿಧ್ಯಮಯ ಉತ್ಪನ್ನಗಳ ಪಟ್ಟಿಯನ್ನು ಅಭಿವೃದ್ಧಿಪಡಿಸಿದೆ. ಇವುಗಳನ್ನು ಪಾನೀಯಗಳು, ಸಿಹಿ ತಿಂಡಿಗಳು ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತಾಜಾ ಹಣ್ಣುಗಳನ್ನು ಫ್ರೋಜನ್ ತಿರುಳು ಮತ್ತು ಪದಾರ್ಥಗಳಾಗಿ ಪರಿವರ್ತಿಸುವ ಮೂಲಕ, ಋತುಮಾನದ ಲಭ್ಯತೆಯನ್ನು ಅವಲಂಬಿಸದೆ ವರ್ಷಪೂರ್ತಿ ಹಣ್ಣಿನ ರುಚಿಗಳನ್ನು ಪಡೆಯಲು ಈ ಕಂಪನಿಯು ಆಹಾರ ತಯಾರಕರಿಗೆ ಅನುವು ಮಾಡಿಕೊಡುತ್ತದೆ.

ಅಲ್ಫಾನ್ಸೋ ಮಾವಿನ ಹಣ್ಣಿನ ತಿರುಳು, ಸೀತಾಫಲದ ತಿರುಳು ಮತ್ತು ನೇರಳೆ ಹಣ್ಣಿನ ತಿರುಳಿನಂತಹ ಉತ್ಪನ್ನಗಳನ್ನು ಸಾಮಾನ್ಯವಾಗಿ ಮಿಲ್ಕ್‌ಶೇಕ್‌ಗಳು, ಐಸ್‌ಕ್ರೀಮ್‌ಗಳು ಮತ್ತು ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಉತ್ಪನ್ನಗಳನ್ನು ಸುಮಾರು -18 °C ತಾಪಮಾನದಲ್ಲಿ ಸಂರಕ್ಷಿಸಲಾಗುತ್ತದೆ. ಇದು ಹಣ್ಣಿನ ತಾಜಾತನ, ರುಚಿ ಮತ್ತು ಶೆಲ್ಫ್ ಸ್ಟೆಬಿಲಿಟಿಯನ್ನು (ಬಾಳಿಕೆ) ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ, ವಾಣಿಜ್ಯ ಬಳಕೆದಾರರಿಗೆ ಇವುಗಳ ಶೇಖರಣೆ ಮತ್ತು ಸಾಗಣೆಯನ್ನು ಸುಲಭಗೊಳಿಸುತ್ತದೆ.

ಮುಖ್ಯವಾಗಿ ಬಿ ಟು ಬಿ (ಬಿ2ಬಿ - ವ್ಯವಹಾರದಿಂದ ವ್ಯವಹಾರಕ್ಕೆ) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಪತಿ ಫ್ರೋಜನ್ ವರ್ಲ್ಡ್, ಮಿಲ್ಕ್‌ಶೇಕ್, ಪಾನೀಯಗಳು, ಸಿಹಿತಿಂಡಿಗಳು ಮತ್ತು ಇತರ ಹಣ್ಣು ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಹಣ್ಣಿನ ಪದಾರ್ಥಗಳನ್ನು ಪೂರೈಸುತ್ತದೆ. ಇದರೊಂದಿಗೆ, ಕಂಪನಿಯು HoReCa (ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟರಿಂಗ್) ವಲಯಕ್ಕೂ ತನ್ನ ಸೇವೆ ನೀಡುತ್ತಿದ್ದು, ದೊಡ್ಡ ಪ್ರಮಾಣದ ಆಹಾರ ತಯಾರಿಕೆಯನ್ನು ದಕ್ಷಗೊಳಿಸಲು ಅಗತ್ಯವಾದ ಪದಾರ್ಥಗಳನ್ನು ಒದಗಿಸುತ್ತಿದೆ.

2023 ರಿಂದ ಮೂರು ಬಾರಿ ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಗಣಪತಿ ಫ್ರೋಜನ್ ವರ್ಲ್ಡ್, ತನ್ನ ಉತ್ಪನ್ನ ಶ್ರೇಣಿಯನ್ನು ಪ್ರದರ್ಶಿಸಲು ಮತ್ತು ದೇಶಾದ್ಯಂತದ ಆಹಾರ ಸಂಸ್ಕಾರಕರು, ಅತಿಥಿಸತ್ಕಾರ ಉದ್ಯಮಗಳು ಮತ್ತು ವಿತರಕರೊಂದಿಗೆ ಸಂಪರ್ಕ ಸಾಧಿಸಲು ಆಹಾರ್ 2026 ಅನ್ನು ಒಂದು ಪ್ರಮುಖ ವೇದಿಕೆಯಾಗಿ ಬಳಸಿಕೊಳ್ಳುವುದನ್ನು ಮುಂದುವರಿಸಿದೆ.

"ನಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ದೇಶಾದ್ಯಂತದ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು 'ಆಹಾರ್' ನಮಗೆ ಒಂದು ಪ್ರಮುಖ ವೇದಿಕೆಯಾಗಿದೆ. ಪ್ರತಿ ವರ್ಷವೂ ನಾವು ಇಲ್ಲಿ ಹೊಸ ಅವಕಾಶಗಳು ಮತ್ತು ಪಾಲುದಾರಿಕೆಗಳು ರೂಪುಗೊಳ್ಳುವುದನ್ನು ಕಾಣುತ್ತಿದ್ದೇವೆ."

ಗುಜರಾತ್‌ನ ನಿರ್ಜಲೀಕರಣಗೊಂಡ (ಡಿಹೈಡ್ರೇಟೆಡ್) ಆಹಾರ ನಾವೀನ್ಯತೆಗಳು

ಭಾರತದ ಬೆಳೆಯುತ್ತಿರುವ ಆಹಾರ ಸಂಸ್ಕರಣಾ ವಲಯವು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವ ಮತ್ತು ಬಳಸುವ ವಿಧಾನವನ್ನೇ ಬದಲಾಯಿಸುತ್ತಿರುವ ಹೊಸ ಆವಿಷ್ಕಾರದ ಸ್ಟಾರ್ಟ್‌ಅಪ್‌ಗಳ ಉಗಮಕ್ಕೆ ಸಾಕ್ಷಿಯಾಗುತ್ತಿದೆ. ಅಂತಹ ಒಂದು ಉದಾಹರಣೆ, ಆಹಾರ್ 2026 ರಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವ, ವ್ಯವಸ್ಥಾಪಕ ನಿರ್ದೇಶಕ ಧ್ರುವ್ ಭಲಾರಿಯಾ ಅವರ ನೇತೃತ್ವದ ಆರಂಭ್ ಫುಡ್ ಎಕ್ಸ್‌ಪೋರ್ಟ್. 2021 ರ ಸುಮಾರಿಗೆ ಸ್ಥಾಪನೆಯಾದ ಮತ್ತು ಗುಜರಾತ್‌ನ ಭಾವನಗರ ಮೂಲದ ಈ ಕಂಪನಿಯು, ಮನೆಗಳು ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಿಗಾಗಿ ಬಳಸಲು ಸಿದ್ಧವಿರುವ ನಿರ್ಜಲೀಕರಣಗೊಂಡ ಪದಾರ್ಥಗಳನ್ನು (ನಿರ್ಜಲೀಕರಣಗೊಂಡ ಹಣ್ಣುಗಳು, ತರಕಾರಿಗಳು ಮತ್ತು ಫ್ಲೇವರಿಂಗ್ ಪೌಡರ್‌ಗಳು) ಉತ್ಪಾದಿಸುವತ್ತ ಗಮನಹರಿಸಿದೆ.

ಪ್ರದರ್ಶನದ ಮಳಿಗೆಯಲ್ಲಿ ಕಂಪನಿಯು ಟೊಮೆಟೊ, ನಿಂಬೆ, ಬೀಟ್ರೂಟ್, ಆಲೂಗಡ್ಡೆ ಮತ್ತು ಈರುಳ್ಳಿ ಫ್ಲೇಕ್‌ಗಳನ್ನು (ಹಲ್ಲೆಗಳು), ಹಾಗೆಯೇ ಸೇಬು ಮತ್ತು ನಿಂಬೆ ಪುಡಿಗಳಂತಹ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಇವುಗಳ ಜೊತೆಗೆ ಪುದೀನಾ, ಕರಿಬೇವು ಮತ್ತು ಕಸೂರಿ ಮೇಥಿಯಂತಹ ನಿರ್ಜಲೀಕರಣಗೊಂಡ ಗಿಡಮೂಲಿಕೆಗಳನ್ನು ಸಹ ಉತ್ಪಾದಿಸುತ್ತಿದ್ದು, ಇವುಗಳನ್ನು ಮಸಾಲೆ ಮಿಶ್ರಣಗಳು, ಇನ್‌ಸ್ಟಂಟ್ ಆಹಾರಗಳು, ಬೇಕರಿ ಉತ್ಪನ್ನಗಳು, ಪಾನೀಯಗಳು ಮತ್ತು ಸ್ಮೂಥಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕಂಪನಿಯ ಕಾರ್ಯವೈಖರಿಯು ಆಹಾರ ಸಂಸ್ಕರಣೆಯಲ್ಲಿ ನಿರ್ಜಲೀಕರಣ ತಂತ್ರಜ್ಞಾನದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ತಾಜಾ ಉತ್ಪನ್ನಗಳನ್ನು ಹೆಚ್ಚು ಕಾಲ ಬಾಳಿಕೆ ಬರುವ ಪುಡಿ ಮತ್ತು ಫ್ಲೇಕ್‌ಗಳಾಗಿ ಪರಿವರ್ತಿಸುವ ಮೂಲಕ, ಇಂತಹ ಉದ್ಯಮಗಳು ಕೃಷಿಗೆ ಮೌಲ್ಯವರ್ಧನೆ ಮಾಡುವುದಲ್ಲದೆ, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುತ್ತಿವೆ.

ಭಾರತದ ವಿಕಸನಗೊಳ್ಳುತ್ತಿರುವ ಆಹಾರ ಸಂಸ್ಕರಣಾ ಪರಿಸರ ವ್ಯವಸ್ಥೆಯ ಪ್ರದರ್ಶನ

ಆಹಾರ್ 2026ರಲ್ಲಿ ಕಂಡುಬರುತ್ತಿರುವ ವಿವಿಧ ಯಶಸ್ಸಿನ ಕಥೆಗಳು ಭಾರತದ ಆಹಾರ ಸಂಸ್ಕರಣಾ ವಲಯದ ಬೆಳೆಯುತ್ತಿರುವ ಚೈತನ್ಯವನ್ನು ಉಲ್ಲೇಖಿಸುತ್ತದೆ. ಪ್ರಾದೇಶಿಕ ರುಚಿಗಳನ್ನು ಉತ್ತೇಜಿಸುವ ಸಣ್ಣ ಉದ್ಯಮಿಗಳಿಂದ ಹಿಡಿದು, ನವೀನ ತಂತ್ರಜ್ಞಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಸ್ಟಾರ್ಟ್‌ಅಪ್‌ಗಳವರೆಗೆ, ಈ ಪ್ರದರ್ಶನವು ದೇಶಾದ್ಯಂತದ ಉದ್ಯಮಗಳು ಹೇಗೆ ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಉದ್ಯಮಿಗಳು, ಉದ್ಯಮದ ಪಾಲುದಾರರು ಮತ್ತು ಖರೀದಿದಾರರನ್ನು ಒಂದೇ ಸೂರಿನಡಿ ತರುವ ಮೂಲಕ, 'ಆಹಾರ್' ನಂತಹ ವೇದಿಕೆಗಳು ಆಹಾರ ಮೌಲ್ಯ ಸರಪಳಿಯಲ್ಲಿನ ಸಂಪರ್ಕಗಳನ್ನು ಬಲಪಡಿಸಲು ಸಹಾಯ ಮಾಡುತ್ತಿವೆ. ಜೊತೆಗೆ ಭಾರತದ ಆಹಾರ ಸಂಸ್ಕರಣಾ ಪರಿಸರ ವ್ಯವಸ್ಥೆಯ ಒಳಗಿರುವ ಸಮೃದ್ಧಿ ಮತ್ತು ನಾವೀನ್ಯತೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿವೆ.

References

Ministry of Commerce & Industry

https://www.itpo.gov.in/aahar-2026-delhi

Click here for pdf file. 

 

*****

 

(Features ID: 157831) आगंतुक पटल : 12
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali
National Portal Of India
STQC Certificate