Rural Prosperity
ಜನೌಷಧಿಯಲ್ಲಿ ದೊರೆಯುವ ಕೈಗೆಟುಕುವ ದರದ ಔಷಧಿಗಳು ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸುತ್ತವೆ
ನೆರೆಹೊರೆಯ ಕೇಂದ್ರಗಳು ಪ್ರತಿ ಮನೆಗೂ ವಿಶ್ವಾಸಾರ್ಹ ಚಿಕಿತ್ಸೆಯನ್ನು ಹತ್ತಿರವಾಗಿಸುತ್ತಿವೆ
Posted On:
05 MAR 2026 11:18AM
ದೆಹಲಿಯ ಒಂದು ಶಾಂತಿಯುತ ಬಡಾವಣೆಯ ಗಲ್ಲಿಯಲ್ಲಿರುವ ಒಂದು ಸಣ್ಣ ಔಷಧಾಲಯವು ಕೇವಲ ಮೆಡಿಕಲ್ ಸ್ಟೋರ್‌ಗಿಂತಲೂ ಮಿಗಿಲಾದ ಸ್ಥಾನ ಪಡೆದಿದೆ. 'ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ' ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 'ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ'ವು ದೈನಂದಿನ ಆರೋಗ್ಯ ಸೇವೆಯನ್ನು ಉಳಿತಾಯ, ಸ್ವಾವಲಂಬನೆ ಮತ್ತು ಗೌರವದ ಕಥೆಯಾಗಿ ಪರಿವರ್ತಿಸುತ್ತಿದೆ. ಹಿರಿಯ ನಾಗರಿಕರಿಗೆ ಈ ಕೇಂದ್ರಗಳು ಕೇವಲ ಔಷಧಿಗಳನ್ನು ಮಾತ್ರವಲ್ಲದೆ, ಅವರ ದೈನಂದಿನ ಜೀವನದಲ್ಲಿ ಸ್ವಾತಂತ್ರ್ಯ, ಆತ್ಮವಿಶ್ವಾಸ ಮತ್ತು ಘನತೆಯನ್ನು ಒದಗಿಸುತ್ತಿವೆ.



ಅರವತ್ತನೇ ವಯಸ್ಸಿನಲ್ಲಿ ಕೈಗೆಟುಕುವ ದರದ ಔಷಧಿಗಳು ಮತ್ತು ಮರಳಿ ಬಂದ ಆತ್ಮವಿಶ್ವಾಸ
ಶ್ವೇತಾ ಜಿ ಅವರು 60ನೇ ವಯಸ್ಸಿನಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಆದರೂ, ಅವರು ತಮ್ಮ ಮನೆಯ ಹತ್ತಿರವಿರುವ ಜನೌಷಧಿ ಕೇಂದ್ರಕ್ಕೆ ಬಹಳ ಆತ್ಮವಿಶ್ವಾಸದಿಂದ ನಡೆದು ಹೋಗುತ್ತಾರೆ. ಕಳೆದ ಎಂಟು ವರ್ಷಗಳಿಂದ, ಈ ಕೇಂದ್ರವು ಅವರ ನಂಬಿಕಸ್ತ ಆಸರೆಯಾಗಿದೆ. ಅವರು ಮಧುಮೇಹ, ಅಸಿಡಿಟಿ, ಕ್ಯಾಲ್ಸಿಯಂ, ವಿಟಮಿನ್ ಮತ್ತು ಇನ್ಸುಲಿನ್ ಮಾತ್ರೆಗಳನ್ನು ನಿಯಮಿತವಾಗಿ ಈ ಜನೌಷಧಿ ಕೇಂದ್ರದಿಂದಲೇ ಖರೀದಿಸುತ್ತಾರೆ.

ಹಿಂದೆ ಮಾತ್ರೆಗಳು ತುಂಬಾ ದುಬಾರಿಯಾಗಿದ್ದವು ಮತ್ತು ಪ್ರತಿ ತಿಂಗಳ ಖರ್ಚುಗಳನ್ನು ನಿಭಾಯಿಸುವುದು ಒತ್ತಡದಿಂದ ಕೂಡಿತದಾಗಿತ್ತು" ಎಂದು ಅವರು ಹಂಚಿಕೊಳ್ಳುತ್ತಾರೆ. "ಈಗ, ನಾನು ಪ್ರತಿ ತಿಂಗಳು ಗಣನೀಯ ಪ್ರಮಾಣದ ಹಣವನ್ನು ಉಳಿಸುತ್ತಿದ್ದೇನೆ." ಶ್ವೇತಾ ಅವರಿಗೆ ಇದರ ಪ್ರಯೋಜನ ಕೇವಲ ಆರ್ಥಿಕವಾದುದು ಮಾತ್ರವಲ್ಲ; ಈ ಕೇಂದ್ರವು ಮನೆಯ ಹತ್ತಿರವೇ ಇರುವುದು ಅವರು ಸ್ವತಂತ್ರವಾಗಿ ಹೊರಬರಲು ಮತ್ತು ತಮ್ಮ ಆರೋಗ್ಯವನ್ನು ತಾವೇ ನಿರ್ವಹಿಸಿಕೊಳ್ಳಲು ಶಕ್ತಿ ನೀಡಿದೆ. "ಗುಣಮಟ್ಟದಲ್ಲಿ ಬೇರೆ ಯಾವುದಕ್ಕೂ ಹೋಲಿಕೆ ಇಲ್ಲ," ಎಂದು ಅವರು ದೃಢವಾಗಿ ಹೇಳುತ್ತಾರೆ. "ಈ ಔಷಧಿಗಳು ಬಹಳ ಪರಿಣಾಮಕಾರಿಯಾಗಿವೆ ಮತ್ತು ನಾನು ಸಂಪೂರ್ಣ ತೃಪ್ತಿ ಹೊಂದಿದ್ದೇನೆ." ಒಬ್ಬರೇ ವಾಸಿಸುವ ಹಿರಿಯ ನಾಗರಿಕರಿಗೆ ಕೈಗೆಟುಕುವ ದರದ ಆರೋಗ್ಯ ಸೇವೆಯು ಹೇಗೆ ಆತ್ಮವಿಶ್ವಾಸವನ್ನು ಮರಳಿ ತರಬಲ್ಲದು ಎಂಬುದಕ್ಕೆ ಅವರ ಕಥೆಯೇ ಸಾಕ್ಷಿ.
'ದೂರದ ಪ್ರಯಾಣವಿಲ್ಲ, ಭಾರೀ ಮೊತ್ತದ ಬಿಲ್‌ಗಳಿಲ್ಲ, ಕೇವಲ ಘನತೆಯಿಂದ ಕೂಡಿದ ಆರೈಕೆ'

ಗೋವರ್ಧನ್ ಅವರಿಗೆ ಈ ಕೇಂದ್ರವು ಒಂದು ವರವೆಂದು ಭಾಸಸುತ್ತಿದೆ. ಕಳೆದ ಆರು ವರ್ಷಗಳಿಂದ ಅವರು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಇಲ್ಲಿಂದಲೇ ಔಷಧಿಗಳನ್ನು ಖರೀದಿಸುತ್ತಿದ್ದಾರೆ.
“ಇದು ನಮ್ಮ ಮನೆಯ ಹತ್ತಿರವೇ ಇರುವುದರಿಂದ, ಯಾರ ಮೇಲೂ ಅವಲಂಬಿತರಾಗದೆ ನಾವೇ ಬರಬಹುದು,” ಎಂದು ಅವರು ಹೇಳುತ್ತಾರೆ. “ನಮಗೆ ಉತ್ತಮ ಗುಣಮಟ್ಟದ ಔಷಧಿಗಳು ಕೈಗೆಟುಕುವ ದರದಲ್ಲಿ ಸಿಗುತ್ತವೆ. ಅದೇ ಒಂದು ರೀತಿಯಲ್ಲಿ ನಮಗೆ ಶಕ್ತಿ ತುಂಬಿದಂತಿದೆ.” ಸುಲಭ ಲಭ್ಯತೆ ಮತ್ತು ಕಡಿಮೆ ಬೆಲೆ ಇವೆರಡೂ ಸೇರಿ ಅವರಿಗೆ ಸ್ವಾತಂತ್ರ್ಯದ ಭಾವನೆಯನ್ನು ನೀಡಿವೆ. ಸುದೀರ್ಘ ಪ್ರಯಾಣವಿಲ್ಲ, ದೊಡ್ಡ ಮೊತ್ತದ ಬಿಲ್‌ಗಳಿಲ್ಲ, ಕೇವಲ ಕೈಗೆಟುಕುವ ದೂರದಲ್ಲಿ ನಂಬಿಕಸ್ತ ಔಷಧಿಗಳು ದೊರೆಯುತ್ತಿವೆ.
'₹7,000 ಬಿಲ್‌ನಿಂದ ಆರ್ಥಿಕ ನೆಮ್ಮದಿಯತ್ತ'
ಅದಕ್ಕೆ ಕೆಲವೇ ಹೆಜ್ಜೆಗಳ ದೂರದಲ್ಲಿ, ಸಂಜೀವ್ ಕುಮಾರ್ ಅವರು ಕೌಂಟರ್‌ನಲ್ಲಿ ಕಾಯುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಅವರು ಇದೇ ಕೇಂದ್ರದಿಂದ ತಮಗೆ ಮತ್ತು ತಮ್ಮ ಪತ್ನಿಗೆ ಬೇಕಾದ ಔಷಧಿಗಳನ್ನು ಖರೀದಿಸುತ್ತಿದ್ದಾರೆ. “ನನಗೆ ಮತ್ತು ನನ್ನ ಪತ್ನಿಗೆ ₹2,000 ಒಳಗಡೆ ಔಷಧಿಗಳು ಸಿಗುತ್ತವೆ. ಇದೇ ಔಷಧಿಗಳನ್ನು ನಾವು ಹೊರಗಡೆ ಖರೀದಿಸಬೇಕಾಗಿದ್ದರೆ ಪ್ರತಿ ತಿಂಗಳು ಸುಮಾರು ₹6,000–7,000 ಖರ್ಚಾಗುತ್ತಿತ್ತು,” ಎಂದು ಅವರು ವಿವರಿಸುತ್ತಾರೆ.

ಈ ಉಳಿತಾಯವು ಅವರ ಮನೆಯ ಬಜೆಟ್‌ನಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ. "ನಾವು ಈಗ ಉಳಿಸುವ ಹಣವು ಕುಟುಂಬದ ಇತರ ಅಗತ್ಯಗಳಿಗಾಗಿ ಬಳಕೆಯಾಗುತ್ತದೆ," ಎಂದು ಅವರು ಸೇರಿಸುತ್ತಾರೆ. ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುತ್ತಿರುವ ಕುಟುಂಬಗಳಿಗೆ, ವೈದ್ಯಕೀಯ ವೆಚ್ಚಗಳು ಕಡಿಮೆಯಾಗುವುದೆಂದರೆ ಮಾನಸಿಕ ಒತ್ತಡ ಕಡಿಮೆಯಾಗುವುದು ಮತ್ತು ಉತ್ತಮ ಆರ್ಥಿಕ ಯೋಜನೆಯನ್ನು ಮಾಡುವುದು ಎಂದರ್ಥ.
‘ಜೇಬಿಗೆ ಹೊರೆಯಾಗದ ಆರೋಗ್ಯ ಸೇವೆ’

ಮೆಕ್ಯಾನಿಕಲ್ ಕೆಲಸಗಾರರಾದ ಅಶೋಕ್ ಕುಮಾರ್ ಅವರು ಕೂಡ ಇದೇ ರೀತಿಯ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಅವರು ಅಥವಾ ಅವರ ಕುಟುಂಬಕ್ಕೆ ಔಷಧಿಗಳ ಅಗತ್ಯವಿದ್ದಾಗಲೆಲ್ಲಾ, ಜನೌಷಧಿ ಕೇಂದ್ರವೇ ಅವರ ಮೊದಲ ಆಯ್ಕೆಯಾಗಿರುತ್ತದೆ.
"ನಮಗೆ ಇಲ್ಲಿ ಕೈಗೆಟುಕುವ ದರದಲ್ಲಿ ಔಷಧಿಗಳು ಸಿಗುತ್ತವೆ," ಎಂದು ಅವರು ಹೇಳುತ್ತಾರೆ. "ಅವು ನಮ್ಮ ಜೇಬಿಗೆ ಯಾವುದೇ ಹೊರೆಯಾಗುವುದಿಲ್ಲ." ಅವರಂತಹ ಶ್ರಮಜೀವಿ ಕುಟುಂಬಗಳಿಗೆ ಪ್ರತಿಯೊಂದು ರೂಪಾಯಿಯೂ ಮುಖ್ಯವಾಗಿರುತ್ತದೆ. ಕೈಗೆಟುಕುವ ದರದ ಔಷಧಿಗಳು ಆರೋಗ್ಯವು ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುತ್ತವೆ.
'ಔಷಧಿ ಚೀಟಿಯ ಆತಂಕವನ್ನು ನಿಮ್ಮದಿಯನ್ನಾಗಿ ಪರಿವರ್ತಿಸುವುದು'

ಸುನೀಲ್ ಕುಮಾರ್ ಅವರು ಈ ಭಾಗದಲ್ಲಿ ಕೇಂದ್ರದ ಇರುವಿಕೆಯಿಂದ ಉಂಟಾಗಿರುವ ವಿಶಾಲವಾದ ಪರಿಣಾಮವನ್ನು ಎತ್ತಿ ತೋರಿಸುತ್ತಾರೆ. ಇಲ್ಲಿ ಔಷಧಿಗಳು ಗಮನಾರ್ಹವಾಗಿ ಅಗ್ಗವಾಗಿವೆ ಎಂದು ಅವರು ವಿವರಿಸುತ್ತಾರೆ. ಹಿಂದೆ, ವೈದ್ಯರ ಔಷಧಿ ಚೀಟಿಯನ್ನು ನೋಡಿದ ತಕ್ಷಣವೇ ಅದರ ಅತಿಯಾದ ವೆಚ್ಚವನ್ನು ನೆನೆದು ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು. ಈಗ, ಜನೌಷಧಿ ಕೇಂದ್ರದಲ್ಲಿ ಕೈಗೆಟುಕುವ ದರದ ಮತ್ತು ಉತ್ತಮ ಗುಣಮಟ್ಟದ ಔಷಧಿಗಳು ಲಭ್ಯವಿರುವುದರಿಂದ, ಆ ಆತಂಕವು ಈಗ ನೆಮ್ಮದಿಯಾಗಿ ಬದಲಾಗಿದೆ.
'ತನ್ನ ಸಮುದಾಯವನ್ನು ಸಬಲೀಕರಣಗೊಳಿಸುತ್ತಿರುವ ಒಬ್ಬ ದಿವ್ಯಾಂಗ ಉದ್ಯಮಿ'
ರಾಮ್ ಆಧಾರ್ ಒಬ್ಬ ದಿವ್ಯಾಂಗ ಉದ್ಯಮಿಯಾಗಿದ್ದು, ಜನೌಷಧಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಒಂದು ಕಾಲು ಮತ್ತೊಂದಕ್ಕಿಂತ ಚಿಕ್ಕದಾಗಿರುವ 'ಲೆಗ್ ಲೆಂಗ್ತ್ ಡಿಸ್ಕ್ರೆಪೆನ್ಸಿ' ಸಮಸ್ಯೆಯೊಂದಿಗೆ ಬದುಕುತ್ತಿರುವ ಅವರು, ತಮ್ಮ ಸವಾಲನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿದರು. ದೈಹಿಕ ಮಿತಿಗಳು ತಮ್ಮನ್ನು ಕಟ್ಟಿಹಾಕಲು ಬಿಡದ ಅವರು, ದೃಢಸಂಕಲ್ಪ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಮುನ್ನಡೆದರು: ಮನೆಗೆ ಹತ್ತಿರದಲ್ಲಿಯೇ ಗುಣಮಟ್ಟದ ಮತ್ತು ಕೈಗೆಟುಕುವ ದರದ ಔಷಧಿಗಳನ್ನು ಒದಗಿಸುವ ಮೂಲಕ ತಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸುವುದು ಅವರ ಗುರಿಯಾಗಿದೆ.
"ನಾನು ನನ್ನ ಪ್ರದೇಶಕ್ಕಾಗಿ ಅರ್ಥಪೂರ್ಣವಾದ ಏನನ್ನಾದರೂ ಮಾಡಲು ಬಯಸಿದ್ದೆ," ಎಂದು ಅವರು ಮೃದುವಾದ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇಂದು, ಅವರ ಕೇಂದ್ರವು ಪ್ರತಿದಿನ ಸುಮಾರು 30 ರಿಂದ 40 ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ. ಆ ಭಾಗದ ಅನೇಕರಿಗೆ, ಅವರ ಮಳಿಗೆಯು ಕೇವಲ ಒಂದು ಔಷಧಾಲಯವಲ್ಲ; ಅದು ಚೇತರಿಸಿಕೊಳ್ಳುವ ಶಕ್ತಿ ಮತ್ತು ಸೇವೆಯ ಸಂಕೇತವಾಗಿದೆ. ಅವರ ಈ ಪಯಣವು, ಅವಕಾಶದ ಜೊತೆಗೆ ಧೈರ್ಯವು ಸೇರಿದಾಗ ಕೇವಲ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲದೆ, ಇಡೀ ಸಮುದಾಯವನ್ನೇ ಹೇಗೆ ಬದಲಾಯಿಸಬಹುದು ಎಂಬುದನ್ನು ಪ್ರತಿಬಿಂಬಿಸುತ್ತದೆ.

ಹಿರಿಯ ನಾಗರಿಕರಿಗೆ, ಉದ್ಯೋಗಸ್ಥರಿಗೆ, ದಿವ್ಯಾಂಗ ಉದ್ಯಮಿಗಳಿಗೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುತ್ತಿರುವ ಕುಟುಂಬಗಳಿಗೆ, ಕೈಗೆಟುಕುವ ದರದ ಆರೋಗ್ಯ ಸೇವೆಯು ಕೇವಲ ಒಂದು ಐಷಾರಾಮಿಯಲ್ಲ; ಅದೊಂದು ಅತ್ಯಗತ್ಯವಾಗಿದೆ. ಮತ್ತು ಈ ವೈದ್ಯಕೀಯ ಅಗತ್ಯಗಳು ಜನೌಷಧಿ ಕೇಂದ್ರಗಳಲ್ಲಿ ಯಾವುದೇ ಭಾರಿ ಆರ್ಥಿಕ ಹೊರೆಯಿಲ್ಲದೆ ಪೂರೈಸಲ್ಪಡುತ್ತಿವೆ. ಈ ದೈನಂದಿನ ಕಥೆಗಳ ಮೂಲಕ ಒಂದು ಸಂದೇಶವು ಸ್ಪಷ್ಟವಾಗಿದೆ: ಜನೌಷಧಿ ಕೇಂದ್ರಗಳು ಕೇವಲ ಔಷಧಿಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲ; ಅವು ನಂಬಿಕೆ, ನಿರಾಳತೆ ಮತ್ತು ಸಬಲೀಕರಣದ ಕೇಂದ್ರಗಳಾಗಿವೆ.
References
Ministry of Chemicals and Fertilizers
Click here to see pdf
*****
(Features ID: 157673)
आगंतुक पटल : 31
Provide suggestions / comments