Rural Prosperity
ಪ್ರತಿ ಆರೋಗ್ಯದ ಅಗತ್ಯಕ್ಕೂ ಜನೌಷಧಿ ಉತ್ಪನ್ನಗಳ ಬುಟ್ಟಿ
ಆರ್ಥಿಕ ಒತ್ತಡದ ಕಡಿತ ಮತ್ತು ಯೋಗಕ್ಷೇಮದ ಸುಧಾರಣೆ
Posted On:
04 MAR 2026 9:18AM
ಆರೋಗ್ಯ ರಕ್ಷಣೆ ಎಂದರೆ ಕೇವಲ ಒಂದು ನಿರ್ದಿಷ್ಟ ಕಾಯಿಲೆ ಅಥವಾ ಸಮಸ್ಯೆಗೆ ಒಂದು ಬಾರಿ ಪಡೆಯುವ ಚಿಕಿತ್ಸೆಯಲ್ಲ. ಬದಲಾಗಿ, ಮನೆಯ ಬಜೆಟ್ ಮಿತಿಯಲ್ಲೇ ವ್ಯಕ್ತಿ ಮತ್ತು ಕುಟುಂಬದ ಒಟ್ಟಾರೆ ಯೋಗಕ್ಷೇಮದ ಬಗ್ಗೆ ನಿರಂತರ ಕಾಳಜಿ ವಹಿಸುವುದಾಗಿದೆ. ಉಬ್ಬಸ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಸಮಸ್ಯೆಗಳಿಗೆ ಕೇವಲ ಒಂದು ಬಾರಿಯ ಚಿಕಿತ್ಸೆ ಸಾಕಾಗುವುದಿಲ್ಲ; ಇವುಗಳಿಗೆ ನಿರಂತರ ಮೇಲ್ವಿಚಾರಣೆ ಮತ್ತು ಗುಣಮಟ್ಟದ ಉತ್ಪನ್ನಗಳ ಅಗತ್ಯವಿರುತ್ತದೆ. ಈ ಕಾರಣದಿಂದ ಆರೋಗ್ಯ ರಕ್ಷಣೆಯು ಪದೇ ಪದೇ ಎದುರಾಗುವ ವೆಚ್ಚವಾಗಿ ಪರಿಣಮಿಸುತ್ತದೆ, ಇದು ಕುಟುಂಬಗಳ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ.

ಇಂತಹ ಸಂದರ್ಭಗಳಲ್ಲೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಉತ್ಪನ್ನಗಳ ಬುಟ್ಟಿಯು ಒಂದು ಭರವಸೆಯ ಆಶಕಿರಣವಾಗಿ ಮೂಡಿಬರುತ್ತದೆ. ಇಂದು, ಜನೌಷಧಿ ಉತ್ಪನ್ನಗಳ ಪಟ್ಟಿಯಲ್ಲಿ 2,110 ಕ್ಕೂ ಹೆಚ್ಚು ಔಷಧಿಗಳು, 315 ವೈದ್ಯಕೀಯ ಉಪಕರಣಗಳು ಮತ್ತು ಬಳಕೆ ಸಾಮಗ್ರಿಗಳಿವೆ. ಇವು ಹೃದಯರೋಗ, ಅರ್ಬುದ ರೋಗ, ಮಧುಮೇಹ ವಿರೋಧಿ ಚಿಕಿತ್ಸೆ, ಸೋಂಕು ನಿವಾರಕಗಳು, ಅಲರ್ಜಿ ವಿರೋಧಿ ಮತ್ತು ಜಠರಗರುಳಿನ ಚಿಕಿತ್ಸೆಗಳಂತಹ ಪ್ರಮುಖ ವೈದ್ಯಕೀಯ ಕ್ಷೇತ್ರಗಳನ್ನು ಒಳಗೊಂಡಿವೆ. ಅತ್ಯಂತ ಪ್ರಮುಖವಾದ ವಿಷಯವೆಂದರೆ, ಈ ಔಷಧಿಗಳ ಬೆಲೆಯು ಮಾರುಕಟ್ಟೆಯಲ್ಲಿನ ಪ್ರಮುಖ ಬ್ರಾಂಡೆಡ್ ಔಷಧಿಗಳಿಗಿಂತ 50% ರಿಂದ 80% ರಷ್ಟು ಕಡಿಮೆ ಇರುತ್ತದೆ. ಇದು ಅಗತ್ಯ ವೈದ್ಯಕೀಯ ಆರೈಕೆಯನ್ನು ಕೈಗೆಟಕುವಂತೆ ಮಾಡುವುದಲ್ಲದೆ, ಜನರ ಆರ್ಥಿಕ ಒತ್ತಡವನ್ನು ನಿವಾರಿಸುತ್ತದೆ.

ಈ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ, ಆರೋಗ್ಯ ರಕ್ಷಣಾ ಉತ್ಪನ್ನಗಳು ಕೇವಲ ಪ್ರದರ್ಶನಕ್ಕೆ ಇಟ್ಟಿರುವ ವಸ್ತುಗಳಲ್ಲ; ಅವು ಜನರ ದೈನಂದಿನ ಜೀವನದ ಆಸರೆಯಾಗಿವೆ. ಉದಾಹರಣೆಗೆ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಎಲೆಕ್ಟ್ರಿಕಲ್ ನೆಬ್ಯುಲೈಸರ್ ಯಂತ್ರವು ತಕ್ಷಣದ ಆರಾಮ ಮತ್ತು ಉಪಶಮನವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಇಂತಹ ಯಂತ್ರಗಳ ಬೆಲೆ ಸಾಮಾನ್ಯವಾಗಿ ₹1,500 ರಿಂದ ₹2,000 ವರೆಗೆ ಇರುತ್ತದೆ, ಆದರೆ ಜನೌಷಧಿ ಕೇಂದ್ರಗಳಲ್ಲಿ ಇದು ಕೇವಲ ₹800 ರ ಆಸುಪಾಸಿನಲ್ಲಿ ಲಭ್ಯವಿದೆ. ಅದೇ ರೀತಿ, ಮಧುಮೇಹಿಗಳಿಗೆ ಅತ್ಯಗತ್ಯವಾಗಿರುವ ಗ್ಲುಕೋಮೀಟರ್‌ಗಳು ಅತ್ಯಂತ ಕೈಗೆಟಕುವ ದರದಲ್ಲಿ ಸಿಗುತ್ತವೆ. ಇವುಗಳ ಜೊತೆಗೆ ಪರೀಕ್ಷಾ ಸ್ಟ್ರಿಪ್‌ಗಳನ್ನೂ ರಿಯಾಯಿತಿ ದರದಲ್ಲಿ ನೀಡುವುದರಿಂದ, ರೋಗಿಗಳ ಆರಂಭಿಕ ಮತ್ತು ಮಾಸಿಕ ವೆಚ್ಚ ಎರಡೂ ಕಡಿಮೆಯಾಗುತ್ತದೆ.
ಅಲ್ಲದೆ, ವಯಸ್ಸಾದ ರೋಗಿಗಳಿಗೆ ಅತ್ಯಗತ್ಯವಾಗಿರುವ ಡಿಜಿಟಲ್ ರಕ್ತದೊತ್ತಡ ಮಾನಿಟರ್ ಕೈಗೆಟಕುವ ದರದಲ್ಲಿ ಸಿಗುವುದರಿಂದ, ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವನ್ನು ಇದು ಕಡಿಮೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಇವುಗಳ ಬೆಲೆ ₹1,800 ರಿಂದ ₹2,500 ರವರೆಗೆ ಇದ್ದರೆ, ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಯಾವುದೇ ಆರ್ಥಿಕ ಒತ್ತಡವಿಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇವುಗಳಲ್ಲದೆ, ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು, ನಿಕೋಟಿನ್ ಗಮ್‌ಗಳು, ಎಲ್.ಎಸ್. ಬೆಲ್ಟ್‌ಗಳು ಮತ್ತು ಪೌಷ್ಟಿಕಾಂಶದ ಪೂರಕಗಳು ಈ ಉತ್ಪನ್ನಗಳ ಬುಟ್ಟಿಯನ್ನು ಪರಿಪೂರ್ಣಗೊಳಿಸುತ್ತವೆ. ಇಲ್ಲಿನ ಪ್ರತಿಯೊಂದು ಉತ್ಪನ್ನವೂ ಜನರ ಅತ್ಯಗತ್ಯ ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಪೂರೈಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಜನೌಷಧಿ ಕೇಂದ್ರಗಳ ಕಪಾಟಿನಲ್ಲಿರುವ ಈ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಕೇವಲ ಕಡಿಮೆ ಬೆಲೆಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ; ಬದಲಾಗಿ ಜೆನೆರಿಕ್ ಉತ್ಪನ್ನಗಳು ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿರುವುದನ್ನು ಮತ್ತು ಜನಸಾಮಾನ್ಯರಲ್ಲಿ ಹೆಚ್ಚು ಸ್ವೀಕಾರಾರ್ಹವಾಗುತ್ತಿರುವುದನ್ನು, ಅಂದರೆ ಒಂದು ಸಕಾರಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ.

ಸೆಪ್ಟೆಂಬರ್ 2024 ರಿಂದ, ಜನೌಷಧಿ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಬಳಸುವ 200 ಔಷಧಿಗಳ ಸಂಗ್ರಹಕ್ಕೆ ಉತ್ತೇಜನ ನೀಡಲಾಗುತ್ತಿದೆ. ಇದರಲ್ಲಿ ಈ ಯೋಜನೆಯಡಿ ಅತಿ ಹೆಚ್ಚು ಮಾರಾಟವಾಗುವ 100 ಔಷಧಿಗಳು ಮತ್ತು ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ಮಾರಾಟವಾಗುವ 100 ಔಷಧಿಗಳು ಸೇರಿವೆ. ಈ ಯೋಜನೆಯಡಿ, ಜನೌಷಧಿ ಕೇಂದ್ರದ ಮಾಲೀಕರು ತಾವು ಕಾಯ್ದುಕೊಳ್ಳುವ ಈ ಔಷಧಿಗಳ ದಾಸ್ತಾನು ಆಧಾರದ ಮೇಲೆ ಮಾಸಿಕ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ. ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಲಭ್ಯವಾಗುವಂತೆ ಮಾಡುವ ಮೂಲಕ ಮತ್ತು ಜನರ ಸ್ವಂತ ಕೈಯಿಂದ ಭರಿಸುವ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ, ಜನೌಷಧಿ ಕೇಂದ್ರಗಳು ಕೇವಲ ಚಿಕಿತ್ಸೆಯನ್ನು ಬೆಂಬಲಿಸುತ್ತಿಲ್ಲ; ಅವು ಜನರ ಜೀವನವನ್ನು ಸುಗಮಗೊಳಿಸುತ್ತಿವೆ ಮತ್ತು ಪ್ರತಿ ಕುಟುಂಬಕ್ಕೂ ಕೈಗೆಟಕುವ ದರದ ಆರೋಗ್ಯ ರಕ್ಷಣೆಯ ಅಡಿಪಾಯವನ್ನು ಬಲಪಡಿಸುತ್ತಿವೆ.

Reference
Ministry of Chemicals & Fertilizers
Click here for pdf file.
*****
(Features ID: 157650)
आगंतुक पटल : 39
Provide suggestions / comments