• Sitemap
  • Advance Search
Technology

ಭಾರತದ ಎಐ ಸಂಕಲ್ಪಕ್ಕೆ ಗಿನ್ನಿಸ್ ದಾಖಲೆಯ ಮನ್ನಣೆ

2.5 ಲಕ್ಷಕ್ಕೂ ಹೆಚ್ಚು ನಾಗರಿಕರು 'ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ'ಬಳಕೆಗೆ ಬದ್ಧರಾಗುವ ಮೂಲಕ ಹೊಸ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದ್ದಾರೆ.

Posted On: 18 FEB 2026 8:05PM

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026 ಮೂರನೇ ದಿನದಂದು ಒಂದು ಮಹತ್ವದ ಸಾಧನೆಯ ಘೋಷಣೆಯಾಗಿದೆ. ಭಾರತವು 24 ಗಂಟೆಗಳಲ್ಲಿ 'ಎಐ ಜವಾಬ್ದಾರಿ ಅಭಿಯಾನ'ಕ್ಕಾಗಿ ಅತಿ ಹೆಚ್ಚು ಪ್ರತಿಜ್ಞೆಗಳನ್ನು ಸ್ವೀಕರಿಸಿದ ಗಿನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಫೆಬ್ರವರಿ 16 ಮತ್ತು 17 ರ ನಡುವೆ ಒಟ್ಟು 2,50,946 ಮಾನ್ಯ ಪ್ರತಿಜ್ಞೆಗಳು ದಾಖಲಾಗಿವೆ. ಇದು ಆರಂಭಿಕ ಗುರಿಯಾಗಿದ್ದ 5,000 ಪ್ರತಿಜ್ಞೆಗಳ ಸಂಖ್ಯೆಯನ್ನು ಬಹಳ ದೊಡ್ಡ ಅಂತರದಿಂದ ಹಿಂದಿಕ್ಕಿದೆ. ಇದು ಕೇವಲ ಒಂದು ದಾಖಲೆಯಲ್ಲ; ಕೃತಕ ಬುದ್ಧಿಮತ್ತೆಯನ್ನು  ವಿವೇಚನೆಯಿಂದ ರೂಪಿಸಲು ಸಿದ್ಧವಿರುವ ಯುವ ರಾಷ್ಟ್ರದ ದೃಢ ಸಂಕಲ್ಪದ ಸಂಕೇತವಾಗಿದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು. ಕೃತಕ ಬುದ್ಧಿಮತ್ತೆಯ  ಜವಾಬ್ದಾರಿಯುತ ಬಳಕೆಯಲ್ಲಿ ಭಾರತೀಯ ಯುವಜನತೆಯನ್ನು ತೊಡಗಿಸಿಕೊಳ್ಳಬೇಕು ಎಂಬ ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಅವರು ಉಲ್ಲೇಖಿಸಿದರು. ದೇಶಾದ್ಯಂತದ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ, ಮಾಹಿತಿಪೂರ್ಣ ಚರ್ಚೆಗಳ ನೇತೃತ್ವ ವಹಿಸಲು ಅಧ್ಯಾಪಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಎಐ ಅನ್ನು ಕೇವಲ ಒಂದು ಶಾರ್ಟ್‌ಕಟ್ ಆಗಿ ನೋಡದೆ, ಸಮಾಜದ ಒಳಿತಿಗಾಗಿ ಬಳಸುವ ಸಾಧನವಾಗಿ ಕಾಣುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಲಾಗುತ್ತಿದೆ. ಪ್ರತಿಜ್ಞೆ ಸ್ವೀಕರಿಸಿದ 2.5 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರನ್ನು ಅವರು ಶ್ಲಾಘಿಸಿದರು. "ಜವಾಬ್ದಾರಿಯೇ ಮೂಲಾಧಾರವಾಗಿರುವಂತೆ ಎಐ ಅನ್ನು ನಾವು ಅಳವಡಿಸಿಕೊಳ್ಳಬೇಕು" ಎಂಬ ಭಾರತದ ಸ್ಪಷ್ಟ ನಿಲುವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಶೃಂಗಸಭೆಯ ಉತ್ಸಾಹವು ಭಾರತದ ಯುವಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ದೇಶದ ಶೇ. 65 ಕ್ಕಿಂತ ಹೆಚ್ಚು ಜನರು 35 ವರ್ಷದೊಳಗಿನವರಾಗಿದ್ದು, ಇಲ್ಲಿನ ಚರ್ಚೆಗಳು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗದೆ ಎಐ ಸಾಕ್ಷರತೆ, ನೈತಿಕತೆ ಮತ್ತು ದೀರ್ಘಕಾಲೀನ ಸಾಮರ್ಥ್ಯದ ಮೇಲೆ ಕೇಂದ್ರೀಕೃತವಾಗಿವೆ. ಎಐ ಈಗ ಕೇವಲ ಒಂದು ತಂತ್ರಜ್ಞಾನವಲ್ಲ, ಅದು ಜೀವನದ ಒಂದು ಅತ್ಯಗತ್ಯ ಕೌಶಲವಾಗಿ ಬದಲಾಗುತ್ತಿದೆ.

ಇಂಡಿಯಾ ಎಐ ಮಿಷನ್' ಅಡಿಯಲ್ಲಿ ಆಯೋಜಿಸಲಾದ ಯುವ್‌ಎಐ ಚಾಲೆಂಜ್‌ಗೆ 38 ದೇಶಗಳಿಂದ 2,500 ಅರ್ಜಿಗಳು ಬಂದಿವೆ. 13 ರಿಂದ 21 ವರ್ಷದ ಯುವಕರು ಆರೋಗ್ಯ, ಕೃಷಿ ಮತ್ತು ಪರಿಸರ ಸಂರಕ್ಷಣೆಯಂತಹ ವಿಷಯಗಳ ಮೇಲೆ ಎಐ ಪರಿಹಾರಗಳನ್ನು ಸಿದ್ಧಪಡಿಸಿದ್ದಾರೆ. ಆಯ್ಕೆಯಾದ 70 ತಂಡಗಳು ತಮ್ಮ ಮಾದರಿಗಳನ್ನು ಪ್ರದರ್ಶಿಸುತ್ತಿದ್ದು, ಇವರು ಕೇವಲ ಭಾಗವಹಿಸುವವರಲ್ಲ, ಬದಲಿಗೆ ಸಮಸ್ಯೆಗಳನ್ನು ಬಗೆಹರಿಸುವ 'ಪ್ರಾಬ್ಲಮ್ ಸಾಲ್ವರ್ಸ್' ಆಗಿದ್ದಾರೆ.

ಭಾರತವು ಜವಾಬ್ದಾರಿಯುತ ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. 2022ರಲ್ಲಿ ಪ್ರಾರಂಭವಾದ ಯುವ್‌ಎಐಕಾರ್ಯಕ್ರಮವು 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃಷಿ, ಆರೋಗ್ಯ ಮತ್ತು ಶಿಕ್ಷಣದಂತಹ ದೈನಂದಿನ ಜೀವನದ ಸಮಸ್ಯೆಗಳಿಗೆ ಎಐ ಮೂಲಕ ಪರಿಹಾರ ಕಂಡುಕೊಳ್ಳಲು ಅಗತ್ಯವಾದ ತಾಂತ್ರಿಕ ಮತ್ತು ಸಾಮಾಜಿಕ ಕೌಶಲಗಳನ್ನು ನೀಡುತ್ತಿದೆ.

ಇದರೊಂದಿಗೆ 'ಯುವ ಎಐ ಫಾರ್ ಆಲ್'  ಎಂಬ ಉಚಿತ ರಾಷ್ಟ್ರೀಯ ಎಐ ಸಾಕ್ಷರತಾ ಕೋರ್ಸ್ ಅನ್ನು 11 ಭಾರತೀಯ ಭಾಷೆಗಳಲ್ಲಿ ನೀಡಲಾಗುತ್ತಿದೆ. DIKSHA ಮತ್ತು iGOT ಕರ್ಮಯೋಗಿ ಅಪ್ಲಿಕೇಶನ್‌ಗಳ ಮೂಲಕ ಲಭ್ಯವಿರುವ ಈ ಯೋಜನೆಯು 1 ಕೋಟಿ ನಾಗರಿಕರಿಗೆ ಎಐ ಪ್ರಾವೀಣ್ಯತೆಯನ್ನು ನೀಡುವ ಗುರಿ ಹೊಂದಿದೆ. ಇದು ಜ್ಞಾನದ ಪ್ರಜಾಪ್ರಭುತ್ವೀಕರಣ ಮತ್ತು ನಗರ-ಗ್ರಾಮೀಣ ಅಂತರವನ್ನು ಕಡಿಮೆ ಮಾಡುವ ದೃಷ್ಟಿಕೋನವನ್ನು ಹೊಂದಿದ್ದು, ಗಿನಿಸ್ ದಾಖಲೆಯು ಈ ಬೃಹತ್ ಆಂದೋಲನದ ನೈಸರ್ಗಿಕ ವಿಸ್ತರಣೆಯಂತೆ ಭಾಸವಾಗುತ್ತಿದೆ.

ನೀತಿ ಆಯೋಗದ ಅಡಿಯಲ್ಲಿನ ಅಟಲ್ ಇನೋವೇಶನ್ ಮಿಷನ್, 'ಎಐ ಟಿಂಕರ್‌ಪ್ರೆನಿಯರ್' ಮೂಲಕ ೫೦ ವಿದ್ಯಾರ್ಥಿ ತಂಡಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸುತ್ತಿದೆ. ಈ ವರ್ಷ 12000 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಆರೋಗ್ಯ ಮತ್ತು ಕೃಷಿ ನಿರ್ವಹಣೆಯಂತಹ ರಾಷ್ಟ್ರೀಯ ಆದ್ಯತೆಗಳಿಗೆ ಪೂರಕವಾದ ಯೋಜನೆಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಇದು ಭಾರತದಲ್ಲಿ 'ಟಿಂಕರಿಂಗ್' ಸಂಸ್ಕೃತಿಯು 'ನಾವೀನ್ಯತೆ'ಯಾಗಿ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಕೇಂದ್ರ ಬಜೆಟ್ 2026-27 ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೆಚ್ಚಿನ ಅನುದಾನ ನೀಡಿದೆ. ಮುಂಬೈನಲ್ಲಿರುವ ಭಾರತೀಯ ಸೃಜನಾತ್ಮಕ ತಂತ್ರಜ್ಞಾನ ಸಂಸ್ಥೆಯ ಬೆಂಬಲದೊಂದಿಗೆ 15000 ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ 'ಎಐ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು' ಸ್ಥಾಪಿಸಲಾಗುವುದು. ಇದರಿಂದ ಅನಿಮೇಷನ್ ಮತ್ತು ಗೇಮಿಂಗ್ ಸೇರಿದಂತೆ ಆರೆಂಜ್ ಎಕಾನಮಿ  ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಭಾರತವು ತನ್ನ ಎಐ ಮೂಲಸೌಕರ್ಯವನ್ನು ಬಲಪಡಿಸಲು ಪ್ರಸ್ತುತ ಇರುವ 38,000 ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್‌ಗಳಿಗೆ ಹೆಚ್ಚುವರಿಯಾಗಿ 20000 ಯುನಿಟ್‌ಗಳನ್ನು ಸೇರಿಸುತ್ತಿದೆ. ಮೂಲಸೌಕರ್ಯದ ಬೆಳವಣಿಗೆಯ ಜೊತೆಗೆ ನೈತಿಕತೆಯೂ ಮುಖ್ಯ ಎಂಬುದು ಸರ್ಕಾರದ ಸ್ಪಷ್ಟ ಸಂದೇಶವಾಗಿದೆ. ಈ ಸಮತೋಲನವನ್ನು ಕಾಯ್ದುಕೊಳ್ಳಲು ನೈಪುಣ್ಯ ಹೊಂದಿದ ಮಾನವಶಕ್ತಿ ಕೇಂದ್ರಬಿಂದುವಾಗಿದೆ.

ಆರೋಗ್ಯ ಮತ್ತು ಕೃಷಿಯ ನಂತರ ಈಗ 'ಶಿಕ್ಷಣ'ಕ್ಕಾಗಿ ನಾಲ್ಕನೇ ಸೆಂಟರ್ ಆಫ್ ಎಕ್ಸಲೆನ್ಸ್ ಘೋಷಿಸಲಾಗಿದೆ. ಜುಲೈ 2025ರಲ್ಲಿ ಪ್ರಾರಂಭವಾದ SOAR ಉಪಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಎಐ ತರಬೇತಿ ನೀಡುತ್ತಿದೆ. ಅಲ್ಲದೆ, ಐಟಿಐ ಗಳಲ್ಲಿ ಎಐ ಮತ್ತು ರೋಬೋಟಿಕ್ಸ್ ಸೇರಿದಂತೆ ೩೧ ಹೊಸ ತಲೆಮಾರಿನ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.

ಸರ್ಕಾರಿ ಅಧಿಕಾರಿಗಳಿಗಾಗಿ 'ಎಐ ಕಾಂಪಿಟೆನ್ಸಿ ಫ್ರೇಮ್‌ವರ್ಕ್' ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಿಂದ ಎಐ ಜ್ಞಾನವು ಕೇವಲ ತರಗತಿಗಳಿಗೆ ಸೀಮಿತವಾಗದೆ, ಸಾರ್ವಜನಿಕ ಆಡಳಿತ ಮತ್ತು ನೀತಿ ನಿರೂಪಣೆಯಲ್ಲೂ ಬಳಕೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ.

'ಇಂಡಿಯಾ ಎಐ ಮಿಷನ್' ಅಡಿಯಲ್ಲಿ ಸಾವಿರಾರು ಪಿಎಚ್‌ಡಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತಿದೆ. ೨ನೇ ಮತ್ತು ೩ನೇ ಹಂತದ ನಗರಗಳಲ್ಲಿ  ಈಗಾಗಲೇ ೩೧ ಎಐ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಇದು ಸುಧಾರಿತ ತಂತ್ರಜ್ಞಾನವು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗದಂತೆ ಖಚಿತಪಡಿಸುತ್ತದೆ.

ಶೃಂಗಸಭೆಯು ಕೇವಲ ಔಪಚಾರಿಕವಾಗಿರದೆ, ಅತ್ಯಂತ ಪರಿಣಾಮಕಾರಿಯಾಗಿದೆ. ನೀತಿ ನಿರೂಪಕರು ಹದಿಹರೆಯದವರ ಐಡಿಯಾಗಳನ್ನು ಆಲಿಸುತ್ತಿದ್ದಾರೆ. ಗಿನಿಸ್ ದಾಖಲೆಯು ಒಂದು ಕ್ಷಣದ ಸಾಧನೆಯಾಗಿದ್ದರೂ, ಅದರ ಹಿಂದಿನ ಶಕ್ತಿ ಮತ್ತು ಬದ್ಧತೆ ತಲೆಮಾರುಗಳವರೆಗಿನದ್ದು. ಭಾರತವು ತನ್ನ ಯುವಜನತೆಯ ಮೂಲಕ ಭವಿಷ್ಯದ ತಂತ್ರಜ್ಞಾನದ ನೈತಿಕತೆಯನ್ನು ರೂಪಿಸುತ್ತಿದೆ.

 

References:

Click here to see pdf 

 

******

(Features ID: 157584) आगंतुक पटल : 18
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Malayalam
Prime Minister mygov.in Content Link
National Portal Of India
STQC Certificate