• Skip to Content
  • Sitemap
  • Advance Search
Others

ಅಮರ ಶೌರ್ಯದ ಗ್ಯಾಲರಿ: ರಾಷ್ಟ್ರಪತಿ ಭವನದಲ್ಲಿ 'ಪರಮ ವೀರ ದೀರ್ಘಾ' ಉದ್ಘಾಟನೆ

Posted On: 21 DEC 2025 9:50AM

ರಾಷ್ಟ್ರಪತಿ ಭವನದ ಭವ್ಯ ಸಭಾಂಗಣಗಳು ಇತ್ತೀಚೆಗೆ ಒಂದು ರೂಪಾಂತರಕ್ಕೆ ಸಾಕ್ಷಿಯಾಗಿವೆ. ಡಿಸೆಂಬರ್ 16 ರಂದು 'ವಿಜಯ್ ದಿವಸ್' ಸಂದರ್ಭದಲ್ಲಿ, ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ 'ಪರಮ ವೀರ ದೀರ್ಘಾ' ಅನ್ನು ಉದ್ಘಾಟಿಸಿದರು. ಇದರೊಂದಿಗೆ, ಈ ಹಿಂದೆ ರಾಷ್ಟ್ರಪತಿ ಭವನದ ಕಾರಿಡಾರ್‌ಗಳಲ್ಲಿ ಪ್ರದರ್ಶಿಸಲಾಗಿದ್ದ ಬ್ರಿಟಿಷ್ ಎಡಿಸಿಗಳ ಭಾವಚಿತ್ರಗಳ ಬದಲಿಗೆ, ಭಾರತದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರ ಪುರಸ್ಕೃತ 21 ವೀರರ ಭಾವಚಿತ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಕಾಲದಲ್ಲಿ ವಸಾಹತುಶಾಹಿ ಅಧಿಕಾರದ ಸಂಕೇತವಾಗಿದ್ದ ಈ ಸ್ಥಳವು, ಈಗ ನಮ್ಮ ರಾಷ್ಟ್ರವನ್ನು ರಕ್ಷಿಸಲು ಅಪ್ರತಿಮ ಧೈರ್ಯವನ್ನು ತೋರಿದ ರಾಷ್ಟ್ರೀಯ ವೀರರ ಅದಮ್ಯ ಚೇತನ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿ ಬದಲಾಗಿದೆ.

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಭೂಸೇನಾ ಮುಖ್ಯಸ್ಥ ಜನರಲ್ ಶ್ರೀ ಉಪೇಂದ್ರ ದ್ವಿವೇದಿ, ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್, ನೌಕಾಸೇನಾ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ಇತರ ಗಣ್ಯರು ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೀವಂತ ದಂತಕಥೆಗಳನ್ನು (ವೀರರನ್ನು) ಗೌರವಿಸುವುದರ ಜೊತೆಗೆ, ದೇಶಕ್ಕಾಗಿ ಸರ್ವೋಚ್ಚ ಬಲಿದಾನ ಮಾಡಿದ ವೀರರ ಕುಟುಂಬದವರನ್ನು ಗೌರವಿಸಲಾಯಿತು.

ಸಾಮ್ರಾಜ್ಯದಿಂದ ಗಣರಾಜ್ಯದವರೆಗೆ

ವಸಾಹತುಶಾಹಿ ಕಾಲದಲ್ಲಿ, ಆಗಿನ 'ವೈಸ್‌ರಾಯ್ ಹೌಸ್' ಆಗಿದ್ದ ಇಂದಿನ ರಾಷ್ಟ್ರಪತಿ ಭವನವು, ತನ್ನ ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸದ ಮೂಲಕ ಸಾಮ್ರಾಜ್ಯಶಾಹಿ ಅಧಿಕಾರವನ್ನು ಪ್ರತಿಬಿಂಬಿಸುತ್ತಿತ್ತು. ಬ್ರಿಟಿಷ್ ಸೇನಾ ಸಹಾಯಕ ಅಧಿಕಾರಿಗಳ ಭಾವಚಿತ್ರಗಳು ಈ ಹಿಂದೆ ಇಲ್ಲಿನ ಕಾರಿಡಾರ್‌ಗಳನ್ನು ಅಲಂಕರಿಸಿದ್ದವು, ಇದು ವಿದೇಶಿ ಆಡಳಿತದ ಶ್ರೇಣೀಕೃತ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿತ್ತು. ಸ್ವಾತಂತ್ರ್ಯದ ನಂತರ, ಈ ಸ್ಥಳಗಳನ್ನು ಸಾರ್ವಭೌಮ ರಾಷ್ಟ್ರದ ಮೌಲ್ಯಗಳು, ಹೋರಾಟಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಹಂತಹಂತವಾಗಿ ಮರುರೂಪಿಸಲಾಗಿದೆ.

'ಪರಮ ವೀರ ದೀರ್ಘಾ' ಆ ಸುದೀರ್ಘ ಪಯಣದ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ವಸಾಹತುಶಾಹಿ ಕಾಲದ ಚಿತ್ರಣಗಳ ಬದಲಿಗೆ ಭಾರತದ ಅತ್ಯಂತ ಶೌರ್ಯವಂತ ಸೈನಿಕರ ಕಥೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ, ದೇಶವನ್ನು ರಕ್ಷಿಸಿದವರ ಸಾಹಸ ಮತ್ತು ಬಲಿದಾನಕ್ಕೆ ಈಗ ನಿಜವಾದ ಗೌರವ ಸಂದಿದೆ.

ಪರಮ ವೀರ ಚಕ್ರ: ಭಾರತದ ಅತ್ಯುನ್ನತ ಗೌರವ

ಶತ್ರುಗಳ ಸಮ್ಮುಖದಲ್ಲಿ ತೋರಿದ ಅತ್ಯುನ್ನತ ಶೌರ್ಯದ ಕಾರ್ಯಗಳನ್ನು ಗುರುತಿಸಲು ಭಾರತ ಸರ್ಕಾರವು 1950 ಜನವರಿ 26ರಂದು ಪರಮ ವೀರ ಚಕ್ರವನ್ನು ಸ್ಥಾಪಿಸಿತು. ಹೆಚ್ಚಾಗಿ ಮರಣೋತ್ತರವಾಗಿ ನೀಡಲಾಗುವ ಈ ಪ್ರಶಸ್ತಿಯು, ಕರ್ತವ್ಯದ ಮಿತಿಗಳನ್ನು ಮೀರಿದ ಧೈರ್ಯವನ್ನು ಹಾಗೂ ರಾಷ್ಟ್ರದ ಕರೆಗಾಗಿ ವೈಯಕ್ತಿಕ ಬದುಕು ಗೌಣವೆನಿಸಿದ ಕ್ಷಣಗಳನ್ನು ಸಂಕೇತಿಸುತ್ತದೆ.

ಈ ಪದಕವು ವೃತ್ತಾಕಾರವಾಗಿದ್ದು ಕಂಚಿನಿಂದ ಮಾಡಲ್ಪಟ್ಟಿದೆ. ಮಧ್ಯಭಾಗದಲ್ಲಿರುವ ಉಬ್ಬಿದ ವೃತ್ತದಲ್ಲಿ ರಾಷ್ಟ್ರ ಲಾಂಛನವಿದ್ದು, ಅದರ ಸುತ್ತಲೂ ಇಂದ್ರನ ವಜ್ರಾಯುಧದ ನಾಲ್ಕು ಪ್ರತಿಕೃತಿಗಳಿವೆ. ಹಿಂಭಾಗದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ "ಪರಮ ವೀರ ಚಕ್ರ" ಎಂದು ಕೆತ್ತಲಾಗಿದೆ. "ಪರಮ ವೀರ ಚಕ್ರ" ಎಂಬುದು "ಪರಮ ಶೌರ್ಯವಂತನ ಚಕ್ರ" ಎಂಬ ಅರ್ಥವನ್ನು ನೀಡುತ್ತದೆ, ಇದು ಧರ್ಮನಿಷ್ಠ ಧೈರ್ಯವನ್ನು ಪ್ರತಿಬಿಂಬಿಸುತ್ತದೆ.

ಈ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದ 21 ಜನರಲ್ಲಿ 14 ಜನರಿಗೆ ಮರಣೋತ್ತರವಾಗಿ ಈ ಗೌರವವನ್ನು ನೀಡಲಾಗಿದೆ, ಇದು ದೇಶದ ಸ್ವಾತಂತ್ರ್ಯ ಮತ್ತು ಭದ್ರತೆಗಾಗಿ ತೆತ್ತ ಪರಮೋಚ್ಚ ಬೆಲೆಯನ್ನು ಒತ್ತಿಹೇಳುತ್ತದೆ.

ಪರಮ ವೀರ ದೀರ್ಘಾ ಎಲ್ಲಾ 21 ಪರಮ ವೀರ ಚಕ್ರ ಪುರಸ್ಕೃತರನ್ನು ಗೌರವಿಸುತ್ತದೆ ಮತ್ತು ಭಾರತದ ಪ್ರಮುಖ ಮಿಲಿಟರಿ ಸಂಘರ್ಷಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ 1947–48ರ ಜಮ್ಮು ಮತ್ತು ಕಾಶ್ಮೀರ ಕಾರ್ಯಾಚರಣೆಗಳು, 1962ರ ಚೀನಾ ವಿರುದ್ಧದ ಸಂಘರ್ಷ, 1965 ಮತ್ತು 1971ರ ಪಾಕಿಸ್ತಾನ ವಿರುದ್ಧದ ಯುದ್ಧಗಳು (ಬಾಂಗ್ಲಾದೇಶ ವಿಮೋಚನಾ ಯುದ್ಧದೊಂದಿಗೆ) ಮತ್ತು 1999ರ ಕಾರ್ಗಿಲ್ ಸಂಘರ್ಷಗಳು ಸೇರಿವೆ. ಈ ದೀರ್ಘಾದಲ್ಲಿ ಕೆತ್ತಲಾದ ಪ್ರತಿಯೊಂದು ಹೆಸರೂ ಅಸಾಧಾರಣ ಸಂಕಲ್ಪದಿಂದ ಕೂಡಿದ ಜೀವನವನ್ನು ಪ್ರತಿನಿಧಿಸುತ್ತದೆ; ಅತೀವ ಸಂಕಷ್ಟದ ನಡುವೆಯೂ ಎದೆಗುಂದದೆ ನಿಂತ ಸೈನಿಕರು, ಅಚಲ ಗುರಿಯೊಂದಿಗೆ ಅಪಾಯದ ನಡುವೆ ವಿಮಾನ ಹಾರಿಸಿದ ಪೈಲಟ್‌ಗಳು ಮತ್ತು ಸಾವಿನ ಕ್ಷಣದವರೆಗೂ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ ಅಧಿಕಾರಿಗಳ ಕಥೆಗಳು ಇಲ್ಲಿವೆ.

ಪರಮ ವೀರ ಚಕ್ರದ ಮೊದಲ ಪುರಸ್ಕೃತರಾದ ಮೇಜರ್ ಸೋಮನಾಥ್ ಶರ್ಮಾ ಅವರು, ನವೆಂಬರ್ 1947ರಲ್ಲಿ ಕಾಶ್ಮೀರದ ಬದ್ಗಾಂ ರಕ್ಷಣೆಯ ಸಂದರ್ಭದಲ್ಲಿ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದರು. ಶತ್ರುಗಳ ಬೃಹತ್ ಪಡೆಯನ್ನು ಎದುರಿಸುವಾಗ, ಅವರು ತಮ್ಮ ಸೈನಿಕರಿಗೆ ಮಾರ್ಗದರ್ಶನ ನೀಡಲು ಶತ್ರುಗಳ ತೀವ್ರ ಗುಂಡಿನ ದಾಳಿಯ ನಡುವೆಯೂ ಪದೇ ಪದೇ ಬಯಲು ಪ್ರದೇಶದಲ್ಲಿ ಸಾಹಸ ಮೆರೆದರು. ಶತ್ರುಗಳಿಗೆ ನೇರವಾಗಿ ಕಾಣಿಸುವಂತಿದ್ದರೂ ಸಹ, ತಮ್ಮ ಜೀವದ ಹಂಗು ತೊರೆದು ಭಾರತೀಯ ವಿಮಾನಗಳಿಗೆ ಗುರಿಗಳನ್ನು ತೋರಿಸಲು ಬಟ್ಟೆಯ ಪಟ್ಟಿಗಳನ್ನು ಬಳಸಿದರು. ಗಾಯಗೊಂಡಿದ್ದರೂ ಮತ್ತು ತಮ್ಮ ಕೈಗೆ ಪ್ಲಾಸ್ಟರ್ ಹಾಕಿದ್ದರೂ ಸಹ, ಅವರು ಮದ್ದುಗುಂಡುಗಳನ್ನು ವಿತರಿಸುವುದನ್ನು ಮತ್ತು ತಮ್ಮ ಸೈನಿಕರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿದರು. ಅವರ ಈ ಸಾಹಸವು ಶತ್ರುಗಳನ್ನು ಆರು ನಿರ್ಣಾಯಕ ಗಂಟೆಗಳ ಕಾಲ ತಡೆಹಿಡಿಯಿತು, ಆ ಮೂಲಕ ಮಾತೃಭೂಮಿಯನ್ನು ರಕ್ಷಿಸಿತು. ಅಸಾಧಾರಣ ಧೈರ್ಯ, ಅಚಲ ನಿರ್ಧಾರ ಮತ್ತು ಪರಮೋಚ್ಚ ಬಲಿದಾನದ ಮೂಲಕ ಮೇಜರ್ ಸೋಮನಾಥ್ ಶರ್ಮಾ ಅವರು ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳನ್ನು ಎತ್ತಿ ಹಿಡಿದರು.

1948ಫೆಬ್ರವರಿ 6ರಂದು, ತೈಂಧರ್‌ನ ನಂ. 2 ಪಿಕೆಟ್‌ನಲ್ಲಿ, ನಾಯಕ್ ಜದುನಾಥ್ ಸಿಂಗ್ ಅವರು ಪದೇ ಪದೇ ಶತ್ರುಗಳ ದಾಳಿಯನ್ನು ಎದುರಿಸುತ್ತಿದ್ದ ಒಂದು ಸಣ್ಣ ಪೋಸ್ಟ್‌ನ ನೇತೃತ್ವ ವಹಿಸಿದ್ದರು. ಸಂಖ್ಯಾಬಲದಲ್ಲಿ ಶತ್ರುಗಳಿಗಿಂತ ಬಹಳ ಕಡಿಮೆ ಇದ್ದರೂ ಮತ್ತು ತಾವೇ ಗಾಯಗೊಂಡಿದ್ದರೂ ಸಹ, ಅವರು ತಮ್ಮ ಅಸಾಧಾರಣ ನಾಯಕತ್ವ ಮತ್ತು ಯುದ್ಧ ಸಾಮರ್ಥ್ಯದಿಂದ ಸತತ ದಾಳಿಗಳನ್ನು ಹಿಮ್ಮೆಟ್ಟಿಸಿದರು. ತಮ್ಮ ಎಲ್ಲಾ ಸೈನಿಕರು ವೀರಮರಣ ಅಪ್ಪಿದಾಗ, ಅವರು ಒಬ್ಬರೇ ಹೋರಾಟ ಮುಂದುವರಿಸಿದರು. ಶತ್ರುಗಳು ಪಿಕೆಟ್ ಅನ್ನು ವಶಪಡಿಸಿಕೊಳ್ಳದಂತೆ ತಡೆಯಲು ಮತ್ತು ನೌಶೇರಾ ರಕ್ಷಣೆಯನ್ನು ಖಚಿತಪಡಿಸಲು, ಅವರು ಅಂತಿಮವಾಗಿ ಶತ್ರುಗಳ ಮೇಲೆ ದಾಳಿ ನಡೆಸಿ ವೀರಮರಣವನ್ನಪ್ಪಿದರು.

ಕಾಂಗೋದಲ್ಲಿನ ವಿಶ್ವಸಂಸ್ಥೆಯ ಕಾರ್ಯಾಚರಣೆಯ ಅಡಿಯಲ್ಲಿ, 5 ಡಿಸೆಂಬರ್ 1961 ರಂದು ಕಟಂಗಾದ ಎಲಿಜಬೆತ್‌ವಿಲ್ಲೆಯಲ್ಲಿ, ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ ಅವರು ವ್ಯೂಹಾತ್ಮಕ ವೃತ್ತಕ್ಕೆ ಬೆದರಿಕೆಯೊಡ್ಡಿದ್ದ ಶತ್ರುಗಳ ಬಲವರ್ಧನೆಯನ್ನು ತಡೆಯಲು ಗೂರ್ಖಾಗಳ ಸಣ್ಣ ಪಡೆಯನ್ನು ಮುನ್ನಡೆಸಿದರು. ಶತ್ರುಗಳ ಸಂಖ್ಯಾಬಲ ಹೆಚ್ಚಿದ್ದರೂ ಮತ್ತು ತೀವ್ರ ಗುಂಡಿನ ದಾಳಿಯ ನಡುವೆಯೂ, ಅವರು ಅಪ್ರತಿಮ ದೃಢತೆಯಿಂದ ಹತ್ತಿರದಿಂದಲೇ ಶತ್ರುಗಳ ಮೇಲೆ ದಾಳಿ ನಡೆಸಿ, ಅವರ ನೆಲೆಗಳನ್ನು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸಿದರು. ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದರೂ ಸಹ, ಅವರ ಸಾಹಸವು ವಿಶ್ವಸಂಸ್ಥೆಯ ಪಡೆಗಳನ್ನು ಶತ್ರುಗಳು ಸುತ್ತುವರಿಯದಂತೆ ತಡೆಯಿತು ಮತ್ತು ಕಾರ್ಯಾಚರಣೆಯ ಯಶಸ್ಸನ್ನು ಖಚಿತಪಡಿಸಿತು. ಇದು ಅವರ ಅಸಾಧಾರಣ ನಾಯಕತ್ವ ಮತ್ತು ಧೈರ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

1965ಸೆಪ್ಟೆಂಬರ್ 10 ರಂದು, ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ಅವರು ಖೇಮ್ ಕರನ್ ವಲಯದಲ್ಲಿ ಪಾಕಿಸ್ತಾನದ ಪ್ರಬಲ ಟ್ಯಾಂಕ್ ದಾಳಿಯನ್ನು ಎದುರಿಸಿದರು. ತೀವ್ರವಾದ ಶೆಲ್ ದಾಳಿಯ ನಡುವೆಯೂ ಧೈರ್ಯದಿಂದ ಮುನ್ನುಗ್ಗಿದ ಅವರು, ತಮ್ಮ ರೀಕೈಲ್‌ಲೆಸ್ ಗನ್ ಮೂಲಕ ಶತ್ರುಗಳ ಹಲವು ಟ್ಯಾಂಕ್‌ಗಳನ್ನು ಹತ್ತಿರದಿಂದಲೇ ನಾಶಪಡಿಸಿದರು. ಶತ್ರುಗಳ ತೀವ್ರ ದಾಳಿಗೆ ಗುರಿಯಾದ ನಂತರವೂ, ಮಾರಣಾಂತಿಕವಾಗಿ ಗಾಯಗೊಳ್ಳುವವರೆಗೂ ಅವರು ಹೋರಾಟ ಮುಂದುವರಿಸಿದರು. ಅವರ ಅಸಾಧಾರಣ ಧೈರ್ಯ ಮತ್ತು ನಿಸ್ವಾರ್ಥತೆ ತಮ್ಮ ತುಕಡಿಯು ಶತ್ರುಗಳ ಶಸ್ತ್ರಸಜ್ಜಿತ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರೇರಣೆಯಾಯಿತು.

1971ಯುದ್ಧದ ಸಮಯದಲ್ಲಿ, ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಅವರು ಪೂರ್ವ ಮುಂಭಾಗದ ಗಂಗಾಸಾಗರ್ ಕದನದಲ್ಲಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದರು. ತೀವ್ರವಾಗಿ ಗಾಯಗೊಂಡಿದ್ದರೂ ಸಹ, ಅವರು ಶತ್ರುಗಳ ಹಲವು ಮೆಷಿನ್ ಗನ್ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿಶ್ಯಬ್ದಗೊಳಿಸಿದರು. ಇದು ಅವರ ಬೆಟಾಲಿಯನ್ ಪ್ರಮುಖ ಗುರಿಯನ್ನು ಸಾಧಿಸಲು ಮತ್ತು ಬಾಂಗ್ಲಾದೇಶದತ್ತ ಮುಂದಿನ ಮುನ್ನಡೆಗೆ ದಾರಿ ಮಾಡಿಕೊಟ್ಟಿತು. ಶತ್ರುಗಳ ಭದ್ರವಾದ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ಅವರ ಕ್ರಮಗಳು ನಿರ್ಣಾಯಕವೆಂದು ಸಾಬೀತಾಯಿತು.

1971ಡಿಸೆಂಬರ್ 16 ರಂದು, ಶಕರ್‌ಗಢ ಕದನದ ಸಮಯದಲ್ಲಿ, ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರು ಜರ್ಪಾಲ್‌ನಲ್ಲಿ ಪಾಕಿಸ್ತಾನದ ಶಸ್ತ್ರಸಜ್ಜಿತ ಟ್ಯಾಂಕ್ ದಾಳಿಯ ವಿರುದ್ಧ ತಮ್ಮ ಪಡೆಯನ್ನು ಮುನ್ನಡೆಸಿದರು. ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಅವರು, ಶತ್ರುಗಳ ತೀವ್ರ ಗುಂಡಿನ ದಾಳಿಯ ನಡುವೆಯೂ ಅವರ ಹಲವಾರು ಟ್ಯಾಂಕ್‌ಗಳನ್ನು ಧ್ವಂಸಗೊಳಿಸಿದರು. ತಮ್ಮ ಟ್ಯಾಂಕ್‌ಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದರೂ ಸಹ, ಅವರು ಹಿಂದೆ ಸರಿಯಲು ನಿರಾಕರಿಸಿದರು ಮತ್ತು ಶತ್ರುಗಳ ಟ್ಯಾಂಕ್‌ಗಳ ವಿರುದ್ಧದ ಹೋರಾಟವನ್ನು ಮುಂದುವರಿಸಿದರು. ಆ ಮೂಲಕ ಒಂದು ಪ್ರಮುಖ ವಲಯದ ರಕ್ಷಣೆಯನ್ನು ಖಚಿತಪಡಿಸಿದರು. ಅವರ ಈ ಬಲಿದಾನವು ಆ ವಲಯವನ್ನು ಭೇದಿಸುವ ಶತ್ರುಗಳ ಹತಾಶ ಪ್ರಯತ್ನವನ್ನು ವಿಫಲಗೊಳಿಸಿತು.

ಶ್ರೀನಗರದಲ್ಲಿ ನಿಯೋಜನೆಗೊಂಡಿದ್ದ ಗ್ನ್ಯಾಟ್ ಪೈಲಟ್ ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರು, ಅಪರಿಚಿತ ಭೂಪ್ರದೇಶ ಮತ್ತು ಎತ್ತರದ ಪ್ರದೇಶದ ಸವಾಲುಗಳ ನಡುವೆಯೂ 1971ರ ಯುದ್ಧದಲ್ಲಿ ಕಾಶ್ಮೀರ ಕಣಿವೆಯನ್ನು ರಕ್ಷಿಸಿದರು. 14 ಡಿಸೆಂಬರ್ 1971 ರಂದು, ಪಾಕಿಸ್ತಾನದ ಆರು ಸೇಬರ್ ಜೆಟ್‌ಗಳು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದಾಗ, ಅವರು ಅಸಮಾನ ಬಲದ ನಡುವೆಯೂ ವಿಮಾನವೇರಿ ಶತ್ರುಗಳೊಂದಿಗೆ ಕೆಳಮಟ್ಟದ ವಾಯುಸಮರದಲ್ಲಿ ತೊಡಗಿದರು. ಶತ್ರುಗಳ ಸಂಖ್ಯೆ ಹೆಚ್ಚಿದ್ದರಿಂದ ಮತ್ತು ತೀವ್ರ ಗುಂಡಿನ ದಾಳಿಯಿಂದಾಗಿ ಅವರ ವಿಮಾನ ಪತನಗೊಂಡಿತು. ಅವರ ಈ ಸಾಹಸವು ಶತ್ರುಗಳ ದಾಳಿಯನ್ನು ಹತ್ತಿಕ್ಕಿತು ಮತ್ತು ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಿಸಿತು, ಇದು ಭಾರತೀಯ ವಾಯುಸೇನೆಯಲ್ಲಿ ಧೈರ್ಯ ಮತ್ತು ಶೌರ್ಯದ ಶಾಶ್ವತ ಮಾನದಂಡವಾಗಿ ಉಳಿದಿದೆ.

ಜೂನ್ 1987 ರ 'ಆಪರೇಷನ್ ಮೇಘದೂತ್' ಸಮಯದಲ್ಲಿ, ನೈಬ್ ಸುಬೇದಾರ್ ಬಾನಾ ಸಿಂಗ್ ಅವರು 21,000 ಅಡಿ ಎತ್ತರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿರುವ ಶತ್ರು ನೆಲೆಯನ್ನು ವಶಪಡಿಸಿಕೊಳ್ಳುವ ಧೈರ್ಯದ ಕಾರ್ಯಾಚರಣೆಗೆ ಸ್ವಯಂಪ್ರೇರಿತರಾಗಿ ಮುಂದಾದರು. ಕಡಿದಾದ ಮಂಜುಗಡ್ಡೆಯ ಗೋಡೆಗಳ ನಡುವಿನ ಅಪಾಯಕಾರಿ ಮಾರ್ಗದಲ್ಲಿ ಸಾಗಿದ ಅವರು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಸೈನಿಕರನ್ನು ಮುನ್ನಡೆಸಿ ಅಂತಿಮವಾಗಿ ಅಸಾಧಾರಣ ನಾಯಕತ್ವದ ಮೂಲಕ ಆ ನೆಲೆಯನ್ನು ವಶಪಡಿಸಿಕೊಂಡರು.

25 ನವೆಂಬರ್ 1987 ರಂದು, ಶ್ರೀಲಂಕಾದಲ್ಲಿ ಶೋಧ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಮೇಜರ್ ರಾಮಸ್ವಾಮಿ ಪರಮೇಶ್ವರನ್ ಅವರ ತಂಡದ ಮೇಲೆ ಉಗ್ರರು ರಾತ್ರಿ ಹೊಂಚುಹಾಕಿ ದಾಳಿ ಮಾಡಿದರು. ಅಪ್ರತಿಮ ಸಮಯಪ್ರಜ್ಞೆಯನ್ನು ಪ್ರದರ್ಶಿಸಿದ ಅವರು, ಶತ್ರುಗಳನ್ನು ಸುತ್ತುವರಿಯಲು ತಮ್ಮ ಸೈನಿಕರನ್ನು ನಿಯೋಜಿಸಿ ಪ್ರತಿದಾಳಿ ನಡೆಸಿದರು. ಹೋರಾಟದ ವೇಳೆ ಎದೆಗೆ ಗುಂಡು ತಗುಲಿದರೂ, ಅವರು ತಮ್ಮ ಕೊನೆಯ ಉಸಿರಿರುವವರೆಗೂ ಆದೇಶಗಳನ್ನು ನೀಡುತ್ತಾ ತಮ್ಮ ಸೈನಿಕರನ್ನು ಪ್ರೋತ್ಸಾಹಿಸಿದರು ಮತ್ತು ಅಂತಿಮವಾಗಿ ವೀರಮರಣವನ್ನಪ್ಪಿದರು.

1999ಕಾರ್ಗಿಲ್ ಸಂಘರ್ಷವು ಅತ್ಯಂತ ಕಠಿಣ ಭೂಪ್ರದೇಶದಲ್ಲಿ ನಡೆದ ಶೌರ್ಯದ ಕಥೆಗಳಿಗೆ ಸಾಕ್ಷಿಯಾಗಿದೆ. 7 ಜುಲೈ 1999 ರಂದು, ಪಾಯಿಂಟ್ 4875 ಕಾರ್ಯಾಚರಣೆಯಲ್ಲಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಂಪನಿಗೆ ಕಡಿದಾದ ಇಳಿಜಾರು ಮತ್ತು ಶತ್ರುಗಳ ಭದ್ರವಾದ ರಕ್ಷಣಾ ನೆಲೆಗಳನ್ನು ಹೊಂದಿರುವ ಅಪಾಯಕಾರಿ ಪರ್ವತ ಶ್ರೇಣಿಯನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಶತ್ರುಗಳೊಂದಿಗೆ ಮುಖಾಮುಖಿಯಾಗಿ ಹೋರಾಡಿದ ಅವರು ಐವರು ಶತ್ರು ಸೈನಿಕರನ್ನು ಕೊಂದರು. ತೀವ್ರವಾಗಿ ಗಾಯಗೊಂಡಿದ್ದರೂ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ ಅಂತಿಮವಾಗಿ ಬಲಿದಾನಗೈದರು. ಅವರ ಅಸಾಧಾರಣ ಧೈರ್ಯದಿಂದ ಪ್ರೇರಿತರಾದ ಅವರ ಪಡೆಗಳು ಭೀಕರ ಪ್ರತಿದಾಳಿ ನಡೆಸಿ ಶತ್ರುಗಳನ್ನು ನಿರ್ನಾಮ ಮಾಡಿ ಪಾಯಿಂಟ್ 4875 ಅನ್ನು ವಶಪಡಿಸಿಕೊಂಡವು.

ಟೈಗರ್ ಹಿಲ್ ಮೇಲಿನ ದಾಳಿಯ ಸಮಯದಲ್ಲಿ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರು ಸುಮಾರು 16,500 ಅಡಿ ಎತ್ತರದ ಹಿಮಚ್ಛಾದಿತ ಕಡಿದಾದ ಬಂಡೆಯನ್ನು ಹತ್ತುವ ತಂಡದ ನೇತೃತ್ವ ವಹಿಸಲು ಮುಂದಾದರು. ಹಲವಾರು ಗುಂಡೇಟುಗಳು ತಗುಲಿದರೂ ಸಹ, ಅವರು ಮುನ್ನುಗ್ಗಿ ಶತ್ರುಗಳ ನೆಲೆಗಳನ್ನು ನಾಶಪಡಿಸಿದರು ಮತ್ತು ಸಂಘರ್ಷದ ಅತ್ಯಂತ ನಿರ್ಣಾಯಕ ಗುರಿಗಳಲ್ಲಿ ಒಂದನ್ನು ವಶಪಡಿಸಿಕೊಳ್ಳಲು ಕಾರಣರಾದರು.

ಈ ಎಲ್ಲಾ ಕಥೆಗಳು ಕೇವಲ ಯುದ್ಧಭೂಮಿಯ ಯಶಸ್ಸನ್ನು ಮಾತ್ರವಲ್ಲದೆ ಕರ್ತವ್ಯ, ನಾಯಕತ್ವ ಮತ್ತು ಸ್ವಯಂ ಬಲಿದಾನದ ಆಳವಾದ ಸತ್ವವನ್ನು ಪ್ರತಿಬಿಂಬಿಸುತ್ತವೆ. ಪರಮ ವೀರ ದೀರ್ಘಾ ಈ ಎಲ್ಲಾ ಸಾಹಸಗಾಥೆಗಳನ್ನು ಒಂದೇ ಸೂರಿನಡಿ ತಂದಿದೆ, ಇದು ಸಂದರ್ಶಕರಿಗೆ ಗಣರಾಜ್ಯವನ್ನು ರೂಪಿಸಿದ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಶೌರ್ಯದ ಇತಿಹಾಸವನ್ನು ಪರಿಚಯಿಸುತ್ತದೆ.

ಮಾತನಾಡುವ ಒಂದು ತಾಣ

ಧ್ಯಾನಸ್ಥ ಗ್ಯಾಲರಿಯಂತೆ ವಿನ್ಯಾಸಗೊಳಿಸಲಾದ ಪರಮ ವೀರ ದೀರ್ಘಾ ಕೇವಲ ಪ್ರಭಾವ ಬೀರಲು ಮಾತ್ರವಲ್ಲ, ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ನಿರ್ಮಿಸಲಾಗಿದೆ. ಇಲ್ಲಿನ ವಿನ್ಯಾಸವು ಸಂದರ್ಶಕರು ಪ್ರತಿಯೊಬ್ಬ ವೀರರ ಸಾಹಸಗಾಥೆ ಮತ್ತು ಆ ಗೌರವದ ಹಿಂದಿರುವ ಮಾನವೀಯ ಕಥೆಯನ್ನು ಆಳವಾಗಿ ಗ್ರಹಿಸಲು ಪ್ರೇರೇಪಿಸುತ್ತದೆ. ಹಳೆಯ ಛಾಯಾಚಿತ್ರಗಳು, ಅಧಿಕೃತ ಪ್ರಶಂಸಾಪತ್ರಗಳು ಮತ್ತು ಎಚ್ಚರಿಕೆಯಿಂದ ಆಯ್ಕೆಮಾಡಿದ ಪ್ರದರ್ಶನಗಳು ಯಾವುದೇ ಅಬ್ಬರವಿಲ್ಲದೆ ಈ ಕಥೆಗಳಿಗೆ ಜೀವ ತುಂಬುತ್ತವೆ.

ಬೆಳಕು, ವಿಶಾಲತೆ ಮತ್ತು ಮೌನವು ಇಲ್ಲಿನ ಅನುಭವದ ಅವಿಭಾಜ್ಯ ಅಂಗಗಳಾಗಿವೆ. ಈ ದೀರ್ಘಾ ತನ್ನ ಸಂದೇಶವನ್ನು ಜೋರಾಗಿ ಸಾರುವುದಿಲ್ಲ; ಬದಲಿಗೆ ಶೌರ್ಯವೇ ತನ್ನಷ್ಟಕ್ಕೆ ತಾನೇ ಮಾತನಾಡಲು ಅವಕಾಶ ನೀಡುತ್ತದೆ. ಈ ಮೂಲಕ ಒಂದು ಕಾರಿಡಾರ್ ಅನ್ನು ಒಂದು ಚರಿತ್ರೆಯಾಗಿ ಪರಿವರ್ತಿಸಲಾಗಿದೆ, ಇದು ತಲೆಮಾರುಗಳನ್ನು ಜೋಡಿಸುತ್ತದೆ ಮತ್ತು ಸ್ವಾತಂತ್ರ್ಯದ ಮೌಲ್ಯವನ್ನು ಮರುಚಿಂತಿಸಲು ಪ್ರೇರೇಪಿಸುತ್ತದೆ.

ವಿಜಯ್ ದಿವಸ್: ಒಂದು ಸೂಕ್ತ ಸಮರ್ಪಣೆ

ವಿಜಯ್ ದಿವಸ್ ಸಂದರ್ಭದಲ್ಲಿ ನಡೆದ ಉದ್ಘಾಟನೆಯು ಈ ದೀರ್ಘಾಗೆ ಹೆಚ್ಚಿನ ಮಹತ್ವ ತಂದಿದೆ. ಪ್ರತಿವರ್ಷ ಡಿಸೆಂಬರ್ 16 ರಂದು ಆಚರಿಸಲಾಗುವ ವಿಜಯ್ ದಿವಸ್, 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ನಿರ್ಣಾಯಕ ವಿಜಯವನ್ನು ಸ್ಮರಿಸುತ್ತದೆ. ಈ ಸಂದರ್ಭದಲ್ಲಿ ಪರಮ ವೀರ ದೀರ್ಘಾವನ್ನು ತೆರೆಯುವ ಮೂಲಕ, ರಾಷ್ಟ್ರವು ವಿಜಯ ಮತ್ತು ಪರಾಕ್ರಮದ ನಡುವೆ, ಐತಿಹಾಸಿಕ ಜಯಗಳು ಮತ್ತು ಅದಕ್ಕೆ ಕಾರಣರಾದ ವ್ಯಕ್ತಿಗಳ ಧೈರ್ಯದ ನಡುವೆ ಸ್ಪಷ್ಟವಾದ ಸಂಬಂಧವನ್ನು ಕಲ್ಪಿಸಿದೆ.

ಕೇವಲ ಸ್ಮರಣೆಯಲ್ಲ

ಈ ದೀರ್ಘಾ ಕೇವಲ ಸ್ಮಾರಕವಲ್ಲ; ಅದೊಂದು ಸಂದೇಶ. ಯುವ ಸಂದರ್ಶಕರಿಗೆ ಇದು ಪಠ್ಯಪುಸ್ತಕಗಳು ನೀಡಲಾಗದ ಆದರ್ಶಗಳನ್ನು — ನಿಸ್ವಾರ್ಥತೆ, ಶಿಸ್ತು ಮತ್ತು ಸ್ವಾರ್ಥಕ್ಕಿಂತ ಸೇವೆಗೆ ಆದ್ಯತೆ — ಪರಿಚಯಿಸುತ್ತದೆ. ಸೇವಾ ನಿರತ ಸಿಬ್ಬಂದಿ ಮತ್ತು ನಿವೃತ್ತ ಯೋಧರಿಗೆ, ರಾಷ್ಟ್ರವು ತನ್ನ ರಕ್ಷಕರನ್ನು ಸ್ಮರಿಸುತ್ತದೆ, ಗೌರವಿಸುತ್ತದೆ ಮತ್ತು ಅವರಿಂದ ಕಲಿಯುತ್ತದೆ ಎಂಬುದನ್ನು ಇದು ಪುನರುಚ್ಚರಿಸುತ್ತದೆ.

ವ್ಯಾಪಕವಾಗಿ ಹೇಳುವುದಾದರೆ, ಈ ಗ್ಯಾಲರಿಯು ತನ್ನ ಭೂತಕಾಲದೊಂದಿಗೆ ಭಾರತವು ಬೆಳೆಸಿಕೊಳ್ಳುತ್ತಿರುವ ವಿಕಸನಗೊಳ್ಳುತ್ತಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇದು ಇತಿಹಾಸವನ್ನು ಒಪ್ಪಿಕೊಳ್ಳುತ್ತಾ, ಗಣರಾಜ್ಯದ ನೈತಿಕ ಮತ್ತು ಸಾಂಸ್ಥಿಕ ಅಡಿಪಾಯದಲ್ಲಿ ವಿಶ್ವಾಸವನ್ನು ಮೂಡಿಸುವ ಕಥೆಗಳನ್ನು ಮುನ್ನೆಲೆಗೆ ತರುತ್ತದೆ.

ಈ ಸ್ಮರಣೆಯ ಉತ್ಸಾಹವು ರಾಷ್ಟ್ರಪತಿ ಭವನದ ಆಚೆಗೂ ಹರಡಿದೆ. ಕೆಲವು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ದ್ವೀಪಗಳಿಗೆ 21 ಪರಮ ವೀರ ಚಕ್ರ ಪುರಸ್ಕೃತರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು, ಇದು ನಮ್ಮ ವೀರರನ್ನು ಭೌತಿಕ ಮತ್ತು ಸಾಂಸ್ಕೃತಿಕವಾಗಿ ಗೌರವಿಸುವ ರಾಷ್ಟ್ರದ ಬದ್ಧತೆಯನ್ನು ಸೂಚಿಸುತ್ತದೆ.

ಒಂದು ಜೀವಂತ ಪರಂಪರೆ

ರಾಷ್ಟ್ರಪತಿ ಭವನವು ಜನರ ತಾಣವಾಗಿ ವಿಕಸನಗೊಳ್ಳುತ್ತಿರುವುದರಿಂದ, ಪರಮ ವೀರ ದೀರ್ಘಾ ಅಲ್ಲಿ ಶಾಶ್ವತವಾದ ಅಸ್ತಿತ್ವವಾಗಿ ನಿಲ್ಲುತ್ತದೆ. ಇದು ಧೈರ್ಯದ ಅತ್ಯುನ್ನತ ಅಭಿವ್ಯಕ್ತಿಗಳನ್ನು ರಾಷ್ಟ್ರೀಯ ಜೀವನದ ದೈನಂದಿನ ಭಾಗವಾಗಿ ಬೆಸೆಯುತ್ತದೆ.

ಈ ಕಾರಿಡಾರ್ ಅನ್ನು ಮರುಪಡೆಯುವ ಮೂಲಕ, ಭಾರತವು ಕೇವಲ ಗೋಡೆಯ ಮೇಲಿನ ಚಿತ್ರಗಳನ್ನು ಬದಲಿಸಿಲ್ಲ. ಬದಲಿಗೆ ಅದು ಗೌರವದ ವ್ಯಾಖ್ಯಾನವನ್ನೇ ಹೊಸದಾಗಿ ಬರೆದಿದೆ, ಗಣರಾಜ್ಯದ ಅತ್ಯಂತ ಶ್ರೇಷ್ಠ ಸಂಸ್ಥೆಯ ಹೃದಯಭಾಗದಲ್ಲಿ ತನ್ನ ಶೌರ್ಯವಂತ ಪುತ್ರರಿಗೆ ಸ್ಥಾನ ನೀಡಿದೆ. ಪರಮ ವೀರ ದೀರ್ಘಾ ಎಂಬುದು "ಸ್ವಾತಂತ್ರ್ಯವು ವಂಶಪಾರಂಪರ್ಯವಾಗಿ ಬರುವುದಿಲ್ಲ; ಅದನ್ನು ಗಳಿಸಬೇಕು, ರಕ್ಷಿಸಬೇಕು ಮತ್ತು ಸ್ಮರಿಸಬೇಕು" ಎಂಬ ನೆನಪಿನಂತೆ ನಿಂತಿದೆ.

ಈ ಭಾವಚಿತ್ರಗಳ ಮೂಲಕ ಮೌನವಾಗಿ ಹೊರಹೊಮ್ಮುವ ಮಾತುಗಳಲ್ಲಿ ಹೇಳುವುದಾದರೆ, ಶೌರ್ಯವು ನಿಜವಾಗಿಯೂ ಈ ಕಾರಿಡಾರ್ ಅನ್ನು ಮರುರೂಪಿಸಿದೆ ಮತ್ತು ಭಾರತದ ವೀರಗಾಥೆಯಲ್ಲಿ ಒಂದು ಶಾಶ್ವತ ಅಧ್ಯಾಯವನ್ನು ಕೆತ್ತಿದೆ.

https://gallantryawards.gov.in/awards (ಪುರಸ್ಕೃತರ ಪೂರ್ಣ ಪಟ್ಟಿ ಇಲ್ಲಿದೆ)

 

References

 

National War Memorial

 

Welfare and Rehabilitation Board

 

Gallantry Awards

 

NCERT

 

Press Information Bureau

A Gallery of Eternal Courage: Inauguration of Param Vir Dirgha at Rashtrapati Bhavan

 

*****

 

(Features ID: 156624) आगंतुक पटल : 11
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Malayalam
Link mygov.in
National Portal Of India
STQC Certificate