Social Welfare
ಹಿಮಾಲಯದ ರಾಜ್ಯಗಳಲ್ಲಿ ತ್ಯಾಜ್ಯ ನಿರ್ವಹಣೆಯ ನಾವೀನ್ಯತೆಗಳು
Posted On:
16 DEC 2025 10:38AM
ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ದಿನದ ಮೊದಲ ಕಿರಣಗಳು ಸ್ಪರ್ಶಿಸುತ್ತಿದ್ದಂತೆ, ಭವ್ಯವಾದ ಪರ್ವತಗಳಾದ್ಯಂತ ಜೀವನವು ಶಾಂತವಾಗಿ ಆರಂಭವಾಗುತ್ತದೆ. ಗುಡ್ಡಗಾಡು ಪಟ್ಟಣಗಳಲ್ಲಿ, ನೈರ್ಮಲ್ಯ ಕಾರ್ಮಿಕರು ಕಿರಿದಾದ ದಾರಿಗಳಲ್ಲಿ ಸಾಗುತ್ತಾ ಮನೆಮನೆಯ ಕಸವನ್ನು ಸಂಗ್ರಹಿಸುತ್ತಾರೆ. ಶಾಲಾ ಆವರಣಗಳಲ್ಲಿ, ವಿದ್ಯಾರ್ಥಿಗಳು ದೈನಂದಿನ ಅಭ್ಯಾಸದ ಭಾಗವಾಗಿ ತ್ಯಾಜ್ಯವನ್ನು ವಿಂಗಡಿಸುತ್ತಾರೆ, ಹಾಗೆಯೇ ಪುಣ್ಯಕ್ಷೇತ್ರಗಳಲ್ಲಿ ಸಂದರ್ಶಕರು ನಿಗದಿತ ಸಂಗ್ರಹಣಾ ಕೇಂದ್ರಗಳನ್ನು ಬಳಸುತ್ತಾರೆ. ಈ ದೈನಂದಿನ ಕ್ರಮಗಳು ಹಿಮಾಲಯ ಪ್ರದೇಶದಲ್ಲಿ ಸಂಘಟಿತ ತ್ಯಾಜ್ಯ ನಿರ್ವಹಣೆಗೆ ನೀಡುತ್ತಿರುವ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತವೆ. ಈ ಪ್ರದೇಶವು ಎತ್ತರದ ಪ್ರದೇಶದ ವಸತಿಗಳು, ಕಠಿಣ ಭೂಪ್ರದೇಶ, ಹವಾಮಾನ ವೈವಿಧ್ಯತೆ ಮತ್ತು ಸೀಮಿತ ಭೂಲಭ್ಯತೆಯಿಂದಾಗಿ ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಹೊಂದಿದೆ.
ಋತುಮಾನದ ಪ್ರವಾಸೋದ್ಯಮ ಮತ್ತು ಯಾತ್ರಾ ಚಟುವಟಿಕೆಗಳು ಈ ಕಾರ್ಯಾಚರಣೆಯ ಬೇಡಿಕೆಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ, ಇದಕ್ಕಾಗಿ ಸ್ಥಳೀಯವಾಗಿ ಹೊಂದಿಕೊಳ್ಳುವ ಮತ್ತು ವಿಕೇಂದ್ರೀಕೃತ ಪರಿಹಾರಗಳ ಅಗತ್ಯವಿದೆ. ಈ ಪರಿಸ್ಥಿತಿಗಳನ್ನು ಗುರುತಿಸಿ, ಎಲ್ಲಾ ಹಂತದ ಸರ್ಕಾರಗಳು ಸ್ವಚ್ಛ ಭಾರತ್ ಮಿಷನ್–ಅರ್ಬನ್ 2.0 ಅಡಿಯಲ್ಲಿ ತ್ಯಾಜ್ಯ ನಿರ್ವಹಣಾ ಪ್ರಯತ್ನಗಳನ್ನು ಬಲಪಡಿಸಿವೆ. ಇದು ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಹಳೆಯ ಕಸದ ರಾಶಿಗಳ ವಿಲೇವಾರಿ ಹಾಗೂ ನಾಗರಿಕರು ಮತ್ತು ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯ ಮೇಲೆ ವಿಶೇಷ ಗಮನ ಹರಿಸಿದೆ.
ಡಿಜಿಟಲ್ ರಿಫಂಡ್ ಸಿಸ್ಟಮ್ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕೇದಾರನಾಥದ ಕಡಿವಾಣ

ಉತ್ತರಾಖಂಡದ ಪ್ರಮುಖ ಯಾತ್ರಾ ಸ್ಥಳವಾದ ಕೇದಾರನಾಥವು ಋತುಮಾನಕ್ಕೆ ಅನುಗುಣವಾಗಿ ಸಾವಿರಾರು ಭಕ್ತರ ಆಗಮನಕ್ಕೆ ಸಾಕ್ಷಿಯಾಗುತ್ತದೆ, ಆದ್ದರಿಂದ ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗಾಗಿ ವ್ಯವಸ್ಥಿತ ಕ್ರಮಗಳ ಅಗತ್ಯವಿದೆ. ಈ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಮೇ 2022 ರಲ್ಲಿ 'ರಿಸೈಕಲ್' ಸಂಸ್ಥೆಯ ಸಹಯೋಗದೊಂದಿಗೆ ಡಿಜಿಟಲ್ ಡೆಪಾಸಿಟ್ ರಿಫಂಡ್ ಸಿಸ್ಟಮ್ ಅನ್ನು ಜಾರಿಗೆ ತಂದಿತು.
ಈ ವ್ಯವಸ್ಥೆಯ ಅಡಿಯಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಮಲ್ಟಿಲೇಯರ್ಡ್ ಪ್ಲಾಸ್ಟಿಕ್ ವಸ್ತುಗಳ ಮೇಲೆ ಯುನಿಕ್ ಸೀರಿಯಲೈಸ್ಡ್ ಐಡೆಂಟಿಫಿಕೇಶನ್ (USI) QR ಕೋಡ್‌ಗಳನ್ನು ನೀಡಲಾಗುತ್ತದೆ ಮತ್ತು ಅವುಗಳ ಮೇಲೆ ₹10 ರ ಮರುಪಾವತಿಸಬಹುದಾದ ಠೇವಣಿಯನ್ನು ಸಂಗ್ರಹಿಸಲಾಗುತ್ತದೆ. ಯಾತ್ರಿಕರು ತಾವು ಬಳಸಿದ ವಸ್ತುಗಳನ್ನು ನಿಗದಿತ ಕೇಂದ್ರಗಳಲ್ಲಿ ಅಥವಾ ಗೌರಿಕುಂಡ್ ಮತ್ತು ಕೇದಾರನಾಥ ದೇವಾಲಯದ ಬಳಿ ಅಳವಡಿಸಲಾಗಿರುವ ಎರಡು ರಿವರ್ಸ್ ವೆಂಡಿಂಗ್ ಮಷೀನ್‌ಗಳಲ್ಲಿ (RVMs) ಹಿಂತಿರುಗಿಸಬಹುದು. ಠೇವಣಿ ಮೊತ್ತವನ್ನು ಯುಪಿಐ ಮೂಲಕ ಡಿಜಿಟಲ್ ರೂಪದಲ್ಲಿ ಮರುಪಾವತಿಸಲಾಗುತ್ತದೆ.
ಹೀಗೆ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆ ಮತ್ತು ಮರುಬಳಕೆಗಾಗಿ ಮೆಟೀರಿಯಲ್ ರಿಕವರಿ ಫೆಸಿಲಿಟೀಸ್‌ಗಳಿಗೆ ಕಳುಹಿಸಲಾಗುತ್ತದೆ. ಈ ಉಪಕ್ರಮವು ಜವಾಬ್ದಾರಿಯುತ ವಿಲೇವಾರಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಮತ್ತು ಯಾತ್ರಾ ಸಮಯದಲ್ಲಿ ಸಂಘಟಿತ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಬೆಂಬಲ ನೀಡುತ್ತದೆ.
ಫಲಿತಾಂಶಗಳು:
- ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥ ಸೇರಿದಂತೆ ಇತರ ಚಾರ್‌ಧಾಮ್‌ಗಳಲ್ಲಿ ಡಿಜಿಟಲ್ ರಿಫಂಡ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ.
- 20 ಲಕ್ಷಕ್ಕೂ ಹೆಚ್ಚು ಬಾಟಲಿಗಳನ್ನು ಮರುಬಳಕೆ ಮಾಡಲಾಗಿದೆ.
- 66 ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಗಟ್ಟಲಾಗಿದೆ.
- 110ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.
ಹಸಿರು ಕ್ಯಾಂಪಸ್ ಚೌಕಟ್ಟು: ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯತ್ತ ಜಮ್ಮು ಮತ್ತು ಕಾಶ್ಮೀರದ ಸಂಸ್ಥೆಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ, ಸ್ವಚ್ಛತೆ ಮತ್ತು ಸುಸ್ಥಿರತೆಯ ಬಗೆಗಿನ ಸಂವಾದಗಳು ದಿನನಿತ್ಯದ ಸಾಂಸ್ಥಿಕ ಜೀವನದ ಭಾಗವಾಗುತ್ತಿವೆ. ಶಾಲೆಗಳು, ಕಚೇರಿಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ವಿಂಗಡಿಸುವುದು ಅಥವಾ ಮರುಬಳಕೆ ಮಾಡಬಹುದಾದ ಪರ್ಯಾಯಗಳನ್ನು ಆರಿಸಿಕೊಳ್ಳುವಂತಹ ಸರಳ ಅಭ್ಯಾಸಗಳನ್ನು ಈಗ ದೈನಂದಿನ ರೂಢಿಗಳಾಗಿ ಅಳವಡಿಸಿಕೊಳ್ಳಲಾಗುತ್ತಿದೆ.
ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ, 20 ಜಿಲ್ಲೆಗಳ 80 ನಗರ ಸ್ಥಳೀಯ ಸಂಸ್ಥೆಗಳ ಬೆಂಬಲದೊಂದಿಗೆ 1,093 ಕ್ಯಾಂಪಸ್‌ಗಳನ್ನು ವ್ಯವಸ್ಥಿತ ಪ್ರಮಾಣೀಕರಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಶಿಕ್ಷಣ ಸಂಸ್ಥೆಗಳು ಗುರುತಿಸುವಿಕೆ, ಸಿದ್ಧತೆ ಮತ್ತು ಘೋಷಣೆ ಎಂಬ ಮೂರು ಹಂತದ ಪ್ರಕ್ರಿಯೆಯ ಮೂಲಕ ಮುನ್ನಡೆದವು. ಈ ಪ್ರಕ್ರಿಯೆಯು ತ್ಯಾಜ್ಯ ವಿಂಗಡಣೆ, ಸ್ಥಳದಲ್ಲೇ ಗೊಬ್ಬರ ತಯಾರಿಕೆ ಮತ್ತು ಏಕಬಳಕೆಯ ಪ್ಲಾಸ್ಟಿಕ್ ಕಡಿತಗೊಳಿಸುವುದರ ಮೇಲೆ ಗಮನ ಹರಿಸಿತ್ತು. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಂದರ್ಶಕರು ಮರುಬಳಕೆ ಮಾಡಬಹುದಾದ ಪರ್ಯಾಯಗಳತ್ತ ಮುಖ ಮಾಡುವಂತೆ ಪ್ರೋತ್ಸಾಹಿಸುವ ಮೂಲಕ ದೈನಂದಿನ ನಡವಳಿಕೆಯಲ್ಲಿ ಬದಲಾವಣೆಯನ್ನು ತರಲಾಯಿತು.
ನೈರ್ಮಲ್ಯ ಸೌಲಭ್ಯಗಳ ಸುಧಾರಣೆಯ ಜೊತೆಗೆ, 'ತ್ಯಾಜ್ಯದಿಂದ ಕಲೆ' ಮತ್ತು 'ಹಸಿರು ಮೂಲೆಗಳ'ಂತಹ ಸೃಜನಶೀಲ ಉಪಕ್ರಮಗಳು ಈ ಕಾರ್ಯಕ್ರಮದ ಪ್ರಭಾವವನ್ನು ಹೆಚ್ಚಿಸಿದವು. ತನ್ನ ವ್ಯಾಪ್ತಿಯ ಎಲ್ಲಾ ಕ್ಯಾಂಪಸ್‌ಗಳನ್ನು 'ಹಸಿರು' ಎಂದು ಘೋಷಿಸಿದ ಮೊದಲ ನಗರ ಸ್ಥಳೀಯ ಸಂಸ್ಥೆಯಾಗಿ ಅನಂತನಾಗ್ ಹೊರಹೊಮ್ಮಿತು.
ತ್ಯಾಜ್ಯದಿಂದ ಪ್ರಭಾವ: ಧರ್ಮಶಾಲಾದಲ್ಲಿ ನಾವೀನ್ಯತೆ ಮತ್ತು ಸಹಭಾಗಿತ್ವದ ಪ್ರತಿಫಲನ

ಹಿಮಾಚಲ ಪ್ರದೇಶದ ಬೆಟ್ಟಗಳ ನಡುವೆ ನೆಲೆಸಿರುವ ಧರ್ಮಶಾಲಾ ನಗರವು, 2021 ರಿಂದ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಸಮನ್ವಯಿತ ಉಪಕ್ರಮಗಳ ಸರಣಿಯ ಮೂಲಕ ತನ್ನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ನಗರೀಕರಣ ಮತ್ತು ಪ್ರವಾಸೋದ್ಯಮದ ಬೇಡಿಕೆಗಳಿಗೆ ನಗರವು ಸ್ಪಂದಿಸುತ್ತಿದ್ದಂತೆ, ಪಾಲಿಕೆಯು ವ್ಯಾಪಾರಗಳು, ನೆರೆಹೊರೆಯವರು ಮತ್ತು ಸಂಸ್ಥೆಗಳ ಸಹಭಾಗಿತ್ವವನ್ನು ಉತ್ತೇಜಿಸುವ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ.
'ಕ್ಲೀನ್ ಬಿಸಿನೆಸ್ ಪ್ರೋಗ್ರಾಂ' ಸ್ಥಳೀಯ ಸಂಸ್ಥೆಗಳಿಗೆ ನಿಯಮಿತ ತರಬೇತಿ ಮತ್ತು ಪ್ರಮಾಣೀಕರಣದ ಮೂಲಕ ಬೆಂಬಲ ನೀಡುತ್ತದೆ, ಇದರಿಂದ ಅವರು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಸಮುದಾಯದ ಮಟ್ಟದಲ್ಲಿ, 'ಮಾಡೆಲ್ ವಾರ್ಡ್ ಪ್ರೋಗ್ರಾಂ' ನಿವಾಸಿಗಳು ತಮ್ಮ ನೆರೆಹೊರೆಯಲ್ಲಿ ಕಸ ವಿಂಗಡಣೆ ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಇದಕ್ಕೆ ಪೂರಕವಾಗಿ ನಗರದಾದ್ಯಂತ ಮರುಬಳಕೆಯನ್ನು ಹೆಚ್ಚಿಸುವ ಮೀಸಲಾದ 'ಮೆಟೀರಿಯಲ್ ರಿಕವರಿ ಫೆಸಿಲಿಟಿ' ಕೇಂದ್ರದ ಬೆಂಬಲವಿದೆ.
ಧರ್ಮಶಾಲಾದ ವಿಧಾನದಲ್ಲಿ ಒಂದು ನವೀನ ಅಂಶವೆಂದರೆ ಲಾಲಾ ಲಜಪತ್ ರಾಯ್ ಜಿಲ್ಲಾ ಸುಧಾರಣಾ ಗೃಹದಲ್ಲಿ (ಜೈಲು) ಹಮ್ಮಿಕೊಂಡಿರುವ "ವೇಸ್ಟ್ ಅಂಡರ್ ಅರೆಸ್ಟ್" ಉಪಕ್ರಮ. ಇಲ್ಲಿ ಕೈದಿಗಳು ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯುತ್ತಾ ತ್ಯಾಜ್ಯ ಸಂಸ್ಕರಣೆಯಲ್ಲಿ ಭಾಗವಹಿಸುತ್ತಾರೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಗುಡ್ಡಗಾಡು ನಗರದಲ್ಲಿನ ನಗರ ತ್ಯಾಜ್ಯ ನಿರ್ವಹಣೆಗೆ ಬಹುಮುಖಿ ಮತ್ತು ಸಹಕಾರಿ ವಿಧಾನವನ್ನು ಪ್ರತಿಬಿಂಬಿಸುತ್ತವೆ.
|
ನಗರ ತ್ಯಾಜ್ಯ ನಿರ್ವಹಣಾ ಉಪಕ್ರಮಗಳ ಪ್ರಭಾವ:
- ತ್ಯಾಜ್ಯ ವಿಂಗಡಣೆಯಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ.
- ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಮಾಣದಲ್ಲಿ ಶೇಕಡಾ 30 ರಷ್ಟು ಇಳಿಕೆಯಾಗಿದೆ.
- "ವೇಸ್ಟ್ ಅಂಡರ್ ಅರೆಸ್ಟ್" ಉಪಕ್ರಮದ ಮೂಲಕ ಲ್ಯಾಂಡ್‌ಫಿಲ್‌ಗಳಿಗೆ (ತ್ಯಾಜ್ಯ ವಿಲೇವಾರಿ ಹೊಂಡಗಳು) ಸೇರುತ್ತಿದ್ದ ತ್ಯಾಜ್ಯದ ಪ್ರಮಾಣದಲ್ಲಿ ಶೇಕಡಾ 40 ರಷ್ಟು ಇಳಿಕೆಯಾಗಿದೆ.
- ಮೀಸಲಾದ ಮೆಟೀರಿಯಲ್ ರಿಕವರಿ ಫೆಸಿಲಿಟಿ ಮೂಲಕ ಮರುಬಳಕೆ ಪ್ರಕ್ರಿಯೆಯನ್ನು ಬಲಪಡಿಸಲಾಗಿದೆ.
|
ತಂತ್ರಜ್ಞಾನ ಮತ್ತು ನಾವೀನ್ಯತೆಯು ಲೇಹ್‌ನಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುತ್ತಿವೆ.

ಲೇಹ್‌ನಂತಹ ಎತ್ತರದ ಮತ್ತು ದೂರದ ಪ್ರದೇಶದಲ್ಲಿ ತ್ಯಾಜ್ಯವನ್ನು ನಿರ್ವಹಿಸಲು ವಿಶ್ವಾಸಾರ್ಹ ಮತ್ತು ಸ್ಥಳೀಯವಾಗಿ ಸೂಕ್ತವಾದ ಪರಿಹಾರಗಳ ಅಗತ್ಯವಿದೆ. ಇದನ್ನು ಎದುರಿಸಲು, ಲಡಾಖ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯು 2020 ರಲ್ಲಿ ಸೌರಶಕ್ತಿ ಚಾಲಿತ ಘನತ್ಯಾಜ್ಯ ನಿರ್ವಹಣಾ ಉಪಕ್ರಮವನ್ನು ಪರಿಚಯಿಸಿತು.
ದಿನಕ್ಕೆ 30 ಟನ್ ವರೆಗೆ ತ್ಯಾಜ್ಯವನ್ನು ಸಂಸ್ಕರಿಸಲು ವಿನ್ಯಾಸಗೊಳಿಸಲಾದ ಈ ಘಟಕವು, ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸೌರಶಕ್ತಿಯನ್ನು ಬಳಸುತ್ತದೆ. ಇಲ್ಲಿ ಮೂಲದಲ್ಲೇ ತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಂಗ್ರಹಿಸಿದ ಕಸವನ್ನು ಮರುಬಳಕೆ ಮತ್ತು ಗೊಬ್ಬರ ತಯಾರಿಕೆಗೆ ಬಳಸಲಾಗುತ್ತದೆ. ಈ ಉಪಕ್ರಮವು ಶೇಕಡಾ 100 ರಷ್ಟು ಮೂಲ ವಿಂಗಡಣೆ ಮತ್ತು ಶೇಕಡಾ 90 ರಷ್ಟು ವಸ್ತು ಚೇತರಿಕೆ ದರವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಹೀಗೆ ಚೇತರಿಸಿಕೊಂಡ ತ್ಯಾಜ್ಯವನ್ನು ಸ್ಥಳೀಯ ಬಳಕೆಗಾಗಿ ಸಾವಯವ ಗೊಬ್ಬರ ಮತ್ತು ಪಾದಚಾರಿ ಮಾರ್ಗದ ಟೈಲ್ಸ್‌ಗಳಂತಹ ಉತ್ಪನ್ನಗಳಾಗಿ ಮರುರೂಪಿಸಲಾಗುತ್ತದೆ.
ಮರುಬಳಕೆ ಮಾಡಬಹುದಾದ ವಸ್ತುಗಳ ಮತ್ತು ಗೊಬ್ಬರದ ಮಾರಾಟದಿಂದ ಬರುವ ಆದಾಯವು ದೈನಂದಿನ ಕಾರ್ಯಾಚರಣೆಗಳಿಗೆ ನೆರವಾಗುತ್ತದೆ. ಈ ಉಪಕ್ರಮವು ನವೀಕರಿಸಬಹುದಾದ ಇಂಧನ ಬಳಕೆಯನ್ನು ಲಡಾಖ್‌ನ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ ಸಮನ್ವಯಗೊಳಿಸುವ ತ್ಯಾಜ್ಯ ನಿರ್ವಹಣಾ ವಿಧಾನವನ್ನು ಪ್ರತಿಬಿಂಬಿಸುತ್ತದೆ.
|
ಲೇಹ್ ಮಾದರಿಯು ಏಕೆ ವಿಶಿಷ್ಟವಾಗಿದೆ:
- ಈ ಉಪಕ್ರಮವು ವರ್ತುಲ ಆರ್ಥಿಕತೆಯ ವಿಧಾನವನ್ನು ಅನುಸರಿಸುತ್ತದೆ.
- ಇದು ದೂರದ ಮತ್ತು ಅತಿ ಎತ್ತರದ ಭೌಗೋಳಿಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ.
- ತ್ಯಾಜ್ಯ ಸಂಸ್ಕರಣಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡಲು ನವೀಕರಿಸಬಹುದಾದ ಇಂಧನವನ್ನು (ಸೌರಶಕ್ತಿ) ಬಳಸುತ್ತದೆ.
- ಇದು ಮರುಬಳಕೆ, ಗೊಬ್ಬರ ತಯಾರಿಕೆ ಮತ್ತು ಮರುಬಳಕೆಯನ್ನು ಸಂಯೋಜಿಸುತ್ತದೆ.
- · ಚೇತರಿಸಿಕೊಂಡ ವಸ್ತುಗಳನ್ನು ಸ್ಥಳೀಯ ಬಳಕೆಗಾಗಿ ಮರುಬಳಕೆ ಮಾಡುವುದನ್ನು ಉತ್ತೇಜಿಸುತ್ತದೆ.
|
ಹಿಮಾಲಯದ ಮಹಿಳೆಯರು: ಸುಸ್ಥಿರ ತ್ಯಾಜ್ಯ ಪರಿಹಾರಗಳತ್ತ ಸ್ವಸಹಾಯ ಗುಂಪುಗಳ ನಡಿಗೆ

ಸೀಮಿತ ರಸ್ತೆ ಸಂಪರ್ಕ ಮತ್ತು ಸವಾಲಿನ ಭೂಪ್ರದೇಶವನ್ನು ಹೊಂದಿರುವ ಉತ್ತರಾಖಂಡದ ಗುಡ್ಡಗಾಡು ಪಟ್ಟಣವಾದ ಬಾಗೇಶ್ವರದಲ್ಲಿ, ಮಹಿಳೆಯರ ಭಾಗವಹಿಸುವಿಕೆಯೊಂದಿಗೆ ಸಮುದಾಯದ ನೇತೃತ್ವದ ವಿಧಾನದ ಮೂಲಕ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸಲಾಗಿದೆ. 2017–18ರಲ್ಲಿ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಮತ್ತು ಬಾಗೇಶ್ವರ ನಗರ ಪಾಲಿಕೆ ಪರಿಷತ್ತಿನ ಸಹಯೋಗದೊಂದಿಗೆ, 'ಸಖಿ ಸ್ವಾಯತ್ತ ಸಹಕಾರ ಸಂಘ'ವು 11 ವಾರ್ಡ್‌ಗಳಲ್ಲಿ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.
ಸಖಿ ಸ್ವಸಹಾಯ ಗುಂಪಿನ (SHG) ಸದಸ್ಯರು ಸಾಂಪ್ರದಾಯಿಕ ವಾಹನಗಳು ಚಲಿಸಲಾಗದ ಕಿರಿದಾದ ಮತ್ತು ಕಡಿದಾದ ದಾರಿಗಳಲ್ಲಿ ನಡೆದುಕೊಂಡು ಹೋಗಿ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಇದರೊಂದಿಗೆ, ಹಸಿ ಮತ್ತು ಒಣ ಕಸವನ್ನು ವಿಂಗಡಿಸುವ ಮಹತ್ವದ ಬಗ್ಗೆ ಮನೆಮಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಅವರು ಮಾಡುತ್ತಾರೆ. ಕಾಲಕ್ರಮೇಣ, ಈ ವಿಧಾನವು ಮನೆಗಳ ಮಟ್ಟದಲ್ಲಿ ಸ್ವಚ್ಛತೆ ಮತ್ತು ಹೆಚ್ಚಿನ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಯಿತು.
ಈ ಉಪಕ್ರಮದಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ 18 ರಿಂದ 47ಕ್ಕೆ ಏರಿತು ಮತ್ತು ಇಬ್ಬರು ಸದಸ್ಯರು ಮೇಲ್ವಿಚಾರಣಾ ಜವಾಬ್ದಾರಿಗಳನ್ನು ವಹಿಸಿಕೊಂಡರು. ಭಾಗವಹಿಸುವವರು ದಿನಕ್ಕೆ ₹100 ಗಳಿಸುತ್ತಿದ್ದು, ಇದು ಅವರ ಆರ್ಥಿಕ ಸ್ವತಂತ್ರಕ್ಕೆ ನೆರವಾಗುವುದರ ಜೊತೆಗೆ ನಗರದ ಸೇವಾ ವಿತರಣೆಗೆ ಕೊಡುಗೆ ನೀಡುತ್ತಿದೆ. ಈ ಉಪಕ್ರಮವು ಸ್ವಚ್ಛ ಸರ್ವೇಕ್ಷಣೆ 2019 ಅಡಿಯಲ್ಲಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್‌ನಿಂದ ಮನ್ನಣೆಯನ್ನು ಪಡೆದಿದೆ. ಇದು ಸಣ್ಣ ಗುಡ್ಡಗಾಡು ಪಟ್ಟಣಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹಿಳಾ ಸಂಘಟನೆಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಉಪಸಂಹಾರ
ಹಿಮಾಲಯದ ರಾಜ್ಯಗಳಲ್ಲಿನ ಈ ಉಪಕ್ರಮಗಳು ಭಾರತದ ಅಭಿವೃದ್ಧಿಯ ಆದ್ಯತೆಗಳೊಂದಿಗೆ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೂ ಬೆಳೆಯುತ್ತಿರುವ ಭವಿಷ್ಯದತ್ತ ಬೆರಳು ಮಾಡಿ ತೋರಿಸುತ್ತವೆ. ಸಮುದಾಯದ ಭಾಗವಹಿಸುವಿಕೆ, ಸಾಂಸ್ಥಿಕ ಜವಾಬ್ದಾರಿ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಸೂಕ್ತವಾದ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ, ಹಿಮಾಲಯದ ರಾಜ್ಯಗಳು ಅಭಿವೃದ್ಧಿ ಹೊಂದಿದ ಮತ್ತು ಸುಸ್ಥಿರ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಿವೆ. ಸ್ವಚ್ಛ ಭಾರತ್ ಮಿಷನ್–ಅರ್ಬನ್ 2.0 ಅಡಿಯಲ್ಲಿ ಈ ಪ್ರಯತ್ನಗಳು ಸಂಪನ್ಮೂಲ ದಕ್ಷತೆ, ವರ್ತುಲ ಆರ್ಥಿಕತೆ ಮತ್ತು ನಾಗರಿಕರ ನೇತೃತ್ವದ ಹೊಣೆಗಾರಿಕೆಯತ್ತ ಕ್ರಮೇಣ ಬದಲಾಗುತ್ತಿರುವುದನ್ನು ಪ್ರತಿಬಿಂಬಿಸುತ್ತವೆ.
References
Ministry of Housing & Urban Affairs
Click here for pdf file.
*****
(Features ID: 156533)
आगंतुक पटल : 4
Provide suggestions / comments