Social Welfare

​​​​​​​ಏಷ್ಯನ್ ಗೇಮ್ಸ್ 2026

प्रविष्टि तिथि: 06 OCT 2026 17:28 PM

ನವದೆಹಲಿಯಿಂದ ಐಚಿ-ನಗೋಯಾವರೆಗಿನ ಭಾರತದ ಪಯಣ

ಒಂದು ನೋಟದಲ್ಲಿ ಏಷ್ಯನ್ ಗೇಮ್ಸ್ 2026

ಏಷ್ಯನ್ ಗೇಮ್ಸ್, ಅಥವಾ ಏಷ್ಯಡ್ ಎಂದು ಕರೆಯಲ್ಪಡುವ ಈ ಕ್ರೀಡಾಕೂಟವು ಏಷ್ಯಾದ ಅತಿ ದೊಡ್ಡ ಕ್ರೀಡಾ ಸ್ಪರ್ಧೆಯಾಗಿದ್ದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದನ್ನು ಏಷ್ಯನ್ ಒಲಿಂಪಿಕ್ ಕೌನ್ಸಿಲ್ ಸಂಘಟಿಸುತ್ತದೆ ಮತ್ತು ಪ್ರಸ್ತುತ 45 ಭಾಗವಹಿಸುವ ದೇಶಗಳು ಅಥವಾ ಪ್ರದೇಶಗಳನ್ನು ಹೊಂದಿದೆ. 20ನೇ ಏಷ್ಯನ್ ಗೇಮ್ಸ್ 2026 ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಿತು. ಇದರ ಅಧಿಕೃತ ಧ್ವೇಯವಾಕ್ಯ (ಸ್ಲೋಗನ್) “ಇಮ್ಯಾಜಿನ್ ಒನ್ ಏಷ್ಯಾ” (ಒಂದು ಏಷ್ಯಾವನ್ನು ಕಲ್ಪಿಸಿಕೊಳ್ಳಿ) ಎಂದಾಗಿತ್ತು. ಟೋಕಿಯೋ (1958) ಮತ್ತು ಹಿರೋಶಿಮಾ (1994) ನಂತರ ಜಪಾನ್ ಏಷ್ಯನ್ ಗೇಮ್ಸ್‌ಗೆ ಅತಿಥ್ಯ ವಹಿಸಿರುವುದು ಇದು ಮೂರನೇ ಬಾರಿಯಾಗಿದೆ.

ಈ ಪ್ರಮುಖ ಕಾರ್ಯಕ್ರಮವು 16 ದಿನಗಳ ತೀವ್ರತರದ ವಿಶ್ವದರ್ಜೆಯ ಸ್ಪರ್ಧೆಗಳಲ್ಲಿ ಹರಡಿಕೊಂಡಿತ್ತು. ಇದು ಕ್ರೀಡಾ ಶ್ರೇಷ್ಠತೆಯ ಭವ್ಯ ಪ್ರದರ್ಶನದಲ್ಲಿ 43 ಕ್ರೀಡೆಗಳು ಮತ್ತು 71 ವಿಭಾಗಗಳನ್ನು ಒಳಗೊಂಡಿತ್ತು. ಕ್ರೀಡಾಕೂಟದ ಅವಧಿಯಲ್ಲಿ 469 ರೋಮಾಂಚಕ ಸ್ಪರ್ಧೆಗಳಲ್ಲಿ ಒಟ್ಟು 1,407 ಪದಕಗಳನ್ನು ಪ್ರಧಾನ ಮಾಡಲಾಯಿತು.

ಏಷ್ಯನ್ ಗೇಮ್ಸ್‌ನ ಜೊತೆಗೆ, ಜಪಾನ್ 2026 ರ ಅಕ್ಟೋಬರ್ 18 ರಿಂದ ಅಕ್ಟೋಬರ್ 24 ರವರೆಗೆ ಐಚಿ-ನಗೋಯಾದಲ್ಲಿ 5 ನೇ ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಆತಿಥ್ಯ ವಹಿಸಲಿದೆ. ಜಪಾನ್ ಪ್ಯಾರಾ ಗೇಮ್ಸ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಮೊದಲ ಬಾರಿಯಾಗಿದೆ.

ಏಷ್ಯನ್ ಗೇಮ್ಸ್ 2026 ರ ಅಧಿಕೃತ ಚಿಹ್ನೆಯನ್ನು (ಎಂಬ್ಲಮ್) ಅರ್ಥೈಸಿಕೊಳ್ಳುವುದು

ಅಧಿಕೃತ ಚಿಹ್ನೆಯ ಬಣ್ಣ ಮತ್ತು ವಿನ್ಯಾಸವು ಸ್ಥಳೀಯ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಕ್ರೀಡೆಯ ಕ್ರಿಯಾಶೀಲತೆಯೊಂದಿಗೆ ಸಂಯೋಜಿಸುತ್ತದೆ. ಇದರಲ್ಲಿರುವ ಬಾಗಿದ ರೇಖೆಗಳು (ಕರ್ವ್ಸ್) ಜೀವಂತಿಕೆಯನ್ನು ಪ್ರತಿನಿಧಿಸಿದರೆ, ಮಧ್ಯದಲ್ಲಿರುವ ನೇರಳೆ, ಚಿನ್ನದ ಬಣ್ಣ ಮತ್ತು ಹಸಿರು ರೇಖೆಗಳು ಜನರು ಒಂದಾಗಿ ಏಷ್ಯನ್ ಒಲಿಂಪಿಕ್ ಕೌನ್ಸಿಲ್‌ನ ಅಧಿಕೃತ ಸಂಕೇತವಾದ ಪ್ರಕಾಶಮಾನವಾದ ಕೆಂಪು ಸೂರ್ಯನತ್ತ ಮುನ್ನಡೆಯುವ ಚಿತ್ರಣವನ್ನು ಮೂಡಿಸುತ್ತವೆ. ನೇರಳೆ ಬಣ್ಣವು ಐಚಿ ಪ್ರಾಂತ್ಯದ ಹೂವು (ಐರಿಸ್) ಅನ್ನು ಪ್ರತಿನಿಧಿಸುತ್ತದೆ; ಚಿನ್ನದ ಬಣ್ಣವು ನಗೋಯಾ ಕೋಟೆಯ ಮೇಲ್ಛಾವಣಿಯ ಸಾಂಪ್ರದಾಯಿಕ ಚಿನ್ನದ ಹುಲಿ-ಮೀನಿನ ಅಲಂಕಾರಿಕ ಆಕೃತಿಯಾದ 'ಕಿನ್‌ಶಾಚಿ'ಯನ್ನು ಸಂಕೇತಿಸುತ್ತದೆ; ಮತ್ತು ಹಸಿರು ಬಣ್ಣವು ಎಕ್ಸ್‌ಪೋ 2005 ಐಚಿ, ಸಿಒಪಿ10 ಹಾಗೂ ಯುನೆಸ್ಕೋದ ಇಸ್‌ಡಿ ವಿಶ್ವ ಸಮ್ಮೇಳನದಂತಹ ಪ್ರಮುಖ ಕಾರ್ಯಕ್ರಮಗಳ ಮೂಲಕ ಬೆಳೆಸಲ್ಪಟ್ಟ ಐಚಿ-ನಗೋಯಾದ ಪ್ರಬಲ ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಚಿಹ್ನೆಯು ಏಷ್ಯಾ, ಐಚಿ ಮತ್ತು ನಗೋಯಾ ಹೆಸರುಗಳ ಮೊದಲ ಅಕ್ಷರಗಳನ್ನು ಒಳಗೊಂಡಿದೆ: “A” ಅಕ್ಷರವನ್ನು ನೇರಳೆ ಬಾಗಿದ ರೇಖೆ ಮತ್ತು ಮಧ್ಯದ ರೇಖೆಯಲ್ಲಿ ಹಾಗೂ “N” ಅಕ್ಷರವನ್ನು ನೇರಳೆ ಮತ್ತು ಚಿನ್ನದ ಬಣ್ಣದ ರೇಖೆಗಳಲ್ಲಿ ಬಿಂಬಿಸಲಾಗಿದೆ.

 

ಏಷ್ಯನ್ ಗೇಮ್ಸ್ 2026 ರ ಅಧಿಕೃತ ಮಾಸ್ಕಟ್

20ನೇ ಏಷ್ಯನ್ ಗೇಮ್ಸ್‌ನ ಮಾಸ್ಕಟ್ ಆದ “ಹೊನೊಹೊನ್”, ಕ್ರೀಡಾಪಟುಗಳ ಉರಿಯುವ ಜ್ವಾಲೆಯಂತಹ ಉತ್ಸಾಹ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಹೆಸರು ಜಪಾನೀಸ್ ಪದ ‘ಹೊನೊಹೊ’ದಿಂದ ಬಂದಿದ್ದು, ಇದು ಜ್ವಾಲೆಯನ್ನು ಸೂಚಿಸುವ ಜಪಾನೀಸ್ ಪದದ ಮೂಲಕ್ಕೆ ಸಂಪರ್ಕ ಹೊಂದಿದೆ. ಇದರ ವಿನ್ಯಾಸವು ನಗೋಯಾ ಕೋಟೆಯ ವಿಶಿಷ್ಟ ಸಂಕೇತಗಳಲ್ಲಿ ಒಂದಾದ ಹಾಗೂ ಐಚಿ-ನಗೋಯಾದ ರಕ್ಷಕ ದೇವತೆಯಾದ ‘ಶಚಿಹೊಕೊ’ದಿಂದ ಪ್ರೇರಿತವಾಗಿದೆ.

ಮೊದಲ ಏಷ್ಯನ್ ಗೇಮ್ಸ್ 1951: ಭಾರತದ ಸ್ಥಾಪಕ ಪಾತ್ರ

ಏಷ್ಯನ್ ಗೇಮ್ಸ್‌ನೊಂದಿಗೆ ಭಾರತದ ಬಾಂಧವ್ಯವು ಆರಂಭಿಕ ದಿನಗಳಿಂದಲೂ ಇದೆ, 1951 ರಲ್ಲಿ ನವದೆಹಲಿಯಲ್ಲಿ ಇದರ ಮೊದಲ ಆವೃತ್ತಿಯು ನಡೆಯಿತು. ಇತ್ತೀಚೆಗಷ್ಟೇ ವಸಾಹತುಶಾಹಿಯಿಂದ ಮುಕ್ತಗೊಂಡಿದ್ದ ಏಷ್ಯಾದ ಹಲವಾರು ಪ್ರದೇಶಗಳೊಂದಿಗೆ, ಎರಡನೇ ಮಹಾಯುದ್ಧದ ನಂತರ ಏಷ್ಯನ್ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಯಿತು. ಐಕ್ಯತೆಯನ್ನು ಪ್ರದರ್ಶಿಸುವ ಮತ್ತು ಯುದ್ಧದಿಂದ ಮುರಿದುಬಿದ್ದ ಏಷ್ಯನ್ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮರುನಿರ್ಮಿಸುವ ಮಾರ್ಗವಾಗಿ ಏಷ್ಯನ್ ಕ್ರೀಡಾ ಸ್ಪರ್ಧೆಯ ಕಲ್ಪನೆಯನ್ನು ಭಾರತವು ಪ್ರತಿಪಾದಿಸಿತು. ಏಷ್ಯನ್ ಗೇಮ್ಸ್‌ನ ಕಲ್ಪನೆಯನ್ನು ಭಾರತದ ಪರವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ ಸದಸ್ಯರಾಗಿದ್ದ ಪ್ರೊ. ಜಿ.ಡಿ. ಸೋಂಧಿ ಅವರು ಮೊದಲು ಪ್ರಸ್ತಾಪಿಸಿದರು. 1947 ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ದೇಶಗಳ ಸಮ್ಮೇಳನದಲ್ಲಿ ಏಷ್ಯನ್ ಗೇಮ್ಸ್ ಆಯೋಜಿಸುವ ಸಲಹೆಯನ್ನು ಮೊದಲು ನೀಡಲಾಯಿತು ಮತ್ತು ಅದನ್ನು 'ಏಷ್ಯನ್ ಗೇಮ್ಸ್' ಎಂದು ಕರೆಯಲು ನಿರ್ಧರಿಸಲಾಯಿತು.

ಉದ್ಘಾಟನಾ ಏಷ್ಯನ್ ಗೇಮ್ಸ್ ಮಾರ್ಚ್, 1951 ರಲ್ಲಿ ನವದೆಹಲಿಯಲ್ಲಿ ನಡೆಯಿತು. ರಾಷ್ಟ್ರೀಯ ಕ್ರೀಡಾಂಗಣದಲ್ಲಿ (ನ್ಯಾಷನಲ್ ಸ್ಟೇಡಿಯಂ) ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಆ ಮೊದಲ ಆವೃತ್ತಿಯಲ್ಲಿ ಆರು ಕ್ರೀಡೆಗಳಲ್ಲಿ ಸ್ಪರ್ಧಿಸಲು 11 ರಾಷ್ಟ್ರಗಳು 489 ಕ್ರೀಡಾಪಟುಗಳನ್ನು ಕಳುಹಿಸಿದ್ದವು. ಆ ವರ್ಷ ಭಾರತವು ಜಪಾನ್ ನಂತರದ ಸ್ಥಾನದಲ್ಲಿದ್ದು, ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಅಂದಿನಿಂದ, ಈ ಕ್ರೀಡಾಕೂಟವು ಕ್ರೀಡೆಯ ಮೂಲಕ ಸ್ನೇಹವನ್ನು ಬೆಳೆಸುವ ಮತ್ತು ವೈವಿಧ್ಯತೆಯನ್ನು ಗುರುತಿಸುವ ಮೂಲಕ ವಿಶ್ವ ಶಾಂತಿಗೆ ಕೊಡುಗೆ ನೀಡುವ ದೊಡ್ಡ ಕಾರ್ಯಕ್ರಮವಾಗಿ ಬೆಳೆದಿದೆ.

ಐಚಿ-ನಗೋಯಾ 2026 ರಲ್ಲಿ ಭಾರತದ ತುಕಡಿ

ಭಾರತವು ಏಷ್ಯನ್ ಗೇಮ್ಸ್ 2026 ರಲ್ಲಿ 36 ಕ್ರೀಡಾ ವಿಭಾಗಗಳಲ್ಲಿ 501 ಕ್ರೀಡಾಪಟುಗಳ ತುಕಡಿಯೊಂದಿಗೆ ತನ್ನ ಅತ್ಯಂತ ದೊಡ್ಡ ಬಹು-ಕ್ರೀಡಾ ನಿಯೋಗಗಳಲ್ಲಿ ಒಂದನ್ನು ಕಣಕ್ಕಿಳಿಸಿತು. ತುಕಡಿಯಲ್ಲಿದ್ದ 300 ಕ್ಕೂ ಹೆಚ್ಚು ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ಗೆ ಪದಾರ್ಪಣೆ ಮಾಡುತ್ತಿದ್ದರು.

ತಂಡದ ನಿರ್ಗಮನಕ್ಕೂ ಮುನ್ನ 2026 ರ ಸೆಪ್ಟೆಂಬರ್ 8 ರಂದು ನವದೆಹಲಿಯಲ್ಲಿ ಭವ್ಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಡಾ. ಮಾಂಡವೀಯ, ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಡಾ. ಪಿ.ಟಿ. ಉಷಾ ಮತ್ತು ಚೆಫ್ ಡಿ ಮಿಷನ್ ಸಹದೇವ್ ಯಾದವ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಹಾಗೂ ಅಧಿಕೃತ ತುಕಡಿಯ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಭಾರತೀಯ ಒಲಿಂಪಿಕ್ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಡಾ. ಮಾಂಡವೀಯ (ಮಧ್ಯದಲ್ಲಿ), ಐಒಎ ಅಧ್ಯಕ್ಷೆ ಡಾ. ಪಿ.ಟಿ. ಉಷಾ (ಬಲದಲ್ಲಿ) ಮತ್ತು ಕ್ರೀಡಾ ಕಾರ್ಯದರ್ಶಿ ಹರಿ ರಂಜನ್ ರಾವ್ (ಎಡದಲ್ಲಿ) ಅವರೊಂದಿಗೆ ಏಷ್ಯನ್ ಗೇಮ್ಸ್ 2026 ಕ್ಕೂ ಮುನ್ನ ಅಧಿಕೃತ ತುಕಡಿಯ ಜೆರ್ಸಿಯನ್ನು ಅನಾವರಣಗೊಳಿಸಿದರು.

ಚಿತ್ರ ಕೃಪೆ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2026 ರ ಸೆಪ್ಟೆಂಬರ್ 19 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ, ದ್ವಿಗುಣ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಮತ್ತು ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಭಾರತದ ಪಥಸಂಚಲನದ ನೇತೃತ್ವ ವಹಿಸಿದರು.

ಐಚಿ-ನಗೋಯಾ 2026 ರಲ್ಲಿ ಭಾರತದ ಚಿನ್ನದ ಪದಕದ ವಿಜಯೋತ್ಸವ

2026 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಭಿಯಾನವು 21 ಚಿನ್ನದ ಪದಕಗಳ ಗಳಿಕೆಯೊಂದಿಗೆ ಪ್ರಮುಖವಾಗಿ ಎದ್ದು ಕಾಣಿಸಿತು, ಇದು ನಿಖರತೆಯ ಪಂದ್ಯಗಳು ಮತ್ತು ತಂಡ ಕ್ರೀಡೆಗಳಲ್ಲಿನ ಬಲವಾದ ಪ್ರದರ್ಶನಗಳಿಂದ ಸಾಧ್ಯವಾಯಿತು. ಬಿಲ್ಲುಗಾರಿಕೆ (ಆರ್ಚರಿ) 5 ಪ್ರಶಸ್ತಿಗಳೊಂದಿಗೆ ಚಿನ್ನದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರೆ, ಶೂಟಿಂಗ್ ಮತ್ತು ಬಾಕ್ಸಿಂಗ್ ತಲಾ 3 ಚಿನ್ನದ ಪದಕಗಳನ್ನು ಗೆದ್ದು ಬೆಂಬಲಿಸಿದವು. ತಂಡ ಕ್ರೀಡೆಗಳಲ್ಲಿ, ಭಾರತವು ಕ್ರಿಕೆಟ್, ಹಾಕಿ ಮತ್ತು ಕಬಡ್ಡಿಯಲ್ಲಿ ತಲಾ 2 ಚಿನ್ನದ ಪದಕಗಳನ್ನು ಭದ್ರಪಡಿಸಿಕೊಳ್ಳುವ ಮೂಲಕ ಭವ್ಯವಾದ "ಗೋಲ್ಡ್ ರಶ್" (ಚಿನ್ನದ ಬೇಟೆ) ನಡೆಸಿತು. ಫೈನಲ್‌ನಲ್ಲಿ ಪುರುಷರ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿದ್ದು, ಪುರುಷರ ಹಾಕಿ ತಂಡವು ಮಲೇಶಿಯಾವನ್ನು 5-1 ಅಂತರದಿಂದ ಸೋಲಿಸಿ ತಮ್ಮ ಖಂಡಾಂತರ ಶೀರ್ಷಿಕೆಯನ್ನು ಕಾಯ್ದುಕೊಂಡಿದ್ದು ಮತ್ತು ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಸ್ಪರ್ಧೆಗಳೆರಡರಲ್ಲೂ ದ್ವಿಗುಣ ಚಿನ್ನದ ಜಯ ಸಾಧಿಸಿದ್ದು ಪ್ರಮುಖ ಪ್ರದರ್ಶನಗಳಾಗಿದ್ದವು. ಕುಸ್ತಿಯಲ್ಲಿ (2), ಅಥ್ಲೆಟಿಕ್ಸ್‌ನಲ್ಲಿ (1) ಮತ್ತು ಗಾಲ್ಫ್‌ನಲ್ಲಿ (1) ಬಂದ ಹೆಚ್ಚುವರಿ ಚಿನ್ನದ ಪದಕಗಳು ಭಾರತದ ಒಟ್ಟು ಚಿನ್ನದ ಸಂಖ್ಯೆಯನ್ನು 21 ಕ್ಕೆ ಏರಿಸಿದವು, ಇದು ಖಂಡಾಂತರ ಕ್ರೀಡಾಂಗಣದಲ್ಲಿ ದೇಶದ ಬಲವಾದ ಮತ್ತು ವೈವಿಧ್ಯಮಯ ಪ್ರದರ್ಶನವನ್ನು ಪ್ರತಿಬಿಂಬಿಸುತ್ತದೆ.

ಕ್ರೀಡೆ

ಚಿನ್ನ

ಬೆಳ್ಳಿ

ಕಂಚು

ಒಟ್ಟು

ಅಥ್ಲೆಟಿಕ್ಸ್

1

9

14

24

ಶೂಟಿಂಗ್

3

8

4

15

ಬಿಲ್ಲುಗಾರಿಕೆ (ಆರ್ಚರಿ)

5

2

2

9

ಬಾಕ್ಸಿಂಗ್

3

0

3

6

ಕುಸ್ತಿ

2

2

2

6

ಸ್ಕ್ವಾಷ್

0

2

3

5

ದೋಣಿ ಯಾನ (ಸೇಲಿಂಗ್)

0

1

2

3

ಕ್ರಿಕೆಟ್

2

0

0

2

ಹಾಕಿ

2

0

0

2

ಕಬಡ್ಡಿ

2

0

0

2

ಗಾಲ್ಫ್

1

1

0

2

ವೇಟ್‌ಲಿಫ್ಟಿಂಗ್

0

1

0

1

ವುಶು

0

1

0

1

ಬ್ಯಾಡ್ಮಿಂಟನ್

0

0

1

1

ಕುರಾಶ್

0

0

1

1

ಮಿಕ್ಸಡ್ ಮಾರ್ಷಲ್ ಆರ್ಟ್ಸ್ (MMA)

0

0

1

1

ರೋಯಿಂಗ್ (ದೋಣಿ ಸ್ಪರ್ಧೆ)

0

0

1

1

ಸೆಪಕ್ ತಕ್ರಾ

0

0

1

1

ಸಾಫ್ಟ್ ಟೆನ್ನಿಸ್

0

0

1

1

ಟೇಬಲ್ ಟೆನ್ನಿಸ್

0

0

1

1

ಒಟ್ಟು

21

27

37

85

ಐಚಿ-ನಗೋಯಾ 2026 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಭಾಗವಹಿಸುವಿಕೆ

ಐಚಿ-ನಗೋಯಾ 2026 ರ ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಅಕ್ಟೋಬರ್ 18 ರಿಂದ 24 ರವರೆಗೆ ಜಪಾನ್‌ನಲ್ಲಿ ನಡೆಯಲಿದೆ. ಏಷ್ಯಾದಾದ್ಯಂತ 45 ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಗಳ ಸುಮಾರು 3,000 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಹದಿನೆಂಟು ಪ್ಯಾರಾ ಕ್ರೀಡೆಗಳನ್ನು ಒಳಗೊಂಡಿರಲಿದೆ.

ಭಾರತವು ಈ ಕ್ರೀಡಾಕೂಟಕ್ಕಾಗಿ ತನ್ನ ಅಧಿಕೃತ ಮಾನ್ಯತೆ ಪಡೆದ ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯಾದ 'ಭಾರತೀಯ ಪ್ಯಾರಾಲಿಂಪಿಕ್ ಸಮಿತಿ'ಯ ಮೂಲಕ ಭಾಗವಹಿಸಲಿದೆ. ಹ್ಯಾಂಗ್‌ಝೌ 2022 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 29 ಚಿನ್ನದ ಪದಕಗಳು ಸೇರಿದಂತೆ ಸಾರ್ವಕಾಲಿಕ ದಾಖಲೆಯ 111 ಪದಕಗಳನ್ನು ಗೆದ್ದ ನಂತರ, ಇದು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಐದನೇ ಭಾಗವಹಿಸುವಿಕೆಯಾಗಿದೆ. ಈ 111 ಪದಕಗಳಲ್ಲಿ, ಮಹಿಳಾ ಕ್ರೀಡಾಪಟುಗಳು 40 ಪದಕಗಳನ್ನು (ಒಟ್ಟು ಪದಕಗಳ ಶೇ. 36) ಗೆದ್ದು ಕೊಡುಗೆ ನೀಡಿದ್ದಾರೆ. ಈ ಹಿಂದೆ, ಭಾರತವು 2010 ರ ಆವೃತ್ತಿಯಲ್ಲಿ 14 ಪದಕಗಳನ್ನು, 2014 ರಲ್ಲಿ 33 ಮತ್ತು 2018 ರಲ್ಲಿ 72 ಪದಕಗಳನ್ನು ಗೆದ್ದುಕೊಂಡಿತ್ತು.

ತಳಮಟ್ಟದಿಂದ ಜಾಗತಿಕ ವೇದಿಕೆಯವರೆಗೆ: ಕ್ರೀಡೆಗಾಗಿ ಭಾರತದ ನೀತಿ ಪ್ರೋತ್ಸಾಹ

ಖೇಲೋ ಭಾರತ ನೀತಿ

ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಕ್ರೀಡಾ ನೀತಿಯಾದ 'ಖೇಲೋ ಭಾರತ ನೀತಿ'ಯನ್ನು 2025 ರ ಜುಲೈ 1 ರಂದು ಪ್ರಾರಂಭಿಸಿತು. ಇದು ಪ್ರಬಲ, ಅಂತರ್ಗತ (ಒಳಗೊಳ್ಳುವ) ಮತ್ತು ಕಾರ್ಯಕ್ಷಮತೆ ಆಧಾರಿತ ಕ್ರೀಡಾ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ತರಬೇತಿ ಮತ್ತು ಸೌಲಭ್ಯಗಳಲ್ಲಿ ಗ್ರಾಮೀಣ ಹಾಗೂ ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಗಮನಹರಿಸುತ್ತದೆ. ತರಬೇತಿ ವೆಚ್ಚವನ್ನು ಕಡಿಮೆ ಮಾಡಲು ಸಮುದಾಯದ ಭಾಗವಹಿಸುವಿಕೆ ಮತ್ತು ಸಹಭಾಗಿತ್ವವನ್ನು ಇದು ಒತ್ತು ನೀಡುತ್ತದೆ. ಈ ನೀತಿಯು 2036 ರ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ ಮಾಡುವತ್ತ ತನ್ನ ಗಮನವನ್ನು ಹರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಇದು ಕ್ರೀಡೆಯನ್ನು ಶಾಲಾ ಶಿಕ್ಷಣದೊಂದಿಗೆ ಸಂಯೋಜಿಸುತ್ತದೆ. ಅಲ್ಲದೆ, ಇದು ಮಹಿಳೆಯರು, ಬುಡಕಟ್ಟು ಸಮುದಾಯಗಳು ಮತ್ತು ವಿಕಲಚೇತನರಿಗೆ ಬೆಂಬಲ ನೀಡುತ್ತದೆ.

ದಾಖಲೆಯ ಆರ್ಥಿಕ ನೆರವು

ಕೇಂದ್ರ ಬಜೆಟ್ 2026-27 ರಲ್ಲಿ ಕ್ರೀಡಾ ಸಚಿವಾಲಯಕ್ಕೆ ದಾಖಲೆಯ ₹4,479.88 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಇದು 2013-14 ರಲ್ಲಿ ಇದ್ದ ₹1,219 ಕೋಟಿಗೆ ಹೋಲಿಸಿದರೆ ಗಮನಾರ್ಹ ಹೆಚ್ಚಳವಾಗಿದೆ. 2026-27 ರಿಂದ 2030-31 ರವರೆಗಿನ ಅವಧಿಗೆ ನವೀಕರಿಸಿದ ಖೇಲೋ ಇಂಡಿಯಾ ಯೋಜನೆಗೆ ಸಚಿವ ಸಂಪುಟವು ಅನುಮೋದನೆ ನೀಡಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೀಡುವ ಬೆಂಬಲದೊಂದಿಗೆ, ಒಟ್ಟು ಸಂಯೋಜಿತ ವೆಚ್ಚ ₹36,441 ಕೋಟಿಯಾಗಿದೆ. ಖೇಲೋ ಇಂಡಿಯಾ ಯೋಜನೆ ಒಂದಕ್ಕೇ 2026-27 ಕ್ಕೆ ₹924.35 ಕೋಟಿ ಲಭಿಸಿದೆ. ಈ ಹಿಂದೆ, ಈ ಯೋಜನೆಯು 2021-22 ರಿಂದ 2025-26 ರ ಅವಧಿಗೆ ₹3,790.50 ಕೋಟಿ ವೆಚ್ಚವನ್ನು ಹೊಂದಿತ್ತು. ಬಜೆಟ್‌ನಲ್ಲಿ ಕ್ರೀಡಾ ಸಾಮಗ್ರಿಗಳ ತಯಾರಿಕೆಗಾಗಿ ₹500 ಕೋಟಿಯನ್ನು ಮೀಸಲಿಡಲಾಗಿದೆ.

ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸುವುದು

ಖೇಲೋ ಇಂಡಿಯಾವು ತಳಮಟ್ಟದ ಕ್ರೀಡೆಗಳ ಪ್ರಮುಖ ಕಾರ್ಯಕ್ರಮವಾಗಿದೆ. 2026 ರ ಜುಲೈ ವೇಳೆಗೆ, ಇದು 1,067 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಿದೆ. ಇದು ₹3,176 ಕೋಟಿ ಮೌಲ್ಯದ 349 ನೂತನ ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದು 2,745 ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ತರಬೇತಿ, ಉಪಕರಣಗಳು, ವೈದ್ಯಕೀಯ ಆರೈಕೆ ಮತ್ತು ಮಾಸಿಕ ಭತ್ಯೆಯೊಂದಿಗೆ ಬೆಂಬಲ ನೀಡುತ್ತದೆ. 2018 ರಿಂದ 63,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್ ಉಪಕ್ರಮವು 9 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪೋಷಿಸುತ್ತದೆ. ಇದರ 174 ಪ್ರತಿಭಾ ಮೌಲ್ಯಮಾಪನ ಕೇಂದ್ರಗಳು ನಿಷ್ಪಕ್ಷಪಾತ ಮತ್ತು ಅರ್ಹತಾ ಆಧಾರಿತ ಆಯ್ಕೆಗಾಗಿ ಡೇಟಾ ಉಪಕರಣಗಳನ್ನು ಬಳಸುತ್ತವೆ.

ಉನ್ನತ ಕ್ರೀಡಾಪಟುಗಳಿಗೆ ಬೆಂಬಲ

ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಒಪಿಎಸ್ ) ಭಾರತದ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ. ವಿದೇಶಿ ತರಬೇತಿ, ಅಂತರರಾಷ್ಟ್ರೀಯ ಸ್ಪರ್ಧೆಗಳು, ತರಬೇತಿ ಶಿಬಿರಗಳು ಮತ್ತು ವಿಶೇಷ ಉಪಕರಣಗಳ ಮೂಲಕ ಇದು ಕ್ರೀಡಾಪಟುಗಳಿಗೆ ನೆರವಾಗುತ್ತದೆ. ಕ್ರೀಡಾಪಟುಗಳು ಮಾಸಿಕ ₹50,000 ಸ್ಟೈಪೆಂಡ್ ಪಡೆಯುತ್ತಾರೆ. ಡೆವಲಪ್‌ಮೆಂಟ್ ಗ್ರೂಪ್‌ನಲ್ಲಿರುವ ಕಿರಿಯ ಕ್ರೀಡಾಪಟುಗಳು ತಿಂಗಳಿಗೆ ₹25,000 ಪಡೆಯುತ್ತಾರೆ. 2026 ರ ಏಪ್ರಿಲ್ ಹೊತ್ತಿಗೆ, ಟಿಒಪಿಎಸ್  55 ಕೋರ್ ಅಥ್ಲೀಟ್‌ಗಳು, 62 ಪ್ಯಾರಾ ಕೋರ್ ಅಥ್ಲೀಟ್‌ಗಳು ಮತ್ತು 140 ಡೆವಲಪ್‌ಮೆಂಟ್ ಅಥ್ಲೀಟ್‌ಗಳನ್ನು ಬೆಂಬಲಿಸುತ್ತದೆ; ಹೆಚ್ಚುವರಿಯಾಗಿ, 67 ಕೋರ್ ಅಥ್ಲೀಟ್‌ಗಳು ಹಾಕಿಯಲ್ಲಿದ್ದಾರೆ. ಟೋಕಿಯೋ 2020 ಮತ್ತು ಪ್ಯಾರಿಸ್ 2024 ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತ ಪದಕಗಳನ್ನು ಗೆಲ್ಲುವಲ್ಲಿ ಟಿಒಪಿಎಸ್‌ ಪ್ರಮುಖ ಪಾತ್ರ ವಹಿಸಿದೆ.

ಶಿಕ್ಷಣ, ಫಿಟ್‌ನೆಸ್ ಮತ್ತು ಪ್ರಾಮಾಣಿಕ ಆಟ

ಇಂಫಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು 2018 ರಲ್ಲಿ ಸ್ಥಾಪಿಸಲಾಯಿತು. ಇದು ಕ್ರೀಡಾ ವಿಜ್ಞಾನ, ತಂತ್ರಜ್ಞಾನ, ನಿರ್ವಹಣೆ ಮತ್ತು ತರಬೇತಿಯಲ್ಲಿ ಶಿಕ್ಷಣವನ್ನು ನೀಡುತ್ತದೆ.

ಫಿಟ್ ಇಂಡಿಯಾ ಚಳವಳಿಯು ಫಿಟ್‌ನೆಸ್ ಅನ್ನು ದೈನಂದಿನ ಜೀವನದ ಭಾಗವಾಗಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. ಸಂಸತ್ತು 2025 ರ ಆಗಸ್ಟ್‌ನಲ್ಲಿ 'ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ'ಯನ್ನು ಅಂಗೀಕರಿಸಿತು. ಇದು ಕ್ರೀಡಾ ಸಂಸ್ಥೆಗಳನ್ನು ಗುರುತಿಸಲು 'ರಾಷ್ಟ್ರೀಯ ಕ್ರೀಡಾ ಮಂಡಳಿ'ಗೆ ಅವಕಾಶ ಕಲ್ಪಿಸುತ್ತದೆ. 'ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ'ಯು ಕ್ರೀಡಾ ವಿವಾದಗಳನ್ನು ಇತ್ಯರ್ಥಪಡಿಸುತ್ತದೆ.

ಐಚಿ-ನಗೋಯಾ ಆಚೆಗೆ: ಭಾರತದ ಸುದೀರ್ಘ ಒಲಿಂಪಿಕ್ ಹಾದಿ

ಐಚಿ-ನಗೋಯಾ 2026 ಕ್ರೀಡಾಕೂಟವು ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್ ಮತ್ತು ಆ ನಂತರದ ಕಡೆಗಿನ ಭಾರತದ ವಿಶಾಲವಾದ ಮಾರ್ಗಸೂಚಿಯ ಭಾಗವಾಗಿದೆ. ಭಾರತದ 500 ಕ್ಕೂ ಹೆಚ್ಚು ಕ್ರೀಡಾಪಟುಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ವರ್ಷ ಏಷ್ಯನ್ ಗೇಮ್ಸ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಪ್ರಮಾಣದ ಹೊಸಬರ ಭಾಗವಹಿಸುವಿಕೆಯು ಇಂದು ಭಾರತೀಯ ಕ್ರೀಡೆಯ ಬೆಳೆಯುತ್ತಿರುವ ಆಳ ಮತ್ತು ವಿಸ್ತರಿಸುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ದೇಶಾದ್ಯಂತ ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸಲು ₹36,000 ಕೋಟಿಗೂ ಹೆಚ್ಚು ಹೂಡಿಕೆ ಮಾಡುವ ಹತ್ತು ವರ್ಷಗಳ ಯೋಜನೆಯನ್ನು ಸರ್ಕಾರವು ಸಿದ್ಧಪಡಿಸಿದೆ. ಈ ಹೂಡಿಕೆಯು 2036 ಕ್ಕಿಂತ ಮುಂಚಿತವಾಗಿಯೇ ಭಾರತವನ್ನು ಜಾಗತಿಕ ಕ್ರೀಡಾ ರಂಗದಲ್ಲಿ ದೃಢವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕ್ರೀಡಾ ಸಚಿವಾಲಯವು ಒಕ್ಕೂಟಗಳು, ರಾಜ್ಯಗಳು ಮತ್ತು ಇತರ ಪಾಲುದಾರರನ್ನು ಒಳಗೊಂಡ ಸಮಗ್ರ 360-ಡಿಗ್ರಿ ವಿಧಾನಕ್ಕೆ ಕರೆ ನೀಡಿದೆ.

ಐಚಿ-ನಗೋಯಾದಲ್ಲಿ 21 ಚಿನ್ನದ ಪದಕಗಳು ಸೇರಿದಂತೆ ಭಾರತದ 85 ಪದಕಗಳ ಅಭಿಯಾನವು ದೇಶದ ಕ್ರೀಡಾ ಪಯಣದಲ್ಲಿ ಮತ್ತೊಂದು ಪ್ರಮುಖ ಅಧ್ಯಾಯವನ್ನು ಗುರುತಿಸುತ್ತದೆ. ಸಾಂಪ್ರದಾಯಿಕ ಬಲಗಳು ಮತ್ತು ಉದಯೋನ್ಮುಖ ವಿಭಾಗಗಳಾದ್ಯಂತ ಬಲವಾದ ಪ್ರದರ್ಶನಗಳೊಂದಿಗೆ, ಈ ಕ್ರೀಡಾಕೂಟವು ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್ ಮತ್ತು ಭಾರತದ ದೀರ್ಘಕಾಲೀನ ಕ್ರೀಡಾ ಆಕಾಂಕ್ಷೆಗಳಿಗೆ ಹೆಚ್ಚಿನ ವೇಗವನ್ನು ನೀಡಿದೆ.

 

References

 

Ministry of Youth Affairs and Sports

 https://yas.gov.in/sites/default/files/Asian_Games_sanction_for_coaches_and_suppor_ staff.pdf

https://www.pib.gov.in/PressReleasePage.aspx?PRID=2307999&reg=48&lang=2

https://www.pib.gov.in/PressReleasePage.aspx?PRID=1972615&lang=2&reg=48&utm

https://www.pib.gov.in/PressReleasePage.aspx?PRID=2149334&reg=48&lang=2

Asian Games 2026 Official Website

https://www.aichi-nagoya2026.org/history-of-the-games/

https://www.aichi-nagoya2026.org/official-mascot/

https://www.aichi-nagoya2026.org/games-emblem-slogan-core-graphics/

Olympic Council of Asia Official Website

https://oca.asia/games/111-aichi-nagoya-2026.html?utm

https://oca.asia/news/7738-asia-ready-to-shine-as-aichi-nagoya-to-host-historic-20th-asian-games.html?utm

Paralympic India Official Website

https://www.paralympicindia.com/aichi-nagoya-asian-para-games-2026

International Paralympic Committee

https://www.paralympic.org/news/aichi-nagoya-2026-celebrates-100-days-go-until-asian-para-games

https://www.paralympic.org/news/aichi-nagoya-host-2026-asian-para-games

Govt. of Japan

https://www.gov-online.go.jp/hlj/en/january_2026/january_2026-08.html

Consortium for Educational Communication

https://cec.nic.in/webpath/curriculum/Module/BPED/Paper01/9/downloads/script.pdf

News on AIR

https://newsonair.gov.in/manu-bhaker-tajinderpal-singh-toor-named-indias-flagbearers-for-asian-games-2026/

https://newsonair.gov.in/20th-asian-games-officially-opened-at-mizuho-park-athletic-stadium-in-japan/

https://newsonair.gov.in/india-gears-up-for-2028-olympics-with-strategic-preparations-union-minister-mansukh-mandaviya/

https://newsonair.gov.in/indian-contingent-for-asian-games-2026-receives-grand-send-off-in-new-delhi/

https://newsonair.gov.in/rajya-sabha-takes-up-national-sports-governance-and-anti-doping-amendment-bills-2025/

PIB Backgrounder

https://www.pib.gov.in/PressNoteDetails.aspx?NoteId=154856&ModuleId=3&reg=48&lang=2

https://www.pib.gov.in/PressReleasePage.aspx?PRID=2293849&reg=48&lang=2

https://www.pib.gov.in/PressNoteDetails.aspx?NoteId=154601&ModuleId=3&reg=48&lang=2

https://www.pib.gov.in/PressReleasePage.aspx?PRID=2293849&reg=48&lang=2                               

https://www.pib.gov.in/PressNoteDetails.aspx?NoteId=154856&ModuleId=3&reg=48&lang=2

Click here to see pdf 

 

******

(तथ्य सामग्री आईडी: 151095) आगंतुक पटल :


Provide suggestions / comments
इस विश्लेषक को इन भाषाओं में पढ़ें : English , हिन्दी , Assamese , Urdu , Bengali , Malayalam , हिन्दी