Infrastructure
ಅರಾವಳಿ ಬೆಟ್ಟಗಳು: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಖಾತರಿ
प्रविष्टि तिथि:
21 DEC 2025 15:15 PM
ಅವಲೋಕನ
ಭಾರತದ ಸುಪ್ರೀಂ ಕೋರ್ಟ್ ನವೆಂಬರ್-ಡಿಸೆಂಬರ್ 2025ರ ತನ್ನ ಆದೇಶದಲ್ಲಿ, 9/5/24ರ ಆದೇಶದಂತೆ ರಚಿಸಲಾದ ಸಮಿತಿಯ ಶಿಫಾರಸುಗಳನ್ನು ಮತ್ತು 12/8/2025ರ ಮುಂದಿನ ನಿರ್ದೇಶನಗಳನ್ನು ಪರಿಗಣಿಸಿದೆ. ಇದು ಪ್ರಮುಖವಾಗಿ ಗಣಿಗಾರಿಕೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ಬಗ್ಗೆ ಏಕರೂಪದ ನೀತಿ ಮಟ್ಟದ ವ್ಯಾಖ್ಯಾನವನ್ನು ನೀಡಲು ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಒಳಗೊಳ್ಳಲು ಉದ್ದೇಶಿಸಿದೆ. ದೆಹಲಿ ಕೇಂದ್ರಾಡಳಿತ ಪ್ರದೇಶ, ಹರಿಯಾಣ, ರಾಜಸ್ಥಾನ, ಗುಜರಾತ್ ರಾಜ್ಯಗಳ ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಭಾರತೀಯ ಅರಣ್ಯ ಸಮೀಕ್ಷೆ, ಕೇಂದ್ರ ಸಬಲೀಕರಣ ಸಮಿತಿ (CEC) ಮತ್ತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಪ್ರತಿನಿಧಿಗಳನ್ನು ಒಳಗೊಂಡ ಈ ಸಮಿತಿಯ ನೇತೃತ್ವವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ವಹಿಸಿತ್ತು. ಅರಾವಳಿ ಶ್ರೇಣಿಯು ಮರುಭೂಮಿಕರಣದ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿ, ಅಂತರ್ಜಲ ಮರುಪೂರಣ ವಲಯವಾಗಿ ಮತ್ತು ಜೀವವೈವಿಧ್ಯದ ಆವಾಸಸ್ಥಾನವಾಗಿ ಹೊಂದಿರುವ ಪರಿಸರ ಪ್ರಾಮುಖ್ಯತೆಯನ್ನು ನ್ಯಾಯಾಲಯವು ಒತ್ತಿಹೇಳಿದೆ.
ಅರಾವಳಿಯ ಪ್ರಾಮುಖ್ಯತೆ
ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳು ಭಾರತದ ಅತ್ಯಂತ ಹಳೆಯ ಭೂವೈಜ್ಞಾನಿಕ ರಚನೆಗಳಲ್ಲಿ ಒಂದಾಗಿದ್ದು, ದೆಹಲಿಯಿಂದ ಹರಿಯಾಣ, ರಾಜಸ್ಥಾನದ ಮೂಲಕ ಗುಜರಾತ್‌ವರೆಗೆ ಹರಡಿವೆ. ಐತಿಹಾಸಿಕವಾಗಿ, ಇವುಗಳನ್ನು ರಾಜ್ಯ ಸರ್ಕಾರಗಳು 37 ಜಿಲ್ಲೆಗಳಲ್ಲಿ ಗುರುತಿಸಿವೆ. ಉತ್ತರ ಭಾರತದ ಮರುಭೂಮಿಕರಣದ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿ ಮತ್ತು ಜೀವವೈವಿಧ್ಯ ಹಾಗೂ ಜಲ ಮರುಪೂರಣದ ರಕ್ಷಕನಾಗಿ ಇವುಗಳ ಪರಿಸರ ಪಾತ್ರವನ್ನು ಗುರುತಿಸಲಾಗಿದೆ. ಇಲ್ಲಿ ನಡೆಯುವ ಅನಿಯಂತ್ರಿತ ಗಣಿಗಾರಿಕೆಯು "ರಾಷ್ಟ್ರದ ಪರಿಸರಕ್ಕೆ ದೊಡ್ಡ ಬೆದರಿಕೆ" ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ ಮತ್ತು ಅವುಗಳನ್ನು ರಕ್ಷಿಸಲು ಏಕರೂಪದ ಮಾನದಂಡಗಳನ್ನು ರೂಪಿಸಲು ನಿರ್ದೇಶಿಸಿದೆ. ಆದ್ದರಿಂದ ಇವುಗಳ ಸಂರಕ್ಷಣೆಯು ಪರಿಸರ ಸ್ಥಿರತೆ, ಸಾಂಸ್ಕೃತಿಕ ಪರಂಪರೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿ ವರದಿಯ ಸಂಶೋಧನೆಗಳು
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಲಾದ ಸಮಿತಿಯು ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿತು. ಈ ವೇಳೆ ರಾಜಸ್ಥಾನವು ಮಾತ್ರ ಅರಾವಳಿಯಲ್ಲಿ ಗಣಿಗಾರಿಕೆಯನ್ನು ನಿಯಂತ್ರಿಸಲು ಅಧಿಕೃತ ವ್ಯಾಖ್ಯಾನವನ್ನು ಹೊಂದಿದೆ ಎಂಬುದು ತಿಳಿದುಬಂದಿದೆ. ಇದು 2002ರ ರಾಜ್ಯ ಸರ್ಕಾರದ ಸಮಿತಿ ವರದಿಯನ್ನು ಆಧರಿಸಿದ್ದು, ರಿಚರ್ಡ್ ಮರ್ಫಿ ಭೂರೂಪ ವರ್ಗೀಕರಣದ ಮೇಲೆ ಅವಲಂಬಿತವಾಗಿದೆ. ಈ ವರ್ಗೀಕರಣವು ಸ್ಥಳೀಯ ಭೂಪ್ರದೇಶದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಎಲ್ಲಾ ಭೂರೂಪಗಳನ್ನು ಬೆಟ್ಟಗಳೆಂದು ಗುರುತಿಸಿದೆ ಮತ್ತು ಅದರ ಆಧಾರದ ಮೇಲೆ ಬೆಟ್ಟಗಳು ಹಾಗೂ ಅದರ ಪೋಷಕ ಇಳಿಜಾರುಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿದೆ. ರಾಜಸ್ಥಾನ ರಾಜ್ಯವು 9 ಜನವರಿ 2006 ರಿಂದ ಈ ವ್ಯಾಖ್ಯಾನವನ್ನು ಅನುಸರಿಸುತ್ತಿದೆ.
ಚರ್ಚೆಯ ಸಮಯದಲ್ಲಿ, ಎಲ್ಲಾ ರಾಜ್ಯಗಳು ಅರಾವಳಿ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಯಂತ್ರಿಸಲು ರಾಜಸ್ಥಾನದಲ್ಲಿ ಜಾರಿಯಲ್ಲಿರುವ "ಸ್ಥಳೀಯ ಭೂಪ್ರದೇಶಕ್ಕಿಂತ 100 ಮೀಟರ್ ಎತ್ತರ" ಎಂಬ ಏಕರೂಪದ ಮಾನದಂಡವನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿವೆ. ಇದನ್ನು ಮತ್ತಷ್ಟು ವಸ್ತುನಿಷ್ಠ ಮತ್ತು ಪಾರದರ್ಶಕಗೊಳಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಬೆಟ್ಟಗಳನ್ನು ಸುತ್ತುವರೆದಿರುವ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಯ ಒಳಗಿನ ಎಲ್ಲಾ ಭೂರೂಪಗಳನ್ನು, ಅವುಗಳ ಎತ್ತರ ಮತ್ತು ಇಳಿಜಾರುಗಳನ್ನು ಲೆಕ್ಕಿಸದೆ, ಗಣಿಗಾರಿಕೆ ಗುತ್ತಿಗೆ ನೀಡುವ ಉದ್ದೇಶದಿಂದ ಹೊರಗಿಡಲಾಗಿದೆ. ಅದೇ ರೀತಿ, 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಎರಡು ಪಕ್ಕದ ಬೆಟ್ಟಗಳ ನಡುವೆ 500 ಮೀಟರ್ ಒಳಗೆ ಇರುವ ಎಲ್ಲಾ ಭೂರೂಪಗಳನ್ನು ಅರಾವಳಿ ಶ್ರೇಣಿ ಎಂದು ವಿವರಿಸಲಾಗಿದೆ. ಈ 500 ಮೀಟರ್ ವಲಯದಲ್ಲಿರುವ ಎಲ್ಲಾ ಭೂರೂಪಗಳನ್ನು ಗಣಿಗಾರಿಕೆ ಗುತ್ತಿಗೆಯಿಂದ ಹೊರಗಿಡಲಾಗಿದೆ. ಆದ್ದರಿಂದ, 100 ಮೀಟರ್‌ಗಿಂತ ಕಡಿಮೆ ಎತ್ತರದ ಎಲ್ಲಾ ಭೂರೂಪಗಳಲ್ಲಿ ಗಣಿಗಾರಿಕೆಗೆ ಅನುಮತಿ ಇದೆ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ. ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯು ರಾಜಸ್ಥಾನವು ಪ್ರಸ್ತುತ ಅನುಸರಿಸುತ್ತಿರುವ ವ್ಯಾಖ್ಯಾನವನ್ನು ಬಲಪಡಿಸಲು ಮತ್ತು ಅದನ್ನು ಹೆಚ್ಚು ಪಾರದರ್ಶಕ, ವಸ್ತುನಿಷ್ಠ ಹಾಗೂ ಸಂರಕ್ಷಣಾ ಕೇಂದ್ರಿತವಾಗಿಸಲು ಹಲವಾರು ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
· ಸ್ಥಳೀಯ ಭೂಪ್ರದೇಶವನ್ನು ನಿರ್ಧರಿಸಲು ಸ್ಪಷ್ಟವಾದ, ವಸ್ತುನಿಷ್ಠ ಮತ್ತು ವೈಜ್ಞಾನಿಕವಾಗಿ ದೃಢವಾದ ಮಾನದಂಡ; ಇದು ಎಲ್ಲಾ ರಾಜ್ಯಗಳಲ್ಲಿ ಏಕರೂಪವಾಗಿ ಅನ್ವಯಿಸಲು ಅನುವು ಮಾಡಿಕೊಡುತ್ತದೆ ಮತ್ತು ಬೆಟ್ಟದ ಬುಡದವರೆಗಿನ ಸಂಪೂರ್ಣ ಭೂರೂಪಕ್ಕೆ ಪೂರ್ಣ ರಕ್ಷಣೆಯನ್ನು ಖಚಿತಪಡಿಸುತ್ತದೆ.
· ಬೆಟ್ಟದ ಶ್ರೇಣಿಗಳಿಗೆ ಸ್ಪಷ್ಟ ರಕ್ಷಣೆ: ಇದು ರಾಜಸ್ಥಾನದ ಹಳೆಯ ವ್ಯಾಖ್ಯಾನದಲ್ಲಿ ಇರಲಿಲ್ಲ. ಪರಸ್ಪರ 500 ಮೀಟರ್ ವ್ಯಾಪ್ತಿಯಲ್ಲಿರುವ ಬೆಟ್ಟಗಳನ್ನು ಒಂದು ಶ್ರೇಣಿ ಎಂದು ಪರಿಗಣಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ರಕ್ಷಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
· ಯಾವುದೇ ಗಣಿಗಾರಿಕೆ ಚಟುವಟಿಕೆಯನ್ನು ಪರಿಗಣಿಸುವ ಮೊದಲು, ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ಕಡ್ಡಾಯವಾಗಿ ಭಾರತೀಯ ಸಮೀಕ್ಷಾ ಭೂಪಟಗಳಲ್ಲಿ ಗುರುತು ಮಾಡುವುದು.
· ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಕೋರ್/ಇನ್ವಯೋಲೇಟ್ಪ್ರದೇಶಗಳ ಸ್ಪಷ್ಟ ಗುರುತಿಸುವಿಕೆ.
· ಸುಸ್ಥಿರ ಗಣಿಗಾರಿಕೆಯನ್ನು ಸಕ್ರಿಯಗೊಳಿಸಲು ವಿವರವಾದ ಮಾರ್ಗದರ್ಶನ ಮತ್ತು ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳು.
ಮೇಲೆ ತಿಳಿಸಲಾದ ಕ್ರಮಗಳು "ಅರಾವಳಿ ಬೆಟ್ಟಗಳು" ಮತ್ತು "ಅರಾವಳಿ ಶ್ರೇಣಿ" ಗೆ ಸ್ಪಷ್ಟವಾದ, ಭೂಪಟದ ಮೂಲಕ ಪರಿಶೀಲಿಸಬಹುದಾದ ಕಾರ್ಯಾಚರಣೆಯ ವ್ಯಾಖ್ಯಾನವನ್ನು ಮತ್ತು ಕೋರ್/ಇನ್ವಯೋಲೇಟ್ (ನಿರ್ಬಂಧಿತ) ಪ್ರದೇಶಗಳನ್ನು ರಕ್ಷಿಸುವ ನಿಯಂತ್ರಕ ಚೌಕಟ್ಟನ್ನು ಖಚಿತಪಡಿಸುತ್ತವೆ. ಇದು ಹೊಸ ಗಣಿಗಾರಿಕೆಯನ್ನು ನಿರ್ಬಂಧಿಸುತ್ತದೆ ಮತ್ತು ಅಕ್ರಮ ಗಣಿಗಾರಿಕೆಯ ವಿರುದ್ಧ ಸುರಕ್ಷತಾ ಕ್ರಮಗಳು ಹಾಗೂ ಜಾರಿಯನ್ನು ಬಲಪಡಿಸುತ್ತದೆ. 20.11.2025 ರ ತನ್ನ ಅಂತಿಮ ತೀರ್ಪಿನಲ್ಲಿ, ಗೌರವಾನ್ವಿತ ಸುಪ್ರೀಂ ಕೋರ್ಟ್ ತಾಂತ್ರಿಕ ಸಮಿತಿಯ ನೆರವು ಸೇರಿದಂತೆ ಸಮಿತಿಯ ಕೆಲಸವನ್ನು ಶ್ಲಾಘಿಸಿದೆ (ಆದೇಶದ ಪ್ಯಾರಾ 33) ಮತ್ತು ಅಕ್ರಮ ಗಣಿಗಾರಿಕೆ ತಡೆಗಟ್ಟುವಿಕೆ ಹಾಗೂ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಲ್ಲಿ ಸುಸ್ಥಿರ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡುವ ಕುರಿತಾದ ಅದರ ಶಿಫಾರಸುಗಳನ್ನು ಪ್ರಶಂಸಿಸಿದೆ (ಆದೇಶದ ಪ್ಯಾರಾ 39). ಸುಪ್ರೀಂ ಕೋರ್ಟ್ ಈ ಶಿಫಾರಸುಗಳನ್ನು ಅಂಗೀಕರಿಸಿದೆ ಮತ್ತು ಭೂದೃಶ್ಯದಾದ್ಯಂತ ಎಂಪಿಎಸ್‌ಎಂ ಸಿದ್ಧವಾಗುವವರೆಗೆ ಹೊಸ ಗುತ್ತಿಗೆಗಳ ಮೇಲೆ ಮಧ್ಯಂತರ ತಡೆಯಾಜ್ಞೆ ಹೇರಿದೆ.
ಕಾರ್ಯಾಚರಣೆಯ ವ್ಯಾಖ್ಯಾನಗಳು:
ಅರಾವಳಿ ಬೆಟ್ಟಗಳು: ಅರಾವಳಿ ಜಿಲ್ಲೆಗಳಲ್ಲಿ ಕಂಡುಬರುವ, ಸ್ಥಳೀಯ ಭೂಪ್ರದೇಶದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಯಾವುದೇ ಭೂರೂಪವನ್ನು 'ಅರಾವಳಿ ಬೆಟ್ಟ' ಎಂದು ಕರೆಯಲಾಗುತ್ತದೆ. ಈ ಉದ್ದೇಶಕ್ಕಾಗಿ, ಭೂರೂಪವನ್ನು ಸುತ್ತುವರೆದಿರುವ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಯನ್ನು ಆಧರಿಸಿ ಸ್ಥಳೀಯ ಭೂಪ್ರದೇಶವನ್ನು ನಿರ್ಧರಿಸಲಾಗುತ್ತದೆ (ವರದಿಯಲ್ಲಿ ಉಲ್ಲೇಖಿಸಲಾದ ವಿವರವಾದ ಕಾರ್ಯವಿಧಾನದಂತೆ). ಅಂತಹ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಯ ಒಳಗಿನ ಸಂಪೂರ್ಣ ಭೂಪ್ರದೇಶವನ್ನು, ಅದರ ಬೆಟ್ಟ, ಪೋಷಕ ಇಳಿಜಾರುಗಳು ಮತ್ತು ಸಂಬಂಧಿತ ಭೂರೂಪಗಳ ಇಳಿಜಾರಿನ ಪ್ರಮಾಣವನ್ನು ಲೆಕ್ಕಿಸದೆ, 'ಅರಾವಳಿ ಬೆಟ್ಟ'ದ ಭಾಗವೆಂದೇ ಪರಿಗಣಿಸಲಾಗುತ್ತದೆ.
ಅರಾವಳಿ ಶ್ರೇಣಿ: ಮೇಲೆ ವ್ಯಾಖ್ಯಾನಿಸಿದಂತೆ, ಪರಸ್ಪರ 500 ಮೀಟರ್ ಸಾಮೀಪ್ಯದಲ್ಲಿರುವ ಎರಡು ಅಥವಾ ಹೆಚ್ಚಿನ ಅರಾವಳಿ ಬೆಟ್ಟಗಳನ್ನು 'ಅರಾವಳಿ ಶ್ರೇಣಿ' ಎಂದು ಕರೆಯಲಾಗುತ್ತದೆ. ಇದನ್ನು ಎರಡೂ ಬದಿಯ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಯ ಗಡಿಯ ಹೊರಬಿಂದುವಿನಿಂದ ಅಳೆಯಲಾಗುತ್ತದೆ. ಎರಡು ಅರಾವಳಿ ಬೆಟ್ಟಗಳ ನಡುವಿನ ಪ್ರದೇಶವನ್ನು ನಿರ್ಧರಿಸಲು ಮೊದಲು ಎರಡೂ ಬೆಟ್ಟಗಳ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಗಳ ನಡುವಿನ ಕನಿಷ್ಠ ದೂರಕ್ಕೆ ಸಮನಾದ ಅಗಲದ ಬಫರ್‌ಗಳನ್ನು ರಚಿಸಲಾಗುತ್ತದೆ. ನಂತರ ಈ ಎರಡು ಬಫರ್ ಬಹುಭುಜಾಕೃತಿಗಳನಡುವೆ ಛೇದಕ ರೇಖೆಯನ್ನು ಸೃಷ್ಟಿಸಲಾಗುತ್ತದೆ. ಅಂತಿಮವಾಗಿ, ಈ ಛೇದಕ ರೇಖೆಯ ಎರಡೂ ತುದಿಗಳಿಂದ ಲಂಬವಾಗಿ ಎರಡು ರೇಖೆಗಳನ್ನು ಎಳೆದು ಅವು ಎರಡೂ ಬೆಟ್ಟಗಳ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಯನ್ನು ಸಂಧಿಸುವವರೆಗೆ ವಿಸ್ತರಿಸಲಾಗುತ್ತದೆ. ಈ ರೀತಿ ವಿವರಿಸಲಾದ ಬೆಟ್ಟಗಳ ಅತ್ಯಂತ ಕೆಳಮಟ್ಟದ ಬಾಹ್ಯರೇಖೆಗಳ ನಡುವೆ ಬರುವ ಭೂರೂಪಗಳ ಸಂಪೂರ್ಣ ಪ್ರದೇಶವನ್ನು, ಅದರ ಬೆಟ್ಟಗಳು, ಗುಡ್ಡಗಳು, ಪೋಷಕ ಇಳಿಜಾರುಗಳು ಇತ್ಯಾದಿಗಳೊಂದಿಗೆ ಅರಾವಳಿ ಶ್ರೇಣಿಯ ಭಾಗವೆಂದು ಸೇರಿಸಲಾಗುತ್ತದೆ.
ಈ ವ್ಯಾಖ್ಯಾನಗಳು ಕೇವಲ ತಾಂತ್ರಿಕವಾಗಿರದೆ ಪರಿಸರ ಸಂರಕ್ಷಕಗಳಾಗಿವೆ. ಯಾವುದು ಅರಾವಳಿ ಬೆಟ್ಟ ಅಥವಾ ಶ್ರೇಣಿ ಎಂದು ಸ್ಪಷ್ಟವಾಗಿ ಗುರುತಿಸುವ ಮೂಲಕ, ಇವು ಎಲ್ಲಾ ನಿರ್ಣಾಯಕ ಭೂರೂಪಗಳು, ಇಳಿಜಾರುಗಳು ಮತ್ತು ಸಂಪರ್ಕಿಸುವ ಆವಾಸಸ್ಥಾನಗಳು ಶಾಸನಬದ್ಧ ರಕ್ಷಣೆಯಲ್ಲಿ ಇರುವುದನ್ನು ಖಚಿತಪಡಿಸುತ್ತವೆ, ತನ್ಮೂಲಕ ಪರಿಸರ ಅವನತಿಯನ್ನು ತಡೆಯುತ್ತವೆ.
- ಭೂರೂಪಗಳ ಸಮಗ್ರ ಸೇರ್ಪಡೆ: ಅರಾವಳಿ ಬೆಟ್ಟಗಳನ್ನು ಸ್ಥಳೀಯ ಭೂಪ್ರದೇಶಕ್ಕಿಂತ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಭೂರೂಪಗಳು ಮತ್ತು ಅವುಗಳ ಪೋಷಕ ಇಳಿಜಾರುಗಳು ಎಂದು ವ್ಯಾಖ್ಯಾನಿಸುವ ಮೂಲಕ, ಸಂಪೂರ್ಣ ಪರಿಸರ ಘಟಕವನ್ನು ರಕ್ಷಿಸಲಾಗಿದೆ. ಇದು ಮಣ್ಣಿನ ಸ್ಥಿರತೆ, ಜಲ ಮರುಪೂರಣ ಮತ್ತು ಸಸ್ಯವರ್ಗಕ್ಕೆ ಪ್ರಮುಖವಾದ ಇಳಿಜಾರು ಅಥವಾ ಬೆಟ್ಟದ ಪಾದದ ಪ್ರದೇಶಗಳ ಹಂತ-ಹಂತದ ಶೋಷಣೆಯನ್ನು ತಡೆಯುತ್ತದೆ.
- ಶ್ರೇಣಿಗಳ ಸಮೂಹ ಆಧಾರಿತ ವ್ಯಾಖ್ಯಾನ: 500 ಮೀಟರ್ ವ್ಯಾಪ್ತಿಯಲ್ಲಿರುವ ಬೆಟ್ಟಗಳನ್ನು 'ಅರಾವಳಿ ಶ್ರೇಣಿಗಳು' ಎಂದು ವರ್ಗೀಕರಿಸಲಾಗಿದೆ. ಇದು ಕಣಿವೆಗಳು, ಮಧ್ಯಂತರ ಇಳಿಜಾರುಗಳು ಮತ್ತು ಪ್ರಮುಖ ಶಿಖರಗಳ ನಡುವಿನ ಸಣ್ಣ ಗುಡ್ಡಗಳನ್ನು ಸಹ ರಕ್ಷಿಸುವುದನ್ನು ಖಚಿತಪಡಿಸುತ್ತದೆ. ಪರಿಸರ ದೃಷ್ಟಿಯಿಂದ, ಇದು ಆವಾಸಸ್ಥಾನಗಳ ಸಂಪರ್ಕ, ವನ್ಯಜೀವಿ ಕಾರಿಡಾರ್‌ಗಳು ಮತ್ತು ಪರ್ವತ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುತ್ತದೆ.
- ಅಧಿಕೃತ ಭೂಪಟಗಳಲ್ಲಿ ಗುರುತಿಸುವಿಕೆ: ಬೆಟ್ಟಗಳು ಮತ್ತು ಶ್ರೇಣಿಗಳನ್ನು ಗುರುತಿಸಲು ಭಾರತೀಯ ಸಮೀಕ್ಷಾ ಇಲಾಖೆಯ ಭೂಪಟಗಳನ್ನು ಬಳಸುವುದರಿಂದ ಗಡಿಗಳು ವಸ್ತುನಿಷ್ಠವಾಗುತ್ತವೆ. ಇದು ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ಅಕ್ರಮ ಗಣಿಗಾರಿಕೆ ಅಥವಾ ನಿರ್ಮಾಣದ ವಿರುದ್ಧ ನಿಯಂತ್ರಕ ಜಾರಿಯನ್ನು ಬಲಪಡಿಸುತ್ತದೆ.
- ಕೋರ್/ಇನ್ವಯೋಲೇಟ್ ಪ್ರದೇಶಗಳ ರಕ್ಷಣೆ: ಈ ವ್ಯಾಖ್ಯಾನವು ಪರಿಸರ ಸುರಕ್ಷತೆಗಳೊಂದಿಗೆ ಬೆಸೆದುಕೊಂಡಿದೆ—ಸಂರಕ್ಷಿತ ಪ್ರದೇಶಗಳು, ಹುಲಿ ಸಂರಕ್ಷಿತ ಪ್ರದೇಶಗಳು, ಪರಿಸರ ಸೂಕ್ಷ್ಮ ವಲಯಗಳು, ಜೌಗು ಪ್ರದೇಶಗಳು ಮತ್ತು ಕ್ಯಾಂಪಾ ನೆಡುತೋಪುಗಳನ್ನು ಸ್ವಯಂಚಾಲಿತವಾಗಿ ಸೇರಿಸಲಾಗಿದೆ. ಇದರಿಂದ ಅತ್ಯಂತ ಸೂಕ್ಷ್ಮ ಮತ್ತು ಜೀವವೈವಿಧ್ಯತೆಯಿಂದ ಶ್ರೀಮಂತವಾಗಿರುವ ವಲಯಗಳಲ್ಲಿ ಗಣಿಗಾರಿಕೆ ಅಥವಾ ಅಭಿವೃದ್ಧಿಯನ್ನು ನಿಷೇಧಿಸಲಾಗಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ 20/11/2025ರ ತನ್ನ ಆದೇಶದಲ್ಲಿ ಇತರ ವಿಷಯಗಳ ಜೊತೆಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:
- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೀಡಿದ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ವ್ಯಾಖ್ಯಾನದ ಕುರಿತು ಸಮಿತಿಯ ಶಿಫಾರಸುಗಳನ್ನು ನಾವು ಅಂಗೀಕರಿಸುತ್ತೇವೆ.
- ನಿರ್ಣಾಯಕ, ಕಾರ್ಯತಂತ್ರದ ಮತ್ತು ಪರಮಾಣು ಖನಿಜಗಳು ಹಾಗೂ ಎಂಎಂಡಿಆರ್ ಕಾಯ್ದೆಯಡಿ ಸೂಚಿಸಲಾದ ನಿರ್ದಿಷ್ಟ ಖನಿಜಗಳನ್ನು ಹೊರತುಪಡಿಸಿ, ಕೋರ್/ಇನ್ವಯೋಲೇಟ್ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಶಿಫಾರಸುಗಳನ್ನು ನಾವು ಸ್ವೀಕರಿಸುತ್ತೇವೆ.
- ಅರಾವಳಿ ಬೆಟ್ಟಗಳಲ್ಲಿ ಸುಸ್ಥಿರ ಗಣಿಗಾರಿಕೆ ಮತ್ತು ಅಕ್ರಮ ಗಣಿಗಾರಿಕೆ ತಡೆಗಟ್ಟುವ ಕ್ರಮಗಳ ಕುರಿತಾದ ಶಿಫಾರಸುಗಳನ್ನು ನಾವು ಒಪ್ಪುತ್ತೇವೆ.
- ಆದಾಗ್ಯೂ, ಇಡೀ ಅರಾವಳಿ ಪ್ರದೇಶಕ್ಕಾಗಿ, ಅಂದರೆ ಗುಜರಾತ್‌ನಿಂದ ದೆಹಲಿಯವರೆಗೆ ಹರಡಿರುವ ನಿರಂತರ ಭೂವೈಜ್ಞಾನಿಕ ಪರ್ವತ ಶ್ರೇಣಿಗಾಗಿ, ಸಾರಂಡಾ ಮಾದರಿಯಲ್ಲಿ ಸುಸ್ಥಿರ ಗಣಿಗಾರಿಕೆ ನಿರ್ವಹಣಾ ಯೋಜನೆ ಯನ್ನು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮೂಲಕ ಸಿದ್ಧಪಡಿಸಲು ನಾವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶಿಸುತ್ತೇವೆ ಮತ್ತು ಆ ಎಂಪಿಎಸ್‌ಎಂ ಈ ಕೆಳಗಿನವುಗಳನ್ನು ಮಾಡಬೇಕು:
· ಅರಾವಳಿ ಭೂದೃಶ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿಸಬಹುದಾದ ಪ್ರದೇಶಗಳು ಹಾಗೂ ಪರಿಸರ ಸೂಕ್ಷ್ಮ, ಸಂರಕ್ಷಣಾ-ನಿರ್ಣಾಯಕ ಮತ್ತು ಪುನಃಸ್ಥಾಪನೆಗೆ ಆದ್ಯತೆ ನೀಡಬೇಕಾದ ಪ್ರದೇಶಗಳನ್ನು ಗುರುತಿಸುವುದು; ಅಂತಹ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಅಥವಾ ಅಸಾಧಾರಣ ಮತ್ತು ವೈಜ್ಞಾನಿಕವಾಗಿ ಸಮರ್ಥಿಸಲ್ಪಟ್ಟ ಸಂದರ್ಭಗಳಲ್ಲಿ ಮಾತ್ರ ಅನುಮತಿಸಬೇಕು.
· ಪರಿಸರದ ಮೇಲಾಗುವ ಸಂಚಿತ ಪರಿಣಾಮಗಳು ಮತ್ತು ಆ ಪ್ರದೇಶದ ಪರಿಸರ ಸಾಮರ್ಥ್ಯದ ಕೂಲಂಕಷ ವಿಶ್ಲೇಷಣೆಯನ್ನು ಒಳಗೊಂಡಿರಬೇಕು.
· ಗಣಿಗಾರಿಕೆ ನಂತರದ ವಿವರವಾದ ಪುನಃಸ್ಥಾಪನೆ ಮತ್ತು ಪುನರ್ವಸತಿ ಕ್ರಮಗಳನ್ನು ಒಳಗೊಂಡಿರಬೇಕು.
- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಐಸಿಎಫ್‌ಆರ್‌ಇ ಮೂಲಕ ಎಂಪಿಎಸ್‌ಎಂ ಅನ್ನು ಅಂತಿಮಗೊಳಿಸುವವರೆಗೆ, ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡಬಾರದು;
- ಐಸಿಎಫ್‌ಆರ್‌ಇ ಜೊತೆಗಿನ ಸಮಾಲೋಚನೆಯೊಂದಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಎಂಪಿಎಸ್‌ಎಂ ಅನ್ನು ಅಂತಿಮಗೊಳಿಸಿದ ನಂತರ, ಆ ಯೋಜನೆಯಲ್ಲಿ ಸುಸ್ಥಿರ ಗಣಿಗಾರಿಕೆಗೆ ಅನುಮತಿಸಬಹುದಾದ ಪ್ರದೇಶಗಳಲ್ಲಿ ಮಾತ್ರ ಎಂಪಿಎಸ್‌ಎಂ ಪ್ರಕಾರ ಗಣಿಗಾರಿಕೆಗೆ ಅವಕಾಶ ನೀಡಲಾಗುವುದು; ಮತ್ತು
- ಈ ಮಧ್ಯೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗಣಿಗಳಲ್ಲಿನ ಗಣಿಗಾರಿಕೆ ಚಟುವಟಿಕೆಗಳನ್ನು ವರದಿಯಲ್ಲಿ ಸುಸ್ಥಿರ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಿತಿಯು ನೀಡಿರುವ ಶಿಫಾರಸುಗಳ ಕಟ್ಟುನಿಟ್ಟಿನ ಅನುಸರಣೆಯೊಂದಿಗೆ ಮುಂದುವರಿಸಲಾಗುವುದು.
- ಹೊಸ ಗಣಿಗಾರಿಕೆ ಗುತ್ತಿಗೆಗಳ ಸ್ಥಗಿತ: ವ್ಯಾಖ್ಯಾನವು ಈಗ ಜಾರಿಯಲ್ಲಿರುವುದರಿಂದ, ಜಾರ್ಖಂಡ್‌ನ ಸಾರಂಡಾ ಅರಣ್ಯಕ್ಕಾಗಿ ಸಿದ್ಧಪಡಿಸಿದ ಮಾದರಿಯಲ್ಲಿಯೇ ಐಸಿಎಫ್‌ಆರ್‌ಇ ಸಂಸ್ಥೆಯು 'ಸುಸ್ಥಿರ ಗಣಿಗಾರಿಕೆಗಾಗಿ ಗಣಿಗಾರಿಕೆ ಯೋಜನೆ'ಯನ್ನು ಸಿದ್ಧಪಡಿಸುವವರೆಗೆ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದು ತಕ್ಷಣದ ಪರಿಸರ ಬೆದರಿಕೆಗಳ ವಿರುದ್ಧ 'ರಕ್ಷಣಾ ಕವಚ'ವಾಗಿ ಕಾರ್ಯನಿರ್ವಹಿಸುತ್ತದೆ.
- ಭೂದೃಶ್ಯ ಮಟ್ಟದ ಸಂರಕ್ಷಣೆ: ಅರಾವಳಿಯನ್ನು ಒಂದು ನಿರಂತರ ಭೂವೈಜ್ಞಾನಿಕ ಪರ್ವತ ಶ್ರೇಣಿಯೆಂದು ಪರಿಗಣಿಸುವ ಮೂಲಕ, ಈ ವ್ಯಾಖ್ಯಾನವು ಕೇವಲ ಬಿಡಿ ಬೆಟ್ಟಗಳನ್ನಲ್ಲದೆ ಸಂಪೂರ್ಣ ಭೂದೃಶ್ಯವನ್ನು ರಕ್ಷಿಸುತ್ತದೆ. ಇದು ಪರಿಸರಕ್ಕೆ ದೊಡ್ಡ ಅಪಾಯಗಳಲ್ಲಿ ಒಂದಾದ ಭೂಪ್ರದೇಶದ ವಿಘಟನೆಯನ್ನು ತಡೆಯುತ್ತದೆ.
- ಸಂರಕ್ಷಿಸಲ್ಪಟ್ಟ ಪರಿಸರ ಕಾರ್ಯಗಳು:
- ಥಾರ್ ಮರುಭೂಮಿಯ ವಿರುದ್ಧ ನೈಸರ್ಗಿಕ ತಡೆಗೋಡೆಯನ್ನು ಕಾಯ್ದುಕೊಳ್ಳುವ ಮೂಲಕ ಮರುಭೂಮಿಕರಣವನ್ನು ತಡೆಯುತ್ತದೆ.
- ಪಾದಬೆಟ್ಟಗಳು ಮತ್ತು ಕಣಿವೆಗಳಲ್ಲಿನ ಅಂತರ್ಜಲ ಮರುಪೂರಣ ವಲಯಗಳನ್ನು ರಕ್ಷಿಸುತ್ತದೆ.
- ಇಳಿಜಾರುಗಳು, ಪರ್ವತ ಶ್ರೇಣಿಗಳು ಮತ್ತು ಮಧ್ಯಂತರ ಪ್ರದೇಶಗಳಾದ್ಯಂತ ಜೀವವೈವಿಧ್ಯದ ಆವಾಸಸ್ಥಾನಗಳನ್ನು ಉಳಿಸುತ್ತದೆ.
- ಗಾಳಿಯ ಗುಣಮಟ್ಟ ಮತ್ತು ಹವಾಮಾನವನ್ನು ನಿಯಂತ್ರಿಸುವ ದೆಹಲಿ-ಎನ್‌ಸಿಆರ್ ನ "ಹಸಿರು ಶ್ವಾಸಕೋಶಗಳನ್ನು" ರಕ್ಷಿಸುತ್ತದೆ.
ಅರಾವಳಿಗಳನ್ನು ಹೇಗೆ ರಕ್ಷಿಸಲಾಗುತ್ತದೆ
ಸಮಿತಿಯ ಸಂಶೋಧನೆಗಳು ಮತ್ತು ನಂತರ ಸುಪ್ರೀಂ ಕೋರ್ಟ್ ಎತ್ತಿಹಿಡಿದ ತೀರ್ಪು ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ಗುರುತಿಸಲು ಸ್ಪಷ್ಟ ವೈಜ್ಞಾನಿಕ ಆಧಾರವನ್ನು ಒದಗಿಸಿವೆ. ಈ ಸಂಶೋಧನೆಗಳು, ಕಟ್ಟುನಿಟ್ಟಾದ ಗಣಿಗಾರಿಕೆ ನಿಯಮಗಳು ಮತ್ತು ಮೇಲ್ವಿಚಾರಣೆಯೊಂದಿಗೆ ಸೇರಿ ಅರಾವಳಿಯ ಪರಿಸರವು ಸುರಕ್ಷಿತವಾಗಿರುವುದನ್ನು ಮತ್ತು ಸಂಭವನೀಯ ಬೆದರಿಕೆಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸುತ್ತವೆ.
- ಪಾರದರ್ಶಕ, ವಸ್ತುನಿಷ್ಠ ಮತ್ತು ವೈಜ್ಞಾನಿಕ: ಅರಾವಳಿ ಬೆಟ್ಟಗಳನ್ನು ಸ್ಥಳೀಯ ಭೂಪ್ರದೇಶಕ್ಕಿಂತ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಭೂರೂಪಗಳು (ಅವುಗಳ ಪೋಷಕ ಇಳಿಜಾರುಗಳನ್ನು ಒಳಗೊಂಡಂತೆ) ಎಂದು ವ್ಯಾಖ್ಯಾನಿಸಲಾಗಿದೆ. ಇದು ಕಾನೂನಿನ ಲೋಪದೋಷಗಳನ್ನು ತಡೆಯುತ್ತದೆ ಮತ್ತು ಎಲ್ಲಾ ನೈಜ ಬೆಟ್ಟದ ಪ್ರದೇಶಗಳು ರಕ್ಷಣೆಯಡಿ ಬರುವುದನ್ನು ಖಚಿತಪಡಿಸುತ್ತದೆ.
- ಶ್ರೇಣಿಗಳ ಸಮಗ್ರ ಮ್ಯಾಪಿಂಗ್: 500 ಮೀಟರ್ ಸಾಮೀಪ್ಯದಲ್ಲಿರುವ ಬೆಟ್ಟಗಳನ್ನು 'ಅರಾವಳಿ ಶ್ರೇಣಿ'ಗಳಾಗಿ ಗುಂಪು ಮಾಡಲಾಗಿದೆ, ಇದರಿಂದಾಗಿ ಮಧ್ಯಂತರ ಕಣಿವೆಗಳು, ಇಳಿಜಾರುಗಳು ಮತ್ತು ಸಣ್ಣ ಗುಡ್ಡಗಳಿಗೂ ರಕ್ಷಣೆ ಸಿಗುತ್ತದೆ.
- ಕೋರ್/ಇನ್ವಯೋಲೇಟ್ (ನಿರ್ಬಂಧಿತ) ವಲಯಗಳ ರಕ್ಷಣೆ: ಸಂರಕ್ಷಿತ ಪ್ರದೇಶಗಳು, ಪರಿಸರ ಸೂಕ್ಷ್ಮ ವಲಯಗಳು, ಹುಲಿ ಸಂರಕ್ಷಿತ ಪ್ರದೇಶಗಳು, ಜೌಗು ಪ್ರದೇಶಗಳು ಮತ್ತು ಕ್ಯಾಂಪಾ ನೆಡುತೋಪು ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಹೊಸ ಗಣಿಗಾರಿಕೆ ಗುತ್ತಿಗೆಗಳಿಲ್ಲ: ವಿವರವಾದ ಸುಸ್ಥಿರ ಗಣಿಗಾರಿಕೆ ಯೋಜನೆ ಸಿದ್ಧವಾಗುವವರೆಗೆ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
- ಅಸ್ತಿತ್ವದಲ್ಲಿರುವ ಗಣಿಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ: ಪ್ರಸ್ತುತ ನಡೆಯುತ್ತಿರುವ ಗಣಿಗಾರಿಕೆಗಳು ಪರಿಸರ ಪರವಾನಗಿ, ಅರಣ್ಯ ಪರವಾನಗಿ ಮತ್ತು ನಿರಂತರ ಮೇಲ್ವಿಚಾರಣೆಗೆ ಒಳಪಟ್ಟಿರಬೇಕು; ನಿಯಮ ಉಲ್ಲಂಘಿಸಿದರೆ ಗಣಿಗಾರಿಕೆಯನ್ನು ಅಮಾನತುಗೊಳಿಸಬಹುದು.
- ಅಕ್ರಮ ಗಣಿಗಾರಿಕೆ ತಡೆಗಟ್ಟುವಿಕೆ: ಡ್ರೋನ್‌ಗಳು, ಸಿಸಿಟಿವಿಗಳು, ವೇ-ಬ್ರಿಡ್ಜ್‌ಗಳು ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್‌ಗಳ ಮೂಲಕ ಕಣ್ಗಾವಲು ಇರಿಸಿ ಅನಧಿಕೃತ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
- ಭೂದೃಶ್ಯ ಮಟ್ಟದ ಯೋಜನೆ: ಐಸಿಎಫ್‌ಆರ್‌ಇ ಸಿದ್ಧಪಡಿಸಲಿರುವ ಮುಂಬರುವ ಎಂಪಿಎಸ್‌ಎಂ ಯೋಜನೆಯು ಅನುಮತಿಸಬಹುದಾದ ಮತ್ತು ನಿಷೇಧಿತ ವಲಯಗಳನ್ನು ಗುರುತಿಸುತ್ತದೆ, ಪರಿಸರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಗಣಿಗಾರಿಕೆ ನಂತರದ ಕಡ್ಡಾಯ ಪುನಃಸ್ಥಾಪನೆಯನ್ನು ವಿಧಿಸುತ್ತದೆ.
ಗಣಿಗಾರಿಕೆ ಮತ್ತು ಪರಿಸರ ರಕ್ಷಣೆಗಾಗಿ ಸುರಕ್ಷತಾ ಕ್ರಮಗಳು
ಸುಪ್ರೀಂ ಕೋರ್ಟ್ ಎತ್ತಿಹಿಡಿದ ಈ ಸಂಶೋಧನೆಗಳು ಗಣಿಗಾರಿಕೆಯು ಅರಾವಳಿಯ ಪರಿಸರ ಸಮಗ್ರತೆಗೆ ಧಕ್ಕೆ ತರದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ರೂಪಿಸಿವೆ. ಈ ಸುರಕ್ಷತಾ ಕ್ರಮಗಳು ಸೂಕ್ಷ್ಮ ವಲಯಗಳಲ್ಲಿನ ಸಂಪೂರ್ಣ ನಿಷೇಧ, ಸುಸ್ಥಿರ ಗಣಿಗಾರಿಕೆ ಪದ್ಧತಿಗಳು ಮತ್ತು ಅಕ್ರಮ ಕಾರ್ಯಾಚರಣೆಗಳ ವಿರುದ್ಧ ಬಲವಾದ ಜಾರಿಯನ್ನು ಒಳಗೊಂಡಿವೆ.
|
ಗಣಿಗಾರಿಕೆಯ ನಿಯಂತ್ರಣ
|
ಕೋರ್/ಇನ್ವಯೋಲೇಟ್ (ನಿರ್ಬಂಧಿತ) ಪ್ರದೇಶಗಳ ರಕ್ಷಣೆ
|
|
ಹೊಸ ಗುತ್ತಿಗೆಗಳು (ಸಾಮಾನ್ಯ ಖನಿಜಗಳು): ನಿಗದಿಪಡಿಸಿದ ಕಾರ್ಯವಿಧಾನದ ಅಡಿಯಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳು ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವಂತಿಲ್ಲ.
|
ಸಂರಕ್ಷಿತ ಪ್ರದೇಶಗಳು: ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಗುರುತಿಸಲಾದ ವನ್ಯಜೀವಿ ಕಾರಿಡಾರ್‌ಗಳನ್ನು (ಸಂಚಾರ ಮಾರ್ಗಗಳು) ಒಳಗೊಂಡಂತೆ.
|
|
ನಿರ್ಣಾಯಕ, ಕಾರ್ಯತಂತ್ರದ ಮತ್ತು ಪರಮಾಣು ಖನಿಜಗಳು: ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅನಿವಾರ್ಯತೆಗಳನ್ನು ಪರಿಗಣಿಸಿ, ಪರಮಾಣು ಖನಿಜಗಳು (ಮೊದಲ ಅನುಸೂಚಿಯ ಭಾಗ B), ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳು (ಮೊದಲ ಅನುಸೂಚಿಯ ಭಾಗ D) ಮತ್ತು ಎಂಎಂಡಿಆರ್ ಕಾಯ್ದೆಯ ಏಳನೇ ಅನುಸೂಚಿಯಲ್ಲಿರುವ ಖನಿಜಗಳಿಗೆ ಮಾತ್ರ ಅತ್ಯಂತ ಸೀಮಿತವಾದ ವಿನಾಯಿತಿ ಅನ್ವಯಿಸುತ್ತದೆ; ಉಳಿದಂತೆ ಎಲ್ಲಾ ಸುರಕ್ಷತಾ ನಿಯಮಗಳು ಮುಂದುವರಿಯುತ್ತವೆ.
|
ಪರಿಸರ ಸೂಕ್ಷ್ಮ ವಲಯಗಳು/ಪ್ರದೇಶಗಳು: ಪರಿಸರ ಸಂರಕ್ಷಣಾ ಕಾಯ್ದೆ (EPA), 1986ರ ಅಡಿಯಲಿರುವ ಕರಡು ಅಥವಾ ಅಂತಿಮ ESZ/ESA ಪ್ರದೇಶಗಳು; ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವನೆಗಳು ಬಾಕಿ ಇರುವಲ್ಲಿ, ಟಿ.ಎನ್. ಗೋದಾವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಪೂರ್ವನಿಯೋಜಿತ ಇಎಸ್‌ಝಡ್ ನಿರ್ದೇಶನಗಳನ್ನು ಅನ್ವಯಿಸುವುದು.
|
|
ಅಸ್ತಿತ್ವದಲ್ಲಿರುವ/ನವೀಕರಣ ಗುತ್ತಿಗೆಗಳು: ತಜ್ಞರ ತಂಡವು (ಅರಣ್ಯ, ಗಣಿಗಾರಿಕೆ ಮತ್ತು ಭೂವಿಜ್ಞಾನ, ಸ್ಥಳೀಯ ಆಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ವಿಷಯ ತಜ್ಞರು) ಪರಿಸರ ಅನುಮತಿ ಹಾಗೂ ಕಾರ್ಯಾಚರಣೆಯ ಸಮ್ಮತಿ ಷರತ್ತುಗಳ ಪಾಲನೆಯನ್ನು ಪರಿಶೀಲಿಸಲು ತಪಾಸಣೆ ನಡೆಸಬೇಕು, ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಸೂಚಿಸಬೇಕು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಬೇಕು.
|
ಸಂರಕ್ಷಣಾ ಹೂಡಿಕೆಗಳು: ಕ್ಯಾಂಪಾ, ಸರ್ಕಾರಿ ಅನುದಾನಗಳು ಅಥವಾ ಅಂತರಾಷ್ಟ್ರೀಯ ಸಹಕಾರದ ಮೂಲಕ ಬೆಳೆಸಲಾದ ನೆಡುತೋಪುಗಳನ್ನು ಹೊಂದಿರುವ ಪ್ರದೇಶಗಳು.
|
|
|
ಜೌಗು ಪ್ರದೇಶಗಳು: ರಾಮ್‌ಸರ್ ತಾಣಗಳು ಅಥವಾ 2017ರ ನಿಯಮಗಳ ಅಡಿಯಲ್ಲಿ ಗುರುತಿಸಲಾದ ಜೌಗು ಪ್ರದೇಶಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ.
|
ಸುಸ್ಥಿರ ಗಣಿಗಾರಿಕೆ ಸುರಕ್ಷತಾ ಕ್ರಮಗಳು
|
ಅಕ್ರಮ ಗಣಿಗಾರಿಕೆ ತಡೆಗಟ್ಟುವಿಕೆ
|
|
ಅರಣ್ಯ ಭೂಮಿ ಅನುಮೋದನೆಗಳು: ಪರಿಸರ ಅನುಮತಿ ಜೊತೆಗೆ ಅರಣ್ಯ ಅನುಮತಿ (ವನ ಅಧಿನಿಯಮ, 1980) ಕಡ್ಡಾಯ; ಪರಿಹಾರಾರ್ಥ ಅರಣ್ಯೀಕರಣ, ನಿವ್ವಳ ಪ್ರಸ್ತುತ ಮೌಲ್ಯ, ವನ್ಯಜೀವಿ ಯೋಜನೆಗಳು, ಸುರಕ್ಷಿತ ವಲಯದ ಹಸಿರು ಪಟ್ಟಿಗಳು ಮತ್ತು ಮಣ್ಣಿನ ತೇವಾಂಶ ಸಂರಕ್ಷಣೆ ಕಡ್ಡಾಯವಾಗಿದೆ.
|
ಕಾರ್ಯಾಚರಣೆಯ ನಿಯಂತ್ರಣಗಳು: ನಿಗದಿಪಡಿಸಿದ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಮಾತ್ರ ಗಣಿಗಾರಿಕೆಗೆ ಅನುಮತಿ; ಇನ್ವಯೋಲೇಟ್ (ನಿರ್ಬಂಧಿತ) ಪ್ರದೇಶಗಳು ಅಸ್ಪೃಶ್ಯವಾಗಿರುತ್ತವೆ.
|
|
ಪರಿಸರ ಮೌಲ್ಯಮಾಪನ ಮತ್ತು ಇಸಿ: ಟಿಒಆರ್ ಮತ್ತು ಪ್ರಮಾಣಿತ ಇಸಿ ಷರತ್ತುಗಳೊಂದಿಗೆ ಇಎಸಿ/ಎಸ್‌ಇಎಸಿ ಮೌಲ್ಯಮಾಪನ; ತಿದ್ದುಪಡಿ ಮಾಡಲಾದ 2006ರ ಇಐಎ ಅಧಿಸೂಚನೆಯ ನಿಬಂಧನೆಗಳ ಪ್ರಕಾರ ಸಂಚಿತ ಪರಿಣಾಮಗಳನ್ನು ಪರಿಹರಿಸುವ ದೃಢವಾದ ಇಐಎ/ಇಎಂಪಿ ವರದಿ.
|
ಕಣ್ಗಾವಲು: ಡ್ರೋನ್‌ಗಳು, ಸಿಸಿಟಿವಿ (ರಾತ್ರಿ ದೃಷ್ಟಿ ಸಹಿತ), ಹೈಟೆಕ್ ವೇ-ಬ್ರಿಡ್ಜ್‌ಗಳು, ಪ್ರವೇಶ ಮಾರ್ಗಗಳಲ್ಲಿ ಕಂದಕಗಳು ಮತ್ತು ವಿಶೇಷ ಅಕ್ರಮ ಗಣಿಗಾರಿಕೆ ವಿರೋಧಿ ಗಸ್ತು ತಂಡಗಳು.
|
|
ಅನುಸರಣೆ ಮೇಲ್ವಿಚಾರಣೆ: ಆರು ತಿಂಗಳ ವರದಿಗಳು; MoEF&ಸಿಸಿ ಆರ್ಒ, ಎಸ್‌ಪಿಸಿಬಿ, ಎಸ್‌ಇಎಸಿ, ಡಿಎಂಜಿ, ಅರಣ್ಯ ಇಲಾಖೆ ಮತ್ತು ಸಿಜಿಡಬ್ಲು/ಎಸ್‌ಜಿಡಬ್ಲುಬಿ ನಿಂದ ಮೊದಲ ವರ್ಷದ ಜಂಟಿ ತಪಾಸಣೆ; ನಿಯಮ ಪಾಲಿಸದಿದ್ದಲ್ಲಿ EC ಅನ್ನು ಅಮಾನತ್ತಿನಲ್ಲಿಡಬಹುದು.
|
ಆಡಳಿತ: ಜಿಲ್ಲಾ ಮಟ್ಟದ ಕಾರ್ಯಪಡೆಗಳು (ಕಂದಾಯ, ಅರಣ್ಯ, ಪೊಲೀಸ್, ಗಣಿಗಾರಿಕೆ), ಟೋಲ್-ಫ್ರೀ ದೂರು ಸಂಖ್ಯೆಗಳಿರುವ ನಿಯಂತ್ರಣ ಕೊಠಡಿಗಳು ಮತ್ತು ನಿಷೇಧ ಹಾಗೂ ದಂಡಗಳನ್ನು ಘೋಷಿಸುವ ಫಲಕಗಳು.
|
|
ಲೆಕ್ಕಪರಿಶೋಧನೆ ಮತ್ತು ಜಾರಿ: MoEF&ಸಿಸಿ ಆರ್ಒ, ಎಸ್‌ಪಿಸಿಬಿ ಗಳಿಂದ ನಿಯತಕಾಲಿಕ ತಪಾಸಣೆ, ಆನ್‌ಲೈನ್ ಮೇಲ್ವಿಚಾರಣೆ, ಪರಿಸರ ಲೆಕ್ಕಪರಿಶೋಧಕರು; ಪದೇ ಪದೇ ನಿಯಮ ಉಲ್ಲಂಘಿಸಿದರೆ ಇಸಿ/ಸಿಟಿಒ ರದ್ದತಿ ಮತ್ತು ದಂಡ ವಿಧಿಸಬಹುದು.
|
ಸಾಗಾಣಿಕೆ ಮೇಲ್ವಿಚಾರಣೆ: ರವಾನೆಗಾಗಿ ಇ-ಚಲನ್ ಹೊಂದಾಣಿಕೆ; ಸಾರಿಗೆ ಮತ್ತು ಶೇಖರಣೆಯನ್ನು ಮೇಲ್ವಿಚಾರಣೆ ಮಾಡಲು SPCB ನೇತೃತ್ವದ ತಂಡಗಳು; ಯಾವುದೇ ಅಕ್ರಮ ಗಣಿಗಳನ್ನು ತಕ್ಷಣವೇ ಮುಚ್ಚುವುದು.
|
|
ಅಂತರ್ಜಲ ಸುರಕ್ಷತೆಗಳು: ಡಾರ್ಕ್ ವಲಯಗಳಲ್ಲಿ ಅಥವಾ ಗಣಿಗಾರಿಕೆಯು ಅಂತರ್ಜಲ ಮಟ್ಟವನ್ನು ತಲುಪಿದಾಗ ಎನ್‌ಒಸಿ ಅಗತ್ಯ; ಜಲವಿಜ್ಞಾನ ಮತ್ತು ಮರುಪೂರಣ ಕಾರ್ಯಗಳನ್ನು ರಕ್ಷಿಸುವುದು.
|
|
|
ಸಾಂಸ್ಕೃತಿಕ ಪರಂಪರೆ: ಸಂರಕ್ಷಿತ ಸ್ಮಾರಕಗಳ (ಉದಾ: ಕೋಟೆಗಳು) ಹತ್ತಿರವಿದ್ದಾಗ ಎಎಸ್‌ಐ ನಿಂದ ಎನ್‌ಒಸಿ ಪಡೆಯುವುದು.
|
|
ಉಪಸಂಹಾರ:
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮೂಲಕ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದ ಪ್ರಯತ್ನಗಳಿಂದ ಅರಾವಳಿ ಬೆಟ್ಟಗಳು ದೃಢವಾದ ರಕ್ಷಣೆಯಲ್ಲಿವೆ. ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಮತ್ತು ಪಾರದರ್ಶಕತೆಗೆ ಸರ್ಕಾರವು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ತಪ್ಪುದಾರಿಗೆಳೆಯುವ ಆತಂಕಕಾರಿ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಅರಾವಳಿಯ ಪರಿಸರಕ್ಕೆ ಯಾವುದೇ ತಕ್ಷಣದ ಬೆದರಿಕೆ ಇಲ್ಲ. ನಡೆಯುತ್ತಿರುವ ಅರಣ್ಯೀಕರಣ, ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಗಳು ಮತ್ತು ಗಣಿಗಾರಿಕೆ ಹಾಗೂ ನಗರೀಕರಣ ಚಟುವಟಿಕೆಗಳ ಕಟ್ಟುನಿಟ್ಟಾದ ಮೇಲ್ವಿಚಾರಣೆಯು, ಅರಾವಳಿಯು ರಾಷ್ಟ್ರದ ನೈಸರ್ಗಿಕ ಪರಂಪರೆ ಮತ್ತು ಪರಿಸರ ಕವಚವಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತದೆ. ಭಾರತದ ಸಂಕಲ್ಪ ಸ್ಪಷ್ಟವಾಗಿದೆ: ಸಂರಕ್ಷಣೆ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯನ್ನು ಸಮತೋಲನಗೊಳಿಸುತ್ತಾ, ಪ್ರಸ್ತುತ ಮತ್ತು ಮುಂದಿನ ಪೀಳಿಗೆಗಾಗಿ ಅರಾವಳಿಯನ್ನು ರಕ್ಷಿಸಲಾಗುವುದು.
References:
Ministry of Environment & Climate Change:
Report of the Committee on Uniform definition of Aravalli Hills and Ranges
Supreme Court of India:
https://api.sci.gov.in/supremecourt/1995/2997/2997_1995_1_1502_66178_Order_20-Nov-2025.pdf
Click here to see in PDF
*****
(तथ्य सामग्री आईडी: 150599)
आगंतुक पटल : 117
Provide suggestions / comments