Economy
ಹೊಸ ಕಾರ್ಮಿಕ ಸಂಹಿತೆಗಳು ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಭದ್ರತೆ ಮತ್ತು ರಕ್ಷಣೆಯನ್ನು ಖಚಿತಪಡಿಸುತ್ತವೆ
प्रविष्टि तिथि:
03 DEC 2025 13:53 PM
|
ಪ್ರಮುಖ ಮಾರ್ಗಸೂಚಿಗಳು
- ಯಾವುದೇ ಉದ್ಯೋಗದಾತರು ಯಾವುದೇ ಉದ್ಯೋಗಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವಂತಿಲ್ಲ.
- ಮೂಲ ವೇತನವನ್ನು ಸರ್ಕಾರವು ನಿಗದಿಪಡಿಸುತ್ತದೆ.
- ಕಾರ್ಮಿಕರಿಗೆ ಅಧಿಕ ಕೆಲಸವನ್ನು ನೀಡುವುದನ್ನು ತಡೆಯಲು ಸಾಮಾನ್ಯ ಕೆಲಸದ ಸಮಯವನ್ನು ಸೀಮಿತಗೊಳಿಸಲಾಗಿದೆ.
- ಉದ್ಯೋಗದಾತರು ವೇತನ ಚೀಟಿಗಳನ್ನು ನೀಡಬೇಕು ಮತ್ತು ನೇಮಕಾತಿ ಪತ್ರಗಳ ಮೂಲಕ ಔಪಚಾರಿಕತೆಯನ್ನು ಖಚಿತಪಡಿಸಬೇಕು.
- ಇಎಸ್‌ಐಸಿ ವ್ಯಾಪ್ತಿಯನ್ನು ಭಾರತದಾದ್ಯಂತ ಮಟ್ಟಕ್ಕೆ ವಿಸ್ತರಿಸಲಾಗಿದೆ ಮತ್ತು ಸುಧಾರಿತ ಬೋನಸ್ ಸೌಲಭ್ಯಗಳನ್ನು ಒದಗಿಸಲಾಗಿದೆ.
- ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳು, ವೇತನ ಸಹಿತ ವಾರ್ಷಿಕ ರಜೆಗಳು ಮತ್ತು ಲಿಂಗ ತಾರತಮ್ಯದ ನಿಷೇಧ.
|
ಪೀಠಿಕೆ
ಹೊಸ ಕಾರ್ಮಿಕ ಸಂಹಿತೆಗಳಿಂದ ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಪ್ರಯೋಜನಗಳು
ಇತ್ತೀಚೆಗೆ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳಾದ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020, ಸಾಮಾಜಿಕ ಭದ್ರತೆ ಸಂಹಿತೆ 2020, ಕೈಗಾರಿಕಾ ಸಂಬಂಧಗಳ ಸಂಹಿತೆ 2020 ಮತ್ತು ವೇತನ ಸಂಹಿತೆ 2019 ರೊಂದಿಗೆ, ಭಾರತದ ಬೀಡಿ ಮತ್ತು ಸಿಗಾರ್ ಕಾರ್ಮಿಕ ವರ್ಗವು ವಿಸ್ತೃತ ವೇತನ ರಕ್ಷಣೆ, ಸಾಮಾಜಿಕ ಭದ್ರತಾ ವ್ಯಾಪ್ತಿ ಮತ್ತು ಕೆಲಸದ ಸ್ಥಳದ ಸುರಕ್ಷತಾ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಿದೆ. ಈ ವಲಯವು ಈಗ ಹೆಚ್ಚು ಔಪಚಾರಿಕಗೊಂಡಿದ್ದು ಬಲವಾದ ನಿಯಂತ್ರಕ ಅಡಿಪಾಯದೊಂದಿಗೆ ಮುನ್ನಡೆಯುತ್ತಿದ್ದು, ಭಾರತದಾದ್ಯಂತ ಕಾರ್ಮಿಕರ ಜೀವನೋಪಾಯಕ್ಕೆ ಹೆಚ್ಚಿನ ಸ್ಥಿರತೆಯನ್ನು ತರುತ್ತಿದೆ.
ಹಳೆಯ ಚೌಕಟ್ಟಿನಿಂದ ಆಧುನಿಕ ಸುಧಾರಣೆಗಳೆಡೆಗೆ ಬದಲಾವಣೆ
ಹಿಂದಿನ ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಪರಿಸ್ಥಿತಿಗಳು) ಕಾಯಿದೆ, 1966ರ ಅಡಿಯಲ್ಲಿ, ಈ ವಲಯದ ಕಾರ್ಮಿಕರು ಸಂಕುಚಿತ ರಕ್ಷಣೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾನ್ಯ ಕೆಲಸದ ದಿನವು ಒಂಬತ್ತು ಗಂಟೆಗಳವರೆಗೆ ವಿಸ್ತರಿಸಬಹುದಾಗಿತ್ತು, ಆದಾಗ್ಯೂ ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಗೆ ಮಿತಿಗೊಳಿಸಲಾಗಿತ್ತು. ವೇತನ ಸಹಿತ ವಾರ್ಷಿಕ ರಜೆಗೆ ಅರ್ಹರಾಗಲು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಕಾರ್ಮಿಕರು 240 ದಿನಗಳ ಕೆಲಸವನ್ನು ಪೂರ್ಣಗೊಳಿಸಬೇಕಿತ್ತು. ವೈದ್ಯಕೀಯ ಪರೀಕ್ಷೆಗಳಿಗೆ ಯಾವುದೇ ಅವಕಾಶ ಇರಲಿಲ್ಲ.
ಈ ಅಂತರಗಳನ್ನು ಹೊಸ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020ರಲ್ಲಿ ನಿವಾರಿಸಲಾಗಿದೆ. ಇದರ ಅಡಿಯಲ್ಲಿ ಸಾಮಾನ್ಯ ಕೆಲಸದ ದಿನವನ್ನು ಏಕರೂಪವಾಗಿ ಎಂಟು ಗಂಟೆಗಳಿಗೆ ನಿಗದಿಪಡಿಸಲಾಗಿದೆ, ವಾರದ ಮಿತಿಯನ್ನು 48 ಗಂಟೆಗಳಿಗೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಕೆಲಸ ಮಾಡಿದ ಸಮಯಕ್ಕೆ ಎರಡು ಪಟ್ಟು ವೇತನ ದರದಲ್ಲಿ ಪರಿಹಾರವನ್ನು ನೀಡುವುದನ್ನು ಇದು ಕಡ್ಡಾಯಗೊಳಿಸುತ್ತದೆ.

ವೇತನ ಸಹಿತ ವಾರ್ಷಿಕ ರಜೆಯು ಈಗ ಒಂದು ಕ್ಯಾಲೆಂಡರ್ ವರ್ಷದಲ್ಲಿ 180 ದಿನಗಳ ಕೆಲಸದ ನಂತರ ಲಭ್ಯವಿದೆ, ಇದು ರಜಾ ಸೌಲಭ್ಯಗಳನ್ನು ಕಾರ್ಮಿಕರ ಸ್ನೇಹಿಯನ್ನಾಗಿ ಮಾಡಿದೆ. ಇದರ ಜೊತೆಗೆ, ಉದ್ಯೋಗಿಗಳು ಈಗ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳಿಗೆ ಅರ್ಹರಾಗಿರುತ್ತಾರೆ.
ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಬಲವರ್ಧಿತ ಕಲ್ಯಾಣ ಕ್ರಮಗಳು
ವೇತನ ಮತ್ತು ಪಾವತಿ ರಕ್ಷಣೆ
ಹೊಸ ಕಾರ್ಮಿಕ ಸಂಹಿತೆಗಳು ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಸುಧಾರಿತ ಆರ್ಥಿಕ ಸ್ಥಿರತೆಯನ್ನು ಮಾತ್ರವಲ್ಲದೆ, ದುರ್ಬಲತೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಇಡೀ ವಲಯದಾದ್ಯಂತ ಹೆಚ್ಚು ಘನತೆಯುಳ್ಳ ಮತ್ತು ಸ್ಥಿರವಾದ ಜೀವನೋಪಾಯವನ್ನು ಬೆಂಬಲಿಸುತ್ತವೆ.
- ಕನಿಷ್ಠ ವೇತನಗಳ ಸಾರ್ವತ್ರಿಕೀಕರಣ: ಹೊಸ ನಿಬಂಧನೆಗಳ ಅಡಿಯಲ್ಲಿ, ಯಾವುದೇ ಉದ್ಯೋಗದಾತನು ಸರ್ಕಾರದಿಂದ ಸೂಚಿಸಲಾದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನವನ್ನು ಯಾವುದೇ ಉದ್ಯೋಗಿಗೆ ಪಾವತಿಸುವಂತಿಲ್ಲ. ಹಿಂದೆ, ಕನಿಷ್ಠ ವೇತನವು ಕೇವಲ ನಿಗದಿತ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತ್ತಿತ್ತು, ಆದರೆ ಈಗ ಇದು ಎಲ್ಲಾ ಉದ್ಯೋಗಿಗಳನ್ನು ಒಳಗೊಳ್ಳುತ್ತದೆ. ಸರ್ಕಾರವು ಸಾಮಾನ್ಯವಾಗಿ ಐದು ವರ್ಷಗಳನ್ನು ಮೀರದ ಮಧ್ಯಂತರದಲ್ಲಿ ಕನಿಷ್ಠ ವೇತನ ದರಗಳನ್ನು ಪರಿಶೀಲಿಸುತ್ತದೆ ಅಥವಾ ಪರಿಷ್ಕರಿಸುತ್ತದೆ. ಉದ್ಯೋಗಿಯ ಕೌಶಲ್ಯ ಮತ್ತು ಕೆಲಸದ ಕಷ್ಟಕರತೆಯನ್ನು ಗಣನೆಗೆ ತೆಗೆದುಕೊಂಡು ಗಂಟೆಗಳು, ದಿನ ಅಥವಾ ತಿಂಗಳಂತಹ ವಿಭಿನ್ನ ವೇತನ ಅವಧಿಗಳಿಗೆ ಸಮಯಾಧಾರಿತ ಕೆಲಸ ಮತ್ತು ತುಂಡು ಕೆಲಸಕ್ಕೆ ಕನಿಷ್ಠ ವೇತನ ದರವನ್ನು ಸರ್ಕಾರವು ನಿಗದಿಪಡಿಸುತ್ತದೆ.
- ಮೂಲ ವೇತನ: ಉದ್ಯೋಗಿಯ ಆಹಾರ, ಬಟ್ಟೆ ಇತ್ಯಾದಿಗಳನ್ನು ಒಳಗೊಂಡಂತೆ ಕನಿಷ್ಠ ಜೀವನ ಮಟ್ಟವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಮೂಲ ವೇತನವನ್ನು ನಿಗದಿಪಡಿಸುತ್ತದೆ. ಕೇಂದ್ರ ಸರ್ಕಾರವು ನಿಯಮಿತ ಮಧ್ಯಂತರದಲ್ಲಿ ಮೂಲ ವೇತನವನ್ನು ಪರಿಷ್ಕರಿಸುತ್ತದೆ. ಇದು ಸಮಾನ ವೇತನಗಳ ಕಾರಣದಿಂದಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾರ್ಮಿಕರ ವಲಸೆಯನ್ನು ಕಡಿಮೆ ಮಾಡುತ್ತದೆ.
- ಹೆಚ್ಚುವರಿ ಕೆಲಸದ ವೇತನ: ಸಾಮಾನ್ಯ ಕೆಲಸದ ಸಮಯವನ್ನು ಮೀರಿದ ಯಾವುದೇ ಕೆಲಸಕ್ಕೆ ಉದ್ಯೋಗದಾತರು ಉದ್ಯೋಗಿಗಳಿಗೆ ಕನಿಷ್ಠ ಸಾಮಾನ್ಯ ವೇತನ ದರದ ಎರಡರಷ್ಟು ಪಾವತಿಸಬೇಕು.
- ವೇತನ ಪಾವತಿಗೆ ಸಮಯ ಮಿತಿ: ಮತ್ತೊಂದು ಪ್ರಮುಖ ಸುರಕ್ಷತೆಯೆಂದರೆ ಕಾಲಮಿತಿಯೊಳಗೆ ವೇತನ ಪಾವತಿ. ಉದ್ಯೋಗದಾತನು ಈ ಕೆಳಗಿನ ನಿಗದಿತ ಕಟ್ಟುನಿಟ್ಟಾದ ಸಮಯದೊಳಗೆ ಎಲ್ಲಾ ಉದ್ಯೋಗಿಗಳಿಗೆ ವೇತನವನ್ನು ಪಾವತಿಸಬೇಕು ಅಥವಾ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು:
|
ಕ್ರ.ಸಂ
|
ಉದ್ಯೋಗಿಯ ವಿಧ
|
ವೇತನ ಪಾವತಿಗಾಗಿ ಸಮಯ ಮಿತಿ
|
|
1.
|
ದಿನಗೂಲಿ ನೌಕರ
|
ಪಾಳಿಯ ಅಂತ್ಯದೊಳಗೆ
|
|
2.
|
ವಾರದ ದರದಲ್ಲಿರುವ ನೌಕರ
|
ವಾರದ ರಜೆಯ ಮೊದಲು
|
|
3.
|
ಪಾಕ್ಷಿಕ (ಹದಿನೈದು ದಿನಗಳ) ದರದಲ್ಲಿರುವ ನೌಕರ
|
ಪಾಕ್ಷಿಕವಾಗಿ ಅಂತ್ಯವಾದ 2 ದಿನಗಳೊಳಗೆ
|
|
4.
|
ಮಾಸಿಕ ದರದಲ್ಲಿರುವ ನೌಕರ
|
ಮುಂದಿನ ತಿಂಗಳ 7 ದಿನಗಳೊಳಗೆ
|
|
5.
|
ವಜಾ ಅಥವಾ ರಾಜೀನಾಮೆ ಸಂದರ್ಭದಲ್ಲಿ
|
2 ಕೆಲಸದ ದಿನಗಳೊಳಗೆ
|
ವೇತನದ ಮಿತಿಯ ಹೊರತಾಗಿಯೂ ಅನ್ವಯ: ವೇತನದ ಸಮಯೋಚಿತ ಪಾವತಿ ಮತ್ತು ವೇತನದಿಂದ ಅನಧಿಕೃತ ಕಡಿತಗಳಿಗೆ ಸಂಬಂಧಿಸಿದ ನಿಬಂಧನೆಗಳು, ಹಿಂದೆ ಕೇವಲ ಮಾಸಿಕ ₹24,000 ವರೆಗೆ ವೇತನ ಪಡೆಯುವ ನೌಕರರಿಗೆ ಮಾತ್ರ ಅನ್ವಯವಾಗುತ್ತಿತ್ತು, ಈಗ ವೇತನದ ಗರಿಷ್ಠ ಮಿತಿಯ ಹೊರತಾಗಿಯೂ ಎಲ್ಲ ಉದ್ಯೋಗಿಗಳಿಗೂ ಅನ್ವಯಿಸಲಾಗುತ್ತದೆ.
- ವೇತನದ ಮಿತಿಯ ಹೊರತಾಗಿಯೂ ಅನ್ವಯ: ವೇತನದ ಸಮಯೋಚಿತ ಪಾವತಿ ಮತ್ತು ವೇತನದಿಂದ ಅನಧಿಕೃತ ಕಡಿತಗಳಿಗೆ ಸಂಬಂಧಿಸಿದ ನಿಬಂಧನೆಗಳು, ಹಿಂದೆ ಕೇವಲ ಮಾಸಿಕ ₹24,000 ವರೆಗೆ ವೇತನ ಪಡೆಯುವ ನೌಕರರಿಗೆ ಮಾತ್ರ ಅನ್ವಯವಾಗುತ್ತಿತ್ತು, ಈಗ ವೇತನದ ಗರಿಷ್ಠ ಮಿತಿಯ ಹೊರತಾಗಿಯೂ ಎಲ್ಲ ಉದ್ಯೋಗಿಗಳಿಗೂ ಅನ್ವಯಿಸಲಾಗುತ್ತದೆ.
- ಸಾಮಾನ್ಯ ಕೆಲಸದ ದಿನಕ್ಕೆ ಕೆಲಸದ ಸಮಯವನ್ನು ನಿಗದಿಪಡಿಸುವುದು: ಈ ನಿಬಂಧನೆಯು ಸೂಕ್ತ ಪರಿಹಾರವಿಲ್ಲದೆ ಉದ್ಯೋಗಿಗಳಿಗೆ ಹೆಚ್ಚು ಕೆಲಸ ನೀಡದಂತೆ ತಡೆಯಲು ಸಾಮಾನ್ಯ ಕೆಲಸದ ಸಮಯವನ್ನು ಮಿತಿಗೊಳಿಸುತ್ತದೆ. ಇದು ಆರೋಗ್ಯ ಮತ್ತು ಕೆಲಸ-ಜೀವನದ ಸಮತೋಲನವನ್ನು ರಕ್ಷಿಸುತ್ತದೆ. ಅಧಿಕ ಸಮಯವಿಲ್ಲದೆ ವಾರದಲ್ಲಿ 48 ಗಂಟೆಗಳ ಕೆಲಸಕ್ಕೆ ಒಳಪಟ್ಟು, ಪ್ರತಿ ವಾರ 1, 2 ಅಥವಾ 3 ವೇತನ ಸಹಿತ ರಜಾದಿನಗಳೊಂದಿಗೆ ಕೆಲಸದ ಸಮಯ/ದಿನವು 8 ಗಂಟೆಗಳು, 9.5 ಗಂಟೆಗಳು ಅಥವಾ 12 ಗಂಟೆಗಳಾಗಿರಬಹುದು. ಸಾಮಾನ್ಯ ಕೆಲಸದ ಸಮಯಕ್ಕೆ, ಕಾರ್ಮಿಕರ ಸಮ್ಮತಿ ಅಗತ್ಯವಿಲ್ಲ. ಆದಾಗ್ಯೂ, ಸಾಮಾನ್ಯ ವೇತನ ದರದ ಎರಡರಷ್ಟು ವೇತನ ನೀಡಲಾಗುವ ಅಧಿಕ ಸಮಯಕ್ಕೆ ಕಾರ್ಮಿಕರ ಸಮ್ಮತಿ ಅಗತ್ಯವಿದೆ.
- ವೇತನ ಚೀಟಿಗಳ ವಿತರಣೆ: ಉದ್ಯೋಗದಾತರು ವೇತನ ಪಾವತಿಯ ಮೊದಲು ಅಥವಾ ಪಾವತಿಯ ಸಮಯದಲ್ಲಿ ಉದ್ಯೋಗಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಭೌತಿಕ ರೂಪದಲ್ಲಿ ವೇತನ ಚೀಟಿಗಳನ್ನು ನೀಡಬೇಕು.
ಸಾಮಾಜಿಕ ಭದ್ರತಾ ಪ್ರಯೋಜನಗಳು
ಹೊಸ ನಿಬಂಧನೆಗಳು ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಿವೆ, ಅವರಿಗೆ ಹೆಚ್ಚು ಭದ್ರತೆ ಮತ್ತು ಉತ್ತಮ ಕೆಲಸದ ಸ್ಥಳದ ಸುರಕ್ಷತೆಗಳನ್ನು ನೀಡಿದೆ. ಈ ಕ್ರಮಗಳು ಹೆಚ್ಚು ಒಳಗೊಳ್ಳುವ ಬೆಂಬಲ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಕಾರ್ಮಿಕರ ಜೀವನದಲ್ಲಿ ಸ್ಥಿರತೆಯನ್ನು ನಿರ್ಮಿಸುತ್ತವೆ ಮತ್ತು ಘನತೆಯನ್ನು ತರುತ್ತವೆ.
- ಇಎಸ್‌ಐಸಿ ವ್ಯಾಪ್ತಿಯ ವಿಸ್ತರಣೆ: ಒಂದು ಪ್ರಮುಖ ಸುಧಾರಣೆಯೆಂದರೆ ಇಎಸ್‌ಐಸಿ ವ್ಯಾಪ್ತಿಯ ಅಖಿಲ ಭಾರತ ವಿಸ್ತರಣೆ, ಇದರೊಂದಿಗೆ "ಸೂಚಿತ ಪ್ರದೇಶಗಳು" ಎಂಬ ಪರಿಕಲ್ಪನೆಯನ್ನು ತೆಗೆದುಹಾಕಲಾಗಿದೆ. 10 ಕ್ಕಿಂತ ಕಡಿಮೆ ವ್ಯಕ್ತಿಗಳನ್ನು ಹೊಂದಿರುವ ಸಂಸ್ಥೆಗಳು, ಉದ್ಯೋಗದಾತ ಮತ್ತು ಉದ್ಯೋಗಿಯ ಪರಸ್ಪರ ಸಮ್ಮತಿಯೊಂದಿಗೆ ಇಎಸ್‌ಐಯಲ್ಲಿ ಪರಿಚಯಿಸಲಾದ ಸ್ವಯಂಪ್ರೇರಿತ ಸದಸ್ಯತ್ವವನ್ನು ಆಯ್ಕೆ ಮಾಡಬಹುದು.
- ಮಿತಿ ಅವಧಿ: ಉದ್ಯೋಗಿಯು ಹಕ್ಕುಗಳನ್ನು ಸಲ್ಲಿಸಲು ಇರುವ ಮಿತಿ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ, ಇದು ಹಿಂದೆ ಅಸ್ತಿತ್ವದಲ್ಲಿದ್ದ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಬದಲಾಗುತ್ತಿದ್ದ ಸಮಯಕ್ಕೆ ವಿರುದ್ಧವಾಗಿದೆ.
- ಸುಧಾರಿತ ಬೋನಸ್ ನಿಬಂಧನೆಗಳು: ಸರ್ಕಾರವು ನಿಗದಿಪಡಿಸಿದ ಮಿತಿಯೊಳಗೆ ವೇತನ ಪಡೆಯುವ ಮತ್ತು ಒಂದು ಲೆಕ್ಕಪತ್ರ ವರ್ಷದಲ್ಲಿ ಕನಿಷ್ಠ 30 ದಿನಗಳು ಕೆಲಸ ಮಾಡಿದ ಪ್ರತಿ ಉದ್ಯೋಗಿಗೆ ಬೋನಸ್ ಪಾವತಿಸಲಾಗುತ್ತದೆ. ವಾರ್ಷಿಕ ಬೋನಸ್ ಕನಿಷ್ಠ ಎಂಟು ಮತ್ತು ಮೂರನೇ ಒಂದು ಭಾಗದಷ್ಟು (8.33%) ಇರಬೇಕು ಮತ್ತು ಉದ್ಯೋಗಿ ಗಳಿಸಿದ ವೇತನದ 20% ವರೆಗೆ ಹೋಗಬಹುದು.
- ನೇಮಕಾತಿ ಪತ್ರಗಳ ಮೂಲಕ ಔಪಚಾರಿಕತೆ: ಪ್ರತಿ ಉದ್ಯೋಗಿಯೂ ನಿಗದಿತ ನಮೂನೆಯಲ್ಲಿ ನೇಮಕಾತಿ ಪತ್ರಗಳನ್ನು ಪಡೆಯುತ್ತಾರೆ, ಇದರಲ್ಲಿ ಉದ್ಯೋಗಿಯ ವಿವರಗಳು, ಹುದ್ದೆ, ವರ್ಗ, ವೇತನದ ವಿವರಗಳು, ಸಾಮಾಜಿಕ ಭದ್ರತೆಯ ವಿವರಗಳು ಇತ್ಯಾದಿಗಳನ್ನು ನಿರ್ದಿಷ್ಟಪಡಿಸಲಾಗುತ್ತದೆ.

-
ಕುಟುಂಬ"ದ ವ್ಯಾಖ್ಯಾನದ ವಿಸ್ತರಣೆ ಮಹಿಳಾ ಉದ್ಯೋಗಿಯ ವಿಷಯದಲ್ಲಿ, ಸರ್ಕಾರದ ನಿಗದಿತ ಆದಾಯ ಮಟ್ಟಗಳ ಆಧಾರದ ಮೇಲೆ ಮಾವ ಮತ್ತು ಅತ್ತೆ ಯವರನ್ನು ಸಹ ಒಳಗೊಳ್ಳುವಂತೆ ಕುಟುಂಬದ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ.
ಸುರಕ್ಷಿತ, ಆರೋಗ್ಯಕರ ಮತ್ತು ಅಂತರ್ಗತ ಕೆಲಸದ ಸ್ಥಳಗಳು
ಕಾರ್ಮಿಕ ಸಂಹಿತೆಗಳು ಬೀಡಿ ಮತ್ತು ಸಿಗಾರ್ ಕಾರ್ಮಿಕರಿಗೆ ಕೆಲಸದ ಸ್ಥಳದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಬಲಪಡಿಸುತ್ತವೆ. ಅವು ಉತ್ತಮ ಆರೋಗ್ಯ ರಕ್ಷಣೆಗಳು, ಸುರಕ್ಷಿತ ಸೌಲಭ್ಯಗಳು ಮತ್ತು ಅಪಘಾತಗಳ ಸಮಯದಲ್ಲಿ ಬಲವಾದ ಬೆಂಬಲವನ್ನು ಖಚಿತಪಡಿಸುತ್ತವೆ. ಈ ಸುಧಾರಣೆಗಳು ಆರೋಗ್ಯಕರ ಮತ್ತು ಅಂತರ್ಗತ ಕೆಲಸದ ವಾತಾವರಣವನ್ನು ಬೆಂಬಲಿಸುತ್ತವೆ ಮತ್ತು ಕಾರ್ಮಿಕರಿಗೆ ಉತ್ತಮ ಆರೈಕೆ ಮತ್ತು ಬೆಂಬಲವನ್ನು ಪಡೆಯಲು ಸಹಾಯ ಮಾಡುವ ಮೂಲಕ ಸುರಕ್ಷಿತ ಜೀವನೋಪಾಯವನ್ನು ಖಚಿತಪಡಿಸುತ್ತವೆ.
- ಆಕಸ್ಮಿಕ ಪರಿಹಾರದ ಸೇರ್ಪಡೆ: ಉದ್ಯೋಗಿ ಪರಿಹಾರದ ವ್ಯಾಪ್ತಿಯು ಈಗ ವಸತಿಯಿಂದ ಕೆಲಸದ ಸ್ಥಳಕ್ಕೆ ಪ್ರಯಾಣಿಸುವಾಗ ಅಥವಾ ಕರ್ತವ್ಯ ನಿರ್ವಹಿಸಿದ ನಂತರ ಕೆಲಸದ ಸ್ಥಳದಿಂದ ತಮ್ಮ ವಸತಿಗೆ ಹಿಂದಿರುಗುವಾಗ ಸಂಭವಿಸುವ ಅಪಘಾತಗಳನ್ನು ಒಳಗೊಂಡಿದೆ.
- ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳು: ಪ್ರತಿ ಉದ್ಯೋಗಿಯೂ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳಿಗೆ ಅರ್ಹರಾಗಿರುತ್ತಾರೆ.
- ವೇತನ ಸಹಿತ ವಾರ್ಷಿಕ ರಜೆ: ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಆ ಕ್ಯಾಲೆಂಡರ್ ವರ್ಷದಲ್ಲಿ 180 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡಿದರೆ (ಕೆಲಸದ ದಿನಗಳನ್ನು 240 ದಿನಗಳಿಂದ 180 ದಿನಗಳಿಗೆ ಇಳಿಸಲಾಗಿದೆ) ಒಂದು ಕ್ಯಾಲೆಂಡರ್ ವರ್ಷದಲ್ಲಿ ವೇತನ ಸಹಿತ ರಜೆಗೆ ಅರ್ಹರಾಗಿರುತ್ತಾರೆ.
- ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣ ಸೌಲಭ್ಯಗಳು: ಬೀಡಿ ಮತ್ತು ಸಿಗಾರ್‌ಗೆ ಸಂಬಂಧಿಸಿದ ಕೆಲಸದ ಸ್ಥಳಗಳಿಗೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು, ಕ್ಯಾಂಟೀನ್ ಇತ್ಯಾದಿಗಳಿಗಾಗಿ ಮತ್ತು ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಮಾನದಂಡಗಳಿಗಾಗಿ ಸರ್ಕಾರವು ನಿಬಂಧನೆಗಳನ್ನು ನಿಗದಿಪಡಿಸುತ್ತದೆ.
- ಲಿಂಗ ತಾರತಮ್ಯದ ನಿಷೇಧ: ಉದ್ಯೋಗದಾತರು ಒಂದೇ ರೀತಿಯ ಕೆಲಸ ಅಥವಾ ಉದ್ಯೋಗಿಗಳು ಮಾಡುವ ಇದೇ ರೀತಿಯ ಕೆಲಸಕ್ಕೆ ಸಂಬಂಧಿಸಿದ ನೇಮಕಾತಿ, ವೇತನ, ಅಥವಾ ಉದ್ಯೋಗದ ಪರಿಸ್ಥಿತಿಗಳ ವಿಷಯದಲ್ಲಿ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
ಉಪಸಂಹಾರ
ಹೆಚ್ಚಿದ ವೇತನ ರಕ್ಷಣೆ, ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳು, ಮತ್ತು ವಿಸ್ತರಿತ ಸಾಮಾಜಿಕ ಭದ್ರತಾ ಹಕ್ಕುಗಳೊಂದಿಗೆ, ಈ ಸಂಹಿತೆಗಳು ಬೀಡಿ ಮತ್ತು ಸಿಗಾರ್ ವಲಯದಲ್ಲಿನ ಕಾರ್ಮಿಕರ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಬದಲಾವಣೆಯನ್ನು ಗುರುತಿಸುತ್ತವೆ. ಲಿಂಗ ಆಧಾರಿತ ತಾರತಮ್ಯವನ್ನು ನಿಷೇಧಿಸುವ ದೃಢವಾದ ನಿಬಂಧನೆಗಳು ಮಹಿಳಾ ಕಾರ್ಮಿಕರ ಉನ್ನತಿಗೆ ಸಹಾಯ ಮಾಡುತ್ತವೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಪ್ರತಿ ಬೀಡಿ ಮತ್ತು ಸಿಗಾರ್ ಕಾರ್ಮಿಕನನ್ನು ಗುರುತಿಸಿ, ರಕ್ಷಿಸಿ ಮತ್ತು ಹೆಚ್ಚು ಭದ್ರತೆ ಹಾಗೂ ಘನತೆಯ ಜೀವನವನ್ನು ನಡೆಸಲು ಸಶಕ್ತಗೊಳಿಸುವ ಭವಿಷ್ಯವನ್ನು ಬೆಳಗಿಸುತ್ತವೆ.
Click here to see pdf
*****
(तथ्य सामग्री आईडी: 150526)
आगंतुक पटल : 19
Provide suggestions / comments