ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ವಾರಾಣಸಿಯಲ್ಲಿ ಕಾಶಿ ತಮಿಳು ಸಂಗಮದ ಐದನೇ ಆವೃತ್ತಿಯನ್ನು ಉದ್ಘಾಟಿಸಿದ ಉಪರಾಷ್ಟ್ರಪತಿ


ಕಾಶಿ ಮತ್ತು ತಮಿಳುನಾಡು ಸಾವಿರಾರು ವರ್ಷಗಳ ನಾಗರಿಕತಾ ಬಾಂಧವ್ಯವನ್ನು ಹಂಚಿಕೊಂಡಿವೆ: ಉಪರಾಷ್ಟ್ರಪತಿ

ಕಾಶಿ ತಮಿಳು ಸಂಗಮವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಆಂದೋಲನವಾಗಿದೆ: ಉಪರಾಷ್ಟ್ರಪತಿ

10 ವಿದೇಶಿ ಭಾಷೆಗಳು ಸೇರಿದಂತೆ 50 ಭಾಷೆಗಳಲ್ಲಿ ತಿರುಕ್ಕುರಳ್ ಅನುವಾದಗಳನ್ನು ಬಿಡುಗಡೆ ಮಾಡಿದ ಉಪರಾಷ್ಟ್ರಪತಿ

ಎಲ್ಲಾ ಭಾಷೆಗಳನ್ನು ಗೌರವಿಸುತ್ತಲೇ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವಂತೆ ಜನರಿಗೆ ಕರೆ ನೀಡಿದ ಉಪರಾಷ್ಟ್ರಪತಿ

ರಾಷ್ಟ್ರೀಯ ನದಿ ಜೋಡಣೆ ಉಪಕ್ರಮದ ಮೂಲಕ ಗಂಗಾ ನದಿಯ ನೀರು ಕಾವೇರಿಯನ್ನು ತಲುಪುವ ಭವಿಷ್ಯವನ್ನು ಕಲ್ಪಿಸಿಕೊಂಡ ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 28 NOV 2026 3:46PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ತಮಿಳು ಸಂಗಮದ (KTS 5.0) ಐದನೇ ಆವೃತ್ತಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು 10 ವಿದೇಶಿ ಭಾಷೆಗಳು ಸೇರಿದಂತೆ 50 ಭಾಷೆಗಳಿಗೆ ಅನುವಾದಿಸಲಾದ ತಿರುಕ್ಕುರಳ್ ಆವೃತ್ತಿಗಳನ್ನು ಬಿಡುಗಡೆ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸನ್ಮಾನ್ಯ ಉಪರಾಷ್ಟ್ರಪತಿ ಅವರು, ಕಾಶಿ ಮತ್ತು ತಮಿಳುನಾಡು ಸಾವಿರಾರು ವರ್ಷಗಳ ಹಿಂದಿನ ಆಳವಾದ ನಾಗರಿಕತಾ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಹಂಚಿಕೊಂಡಿವೆ ಎಂದು ಹೇಳಿದರು. ಕಾಶಿಯನ್ನು ವಿಶ್ವದ ಆಧ್ಯಾತ್ಮಿಕ ರಾಜಧಾನಿ ಎಂದು ಬಣ್ಣಿಸಿದ ಅವರು, ತಮಿಳು ಜನರ ಹೃದಯದಲ್ಲಿ ಈ ನಗರವು ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ಅವರಿಗೆ ಕಾಶಿ ಯಾತ್ರೆ ಹಾಗೂ ಬಾಬಾ ವಿಶ್ವನಾಥನ ದರ್ಶನವು ಒಂದು ಪವಿತ್ರ ಆಧ್ಯಾತ್ಮಿಕ ಆಕಾಂಕ್ಷೆಯಾಗಿದೆ ಎಂದರು.

ಭಾರತದ ಅಪಾರ ಭಾಷಾ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಹೊರತಾಗಿಯೂ, ಹಂಚಿಕೊಂಡ ನಾಗರಿಕತಾ ಮತ್ತು ಆಧ್ಯಾತ್ಮಿಕ ಮೌಲ್ಯಗಳು ದೇಶವನ್ನು ಯಾವಾಗಲೂ ಒಂದುಗೂಡಿಸಿವೆ ಎಂದು ಸನ್ಮಾನ್ಯ ಉಪರಾಷ್ಟ್ರಪತಿ ಅಭಿಪ್ರಾಯಪಟ್ಟರು. ಈ ಶಾಶ್ವತ ಬಾಂಧವ್ಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಾಶಿ ತಮಿಳು ಸಂಗಮದ ಪ್ರಾರಂಭಕ್ಕೆ ಸ್ಫೂರ್ತಿ ನೀಡಿತು ಎಂದು ಅವರು ಉಲ್ಲೇಖಿಸಿದರು. ಈ ಉಪಕ್ರಮವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೀರಿ ತಮಿಳುನಾಡು ಮತ್ತು ಕಾಶಿಯ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಹಾಗೂ 'ಏಕ ಭಾರತ, ಶ್ರೇಷ್ಠ ಭಾರತ'ದ ಸ್ಪೂರ್ತಿಯನ್ನು ಬಲಪಡಿಸುವ ಮಹತ್ವದ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದೆ ಎಂದು ಅವರು ಒತ್ತಿ ಹೇಳಿದರು.

ತಿರುಕ್ಕುರಳ್‌ನ ಕಾಲಾತೀತ ಜ್ಞಾನ ಮತ್ತು ನೈತಿಕ ಮೌಲ್ಯಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ತಲುಪಿಸುವ ಉದ್ದೇಶದೊಂದಿಗೆ, ಈ ವರ್ಷದ ಆವೃತ್ತಿಯು “ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ್ ಕರೇನ್” ಎಂಬ ಧ್ಯೇಯವಾಕ್ಯವನ್ನು ಕೇಂದ್ರೀಕರಿಸಿದೆ. ಉಪರಾಷ್ಟ್ರಪತಿ ಅವರು ತಿರುಕ್ಕುರಳ್ ಅನ್ನು ಜೀವನದ ಸಾರ್ವತ್ರಿಕ ಮಾರ್ಗದರ್ಶಿ ಎಂದು ಬಣ್ಣಿಸಿದರು, ಇದರ ಸಮಾನತೆ, ಮಾನವೀಯತೆ ಮತ್ತು ಧರ್ಮದ ಸಂದೇಶವು ಭಾಷೆ, ಪ್ರದೇಶ ಮತ್ತು ರಾಷ್ಟ್ರದ ಗಡಿಗಳನ್ನು ಮೀರಿದೆ ಎಂದರು. ಅದರ ಬೋಧನೆಗಳನ್ನು ಅಧ್ಯಯನ ಮಾಡುವಂತೆ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದರು.

ವಿದೇಶಿ ಭಾಷೆಗಳು ಸೇರಿದಂತೆ, 50 ಭಾಷೆಗಳಿಗೆ ತಿರುಕ್ಕುರಳ್ ಅನುವಾದಗೊಂಡಿರುವುದು ತಮಿಳು ಭಾಷೆ ಮತ್ತು ಸಾಹಿತ್ಯಕ್ಕೆ ಒಂದು ಮಹತ್ವದ ಸಾಧನೆಯಾಗಿದೆ ಹಾಗೂ ತಿರುವಳ್ಳುವರ್ ಅವರ ಬೋಧನೆಗಳ ಸಾರ್ವತ್ರಿಕ ಪ್ರಸ್ತುತತೆಗೆ ಸಲ್ಲಿಸಿದ ಗೌರವವಾಗಿದೆ ಎಂದು ಅವರು ಉಲ್ಲೇಖಿಸಿದರು. ಕಾಶಿ ತಮಿಳು ಸಂಗಮದ ಮೊದಲ ಆವೃತ್ತಿಯಲ್ಲಿ ತಿರುಕ್ಕುರಳ್ 13 ಭಾಷೆಗಳಲ್ಲಿ ಪ್ರಕಟವಾಗಿತ್ತು, ನಂತರ ಎರಡನೇ ಆವೃತ್ತಿಯಲ್ಲಿ ಹೆಚ್ಚುವರಿ 16 ಭಾಷೆಗಳಿಗೆ ಅನುವಾದಗೊಂಡಿತ್ತು ಎಂಬುದನ್ನು ಸ್ಮರಿಸಿದ ಅವರು, ಐದನೇ ಆವೃತ್ತಿಯಲ್ಲಿ 50 ಭಾಷೆಗಳಲ್ಲಿ ಇದರ ಲಭ್ಯತೆಯು ತಮಿಳು ಸಾಹಿತ್ಯ ಪರಂಪರೆಯನ್ನು ವಿಶಾಲ ಪ್ರೇಕ್ಷಕರಿಗೆ ಕೊಂಡೊಯ್ಯುವಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ ಎಂದು ಅವರು ಹೇಳಿದರು.

ಭಾಷಾ ಸಾಮರಸ್ಯದ ಮಹತ್ವವನ್ನು ಒತ್ತಿ ಹೇಳಿದ ಸನ್ಮಾನ್ಯ ಉಪರಾಷ್ಟ್ರಪತಿ ಅವರು, ಪ್ರತಿಯೊಬ್ಬರೂ ಇತರರ ಭಾಷೆಗಳನ್ನು ಗೌರವಿಸುತ್ತಲೇ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದರು. "ತನ್ನದೇ ಭಾಷೆಯ ಮೇಲಿನ ಪ್ರೀತಿಯು ಎಂದಿಗೂ ಮತ್ತೊಂದು ಭಾಷೆಯ ಮೇಲಿನ ದ್ವೇಷವಾಗಬಾರದು" ಎಂದು ಅವರು ತಿಳಿಸಿದರು. ಭಾರತದ ಶಕ್ತಿಯು ಅದರ ಅನೇಕ ಭಾಷೆಗಳು ಮತ್ತು ಹಂಚಿಕೆಯ ಆದರ್ಶಗಳಲ್ಲಿ ಅಡಗಿದೆ ಎಂದು ಅವರು ತಿಳಿಸಿದರು. ವಿಶ್ವಸಂಸ್ಥೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಗಮ್ ಯುಗದ ಕವಿ ಕಣಿಯನ್ ಪೂಂಗುಂದ್ರನಾರ್ ಅವರ ಪ್ರಸಿದ್ಧ ಮಾತುಗಳಾದ “ಯಾದುಂ ಊರೆ, ಯಾವರುಂ ಕೇಳಿರ್” ಅನ್ನು ಉಲ್ಲೇಖಿಸಿ, ಸಾರ್ವತ್ರಿಕ ಭ್ರಾತೃತ್ವದ ತಮಿಳು ಆದರ್ಶವನ್ನು ಜಾಗತಿಕ ವೇದಿಕೆಗೆ ತಂದಿದ್ದನ್ನೂ ಅವರು ಸ್ಮರಿಸಿದರು.

ಪೆರುಂತಲೈವರ್ ಕೆ. ಕಾಮರಾಜ್ ಮತ್ತು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರಂತಹ ನಾಯಕರಿಂದ ಸ್ಫೂರ್ತಿ ಪಡೆಯುವಂತೆ ಮತ್ತು ರಾಷ್ಟ್ರೀಯ ಏಕತೆಯ ಸ್ಪೂರ್ತಿಯನ್ನು ಎತ್ತಿಹಿಡಿಯುವಂತೆ ಸನ್ಮಾನ್ಯ ಉಪರಾಷ್ಟ್ರಪತಿಯವರು ಯುವಜನರಿಗೆ ಕರೆ ನೀಡಿದರು. ಭಾರತದ ನಾಗರಿಕತಾ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮತ್ತು ದೇಶವನ್ನು ಒಂದುಗೂಡಿಸುವ ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಯುವ ಪೀಳಿಗೆಯು ಪ್ರಮುಖ ಪಾತ್ರ ಹೊಂದಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಉಲ್ಲೇಖಿಸಿದ ಸನ್ಮಾನ್ಯ ಉಪರಾಷ್ಟ್ರಪತಿಯವರು, ರಾಜ್ಯದ ರೂಪಾಂತರ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಸಾರ್ವಜನಿಕ ಸುರಕ್ಷತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಶ್ಲಾಘಿಸಿದರು. 1998 ರಲ್ಲಿ ಸಂಸತ್ತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ ದಿನಗಳಿಂದ ಮುಖ್ಯಮಂತ್ರಿಯವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟ ಮತ್ತು ಸ್ನೇಹವನ್ನೂ ಅವರು ಸ್ಮರಿಸಿದರು.

2047ರ ಭಾರತದ ಆಕಾಂಕ್ಷೆಗಳ ಕುರಿತು ಮಾತನಾಡಿದ ಸನ್ಮಾನ್ಯ ಉಪರಾಷ್ಟ್ರಪತಿಯವರು, ವಿಕಸಿತ ಭಾರತದ ಗುರಿಯು ಆರ್ಥಿಕ ಬೆಳವಣಿಗೆಯನ್ನು ಮೀರಿ ವಿಸ್ತರಿಸಬೇಕು ಎಂದು ಹೇಳಿದರು. ಭಾರತವು ನಾಗರಿಕತಾ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಮಾನವೀಯತೆಯ ಜಾಗತಿಕ ಮಾದರಿಯಾಗಿಯೂ ಹೊರಹೊಮ್ಮಬೇಕು ಎಂದು ಅವರು ತಿಳಿಸಿದರು. ಸಂಘರ್ಷ, ಅನಿಶ್ಚಿತತೆ ಮತ್ತು ವಿಭಜನೆಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ಭಾರತದ ಸಾಂಪ್ರದಾಯಿಕ ತತ್ವಶಾಸ್ತ್ರವಾದ 'ವಸುಧೈವ ಕುಟುಂಬಕಂ' ಮತ್ತು 'ಸರ್ವೇ ಭವಂತು ಸುಖಿನಃ'ದ ಪ್ರಸ್ತುತತೆಯನ್ನು ಅವರು ಒತ್ತಿ ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ದೇಶದ ನದಿಗಳನ್ನು ಜೋಡಿಸುವ ದೃಷ್ಟಿಕೋನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಸನ್ಮಾನ್ಯ ಉಪರಾಷ್ಟ್ರಪತಿಯವರು, ಗಂಗಾ ನದಿಯ ನೀರು ಕಾವೇರಿಯನ್ನು ತಲುಪುವ ದಿನ ಬರಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು, ಶಿಕ್ಷಕರು, ಬರಹಗಾರರು, ಪತ್ರಕರ್ತರು, ರೈತರು, ಕುಶಲಕರ್ಮಿಗಳು, ಮಹಿಳೆಯರು ಮತ್ತು ಉದ್ಯಮದ ಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ತಮಿಳುನಾಡಿನ ಸುಮಾರು 1,400 ಭಾಗವಹಿಸುವವರು ಕಾಶಿ ತಮಿಳು ಸಂಗಮದ ಈ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ; ಐಐಟಿ ಮದ್ರಾಸ್; ಬನಾರಸ್ ಹಿಂದೂ ವಿಶ್ವವಿದ್ಯಾಲಯ; ಚೆನ್ನೈನ ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ; ಉತ್ತರ ಪ್ರದೇಶ ಸರ್ಕಾರ; ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಸಂಘಟಿತ ಪ್ರಯತ್ನಗಳ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್; ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ; ಉತ್ತರ ಪ್ರದೇಶದ ಸಚಿವರಾದ ಶ್ರೀ ಅನಿಲ್ ರಾಜ್‌ಭರ್, ಶ್ರೀ ರವೀಂದ್ರ ಜೈಸ್ವಾಲ್, ಶ್ರೀ ದಯಾಶಂಕರ್ ಮಿಶ್ರಾ ಮತ್ತು ಶ್ರೀ ಹನ್ಸ್‌ರಾಜ್ ವಿಶ್ವಕರ್ಮ; ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ದೀಪ್ತಿ ಉಮಾಶಂಕರ್; ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷರಾದ ಶ್ರೀ ಚಮು ಕೃಷ್ಣ ಶಾಸ್ತ್ರಿ; ಐಐಟಿ ಮದ್ರಾಸ್ ನಿರ್ದೇಶಕ ಶ್ರೀ ವಿ. ಕಾಮಕೋಟಿ; ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಜಿತ್ ಕುಮಾರ್ ಚತುರ್ವೇದಿ; ಆಧ್ಯಾತ್ಮಿಕ ನಾಯಕರು, ವಿದ್ವಾಂಸರು, ತಮಿಳುನಾಡಿನ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ಸನ್ಮಾನ್ಯ ಉಪರಾಷ್ಟ್ರಪತಿಯವರು, ಉತ್ತರ ಪ್ರದೇಶದ ಮುಖ್ಯಮಂತ್ರಿಯವರೊಂದಿಗೆ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯ ಮತ್ತು ಶ್ರೀ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

 

*****


(ಪ್ರಕಟಣೆ ಐ.ಡಿ.: 2343077) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Tamil , Malayalam