57th International Film Festival of India 2026
20 – 28 Nov 2026

ಜೀವನವನ್ನು ಅರ್ಥಪೂರ್ಣವಾಗಿಸುವುದು ಏನು? 57ನೇ ಐಎಫ್ಎಫ್ಐ ಕಾಡಿನಲ್ಲಿ ಉತ್ತರಗಳನ್ನು ಹುಡುಕುತ್ತಿರುವ ಕನ್ನಡ ಸಾಕ್ಷ್ಯಚಿತ್ರ


‘ದಿ ಹಗ್ ಆಫ್ ಎಂಪ್ಟಿನೆಸ್’ ಮಾನವ ಘನತೆ, ಚೇತರಿಕೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ನಿರಂತರ ಹೋರಾಟದ ಅನಾವರಣ

ಪ್ರಕಟಣಾ ದಿನಾಂಕ: 26 NOV 2026 3:54PMby PIB Bengaluruಪ್ರಕಟಣೆ ಐ.ಡಿ.: 2342045Views: 13

ಕನ್ನಡ ಚಲನಚಿತ್ರ ನಿರ್ಮಾಪಕ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಕೆ, ಡಾ. ಪ್ರದೀಪ್ ಕೆಂಚನೂರು ಎಂದೂ ಕರೆಯಲ್ಪಡುವ ಇವರು, ಇಂದು ಗೋವಾದಲ್ಲಿ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಇಫಿ) ಇಂಡಿಯನ್ ಪನೋರಮಾದ ಕಿರುಚಿತ್ರ/ಸಾಕ್ಷ್ಯಚಿತ್ರ  ವಿಭಾಗದಲ್ಲಿ ಪ್ರದರ್ಶನಗೊಂಡಿರುವ ತಮ್ಮ ಸಾಕ್ಷ್ಯಚಿತ್ರ ‘ದಿ ಹಗ್ ಆಫ್ ಎಂಪ್ಟಿನೆಸ್’  ಕುರಿತು ಅವರು ಮಾತನಾಡಿದರು. 2025ರಲ್ಲಿ ನಿರ್ಮಿಸಲಾದ ಈ 20 ನಿಮಿಷಗಳ ಚಿತ್ರವು, ತನ್ನ ಆಸ್ತಿಯನ್ನು ಕಳೆದುಕೊಂಡ ನಂತರ ಏಕಾಂತವಾಗಿ ಕಾಡಿನಲ್ಲಿ ತನ್ನ ಮನೆಯನ್ನು ಕಟ್ಟಿಕೊಂಡ ವ್ಯಕ್ತಿಯ ಜೀವನದ ಮೂಲಕ ಸಂತೋಷ, ಘನತೆ ಮತ್ತು ಚೇತರಿಕೆಯನ್ನು ಅನ್ವೇಷಿಸುತ್ತದೆ.

ಈ ವರ್ಷದ ಆರಂಭದಲ್ಲಿ ನಡೆದ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂಐಎಫ್ ಎಫ್) ಈ ಚಿತ್ರವು ಫಿಪ್ರೆಸ್ಸಿ (FIPRESCI) ಅಂತರರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಈ ಚಿತ್ರವು ಚಂದ್ರಶೇಖರ್ ಅವರ ಜೀವನವನ್ನು ಅನುಸರಿಸುತ್ತದೆ. ಕರ್ನಾಟಕದ ಸುಳ್ಯ ಸಹಕಾರಿ ಬ್ಯಾಂಕಿನಲ್ಲಿ ಅಡಮಾನವಿಟ್ಟಿದ್ದ ಇವರ ಆಸ್ತಿಯನ್ನು, ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ 2003ರಲ್ಲಿ ಬ್ಯಾಂಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅವರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಕಾನೂನು ಹೋರಾಟವನ್ನು ಆರಂಭಿಸಿದರು. ಈ ನಡುವೆ, ಅವರು ಕಾಡಿನ ಪ್ರದೇಶವನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡರು ಮತ್ತು ಅಲ್ಲಿ ಸಂಗ್ರಹಿಸಿದ ಬಳ್ಳಿಗಳಿಂದ ಬುಟ್ಟಿಗಳನ್ನು ಹೆಣೆದು ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಅವರ ಕಥೆಯು ನ್ಯಾಯ, ಸ್ಥಳಾಂತರ, ಏಕಾಂತ ಮತ್ತು ಮಾನವ ಚೇತರಿಕೆಯ ಪ್ರಶ್ನೆಗಳನ್ನು ಒಟ್ಟುಗೂಡಿಸುತ್ತದೆ.

ಈ ವಿಷಯದತ್ತ ತಮ್ಮನ್ನು ಆಕರ್ಷಿಸಿದ್ದು ಏನು ಎಂಬುದನ್ನು ವಿವರಿಸಿದ ಶ್ರೀ ಶೆಟ್ಟಿ, ಕೇವಲ ಕಾನೂನು ವಿವಾದಕ್ಕಿಂತ ಹೆಚ್ಚಾಗಿ ಚಂದ್ರಶೇಖರ್ ಅವರ ಜೀವನ ದರ್ಶನವೇ  ಈ ಸಾಕ್ಷ್ಯಚಿತ್ರಕ್ಕೆ ಸ್ಫೂರ್ತಿಯಾಯಿತು ಎಂದು ಹೇಳಿದರು. ದಟ್ಟ ಕಾಡು, ಭಾರಿ ಮಳೆ ಮತ್ತು ವನ್ಯಜೀವಿಗಳ ನಡುವೆ, ವಿದ್ಯುತ್ ಮತ್ತು ರಸ್ತೆಗಳಂತಹ ಮೂಲಭೂತ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದರೂ, ಚಂದ್ರಶೇಖರ್ ದೈನಂದಿನ ಜೀವನದಲ್ಲಿ ಒಂದು ಲಯ ಮತ್ತು ಉದ್ದೇಶದ ಪ್ರಜ್ಞೆಯನ್ನು ಕಂಡುಕೊಂಡಿದ್ದಾರೆ. ಸಂತೋಷವು ವಿಭಿನ್ನ ರೂಪಗಳನ್ನು ಪಡೆಯಬಹುದು ಮತ್ತು ಅದು ಯಾವಾಗಲೂ ಭೌತಿಕ ಸೌಕರ್ಯಗಳಿಂದಲೇ ವ್ಯಾಖ್ಯಾನಿಸಲ್ಪಡಬೇಕಾಗಿಲ್ಲ ಎಂದು ನಿರ್ದೇಶಕರು ಅಭಿಪ್ರಾಯಪಟ್ಟರು.

ತಮ್ಮ ಚಿತ್ರ ನಿರ್ಮಾಣದ ವಿಧಾನದ ಬಗ್ಗೆ ಮಾತನಾಡಿದ ಶ್ರೀ ಶೆಟ್ಟಿ, ಕಾನೂನು ವಿವಾದದ ಸಾಂಪ್ರದಾಯಿಕ, ಸಂದರ್ಶನ ಆಧಾರಿತ ನಿರೂಪಣೆಯಿಂದ ತಾವು ಉದ್ದೇಶಪೂರ್ವಕವಾಗಿ ದೂರ ಸರಿದಿರುವುದಾಗಿ ತಿಳಿಸಿದರು. ಬದಲಾಗಿ, ಈ ಸಾಕ್ಷ್ಯಚಿತ್ರವು ಒಂದೇ ದಿನದ ಚಟುವಟಿಕೆಗಳನ್ನು ಗಮನಿಸುತ್ತದೆ, ಆ ಮೂಲಕ ಚಂದ್ರಶೇಖರ್ ಅವರ ಜೀವನದ ಲಯ ಮತ್ತು ಕಾಡಿನೊಂದಿಗಿನ ಅವರ ಸಂಬಂಧವು ಪರದೆಯ ಮೇಲೆ ತೆರೆದುಕೊಳ್ಳಲು ಅವಕಾಶ ನೀಡುತ್ತದೆ.

ಚಿತ್ರದ ಶೀರ್ಷಿಕೆಯ ಕುರಿತು ಮಾತನಾಡಿದ ಶ್ರೀ ಶೆಟ್ಟಿ, ಗ್ರೀಕ್ ಚಲನಚಿತ್ರ ನಿರ್ಮಾಪಕ ಯೋರ್ಗೋಸ್ ಲ್ಯಾಂಥಿಮೋಸ್ ಅವರ ಕೃತಿಗಳು ಮತ್ತು ಮಾನವ ಅಸ್ತಿತ್ವದ ಪ್ರಶ್ನೆಗಳೊಂದಿಗಿನ ಅವರ ಒಡನಾಟದಿಂದ ತಾವು ತಾತ್ವಿಕ ಸ್ಫೂರ್ತಿ ಪಡೆದಿರುವುದಾಗಿ ಹೇಳಿದರು. ಅವರ ಪ್ರಕಾರ, ಇತರರಿಗೆ ಬರಿದಾಗಿ ಕಾಣಬಹುದಾದ ಜೀವನದಲ್ಲಿಯೂ ಅರ್ಥವನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ಈ ಶೀರ್ಷಿಕೆಯು ಪ್ರತಿಬಿಂಬಿಸುತ್ತದೆ.

ವೃತ್ತಿಯಲ್ಲಿ ಶಿಕ್ಷಕರು ಮತ್ತು ಸಿನಿಮಾ ಪ್ರೇಮಿಯಾಗಿರುವ ಶ್ರೀ ಶೆಟ್ಟಿ, 2009ರಿಂದ ಉತ್ಸವದ ಪ್ರೇಕ್ಷಕರಾಗಿ ಇಫಿಯೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಸ್ವತಂತ್ರ ಚಲನಚಿತ್ರ ನಿರ್ಮಾಣದ ಸವಾಲುಗಳ ಬಗ್ಗೆ ಮಾತನಾಡುತ್ತಾ, ಸೃಜನಶೀಲ ಸ್ವಾತಂತ್ರ್ಯವನ್ನು ನೀಡಿದ ಆಪ್ತ ಸ್ನೇಹಿತರೊಬ್ಬರ ಆರ್ಥಿಕ ನೆರವಿನೊಂದಿಗೆ 4 ಲಕ್ಷ ರೂಪಾಯಿಗಳ ಬಜೆಟಿನಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.  ಸಮಾನಮನಸ್ಕ ಸೃಜನಶೀಲ ದೃಷ್ಟಿಕೋನದ ಮಹತ್ವವನ್ನು  ಅವರು ಒತ್ತಿಹೇಳಿದರು

ಅಲಿಶಾ ಮೆಹ್ರೋತ್ರಾ ಅವರು ಸಂವಾದವನ್ನು ನಿರ್ವಹಿಸಿದರು.

ಪೂರ್ಣ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342045
•
Media Centre: Goa
•
Festival Dates: Nov 20 – 28, 2026