ಪ್ರಕಟಣಾ ದಿನಾಂಕ:
26 NOV 2026 1:20PM by PIB Bengaluru
ಭಾರತೀಯ ಸೇನೆಯ ನಾಲ್ಕು ವಿಮಾನಗಳು 2026ರ ನವೆಂಬರ್ 24ರಂದು ಗುಜರಾತ್‌ನ ಪಟಾನ್‌ನಲ್ಲಿರುವ ಅಮೃತಸರ–ಜಾಮ್‌ನಗರ ಆರ್ಥಿಕ ಕಾರಿಡಾರ್ (ರಾ.ಹೆದ್ದಾರಿ-754ಎ) ಮೇಲೆ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದವು. ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಲಾದ ರಾಷ್ಟ್ರೀಯ ಹೆದ್ದಾರಿ ಭಾಗಗಳು ತುರ್ತು ಮತ್ತು ಕಾರ್ಯತಂತ್ರದ ಉದ್ದೇಶಗಳು ಸೇರಿದಂತೆ ವಿಶೇಷ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಈ ಪ್ರದರ್ಶನವು ತೋರಿಸಿಕೊಟ್ಟಿದೆ.
ಭಾರತೀಯ ಸೇನೆಯ 'ಟೀಮ್ ಮೌಂಟೇನ್ ಈಗಲ್ಸ್'ಗೆ ಸೇರಿದ ಈ ವಿಮಾನಗಳು (2 ಸ್ಥಿರ ರೆಕ್ಕೆಗಳ ಲಘು ವಿಮಾನಗಳು + 2 ಪವರ್ಡ್ ಹ್ಯಾಂಗ್ ಗ್ಲೈಡರ್‌ಗಳು), ಮಹೌನಲ್ಲಿರುವ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್‌ನ (ಎಮ್‌ಸಿಟಿಇ) ಆರ್ಮಿ ಅಡ್ವೆಂಚರ್ ನೋಡಲ್ ಸೆಂಟರ್ (ಎಎಎನ್‌ಸಿ) ಆಯೋಜಿಸಿದ್ದ 'ವಿಂಗ್ಸ್ ಆಫ್ ವೇಲರ್ ಅಂಡ್ ಯೂನಿಟಿ ಎಕ್ಸ್‌ಪೆಡಿಷನ್ 2026'ರ ಭಾಗವಾಗಿ ಕಾಂಡ್ಲಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದವು.

ಈ ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಸೇನೆಯ ‘ಟೀಮ್ ಮೌಂಟೇನ್ ಈಗಲ್ಸ್’, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಅಭಿನಂದಿಸಿದ್ದಾರೆ.
ಕಾರಿಡಾರ್ ನ ಎಂಜಿನಿಯರಿಂಗ್ ಶಕ್ತಿ
ಸಂಬಂಧಪಟ್ಟ ಹೆದ್ದಾರಿ ಭಾಗದ ರಸ್ತೆಯನ್ನು 550 ಮಿ.ಮೀ ಪೇವ್‌ಮೆಂಟ್ ಕ್ರಸ್ಟ್ (ಮೇಲ್ಪದರ) ಮತ್ತು 500 ಮಿ.ಮೀ ಸಬ್‌ಗ್ರೇಡ್ (ತಳಪದರ) ಜೊತೆಗೆ 170 ಮಿಲಿಯನ್ ಸ್ಟ್ಯಾಂಡರ್ಡ್ ಆಕ್ಸಲ್ಸ್ (ಎಂಎಸ್‌ಎ) ಸಂಚಾರ ಭಾರವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನಗಳ ಯಶಸ್ವಿ ಭೂಸ್ಪರ್ಶವು, ಈ ಕಾರಿಡಾರ್‌ನ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಹಾಗೂ ತಾಂತ್ರಿಕ ಮೌಲ್ಯಮಾಪನವನ್ನು ಅನಾವರಣಗೊಳಿಸಿದೆ. ಅಲ್ಲದೆ, ಕಾರ್ಯಾಚರಣೆಯ ಅಗತ್ಯಗಳು ಮತ್ತು ಅಗತ್ಯ ಸುರಕ್ಷತಾ ಅನುಮತಿಗಳಿಗೆ ಒಳಪಟ್ಟು ವಿಶೇಷ ಉದ್ದೇಶಗಳಿಗಾಗಿ ಸೂಕ್ತ ಹೆದ್ದಾರಿ ಭಾಗಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

*****