ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಭಾರತದ ಎಂ.ಎಸ್.ಎಂ.ಇ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ: 10 ಕೋಟಿ ನೋಂದಣಿಗಳು, ಚೈತನ್ಯದಾಯಕ ಮತ್ತು ಬಲಿಷ್ಠ ಆತ್ಮನಿರ್ಭರ ಭಾರತಕ್ಕಾಗಿ 10 ಕೋಟಿ ಹೆಜ್ಜೆಗಳು!


ಎಂ.ಎಸ್.ಎಂ.ಇ ನೋಂದಣಿಯ ಪರಿವರ್ತನೆ: ಕಾಗದಪತ್ರಗಳಿಂದ ಸುಗಮವಾದ ಡಿಜಿಟಲ್ ಪರಿಸರ ವ್ಯವಸ್ಥೆಯವರೆಗೆ

ಪ್ರಕಟಣಾ ದಿನಾಂಕ: 25 NOV 2026 4:01PM by PIB Bengaluru

ಭಾರತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ) ವಲಯವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು, 30 ಅಕ್ಟೋಬರ್ 2026 ರಂದು ʻಉದ್ಯಮ್ ನೋಂದಣಿ ಪೋರ್ಟಲ್ʼ ಮತ್ತು ʻಉದ್ಯಮ್ ಅಸಿಸ್ಟ್ ಪ್ಲಾಟ್ಫಾರ್ಮ್ʼನಲ್ಲಿ 10 ಕೋಟಿ ನೋಂದಣಿಗಳನ್ನು ದಾಟಿದೆ. ಈ ಸಾಧನೆಯು ಹೆಚ್ಚು ಔಪಚಾರಿಕ, ಸಮಗ್ರ ಮತ್ತು ಡಿಜಿಟಲ್ ರೂಪದಲ್ಲಿ ಸಬಲೀಕರಣಗೊಂಡ  ಎಂಎಸ್ ಎಂ ಇ ವಲಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತದ ಪಯಣದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ.

ಎಂ.ಎಸ್.ಎಂ.ಇ ಔಪಚಾರೀಕರಣಗೊಳಿಸುವಲ್ಲಿ ಒಂದು ಐತಿಹಾಸಿಕ ಸಾಧನೆ

ಉದ್ಯಮ್ ನೋಂದಣಿ ಪೋರ್ಟಲ್ ಮತ್ತು ಉದ್ಯಮ್ ಅಸಿಸ್ಟ್ ಪ್ಲಾಟ್ಫಾರ್ಮ್ ನ ಸಂಯೋಜಿತ ಶಕ್ತಿಯು ಭಾರತದ ಎಂ.ಎಸ್.ಎಂ.ಇ ಔಪಚಾರಿಕರಣದ ಪಯಣವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 2020 ರಲ್ಲಿ 1.02 ಕೋಟಿಯಷ್ಟಿದ್ದ ನೋಂದಣಿಗಳು 2026 ರಲ್ಲಿ 10 ಕೋಟಿಗೂ ಹೆಚ್ಚಾಗಿರುವುದು ಡಿಜಿಟಲ್ ವೇದಿಕೆಗಳ ಹೆಚ್ಚುತ್ತಿರುವ ಅಳವಡಿಕೆ ಮತ್ತು ಉದ್ಯಮಗಳನ್ನು ಔಪಚಾರಿಕ ಆರ್ಥಿಕ ಚೌಕಟ್ಟಿನೊಳಗೆ ತರುವ ಸರ್ಕಾರದ ನಿರಂತರ ಬದ್ಧತೆಯನ್ನು ತೋರಿಸುತ್ತದೆ.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು 1 ಜುಲೈ 2020 ರಂದು ಉದ್ಯಮ್ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು, ಇದು ಉದ್ಯಮಗಳಿಗೆ ನೋಂದಣಿಗಾಗಿ ಸರಳ, ಪಾರದರ್ಶಕ, ಆನ್ ಲೈನ್ ಮತ್ತು ಕಾಗದರಹಿತ ವೇದಿಕೆಯನ್ನು ಒದಗಿಸುತ್ತದೆ. ಈ ಡಿಜಿಟಲ್ ಉಪಕ್ರಮವು ನೋಂದಣಿ ಪ್ರಕ್ರಿಯೆಗಳನ್ನು ಗಮನಾರ್ಹವಾಗಿ ಸರಳಗೊಳಿಸಿದೆ, ಸುಗಮ ವ್ಯಾಪಾರ ವಹಿವಾಟನ್ನು  ಹೆಚ್ಚಿಸಿದೆ ಹಾಗು ಉದ್ಯಮಗಳು ಭಾರತದ ಔಪಚಾರಿಕ ಆರ್ಥಿಕ ವ್ಯವಸ್ಥೆಯ ಭಾಗವಾಗಲು ಅನುಕೂಲ ಮಾಡಿಕೊಟ್ಟಿದೆ.

ಭಾರತದಲ್ಲಿ  ಎಂ.ಎಸ್.ಎಂ.ಇ ನೋಂದಣಿಯ ವಿಕಾಸ: ಇಎಂ-II ನಿಂದ ಉದ್ಯಮ್ ನೋಂದಣಿಯವರೆಗೆ

ಭಾರತದ ಎಂ.ಎಸ್.ಎಂ.ಇ ನೋಂದಣಿ ಚೌಕಟ್ಟು ವರ್ಷಗಳಲ್ಲಿ ಗಮನಾರ್ಹವಾಗಿ ವಿಕಸನಗೊಂಡಿದ್ದು, ಹೆಚ್ಚಾಗಿ ಭೌತಿಕ ದಾಖಲೆ ಆಧಾರಿತ ಪ್ರಕ್ರಿಯೆಯಿಂದ ತಂತ್ರಜ್ಞಾನ-ಚಾಲಿತ, ಉದ್ಯಮಿ-ಸ್ನೇಹಿ ಡಿಜಿಟಲ್ ಪರಿಸರ ವ್ಯವಸ್ಥೆಗೆ ಬದಲಾಗಿದೆ.

ಈ ಪಯಣದ ಪ್ರಮುಖ ಮೈಲಿಗಲ್ಲುಗಳು:

1. ಉದ್ಯಮಿಗಳ ಜ್ಞಾಪಕ ಪತ್ರ – 2006 ರಿಂದ 17 ಸೆಪ್ಟೆಂಬರ್ 2015 ರವರೆಗೆ

ಎಂ.ಎಸ್.ಎಂ.ಇ ನೋಂದಣಿಯು ಪ್ರಾಥಮಿಕವಾಗಿ ಭೌತಿಕ ಪ್ರಕ್ರಿಯೆಯಾಗಿತ್ತು, ಇದರಲ್ಲಿ ಉದ್ಯಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ (ಡಿಐಸಿ) ಪರಿಶೀಲನೆಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿತ್ತು. ಈ ಒಂಬತ್ತು ವರ್ಷಗಳ ಅವಧಿಯಲ್ಲಿ 21.96 ಲಕ್ಷ ಎಂ.ಎಸ್.ಎಂ.ಇ ಗಳು ನೋಂದಣಿಯಾಗಿದ್ದವು.

2. ಉದ್ಯೋಗ್ ಆಧಾರ್ ಜ್ಞಾಪಕ ಪತ್ರ – 18 ಸೆಪ್ಟೆಂಬರ್ 2015 ರಿಂದ 30 ಜೂನ್ 2020 ರವರೆಗೆ

ಉದ್ಯೋಗ್ ಆಧಾರ್ ಜ್ಞಾಪಕ ಪತ್ರ (ಯು.ಎ.ಎಂ.) ವ್ಯವಸ್ಥೆಯ ಪರಿಚಯದೊಂದಿಗೆ ಡಿಜಿಟಲ್ ನೋಂದಣಿಯೆಡೆಗೆ ಮಹತ್ವದ ಬದಲಾವಣೆಯಾಯಿತು. ಆಧಾರ್ ಆಧಾರಿತ ಈ ಆನ್ ಲೈನ್ ವ್ಯವಸ್ಥೆಯು ಹಿಂದಿನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿತು ಮತ್ತು ಉದ್ಯಮಿಗಳ ಮೇಲಿನ ನಿಯಮಾವಳಿಗಳ ಹೊರೆಯನ್ನು ಕಡಿಮೆ ಮಾಡಿತು. ಈ ಐದು ವರ್ಷಗಳ ಅವಧಿಯಲ್ಲಿ ಸುಮಾರು 1.02 ಕೋಟಿ ಎಂ.ಎಸ್.ಎಂ.ಇ ಗಳು ನೋಂದಣಿಯಾದವು.

3. ಉದ್ಯಮ್ ನೋಂದಣಿ– 1 ಜುಲೈ 2020 ರಿಂದ

  • ಉದ್ಯಮ್ ನೋಂದಣಿ ಪೋರ್ಟಲ್ ಪ್ರಾರಂಭದೊಂದಿಗೆ ಪ್ರಮುಖ ಡಿಜಿಟಲ್ ಪರಿವರ್ತನೆಯು ಆರಂಭವಾಯಿತು. ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್, ಕಾಗದರಹಿತ ಮತ್ತು ಸ್ವಯಂ-ಘೋಷಣೆಯ ಆಧಾರದ ಮೇಲೆ ರೂಪುಗೊಂಡಿದ್ದು, ಭೌತಿಕ ದಾಖಲೆಗಳು ಅಥವಾ ಪುರಾವೆಗಳನ್ನು ಅಪ್ ಲೋಡ್ ಮಾಡುವ ಅಗತ್ಯವನ್ನು ನಿವಾರಿಸಿತು.
  • ಆಧಾರ್ ಮತ್ತು ಪ್ಯಾನ್  ಆಧಾರಿತ ವಿವರಗಳೊಂದಿಗೆ ಜಿಎಸ್ ಟಿ ಮತ್ತು ಆದಾಯ ತೆರಿಗೆ ದತ್ತಾಂಶಗಳ ಕ್ರೋಡೀಕರಣವು  ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಿತು. ಈ ವ್ಯವಸ್ಥೆಯು ನವೀಕರಣದ ಅಗತ್ಯವನ್ನೂ ತೆಗೆದುಹಾಕಿತು ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ಉಚಿತವಾಗಿಸಿತು, ಇದರಿಂದ ದೇಶಾದ್ಯಂತ ಉದ್ಯಮಿಗಳಿಗೆ ಔಪಚಾರಿಕರಣಗೊಳಿಸುವುದು ಸರಳ ಮತ್ತು ಸುಲಭಸಾಧ್ಯವಾಯಿತು.

4. ಉದ್ಯಮ್ ಅಸಿಸ್ಟ್ ಪ್ಲಾಟ್ ಫಾರ್ಮ್ – 11 ಜನವರಿ 2023 ರಿಂದ

  • ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸಂಖ್ಯೆಯ ಅತಿ ಸಣ್ಣ  ಉದ್ಯಮಗಳು ನೋಂದಣಿ ಸೌಲಭ್ಯಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವುದನ್ನು ಮನಗಂಡ ಸಚಿವಾಲಯವು, 11 ಜನವರಿ 2023 ರಂದು ಉದ್ಯಮ್ ಅಸಿಸ್ಟ್ ಪ್ಲಾಟ್ ಫಾರ್ಮ್ (UAP) ಅನ್ನು ಪರಿಚಯಿಸಿತು.
  • ಈ ವೇದಿಕೆಯು ಗೊತ್ತುಪಡಿಸಿದ ಹಣಕಾಸು ಸಂಸ್ಥೆಗಳು ಮತ್ತು ಇತರ ಪಾಲುದಾರ ಸಂಸ್ಥೆಗಳನ್ನು ಒಳಗೊಂಡ ಸರಳೀಕೃತ ಕಾರ್ಯವಿಧಾನದ ಮೂಲಕ ಅರ್ಹ ಅನೌಪಚಾರಿಕ ಅತಿ ಸಣ್ಣ  ಉದ್ಯಮಗಳ ಔಪಚಾರಿಕರಣಕ್ಕೆ ಅನುವು ಮಾಡಿಕೊಡುತ್ತದೆ.

ಉದ್ಯಮ್: ಲಭ್ಯತೆ, ಗುರುತಿಸುವಿಕೆ ಮತ್ತು ಸಮಗ್ರ ಬೆಳವಣಿಗೆಗೆ ಉತ್ತೇಜನ

  • ಉದ್ಯಮ್ ನೋಂದಣಿಯು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಉದ್ಯಮಗಳನ್ನು ಗುರುತಿಸಲು ಬೆಂಬಲಿಸುತ್ತದೆ, ಇದು ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ ಸಾಲ ಖಾತರಿ ಯೋಜನೆ (ಸಿ.ಜಿ.ಟಿ.ಎಂ.ಎಸ್.ಇ), ಆದ್ಯತಾ ವಲಯದ ಸಾಲ (ಪಿ.ಎಸ್.ಎಲ್.) ಮತ್ತು ಇತರ ಸಾಲ ಹಾಗೂ ಹಣಕಾಸು ಸಂಬಂಧಿತ ಕಾರ್ಯಕ್ರಮಗಳ ಅನುಷ್ಠಾನವನ್ನು ಸುಗಮಗೊಳಿಸುತ್ತದೆ.
  • ಇದು ಮಹಿಳಾ ಉದ್ಯಮಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು, ಗ್ರಾಮೀಣ ಉದ್ಯಮಗಳು, ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಔಪಚಾರಿಕ ಆರ್ಥಿಕ ಚೌಕಟ್ಟಿನೊಳಗೆ ತರುವ ಮೂಲಕ ಸಮಗ್ರ ಆರ್ಥಿಕ ಅಭಿವೃದ್ಧಿಯ ಅಡಿಪಾಯವನ್ನು ಬಲಪಡಿಸುತ್ತದೆ.
  • ಇದಲ್ಲದೆ, ಉದ್ಯಮ್ ಮೂಲಕ ದೊರೆಯುವ ಔಪಚಾರಿಕ ಮಾನ್ಯತೆಯು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿ.ಎಂ.ಇ.ಜಿ.ಪಿ), ರಾಷ್ಟ್ರೀಯ ಎಸ್ ಸಿ-ಎಸ್ ಟಿ ಹಬ್, ಅತಿ ಸಣ್ಣ  ಮತ್ತು ಸಣ್ಣ ಉದ್ಯಮಗಳ ಸಾರ್ವಜನಿಕ ಖರೀದಿ ನೀತಿ ಮತ್ತು ಇತರ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಅನ್ವಯವಾಗುವ ಅರ್ಹತಾ ಅವಶ್ಯಕತೆಗಳಿಗೆ ಒಳಪಟ್ಟು ವಿವಿಧ ಸರ್ಕಾರಿ ಉಪಕ್ರಮಗಳ ವ್ಯಾಪಕ ಉದ್ದೇಶಗಳನ್ನು ಬೆಂಬಲಿಸುತ್ತದೆ.

ಸಮಗ್ರ ಬೆಳವಣಿಗೆಗೆ ಚಾಲನೆ: ಮಹಿಳೆಯರ ಭಾಗವಹಿಸುವಿಕೆ

ಉದ್ಯಮ್ ಮತ್ತು ಉದ್ಯಮ್ ಅಸಿಸ್ಟ್ ಎರಡರ ನೋಂದಣಿ ಮಾಹಿತಿಗಳು ಈ ಕೆಳಗಿನ ಅಂಶಗಳನ್ನು ಪ್ರತಿಬಿಂಬಿಸುತ್ತದೆ:

ಮಹಿಳಾ ನೇತೃತ್ವದ ಎಂ.ಎಸ್.ಎಂ.ಇ ಗಳು: 3.76 ಕೋಟಿ ನೋಂದಣಿಗಳು, ಇದು ಶೇ. 37.8* ರಷ್ಟಿದೆ.

ಈ ಅಂಕಿಅಂಶಗಳು ಸಮಾಜದ ವಿವಿಧ ವರ್ಗಗಳಲ್ಲಿ ಔಪಚಾರಿಕ ಮಾನ್ಯತೆಯನ್ನು ವಿಸ್ತರಿಸುವಲ್ಲಿ ಮತ್ತು ಸಮಗ್ರ ಉದ್ಯಮಶೀಲತೆಯ ಅಡಿಪಾಯವನ್ನು ಬಲಪಡಿಸುವಲ್ಲಿ ಡಿಜಿಟಲ್ ನೋಂದಣಿಯ ಪಾತ್ರವನ್ನು ಒತ್ತಿಹೇಳುತ್ತವೆ.

10 ಕೋಟಿ ನೋಂದಣಿಗಳ ಮೈಲಿಗಲ್ಲು ಕೇವಲ ಒಂದು ಸಂಖ್ಯೆಯಲ್ಲ; ಇದು ಲಕ್ಷಾಂತರ ಉದ್ಯಮಗಳು ಔಪಚಾರಿಕ ಮಾನ್ಯತೆಯತ್ತ ಹೆಜ್ಜೆ ಹಾಕುತ್ತಿರುವುದನ್ನು ಮತ್ತು ಭಾರತದ ಅಭಿವೃದ್ಧಿಯ ಕಥೆಯ ಭಾಗವಾಗುತ್ತಿರುವುದನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಉದ್ಯಮಿಗಳ ಹೆಚ್ಚುತ್ತಿರುವ ವಿಶ್ವಾಸ ಮತ್ತು ಹೆಚ್ಚು ಬಲವಾದ, ಸಮಗ್ರ ಮತ್ತು ಸ್ವಾವಲಂಬಿ ಆರ್ಥಿಕತೆಯತ್ತ ಸಾಗುತ್ತಿರುವ ಸಾಮೂಹಿಕ ವೇಗವನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2341361) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी